ವರ್ತಮಾನ.ಕಾಮ್‌ಗೆ ನಾಲ್ಕು ವರ್ಷ ತುಂಬಿದ ಸಂದರ್ಭದಲ್ಲಿ…

ಮೊನ್ನೆ ಆಗಸ್ಟ್ 10, 2015 ಕ್ಕೆ ವರ್ತಮಾನ.ಕಾಮ್‌ಗೆ ನಾಲ್ಕು ತುಂಬಿತು. ಆದರೆ ಅದರ ಬಗ್ಗೆ ಇಲ್ಲಿಯವರೆಗೆ ಏನೊಂದೂ ಬರೆದಿರಲಿಲ್ಲ. ಕಾರಣ, ಗೊತ್ತಾಗದೇ ಹೋದದ್ದು. ಅಂದರೆ ಇದರ ಕೆಲವೊಂದು ಜವಾಬ್ದಾರಿಗಳನ್ನು ಹೊತ್ತಿರುವ ನಾನು ಅದನ್ನು ಯೋಗ್ಯವಾಗಿ ನಿಭಾಯಿಸುವಲ್ಲಿ ಈಗಾಗಲೆ ವಿಫಲವಾಗಿದ್ದೇನೆ ಎನ್ನುವುದು ಸಾಬೀತು. ಇತ್ತೀಚೆಗೆ ತಾನೆ ನಮ್ಮ ಬಳಗದ ಕೆಲವರು ಸೇರಿದ್ದಾಗ ನಾನು ಅಪ್ರಾಸ್ತವಿಕವಾಗಿ ನನ್ನ ಈಗಿನ ’ಸಂಪಾದಕ’ ಜವಾಬ್ದಾರಿಯನ್ನು ಇನ್ನೊಬ್ಬರಿಗೆ ವಹಿಸಿದರೆ ಹೇಗೆ ಎಂದು ಪ್ರಸ್ತಾಪಿಸಿದ್ದೆ. ಈಗ ಅದನ್ನು ಗಂಭೀರವಾಗಿ ಯೋಚಿಸಿ Vartamana 4ತೀರ್ಮಾನಿಸಬೇಕಿದೆ.

ವರ್ತಮಾನ.ಕಾಮ್‌ನಂತಹ ಯಾವುದೇ ಒಂದು ವೆಬ್‌ಸೈಟ್ ಪ್ರತಿದಿನವೂ ಒಂದಲ್ಲ ಒಂದು ಲೇಖನಗಳನ್ನು ಪ್ರಕಟಿಸದಿದ್ದರೆ ತನ್ನ ಪ್ರಸ್ತುತೆಯನ್ನು ಮತ್ತು ಓದುಗರನ್ನು ಕಳೆದುಕೊಳ್ಳುತ್ತ ಹೋಗುತ್ತದೆ. ಮೊದಲಿನಿಂದಲೂ ನಾವು ನಮ್ಮ ಲೇಖನ ಪ್ರಕಟವಾದ ಕೂಡಲೆ ವರ್ತಮಾನದ ಫೇಸ್‌ಬುಕ್ ಗೋಡೆಯಲ್ಲಿ ಹಂಚಿಕೊಳ್ಳುವುದರಿಂದ ಅದಕ್ಕೆ ಸ್ನೇಹಿತರಾಗಿರುವ ಒಂದಷ್ಟು ಖಾಯಂ ಓದುಗರಿಗೆ ನಮ್ಮ ಹೊಸದಾಗಿ ಪ್ರಕಟಿತ ಲೇಖನದ ಮಾಹಿತಿ ತಲುಪತ್ತದೆ. ಆ ದೃಷ್ಟಿಯಿಂದ ಯಾವುದಾದರೂ ಹೊಸ ಲೇಖನ ಪ್ರಕಟವಾಗಿದೆಯೇ ಇಲ್ಲವೋ ಎಂದು ನೋಡಲು ನಮ್ಮ ಬಹುತೇಕ ಓದುಗರು ವೆಬ್‌ಸೈಟಿಗೇ ನೇರ ಭೇಟಿ ಕೊಡುವ ಅಗತ್ಯ ಇರುವುದಿಲ್ಲ. ಆದರೆ ನೇರ ವೆಬ್‌ಸೈಟಿಗೆ ಭೇಟಿ ಕೊಟ್ಟು ಗಮನಿಸುವ ನಮ್ಮ ಖಾಯಂ ಓದುಗರಿಗೆ ಇಲ್ಲಿ ಮೂರ್ನಾಲ್ಕು ದಿನಗಳ ಕಾಲವಾದರೂ ಹೊಸ ಲೇಖನ ಪ್ರಕಟವಾಗದೇ ಇದ್ದರೆ ಕ್ರಮೇಣ ಆಸಕ್ತಿ ಕಳೆದುಕೊಳ್ಳುತ್ತಾರೆ.

