ಸರಕಾರಿ ದುಡ್ಡಿನ ಸಮುದಾಯ ಭವನಕ್ಕೂ ಜಾತಿ ಹೆಸರು

                                                                                                                           – ಜೀವಿ

ಮುಂಜಾನೆ ಎಳೆ ಬಿಸಿಲು ಏರುತ್ತಿತ್ತು. ಬಿಸಿಲಿಗೆ ಎದುರಾಗಿ ಬೂದಿ ಜವರಪ್ಪ ಕುಳಿತ್ತಿದ್ದ. ಚಡ್ಡಿ ಸಂಟದ ಮೇಲಿರುವ ಬದಲಿಗೆ ಕೈಯಲ್ಲಿತ್ತು. ಚಡ್ಡಿ ಬದಲಿಗೆ ಹರುಕು ಪಂಚೆಯೊಂದನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದ. ಕಣ್ಣು ಅಷ್ಟಾಗಿ ಕಾಣಿಸದಿದ್ದರೂ ಚಡ್ಡಿಯಲ್ಲಿ ಏನೋ ಹುಡುಕಾಡುತ್ತಿದ್ದ. ಸತ್ತ ದನಕರುಗಳ ಚರ್ಮ ಸುಲಿದು ಮಾರಾಟ ಮಾಡುವುದು ಬೂದಿ ಜವರಪ್ಪನ ಕೆಲಸ. ಸತ್ತ ದನದಲ್ಲಿ ತನಗೆ ಬೇಕಾದ ಮಾಂಸ ತಂದು ಒಣಗಿಸಿ ಇಟ್ಟುಕೊಳ್ಳುತ್ತಿದ್ದ. ಅವನ ಮನೆಗೆ ಎದುರಿನದ್ದೆ ನನ್ನ ಮನೆಯಾಗಿದ್ದರಿಂದ ಹೆಚ್ಚು ಸಲಿಗೆ ಇತ್ತು. ಆಗೊಮ್ಮೆ ಈಗೊಮ್ಮೆ ಅವನು ಹೇಳಿದ ಸಣ್ಣಪುಟ್ಟ ಕೆಲಸ ಮಾಡಿ ನಾನೂ ಸುಟ್ಟ ಕೊರ ಬಾಡಲ್ಲಿ ಪಾಲು ಪಡೆಯುತ್ತಿದೆ. ಚರ್ಮ ಸುಲಿಯೋದು ಬಾರಿ ಸುಲಭ, ಕಾಲೇಜಿಗೆ ರಜೆ ಇದ್ದಾಗ ನನ್ನ ಜೊತೆ ಬಾsevalal_samudhaya_bhavan ಕಸುಬು ಕಲಿಸಿಕೊಡ್ತಿನಿ ಅನ್ನುತ್ತಿದ್ದ.

ಚರ್ಮ ಸುಲಿದು ಮಾರಾಟ ಮಾಡುತ್ತಿದ್ದರಿಂದ ಚಡ್ಡಿ ಜೇಬಿನಲ್ಲಿ ಪುಡಿಗಾಸು ಇದ್ದೇ ಇರುತ್ತಿತ್ತು. ತೊಳೆಯದೆ ಮಾಸಿ ಹೋಗಿದ್ದ ಚಡ್ಡಿ ಕೈಯಲ್ಲಿ ಹಿಡಿದಿದ್ದ ಬೂದಿ ಜನವರಪ್ಪ ಏನು ಮಾಡುತ್ತಿದ್ದಾನೆ ಎಂಬುದು ದೂರಕ್ಕೆ ಕಾಣಿಸಲಿಲ್ಲ. ಕುತೂಹಲ ತಡೆಯಲಾರದೆ ಹತ್ತಿರಕ್ಕೆ ಹೋದೆ. ‘ಬಡ್ಡಿ ಮಗ್ನವು ಜಾಸ್ತಿ ಆಗಿ, ರಾತ್ರಿಯೆಲ್ಲ ನಿದ್ದೆ ಇಲ್ಲ ಕಣೊ ಹುಡುಗ’ ಎಂದ. ಚಡ್ಡಿಯ ಮೂಲೆ ಮೂಲೆಯಲ್ಲಿ ಅಡಗಿ ಕುಳಿತಿದ್ದ ಕೂರೆಗಳನ್ನು ಹುಡುಕಿ ಕೊಲ್ಲುತ್ತಿರುವುದು ಅರ್ಥವಾಯಿತು. ಕಣ್ಣಿನ ದೃಷ್ಟಿ ಕಡಿಮೆ ಇದ್ದ ಕಾರಣಕ್ಕೆ ಕೂರೆ ಹುಡುಕಿ ಕೊಡು ಎಂದು ನನಗೆ ಹೇಳಿದ. ತೊಳೆದು ತಿಂಗಳಾಗಿರುವ ಚಡ್ಡಿ ಮುಟ್ಟಲು ನಾನು ಒಪ್ಪಲಿಲ್ಲ. ಕೊರ ಬಾಡ ಸುಟ್ಟು ಕೊಡ್ತಿನಿ ಎಂಬ ಆಸೆ ಹುಟ್ಟಿಸಿ ಕೂರೆ ಹುಡುಕುವ ಕೆಲಸ ನನಗೊಪ್ಪಿಸಿದ. ಹೈಸ್ಕೂಲ್ ಹಾಸ್ಟೆಲ್ನಲ್ಲಿದ್ದಾಗ ನನ್ನ ಚಡ್ಡಿಯಲ್ಲೂ ಕೂರೆಗಳು ಜಾಗ ಪಡೆದಿದ್ದ ಕಾರಣ ಕೂರೆಗಳನ್ನು ಕುಕ್ಕುವ ಅಭ್ಯಾಸ ಮೊದಲೇ ರೂಢಿಯಾಗಿತ್ತು. ಕೂರೆ ಹುಡುಕಿ ಕುಕ್ಕುವ ಕೆಲಸ ಮುಂದುವರಿದಿತ್ತು. ಓಡಿ ಬಂದ ಕಾಳಕ್ಕ ದಾಸಪ್ಪನ ಸಾವಿನ ಸುದ್ದಿ ತಿಳಿಸಿದಳು. ಒಂದೆರಡು ತಿಂಗಳಿಂದ ಜೀವ ಬಿಗಿ ಹಿಡಿದು ಮೂಲೆ ಸೇರಿದ್ದ ದಾಸಪ್ಪ ಕೊನೆಯುಸಿರೆಳೆದಿದ್ದ್ದ. ನನ್ನ ಕೈಲಿದ್ದ ಚಡ್ಡಿ ಕಿತ್ಕೊಂಡು ಅಲ್ಲೆ ಹಾಕಿಕೊಂಡ ಬೂದಿ ಜವರಪ್ಪ ಸಾವಿನ ಮನೆಯತ್ತ ತೆರಳಿದ.

