ಸಂಭ್ರಮದ ಬದಲಿಗೆ, ಅವಮಾನ ಕರುಣಿಸುವ ಜಾತ್ರೆಗಳು

 – ಜೀವಿ
ನಾನಾಗ ಹೈಸ್ಕೂಲ್ ವಿದ್ಯಾರ್ಥಿ, ಹಬ್ಬ-ಜಾತ್ರೆಯಲ್ಲಿ ಅನ್ನ ಮತ್ತು ದೋಸೆ ಕಾಣುತ್ತಿದ್ದ ಕಾರಣ ಊರಿನಲ್ಲಿ ಸಾವಾದರೂ ಮನಸಲ್ಲೆ ಸಂಭ್ರಮಿಸಿ ೧೧ ದಿನ ಏಣಿಸಿದ್ದುಂಟು. ಯಾಕೆಂದರೆ ೧೧ ದಿನಕ್ಕೆ ಸರಿಯಾಗಿ ತಿಥಿ ಕಾರ್ಯ ಏರ್ಪಡಿಸುವ ಗ್ಯಾರಂಟಿ ಇತ್ತು. ಅಂದಾದರೂ ಅನ್ನ ಕಾಣಬಹುದು ಎಂಬುದು ನನ್ನ ಲೆಕ್ಕಾಚಾರ. ಮಳೆ ಮುಗಿಲು ಸೇರಿದ್ದ ಕಾರಣಕ್ಕೆ ಆ ವರ್ಷ ರಾಗಿ ಬೆಳೆ ಕೂಡ ಕೈಗೂಡಿರtimthumbಲಿಲ್ಲ. ಹಾಗಾಗಿ ಅರೆಹೊಟ್ಟೆಯಲ್ಲೆ ಜೀವನ ಮುಂದುವರಿದಿತ್ತು. ‘ಕಾಲಾಡಿ ಹೊರಟರೆ ಕನ್ನೆ ಸೊಪ್ಪಿಗೆ ಬರವೇ?’ ಎಂಬುದು ಅವ್ವ ಆಗಾಗ ಹೇಳುತ್ತಿದ್ದ ಮಾತು. ದಿನವಿಡೀ ಸುತ್ತಾಡಿ ಕನ್ನೆ ಸೊಪ್ಪು ಸೆರಗು ತುಂಬಿಸಿಕೊಂಡು ಬಂದು ಬೇಸಿದರೆ ಬೊಗಸೆ ಸೊಪ್ಪು ಹಿಡಿಯಷ್ಟಾಗುತ್ತಿತ್ತು. ಅದನ್ನೆ ತಿಂದು ನೀರು ಕುಡಿದು ಶಾಲೆಗೆ ಹೋಗುತ್ತಿದ್ದೆ.

ಮಾರ್ಚ್ಗೆ ಮುನ್ನವೇ ಬಿದ್ದ ಮಳೆಯಿಂದ ಅಣ್ಣ ಮತ್ತೊಂದು ಹೊಸ ಕನಸು ಹೊತ್ತು ನೇಗಿಲು ಹಿಡಿದು ಹೊಲಕ್ಕೆ ಹೋಗಿದ್ದ. ಶಾಲೆಗೆ ಹೋಗುವ ದಾರಿಯಲ್ಲಿ ಅವ್ವ ಬೇಸಿಕೊಟ್ಟ ಕನ್ನೆಸೊಪ್ಪಿನಲ್ಲಿ ನನ್ನ ಪಾಲು ಅಲ್ಲೆ ತಿಂದು ಅಣ್ಣನಿಗೆ ತಲುಪಿಸಿ ಹೋಗುತ್ತಿದ್ದೆ. ಮುಂದಿನ ವರ್ಷ ನಾನು ಕಾಲೇಜು ಮೆಟ್ಟಿಲು ಹತ್ತೇ ತೀರುತ್ತೇನೆ ಎಂಬ ಅಚಲ ನಂಬಿಕೆ ಅಣ್ಣನಿಗಿತ್ತು. ಹಾಗಾಗಿ ನನ್ನ ಮೇಲೆ ಇನ್ನಿಲ್ಲದ ಕಾಳಜಿ. ಊರಿನ ಹೊಲಗೇರಿಯಲ್ಲಿ ಕಾಲೇಜು ಮೆಟ್ಟಿಲೇರುವ ಮೊದಲ ವ್ಯಕ್ತಿ ನಾನಾಗಿದ್ದೆ. ಅವ್ವ ಕೊಟ್ಟ ಸೊಪ್ಪಿನಲ್ಲಿ ಒಂದೆರಡು ತುತ್ತು ಮಾತ್ರ ಎತ್ತಿಕೊಳ್ಳುತ್ತಿದ್ದ ಅಣ್ಣ, ಉಳಿದಿದ್ದನ್ನು ನನಗೇ ತಿನ್ನಿಸಿ ಶಾಲೆಗೆ ಕಳುಹಿಸುತ್ತಿದ್ದ. ಹೊಟ್ಟೆ ಹಸಿವಾದರೆ ವಿದ್ಯೆ ತಲೆಗೆ ಹತ್ತುವುದಿಲ್ಲ. ನೀನು ಕಾಲೇಜು ಮೆಟ್ಟಿಲೇರಿ ಸರ್ಕಾರಿ ನೌಕರಿ ಹಿಡಿದರೆ ಮುಂದೆ ಎಲ್ಲರೂ ಹೊಟ್ಟೆ ತುಂಬ ಊಟ ಮಾಡಬಹುದು ಎಂಬುದು ಅಣ್ಣನ ವಾದ. ಹಾಗೆ ದಿನ ಕಳೆದು ಕಾಲೇಜಿಗೆ ಹೋಗುವ ಕನಸೂ ಕೈಗೂಡಿತು.

