Daily Archives: August 8, 2015

ಸರಕಾರಿ ದುಡ್ಡಿನ ಸಮುದಾಯ ಭವನಕ್ಕೂ ಜಾತಿ ಹೆಸರು

                                                                                                                           – ಜೀವಿ

ಮುಂಜಾನೆ ಎಳೆ ಬಿಸಿಲು ಏರುತ್ತಿತ್ತು. ಬಿಸಿಲಿಗೆ ಎದುರಾಗಿ ಬೂದಿ ಜವರಪ್ಪ ಕುಳಿತ್ತಿದ್ದ. ಚಡ್ಡಿ ಸಂಟದ ಮೇಲಿರುವ ಬದಲಿಗೆ ಕೈಯಲ್ಲಿತ್ತು. ಚಡ್ಡಿ ಬದಲಿಗೆ ಹರುಕು ಪಂಚೆಯೊಂದನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದ. ಕಣ್ಣು ಅಷ್ಟಾಗಿ ಕಾಣಿಸದಿದ್ದರೂ ಚಡ್ಡಿಯಲ್ಲಿ ಏನೋ ಹುಡುಕಾಡುತ್ತಿದ್ದ. ಸತ್ತ ದನಕರುಗಳ ಚರ್ಮ ಸುಲಿದು ಮಾರಾಟ ಮಾಡುವುದು ಬೂದಿ ಜವರಪ್ಪನ ಕೆಲಸ. ಸತ್ತ ದನದಲ್ಲಿ ತನಗೆ ಬೇಕಾದ ಮಾಂಸ ತಂದು ಒಣಗಿಸಿ ಇಟ್ಟುಕೊಳ್ಳುತ್ತಿದ್ದ. ಅವನ ಮನೆಗೆ ಎದುರಿನದ್ದೆ ನನ್ನ ಮನೆಯಾಗಿದ್ದರಿಂದ ಹೆಚ್ಚು ಸಲಿಗೆ ಇತ್ತು. ಆಗೊಮ್ಮೆ ಈಗೊಮ್ಮೆ ಅವನು ಹೇಳಿದ ಸಣ್ಣಪುಟ್ಟ ಕೆಲಸ ಮಾಡಿ ನಾನೂ ಸುಟ್ಟ ಕೊರ ಬಾಡಲ್ಲಿ ಪಾಲು ಪಡೆಯುತ್ತಿದೆ. ಚರ್ಮ ಸುಲಿಯೋದು ಬಾರಿ ಸುಲಭ, ಕಾಲೇಜಿಗೆ ರಜೆ ಇದ್ದಾಗ ನನ್ನ ಜೊತೆ ಬಾsevalal_samudhaya_bhavan ಕಸುಬು ಕಲಿಸಿಕೊಡ್ತಿನಿ ಅನ್ನುತ್ತಿದ್ದ.

ಚರ್ಮ ಸುಲಿದು ಮಾರಾಟ ಮಾಡುತ್ತಿದ್ದರಿಂದ ಚಡ್ಡಿ ಜೇಬಿನಲ್ಲಿ ಪುಡಿಗಾಸು ಇದ್ದೇ ಇರುತ್ತಿತ್ತು. ತೊಳೆಯದೆ ಮಾಸಿ ಹೋಗಿದ್ದ ಚಡ್ಡಿ ಕೈಯಲ್ಲಿ ಹಿಡಿದಿದ್ದ ಬೂದಿ ಜನವರಪ್ಪ ಏನು ಮಾಡುತ್ತಿದ್ದಾನೆ ಎಂಬುದು ದೂರಕ್ಕೆ ಕಾಣಿಸಲಿಲ್ಲ. ಕುತೂಹಲ ತಡೆಯಲಾರದೆ ಹತ್ತಿರಕ್ಕೆ ಹೋದೆ. ‘ಬಡ್ಡಿ ಮಗ್ನವು ಜಾಸ್ತಿ ಆಗಿ, ರಾತ್ರಿಯೆಲ್ಲ ನಿದ್ದೆ ಇಲ್ಲ ಕಣೊ ಹುಡುಗ’ ಎಂದ. ಚಡ್ಡಿಯ ಮೂಲೆ ಮೂಲೆಯಲ್ಲಿ ಅಡಗಿ ಕುಳಿತಿದ್ದ ಕೂರೆಗಳನ್ನು ಹುಡುಕಿ ಕೊಲ್ಲುತ್ತಿರುವುದು ಅರ್ಥವಾಯಿತು. ಕಣ್ಣಿನ ದೃಷ್ಟಿ ಕಡಿಮೆ ಇದ್ದ ಕಾರಣಕ್ಕೆ ಕೂರೆ ಹುಡುಕಿ ಕೊಡು ಎಂದು ನನಗೆ ಹೇಳಿದ. ತೊಳೆದು ತಿಂಗಳಾಗಿರುವ ಚಡ್ಡಿ ಮುಟ್ಟಲು ನಾನು ಒಪ್ಪಲಿಲ್ಲ. ಕೊರ ಬಾಡ ಸುಟ್ಟು ಕೊಡ್ತಿನಿ ಎಂಬ ಆಸೆ ಹುಟ್ಟಿಸಿ ಕೂರೆ ಹುಡುಕುವ ಕೆಲಸ ನನಗೊಪ್ಪಿಸಿದ. ಹೈಸ್ಕೂಲ್ ಹಾಸ್ಟೆಲ್ನಲ್ಲಿದ್ದಾಗ ನನ್ನ ಚಡ್ಡಿಯಲ್ಲೂ ಕೂರೆಗಳು ಜಾಗ ಪಡೆದಿದ್ದ ಕಾರಣ ಕೂರೆಗಳನ್ನು ಕುಕ್ಕುವ ಅಭ್ಯಾಸ ಮೊದಲೇ ರೂಢಿಯಾಗಿತ್ತು. ಕೂರೆ ಹುಡುಕಿ ಕುಕ್ಕುವ ಕೆಲಸ ಮುಂದುವರಿದಿತ್ತು. ಓಡಿ ಬಂದ ಕಾಳಕ್ಕ ದಾಸಪ್ಪನ ಸಾವಿನ ಸುದ್ದಿ ತಿಳಿಸಿದಳು. ಒಂದೆರಡು ತಿಂಗಳಿಂದ ಜೀವ ಬಿಗಿ ಹಿಡಿದು ಮೂಲೆ ಸೇರಿದ್ದ ದಾಸಪ್ಪ ಕೊನೆಯುಸಿರೆಳೆದಿದ್ದ್ದ. ನನ್ನ ಕೈಲಿದ್ದ ಚಡ್ಡಿ ಕಿತ್ಕೊಂಡು ಅಲ್ಲೆ ಹಾಕಿಕೊಂಡ ಬೂದಿ ಜವರಪ್ಪ ಸಾವಿನ ಮನೆಯತ್ತ ತೆರಳಿದ.

ನೆಂಟರಿಷ್ಟರಿಗೆ ಸುದ್ದಿ ಮುಟ್ಟಿಸಿ ಸಂಜೆ ವೇಳೆಗೆ ಅಂತ್ಯ ಸಂಸ್ಕಾರ ನೆರವೇರಿತು. ದಾಸಪ್ಪನಿಗೆ ಇದ್ದ ಮೂರು ಮಕ್ಕಳು ಸೇರಿ ತಿಥಿ ಕಾರ್ಯವನ್ನು ದೊಡ್ಡದಾಗಿ ಮಾಡಲು ತೀಮರ್ಾನಿಸಿದರು. 2001-02ನೇ ಸಾಲಿನಲ್ಲಿ ಸಂಸದರ ನಿಧಿಯ ನೆರವಿನಿಂದ ಸಮುದಾಯ ಭವನವೊಂದು ಊರಿನಲ್ಲಿ ತಲೆ ಎತ್ತಿತು. 10 ಲಕ್ಷ ವೆಚ್ಚದಲ್ಲಿ ಕಟ್ಟಿದ ದೊಡ್ಡ ಸಮುದಾಯ ಭವನ ಅದಾಗಿತ್ತು. ಆ ತನಕ ಬೀದಿ ಅಥವಾ ಮನೆಗಳಲ್ಲಿ ನಡೆಯುತ್ತಿದ್ದ ಮದುವೆ, ತಿಥಿ ಹಾಗೂ ಇನ್ನಿತರ ಸಮಾರಂಭಗಳ ಊಟ ಸಮುದಾಯ ಭವನಕ್ಕೆ ಸ್ಥಳಾಂತರಗೊಂಡವು. ಎಲ್ಲರೂ ಸೇರಿ ದಾಸಪ್ಪನ ತಿಥಿ ಕಾರ್ಯವನ್ನು ಸಮುದಾಯ ಭವನದಲ್ಲೆ ಮಾಡಲು ನಿರ್ಧರಿಸಿದರು.