ನೆಂಟರಿಷ್ಟರಿಗೆ ಸುದ್ದಿ ಮುಟ್ಟಿಸಿ ಸಂಜೆ ವೇಳೆಗೆ ಅಂತ್ಯ ಸಂಸ್ಕಾರ ನೆರವೇರಿತು. ದಾಸಪ್ಪನಿಗೆ ಇದ್ದ ಮೂರು ಮಕ್ಕಳು ಸೇರಿ ತಿಥಿ ಕಾರ್ಯವನ್ನು ದೊಡ್ಡದಾಗಿ ಮಾಡಲು ತೀಮರ್ಾನಿಸಿದರು. 2001-02ನೇ ಸಾಲಿನಲ್ಲಿ ಸಂಸದರ ನಿಧಿಯ ನೆರವಿನಿಂದ ಸಮುದಾಯ ಭವನವೊಂದು ಊರಿನಲ್ಲಿ ತಲೆ ಎತ್ತಿತು. 10 ಲಕ್ಷ ವೆಚ್ಚದಲ್ಲಿ ಕಟ್ಟಿದ ದೊಡ್ಡ ಸಮುದಾಯ ಭವನ ಅದಾಗಿತ್ತು. ಆ ತನಕ ಬೀದಿ ಅಥವಾ ಮನೆಗಳಲ್ಲಿ ನಡೆಯುತ್ತಿದ್ದ ಮದುವೆ, ತಿಥಿ ಹಾಗೂ ಇನ್ನಿತರ ಸಮಾರಂಭಗಳ ಊಟ ಸಮುದಾಯ ಭವನಕ್ಕೆ ಸ್ಥಳಾಂತರಗೊಂಡವು. ಎಲ್ಲರೂ ಸೇರಿ ದಾಸಪ್ಪನ ತಿಥಿ ಕಾರ್ಯವನ್ನು ಸಮುದಾಯ ಭವನದಲ್ಲೆ ಮಾಡಲು ನಿರ್ಧರಿಸಿದರು.

11ನೇ ದಿನಕ್ಕೆ ತಿಥಿ ಕಾರ್ಯದ ಊಟ ಸಮುದಾಯ ಭವನದಲ್ಲಿ ನಡೆಯಿತು. ಊರಿನ ದಲಿತರು ಮತ್ತು ನೆಂಟರಿಷ್ಟರು ಊಟ ಮಾಡಿದರು. ಊರ ಮುಂದೆ ಮೇಲ್ವರ್ಗದ ಮನೆಗಳ ನಡುವೆ ಸಮುದಾಯ ಭವನ ಇರುವ ಕಾರಣ ಜಾತಿಯ ಅರಿವಿಲ್ಲದ ಮೇಲ್ಜಾತಿ ಹತ್ತಾರು ಮಕ್ಕಳು ಊಟ ಮಾಡಿ ಮನೆಗೆ ಹೋದರು. ಊಟ ಮಾಡಿ ಹೋದ ಮಕ್ಕಳನ್ನು ಕಂಡು ಹೆತ್ತವರ ಕೋಪ ನೆತ್ತಿಗೇರಿತು. ಹೊಲೇರ ಮನೆ ಊಟ ಮಾಡಿದ ಮಕ್ಕಲ ಕೈ ಬಾಸುಂಡೆ ಬರುವಂತೆ ಒದೆ ಬಿದ್ದವು. ಮೈಲಿಗೆಯಾಗಿದ್ದ ಮಕ್ಕಳಿಗೆ ಸ್ನಾನ ಮಾಡಿಸಿ ದೇವರಿಗೆ ಕೈಮುಗಿಸಿದರು. ಏನೋ ಮಕ್ಕಳು ತಿಳಿಯದೆ ತಪ್ಪು ಮಾಡಿದ್ದಾರೆ. ಕ್ಷಮಿಸಿ ಬಿಡು ದೇವರೆ ಎಂದು ಬೇಡಿಕೊಂಡರು.

ದಲಿತರ ಮನೆ ತಿಥಿ ಊಟವನ್ನು ಮೇಲ್ವರ್ಗದ ಮಕ್ಕಳು ಮಾಡಿರುವ ಸುದ್ದಿ ಊರ ತುಂಬ ಹರಡಿತು. ಪಂಚಾಯ್ತಿ ಸೇರಿ ಮೇಲ್ವರ್ಗ ಮಕ್ಕಳಿಗೆ ಊಟ ಹಾಕಿದ ದಾಸಪ್ಪನ ಮಗ ಸ್ವಾಮಿಯನ್ನೂ ಕರೆಸಿದರು. ಸಮುದಾಯಭವನದಲ್ಲಿ ತಿಥಿ ಕಾರ್ಯ ಮಾಡಲು ಅವಕಾಶ ಕೊಟ್ಟ ತಪ್ಪಿಗೆ ನಿಮ್ಮ ಮನೆ ಊಟನಾ ನಮ್ಮ ಮಕ್ಕಳಿಗೆ ತಿನ್ನಿಸಿದ್ದೀಯಾ? ಎಂದು ರೇಗಿದರು. ಮಕ್ಕಳಿಗೆ ಅರಿವಿಲ್ಲ, ಮಾಂಸದೂಟದ ಆಸೆಗೆ ಬಂದು ಕುಳಿತರೆ ಊಟ ಹಾಕಿ ಜಾತಿ ಕೆಡ್ಸಿದ್ದೀರಲ್ಲ ನೀವು ಹೊಟ್ಟೆಗೇ ಏನು ತಿಂತೀರಿ? ಎಂದು ಪ್ರಶ್ನೆ ಮಾಡಿದರು. ನಾನೇನ್ ಮಾಡ್ಲಿ ಗೌಡ್ರೇ, ಊಟಕ್ಕೆ ಕುಳಿತ ಮಕ್ಕಳನ್ನು ಏಳಿಸಿ ಕಳಿಸೋದು ಹೇಗೆ ಅಂತ ಊಟ ಹಾಕಿದ್ವಿ ಎಂದು ಸ್ವಾಮಿ ಉತ್ತರ ನೀಡಿದ. ನೀವೇನ್ ಮಾಡ್ತಿರಾ? ಊಟ ಹಾಕಿ ಜಾತಿ ಕೆಡಿಸೊ ಕೆಲಸ ಮಾಡಿ ಆಯ್ತಲ್ಲ. ಅದ್ಕೆ ನಿಮ್ಮನ್ನು ಎಲ್ಲಿ ಇಡಬೇಕೋ, ಅಲ್ಲೆ ಇಡಬೇಕಿತ್ತು. ಏನೋ ಹೋಗ್ಲಿ ಅಂತ ಊರ ಮುಂದಿರುವ ಸಮುದಾಯಭವನದಲ್ಲಿ ಅವಕಾಶ ಕೊಟ್ಟರೆ ನಮ್ಮ ಮಕ್ಕಳಿಗೆ ಊಟ ಹಾಕಿ ಊರು-ಹೊಲಗೇರಿ ಒಂದು ಮಾಡಿದ್ದೀರಿ ಎಂದು ಮೇಲ್ವರ್ಗವರು ಸ್ವಾಮಿ ಮೇಲೆ ಎಗರಿದರು. ಹಿಂದೊಮ್ಮೆ ಯುವಕರಿಗೆ ಊಟ ಹಾಕಿದ ತಪ್ಪಿಗೆ ದಂಡ ಕಟ್ಟಿದ್ದನ್ನು ಮರೆತಿದ್ದೀರಿ. ಈಗ ಕಾನೂನು ನಿಮ್ಮ ಪರ ಇದೆ ಅಂತ ಹೀಗೆಲ್ಲಾ ಮಾಡ್ತಾ ಇದ್ದೀರಿ. ಇದು ನಡೆಯೊಲ್ಲ, ಇದೇ ಕೊನೆ ಇನ್ಮುಂದೆ ದಲಿತರ ಕಾರ್ಯಕ್ರಮಗಳಿಗೆ ಸಮುದಾಯಭವನ ನೀಡ ಬಾರದು ಎಂಬ ನಿರ್ಣಯ ಕೈಗೊಂಡರು.

