ರಾಗಿಮುದ್ದೆ ಕಳ್ಳತನ ಮಾಡಿದ್ದಕ್ಕೆ ಜೀವ ಉಳಿದಿದೆ…

– ಜೀವಿ

ನನಗಿನ್ನು ಎಂಟು-ಒಂಬತ್ತು ವರ್ಷ ವಯಸ್ಸು. ಊರಿನಲ್ಲೆ ಇದ್ದ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದೆ. ತಿಂದುಂಡು ಆಡಿ ನಲಿಯುವ ಕಾಲ. ಆದರೆ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದ ಕಾರಣ ಅಪ್ಪ ಶಾಲೆ ಬಿಡಿಸಿ ಜೀತಕ್ಕೆ ಅಟ್ಟಿದ್ದ. ಅಲ್ಲಾದರೂ ಮಗ ಹೊಟ್ಟೆ ತುಂಬಾ ಊಟ ಮಾಡ್ತಾನೆ ಎನ್ನೋದು ಅಪ್ಪನ ಲೆಕ್ಕಾಚಾರ. ಬೆಟ್ಟ ಸುತ್ತಿ ಐವತ್ತು ಕುರಿ ಮೇಯಿಸುವುದು, ಕೊಟ್ಟಿಗೆ ಕಸ ಬಾಚುವುದು ನನ್ನ dalit_pantherಜವಾಬ್ದಾರಿ. ಅಪ್ಪ ಕೂಡ ಕೈಒಡ್ಡಿದ್ದ ಸಾಲ ತೀರಿಸಲು ಜಮೀನ್ದಾರನ ಮನೆ ಆಲೆಮನೆಯಲ್ಲಿ ಗಾಣದಾಳಾಗಿ ದುಡಿಯುತ್ತಿದ್ದ. ಇತ್ತ ಅವ್ವ ಒಂಬತ್ತು ತಿಂಗಳ ಗಭರ್ಿಣಿ. ಅವಳು ಹೊಟ್ಟೆ ತುಂಬ ಊಟ ಮಾಡಿ ಅದೆಷ್ಟೋ ದಿನಗಳು ಕಳೆದಿದ್ದವು. ಊರಿನಲ್ಲಿ ಯಾವುದಾದರೂ ಮದುವೆ-ತಿಥಿ ನಡೆದರೆ ಅಂದು ಹೊಟ್ಟೆ ತುಂಬ ಊಟ. ಬೇರೆ ದಿನವೆಲ್ಲ ಅರೆಹೊಟ್ಟೆಯೇ ಗತಿ. ಹೇಗೋ ದಿನಗಳು ಉರುಳುತ್ತಿದ್ದವು.

ಪಟೇಲರ ಮನೆಯಲ್ಲಿ ಮದುವೆ ಎದ್ದಿತ್ತು. ಎಲ್ಲರು ಆ ದಿನಕ್ಕಾಗಿಯೇ ಕಾದು ಕುಳಿತಿದ್ದರು. ಅವ್ವ ಮತ್ತು ತಂಗಿ ನಾಲ್ಕೈದು ದಿನ ಮುನ್ನವೇ ಆ ಮನೆಯ ದನ-ಕರು, ಕಸ-ಮುಸುರೆಯ ಜವಾಬ್ದಾರಿ ನೋಡಿಕೊಂಡಿದ್ದರು. ದಿನದಲ್ಲಿ ಎರಡು ಹೊತ್ತು ಹೊಟ್ಟೆ ತುಂಬ ಊಟ ಸಿಗುತ್ತಿರುವುದೇ ತೃಪ್ತಿಯಾಗಿತ್ತು. ಮದುವೆ ಕಾರ್ಯ ಮುಗಿದು ಹೋಯಿತು. ನಿರೀಕ್ಷೆಯಷ್ಟು ನೆಂಟರು ಬರಲಿಲ್ಲ. ಮಾಡಿದ್ದ ಅನ್ನವೆಲ್ಲಾ ಮಿಕ್ಕಿತ್ತು. ಪಟೇರಿಗೆ ಅನ್ನ ಮಿಕ್ಕಿದೆ ಎಂಬ ಸಂಕಟವಾದರೆ ನಮ್ಮೂರಿನ ದಲಿತರಿಗೆ ಸಂಭ್ರಮ. ಮಿಕ್ಕಿರುವ ಅನ್ನ ನಮ್ಮ ಪಾಲೇ ಎಂಬುದು ಅವರಿಗೆ ಗೊತ್ತಿತ್ತು. ನಿರೀಕ್ಷೆಯಂತೆ ಅನ್ನ ಕೊಂಡೊಯ್ದು ಹಂಚಿಕೊಳ್ಳಲು ಪಟೇಲರು ಹೇಳಿ ಕಳುಹಿಸಿದ್ದರು.

