ನ್ಯಾಯಾಂಗದಲ್ಲಿ ದಲಿತ ಮತ್ತು ಹಿಂದುಳಿದವರ ಪ್ರಾತಿನಿಧ್ಯದ ಪ್ರಶ್ನೆ


– ಶ್ರೀಧರ್ ಪ್ರಭು


 

“ಶುದ್ಧೀಕರಣ”

ಗಂಗೆ ಯಮುನೆ ಮತ್ತು ಗುಪ್ತಗಾಮಿನಿ ಸರಸ್ವತಿ ನದಿಗಳು ಸಂಗಮಿಸುವ ಪರಮ ಪವಿತ್ರ ಪ್ರಯಾಗದಲ್ಲಿ ಬಹು ದೊಡ್ಡದೊಂದು ಅನಾಹುತ ನಡೆದುಹೋಗಿತ್ತು. ಮೇ ೧೯೯೮ರ ವರೆಗೆ ಅಲಹಾಬಾದ್ ಅಪರ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿದ್ದ ಭರ್ತ್ರಹರಿ ಪ್ರಸಾದ್ ಒಬ್ಬ ದಲಿತರಾಗಿದ್ದರು ಎಂದು ಗೊತ್ತಾಗಿಬಿಟ್ಟಿತ್ತು!! ಒಬ್ಬ ದಲಿತ ನ್ಯಾಯಸ್ಥಾನದಲ್ಲಿ ಕುಳಿತರೆ ಅದಕ್ಕಿಂತ ಕೆಟ್ಟ ಅನಾಹುತ ಇನ್ನೊಂದಿದೆಯೇ? 11-courtಈ ದಲಿತ ನ್ಯಾಯಾಧೀಶರು ಕುಳಿತು ಇಡೀ ನ್ಯಾಯಂಗಣವನ್ನೇ ‘ಅಪವಿತ್ರ’ಗೊಳಿಸಿ ಹೋಗಿದ್ದರು!! ಪುಣ್ಯವಶಾತ್ ಅವರ ನಂತರದಲ್ಲಿ (ಜೂನ್ ೧೯೯೮ ರಲ್ಲಿ ) ಅಧಿಕಾರವಹಿಸಿ ಕೊಂಡ ಜಸ್ಟಿಸ್ ಶ್ರೀವಾಸ್ತವ ಅಲಹಾಬಾದ ಜಿಲ್ಲಾ ಅಪರ ನ್ಯಾಯಾಧೀಶರಾಗಿ ಅಧಿಕಾರವಹಿಸಿಕೊಂಡ ಮರುಕ್ಷಣದಲ್ಲೇ ಒಂದು ಮಹಾನ್ ಪುಣ್ಯದ ಕೆಲಸ ಮಾಡಿದರು. ಒಂದು ಟ್ಯಾಂಕರ್ ತುಂಬಾ ‘ಶುದ್ಧ’ ಗಂಗಾ ಜಲ ತರಿಸಿ ತಮ್ಮ ಕೊಠಡಿಯನ್ನು ಸಂಪೂರ್ಣವಾಗಿ ‘ಶುದ್ಧಿ’ ಗೊಳಿಸಿದರು. ನ್ಯಾಯದಾನ ಮಾಡಬೇಕಾದರೆ ಪರಿಶುದ್ಧ ಪರಿಸರ ಮುಖ್ಯ ನೋಡಿ!

ಇದರ ಸುಳಿವು ಸಿಕ್ಕ ಒಬ್ಬ ‘ಪಾಖಂಡಿ’ ಪತ್ರಕರ್ತರೊಬ್ಬರು ಈ ಘಟನೆಯನ್ನು ಎಲ್ಲ ಪ್ರಮುಖ ಹಿಂದಿ ಪತ್ರಿಕೆಗಳಿಗೆ ವಿವರ ವರದಿ ಮಾಡಿ ಕಳಿಸಿಕೊಟ್ಟರು. ಆಮೇಲೆ? ಆ ತಕ್ಷಣವೇ ಅಲಹಾಬಾದ್ ಜಿಲ್ಲಾ ಮುಖ್ಯ ಸೆಷನ್ಸ್ ನ್ಯಾಯಮೂರ್ತಿಗಳು ಒಂದು “ಕಾರಣ ಕೇಳಿ ನೋಟೀಸ್” ಜಾರಿ ಮಾಡಿದರು. ಯಾರ ಮೇಲೆ? ಜಸ್ಟಿಸ್ ಶ್ರೀವಾಸ್ತವರ ಮೇಲೆ ಅಂತೀರಾ? ಛೇ! ಅಲ್ಲ. ಭರ್ತ್ರಹರಿ ಪ್ರಸಾದ್ ರ ಮೇಲೆ. ನ್ಯಾಯಾಂಗದ ಒಳಗಿನ ಈ ವಿಚಾರ ಹೊರಗೆ ಹಾಕಿದ್ದಾದರೂ ಯಾರು ಎಂದು.

ನ್ಯಾಯಮೂರ್ತಿ ಭರ್ತ್ರಹರಿ ಪ್ರಸಾದ್ ಉತ್ತರ ರವಾನಿಸಿದರು. ‘ಗಂಗಾ ಜಲದ ವಿಚಾರ ಸತ್ಯ. ಆದರೆ, ಈ ವಿಚಾರ ಪತ್ರಿಕೆಗಳಿಗೆ ಹೇಗೆ ಹೋಯಿತು ಎಂದು ಗೊತ್ತಿಲ್ಲ’ ಎಂದು. ಆ ನಂತರ ನ್ಯಾಯಮೂರ್ತಿ ಶ್ರೀವಾಸ್ತವರ ಹೇಳಿಕೆ ಕೂಡ ಪಡೆಯಲಾಯಿತು. ಈ ಘನವೆತ್ತ ನ್ಯಾಯಮೂರ್ತಿಗಳು ಶುದ್ಧಿಯ ವಿಚಾರ ಅಲ್ಲಗಳೆಯಲಿಲ್ಲ. ಆದರೆ ಅವರಿಗೆ ಅಸ್ತಮಾ ಇದ್ದ ಕಾರಣ ಅವರು ಶುದ್ಧಿ ಮಾಡಿಸಬೇಕೆಂದು ವೈದ್ಯರು ಹೇಳಿದ್ದರಂತೆ. Court-Indianಇನ್ನು ಶುದ್ದಿ ಮಾಡಿದ ಸಿಬ್ಬಂದಿಯ ಹೇಳಿಕೆಗಳು ಪಡೆಯಲಾಯಿತೆ? ಇಲ್ಲ.

ಈ ದಲಿತ ನ್ಯಾಯಾಧೀಶರನ್ನು ಸೀದಾ ಮನೆಗೆ ಕಳಿಸಲಾಯಿತು! ಕೊನೆಗೂ ‘ಧರ್ಮ’ವೇ ಗೆದ್ದದ್ದು. ಹಾಗಾಗಿಯೇ, ನಮ್ಮ ಘೋಷವಾಕ್ಯ – ಸತ್ಯಮೇವ ಜಯತೇ!

ಬೆರಳೆಣಿಕೆಯ ದಲಿತ ಪ್ರಾತಿನಿಧ್ಯ

ಈ ರೀತಿ ನಮ್ಮ ನ್ಯಾಯಾಂಗಣಗಳನ್ನು ‘ಅಪವಿತ್ರ’ಗೊಳಿಸುವ ಪ್ರಮೇಯ ಬರಲೇಬಾರದೆಂದು ನಮ್ಮ ಉನ್ನತ ನ್ಯಾಯಾಂಗದಲ್ಲಿ ದಲಿತರೇ ಕಾಣಸಿಗುವುದಿಲ್ಲ. ವರ್ಷ ೨೦೦೦ ರಲ್ಲಿ ಕರಿಯಾ ಮುಂಡಾ ನೇತೃತ್ವದ ಸಂಸತ್ತಿನ ಎರಡೂ ಸದನಗಳ ಮೂವತ್ತೊಂದು ಸದಸ್ಯರ ಸಮಿತಿಯ “ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ವರದಿ” ಯ ಪ್ರಕಾರ ೧೯೯೮ರಲ್ಲಿದ್ದ ೪೮೧ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಲ್ಲಿ ಕೇವಲ ೧೫ ಜನ ಪರಿಶಿಷ್ಟ ಜಾತಿಗೆ ಸೇರಿದವರು ಮತ್ತು ಕೇವಲ ೫ ಜನ ಪರಿಶಿಷ್ಟ ಪಂಗಡದವರು. ಅಂದು ಇದ್ದ ೧೮ ಉಚ್ಚ ನ್ಯಾಯಾಲಯಗಳ ಪೈಕಿ ಸುಮಾರು ೧೫ ನ್ಯಾಯಾಲಯಗಳಲ್ಲಿ ಒಬ್ಬರೇ ಒಬ್ಬ ದಲಿತ ನ್ಯಾಯಾಧೀಶರಿರಲಿಲ್ಲ. ೨೦೧೧ ರಲ್ಲಿ ಪರಿಶಿಷ್ಟ ಜಾತಿಗಳ ಆಯೋಗ ಪ್ರಕಟಿಸಿದ ವರದಿಯ ಪ್ರಕಾರ ಅಂದಿನ ದಿನಾಂಕಕ್ಕೆ ಇದ್ದ ೮೫೦ ನ್ಯಾಯಾಧೀಶರಲ್ಲಿ ಪರಿಶಿಷ್ಥ ಜಾತಿ ಮತ್ತು ಪಂಗಡ ಗಳವರು ಕೇವಲ ೨೪ ಜನರು. ಎಷ್ಟೊಂದು ಗಂಗಾಜಲ ಉಳಿಯಿತು ನೋಡಿ!

ಉನ್ನತ ನ್ಯಾಯಾಂಗ (Higher Judiciary)

೧೯೫೦ ರಿಂದ ಇಂದಿನವರೆಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ನೇಮಕವಾದ ದಲಿತರ ಸಂಖ್ಯೆ ಕೇವಲ ನಾಲ್ಕು – ಎ. ವರದರಾಜನ್, ಬಿ. ಸಿ. ರಾಯ್, ಕೆ. ರಾಮಸ್ವಾಮಿ ಮತ್ತು ಕೆ. ಜಿ. ಬಾಲಕೃಷ್ಣನ್. ಕಳೆದ ಅರವೈತ್ತೈದು ವರ್ಷಗಳಲ್ಲಿ ಈ ದೇಶದ ದಲಿತರಲ್ಲಿ ನಾಲ್ಕು ಜನ ಮಾತ್ರ ಸುಪ್ರೀಂ ಕೋರ್ಟ್ ಲ್ಲಿ ಕೂರಲು ಲಾಯಕ್ಕದವರೇ? ಹಾಗೆಯೆ, ಒಂದು ಅಂದಾಜಿನ ಪ್ರಕಾರ ಸುಪ್ರೀಂ ಕೋರ್ಟ್ ನ ಸುಮಾರು ೫೬% ರಷ್ಟು ನ್ಯಾಯಾಧೀಶರು ಬ್ರಾಹ್ಮಣರು. Supreme Courtಒಟ್ಟು ಹೈ ಕೋರ್ಟ್ ನ್ಯಾಯಾಧೀಶರಲ್ಲಿ ಕೂಡ ಬ್ರಾಹ್ಮಣರ ಅನುಪಾತ ೫೦% ನಷ್ಟು.

೨೦೦೯ ರ ಸುಮಾರಿಗೆ ಕೇಂದ್ರ ಗೃಹ ಇಲಾಖೆ ಸುಪ್ರೀಂ ಕೋರ್ಟ್ ಗೆ ಒಂದು ಮನವಿ ಸಲ್ಲಿಸಿ ನ್ಯಾಯಾಂಗದಲ್ಲಿ ದಲಿತರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲು ಮಾರ್ಗದರ್ಶಿ ಸೂತ್ರಗಳನ್ನು ನಿರೂಪಿಸಲು ಕೋರಿತು. ಆದರೆ ಈವರೆಗೂ ಸರ್ವೋಚ್ಚ ನ್ಯಾಯಾಲಯವೂ ಸೇರಿದಂತೆ ಯಾವುದೇ ಉಚ್ಚ ನ್ಯಾಯಾಲಯವೂ ಯಾವ ಸೂತ್ರ ಯಾ ನಿರ್ದೇಶನಗಳನ್ನೂ ಜಾರಿ ಮಾಡಲಿಲ್ಲ.

