‘ಕಲಾಮ್ ಕ್ಷಿಪಣಿ’ ಹೊರಟಿದ್ದು ವಾಜಪೇಯಿ ಬತ್ತಳಿಕೆಯಿಂದ

– ದಿನೇಶ್ ಅಮಿನ್‌ಮಟ್ಟು

ಎ.ಪಿ.ಜೆ. ಅಬ್ದುಲ್ ಕಲಾಮ್ ಅವರು ದೇಶದ 11ನೇ ರಾಷ್ಟ್ರಪತಿಯಾಗಲು ಪ್ರಮುಖ ಕಾರಣಕರ್ತರಾದ ನಾಯಕನೊಬ್ಬನನ್ನು ಸಾವಿನ ಸೂತಕದ ಸಮಯದಲ್ಲಿ ಹೆಚ್ಚಿನವರು ಮರೆತಿದ್ದಾರೆ. ಆ ನಾಯಕನ ಹೆಸರು ಅಟಲ ಬಿಹಾರಿ ವಾಜಪೇಯಿ. ಕೆ.ಆರ್.ನಾರಾಯಣನ್ ಅವರ ಉತ್ತರಾಧಿಕಾರಿ ಯಾರೆಂಬ ಚರ್ಚೆ ಪ್ರಾರಂಭವಾದಾಗ ಅಬ್ದುಲ್ ಕಲಾಮ್ ಅವರ ಹೆಸರನ್ನು ಮೊದಲು ಸೂಚಿಸಿದ್ದವರು ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್. ಆದರೆ ಆಗಲೇ ಬಿಜೆಪಿಯೊಳಗಡೆ ಕೃಷ್ಣಕಾಂತ್ ಹೆಸರು ಚರ್ಚೆಯಲ್ಲಿತ್ತು. ಅವರ ಹೆಸರು ಬಿದ್ದುಹೋದಾಗ ಕೇಳಿಬಂದಿದ್ದ ಹೆಸರು apj-kalamಪಿ.ಸಿ.ಅಲೆಗ್ಸಾಂಡರ್ ಅವರದ್ದು.

ಅಲೆಗ್ಸಾಂಡರ್ ಹೆಸರನ್ನು ಸೂಚಿಸಿದ್ದವರು ಆಗಿನ ಪ್ರಧಾನಿಯ ‘ನೀಲಿಕಣ್ಣಿನ ಹುಡುಗ’ ಪ್ರಮೋದ್ ಮಹಾಜನ್. ಅವರು ಆಗಲೇ ಅಲೆಗ್ಸಾಂಡರ್ ಹೆಸರಿನ ಬಗ್ಗೆ ಶಿವಸೇನಾ ನಾಯಕ ಬಾಳ್ ಠಾಕ್ರೆ ಒಪ್ಪಿಗೆ ಪಡೆದೇ ಬಿಟ್ಟಿದ್ದರು. ರಾಷ್ಟ್ರಪತಿ ಸ್ಥಾನದಲ್ಲಿ ಒಬ್ಬ ಕ್ರಿಶ್ಚಿಯನ್ ನನ್ನು ಕೂರಿಸಿಬಿಟ್ಟರೆ ಮುಂದೊಂದು ದಿನ ಸೋನಿಯಾಗಾಂಧಿ ಪ್ರಧಾನಿಯಾಗುವುದನ್ನು ತಪ್ಪಿಸಬಹುದು ಎನ್ನುವ ಲೆಕ್ಕಾಚಾರ ಮಹಾಜನ್ ಮತ್ತು ಠಾಕ್ರೆ ಅವರಲ್ಲಿತ್ತು. ಆದರೆ ವಾಜಪೇಯಿ ತಲೆಯಲ್ಲಿದ್ದದ್ದು ಬೇರೆಯೇ ಲೆಕ್ಕಾಚಾರ. ಆ ಕಾಲದಲ್ಲಿ ಎನ್ ಡಿ ಎ ಮೇಲೆ ಬಿಗಿ ಹಿಡಿತ ಹೊಂದಿದ್ದ ಚಂದ್ರಬಾಬು ನಾಯ್ಡು ಅವರನ್ನು ಕರೆಸಿದ್ದ ವಾಜಪೇಯಿ ಅಬ್ದುಲ್ ಕಲಾಮ್ ಹೆಸರನ್ನು ಸೂಚಿಸಿ ಒಪ್ಪಿಗೆಯನ್ನೂ ಪಡೆದುಬಿಟ್ಟರು.