11ನೇ ದಿನಕ್ಕೆ ತಿಥಿ ಕಾರ್ಯದ ಊಟ ಸಮುದಾಯ ಭವನದಲ್ಲಿ ನಡೆಯಿತು. ಊರಿನ ದಲಿತರು ಮತ್ತು ನೆಂಟರಿಷ್ಟರು ಊಟ ಮಾಡಿದರು. ಊರ ಮುಂದೆ ಮೇಲ್ವರ್ಗದ ಮನೆಗಳ ನಡುವೆ ಸಮುದಾಯ ಭವನ ಇರುವ ಕಾರಣ ಜಾತಿಯ ಅರಿವಿಲ್ಲದ ಮೇಲ್ಜಾತಿ ಹತ್ತಾರು ಮಕ್ಕಳು ಊಟ ಮಾಡಿ ಮನೆಗೆ ಹೋದರು. ಊಟ ಮಾಡಿ ಹೋದ ಮಕ್ಕಳನ್ನು ಕಂಡು ಹೆತ್ತವರ ಕೋಪ ನೆತ್ತಿಗೇರಿತು. ಹೊಲೇರ ಮನೆ ಊಟ ಮಾಡಿದ ಮಕ್ಕಲ ಕೈ ಬಾಸುಂಡೆ ಬರುವಂತೆ ಒದೆ ಬಿದ್ದವು. ಮೈಲಿಗೆಯಾಗಿದ್ದ ಮಕ್ಕಳಿಗೆ ಸ್ನಾನ ಮಾಡಿಸಿ ದೇವರಿಗೆ ಕೈಮುಗಿಸಿದರು. ಏನೋ ಮಕ್ಕಳು ತಿಳಿಯದೆ ತಪ್ಪು ಮಾಡಿದ್ದಾರೆ. ಕ್ಷಮಿಸಿ ಬಿಡು ದೇವರೆ ಎಂದು ಬೇಡಿಕೊಂಡರು.

ದಲಿತರ ಮನೆ ತಿಥಿ ಊಟವನ್ನು ಮೇಲ್ವರ್ಗದ ಮಕ್ಕಳು ಮಾಡಿರುವ ಸುದ್ದಿ ಊರ ತುಂಬ ಹರಡಿತು. ಪಂಚಾಯ್ತಿ ಸೇರಿ ಮೇಲ್ವರ್ಗ ಮಕ್ಕಳಿಗೆ ಊಟ ಹಾಕಿದ ದಾಸಪ್ಪನ ಮಗ ಸ್ವಾಮಿಯನ್ನೂ ಕರೆಸಿದರು. ಸಮುದಾಯಭವನದಲ್ಲಿ ತಿಥಿ ಕಾರ್ಯ ಮಾಡಲು ಅವಕಾಶ ಕೊಟ್ಟ ತಪ್ಪಿಗೆ ನಿಮ್ಮ ಮನೆ ಊಟನಾ ನಮ್ಮ ಮಕ್ಕಳಿಗೆ ತಿನ್ನಿಸಿದ್ದೀಯಾ? ಎಂದು ರೇಗಿದರು. ಮಕ್ಕಳಿಗೆ ಅರಿವಿಲ್ಲ, ಮಾಂಸದೂಟದ ಆಸೆಗೆ ಬಂದು ಕುಳಿತರೆ ಊಟ ಹಾಕಿ ಜಾತಿ ಕೆಡ್ಸಿದ್ದೀರಲ್ಲ ನೀವು ಹೊಟ್ಟೆಗೇ ಏನು ತಿಂತೀರಿ? ಎಂದು ಪ್ರಶ್ನೆ ಮಾಡಿದರು. ನಾನೇನ್ ಮಾಡ್ಲಿ ಗೌಡ್ರೇ, ಊಟಕ್ಕೆ ಕುಳಿತ ಮಕ್ಕಳನ್ನು ಏಳಿಸಿ ಕಳಿಸೋದು ಹೇಗೆ ಅಂತ ಊಟ ಹಾಕಿದ್ವಿ ಎಂದು ಸ್ವಾಮಿ ಉತ್ತರ ನೀಡಿದ. ನೀವೇನ್ ಮಾಡ್ತಿರಾ? ಊಟ ಹಾಕಿ ಜಾತಿ ಕೆಡಿಸೊ ಕೆಲಸ ಮಾಡಿ ಆಯ್ತಲ್ಲ. ಅದ್ಕೆ ನಿಮ್ಮನ್ನು ಎಲ್ಲಿ ಇಡಬೇಕೋ, ಅಲ್ಲೆ ಇಡಬೇಕಿತ್ತು. ಏನೋ ಹೋಗ್ಲಿ ಅಂತ ಊರ ಮುಂದಿರುವ ಸಮುದಾಯಭವನದಲ್ಲಿ ಅವಕಾಶ ಕೊಟ್ಟರೆ ನಮ್ಮ ಮಕ್ಕಳಿಗೆ ಊಟ ಹಾಕಿ ಊರು-ಹೊಲಗೇರಿ ಒಂದು ಮಾಡಿದ್ದೀರಿ ಎಂದು ಮೇಲ್ವರ್ಗವರು ಸ್ವಾಮಿ ಮೇಲೆ ಎಗರಿದರು. ಹಿಂದೊಮ್ಮೆ ಯುವಕರಿಗೆ ಊಟ ಹಾಕಿದ ತಪ್ಪಿಗೆ ದಂಡ ಕಟ್ಟಿದ್ದನ್ನು ಮರೆತಿದ್ದೀರಿ. ಈಗ ಕಾನೂನು ನಿಮ್ಮ ಪರ ಇದೆ ಅಂತ ಹೀಗೆಲ್ಲಾ ಮಾಡ್ತಾ ಇದ್ದೀರಿ. ಇದು ನಡೆಯೊಲ್ಲ, ಇದೇ ಕೊನೆ ಇನ್ಮುಂದೆ ದಲಿತರ ಕಾರ್ಯಕ್ರಮಗಳಿಗೆ ಸಮುದಾಯಭವನ ನೀಡ ಬಾರದು ಎಂಬ ನಿರ್ಣಯ ಕೈಗೊಂಡರು.

ಸರಕಾರದ ಸಮುದಾಯಭವನದಲ್ಲಿ ನಮ್ಮ ಕಾರ್ಯಕ್ರಮ ಮಾಡಲು ಅವಕಾಶ ಕೊಡಲ್ಲ ಅಂದ್ರೇ ಯಾವ ನ್ಯಾಯ ಗೌಡ್ರೆ? ನೀವು ತಿನ್ನುವ ಕುರಿ, ಕೋಳಿ, ಹಂದಿ ಮಾಂಸದ ಊಟನೇ ನಾವು ಮಾಡಿದ್ದೀವಿ. ಆಕಸ್ಮಿಕವಾಗಿ ಮಕ್ಕಳು ಬಂದು ಊಟ ಮಾಡಿದ್ದಾರೆ. ನಾವೇನು ನಿಮ್ಮ ಮಕ್ಕಳಿಗೆ ದನದ ಮಾಂಸದ ತಿನ್ನಿದ್ದೀವಾ? ಎಂದು ಸ್ವಾಮಿ ಪ್ರಶ್ನೆ ಮಾಡಿದ.

ಬಿಟ್ರೆ ಅದನ್ನು ತಿನ್ನಸ್ತೀರಿ, ಅದಕ್ಕೆ ಇನ್ಮುಂದೆ ನೀಮ್ಮ ಜಾತಿಯವರ ಕಾರ್ಯಕ್ರಮಗಳನ್ನು ನಿಮ್ಮ ಕೇರಿಯಲ್ಲೇ ಮಾಡಿಕೊಳ್ಳಿ, ಊರು ಮುಂದೆ ಬಂದು ಜಾತಿ ಹಾಳು ಮಾಡಬೇಡಿ ಎಂದು ಮೇಲ್ವರ್ಗದವರು ಆಜ್ಞೆ ಮಾಡಿದರು. ಸಮುದಾಯಭವನ ಸಕರ್ಾರದ ಆಸ್ತಿ. ಅಲ್ಲಿ ಕೆಳಜಾತಿಯವರ ಕಾರ್ಯಕ್ರಮಗಳಿಗೆ ಅವಕಾಶ ಕೊಡದಿದ್ದರೆ ಕಾನೂನಿನ ಮೊರೆ ಹೋಗ್ತೀವಿ ಎಂದು ಸ್ವಾಮಿ ಹೇಳಿದ. ಎಲ್ಲಾದ್ರು ಹೋಗಿ ಹಾಳಾಗಿ, ಸಮುದಾಯಭವನ ಮಾತ್ರ ಕೊಡಲು ಸಾಧ್ಯವಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದರು.

