Daily Archives: July 27, 2015

ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳು ಮತ್ತು ಸಿದ್ಧಾಂತಗಳು: ಸ್ವರೂಪ ಮತ್ತು ಮಾದರಿಗಳು

– ಬಿ.ಶ್ರೀಪಾದ ಭಟ್

“My social philosophy may be said to be enshrined in three words: liberty, equality and fraternity. My philosophy has roots in religion and not in political science. I have derived them from the teachings of my master, the Buddha.” – ಡಾ.ಬಿ.ಆರ್.ಅಂಬೇಡ್ಕರ್

1912ರಲ್ಲಿ ಬಾಂಬೆ ವಿಶ್ವ ವಿದ್ಯಾಲಯದಿಂದ ಎಕನಾಮಿಕ್ಸ್, ರಾಜಕೀಯ ಶಾಸ್ತ್ರದಲ್ಲಿ ಪದವಿ ಗಳಿಸಿದ ಅಂಬೇಡ್ಕರ್ 1915ರಲ್ಲಿ ಕೊಲಂಬಿಯಾ ವಿಶ್ವ ವಿದ್ಯಾಲಯದಿಂದ ಎಕನಾಮಿಕ್ಸ್, ಸಾಮಾಜಿಕ ಶಾಸ್ತ್ರ, ಮಾನವ ಶಾಸ್ತ್ರ,ಫಿಲಾಸಫಿ ಯಲ್ಲಿ ಸ್ನಾತಕ್ಕೋತ್ತರ ಪದವಿ ಗಳಿಸಿದ್ದರು. ಕೊಲಂಬಿಯಾ ವಿ.ವಿ.ಯಲ್ಲಿ ಅಧ್ಯಯನ ಮಾಡುತ್ತಿದ್ದಾಗ ಪ್ರಸಿದ್ಧ ಫಿಲಾಸಫರ್ ‘ಜಾನ್ ಡೇವೇ’ ಅವರ ಗುರುಗಳಾಗಿದ್ದರು. ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳ ಸ್ವರೂಪವನ್ನು ಅಧ್ಯಯನ ಮಾಡಿದಾಗ ಅವರು “liberal thinker with orientation sociologist” ಆಗಿದ್ದರು ಎಂದು ತಿಳಿದುಬರುತ್ತದೆ. ಅಂಬೇಡ್ಕರ್ ಅವರು ಸಾಮಾಜಿಕ-ಮಾನವಿಕ-ಆರ್ಥಿಕ ತಜ್ಞರಾಗಿದ್ದರು. ಅಂಬೇಡ್ಕರ್ ಅವರ ಆರ್ಥಿಕ ಸಿದ್ಧಾಂತವು ಶಾಸ್ತ್ರೀಯ ಆರ್ಥಿಕ ತತ್ವಾಧಾರಿತ ಅಭಿವೃದ್ಧಿ, ಮಾರ್ಕ್ಸ್ ತತ್ವಾಧಾರಿತ ಅಭಿವೃದ್ಧಿ, ಸಾಮಾಜಿಕ ನ್ಯಾಯ, ಬಂಡವಾಳಶಾಹಿ ತೊಡಕುಗಳು, ಕೃಷಿ ಆರ್ಥಿಕ ಅಭಿವೃದ್ಧಿ, ಭೂ ಸುಧಾರಣೆ, Young_Ambedkarಉತ್ಪಾದನಾ ಸಾಮರ್ಥ್ಯದ ಹೆಚ್ಚಳ, ಕೈಗಾರೀಕರಣಗಳನ್ನು ಒಳಗೊಂಡಿತ್ತು. ಚಿಂತಕ ಆನಂದ್ ತೇಲ್ತುಂಬ್ಡೆ ಅವರು ಅಂಬೇಡ್ಕರ್ ಸೋಷಿಲಿಸ್ಟ್ ಆಗಿದ್ದರು ಎಂದು ಅಭಿಪ್ರಾಯ ಪಡುತ್ತಾರೆ. ಅಂಬೇಡ್ಕರ್ ಅವರ ಸೋಷಿಯಲಿಸಂ ಚಿಂತನೆಗಳನ್ನು ಕುರಿತು ತೇಲ್ತುಂಬ್ಡೆ ಅವರು ‘ಅಂಬೇಡ್ಕರ್ ಅವರ ಮೊಟ್ಟ ಮೊದಲ ರಾಜಕೀಯ ಪಕ್ಷ ‘ಇಂಡಿಯನ್ ಲೇಬರ್ ಪಾರ್ಟಿ’ ಫೇಬಿಯನ್ ಮಾದರಿಯ ಸೋಷಿಯಲಿಸ್ಟ್ ಪಕ್ಷವಾಗಿತ್ತು. ಅಂಬೇಡ್ಕರ್ ಅವರು ಈ ಮೊದಲು ಸಹ ‘ಬ್ರಾಹ್ಮಿನಿಸಂ ಮತ್ತು ಕ್ಯಾಪಿಟಲಿಸಂ’ ತಳಸಮುದಾಯಗಳ ಮೊದಲ ಶತೃಗಳು ಎಂದು ಹೇಳಿದ್ದರು. ಇವೆರೆಡೂ ಪರಸ್ಪರ ಪೂರಕವಾಗಿ ವರ್ತಿಸುತ್ತವೆ ಎಂದು ವಿವರಿಸಿದ್ದರು. ಇಂಡಿಯನ್ ಲೇಬರ್ ಪಕ್ಷವು ಕಾರ್ಮಿಕರ ಪಕ್ಷವಾಗಿತ್ತು ಮತ್ತು ಸಶಕ್ತ ಸಂಘಟನೆಯಿಂದ ಜಾತಿ ಮತ್ತು ವರ್ಗಗಳನ್ನು ನಾಶಮಾಡಬಹುದು ಎಂದು ಹೇಳಿದ್ದರು. ಮುಂದಿನ ವರ್ಷಗಳಲ್ಲಿ ರಾಜಕೀಯ ವ್ಯವಸ್ಥೆಯು ಕೋಮುವಾದಿ ಕಡೆಗೆ ತಿರುಗುತ್ತಿರುವುದನ್ನು ಮನಗಂಡ ಅಂಬೇಡ್ಕರ್ ಇಂಡಿಯನ್ ಲೇಬರ್ ಪಕ್ಷವನ್ನು ವಿಸರ್ಜಿಸಿದ್ದರು’ ಎಂದು ಬರೆಯುತ್ತಾರೆ.