ಸರಕಾರದ ಸಮುದಾಯಭವನದಲ್ಲಿ ನಮ್ಮ ಕಾರ್ಯಕ್ರಮ ಮಾಡಲು ಅವಕಾಶ ಕೊಡಲ್ಲ ಅಂದ್ರೇ ಯಾವ ನ್ಯಾಯ ಗೌಡ್ರೆ? ನೀವು ತಿನ್ನುವ ಕುರಿ, ಕೋಳಿ, ಹಂದಿ ಮಾಂಸದ ಊಟನೇ ನಾವು ಮಾಡಿದ್ದೀವಿ. ಆಕಸ್ಮಿಕವಾಗಿ ಮಕ್ಕಳು ಬಂದು ಊಟ ಮಾಡಿದ್ದಾರೆ. ನಾವೇನು ನಿಮ್ಮ ಮಕ್ಕಳಿಗೆ ದನದ ಮಾಂಸದ ತಿನ್ನಿದ್ದೀವಾ? ಎಂದು ಸ್ವಾಮಿ ಪ್ರಶ್ನೆ ಮಾಡಿದ.

ಬಿಟ್ರೆ ಅದನ್ನು ತಿನ್ನಸ್ತೀರಿ, ಅದಕ್ಕೆ ಇನ್ಮುಂದೆ ನೀಮ್ಮ ಜಾತಿಯವರ ಕಾರ್ಯಕ್ರಮಗಳನ್ನು ನಿಮ್ಮ ಕೇರಿಯಲ್ಲೇ ಮಾಡಿಕೊಳ್ಳಿ, ಊರು ಮುಂದೆ ಬಂದು ಜಾತಿ ಹಾಳು ಮಾಡಬೇಡಿ ಎಂದು ಮೇಲ್ವರ್ಗದವರು ಆಜ್ಞೆ ಮಾಡಿದರು. ಸಮುದಾಯಭವನ ಸಕರ್ಾರದ ಆಸ್ತಿ. ಅಲ್ಲಿ ಕೆಳಜಾತಿಯವರ ಕಾರ್ಯಕ್ರಮಗಳಿಗೆ ಅವಕಾಶ ಕೊಡದಿದ್ದರೆ ಕಾನೂನಿನ ಮೊರೆ ಹೋಗ್ತೀವಿ ಎಂದು ಸ್ವಾಮಿ ಹೇಳಿದ. ಎಲ್ಲಾದ್ರು ಹೋಗಿ ಹಾಳಾಗಿ, ಸಮುದಾಯಭವನ ಮಾತ್ರ ಕೊಡಲು ಸಾಧ್ಯವಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದರು.

ಇನ್ನು ಇವರ ಬಳಿ ಕೇಳಿ ಪ್ರಯೋಜನ ಇಲ್ಲ ಎಂದುಕೊಂಡು ತಮ್ಮ ಕೇರಿಗೆ ಬಂದ ದಲಿತರು, ಸಮುದಾಯಭವನ ಕಟ್ಟಿಸಿರುವುದು ಸಂಸದರ ನಿಧಿಯ ಹಣದಲ್ಲಿ. ಅವರ ಬಳಿಯೇ ಹೋಗೋಣ ಎಂದು ಮಾತನಾಡಿಕೊಂಡರು. ಅವರನ್ನು ಹಿಡಿಯೋದು ಕಷ್ಟ, ಅವರ ಮಗ ಎಂಎಲ್ಎ ಅಲ್ವಾ? ಅವರದೇ ಎಲ್ಲಾ ಕಾರುಬಾರು. ಅವರ ಹತ್ತಿರವೇ ಹೋಗಿ ನಿವೇದನೆ ಮಾಡಿಕೊಳ್ಳೋಣ. ಎಂಎಲ್ಎ ಹೇಳಿದ್ರೆ ಬಾಗಿಲು ತೆಗೆಯಲೇ ಬೇಕು. ನಾಳೇಯೇ ಹೋಗಿ ಎಂಎಲ್ಎ ಕಾಣೋಣ ಎಂದು ತೀಮರ್ಾನಿಸಿದರು.

ಮರುದಿನ ಬೆಳಗ್ಗೆಯೇ ಬಸ್ ಹತ್ತಿದ್ದ ದಲಿತರು, ಎಂಎಲ್ಎ ಮನೆ ಮುಂದೆ ಹಾಜರಾದರು. ಬೆಳಗ್ಗೆಯೇ ದಲಿತರ ದರ್ಶನ ಮಾಡಿದರೆ ಅಪಶಕುನ ಎಂದು ನಂಬಿರುವ ಶಾಸಕನ ಮುಂದೆ ನಿಂತರು. ಊರು ಕೇರಿ ಪರಿಚಯ ಮಾಡಿಕೊಂಡ ನಂತರ ತಲೆ ಮೇಲೆತ್ತಿ ಅವರ ಮುಖ ನೋಡದ ಶಾಸಕ, ಅದೇ ಸಮುದಾಯಭವನದಲ್ಲಿ ಕಾರ್ಯಕ್ರಮ ಮಾಡಬೇಕು ಎಂಬ ಹಠ ನಿಮಗೇಕೆ? ಹೊಲೇರ ಮನೆ ಕಾರ್ಯದಲ್ಲಿ ಮೇಲ್ಜಾತಿ ಮಕ್ಕಳಿಗೆ ಊಟಕ್ಕೆ ಹಾಕೋದು ತಪ್ಪಲ್ಲವೇ ಎಂದು ಪ್ರಶ್ನೆ ಮಾಡಿದ. ‘ನಿಮಗೇ ಪ್ರತ್ಯೇಕವಾಗಿ ಸಣ್ಣದೊಂದು ಸಮುದಾಯಭವನ ಕಟ್ಟಿಸಿಕೊಡ್ತಿನಿ, ಈಗಿರುವ ಭವನಕ್ಕೆ ನೀವು ಕಾಲಿಡುವುದು ಬೇಡ’ ಎಂದು ಆದೇಶ ಮಾಡಿ ನೀವಿನ್ನು ಹೊರಡಿ ಎಂದ. ನ್ಯಾಯ ಅರಸಿ ಬಂದ ದಲಿತರ ಮುಖ ಸಪ್ಪಗಾಯಿತು. ಎಂಎಲ್ಎ ಕಂಡು ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡು ಬಂದ ವಿಷಯ ಊರಿನಲ್ಲಿ ಹರಡಿತು. ಎಂಎಲ್ಎ ನಮ್ಮ ಜಾತಿಯವನೇ, ನಮ್ಮನ್ನು ಬಿಟ್ಟುಕೊಡುತ್ತಾನೆಯೇ? ಎಂದು ಮೇಲ್ಜಾತಿಯವರು ಬೀಗಿದರು.