ಇನ್ನು ಇವರ ಬಳಿ ಕೇಳಿ ಪ್ರಯೋಜನ ಇಲ್ಲ ಎಂದುಕೊಂಡು ತಮ್ಮ ಕೇರಿಗೆ ಬಂದ ದಲಿತರು, ಸಮುದಾಯಭವನ ಕಟ್ಟಿಸಿರುವುದು ಸಂಸದರ ನಿಧಿಯ ಹಣದಲ್ಲಿ. ಅವರ ಬಳಿಯೇ ಹೋಗೋಣ ಎಂದು ಮಾತನಾಡಿಕೊಂಡರು. ಅವರನ್ನು ಹಿಡಿಯೋದು ಕಷ್ಟ, ಅವರ ಮಗ ಎಂಎಲ್ಎ ಅಲ್ವಾ? ಅವರದೇ ಎಲ್ಲಾ ಕಾರುಬಾರು. ಅವರ ಹತ್ತಿರವೇ ಹೋಗಿ ನಿವೇದನೆ ಮಾಡಿಕೊಳ್ಳೋಣ. ಎಂಎಲ್ಎ ಹೇಳಿದ್ರೆ ಬಾಗಿಲು ತೆಗೆಯಲೇ ಬೇಕು. ನಾಳೇಯೇ ಹೋಗಿ ಎಂಎಲ್ಎ ಕಾಣೋಣ ಎಂದು ತೀಮರ್ಾನಿಸಿದರು.

ಮರುದಿನ ಬೆಳಗ್ಗೆಯೇ ಬಸ್ ಹತ್ತಿದ್ದ ದಲಿತರು, ಎಂಎಲ್ಎ ಮನೆ ಮುಂದೆ ಹಾಜರಾದರು. ಬೆಳಗ್ಗೆಯೇ ದಲಿತರ ದರ್ಶನ ಮಾಡಿದರೆ ಅಪಶಕುನ ಎಂದು ನಂಬಿರುವ ಶಾಸಕನ ಮುಂದೆ ನಿಂತರು. ಊರು ಕೇರಿ ಪರಿಚಯ ಮಾಡಿಕೊಂಡ ನಂತರ ತಲೆ ಮೇಲೆತ್ತಿ ಅವರ ಮುಖ ನೋಡದ ಶಾಸಕ, ಅದೇ ಸಮುದಾಯಭವನದಲ್ಲಿ ಕಾರ್ಯಕ್ರಮ ಮಾಡಬೇಕು ಎಂಬ ಹಠ ನಿಮಗೇಕೆ? ಹೊಲೇರ ಮನೆ ಕಾರ್ಯದಲ್ಲಿ ಮೇಲ್ಜಾತಿ ಮಕ್ಕಳಿಗೆ ಊಟಕ್ಕೆ ಹಾಕೋದು ತಪ್ಪಲ್ಲವೇ ಎಂದು ಪ್ರಶ್ನೆ ಮಾಡಿದ. ‘ನಿಮಗೇ ಪ್ರತ್ಯೇಕವಾಗಿ ಸಣ್ಣದೊಂದು ಸಮುದಾಯಭವನ ಕಟ್ಟಿಸಿಕೊಡ್ತಿನಿ, ಈಗಿರುವ ಭವನಕ್ಕೆ ನೀವು ಕಾಲಿಡುವುದು ಬೇಡ’ ಎಂದು ಆದೇಶ ಮಾಡಿ ನೀವಿನ್ನು ಹೊರಡಿ ಎಂದ. ನ್ಯಾಯ ಅರಸಿ ಬಂದ ದಲಿತರ ಮುಖ ಸಪ್ಪಗಾಯಿತು. ಎಂಎಲ್ಎ ಕಂಡು ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡು ಬಂದ ವಿಷಯ ಊರಿನಲ್ಲಿ ಹರಡಿತು. ಎಂಎಲ್ಎ ನಮ್ಮ ಜಾತಿಯವನೇ, ನಮ್ಮನ್ನು ಬಿಟ್ಟುಕೊಡುತ್ತಾನೆಯೇ? ಎಂದು ಮೇಲ್ಜಾತಿಯವರು ಬೀಗಿದರು.

ಮತ್ತೆ ದಲಿತರ ಸಭೆ ಸೇರಿಸಿದ ಸ್ವಾಮಿ, ಎಂಎಲ್ಎ ಬೇಡ ಎಂದರೂ ಬಿಡೋದು ಬೇಡ. ಕಾನೂನಿನ ಮೊರೆ ಹೋಗಿ ಸಮುದಾಯಭವನದಲ್ಲಿ ಅವಕಾಶ ಪಡೆದುಕೊಳ್ಳೋಣ ಎಂದು ಹೇಳಿದ. ಆದರೆ ಸ್ವಾಮಿ ಸೇರಿ ಮೂರ್ನಾಲ್ಕು ಮಂದಿ ಹೊರತಾಗಿ ಬೇರ್ಯಾರು ಅದಕ್ಕೆ ಒಪ್ಪಲಿಲ್ಲ. ನಮ್ಮ ಮತ್ತು ಮೇಲ್ವರ್ಗದ ಸಂಬಂಧ ಇಷ್ಟಕ್ಕೆ ಮುಗಿಯುವುದಿಲ್ಲ. ನಾವು ಕಾನೂನಿ ಹೋರಾಟಕ್ಕೆ ಇಳಿದರೆ ಮೇಲ್ವರ್ಗದವರು ಊರಿಂದ ಬಹಿಷ್ಕಾರ ಹಾಕ್ತಾರೆ. ಮದುವೆ ಆಗಬೇಕಿರುವ ಹೆಣ್ಣು ಮಕ್ಕಳು ಮನೆಗೊಂದು poverty-in-indiaಬೆಳೆದು ನಿಂತಿವೆ. ಹಣ ಬೇಕೆಂದರೆ ಅವರ ಬಳಿಯೇ ಕೈಚಾಚಬೇಕು. ಅವರನ್ನು ವಿರೋಧ ಮಾಡಿಕೊಂಡು ಬದುಕಲು ಸಾಧ್ಯವಿಲ್ಲ. ನಮಗೆ ಪ್ರತ್ಯೇಕ ಸಮುದಾಯಭವನ ಕಟ್ಟಿಕೊಡುವುದಾಗಿ ಎಂಎಲ್ಎ ಹೇಳಿದ್ದಾನೆ. ಮತ್ತೆ ಮೇಲ್ವರ್ಗದವರನ್ನು ಎದುರು ಹಾಕಿಕೊಳ್ಳುವುದು ಸರಿಯಲ್ಲ ಎಂಬುದು ಬಹುತೇಕರ ಅಭಿಪ್ರಾಯವಾಗಿತ್ತು. ಹಾಗಾಗಿ ಉಳಿದವರು ಸುಮ್ಮನಾದರು.
ಕೆಲವೇ ದಿನಗಳಲ್ಲಿ ಸಮುದಾಯಭವನ ಎಂದಿದ್ದ ನಾಮಫಲಕ ಒಕ್ಕಲಿಗರ ಸಮುದಾಯಭವನವಾಗಿ ಪರಿವರ್ತನೆಯಾಯಿತು. ಈ ಘಟನೆ ನಡೆದು 13 ವರ್ಷ ಕಳೆದಿದೆ. ದಲಿತರಿಗೆ ಪ್ರತ್ಯೇಕ ಸಮುದಾಯಭವನ ಇಂದಿಗೂ ನಿಮರ್ಾಣ ಆಗಿಲ್ಲ. ಒಕ್ಕಲಿಗರ ಸಮುದಾಯಭವನಕ್ಕೆ ದಲಿತರು ಕಾಲಿಡಲು ಸಾಧ್ಯವಾಗಿಲ್ಲ. ಅದೇ ಎಂಎಲ್ಎ ಇಂದಿಗೂ ಅದೇ ಕ್ಷೇತ್ರದ ಪ್ರತಿನಿಧಿ

ಒಳ್ಳೆಯ ಮುಸ್ಲಿಂ ಅಂದರೆ ಏನು?