ಇಂದಿನ ದಿನಗಳಲ್ಲಿ ಅಥವಾ ಕಳೆದ ಕೆಲವು ವರ್ಷಗಳಿಂದ ಅಂಬೇಡ್ಕರ್ ಅವರು ಮುಕ್ತ ಮಾರುಕಟ್ಟೆ ಮತ್ತು ಜಾಗತೀರಣದ ಪರವಾಗಿದ್ದರು ಎನ್ನುವ ಸಂಪೂರ್ಣ ತಪ್ಪು ಗ್ರಹಿಕೆಗಳನ್ನು ಹೇಳಲಾಗುತ್ತಿದೆ. ಆದರೆ ಮುಕ್ತ ಮಾರುಕಟ್ಟೆ, ಉದಾರೀಕರಣ ಅಥವಾ ಜಾಗತೀಕರಣ ವ್ಯವಸ್ಥೆಯಲ್ಲಿ ನೇರವಾದ ಕೊಡುಕೊಳ್ಳುವ ಪದ್ಧತಿ ಇರುತ್ತದೆ. ಇಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸೌಲಭ್ಯಗಳನ್ನು, ಅನುಕೂಲವನ್ನು ಪಡೆದಂತಹ ವ್ಯಕ್ತಿ ಅಥವಾ ಸಂಸ್ಥೆ ಅದೇ ಸ್ತರದ ಮತ್ತೊಂದು ವ್ಯಕ್ತಿ ಅಥವಾ ಸಂಸ್ಥೆಯೊಂದಿಗೆ ವ್ಯವಹಾರ, ಸಂಬಂಧಗಳನ್ನು ಬೆಳೆಸಿಕೊಳ್ಳಲು ಮಾತ್ರ ಅವಕಾಶವಿರುತ್ತದೆ. ಪ್ರತಿಯೊಂದು ಹಣಕಾಸಿನ ವಹಿವಾಟು ಕೇಂದ್ರೀಕೃತ ವ್ಯವಸ್ಥೆಯನ್ನು ಸೃಷ್ಟಿಸುತ್ತಿರುತ್ತದೆ. ಪ್ರಜೆಗಳಿಂದ ಆಯ್ಕೆಯಾಗಿ ಪ್ರಜೆಗಳಿಗಾಗಿ ಜವಬ್ದಾರಿ ಹೊರಬೇಕಿದ್ದ ಸರ್ಕಾರವು ಈ ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ತನ್ನ ಎಲ್ಲಾ ನಿಯಂತ್ರಣ ಮತ್ತು ಹಿಡಿತವನ್ನು ಕಳಚಿಕೊಳ್ಳುತ್ತ ಅದನ್ನು ಮಾರುಕಟ್ಟೆಗೆ, ಖಾಸಗಿ ಬಂಡವಾಳಶಾಹಿಗೆ ಹಸ್ತಾಂತರಿಸುತ್ತದೆ. ಜನಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲು, ಕೈಗೆತ್ತಿಕೊಳ್ಳಲು ಈ ಖಾಸಗಿ ಮಾರುಕಟ್ಟೆ ನಿರಾಕರಿಸುತ್ತದೆ ಮತ್ತು ಕೇವಲ ತನ್ನ ಸಂಪತ್ತನ್ನು ವೃದ್ಧಿಸುವಂತಹ ವಲಯಗಳಲ್ಲಿ ಮಾತ್ರ ವಹಿವಾಟನ್ನು ನಡೆಸುತ್ತದೆ. ಈ ಉದಾರೀಕರಣದ ಆರ್ಥಿಕ ನೀತಿಯು ವ್ಯಕ್ತಿ ಅಥವಾ ಸಂಸ್ಥೆಯ ಬಳಿ ಸಂಪತ್ತಿನ ಕ್ರೋಢೀಕರಣಕ್ಕೆ ಪುಷ್ಟಿ ನೀಡುತ್ತದೆ. ಸಂಪತ್ತು ಕೆಲವೇ ಜನ/ಸಂಸ್ಥೆಗಳ ಬಳಿ ಕೇಂದ್ರೀಕೃತಗೊಂಡ ಈ ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಈ ರೀತಿಯ ಸಂಬಂಧಗಳಿಂದಾಗಿ ಮೇಲ್ವರ್ಗಗಳು / ಮಧ್ಯಮವರ್ಗಗಳು ಮತ್ತು ಬಡಜನರ ನಡುವೆ ಉಂಟಾಗುವ ದೊಡ್ಡ ಕಂದಕ ಅಸಮಾನತೆ ಮತ್ತು ಪ್ರತ್ಯೇಕತೆಯನ್ನು ಹೆಚ್ಚಿಸುತ್ತದೆ. ಇದು ಸಾಮಾಜಿಕ ನ್ಯಾಯದ ಆಶಯಗಳಿಗೂ ಮಾರಕ.

ಆದರೆ ಅಸಮಾನತೆ, ಪ್ರತ್ಯೇಕತೆ ಮತ್ತು ತಾರತಮ್ಯವನ್ನು ವಿರೋಧಿಸಿದ ಅಂಬೇಡ್ಕರ್ ಸಹಜವಾಗಿಯೇ ಈ ಮುಕ್ತ ಮಾರುಕಟ್ಟೆ ಮತ್ತು ಜಾಗತೀಕರಣದ ವಿರೋಧಿಯೂ ಆಗಿದ್ದರು. ಅಂಬೇಡ್ಕರ್ ಈ ಸಂಪತ್ತಿನ ಕ್ರೋಢೀಕರಣವನ್ನು ಟೀಕಿಸುತ್ತಿದ್ದರು ಮತ್ತು State Socialism ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದರು. ಸರ್ಕಾರದ ನೀತಿಗಳು ಈ ಮುಕ್ತ ಮಾರುಕಟ್ಟೆ ಮಾದರಿಯ ಬೂಜ್ರ್ವ ವ್ಯವಸ್ಥೆಯ ಬೆಳೆವಣಿಗೆಯನ್ನು ಕಡಿವಾಣ ಹಾಕುವಂತಹ ನೀತಿಗಳನ್ನು ರೂಪಿಸಬೇಕು ಎಂದು ಒತ್ತಾಯಿಸುತ್ತಿದ್ದ ಅಂಬೇಡ್ಕರ್ ಮುಕ್ತ ಮಾರುಕಟ್ಟೆಯ ಆರ್ಥಿಕ ನೀತಿಯನ್ನು ಸಮರ್ಥಿಸಲು ಸಾಧ್ಯವೇ ಇಲ್ಲ.

ಆನಂದ ತೇಲ್ತುಂಬ್ಡೆ ಅವರು ‘ವೈಯುಕ್ತಿಕ, ಸಾಮಾಜಿಕ-ಆರ್ಥಿಕ, ಸಾಮಾಜಿಕ-ರಾಜಕೀಯ, ಸಾಮಾಜಿಕ-ಸಾಂಸ್ಕೃತಿಕ’ ಎನ್ನುವ ನಾಲ್ಕು ಮಾದರಿಯ ಸಬಲೀಕರಣವನ್ನು ಗುರುತಿಸುತ್ತಾರೆ. ಈ ನಾಲ್ಕೂ ನೆಲೆಯ ಸಬಲೀಕರಣವು ಕೈಗೂಡಿದರೆ ತಳ ಸಮುದಾಯಗಳಿಗೆ ವಿಮೋಚನೆ ದೊರಕಿದಂತೆ. ಇಲ್ಲಿ ಶಿಕ್ಷಣ ಮತ್ತು ಆರೋಗ್ಯ ವೈಯುಕ್ತಿಕ ಸಬಲೀಕರಣ, ಭೂ ಸುಧಾರಣೆ ಮತ್ತು ಉದ್ಯೋಗ ಸಾಮಾಜಿಕ-ಆರ್ಥಿಕ ಸಬಲೀಕರಣ, ಪ್ರಜಾಪ್ರಭುತ್ವದ ವ್ಯವಸ್ಥೆಯು ಸಾಮಾಜಿಕ-ರಾಜಕೀಯ ಸಬಲೀಕರಣ ಮತ್ತು ಆಧುನಿಕತೆ ಸಾಮಾಜಿಕ-ಸಾಂಸ್ಕೃತಿಕ ಸಬಲೀಕರಣಕ್ಕೆ ಪ್ರಮುಖವಾಗಿವೆ ಎಂದು ಗುರುತಿಸುತ್ತಾರೆ. ಆದರೆ ನವ ಉದಾರೀಕರಣದ ಇಂದಿನ ಭಾರತದಲ್ಲಿ ಶಿಕ್ಷಣ ಮತ್ತು ಆರೋಗ್ಯ ವಲಯಗಳು ಸಂಪೂರ್ಣವಾಗಿ ಖಾಸಗೀಕರಣಗೊಳ್ಳುತ್ತಾ ಸಾರ್ವಜನಿಕ ಸೇವಾ ವಲಯದಿಂದ ಕಣ್ಮರೆಯಾಗಿವೆ ಮತ್ತು ಇಂದು ಈ ಎರಡೂ ವಲಯಗಳು ಖಾಸಗೀಕರಣದ ದೊಡ್ಡ ಶಕ್ತಿ ಕೇಂದ್ರಗಳಾಗಿವೆ. ಇಂದು ಭೂಸುಧಾರಣೆಯು ತನ್ನ ಜನಪರವಾದ ಸೋಷಿಯಲಿಸಂ ನೀತಿಯಿಂದ ಕಳಚಿಕೊಂಡು ಭೂ ಮಾಲೀಕರು ಮತ್ತು ಬಂಡವಾಳಶಾಹಿಗಳ, ಮಧ್ಯವರ್ತಿಗಳ ರಿಯಲ್ ಎಸ್ಟೇಟ್ ವ್ಯವಹಾರವಾಗಿದೆ. ದಲಿತರಿಗೆ ಏಕೈಕ ಆಶಾದೀಪವಾಗಿದ್ದ ಸರ್ಕಾರಿ ಉದ್ಯೋಗಗಳು ಕುಂಠಿತಗೊಳ್ಳುತ್ತಾ ಮೀಸಲಾತಿಯ ಸಾಮಾಜಿಕ ನ್ಯಾಯದ ಪರಿಕಲ್ಪನೆ ಕ್ರಮೇಣವಾಗಿ ಮೂಲೆಗುಂಪಾಗಿದೆ ಮತ್ತು ಪ್ರಜಾಪ್ರಭುತ್ವವು ಇಂದು ಕೇವಲ ಚುನಾವಣೆಯ ಸಂದರ್ಭದಲ್ಲಿ ಮಾತ್ರ ತನ್ನ ಐಡೆಂಟಿಟಿ ಉಳಿಸಿಕೊಂಡಿದೆ ಮತ್ತು ಚುನಾವಣೆಯ ಹೊರತಾಗಿ ಪ್ರಜೆಗಳಿಗೆ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಸ್ಪೇಸ್ ಇಲ್ಲ. ಈ ಎಲ್ಲಾ ಸಂಕೀರ್ಣ ಸ್ವರೂಪಗಳ ಮೂಲಕಾರಣಗಳೇ ಜಾತಿ ಪದ್ಧತಿ ಮತ್ತು ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಎಂದು ಅಂಬೇಡ್ಕರ್ ಸ್ಪಷ್ಟವಾಗಿ ಹೇಳುತ್ತಿದ್ದರು. ಇದಕ್ಕೆ State Socialism ಸಿದ್ಧಾಂತದ ಮೂಲಕ ಪರಿಹಾರ ಕಂಡುಕೊಳ್ಳಬಹುದೆಂದು ಪ್ರತಿಪಾದಿಸಿದ್ದರು. ಇದರ ಎಲ್ಲಾ ದುಷ್ಪರಿಣಾಮಗಳನ್ನು ಜಾಗತೀಕರಣದ ಎರಡು ದಶಕಗಳ ನಂತರ ಇಂದು ಇಂಡಿಯಾದಲ್ಲಿನ ಪ್ರಸ್ತುತ ಸಂದರ್ಭದವನ್ನು ಅಧ್ಯಯನ ಮಾಡಿದರೆ ಅರಿವಾಗುತ್ತದೆ. ಇದಕ್ಕೆ ಮೊದಲು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಬಲಿಯಾಗಿದ್ದು ತಳ ಸಮುದಾಯಗಳು.

