Daily Archives: July 24, 2015

ಲೋಕಾಯುಕ್ತ ಹಗರಣದಲ್ಲಿ ಪತ್ರಕರ್ತರು

– ಮೋಹನ್‌ರಾಜ್

ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಆರೋಪಗಳ ತನಿಖೆಯ ಹಾದಿಯಲ್ಲಿ ಒಬ್ಬ ಮಾಜಿ ಪತ್ರಕರ್ತ ಎಂ.ಬಿ. ಶ್ರೀನಿವಾಸಗೌಡ ಸೇರಿದಂತೆ ಮೂರು-ನಾಲ್ಕು ಮಂದಿಯ ಬಂಧನವಾಗಿದೆ. ಸುದ್ದಿವಾಹಿನಿಗಳು, ಪತ್ರಿಕೆಗಳು ಈ ಬಗ್ಗೆ ವಿವರವಾಗಿ ಸುದ್ದಿ ಬಿತ್ತರಿಸುತ್ತಿವೆ. ಇತ್ತೀಚೆಗಷ್ಟೆ ಆರಂಭವಾಗಿರುವ ಪ್ರಜಾ ಟಿವಿ ಗುರುವಾರ ಸಂಜೆ, ಬಂಧಿತರು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ ಎದುರು ನೀಡಿರುವ ಹೇಳಿಕೆಗಳು ಎಂಬ lokayukta_karnatakaತಲೆಬರಹದಡಿಯಲ್ಲಿ ಕೆಲ ಟಿಪ್ಪಣಿಗಳನ್ನು ಉಲ್ಲೇಖಿಸಿತು. ಶ್ರೀನಿವಾಸಗೌಡನ ಹೇಳಿಕೆ ಎಂದು ತೋರಿಸಿದ ಟಿಪ್ಪಣಿಯಲ್ಲಿ ಒಂದು ವಿಶೇಷವಾದ ಸಾಲಿತ್ತು. “ಕಚೇರಿಯಲ್ಲಿ ನನ್ ಮೇಲಿನವರು ಸೂಚನೆ ಮೇರೆಗೆ ಕೆಲ ಅಕ್ರಮಗಳ ಬಗ್ಗೆ ಮಾಹಿತಿ ಕೇಳಿ ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಹಾಕಿದ್ದೆ. ಬಂದ ಉತ್ತರಗಳಲ್ಲಿ ಕೆಲವು ಸುದ್ದಿಯಾದವು, ಮತ್ತೊಂದಿಷ್ಟು ಜಾಹಿರಾತಿನ ರೂಪದಲ್ಲಿ ಕಂಪನಿಗೆ ಲಾಭವಾಯಿತು” (ಚಾನೆಲ್ ತೋರಿಸಿದ ಟಿಪ್ಪಣಿಯನ್ನು ನೆನಪಿನ ಆಧಾರದ ಮೇಲೆ ದಾಖಲಿಸಿದ್ದೇನೆ. ಪದಗಳು ಅಲ್ಲಲ್ಲಿ ಬದಲಾಗಿರಬಹುದು, ಆದರೆ ಅರ್ಥ ಅದೇ). ಶ್ರೀನಿವಾಸಗೌಡ ಮಾಡಿರಬಹುದಾದ (??) ಅಪರಾಧ ಕೃತ್ಯಗಳಲ್ಲಿ ಅವನ ಹಿರಿಯ ಸಹೋದ್ಯೋಗಿಗಳದು ಹಾಗೂ ಅವರನ್ನು ನೇಮಕಮಾಡಿಕೊಂಡಿರುವ ಕಂಪನಿಯದೂ ಪಾತ್ರವಿದೆ ಎಂದು ಈ ಮಾತು ಸ್ಪಷ್ಟವಾಗಿ ಹೇಳುತ್ತದೆ.