ಇಂಗ್ಲೀಷ್ : ಸಾಬಾ ನಕ್ವಿ
ಅನುವಾದ : ಬಿ.ಶ್ರೀಪಾದ ಭಟ್

ಜುಲೈ 30 ರಂದು ಎರಡು ದೇಹಗಳನ್ನು ಮುಸ್ಲಿಂರ ಶವ ಸಂಸ್ಕಾರಕ್ಕೆ ಬಳಸುವ ಸಡಿಲವಾದ ಹೊದಿಕೆಗಳಿಂದ ಸುತ್ತಲಾಗಿತ್ತು. ಇವರಲ್ಲಿ ಒಬ್ಬರನ್ನು ರಾಷ್ಟ್ರೀಯ ಹೀರೋ ಎಂದು ಕರೆಯಲಾಗಿತ್ತು ಮತ್ತು ಅವರ ದೇಹವನ್ನು ರಾಷ್ಟ್ರೀಯ ಧ್ಜಜದಿಂದ ಸುತ್ತಲಾಗಿತ್ತು, ಮತ್ತೊಬ್ಬರನ್ನು ಜೈಲಿನಲ್ಲಿ ನೇಣುಗಂಬಕ್ಕೇರಿಸಲಾಗಿತ್ತು. ನಮ್ಮ ಕಣ್ಣ ಮುಂದೆ ಒಳಿತು ಕೆಡಕುಗಳ ನೈತಿಕತೆಯ ನೃತ್ಯ ನಡೆಯುತ್ತಿರುವಾಗ ಈ ಎರಡು ಸಾವುಗಳು ವಿಭಿನ್ನ ಕಾರಣಗಳಿಗಾಗಿ, ವಿಭಿನ್ನ ರೀತಿಗಳಿಗಾಗಿ ರಾಷ್ಟ್ರೀಯ ರಸಾನುಭವಗಳನ್ನು ತಂದುಕೊಡುತ್ತಿರುವಂತಿವೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಮತ್ತು ಬಾಂಬೆ apj-kalamಸ್ಪೋಟದ ಅಪರಾಧಿ ಯಾಕುಬ್ ಮೆನನ್ ಇವರಿಬ್ಬರನ್ನೂ ಒಂದೇ ದಿನದಂದು ಶವ ಸಂಸ್ಕಾರ ಮಾಡುತ್ತಿರುವುದು ಒಂದು ಕಾಕತಾಳೀಯ.

ಆದರೆ ಜಗತ್ತಿನ ಅತಿ ದೊಡ್ಡ ದೇಶದಲ್ಲಿ, ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಜಗತ್ತಿನ ಮೂರನೇ ದೇಶದಲ್ಲಿ ‘ಒಳ್ಳೆಯ ಮುಸ್ಲಿಂ, ಕೆಟ್ಟ ಮುಸ್ಲಿಂ’ ಎನ್ನುವ ರೂಢಿಬದ್ಧ ಹಣೆಪಟ್ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ‘ಒಳ್ಳೆಯ ಮುಸ್ಲಿಂ, ಕೆಟ್ಟ ಮುಸ್ಲಿಂ’ ಎನ್ನುವ ನುಡಿಕಟ್ಟನ್ನು ಅಮೇರಿಕಾದ ಮಾಜಿ ಅಧ್ಯಕ್ಷ ಜಾರ್ಜ ಬುಶ್ ಅದನ್ನು 9/11 ಸಂದರ್ಭದಲ್ಲಿ ಬಳಸಿದ್ದರು. ಇದನ್ನೇ ಬಳಸಿಕೊಂಡು ಮೊಹಮ್ಮದ್ ಮಂದಾನಿ ಅವರು “Good Muslim, Bad Muslim: America, the Cold War, and the Roots of Terror” ಎನ್ನುವ ಪುಸ್ತಕವನ್ನು ಸಹ ಬರೆದಿದ್ದರು. ಈ ಪುಸ್ತಕದಲ್ಲಿ ‘ಒಳ್ಳೆಯ’ ಮತ್ತು ‘ಕೆಟ್ಟ’ ಎನ್ನುವ ಪದಬಳಕೆಯನ್ನು ಆ ಧರ್ಮದ ಪಾವಿತ್ರ್ಯತೆ ಅಥವಾ ಅದರ ಕೊರತೆಯನ್ನು ಆಧರಿಸಿ ಹೇಳಿದ್ದಲ್ಲ. ಬದಲಾಗಿ ಅಮೇರಿಕಾದ ವಿದೇಶಾಂಗ ನೀತಿಯು ತನ್ನ ಉಪಯುಕ್ತತೆಗೆ ಅನುಕೂಲವಾಗುವಂತೆ ನಿರ್ಧರಿಸುವ ತೀರ್ಪಿನ ಆಧಾರದ ಮೇಲೆ ಬಳಸಾಗುತ್ತದೆ. ಯಾವ ಇಮೇಜ್ ಅನ್ನು ಅವರು ನಿರ್ಮಿಸುತ್ತಾರೆಯೋ ಅದರ ಮೇಲೆ ಸಹ ನಿರ್ಧಾರವಾಗುತ್ತದೆ

ಆಕಸ್ಮಿಕವೋ ಎಂಬಂತೆ ಮುಸ್ಲಿಂ ಧರ್ಮದವರಾಗಿದ್ದ ಅಬ್ದುಲ್ ಕಲಾಂ ಇಂಡಿಯಾದ ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿರುವಷ್ಟರ ಮಟ್ಟಿಗೆ ಮೇರು ವ್ಯಕ್ತಿತ್ವದವರಾಗಿದ್ದರೆ? ವಿಜ್ಞಾನ ಕ್ಷೇತ್ರದಲ್ಲಿ ಅವರ ಸಾಧನೆಗಳು ಏನೇ ಇರಲಿ (ಅದರ ಕುರಿತಾಗಿಯೂ ತಕರಾರುಗಳಿವೆ) ಕಲಾಂ ಅವರನ್ನು ಮತ್ತು ಅವರ ಜನಪ್ರಿಯತೆಯನ್ನು ಸಮಾಜ ಮತ್ತು ರಾಜಕೀಯ-ಮಿಲಿಟರಿಯ ಸಂಕೀರ್ಣತೆಯು ರೂಪಿಸಿತ್ತು. ಭವಿಷ್ಯದಲ್ಲಿ ಇಂಡಿಯಾ ದೇಶವು ಮಿಲಿಟರಿಯಲ್ಲಿ ಸೂಪರ್ ಶಕ್ತಿಯಾಗಿ ಹೊರಹೊಮ್ಮಬೇಕೆಂದು ಕಲಾಂ ಅವರ ದರ್ಶನವಾಗಿತ್ತು. ಕಾಣ್ಕೆಯಾಗಿತ್ತು. ಅವರು ಒಬ್ಬ ಸರಳವಾದ “ಮಿಸೈಲ್ ಮನುಷ್ಯ”ರಾಗಿದ್ದರು ಮತ್ತು ಅವರ ಪುಸ್ತಕಗಳು ಬೇರೆ ಲೇಖಕರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದವು, ಅವರ ಭಾಷಣದ ಸಭಾಂಗಣಗಳು ಸದಾಕಾಲ ಹೌಸ್‍ಫುಲ್ ಆಗಿರುತ್ತಿದ್ದವು. ಅವರನ್ನು ಮಕ್ಕಳು ಆರಾಧಿಸುತ್ತಿದ್ದರು. ಅವರ ಸರಳತೆ ಮಕ್ಕಳನ್ನು ಸೆಳೆಯುತ್ತಿತ್ತು