ಆರ್ಥಿಕ ಚಿಂತನೆಗಳ ಕುರಿತಾಗಿ ಅಂಬೇಡ್ಕರ್ ಅವರು ಮೂರು ಪುಸ್ತಕಗಳನ್ನು ಬರೆದಿದ್ದರು. ಅವು:

  1. ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಮತ್ತು ಹಣಕಾಸು
  2. ಬ್ರಿಟೀಷ್ ಇಂಡಿಯಾದಲ್ಲಿ ಪ್ರಾಂತೀಯ ಹಣಕಾಸಿನ ವಿಕಸನ ( 1925)
  3. ರೂಪಾಯಿಯ ಮಗ್ಗಟ್ಟು: ಅದರ ಉಗಮ ಮತ್ತು ಅದರ ಅರ್ಥ ವಿವರಣೆ ( 1923)

ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳನ್ನು ಕೆಳಗಿನ ಕೆಲವು ಪ್ರಮುಖ ವಲಯಗಳ ಮೂಲಕ ಅಧ್ಯಯನ ಮಾಡಬಹುದೆಂದು ಪ್ರೊ. ಜಯಶ್ರೀ ಸರೋದೆ ಅವರು ಹೇಳುತ್ತಾರೆ. ಅವೆಂದರೆ:

  1. ಕೃಷಿ ಮತ್ತು ಭೂ ಸುಧಾರಣೆ
  2. ಭಾರತದ ಹಣಕಾಸಿನ ಬಿಕ್ಕಟ್ಟು
  3. ಸಾರ್ವಜನಿಕ ಹಣಕಾಸಿನ ತೊಂದರೆಗಳು
  4. ತೆರಿಗೆ ನೀತಿಗಳು
  5. ಕೈಗಾರಿಕೆಗಳ ರಾಷ್ಟ್ರೀಕರಣ
  6. ಆರ್ಥಿಕ ಅಭಿವೃದ್ಧಿಯ ರಣನೀತಿಗಳು
  7. ಮುಕ್ತ ಮಾರುಕಟ್ಟೆ
  8. ಜನಸಂಖ್ಯಾ ನಿಯಂತ್ರಣ
  9. ಮಹಿಳೆಯರ ಆರ್ಥಿಕ ಸಬಲೀಕರಣ
  10. ಮಾನವ ಬಂಡವಾಳ ತತ್ವ
  11. ಹಿಂದೂ ಆರ್ಥಿಕ ಪದ್ಧತಿಯ ವಿರೋಧ

ಕೃಷಿ ಮತ್ತು ಭೂ ಸುಧಾರಣೆ : ಅಂಬೇಡ್ಕರ್ ಅವರ ಚಿಂತನೆಗಳು

  • ಹೆಚ್ಚುವರಿ ಭೂಮಿಯನ್ನು (Surplus Land) ಯನ್ನು ಬಳಸಿಕೊಂಡು ಉತ್ಪಾದನಾ ಸಾಮಥ್ರ್ಯವನ್ನು ಹೆಚ್ಚಿಸುವ ಜಮೀನ್ದಾರಿ ಮಾದರಿಯ ಕೃಷಿ ಪದ್ಧತಿಯನ್ನು ತಿರಸ್ಕರಿಸಬೇಕು.
  • ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಕೃಷಿ ಕಾರ್ಮಿಕರನ್ನು ಬಳಸಿಕೊಂಡು ಉತ್ಪಾದನೆ ಮತ್ತು ಉತ್ಪಾದನಾ ಸಾಮಥ್ರ್ಯವನ್ನು ವೃದ್ಧಿಸಿಕೊಳ್ಳಬೇಕು
  • ಭೂ ಮಾಲೀಕರು, ಸಣ್ಣ ಹಿಡುವಳಿದಾರರು,ಕೂಲಿ ಕಾರ್ಮಿಕರ ನಡುವೆ ಅಸಮಾನತೆ ಮತ್ತು ತಾರತಮ್ಯ ನೀತಿಗಳನ್ನು ರದ್ದು ಪಡಿಸಬೇಕು
  • ಭೂ ಸುಧಾರಣೆಯಾಗಬೇಕು ಮತ್ತು ಭೂಮಿಯು ಸಮಾನವಾಗಿ ಹಂಚಿಕೆಯಾಗಬೇಕು ಮತ್ತು ಭೂಮಿಯನ್ನು ರಾಷ್ಟ್ರೀಕರಣಗೊಳಿಸಬೇಕು
  • ಕೃಷಿ ಸಾಗುವಳಿ ಮತ್ತು ವ್ಯವಸಾಯವನ್ನು ಸಹಕಾರ ಸಂಘಗಳ ತತ್ವದ ಅಡಿಯಲ್ಲಿ ನಡೆಸಬೇಕು.ಇದಕ್ಕಾಗಿ ಭೂಮಿಯು ರಾಷ್ಟ್ರೀಕರಣಗೊಳ್ಳಬೇಕು
  • ಕೃಷಿ, ಕೈಗಾರಿಕೆ,ಆರ್ಥಿಕ ವಲಯಗಳಲ್ಲಿ State Socialism ಸಿದ್ಧಾಂತವು ಜಾರಿಗೊಳ್ಳಬೇಕು.
  • ಭೂಮಿಯ ಮೇಲೆ ಖಾಸಗಿಯವರ ಒಡೆತನ ರದ್ದುಗೊಳ್ಳಬೇಕು ಮತ್ತು ಸಾಮೂಹಿಕ, ಸಮುದಾಯದ ಕೃಷಿ ಪದ್ಧತಿಯು ಜಾರಿಗೆ ಬರಬೇಕು
  • ವ್ಯವಸಾಯವನ್ನು ರಾಜ್ಯ ಕೈಗಾರಿಕೆ ಎಂದು ಮಾನ್ಯತೆ ಕೊಡಬೇಕು
  • ವ್ಯವಸಾಯ ಉತ್ಪನ್ನಗಳು ಮತ್ತು ಅದರ ಮೌಲ್ಯಗಳ ಮುಕ್ಕಾಲು ಭಾಗ ನೇರವಾಗಿ ರೈತರಿಗೆ, ಕೃಷಿ ಕಾರ್ಮಿಕರಿಗೆ ತಲುಪಬೇಕು. ಉಳಿದ ಭಾಗ ಸರ್ಕಾರಕ್ಕೆ ಲೆವಿಯ ರೂಪದಲ್ಲಿ ಸಂದಾಯವಾಗಬೇಕು. ಈ ಧಾನ್ಯ-ಕಾಳುಗಳನ್ನು ಸರ್ಕಾರವು ಸಬ್ಸಿಡಿ ದರದಲ್ಲಿ ಬಡವರಿಗೆ ಹಂಚಬೇಕು (ಇದೇ ಇಂದಿನ ನ್ಯಾಯ ಬೆಲೆ ಪದ್ಧತಿ) ಈ ಮೂಲಕ ಸರ್ಕಾರವೇ ಕೃಷಿ ಕೈಗಾರಿಕೆಯನ್ನು ನಿಯಂತ್ರಿಸಬೇಕು
  • ಭೂ ಸ್ವಾಧೀನದ ಪರಿಹಾರ ಮೊತ್ತವನ್ನು ಬಾಂಡ್‍ಗಳ ರೂಪದಲ್ಲಿ ಕೊಡಬೇಕು