ಬಿದಿರು ಕುಕ್ಕೆಗಳನ್ನು ಹೊತ್ತು ದಲಿತ ಕೇರಿಯ ಹೆಂಗಸರು ಮಕ್ಕಳು ಮದುವೆ ಮನೆ ಮುಂದೆ ಹಾಜರಾದರು. ಒಬ್ಬೊಬ್ಬರಿಗೆ ಮುಕ್ಕಾಲು ಕುಕ್ಕೆಯಷ್ಟು ಅನ್ನ ಸಿಕ್ಕಿತ್ತು. ಮಧ್ಯಾಹ್ನ ಮದುವೆ ಮನೆಯಲ್ಲೇ ಊಟ ಆಗಿತ್ತು. ಸಂಜೆ ಕೂಡ ಹೊಟ್ಟೆ ಬಿರಿಯುವಂತೆ ಎಲ್ಲರು ಊಟ ಮಾಡಿದರು. ಆದರೂ ಅರ್ಧ ಕುಕ್ಕೆ ಅನ್ನ ಉಳಿದಿತ್ತು. ನಾಳೆಗೂ ಚಿಂತೆ ಇಲ್ಲ ಎಂದುಕೊಂಡು ಮಲಗಿದ್ದರು. ಬೆಳಗ್ಗೆ ಸಾರು ಮಾಡಿ ಅನ್ನ ಇಕ್ಕಲು ಅವ್ವ ಕುಕ್ಕೆ ತೆಗೆದಳು. ಆದರೆ ಅದೇಕೋ ಅನ್ನ ಮೆತ್ತಾಗಾಗಿತ್ತು, ಉಳಿ ಘಮಲು ಆವರಿಸಿತ್ತು. ಅವ್ವ ಅಯ್ಯೋ…. ಎಂದು ದೊಡ್ಡದಾಗಿ ಉಸಿರು ಬಿಟ್ಟಳು. ಕೈತೊಳೆದು ತಟ್ಟೆ ಹಾಸಿಕೊಂಡು ಮೂಲೆಯಲ್ಲಿ ಕುಳಿತಿದ್ದ ಅಜ್ಜಿ ಅನ್ನಕ್ಕೂ ನಮ್ಮ ಮೇಲೆ ಮುನಿಸೇ ಎಂದು ತಟ್ಟೆ ಬದಿಗೆ ಸರಿಸಿ ನೀರು ಕುಡಿದಳು. ಬಿಸಿನೀರು ಕಾಯಿಸಿ ಅದಕ್ಕೆ ಅನ್ನ ಸುರಿದು ಕುದಿಸು ಎಂದು ಅಜ್ಜಿ ಅವ್ವನಿಗೆ ಆಜ್ಞೆ ಮಾಡಿದಳು. ಜಮೀನ್ದಾರರ ಮನೆಯಲ್ಲಿ ಅನ್ನ ಹಳಸಿದರೆ ಅದನ್ನು ತಂದು ಬಿಸಿನೀರಿನಲ್ಲಿ ಕುದಿಸಿ ಉಪ್ಪು ಹಾಕಿ ಹಿಂಡಿಕೊಂಡು ತಿನ್ನುವುದು ಸಾಮಾನ್ಯವಾಗಿತ್ತು. ಅವ್ವ ಅದೇ ರೀತಿ ಮಾಡಿ ಕಾದು ಕುಳಿತಿದ್ದ ಅಜ್ಜಿ ಮತ್ತು ಮಕ್ಕಳಿಗೆ ಬಡಿಸಿದಳು. ಉಳಿಯ ಘಮಲು ಇದ್ದರೂ ಒಂದಿಷ್ಟು ಕಡಿಮೆ ಆಗಿದೆ ಎನ್ನಿಸಿತು. ಅಂದಿನ ತುತ್ತಿನ ಚೀಲ ತುಂಬಿಸಿಕೊಳ್ಳಲು ಬೇರೆ ದಾರಿ ಇರಲಿಲ್ಲ. ಹಾಗಾಗಿ ಹಳಸಿದ ಅನ್ನ ಊಟ ಮಾಡಲೇಬೇಕಾಯಿತು. ರಾತ್ರಿ ಕೂಡ ಹೇಗೋ ಮೂಗು ಮುಚ್ಚಿಕೊಂಡು ಅದೇ ಅನ್ನ ಉಂಡು ಮಲಗಿದರು.

