Monthly Archives: July 2015

‘ಎದೆಗೆ ಬಿದ್ದ ಅಕ್ಷರ’ : ಪುಸ್ತಕ ವಿಮರ್ಶೆ

– ಸುಭಾಷ್ ರಾಜಮಾನೆ

“ಒಂದ್ಸಲ ಒಂದು ಗ್ರಾಮದ ಜನರೆಲ್ಲಾ ಸೇರಿ ತಮ್ಮ ದೇವತೆಗೆ ಗುಡಿಕಟ್ಟಲು ಆರಂಭಿಸುತ್ತಾರೆ. ಹೀಗೆ ಕಟ್ತಾ ಚಾವಣಿಮಟ್ಟಕ್ಕೆ ಆ ಗುಡಿ ಬಂದಾಗ ಒಬ್ಬನ ಮೈಮೇಲೆ ಆ ದೇವತೆ ಮಂಚಮ್ಮ ಆವಾಹಿಸಿಕೊಂಡು ‘ನಿಲ್ಸಿ ನನ್ ಮಕ್ಕಳಾ’ ಎಂದು ಅಬ್ಬರ ಮಾಡುತ್ತಾಳೆ. ಆ ಅಬ್ಬರಕ್ಕೆ ಜನ ತಮ್ಮ ಕೆಲ್ಸ ನಿಲ್ಸಿ ಕಕ್ಕಾಬಿಕ್ಕಿಯಾಗಿ ನೋಡುತ್ತಿರಲು ಆ ದೇವತೆ ಹಾಗೂ ಆ ಜನರ ನಡುವೆ ಮಾತುಕತೆ ನಡೆಯುತ್ತದೆ: ‘ಏನ್ರಯ್ಯಾ ಏನ್ ಮಾಡ್ತಾ ಇದ್ದೀರಿ?’
‘ನಿನಗೊಂದು ಗುಡಿಮನೆ ಕಟ್ತಾ ಇದ್ದೀವಿ ತಾಯಿ’
‘ಓಹೋ, ನನಗೇ ಗುಡಿಮನೆ ಕಟ್ತಾ ಇದ್ದೀರೋ? ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ ಮಕ್ಕಳಾ?’
‘ನನಗಿಲ್ಲ ತಾಯಿ’- ಅಲ್ಲೊಬ್ಬ ಹೇಳ್ತಾನೆ.
‘ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ’
-ಹೀಗೆಂದ ಮಂಚಮ್ಮದೇವಿ ಮನೆಮಂಚಮ್ಮನಾಗುತ್ತಾಳೆ!
ಛಾವಣಿ ಇಲ್ಲದ ಗುಡಿಯಲ್ಲಿ ತಾಯಿ ಮನೆಮಂಚಮ್ಮ ಇಂದು ಪೂಜಿತಳಾಗುತ್ತಿದ್ದಾಳೆ. ಈ ರೀತಿಯಲ್ಲಿ ಛಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಅದೇ ನನ್ನ ದೇವರಾಗುತ್ತದೆ.”1

ದೇವನೂರ ಮಹಾದೇವ ಅವರು ಹೇಳುವ ವೈನೋದಿಕ ಧಾಟಿಯ ಈ ಪುಟ್ಟ ಕತೆಯು ತಮಾಷೆ ಮತ್ತು ವ್ಯಂಗ್ಯದಿಂದ ಕೂಡಿದ್ದರೂ ಕುತೂಹಲಕರವಾಗಿದೆ. ಸುಮಾರು ಮೂರು ದಶಕಗಳಷ್ಟು ಹಿಂದೆಯೇ ದೇವನೂರ ಅವರು ಕತೆ ಕಾದಂಬರಿಯ ಬರವಣಿಗೆಗೆ ವಿದಾಯ ಹೇಳಿದವರು. ಪತ್ರಿಕೆಗಳ ಸಂಪಾದಕರ ಅಥವಾ ಗೆಳೆಯರ ಒತ್ತಾಯಕ್ಕೆ ಮಣಿದು ಅಪ್ಪಿತಪ್ಪಿ ಕೂಡ ಮತ್ತೇ ಕತೆ-ಕಾದಂಬರಿಯನ್ನು ಬರೆಯಲಿಲ್ಲ. devanur-bookಆದರೆ ತಮಗೆ ಅನಿಸಿದ್ದನ್ನು ಹೇಳುವ ಅಥವಾ ಹೇಳಲಿಚ್ಚಿಸುವ ಅಭಿವ್ಯಕ್ತಿಯ ವಿಧಾನವಾಗಿ ಕಥನ ಮಾದರಿಗೆ ವಿದಾಯ ಹೇಳಿದವರಲ್ಲ. ಆದ್ದರಿಂದ ‘ಎದೆಗೆ ಬಿದ್ದ ಅಕ್ಷರ’ ಕೃತಿಯ ಬಹುತೇಕ ಲೇಖನಗಳು ದೇವನೂರರ ಸೃಜನಶೀಲ ಕತೆ-ಕಾದಂಬರಿಗಳ ಕಥನದ ವಿಸ್ತರಣೆಯೇ ಆಗಿವೆ. ಸಾಹಿತ್ಯ ಪ್ರಕಾರಗಳು ಸಂಕರಗೊಳ್ಳುತ್ತ, ತಮ್ಮ ಗಡಿಗೆರೆಗಳನ್ನು ಕಲಸಿಕೊಳ್ಳುತ್ತ, ಹೊಸ ಪ್ರಕಾರದ ಹುಟ್ಟಿಗೆ ಕಾರಣವಾಗುತ್ತಿರುವ ಸಂಕ್ರಮಣ ಅವಸ್ಥೆಯನ್ನು ಇದು ಸೂಚಿಸುತ್ತದೆಯೇ? ಪ್ರಸ್ತುತ ಸಮಾಜದಲ್ಲಿ ಜಾತಿ ಮತ ಧರ್ಮ ಲಿಂಗ- ಇವುಗಳ ನೆಲೆಯಲ್ಲಿ ಮನುಷ್ಯರನ್ನು ವಿಂಗಡಿಸುವ ವಿಚಾರಧಾರೆಗಳು ಬಲಗೊಳ್ಳುತ್ತಿರುವ ಸನ್ನಿವೇಶದಲ್ಲಿ ಕನ್ನಡ ಸಾಹಿತ್ಯ ಪ್ರಕಾರಗಳನ್ನು ವಿಂಗಡಿಸುವ ಗೆರೆಗಳೇ ಅಳಿಸುತ್ತಿರುವುದು ಒಂದು ಸೋಜಿಗ.2

ದೇವನೂರ ಅವರು ಹೇಳುವ ಈ ಕತೆಯಲ್ಲಿ ತಮಗೇ ಸೂರಿಲ್ಲದ ಪ್ರಾಯಶಃ ದಲಿತ ಜನರು ಮಂಚಮ್ಮಳಿಗೆ ಯಾಕೆ ಗುಡಿಯನ್ನು ಕಟ್ಟುತ್ತಿದ್ದಾರೆ? ದಲಿತರು ಈ ದೇಶದ ನೆಲದ ಮಣ್ಣಿಗೆ ಇಂದಿಗೂ ಅನ್ಯರಂತೆಯೇ ದಾರುಣವಾದ ಸ್ಥಿತಿಯಲ್ಲಿ ಬದುಕುತ್ತಿರುವುದು ವಾಸ್ತವ ಸತ್ಯ. ದೇವನೂರ ಮಹಾದೇವ ಅವರು ಈ ಕತೆಯ ಕೊನೆಯಲ್ಲಿ ಮಾಡುವ ವ್ಯಾಖ್ಯಾನ ಕತೆಯ ಸ್ವರೂಪ ಮತ್ತು ಅದರ ತಾತ್ವಿಕತೆಯನ್ನು ಸಂಪೂರ್ಣವಾಗಿ ಬದಲಿಸುತ್ತದೆ. ಛಾವಣಿ ಇಲ್ಲದ ಗುಡಿಯಲ್ಲಿ ಬುದ್ಧನನ್ನು ಇಟ್ಟರೆ ಅದೇ ತಮ್ಮ ದೇವರೆಂದು ದೇವನೂರರು ಹೇಳುತ್ತಿರುವುದು ಸ್ವಾರಸ್ಯಕರ ಸಂಗತಿಯಾಗಿದೆ. ಆದರೆ ಎರಡು ಸಾವಿರದ ಐದುನೂರು ವರ್ಷಗಳ ಹಿಂದೆಯೇ ದೇವರ ಇರುವಿಕೆ ಮತ್ತು ದೇವರ ಕಲ್ಪನೆಯನ್ನೆ ಬುದ್ಧ ಸಂಪೂರ್ಣವಾಗಿ ನಿರಾಕರಿಸಿದ್ದ; ಪುನರ್ ಜನ್ಮ ಹಾಗೂ ಆತ್ಮದ ಕಲ್ಪನೆಯನ್ನೂ ಅಲ್ಲಗಳೆದಿದ್ದ. ದೇವನೂರರಂತಹ ಸಮಾಜವಾದಿ ಚಿಂತಕರು ಇಪ್ಪತ್ತೊಂದನೆಯ ಶತಮಾನದಲ್ಲಿ ಬುದ್ಧನನ್ನು ದೇವರೆಂದು ಒಪ್ಪುವ ಸಾಂಸ್ಕತಿಕ ವೈರುಧ್ಯದ ಸ್ವರೂಪ ಯಾವುದು?