ಊರಿನಲ್ಲಿ ಕುಳುವಾಡಿಕೆ ಜೀವಂತವಾಗಿತ್ತು. ತುತ್ತಿನ ಚೀಲ ತುಂಬಿಸಿಕೊಳ್ಳುವ ಜೊತೆಗೆ ಊರಿನ ಕೆಲಸ ಮಾಡಲೇಬೇಕಿತ್ತು. ಮೇಲ್ವರ್ಗದ ಆಣತಿ ಮೀರುವಂತಿರಲಿಲ್ಲ. ಹಬ್ಬ-ಜಾತ್ರೆ ನೆನದು ತಿಂಗಳಿಗೆ ಮೊದಲೇ ಸಂಭ್ರಮಿಸುತ್ತಿದ್ದ ನನಗೆ ಆ ವರ್ಷದ ಜಾತ್ರೆ ಅಸಹ್ಯ ಎನಿಸಿತು. ಏಳು ಹಳ್ಳಿ ಸೇರಿ ಮಾಡುವ ಜಾತ್ರೆಗೆ ನನ್ನೂರಿನಿಂದ ಸಿಂಗರಿಸಿದ ಬಂಡಿಯೊಂದಿಗೆ ಹೋಗಿ ಉಡಸಲಮ್ಮನ ಗುಡಿ ಮುಂದಿನ ಕೆಂಡದ ರಾಶಿಯಲ್ಲಿ ಕಾಲಾಡಿ ಬರುವುದು ಹಿಂದಿನಿಂದ ನಡೆದು ಬಂದಿರುವ ಆಚರಣೆ. ಹೊರಡುವ ಮುನ್ನ ಊರ ಮುಂದಿನ ಗುಡಿಯ ಎದುರು ಬಂಡಿಗೆ ಪೂಜೆ-ಪುನಸ್ಕಾರ ಮಾಡಿ ಹೊರಡಲಾಗುತ್ತದೆ. ಆ ಸಂದರ್ಭದಲ್ಲಿ ಬಂಡಿಗೆ ಹೋತವನ್ನು ಬಲಿಕೊಡುವುದು ಸಂಪ್ರದಾಯ. ಪೂಜೆ-ಪುನಸ್ಕಾರವೆಲ್ಲ ಮೇಲ್ವರ್ಗಕ್ಕೆ ಬಿಟ್ಟದ್ದು. ಹೋತವನ್ನು ಕಡಿಯುವ ಕೆಲಸ ದಲಿತದ್ದು. ಜಾತ್ರೆ ಸಂಭ್ರಮದಲ್ಲಿ ಎಲ್ಲರೂ ತೇಲಿದ್ದರು. ಹೋತ ಬಲಿಯಾಗುವುದನ್ನು ನೋಡಲು ಎಲ್ಲರೂ ಸೇರಿದ್ದರು. ಒಂದೇ ಹೊಡೆತಕ್ಕೆ ಹೋತನ ರುಂಡ-ಮುಂಡ ಬೇರೆಯಾಗಬೇಕು. ಅದು ಸಾಧ್ಯವಾಗದಿದ್ದರೆ ಮೇಲ್ವರ್ಗದವರ ಕಾಲು ನನ್ನ ದೊಡ್ಡಪ್ಪ-ಚಿಕ್ಕಪ್ಪಂದಿರ ಎದೆಗೆ ಜಾಡಿಸುತ್ತಿದ್ದವು. ಹಾಗಾಗಿ ಹೋತನ ಕಡಿಯಲು ಎಲ್ಲರಿಗೂ ಹಿಂಜರಿಕೆ ಇತ್ತು. ಆದರೆ ಯಾರದರೊಬ್ಬರು ಕಡಿಯಲೇ ಬೇಕಿತ್ತು. ಎಲ್ಲರೂ ಸೇರಿ ಮೇಲ್ನೋಟಕ್ಕೆ ಬಲಶಾಲಿಯಂತೆ ಕಂಡ ಕರಿಯನಿಗೆ ಆ ಕೆಲಸ ನಿಯೋಜಿಸಿದರು. ಒಲ್ಲದ ಮನಸ್ಸಿನಲ್ಲೆ ಕರಿಯ ಒಪ್ಪಿಕೊಂಡ.