ಮತ್ತೆ ದಲಿತರ ಸಭೆ ಸೇರಿಸಿದ ಸ್ವಾಮಿ, ಎಂಎಲ್ಎ ಬೇಡ ಎಂದರೂ ಬಿಡೋದು ಬೇಡ. ಕಾನೂನಿನ ಮೊರೆ ಹೋಗಿ ಸಮುದಾಯಭವನದಲ್ಲಿ ಅವಕಾಶ ಪಡೆದುಕೊಳ್ಳೋಣ ಎಂದು ಹೇಳಿದ. ಆದರೆ ಸ್ವಾಮಿ ಸೇರಿ ಮೂರ್ನಾಲ್ಕು ಮಂದಿ ಹೊರತಾಗಿ ಬೇರ್ಯಾರು ಅದಕ್ಕೆ ಒಪ್ಪಲಿಲ್ಲ. ನಮ್ಮ ಮತ್ತು ಮೇಲ್ವರ್ಗದ ಸಂಬಂಧ ಇಷ್ಟಕ್ಕೆ ಮುಗಿಯುವುದಿಲ್ಲ. ನಾವು ಕಾನೂನಿ ಹೋರಾಟಕ್ಕೆ ಇಳಿದರೆ ಮೇಲ್ವರ್ಗದವರು ಊರಿಂದ ಬಹಿಷ್ಕಾರ ಹಾಕ್ತಾರೆ. ಮದುವೆ ಆಗಬೇಕಿರುವ ಹೆಣ್ಣು ಮಕ್ಕಳು ಮನೆಗೊಂದು poverty-in-indiaಬೆಳೆದು ನಿಂತಿವೆ. ಹಣ ಬೇಕೆಂದರೆ ಅವರ ಬಳಿಯೇ ಕೈಚಾಚಬೇಕು. ಅವರನ್ನು ವಿರೋಧ ಮಾಡಿಕೊಂಡು ಬದುಕಲು ಸಾಧ್ಯವಿಲ್ಲ. ನಮಗೆ ಪ್ರತ್ಯೇಕ ಸಮುದಾಯಭವನ ಕಟ್ಟಿಕೊಡುವುದಾಗಿ ಎಂಎಲ್ಎ ಹೇಳಿದ್ದಾನೆ. ಮತ್ತೆ ಮೇಲ್ವರ್ಗದವರನ್ನು ಎದುರು ಹಾಕಿಕೊಳ್ಳುವುದು ಸರಿಯಲ್ಲ ಎಂಬುದು ಬಹುತೇಕರ ಅಭಿಪ್ರಾಯವಾಗಿತ್ತು. ಹಾಗಾಗಿ ಉಳಿದವರು ಸುಮ್ಮನಾದರು.
ಕೆಲವೇ ದಿನಗಳಲ್ಲಿ ಸಮುದಾಯಭವನ ಎಂದಿದ್ದ ನಾಮಫಲಕ ಒಕ್ಕಲಿಗರ ಸಮುದಾಯಭವನವಾಗಿ ಪರಿವರ್ತನೆಯಾಯಿತು. ಈ ಘಟನೆ ನಡೆದು 13 ವರ್ಷ ಕಳೆದಿದೆ. ದಲಿತರಿಗೆ ಪ್ರತ್ಯೇಕ ಸಮುದಾಯಭವನ ಇಂದಿಗೂ ನಿಮರ್ಾಣ ಆಗಿಲ್ಲ. ಒಕ್ಕಲಿಗರ ಸಮುದಾಯಭವನಕ್ಕೆ ದಲಿತರು ಕಾಲಿಡಲು ಸಾಧ್ಯವಾಗಿಲ್ಲ. ಅದೇ ಎಂಎಲ್ಎ ಇಂದಿಗೂ ಅದೇ ಕ್ಷೇತ್ರದ ಪ್ರತಿನಿಧಿ

16 thoughts on “ಸರಕಾರಿ ದುಡ್ಡಿನ ಸಮುದಾಯ ಭವನಕ್ಕೂ ಜಾತಿ ಹೆಸರು

  1. ಸೀತಾ

    ಜೀವಿ ಅವರೇ, ಈ ವಿಷಯವನ್ನು ಸುಮ್ಮನೆ ಮರೆತುಹೋಗಲು ಬಿಡಬೇಡಿ. ಸಿ ಎಂ ಸಿದ್ದರಾಮಯ್ಯನವರು ನಾಡಿನ ಅಹಿಂದ ನೇತಾರರು, ಆಡಳಿತ ರೂಢ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ದಲಿತ ನಾಯಕ ಪರಮೇಶ್ವರ್ ಅವರು, ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದಿರುವವರು ಮಲ್ಲಿಕಾರ್ಜುನ ಖರ್ಗೆ ಅವರು. ದಲಿತರಿಗೆ ಆದ ಅನ್ಯಾಯಗಳಿಗೆ ಸಮಾಧಾನ ಒದಗಿಸಲು ಇಂದಿಗಿಂತ ಸೂಕ್ತ ಕಾಲ ಬೇರೆ ಇಲ್ಲ. ಆದುದರಿಂದ
    ದಲಿತ ಸಮುದಾಯ ಭವನದ ವಿಚಾರದಲ್ಲಿ ಬೇಲೂರು ಶಾಸಕ ವೈ. ಎನ್. ರುದ್ರೇಶ ಗೌಡ ಅವರು ದಲಿತರಿಗೆ ಕೊಟ್ಟ ಮಾತು ಉಳಿಸಿಕೊಳ್ಳದ ಬಗ್ಗೆ ಸಿ ಎಂ ಹಾಗೂ ಪರಮೇಶ್ವರ್ ಅವರಿಗೆ ಸಾರ್ವಜನಿಕ ಪತ್ರ ಬರೆಯಿರಿ. ಮಾನ್ಯ ಖರ್ಗೆ ಅವರಿಗೂ ಒಂದು ಮಾತು ಹೇಳಿಸಿ.

    Reply
  2. Anonymous

    ನಿಮ್ಮ ಸಲಹೆ ಸೂಕ್ತವಾಗಿದೆ. ಆದರೆ ಆ ಕ್ಷೇತ್ರ ಶಾಸಕ ರುದ್ರೇಶಗೌಡ ಅಲ್ಲ.