ಇಷ್ಟಾದರೂ, ಈಗಾಗಲೆ ಹಲವು ಬಾರಿ ಪ್ರಸ್ತಾಪಿಸಿರುವಂತೆ ನಮ್ಮ ಲೇಖನಗಳ ಓದುಗರು ಕೇವಲ ಅಂತರ್ಜಾಲದಲ್ಲಿ ಓದುವವರಷ್ಟೇ ಅಲ್ಲ. ಇಡೀ ರಾಜ್ಯದಾದ್ಯಂತ ಹಲವು ಪತ್ರಿಕೆ ಮತ್ತು ನಿಯತಕಾಲಿಕೆಗಳು ಇಲ್ಲಿಯ ಲೇಖನಗಳನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸುತ್ತ ಬರುತ್ತಿದ್ದಾರೆ. ಆ ದೃಷ್ಟಿಯಿಂದ ನಮ್ಮ ಬಹುತೇಕ ಲೇಖನಗಳಿಗೆ ಸಾವಿರಾರು ಇಲ್ಲವೆ ಲಕ್ಷಾಂತರ ಲೆಕ್ಕದಲ್ಲಿ ಓದುಗರಿದ್ದಾರೆ. ಆ ಮಟ್ಟಿಗೆ ನಮ್ಮ ಪ್ರಸ್ತುತತೆ ಮತ್ತು ಪ್ರಭಾವ ವ್ಯಾಪಿಸಿದೆ.

