ಹಸಿದ ಹೊಟ್ಟೆ ಅನ್ನವನ್ನು ಮಾತ್ರ ಹುಡುಕುತ್ತದೆ


– ಡಾ.ಎಸ್.ಬಿ. ಜೋಗುರ 


“ಅನ್ನ ಭಾಗ್ಯ” ಯೋಜನೆಯ ಬಗ್ಗೆ ಅನೇಕ ಹೊಟ್ಟೆ ತುಂಬಿದವರು ಮಾತನಾಡಿದ್ದಾಯಿತು. ಹಾಗೆಯೇ ಜನ ಸೋಮಾರಿಗಳಾಗುತ್ತಾರೆ ಎನ್ನುವ ಕಳಕಳಿಯನ್ನೂ ತೋರಿದ್ದಾಯಿತು. ಸೋಮಾರಿಗಳಾಗಿದ್ದವರು ಎಲ್ಲ ಭಾಗ್ಯಗಳನ್ನು ಮೀರಿಯೂ ಸೋಮಾರಿಗಳಾಗಿರುತ್ತಾರೆ. ನಿರಂತರವಾಗಿ ದುಡಿಯುವವರು ಎಲ್ಲ ವರ್ಗಗಳಲ್ಲಿ ಇರುವ ಹಾಗೆ, ಎಲ್ಲ ಸಂದರ್ಭಗಳಲ್ಲಿಯೂ ಸೋಮಾರಿಗಳಾಗಿ ಬದುಕುವವರು ಕೂಡಾ ಎಲ್ಲ ವರ್ಗಗಳಲ್ಲಿ ಇದ್ದೇ ಇದ್ದಾರೆ. ಈ ಎರಡೂ ಬಗೆಯ ಜನ ಸಮೂಹಗಳು ಸರ್ಕಾರದ ಯಾವುದೇ ಸೌಲಭ್ಯಗಳಿಗೆ ಸೀಮಿತವಾಗಿಲ್ಲ. ಚರಿತ್ರೆಯುದ್ಧಕ್ಕೂ ಆಹಾರ ಧಾನ್ಯಗಳ ಬೆಲೆ ಮತ್ತು ಪೂರೈಕೆ ಅನೇಕ ಬಗೆಯ ನಾಗರಿಕ ಸಂಘರ್ಷಗಳಿಗೆ ಎಡೆಮಾಡಿಕೊಟ್ಟಿರುವ ಸತ್ಯವನ್ನು ನಾವಾರೂ ಮರೆಯಬಾರದು. 18 ನೇ ಶತಮಾನದಲ್ಲಿ ಜರುಗಿದ ಮ್ಯಾಡ್ರಿಡ್ ಹಿಂಸೆ, ಪ್ರೆಂಚ್ ಕದನಗಳು ಆಹಾರದ ಹಾಹಾಕಾರವನ್ನೇ ಆಧರಿಸಿದ್ದವು. ರೋಮ್ ಮತ್ತು ಈಜಿಪ್ತಗಳಲ್ಲಿಯೂ ಈ ಬ್ರೆಡ್ ಗಾಗಿ ಹೋರಾಟಗಳು ನಡೆದಿವೆ. ಆಹಾರದ ಕೊರತೆ ಮತ್ತು ಬೆಲೆ ಏರಿಕೆ ಹಿಂಸೆಗೆ ಎಡೆ ಮಾಡಿಕೊಟ್ಟಿರುವದಿದೆ. 2008 ರ ಸಂದರ್ಭದಲ್ಲಿ ಆಹಾರಕ್ಕಾಗಿ ಕದನಗಳು, ಹಿಂಸೆಗಳು ಬಾಂಗ್ಲಾದೇಶದಲ್ಲಿ, ಹೈತಿಯಲ್ಲಿ ಇಂಡೋನೇಶಿಯಾದಲ್ಲಿ, ಉಜಬೆಕಿಸ್ಥಾನದಲ್ಲಿ, ಬೊಲಿವಿಯಾದಲ್ಲಿ, ಮೊಜಾಂಬಿಕ್ ಮತ್ತು ಕೆಮರೂನ್ ದಲ್ಲಿ ಜರುಗಿರುವದನ್ನು ಮರೆಯುವದಾದರೂ ಹೇಗೆ..? ಆಗ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿರುವದಿದೆ. india-poverty-hungerಆಹಾರಧಾನ್ಯಗಳ ಬೆಲೆಗಳು ನೇರವಾಗಿ ರಾಜಕೀಯ ಚಟುವಟಿಕೆಗಳನ್ನು ಪ್ರಭಾವಿಸುವ, ನಿಯಂತ್ರಿಸುವ ಹಿನ್ನೆಲೆಯಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳು ಜಾಗೃತವಾಗಿ ಆಹಾರದ ಬೆಲೆಗಳನ್ನು ಕಡಿಮೆ ಮಾಡುವಲ್ಲಿ, ನಿಯಂತ್ರಿಸುವಲ್ಲಿ ಹರಸಾಹಸ ಮಾಡುತ್ತಲಿವೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದಾಗ ಜುಟ್ಟಕ್ಕೆ ಮಲ್ಲಿಗೆ ಹೂ ಎನ್ನುವ ಮಾತು ಸಾರ್ವತ್ರಿಕವಲ್ಲ. ಹಸಿದವನ ಮುಂದೆ ಅನ್ನವನ್ನಿಡಬೇಕೇ ಹೊರತು ವೇದಾಂತವನ್ನಲ್ಲ ಎನ್ನುವ ಮಾತು ಮಾತ್ರ ಸಾರ್ವತ್ರಿಕ.

2008 ರ ಮೇ ತಿಂಗಳಲ್ಲಿ ರೋಮ್ ದಲ್ಲಿ ಜರುಗಿದ ವಿಶ್ವ ಆಹಾರ ಸಮ್ಮೇಳನದಲ್ಲಿ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳ ನಾಯಕರು ತಮ್ಮಲ್ಲಿಯ ಆಹಾರ ಸಮಸ್ಯೆಯನ್ನು ಕುರಿತು ಮಾತನಾಡಿದರು. ಎಲ್ಲರಿಗಿಂತಲೂ ವಿಶಿಷ್ಟವಾದ ರೀತಿಯಲ್ಲಿ ಮತ್ತು ಗಮನ ಸೆಳೆಯುವ ಹಾಗೆ ಮಾತನಾಡಿದವರು ಜಿಂಬ್ವಾಬೆಯ ಅಧ್ಯಕ್ಷ ಮುಗಾಬೆ. ತನ್ನ ಜನರ ಹಸಿವು ಮತ್ತು ಅಲ್ಲಿಯ ಆಹಾರ ಸಮಸ್ಯೆಯ ಬಗ್ಗೆ ವಸ್ತುನಿಷ್ಟವಾಗಿ ಮಾತನಾಡಿ ಇಡೀ ವಿಶ್ವದ ಗಮನ ಸೆಳೆದರು. ಭಾರತ ಮತ್ತು ಚೈನಾದಂತ ರಾಷ್ಟ್ರಗಳು ತಮ್ಮ ದೇಶಕ್ಕೆ ಬೇಕಾಗಬಹುದಾದ ಆಹಾರವನ್ನು ಉತ್ಪಾದಿಸುವಲ್ಲಿ ಸಮರ್ಥರಾಗುವ ಜೊತೆಯಲ್ಲಿ ಸ್ವಾವಲಂಬನೆಯನ್ನೂ ಸಾಧಿಸಿಕೊಂಡವು. ಅಂದ ಮಾತ್ರಕ್ಕೆ ಭಾರತ ಮತ್ತು ಚೈನಾಗಳಲ್ಲಿ ಹಸಿವು, ಬಡತನ ಇಲ್ಲವೆಂದಲ್ಲ. ಒಂದು ದೇಶದ ರಾಜಕೀಯ ಸುಭದ್ರತೆಯಲ್ಲಿ ಆಹಾರ ಉತ್ಪಾದನೆಗಳ ಬೆಲೆ ಇಳಿಕೆ ಇಲ್ಲವೇ ಬಡವರಿಗಾಗಿ ಈ ಬಗೆಯ ಯೋಜನೆಗಳು ತೀರಾ ಅವಶ್ಯಕ. ಇನ್ನು ಅನ್ನಭಾಗ್ಯ ಎನ್ನುವುದು ಯಾವುದೋ ಒಂದು ಐಷಾರಾಮಿ ಯೋಜನೆಗೆ ಸಂಬಂಧಿಸಿಲ್ಲ. ಸರಕಾರ ಒಂದೊಮ್ಮೆ ಬಡವರಿಗೆ ಒಂದಷ್ಟು ಮೈಸೂರ ಸ್ಯಾಂಡಲ್ ಸೋಪ್ ಉಚಿತವಾಗಿ ಕೊಡುತ್ತಿದ್ದರೆ ಅಪಸ್ವರ ಎತ್ತಬಹುದು, ರೇಷ್ಮೆ ಸೀರೆ ಕೊಡುತ್ತಿದ್ದರೆ ಆಗಲೂ ಅಪಸ್ವರ ಎತ್ತಬಹುದು ಅನ್ನ Streetchildrenಎನ್ನುವುದು ಪಾಪಿ ಪೇಟ್ ಕಾ ಸವಾಲಿಗೆ ಸಂಬಂಧಿಸಿದೆ. ನಮ್ಮಲ್ಲಿ ಇಂದಿಗೂ ಅಪೌಷ್ಟಿಕತೆಯಿಂದ ಸಾಯುವ ಮಕ್ಕಳ ಪ್ರಮಾಣ ಕಡಿಮೆಯಿಲ್ಲ. ಅಪೌಷ್ಟಿಕತೆ ಎನ್ನುವುದು ಆಹಾರದ ಕೊರತೆಯಿಂದ ಉಧ್ಬವವಾಗಬಹುದಾದ ಸಮಸ್ಯೆ.

ಅಪೌಷ್ಟಿಕತೆಯಲ್ಲಿ ಇಡಿಯಾಗಿ ಎರಡು ಪ್ರಕಾರಗಳಿವೆ ಒಂದನೆಯದು ಪ್ರೋಟೀನ್ ಎನರ್ಜಿ ಮ್ಯಾಲ್‌ನ್ಯುಟ್ರಿಶನ್ ಅಂದರೆ ಸೇವಿಸುವ ಕ್ಯಾಲೊರಿ ಮತ್ತು ಪ್ರೋಟಿನ್ ಕೊರತೆಯಿಂದಾಗಿ ಸೃಷ್ಟಿಯಾಗುವ ಅಪೌಷ್ಟಿಕತೆ. ಇನ್ನೊಂದು ಮೈಕ್ರೊನ್ಯುಟ್ರಿಯಂಟ್ ಡೆಫಿಸಿಯನ್ಸಿ ಅಂದರೆ ವಿಟಾಮಿನ್ ಮತ್ತು ಮಿನರಲ್ ಗಳ ಕೊರತೆಯಿಂದ ಉದ್ಭವವಾಗುವ ಅಪೌಷ್ಟಿಕತೆ. ಮೊದಲನೆಯದು ಶರೀರದ ಬೆಳವಣಿಗೆಯಲ್ಲಿ ಬಹಳ ಮುಖ್ಯ ಅದರ ಕೊರತೆಯುಂಟಾದರೆ ಶರೀರ ಕೃಷವಾಗತೊಡಗುತ್ತದೆ ಅದು ಬೇರೆ ಬೇರೆ ತೊಂದರೆಗಳಿಗೂ ಕಾರಣವಾಗುತ್ತದೆ. ಸಂಯುಕ್ತರಾಷ್ಟ್ರ ಸಂಘದ ವರದಿಯಂತೆ 2012-2014 ರ ಅವಧಿಯಲ್ಲಿ ಇಡೀ ವಿಶ್ವದಲ್ಲಿ ಸುಮಾರು 805 ಮಿಲಿಯನ್ ಜನತೆ ಈ ಬಗೆಯ ಅಪೌಷ್ಟಿಕತೆಯ ಕೊರತೆಯಿಂದ ಬಳಲುವವರಿದ್ದಾರೆ. ಪ್ರತಿ 9 ಜನರಲ್ಲಿ ಒಬ್ಬಾತ ಆಹಾರ ಕೊರತೆಯಿಂದ ಬಳಲುವವನಿದ್ದಾನೆ. ಈ 805 ಮಿಲಿಯನ್ ಜನಸಂಖ್ಯೆಯಲ್ಲಿ 790 ಮಿಲಿಯನ್ ಜನರು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿಯೇ ಇದ್ದಾರೆ. ಸಬ್ ಸಹರಾನ್ ಆಫ್ರಿಕಾ ಮತ್ತು ಆಫ್ರಿಕಾ, ಏಶ್ಯಾ ಅದರಲ್ಲೂ ದಕ್ಷಿಣ ಏಷ್ಯಾದ ಭಾಗಗಳಲ್ಲಿ ಆಹಾರದ ಕೊರತೆ ತೀವ್ರವಾಗಿದೆ. 2012 ರ ಸಂದರ್ಭದಲ್ಲಿ ಜಾಗತಿಕ ಹಸಿವಿನ ಸೂಚ್ಯಾಂಕ ಮಾಡಿದ ಸಮೀಕ್ಷೆಯಲ್ಲಿ ಮೂರು ಮುಖ್ಯ ಸಂಗತಿಗಳನ್ನು ಗಮನಹರಿಸಿ ಅದು ಅಧ್ಯಯನ ಮಾಡಿತ್ತು. ಒಂದನೆಯದು ಸತ್ವಭರಿತ ಆಹಾರದ ಕೊರತೆಯ ಜನಸಮೂಹದ ಪ್ರಮಾಣ, ಎರಡನೆಯದು ಶಿಶುವಿನ ಮ್ರಣ ಪ್ರಮಾಣ, ಮೂರನೇಯದು ಪೌಷ್ಟಿಕಾಂಶಗಳ ಕೊರತೆಯಿಂದ ಬಳಲುವ ಮಕ್ಕಳ ಪ್ರಮಾಣ. cooked-riceಈ ಮೂರು ಸಂಗತಿಗಳನ್ನು ಆದರಿಸಿ ಮಾಡಲಾದ ಸಮೀಕ್ಷೆಯ ಪ್ರಕಾರ 79 ರಾಷ್ಟ್ರಗಳ ಪೈಕಿ ಭಾರತ 65 ನೇ ಸ್ಥಾನದಲ್ಲಿರುವ ಬಗ್ಗೆ ವರದಿಯಾಗಿದೆ. 2008 ರ ಸಂದರ್ಭದಲ್ಲಿ ಭಾರತೀಯ ರಾಜ್ಯಗಳ ಹಸಿವಿನ ಸೂಚ್ಯಾಂಕದ ಪ್ರಕಾರ ದೇಶದ ಬೇರೆ ಬೇರೆ ರಾಜ್ಯಗಳ ಸ್ಥಿತಿ ಬೇರೆ ಬೇರೆಯಾಗಿದೆ. ದೇಶದ ಸುಮಾರು 12 ರಾಜ್ಯಗಳು ಆಹಾರದ ವಿಷಯವಾಗಿ ಸಂಕಷ್ಟದಲ್ಲಿವೆ. ಅದರಲ್ಲೂ ಮಧ್ಯಪ್ರದೇಶ ತೀರ ಗಂಭೀರವಾದ ಸ್ಥಿತಿಯಲ್ಲಿದೆ ಎಂದು ವರದಿ ಆಗಿರುವದಿದೆ. ಸತ್ವಭರಿತ ಆಹಾರ ಮತ್ತು ಅಭಿವೃದ್ಧಿ ಸೂಚ್ಯಾಂಕದ ವಿಷಯದಲ್ಲಿ ದೇಶದ 12 ರಾಜ್ಯಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಲಾಗಿದೆ. ಅದರಲ್ಲಿ ಹತ್ತು ರಾಜ್ಯಗಳ ಶ್ರೇಣಿ ಹೀಗಿದೆ. ಮೊದಲ ಸ್ಥಾನದಲ್ಲಿ ಕೇರಳ, ಎರಡನೆಯ ಸ್ಥಾನ ಹರಿಯಾಣಾ, ಮೂರನೇಯ ಸ್ಥಾನ ತಮಿಳುನಾಡು, ನಾಲ್ಕನೇಯ ಸ್ಥಾನದಲ್ಲಿ ಗುಜರಾತ, ಐದನೇಯ ಸ್ಥಾನದಲ್ಲಿ ಮಹಾರಾಷ್ಟ್ರ, ಆರನೇಯ ಸ್ಥಾನದಲ್ಲಿ ಕರ್ನಾಟಕ, ಏಳನೇ ಸ್ಥಾನದಲ್ಲಿ ಆಂದ್ರಪ್ರದೇಶ, ಎಂಟನೆಯ ಸ್ಥಾನದಲ್ಲಿ ಆಸ್ಸಾಂ, ಒಂಬತ್ತನೇಯ ಸ್ಥಾನದಲ್ಲಿ ಓಡಿಸಾ ಹತ್ತನೇಯ ಸ್ಥಾನದಲ್ಲಿ ರಾಜಸ್ಥಾನ ಇತ್ತು. ಆದರೆ ಯುನಿಸೆಫ್ನ ರಾಪಿಡ್ ಸರ್ವೆ ಆಫ್ ಚಿಲ್ಡ್ರನ್ ಎನ್ನುವ ಸಂಸ್ಥೆ ದೇಶವ್ಯಾಪಿ ಕೈಗೊಂಡ ಸಮೀಕ್ಷೆಯ ಪ್ರಕಾರ ನಮ್ಮ ದೇಶದಲ್ಲಿ 2013-14 ರಲ್ಲಿ ಪರಿಸ್ಥಿತಿ ತೀರಾ ಭಿನ್ನವಾಗಿಲ್ಲ. ಈಗಲೂ ಸುಮರು 53 ಪ್ರತಿಶತ 5 ವರ್ಷದಳಗೊಳ ಹೆಣ್ಣು ಮಕ್ಕಳು ಕಡಿಮೆ ತೂಕದವರಾಗಿದ್ದಾರೆ. ಉತ್ತರಪ್ರದೇಶದಲ್ಲಿ ಸುಮರು 50 ಪ್ರತಿಶತ ಮಕ್ಕಳ ಬೆಳವಣಿಗೆ ಕೃಶವಾಗಿದೆ ಎನ್ನುವ ಅಂಶವನ್ನು ಹೊರಹಾಕಿದೆ ಜೊತೆಗೆ ಗ್ರಮೀಣ ಭಾಗಗಳಲ್ಲಿ ನಗರ ಪ್ರದೇಶಗಳಿಗಿಂತಲೂ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಪ್ರಮಾಣ ಹೆಚ್ಚಿಗಿದೆ. ಗ್ರಾಮೀಣ ಭಾಗಗಳಲ್ಲಿ ಸುಮಾರು 42 ಪ್ರತಿಶತ ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ಬಳಲುವವರಿದ್ದಾರೆ.