    Reply
    1. Anonymous

      ೧೨ ವರ್ಷಗಳ ಹಿಂದೆ ಹಾಸನದ ಎಂ ಪಿ ಆಗಿದ್ದವರು ಮಾಜಿ ಪಿ ಎಂ ದೇವೇಗೌಡರು. ಅವರ ಪುತ್ರ ರೇವಣ್ಣ ಆಗ ಹೊಳೆನರಸಿಪುರದ ಶಾಸಕರಾಗಿದ್ದರು. ಆ ಕ್ಷೇತ್ರದ ಹಾಲಿ ಶಾಸಕ ರೇವಣ್ಣ ಅವರೇ ಆಗಿದ್ದಾರೆ. ಉಡಸಲಮ್ಮ ದೇವಸ್ಥಾನ ಇರುವುದು ಹೊಳೆನರಸಿಪುರದ ಬನವಾಸೆ ಗ್ರಾಮದಲ್ಲಿ.

      Reply
      1. Anonymous

        No one can do anything to Revanna forget Congress leaders. He’s so powerful. Only Dodda Gowdaru can advice Revanna.

        Reply
  3. Ananda Prasad

    ಸಮಾಜದಲ್ಲಿ ಮೇಲು ಕೀಳು ಎಂದು ಭೇದ ತೋರಿಸುವುದು ಒಂದು ಮೃಗೀಯ ಪ್ರವೃತ್ತಿಯಾಗಿದೆ. ಯಾರು ಇಂಥ ಮನೋಭಾವನೆಯನ್ನು ತೋರಿಸುತ್ತಾರೆಯೋ ಅವರು ಜೀವವಿಕಾಸ (evolution) ಪ್ರಕ್ರಿಯೆಯಲ್ಲಿ ಹಿಂದೆ ಬಿದ್ದಿದ್ದಾರೆ ಅರ್ಥಾತ್ ಅವರು ತಮ್ಮ ಸ್ವಭಾವ ಹಾಗೂ ಗುಣ ಲಕ್ಷಣಗಳಲ್ಲಿ ಪ್ರಾಣಿಗಳಿಗೆ ಸಮೀಪ ಇದ್ದಾರೆ ಎಂದೇ ಅರ್ಥ. ಇಂಥ ಸ್ವಭಾವ ವಿದ್ಯೆ ಕಲಿತ ಮೇಲ್ವರ್ಗದ ಜಾತಿಗಳಲ್ಲಿ ಕಡಿಮೆ ಆಗಿ ಸಮಾನತೆಯ ಭಾವ ಮೂಡಬೇಕಾಗಿತ್ತು. ಅದು ಕಡಿಮೆ ಆಗಿಲ್ಲ ಎಂದರೆ ನಮ್ಮ ವಿದ್ಯಾಭ್ಯಾಸ ವ್ಯವಸ್ಥೆಯ ದೋಷ ಅದು. ಜಾತಿ ವಿಷಯದಲ್ಲಿ ತಾರತಮ್ಯ, ಮೇಲುಕೀಳು ಭಾವನೆಯ ಜೊತೆಗೆ ಬಡವ ಬಲ್ಲಿದ ಎಂದು ತಾರತಮ್ಯ ಮಾಡುವುದು ಕೂಡ ಇಂಥ ಮೃಗೀಯ ಮನೋಭಾವನೆಯ ಜೀವ ವಿಕಾಸ ಪ್ರಕ್ರಿಯೆಯಲ್ಲಿ ಹಿಂದೆ ಬಿದ್ದಿರುವ ಮೃಗೀಯ ಮನೋಭಾವದ ಮಾನವರ ದೌರ್ಬಲ್ಯವಾಗಿದೆ. ಇದು ಒಂದು ರೀತಿಯ ಮನೋರೋಗವಾಗಿದ್ದು ಇವರಿಗೆ ಮನೋವೈದ್ಯರಿಂದ ಚಿಕಿತ್ಸೆಯ ಅಗತ್ಯ ಇದೆ. ಆದರೆ ಭಾರತದಲ್ಲಿ ಇಂಥ ಮೃಗೀಯ ಮನೋಭಾವದ ಜೀವವಿಕಾಸ ಪ್ರಕ್ರಿಯೆಯಲ್ಲಿ ಹಿಂದೆ ಇರುವ ತಳಿಯ ಮನುಷ್ಯರೇ ಹೆಚ್ಚು ಇದ್ದು ಇವರಿಗೆ ಮನೋಚಿಕಿತ್ಸೆ ಕೊಡುವಷ್ಟು ಸಂಖ್ಯೆಯಲ್ಲಿ ಮನೋವೈದ್ಯರು ಇಲ್ಲ. ನಮ್ಮ ಸಮಾಜದಲ್ಲಿ ಇಂಥ ಮಾನವರೂಪೀ ಮೃಗಗಳು ಕೋಟ್ಯಂತರ ಸಂಖ್ಯೆಯಲ್ಲಿ ಇರುವುದರಿಂದ ನಮ್ಮ ದೇಶಕ್ಕೆ ಕೋಟ್ಯಂತರ ಸಂಖ್ಯೆಯಲ್ಲಿ ಮನೋವೈದ್ಯರ ಅಗತ್ಯ ಇದೆ.

    Reply
    1. Anonymous

      “ಸಮಾಜದಲ್ಲಿ ಮೇಲು ಕೀಳು ಎಂದು ಭೇದ ತೋರಿಸುವುದು ಒಂದು ಮೃಗೀಯ ಪ್ರವೃತ್ತಿಯಾಗಿದೆ.”

      ಆನಂದ ಪ್ರಸಾದ ಅವರೇ, ಮೃಗಗಳಲ್ಲಿ ಮೇಲು-ಕೀಳು ಭೇದ ತೋರಿಸುವ ಪ್ರವೃತ್ತಿ ಇದೆಯೇ? ಹಾಗಂತ ಯಾವ ವೈಜ್ಞಾನಿಕ ಸಂಶೋಧನೆ ಹೇಳಿದೆ?

      Reply
  4. Anonymous

    “ನಮ್ಮ ಸಮಾಜದಲ್ಲಿ ಇಂಥ ಮಾನವರೂಪೀ ಮೃಗಗಳು ಕೋಟ್ಯಂತರ ಸಂಖ್ಯೆಯಲ್ಲಿ ಇರುವುದರಿಂದ ನಮ್ಮ ದೇಶಕ್ಕೆ ಕೋಟ್ಯಂತರ ಸಂಖ್ಯೆಯಲ್ಲಿ ಮನೋವೈದ್ಯರ ಅಗತ್ಯ ಇದೆ.”

    Your comment is irrelevant to the subject of this article which is on vokkaliga discrimination of Dalits in Hassan region. Dalits should enmass vote Revanna in the next election to send a message.