ನನಗೋ ಜಮೀನ್ದಾರರ ಮನೆಯಲ್ಲಿ ಜೀತದಾಳಾಗಿದ್ದ ಕಾರಣಕ್ಕೆ ಊಟ ಸಿಗುತ್ತಿತ್ತು. ಅಜ್ಜಿ, ತಂಗಿ, ತಮ್ಮ ಮತ್ತು ಅವ್ವನಿಗೆ ದಿನದಲ್ಲಿ ಎರಡು ಹೊತ್ತು ಊಟ ಮಾಡಿದರೆ ಅದು ಸುಖದ ದಿನ. ಹೇಗೋ ಕೂಡಿಟ್ಟುಕೊಂಡಿದ್ದ ರಾಗಿ ಚೀಲ ಬರಿದಾಗಿ ಹಲವು ದಿನವೇ ಕಳೆದಿತ್ತು. ಹಿಟ್ಟಿನ ಮಡಿಕೆ ಲೊಟ್ಟೆ ಹೊಡೆಯುತ್ತಿದ್ದಂರಿಂದ ಹೆಡಕಲಿಗೆ ಸುಂಡ(ಇಲಿ) ಕೂಡ ಹತ್ತುವುದನ್ನು ಮರೆತಿತ್ತು. ಊರಿನಲ್ಲೆ ಕೆರೆ ಹಿಂಭಾಗದ ಗದ್ದೆಯಲ್ಲಿ ಗಾಣದಾಳಗಿದ್ದ ಅಪ್ಪ ರಾತ್ರಿ ಮನೆಗೆ ಬರುವಾಗ ಅಲ್ಲಿ ಉಳಿದಿದ್ದ ಮುದ್ದೆ ತಂದು ಕೊಡುತ್ತಿದ್ದ. ಅಲ್ಲಿ ಖಾಲಿ ಆಗಿದ್ದರೆ ಮನೆಯಲ್ಲಿ ಎಲ್ಲರೂ ಖಾಲಿ ಹೊಟ್ಟೆ. ಅದೊಂದು ದಿನ ಕುರಿ ಮೇಯಿಸಿಕೊಂಡು ಸಂಜೆ ಕೊಟ್ಟಿಗೆಯತ್ತ ಹೆಜ್ಜೆ ಹಾಕುತ್ತಿದ್ದೆ. ಅಲ್ಲಿಗೆ ಬಂದ ಅಪ್ಪ, ಮನೆಯೊಡತಿಗೆ ಏನಾದರೂ ಹೇಳಿ ಕತ್ತಲಾಗುವ ಹೊತ್ತಿಗೆ ಮನೆ ಹತ್ತಿರ ಬಾ ಎಂದು ಅಪ್ಪ ಹೇಳಿ ಹೊರಟ. ಕುರಿಗಳನ್ನು ಕೊಟ್ಟಿಗೆಗೆ ಕೂಡಿ, ಮನೆಯೊಡತಿಗೆ ಏನೋ ಸುಳ್ಳು ಹೇಳಿ ಮನೆಗೆ ಬಂದೆ. ಮನೆಯಲ್ಲಿ ಏನೋ ವಿಶೇಷ ಎರಬಹುದು ಎಂದು ಊಹಿಸಿ ಓಡಿ ಬಂದೆ. ಕತ್ತಲಾಗುವುದನ್ನೇ ಕಾದು ಕುಳಿತಿದ್ದ ಅಪ್ಪ, ನನಗೂ, ತಂಗಿಗೂ ಒಂದೊಂದು ರಗ್ಗು ಹೊದಿಸಿ ತನ್ನನ್ನು ಹಿಂಬಾಲಿಸುವಂತೆ ಹೇಳಿದ. ಬೆಳದಿಂಗಳು ಹಾಲು ಚೆಲ್ಲದಿಂತೆ ಹರಡಿತ್ತು. ಅಪ್ಪಿ-ತಪ್ಪಿಯೂ ತುಟಿ ಬಿಚ್ಚದಂತೆ ಆಜ್ಞೆ muddeಮಾಡಿದ್ದ. ಹಾಗಾಗಿ ಅಪ್ಪ ಏನೋ ಕಳ್ಳತನಕ್ಕೆ ಕರೆದೊಯ್ಯುತ್ತಿದ್ದಾನೆ ಎಂಬುದು ನಮಗೆ ಖಾತ್ರಿ ಆಗಿತ್ತು. ಅಕ್ಟೋಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಸಾಮಾನ್ಯವಾಗಿ ರಾಗಿ ಪೈರು ಕಟಾವಾಗುವ ಕಾಲ. ಜಮೀನು ಉಳ್ಳವರು ಬೆಳೆ ಕಟಾವು ಮಾಡಿ ಒಣಗಲು ಅನುಕೂಲ ಆಗುವಂತೆ ಸಣ್ಣ-ಸಣ್ಣ ಗುಪ್ಪೆ ಹಾಕಿದ್ದರು. ಏಳೆಂಟು ಗುಪ್ಪೆ ಒಂದೇ ಕಡೆ ಇರುವ ಜಾಗದಲ್ಲಿ ನಿಂತ ಅಪ್ಪ, ಅಲ್ಲೆ ಕೂರುವಂತೆ ಇಬ್ಬರಿಗೂ ಆಜ್ಞೆ ಮಾಡಿದ. ರಗ್ಗುಗಳನ್ನು ತಲೆ ತುಂಬ ಹೊದ್ದು ಕುಳಿತೆವು. ಅಪ್ಪ ಒಂದೊಂದು ಗುಪ್ಪೆಯಿಂದಲೂ ಒಂದೊಂದೇ ರಾಗಿ ಪೈರಿನ ಕಂತೆ ತಂದು ನಮಗೆ ಕೊಟ್ಟ ಅದನ್ನು ರೊಗ್ಗಿನೊಳಗೆ ಮುದುರಿಕೊಂಡು ಕುಳಿತೆವು. ಇನ್ನಷ್ಟ ತರಲು