ಭಾರತೀಯ ಸಮಾಜವನ್ನು ವರ್ಣ, ಜಾತಿ, ಅಸ್ಪøಶ್ಯತೆ, ವರ್ಗದ ನೆಲೆಗಳಲ್ಲಿ ಒಡೆದು ಹಾಕಿದ್ದ ಬ್ರಾಹ್ಮಣಶಾಹಿಯನ್ನು ವಿರೋಧಿಸಿದವನು ಬುದ್ಧ. ‘ಮಡದಿ-ಮಗು ಮನೆ-ಮಾರು ರಾಜ್ಯ-ಗೀಜ್ಯ’ಗಳನ್ನೆಲ್ಲ ತೊರೆದು ಮುನ್ನಡೆದ ಬುದ್ಧ, ತನಗೆ ಜ್ಞಾನೋದಯವಾದ ತರುವಾಯ ಹೀಗೆ ಹೇಳುತ್ತಾನೆ: ಎಲ್ಲ ಮನುಷ್ಯರೂ ಸಮಾನರು; ಹುಟ್ಟಿನಿಂದ ಮನುಷ್ಯ ದೊಡ್ಡವನಾಗಲಾರ, ಗುಣದಿಂದ ಆಗುತ್ತಾನೆ; ಹುಟ್ಟಿನ ಆಧಾರದಿಂದ ಶ್ರೇಷ್ಠತೆಯನ್ನು ಅಳೆಯುವುದು ಸರಿಯಲ್ಲ; ಮನುಷ್ಯನಿಗೆ ಉನ್ನತ ಆದರ್ಶಗಳು ಮತ್ತು ತನ್ನ ಸಹಚರರ ಬಗೆಗೆ ಮೈತ್ರಿಯನ್ನು ಹೊಂದುವುದು ಮುಖ್ಯ; ಪ್ರತಿಯೊಬ್ಬನಿಗೂ ಕಲಿಯುವ ಹಕ್ಕಿದೆ; ಜ್ಞಾನವೆನ್ನುವುದು ಉಣ್ಣುವ ಅನ್ನದಷ್ಟೇ ಮುಖ್ಯ; ಆದರೆ ಚಾರಿತ್ರ್ಯಹೀನ ಜ್ಞಾನ ಅಪಾಯಕಾರಿ ಆಗುತ್ತದೆ; ಆಸ್ತಿಯ ಖಾಸಗಿ ಒಡೆತನ ಒಂದು ವರ್ಗಕ್ಕೆ ಶಕ್ತಿಯನ್ನೂ, ಇನ್ನೊಂದು ವರ್ಗಕ್ಕೆ ದುಃಖವನ್ನೂ ತರುತ್ತದೆ; ನಿಜವಾದ ಧರ್ಮ ಮನುಷ್ಯನ ಹೃದಯದಲ್ಲಿರುತ್ತದೆಯೇ ಹೊರತು ಶಾಸ್ತ್ರಗಳಲ್ಲಲ್ಲ; ಯಾವುದೂ ಅಂತಿಮವಲ್ಲ, ಪ್ರತಿಯೊಂದೂ ಪರಿವರ್ತನಶೀಲಕ್ಕೆ ಒಳಪಡುತ್ತಿರುತ್ತದೆ.3 ಸರ್ವರ ಸಮಾನತೆಯನ್ನು ಬೋಧಿಸಿದ, ಭೂಮಿಯ ಮೇಲಿನ ಸಕಲ ಜೀವಿಗಳ ಒಳಿತನ್ನು ಬಯಸಿದ, ಮನುಷ್ಯನ ಘನತೆ-ಗೌರವಗಳನ್ನು ಎತ್ತಿಹಿಡಿದ, ಸಮಾಜದಲ್ಲಿರುವ ಅಜ್ಞಾನವನ್ನು ವಿರೋಧಿಸಿ ನಗುತ್ತಿರುವ ಬುದ್ಧನನ್ನು ದೇವನೂರರು ಒಪ್ಪಿಕೊಳ್ಳುತ್ತಾರೆ. ವಾಸ್ತವವಾಗಿ ನಮ್ಮ ಸಮಾಜದಲ್ಲಿ ಜಾತಿ, ವರ್ಣ, ಅಸ್ಪøಶ್ಯತೆಗಳು ಮನುಷ್ಯರನ್ನು ಮತ್ತು ಮನಸ್ಸುಗಳನ್ನು ಛಿದ್ರಛಿದ್ರ ಮಾಡಿರುವ ಹಿನ್ನೆಲೆಯಲ್ಲಿ ‘ಎದೆಗೆ ಬಿದ್ದ ಅಕ್ಷರ’ ಕೃತಿಯು ಬುದ್ಧ ಪ್ರತಿಪಾದಿಸಿದ ಸಮಾನತೆಯ ಮೌಲ್ಯದೊಂದಿಗೆ ಆರಂಭವಾಗಿರುವುದು ಧ್ವನಿಪೂರ್ಣವಾಗಿದೆ. ಮೊದಲ ಲೇಖನದ ಪೂರ್ವದಲ್ಲಿ ‘ನಾನು ಚಿತ್ರಿಸಿದಂತೆ ನನ್ನ ದೇವರು’ ಶೀರ್ಷಿಕೆಯ ಅಡಿಯಲ್ಲಿ ಎದೆಯ ಭಾಗದಿಂದ ರೇಖಾಚಿತ್ರದಲ್ಲಿ ಮೂಡಿ ನಿಂತಿರುವ ಬುದ್ಧನ ಚಿತ್ರ ಇನ್ನೂ ಸಾಂಕೇತಿಕವಾಗಿದೆ. ಇಂದಿನ ಭ್ರಷ್ಟ ರಾಜಕಾರಣ ಮತ್ತು ವಿಷಮ ಪರಿಸ್ಥಿತಿಗಳ ನಡುವೆ ಸಿಲುಕಿ ಒದ್ದಾಡುತ್ತಿರುವ ತಳ ಸಮುದಾಯಗಳ ನಡೆ ಯಾವ ದಿಶೆಯತ್ತ ಎಂಬುದನ್ನು ಇದು ಸೂಚಿಸುತ್ತಿರಬಹುದೇ?

ಮತ್ತೊಂದು ಮುಖ್ಯ ಸಂಗತಿಯೆಂದರೆ ಅಸ್ಪಶ್ಯರಾಗಿ ಜನಿಸಿ, ಅಧ್ಯಾಪಕರಾಗಿ ಸೇವೆ ಸಲ್ಲಿಸಿ, ಬೌದ್ಧರಾಗಿ ನಿಧನರಾದ ಎಂ. ಮರಿಸ್ವಾಮಿ ಅವರ ಬದುಕಿನ ಒಂದು ಕಹಿ ಘಟನೆಯನ್ನು ನಿರೂಪಿಸುವುದರ ಮೂಲಕ ಈ ಕೃತಿಯ ಕೊನೆಯ ಲೇಖನವು ಆರಂಭವಾಗಿ ಅಂಬೇಡ್ಕರ್ ವಿರಚಿತ ಸಂವಿಧಾನದ ನಿಜವಾದ ಆಶಯಗಳ ತಳಪಾಯದ ಮೇಲಿನ ನಾಳಿನ ಭಾರತವನ್ನು ಕಟ್ಟಬೇಕಾಗಿದೆ ಎನ್ನುವ ಆಶಾಭಾವನೆಯೊಂದಿಗೆ ಮುಗಿಯುತ್ತದೆ. ಭಾರತದ ಚರಿತ್ರೆಯ ಪ್ರಾಚೀನ ಘಟ್ಟದಲ್ಲಿ ಬುದ್ಧ ಯಾವುದರ ವಿರುದ್ಧವಾಗಿ ಹೋರಾಟಗಳನ್ನು ನಡೆಸಿದನೋ ಆಧುನಿಕ ಭಾರತದ ಘಟ್ಟದಲ್ಲಿ ಅಂಬೇಡ್ಕರ್ ಅಂತಹ ಎಲ್ಲ ಅಸಮಾನತೆಯ ವಿರುದ್ಧ ಜೀವಮಾನವೆಲ್ಲ ಸಂಘರ್ಷ ನಡೆಸಿದ್ದನ್ನು ನೆನಪಿಸುತ್ತದೆ. ಅಂಬೇಡ್ಕರ್ ಬಾಲ್ಯದಿಂದಲೇ ಬುದ್ಧನ ಜೀವನ ಮತ್ತು ತತ್ವಗಳಿಂದ ತುಂಬ ಪ್ರಭಾವಿತರಾಗಿದ್ದರು. ಅವರು ಬುದ್ಧ ಮತ್ತು ಬೌದ್ಧ ಧರ್ಮವನ್ನು ಕುರಿತು ಆಳವಾದ ಅಧ್ಯಯನ ನಡೆಸಿದವರು; ಹಿಂದೂ ಧರ್ಮದ ಭಾಗವಾಗಿ ಬೆಳೆದು ಬಂದ ಜಾತಿ ವ್ಯವಸ್ಥೆಯ ಅವಮಾನದಿಂದ ಕುಪಿತರಾಗಿ ಬೌದ್ಧ ಧರ್ಮದ ಮೊರೆ ಹೋದವರು.