ಕೇಶವಾನಂದ ಭಾರತಿ ಪ್ರಕರಣದಿಂದ ಮೊದಲ್ಗೊಂಡು ಅನೇಕ ತೀರ್ಮಾನಗಳಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ ನ್ಯಾಯಾಂಗವೆಂದರೆ “ಪ್ರಭುತ್ವ” (State). ಪ್ರಭುತ್ವದ ಇನ್ನೆರಡು ಅಂಗಗಳಲ್ಲಿ ಮೀಸಲಾತಿ ಇರುವುದು ನಿಜವಾದರೆ ನ್ಯಾಯಾಂಗ ಇದಕ್ಕೆ ಹೊರತಾಗಿರಬೇಕೇ? ಇನ್ನು ನ್ಯಾಯಾಲಯಗಳ ಸಿಬ್ಬಂದಿಗಳ ನೇಮಕದಲ್ಲಿ ಮೀಸಲಾತಿ ಇದೆ. ಆದರೆ ನ್ಯಾಯಮೂರ್ತಿಗಳ ನೇಮಕದಲ್ಲಿ ಏಕಿಲ್ಲ?

ರಾಷ್ಟ್ರೀಯ ನ್ಯಾಯಾಂಗ ಸೇವಾ ಆಯೋಗ ರಚಿಸಲು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಆಯೋಗ ರಚನೆಯಾದರೆ ಎಲ್ಲಿ ಮೀಸಲಾತಿ ಜಾರಿಮಾಡುವ ಪ್ರಮೇಯ ಬಂದೀತೋ ಎಂದು ಈವರೆಗೆ ಯಾವ ಸರಕಾರವೂ ನ್ಯಾಯಾಂಗ ಸೇವೆಗಳ ಆಯೋಗ ರಚನೆ ಮಾಡುವ ಸಾಹಸ ಮಾಡಿಲ್ಲ. ಕೊಲಿಜಿಯಂ ಪದ್ಧತಿ ರದ್ದಾಗಿ ಈ ಕುರಿತ ಪ್ರಕರಣ ಸುಪ್ರೀಂ ಕೋರ್ಟ್ ನ ಮುಂದಿದೆ. ಈ ಕೊಲಿಜಿಯಂ ಪದ್ಧತಿಯಡಿ ದಲಿತರಿಗೆ ಸೇರಿದಂತೆ ಅನೇಕ ಜನಪರ ಕಾಳಜಿಯ ನ್ಯಾಯಾಧೀಶರಿಗೆ ಹಿನ್ನಡೆಯಾಗಿದೆಯೆಂದು ಬಹುತೇಕ ಎಲ್ಲ ವಕೀಲರೂ ವಾದಿಸಿದ್ದಾರೆ.

ಇತ್ತೀಚಿಗೆ ತಮ್ಮ ಎಡ ಮತ್ತು ಪ್ರಜಾಸತ್ತಾತ್ಮಕ ನಿಲುಮೆಯಿಂದ ಪಟ್ಟ ಪಾಡನ್ನು ಉಲ್ಲಾಳ ಲಕ್ಷ್ಮೀನಾರಾಯಣ ಭಟ್ಟರು ತಮ್ಮ “ಸ್ಟೋರಿ ಆಫ್ ಎ ಚೀಫ್ ಜಸ್ಟಿಸ್ ” ಪುಸ್ತಕದಲ್ಲಿ ಬಿಡಿಸಿಟ್ಟಿದ್ದಾರೆ. ಈ ಕೊಲಿಜಿಯಂ ವ್ಯವಸ್ಥೆಯಲ್ಲಿ ಒಬ್ಬ (ಜಾತ್ಯತೀತ ನಿಲುಮೆಯ) ಬ್ರಾಹ್ಮಣ ನ್ಯಾಯಾಧೀಶರಿಗೇ ಇಷ್ಟೊಂದು ಅನ್ಯಾಯವಾಗಿರುವುದಾದರೆ ಇನ್ನು ದಲಿತರ ಪಾಡೇನು?

ಸರಕಾರಿ ವಕೀಲರು

ಇನ್ನು ಯಾವುದೇ ರಾಜ್ಯ ಮತ್ತು ಕೇಂದ್ರ ಸರಕಾರಗಳು ತಮ್ಮನ್ನು ಪ್ರತಿನಿಧಿಸುವ ಅಟಾರ್ನಿ ಜನರಲ್, ಸಾಲಿಸಿಟರ್ ಜನರಲ್, Karnataka High Courtಅಡ್ವೋಕೇಟ್ ಜನರಲ್ ಹೋಗಲಿ ಸಾಮಾನ್ಯ ಸರಕಾರೀ ವಕೀಲರ ನೇಮಕಾತಿಗಳಲ್ಲಿ ಮೀಸಲಾತಿಯನ್ನು ಪಾಲಿಸಿಲ್ಲ. ಸರಕಾರದ ಯಾವ ಬ್ಯಾಂಕ್, ನಿಗಮ, ಮಂಡಳಿಗಳು ಕೂಡ ತಮ್ಮ ಪ್ಯಾನೆಲ್ ಗಳಲ್ಲಿ ಮೀಸಲಾತಿ ಹೋಗಲಿ ದಲಿತರ ಬಗ್ಗೆ ಕನಿಷ್ಠ ಪ್ರಾತಿನಿಧ್ಯದ ಬಗ್ಗೆ ಕೂಡ ಗಮನ ಹರಿಸಿಲ್ಲ.

ವಕೀಲರೇ ದಲಿತರ ಮಧ್ಯದ ಅತಿ ದೊಡ್ಡ ಅಸಂಘಟಿತ ವಲಯ

ಇಂಥ ನೇಮಕಾತಿಗಳಲ್ಲಿ ಮೀಸಲಾತಿ ಬಗ್ಗೆ ಯಾವುದೇ ಕಾನೂನು ಅಥವಾ ನಿಯಮಗಳು ಹೋಗಲಿ ಕನಿಷ್ಠ ನಿರ್ದೇಶನ ಸೂತ್ರಗಳು ಕೂಡ ಇಲ್ಲ. ಎಲ್ಲಾ ಸರಕಾರಗಳು ದಲಿತರ ಪರ ಮೊಸಳೆ ಕಣ್ಣೀರು ಹಾಕುವುದು ಎಲ್ಲರಿಗೂ ಗೊತ್ತಿರುವುದೇ. ಆದರೆ ಈವರೆಗೆ ದಲಿತರ ಪರವಾಗಿ ದಲಿತ ವಕೀಲರೇ ಧ್ವನಿ ಎತ್ತಿಲ್ಲ ಎಂದರೆ ಎಂಥ ಬೇಸರದ ವಿಷಯ.

ವಕೀಲರ ಸಾರ್ವತ್ರಿಕ ಪ್ರಾತಿನಿಧ್ಯದ ಸಂಸ್ಥೆ ವಕೀಲರ ಪರಿಷತ್ತು (ಬಾರ್ ಕೌನ್ಸಿಲ್) ನಲ್ಲಿ ಕೂಡ ಯಾವ ಪ್ರಾತಿನಿಧ್ಯವಿಲ್ಲ. ಇಂದು ವಕೀಲರಾಗಿ ನೊಂದಣಿ ಬಾರ್ ಕೌನ್ಸಿಲ್ ಪರೀಕ್ಷೆ ತೇರ್ಗಡೆ ಕಡ್ಡಾಯ. ಆದರೆ ಈ ಪರೀಕ್ಷೆ ಗಳಲ್ಲಿ ಕೂಡ ಮೀಸಲಾತಿಯಿಲ್ಲ. ದಲಿತ ವಿದ್ಯಾರ್ಥಿಗಳಿಗೆ, ಹಿಂದುಳಿದ ವರ್ಗ ಹೋಗಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಕೂಡ ಕನಿಷ್ಠ ಶುಲ್ಕ ವಿನಾಯತಿ ಕೊಡುವ ಔದಾರ್ಯವನ್ನೂ ವಕೀಲರ ಪರಿಷತ್ತು ತೋರಿಲ್ಲ. ತನ್ನ ವೆಬ್ಸೈಟ್ ನಲ್ಲಿ ನಮೂದಿಸಿರುವ ಪ್ರಶ್ನಾವಳಿ (FAQ) ಗಳಲ್ಲಿ ವಕೀಲರ ಪರಿಷತ್ತು “ನಮ್ಮ ಪರೀಕ್ಷೆಗಳಲ್ಲಿ ದಲಿತ ವಿದ್ಯಾರ್ಥಿಗಳಿಗೆ ಯಾವುದೇ ವಿಶೇಷ ಸೌಲಭ್ಯಗಳಿಲ್ಲ” ಎಂದು ಘೋಷಿಸಿ ಕೊಂಡಿದೆ. ವಿಪರ್ಯಾಸವೆಂದರೆ ವಕೀಲರ ಪರಿಷತ್ತಿನ ವೆಬ್ಸೈಟ್ ನಲ್ಲಿ ದೊಡ್ಡದೊಂದು Young_Ambedkarಅಂಬೇಡ್ಕರ್ ಪಟವಿದೆ!

ದುರಂತವೆಂದರೆ ಇಂದು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ದಲಿತ ವಕೀಲರನ್ನು ಪ್ರತಿನಿಧಿಸುವ ಯಾವುದೇ ಸಂಘ ಸಂಸ್ಥೆಗಳಿಲ್ಲ. ಸಣ್ಣ ಪುಟ್ಟ ಕಾರ್ಖಾನೆಗಳಲ್ಲಿಯೂ ದಲಿತ ಕಾರ್ಮಿಕ ಸಂಘಟನೆಗಳನ್ನು ರಚಿಸಿಕೊಳ್ಳುವ ದಲಿತರು ಇಂದಿನವರೆಗೂ ವಕೀಲರ ಮಧ್ಯೆ ಸಂಘಟನೆ ಕಟ್ಟಿಲ್ಲ. ಸಂಘಟಿತರಾಗದವರೆಗೂ ದಲಿತರಿಗೆ ಮುಕ್ತಿಯಿಲ್ಲ ಎಂಬುದಕ್ಕೆ ಈ ಕ್ರೂರ ವಾಸ್ತವಗಳಿಗಿಂತಲೂ ಹೆಚ್ಚಿನ ಸಾಕ್ಷಿಗಳು ದಲಿತರಿಗೆ, ಅದರಲ್ಲೂ ಮುಖ್ಯವಾಗಿ ವಕೀಲರಿಗೆ ಬೇಕಿಲ್ಲ ಎಂದು ಕೊಳ್ಳೋಣ.

೨೦೧೧ ರಲ್ಲಿ ಸಂವಿಧಾನ ತಿದ್ದುಪಡಿ ತಂದು ಸಹಕಾರ ಸಂಘಗಳ ಕಾನೂನಿಗೆ ಸಮಗ್ರ ಸರ್ಜರಿ ಮಾಡಲಾಯಿತು. ಸಹಕಾರಿ ಸಂಘಗಳನ್ನು ರಚಿಸಿಕೊಳ್ಳುವುದು ಮೂಲಭೂತ ಕರ್ತವ್ಯವೆಂದು ಸಾರಲಾಯಿತು. ಜೊತೆಗೆ, ಸಹಕಾರ ಸಂಘಗಳಲ್ಲಿ ಸಾಮಾಜಿಕ ಮತ್ತು ಮಹಿಳಾ ಮೀಸಲಾತಿ ಜಾರಿಗೊಳಿಸಲಾಯಿತು. ಆದರೆ ವಕೀಲರ ಸಂಘಗಳಲ್ಲಿ ಈ ಮೀಸಲಾತಿ ಜಾರಿಯಾಗಿಲ್ಲ. ವಕೀಲರ ಸಂಘಗಳಿಗೆ ಸರಕಾರಗಳು ಸಾಕಷ್ಟು ಸಹಾಯ ಧನ ನೀಡಿವೆ. ಏಷ್ಯಾದಲ್ಲಿಯೇ ಅತೀ ದೊಡ್ಡದು ಎನ್ನಿಸಿಕೊಳ್ಳುವ ಬೆಂಗಳೂರು ವಕೀಲರ ಸಂಘದ ಬೈ ಲಾ ಗಳನ್ನು ಅನುಮೋದಿಸಿದ್ದು ಸ್ವತಃ ಸಹಕಾರ ಸಂಘಗಳ ಪ್ರಬಂಧಕರು. ಆದರೆ ಇಲ್ಲಿ ಮಹಿಳಾ, OBC ಮತ್ತು ದಲಿತ ಮೀಸಲಾತಿಯ ಪ್ರಶ್ನೆಯೇ ಇಲ್ಲ. ಈವರೆಗೆ ಯಾವ ದಲಿತರೂ ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳಾಗಿಲ್ಲ. ಈವರೆಗೆ ಯಾವ ದಲಿತರೂ ಹಿಂದುಳಿದವರು ಮತ್ತು ಮಹಿಳೆಯರು ಈ ಬಗ್ಗೆ ಪ್ರಶ್ನೆ ಮಾಡಿಲ್ಲ.

ದಲಿತ, ಮಹಿಳಾ ಮತ್ತು ಹಿಂದುಳಿದ ವರ್ಗಗಳು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಮರ್ಪಕವಾಗಿ ಪ್ರನಿಧಿಸುತ್ತಿಲ್ಲ ಎಂಬುದು ಕೇವಲ ಈ ವರ್ಗ ವಿಭಾಗಗಳ ಪ್ರಶ್ನೆಯಲ್ಲ. ಇದು ನಮ್ಮ ಇಡೀ ಸಮಾಜದ ಆತ್ಮಸಾಕ್ಷಿಯನ್ನು ಕಾಡಬೇಕಿರುವ ಪ್ರಶ್ನೆ. ‘ದಲಿತರು ಎಲ್ಲರಿಗೂ ಸಮನಾಗಿ ಬದುಕುತ್ತಿದ್ದಾರೆ’, ‘ಜಾತಿ ವ್ಯವಸ್ಥೆ ಸತ್ತು ಹೋಗಿದೆ’ ಅಥವಾ ‘ಬರೀ ವರ್ಗವೊಂದೇ ಸತ್ಯ ಜಾತಿ ಮಿಥ್ಯ’ ಎಂದು ವಾದಿಸುವ ಸಿದ್ಧಾಂತಿಗಳು ನ್ಯಾಯಾಂಗದಲ್ಲಿ ಏಕೆ ಇಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಯೋಚಿಸುವರೆ?

ಇದೆಲ್ಲ ಹಾಗಿರಲಿ, ರಾಜ್ಯ ಸರಕಾರದ ಕಛೇರಿಗಳಲ್ಲಿ ಅಂಬೇಡ್ಕರ್ ಪಟವನ್ನು ಹಾಕಲು ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಲಾಗಿತ್ತು. ಇಂದು ಕರ್ನಾಟಕ ಉಚ್ಚ ನ್ಯಾಯಾಲಯದ ಯಾವ ಕೊಠಡಿಯಲ್ಲೂ ಅಂಬೇಡ್ಕರ್ ಪಟವಿಲ್ಲ. ಹಾಗೆಯೇ ಅನೇಕ ಅಧೀನ ನ್ಯಾಯಾಲಯಗಳಲ್ಲೂ ಇದೇ ಸ್ಥಿತಿಯಿದೆ. ಒಂದು ಪಟವಾಗಿ ಕೂಡ ನಮ್ಮನ್ನು ತಲುಪದ ಅಂಬೇಡ್ಕರ್ ನ್ಯಾಯಾಂಗದ ಭಾವಕೊಶವನ್ನು ತುಂಬಲು ಸಾಧ್ಯವೇ?

ಅಂಬೇಡ್ಕರ್ ಸಂವಿಧಾನ ರಚಿಸಿದರು; ಆ ಸಂವಿಧಾನವೇ ನಮ್ಮನ್ನು ಕಾಪಾಡುತ್ತದೆ ಎಂದುಕೊಂಡಿದ್ದರೆ ನಮ್ಮಷ್ಟು ಮೂರ್ಖರೇ ಇನ್ನೊಬ್ಬರಿಲ್ಲ. ನಾವು ಸಂವಿಧಾನವನ್ನು ಕಾಪಾಡಿದರೆ ತಾನೇ ಅದು ನಮ್ಮನ್ನು ಕಾಪಾಡುವುದು?

26 thoughts on “ನ್ಯಾಯಾಂಗದಲ್ಲಿ ದಲಿತ ಮತ್ತು ಹಿಂದುಳಿದವರ ಪ್ರಾತಿನಿಧ್ಯದ ಪ್ರಶ್ನೆ

  1. shyam

    ಎಂತಹ ದುರಂತ ನೋಡಿ.ದಲಿತರಿಗೆ ನ್ಯಾಯ ಒದಗಿಸುವ ನ್ಯಾಯಾಲದಲೆ ದಲಿತರಿಗೆ ಅನ್ಯಾಯ ಆಗುತ್ತಿದೆ. ಮುಂದೇನು ಗತಿ ನಮ್ಮ ದಲಿತರದ್ದು.

    Reply
  2. ಸೀತಾ

    “ಒಂದು ಅಂದಾಜಿನ ಪ್ರಕಾರ ಸುಪ್ರೀಂ ಕೋರ್ಟ್ ನ ಸುಮಾರು ೫೬% ರಷ್ಟು ನ್ಯಾಯಾಧೀಶರು ಬ್ರಾಹ್ಮಣರು. Supreme Courtಒಟ್ಟು ಹೈ ಕೋರ್ಟ್ ನ್ಯಾಯಾಧೀಶರಲ್ಲಿ ಕೂಡ ಬ್ರಾಹ್ಮಣರ ಅನುಪಾತ ೫೦% ನಷ್ಟು.”

    ಪ್ರಭುಗಳೇ, ವಿಶ್ವದ ಜನಸಂಖ್ಯೆಯ ಶೇಖಡಾ ೦.೨ ರಷ್ಟು ಇರುವ ಯಹೂದ್ಯರು ನೋಬೆಲ್ ವಿಜೇತರ ಪಟ್ಟಿಯಲ್ಲಿ ಶೇಖಡಾ ೨೨ ರಷ್ಟು ಇದ್ದಾರೆ. ವಿಶ್ವದಲ್ಲಿ ಎಲ್ಲವನ್ನೂ ಜನಸಂಖ್ಯೆಯ ಅನುಪಾತದಲ್ಲಿ ಪಡೆಯಲು ಸಾಧ್ಯವಿಲ್ಲ. ಗುಣಕ್ಕೆ ಮತ್ಸರ ಬೇಡ. ಬ್ರಾಹ್ಮಣರ ಬಗ್ಗೆ ಕರುಬುವುದನ್ನು ಬಿಟ್ಟು ಅವರ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಲು ಯತ್ನಿಸಿ.

    Reply
  3. ಸೀತಾ

    “ಅಂಬೇಡ್ಕರ್ ಸಂವಿಧಾನ ರಚಿಸಿದರು”

    ಇದು ಸತ್ಯವಲ್ಲ, ಮೂಢ ನಂಬಿಕೆ. ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಲಿಲ್ಲ, ಅಂಬೇಡ್ಕರ್ ಅವರೇ ಎಲ್ಲಿಯೂ ತಾವು ಸಂವಿಧಾನದ ಕರ್ತೃ ಅಂತ ಹೇಳಿಕೊಂಡಿಲ್ಲ. ಅಂಬೇಡ್ಕರ್ ಅವರು ಕರಡು ಸಂವಿಧಾನವನ್ನು ತಿದ್ದುಪಡಿ ಮಾಡಲು ರಚಿಸಿದ ಸಮಿತಿಯ ಅಧ್ಯಕ್ಷರಾಗಿದ್ದರಷ್ಟೇ. ಕರಡು ಸಂವಿಧಾನವನ್ನು ರಚಿಸಿದ್ದು ಬೆನಗಲ್ ನರಸಿಂಹ ರಾವ್ (ಇವರು ಬ್ರಾಹ್ಮಣರು). ಇವರು ವಿಶ್ವದ ಅನೇಕ ದೇಶಗಳ ಸಂವಿಧಾನಗಳ ಅಧ್ಯಯನ ನಡೆಸಿ ನಮ್ಮ ದೇಶಕ್ಕೊಂದು ಕರಡು ಸಂವಿಧಾನವನ್ನು ರಚಿಸಿದರು. ಅದರ ತಿದ್ದುಪಡಿಗಾಗಿ ಅಂಬೇಡ್ಕರ್ ನೇತೃತ್ವದ ಸಮಿತಿಯನ್ನು ನೇಮಿಸಲಾಯಿತು. ತಿದ್ದುಪಡಿ ಸಮಿತಿಯಲ್ಲಿ ಅಂಬೇಡ್ಕರ್ ಅವರೊಬ್ಬರೇ ಅಲ್ಲ, ಇನ್ನೂ ಅನೇಕರು ಇದ್ದರು. ಸಮಿತಿಯ ಸದಸ್ಯರಲ್ಲಿ ೫೦% ಕ್ಕೂ ಹೆಚ್ಚು ಜನ ಬ್ರಾಹ್ಮಣರೇ ಆಗಿದ್ದರು. ತಿದ್ದುಪಡಿ ಕೆಲಸದ ಜವಾಬ್ದಾರಿ ಕರಡು ಸಮಿತಿಯ ಸದಸ್ಯರದ್ದಾಗಿದ್ದರೂ ಇತರ ಸಮಿತಿಗಳ ಸದಸ್ಯರೂ ತಿದ್ದುಪಡಿಗಳ ಬಗ್ಗೆ ಆಸಕ್ತಿ ವಹಿಸಿ ಸೂಕ್ತ ಸಲಹೆಗಳನ್ನು ಕೊಟ್ಟಿದ್ದರು. ಹೀಗೆ ಅನೇಕರು (ಅವರಲ್ಲಿ ಬಹುವಾಸಿ ಬ್ರಾಹ್ಮಣರು) ಕೂಡಿ ರಚಿಸಿದ ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ರಚಿಸಿದರು ಎನ್ನುವುದು ಮೌಡ್ಯವಷ್ಟೇ ಅಲ್ಲ ಭಾರತದ ಇತಿಹಾಸಕ್ಕೆ ಮಾಡುವ ಅಪಚಾರವಾಗುತ್ತದೆ. ಸಂವಿಧಾನದ ರಚನೆಗೆ ಅಂಬೇಡ್ಕರ್ ಅವರ ಕೊಡುಗೆಯನ್ನು ಕಡೆಗಣಿಸುವ ಅಗತ್ಯವಿಲ್ಲ, ಆದರೆ ಅದನ್ನು ಅತಿಶಯವಾಗಿಸುವುದೂ ಸರಿಯಲ್ಲ.

    Reply
  4. ಸೀತಾ

    ” ರಾಜ್ಯ ಸರಕಾರದ ಕಛೇರಿಗಳಲ್ಲಿ ಅಂಬೇಡ್ಕರ್ ಪಟವನ್ನು ಹಾಕಲು ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಲಾಗಿತ್ತು.”

    ಪ್ರಭುಗಳೇ ಇದು ವ್ಯಕ್ತಿ ಪೂಜೆಯಲ್ಲವೇ? ಬಾಬಾಸಾಹೇಬ್ ಅವರು ಇಂದು ಬದುಕಿದ್ದರೆ ಖಂಡಿತ ಇಂತಹ ಆಚರಣೆಗಳನ್ನು ವಿರೋಧಿಸುತ್ತಿದರು ಎಂಬುದರಲ್ಲಿ ಯಾವ ಅನುಮಾನವೇ ಇಲ್ಲ!

    Reply
  5. Shridhar Prabhu

    ಮಾನ್ಯ ಸೀತಾ ಅವರೇ, ನಿಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ನಿಮ್ಮ ಅಭಿಪ್ರಾಯಗಳನ್ನು ಓದಿ ನಾನು ನಂಬಿದ ತತ್ವ ಸರಿಯೆಂದು ನನಗೆ ಮತ್ತಷ್ಟು ಮನದಟ್ಟಾಯಿತು.

    Reply
    1. ಸೀತಾ

      ಪ್ರಭುಗಳೇ, ನಿಮ್ಮಿಂದ ಉತ್ತಮವಾದ ಹಾಗೂ ಸತ್ಯನಿಷ್ಠೆಯ ಚಿಂತನೆಯು ಲೇಖನ ರೂಪದಲ್ಲಿ ಬರಲಿ ಎಂದು ಹಾರೈಸುತ್ತೇನೆ. ನಿಮಗೆ ಒಳ್ಳೆಯದಾಗಲಿ.

      Reply
      1. ಸೀತಾ

        ಪ್ರಭುಗಳೇ, ಇಂದಿನ ವಿಜಯವಾಣಿಯಲ್ಲಿ ಹಿರಿಯ ಪತ್ರಕರ್ತ ಕೃಷ್ಣ ವಟ್ಟಮ್ ಅವರ ಸಾವಿನ ಸಂದರ್ಭದಲ್ಲಿ ಜರುಗಿದ ಸಂತಾಪ ಸಭೆಯೊಂದರ ವರದಿ ಪ್ರಕಟವಾಗಿದೆ. ದಯವಿಟ್ಟು ಅದನ್ನೊಮ್ಮೆ ಓದಿ. ಆ ಸಭೆಯಲ್ಲ್ಲಿ ಮೈಸೂರಿನ ಶಾಸಕರೊಬ್ಬರು (ಇವರು ಒಕ್ಕಲಿಗ ಜನಾಂಗಕ್ಕೆ ಸೇರಿದವರು) “ವಟ್ಟಮ್ ಬ್ರಾಹ್ಮಣ ಸಮುದಾಯದಲ್ಲಿ ಜನಿಸಿದ್ದರೂ ಪೌರಕಾರ್ಮಿಕರ ಬಗ್ಗೆ ಬಹಳ ಗೌರವವಿತ್ತಿದ್ದರು” ಅಂತ ಹೇಳಿದರು ಎನ್ನಲಾಗಿದೆ. ಯಾವ ಪುರಾವೆಗಳ ಬೆಂಬಲದಿಂದ ಇವರು ಹೀಗೆ ಹೇಳಿದ್ದಾರೆ? ಇದು ಜಾತಿ ಒಂದನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಿ ಅಟಾಕ್ ಮಾಡುವುದರ ಒಂದು ನಮೂನೆ ಅಂತ ನಿಮಗೆ ಅನ್ನಿಸುವುದಿಲ್ಲವೇ? ಬ್ರಾಹ್ಮಣ ಸಮುದಾಯಕ್ಕೆ ಪೌರಕಾರ್ಮಿಕರ ಬಗ್ಗೆ ಗೌರವವಿಲ್ಲವೇ? ಅಥವಾ ಶಾಸಕರ ಜಾತಿಯವರು ಪೌರಕಾರ್ಮಿಕರನ್ನು ಬ್ರಾಹ್ಮಣ ಸಮುದಾಯಕ್ಕಿಂತ ಹೆಚ್ಚು ಗೌರವದಿಂದ ನೋಡುತ್ತಿದ್ದಾರೆಯೇ? ಇಂದು ಬೆಂಗಳೂರಿನ ಸದಾಶಿವ ನಗರದಲ್ಲಿ ವಾಸವಾಗಿರುವ ಎಲ್ಲಾ ಜಾತಿಗಳ ನಾಯಕರೂ ಗಣ್ಯರೂ ಎಷ್ಟು ಮಂದಿ ಕಾರ್ನಾಡ್ ಸದಾಶಿವ ರಾಯರ ಮಾದರಿಯಲ್ಲಿ ದಲಿತ ಸಮುದಾಯದ ಅಭ್ಯುದಯಕ್ಕೆ ಶ್ರಮಿಸಿದ್ದಾರೆ? ಸುಮ್ಮನೆ ಬ್ರಾಹ್ಮಣರ ಮೇಲೆ ಏಕೆ ಗೂಬೆ ಕೂರಿಸುವುದು?

        Reply
    2. Anonymous

      ಸೀತಾ ಅವರ ಪ್ರತಿಕ್ರಿಯೆಗಳ ಬಗ್ಗೆ ಶ್ರೀಧರ್ ಅವರಿಂದ ಪ್ರಬುದ್ಧವಾದ ಪ್ರತಿಕ್ರಿಯೆಯನ್ನು ನಿರೀಕ್ಷಿದ್ದ ನನಗೆ ಈ ಮೇಲಿನ ಪ್ರತಿಕ್ರಿಯೆ ನೋಡಿ ನಿರಾಸೆ ಆಯಿತು. ದಲಿತರ ಬಗ್ಗೆ ಶ್ರೀಧರ್ ಅವರಿಗಿರುವ ಕಳಕಳಿ ನಿಜವೇ ಆಗಿದ್ದರೂ ಬ್ರಾಹ್ಮಣರೇ ದಲಿತರ ದುಸ್ಥಿತಿಗೆ ಕಾರಣ ಎಂಬ ಅವರ ನಂಬಿಕೆಯನ್ನು ಪ್ರಶ್ನಿಸಲೇ ಬೇಕಾಗುತ್ತದೆ. ಪ್ರಶ್ನೆಯನ್ನು ಎದುರಿಸುವ ಗೋಜಿಗೆ ಹೋಗದೆ ನನ್ನ ನಂಬಿಕೆ ನನಗೆ ಎಂದು ಶ್ರೀಧರ್ ಅವರು ಸುಮ್ಮನಾದದ್ದು ಸರಿಯಲ್ಲ. ತಮ್ಮ ಲೇಖನದ ವಿಚಾರಗ ಬಗ್ಗೆ ಚರ್ಚೆ ಮಾಡುವುದಕ್ಕೆ ಆಸಕ್ತಿ ಇಲ್ಲದಿದ್ದರೆ ಈ ಲೇಖನ ಏಕೆ ಬರೆಯಬೇಕಿತ್ತು ಅಂತ ಅವರೇ ಸ್ಪಷ್ಟೀಕರಣ ನೀಡಬೇಕು.

      Reply
  6. Shridhar Prabhu

    ನಿಮ್ಮ ಹಾರೈಕೆ ಮತ್ತು ನಿರೀಕ್ಷೆಯನ್ನು ಖಂಡಿತ ಹುಸಿಗೊಳಿಸುವುದಿಲ್ಲ.

    ಅಂದ ಹಾಗೆ, ಈ ಲೇಖನದ ಯಾವ ಭಾಗ ನಿಷ್ಠವಿಲ್ಲವೆಂದು ದಯಮಾಡಿ ತಿಳಿಸಿ.

    Reply
  7. Shridhar Prabhu

    ಮಾನ್ಯ Anonymus ಅವರೇ,

    ತಾವು ತಮ್ಮ ಹೆಸರನ್ನೂ ಹೇಳಿಕೊಳ್ಳಲು ಹಿಂಜರಿಯುತ್ತಾ ನನ್ನಿಂದ ಪ್ರತಿಕ್ರಿಯೆ ನಿರೀಕ್ಷಿಸಿದ್ದೀರಿ. ಪರವಾಗಿಲ್ಲ.

    ಸೀತಾ ಅವರು ಪ್ರಸ್ತಾಪಿಸಿದ ಮೂರು ವಿಷಯಗಳಿಗೆ ಪ್ರತಿಕ್ರಯಿಸುತ್ತಿದ್ದೇನೆ.

    ೧. ನ್ಯಾಯಾಂಗದಲ್ಲಿ ಬ್ರಾಹ್ಮಣರ ಅನುಪಾತ ಅವರ ಜನಸಂಖ್ಯೆಗಿಂತ ಸುಮಾರು ಹತ್ತು ಪಟ್ಟಿಗಿಂತ ಜಾಸ್ತಿ ಇರುವುದು ಸೀತಾ ಅವರು ನಿರಾಕರಿಸುವುದಿಲ್ಲ. ಬದಲಿಗೆ ಯಹೂದ್ಯರ ಉದಾಹರಣೆ ಕೊಡುತ್ತಾರೆ. ಇದರ ಔಚಿತ್ಯವನ್ನು ಅವರೇ ಹೇಳಬೇಕು. ವೈದಿಕ ಧರ್ಮ ನಮ್ಮ ಜನಸಂಖ್ಯೆಯ ಬಹುಜನರನ್ನು ವಿದ್ಯೆಯಿಂದ ದೂರಮಾಡಿದ ಪರಿಣಾಮ ಮತ್ತು ಶೂದ್ರ ಮತ್ತು ಪಂಚಮರಿಗೆ ಯಾವ ಸಾಮಾಜಿಕ ಸ್ಥಾನಮಾನಗಳನ್ನು ಪರಿಣಾಮವಾಗಿ ದೇಶದ ಬಹುಪಾಲು ಜನರಿಗೆ ವಿದ್ಯೆ ಮತ್ತು ಉದ್ಯೋಗ ಗಗನ ಕುಸುಮಗಳಾದವು. ಸ್ವಾತಂತ್ರ್ಯ ಬರುವವರೆಗೆ ದಲಿತರಿಗೆ ಅನೇಕ ರಾಜ್ಯಗಳಲ್ಲಿ ಭೂಮಿಯನ್ನು ಹೊಂದುವ ಹಕ್ಕು ಕೂಡ ಇರಲಿಲ್ಲ. Constituent ಅಸೆಂಬ್ಲಿಯ ಸದಸ್ಯತ್ವ ಪಡೆಯಲು ಅಂಬೇಡ್ಕರ್ ರಂಥ ಮೆಧಾವಿಗಳೇ ಪರದಾಡಬೇಕಾಯಿತು. ಹೀಗಾಗಿ ಸರಕಾರದ ನಾಲ್ಕೂ ಅಂಗಗಳಲ್ಲಿ (ಮೀಡಿಯಾ ನಾಲ್ಕನೇ ಸ್ಥಂಬ) ಬ್ರಾಹ್ಮಣರ ಅನುಪಾತ ಹೆಚ್ಚಲು ವೈದಿಕ ಧರ್ಮದ ವ್ಯವಸ್ಥಿತ ಶ್ರೇಣೀಕೃತ ಪದ್ಧತಿಯೇ ಕಾರಣ. ಇದಕ್ಕೆ ವೈದಿಕವಾದವನ್ನು ಮತ್ತು ಅದರ ಪ್ರತಿನಿಧಿಗಳನ್ನು ವಿಶೇಷವಾಗಿ ಇಂದಿಗೂ ಅದನ್ನು ವಿಶಿಷ್ಠ ವಾದಗಳಿಂದ ಸಮರ್ಥನೆ ಮಾಡಿಕೊಳ್ಳುವರನ್ನು ವಿಮರ್ಶೆ ಮಾಡಬೇಕಿದೆ.

    ೨. ಅಂಬೇಡ್ಕರ್ ಪಟವನ್ನು ಹಾಕಿದರೆ ಅದು ಮೂರ್ತಿಪೂಜೆ ಎಂದಾದರೆ ಬಹುಪಾಲು ಬಹುಪಾಲು ಹಿಂದೂಗಳು ದೇವರ ಮೂರ್ತಿ ಅಥವಾ ಪಟವನ್ನು ಪೂಜಿಸುವುದು ಕೂಡ ತಪ್ಪಲ್ಲವೇ? ದಲಿತರ ಸರ್ವಾಂಗೀಣ ವಿಕಾಸಕ್ಕೆ ತಮ್ಮನ್ನು ತಾವೇ ಗಂಧದಂತೆ ಸಮರ್ಪಿಸಿಕೊಂಡ ಬಾಬಾ ಸಾಹೇಬರ ಪಟವನ್ನು ಕೂಡ ಹಾಕುವಷ್ಟು ಕೃತಜ್ಞ್ಯತೆ ನಮ್ಮಲ್ಲಿಲ್ಲವೇ?