ಅಪ್ಪ ಹೋಗಿದ್ದ. ಅದ್ಯಾವ ಕೇಡುಗಾಲಕ್ಕೋ ನನಗೂ ಅಂದು ಬರಬಾರದ ಕೆಮ್ಮು ಬಂದಿತ್ತು. ತುಟಿ ಬಿಚ್ಚದಂತೆ ಅಪ್ಪ ಆಜ್ಞೆ ಮಾಡಿದ್ದರಿಂದ ತಡೆದು ನಿಲ್ಲಿಸಿಕೊಂಡಿದ್ದೆ. ತಡೆದಷ್ಟು ಕೆಮ್ಮು ಜೋರಾಯಿತು. ತಡೆದುಕೊಳ್ಳಲಾಗದೆ ಜೋರಾಗಿ ಕೆಮ್ಮಿಬಿಟ್ಟೆ. ದೂರದಲ್ಲಿದ್ದ ಅಪ್ಪ ಓಡಿ ಬಂದವನೆ ಬೆನ್ನಿಗೆ ನಾಲ್ಕೈದು ಬಾರಿ ತನ್ನ ಶಕ್ತಿಯನ್ನೆಲ್ಲಾ ಒಂದು ಮಾಡಿಕೊಂಡು ಗುದ್ದಿದ. ಜೀವ ಹೋದಂತಾಯಿತು. ಅಪ್ಪಕೊಟ್ಟ ಗುದ್ದು, ಎದೆಯಿಂದ ಉಕ್ಕಿ ಬರುತ್ತಿದ್ದ ಕೆಮ್ಮು ಎರಡನ್ನೂ ತಡೆದುಕೊಳ್ಳುವು ಕಷ್ಟವಾಯಿತು. ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿದು ಹೋದವು. ಉಸಿರು ನಿಂತ ಅನುಭವ ಆಯಿತು. ತಂಗಿ ಬೆನ್ನು-ಎದೆ ನೀವಿ, ಕಣ್ಣೀರು ಒರೆಸಿ ಸಮಾಧಾನ ಮಾಡಿದಳು. ಹೇಗೋ ನಿಧಾನವಾಗಿ ಉಸಿರು ಎಳೆದುಕೊಂಡೆ. ಮತ್ತೊಮ್ಮೆ ಕೆಮ್ಮು ಬಂದೇ ಬಿಟ್ಟಿತು. ಕೆಮ್ಮಿದರೆ ಈ ಬಾರಿ ಅಪ್ಪ ಸಾಯಿಸಿಯೇ ಬಿಡುತ್ತಾನೆ ಎಂದು ಮನದಲ್ಲೆ ಆಲೋಚಿಸಿದೆ. ಕೆಮ್ಮಿನ ಶಬ್ದ ಕೇಳಿ ರಾಗಿ ಕಂತೆ ಕಳ್ಳತನ ಸಿಕ್ಕಿ ಬೀಳುವ ಆತಂಕ ಅಪ್ಪನದು. ಕೆಮ್ಮು ತಡೆದು ಸಾಕಾಗಿದ್ದ ನನಗೊಂದು ಉಪಾಯ ಹೊಳೆಯಿತು. ಹೊದ್ದು ಕುಳಿತಿದ್ದ ರಗ್ಗನ್ನು ಮುದುರಿಕೊಂಡು ಬಾಯಿಗೆ ತುರುಕಿಕೊಂಡು ಕುಳಿತೆ. ಕೆಮ್ಮುತ್ತಿದ್ದರೂ ಶಬ್ದ ಹೊರಕ್ಕೆ ಕೇಳಲಿಲ್ಲ. ಐದರಿಂದ ಹತ್ತು ನಿಮಿಷದಲ್ಲಿ ಎಲ್ಲಾ ಗುಪ್ಪೆಯಿಂದ ಒಂದೊಂದು ಕಂತ ತಂದು ನಾವು ಕುಳಿತಿದ್ದ ಜಾಗದಲ್ಲಿ ಅಪ್ಪ ರಾಶಿ ಹಾಕಿದ. ತಲಾ ನಾಲ್ಕೈದು ಕಂತೆ ರಗ್ಗಿನೊಳಗೆ ಮುದುರಿಕೊಂಡು ಮನೆಯತ್ತ ಹೊರಟೆವು. ಕಾದು ಕುಳಿತಿದ್ದ ಅವ್ವ ಮತ್ತು ಅಜ್ಜಿ ಮನೆ ಬಾಗಿಲು ಹಾಕಿಕೊಂಡು ತೆನೆಗಳನ್ನು ಕೊಯ್ದು ಉಜ್ಜಿ ರಾಗಿ ಬಿಡಿಸಿದರು. ಸ್ವಚ್ಛಗೊಳಿಸಿ ರಾಗಿ ಬೀಸಿಕೊಂಡು ಮುದ್ದೆ ತಯಾರು ಮಾಡಿದರು. ರಾಗಿ ಕಂತೆ ಕಳ್ಳತನ ಸಿಕ್ಕಿಬೀಳಬಾರದು ಎಂಬ ಕಾರಣಕ್ಕೆ ಹುಲ್ಲಿನ ಕಂತೆಯನ್ನು ಒಲೆಗೆ ಹಾಕಿ ಬೂದಿ ಮಾಡಿದರು. ಎಲ್ಲವು ಮುಗಿಯುವಷ್ಟರಲ್ಲಿ ಮಧ್ಯರಾತ್ರಿಯಾಗಿತ್ತು. ಮನೆಯಲ್ಲಿ ಏನೋ ಸಂಭ್ರಮ ಎಂದುಕೊಂಡು ಓಡೋಡಿ ಬಂದ ನನಗೆ ಅಪ್ಪ ಕೊಟ್ಟ ಗುದ್ದು ಸುಧಾರಿಸಿಕೊಳ್ಳಲು ಇಡೀ ರಾತ್ರಿ ನರಳಬೇಕಾಯಿತು.