ಮಾಧ್ಯಮ ಸಂಸ್ಥೆಗಳು ಪ್ಯಾಕೇಜ್ ಸಂಸ್ಕೃತಿಗೆ ತೆರೆದುಕೊಂಡು ತುಂಬಾ ದಿನಗಳೇ ಆಗಿದ್ದವು. ಸಿನಿಮಾ ಪ್ರಮೋಷನ್, ರಾಜಕೀಯ ಕಾರ್ಯಕ್ರಮಗಳು.. ಇತರೆ ಸುದ್ದಿಗಳು ಪ್ಯಾಕೇಜ್ ರೂಪದಲ್ಲಿ ಬಿತ್ತರಗೊಳ್ಳುವುದು ಗೊತ್ತಿರುವ ಸಂಗತಿ. ಚುನಾವಣೆ ಸಮಯದಲ್ಲಿ ಸಂಸ್ಥೆಗಳೇ ಪೇಯ್ಡ್ ನ್ಯೂಸ್ ಪ್ರಕಟಿಸಿ ದುಡ್ಡು ಮಾಡಿಕೊಳ್ಳುವುದೂ ಗೊತ್ತು. ಇಲ್ಲಿ, ಈ ಪ್ರಸ್ತುತ ಸಂಸ್ಥೆ ಒಂದು ಹೆಜ್ಜೆ ಮುಂದೆ ಹೋದಂತಿದೆ. ಮೊದ ಮೊದಲು, ಕೆಲ ಪತ್ರಕರ್ತರು ಆರ್.ಟಿ.ಐ ಅಡಿ ದಾಖಲೆ ಪಡೆದು ಬ್ಲಾಕ್ ಮೇಲ್ ಮಾಡಿ ಹಣ ಮಾಡುತ್ತಾರೆelection-paid-news ಎಂಬ ಮಾತು ಕೇಳಿ ಬರುತ್ತಿತ್ತು. ಈ ‘ಅವಕಾಶ’ ವನ್ನು ಪತ್ರಕರ್ತರಿಂದ ಕಸಿದು ಕಂಪನಿಯೇ ಮಾಡುವಂತಾದರೆ, ಆ ಮೂಲಕವೂ ಸಂಸ್ಥೆಗೆ ಆದಾಯ ಬರುತ್ತದೆ ಎಂಬ ಆಲೋಚನೆ ಈ ಸಂಸ್ಥೆಗೆ ಬಹಳ ಹಿಂದೆಯೇ ಬಂದಂತಿದೆ.

ಪೇಯ್ಡ್ ನ್ಯೂಸ್ ಎಂಬ ಭ್ರಷ್ಟ ಚಟುವಟಿಕೆ ಹುಸಿ ಅಧಿಕೃತತೆಯನ್ನು ಪಡೆದದ್ದೂ ಹೀಗೆ. ಪತ್ರಕರ್ತರು ದುಡ್ಡು ಪಡೆದು ಸುದ್ದಿ ಮಾಡ್ತಾರೆ ಎಂಬ ಆರೋಪಗಳು ಇದ್ದ ಕಾಲದಲ್ಲಿ, ಮಾರ್ಕೆಟಿಂಗ್ ವಿಭಾಗದವರಿಗೆ ಬಂದ ಐಡಿಯಾವೇ ಪೇಯ್ಡ್ ನ್ಜೂಸ್. ಈಗ – ಆರ್.ಟಿ.ಐ ಅಡಿ ದಾಖಲೆ ಪಡೆಯಿರಿ, ಹೆದರಿಸಿ, ಬೆದರಿಸಿ ಸುದ್ದಿ ಮಾಡಿ. ಅಂತಹ ಕೆಲಸ ಮಾಡಲೆಂದೇ ಸಿಬ್ಬಂದಿ ನೇಮಿಸಿಕೊಳ್ಳಿ. ಅವರಿಗೆ ಒಳ್ಳೆಯ ಸಂಬಳ ಕೊಡಿ. ಹಾಗೂ, ಹೀಗೂ, ಅವರೇನಾದ್ರೂ ಇಂತಹದೇ ಚಟುವಟಿಕೆಗಳಿಂದ ಸ್ವಂತಕ್ಕೆ ದುಡ್ಡು ಮಾಡಿಕೊಳ್ಳುತ್ತಿದ್ದರೆ, ಕಣ್ಣು ಮುಚ್ಚಿಕೊಂಡು ಸುಮ್ಮನಿರಿ, ಆದರೆ ಕಂಪನಿಗೆ ಸಂದಾಯವಾಗುವುದನ್ನು ಮುಲಾಜಿಲ್ಲದೆ ಪಡೆಯಿರಿ ಎಂಬ ಸಂದೇಶ ಕಂಪನಿ ನಡೆಸುವವರಿಂದಲೂ ಬಂದಿರಬಹುದಲ್ವಾ?