    ೩. ಬೆನಗಲ್ ಶಿವರಾಯರು ಸಂವಿಧಾನ ರಚಿಸಲು ಕಾಣಿಕೆ ನೀಡಲಿಲ್ಲ ಎಂದು ನಾನೆಲ್ಲೂ ಹೇಳಿಲ್ಲ. ಈ ಬೆನಗಲ್ ಶಿವರಾಯರ ಸಾಮಾಜಿಕ ಹಿನ್ನೆಲೆ ಮತ್ತು ಬಾಬಾಸಾಹೇಬರ ಹಿನ್ನೆಲೆಗಳ ಭಿನ್ನತೆ ಗುರುತಿಸದಷ್ಟು ಜಾಣ ಕುರುಡು ತೋರಿ ಲೇಖನದ ಒಂದು ಬಿಡಿ ಎಳೆಯನ್ನು ಕೇವಲ ಟೀಕೆಗಾಗಿ ಎಳೆದುಕೊಂಡು ಬಂದು ಬಾಬಾ ಸಾಹೇಬರನ್ನು ಕುಬ್ಜಗೊಳಿಸುತ್ತಿರುವುದು ಕಣ್ಣಿಗೆ ರಾಚುವಂತಿದೆ.

    ಇನ್ನು ಅದ್ಯಾರೋ ಮೈಸೂರಿನ ಶಾಸಕರ ವಿಚಾರ ಇತ್ಯಾದಿ ನನಗೇನೂ ಗೊತ್ತಿಲ್ಲ.

    ನಾಲ್ಕು ವರ್ಣಗಳಿಗೆ ಅತೀತರಾದ ದಲಿತರಿಗೆ ಯಾವ ಜಾತಿಯೂ ಇಲ್ಲ. ಈ ಲೇಖನದ ಉದ್ದೇಶ ಯಾವ ಜಾತಿಯನ್ನೂ ನಿಂದಿಸುವುದಲ್ಲ. ಇನ್ನು ಕುಂಬಳಕಾಯಿ ಕದ್ದ ವಿಚಾರ ಬಂದಾಗ ಹೆಗಲು ಮುಟ್ಟಿಕೊಳ್ಳುವರನ್ನು ಏನು ಮಾಡಲಾದೀತು?

    Reply
    1. ಸೀತಾ

      ಪ್ರಭುಗಳೇ,

      “ಬೆನಗಲ್ ಶಿವರಾಯರು ಸಂವಿಧಾನ ರಚಿಸಲು ಕಾಣಿಕೆ ನೀಡಲಿಲ್ಲ ಎಂದು ನಾನೆಲ್ಲೂ ಹೇಳಿಲ್ಲ. ಈ ಬೆನಗಲ್ ಶಿವರಾಯರ ಸಾಮಾಜಿಕ ಹಿನ್ನೆಲೆ ಮತ್ತು ಬಾಬಾಸಾಹೇಬರ ಹಿನ್ನೆಲೆಗಳ ಭಿನ್ನತೆ ಗುರುತಿಸದಷ್ಟು ಜಾಣ ಕುರುಡು ತೋರಿ ಲೇಖನದ ಒಂದು ಬಿಡಿ ಎಳೆಯನ್ನು ಕೇವಲ ಟೀಕೆಗಾಗಿ ಎಳೆದುಕೊಂಡು ಬಂದು ಬಾಬಾ ಸಾಹೇಬರನ್ನು ಕುಬ್ಜಗೊಳಿಸುತ್ತಿರುವುದು ಕಣ್ಣಿಗೆ ರಾಚುವಂತಿದೆ.”

      ೧. ಬೆನಗಲ್ ಶಿವರಾಯರಲ್ಲ, ಬೆನಗಲ್ ನರಸಿಂಗರಾವ್. ಶಿವರಾಯರು constituent assembly ಸದಸ್ಯರಾಗಿದ್ದರು ನಿಜ ಆದರೆ ಅವರು ಕರಡು ಸಂವಿಧಾನ ರಚಿಸಲಿಲ್ಲ. ಕರಡು ಸಂವಿಧಾನ ರಚನೆಯ ಜವಾಬ್ದಾರಿಯನ್ನು ನಿರ್ವಹಿಸಿದ್ದು ಅವರ ಸಹೋದರ ಬೆನಗಲ್ ನರಸಿಂಗರಾವ್.

      ೨. ಸಾರ್ ಅಂಬೇಡ್ಕರ್ ಅವರನ್ನು ಕುಬ್ಜಗೊಳಿಸುವ ಮಾತು ಎಲ್ಲಿಯದು? ಅಂಬೇಡ್ಕರ್ ಅವರೊಬ್ಬರನ್ನೇ ಸಂವಿಧಾನದ ಕರ್ತೃ ಎಂದು ಬಿಂಬಿಸುವುದು ತಪ್ಪಲ್ಲವೇ? ಅಂಬೇಡ್ಕರ್ ಅವರು ಬೆನಗಲ್ ನರಸಿಂಗರಾಯರು ಸಿದ್ದಪಡಿಸಿದ ಕರಡು ಸಂವಿಧಾನವನ್ನು ತಿದ್ದುಪಡಿ ಮಾಡುವ ಒಂದು ಸಮಿತಿಯ ನೇತೃತ್ವ ವಹಿಸಿದ್ದರು ಹಾಗೂ ಆ ಸ್ಥಾನದಲ್ಲಿ ಸಮಿತಿಯ ಇತರ ಸದಸ್ಯರ ಒಡಗೂಡಿ ತಿದ್ದುಪಡಿಗಳನ್ನು ಮಾಡಿದರು. ತನ್ಮೂಲಕ ಸಂವಿಧಾನ ರಚನೆಗೆ ಮಹತ್ವಪೂರ್ಣ ಕಾಣಿಕೆ ಸಲ್ಲಿಸಿದ್ದರು. ಇದನ್ನಲ್ಲವೇ ನಾನು ಹೇಳಿದ್ದು? ಇಲ್ಲಿ ಸತ್ಯವಲ್ಲದ ವಿಚಾರವನ್ನೇನಾದರೂ ನಾನು ಹೇಳಿದ್ದರೆ ದಯಮಾಡಿ ತೋರಿಸಿ.

      ೩. ಸಾಂಸ್ಕೃತಿಕ ಹಿನ್ನೆಲೆ ಬಗ್ಗೆ ಹೇಳಿದಿರಿ. ಸಾರ್ ಕರಡು ಸಂವಿಧಾನದ ಕರ್ತೃ ಬೆನಗಲ್ ನರಸಿಂಗರಾವ್ ಅವರ ಪಟವನ್ನು ಎಲ್ಲಾ ನ್ಯಾಯಾಲಯಗಳ ಕಚೇರಿಗಳಲ್ಲಿ ಕಡ್ಡಾಯವಾಗಿ ಹಾಕತಕ್ಕದ್ದು ಅಂತ ಯಾವ ಬ್ರಾಹ್ಮಣನೂ (ಮೂರ್ತಿ ಪೂಜೆ ಮಾಡುವವರು ಇವರೆಲ್ಲ) ಆಗ್ರಹ ಪಡಿಸಿಲ್ಲ, ನರಸಿಂಗರಾಯರ ಕುಟುಂಬದವರೂ ಕೇಳಿಲ್ಲ. ಏಕೆ?

      Reply
    2. ಸೀತಾ

      ಪ್ರಭುಗಳೇ,

      “ನಾಲ್ಕು ವರ್ಣಗಳಿಗೆ ಅತೀತರಾದ ದಲಿತರಿಗೆ ಯಾವ ಜಾತಿಯೂ ಇಲ್ಲ.”

      ಇದು ವಾಸ್ತವಿಕ ಸತ್ಯವೇ ಅಥವಾ ನಿಮ್ಮ ಆಶಯವೇ? ದಲಿತರು ಎಂದು ಇಂದು ನಾವು ಯಾವ ಸಮುದಾಯವನ್ನು ಕರೆಯುತ್ತಿದೆವೆಯೋ ಆ ಸಮುದಾಯವು ಜಾತಿ-ಉಪಜಾತಿ-ಕುಲಗಳ ಅತ್ಯಂತ ಸಂಕೀರ್ಣವಾದ ಒಂದು ಸಾಮಾಜಿಕ ಸಂಸ್ಥೆಯಾಗಿದೆ.

      Reply
    3. ಸೀತಾ

      ಪ್ರಭುಗಳೇ,

      “ವೈದಿಕ ಧರ್ಮ ನಮ್ಮ ಜನಸಂಖ್ಯೆಯ ಬಹುಜನರನ್ನು ವಿದ್ಯೆಯಿಂದ ದೂರಮಾಡಿದ ಪರಿಣಾಮ ಮತ್ತು ಶೂದ್ರ ಮತ್ತು ಪಂಚಮರಿಗೆ ಯಾವ ಸಾಮಾಜಿಕ ಸ್ಥಾನಮಾನಗಳನ್ನು ಪರಿಣಾಮವಾಗಿ ದೇಶದ ಬಹುಪಾಲು ಜನರಿಗೆ ವಿದ್ಯೆ ಮತ್ತು ಉದ್ಯೋಗ ಗಗನ ಕುಸುಮಗಳಾದವು. ”

      ಇದು ಒಂದು ಮಿಥ್ಯಾಕಲ್ಪನೆ. ಇದರ ಬಗ್ಗೆ ನಮ್ಮ ನಾಡಿನ ಹೆಸರಾಂತ ಸಂಶೋಧಕ ರಾಜಾರಾಮ ಹೆಗಡೆ ಅವರು ತಮ್ಮ ಅಂಕಣ ಲೇಖನಗಳಲ್ಲಿ ಬಹಳ ಚೆನ್ನಾಗಿ ಚರ್ಚಿಸಿದ್ದಾರೆ. ನೀವೂ ಆ ಲೇಖನಗಳನ್ನು ಒಮ್ಮೆ ಓದಬೇಕು:
      _https://cslcku.wordpress.com/2015/05/29/%E0%B2%85%E0%B2%82%E0%B2%95%E0%B2%A3-%E0%B2%A8%E0%B2%B5%E0%B2%A8%E0%B3%80%E0%B2%A4-19/

      _https://cslcku.wordpress.com/

      Reply
      1. ಸೀತಾ

        ಈ ಲೇಖನವನ್ನು ಖಂಡಿತ ಓದಬೇಕು ನೀವು:
        _https://cslcku.wordpress.com/2015/05/08/%E0%B2%85%E0%B2%82%E0%B2%95%E0%B2%A3-%E0%B2%A8%E0%B2%B5%E0%B2%A8%E0%B3%80%E0%B2%A4-13/

        “ಶೂದ್ರರನ್ನು ಶಿಕ್ಷಣದಿಂದ ವಂಚಿಸಲಾಗಿತ್ತು ಎನ್ನುವವರಿಗೆ ವೇದಶಾಸ್ತ್ರಗಳು ಹಾಗೂ ಸಂಸ್ಕೃತವನ್ನು ಕಲಿಯುವುದೇ ಪ್ರಾಚೀನ ಭಾರತೀಯ ಶಿಕ್ಷಣವಾಗಿತ್ತು ಎಂಬ ಭಾವನೆ ಇದೆ. ಇಂಥ ಅನಿಸಿಕೆಗಳಿಗೆ ಕಾರಣವೆಂದರೆ ಇಂದು ನಾವು ಶಿಕ್ಷಣವನ್ನು ಪಡೆಯುವುದಕ್ಕೂ ಪುಸ್ತಕಗಳನ್ನು ಓದುವುದಕ್ಕೂ ಅವಿನಾಭಾವೀ ಸಂಬಂಧವನ್ನು ಕಲ್ಪಿಸುತ್ತೇವೆ. ಈ ಸಮೀಕರಣವು ಕೂಡ ಪಾಶ್ಚಾತ್ಯ ಸಂಸ್ಕೃತಿಯ ಲಕ್ಷಣವಾಗಿದೆ. ಪಾಶ್ಚಾತ್ಯ ಶಿಕ್ಷಣದಲ್ಲಿ ಪುಸ್ತಕಗಳನ್ನು ಓದುವುದರ ಮೂಲಕ ಜ್ಞಾನವನ್ನು ಸಂಪಾದಿಸುವ ಕ್ರಮವಿದೆ. ಅಂದಮೇಲೆ ಪ್ರಾಚೀನ ಭಾರತದಲ್ಲಿ ಕೂಡ ಸಂಸ್ಕೃತ ಪುಸ್ತಕಗಳನ್ನು ಓದಿಯೇ ವಿದ್ಯೆಯನ್ನು ಪಡೆಯುತ್ತಿದ್ದರು ಹಾಗೂ ಅದಕ್ಕೆ ಅಕ್ಷರಾಭ್ಯಾಸವೇ ತಳಹದಿ ಎಂಬುದಾಗಿ ಇಂದಿನ ವಿದ್ಯಾವಂತರಿಗೆ ಕಾಣಿಸುವುದು ಸಹಜ.