ಈ ಹಿನ್ನೆಲೆಯಲ್ಲಿ ಬುದ್ಧನ ಕಾಲದಿಂದ ಹಿಡಿದು ಅಂಬೇಡ್ಕರ್‍ವರಗೂ Young_Ambedkarಭಾರತೀಯ ಸಮಾಜ ಮತ್ತು ದುಡಿಯುವ ಸಮುದಾಯಗಳು ಚಾರಿತ್ರಿಕವಾಗಿ ಅನೇಕ ಬಗೆಯ ಬದಲಾವಣೆಗಳಿಗೆ ಸಾಕ್ಷಿಯಾಗಿವೆ. ಬುದ್ಧ ಉಪದೇಶಿಸಿದ ಸಮಾನತೆಯ ತತ್ವಗಳು ಎಷ್ಟೇ ಪ್ರಭಾವಕಾರಿಯಾಗಿದ್ದರೂ ಅವುಗಳಿಗೆ ಕಾನೂನಿನ ಚೌಕಟ್ಟು ಇರಲಿಲ್ಲ. ಈ ಹಂತದಲ್ಲಿ ದುಡಿಯುವ ವರ್ಗಗಳು ಹೆಚ್ಚು ಶೋಷಿತವಾಗಿದ್ದವು; ಜಾತಿಯ ಕಾರಣಕ್ಕಾಗಿಯೇ ಸಮಾಜದ ಮುಖ್ಯವಾಹಿನಿಯಿಂದ ದೂರವೇ ಇಡಲ್ಪಟ್ಟ ತಳ ಸಮುದಾಯಗಳು ಕ್ರೌರ್ಯದ ದಳ್ಳುರಿಯಲ್ಲಿ ಬೆಂದು ಹೊಗಿದ್ದವು. ಅಂಬೇಡ್ಕರ್ ಅವರ ದೀರ್ಘಕಾಲಿನ ಸಂಘರ್ಷಗಳ ಫಲವಾಗಿ ಸಂವಿಧಾನದಲ್ಲಿ ಸಮಾನತೆಯ ತತ್ವಗಳು ಸೇರುವಂತಾಗಿ ತಳ ಸಮುದಾಯಗಳು ಸ್ವಾಭಿಮಾನ ಮತ್ತು ಘನತೆಯಿಂದ ಬಾಳುವಂತಾಯಿತು. ಆದರೆ ಸಂವಿಧಾನೋತ್ತರ ಕಾಲಘಟ್ಟದ ಭಾರತದಲ್ಲಿ ದಲಿತ ಸಮುದಾಯಗಳು, ದುಡಿಯುವ ವರ್ಗಗಳು, ಬುಡಕಟ್ಟು ಜನಾಂಗಗಳು, ಅಲೆಮಾರಿಗಳು, ಕೂಲಿಕಾರರು, ಕಾರ್ಮಿಕರರು, ರೈತರು, ಮಹಿಳೆಯರು-ಎಲ್ಲ ಶೋಷಿತ ಸಮುದಾಯಗಳು ವಾಸ್ತವವಾಗಿ ಘನತೆ ಮತ್ತು ಗೌರವಗಳಿಂದ ಬದುಕಲು ಸಾಧ್ಯವಾಗಿದೆಯೇ? ಜಾತಿ ತಾರತಮ್ಯಗಳು, ಮತೀಯ ಶಕ್ತಿಗಳು, ಕಾರ್ಪೋರೇಟ್ ಉದ್ಯಮಗಳು, ಜಾಗತೀಕರಣ-ಇವೆಲ್ಲ ಸೇರಿಕೊಂಡು ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಈ ಹಿಂದೆಂದಿಗಿಂತಲೂ ಸಾವಿರಪಟ್ಟು ಹೆಚ್ಚಿಸಿಲ್ಲವೇ? ದೇವನೂರರ ‘ಎದೆಗೆ ಬಿದ್ದ ಅಕ್ಷರ’ ಕೃತಿಯು ಇಂತಹ ಹಲವಾರು ಪ್ರಶ್ನೆಗಳನ್ನು ಮುಖಾಮುಖಿ ಆಗಲು, ಚರ್ಚೆಗೆ ಆಹ್ವಾನಿಸಲು ಪ್ರೇರೆಪಿಸುತ್ತದೆ.

ದೇವನೂರರು ತಮ್ಮ ತಾತ್ವಿಕತೆಯನ್ನು ಬುದ್ಧ, ಗಾಂಧಿ, ಅಂಬೇಡ್ಕರ್ ಮತ್ತು ಲೋಹಿಯಾ-ಈ ನಾಲ್ಕು ವ್ಯಕ್ತಿಗಳ ಚಿಂತನೆಗಳಿಂದ ರೂಪಿಸಿಕೊಂಡರೆಂದು ಅನಿಸುತ್ತದೆ. ಇವರಲ್ಲಿ ಆಧುನಿಕ ಕಾಲದ ಮೂವರು ಭಾರತೀಯ ಸಮಾಜವನ್ನು ವಿಘಟನೆ ಮಾಡಿರುವ ಜಾತಿ ವ್ಯವಸ್ಥೆಯನ್ನು ಭಿನ್ನವಾದ ನೆಲೆಯಲ್ಲಿಯೇ ಅರ್ಥೈಸಿಕೊಂಡವರು. ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರಿಂದ ರೈಲಿನಿಂದ ದಬ್ಬಿಸಿಕೊಂಡು ಹೊರಬಿದ್ದ ಅವಮಾನದ ಸನ್ನಿವೇಶ ಕುರಿತು ದೇವನೂರರು ಹೀಗೆ ಹೇಳುತ್ತಾರೆ: “ಆತನ ಆತ್ಮಕ್ಕೆ ಆಚೆ ಬಿದ್ದಿರುವ ಅಸ್ಪಶ್ಯ ಆತ್ಮಗಳು ಸೇರಿಕೊಂಡು ಅಸ್ಪಶ್ಯತನದ ಬೀಜ ಅವನ ಎದೆಗೆ ಬಿದ್ದಂತಾಗಿ ಮಹಾತ್ಮ ಆಗಲು ಆರಂಭಿಸುತ್ತಾನೆ. ಕೇವಲ ಈ ಒಂದು ಅವಮಾನಕ್ಕೆ ಆ ಮೋಹನದಾಸನು ‘ಮಹಾತ್ಮಾಗಾಂಧಿ’ಯಾಗಿ ಪರಿವರ್ತನೆಗೊಳ್ಳುವುದಾದರೆ ದೇಹವಿಡೀ, ಜೀವನವಿಡೀ ಅವಮಾನದಿಂದಲೇ ಮಾಡಲ್ಪಟ್ಟ ಅಸ್ಪøಶ್ಯ ಬೆಳೆದರೆ ಅದೆಷ್ಟು ಎತ್ತರಕ್ಕೆ ಬೆಳೆಯಬಹುದೆಂಬುದು ನನ್ನ ಊಹೆ ಅಳತೆಗಳಿಗೆ ನಿಲುಕದಷ್ಟು ಎತ್ತರದ್ದಾಗಿಬಿಟ್ಟಿತು.”4 ಇದಕ್ಕೆ ಅವಮಾನಿತ ಜಗತ್ತಿನಿಂದ ಬಂದ ಅಂಬೇಡ್ಕರ್ ಬೆಳೆದ ಬಗೆ ಒಂದು ಅತ್ಯುತ್ತಮ ನಿದರ್ಶನವಾಗಿದೆ. ಗಾಂಧಿ ತನ್ನ ಹೊರಗಿನ ಶತ್ರುಗಳ ವಿರುದ್ಧ ಪ್ರತಿಭಟನೆ ನಡೆಸಿದವರು; ಆದರೆ ಅಂಬೇಡ್ಕರ್ ತಮ್ಮನ್ನು ಅಸ್ಪಶ್ಯನೆಂದು ದೂರೀಕರಿಸಿದ ತನ್ನ ನೆಲದ ಜನರೊಂದಿಗೆ ಸಂಘರ್ಷ ನಡೆಸಬೇಕಾಯಿತು. ಈ ಹಿನ್ನೆಲೆಯಲ್ಲಿ ದೇವನೂರರು ಬುದ್ಧ ಮತ್ತು ಗಾಂಧಿಯಲ್ಲಿನ ಸಂತತನವನ್ನು ಮೆಚ್ಚಿಕೊಳ್ಳುತ್ತಾರೆ. ಇದಕ್ಕೆ ಪೂರಕವಾಗಿ ದೇವನೂರರಲ್ಲಿ ಸಂತನನ್ನು ಹುಡುಕುವ, ಅವರನ್ನು ಸಂತ ಪದವಿಗೇರಿಸುವ ಭಕ್ತಗಣ ಬೆಳೆಯುತ್ತಿದೆ ಎನ್ನುವ ಆಪಾದನೆಗಳು ಕೇಳಿ ಬರುತ್ತಿವೆ.5

ದೇವನೂರರು ಮಹಾತ್ಮ ಗಾಂಧಿ ಅವರ ದಲಿತರನ್ನು ಕುರಿತು ಹೊಂದಿದ್ದ ಧೋರಣೆಗಳ ಮಿತಿಗಳನ್ನು ಗ್ರಹಿಸಿದರೂ ಗಾಂಧಿಯನ್ನು ಸಾರಾಸಗಟಾಗಿ ನಿರಾಕರಿಸುವುದಿಲ್ಲ. ಗಾಂಧಿ ಮತ್ತು ಅಂಬೇಡ್ಕರ್ ಅವರ ದಾರಿಗಳು ಭಿನ್ನವಾಗಿದ್ದರೂ ಗುರಿ ಒಂದೇ ಎಂದು ದೇವನೂರರು ಒಪ್ಪುತ್ತಾರೆ. ಇವರಿಬ್ಬರ ಚಿಂತನೆಗಳು ಪರಸ್ಪರ ಪೂರಕವೆಂದು ಕೌಟುಂಬಿಕ ಜಗಳ ಮತ್ತು ಸಹಬಾಳ್ವೆಯ ನೆಲೆಯಲ್ಲಿ ಪರಿಭಾವಿಸುತ್ತಾರೆ. ಗಾಂಧಿಯನ್ ಐಡಿಯಾಲಾಜಿಯಲ್ಲಿ ಸಾಮಾಜಿಕವಾಗಿ ಅತ್ಯಂತ ಕೆಳಸ್ತರಕ್ಕೆ ಸೇರಿದವನಿಗೂ ನ್ಯಾಯ ಸಿಗಬೇಕೆಂಬ ನಿಲುವಿದೆ. ಗಾಂಧೀಜಿಯವರ ತತ್ವವು ದಲಿತರನ್ನು ಉದಾರ ಮಾನವತಾವಾದಿ ನೆಲೆಯಲ್ಲಿ, ಅಪಾರ ಸಹಾನುಭೂತಿಯಿಂದ ನೋಡುತ್ತದೆ. ಆದರೆ ಅಂಬೇಡ್ಕರ್ ಅವರು ಜಾತಿ ಪದ್ಧತಿಯ ಆಚರಣೆಯಿಂದ ಉದ್ಭವಿಸುವ ಎಲ್ಲ ಬಗೆಯ ಅಸಮಾನತೆಗಳ ವಿರುದ್ಧ ಬಂಡಾಯವೆದ್ದರು; ಜಾತಿ ವಿನಾಶದ ಗುರಿಯನ್ನು ಹೊಂದಿದ್ದರು. ಗಾಂಧಿ ತತ್ವಗಳು ಜಾತಿ, ಅಸ್ಪøಶ್ಯತೆ, ಬಡತನ, ಅವಮಾನದಂತಹ ಸಮಸ್ಯೆಗಳನ್ನು ತೀವ್ರ ಸಹಾನುಭೂತಿಯಿಂದ ಕಂಡು, ದಲಿತರ ಆರ್ಥಿಕ ಮತ್ತು ರಾಜಕೀಯ ಅಭೀಪ್ಸೆಗಳನ್ನು ನಿರ್ಲಕ್ಷ ಮಾಡುತ್ತವೆ. ಇದು ದಲಿತರ ಸಾಮಾಜಿಕ ಮತ್ತು ಆರ್ಥಿಕ ಸಂರಚನೆಯಲ್ಲಿ ಯಾವುದೇ ಗುರುತರವಾದ ಬದಲಾವಣೆಗಳನ್ನುಂಟು ಮಾಡಲಿಲ್ಲ. ಆದ್ದರಿಂದ ದಲಿತರ ಮೂಲಭೂತ ಸಮಸ್ಯೆಗಳು ಯಥಾಸ್ಥಿತಿಯಲ್ಲಿ ಮುಂದುವರಿಯುತ್ತವೆ. ಇದಕ್ಕೆ ವಿರುದ್ಧವಾಗಿ ಅಂಬೇಡ್ಕರ್ ಅಸ್ಪøಶ್ಯರನ್ನು ಸಂಘಟಿಸುವುದರ ಮೂಲಕ ಅವರನ್ನು ಸಾಮಾಜಿಕ ನ್ಯಾಯ ಮತ್ತು ರಾಜಕೀಯ ಸಮಾನತೆಯ ಹಕ್ಕುಗಳಿಗಾಗಿ ಸಂಘರ್ಷ ಮತ್ತು ಹೋರಾಟ ನಡೆಸುವಂತೆ ಮಾಡಿದರು. ಹೀಗೆ ಗಾಂಧಿಗೆ ಲೋಹಿಯಾ, ಲೋಹಿಯಾಗೆ ಅಂಬೇಡ್ಕರ್ ಕೂಡಿಕೊಳ್ಳಬೇಕೆಂದು ದೇವನೂರರು ಆಶಿಸುತ್ತಾರೆ. ಇದು ಸಕಲವನ್ನು ಒಳಗೊಳ್ಳುವ ಪರಿಕಲ್ಪನೆಯಾಗಿದೆ.