ಮತ್ತು ಅವರು ಇಂಡಿಯಾ ದೇಶ ಬಯಸುವಂತಹ ಒಬ್ಬ ಪರಿಪೂರ್ಣ ಮುಸ್ಲಿಂ ಆಗಿದ್ದರು. ತಮ್ಮ ಎದೆಯ ಮೇಲೆ ಧರ್ಮವನ್ನು ಛಾಪಿಸಿಕೊಳ್ಳದ, ಸಾಧಾರಣ ಹಿನ್ನೆಲೆಯಿಂದ ಬಂದಂದತಹ, ಸ್ವಪರಿಶ್ರಮದಿಂದ ಮೇಲಕ್ಕೇರಿದ ವ್ಯಕ್ತಿ. ಗಡ್ಡಧಾರಿಯಾದ, ಸದಾ ಅವ್ಯವಸ್ಥೆಯ ghetto ಗಳಲ್ಲಿ ಬದುಕುವ ಪೀಡಕನಂತೆ ಕಂಗೊಳಿಸುವ ರೂಢಿಗತ ಮುಸ್ಲಿಂರ ಪರಿಕಲ್ಪನೆಗಿಂತ ಸಂಪೂರ್ಣ ಭಿನ್ನವಾಗಿದ್ದರು. ಮುಖ್ಯವಾಗಿ ಕಲಾಂ ಎಂದಿಗೂ ವ್ಯವಸ್ಥೆಯನ್ನು ವಿರೋಧಿಸಿರಲಿಲ್ಲ ಮತ್ತು ಅನ್ಯಾಯದ ವಿರುದ್ಧ ಪ್ರತಿಭಟಿಸಿರಲಿಲ್ಲ. ಇದಕ್ಕೆ ಬದಲಾಗಿ ಅವರು ಪ್ರಭುತ್ವದ ವ್ಯವಸ್ಥೆಯನ್ನು ಮತ್ತು ಅದರ ಮಿಲಿಟರಿ-ಕೈಗಾರಿಕಾ ಸಂಕೀರ್ಣತೆಯನ್ನು ವೈಭವೀಕರಿಸಿದ್ದರು. ಬಲಪಂಥೀಯರು ಸದಾ ಕರೆದುಕೊಳ್ಳುವ ಬಲಪಂಥೀಯ ಐಡಿಯಾಲಜಿಯ ಶೈಲಿಯ ‘ದೇಶವನ್ನು ಕಟ್ಟುವ’ ಮಾದರಿಗೆ ಉಪಯುಕ್ತರಾಗಿದ್ದರು. ಅಷ್ಟಕ್ಕೂ ರಾಷ್ಟ್ರಪತಿ ಹುದ್ದೆಗೆ ಅವರ ಹೆಸರನ್ನು ಸೂಚಿಸಿದ್ದು ಬಿಜೆಪಿ ಪಕ್ಷದ ನಾಯಕ ಎ.ಬಿ.ವಾಜಪೇಯಿ.The Prime Minister Shri Atal Bihari Vajpayee calls on the President Dr. A.P.J. Abdul Kalam in New Delhi on July 25, 2002 (Thursday) ಆರೆಸ್ಸಸ್‍ನ ಮುಖವಾಣಿ ‘ಪಾಂಚಜನ್ಯ’ದ ಆಗಿನ ಸಂಪಾದಕರಾಗಿದ್ದ ತರುಣ್ ವಿಜಯ್ ಅವರು 2002ರಲ್ಲಿ ಔಟ್‍ಲುಕ್ ವಾರಪತ್ರಿಕೆಗೆ ಬರೆದ ಅಂಕಣದಲ್ಲಿ “ಭಾರತೀಕರಣವೆಂದರೆ ಹಿಂದುತ್ವ. ಇದರ ಅರ್ಥ ಮುಸ್ಲಿಂರು ಹಿಂದೂಯಿಸಂಗೆ ಮತಾಂತರವಾಗಬೇಕು ಅಂತಲ್ಲ, ಅಥವಾ ಕ್ರಿಶ್ಚಿಯನ್ನರು ದೇವಸ್ಥಾನಗಳಿಗೆ ಭೇಟಿ ಕೊಡಬೇಕಂತಲೂ ಅಲ್ಲ. ಬದಲಾಗಿ ನೀನು ಏನು ಆಗಬೇಕೆಂದುಕೊಳ್ಳುತ್ತೀಯಾ ಅದೇ ಅದರ ಅರ್ಥ. ಡಾ.ಅಬ್ದುಲ್ ಕಲಾಂ ಅವರ ಕಾಣ್ಕೆಯಂತೆ” ಎಂದು ಬರೆದಿದ್ದರು ಮತ್ತು ಇಸ್ರೋದಲ್ಲಿ ಕಲಾಂ ಅವರ ಸಹೋದ್ಯೋಗಿಗಳು ಅವರನ್ನು ಕಲಾಂ ಐಯ್ಯರ್ ಎಂದು ಕರೆಯುತ್ತಿದ್ದರು ಎಂದು ಹೆಮ್ಮಯಿಂದ ಬರೆದಿದ್ದರು. ಕಲಾಂ ಅವರ ಈ ನಾಮಕರಣಕ್ಕೆ ಅವರು ಸಸ್ಯಾಹಾರಿಯಾಗಿದ್ದರು, ಅವರು ಸಂಸ್ಕೃತದಲ್ಲಿ ಪರಿಣಿತರಾಗಿದ್ದರು, ಭಗವದ್ಗೀತವನ್ನು ಓದಿಕೊಂಡಿದ್ದರು ಮತ್ತು ವೀಣೆಯನ್ನು ನುಡಿಸುತ್ತಿದ್ದರು ಎನ್ನುವ ಗುಣಗಳೂ ಕಾರಣವಾಗಿದ್ದವು.

ದಿನನಿತ್ಯ ಯೋಗ, ಸೂರ್ಯ ನಮಸ್ಕಾರ ಮಾಡುವ, ಗೀತೆಯ ಭಾಗಗಳನ್ನು ಓದಲು ಪ್ರಯತ್ನಿಸುವ ಅನೇಕರು ಕಲಾಂರ ಮೇಲಿನ ಗುಣಗಳು ಅವರನ್ನು ಮುಸ್ಲಿಂ ಎನ್ನುವ ಅಂಶವನ್ನು ತೆಳುಗೊಳಿಸುತ್ತದೆ ಎಂದು ಭಾವಿಸುತ್ತಾರೆ. ಆದರೆ ನಾನು ಇದನ್ನು ಸಂದೇಹಿಸುತ್ತೇನೆ. ದೆಹಲಿಯ ಲುಟ್ಯೇನ್ ಪ್ರದೇಶದಲ್ಲಿರುವ ಔರಂಗಜೇಬ್ ರಸ್ತೆಯನ್ನು ಮರು ನಾಮಕರಣ ಮಾಡಿ ಅದಕ್ಕೆ ಕಲಾಂ ಅವರ ಹೆಸರಿಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿರುವವರೊಂದಿಗೆ ನನ್ನ ಸಹಮತವಿಲ್ಲ. ನನ್ನ ಒಂದು ಸಲಹೆ ಈ ಔರಂಗಜೇಬ್ ರಸ್ತೆಗೆ ದಾರಾ ಶಿಖೋವ ಅವರ ಹೆಸರನ್ನು ಇಡಬೇಕು. ಇತಿಹಾಸ ಗೊತ್ತಿಲ್ಲದವರಿಗೆ ಈ ದಾರಾ ಶಿಖೋವನನ್ನು ಶಹಜಾನ್ ಅವರ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿತ್ತು ಮತ್ತು ಈತನನ್ನು ಔರಂಗಜೇಬ್ ಸಾಯಿಸಿದ್ದ. ಈ ದಾರಾ ಶಿಖೋವ ಬಹುರೂಪಿ ಸಂಸ್ಕೃತಿಯ ವಕ್ತಾರನಾಗಿದ್ದ. ಕೋಮು ಸೌಹಾರ್ದತೆಗೆ ತುಡಿಯುತ್ತಿದ್ದ. ಸಂಸ್ಕೃತದಿಂದ 50 ಉಪನಿಷದ್‍ಗಳನ್ನು ಪರ್ಷಿಯನ್‍ಗೆ ಅನುವಾದ ಮಾಡಿದ್ದ.

ಯಾಕುಬ್ ಮೆಮನ್‍ಗೆ ಮೇಲಿನ ಯಾವುದೇ ಛಾಯೆಗಳಿರಲಿಲ್ಲ. ಆತ ಕೇವಲ ಕೆಟ್ಟ ಮುಸ್ಲಿಂನಾಗಿದ್ದ. ವ್ಯಾಪಕವಾದ ಭಯೋತ್ಪಾದನೆಯ ಸಂಚಿಗೆ ಸೆಳೆಯಲ್ಪಟ್ಟ ಸುಶಿಕ್ಷಿತ ಚಾರ್ಟೆಡ್ ಅಕೌಂಟೆಂಟ್ ಆಗಿದ್ದ. ಅಷ್ಟಕ್ಕೂ ಮುಸ್ಲಿಂ ಎಂದರೆ ಭಯೋತ್ಪಾದಕ ಎನ್ನುವ ಪ್ರಚಲಿತ ನಿರ್ಮಿತಿಯನ್ನು ಇಡೀ ಜಗತ್ತು ಒಕ್ಕೊರಲಿನಿಂದ ಒಪ್ಪಿಕೊಂಡಿದೆ. ಯಾಕೂಬ್ ಅನಾಯಾಸವಾಗಿ ಈ ಚೌಕಟ್ಟಿನಲ್ಲಿ ತುಂಬಿಕೊಳ್ಳುತ್ತಾನೆ. ಆದರೆ ಯಾಕೂಬ್‍ನ ಕತೆಗಳಲ್ಲಿ ತುಂಬಾ ಸೂಕ್ಷ್ಮ ವ್ಯತ್ಯಾಸಗಳಿವೆ. ಮತ್ತು ಈ ಸೂಕ್ಷ್ಮ ವ್ಯತ್ಯಾಸಗಳನ್ನು ವ್ಯವಸ್ಥೆಯು ಅನುಕಂಪದ ಮನಸ್ಥಿತಿಯಿಂದ ಅರ್ಥ ಮಾಡಿಕೊಳ್ಳುವುದೂ ಇಲ್ಲ. ಇವರೆಲ್ಲಾ ಪ್ರಶ್ನೆಗಳನ್ನು ಎತ್ತುತ್ತಲೇ ಜೊತೆಗೆ ಸಾಧ್ಯತೆಗಳನ್ನೂ ಸೂಚಿಸುತ್ತಾರೆ. ಯಾಕೂಬ್ ತಾನು ಮಾಡಿದ ಕೃತ್ಯಕ್ಕೆ ಕ್ಷಮೆ ಕೇಳುತ್ತಾನೆಯೇ? ಆತನಿಗೆ ಪ್ರಾಯಶ್ಚಿತವಾಗಿದೆಯೇ? ಆತ ಭಾರತದ ಏಜೆನ್ಸಿಗಳೊಂದಿಗೆ ಡೀಲ್ ಮಾಡಿಕೊಂಡಿದ್ದಾನೆಯೇ? ಅದರ ಅನುಸಾರ ಆತನ ಕುಟುಂಬವನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿ ಕರೆತರುವುದರ ಕುರಿತಾಗಿ ಒಪ್ಪಂದವಾಗಿದೆಯೇ? ಶಿಕ್ಷೆಯನ್ನು ನಿರೀಕ್ಷಿಸುತ್ತಾನೆಯೇ? ಆದರೆ ವ್ಯವಸ್ಥೆಯಿಂದ ನ್ಯಾಯವನ್ನೂ ಬಯಸುತ್ತಾನೆಯೇ?