        ಆದರೆ ನಮ್ಮ ಸಾಮಾನ್ಯ ಜ್ಞಾನವನ್ನು ಹಾಗೂ ಅನುಭವವನ್ನು ಆಧರಿಸಿ ಆಲೋಚಿಸಿದರೆ ಈ ನಿರ್ಣಯದಲ್ಲೇನೋ ಎಡವಟ್ಟು ಇರುವಂತೆ ಅನಿಸುವುದು ಸಹಜ. ಮೊದಲು ನಿಮಗೆ ಗೊತ್ತಿರುವ ಜನರನ್ನೆಲ್ಲ ತುಲನೆ ಮಾಡಿ, ಆಗ ಆ ನಿರ್ಣಯವು ತಪ್ಪೆಂದು ಗೋಚರಿಸುತ್ತದೆ. ಹಾಗೆ ನಿರ್ಣಯಿಸಬೇಕಾದರೆ ವಿದ್ಯೆಯನ್ನು ಅಕ್ಷರಾಭ್ಯಾಸಕ್ಕೆ ಸಮೀಕರಿಸಿಕೊಳ್ಳಬೇಕಾಗುತ್ತದೆ. ಆದರೆ ಭಾರತೀಯ ಸಂಸ್ಕೃತಿಯು ಇಂಥ ಸಮೀಕರಣವನ್ನು ಒಪ್ಪುವುದಿಲ್ಲ. ನಮ್ಮಲ್ಲಿ ಯಾವ ವೇದಗಳಿಂದ ತಮ್ಮನ್ನು ವಂಚಿಸುವ ಮೂಲಕ ತಮಗೆ ಶಿಕ್ಷಣವನ್ನು ನಿರಾಕರಿಸಿದರು ಎನ್ನಲಾಗುತ್ತದೆಯೋ ಆ ವೇದಗಳನ್ನು ಶ್ರುತಿ ಅಥವಾ ಕೇಳಿ ತಿಳಿದದ್ದು ಎನ್ನಲಾಗುತ್ತದೆ. ವೇದಗಳನ್ನು ಬರೆದು, ಓದಿ ಕಲಿಯುವ ಪದ್ಧತಿಯನ್ನು ಉದ್ದೇಶಪೂರ್ವಕವಾಗಿಯೇ ನಮ್ಮವರು ಅಳವಡಿಸಿಕೊಳ್ಳಲಿಲ್ಲ. ಬರೆದು ಓದಿದರೆ ಅದರ ಧ್ವನಿ, ಉಚ್ಛಾರಣೆಗಳೆಲ್ಲ ಅಪಭ್ರಂಶಗೊಳ್ಳುತ್ತವೆ, ಹಾಗಾಗಿ ಅವುಗಳ ಕಲಿಕೆಗೆ ಅಕ್ಷರವು ಅಡ್ಡಿ ಎಂಬ ಭಾವನೆಯೇ ಇತ್ತು. ಅವುಗಳನ್ನು ಸಾವಿರಾರು ವರ್ಷಗಳ ವರೆಗೆ ಕೇಳಿ ಕಲಿಯುವ ಮೂಲಕವೇ ದಾಟಿಸಿಕೊಂಡು ಬರಲಾಗಿದೆ. ಹಾಗಾಗಿ ವೇದವನ್ನು ಕಲಿಯಲು ಅಕ್ಷರ ಜ್ಞಾನವು ಬ್ರಾಹ್ಮಣರಿಗೆ ಅನಿವಾರ್ಯವಾಗಿರಲಿಲ್ಲ. ನಮ್ಮ ಇತಿಹಾಸದಲ್ಲಿ ಎಲ್ಲೆಲ್ಲಿ ಗ್ರಂಥಾಭ್ಯಾಸ ಅಗತ್ಯವಿತ್ತೊ ಅಲ್ಲಲ್ಲಿ ಅದನ್ನು ನಡೆಸುವ ಸಲುವಾಗಿ ಬ್ರಾಹ್ಮಣರಷ್ಟೇ, ಬೌದ್ಧ, ಜೈನಾದಿ ವಿದ್ವಾಂಸರಿಗೂ ಅಕ್ಷರಜ್ಞಾನವು ಬೇಕಿತ್ತು. ಕಾರಕೂನರು, ಲಿಪಿಕಾರರು, ಶಿಲ್ಪಿಗಳು ಮುಂತಾದ ಕೆಲವು ವೃತ್ತಿಗಳನ್ನು ವಲಂಬಿಸಿದವರು ಕೂಡ ಅಕ್ಸರವನ್ನು ಕಲಿತಿರುತ್ತಿದ್ದರು. ಇವರಲ್ಲಿ ಬಹುತೇಕರು ಶೂದ್ರರೇ ಆಗಿದ್ದರು.”

        Reply
  8. ಸೀತಾ

    ಪ್ರಭುಗಳೇ,

    “ಅಂಬೇಡ್ಕರ್ ಪಟವನ್ನು ಹಾಕಿದರೆ ಅದು ಮೂರ್ತಿಪೂಜೆ ಎಂದಾದರೆ ಬಹುಪಾಲು ಬಹುಪಾಲು ಹಿಂದೂಗಳು ದೇವರ ಮೂರ್ತಿ ಅಥವಾ ಪಟವನ್ನು ಪೂಜಿಸುವುದು ಕೂಡ ತಪ್ಪಲ್ಲವೇ?”

    ಸ್ವಂತಂತ್ರ ಭಾರತದ ಯಾವ ಸರಕಾರವಾದರೂ ಹಿಂದೂ ದೇವರ ಪಟಗಳನ್ನು ಸರಕಾರೀ ಕಛೇರಿಗಳಲ್ಲಿ ಕಡ್ಡಾಯವಾಗಿ ಹಾಕತಕ್ಕದ್ದು ಅಂತ ಸುತ್ತೋಲೆ ಹೊರಡಿಸಿದೆಯೇ? ಜನ ತಮ್ಮ ತಮ್ಮ ಮನೆಗಳಲ್ಲಿ ತಮ್ಮ ಭಕುತಿಗೆ ಅನುಗುಣವಾಗಿ ದೇವರ ಪಟಗಳನ್ನು ಹಾಕುತ್ತಾರೆಯಲ್ಲವೇ? ಹಾಗೆ ಅಂಬೇಡ್ಕರ್ ಅವರ ಪಟಗಳನ್ನೂ (ಬಾಬಾಸಾಹೇಬ್ ಅವರಷ್ಟೇ ಅಲ್ಲ ಗಾಂಧೀ-ನೆಹರೂ-ಇಂದಿರಾ-ರಾಜೀವ್-ಅಟಲ್ ಆದಿಯಾಗಿ ಆಧುನಿಕ ಭಾರತದ ಮಾನನೀಯರು ಸೇರಿದಂತೆ) ತಮ್ಮ ಮನೆಗಳಲ್ಲಿ ತಮ್ಮ ಮರ್ಜಿಗೆ ತಕ್ಕಂತೆ ಹಾಕಲಿ ಬಿಡಿ (ಇಂದು ಅದೆಷ್ಟೋ ಚಪ್ಪಲಿ ರಿಪೇರಿ ಅಂಗಡಿಯವರು ಬಾಬಾಸಾಹೇಬ್ ಅವರ ಮೇಲಿನ ಗೌರವದಿಂದ ತಮ್ಮ ಅಂಗಡಿಗಳ ಬಾಗಿಲ ಮೇಲೆ ಅಂಬೇಡ್ಕರ್ ಅವರ ಚಿತ್ರವನ್ನು ಪೈಂಟ್ ಮಾಡಿಸಿಲ್ಲವೇ ಹಾಗೆ). ಅದು ಬಿಟ್ಟು ಸರಕಾರೀ ಸುತ್ತೋಲೆ ಹೊರಡಿಸಿ ಸರಕಾರದ ಕಛೇರಿಗಳಲ್ಲಿ ಕಡ್ಡಾಯವಾಗಿ ಹಾಕಿಸುವುದು ಮೂರ್ತಿ ಪೂಜೆ ಅಲ್ಲದೆ ಮತ್ತೇನು? ಸ್ವತಹ ಅಂಬೇಡ್ಕರ್ ಅವರೇ (ದೇವರ) ಮೂರ್ತಿ ಪೂಜೆಯ ಪರವಾಗಿರಲಿಲ್ಲ. ಇನ್ನು ಮನುಷ್ಯರ ಪಟಗಳನ್ನು ಎಲ್ಲ ಕಛೇರಿಗಳಲ್ಲಿ ಹಾಕುವುದನ್ನು ಖಂಡಿತಾ ಒಪ್ಪುತ್ತಿರಲಿಲ್ಲ.

    ತಾವು ವಕೀಲರು, ತಮಗೆ ಸರಳವಾದ ವಿಚಾರವೊಂದನ್ನು ಹೇಳಬಯಸುತ್ತೇನೆ, ಅನ್ಯಥಾ ಭಾವಿಸಬೇಡಿ. ಸಾರ್ ಇಲ್ಲಿ ಸಮಸ್ಯೆ ಇರುವುದು ಜನ ಮೂರ್ತಿ ಪೂಜೆ ಮಾಡುವುದು ತಪ್ಪೋ ಸರಿಯೋ ಎಂಬುದರ ಬಗ್ಗೆ ಅಲ್ಲ. ವೈಯಕ್ತಿಕ ಹಾಗೂ ಸಾಂಸ್ಕೃತಿಕ ಜೀವನದಲ್ಲಿ ಮೂರ್ತಿ ಪೂಜೆ ಮಾಡುವುದು ಬಿಡುವುದು ಜನರ ನಂಬಿಕೆಯ ವಿಷಯ. ಅದು ಸರಿ ತಪ್ಪು ಅಂತ ಸರಕಾರವಾಗಲಿ ನೀವಾಗಲಿ ನಿಷ್ಕರ್ಷೆ ಮಾಡುವಂತಹ ವಿಚಾರವಲ್ಲ.
    ಸಮಸ್ಯೆ ಇರುವುದು ಸರಕಾರ ಮನುಷ್ಯರ ಪಟಗಳನ್ನು ಕಡ್ಡಾಯವಾಗಿ ಕಛೇರಿಗಳಲ್ಲಿ ಹಾಕಿಸುವುದು ಸರಿಯೋ ಅಲ್ಲವೋ ಎಂಬ ವಿಷಯದಲ್ಲಿ. ಮನುಷ್ಯರ ಪಟಗಳನ್ನು ಸರಕಾರೀ ಕಛೇರಿಗಳಲ್ಲಿ ಸರಕಾರವೇ ಹಾಕಿಸುವುದು ಏನು ಚೆನ್ನ? ಸರಕಾರೀ ಕಛೇರಿಗಳಲ್ಲಿ ಕಡತಗಳೇ ಧೂಳು ಹಿಡಿದು ಕೂತು ಬಿಡುತ್ತವೆ, ಇನ್ನು ಪಟಗಳಿಗೆ ಅಂಟಿಕೊಂಡ ಧೂಳನ್ನು ಗುಡಿಸುವ ಕೆಲಸವನ್ನು ಯಾರು ಮಾಡುತ್ತಾರೆ ಹೇಳಿ?