ಪೂಜೆ ಪುನಸ್ಕಾರವೆಲ್ಲ ಮುಗಿದು ಹೋತನನ್ನು ಬಲಿಪೀಠಕ್ಕೆ ತಂದು ನಿಲ್ಲಿಸಿದರು. ಅಲ್ಲೆ ಇದ್ದ ಕಲ್ಲೊಂದಕ್ಕೆ ಕತ್ತಿ ಮಸೆದು ತಂದ ಕರಿಯ, ಹೋತನ ಮುಂದೆ ಬಂದು ನಿಂತ. ಮಾಂಸಹಾರಿಗಳಲ್ಲದ ಮೇಲ್ವರ್ಗದವರು ಪಂಚೆ ಮೇಲೆತ್ತಿ ಕಟ್ಟಿ ನಿಂತರು. ಕರಿಯನ ಬಲದ ಮೇಲೆ ನಂಬಿಕೆ ಇದ್ದರೂ ಕತ್ತಿಯ ಮೊಣಚು ಸರಿಯಾಗಿ ಕುತ್ತಿಗೆ ತುಂಡು ಮಾಡದಿದ್ದರೆ ಅವನಿಗೆ ಆಗಲಿರುವ ಶಾಸ್ತಿಯನ್ನು ಮನದಲ್ಲೆ ನೆನಪಿಸಿಕೊಂಡ ದಲಿತರು ಜೀವ ಬಿಗಿ ಹಿಡಿದು ನಿಂತಿದ್ದರು. ಮನಸಲ್ಲೇ ಹತ್ತಾರು ದೇವರು ನೆನದ ಕರಿಯ ತನ್ನ ಬಲವನ್ನೆಲ್ಲ ಒಂದು ಮಾಡಿಕೊಂಡು ಹೋತದ ಕುತ್ತಿಗೆಯ ಮೇಲೆ ಏಟು ಕೊಟ್ಟೇಬಿಟ್ಟ. ಮುಂದಿನ ಸಾಲಿನಲ್ಲೆ ನಿಂತಿದ್ದ ನಾನು ಕೂಡ ಒಂದೇ ಏಟಿಗೆ ಕುತ್ತಿಗೆ ತುಂಡಾಗಲಿ ಎಂದು ದೇವರಿಗೆ ಕೈಮುಗಿದು ಕಣ್ಮುಚ್ಚಿಕೊಂಡೆ. ಕಣ್ಬಿಟ್ಟು ನೋಡಿದರೆ ಎಲ್ಲವೂ ಉಲ್ಟಾ ಹೊಡೆದಿತ್ತು. ಒಂದೇ ಏಟಿಗೆ ಹೋತದ ರುಂಡ-ಮುಂಡ ಬೇರೆಯಾಗಲಿಲ್ಲ. ಅದಕ್ಕೆಂದೆ ಕಾದು ನಿಂತಿದ್ದ ಮೇಲ್ವರ್ಗದ ನಾಲ್ಕೈದು ಮಂದಿ ಕರಿಯನ ಎದೆ ಮತ್ತು ಕುಂಡಿಗೆ ಜಾಡಿಸಿ ಒದೆಯುತ್ತಿದ್ದರು. ಒದೆತಕ್ಕೆ ಸಿಲುಕಿ ನೆಲದಲ್ಲಿ ಬಿದ್ದು ಒದ್ದಾಡುತ್ತಿದ್ದ ಕರಿಯ, ಹೋತದ ರಕ್ತದೊಂದಿಗೆ ಬೆರೆತು ಹೋಗಿದ್ದ. ನಾಲ್ಕೈದು ಮಂದಿ ಒದೆಯುತ್ತಿದ್ದರೂ ತುಂಡಾಗದೆ ಉಳಿದಿದ್ದ ಭಾಗವನ್ನು ಬೇರ್ಪಡಿಸಲು ಹರಸಾಹಸ ಮುಂದುವರಿಸಿದ್ದ. ‘ನನ್ನ ಮಕ್ಳಾ, ಮಂಕ್ರಿ ಬಾಡ್ ತಿಂತೀರಿ ಒಂದೇ ಏಟಿbeaten-to-deathಗೆ ಹೋತನ್ ಕತ್ತು ಕತ್ರಸಕ್ಕೆ ಆಗಲ್ವಾ? ಒದಿರ್ಲಾ.. ಹಾಕ್ಲಾ ಹೊಲಿ ನನ್ ಮಗಂಗೆ’ ಎಂದು ಸುತ್ತ ನಿಂತಿದ್ದ ಮೇಲ್ವರ್ಗದವರು ಒದೆಯುತ್ತಿದ್ದವರಿಗೆ ಪ್ರಚೋದನೆ ನೀಡಿದರು. ಹೇಗೋ ಹೋತನ ತಲೆ ಮತ್ತು ದೇಹ ಬೇರಾದವು. ನಂತರ ಒದೆಯುವುದು ನಿಂತಿತು. ಮೇಲೆದ್ದ ಕರಿಯನ ಮುಖದಲ್ಲಿ ರಕ್ತ ಅಂಟಿಕೊಂಡಿತ್ತು. ಒಂದು ತಿಂಗಳ ಹಿಂದಷ್ಟೆ ಕರಿಯ ಪಕ್ಕದೂರಿನ ಹೆಣ್ಣು ತಂದು ಮದುವೆಯಾಗಿದ್ದ. ಆಕೆ ಸೇರಿದಂತೆ ಅವರ ಸಂಬಂಧಿಕರು ಅಲ್ಲೆ ಇದ್ದರು. ತನ್ನ ಗಂಡನಿಗೆ ಆದ ಅವಮಾನ ತಡೆಯಲಾರದೆ ಅಕೆ ಕಣ್ಣೀರಿಟ್ಟು ಮನೆಯತ್ತ ಓಡಿದಳು. ಎಲ್ಲರೂ ಸಂಭ್ರದಿಂದ ಜಾತ್ರೆಯತ್ತ ಹೆಜ್ಜೆ ಹಾಕಿದರೆ, ಕರಿಯ ಅವಮಾನ ಸಹಿಸಲು ಸಾಧ್ಯವಾಗದೆ ಜಾತ್ರೆ ಕಡೆ ಮುಖ ಮಾಡಲಿಲ್ಲ.