ಈ ಮೂಲಕ ಒಂದು ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆಯುವ ಉದ್ದೇಶ ವಾಜಪೇಯಿ ಅವರಿಗಿತ್ತು. ಮೊದಲನೆಯದಾಗಿ ಗುಜರಾತ್ ಕೋಮುಗಲಭೆಯಿಂದಾಗಿ ಎನ್ ಡಿಎಗೆ ಗಟ್ಟಿಯಾಗಿ ಅಂಟಿಕೊಂಡಿದ್ದ ಕೋಮುವಾದಿ ಸರ್ಕಾರ ಎನ್ನುವ ಕಳಂಕವನ್ನು ತೊಡೆದುಹಾಕುವ ಉದ್ದೇಶ ವಾಜಪೇಯಿ ಅವರಿಗಿತ್ತು. ಎರಡನೆಯದಾಗಿ ನರೇಂದ್ರ ಮೋದಿ ಅವರ ರಾಜೀನಾಮೆ ಪಡೆಯಲು ಹೊರಟಿದ್ದವರಿಗೆ ತಮ್ಮ ಸಹದ್ಯೋಗಿಗಳ ವಿರೋಧದಿಂದಾಗಿ ಸಾಧ್ಯವಾಗದೆ ಅವಮಾನವಾಗಿತ್ತು. ರಾಷ್ಟ್ರಪತಿ ಸ್ಥಾನಕ್ಕೆ ತನ್ನದೇ ಅಭ್ಯರ್ಥಿಯನ್ನು ಸೂಚಿಸುವ ಮೂಲಕ ತನ್ನ ಸ್ಥಾನದ ಬಲವನ್ನು ತೋರಿಸುವ ಉದ್ದೇಶವೂ ಅವರಿಗಿತ್ತು. ಮೂರನೆಯದಾಗಿ ಬಿಜೆಪಿ ಮುಸ್ಲಿಮ್ ವಿರೋಧಿ ಪಕ್ಷ ಎಂದು ಆರೋಪಿಸುವವರಿಗೆ ಉತ್ತರವನ್ನೂ ನೀಡುವ ಉದ್ದೇಶವೂ ವಾಜಪೇಯಿ ಅವರಿಗಿತ್ತು. (ಇದೇ ರೀತಿ ವಾಜಪೇಯಿ ಅವರು ಬಂಗಾರು ಲಕ್ಷ್ಮಣ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಬಿಜೆಪಿThe Prime Minister Shri Atal Bihari Vajpayee calls on the President Dr. A.P.J. Abdul Kalam in New Delhi on July 25, 2002 (Thursday) ಬ್ರಾಹ್ಮಣ-ಬನಿಯಾ ಪಕ್ಷವೆಂಬ ಕಳಂಕವನ್ನು ತೊಡೆದುಹಾಕುವ ಪ್ರಯತ್ನವನ್ನೂ ಮಾಡಿದ್ದರು. ಮುಂದೇನಾಯಿತು ಎನ್ನುವುದು ಇತಿಹಾಸ).

ನಾಲ್ಕನೆಯದಾಗಿ ಮುಸ್ಲಿಮ್ ಅಭ್ಯರ್ಥಿಯನ್ನು ಸೂಚಿಸುವ ಮೂಲಕ ಕಾಂಗ್ರೆಸ್ ಪಕ್ಷ ಕೂಡಾ ಅವರನ್ನು ವಿರೋಧಿಸಲಾಗದೆ ಬೆಂಬಲಿಸಲೇಬೇಕಾದ ರಾಜಕೀಯ ಅನಿವಾರ್ಯತೆಯನ್ನು ಸೃಷ್ಟಿಸುವ ರಾಜಕೀಯ ಲೆಕ್ಕಚಾರವೂ ಚತುರ ರಾಜಕಾರಣಿ ವಾಜಪೇಯಿ ಅವರಿಗಿತ್ತು.