ಆತನ ಸಾವಿನಲ್ಲಿ ಯಾಕೂಬ್‍ನನ್ನು ಮಿತಿ ಮೀರಿದ ವ್ಯಕ್ತಿಯನ್ನಾಗಿ ನೋಡುತ್ತಿರುವ ಇಂದಿನ ಸಂದರ್ಭದಲ್ಲಿ ಈ ಎಲ್ಲಾ ಪ್ರಶ್ನೆಗಳು ಗಾಳಿಯಲ್ಲಿ ತೇಲುತ್ತಿವೆ. ಒಂದು ವೇಳೆ ಆತ ಬದುಕಿದ್ದರೆ ಜೀವಾವಧಿ ಶಿಕ್ಷೆಗೊಳಗಾಗಿರುವ ಇತರೇ ಖೈದಿಗಳಂತೆ ಆತನೂ ಜೈಲಿನಲ್ಲಿ ಮರೆತು ಹೋಗುತ್ತಿದ್ದ. ಆದರೆ ಆತನ ಸಾವನ್ನು ಅಷ್ಟು ಸುಲುಭವಾಗಿ ಮಣ್ಣು ಮಾಡಲಾಗುವುದಿಲ್ಲ. ಅಪಾಯವೇನೆಂದರೆ ಯಾಕೂಬ್‍ನನ್ನು ಹುತಾತ್ಮನನ್ನಾಗಿ ಮಾಡುವುದರಿಂದ ದೇಶ ವಿರೋಧಿ ಶಕ್ತಿಗಳಿಗೆ ಹೆಚ್ಚಿನ ಲಾಭವಿದೆ

ತನ್ನ ‘ಒಳ್ಳೆಯ ಮುಸ್ಲಿಂ, ಕೆಟ್ಟ ಮುಸ್ಲಿಂ’ ಎನ್ನುವ ಪುಸ್ತಕದಲ್ಲಿ goodmuslimbadmuslimಮಂದಾನಿ ‘ವಿಸ್ತೃತವಾದಕ್ಕೆ ನೈತಿಕ ಮೇಲುಹೊದಿಕೆಯಾಗಿ ನಿಯೋಜಿಸಲ್ಪಡುವ, ಬಳಸಲ್ಪಡುವ ಮುಸ್ಲಿಂ ಮತ್ತು ಇಸ್ಲಾಂ ಕ್ಯಾರಿಕೇಚರ್’ ಅನ್ನು ತೆರೆದಿಡುತ್ತಾನೆ. ಭಯೋತ್ಪಾದನೆಯ ವಿಶ್ಲೇಷಣೆಯನ್ನು ವ್ಯವಸ್ಥೆಯೊಳಗಿನ ಹುಳುಕುಗಳನ್ನು ತೋರಿಸುವುದಕ್ಕೆ ಬಳಸಿಕೊಳ್ಳವುದಿಲ್ಲ, ಬದಲಾಗಿ ರಾಜ್ಯದ ನೀತಿಯನ್ನಾಗಿ ಬಳಸಿಕೊಳ್ಳತ್ತಾರೆ ಎಂದು ಹೇಳುತ್ತಾನೆ. ಆ ಭಯೋತ್ಪಾದನೆಯ ಕೃತ್ಯಗಳಿಗೆ ಕಾರಣಗಳನ್ನು ಪರೀಕ್ಷಿಸುವುದೇ ಭಯೋತ್ಪಾದನೆಗೆ ಸಮರ್ಥನೆಯಾಗುತ್ತದೆ ಮತ್ತು ಇದು ದೇಶದ ಹಿತಕ್ಕೆ ಮಾರಕವಾಗುತ್ತದೆ ಎಂದು ಹೇಳಲಾಗುತ್ತದೆ ಮತ್ತು ಬೋಧಿಸಲಾಗುತ್ತದೆ ಮತ್ತು ಇದು ಯಾಕೂಬ್ ಮೆಮನ್ ವಿಚಾರದಲ್ಲಿಯೂ ಸತ್ಯ.. ಮತೊಂದು ಮಗ್ಗುಲಿನಿಂದ ಹೇಳಬೇಕೆಂದರೆ ಪ್ರಧಾನ ಧಾರೆಯ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಚರ್ಚೆ ಮತ್ತು ವಿವರಣೆಗಳಲ್ಲಿ ಈ ಬಾಂಬೆ ಬಾಂಬ್ ಸ್ಪೋಟಕ್ಕೆ ಕಾರಣವಾದ ಬಾಂಬೆಯಲ್ಲಿ ನಡೆದ ಹತ್ಯೆ ಮತ್ತು ಕೋಮು ಗಲಭೆಗಳ ಕುರಿತಾಗಿ ಕೈಗೆತ್ತಿಕೊಳ್ಳುವುದೂ ಇಲ್ಲ. ಅದರ ನೆನಪನ್ನೂ ಮಾಡಿಕೊಳ್ಳುವುದಿಲ್ಲ ಅಥವಾ ಈ ಬಾಂಬೆ ಗಲಭೆಗಳು ನಂತರದ ಬಾಂಬೆ ಬಾಂಬ್ ಸ್ಪೋಟಕ್ಕೆ ಮೂಲ ಕಾರಣವಾದ ಬಾಬರಿ ಮಸೀದಿ ಧ್ವಂಸದ ದುಷ್ಕೃತ್ಯಗಳು ಸ್ವಲ್ಪವೂ ಚರ್ಚೆಗೆ ಒಳಪಡುವುದಿಲ್ಲ. ಈ ಬಾಂಬೆ ಕೋಮು ಗಲಭೆಗಳಿಗೆ, ಬಾಬರಿ ಮಸೀದಿ ಧ್ವಂಸಕ್ಕೆ ಕಾರಣಕರ್ತರು ಇಂದಿಗೂ ಶಿಕ್ಷೆಗೆ ಒಳಗಾಗಿಲ್ಲ. ಆದರೆ ನಾವು ಭಯೋತ್ಪಾದನೆಯು ಸಾಮಾಜಿಕ-ರಾಜಕೀಯ ನೆಲೆಯ ಒಂದು ರೋಗಪರಿಶೋಧಕ ಗೂಡಿಗೆ ತಳ್ಳಲ್ಪಟ್ಟಿರುವುದನ್ನು ಕುರಿತಾಗಿ ಚರ್ಚಿಸುತ್ತೇವೆ

ಆದರೆ ಈ ದೇಶದ ವಿಶೇಷವೇನೆಂದರೆ ಇಲ್ಲಿ ಪರ್ಯಾಯ ಚರ್ಚೆಗಳಿಗೆ ಅವಕಾಶಗಳಿವೆ. ಯಾಕೂಬ್ ಮೆಮನ್‍ಗೆ ಗಲ್ಲು ಶಿಕ್ಷೆಯಂದ ವಿನಾಯಿತಿ ಕೊಡಿಸಲು ಕಡೆಗಳಿಗೆವರೆಗೂ ಅಪೀಲು ಮಾಡಿದ ಫ್ರೊಫೆಸರ್‌ಗಳು, ಚಿಂತಕರು, ಹೋರಾಟಗಾರರು, ವಕೀಲರು ಮತ್ತು ಕೆಲ ಎಡಪಂಥೀಯ ಪಕ್ಷಗಳನ್ನು ಇಲ್ಲಿ ನೆನಪಿಸಿಕೊಳ್ಳಬೇಕಿದೆ. ಪೋಲೀಸರು, ನ್ಯಾಯಾಂಗ ಮತ್ತು ಕಾರ್ಯಾಂಗದೊಂದಿಗೆ ಮುಖಾಮುಖಿಯಾದಾಗ ಸದಾ ಬಲಿಪಶುಗಳಾಗುವ ಇಂಡಿಯಾದ ಅಲ್ಪಸಂಖ್ಯಾತರು, ದಲಿತರು ಮತ್ತು ಆದಿವಾಸಿಗಳಿಗಾಗಿ ಕೆಲಸ ಮಾಡುವ ಒಂದು ಸಹನೀಯ ವ್ಯವಸ್ಥೆಯನ್ನು ಕಲ್ಪಿಸುವುದು ಇವರೆಲ್ಲರ ಆಶಯಗಳಾಗಿತ್ತು.