    “ದಲಿತರ ಸರ್ವಾಂಗೀಣ ವಿಕಾಸಕ್ಕೆ ತಮ್ಮನ್ನು ತಾವೇ ಗಂಧದಂತೆ ಸಮರ್ಪಿಸಿಕೊಂಡ ಬಾಬಾ ಸಾಹೇಬರ ಪಟವನ್ನು ಕೂಡ ಹಾಕುವಷ್ಟು ಕೃತಜ್ಞ್ಯತೆ ನಮ್ಮಲ್ಲಿಲ್ಲವೇ?”

    ದಲಿತರ ಸರ್ವಾಂಗೀಣ ವಿಕಾಸ ಬಯಸಿದ್ದ ಅಂಬೇಡ್ಕರ್ ಅವರೇ ಮೀಸಲಾತಿಯನ್ನು ಹತ್ತು ವರ್ಷಗಳಿಗಿಂತ ಹೆಚ್ಚು ಕಾಲ ಕೊಡಕೂಡದು ಅಂತ ದೃಢವಾಗಿ ನಂಬಿದ್ದರು. ಮೀಸಲಾತಿಯಂತ ಅತ್ಯಂತ ಮಹತ್ವಪೂರ್ಣ ಪ್ರಕ್ರಿಯೆ ಕೂಡ ಸ್ಥಾವರ ಆಗಿರಕೂಡದು ಎಂಬ ಉನ್ನತ ಚಿಂತನೆ ಅಂಬೇಡ್ಕರ್ ಅವರದ್ದಾಗಿತ್ತು. ಅಂಥವರನ್ನು ಪಟಗಳ ಮೂಲಕ ಸ್ಥಾವರವಾಗಿಸಿದರೆ ಬಾಬಾಸಾಹೇಬರಿಗೆ ಕೃತಜ್ಞತೆ ಸಲ್ಲಿಸಿದಂತಾಗುತ್ತದೆಯೇ? ವ್ಯಕ್ತಿ ಬಗ್ಗೆ ನಿಮಗೆ ಗೌರವವಿದ್ದರೆ ಆತನ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಿ, ಅದೇ ನೀವು ಆತನಿಗೆ ಸಲ್ಲಿಸಬಹುದಾದ ಗೌರವ.

    Reply
  9. ಸೀತಾ

    ಪ್ರಭುಗಳೇ,

    “ಯಹೂದ್ಯರ ಉದಾಹರಣೆ ಕೊಡುತ್ತಾರೆ. ಇದರ ಔಚಿತ್ಯವನ್ನು ಅವರೇ ಹೇಳಬೇಕು. ”

    ಈಗಾಗಲೇ ಇದರ ಬಗ್ಗೆ ಹೇಳಿದ್ದನ್ನೇ ಬಿಡಿಸಿ ಹೇಳುತ್ತೇನೆ: ವಿಶ್ವದ ಜನಸಂಖ್ಯೆಯ ಶೇಖಡಾ ೦.೨ ರಷ್ಟು ಇರುವ ಯಹೂದ್ಯರು ನೋಬೆಲ್ ವಿಜೇತರ ಪಟ್ಟಿಯಲ್ಲಿ ಶೇಖಡಾ ೨೨ ರಷ್ಟು ಇದ್ದಾರೆ. ಹಾಗಂತ ಯಹೂದ್ಯರು ಮಿಕ್ಕವರಿಗೆ ಮೋಸ ಮಾಡಿ ಕಪಟದಿಂದ ನೊಬೆಲ್ ಬಹುಮಾನ ಪಡೆದರೆ? ಅವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮಾಡಿದ ಅನನ್ಯ ಸಾಧನೆಗೆ ಅಲ್ಲವೇ ನೊಬೆಲ್ ಸಮಿತಿ ಮನ್ನಣೆ ಕೊಟ್ಟಿದ್ದು? ವಿಶ್ವದಲ್ಲಿ ಎಲ್ಲವನ್ನೂ ಜನಸಂಖ್ಯೆಯ ಅನುಪಾತದಲ್ಲಿ ಪಡೆಯಲು ಸಾಧ್ಯವಿಲ್ಲ. ಗುಣಕ್ಕೆ ಮತ್ಸರ ಬೇಡ. ಯಹೂದ್ಯರ ಬಗ್ಗೆ ಕರುಬುವುದನ್ನು ಬಿಟ್ಟು ಅವರ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಲು ಯತ್ನಿಸಿ. ಹಾಗೆ ಬ್ರಾಹ್ಮಣರ ವಿಚಾರದಲ್ಲೂ.

    Reply
  10. Shridhar Prabhu

    ನೋಡಿ ಸೀತಾ ಅವರೇ, ಈ ಪಟದ ಸುತ್ತೋಲೆ ಹೊರಡಿಸಿದ್ದು ಯೆಡಿಯೂರಪ್ಪನವರ ಸರಕಾರ. ನಂತರದ ಸರಕಾರಗಳೂ ಅದನ್ನು ಜಾರಿಯಲ್ಲಿಟ್ಟಿವೆ. ಆ ಸುತ್ತೋಲೆಯ ಮತ್ತು ಮೂರ್ತಿ ಪೂಜೆಯ ಅದರ ಸಾಂಸೃತಿಕ ಆಯಾಮಗಳನ್ನು ಔಚಿತ್ಯವನ್ನು ನೀವು ಪ್ರಶ್ನೆ ಮಾಡಲು ಸ್ವತಂತ್ರರು. ನಿಮ್ಮ ತರ್ಕದ ಪ್ರಕಾರ ಹೊರಟರೆ ನಮ್ಮ ದೇಶಕ್ಕೊಂದು ಧ್ವಜವಾದರೂ ಯಾಕೆ ಬೇಕು? ದೇಶಭಕ್ತಿ ಮನದಲ್ಲಿದ್ದರೆ ಸಾಲದೇ?

    ನನ್ನ ವಿಚಾರ ತುಂಬಾ ಸರಳ; ಸುತ್ತೋಲೆ ಜಾರಿಯಲ್ಲಿರುವುದೇ ನಿಜವಾದಲ್ಲಿ ಅದನ್ನು ಜಾರಿಗೊಳಿಸಲು ಯಾಕೆ ಹಿಂಜರಿಕೆ? ಇನ್ನು ನಿಮ್ಮ ರಾಜಾರಾಮ ಹೆಗಡೆಯವರನ್ನು ನಾನು ಓದಿಕೊಂಡಿಲ್ಲ. ಅವರು ಇತಿಹಾಸಕಾರರರು ಎಂದು ನನಗೆ ಗೊತ್ತಿರಲಿಲ್ಲ. ನಾನು ಇತಿಹಾಸವನ್ನು ಓದಲು ಬೇರೆ ಆಕರಗಳನ್ನು ಬಳಸಿಕೊಳ್ಳುತ್ತೇನೆ.

    ಇನ್ನು ಮೀಸಲಾತಿಯ ಪ್ರಶ್ನೆ. ಪುರುಸೊತ್ತಾದರೆ ಒಮ್ಮೆ India Untouched ಎಂಬ ಸಾಕ್ಷ ಚಿತ್ರ ನೋಡಿ. ಅದಕ್ಕಿಂತ ಜಾಸ್ತಿ ಹೇಳಲಾರೆ.

    ಕೊನೆಯ ಮಾತು ಸೀತಾ ಅವರೇ, ನಾನೊಬ್ಬ ಅಂಬೇಡ್ಕರ್ ವಾದಿ; ಬುದ್ಧನ ಅನುಯಾಯಿ. ನನಗೆ ಗೋಚರಿಸಿದ ಸತ್ಯವನ್ನು ನನಗೆ ತಿಳಿದ ರೀತಿಯಲ್ಲಿ ಪಾಲಿಸಿಕೊಂಡಿದ್ದೇನೆ. ನಮ್ಮ ಸೈದ್ದಾಂತಿಕ ಭಿನ್ನಾಭಿಪ್ರಾಯಗಳು ಈ ಸೀಮಿತ ಮಾಧ್ಯಮದಲ್ಲಿ ಬಗೆಹರಿಯಲಾರವು ಎಂದುಕೊಂಡಿದ್ದೇನೆ. ಮುಂದೊಮ್ಮೆ ಸಾರ್ವಜನಿಕವಾಗಿ ಚರ್ಚಿಸೋಣ.

    Reply
  11. ak kukkaje

    ಇಲ್ಲಿನ ಲೇಖನ ಮತ್ತು ಪ್ರತಿಕ್ರಿಯೆಗಳನ್ನು ಓದಿದ ನಂತರ ಈ ಬಗೆಗಿನ ನನ್ನ ಅನಿಸಿಕೆಯನ್ನು ಓದುಗರೊಂದಿಗೆ ಹಂಚುವ ಸಲುವಾಗಿ ಬರೆಯುತ್ತಿರುವೆ.ಅದೆಂದರೆ ನಮ್ಮ ದೇಶದಲ್ಲಿ ಸಾಮಾಜಿಕ ನ್ಯಾಯ ಎಂಬುವುದು ಮರೀಚಿಕೆಯಾಗಿದೆ. ಮಾನವರೆಲ್ಲರೂ ಸಮಾನರು ಎಂಬ ಮಾನವೀಯ ಕಾಳಜಿ ಇರುವ ಮೇಧಾವಿಗಳು ಅದೆಷ್ಟು ಈ ಬಗ್ಗೆ (ಸಾಮಾಜಿಕ ನ್ಯಾಯದ ಬಗ್ಗೆ) ಬರೆದರೂ ಅದನ್ನು ಕೆಲವು ಸ್ವಯಂಘೋಷಿತ ಜಾಣರು ತಮ್ಮ ಕುತಂತ್ರತೆಯ ಅತಿಬುದ್ದಿಯ ಹೊಸ ಹೊಸ ವ್ಯಾಖಾನದ ಮೂಲಕ ಹೇಗಾದರೂ ತಿರುಚಿ ತಾವು ಕಬಳಿಸಿರುವ ಬಹುಸಂಖ್ಯಾತ ಜನರ ನ್ಯಾಯದ ಹಕ್ಕನ್ನು ಸಮರ್ಥಿಸುತ್ತಾರೆ.