State Socialism ಸಿದ್ಧಾಂತವನ್ನು ಸಂವಿಧಾನದಲ್ಲಿ ಅಳವಡಿಸಲು ಅಂಬೇಡ್ಕರ್ ಅವರು ಬಹಳ ಪ್ರಯತ್ನ ನಡೆಸಿದರು. ಅಂಬೇಡ್ಕರ್ ಅವರ ಈ ಚಿಂತನೆಗಳನ್ನು ಮುಂದಿನ ವರ್ಷಗಳಲ್ಲಿ Land Ceiling Act ನ ಮೂಲಕ ಜಾರಿಗೊಳಿಸಲಾಯಿತು.

1926ರಲ್ಲಿ ಬಾಂಬೆ ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾಗ ಗ್ರಾಮೀಣ ಬಡವರ, ಕೃಷಿ ಕಾರ್ಮಿಕರ ಸಬಲೀಕರಣಕ್ಕೆ ಮೊದಲ ಆದ್ಯತೆಯನ್ನು ನೀಡಿದ್ದರು. ಆಗ ಮಹಾರಾಷ್ಟ್ರದಲ್ಲಿ “ಕೋಥೀ” ಪದ್ಧತಿ ಜಾರಿಯಲ್ಲಿತ್ತು. ಇದರ ಅನುಸಾರ ಸರ್ಕಾರದಿಂದ ನೇಮಕಗೊಂಡ ತೆರಿಗೆ ಸಂಗ್ರಹಕಾರರು ಗೇಣೀದಾರರು, ಸಣ್ಣ ಹಿಡುವಳಿದಾರರು, ಕೂಲಿ ಕಾರ್ಮಿಕರು, ಬಡ ರೈತರಿಂದ ತೆರಿಗೆಯನ್ನು ಸಂಗ್ರಹಿಸಿ ಅದನ್ನು ಸರ್ಕಾರಕ್ಕೆ ಪಾವತಿಸುತ್ತಿದ್ದರು. ತಮ್ಮ ಈ ಅಧಿಕಾರವನ್ನು ಬಳಸಿಕೊಂಡು ಕೂಲಿ ಕಾರ್ಮಿಕರನ್ನು ಶೋಷಿಸುತ್ತಿದ್ದರು. ಅವರೆಲ್ಲ ಮನೆಮಠಗಳನ್ನು ಕಳೆದುಕೊಂಡು ಬೀದಿಪಾಲಾಗುತ್ತಿದ್ದರು. ಈ “ಕೋಥಿ” ಪದ್ಧತಿಯ ವಿರುದ್ಧ ಮೊಟ್ಟಮೊದಲು ದನಿಯೆತ್ತಿದ್ದು ಅಂಬೇಡ್ಕರ್. 17,ಸೆಪ್ಟೆಂಬರ್ 1937ರಂದು ಬಾಂಬೆ ವಿಧಾನ ಪರಿಷತ್ತಿನಲ್ಲಿ ಈ ಕೋಥೀ ಪದ್ಧತಿಯನ್ನು ರದ್ದು ಪಡಿಸುವ ವಿಶೇಷ ಮಸೂದೆಯನ್ನು ಮಂಡಿಸಿದ್ದರು. ಮತ್ತು ಅದಕ್ಕೆ ಬಹುಮತ ದೊರಕಿಸಲೂ ಯಶಸ್ವಿಯಾದರು
(ಆಧಾರ : ಸಣ್ಣ ಹಿಡುವಳಿದಾರರು ಮತ್ತು ಪರಿಹಾರ ( 1917) ಸಂಪುಟ 1,2,3 , ಅಂತಸ್ತಿನ ಸ್ಥಾನಮಾನ ಮತ್ತು ಅಲ್ಪಸಂಖ್ಯಾತರು (1947) – ಬಿ.ಆರ್.ಅಂಬೇಡ್ಕರ್)

ಸಾರ್ವಜನಿಕ ಹಣಕಾಸಿನ ತೊಂದರೆಗಳು : ಅಂಬೇಡ್ಕರ್ ಚಿಂತನೆಗಳು

ಕೇಂದ್ರೀಕೃತ ಹಣಕಾಸಿನ ವ್ಯವಸ್ಥೆಯನ್ನು ಟೀಕಿಸಿದ ಅಂಬೇಡ್ಕರ್ 1833-1871ರ ವರೆಗಿನ ಸಾಮ್ರಾಜ್ಯಶಾಹಿ ಹಣಕಾಸು ಪದ್ಧತಿಯನ್ನು ಉದಾಹರಿಸುತ್ತಾರೆ. ಇಂಡಿಯಾದಲ್ಲಿ 1833ರಲ್ಲಿ ಕಲೋನಿಯಲ್ ಫೈನಾನ್ಸ್ ಪದ್ಧತಿ ಪ್ರಾರಂಭವಾಯಿತು. ಇದನ್ನು ವಿವರಿಸುತ್ತಾ ಅಂಬೇಡ್ಕರ್ ಅವರು ‘1858ರ ನಂತರದ ಬ್ರಿಟೀಷ್ ಆಡಳಿತದಲ್ಲಿ (ಈಸ್ಟ್ ಇಂಡಿಯಾ ಕಂಪನಿಯ ನಂತರ) ಕಲೋನಿಯಲ್ ಸರ್ಕಾರದ ಬಳಿ (ಕೇಂದ್ರ ಸರ್ಕಾರ) ಲಾ & ಆರ್ಡರ್ ಮತ್ತು ರಕ್ಷಣಾ ಇಲಾಖೆಯ ಸಂಪೂರ್ಣ ಜವಬ್ದಾರಿ ಮತ್ತು ಹಿಡಿತಗಳಿದ್ದರೆ ಪ್ರಾಂತೀಯ ಸರ್ಕಾರಗಳಿಗೆ ಕೇವಲ ಆಡಳಿತದ ಜವಬ್ದಾರಿ ಮಾತ್ರ ಕೊಡಲಾಗಿತ್ತು. ಪ್ರಾಂತೀಯ ಸರ್ಕಾರಗಳು ಮುಂಗಡಪತ್ರವನ್ನು ಸಿದ್ಧಪಡಿಸಿದರೆ ಕಲೋನಿಯಲ್ ಸರ್ಕಾರವು ಹಣಕಾಸಿನ ಹಂಚಿಕೆಯನ್ನು ನಿರ್ವಹಿಸುತ್ತಿತ್ತು.ಪ್ರಾಂತೀಯ ಸರ್ಕಾರಗಳಿಗೆ ಅಭಿವೃದ್ಧಿ, ಬದಲಾವಣೆ, ರಕ್ಷಣಾ ವ್ವವಸ್ಥೆ, ಕಾನೂನು ವ್ಯವಸ್ಥೆಗಳ ಮೇಲೆ ಯಾವುದೇ ಅಧಿಕಾರವಿರಲಿಲ್ಲ. ಆದರೆ ಕಲೋನಿಯಲ್ ಸರ್ಕಾರವು ಪ್ರಾಂತೀಯ ಸರ್ಕಾರಗಳಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಹೊಂದಿತ್ತು’ ಎಂದು ಗುರುತಿಸುತ್ತಾರೆ. 1871ರ ನಂತರ ಪ್ರಾಂತೀಯ ಸರ್ಕಾರಗಳಿಗೆ ಹಣಕಾಸಿನ ವಿನಿಮಯದ ಅಧಿಕಾರ ದೊರಕಿತು ಎಂದು ಅಭಿಪ್ರಾಯಪಡುತ್ತಾರೆ. ಆದರೆ ಈ ಕೇಂದ್ರೀಕೃತ ಹಣಕಾಸು ವ್ಯವಸ್ಥೆಯಿಂದ ವಿತ್ತೀಯ ಕೊರತೆ ಹೆಚ್ಚಾಗಿ ಆ ಕೊರತೆಯನ್ನು ತುಂಬಿಸಲು ತೆರಿಗೆ ಸಂಗ್ರಹಣೆ ಕಾರ್ಯವನ್ನು ತೀವ್ರಗೊಳಿಸಲಾಯಿತು. ಇದರ ದುಷ್ಪರಿಣಾಮಗಳು ಸಣ್ಣ ಹಿಡುವಳಿದಾರರು, ಕೂಲಿ ಕಾರ್ಮಿಕರ ಮೇಲೆ ಉಂಟಾಯಿತು ಎಂದು ಹೇಳುತ್ತಾರೆ. ಅಂಬೇಡ್ಕರ್ ಅವರ ಈ ಆರ್ಥಿಕ ಚಿಂತನೆಗಳು ಮುಂದೆ ಸ್ವಾತಂತ್ರೋತ್ತರ ಭಾರತದಲ್ಲಿ ಕೇಂದ್ರ – ರಾಜ್ಯ ಸರ್ಕಾರಗಳ ಸಂಬಂಧಗಳ ಕುರಿತಂತೆ ಹೊಸ ಸಂವಾದಗಳಿಗೆ ಬುನಾದಿಯಾಯ್ತು.