    Reply
  5. Ananda Prasad

    ಮೃಗೀಯ ಪ್ರವೃತ್ತಿ ಎಂದು ಹೇಳಿದ್ದು ವನ್ಯ (wild) ಮೂಲದ ಪ್ರವೃತ್ತಿ ಎಂಬ ಅರ್ಥದಲ್ಲಿಯೇ ಹೊರತು ಮೃಗಗಳಲ್ಲಿ ಮೇಲು ಕೀಳು ಎಂದು ತೋರಿಸುವ ಪ್ರವೃತ್ತಿ ಇದೆ ಎಂದು ಅಲ್ಲ. ಮಾನವನು ನಾಗರಿಕ ಆದಂತೆ ವನ್ಯ ಮೂಲದ ಪ್ರವೃತ್ತಿಗಳನ್ನು ತನ್ನ ಯೋಚನಾಶಕ್ತಿಯಿಂದ ಹತ್ತಿಕ್ಕಿ ನಿಯಂತ್ರಿಸಿಕೊಂಡು ಇತರ ಮಾನವರನ್ನೂ ತನ್ನಂತೆ ಸಮಾನರಾಗಿ ಕಾಣಬೇಕಾಗಿರುವುದು ಅಪೇಕ್ಷಣೀಯ ಹಾಗೂ ಮಾನವೀಯ ಗುಣ ಎನಿಸಿಕೊಳ್ಳುತ್ತದೆ. ದುರದೃಷ್ಟವಶಾತ್ ನಮ್ಮ ಸಮಾಜದಲ್ಲಿ ಇಂಥ ನಾಗರೀಕ ಮಾನವೀಯ ಪ್ರವೃತ್ತಿ ಸಾಕಷ್ಟು ಬೆಳವಣಿಗೆ ಆಗಿಲ್ಲ ಎಂಬುದು ನಮ್ಮಂತೆಯೇ ಇರುವ ಸಹಮಾನವರ ಮೇಲೆ ಜಾತಿ, ಅರ್ಥಿಕ ಸ್ಥಿತಿಗತಿಗಳ ಮೇಲೆ ತಾರತಮ್ಯ ಹಾಗೂ ದೌರ್ಜನ್ಯ ಎಸಗುವ ಮೂಲಕ ಮೇಲ್ಜಾತಿ ಎನಿಸಿಕೊಂಡ ಮಾನವರಿಂದ ನಡೆಯುತ್ತಿದೆ. ಇಂಥ ಪ್ರವೃತ್ತಿ ವನ್ಯ ಮೂಲದ ಪ್ರವೃತ್ತಿಯಾಗಿದ್ದು ಇದನ್ನು ಯೋಚನಾಶಕ್ತಿ ಬೆಳೆದ ಮನುಷ್ಯ ನಿಗ್ರಹಿಸಿ ಎಲ್ಲರನ್ನೂ ಸಮಾನವಾಗಿ ಕಾಣುವುದು ಎಲ್ಲರ ಒಳಿತಿನ ದೃಷ್ಟಿಯಿಂದ ಅಗತ್ಯ. ಎಲ್ಲರೂ ಸಂತೋಷವಾಗಿ ಇರಬೇಕಾದರೆ ಆ ಸಮಾಜದಲ್ಲಿ ಮೇಲು ಕೀಳು ಎಂಬ ಭೇದ ಭಾವ ಇರಬಾರದು. ಇದ್ದರೆ ಎಲ್ಲರೂ ಸಂತೋಷವಾಗಿ ಇರಲು ಸಾಧ್ಯವಿಲ್ಲ. ಸರ್ವೇಜನಃ ಸುಖಿನೋಭವಂತು, ವಸುದೈವಕುಟುಂಬಕಂ ಎಂಬ ಮಾತುಗಳು ನಮ್ಮಲ್ಲಿ ಕೇಳಿಬರುತ್ತವೆಯಾದರೂ ಅದರಂತೆ ಸಮಾಜದ ಬಹುತೇಕ ಜನ ನಡೆದುಕೊಳ್ಳುತ್ತಿಲ್ಲ.

    ವನ್ಯ ಜಗತ್ತಿನಲ್ಲಿ ದೊಡ್ಡ ಮೀನು ಸಣ್ಣ ಮೀನನ್ನು ತಿಂದು ಬದುಕುವುದು ಮೃಗೀಯ ಎನಿಸಿಕೊಳ್ಳುತ್ತದೆ. ಇದೇ ನಿಯಮ ನಾಗರಿಕ ಮಾನವ ಸಮಾಜದಲ್ಲಿ ನಡೆಯುವುದಿಲ್ಲ, ನಡೆಯಲೂಬರದು. ಅದಕ್ಕಾಗಿಯೇ ನಿಯಮಗಳು, ಸಂವಿಧಾನ ರೂಪಿಸಲಾಗಿದೆ. ಒಂದು ವೇಳೆ ವನ್ಯ ರೀತಿಯೇ ಮಾನವ ಸಮಾಜದಲ್ಲಿಯೂ ನಡೆಯಬೇಕು, ಹಾಗೆ ನಡೆಯುವುದೇ ಸೂಕ್ತ ಎಂದು ಬಲಿತ ಜನ ಯೋಚಿಸುವುದಾದರೆ ಸಮಾಜದಲ್ಲಿ ರೌಡಿಗಳು, ಕಳ್ಳರು, ಭ್ರಷ್ಟರು ಕೊಲೆಗಡುಕರು, ಶೋಷಕರು ಮಾತ್ರವೇ ಮೇಲುಗೈ ಪಡೆದು ಬಲಿಷ್ಠರಾಗುವುದು ನ್ಯಾಯೋಚಿತ ಎಂದಂತೆ ಆಗುತ್ತದೆ. ಏಕೆಂದರೆ ವನ್ಯ ನಿಯಮ ಹಾಗೇ ಇದೆ. ದೊಡ್ಡ ಮೀನು ಸಣ್ಣ ಮೀನನ್ನು ನ್ಯಾಯವೋ ಅನ್ಯಾಯವೋ ಎಂದು ಮೀನುಗಳು ಯೋಚಿಸಲಾರವು. ಯೋಚಿಸುವ ಸಾಮರ್ಥ್ಯ ಇರುವ ಮಾನವ ಸಮಾಜ ಹೀಗೆ ನಡೆದುಕೊಳ್ಳಲಾಗದು.

    Reply
    1. Anonymous

      “ವನ್ಯ ಜಗತ್ತಿನಲ್ಲಿ ದೊಡ್ಡ ಮೀನು ಸಣ್ಣ ಮೀನನ್ನು ತಿಂದು ಬದುಕುವುದು ಮೃಗೀಯ ಎನಿಸಿಕೊಳ್ಳುತ್ತದೆ. ಇದೇ ನಿಯಮ ನಾಗರಿಕ ಮಾನವ ಸಮಾಜದಲ್ಲಿ ನಡೆಯುವುದಿಲ್ಲ, ನಡೆಯಲೂಬರದು.”