ನಾಲ್ಕೈದು ದಿನ ಕಳೆಯಿತು. ಕುರಿ ಕೊಟ್ಟಿಗೆಗೆ ಮುಟ್ಟಿಸಿ ಮನೆಗೆ ಬರುವಷ್ಟರಲ್ಲಿ ಮನೆಮುಂದೆ ಜನ ನಿಂತಿದ್ದರು. ಅವ್ವನಿಗೆ ಹೆರಿಗೆ ನೋವು ಶುರುವಾಗಿತ್ತು. ಮಧ್ಯರಾತ್ರಿ ಹೊತ್ತಿಗೆ ಗಂಡು ಮಗುವಿಗೆ ಅವ್ವ ಜನ್ಮ ನೀಡಿದ್ದಳು. ಮಗು ಗುಂಡು-ಗುಂಡಾಗಿತ್ತು, ಆದರೆ ಅವ್ವನಿಗೆ ಹೋದ ಪ್ರಜ್ಞೆ ಬಂದಿರಲಿಲ್ಲ. ಗರ್ಭಿಣಿ ಸಂದರ್ಭದಲ್ಲಿ ಹೊಟ್ಟೆ ತುಂಬ ಊಟ ಮಾಡದ ಕಾರಣಕ್ಕೆ ಅವ್ವನಿಗೆ ಅದ್ಯಾವುದೋ ಖಾಯಿಲೆ ಬಡಿದಿತ್ತು. ಬಟ್ಟೆ-ಬರೆಗಳ ಮೇಲೆ ragiನಿಗಾ ಇರಲಿಲ್ಲ, ಮಾನಸಿಕ ಅಸ್ವಸ್ಥೆಯಂತಾಗಿದ್ದಳು. ಮಗುವಿನ ಕಡೆಗೂ ಗಮನ ಇರಲಿಲ್ಲ. ಅಜ್ಜಿ ಜಮೀನ್ದಾರನ ಮನೆಯಲ್ಲಿ ಎಮ್ಮೆ ಹಾಲು ಬೇಡಿ ತಂದು ಕುಡಿಸಿ ಹೇಗೋ ಮಗುವಿನ ಜೀವ ಉಳಿಸಿಕೊಂಡಿದ್ದಳು. ಮೂರು ತಿಂಗಳು ಕಳೆದರೂ ಅವ್ವನ ಆರೋಗ್ಯ ಸುಧಾರಿಸಲಿಲ್ಲ. ಖಾಯಿಲೆ ಗುಣಪಡಿಸಲು ಅಪ್ಪ ಆಸ್ಪತ್ರೆ ಮತ್ತು ದೇವಸ್ಥಾನ ಎಂದು ಸುತ್ತಾಡಿ ಸಾಲದ ಹೊರೆಯನ್ನು ಮತ್ತಷ್ಟು ಮೈಮೇಲೆ ಎಳೆದುಕೊಂಡಿದ್ದ. ಹಾಲಿಗಾಗಿ ಮಗು ಹಾತೊರೆಯುತ್ತಿತ್ತು. ಸಿಕ್ಕಿದ್ದನ್ನು ತಿನ್ನಿಸುತ್ತಿದ್ದ ಅಜ್ಜಿಗೆ ದಿಕ್ಕು ತೋಚದಾಗಿತ್ತು. ಮುದ್ದೆ ಸಿಕ್ಕಿದರೂ ತಿನ್ನಿಸಿ ಮಗು ಉಳಿಸಿಕೊಳ್ಳಲು ಅಜ್ಜಿ ಪರದಾಡುತ್ತಿದ್ದಳು.