ತೆರಿಗೆ ನೀತಿಗಳು : ಅಂಬೇಡ್ಕರ್ ಚಿಂತನೆಗಳು

1936ರ ಪ್ರಾಂತೀಯ ಚುನಾವಣೆಯ ಸಂದರ್ಭದಲ್ಲಿ ಅಂಬೇಡ್ಕರ್ ಅವರು ತೆರಿಗೆ ನೀತಿಗಳನ್ನು ತಮ್ಮ ‘ಇಂಡಿಯನ್ ಲೇಬರ್ ಪಕ್ಷ’ದ ಮಾನಿಫೆಸ್ಟೋದಲ್ಲಿ ಅಳವಡಿಸಿದ್ದರು. 1938ರಲ್ಲಿ ಬಾಂಬೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ ಭೂ ಕಂದಾಯದ ತೆರಿಗೆಯ ಮೌಲ್ಯವನ್ನು ಹೆಚ್ಚಿಸಿರುವುದಕ್ಕೆ ಮತ್ತು ಶ್ರೀಮಂತರಿಗೆ ಹೆಚ್ಚಿನ ತೆರಿಗೆಯನ್ನು ವಿಧಿಸಲು ವಿಫಲವಾದ ಆಗಿನ ಬಾಂಬೆ ಸರ್ಕಾರವನ್ನು ಟೀಕಿಸಿದ್ದರು.

ಅಂಬೇಡ್ಕರ್ ಅವರ ಪ್ರಮುಖ ಚಿಂತನೆಗಳು:

  1. ವೈಯುಕ್ತಿಕ ತೆರಿಗೆಯ ಮಾನದಂಡವನ್ನು ಆ ವ್ಯಕ್ತಿಯ ತೆರಿಗೆಯನ್ನು ಪಾವತಿಸುವ ಸಾಮರ್ಥ್ಯದ ಮೇಲೆ ನಿರ್ಧರಿಸಬೇಕು ಹೊರತಾಗಿ ಆತನ ಆದಾಯದ ಮೇಲೆ ಅಲ್ಲ
  2. ತೆರಿಗೆ ನೀತಿ ಮತ್ತು ಮೌಲ್ಯಗಳು ಪ್ರಗತಿಪರವಾಗಿರಬೇಕು ಶ್ರೀಮಂತರಿಗೆ ಹೆಚ್ಚಿನ ತೆರಿಗೆಯನ್ನು ಬಡವರಿಗೆ ಕಡಿಮೆ ತೆರಿಗೆಯನ್ನು ವಿಧಿಸಬೇಕು
  3. ಒಂದು ಹಂತದ ಆದಾಯದವರೆಗೆ ತೆರಿಗೆ ವಿನಾಯ್ತಿಯನ್ನು ನಿಗದಿಗೊಳಿಸಬೇಕು
  4. ತೆರಿಗೆ ಪದ್ಧತಿಯು ಸಮಾನತೆಯನ್ನು ಸಾಧಿಸಬೇಕು ಹೊರತಾಗಿ ಅಸಮಾನತೆಯನ್ನು ಸೃಷ್ಟಿಸಬಾರದು
  5. ತೆರಿಗೆ ಪದ್ಧತಿಯು ಸಾಮಾನ್ಯ ಜನರ ಬದುಕಿನ ಗುಣಮಟ್ಟವನ್ನು ಕಳಪೆಗೊಳಿಸುವಂತಾಗಬಾರದು
  6. ಮಾರಾಟ ತೆರಿಗೆಯನ್ನು ಸಂಗ್ರಹಿಸುವ ಅಧಿಕಾರ ಪ್ರಾಂತೀಯ ಸರ್ಕಾರಗಳ ಬಳಿ ಇರಬೇಕು
  7. ಸಮಾಜದ ಅರ್ಥ ವ್ಯವಸ್ಥೆಯನ್ನು ಸಮತೋಲದಲ್ಲಿ ಕಾಪಾಡಿಕೊಳ್ಳುವುದು ಸರ್ಕಾರದ ಜವಬ್ದಾರಿ ಮತ್ತು ಅದರ ಹೊಣೆಯನ್ನು ಮಾರುಕಟ್ಟೆಯ ನೀತಿ ನಿಯಮಗಳಿಗೆ, ಖಾಸಗಿ ಬಂಡವಾಳಶಾಹಿಗಳಿಗೆ ಹಸ್ತಾಂತರಿಸಬಾರದು

ಕೈಗಾರಿಕೆಗಳು ಮತ್ತು ರಾಷ್ಟ್ರೀಕರಣ : ಅಂಬೇಡ್ಕರ್ ಚಿಂತನೆಗಳು

  1. ದೊಡ್ಡ ಮತ್ತು ಅತಿ ದೊಡ್ಡ ಕೈಗಾರಿಕೆಗಳು ಸರ್ಕಾರದ ಒಡೆತನದಲ್ಲಿರಬೇಕು
  2. ಗೃಹ ಕೈಗಾರಿಕೆಗಳು ಮತ್ತು ಸಣ್ಣ ಕೈಗಾರಿಕೆಗಳು ಖಾಸಗಿ ಒಡೆತನದಲ್ಲಿರಬೇಕು
  3. ಜೀವ ವಿಮೆ,ಸಾರಿಗೆ ವ್ಯವಸ್ಥೆ ರಾಷ್ಟ್ರೀಕರಣಗೊಳ್ಳಬೇಕು
  4. ಕಾರ್ಮಿಕರು ತಮ್ಮ ಹಕ್ಕುಗಳನ್ನು ಕಾಪಾಡಲು,ಅದಕ್ಕೆ ಧಕ್ಕೆ ಒದಗಿದರೆ ಪ್ರತಿಭಟಿಸಲು ಮುಷ್ಕರಗಳಿಗೆ ಮುಕ್ತ ಅವಕಾಶಗಳಿಬೇಕು
  5. ಈ ಎಲ್ಲಾ ಹಕ್ಕುಗಳು ಮತ್ತು ಅವಕಾಶಗಳು ಸರ್ಕಾರಿ ನೀತಿಗಳ Directive Principles ನ ಅಡಿಯಲ್ಲಿ ಸೇರಿಸಬೇಕು
  6. ಸಾಮಾಜಿಕ ನ್ಯಾಯದ ತತ್ವಕ್ಕೆ ಬದ್ಧವಾದಾಗ ಮಾತ್ರ Industrial Peace ಸಾಧಿಸಬಹುದು

ಅಂಬೇಡ್ಕರ್ ಅವರ ಮೇಲಿನ ಚಿಂತನೆಗಳು ಫೇಬಿಯನ್ ಸೋಷಿಯಲಿಸ್ಟ್ ಮಾದರಿಯಾಗಿವೆ. State Socialism ಸಿದ್ಧಾಂತವನ್ನು ಪ್ರತಿಪಾದಿಸುತ್ತವೆ.