ಈ ರೀತಿ ಅವಮಾನ ನನ್ನವರಿಗೆ ಮಾಮೂಲಾಗಿತ್ತು. ಆದರೆ ಅದೇಕೋ ಕರಿಯನ ಎದೆ ಮೇಲೆ ಕಾಲಿಟ್ಟ ಮೇಲ್ವರ್ಗದ ದಾಷ್ಟ್ಯ ನನ್ನ ಮನಸ್ಸನ್ನೂ ತೀವ್ರವಾಗಿ ಘಾಸಿಗೊಳಿಸಿತು. ಮುಂದಿನ ವರ್ಷ ಇದಕ್ಕೊಂದು ಇತಿಶ್ರೀ ಹಾಡಲೇಬೇಕೆಂದು ನಿರ್ಧರಿಸಿದೆ. ದಿನ ಕಳೆದು ಜಾತ್ರೆ ದಿನ ಮತ್ತೊಮ್ಮೆ ಬಂದೆ ಬಿಟ್ಟಿತು. ಆ ದಿನ ಹೋತವನ್ನು ಕಡಿಯಲು ಕರಿಯ ಒಪ್ಪಲಿಲ್ಲ. ದಲಿತರಲ್ಲಿ ಹಿರಿಯರೆಲ್ಲ ಸೇರಿ ಒಬ್ಬರನ್ನು ಆ ಕೆಲಸಕ್ಕೆ ನೇಮಿಸಬೇಕಿತ್ತು. ಮನಸಲ್ಲೆ ಒಂದು ನಿರ್ಣಯ ಕೈಗೊಂಡ ನಾನು, ಕತ್ತಿ ಎತ್ತಿಕೊಂಡೆ. ಆದರೆ ಅದಕ್ಕೆ ಅವ್ವ-ಅಪ್ಪ ಸೇರಿ ಯಾರೊಬ್ಬರೂ ಒಪ್ಪಲಿಲ್ಲ. ಕಾಲೇಜಿಗೆ ಹೋಗುವ ಹುಡುಗ ಮೇಲ್ವರ್ಗದವರು ಒದೆಯುವುದನ್ನು ನಾವು ನೋಡಲಾರೆವು ಎಂದರು. ಆದರೆ ಇಲ್ಲ ಈ ಬಾರಿ ನನಗೆ ಅವಕಾಶ ಕೊಡಿ ಎಂದು ಬೇಡಿಕೊಂಡೆ. ಆಗಲಿ ಎಂದು ಎಲ್ಲರೂ ಒಪ್ಪಿಕೊಂಡರು.