ಶ್ರೀನಿವಾಸಗೌಡ ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ಈ ಹಿಂದೆ ಹಾಸನ, ಬೆಂಗಳೂರು, ನವದೆಹಲಿಗಳಲ್ಲಿ ಕೆಲಸ ಮಾಡಿದ್ದಾನೆ. ಪತ್ರಿಕೋದ್ಯಮದ ತನ್ನ ಅನುಭವಗಳನ್ನು ಕುರಿತಂತೆ ಮೀಡಿಯಾ ಡೈರಿ ಎಂಬ ಪುಸ್ತಕವನ್ನೂ ಬರೆದಿದ್ದಾನೆ. ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಅನೇಕ ಉತ್ಸಾಹಿ ತರುಣ ಪತ್ರಕರ್ತರಂತೆ, ಭ್ರಷ್ಟರನ್ನು ಕಂಡು ಕ್ರುದ್ಧನಾಗಿದ್ದಾನೆ, ಅವರ ವಿರುದ್ಧ ಸುದ್ದಿ ಮಾಡಿದ್ದಾನೆ. ಅವನ ಪುಸ್ತಕದಲ್ಲಿನ ಕೆಲವು ಬರಹಗಳು ಅವನ ಈ ವ್ಯಕ್ತಿತ್ವವನ್ನು ತೆರೆದಿಡುತ್ತವೆ. ಬಹುಶಹ ಅಂತಹದೇ ಕಾರಣಕ್ಕೆ ಸುದ್ದಿವಾಹಿನಿಯೊಂದು ದೆಹಲಿಯಂತಹ ಊರಿಗೆ ವರ್ಗಮಾಡಿ ಕೆಲಸ ಮಾಡಿಸಿಕೊಳ್ಳುತ್ತೆ. ಆದರೆ ನಂತರ ಅವನ ದಿಕ್ಕು ಬದಲಾದಂತೆ ಕಾಣುತ್ತದೆ. ಮಾಧ್ಯಮವಲಯದಲ್ಲಿ ಎಲ್ಲರಿಗೂ ಗೊತ್ತಿರುವಂತೆ ಆತ ಈ ಹಿಂದೆ ಒಬ್ಬ ಮಾಜಿ ಮಂತ್ರಿಯೊಬ್ಬರ ಪಾಲುದಾರಿಕೆಯಲ್ಲಿದ್ದ ಸುದ್ದಿವಾಹಿನಿಯೊಂದಕ್ಕೆ ಕೆಲಕಾಲ ಕೆಲಸ ಮಾಡಿದ. ಮಾಲೀಕರಲ್ಲಿ ಒಬ್ಬರಾದ ಮಂತ್ರಿಯ ಮೇಲೆ ಆರೋಪಗಳು ಕೇಳಿ ಬಂದಾಗ, ಆ ಬಗ್ಗೆ ಸುದ್ದಿ ಮಾಡುತ್ತಿದ್ದ ಪತ್ರಿಕೆಗಳಲ್ಲಿ ಪತ್ರಕರ್ತರನ್ನು ಸಂಪರ್ಕಿಸಿ ಅವರಿಗೆ ಮಂತ್ರಿಯ ಹೇಳಿಕೆಗಳನ್ನು ತಲುಪಿಸುವ ಕೆಲಸ ಮಾಡಿದ್ದೂ ಉಂಟು. ಒಲ್ಲದ ಮನಸ್ಸಿನಿಂದಲೇ, ಮಾಲೀಕರ ಮಾತಿಗೆ ಮಣೆ ಹಾಕುತ್ತಿದ್ದ. ಆದರೆ ಆ ಹೊತ್ತಿಗಾಗಲೇ ಸುದ್ದಿಯ ಜಾಡು ಹಿಡಿಯಬೇಕಾದ ಪತ್ರಕರ್ತನ ಅಭ್ಯಾಸ ಬಿಟ್ಟವನಂತೆ ಕಾಣುತ್ತಿದ್ದ. ಉತ್ತರ ಪ್ರದೇಶದ ನಾಯಕಿ ಮಾಯಾವತಿಯನ್ನು ಸಂಸತ್ ನಲ್ಲಿ ಪಕ್ಕ ಕೂರಿಸಿಕೊಳ್ಳಲು ಆಕೆ ಬಾಡಿ ಸ್ಪ್ರೇ ಹಾಕುವುದಿಲ್ಲ ಎಂದು ದೂರುತ್ತಿದ್ದ ಮೇಲ್ಜಾತಿಯ ರಾಜಕಾರಣಿಗಳ ಬಗ್ಗೆ ತನ್ನ ಸಿಟ್ಟನ್ನು ದಾಖಲಿಸುತ್ತಿದ್ದ ಶ್ರೀನಿವಾಸಗೌಡ, ತನ್ನ ಬೆವರಿನ ಶ್ರಮದ ಹೊರತಾಗಿ ಗಳಿಸುವುದೆಲ್ಲವೂ ಅಮೇಧ್ಯ ಎಂಬುದನ್ನು ಮರೆಯಲಾರಂಭಿಸಿದ್ದೂ ಆಗಲೇ ಇರಬೇಕು.