ರಾಷ್ಟ್ರಪತಿಗಳಾಗಿ ಕಲಾಂ ಅವರು ಮರಣದಂಡನೆ ಶಿಕ್ಷೆಯನ್ನು ವಿರೋಧಿಸಿದ್ದರು. ಇವರು ಯಾಕೂಬ್ ಮೆಮನ್‍ಗೆ ಗಲ್ಲು ಶಿಕ್ಷೆ ವಿಧಿಸುತ್ತಿದ್ದರೆ ಅಥವಾ ಅನುಕಂಪೆ ತೋರಿಸುತ್ತಿದ್ದರೆ? ಇಂದಿಗೂ ನಮಗೆ ಇದು ಆಶ್ಚರ್ಯವೇ.

ಗ್ರಾಮೀಣ ಮಹಿಳಾ ಜಾಗೃತಿಯಲ್ಲಿಯೇ ಆಕೆಯ ವಿಮೋಚನೆಯಿದೆ


– ಡಾ.ಎಸ್.ಬಿ. ಜೋಗುರ


ಲಿಂಗಾಧರಿತ ಶ್ರಮವಿಭಜನೆ ಮಹಿಳೆಯನ್ನು ತಲೆತಲಾಂತರದಿಂದಲೂ ಶೋಷಣೆ ಮಾಡಿಕೊಂಡು ಬರುವಲ್ಲಿ ಮುಖ್ಯ ಕಾರಣವಾಯಿತು. ಸಾಮರ್ಥ್ಯ ಮತ್ತು ಸತ್ವಗಳನ್ನು ಕಡೆಗಣಿಸಿ ಮಾತನಾಡುವ ಈ ಲಿಂಗ ತಾರತಮ್ಯದ ಧೋರಣೆ ಮಹಿಳೆಯ ಸಬಲೀಕರಣದಲ್ಲಿ ಒಂದು ಬಹು ದೊಡ್ಡ ತೊಡಕಾಗಿ ಕಾಡುವುದು. ಮಹಿಳೆಯ ಜೈವಿಕತೆಯನ್ನು ಆಧರಿಸಿ ಮಾಡಬಹುದಾದ ಎಲ್ಲ ಬಗೆಯ ಶೋಷಣೆಗಳನ್ನು ವಿಶ್ವದ ಬಹುತೇಕ ಸಮುದಾಯಗಳು ಅನುಸರಿಸುವದಿದೆ. ಆಫ್ರಿಕಾದಂತಹ ರಾಷ್ಟ್ರಗಳಲ್ಲಿ ನಡೆಯುವ ಫೀಮೇಲ್ ಜೆನಿಟಲ್ ಮ್ಯುಟಿಲೇಶನ್ ಮತ್ತು ಋತುಮತಿಯಾದಾಗ ನಮ್ಮ ಗ್ರಾಮೀಣ ಭಾಗಗಳಲ್ಲಿ ‘ನಮ್ಮ ಹುಡುಗಿ ದೊಡ್ದವಳಾದಳು’ ಅಂತ ಆಚರಿಸುವ ಪರಂಪರೆಗಳಿಗಿಂತಲೂ ತೀರಾ ಭಿನ್ನವಾಗಿಲ್ಲ. Ancient_Womenಒಂದು ಕಡೆ ಹಿಂಸೆ ಮತ್ತು ಕ್ರೌರ್ಯವಿದೆ. ಇನ್ನೊಂದು ಕಡೆ ಆಚರಣೆಯ ಹೆಸರಲ್ಲಿ ನಡೆಯಬಹುದಾದ ಶೋಷಣೆಯಿದೆ. ತೀರಾ ಖಾಸಗಿಯಾಗಿರುವ ಜೈವಿಕ ವಿಷಯವೊಂದನ್ನು ಡಂಗುರ ಸಾರುವ ಮೂಲಕ ಆಕೆ ದೊಡ್ಡವಳಾದಳು ಎಂದು ಊರ ಜನರಿಗೆ ಊಟ ಹಾಕುವ ಪರಿಪಾಠವೇ ಒಂದು ಶೋಷಣೆಯ ಮುಖವಾಗಿದೆ. ಇನ್ನು ಹಾಗೆ ಋತುಮತಿಯಾದಾಗ ಮಹಿಳೆಯನ್ನು ತೀರಾ ನಿಕೃಷ್ಟವಾಗಿ ನಡೆಯಿಸಿಕೊಳ್ಳುವ ಪರಿಪಾಠಗಳು ಇಂದಿಗೂ ಮಡಿವಂತ ಮನಸುಗಳಿರುವ ಮನೆಗಳಲ್ಲಿ ನಿರಾತಂಕವಾಗಿ, ನಿರಂತರವಾಗಿ ಮುಂದುವರೆದಿದೆ. ಆಕೆಯ ಮನೆಯಲ್ಲಿಯೇ ಏನೋ ಒಂದು ಧಾರ್ಮಿಕ ಸಮಾರಂಭ ಇಲ್ಲವೇ ಕಾರ್ಯಕ್ರಮವಿದ್ದರೆ ಈ ಋತುಮತಿಯಾದ ಮಹಿಳೆ ಮಹಾನ್ ಪ್ರಮಾದ್ ಮಾಡಿದವರಂತೆ ದೂರ ಕತ್ತಲು ಕೋಣೆಯಲ್ಲಿ ಅಜ್ಞಾತಳಂತೆ ಉಳಿಯುವ.. ತನ್ನ ತಪ್ಪಿನ ಹುಡುಕಾಟದಲ್ಲಿಯೇ ಮೂರು ದಿನ ಕಳೆಯುವ ಪರಿಪಾಠಕೆ ಒಗ್ಗಿಕೊಂಡು ಬಿಡುವದರಲ್ಲಿಯೇ ಮಹಿಳಾ ಶೋಷಣೆ ಅಡಕವಾಗಿದೆ.

