Daily Archives: July 20, 2015

ಮಹಿಳಾ ಕೈದಿಗಳು ಮತ್ತು ಪಿರಿಯೆಡ್ಸ್

Naveen Soorinje


– ನವೀನ್ ಸೂರಿಂಜೆ


 

 

“ಪೊಲೀಸ್ ಠಾಣೆಗಳಲ್ಲಿ ನ್ಯಾಪ್ಕಿನ್ ಪ್ಯಾಡ್ ಒದಗಿಸಿ” ಎಂದು ಭಾರತೀಯ ವಿದ್ಯಾರ್ಥಿAngellica Aribam_1 ಒಕ್ಕೂಟದ ರಾಷ್ಟ್ರೀಯ ಕಾರ್ಯದರ್ಶಿ ಏಂಜಿಲಿಕಾರವರು ದೆಹಲಿ ಪೊಲೀಸರಿಗೆ ಬರೆದ ಪತ್ರ ಬಗ್ಗೆ ಚರ್ಚೆಯಾಗುತ್ತಿರುವ ದಿನಗಳಲ್ಲಿ ಜೈಲಿನಲ್ಲಿರುವ ಮಹಿಳಾ ಕೈದಿಗಳ ಅವಸ್ಥೆ ನೆನಪಿಗೆ ಬಂತು. ಸಾರ್ವಜನಿಕರ ಜೊತೆಗೆ ನಿತ್ಯ ವ್ಯವಹರಿಸುವ ಪೊಲೀಸ್ ಠಾಣೆಗಳಲ್ಲಿ ಇಂತಹ ಪರಿಸ್ಥಿತಿಯಾದರೆ ಹೊರ ಜಗತ್ತಿಗೇ ಸಂಪರ್ಕವಿಲ್ಲದ ಜೈಲುಗಳ ಸ್ಥಿತಿಯನ್ನೊಮ್ಮೆ ಊಹಿಸಿಕೊಳ್ಳಿ. ನಾನು ಮಂಗಳೂರು ಜೈಲಿನಲ್ಲಿ ನಾಲ್ಕುವರೆ ತಿಂಗಳು ಕಳೆಯಲು ಅವಕಾಶ ಸಿಕ್ಕಿದಾಗ ಮಹಿಳಾ ಕೈದಿಗಳು ಪಿರಿಯೆಡ್ಸ್ ಸಂದರ್ಭದಲ್ಲಿ ಅನುಭವಿಸುವ ನೋವು ಸಂಕಟಗಳ ಅರಿವಾಗಿ ದಂಗಾಗಿ ಹೋಗಿದ್ದೇನೆ. ಮಹಿಳೆಯೊಬ್ಬಳು ನನ್ನನ್ನೇ ಕೊಲೆ ಮಾಡಿದರೂ ಕೂಡ ಆಕೆಯನ್ನು ಕರ್ನಾಟಕದ ಜೈಲಿಗೆ ಹಾಕುವಂತಹ ಸ್ಥಿತಿ ಬರಬಾರದು ಎಂದು ಅಂದುಕೊಂಡರೂ ತಪ್ಪಿಲ್ಲ ಅನ್ನಿಸುತ್ತದೆ.

ಜೈಲುಗಳ ಮಹಿಳಾ ಬ್ಯಾರಕುಗಳ ಸ್ಥಿತಿ ಯಾರಿಗೂ ಬೇಡ. ಠಾಣೆಯಲ್ಲಿ ಎಂಟು ಗಂಟೆಗಳ ಕಾಲ ಪೊಲೀಸ್ ವಶದಲ್ಲಿದ್ದಾಗ ಎಂಜಲಿಕಾರವರಿಗೆ ನ್ಯಾಪ್ಕಿನ್ ಪ್ಯಾಡ್ ಸಿಗದೇ ಇದ್ದಾಗ ಅವರು ಅನುಭವಿಸಿದ ಸಂಕಟಕ್ಕೆ ಹೋಲಿಕೆನೇ ಮಾಡಲಾಗದಷ್ಟು ನರಕಯಾತನೆಯನ್ನು ಮಹಿಳಾ ಕೈದಿಗಳು ಇಂದು ಅನುಭವಿಸುತ್ತಿದ್ದಾರೆ. ಬೇರೆ ಯಾವ ಕಡೆಯಲ್ಲಾದರೂ ಯಾರನ್ನಾದರೂ ಸಂಪರ್ಕ ಮಾಡಬಹುದು. ಜೈಲಿನ ಮಹಿಳಾ ಬ್ಯಾರಕುಗಳ ಲೋಕವೇ ನಿಗೂಢವಾಗಿದ್ದು. ಇಲ್ಲಿ ವರ್ಷಗಟ್ಟಲೆ ಕೈದಿಗಳಾಗಿರುವ ಮಹಿಳೆಯರಿದ್ದಾರೆ. ಜೈಲು ಸೇರಿದ ನಂತರ ಒಂದೇ ಒಂದು ಬಾರಿಯೂ ಮನೆಯವರ ಮುಖ ನೋಡದ ಮಹಿಳೆಯರೂ ಇದ್ದಾರೆ. ಅವರ ಸ್ಥಿತಿ ಹೇಗಿರಬೇಡ ?