      ವನ್ಯ ಜಗತ್ತಿನಲ್ಲಿ ದೊಡ್ಡ ಮೀನು ಸಣ್ಣ ಮೀನನ್ನು ತಿನ್ನುವುದು ತನ್ನ ಆಹಾರಕ್ಕಾಗಿ. ಅದೇ ರೀತಿ ಮಾನವರು (ಎಲ್ಲರೂ ಅಲ್ಲ ಕೆಲವರು) ಸಣ್ಣ ಮೀನನ್ನೂ ದೊಡ್ಡ ಮೀನನ್ನೂ ತಿನ್ನುತ್ತಾರೆ. ಕರಾವಳಿ ಭಾಗದಲ್ಲಿ ಮೀನಿನ ವಿಶೇಷ ಖಾದ್ಯಗಳನ್ನೂ ಮಾನವರೇ ಮಾಡುತ್ತಾರೆ ಮಾನವರೇ ತಿನ್ನುತ್ತಾರೆ. ವನ್ಯ ಜಗತ್ತಿನಲ್ಲಿ ದೊಡ್ಡ ಮೀನು ಮಾಡಿದ್ದು ಮೃಗೀಯ ಮನುಷ್ಯ ಸಮಾಜದಲ್ಲಿ ಮಾನವ ಮಾಡಿದ್ದು ಮೃಗೀಯವಲ್ಲವೇ? ಇದು ಯಾವ ತರಹದ ತರ್ಕ?

      Reply
    2. Anonymous

      “ಮೃಗೀಯ ಪ್ರವೃತ್ತಿ ಎಂದು ಹೇಳಿದ್ದು ವನ್ಯ (wild) ಮೂಲದ ಪ್ರವೃತ್ತಿ ಎಂಬ ಅರ್ಥದಲ್ಲಿ”

      ಅದೇ ಸಾರ್ ನನಗೆ ಅರ್ಥವಾಗದಿದ್ದದ್ದು. ಮೃಗಗಳಲ್ಲಿ ಮೇಲು ಕೀಳು ಪ್ರವೃತ್ತಿ ಇಲ್ಲ ಮನುಷ್ಯರಲ್ಲಿ ಇದೆ. ಆದರೆ ನೀವು ಮನುಷ್ಯರ ಪ್ರವೃತ್ತಿಯನ್ನು ಮೃಗೀಯ ಅಂತ ಹೇಳುತ್ತೀರಿ!

      Reply
  6. Anonymous

    “ಎಲ್ಲರೂ ಸಂತೋಷವಾಗಿ ಇರಬೇಕಾದರೆ ಆ ಸಮಾಜದಲ್ಲಿ ಮೇಲು ಕೀಳು ಎಂಬ ಭೇದ ಭಾವ ಇರಬಾರದು”

    Ego is the main issue. If you don’t have ego, you will be happy. If you have strong ego, you’ll find someone superior and someone else inferior. How to handle ego then is the question to ask. What kind of societal structure minimize ego of individuals and also collective ego? We need ego management training at all levels.

    Reply
  7. Ananda Prasad

    ಇಗೋ ಪ್ರಶ್ನೆ ಇಲ್ಲಿ ಬರುವುದಿಲ್ಲ. ಒಂದು ಕುಟುಂಬದಲ್ಲಿ ತಂದೆ ತಾಯಿ ತಮ್ಮ ಎಲ್ಲ ಮಕ್ಕಳನ್ನು ಸಮಾನವಾಗಿ ಕಂಡಾಗ ಅಲ್ಲಿ ಸುಖ, ಸಂತೋಷ ಇರುತ್ತದೆ. ಒಂದು ವೇಳೆ ತಂದೆ ತಾಯಿ ತಮ್ಮ ಮಕ್ಕಳಲ್ಲಿ ಕೆಲವರನ್ನು ಮನೆಯ ಹೊರಭಾಗದಲ್ಲಿ ವೆರಾಂಡಾದಲ್ಲಿ ನೆಲೆಸಬೇಕು, ಮನೆಯ ಒಳಗಡೆ ಬರಬಾರದು, ಉಳಿದ ಮಕ್ಕಳ ಜೊತೆ ತಿಂಡಿ, ಊಟ ಮಾಡಬಾರದು ಎಂದು ಭೇದ ಭಾವ ಮಾಡಿದರೆ ಮನೆಯ ಹೊರಭಾಗಕ್ಕೆ ಸೀಮಿತಗೊಂಡ ಮಕ್ಕಳು ಸಂತೋಷವಾಗಿ ಇರಲು ಸಾಧ್ಯವೇ? ಇದು ಸಾಧ್ಯವಿಲ್ಲ. ಮನೆಯ ಹೊರಭಾಗಕ್ಕೆ ಸೀಮಿತಗೊಂಡ ಮಕ್ಕಳಲ್ಲಿ ನೋವು, ಅಸಹನೆ ಬೆಳೆದೇ ಬೆಳೆಯುತ್ತದೆ. ಇದೇ ರೀತಿ ಸಮಾಜದಲ್ಲಿಯೂ ಕೆಲವು ಜಾತಿಗಳ ಜನರನ್ನು ಸಮಾಜದಿಂದ ಹೊರಗೆ ಇಡುವುದು, ಅವರು ಒಟ್ಟಿಗೆ ತಿನ್ನಬಾರದು ಎಂದು ಭೇದ ಭಾವ ಮಾಡುವುದು ಆರೋಗ್ಯಕರ ಸಮಾಜದ ಲಕ್ಷಣ ಅಲ್ಲ.

    Reply
  8. Anonymous

    ಆನಂದ ಪ್ರಸಾದ್ ಅವರೇ,

    ” ಮನೆಯ ಒಳಗಡೆ ಬರಬಾರದು, ಉಳಿದ ಮಕ್ಕಳ ಜೊತೆ ತಿಂಡಿ, ಊಟ ಮಾಡಬಾರದು ಎಂದು ಭೇದ ಭಾವ ಮಾಡಿದರೆ”

    ಸರಿ, ಆದರೆ ಪ್ರಾಣಿಗಳು ಈ ತರಹದ ವರ್ತನೆಯನ್ನು ತೋರುವುದಿಲ್ಲವಲ್ಲ! ಮನುಷ್ಯರ ಈ ಬಗೆಯ ವರ್ತನೆಯನ್ನು ಮೃಗೀಯ ಅಂತ ನೀವು ಕರೆದದ್ದು ಏಕೆ ಅಂತ ಇನ್ನೂ ನನಗೆ ಅರ್ಥವಾಗಿಲ್ಲ.

    Reply
  9. ak kukkaje

    ಜೀವಿ ಅವರೇ, ಈ ವಿಷಯವನ್ನು ಸುಮ್ಮನೆ ಮರೆತುಹೋಗಲು ಬಿಡಬೇಡಿ. ಸಿ ಎಂ ಸಿದ್ದರಾಮಯ್ಯನವರು ನಾಡಿನ ಅಹಿಂದ ನೇತಾರರು, ಆಡಳಿತ ರೂಢ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ದಲಿತ ನಾಯಕ ಪರಮೇಶ್ವರ್ ಅವರು, ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದಿರುವವರು ಮಲ್ಲಿಕಾರ್ಜುನ ಖರ್ಗೆ ಅವರು. ದಲಿತರಿಗೆ ಆದ ಅನ್ಯಾಯಗಳಿಗೆ ಸಮಾಧಾನ ಒದಗಿಸಲು ಇಂದಿಗಿಂತ ಸೂಕ್ತ ಕಾಲ ಬೇರೆ ಇಲ್ಲ.” ಅಂದರೆ ಈ ಘಟನೆ ನಡೆದು ಕಳೆದ ೧೩ ವರುಷಗಳ ಮಧ್ಯೆ ೫ ವರ್ಷದ ಭಾಜಪ ಸರಕಾರದ ಮೂವರು ಮುಖ್ಯಮಂತ್ರಿಗಳನ್ನು ನಮ್ಮ ರಾಜ್ಯ ಕಂಡಿದೆ ಆದರೆ ಮೇಲ್ಜಾತಿಯ ಪ್ರಾಬಲ್ಯದ ಆ ಅವಧಿಯಲ್ಲಿ ದಲಿತರಿಗೆ ನ್ಯಾಯ ಸಿಗಲಂತೂ ಖಡಾಖಂಡಿತ ಸಾಧ್ಯವಿಲ್ಲವೆಂದು ಪರೋಕ್ಷವಾಗಿ ಒಪ್ಪಿರುವಿರಲ್ಲಾ? ಸೀತಾರವರೆ.