೧೯೬೦ ದಶಕದ ಕೊನೆಯಲ್ಲಿ ಜನಪ್ರಿಯವಾದ ತೀವ್ರಗಾಮಿ ಸ್ತ್ರೀವಾದವು ಮಹಿಳೆಯ ಶೋಷಣೆಯ ವಿವಿಧ ಮುಖಗಳನ್ನು ತೀವ್ರವಾಗಿ ಪ್ರತಿಭಟಿಸಿರುವದಿದೆ. ತೀವ್ರವಾದಿ ಗುಂಪಿನ ವಿಚಾರವಾದಿಗಳಾದ ಶುಲಾ ಮಿತ್, ಕೇತ್ ಮಿಲ್ಲೆಟ್, ಏಡ್ರಿಯನ್ ರಿಚ್ ರವರು ತಾಯ್ತನ ಎನ್ನುವುದು ಮಹಿಳಾ ಶೋಷಣೆಯ ಮೂಲ ಆ ಮೂಲಕ ಅವಳ ಸ್ವಾತಂತ್ರ್ಯ ಮತ್ತು ವ್ಯಕ್ತಿತ್ವ ಕುಂಟಿತಗೊಳ್ಳುತ್ತದೆ. ಜೈವಿಕ ಸಂತಾನೋತ್ಪತ್ತಿಯ ಬದಲಾಗಿ ತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಂಡು ಸಂತಾನ ಪ್ರಕ್ರಿಯೆಗೆ ಅನುವು ಮಾಡಿಕೊಡಬೇಕು ಎಂದಿರುವದಿದೆ. ಈ ಚಿಂತಕರು ಹೇಳುವದರಲ್ಲಿ ಅರ್ಥವಿಲ್ಲದಿಲ್ಲ. ಆದರೆ ನೈಸರ್ಗಿಕವಾದ ಕ್ರಿಯೆಯನ್ನು ಯಾಂತ್ರಿಕಗೊಳಿಸುವ ಕ್ರಮ ಮಾತ್ರ ಸಹ್ಯವೆನಿಸುವದಿಲ್ಲ. ಇದರಿಂದ ಮನುಷ್ಯ ಸಂಬಂಧಗಳು ನಿರೀಕ್ಷಿಸಲಾಗದಷ್ಟು ಯಾಂತ್ರಿಕವಾಗಬಹುದಾದ ಅಪಾಯಗಳಿವೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಪಾವಗಡ, ಕೊರಟಗೆರೆ ತಾಲೂಕುಗಳ ಕೆಲ ಕಡೆಗಳಲ್ಲಿ ಗೊಲ್ಲರ ಹಟ್ಟಿಗಳಲ್ಲಿ ಈ ತಾಯ್ತನ ಮತ್ತು ಹೆಣ್ಣು ಋತುಮತಿಯಾಗುವ ಪ್ರಕ್ರಿಯೆಗಳನ್ನು ಅತ್ಯಂತ ಆಘಾತಕಾರಿ ಎನ್ನುವ ಹಾಗೆ ಆಚರಿಸಲಾಗುತ್ತದೆ. ಹಸಿ ಬಾಣಂತಿ ಮತ್ತು ಮಗು ೧೫ ದಿನಗಳಿಂದ ೩ ತಿಂಗಳುಗಳ ಕಾಲ ಊರ ಹೊರಗಿನ ಗುಡಿಸಲುಗಳಲ್ಲಿ muslim-womanವಾಸವಾಗಿರಬೇಕು. ಋತುಮತಿಯಾದ ಮಹಿಳೆಗೂ ಈ ಬಗೆಯ ನಿರ್ಬಂಧಗಳಿವೆ. ಈ ಬಗೆಯ ಅನಿಷ್ಟ ಪದ್ಧತಿಗಳನ್ನು ಬಹಳ ವ್ಯವಸ್ಥಿತವಾಗಿ ಇಲ್ಲಿಯವರೆಗೂ ಅಲ್ಲಿ ಕಾಪಾಡಿಕೊಂಡು ಬರಲಾಗಿದೆ. ಕಳೆದ ಅನೇಕ ವರ್ಷಗಳಿಂದಲೂ ಕೆಲವು ಸಂಘಟನೆಗಳು ಈ ಬಗೆಯ ಅನುಸರಣೆ ಸರಿಯಲ್ಲ, ಅದೊಂದು ಮೌಢ್ಯ ಎನ್ನುವ ತಿಳುವಳಿಕೆ ನೀಡುತ್ತಾ ಬಂದಿರುವ ಪರಿಣಾಮವಾಗಿ ಈಗೀಗ ಅಲ್ಲಿ ಈ ಬಗೆಯ ಆಚರಣೆಗಳು ತಮ್ಮ ಪ್ರಾಧಾನ್ಯತೆಯನ್ನು ಕಳೆದುಕೊಳ್ಳುತ್ತಿವೆ. ತನ್ನದಲ್ಲದ ತಪ್ಪಿಗೆ, ತಪ್ಪೇ ಅಲ್ಲದ ಜೈವಿಕ ಕ್ರಿಯೆಗಳಿಗೆ ಹೀಗೆ ಬಹಿಷ್ಕೃತ ರೂಪ ಕೊಟ್ಟು ಆಚರಿಸುವ ಕ್ರಮ ಸರಿಯಲ್ಲ. ಈಗೀಗ ಈ ಗೊಲ್ಲರ ಹಟ್ಟಿಗಳಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿರುವುದು ಒಳ್ಳೆಯ ಬೆಳವಣಿಗೆ. ಇನ್ನು ಈ ಬಗೆಯ ಅನಿಷ್ಟಗಳನ್ನೇ ಶಿಷ್ಟಾಚಾರಗಳನ್ನಾಗಿ ಆಚರಿಸುವ ಅನೇಕ ಜನಸಮುದಾಯಗಳು ನಮ್ಮ ನಡುವೆ ಇವೆ. ಅಲ್ಲಿಯೂ ಕೂಡಾ ಹೀಗೆ ಬದಲಾವಣೆಯ ಗಾಳಿ ಬೀಸಬೇಕು ಇಲ್ಲವೇ ಬೀಸುವಂತೆ ಮಾಡಬೇಕು. ಗೊಲ್ಲರ ಹಟ್ಟಿಯ ಜನರೀಗ ಈ ಬಗೆಯ ಆಚರಣೆಗಳನ್ನು ವಿರೋಧಿಸಲು ಸ್ವಯಂ ಪ್ರೇರಣೆಯಿಂದ ಮುಂದೆ ಬರುತ್ತಿದ್ದಾರೆ. ಈ ಬಗೆಯ ಬೆಳವಣಿಗೆಗಳು ಮಾತ್ರ ಮಹಿಳಾ ಶೋಷಣೆಯನ್ನು ತಡೆಯಬಲ್ಲವು.

ಯಾವುದೇ ಒಂದು ಅಹಿತಕರವಾದ ಪದ್ಧತಿ ಮತ್ತು ಆಚರಣೆಯ ವಿರುದ್ಧ ಪ್ರತಿಭಟನೆಗಳು ಹೊರಗಿನಿಂದ ನಡೆಯುವ ಬದಲಾಗಿ ಒಳಗಿನಿಂದಲೇ ನಡೆಯಬೇಕು ಅಂದಾಗ ಮಾತ್ರ ಆ ಬಗೆಯ ಆಚರಣೆಗಳನ್ನು ಕೈ ಬಿಡುವುದು ಸಾಧ್ಯ. ಮಹಿಳೆಯನ್ನು ಮತ್ತು ಆಕೆಯ ಸಾಮರ್ಥ್ಯವನ್ನು ಸರಿಯಾಗಿ ಗ್ರಹಿಸುವಲ್ಲಿ ನಮ್ಮ ಸಮಾಜ ಇಂದಿಗೂ ಯಶಸ್ವಿಯಾಗಿಲ್ಲ. ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಅವಳ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. woman-unchainedಕುಟುಂಬದೊಳಗಿನ ಆಕೆಯ ಕಾರ್ಯವನ್ನು ಅನುತ್ಪಾದಕ ಎಂದು ಪರಿಗಣಿಸುವಲ್ಲಿಯೇ ಒಂದು ಬಹುದೊಡ್ಡ ದೋಷವಿದೆ. ಕೇವಲ ಮಾರುಕಟ್ಟೆ ಮತ್ತು ಆದಾಯವನ್ನು ಗಮನಿಸಿ ಆಕೆಯ ಕಾರ್ಯಚಟುವಟೆಗಳನ್ನು ಗುರುತಿಸುವುದು ಸರಿಯಲ್ಲ. ಗಂಡು-ಹೆಣ್ಣು ಎನ್ನುವ ಎರಡು ಲಿಂಗಗಳು ಜೈವಿಕವಾದ ಪ್ರಬೇಧಗಳೇ ಹೊರತು ಶ್ರೇಷ್ಟ ಮತ್ತು ಕನಿಷ್ಟತೆಯನ್ನು ಸೂಚಿಸಲು ಇರುವ ಪದಗಳಲ್ಲ. ಮಹಿಳೆ ಎಲ್ಲ ಬಗೆಯ ಸಾಮರ್ಥ್ಯಗಳನ್ನು ತೋರಿಯಾದ ಮೇಲೆಯೂ ನಾವು ಆಕೆಯನ್ನು ಸಮಾನತೆಯ ತಳಹದಿಯ ಮೇಲೆ ಗಮನಿಸದಿರುವುದು ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿಯ ದೋಷವಲ್ಲದೇ ಮತ್ತೇನು..? ನಮ್ಮ ದೇಶದ ಗ್ರಾಮೀಣ ಭಾಗಗಳಲ್ಲಿಯ ಮಹಿಳೆ ಇಂದಿಗೂ ಕೇವಲ ಯಂತ್ರದಂತೆ ದುಡಿಯುವುದನ್ನು ಬಿಟ್ಟರೆ ಬೇರೆ ಯಾವುದೇ ರೀತಿಯ ಸ್ತ್ರೀಪರ ಹೋರಾಟ ಮತ್ತು ಆಕೆಯ ಶೋಷಣೆಗಳನ್ನು ಕುರಿತು ಮಾತನಾಡುವಷ್ಟು ಜಾಗೃತಳಾಗಿಲ್ಲ. ಆಕೆಯ ಕಣ್ಣೆದುರೇ ಗಂಡಾಳಿಗೊಂದು ಕೂಲಿ, ಹೆಣ್ಣಿಗೊಂದು ಕೂಲಿ ಅಂತ ವಿತರಿಸಿದರೂ ಆಕೆ ನೋಡಿಕೊಂಡು ಅದೇ ಸರಿ ಎನ್ನುವಂತೆ ಸುಮ್ಮನಿದ್ದಾಳೆ. ಪರಿಣಾಮವಾಗಿ ಆಕೆಗೆ ಗ್ರಾಮೀಣ ಭಾಗಗಳಲ್ಲಿ ತನ್ನತನವೇ ಇಲ್ಲದಂತಾಗಿದೆ. ಗ್ರಾಮೀಣ ಭಾಗದ ಮಹಿಳೆಯರು ಜಾಗೃತರಾಗುವ ಅವಶ್ಯಕತೆ ಎಲ್ಲ ಬಗೆಯ ಮಹಿಳಾ ಹೋರಾಟಗಳಿಗಿಂತಲೂ ಮುಂಚೂಣಿಯದಾಗಬೇಕು. ಅಂದಾಗ ಮಹಿಳಾ ಹೋರಾಟ ಮತ್ತು ವಿಮೋಚನೆ ಎನ್ನುವ ಪದಗಳು ಹೆಚ್ಚೆಚ್ಚು ಅರ್ಥ ಪಡೆಯುತ್ತವೆ.