ಜೈಲಿನಲ್ಲಿದ್ದ ನನಗೆ ಅದೊಂದು ದಿನ ಜೈಲರ್ರಿಂದ ಕರೆ ಬಂದಿತ್ತು.Angellica Aribam ಜೈಲರನ್ನು ಭೇಟಿಯಾದಾಗ “ಮಹಿಳಾ ಕೈದಿಯೊಬ್ಬರು ನಿಮ್ಮನ್ನು ಭೇಟಿಯಾಗಬೇಕಂತೆ” ಎಂದರು. ಮಹಿಳಾ ಕೈದಿಗಳ ಭೇಟಿಗೆ ಅವಕಾಶವಿರುವ ಕೊಠಡಿಯಲ್ಲಿ ಆ ಮಹಿಳಾ ಕೈದಿಯನ್ನು ಭೇಟಿಯಾಗಿದ್ದೆ. ಆಕೆ ಸೇರಿದಂತೆ ಆಗ ಜೈಲಿನಲ್ಲಿದ್ದ 15 ಕ್ಕೂ ಅಧಿಕ ಮಹಿಳಾ ಕೈದಿಗಳ ತಮ್ಮ ದುಸ್ಥಿತಿಯನ್ನು ತೋಡಿಕೊಂಡರು. ಸೀಮಿತವಾಗಿರುವ ಬಟ್ಟೆಬರೆಗಳನ್ನು ಇಟ್ಟುಕೊಂಡು ಮಹಿಳೆಯೊಬ್ಬಳು ಬದುಕುವುದೇ ದುಸ್ಥರವಾಗಿರುವಾಗ ಪಿರಿಯೆಡ್ಸ್ ಸಮಯದಲ್ಲಿ ನ್ಯಾಪ್ಕಿನ್ ಇಲ್ಲವೆಂದರೆ ಹೇಗೆ? ಜೈಲಿಗೆ ನ್ಯಾಪ್ಕಿನ್ ಒದಗಿಸಲೆಂದೇ ಪ್ರತ್ಯೇಕ ಹಣದ ವ್ಯವಸ್ಥೆ ಇದೆ. ಆದರೆ, ಅದು ಅಧಿಕಾರಿಗಳ ಕಿಸೆ ಸೇರುತ್ತದೆ. ಪಿರಿಯೆಡ್ಸ್ ಸಂದರ್ಭದಲ್ಲಿ ಮಹಿಳೆಯ ಮಾನಸಿಕ ಸ್ಥಿತಿಯಲ್ಲೂ ಏರುಪೇರಾಗುತ್ತದೆ. ಪಿರಿಯೆಡ್ಸ್ ಸಮಯದಲ್ಲಿ ಮಹಿಳೆಯ ಸ್ವಚ್ಚವಾಗಿರುವ ಶೌಚಾಲಯ ಬಳಸಬೇಕು. ಇಲ್ಲದೇ ಇದ್ದಲ್ಲಿ ಆಕೆ ಹಲವು ರೋಗಗಳಿಗೆ ಈಡಾಗುತ್ತಾಳೆ. ಆದರೆ ಯಾವ ಮಹಿಳಾ ಬ್ಯಾರಕಿನಲ್ಲೂ ಯಾವುದೇ ಶೌಚಾಲಯಗಳು ಸ್ವಚ್ಚವಾಗಿಲ್ಲ.