ಕತ್ತಿ ಮಸೆದು ಹೋತನ ಮುಂದೆ ನಿಂತು ಯಾವ ದೇವರನ್ನು ಬೇಡದೆ ಮನದಲ್ಲೆ ಒಂದು ನಿರ್ಧಾರ ಮಾಡಿಕೊಂಡೆ. ಮೇಲ್ವರ್ಗದವರು ನನ್ನ ಪಕ್ಕಕ್ಕೆ ಬಂದು ನಿಂತು ಪಂಚೆ ಮೇಲೆತ್ತಿ ಕಟ್ಟಿಕೊಂಡರು. ಒಂದೇ ಏಟಿಗೆ ಹೋತ ಬಲಿಯಾಗದಿದ್ದರೆ ಕತ್ತಿಯನ್ನು ನನ್ನ ಮೇಲೆ ಕಾಲೆತ್ತಿದವರತ್ತ ತಿರಿಗಿಸಲು ಮನಸನ್ನು ಸಜ್ಜು ಮಾಡಿಕೊಂಡೆ. ನಂತರ ಆಗುವ ಪರಿಣಾಮ ಗೊತ್ತಿದ್ದರೂ ಮನಸ್ಸನ್ನು ಗಟ್ಟಿ ಮಾಡಿಕೊಂಡೆ. ಕತ್ತಿಯನ್ನು ಮೇಲಿತ್ತಿ ಹೋತನ ಕುತ್ತಿಗೆಗೆ ಕೊಟ್ಟೆ. ಅದ್ಯಾವ ದುರಾದೃಷ್ಟವೋ ಒಂದೇ ಏಟಿಗೆ ರುಂಡ-ಮುಂಡ ಬೇರಾತು. ನಾನು ಮನದಲ್ಲಿ ಮಾಡಿಕೊಂಡಿದ್ದ ನಿರ್ಣಯವನ್ನು ನಂತರ ಪ್ರಕಟಿಸಿದೆ. ನಿಮ್ಮ ದರ್ಪದ ಕಾಲುಗಳನ್ನು ನನ್ನವರ ಮೇಲೆತ್ತಿದರೆ ಕತ್ತಿ ಏಟು ಬೀಳಲಿವೆ ಎಂದು ಹೇಳಿದೆ. ಈಗಲೂ ಹೋತವನ್ನು ಕಡಿದು ಬಂಡಿ ಮುನ್ನಡೆಸುವ ಪದ್ದತಿ ಇದೆ. ಆದರೆ ಅಂದಿನಿಂದ ನನ್ನವರ ಮೇಲೆ ಕಾಲೆತ್ತುವ ದುಸ್ಸಾಹಸ ಮಾಡಿಲ್ಲ.

2 comments

  1. “ನಿಮ್ಮ ದರ್ಪದ ಕಾಲುಗಳನ್ನು ನನ್ನವರ ಮೇಲೆತ್ತಿದರೆ ಕತ್ತಿ ಏಟು ಬೀಳಲಿವೆ ಎಂದು ಹೇಳಿದೆ” – ಶಭಾಷ್. ನಿಮ್ಮ ಧೈರ್ಯ ಮೆಚ್ಚಿದೆ.
    -ಎಚ್. ಸುಂದರ ರಾವ್

  2. ಇಂತಹ ಕೆಲವನ್ನು ನಾವೂ ಕಂಡವರೇ… ಆದರೆ ನಿಮ್ಮ ರೀತಿ ಪ್ರತಿಕ್ರಿಯಿಸಿದ ಜನ ಮಾತ್ರ ಬಹಳ ಅಪರೂಪ…

Leave a Reply

Your email address will not be published.