Daily Archives: July 23, 2015

ನಿಮ್ಮ ದುಬಾರಿ ಕಾರು, ಬೈಕಿಗಿಂತ ಜೀವ ಅಮೂಲ್ಯ..


– ಡಾ.ಎಸ್.ಬಿ. ಜೋಗುರ


ನಾನು ಚಿಕ್ಕವನಾಗಿದ್ದಾಗ ಮನೆಯಿಂದ ಹೊಲಕ್ಕೆ ಬುತ್ತಿ ತೆಗೆದುಕೊಂಡು ಹೋಗಲು ಅಪ್ಪನಿಂದ ಸೈಕಲ್ ಬಾಡಿಗೆಗಾಗಿ ದುಡ್ಡು ಕೇಳುತ್ತಿದ್ದೆ. ಆಗ ಅ ಬಾಡಿಗೆ ಘಂಟೆಗೆ ಎಂಟಾಣೆ. ಕಿಸೆಯಿಂದ ಐವತ್ತು ಪೈಸೆ ತೆಗೆದುಕೊಡುತ್ತಲೇ ಅಪ್ಪ ತುಸು ಸಿಟ್ಟಿನಿಂದ ಸಾವಕಾಶ ಹೋಗು ಅದು ಸೈಕಲ್ ಅಲ್ಲ, ಸಾಯೋಕಾಲ ಅಂತಿದ್ದ. ಅದು ಯಾಕೆ ಹಾಗೆ ಅಂತಿದ್ದ ಅನ್ನೋದು ನಾವು ಬೆಳೀತಾ ಹೋದ ಹಾಗೆ ಗೊತ್ತಾಯಿತು. ಹುಂಬತನದ ಚಾಲನೆ ಎಷ್ಟು ಅಪಾಯಕಾರಿ ಎನ್ನುವುದು ನನ್ನ ಜೊತೆಗಿರುವ ಸ್ನೇಹಿತರುಗಳೇ ಕೈಕಾಲು ಮುರಿದುಕೊಂಡಾಗ, ಜೀವ ಕಳೆದುಕೊಂಡಾಗ ನಮ್ಮಪ್ಪ ಹೇಳುತ್ತಿದ್ದimages ಮಾತು ಅದೆಷ್ಟು ಸತ್ಯವಾಗಿತ್ತು ಎಂದು ಈಗಲೂ ನನಗೆ ಅನಿಸುವದಿದೆ. ನಮ್ಮ ಮಕ್ಕಳಿಗೆ ಅದೇ ಮಾತನ್ನು ನಾವೀಗ ರಿಪೀಟ್ ಮಾಡಿ ಬೈಕ್ ಸ್ಪೀಡ್ ಓಡಿಸಬೇಡಪ್ಪಾ ಟ್ರಾಫಿಕ್ ತುಂಬಾ ಇರುತ್ತದೆ ಎಂದಾಗ ಅವನು ನೆಪಕ್ಕೆ ಹುಂ ಎಂದು ಮತ್ತೆ ತನ್ನದೇ ಗತಿಯಲ್ಲಿ ಅದನ್ನು ಓಡಿಸಿಕೊಂಡು ಹೋಗುತ್ತಾನೆ. ಈಗ ಜಮಾನಾ ತುಂಬಾ ಸ್ಪೀಡ್ ಆಗಿದೆ. ನನಗೆ ನೌಕರಿ ಬಂದ ಮೇಲೆಯೂ ಆರು ತಿಂಗಳು ನಾನು ಸೈಕಲ್ ಮೇಲೆ ಕಾಲೇಜಿಗೆ ಹೋಗಿರುವದಿದೆ. ಆ ನಂತರ ಒಂದು ಸೆಕೆಂಡ್ ಹ್ಯಾಂಡ್ ಸ್ಕೂಟರ್ ನಂತರ ಈಗ ನಾನು ಓಡಿಸುತ್ತಿರುವ ಬೈಕ್ ಕೊಂಡಿರುವದು. ಈಗಿನ ಸಂತಾನ ಹಾಗಲ್ಲ ಇನ್ನೂ ಮೀಸೆ ಮೂಡುವ ಮೂದಲೇ ಎಲ್ಲವನ್ನು