ಆಹಾರದ ವಿಷಯವಾಗಿ ರಾಷ್ಟ್ರೀಯ ಮಾದರಿ ಸಮೀಕ್ಷೆ ಮೂರು ರೀತಿಯ ಸಮೂಹಗಳನ್ನು ಗುರುತಿಸಿರುವದಿದೆ ಒಂದನೆಯದಾಗಿhunger04-061 ವರ್ಷವಿಡೀ ಸಾಕಷ್ಟು ಆಹಾರ ಸಾಮಗ್ರಿಗಳನ್ನು ಹೊಂದಿರುವ ಕುಟುಂಬಗಳು, ಎರಡನೆಯದಾಗಿ ವರ್ಷದ ಕೆಲವು ತಿಂಗಳುಗಳಲ್ಲಿ ತೊಂದರೆಯನ್ನು ಎದುರಿಸುವ ಕುಟುಂಬಗಳು, ಮೂರನೆಯದು ವರ್ಷದುದ್ದಕ್ಕೂ ಸಾಕಷ್ಟು ಆಹಾರ ಸಾಮಗ್ರಿಗಳನ್ನು ಹೊಂದದೇ ಇರುವವರು. ಇನ್ನು ಈ ಮೇಲಿನ ಮೂರು ಪ್ರಕಾರಗಳು ದೇಶದ ಉದ್ದಗಲಕ್ಕೂ ಕಂಡು ಬರುವ ಸಮೂಹಗಳು. ಮೊದಲನೆಯ ಸಮೂಹಗಳಿಗೆ ಈ ಆಹಾರ ಸುಭದ್ರತೆಯ ಪ್ರಶ್ನೆಯೇ ಬರುವದಿಲ್ಲ. ಇನ್ನು ಎರಡನೆಯವರಿಗೆ ಸಂಕಟ ಬಂದಾಗ ವೆಂಕಟರಮಣ. ನಿಜವಾಗಿಯೂ ಆಹಾರದ ಸುಭದ್ರತೆ ಮತ್ತು ಹಕ್ಕಿನ ಪ್ರಶ್ನೆ ಇದ್ದದ್ದೇ ಮೂರನೇಯ ಜನಸಮೂಹದವರಿಗಾಗಿ. ಇವರು ಹಸಿವು ಮತ್ತು ಕೊರತೆಗಳ ನಡುವೆಯೇ ದಿನದೂಡುವವರು. ಎರಡನೆಯ ಮತ್ತು ಮೂರನೇಯ ಪ್ರರೂಪದ ಕುಟುಂಬದ ವಿಷಯಗಳ ಪ್ರಶ್ನೆ ಬಂದರೆ ವರ್ಷದ ಕೆಲವು ತಿಂಗಳುಗಳಲ್ಲಿ ಆಹಾರ ಧಾನ್ಯಗಳ ಕೊರತೆಯ ವಿಷಯವಾಗಿ ಪಶ್ಚಿಮ ಬಂಗಾಲ ಮೊದಲ ಸ್ಥಾನದಲ್ಲಿದ್ದರೆ, ವರ್ಷವಿಡೀ ಆಹಾರ ಧಾನ್ಯಗಳ ಕೊರತೆ ಎದುರಿಸುವ ರಾಜ್ಯಗಳ ಸಾಲಲ್ಲಿ ಆಸ್ಸಾಂ ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿ ಪೌಷ್ಟಿಕತೆಯ ಕೊರತೆ ಮತ್ತು ಕಡಿಮೆ ತೂಕದ ಮಕ್ಕಳ ವಿಷಯವಾಗಿ ಮಾತನಾಡುವದಾದರೆ ಭಾರತದಲ್ಲಿ 217 ಮಿಲಿಯನ ಜನಸಂಖ್ಯೆ ಹೆಚ್ಚೂ ಕಡಿಮೆ ಇಂಡೊನೇಷಿಯಾದ ಒಟ್ಟು ಜನಸಂಖೆಯಷ್ಟು ಜನ ನಮ್ಮಲ್ಲಿ ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುವ ಬಗ್ಗೆ ಸಮೀಕ್ಷೆಯಲ್ಲಿ ವರದಿಯಾಗಿದೆ. ಹಸಿರು ಕ್ರಾಂತಿಗಿಂತಲೂ ಮೊದಲು ದೇಶದಲ್ಲಿ ಭೀಕರ ಬರಗಾಲದ ಸಂದರ್ಭದಲ್ಲಿ ಜನ ಅಪಾರವಾಗಿ ಸಾಯುತ್ತಿದ್ದರು. ಆಗ ಮರಣ ಪ್ರಮಾಣ ಸಹಜವಾಗಿ ಹೆಚ್ಚಾಗುತ್ತಿತ್ತು. ಈಗ ಅಂಥ ಬರಗಾಲಗಳಿಲ್ಲ. ಆದರೆ ಈ ಬಗೆಯ ಸತ್ವಭರಿತ ಆಹಾರದ ಕೊರತೆಯಿಂದಾಗಿ ಸಾಯುವವರ ಪ್ರಮಾಣ ಆಗಿನ ಬರಗಾಲಗಳಿಗಿಂತಲೂ ಹೆಚ್ಚಾಗಿದೆ. child-labourಇದನ್ನು ಗಮನದಲ್ಲಿಟ್ಟುಕೊಂಡೇ ಜನೆವರಿ 2011 ರ ಸಂದರ್ಭದಲ್ಲಿ ಪ್ರಧಾನಿ ಮನಮೋಹನ ಸಿಂಗ್ ರವರು ‘ನಮ್ಮಲ್ಲಿ ಹಸಿವು ಮತ್ತು ಅಪೌಷ್ಟಿಕತೆ ಎನ್ನುವದು ರಾಷ್ಟ್ರ ತಲೆತಗ್ಗಿಸುವಂತಿದೆ’ ಎಂದಿದ್ದರು.

ಹಾಗೆ ನೋಡಿದರೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆ ಇರಲಿ ಇಲ್ಲವೇ ಅನ್ನ ಭಾಗ್ಯ ಯೋಜನೆ ಇರಲಿ ನಮಗಿಂತಲೂ ಮೊದಲು ಆರಂಭಿಸಿದವರು ನೆರೆಯ ತಮಿಳುನಾಡು. ನಮ್ಮಲ್ಲಿ ಈಗ ಆಹಾರ ಉತ್ಪಾದನೆಯ ಕೊರತೆಯಿಲ್ಲ. ಸಾಕಷ್ಟು ಆಹಾರಧಾನ್ಯವನ್ನು ಸಂಗ್ರಹಿಸಿಡಲಾಗದೇ ಹಾಳಾಗುವದನ್ನು ನಾವೇ ನೋಡಿದ್ದೇವೆ. ಹುಳ ಹಿಡಿದು ಹಾಳಾಗಿ ತಿಪ್ಪೆ ಸೇರುವ ಬದಲು ಬಡ ಜನತೆಯ ಹೊಟ್ಟೆ ಸೇರುವದರಲ್ಲಿಯೇ ಒಂದರ್ಥವಿದೆ ಎನಿಸುವದಿಲ್ಲವೆ..? ಸಾಕಷ್ಟು ನಿರರ್ಥಕವಾದ ಕಾರಣಗಳಿಗಾಗಿ ಕೊಟಿಗಟ್ಟಲೆ ದುಡ್ಡು ಸುರಿಯುವಾಗ, ನಮ್ಮದೇ ಬಡ ಜನರಿಗೆ ಅನ್ನವನ್ನು ನೀಡುವ ಯೋಜನೆ ಅದು ಹೇಗೆ ವ್ಯರ್ಥವಾಗಿ ಕಂಡಿತೊ ಗೊತ್ತಿಲ್ಲ. ಕೆಲ ಬಾರಿಯಾದರೂ ನಾವು ರಾಜಕೀಯದಿಂದ ದೂರ ನಿಂತು ಯೋಚಿಸುವ, ಮಾತನಾಡುವ ಅಗತ್ಯವಿದೆ ಎನಿಸುವದರಲ್ಲಿಯೇ ನಮ್ಮ ಸಾಕ್ಷರತೆಗೆ ಬೆಲೆಯಿದೆ.

Leave a Reply

Your email address will not be published. Required fields are marked *