ಮಗು ಉಳಿಸಿಕೊಳ್ಳಲು ಏನು ಮಾಡಬೇಕು ಎಂಬುದು ತೋಚದಾಯಿತು. ನಾನು ಜೀತಕ್ಕೆ ಸೇರಿದ್ದ ಮನೆಯಲ್ಲಿ ಊಟಕ್ಕೆ ಕಡಿಮೆಯಾಗಿರಲಿಲ್ಲ. ಬೆಳಗ್ಗೆ ಕುರಿ ಮೇಯಿಸಲು ಹೋಗುವ ಮುನ್ನ ನಾನು ಕೊಟ್ಟಿಗೆ ಕಸ ಬಾಚಿ ತಿಪ್ಪಿಗೆ ಸೇರಿಸಿ ನಂತರ ಊಟ ಮಾಡುತ್ತಿದ್ದೆ. ತಿಪ್ಪೆಗೆ ಕಸ ಎಸೆದು ಕೈಕಾಲು ತೊಳೆದುಕೊಂಡು ಬರುವಾಗ ಮುತ್ತುಗದ ಎಲೆಯೊಂದನ್ನು ಚಡ್ಡಿ ಜೇಬಿನಲ್ಲಿ ಇರಿಸಿಕೊಂಡು ಊಟಕ್ಕೆ ಕೂರುತ್ತಿದ್ದೆ. ಕೊಟ್ಟಿಗೆಯಲ್ಲಿ ಕುಳಿತು ಊಟ ಮಾಡುವಾಗ ಮನೆಯೊಡತಿ ಮುದ್ದೆ ಇಕ್ಕಿ, ಸಾಂಬಾರ್ ಬಿಟ್ಟು ಹೋಗುತ್ತಿದ್ದಳು. ಅವಳು ಒಳ ಹೋಗುತ್ತಿದ್ದಂತೆ ಮುದ್ದೆಯಲ್ಲಿ ಮುಕ್ಕಾಲು ಭಾಗ ಮುರಿದುಕೊಂಡು ಮುತ್ತುಗದ ಎಲೆಗೆ ಮುದುರಿಕೊಂಡು ಜೇಬಿನೊಳಗೆ ತುರುಕಿಕೊಳ್ಳುತ್ತಿದ್ದೆ. ಅವ್ವ ಮುದ್ದೆ ಎಂದರೆ ಮನೆಯೊಡತಿ ಮತ್ತೊಂರ್ಧ ಮುದ್ದೆ ಇಕ್ಕುತ್ತಿದ್ದಳು. ಊಟ ಮಾಡಿ ಕೈತೊಳೆದುಕೊಂಡವನೇ ಓಡೋಡಿ ಬಂದು ಅಜ್ಜಿ ಕೈಗೆ ಮುದ್ದೆ ಒಪ್ಪಿಸುತ್ತಿದ್ದೆ. ಮೂರು ಹೊತ್ತು ಆ ಮುದ್ದೆ ತಿನ್ನಿಸಿ ಹೇಗೋ ಮಗು ಉಳಿಸಿಕೊಂಡಳು. ಒಂದಷ್ಟು ದಿನ ಮುದ್ದೆ ಕಳ್ಳತನ ಮುಂದುವರಿಯಿತು. ಮಗು ಜೀವವೂ ಉಳಿಯಿತು. 6 ತಿಂಗಳ ನಂತರ ಅವ್ವನ ಆರೋಗ್ಯ ಸುಧಾರಿಸಿತು. ಪಟೇಲರ ಮನೆ ಕೊಟ್ಟಿಗೆ ಬಾಚುವ ಕೆಲಸಕ್ಕೆ ಸೇರಿಕೊಂಡ ಅವ್ವ ಮಗು ಉಳಿಸಿಕೊಂಡಳು. ರಾಗಿ ಮತ್ತು ಮುದ್ದೆ ಕದ್ದು ಜೀವ ಉಳಿಸಿಕೊಂಡಿದ್ದೇವೆ. ಅಂದಿನ ಸ್ಥಿತಿ ನೆನದರೆ ಇಂದಿಗೂ ಕಣ್ಣಂಚು ಒದ್ದೆಯಾಗುತ್ತವೆ.