ಈ ಎಲ್ಲ ಕಾರಣಗಳಿಂದಾಗಿ ವಾಜಪೇಯಿ ಅವರು ಅಬ್ದುಲ್ ಕಲಾಮ್ ಹೆಸರನ್ನು ಸೂಚಿಸಿದಾಗ ಸಹದ್ಯೋಗಿಗಳ ಬಾಯಿ ಬಂದಾಗಿತ್ತು. ಸಹಮತ ಮೂಡಿಸಲು ವಾಜಪೇಯಿ ಅವರು ಮೊದಲು ಪ್ರಮೋದ್ ಮಹಾಜನ್ ಅವರನ್ನು ಬಾಳ್ ಠಾಕ್ರೆ ಅವರಲ್ಲಿಗೆ ಕಳುಹಿಸಿಕೊಟ್ಟರು. ನಂತರ ಮಹಾಜನ್ ಅವರನ್ನೇ ಕಲಾಮ್ ಅವರ ಚುನಾವಣಾ ಏಜಂಟ್ ಮಾಡಿದರು. ಅಬ್ದುಲ್ ಕಲಾಮ್ ಅವರನ್ನು ಒಪ್ಪಿಸುವ ಜವಾಬ್ದಾರಿಯನ್ನು ವಾಜಪೇಯಿ ಅವರು ಚಂದ್ರಬಾಬು ಅವರಿಗೆ ನೀಡಿದ್ದರು. ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷ ಕೂಡಾ ಬೆಂಬಲ ವ್ಯಕ್ತಪಡಿಸಿತ್ತು. (ಅಲೆಗ್ಸಾಂಡರ್ ಹೆಸರು ತಪ್ಪಿಹೋಗಿ ಸೋನಿಯಾಗಾಂಧಿ ಪ್ರಧಾನಿಯಾಗುವ ಅವಕಾಶ ಜೀವಂತವಾಗಿ ಉಳಿಯಿತಲ್ಲ ಎನ್ನುವ ಸಮಾಧಾನ ಕಾಂಗ್ರೆಸ್ ನಾಯಕರದ್ದು). ಆದರೆ ಎಡಪಕ್ಷಗಳು ಮಾತ್ರ ಬೆಂಬಲ ನೀಡಲಿಲ್ಲ. ಕೊನೆಗೆ ವಾಜಪೇಯಿ ಅವರ ಬತ್ತಳಿಕೆಯಿಂದ ಹೊರಟ ‘ಕಲಾಮ್ ಕ್ಷಿಪಣಿ’ ಗುರಿ ತಲುಪಿತ್ತು.

9 thoughts on “‘ಕಲಾಮ್ ಕ್ಷಿಪಣಿ’ ಹೊರಟಿದ್ದು ವಾಜಪೇಯಿ ಬತ್ತಳಿಕೆಯಿಂದ

 1. Anonymous

  Dear Editor, this is a totally insensitive article at the time of the death of a great son of India. What’s the purpose of recollecting political maneuvers when the occasion demands recollection of the deceased person’s contributions to the country?

  Reply
 2. ಷಣ್ಮುಖ

  ಈ ಲೇಖಕರಿಗೆ ಔಚಿತ್ಯ ಪ್ರಜ್ಞೆ ಇಲ್ಲವೆ? ಕಲಾಮ್ ಸಾಬ್ ಸತ್ತು ಇನ್ನೂ ೨೪ ಗಂಟೆಗಳು ಕಳೆದಿಲ್ಲ, ಆಗಲೇ ಅವರ ಅಧಿಕಾರ ಮೀಮಾಂಸೆಗೆ ಇಳಿದಿದ್ದಾರೆ!

  Reply
 3. Ramachandra Hegde

  ಅಮೀನ್ ಮಟ್ಟು ಅವರೇ, ಮನೆಯ ಹಿರಿಯ ತೀರಿಕೊಂಡು ೨೪ ಗಂಟೆ ಆಗುವುದರೊಳಗೆ ಅವರಿಗೆ ಮಸಿ ಬಳಿಯುವ ಇಂತಹ ಲೇಖನ ನಿಮ್ಮಿಂದ ನಿರೀಕ್ಷಿಸಿರಲಿಲ್ಲ. ಯಾರು ಏನೇ ಮಾಡಿದ್ದರೂ ಕಲಾಂ ಅವರಿಗೆ ಈ ದೇಶದ ರಾಷ್ಟ್ರಪತಿ ಆಗುವ ಅರ್ಹತೆ ಇತ್ತು. ಉರಿವ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುವ ಕೆಲಸ ಮಾಡಬೇಡಿ. ಅದು ನಿಮಗೂ ನಿಮ್ಮ ಹುದ್ದೆಯ ಘನತೆಗೂ ತಕ್ಕುದಲ್ಲ.