ವಿಚಿತ್ರವೆಂದರೆ ಜೈಲಿನೊಳಗಿನ ಈ ಪರಿಪಾಟಲನ್ನು ಮಹಿಳಾ ಜೈಲರ್ ಗಳಿಗೆ ಹೇಳಿದರೂ ಪ್ರಯೋಜನವಾಗುವುದಿಲ್ಲ. ಒಂದು ಉಪ-ಕಾರಾಗೃಹದಲ್ಲಿ ಸಾಮಾನ್ಯವಾಗಿ ಒಂದು ಪುರುಷ ಜೈಲರ್, ಒಂದು ಮಹಿಳಾ ಜೈಲರ್ ಮತ್ತು ಒಬ್ಬ ಜೈಲ್ ಸೂಪರಿಂಡೆಂಟ್ ಇರುತ್ತಾರೆ. ಮಹಿಳಾ ಜೈಲರ್ ಎಂಬುದು ಮಹಿಳಾ ಬ್ಯಾರಕಿಗಷ್ಟೇ ಸೀಮಿತ ಆಗಿರೋದ್ರಿಂದ ಅವರ ಅಧಿಕಾರ ಅಷ್ಟಕ್ಕಷ್ಟೆ. ನೂರಾರು ಕೈದಿಗಳನ್ನು ಸಂಭಾಳಿಸುವ ಪುರುಷ ಜೈಲರುಗಳದ್ದೇ ಜೈಲುಗಳಲ್ಲಿ ಕಾರುಬಾರು ಇರುತ್ತದೆ. ಮಹಿಳಾ ಜೈಲರುಗಳು ನ್ಯಾಪ್ಕಿನ್ ಬಗ್ಗೆ ಪ್ರಸ್ತಾಪಿಸಿದ್ರೂ ಸುಪರಿಂಡೆಂಟ್ ಎದುರು ಸ್ವತಃ ಮುಜುಗರಕ್ಕೆ ಈಡಾಗಬೇಕಾಗುತ್ತದೆ.

ನನ್ನ ಬ್ಯಾರಕಿನಲ್ಲೇ ನಕ್ಸಲ್ ಆರೋಪ Women Jail inmatesಹೊತ್ತು ವಿಚಾರಣಾಧೀನ ಬಂಧನದಲ್ಲಿದ್ದ ಕೈದಿಯೊಬ್ಬರಿದ್ದರು. ಮಹಿಳಾ ಬ್ಯಾರಕಿನಲ್ಲಿ ನ್ಯಾಪ್ಕಿನ್ ಇಲ್ಲದಿರುವ ಬಗ್ಗೆ ನಾವಿಬ್ಬರೂ ಒಮ್ಮೆ ಜೈಲರನ್ನು ಭೇಟಿಯಾಗಿ ಕೇಳಿದ್ದೆವು. ಆತ ನಕ್ಕ ಶೈಲಿ ಇದೆಯಲ್ಲಾ, ಅದನ್ನು ನೆನೆಪಿಸಿಕೊಂಡಾಗ ಈಗಲೂ ಮೈ ಉರಿಯುತ್ತೆ. ನಂತರ ಜೈಲಿನೊಳಗೆ ವಿಚಾರಣಾಧೀನ ಮುಸ್ಲಿಂ ಬಂಧಿತರಿಗೆ ತೊಂದರೆಯಾದಾಗ ಜೈಲಿನಲ್ಲಿ ಪ್ರತಿಭಟನೆ ಮಾಡಿದ್ದೆವು. ಆಗ ಬೇಡಿಕೆ ಈಡೇರಿಕೆಯ ಬಗ್ಗೆ ಅಧಿಕಾರಿಗಳ ಜೊತೆ ಸಂಧಾನ ಸಭೆ ನಡೆಸಿದಾಗ, ನ್ಯಾಪ್ಕಿನ್ ವಿಚಾರವನ್ನು ಬೇಡಿಕೆಯ ಪಟ್ಟಿಯಲ್ಲಿ ಹಾಕಿದ್ದೆವು. ಸ್ವಲ್ಪ ದಿನ ನ್ಯಾಪ್ಕಿನ್ ಪೂರೈಕೆಯೂ ಆಯಿತು. ನಂತರ ನಿಂತು ಹೋಗಿದೆ.