4 thoughts on “ರಾಗಿಮುದ್ದೆ ಕಳ್ಳತನ ಮಾಡಿದ್ದಕ್ಕೆ ಜೀವ ಉಳಿದಿದೆ…

 1. ಸೀತಾ

  ಒಪ್ಪತ್ತಿನ ಊಟಕ್ಕೂ ಗತಿ ಇಲ್ಲದಿದ್ದರೂ ಕುರಿ ಮಂದೆಯಂತೆ ಎಂಟು-ಹತ್ತು ಮಕ್ಕಳನ್ನು ಮಾಡಿಕೊಳ್ಳುವುದು ಸರಿಯೇ? ದಲಿತ ಹೋರಾಟ ಸಂಘಟನೆಗಳು ಬಡ ದಲಿತರಿಗೆ ಕುಟುಂಬಯೋಜನೆ ಬಗ್ಗೆ ತಿಳುವಳಿಕೆ ಕೊಡಬೇಕಲ್ಲವೇ?

  Reply
 2. anonymous

  ಸೀತಾ ಅವರೆ, ನೀವು ಕಣ್ಣೆದುರಿಗಿನ ವಾಸ್ತವವನ್ನು ಒಪ್ಪಿಕೊಳ್ಳುವ ಮನಸ್ಸು ಇಲ್ಲದುದಕ್ಕೆ ಇನ್ನೇನನ್ನೋ ಎಳೆದು ತಂದು ಅದರ ಗಂಭೀರತೆಯನ್ನು ಮರೆಸುತ್ತಿದ್ದೀರಿ. ನಮ್ಮ ಹಿಂದಿನ ಪೀಳಿಗೆ ಗಮನಿಸಿದರೆ ಎಲ್ಲ ಸಮುದಾಯದವರೂ ‘ಮಕ್ಕಳಿರಲವ್ವ ಮನೆತುಂಬ’ ಎಂಬ ಮಾತಿನಂತೆ ಇದ್ದವರೇ. ನಮ್ಮ ಜೊತೆಗೇ ಇರುವ ಮಂದಿ ಮೂರು ಹೊತ್ತಿನ ಊಟಕ್ಕೂ ಪರಿತಪಿಸುವ ಸ್ಥಿತಿ ಉಂಟಾಗುವುದಕ್ಕೆ ನಮ್ಮ ಸಮಾಜ ಎಷ್ಟರಮಟ್ಟಿಗೆ ಕಾರಣ ಎಂಬ ತಿಳುವಳಿಕೆ ಇಲ್ಲದೆ ಹೋದಾಗ ಎಲ್ಲದಕ್ಕೂ ಆ ಸಮುದಾಯವನ್ನೇ ಹೊಣೆಯಾಗಿಸುವ ಇಂಥ ಮಾತುಗಳು ಬರುತ್ತವೆ.