  Reply
 4. ನವೀನ ಗಂಗೋತ್ರಿ

  ಯಾವುದೇನೇ ಇದ್ದರೂ ಯಾವುದನ್ನು ಜನರೆದುರಿಗೆ ಇಡಬೇಕು, ಮತ್ಯಾವುದನ್ನು ಇಡಬಾರದು ಎಂಬ ಪ್ರಜ್ಞೆ ಸಾಮಾನ್ಯನಿಗೂ ಇರಬೇಕು. ಅದರಲ್ಲೂ ಒಬ್ಬ ಪತ್ರಕರ್ತನಿಗೆ ಈ ಉತ್ತರದಾಯಿತ್ವ ಇನ್ನೂ ದೊಡ್ಡದು. ವಿವೇಕಾನಂದರ ಬಗ್ಗೆ ಈ ಬರಹಗಾರ ಮಾತಾಡಿದ್ದು ಇನ್ನೂ ಮರೆತಿಲ್ಲ. ಅದಾಗಲೇ ಕಲಾಂ ಸಾವಿನೆದುರು ಆ ವ್ಯಕ್ತಿತ್ವದ ಉದಾತ್ತ ಗುಣಗಳನ್ನು ಸಮಾಜಕ್ಕೆ ಅರುಹಬೇಕಾದ ಸಮಯದಲ್ಲಿ ಇದ್ಯಾವುದೋ ಕೆಲಸಕ್ಕೆ ಬಾರದ ಸಂಗತಿಯನ್ನು ಜನರೆದುರಿಗೆ ಇಡುತ್ತಿದ್ದಾರೆ. ನಿರ್ಮಿತಿಯ ಬಯಕೆಯಿರದ, ನಾಶವೊಂದೇ ಉದ್ದೇಶವಾಗಿರುವ ಬರಹಗಾರ ಮಾತ್ರ ಹೀಗೆ ಬರೆಯಬಲ್ಲ. Constructive ಆದ ಯಾವ ಅಂಶ ಇಲ್ಲಿದೆ?

  Reply
 5. ನವೀನ್ ಸೂರಿಂಜೆ

  ದಿನೇಶ್ ಸರ್ : ಅತ್ಯುತ್ತಮ ಲೇಖನ ಸರ್…. ಕಲಾಂ ಸಾವಿಗೆ ಸಂತಾಪವಿದೆ. ಹಾಗಂತ ಕಲಾಂರನ್ನು ಮಹಾಚೇತನ, ದೇಶ ಕಂಡರಿಯದ ಮಹಾನ್ ನಾಯಕ ಅಂತ ಬಿಂಬಿಸುವ ಸಮೂಹ ಸನ್ನಿ ಸರಿಯಲ್ಲ. ಸಮೂಹ ಸನ್ನಿಗೆ ಒಳಗಾದವರಿಗೆ ಉತ್ತಮ ಚಿಕಿತ್ಸೆ ನೀಡಿದ್ದೀರಿ ಸರ್. ಕಲಾಂ ಒಬ್ಬ ಒಳ್ಳೆಯ ಮನುಷ್ಯ. ವಿಜ್ಞಾನ ಹೊರತುಪಡಿಸಿ ರಾಜಕೀಯದ ರಾಜಕೀಯ ಅರಿಯದ ಅಮಾಯಕ. ಪುರೋಹಿತರನ್ನು ಆಲಂಗಿಸೋ ವಿಜ್ಞಾನಿ ವಿಜ್ಞಾನಿಯೇ ಅಲ್ಲ ಎಂಬ ಸತ್ಯ ಗೊತ್ತಿದ್ದರೂ ಕಲಾಂ ಒಬ್ಬ ಸದೃದಯಿ ಎಂಬ ಕಾರಣಕ್ಕಾಗಿ ಕಲಾಂ ಸಾವಿಗೆ ಸಂತಾಪವಿದೆ. ಹಾಗಂತ ಭಜನೆ ಮಾಡ್ತಾ ಇರೋದು ಸರಿಯಲ್ಲ. ಉತ್ತಮ ಲೇಖನ ಸರ್.

  Reply
  1. ಸೀತಾ

   “ಪುರೋಹಿತರನ್ನು ಆಲಂಗಿಸೋ ವಿಜ್ಞಾನಿ ವಿಜ್ಞಾನಿಯೇ ಅಲ್ಲ ಎಂಬ ಸತ್ಯ”

   ಮನುಷ್ಯತ್ವ ಎಂಬುದು ವಿಜ್ಞಾನ ಹಾಗೂ ಪೌರೋಹಿತ್ಯವನ್ನು ಜೋಡಿಸುವ ತಂತು. ಇದು ನಿಮಗೆ ಕಾಣದೇ ಹೋಗಿದ್ದು ನಿಮ್ಮ ದುರಂತ. ನಿಮ್ಮ ಧಾಟಿ ನೋಡಿದರೆ ನಿಮಗೇನಾದರೂ ಅಧಿಕಾರ ಕೊಟ್ಟರೆ ನಿಮ್ಮ ಗೃಹೀತಗಳಿಗೆ ಬದ್ಧರಾಗದವರನ್ನು ಹೊಸಕಿ ಹಾಕಿಬಿಡುತ್ತೀರಿ ಅಂತ ಅನ್ನಿಸುತ್ತಿದೆ. ಆದರೂ ನೀವು ಸಿಕ್ಕರೆ ಖಂಡಿತ ನಿಮ್ಮನ್ನು ಆಲಂಗಿಸುತ್ತೇನೆ.