ಜಾತಿ ಮತ್ತು ಅಸ್ಪಶ್ಯತೆಯ ಇರುವಿಕೆಯನ್ನು ಕುರಿತು ವಿವರಿಸುವ, ವ್ಯಾಖ್ಯಾನಿಸುವ ಸಮಾಜಶಾಸ್ತ್ರೀಯ ಅಧ್ಯಯನಗಳಿಗಿಂತಲೂ devanurದೇವನೂರರ ಲೇಖನಗಳಲ್ಲಿ ವ್ಯಕ್ತವಾಗಿರುವ ದೃಷ್ಟಿ-ಧೋರಣೆಗಳು ಹೆಚ್ಚು ತೀಕ್ಷ್ಣವಾಗಿವೆ. ಅಕಾಡೆಮಿಕ್ ವಲಯದ ಹೆಚ್ಚಿನ ಸಂಶೋಧನೆ, ಅಧ್ಯಯನಗಳಲ್ಲಿರುವ ತಾತ್ವಿಕತೆಯ ಭಾರವಾಗಲಿ ಮತ್ತು ಭಾಷಿಕ ಜಡತೆಯಾಗಲಿ ಇಲ್ಲಿಲ್ಲ. ದೇವನೂರರು ಮುಖ್ಯವಾಗಿ ರೂಪಕ ನೆಲೆಯ ಒಬ್ಬ ಸೃಜನಶೀಲ ಲೇಖಕರಾಗಿ ಅಸಮಾನತೆಯ ತಳಹದಿಯ ಮೇಲೆ ನಿಂತಿರುವ ನಮ್ಮ ಸಾಮಾಜಿಕ ವ್ಯವಸ್ಥೆಯ ವಸ್ತುಸ್ಥಿತಿಯನ್ನು ತೋರುಗನ್ನಡಿಯಾಗಿ ಬಿಂಬಿಸಿದ್ದಾರೆ. ಜಾಗತೀಕರಣದ ಈ ಆಧುನಿಕ ಕಾಲದಲ್ಲಿ ಜಾತಿ ವ್ಯವಸ್ಥೆ ಎಲ್ಲಿದೆ ಎಂದು ಕೇಳುವ ಹಾಗೂ ಜಾತಿ ಪದ್ಧತಿಯೇ ಮಾಯವಾಗಿ ಹೋಗಿದೆ ಎಂದು ವಾದಿಸುವವರ ಒಂದು ವರ್ಗವೇ ಸೃಷ್ಟಿಯಾಗಿದೆ. ಭಾರತದಲ್ಲಿ ಜಾತಿ ವ್ಯವಸ್ಥೆಯೇ ಇರಲಿಲ್ಲವೆಂದು, ಅದು ವಸಾಹತುಶಾಹಿಯ ಹೊಸ ಸೃಷ್ಟಿಯೆಂದು ವಾದಿಸುವ ಒಂದು ನಿರ್ದಿಷ್ಟ ಬ್ರಾಹ್ಮಣ ವರ್ಗವೂ ಹುಟ್ಟಿಕೊಂಡಿದೆ. ಆದರೆ ಜಾತಿಯತೆ ಅಥವಾ ಜಾತಿ ಶ್ರೇಣೀಕರಣದ ವ್ಯವಸ್ಥೆ ಭಾರತೀಯ ಸಮಾಜದ ಕಟು ವಾಸ್ತವತೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಯಜಮಾನಿಕೆಯ ಸ್ಥಾನದಲ್ಲಿರುವ ಮೇಲ್ಜಾತಿಗಳು ಸಣ್ಣಪುಟ್ಟ ಸಂಗತಿಗಳಿಗೂ ದಲಿತರನ್ನು ಬಹಿಷ್ಕರಿಸುತ್ತಿವೆ; ದಲಿತ/ಳು ಎನ್ನುವ ಒಂದೇ ಕಾರಣಕ್ಕಾಗಿ ಅಂತರ್‍ಜಾತಿ ವಿವಾಹಗಳನ್ನು ನಿಷೇಧಿಸಲಾಗುತ್ತಿದೆ; ದಲಿತರು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಸರ್ಕಾರದಿಂದ ಪಡೆಯುತ್ತಿರುವ ಮೀಸಲಾತಿಯನ್ನು ನಿಲ್ಲಿಸಬೇಕೆಂದು ಸವರ್ಣೀಯ ಜಾತಿಗಳು ಕೂಗುತ್ತಿವೆ; ಈ ಮೀಸಲಾತಿಯಿಂದಾಗಿಯೇ ಸಮಾಜದಲ್ಲಿ ಜಾತಿ ವ್ಯವಸ್ಥೆ ಪೋಷಣೆಯಾಗುತ್ತಿದೆ ಎನ್ನುವಂತಹ ಪ್ರತಿಗಾಮಿತನ ನಿಲುವುಗಳು ವ್ಯಕ್ತವಾಗುತ್ತಿವೆ. ಸಾಮಾಜಿಕವಾಗಿ ಜಾತಿ ತಾರತಮ್ಯತೆಗಳು ದೈವಿಕವೆಂದು ಸಾರುವುದರ ಮೂಲಕ ಅಸಮಾನತೆ ಸಹಜವೆಂದು ಸಮರ್ಥಿಸಲಾಗುತ್ತಿದೆ. ಸದ್ಯದ ಸ್ಥತಿಯಲ್ಲಿ ಶಿಕ್ಷಣ, ಸಂಪತ್ತು, ರಾಜಕೀಯ ಅಧಿಕಾರಕ್ಕಾಗಿ ಮೇಲ್ಜಾತಿಗಳು ದೊಡ್ಡ ಪ್ರಮಾಣದಲ್ಲಿ ಸಂಘಟಿತವಾಗುತ್ತಿವೆ. ಆದರೆ ಕೆಳಜಾತಿಗಳು ತಮ್ಮತಮ್ಮ ಆಂತರಿಕ ಕಚ್ಚಾಟಗಳಿಂದಾಗಿ ವಿಘಟಿತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ‘ಎದೆಗೆ ಬಿದ್ದ ಅಕ್ಷರ’ ಜಾತಿ, ಅಸ್ಪಶ್ಯತೆ, ಹಿಂದುತ್ವ, ಕೋಮುವಾದಗಳನ್ನು ಕುರಿತು ವಾದ ವಾಗ್ವಾದಗಳನ್ನು ಹುಟ್ಟು ಹಾಕಿದೆ. ದಲಿತರ ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಹಾಗೂ ನ್ಯಾಯಬದ್ದವಾಗಿ ದಕ್ಕಬೇಕಾಗಿರುವ ಹಕ್ಕುಗಳನ್ನು ಮಂಡಿಸಲೆತ್ನಿಸುತ್ತದೆ.