  Reply
  1. ಸೀತಾ

   ಕಡು ಬಡತನವೆಂಬುದು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಬ್ರಾಹ್ಮಣರೂ ಪಾರಂಪರಿಕವಾಗಿ ಬಡತನದಲ್ಲೇ ಜೀವ ಸವೆಸಿದಂತವರೂ ಉಳ್ಳವರು ನಡೆಸುವ ದಾನ ಧರ್ಮಗಳನ್ನು ನೆಚ್ಚಿ ಬದುಕಿದವರೂ ಎಂಬುದನ್ನು ಈ ಸಂದರ್ಭದಲ್ಲಿ ಮರೆಯಬಾರದು. ಶಿವರಾಮ ಕಾರಂತರ ಒಂದು ಮಹತ್ವಪೂರ್ಣ ಕತೆಯೊಂದರ ನಾಯಕ ಒಬ್ಬ ಬ್ರಾಹ್ಮಣ ಅಡುಗೆ ಆಳು. ಆತ ಸಿರಿವಂತನ ಮನೆಯ ಸಮಾರಂಭಕ್ಕೆ ಹೋಳಿಗೆ ತಯಾರಿಸಿದರೂ ತನ್ನ ಹಸಿವನ್ನು ಇಂಗಿಸಿಕೊಳ್ಳಲು ನಾಲ್ಕು ಕೂಳು ಇಲ್ಲದಂತವ. ಬಡತನ ಯಾರಿಗೆ ಆಗಲಿ ಒಂದು ಬೇಗೆ. ಕಡು ಬಡತನ ಇರುವಾಗ ಜನ ಸಾಮಾನ್ಯಕ್ಕಿಂತ ಹೆಚ್ಚು ಪ್ರಾಗ್ಮಾಟಿಕ್ ಆಗಿ ವರ್ತಿಸುವ ಜರೂರು ಇರುತ್ತದೆ. ಒಂದು ಕಡೆ ಕಿತ್ತು ತಿನ್ನುವ ಬಡತನ ಇನ್ನೊಂದು ಕಡೆ ಕೋಳಿ ಹಿಂಡಿನಂತೆ ಮಕ್ಕಳು ಇದ್ದರೆ ಬದುಕು ನರಕವಾಗುತ್ತದೆ. ಒಂದು ಮಗುವನ್ನೂ ಸರಿಯಾಗಿ ಪೋಷಿಸಲಾರದವರು ಹತ್ತಾರು ಮಕ್ಕಳು ಮಾಡಿಕೊಂಡರೆ ಸರಕಾರವಾಗಲಿ ಸಮಾಜವಾಗಲಿ ಅವರ ಸಂಕಷ್ಟಗಳಿಗೆ ಜವಾಬ್ದಾರನಾಗುವುದಿಲ್ಲ. ಕಡು ಬಡವರು ಒಂದು ಮಗುವಿಗೆ ತಮ್ಮ ಸಂತಾನಶಕ್ತಿಯನ್ನು ಸೀಮಿತಗೊಳಿಸಿದರೆ ನರಕದ ಬದುಕು ಸ್ವಲ್ಪವಾದರೂ ಸಹನೀಯವಾಗಿರುತ್ತದೆ.

   Reply
 3. Anonymous

  ‘ಮಕ್ಕಳಿರಲವ್ವ ಮನೆತುಂಬ’ emba aadarsha sirivantarige chennaagiruttade, badavarigalla. kutumbakke onde magu iddare jeetakke kalisuva agatyaviruttiralilla, kadiyuva anivaaryate iruttiralilla, badavaru svaabhimaanadinda badukabahudittu. seeta avara mele sittu maaduva badalu vastunishtavvagi yochane maadi. innaadaroo kutumba yojaneya bagge dalitarige tiluvalike needi.

  Reply

Leave a Reply

Your email address will not be published.