ಮಾಡಿ ಮುಗಿಸುವ ಆತುರಗಾರರಾಗಿರುವ ಪರಿಣಾಮವೇ ಹೆಚ್ಚೆಚ್ಚು ಅನಾಹುತಗಳು ಜರುಗುತ್ತಿವೆ. ಈಗಿನ ಯುವಕರು ಇನ್ನೂ ಓದುವ ಅವಧಿಯಲ್ಲಿ ಬೈಕು, ಕಾರು ಹತ್ತಬೆಕೆನ್ನುವವರು. ಕೆಲ ಬಾರಿ ಯುವಕರು ಬೈಕ್ ಓಡಿಸುವದನ್ನು ಕಂಡಾಗ ತುಂಬಾ ಸಿಟ್ಟು ಬರುತ್ತದೆ ಅದರ ಬೆನ್ನಲ್ಲೇ ಕನಿಕರವೂ ಬರುತ್ತದೆ. ಸಿಟ್ಟಿಗೆ ಕಾರಣ ಅವರು ಹಾವು ಹೊರಳಾಡುವಂತೆ ಅದನ್ನು ಯರ್ರಾಬಿರ್ರಿ ಓಡಿಸಿ, ಎಲ್ಲೋ ಒಂದೆಡೆ ಹೊಡೆದು ತಮಗೋ ಇಲ್ಲಾ ಗುದ್ದಿಸಿಕೊಂಡವನಿಗೋ ಭಯಂಕರ ಪ್ರಮಾಣದ ಹಾನಿ ಉಂಟು ಮಾಡಿ, ಕೆಲವೊಮ್ಮೆ ಜೀವಹಾನಿಗೂ ಕಾರಣವಾಗುವ ರೀತಿಯ ಬಗ್ಗೆ ನನಗೆ ಅಪಾರವಾದ ಸಿಟ್ಟಿದೆ. ಇನ್ನು ಕನಿಕರ ಯಾಕೆಂದರೆ ಇರೋದೇ ಒಂದೋ ಹೆಚ್ಚೆಂದರೆ ಎರಡು ಮಕ್ಕಳಿರೋ ಕಾಲದಲ್ಲಿ ಸಿನೇಮಾ ಶೂಟಿಂಗಲ್ಲಿ ತೊಡಗಿರುವ ಹಾಗೆ, ಇಲ್ಲವೇ ರೇಸಲ್ಲಿ ಭಾಗವಹಿಸಿರುವವರ ಹಾಗೆ ಬೈಕ್ ಓಡಿಸಿ ಅನಾಹುತ ಮಾಡಿಕೊಂಡು ಹೆತ್ತವರನ್ನು ಜೀವನ ಪರ್ಯಂತ ನರಳಿಸುವದಿದೆಯಲ್ಲ, ಆ ಬಗ್ಗೆ ಕನಿಕರವಿದೆ. ನಗರ ಪ್ರದೇಶಗಳಲ್ಲಿಯೂ ಇವರು ಓಡಿಸುವ ಬೈಕ್ ವೇಗದ ಮಿತಿಗೆ ಒಳಪಟ್ಟ್ತಿರುವದಿಲ್ಲ. ತಲೆಯ ಮೇಲೆ ಹೆಲ್ಮೆಟ್ ಕೂಡಾ ಇರುವದಿಲ್ಲ. ಹಾಗಿರುವಾಗಲೂ ಪೋಲಿಸರ ಎದುರಲ್ಲೇ ಇವರು ರಾಜಾರೋಷವಾಗಿ ಭಂವ್ ಎಂದು ಓಡಿಸಿಕೊಂಡು ಹೋಗುವ ರೀತಿಗೆ ಅನೇಕ ಬಾರಿ ನಾನೇ ಬೆಚ್ಚಿ ಬಿದ್ದಿರುವೆ. ಇನ್ನು ಅತ್ಯಂತ ವಿಕಾರವಾಗಿರುವ ಹಾರ್ನ್ ಹಾಕಿಸಿ, ಅದನ್ನು ಸಾರ್ವಜನಿಕ ಸ್ಥಳಗಳಲ್ಲಿ ಖಾಸ್ ಆಗಿ ಹುಡುಗಿಯರಿರುವ ಜಾಗೆಯಲ್ಲಿ ಅದನ್ನು ಹಾರ್ನ್ ಮಾಡುತ್ತಾ ಸಾಗುವ ಕ್ರಮವಂತೂ ಇನ್ನಷ್ಟು ವಿಕೃತ. ಇಂಥಾ ಅಸಂಬದ್ಧವಾಗಿರುವ ಹಾರ್ನ್ ಇರುವ ವಾಹನಗಳನ್ನು ಕೂಡಲೇ ಸೀಜ್ ಮಾಡುವಂಥಾ ಕ್ರಮಗಳು ಜರುಗಬೇಕು. ಇನ್ನೊಂದು ಸಂಗತಿ ನಿಮಗೆ ತಿಳಿದಿರಬಹುದು. ನಮ್ಮ ದೇಶದಲ್ಲಿ ಅತೀ ಹೆಚ್ಚು ನಡೆಯುವ ಅಪಘಾತಗಳಲ್ಲಿ ಈ ಬೈಕ್ ಗಳದ್ದೇ ಸಿಂಹಪಾಲು, ಅದರ ನಂತರ ಕಾರುಗಳದ್ದು. ನಾವು ಓಡಿಸುವ ವಾಹನ ಹೇಳೀ ಕೇಳೀ ಒಂದು ಯಂತ್ರ ಅದಕ್ಕೆ ಯಾವುದೇ ಬಗೆಯ ಸೆಟಿಮೆಂಟ್ ಗಳಿರುವದಿಲ್ಲ. ಆದರೆ ಅದನ್ನು ಕೊಡಿಸಿದವರಿಗೆ, ಹೆತ್ತವರಿಗೆ ನಿಮ್ಮ ಬಗ್ಗೆ ಅಪಾರವಾದ ಕಾಳಜಿಗಳಿವೆ, ಕನಸುಗಳಿವೆ, ಭರವಸೆಗಳಿವೆ. ಅವೆಲ್ಲವುಗಳನ್ನು ಥ್ರಿಲ್ ಗಾಗಿ ಬಲಿಕೊಟ್ಟು ನೀವು ಬಲಿಯಾಗಬೇಡಿ. ತಾಳ್ಮೆಯಿರದ ಯಾವುದೇ ಸವಾರಿ ಸುಖಕರವಲ್ಲ. ಒಂದೇ ಒಂದು ನಿಮಿಷದ ನಿಧಾನ ನಿಮ್ಮ ಜೀವವನ್ನು ಕಾಯಿಬಲ್ಲದು ಎನ್ನುವ ಎಚ್ಚರದ ನಡುವೆ ವಾಹನವನ್ನು ಚಲಿಸಬೇಕು.

ನಮ್ಮ ದೇಶದಲ್ಲಿ ನಡೆಯುವ ರಸ್ತೆ ಅಪಘಾತಗಳ ಬಗೆಗಿನ ಅಂಕಿ ಅಂಶಗಳನ್ನು ನೋಡಿದರೆ ಎಂಥವರೂ ಬೆಚ್ಚಿ ಬೀಳುತ್ತಾರೆ. 2013 ರ ವರ್ಷ, ಕೇವಲ ಆ ಒಂದೇ ವರ್ಷದಲ್ಲಿ  1,37,000 ಜನ ರಸ್ತೆ ಅಪಘಾತದಲ್ಲಿ ಸತ್ತಿರುವದಿದೆ. ಈ ಪ್ರಮಾಣ ಯಾವುದೇ ಮಾಹಾಯುದ್ಧದಲ್ಲಿ ಮಡಿದವರ ಸಂಖ್ಯೆಗಿಂತಲೂ ಜಾಸ್ತಿಯೆಂಬುದು. ಪ್ರತಿನಿತ್ಯ ಸುಮಾರು 16 ಮಕ್ಕಳು ಈ ರಸ್ತೆ ಅಪಘಾತಕ್ಕೆ ಅಕಾಲಿಕ ಸಾವನ್ನಪ್ಪುತ್ತಾರೆ. ದೆಹಲಿಯಲ್ಲಿ ಪ್ರತಿನಿತ್ಯ ರಸ್ತೆ ಅಪಘಾತದಲ್ಲಿ ಐದು ಸಾವುಗಳು ಸಂಭವಿಸುತ್ತವೆ. ಭಾರತದಲ್ಲಿ ಪ್ರತಿ ನಿಮಿಷಕ್ಕೆ ಒಂದು ರಸ್ತೆ ಅಪಘಾತದ ಸಾವು ಸಂಭವಿಸುತ್ತದೆ. ಕುಡಿದು ಗಾಡಿ ಓಡಿಸುವದೇ ಮುಖ್ಯ ಕಾರಣವಾಗಿದೆ ಎನ್ನಲಾಗುತ್ತದೆ. ಪ್ರತಿ ಘಂಟೆಗೆ ನಮ್ಮ ದೇಶದಲ್ಲಿ 16 ಜನರು ಈ ಭೀಕರ ರಸ್ತೆ ಅಪಘಾತದಲ್ಲಿ ಮರಣ ಹೊಂದುವದಿದೆ. ಈ ಎಲ್ಲ ಬಗೆಯ ಒಟ್ಟು ಅಪಘಾತಗಳಲ್ಲಿ ದ್ವಿಚಕ್ರ ವಾಹನಗಳದ್ದೇ 25 ಪ್ರತಿಶತ ಪಾಲಿದೆ. ಪ್ರತಿನಿತ್ಯ 20 ವರ್ಷ ವಯೋಮಿತಿಯ ಒಳಗಿನ 14 ಮಕ್ಕಳು ಈ ರಸ್ತೆ ಅಪಘಾತದಲ್ಲಿ ಅಸುನೀಗುತ್ತವೆ. ದಿನಾಲು ಹೆಚ್ಚೂ ಕಡಿಮೆsklar-accident 1214 ರಷ್ಟು ರಸ್ತೆ ಅಪಘಾತಗಳು ಜರಗುತ್ತವೆ. ನಮ್ಮ ದೇಶದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಜರಗುವ ನಗರಗಳನ್ನು ಹೀಗೆ ಪಟ್ಟಿ ಮಾಡಲಾಗಿದೆ. ಇವುಗಳಲ್ಲಿ ಪ್ರಥಮ ಸ್ಥಾನದಲ್ಲಿ ದೆಹಲಿ ನಗರ ನಂತರ ಚೆನೈ, ಜೈಪುರ, ಬೆಂಗಳೂರು, ಮುಂಬೈ, ಕಾನಪುರ, ಲಖನೌ, ಆಗ್ರಾ, ಹೈದರಾಬಾದ, ಪುಣೆ ಎಂದು ಹತ್ತು ಪ್ರಮುಖ ನಗರಗಳನ್ನು ಪಟ್ಟಿ ಮಾಡಲಾಗಿದೆ. ಎಡಬದಿಯಿಂದ ಓವರ ಟೇಕ್ ಮಾಡುವುದು, ಡಿಮ್- ಡಿಪ್ ಮಾಡದೇ ಗಾಡಿ ಓಡಿಸುವದು, ಹೆಚ್ಚು ಪ್ರತಿಫಲನ ಇರುವ ಬಲ್ಬುಗಳನ್ನು ಕಾನೂನಿನ ನಿಯಮ ಉಲ್ಲಂಘಿಸಿ ಬಳಸುವುದು ಇವುಗಳ ಜೊತೆಯಲ್ಲಿ ವಾಹನ ಚಲಿಸುವಾಗ ಮೊಬೈಲಿನಲ್ಲಿ ಮಾತನಾಡುತ್ತಾ, ಏನನ್ನೋ ತಿನ್ನುತ್ತಾ, ಕುಡಿಯುತ್ತಾ ಓಡಿಸುವದರಿಂದಾಗಿಯೂ ಹೆಚ್ಚಿನ ಪ್ರಮಾಣದ ರಸ್ತೆ ಅಪಘಾತಗಳು ಜರುಗುತ್ತಿವೆ. ಜೊತೆಗೆ ಯರ್ರಾಬಿರ್ರಿಯಾಗಿ ಬೈಕ್ ಓಡಿಸುವವರ ಪ್ರಮಾಣ ಈಗಂತೂ ಹೆಚ್ಚಾಗಿ ಕಂಡು ಬರುತ್ತದೆ ಅದರ ಜೊತೆಗೆ ಶಾಸನಬದ್ಧವಾಗಿ ಓಡಿಸೋ ವಯಸ್ಸು ಬಾರದಿದ್ದರೂ ಅಪ್ಪನ ಬೈಕ್ ಹತ್ತಿ ಸಿಕ್ಕಾಪಟ್ಟೆ ವೇಗದಿಂದ ಓಡಿಸುವ ವಾಯುಪುತ್ರರ ಸಂಖ್ಯೆ ಹೆಚ್ಚಾಗಿದೆ. ಇದೆಲ್ಲವನ್ನು ಸಂಬಧಿಸಿದವರು ಕಟ್ಟು ನಿಟ್ಟಾಗಿ ನಿಯಂತ್ರಿಸಬೇಕು. ಕಾರುಗಳ ವೇಗವನ್ನು ಕ್ಯಾಮರಾ ಮೂಲಕ ಸೆರೆಹಿಡಿದು ಶಿಕ್ಷೆ ವಿಧಿಸುವಂತೆ, ನಗರ ಪ್ರದೇಶಗಳಲ್ಲಿ ಬೈಕುಗಳ ವೇಗದ ಮಿತಿಮೀರಿದರೆ ಶಿಕ್ಷೆ ಕಡ್ಡಾಯ ಮಾಡುವ ಜರೂರತ್ತಿದೆ. ಈ ಪಡ್ಡೆ ಹುಡುಗರ ಹುಂಬತನದ ಸವಾರಿಯ ನಡುವೆ ವಯಸ್ಸಾದವರು, ಮಹಿಳೆಯರು, ಮಕ್ಕಳು ನೆಮ್ಮದಿಯಿಂದ ತಿರುಗಾಡುವಂತಿಲ್ಲ. ಇವರೇನೋ ಗುದ್ದಿ ಹೋಗುತ್ತಾರೆ, ಪಾಪ ತೊಂದರೆ ಅನುಭವಿಸುವವರು ಬೇರೆಯೇ ಆಗಿರುತ್ತಾರೆ. ಈ ಬಗ್ಗೆ ಟ್ರಾಫಿಕ್ ಪೋಲಿಸರು ತುಂಬಾ ಜಾಗೃತರಾಗಿ ಕಾರ್ಯನಿರ್ವಹಿಸಬೇಕಿದೆ. ನಿಮ್ಮದೇ ನಜರಲಿ ತಲೆಯ ಮೇಲೆ ಹೆಲ್ಮೆಟ್ ಇಲ್ಲದೇ ಭಂವ್ ಎಂದು ಸ್ಪೀಡ್ ಲಿಮಿಟ್ ಮೀರಿ ಧಿಮಾಕಿನಿಂದ ಗಾಡಿ ಓಡಿಸಿಕೊಂಡು ಹೋಗುವಂಥಾ ಯುವಕರನ್ನು ನೀವು ತಕ್ಷಣ ಹಿಡಿದು ಶಿಕ್ಷೆ ಕೊಡಿ. ಆಗ ಅವನಂಥಾ ಹತ್ತಾರು ಜನ ಪಾಠ ಕಲಿಯುತ್ತಾರೆ. ಅದು ಯಾವುದೇ ವಾಹನವಿರಲಿ ಡ್ರೈವಿಂಗ್ ಮಾಡುವಾಗ ತುಂಬಾ ಜಗೃತವಾಗಿರಬೇಕು. ಬೇಕಾ ಬಿಟ್ಟಿಯಾಗಿ ಓಡಿಸುವದು, ತೀರಾ ವೇಗವಾಗಿ ಓಡಿಸುವದು, ನಿಯಂತ್ರಣ ಮೀರಿ ಓಡಿಸುವದು ಯಾರಿಗೂ ಹಿತಕರವಲ್ಲ. ನಿಮ್ಮ ಕಾರು, ಬೈಕು ಎಷ್ಟೇ ಬೆಲೆ ಬಾಳುವದಾಗಿರಲಿ ಆದರೆ ನಿಮ್ಮ ಜೀವ ಮಾತ್ರ ಅವೆಲ್ಲವುಗಳಿಗಿಂತಲೂ ಅಮೂಲ್ಯ ಎನ್ನುವ ಸತ್ಯವನ್ನು ಮರೆಯಬೇಡಿ.