    Reply
    1. ಸೀತಾ

      ak kukkaje ಅವರೇ,
      ೧. ಸಂಸತ್ ಕ್ಷೇತ್ರಾಭಿವೃದ್ಧಿ ನಿಧಿ ಯೋಜನೆಯಡಿ ಕಟ್ಟಿಸಿದ ಸಮುದಾಯ ಭವನಕ್ಕೆ ‘ಒಕ್ಕಲಿಗರ ಸಮುದಾಯ ಭವನ ಎಂದು ಹೆಸರು ಇಟ್ಟಿರುವುದು ತಪ್ಪು. ಹಾಗೂ ಈ ಸಮುದಾಯ ಭವನವನ್ನು ಕೇವಲ ಒಕ್ಕಲಿಗರ ಬಳಕೆಗೆ ಬಿಟ್ಟಿರುವುದೂ ತಪ್ಪು. ಜೀವಿ ಅವರು ಸಂಬಂಧಿತ ಇಲಾಖೆಗೆ ಇದರ ವಿಚಾರವಾಗಿ ದೂರು ಕೊಡುವುದು ಉತ್ತಮ. ಈಗಾಗಲೇ ದೂರು ಕೊಟ್ಟಿದ್ದು ಇಲಾಖೆಯು ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲವಾಗಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುವುದು ಉತ್ತಮ. ಕಾನೂನು ಕ್ರಮದ ಬಗ್ಗೆ ನನಗಿಂತ ನಮ್ಮ ಶ್ರೀಧರ್ ಪ್ರಭುಗಳು ಜೀವಿ ಅವರಿಗೆ ಮಾರ್ಗದರ್ಶನ ನೀಡಬಲ್ಲರು. ನಿಮಗೆ ಆಸಕ್ತಿ ಇದ್ದರೆ RTI ಮೂಲಕ ಸಮುದಾಯ ಭವನದ ಬಳಕೆ ಬಗ್ಗೆ ಮಾಹಿತಿ ಪಡೆದು ದಲಿತ ಹಾಗೂ ಇತರ ಸಮುದಾಯಗಳಿಗೆ ಅನ್ಯಾಯವಾಗಿದೆ ಎಂದು ದೃಢಪಡಿಸಬಹುದು.
      ೨. ಕ್ಷೇತ್ರದ ಶಾಸಕರು ದಲಿತರಿಗೊಂದು ಸಮುದಾಯ ಭವನ ಕಟ್ಟಿಸಿಕೊಡುತ್ತೇನೆ ಎಂದು ಮಾತು ಕೊಟ್ಟಿದ್ದರು. ಆದರೆ ಮಾತನ್ನು ಉಳಿಸಿಕೊಳ್ಳಲಿಲ್ಲ. ಆದುದರಿಂದ ಶಾಸಕರ ಬಗ್ಗೆ ಅವರ ಪಕ್ಷದ ನಾಯಕರಿಗೆ ದೂರು ಕೊಡುವುದು ಉತ್ತಮ. ಜೀವಿ ಅವರು ಹಳೆಬೀಡಿನವರು ಎಂದು ತಿಳಿದು ಆ ಕ್ಷೇತ್ರದ ಕಾಂಗ್ರೆಸ್ ಶಾಸಕರ ವಿರುದ್ಧ ಸಿದ್ದರಾಮಯ್ಯ/ಪರಮೇಶ್ವರ/ಖರ್ಗೆ ಅವರಿಗೆ ದೂರು ಕೊಡಿ ಎಂದು ಸಲಹೆ ನೀಡಿದ್ದೆ. ಜೀವಿ ಅವರ ಕ್ಷೇತ್ರದ ಶಾಸಕರು ಭಾಜಪದವರಾಗಿದ್ದರೆ ಯಡಿಯೂರಪ್ಪ/ಶೆಟ್ಟರ್/ಸದಾನಂದ ಗೌಡ ಅವರಿಗೆ ದೂರು ಕೊಡಿ.

      Reply
  10. Anonymous

    ಈ ರೀತಿಯ ಅಸ್ಪೃಶ್ಯತೆ ವಿರುದ್ಧದ ಹೋರಾಟಗಳು ಹಳ್ಳಿಗಳಲ್ಲಿ ನೆಲಕಚ್ಚಲು ಪ್ರಮುಖ ಕಾರಣ ಎಂದರೆ ಇಂದಿಗೂ ದಲಿತರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗದೆ ಇರುವುದು. ಕಷ್ಟ-ಸುಖಗಳಿಗೆ ಇಂದಿಗೂ ಮೇಲ್ಜಾತಿಯವರಿಂದ ಸಾಲ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ. ಅವರ ಮನೆ ಕೂಲಿ ನಂಬಿಯೇ ಜೀವನ ನಡೆಯುತ್ತಿದೆ. ಇದೇ ಊರಿನಲ್ಲಿ 2015ರ ಏಪ್ರಿಲ್ ತಿಂಗಳಲ್ಲಿ ನಡೆದ ಜಾತ್ರೆಯಲ್ಲಿ ರಥ ಮುಟ್ಟಲು ದಲಿತ ಯುವಕರಿಗೆ ಅವಕಾಶ ಕೊಡದೆ ಅವಮಾನ ಮಾಡಿದರು. ಈ ಅಸ್ಪೃಶ್ಯತೆ ಆಚರಣೆ ವಿರುದ್ಧ ಕಾನೂನು ಹೋರಾಟ ನಡೆಸಲು ದಲಿತರು ಮುಂದಾಗಲಿಲ್ಲ. ಅದಕ್ಕೂ ಅವರು ಆರ್ಥಿಕವಾಗಿ ದುರ್ಬಲರಾಗಿರುವುದೇ ಕಾರಣ. ಈ ದೌರ್ಬಲ್ಯ ಉಪಯೋಗಿಸಿಕೊಂಡು ಮೇಲ್ಜಾತಿಯವರು ದಲಿತರ ಮೇಲೆ ಅವಮಾನ ಮಾಡುತ್ತಲೇ ಬಂದಿದ್ದಾರೆ. ಏನು ಮಾಡಬೇಕು?
    -ಜೀವಿ

    Reply

Leave a Reply to Anonymous Cancel reply

Your email address will not be published. Required fields are marked *