ಆದರೆ, ಮುಂದಕ್ಕೆ ಇದನ್ನು ಹೇಗೆ ತೆಗೆದುಕೊಂಡು ಹೋಗುವುದು ಎನ್ನುವ ಪ್ರಶ್ನೆ ಬೆಳೆಯುತ್ತಲೇ ಬರುತ್ತಿದೆ. ಉತ್ತರ ಕಂಡುಕೊಳ್ಳುವ ಜವಾಬ್ದಾರಿ ಎಲ್ಲರಿಗಿಂತ ನನ್ನ ಮೇಲೆಯೇ ಹೆಚ್ಚಿದೆ ಮತ್ತು ನಾನು ಸೋಲುತ್ತಿದ್ದೇನೆ. ಅಯೋಗ್ಯತೆಯೂ ಒಂದು ರೀತಿಯಲ್ಲಿ ಅನೈತಿಕತೆ ಮತ್ತು ಭ್ರಷ್ಟಾಚಾರ ಎಂದುಕೊಂಡವನು ನಾನು. ಭ್ರಷ್ಟನಾಗುವ ಅಗತ್ಯ ಅಥವ ಅನಿವಾರ್ಯತೆ ನನಗಿಲ್ಲ. ವರ್ತಮಾನ.ಕಾಮ್ ನಿರೀಕ್ಷಿತ ಮಟ್ಟದಲ್ಲಿ ತನ್ನ ಪ್ರಭಾವ ವಲಯವನ್ನು 4th-anniversaryವಿಸ್ತರಿಸಿಕೊಳ್ಳುತ್ತಿಲ್ಲ ಮತ್ತು ಅನಿಯಮಿತವಾಗುತ್ತಿದೆ ಎನ್ನುವುದು ಬಿಟ್ಟರೆ, ಮತ್ತು ಅದು ತನ್ನ ಪಾಡಿಗೆ ಸಾವಯವವಾಗಿ ಬೆಳೆಯಲಿ ಎನ್ನುವುದೂ ಒಂದು ಉದ್ದೇಶವಾಗಿರುವ ಕಾರಣದಿಂದ, ಮತ್ತು ಅದು ಯಾರಿಗೂ ಕೇಡು ಉಂಟು ಮಾಡುತ್ತಿಲ್ಲದ ಕಾರಣದಿಂದಾಗಿ, ಅನವಶ್ಯಕವಾಗಿ ಯಾರ ಮೇಲೂ ಆರ್ಥಿಕ ದುಷ್ಪರಿಣಾಮ ಅಥವ ಹೊರೆ ಆಗದೇ ಇರುವುದರಿಂದ ಅದು ಹೇಗಿದ್ದರೂ ನಡೆದೀತು ಎನ್ನುವ ಕಾರಣಕ್ಕೇ ನಾನೂ ಅಷ್ಟು ತೀಕ್ಷ್ಣವಾಗಬಾರದು ಎಂದೆನಿಸುತ್ತದೆ. ಆದರೆ ಆಗಾಗಲಾದರೂ ನಮಗೆ ನಾವೇ ಕಠೋರವಾಗದಿದ್ದರೆ ಕ್ರಮೇಣ ಅದು ಆತ್ಮವಂಚನೆಯೂ ಆಗುತ್ತದೆ.

ನಾಲ್ಕನೇ ವರ್ಷ ತುಂಬಿದ ಈ ಸಂದರ್ಭದಲ್ಲಿ ಹಿಂದಿನ ವರ್ಷಗಳಲ್ಲಿ ಹೇಳಿಕೊಂಡ ಹಾಗೆ, ’ಹಾಗೆ ಆಗಬಹುದು, ಹೀಗೆ ಆಗಬಹುದು’ ಎನ್ನುವುದೇನನ್ನೂ ಹೇಳದೆ, ಏನಾಗುತ್ತದೆಯೋ ಅದನ್ನು ಮಾಡೋಣ ಮತ್ತು ವರ್ತಮಾನ.ಕಾಮ್ ತನಗೆ ಬರುವ ಅದರ ಮೂಲಆಶಯಕ್ಕೆ ಬದ್ಧತೆ ಇರುವ ಲೇಖಕರ ಲೇಖನಗಳನ್ನು ಅವು ಬಂದಾಗಲೆಲ್ಲೆ ಪ್ರಕಟಿಸುತ್ತ ಹೋಗುತ್ತದೆ, ಒಂದೆರಡು ದಿನಗಳ ಅವಧಿಯೊಳಗೆ ಎಂದಷ್ಟೇ ಹೇಳಬಯಸುತ್ತೇನೆ.

ನಮಸ್ಕಾರ,
ರವಿ
ವರ್ತಮಾನ.ಕಾಮ್


One thought on “ವರ್ತಮಾನ.ಕಾಮ್‌ಗೆ ನಾಲ್ಕು ವರ್ಷ ತುಂಬಿದ ಸಂದರ್ಭದಲ್ಲಿ…

  1. Anonymous

    “ವರ್ತಮಾನ.ಕಾಮ್ ನಿರೀಕ್ಷಿತ ಮಟ್ಟದಲ್ಲಿ ತನ್ನ ಪ್ರಭಾವ ವಲಯವನ್ನು 4th-anniversaryವಿಸ್ತರಿಸಿಕೊಳ್ಳುತ್ತಿಲ್ಲ”

    Can you please elaborate on this? What expectations did you have and what are the reasons for not meeting those expectations? Thanks.

    Reply

Leave a Reply

Your email address will not be published. Required fields are marked *