ದೇವನೂರರ ಕೃತಿಯಲ್ಲಿ ಲೋಕವಿಮರ್ಶೆಯ ಗುಣ ಮುಂದೆ ಬಂದಷ್ಟು ಆತ್ಮವಿಮರ್ಶೆಯ ಗುಣ ಮುನ್ನಡೆಗೆ ಬರುವುದಿಲ್ಲ; ಅವರು ತಮ್ಮನ್ನು ಒಂದು ಮನೋಧರ್ಮದ, ಒಂದು ಸಾಮಾಜಿಕ ಸ್ಥಿತಿಯ ಪ್ರತೀಕವಾಗಿಯೇ ಪರಿಭಾವಿಸಿಕೊಂಡು ಬರೆಯುತ್ತಾರೆ. ದೇವನೂರರು ವ್ಯಕ್ತಿಯಾಗಿ ಹೇಗೆ ಕಾಣುತ್ತಾರೆಂಬುದು ಅವರ ವಕ್ತಾರತನದಾಚೆಗೆ ಕುತೂಹಲಕರವಾಗಿಯೇ ಉಳಿಯುತ್ತದೆ. ಗಾಂಧಿ, ಅಂಬೇಡ್ಕರ್‍ರಷ್ಟು ಬುದ್ಧ ಇನ್ನೂ ದೇವನೂರರ ಪ್ರಜ್ಞೆಯ ಭಾಗವಾಗಿಲ್ಲ; ದಲಿತ ಸಮಾಜದ ತಳದಲ್ಲಿರುವವರ ನೋವು-ನಲಿವುಗಳ ನೆಲೆಗಳನ್ನು ಗ್ರಹಿಸುವ ದೇವನೂರರ ಬರವಣಿಗೆ, ಚಿಂತನೆಯ ಕ್ರಮ ಸಮಕಾಲೀನ ದಲಿತ ಮತ್ತು ಭಾರತೀಯ ಸಮಾಜದ ವೈವಿಧ್ಯಮಯ ಪಲ್ಲಟಗಳನ್ನು ಮತ್ತು ಅದರ ಸೂಕ್ಷ್ಮತೆಗಳನ್ನು ಗ್ರಹಿಸುವುದಿಲ್ಲ; ಆದ್ದರಿಂದ ದೇವನೂರರ ಚಿಂತನೆಯ ಮಾದರಿ ಕಳೆದ ಶತಮಾನದ ಎಪ್ಪತ್ತು-ಎಂಬತ್ತರ ದಶಕಗಳಲ್ಲಿ ರೂಪುಗೊಂಡು ಅದೇ ಚೌಕಟ್ಟುಗಳಲ್ಲಿ ಸ್ಥಗಿತಗೊಂಡಿದೆ.6 ಆಪಾದನೆಯ ರೂಪದಲ್ಲಿರುವ ಈ ನಿಲವುಗಳು ದೇವನೂರರ ಚಿಂತನೆಯ ಆಳ-ಅಗಲಗಳನ್ನು ತುಂಬ ಸರಳೀಕರಿಸಿ ನೋಡುತ್ತವೆ. ದೇವನೂರರ ಬದುಕು ಮತ್ತು ಬರಹಗಳು ಅವರು ಪ್ರತಿನಿಧಿಸುವ ದಲಿತ ಸಮುದಾಯದಲ್ಲಿ ಕರಗಿ ಒಂದಾಗಿವೆ ಎನ್ನುವುದಕ್ಕೆ ‘ಎದೆಗೆ ಬಿದ್ದ ಅಕ್ಷರ’ ಕೃತಿಯ ಯಾವ ಪುಟ ತೆರದರೂ ಕುರುಹುಗಳು ಕಣ್ಣಿಗೆ ರಾಚುತ್ತವೆ. ನ್ಯಾಯಬದ್ದವಾಗಿ ತಮಗೆ ದಕ್ಕಬೇಕಾಗಿದ್ದ ಸಾಮಾಜಿಕ, ರಾಜಕೀಯ, ಸಾಂಸ್ಕತಿಕ ಹಕ್ಕು-ಸವಲತ್ತುಗಳಿಂದ ವಂಚಿತವಾಗಿರುವ ಹಾಗೂ ಪ್ರಸ್ತುತ ಸಂದರ್ಭದಲ್ಲಿ ದನಿಯೆತ್ತಿ ಕೇಳುವ ಬಲವಿಲ್ಲದೆ ಸೊರಗುತ್ತಿರುವ ಎಲ್ಲ ದಮನಿತ ಸಮುದಾಯಗಳ ಸಮಾನತೆಯನ್ನು ಆಶಿಸುವ ದೇವನೂರ ಅವರು ನಿಜವಾದ ಅರ್ಥದಲ್ಲಿ ಸಾಂಸ್ಕತಿಕ ನಾಯಕರಾಗಿದ್ದಾರೆ.

ಚರಿತ್ರೆಯುದ್ದಕ್ಕೂ ದಮನಕ್ಕೆ ಒಳಗಾಗುತ್ತ ಬಂದಿರುವ ಎಲ್ಲ ವರ್ಗಗಳ ಸಮಾನತೆಯ ನೆಲೆಯಲ್ಲಿ ಅವರ ಲೇಖನಗಳು ಮಾತನಾಡುತ್ತವೆ. ಮೇಲ್‍ನೋಟಕ್ಕೆ ಈ ಕೃತಿ ಬಿಡಿಬಿಡಿಯಾದ ಲೇಖನಗಳು ಮತ್ತು ಭಾಷಣಗಳ ಸಂಕಲನದಂತೆ ಕಂಡರೂ ಅದು ಏಕಕಾಲಕ್ಕೆ ನಾಲ್ಕು ದಶಕಗಳ ಕರ್ನಾಟಕದ ಸಾಹಿತ್ಯ, ರಾಜಕೀಯ, ಧಾರ್ಮಿಕ, ಸಾಂಸ್ಕತಿಕ ವಿದ್ಯಮಾನಗಳನ್ನು ದಾಖಲಿಸುವ ಸಂಕಥನವಾಗಿದೆ; ಸದ್ಯದ ಕಾಲಮಾನದಲ್ಲಿ ಜಾತಿ ವ್ಯವಸ್ಥೆಯ ವಿಕಾರಗಳು ದಲಿತರನ್ನು ಮತ್ತಷ್ಟು ಅಧೋಗತಿಗೆ ತಳ್ಳುತ್ತಿವೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ದಲಿತರ ಮೇಲೆ ಸವರ್ಣೀಯರಿಂದ ನಡೆಯುವ ಹಿಂಸೆ, ಅತ್ಯಾಚಾರ, ದಬ್ಬಾಳಿಕೆ, ಕ್ರೌರ್ಯಗಳು ನಿಂತಿಲ್ಲ. ಊಳಿಗಮಾನ್ಯ ಮೌಲ್ಯಗಳ ಪಳೆಯುಳಿಕೆಗಳಂತಿರುವ ಹಳ್ಳಿಗಳಲ್ಲಿ ಕ್ಷುಲ್ಲಕ ಸಂಗತಿಗಳಿಗೂ ದಲಿತ ಜನಾಂಗದವರ ಬಹೀಷ್ಕಾರಗಳು ತೀರ ಸಾಮಾನ್ಯವಾಗಿ ಬಿಟ್ಟಿವೆ. ಈ ಹಿನ್ನೆಲೆಯಲ್ಲಿ ದೇವನೂರರ ಲೇಖನಗಳು ಸಾಮಾಜಿಕ ತಲ್ಲಣ ಮತ್ತು ದಲಿತ ಸಮುದಾಯಗಳ ವಸ್ತು ಸ್ಥಿತಿಯನ್ನು ಅತ್ಯಂತ ಸೂಕ್ಷ್ಮವಾದ ಹಾಗೂ ಸಂಕೀರ್ಣವಾದ ನೆಲೆಯಲ್ಲಿ ವಿಶ್ಲೇಷಿಸುತ್ತವೆ. ಇದರೊಂದಿಗೆ ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ, ಅಸ್ಪಶ್ಯತೆಯ ಆಚರಣೆ, ಕಂದಾಚಾರ-ಇಂಥವುಗಳು ನಿರ್ನಾಮವಾಗಬೇಕು; ಪ್ರಸ್ತುತ ಸಾಂಪ್ರದಾಯಿಕವಾದ ಜಡ ಸಮಾಜವನ್ನು ಪರಿವರ್ತಿಸಬೇಕೆನ್ನುವ ತುಡಿತಗಳೇ ದೇವನೂರರ ಚಿಂತನೆಯಲ್ಲಿ ಅಂತರ್ಗತವಾಗಿವೆ. ಮಾರ್ಕ್ಸ್‌ನ ಸಿದ್ಧಾಂತಗಳು ಈ ಜಗತ್ತನ್ನು ಬದಲಿಸುವ ಕಡೆಗೆ ಹೆಚ್ಚಿನ ಆಸಕ್ತಿಯನ್ನು ತೋರುವಂತೆ ದೇವನೂರರ ವಿಚಾರಧಾರೆಯು ಸ್ಥಾಪಿತ ಮೌಲ್ಯಗಳನ್ನು ಬುಡಮೇಲು ಮಾಡಿ ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆಯ ನೆಲೆಗಟ್ಟಿನ ಮೇಲೆ ‘ಸರ್ವರಿಗೆ ಸಮಬಾಳು; ಸರ್ವರಿಗೆ ಸಮಪಾಲು’ ಎನ್ನುವ ಸರ್ವಸಮಾನತೆಯ ಸಮಾಜವನ್ನು ನಿರ್ಮಿಸುವ ಇಂಗಿತವನ್ನು ಹೊಂದಿವೆ.

ಕೊನೆಟಿಪ್ಪಣಿಗಳು
1. ದೇವನೂರ ಮಹಾದೇವ, ‘ನನ್ನ ದೇವರು’, ಎದೆಗೆ ಬಿದ್ದ ಅಕ್ಷರ, ಪು. 5, ಅಭಿನವ ಪ್ರಕಾಶನ, 2012
2. ರಹಮತ್ ತರೀಕೆರೆ, ‘ತೇಜಸ್ವಿಯವರ ಮಾಯಾಲೋಕ’, ಕತ್ತಿಯಂಚಿನ ದಾರಿ, ಪು. 53, ಅಭಿನವ ಪ್ರಕಾಶನ, 2006, 2010
3. ಪ್ರಧಾನ ಗುರುದತ್ತ(ಸಂ), ಅಂಬೇಡ್ಕರ್, ‘ಬುದ್ಧ ಅಥವಾ ಕಾರ್ಲ್‍ಮಾಕ್ರ್ಸ್’, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು, ಸಂಪುಟ-3, ಪು. 464, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು, 1994, 2010
4. ದೇವನೂರ ಮಹಾದೇವ, ಅದೇ, 301
5. ಎಚ್.ಎಸ್. ಅನುಪಮಾ, ‘ಎದೆಯ ಮಾತು ಮತ್ತು ಮೆರವಣಿಗೆ’, ಸಂವಾದ, ಪು. 27, ಏಪ್ರಿಲ್ 2013
6. ಹೆಚ್ಚಿನ ವಿವರಗಳಿಗೆ ನೋಡಿ, ಕೆ. ಸತ್ಯನಾರಾಯಣ, ‘ಎದಗೆ ಬಿದ್ದ ಪ್ರಚಾರ!’, ಕನ್ನಡ ಪ್ರಭ ಪತ್ರಿಕೆಯ ಸಾಪ್ತಾಹಿಕ ಪ್ರಭ, ಪು. 1 ಮತ್ತು 5, ಮಾರ್ಚ್ 10, 2013

ನಮ್ಮ ಗ್ರಾಮ ಪಂಚಾಯಿತಿಗಳು ಎಷ್ಟು ಸಬಲ?