ಅಂಬೇಡ್ಕರ್ ಅವರು ಇಂಡಿಯನ್ ಎಕಾನಮಿಯನ್ನು ಹಿಂದೂ ಪ್ರಭಾವಿತ ಎಕಾನಮಿ ಎಂದು ತಿರಸ್ಕರಿಸಿದ್ದರು. ಅದರ ಎಲ್ಲಾ ಲೋಪದೋಷಗಳನ್ನು ವಿವರಿಸಿದ್ದರು. ಜಾತಿ ಪದ್ಧತಿಯು ಕೇವಲ ಅಂತಸ್ಥಿನ, ಸ್ಥಾನಮಾನದ ನಡುವಿನ ಅಂತರವಲ್ಲ ಅದು ಕೂಲಿ ಕಾರ್ಮಿಕರ ನಡುವಿನ ಅಂತರವೂ ಹೌದು. ಇದು ಆರ್ಥಿಕ ಅಭಿವೃದ್ಧಿಗೆ ದೊಡ್ಡ ಅಡಚಣೆ. ಇದು ಪರಿಸ್ಥಿತಿಯ ದುರ್ಲಾಭ ಪಡೆದುಕೊಳ್ಳುವ ನೀತಿ ಎಂದು ಹೇಳಿದ್ದರು.

ಇಂದು ಮತೀಯವಾದಿ ಸಂಘಟನೆ ಆರೆಸ್ಸಸ್ ಅಂಬೇಡ್ಕರ್ ಅವರನ್ನು Appropriation ಮಾಡಿಕೊಳ್ಳುತ್ತಿದೆ. ಬಂಡವಾಳಶಾಹಿಗಳ ವಕ್ತಾರ ಮತ್ತು ಮುಕ್ತ ಮಾರುಕಟ್ಟೆಯ ಬೆಂಬಲಿಗರಾದ ಪ್ರಧಾನಿ ನರೇಂದ್ರ ಮೋದಿ ಅಂಬೇಡ್ಕರ್ ಅವರನ್ನು ರಾಜಕೀಯ ಅಸ್ಪøಶ್ಯತೆಯಂದ ಬಿಡುಗಡೆಗೊಳಿಸುತ್ತೇನೆ, ಅವರ ಹಾದಿಯಲ್ಲಿ ಸಾಗುತ್ತೇನೆ ಎಂದು ಭಾಷಣ ಮಾಡಿದ್ದಾರೆ. ಆದರೆ ಅಂಬೇಡ್ಕರ್ ಅವರು ಮುಕ್ತ ಮಾರುಕಟ್ಟೆ ಮಾದರಿಯ ಆರ್ಥಿಕ ವ್ಯವಸ್ಥೆಗೆ ವಿರೋಧಿಯಾಗಿದ್ದರು, ಫೇಬಿಯನ್ ಮಾದರಿಯ ಸೋಷಿಯಲಿಸಂನಲ್ಲಿ ನಂಬಿಕೆ ಇಟ್ಟಿದ್ದರು ಮತ್ತು State Socialism ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದರು. ಈ ಮೋದಿ ಸರ್ಕಾರದ ಭೂಸ್ವಾಧೀನ ಮಸೂದೆ 2014, ಅಂಬೇಡ್ಕರ್ ಅವರ ಭೂಸುಧಾರಣೆ ಮತ್ತು ಭೂ ರಾಷ್ಟ್ರೀಕರಣ ತತ್ವಕ್ಕೆ ವಿರುದ್ಧ ದಿಕ್ಕಿನಲ್ಲಿದೆ. ಮೋದಿ ಸರ್ಕಾರದ ಬಂಡವಾಳಶಾಹಿಪರವಾದ ಸಂಪೂರ್ಣ ಖಾಸಗೀಕರಣದ ಕೈಗಾರಿಕೆ ನೀತಿಗೂ ಅಂಬೇಡ್ಕರ್ ಅವರ ಫೇಬಿಯನ್ ಸೋಷಿಯಲಿಸಂ ಮಾದರಿಯ ಕೈಗಾರೀಕರಣ ಸಿದ್ಧಾಂತಕ್ಕೂ ಸ್ವಲ್ಪವೂ ಸಾಮ್ಯತೆ ಇಲ್ಲ. ಸಂಘ ಪರಿವಾರದ ಸನಾತನವಾದ ಮತ್ತು ಮುಕ್ತ ಮಾರುಕಟ್ಟೆಯ ಆರ್ಥಿಕ ನೀತಿಗಳಿಗೂ ಅಂಬೇಡ್ಕರ್ ಅವರ State Socialism ಸಿದ್ಧಾಂತದ ಆರ್ಥಿಕ ನೀತಿಗೂ ಯಾವುದೇ ಸಾಮ್ಯತೆ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಸಂಭ್ರಮದ ಬದಲಿಗೆ, ಅವಮಾನ ಕರುಣಿಸುವ ಜಾತ್ರೆಗಳು

 – ಜೀವಿ
ನಾನಾಗ ಹೈಸ್ಕೂಲ್ ವಿದ್ಯಾರ್ಥಿ, ಹಬ್ಬ-ಜಾತ್ರೆಯಲ್ಲಿ ಅನ್ನ ಮತ್ತು ದೋಸೆ ಕಾಣುತ್ತಿದ್ದ ಕಾರಣ ಊರಿನಲ್ಲಿ ಸಾವಾದರೂ ಮನಸಲ್ಲೆ ಸಂಭ್ರಮಿಸಿ ೧೧ ದಿನ ಏಣಿಸಿದ್ದುಂಟು. ಯಾಕೆಂದರೆ ೧೧ ದಿನಕ್ಕೆ ಸರಿಯಾಗಿ ತಿಥಿ ಕಾರ್ಯ ಏರ್ಪಡಿಸುವ ಗ್ಯಾರಂಟಿ ಇತ್ತು. ಅಂದಾದರೂ ಅನ್ನ ಕಾಣಬಹುದು ಎಂಬುದು ನನ್ನ ಲೆಕ್ಕಾಚಾರ. ಮಳೆ ಮುಗಿಲು ಸೇರಿದ್ದ ಕಾರಣಕ್ಕೆ ಆ ವರ್ಷ ರಾಗಿ ಬೆಳೆ ಕೂಡ ಕೈಗೂಡಿರtimthumbಲಿಲ್ಲ. ಹಾಗಾಗಿ ಅರೆಹೊಟ್ಟೆಯಲ್ಲೆ ಜೀವನ ಮುಂದುವರಿದಿತ್ತು. ‘ಕಾಲಾಡಿ ಹೊರಟರೆ ಕನ್ನೆ ಸೊಪ್ಪಿಗೆ ಬರವೇ?’ ಎಂಬುದು ಅವ್ವ ಆಗಾಗ ಹೇಳುತ್ತಿದ್ದ ಮಾತು. ದಿನವಿಡೀ ಸುತ್ತಾಡಿ ಕನ್ನೆ ಸೊಪ್ಪು ಸೆರಗು ತುಂಬಿಸಿಕೊಂಡು ಬಂದು ಬೇಸಿದರೆ ಬೊಗಸೆ ಸೊಪ್ಪು ಹಿಡಿಯಷ್ಟಾಗುತ್ತಿತ್ತು. ಅದನ್ನೆ ತಿಂದು ನೀರು ಕುಡಿದು ಶಾಲೆಗೆ ಹೋಗುತ್ತಿದ್ದೆ.

ಮಾರ್ಚ್ಗೆ ಮುನ್ನವೇ ಬಿದ್ದ ಮಳೆಯಿಂದ ಅಣ್ಣ ಮತ್ತೊಂದು ಹೊಸ ಕನಸು ಹೊತ್ತು ನೇಗಿಲು ಹಿಡಿದು ಹೊಲಕ್ಕೆ ಹೋಗಿದ್ದ. ಶಾಲೆಗೆ ಹೋಗುವ ದಾರಿಯಲ್ಲಿ ಅವ್ವ ಬೇಸಿಕೊಟ್ಟ ಕನ್ನೆಸೊಪ್ಪಿನಲ್ಲಿ ನನ್ನ ಪಾಲು ಅಲ್ಲೆ ತಿಂದು ಅಣ್ಣನಿಗೆ ತಲುಪಿಸಿ ಹೋಗುತ್ತಿದ್ದೆ. ಮುಂದಿನ ವರ್ಷ ನಾನು ಕಾಲೇಜು ಮೆಟ್ಟಿಲು ಹತ್ತೇ ತೀರುತ್ತೇನೆ ಎಂಬ ಅಚಲ ನಂಬಿಕೆ ಅಣ್ಣನಿಗಿತ್ತು. ಹಾಗಾಗಿ ನನ್ನ ಮೇಲೆ ಇನ್ನಿಲ್ಲದ ಕಾಳಜಿ. ಊರಿನ ಹೊಲಗೇರಿಯಲ್ಲಿ ಕಾಲೇಜು ಮೆಟ್ಟಿಲೇರುವ ಮೊದಲ ವ್ಯಕ್ತಿ ನಾನಾಗಿದ್ದೆ. ಅವ್ವ ಕೊಟ್ಟ ಸೊಪ್ಪಿನಲ್ಲಿ ಒಂದೆರಡು ತುತ್ತು ಮಾತ್ರ ಎತ್ತಿಕೊಳ್ಳುತ್ತಿದ್ದ ಅಣ್ಣ, ಉಳಿದಿದ್ದನ್ನು ನನಗೇ ತಿನ್ನಿಸಿ ಶಾಲೆಗೆ ಕಳುಹಿಸುತ್ತಿದ್ದ. ಹೊಟ್ಟೆ ಹಸಿವಾದರೆ ವಿದ್ಯೆ ತಲೆಗೆ ಹತ್ತುವುದಿಲ್ಲ. ನೀನು ಕಾಲೇಜು ಮೆಟ್ಟಿಲೇರಿ ಸರ್ಕಾರಿ ನೌಕರಿ ಹಿಡಿದರೆ ಮುಂದೆ ಎಲ್ಲರೂ ಹೊಟ್ಟೆ ತುಂಬ ಊಟ ಮಾಡಬಹುದು ಎಂಬುದು ಅಣ್ಣನ ವಾದ. ಹಾಗೆ ದಿನ ಕಳೆದು ಕಾಲೇಜಿಗೆ ಹೋಗುವ ಕನಸೂ ಕೈಗೂಡಿತು.