ಸುವರ್ಣ ಸುದ್ದಿ ವಾಹಿನಿ ಗುರುವಾರ ‘ಪತ್ರಕರ್ತ ದೊಡ್ಡವನಲ್ಲ’ ಎಂಬ ಹೆಸರಿನಡಿ ಚರ್ಚೆ ನಡೆಸಿತು. ಟಿ.ಕೆ.ತ್ಯಾಗರಾಜ್,kannada-news-channels ಡಿ.ವಿ.ರಾಜಶೇಖರ್, ದಿನೇಶ್ ಅಮಿನ್ ಮಟ್ಟು ಹಾಗೂ ವಾಹಿನಿಯ ದೆಹಲಿ ಪ್ರತಿನಿಧಿ ಪ್ರಶಾಂತ್ ನಾತು ಚರ್ಚೆ ನಡೆಸಿದರು. ದಿನೇಶ್ ಒಂದು ಮಾತು ಹೇಳಿದರು, ’ದುಡ್ಡು ಮಾಡುವ ಉದ್ದೇಶ ಇದ್ದರೆ, ಈ ಕ್ಷೇತ್ರಕ್ಕೆ ಬರಬೇಡಿ. ಇಲ್ಲಿ ದುಡ್ಡಿಲ್ಲ. ಬೇಕಾದರೆ ಯಾವುದಾದರೂ ಬುಸಿನೆಸ್ ಮಾಡಿ, ಅಲ್ಲಿ ನಿಮಗೆ ಹೆಚ್ಚು ದುಡ್ಡು ಮಾಡಲು ಸಾಧ್ಯವಾಗಬಹುದು. ಇಲ್ಲಿ, ದುಡ್ಡು ಮಾಡುವುದಿರಲಿ, ಸಂಜೆಗಳೇ ನಿಮ್ಮ ದಿನಚರಿಯಿಂದ ಮಾಯವಾಗಿರುತ್ತವೆ.’ ಬಹುಶಃ ಇಂತಹ ಹಿರಿಯರ ಮಾತು ಕೇಳಿಯೇ ಅನ್ನಿಸುತ್ತೆ, ಶ್ರೀನಿವಾಸಗೌಡ ತನ್ನ ಗೆಳೆಯರ ಜೊತೆ ಸೇರಿ ಬಿರಿಯಾನಿ ಅಡ್ಡಾ ಎಂಬ ಹೋಟೆಲ್ ಮಾಡಿದ್ದು. ರುಚಿಕಟ್ಟಾದ ಬಿರಿಯಾನಿ ಮಾಡಿಕೊಟ್ಟರೆ, ಉಂಡವರು ಕಾಸು ಕೊಡ್ತಾರೆ. ಅದು ಪಕ್ಕಾ ಬ್ಯುಸಿನೆಸ್. ನಿಯತ್ತಾಗಿ ಹಣ ಗಳಿಸಬಹುದು.