– ರವಿ 


[ಚಿಂತಕ ಮತ್ತು ಲೇಖಕ ಡಿ.ಎಸ್.ನಾಗಭೂಷಣರು ಸಂಪಾದಿಸುತ್ತಿರುವ “ಹೊಸ ಮನುಷ್ಯ” ಮಾಸಿಕಕ್ಕೆ ಇತ್ತೀಚೆಗೆ ಈ ಲೇಖನ ಬರೆದಿದ್ದೆ. ಇಲ್ಲಿ ಲಗತ್ತಿಸಿರುವ ಚಿತ್ರದಲ್ಲಿ “ಹೊಸ ಮನುಷ್ಯ” ಮಾಸಿಕದ ವಿವರಗಳು ಮತ್ತು ಸಂಪರ್ಕ ಸಂಖ್ಯೆಗಳು ಲಭ್ಯವಿವೆ. ಸಾಧ್ಯವಾದರೆ ದಯವಿಟ್ಟು ಅದಕ್ಕೆ ಚಂದಾದಾರರಾಗಿ. ರವಿ]

***

hosamanushyaಅಧಿಕಾರ ವಿಕೇಂದ್ರೀಕರಣ ಮತ್ತು ಸ್ವರಾಜ್ಯದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಎರಡು-ಮೂರು ದಶಕಗಳಿಂದ ನಡೆಯುತ್ತಿರುವ ಗ್ರಾಮ-ತಾಲ್ಲೂಕು-ಜಿಲ್ಲಾ ಪಂಚಾಯಿತಿ ಚುನಾವಣೆಗಳು ಕ್ರಾಂತಿಕಾರಕ ಮತ್ತು ಪ್ರಗತಿಶೀಲ ಹೆಜ್ಜೆಗಳು. ಪ್ರಜಾಪ್ರಭುತ್ವವನ್ನು ಸಶಕ್ತಗೊಳಿಸುವ ಮತ್ತು ಬೇರುಮಟ್ಟದಲ್ಲಿ ಬಲಪಡಿಸುವ ಈ ಪದ್ಧತಿ ಹಲವಾರು ಎಡರುತೊಡರುಗಳ ನಡುವೆ ಕರ್ನಾಟಕದಲ್ಲಿ ನಿರಂತರವಾಗಿ ನಡೆದು ಬರುತ್ತಿದೆ. ಅದಕ್ಕಾಗಿ ನಾವೆಲ್ಲ ಒಂದು ಮಟ್ಟದವರೆಗಾದರೂ ತೃಪ್ತಿ ಮತ್ತು ಸಂತೋಷ ಪಡಬೇಕಿದೆ.

ಆದರೆ, ಈಗಿರುವ ಪಂಚಾಯಿತಿ ವ್ಯವಸ್ಥೆ ಎಲ್ಲಾ ರೀತಿಯಿಂದಲೂ ಸರಿಯಾಗಿದೆಯೇ ಎಂದರೆ, ಎಲ್ಲವೂ ಸರಿಯಿಲ್ಲ ಎನ್ನುವುದೇ ತಕ್ಕ ಉತ್ತರ. ಸುಧಾರಣೆಗಳು ಆಗುತ್ತಲೇ ಇವೇ, ಆಗುತ್ತಲೇ ಇರಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಸಣ್ಣಪುಟ ಸುಧಾರಣೆಗಳಷ್ಟೇ ಅಲ್ಲದೆ ಮೂಲಭೂತ ಬದಲಾವಣೆಗಳೂ ಆಗಬೇಕಿವೆ. ನಮ್ಮ ದೇಶದ “First Past The Post” ಚುನಾವಣಾ ವ್ಯವಸ್ಥೆ ಸಮಾಜದ ಎಲ್ಲಾ ವರ್ಗದವರಿಗೂ ಸರಿಯಾದ ಪ್ರಾತಿನಿಧ್ಯ ಕೊಡುತ್ತಿಲ್ಲ ಮತ್ತು ಅದನ್ನು “Proportional Representation” ವ್ಯವಸ್ಥೆಗೆ ಬದಲಾಯಿಸಬೇಕು ಎಂಬ ಕೂಗು ಇತ್ತೀಚಿನ ದಿನಗಳಲ್ಲಿ ಬಲವಾಗುತ್ತಿದೆ. ಹಾಗೆಯೇ ಪ್ರಧಾನಮಂತ್ರಿ/ಮುಖ್ಯಮಂತ್ರಿಗಳ ಆಯ್ಕೆಗೆ ಈಗಿನ ಸಂಸದೀಯ ವ್ಯವಸ್ಥೆಯ ಬದಲಿಗೆ ನೇರಆಯ್ಕೆ ವ್ಯವಸ್ಥೆ ಮಾಡಿದರೆ ಹೇಗೆ ಎನ್ನುವ ಪ್ರಶ್ನೆಗಳೂ ಎದ್ದೇಳುತ್ತಿವೆ. ಇಂತಹುದೇ ಪ್ರಶ್ನೆಗಳು ನಮ್ಮ ಗ್ರಾಮ ಪಂಚಾಯಿತಿಯ ವಿಚಾರಕ್ಕೂ ಆಗುತ್ತಿದೆ.

ಇದೆಲ್ಲದರ ಜೊತೆಗೆ ಮೂರು ದಶಕಗಳಿಂದ ಈ ಪಂಚಾಯಿತಿ ವ್ಯವಸ್ಥೆಯಲ್ಲಿ ಇರುವ ಕೆಲವು ಮೂಲಭೂತ ನ್ಯೂನತೆಗಳು ಹಾಗೆಯೇ hosamanushya-2ಉಳಿದುಕೊಂಡು ಬಂದಿದ್ದವು. ಪ್ರತಿ ಐದು ವರ್ಷಕ್ಕೊಮ್ಮೆ ಸ್ಥಾನಗಳ ಮೀಸಲಾತಿ ಬದಲಾವಣೆ ಮಾಡುವುದರಿಂದ ಬಹುತೇಕ ಗೆದ್ದ ಅಭ್ಯರ್ಥಿಗಳಿಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಗುತ್ತಿರಲಿಲ್ಲ. ಹೀಗಾಗಿ ತನ್ನ ಊರು ಅಥವ ಕ್ಷೇತ್ರಕ್ಕಾಗಿ ಪ್ರಾಮಾಣಿಕವಾಗಿ, ಪರಿಣಾಮಕಾರಿಯಾಗಿ ಕೆಲಸ ಮಾಡಲೇಬೇಕಾದ ಅಗತ್ಯ ಇರಲಿಲ್ಲ. ಹೇಗಿದ್ದರೂ ಮುಂದಿನ ಚುನಾವಣೆಗೆ ಅವಕಾಶ ಇಲ್ಲ, ಏನೇ ಅಯೋಗ್ಯ ಕೆಲಸ ಮಾಡಿದರೂ, ಭ್ರಷ್ಟಾಚಾರ ಮಾಡಿದರೂ ನಡೆಯುತ್ತದೆ, ಮೌಲ್ಯಮಾಪನ ಆಗುವುದಿಲ್ಲ ಎನ್ನುವ ಸಂದರ್ಭ ಇತ್ತು. ಮತ್ತೆ ಕೆಲವು ಕಡೆ ತಾಂತ್ರಿಕ ಕಾರಣಗಳ ಗೊಂದಲದಿಂದಾಗಿ ಮಹಿಳಾ ಸದಸ್ಯರ ಸಂಖ್ಯೆ, ಅದರಲ್ಲೂ ಮೀಸಲು ಕ್ಷೇತ್ರಗಳಲ್ಲಿ ಶೇ.೭೫ ಮೀರಿದ ಉದಾಹರಣೆಗಳಿದ್ದವು. ಹಣದ ಹೊಳೆ, ಯಾವಾಗೆಂದರೆ ಆಗ ಅಧ್ಯಕ್ಷ/ಉಪಾಧ್ಯಕ್ಷರ ಬದಲಾವಣೆ, ಅವಧಿಯ ಅಧಿಕಾರ ಹಂಚಿಕೆ, ಅಧ್ಯಕ್ಷರೇ ಇಲ್ಲದೆ ಅಧಿಕಾರಿಗಳೇ ಆಡಳಿತ ನಿಭಾಯಿಸಬೇಕಿದ್ದ ಪರಿಸ್ಥಿತಿ, ಭ್ರಷ್ಟಾಚಾರ ಮತ್ತು ಅಕ್ರಮಗಳು; ಹೀಗೆ ಅನೇಕ ಗೊಂದಲ ಮತ್ತು ವಾಮಮಾರ್ಗಗಳಲ್ಲಿ ನಮ್ಮ ಪಂಚಾಯಿತಿಗಳು ಕಾರ್ಯನಿರ್ವಹಿಸುತ್ತಿದ್ದವು.

ಇದೆಲ್ಲವನ್ನೂ ಒಂದು ಒಳ್ಳೆಯ ಮಾರ್ಗಕ್ಕೆ ಬದಲಾಯಿಸಬೇಕು ಎಂದು ಈ ರಾಜ್ಯ ಸರ್ಕಾರ ತೀರ್ಮಾನಿಸಿದ್ದನ್ನು ನಾವು ಸ್ವಾಗತಿಸಬೇಕು. ಈಗಿನ ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ಹೆಚ್.ಕೆ.ಪಾಟೀಲರು ಗ್ರಾಮೀಣ ವಿಚಾರಗಳ ಬಗ್ಗೆ ಆಸಕ್ತರಾಗಿರುವವರಷ್ಟೇ ಅಲ್ಲ, ಒಟ್ಟಾರೆಯಾಗಿ ಜನಪರ ಕಾಳಜಿ ಇರುವವರು. ಹಾಗೆಯೇ ಹಿಂದೆ ಜನತಾ ಪಕ್ಷದಲ್ಲಿದ್ದು, ಬೆಂಗಳೂರು ಜಿಲ್ಲಾಪಂಚಾಯಿತಿ ಅಧ್ಯಕ್ಷರಾಗಿ ಸಾಕಷ್ಟು ಕೆಲಸ ಮಾಡಿ, ಹೆಸರು ಮಾಡಿ, ಸಂಸದರೂ ಆಗಿದ್ದು ಈಗ ಕಾಂಗ್ರೆಸ್‌ನಲ್ಲಿರುವ ಸಿ.ನಾರಾಯಣಸ್ವಾಮಿಯವರೂ ಆಡಳಿತ ಪಕ್ಷದಲ್ಲೇ ಇರುವುದು ಈ ವಿಚಾರಕ್ಕೆ ಪ್ರೋತ್ಸಾಹ ಸಿಕ್ಕಂತಾಯಿತು. ಹಾಗಾಗಿ ಸರ್ಕಾರ ಕಳೆದ ವರ್ಷ ಮಾಜಿ ಸ್ಪೀಕರ್ ರಮೇಶ್‌ಕುಮಾರರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಸುಧಾರಣಾ ಶಿಫಾರಸುಗಳನ್ನು ಕೊಡಲು ಕೇಳಿಕೊಂಡಿತು. ಅದರಲ್ಲಿ ಪಂಚಾಯಿತಿ ವ್ಯವಸ್ಥೆಯಲ್ಲಿಯ ನ್ಯೂನತೆಗಳು ಮತ್ತು ಸುಧಾರಣೆಗಳ ಬಗ್ಗೆ ಅಪಾರ ಅಧ್ಯಯನ ಮಾಡಿರುವ ಸಿ.ನಾರಾಯಣಸ್ವಾಮಿಯವರು ಕೋರ್‌ಕಮಿಟಿಯ ಸದಸ್ಯರಾಗಿದ್ದರು.