ಊರಿನಲ್ಲಿ ಕುಳುವಾಡಿಕೆ ಜೀವಂತವಾಗಿತ್ತು. ತುತ್ತಿನ ಚೀಲ ತುಂಬಿಸಿಕೊಳ್ಳುವ ಜೊತೆಗೆ ಊರಿನ ಕೆಲಸ ಮಾಡಲೇಬೇಕಿತ್ತು. ಮೇಲ್ವರ್ಗದ ಆಣತಿ ಮೀರುವಂತಿರಲಿಲ್ಲ. ಹಬ್ಬ-ಜಾತ್ರೆ ನೆನದು ತಿಂಗಳಿಗೆ ಮೊದಲೇ ಸಂಭ್ರಮಿಸುತ್ತಿದ್ದ ನನಗೆ ಆ ವರ್ಷದ ಜಾತ್ರೆ ಅಸಹ್ಯ ಎನಿಸಿತು. ಏಳು ಹಳ್ಳಿ ಸೇರಿ ಮಾಡುವ ಜಾತ್ರೆಗೆ ನನ್ನೂರಿನಿಂದ ಸಿಂಗರಿಸಿದ ಬಂಡಿಯೊಂದಿಗೆ ಹೋಗಿ ಉಡಸಲಮ್ಮನ ಗುಡಿ ಮುಂದಿನ ಕೆಂಡದ ರಾಶಿಯಲ್ಲಿ ಕಾಲಾಡಿ ಬರುವುದು ಹಿಂದಿನಿಂದ ನಡೆದು ಬಂದಿರುವ ಆಚರಣೆ. ಹೊರಡುವ ಮುನ್ನ ಊರ ಮುಂದಿನ ಗುಡಿಯ ಎದುರು ಬಂಡಿಗೆ ಪೂಜೆ-ಪುನಸ್ಕಾರ ಮಾಡಿ ಹೊರಡಲಾಗುತ್ತದೆ. ಆ ಸಂದರ್ಭದಲ್ಲಿ ಬಂಡಿಗೆ ಹೋತವನ್ನು ಬಲಿಕೊಡುವುದು ಸಂಪ್ರದಾಯ. ಪೂಜೆ-ಪುನಸ್ಕಾರವೆಲ್ಲ ಮೇಲ್ವರ್ಗಕ್ಕೆ ಬಿಟ್ಟದ್ದು. ಹೋತವನ್ನು ಕಡಿಯುವ ಕೆಲಸ ದಲಿತದ್ದು. ಜಾತ್ರೆ ಸಂಭ್ರಮದಲ್ಲಿ ಎಲ್ಲರೂ ತೇಲಿದ್ದರು. ಹೋತ ಬಲಿಯಾಗುವುದನ್ನು ನೋಡಲು ಎಲ್ಲರೂ ಸೇರಿದ್ದರು. ಒಂದೇ ಹೊಡೆತಕ್ಕೆ ಹೋತನ ರುಂಡ-ಮುಂಡ ಬೇರೆಯಾಗಬೇಕು. ಅದು ಸಾಧ್ಯವಾಗದಿದ್ದರೆ ಮೇಲ್ವರ್ಗದವರ ಕಾಲು ನನ್ನ ದೊಡ್ಡಪ್ಪ-ಚಿಕ್ಕಪ್ಪಂದಿರ ಎದೆಗೆ ಜಾಡಿಸುತ್ತಿದ್ದವು. ಹಾಗಾಗಿ ಹೋತನ ಕಡಿಯಲು ಎಲ್ಲರಿಗೂ ಹಿಂಜರಿಕೆ ಇತ್ತು. ಆದರೆ ಯಾರದರೊಬ್ಬರು ಕಡಿಯಲೇ ಬೇಕಿತ್ತು. ಎಲ್ಲರೂ ಸೇರಿ ಮೇಲ್ನೋಟಕ್ಕೆ ಬಲಶಾಲಿಯಂತೆ ಕಂಡ ಕರಿಯನಿಗೆ ಆ ಕೆಲಸ ನಿಯೋಜಿಸಿದರು. ಒಲ್ಲದ ಮನಸ್ಸಿನಲ್ಲೆ ಕರಿಯ ಒಪ್ಪಿಕೊಂಡ.