ಆದರೆ, ಕೆಲವೇ ದಿನಗಳಲ್ಲಿ ಮತ್ತೆ ಟಿವಿ ಮಾಧ್ಯಮಕ್ಕೆ ಹಿಂತಿರುಗಿದ. ಮೇಲಾಗಿ, ಸುದ್ದಿವಾಹಿನಿ ಬಿತ್ತರಿಸಿದ ಹೇಳಿಕೆ ನಿಜವೇ ಆಗಿದ್ದಲ್ಲಿ, ಕೆಲಸ ಕೊಟ್ಟ ಕಂಪನಿ, ಬಾಸ್ ಗಳು ಆರ್.ಟಿ.ಐ ಅಡಿ ಅರ್ಜಿ ಹಾಕಲು ಹೇಳಿದರು! ಒಬ್ಬ ವ್ಯಕ್ತಿ ಭ್ರಷ್ಟನಾಗುತ್ತಾನೆಂದರೆ, ಅವನ ತಪ್ಪುಗಳಲ್ಲಿ ಅವನ ಸುತ್ತಲಿನವರು ಪ್ರಚೋದಿಸದೇ ಇರಬಹುದು. ಆದರೆ ಎಚ್ಚರಿಸದೇ ಇರುವುದೂ ತಪ್ಪಲ್ಲವೇ?

ಇತರೆ ಭ್ರಷ್ಟರು:
ಪತ್ರಕರ್ತರ ಮಧ್ಯೆ ಇರುವ ಭ್ರಷ್ಟರ ಬಗ್ಗೆ ಚರ್ಚೆ ಇದು ಮೊದಲಲ್ಲ. ಕೆಲ ತಿಂಗಳುಗಳ ಹಿಂದಷ್ಟೆ ಮಾಜಿ ಮುಖ್ಯಮಂತ್ರಿಎಚ್.ಡಿ.ಕುಮಾರಸ್ವಾಮಿ ಮಾಧ್ಯಮದವರ ಮುಂದೆ ಆನ್ ರೆಕಾರ್ಡ್ ಹೇಳಿದ್ದ ಮಾತು ನೆನಪಿಗೆ ಬರುತ್ತೆ. “ಒಬ್ಬ “ಸಂಪಾದಕರು” (ಕುಮಾರಸ್ವಾಮಿ ಅವರ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದರು) ನನ್ನ ಬಳಿ ಬಂದು ಮೈನಿಂಗ್ ಮಾಡಲು 500 ಎಕರೆಯಷ್ಟು ಜಮೀನು ಮಾಡಿಕೊಡಿ ಎಂದು ಕೇಳಿದ್ದರು” ಎಂದು ಹೇಳಿದ್ದರು.Deccan Herald - Mining Payments ಆ ಬಗ್ಗೆ ಚರ್ಚೆಯಾಗಲೇ ಇಲ್ಲ. ಎರಡು ಮೂರು ವರ್ಷಗಳ ಹಿಂದೆ ಕಬ್ಬಿಣದ ಅದಿರು ಹಗರಣದ ರೂವಾರಿಗಳಿಂದ ಅನೇಕರಿಗೆ ಹಣ ಸಂದಾಯವಾದ ಬಗ್ಗೆ ಪತ್ರಿಕೆಗಳಲ್ಲಿ ವರದಿಗಳು ಬಂದಾಗಲೂ, ಕೆಲ ಹೆಸರುಗಳು ಬಹಿರಂಗವಾಗಿದ್ದವು. ಆ ಮಾಹಿತಿ ಕೂಡಾ ಲೋಕಾಯುಕ್ತರ ಕಡತಗಳಲ್ಲಿದೆ. ಅವೆಲ್ಲವೂ ಎಂದೋ ಬಹಿರಂಗವಾಗಬೇಕಿತ್ತು ಮತ್ತು ಚರ್ಚೆಯಾಗಬೇಕಿತ್ತು. ಆದರೆ, ಕೆಲವರು ಅಂತಹವರ ಬಗ್ಗೆ ಹಾಡುಕಟ್ಟಿಕೊಂಡು ಭಜನೆಗೆ ಇಳಿದಿದ್ದಾರೆ. ತಪ್ಪು-ಸರಿಗಳ ವ್ಯತ್ಯಾಸ ಗೊತ್ತಿಲ್ಲದವರಿಂದ ಪತ್ರಿಕೋದ್ಯಮಕ್ಕೆ ಏನೂ ಲಾಭ ಇಲ್ಲ; ನಷ್ಟವೇ ಎಲ್ಲ.