ಈ ಸಮಿತಿ ನವೆಂಬರ್ ೭, ೨೦೧೪ರಲ್ಲಿ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿತು. ಅದರಲ್ಲಿ ಒಟ್ಟು ಎಂಬತ್ತು ಶಿಫಾರಸುಗಳಿದ್ದವು. ಆದರೆ ಸರ್ಕಾರ ಇಲ್ಲಿಯವರೆಗೆ ಅದರಲ್ಲಿ ಕೇವಲ ಮೂರನ್ನು ತೆಗೆದುಕೊಂಡು, ಅದರ ಜೊತೆಗೆ ತನ್ನ ಕಡ್ಡಾಯ ಮತದಾನ ಶಿಫಾರಸನ್ನು ಸೇರಿಸಿ ಕಾಯ್ದೆ ತಿದ್ದುಪಡಿ ಮಾಡಿತು. ಸಮಿತಿ ವರದಿಯಲ್ಲಿ ಸರ್ಕಾರ ಸ್ವೀಕರಿಸಿದ ಅಂಶಗಳೆಂದರೆ;

  1. ಐದು ವರ್ಷಗಳ ಮಿಸಲು ಅವಧಿಯನ್ನು ಎರಡು ಅವಧಿಗೆ, ಅಂದರೆ ಹತ್ತು ವರ್ಷಕ್ಕೆ ಬದಲಾಯಿಸಿದ್ದು,
  2. ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷರ ಅವಧಿಯನ್ನು ಐದು ವರ್ಷಕ್ಕೆ ವಿಸ್ತರಿಸಿ, ೩೦ ತಿಂಗಳೊಳಗೆ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ನೀಡದಿರುವುದು, ಮತ್ತು
  3. ಮಹಿಳಾ ಮೀಸಲಾತಿಗೆ ಸಂಬಂಧಿಸಿದ ನಿಯಮಗಳನ್ನು ವೈಚಾರಿಕವಾಗಿ ನಿಗದಿ ಪಡಿಸಿ ಮೀಸಲು ಸ್ಥಾನಗಳಲ್ಲಿ ಪುರುಷರಿಗೂ ಅವಕಾಶ ಹೆಚ್ಚಾಗುವಂತೆ ಮಾಡಿರುವುದು. (ಮಹಿಳಾ ಮೀಸಲಾತಿಯ ಗೊಂದಲದಿಂದಾಗಿ ಕಳೆದ ಬಾರಿಯ ಗ್ರಾಮಪಂಚಾಯಿತಿಗಳಲ್ಲಿ ರಾಜ್ಯದ ಒಟ್ಟಾರೆ ಎಸ್.ಸಿ/ಎಸ್.ಟಿ ಗಳಿಗೆ ಮೀಸಲಿದ್ದ ಸುಮಾರು ೧೬೦೦೦ ಸದಸ್ಯರಲ್ಲಿ ಸುಮಾರು ೧೩೦೦೦ ಸದಸ್ಯರು ಮಹಿಳೆಯರೇ ಆಗಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಜಿಲ್ಲಾ ಪಂಚಾಯಿತಿಯ ಸ್ಥಾನವೊಂದು ಕಳೆದ ಎರಡು ದಶಕಗಳಿಂದಲೂ ಮಹಿಳಾ ಎಸ್.ಟಿ. ಅಭ್ಯರ್ಥಿಗೇ ಮೀಸಲಾಗಿತ್ತು. ಇಂತಹವು ಈ ಬಾರಿಯ ತಿದ್ದುಪಡಿಗಳಿಂದಾಗಿ ಬದಲಾಗಿವೆ.)

ಆದರೆ, ಇನ್ನೂ ಹಲವು ಚುನಾವಣೆಗೆ ಸಂಬಂಧಿಸಿದ ಶಿಫಾರಸುಗಳನ್ನು ಸರ್ಕಾರ ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಗೆ ಒಪ್ಪಿಕೊಂಡಿಲ್ಲ. ಚುನಾವಣೆಯಲ್ಲಿ ಹಣದ ಪ್ರಭಾವವನ್ನು ತಡೆಯಲು ಪಂಚಾಯಿತಿ ಚುನಾವಣಾ ಪ್ರಚಾರ ಸಭೆಗಳು ಮತ್ತು ಕರಪತ್ರಗಳ ವೆಚ್ಚವನ್ನು ಸರ್ಕಾರವೇ ಭರಿಸಿ, ಮದ್ಯ ಹಂಚಿ ಮತದಾರರಿಗೆ ಆಮಿಷ ಒಡ್ಡುವುದನ್ನು ತಡೆಯಲು ಚುನಾವಣೆ ಘೋಷಣೆಯಾದ ದಿನದಿಂದ ಮುಗಿಯುವವರೆಗೆgram-panchayat-elections ಮದ್ಯದಂಗಡಿಗಳನ್ನು ಬಂದ್‌ ಮಾಡಬೇಕು, ಆ ಪ್ರದೇಶದ ಮದ್ಯದಂಗಡಿಗಳ ಕೀಲಿಯನ್ನು ಜಿಲ್ಲಾಧಿಕಾರಿಗಳ ವಶದಲ್ಲಿ ಇರಿಸಬೇಕು ಎಂಬ ಶಿಫಾರಸನ್ನು ಅದು ಕಾರ್ಯಸಾಧುವಲ್ಲ ಎಂದು ಕೈಬಿಟ್ಟಿದೆ. ಹಾಗೆಯೇ, ಗ್ರಾಮಪಂಚಾಯಿತಿಯಲ್ಲಿ ಏಕಸದಸ್ಯ ವಾರ್ಡಿನ ಶಿಫಾರಸು. ಇವತ್ತಿನ ಗ್ರಾಮ ಪಂಚಾಯಿತಿ ವ್ಯವಸ್ಥೆಯಲ್ಲಿ ಮೀಸಲಾತಿಯ ಕಾರಣಕ್ಕಾಗಿ ಬಹುತೇಕ ಎಲ್ಲಾ ಜನ ಮತ್ತು ಲಿಂಗ ವರ್ಗಗಳಿಗೆ ಪ್ರಾತಿನಿಧ್ಯ ದೊರಕುತ್ತಿದೆ. ಅಷ್ಟರಮಟ್ಟಿಗೆ ಅದು ಸರಿ. ಆದರೆ, ಇದು ಒಂದು ಜಾತ್ಯತೀತ ವ್ಯವಸ್ಥೆಯನ್ನು ಬಲಪಡಿಸುವ ಬದಲಿಗೆ ಕೆಲವು ಸಂದರ್ಭಗಳಲ್ಲಿ ಜಾತಿವೈಷಮ್ಯಗಳನ್ನು ಹುಟ್ಟುಹಾಕುತ್ತಿದೆ. ಯಾವುದೇ ಒಂದು ಮೀಸಲಾತಿ ವರ್ಗದ ಅಭ್ಯರ್ಥಿ ಸಾಮಾನ್ಯ ವರ್ಗದ ಅಭ್ಯರ್ಥಿಗಿಂತ ಹೆಚ್ಚಿನ ಮತಗಳನ್ನು ಪಡೆದರೆ, ಆತ/ಆಕೆಯನ್ನು ಸಾಮಾನ್ಯ ವರ್ಗಕ್ಕೆ ವರ್ಗಾಯಿಸಿ ಮೀಸಲಾತಿ ವರ್ಗದಲ್ಲಿ ಇನ್ನೊಂದು ಹೆಚ್ಚಿನ ಅವಕಾಶ ಕೊಡುವಂತಹ ಕ್ರಮ ಇದೆ. ಇದರಿಂದ ರಾಜ್ಯದ ಹಲವಾರು ಕಡೆ ಮೇಲ್ಜಾತಿಗಳ ಜನ ಮೀಸಲು ಕ್ಷೇತ್ರದ ಅಭ್ಯರ್ಥಿಗಳಿಗೇ ಮತವನ್ನೇ ಹಾಕುತ್ತಿಲ್ಲ. ಒಂದು ಮತವನ್ನು ಮಿಸಲು ಮತ್ತು ಇನ್ನೊಂದು ಮತವನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಚಲಾಯಿಸಬೇಕಾದ ಸಂದರ್ಭದಲ್ಲಿ ತಮ್ಮ ಮತವನ್ನು ಕೇವಲ ಸಾಮಾನ್ಯ ಅಭ್ಯರ್ಥಿಗಳಿಗೆ ಮಾತ್ರ ನೀಡುತ್ತಿದ್ದಾರೆ. ಇದಕ್ಕೆ ಒಂದೇ ಮತಪತ್ರ ಇರುವುದೂ ಕಾರಣವಾಗುತ್ತಿದೆ. ಇವು ಕೇವಲ ಗೊಂದಲಗಳನ್ನಷ್ಟೇ ಅಲ್ಲ, ಇಡೀ ಊರಿಗೆ ಯಾವೊಬ್ಬ ಸಾಮಾನ್ಯ ವರ್ಗದ ಸದಸ್ಯನೂ ಇಲ್ಲದ ಪರಿಸ್ಥಿತಿ ನಿರ್ಮಿಸಿ ಮೇಲ್ಜಾತಿಗಳಲ್ಲಿ ಅತೃಪ್ತಿಯನ್ನೂ ಮೂಡಿಸುತ್ತಿದೆ. ಹಾಗೆಯೇ ಒಂದು ಊರಿನ ನಾಲ್ಕು ಜನ ಸದಸ್ಯರು ಆಯ್ಕೆಯಾದಾಗ, ಯಾರು ಯಾವ ವಾರ್ಡು/ಬೀದಿಯನ್ನು ಪ್ರತಿನಿಧಿಸುತ್ತಾರೆ ಎನ್ನುವ ಹಾಗೆ ಇಲ್ಲ. ಗ್ರಾಮಸ್ಥರು ನಾಲ್ಕೂ ಜನ ಸದಸ್ಯರನ್ನು ಸಂಪರ್ಕಿಸಬೇಕಾಗುತ್ತದೆ ಮತ್ತು ಯಾರೂ ಹೊಣೆಗಾರಿಕೆ ತೆಗೆದುಕೊಳ್ಳದ ಸ್ಥಿತಿಯೂ ಸೃಷ್ಟಿಯಾಗುತ್ತದೆ. ಮೇಲಿನ ಎರಡೂ ನ್ಯೂನತೆಗಳನ್ನು ಏಕಸದಸ್ಯ ವಾರ್ಡಿನ ಶಿಫಾರಸನ್ನು ಒಪ್ಪಿಕೊಂಡಿದ್ದರೆ ಸರಿಪಡಿಸಲು ಸಾಧ್ಯವಿತ್ತು.