ಪೂಜೆ ಪುನಸ್ಕಾರವೆಲ್ಲ ಮುಗಿದು ಹೋತನನ್ನು ಬಲಿಪೀಠಕ್ಕೆ ತಂದು ನಿಲ್ಲಿಸಿದರು. ಅಲ್ಲೆ ಇದ್ದ ಕಲ್ಲೊಂದಕ್ಕೆ ಕತ್ತಿ ಮಸೆದು ತಂದ ಕರಿಯ, ಹೋತನ ಮುಂದೆ ಬಂದು ನಿಂತ. ಮಾಂಸಹಾರಿಗಳಲ್ಲದ ಮೇಲ್ವರ್ಗದವರು ಪಂಚೆ ಮೇಲೆತ್ತಿ ಕಟ್ಟಿ ನಿಂತರು. ಕರಿಯನ ಬಲದ ಮೇಲೆ ನಂಬಿಕೆ ಇದ್ದರೂ ಕತ್ತಿಯ ಮೊಣಚು ಸರಿಯಾಗಿ ಕುತ್ತಿಗೆ ತುಂಡು ಮಾಡದಿದ್ದರೆ ಅವನಿಗೆ ಆಗಲಿರುವ ಶಾಸ್ತಿಯನ್ನು ಮನದಲ್ಲೆ ನೆನಪಿಸಿಕೊಂಡ ದಲಿತರು ಜೀವ ಬಿಗಿ ಹಿಡಿದು ನಿಂತಿದ್ದರು. ಮನಸಲ್ಲೇ ಹತ್ತಾರು ದೇವರು ನೆನದ ಕರಿಯ ತನ್ನ ಬಲವನ್ನೆಲ್ಲ ಒಂದು ಮಾಡಿಕೊಂಡು ಹೋತದ ಕುತ್ತಿಗೆಯ ಮೇಲೆ ಏಟು ಕೊಟ್ಟೇಬಿಟ್ಟ. ಮುಂದಿನ ಸಾಲಿನಲ್ಲೆ ನಿಂತಿದ್ದ ನಾನು ಕೂಡ ಒಂದೇ ಏಟಿಗೆ ಕುತ್ತಿಗೆ ತುಂಡಾಗಲಿ ಎಂದು ದೇವರಿಗೆ ಕೈಮುಗಿದು ಕಣ್ಮುಚ್ಚಿಕೊಂಡೆ. ಕಣ್ಬಿಟ್ಟು ನೋಡಿದರೆ ಎಲ್ಲವೂ ಉಲ್ಟಾ ಹೊಡೆದಿತ್ತು. ಒಂದೇ ಏಟಿಗೆ ಹೋತದ ರುಂಡ-ಮುಂಡ ಬೇರೆಯಾಗಲಿಲ್ಲ. ಅದಕ್ಕೆಂದೆ ಕಾದು ನಿಂತಿದ್ದ ಮೇಲ್ವರ್ಗದ ನಾಲ್ಕೈದು ಮಂದಿ ಕರಿಯನ ಎದೆ ಮತ್ತು ಕುಂಡಿಗೆ ಜಾಡಿಸಿ ಒದೆಯುತ್ತಿದ್ದರು. ಒದೆತಕ್ಕೆ ಸಿಲುಕಿ ನೆಲದಲ್ಲಿ ಬಿದ್ದು ಒದ್ದಾಡುತ್ತಿದ್ದ ಕರಿಯ, ಹೋತದ ರಕ್ತದೊಂದಿಗೆ ಬೆರೆತು ಹೋಗಿದ್ದ. ನಾಲ್ಕೈದು ಮಂದಿ ಒದೆಯುತ್ತಿದ್ದರೂ ತುಂಡಾಗದೆ ಉಳಿದಿದ್ದ ಭಾಗವನ್ನು ಬೇರ್ಪಡಿಸಲು ಹರಸಾಹಸ ಮುಂದುವರಿಸಿದ್ದ. ‘ನನ್ನ ಮಕ್ಳಾ, ಮಂಕ್ರಿ ಬಾಡ್ ತಿಂತೀರಿ ಒಂದೇ ಏಟಿbeaten-to-deathಗೆ ಹೋತನ್ ಕತ್ತು ಕತ್ರಸಕ್ಕೆ ಆಗಲ್ವಾ? ಒದಿರ್ಲಾ.. ಹಾಕ್ಲಾ ಹೊಲಿ ನನ್ ಮಗಂಗೆ’ ಎಂದು ಸುತ್ತ ನಿಂತಿದ್ದ ಮೇಲ್ವರ್ಗದವರು ಒದೆಯುತ್ತಿದ್ದವರಿಗೆ ಪ್ರಚೋದನೆ ನೀಡಿದರು. ಹೇಗೋ ಹೋತನ ತಲೆ ಮತ್ತು ದೇಹ ಬೇರಾದವು. ನಂತರ ಒದೆಯುವುದು ನಿಂತಿತು. ಮೇಲೆದ್ದ ಕರಿಯನ ಮುಖದಲ್ಲಿ ರಕ್ತ ಅಂಟಿಕೊಂಡಿತ್ತು. ಒಂದು ತಿಂಗಳ ಹಿಂದಷ್ಟೆ ಕರಿಯ ಪಕ್ಕದೂರಿನ ಹೆಣ್ಣು ತಂದು ಮದುವೆಯಾಗಿದ್ದ. ಆಕೆ ಸೇರಿದಂತೆ ಅವರ ಸಂಬಂಧಿಕರು ಅಲ್ಲೆ ಇದ್ದರು. ತನ್ನ ಗಂಡನಿಗೆ ಆದ ಅವಮಾನ ತಡೆಯಲಾರದೆ ಅಕೆ ಕಣ್ಣೀರಿಟ್ಟು ಮನೆಯತ್ತ ಓಡಿದಳು. ಎಲ್ಲರೂ ಸಂಭ್ರದಿಂದ ಜಾತ್ರೆಯತ್ತ ಹೆಜ್ಜೆ ಹಾಕಿದರೆ, ಕರಿಯ ಅವಮಾನ ಸಹಿಸಲು ಸಾಧ್ಯವಾಗದೆ ಜಾತ್ರೆ ಕಡೆ ಮುಖ ಮಾಡಲಿಲ್ಲ.

ಈ ರೀತಿ ಅವಮಾನ ನನ್ನವರಿಗೆ ಮಾಮೂಲಾಗಿತ್ತು. ಆದರೆ ಅದೇಕೋ ಕರಿಯನ ಎದೆ ಮೇಲೆ ಕಾಲಿಟ್ಟ ಮೇಲ್ವರ್ಗದ ದಾಷ್ಟ್ಯ ನನ್ನ ಮನಸ್ಸನ್ನೂ ತೀವ್ರವಾಗಿ ಘಾಸಿಗೊಳಿಸಿತು. ಮುಂದಿನ ವರ್ಷ ಇದಕ್ಕೊಂದು ಇತಿಶ್ರೀ ಹಾಡಲೇಬೇಕೆಂದು ನಿರ್ಧರಿಸಿದೆ. ದಿನ ಕಳೆದು ಜಾತ್ರೆ ದಿನ ಮತ್ತೊಮ್ಮೆ ಬಂದೆ ಬಿಟ್ಟಿತು. ಆ ದಿನ ಹೋತವನ್ನು ಕಡಿಯಲು ಕರಿಯ ಒಪ್ಪಲಿಲ್ಲ. ದಲಿತರಲ್ಲಿ ಹಿರಿಯರೆಲ್ಲ ಸೇರಿ ಒಬ್ಬರನ್ನು ಆ ಕೆಲಸಕ್ಕೆ ನೇಮಿಸಬೇಕಿತ್ತು. ಮನಸಲ್ಲೆ ಒಂದು ನಿರ್ಣಯ ಕೈಗೊಂಡ ನಾನು, ಕತ್ತಿ ಎತ್ತಿಕೊಂಡೆ. ಆದರೆ ಅದಕ್ಕೆ ಅವ್ವ-ಅಪ್ಪ ಸೇರಿ ಯಾರೊಬ್ಬರೂ ಒಪ್ಪಲಿಲ್ಲ. ಕಾಲೇಜಿಗೆ ಹೋಗುವ ಹುಡುಗ ಮೇಲ್ವರ್ಗದವರು ಒದೆಯುವುದನ್ನು ನಾವು ನೋಡಲಾರೆವು ಎಂದರು. ಆದರೆ ಇಲ್ಲ ಈ ಬಾರಿ ನನಗೆ ಅವಕಾಶ ಕೊಡಿ ಎಂದು ಬೇಡಿಕೊಂಡೆ. ಆಗಲಿ ಎಂದು ಎಲ್ಲರೂ ಒಪ್ಪಿಕೊಂಡರು.

ಕತ್ತಿ ಮಸೆದು ಹೋತನ ಮುಂದೆ ನಿಂತು ಯಾವ ದೇವರನ್ನು ಬೇಡದೆ ಮನದಲ್ಲೆ ಒಂದು ನಿರ್ಧಾರ ಮಾಡಿಕೊಂಡೆ. ಮೇಲ್ವರ್ಗದವರು ನನ್ನ ಪಕ್ಕಕ್ಕೆ ಬಂದು ನಿಂತು ಪಂಚೆ ಮೇಲೆತ್ತಿ ಕಟ್ಟಿಕೊಂಡರು. ಒಂದೇ ಏಟಿಗೆ ಹೋತ ಬಲಿಯಾಗದಿದ್ದರೆ ಕತ್ತಿಯನ್ನು ನನ್ನ ಮೇಲೆ ಕಾಲೆತ್ತಿದವರತ್ತ ತಿರಿಗಿಸಲು ಮನಸನ್ನು ಸಜ್ಜು ಮಾಡಿಕೊಂಡೆ. ನಂತರ ಆಗುವ ಪರಿಣಾಮ ಗೊತ್ತಿದ್ದರೂ ಮನಸ್ಸನ್ನು ಗಟ್ಟಿ ಮಾಡಿಕೊಂಡೆ. ಕತ್ತಿಯನ್ನು ಮೇಲಿತ್ತಿ ಹೋತನ ಕುತ್ತಿಗೆಗೆ ಕೊಟ್ಟೆ. ಅದ್ಯಾವ ದುರಾದೃಷ್ಟವೋ ಒಂದೇ ಏಟಿಗೆ ರುಂಡ-ಮುಂಡ ಬೇರಾತು. ನಾನು ಮನದಲ್ಲಿ ಮಾಡಿಕೊಂಡಿದ್ದ ನಿರ್ಣಯವನ್ನು ನಂತರ ಪ್ರಕಟಿಸಿದೆ. ನಿಮ್ಮ ದರ್ಪದ ಕಾಲುಗಳನ್ನು ನನ್ನವರ ಮೇಲೆತ್ತಿದರೆ ಕತ್ತಿ ಏಟು ಬೀಳಲಿವೆ ಎಂದು ಹೇಳಿದೆ. ಈಗಲೂ ಹೋತವನ್ನು ಕಡಿದು ಬಂಡಿ ಮುನ್ನಡೆಸುವ ಪದ್ದತಿ ಇದೆ. ಆದರೆ ಅಂದಿನಿಂದ ನನ್ನವರ ಮೇಲೆ ಕಾಲೆತ್ತುವ ದುಸ್ಸಾಹಸ ಮಾಡಿಲ್ಲ.