ಜೈಲು ವ್ಯವಸ್ಥೆಯಲ್ಲೇ ತಪ್ಪುಗಳಿವೆ. ಇಲ್ಲಿ ಪುರುಷ ಕೈದಿಗಳು ಮತ್ತು ಮಹಿಳಾ ಕೈದಿಗಳ ಮಧ್ಯೆ ಆವರಣ ಗೋಡೆ ಹೊರತುಪಡಿಸಿದರೆ ಬೇರಾವ ಸರಕಾರಿ ಸೌಲಭ್ಯಗಳಲ್ಲೂ ವ್ಯತ್ಯಾಸವಿಲ್ಲ. ಹಾಗೆ ನೋಡಿದರೆ ಜೈಲಿಗೆ ಎಂದು ಬರುವ ಎಲ್ಲಾ ಅನುದಾನಗಳ ಪ್ರಯೋಜನಗಳು ಪುರುಷರ ಬ್ಯಾರಕಿಗೆ ಸಲ್ಲಿಕೆಯಾಗುತ್ತದೆ. ಗ್ರಂಥಾಲಯ, ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ಸರಕಾರಿ ಯೋಜನೆಗಳು ದೊಡ್ಡದಾಗಿ ಕಾಣುವ ಪುರುಷರ ಬ್ಯಾರಕುಗಳಿರುವ ಬ್ಲಾಕಿಗೆ ಹೋಗುತ್ತದೆ. ಉನ್ನತ ಅಧಿಕಾರಿಗಳು ಪರಿಶೀಲನೆಗೆ ಬರುವ ಸಂಧರ್ಭದಲ್ಲೂ ಕೇವಲ ಪುರುಷರ ಬ್ಯಾರಕುಗಳನ್ನಷ್ಟೇ ಪರಿಶೀಲನೆ ಮಾಡುತ್ತಾರೆ. ಯಾವತ್ತೋ ಒಮ್ಮೆ ಭೇಟಿ ನೀಡೋ ಮಾನವ ಹಕ್ಕು ಆಯೋಗದ ಅಧ್ಯಕ್ಷರು ಅಥವಾ ಸದಸ್ಯರು ಇಲ್ಲಿಯವರೆಗೂ ಮಹಿಳಾ ಬ್ಯಾರಕಿಗೆ ಭೇಟಿ ನೀಡಿದ್ದು ನನಗಂತೂ ಗೊತ್ತಿಲ್ಲ. ಉನ್ನತ ಅಧಿಕಾರಿಗಳು ಪರಿಶೀಲನೆಯ ವೇಳೆ ಗೋಡೆ, ಕಿಟಕಿ, ಬಾಗಿಲು, ಬೀಗ ಸರಿಯಿದೆಯೇ ಎಂದು ಪರಿಶೀಲನೆ ನಡೆಸುತ್ತಾರೆಯೇ ಹೊರತು ಮನುಷ್ಯ ಬದುಕಲು ಯೋಗ್ಯವಾದ ವಾತಾವರಣ ಇದೆಯೇ ಎಂಬ ಕಡೆ ಗಮನ ಕೊಡುವುದಿಲ್ಲ. ಇಂತಹ ಪರಿಸರದಲ್ಲಿ ಪಿರಿಯೆಡ್ಸ್ ಟೈಮಲ್ಲಿ ಮಹಿಳೆಯರ ಸ್ಥಿತಿ ಹೇಗಿರಬೇಡ ?

ಪುರುಷ ಬ್ಯಾರಕ್ ಇರೋ ಜೈಲು ಆವರಣದ ಒಳಗೆ ಜೈಲಿನ ಊಟ ಸಿದ್ದವಾಗುತ್ತದೆ. ಪುರುಷ ಕೈದಿಗಳಿಗೆJail ಹಂಚಿದ ನಂತರ ಮಹಿಳಾ ಕೈದಿಗಳಿಗೆ ಊಟ ನೀಡಲಾಗುತ್ತದೆ. ಊಟ ಕಳುಹಿಸುವುದರಿಂದ ಹಿಡಿದು ಪಿರಿಯೆಡ್ಸ್ ಸಮಯದಲ್ಲಿ ನ್ಯಾಪ್ಕಿನ್ ಕೊಡೋದ್ರ ತನಕ ಮಹಿಳಾ ಕೈದಿಗಳು ಶೋಷಣೆಗೆ ಒಳಗಾಗುತ್ತಿದ್ದಾರೆ. ಯಾವುದೇ ಜೈಲುಗಳಲ್ಲಿ ಹಾಸಿಗೆ ತಲೆದಿಂಬು ಬಳಸುವಂತಿಲ್ಲ. ನೆಲದ ಮೇಲೆ, ಚಾಪೆ ಅಥವಾ ಬೆಡ್ ಶೀಟ್ ಹಾಸಿ ಮಲಗಬೇಕು. ಹಾಸಿಗೆ ದಿಂಬು ಜೈಲಿನಲ್ಲಿ ಬಳಸಲು ಒಂದೋ ನ್ಯಾಯಾಲಯದ ಅನುಮತಿ ಬೇಕು ಅಥವಾ ಪ್ರಭಾವಶಾಲಿಯಾಗಿರಬೇಕು. ಜೈಲಿನಲ್ಲಿ ದಿನಗಟ್ಟಲೆ, ವರ್ಷಗಟ್ಟಲೆ ಇದ್ದಾಗ ಪಿರಿಯೆಡ್ಸ್ ಟೈಮಲ್ಲಿ ಕೇವಲ ನ್ಯಾಪ್ಕಿನ್ ಅಲಭ್ಯತೆ ಮಾತ್ರ ಸಮಸ್ಯೆ ಅಲ್ಲ. ಪಿರಿಯೆಡ್ಸ್ ಸಮಯದಲ್ಲಿ ಬಹಳಷ್ಟು ಮಹಿಳೆಯರಿಗೆ ತಲೆಯನ್ನು ಗೋಡೆಗೆ ಚಚ್ಚಬೇಕು ಅನ್ನುವಷ್ಟು ತಲೆ ಸಿಡಿತವಾಗುತ್ತದೆ. ಆಗ ಒರಗಿಕೊಳ್ಳಲು ದಿಂಬಿಲ್ಲದೆ ಗೋಡೆಗೆ ತಲೆ ಇಡಬೇಕಾಗುತ್ತದೆ. ಇನ್ನು ಕೆಲ ಮಹಿಳೆಯರಿಗೆ ಪಿರಿಯೆಡ್ಸ್ ಸಮಯದಲ್ಲಿ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಆ ಸಂಧರ್ಭದಲ್ಲೂ ನೆಲದ ಮೇಲೆಯೇ ಮಲಗಬೇಕು ಎನ್ನುವುದು ಅದ್ಯಾವ ಶಿಕ್ಷೆ? ಮನೆಯಲ್ಲಿ ಅಕ್ಕನೋ, ತಂಗಿಯೋ, ಹೆಂಡತಿಯೋ ಬೇಕಾದ ಸೌಲಭ್ಯಗಳು ಕೈಗೆಟುಕುವಂತಿದ್ದರೂ ಪಿರಿಯೆಡ್ಸ್ ಟೈಮಲ್ಲಿ ಅವರ ಕಷ್ಟ ನಮಗೆ ನೋಡೋಕಾಗಲ್ಲ. ಅಂತಹುದರಲ್ಲಿ ನಾಲ್ಕು ಗೋಡೆಗಳ ಮಧ್ಯೆ ತಮ್ಮವರ್ಯಾರು ಇಲ್ಲದೆ, ಕನಿಷ್ಠ ಶುಚಿಯಾದ ಶೌಚಾಲಯವೂ ಇಲ್ಲದೆ, ನ್ಯಾಪ್ಕಿನ್ ಬಿಡಿ ಕನಿಷ್ಠ ಬಳಸೋಕೆ ಬಟ್ಟೆಯೂ ಇಲ್ಲದೆ ಪಿರಿಯೆಡ್ಸ್ ಟೈಮಲ್ಲಿ ಬದುಕುವ ಮಹಿಳಾ ಕೈದಿಗಳ ಪಾಡು ಹೇಗಿರಬೇಕು ಎಂದು ನೆನೆಯುವಾಗ ಮೈ ಜುಂ ಎನಿಸುತ್ತದೆ.

ಏಂಜಿಲಿಕಾರವರು ದೆಹಲಿ ಪೊಲೀಸರಿಗೆ ಬರೆದ ಪತ್ರದ ವಿಚಾರ ಚರ್ಚೆಯ ಹೊತ್ತಿನಲ್ಲಿ ಇದೆಲ್ಲ ನೆನಪಿಗೆ ಬಂತು.