ಹಾಗಯೇ, ಗ್ರಾಮಪಂಚಾಯಿತಿಯ ಅಧ್ಯಕ್ಶ/ಉಪಾಧ್ಯಕ್ಷ ಸ್ಥಾನಕ್ಕೆ ನೇರ ಚುನಾವಣೆ ಮಾಡಬೇಕು ಎನ್ನುವ ಶಿಫಾರಸನ್ನು ರಮೇಶ್‌ಕುಮಾರ್ ಸಮಿತಿ ಮಾಡಿರಲಿಲ್ಲ. ಆದರೆ ಇದರ ಬಗ್ಗೆ ಸಚಿವ ಹೆಚ್.ಕೆ.ಪಾಟೀಲರಿಗೆ ಬಹಳ ಆಸಕ್ತಿಯಿತ್ತು ಎನ್ನುವ ಮಾಹಿತಿ ಇತ್ತು. ಆದರೆ ಆಗ ಕೇವಲ ಹಣ ಮತ್ತು ಪ್ರಭಾವ ಇರುವವರು ಮತ್ತವರ ಚೇಲಾಗಳೇ ಗೆದ್ದು ಬರುತ್ತಾರೆ ಎನ್ನುವ ಅಪಾಯ ಕಂಡಿದ್ದರಿಂದ ಅದನ್ನು ಅನುಷ್ಠಾನ ಮಾಡಲಿಲ್ಲ ಎನ್ನುವ ಮಾತು ಕೇಳಿಬಂದಿದೆ.

ಸರ್ಕಾರ ಇತ್ತೀಚಿನ ತಿದ್ದುಪಡಿಯ ಮೂಲಕ ಬದಲಾಯಿಸಿರುವುದು ಕೇವಲ ಚುನಾವಣೆಗೆ ಸಂಬಂಧಿಸಿದ ಕಾನೂನುಗಳನ್ನಷ್ಟೇ; ಅದೂ ಆಂಶಿಕವಾಗಿ. ಆದರೆ ಇದೇ ತಿಂಗಳ ಕೊನೆಗೆ ಆರಂಭವಾಗುವ ಬೆಳಗಾವಿ ಅಧಿವೇಶನದಲ್ಲಿ ಆಡಳಿತ ಮತ್ತು ಹಣಕಾಸು ಯೋಜನೆಗಳಿಗೆ ಸಂಬಂಧಿಸಿದ ಶಿಫಾರಸುಗಳನ್ನು ಒಪ್ಪಿಕೊಳ್ಳಲಿದೆ ಮತ್ತು ತಿದ್ದುಪಡಿ ಮಾಡಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಇವೆಲ್ಲವೂ ಮುಂದಿನ ತಾಲ್ಲೂಕು ಮತ್ತು ಜಿಲ್ಲಾಪಂಚಾಯಿತಿ ವ್ಯವಸ್ಥೆಯ ಸುಧಾರಣೆಗೆ ಅನುಕೂಲವಾಗುತ್ತವೆ. ಆದರೆ, ಈಗಿನ ಗ್ರಾಮಪಂಚಾಯಿತಿಯ ಹಲವಾರು ಚುನಾವಣಾ ಸಂಬಂಧಿ ನ್ಯೂನತೆಗಳು ಇನ್ನು ಐದು ವರ್ಷಗಳ ಕಾಲ ಮುಂದುವರೆಯಲಿದೆ.

ಇದೆಲ್ಲದರ ನಡುವೆ, ಇಷ್ಟರಲ್ಲೇ ಗ್ರಾಮ ಪಂಚಾಯಿತಿಯ ಅಧ್ಯಕ್ಷ/ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೆ ಅನೇಕ ಅಭ್ಯರ್ಥಿಗಳು ತಮ್ಮತಮ್ಮ ಪಟಾಲಂ‌ಗಳಿಗೆ ತೀರ್ಥಯಾತ್ರೆ ಮಾಡಿಸುವುದು, ರೆಸಾರ್ಟ್ ರಾಜಕೀಯ, ಕಾರು-ಬೈಕುಗಳ ಉಡುಗೊರೆ, ಇತ್ಯಾದಿ ಘನತೆಯ ಕೆಲಸಗಳಿಗೆ ಮುಂದಾಗಿದ್ದಾರೆ! ಮೊನ್ನೆಯ ಚುನಾವಣೆಗಳಲ್ಲಿ ತಮ್ಮ ಚಿಹ್ನೆ ಯಾವುದಿತ್ತೊ ಅದರ ನಿಜ ರೂಪಗಳನ್ನೇ ಸಾಧ್ಯವಾದಲ್ಲೆಲ್ಲ ಮತದಾರರಿಗೆ ಹಂಚಿದ್ಡಾರೆ ಕೂಡ. ಕೆಲವು ಊರುಗಳಲ್ಲಿ ಕೋಟಿ ರೂಪಾಯಿಗಳನ್ನು ಕೇವಲ ೪೦೦-೫೦೦ ಮತಗಳಿಗೆ ಚೆಲ್ಲಿದ್ದಾರೆ. ಬಾಡೂಟ-ಹೆಂಡದ ಸರಬರಾಜಂತೂ ಅವ್ಯಾಹತವಾಗಿ ನಡೆದಿದೆ. ಕೆಲವು ಕಡೆ ಊರಿನ ದೊಡ್ಡ ಮನುಷ್ಯರು ಹರಾಜು ಹಾಕಿ ಸ್ಥಾನಗಳನ್ನು ಮಾರಿ ಪ್ರಜಾಪ್ರಭುತ್ವ ಮತ್ತು ಚುನಾವಣೆಯ ಆಶಯಗಳನ್ನು ಅಣಕಿಸಿದ್ದಾರೆ. ಇಂತಹ ಅಕ್ರಮ, ನಗೆಪಾಟಲುಗಳನ್ನು ನಿಲ್ಲಿಸಬೇಕೆಂದರೆ ಕೇವಲ ಕಾನೂನನ್ನು ಗಟ್ಟಿ ಮಾಡುವುದರಿಂದಷ್ಟೇ ಸಾಧ್ಯವಿಲ್ಲ. ಕೇವಲ ಜನಜಾಗೃತಿಯಿಂದಲೂ ಸಾಧ್ಯವಿಲ್ಲ. ಇವೆರಡೂ ಒಟ್ಟೊಟ್ಟಿಗೆ ಕಾಲಪ್ರವಾಹದಲ್ಲಿ ಸಾಗಬೇಕಿದೆ. ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಂತೆ ಮಾಡುವುದು, ಅಧಿಕಾರ ದುರುಪಯೋಗಕ್ಕೆ ಕಡಿವಾಣ, ಅಕ್ರಮ ಎಸಗಿದವರಿಗೆ ಶೀಘ್ರ ಮತ್ತು ಕಠಿಣ ಶಿಕ್ಷೆಯ ಭಯ, ಸ್ಪರ್ಧೆಗೆ ಅನರ್ಹತೆ, ಮುಂತಾದ ಕ್ರಮಗಳ ಜೊತೆಜೊತೆಗೆ hosamanushya-3ಜನರೂ ಸಹ ತಮ್ಮ ಸ್ಥಳೀಯ ಆಡಳಿತದಲ್ಲಿ ಅಸಕ್ತಿ ಮತ್ತು ಪಾಲುದಾರಿಕೆ ಹೆಚ್ಚಿಸಿಕೊಳ್ಳುವುದರಿಂದ ಸಾಧ್ಯವಾಗುತ್ತದೆ.

ಇಷ್ಟೆಲ್ಲ ನ್ಯೂನತೆ ಮತ್ತು ಅಕ್ರಮ, ಅನೈತಿಕತೆಗಳ ನಡುವೆಯೂ, ಮತ್ತೊಂದಿಷ್ಟು ಸುಧಾರಣೆಗಳು ಮತ್ತು ಅಧಿಕಾರ ವಿಕೇಂದ್ರೀಕರಣದ ಈ ಪ್ರಕ್ರಿಯೆಗೆ ಹೊಂದಿಕೊಳ್ಳುವ ಮತ್ತು ವಿಕಾಸಗೊಳ್ಳುವ ಸಮಯವನ್ನು ನಮ್ಮ ಸಮಾಜಕ್ಕೆ ಕೊಟ್ಟರೆ, ಬಹುಶಃ ಮುಂದಿನ ಒಂದೆರಡು ದಶಕಗಳಲ್ಲಿ ಈ ವ್ಯವಸ್ಥೆ ತನ್ನ ಬಹುತೇಕ ಋಣಾತ್ಮಕ ಅಂಶಗಳನ್ನು ಕಳೆದುಕೊಂಡು ಉತ್ತಮ ವ್ಯವಸ್ಥೆಯಾಗುತ್ತದೆ ಎನ್ನುವ ವಿಶ್ವಾಸ ನನಗಿದೆ.