   Reply
  2. BNS

   ‘ಪುರೋಹಿತರನ್ನು ಆಲಂಗಿಸುವ ವಿಜ್ಞಾನಿ ವಿಜ್ಞಾನಿಯೇ ಅಲ್ಲ!..’ ವಾರೆ ವ್ಹಾ, ಇಂಥದೊಂದು ಸರಳ ಸೂತ್ರ ಇದೆಯೆಂದು ಗೊತ್ತಿದ್ದರೆ, ನಮ್ಮ ಅಸಂಖ್ಯಾತ ವೈಜ್ಞಾನಿಕ ಸಂಸ್ಥೆಗಳಲ್ಲಿ ಯಾರು ವಿಜ್ಞಾನಿಗಳಿದ್ದಾರೆ ಎಂದು ಕಂಡು ಹಿಡಿಯುವ ಸುಲಭ ವಿಧಾನ ದೊರೆಯುತ್ತಿತ್ತು, ಕೆಲಸಕ್ಕೆ ಬಾರದ ಪರೀಕ್ಷೆಗಳ ಅಗತ್ಯವೇ ಇರುತ್ತಿರಲಿಲ್ಲ. ಅಂದಹಾಗೆ, ಮೌಲ್ವಿಗಳನ್ನು, ಅಥವಾ ಪಾದ್ರಿಗಳನ್ನು ಆಲಂಗಿಸುವ ವಿಜ್ಞಾನಿ ವಿಜ್ಞಾನಿ ಹೌದೇ? ತಮ್ಮ ಅಮೋಘ ಜ್ಞಾನದಲ್ಲಿ ಈ ವಿಷಯದ ಬಗ್ಗೆ ಯಾವ ಮಾಹಿತಿ ಇದೆ? ನವೀನ್ ಸೂರಿಂಜೆಯವರೆ?

   Reply
   1. ಸೀತಾ

    BNS ಅವರೇ, ಅಮೀನ್ ಮಟ್ಟು, ಸೂರಿಂಜೆ ಮೊದಲಾದ ಕಾಂಗ್ರೆಸ್ ನಿಷ್ಠ ಪತ್ರಕರ್ತರಿಗೆ ಕಲಾಮ್ ಬಗ್ಗೆ ಬೇಸರ ಹಾಗೂ ಸಿಟ್ಟು ಇರಲು ಕಾರಣವಿದೆ. ಸೋನಿಯಾ ಮೇಡಂ ಅವರು ಪ್ರಧಾನ ಮಂತ್ರಿ ಆಗಬಯಸಿ ತುರಾತುರಿಯಿಂದ ಕಲಾಮ್ ಅವರ ಬಳಿ ಹೋಗಿದ್ದಾಗ ಕಲಾಮ್ ಸೋನಿಯಾಗೆ ಸೊಪ್ಪು ಹಾಕಲಿಲ್ಲ. ಏನೆಲ್ಲಾ ಒತ್ತಡ ಹೇರಿದರೂ ಕಲಾಮ್ ಅಚಲರಾಗಿ ನಿಂತು ತಮ್ಮ ನಿರ್ಧಾರವನ್ನು ಬದಲಾಯಿಸಲಿಲ್ಲ. ಕೊನೆಗೆ ಬೇರೆ ದಾರಿಯೇ ಇಲ್ಲದಾಗಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿ ಆರಿಸಬೇಕಾಯಿತು. ಒಂದು ಪಕ್ಷ ಕಲಾಮ್ ಸೋನಿಯಾ ಅವರನ್ನೇ ಪ್ರಧಾನಿಯಾಗಿ ಒಪ್ಪಿದ್ದರೆ ಈ ಮಟ್ಟು ಸೂರಿಂಜೆಗಳು ಕಲಾಮ್ ಅವರನ್ನು ದೇಶ ಎಂದೂ ಕಂಡರಿಯದ ನಾಯಕ ಅಂತ ಹೋಗಲಿ ಹೊನ್ನ ಶೂಲಕ್ಕೆ ಏರಿಸುತ್ತಿದ್ದರು.

    Reply
 6. Anonymous

  Mr.Ameen Mattu is a good jounalist, but now he is attached to Congress party. He should not politicize the situation. What is the need for such explaination. I swa him discussing this point on a TV channel on the day Dr.Kalam sir’s death. Very bad comment sir.
  Ordinary citizen of India
  Son of Karnataka

  Reply

Leave a Reply

Your email address will not be published.