    ಒಟ್ಟಿನಲ್ಲಿ ತಮ್ಮನ್ನು ತಾವೇ ಮೇಲ್ಜಾತಿ ಎನಿಸಿರುವ ಮತ್ತು ಶ್ರೇಣಿಕೃತ ಸಮಾಜದಿಂದ ಅತ್ಯುನ್ನತ ಸ್ಥಾನದವರೆನಿಸಿಕೊಂಡವರು ಕೆಲಜಾತಿಗಳಿಗೆ ಶಿಕ್ಷಣದ ಹಕ್ಕನ್ನು ನೀಡಿರಲಿಲ್ಲ, ಬೇಕಿದ್ದರೆ ಮನುಸ್ಮೃತಿ ಒಮ್ಮೆ ಬಿಡಿಸಿ ಸರಿಯಾಗಿ ಓದಿಕೊಳ್ಳಲಿ ಅದರ ಪ್ರಕಾರ ದಲಿತ ಅಥವಾ ಕೆಲಜಾತಿಯವನು ಸಂಸ್ಕೃತ ಕಲಿತರೆ ನೀಡಬೇಕಾದ ಶಿಕ್ಷೆ ಏನು ಎಂಬುವುದನ್ನು, ಇದೀಗ “ನಮ್ಮ ಬಗ್ಗೆ ಮತ್ಸರ ಬೇಡ ನಾವು ಅತಿ ಬುದ್ದಿವಂತರಾಗಿರುವುದರಿಂದಲೇ ಎಲ್ಲವನ್ನೂ ಗಳಿಸಿದ್ದೇವೆ” ಎಂಬ ಸಮಜಾಯಿಷಿಕೆ ಬೇರೆ ತನ್ಮೂಲಕ ದಲಿತ ಮತ್ತು ಹಿಂದುಳಿದ ಜನರಲ್ಲಿ ಪ್ರತಿಭಾಶಾಲಿಗಳೇ ಇಲ್ಲ ಎಂದು ಇವರು ಹೇಳಿಕೊಳ್ಳುತ್ತಾರೆ. ಆದರೆ ಇರುವ ಅದೆಷ್ಟೋ ಪ್ರತಿಭಾವಂತರನ್ನು ಅವಕಾಶ ವಂಚಿತರನ್ನಾಗಿ ಮಾಡಿದ್ದು ಮಾತ್ರವಲ್ಲ ಒಂದೊಮ್ಮೆ ಅವರಿಗಾಗಿ (ದಲಿತ ಮತ್ತು ಹಿಂದುಳಿದ ವರ್ಗಗಳಿಗೆ) ಮೀಸಲಾತಿ ಪ್ರಕಟಿಸಿದ ಮಂಡಲ್ ವರದಿ ಜಾರಿಯನ್ನು ವಿರೋಧಿಸಿದ ಈ ಜನಗಳು ಇವೆಲ್ಲವನ್ನೂ ಮೀರಿಸಿ ಹೇಗಾದರೂ ಈ ದಲಿತರು ಶ್ರೇಷ್ಠ ಯಾ ಉನ್ನತ ಹುದ್ದೆ ತಲುಪಿದರೂ ಈ ಬ್ರಾಹ್ಮಣ ಪ್ರಧಾನ ವ್ಯವಸ್ಥೆ ಇವರನ್ನು ಹೇಗೆ ನಡೆಸಿಕೊಂಡಿದೆ ಎಂಬುವುದಕ್ಕೆ ಈ ಲೇಖನವೇ ಸಾಕ್ಷಿ.
    ಜಸ್ಟಿಸ್ ಬಾಲಕೃಷ್ಣ ರವರ ಪ್ರಮಾಣ ವಚನದ ವರದಿಗೆ ಬ್ರಾಹ್ಮಣ ಪ್ರಧಾನ ಮಾಧ್ಯಮಗಳು ಅನುಪಸ್ಥಿತಿ ಗೊಂಡ ಉದಾಹರಣೆ ಕೂಡ ಅಂದಿನ ದಿನಗಳಲ್ಲಿ ಪತ್ರಿಕೆಯಲ್ಲಿ ಸುದ್ದಿಯಾಗಿದ್ದವು

    Reply
    1. ಸೀತಾ

      ak kukkaje ಅವರೇ,

      ಮುಸಲ್ಮಾನ ಸಮುದಾಯದವರಾದ ತಾವು ಹಿಂದೂ ಸಮುದಾಯದಲ್ಲಿನ ಸಾಮಾಜಿಕ ನ್ಯಾಯದ ಬಗ್ಗೆ ಕಳಕಳಿ ಹೊಂದಿರುವುದು ನಿಜಕ್ಕೂ ಸಂತೋಷದ ಸಂಗತಿ. ತಮ್ಮ ಕಳಕಳಿ ಎಷ್ಟರ ಮಟ್ಟಿಗೆ ಇದೆ ಎಂದರೆ ೯೯.೯೯೯೯೯೯೯೯೯೯೯೯೯೯% ಹಿಂದೂಗಳಿಗೆ ಗೊತ್ತಿರದ ಮನುಸ್ಮೃತಿಯನ್ನು ಓದಿಕೊಂಡಿದ್ದೀರಿ! ಮೆಚ್ಚಿದೆ ನಿಮ್ಮ ಇಂಡಾಲಜಿ ಪ್ರೇಮವನ್ನು! ಸಾರ್ ವೇದಶಿಕ್ಷಣವನ್ನು ಇಂದು ಮುಸಲ್ಮಾನರೂ ಪಡೆಯಬಹುದು. ತಮಗೆ ಆಸಕ್ತಿ ಇದ್ದರೆ ಹೇಳಿ ತಮಗೂ ಕಲಿಸುವ ಏರ್ಪಾಟು ಮಾಡಿಸುವ. ಆದರೆ ತತ್ಸಂಬಂಧವಾಗಿ ತಮ್ಮ ಮತಬಾಂಧವರಿಂದ ಜೀವ ಬೆದರಿಕೆ ಬಂದರೆ ವೈದಿಕರನ್ನು ದೂರಬೇಡಿ.

      Reply
  12. M A Sriranga

    ಶ್ರೀಧರ ಪ್ರಭುಗಳ ಎಲ್ಲಾ ವಿಚಾರಗಳನ್ನು ಮತ್ತು ಅವರು ಕೊಟ್ಟಿರುವ ಅಂಕಿ ಅಂಶಗಳನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಇವೆಲ್ಲದರ ಹಿಂದೆ ‘ಬ್ರಾಹ್ಮಣರ ಲಾಬಿ’ಯೊಂದು ಸತತವಾಗಿ ಕೆಲಸಮಾಡುತ್ತಿದೆ ಎಂದರೆ ಅರಗಿಸಿಕೊಳ್ಳಲು ಸ್ವಲ್ಪ ಕಷ್ಟ. ವಕೀಲರ ಪರಿಷತ್ತಿನ ನಿರ್ಣಯವನ್ನು ಪ್ರಶ್ನಿಸುವುದು ನೊಂದ ವಕೀಲರ ಕರ್ತವ್ಯ ಮತ್ತು ಅವರ ಹಕ್ಕು. . ಒಂದು ವೇಳೆ ಆ ಪರಿಷತ್ತಿನ ಪದಾಧಿಕಾರಿಗಳು ಒಪ್ಪದ್ದಿದ್ದರೆ ಬಂಡಾಯವೆದ್ದು ಬೇರೆ ಸಂಘ ಸ್ಥಾಪಿಸಿಕೊಳ್ಳಬೇಕು. ವಕೀಲರುಗಳು ಸರ್ಕಾರಿ ನೌಕರರಲ್ಲ. ಹೀಗಾಗಿ ಆ ಬಂಡಾಯವೆದ್ದ ವಕೀಲರ ಸಂಘಕ್ಕೆ ಸರ್ಕಾರ ಮಾನ್ಯತೆ ನೀಡುವುದು ಬಿಡುವುದು secondary. ಸರ್ಕಾರಿ ನೌಕರರಾದರೆ ತಮ್ಮ ತಮ್ಮ ಬಾಸ್ ಗಳಿಗೆ, managementಗಳಿಗೆ ಹೆದರಬೇಕು. ಇನ್ನು ಪ್ರಖ್ಯಾತ ನ್ಯಾಯವಾದಿಗಳಿಗೆ ನ್ಯಾಯಾಧೀಶರಾಗುವುದು ಅಷ್ಟು ಇಷ್ಟವಿಲ್ಲದ ಕೆಲಸ ಎಂಬುದು ಶ್ರೀಧರಪ್ರಭುಗಳಿಗೆ ತಿಳಿಯದ ವಿಷಯವೇನಲ್ಲ. ಇದಕ್ಕೆ ವಿವರಣೆ ಅನಗತ್ಯ. ೧೪-೮-೧೯೪೭ರ ೧೧ ಗಂಟೆ ೫೯ ನಿಮಿಷದ ತನಕ ಇಡೀ ಭಾರತದಲ್ಲಿ ಬ್ರಾಹ್ಮಣರ ಆಧಿಪತ್ಯ ಎಲ್ಲಾ ರಂಗಗಳಲ್ಲಿ ಇತ್ತು ಎಂದೇ ಒಪ್ಪೋಣ. ಆದರೆ ಕಳೆದ ೬೯ ವರ್ಷಗಳಲ್ಲೂ ಬ್ರಾಹ್ಮಣರೇ ಎಲ್ಲಾ ಕಡೆ ಅದರಲ್ಲೂ ಮುಖ್ಯವಾಗಿ ಸರ್ಕಾರದ ಇಲಾಖೆಗಳಲ್ಲಿ , ಎಲ್ಲಾ ರಂಗಗಳಲ್ಲಿ ತುಂಬಿ ತುಳುಕುತ್ತಿದ್ದಾರೆ ಎಂದರೆ ಅದು ಸತ್ಯಕ್ಕೆ ದೂರವಾದ ಮಾತಾಗುತ್ತದೆ.ಸ್ವಾತಂತ್ರ್ಯಾ ನಂತರದಲ್ಲಿ ದಲಿತರ ಮತ್ತು ಇತರೆ ಹಿಂದುಳಿದ ಜಾತಿ-ಜನಾಂಗಗಳಿಗೆ ಶಿಕ್ಷಣ ಮತ್ತಿತರ ರಂಗಗಲ್ಲಿ ತಂದ ಮೀಸಲಾತಿ, ಸರ್ಕಾರಿ ಕೆಲಸಕ್ಕೆ ಸೇರುವಾಗ ಮೀಸಲಾತಿ ಮತ್ತು ನಂತರದ ಪ್ರಮೋಷನ್ ಗಳಿಗೆ ಮೀಸಲಾತಿ, fast track ವ್ಯವಸ್ಥೆ ಇನ್ನೂ ಜಾರಿಯಲ್ಲಿರುವುದು ಇತ್ಯಾದಿಗಳನ್ನು ಶ್ರೀಧರ ಪ್ರಭುಗಳು ಮರೆಯಲಾರರು ಎಂದು ಭಾವಿಸುತ್ತೇನೆ ಹಿಂದಿನ ನೋವುಗಳನ್ನು ಮರೆತು ಮಾತಾಡುವುದು ತಪ್ಪಾಗುತ್ತದೆ. ಅದೇ ರೀತಿ ವಾಸ್ತವ ಪರಿಸ್ಥಿತಿಯನ್ನು ಕಡೆಗಣಿಸುವುದು ಏಕಮುಖೀ ವಾದವಾಗುತ್ತದೆ. ಎರಡೂ ನಮ್ಮನ್ನು ದಾರಿ ತಪ್ಪಿಸುವಂತಹುದೇ.

    Reply
  13. AK Kukkaje

    ಎಲ್ಲವನ್ನೂ ನೀವು ನಾವು ಹಿಂದೂ ಮುಸ್ಲಿಂ ಎಂದೆಲ್ಲ ವಿಭಾಗಿಸದೆ ಬರಹಗಳು ಭಾರತೀಯ ಎಂಬ ಅಲ್ಲವೇ ಮಾನವೀಯ ನೆಲೆಯಲ್ಲಿ ಇರಲಿ. ಈ ರೀತಿ ಜನರನ್ನು ಹಿಂದೂ ಮುಸ್ಲಿಂ ಎಂದು ಬೇರ್ಪಡಿಸಿ ತೆರೆಮೆರೆಯಲ್ಲಿ ಸವರ್ಣೀಯ ಹಿತಾಸಕ್ತಿಯನ್ನು ಕಾಪಾಡುವ ಕೋಮು ವಿಭಜನೆ ಮತ್ತು ತನ್ಮೂಲಕ ಹಿಂದುಳಿದ ವರ್ಗದ ಜನರ ಶೋಷಣೆಯನ್ನು ಇನ್ನಾದರೂ
    ನಿಲ್ಲಿಸಿ.
    ಇಂದಿನ ವಿದ್ಯಮಾನದ ಬೆಳವಣಿಗೆಯನ್ನು ಗಮನಿಸಿದರೆ ಕಾಂಗ್ರೆಸ್ ಮತ್ತು ಭಾಜಪ ಎಂಬ ಎರಡೂ ಪಕ್ಷಗಳನ್ನು ಬಹಿಷ್ಕರಿಸಿ ದೇಶದಲ್ಲಿ ಎಡಪಂಥೀಯ ಮತ್ತು ಆಮ್ ಆದ್ಮಿ ಮುಂತಾದ ಭ್ರಷ್ಟಾಚಾರ ವಿರೋಧಿ ಹಾಗೂ ಸಮಾನ ಮನಸ್ಕಪ್ರಾದೇಶಿಕ ಪಕ್ಷಗಳ ಒಕ್ಕೂಟದಿಂದ ಮಾತ್ರ ಭಾರತಕ್ಕೆ ಕೋಮು ವಿರೋಧಿ ಆಡಳಿತ ದೊರೆಯಬಹುದೇನೋ ಎಂದು ಭಾಸವಾಗುತ್ತದೆ.

    A.K. Kukkaje

    Reply
    1. ಸೀತಾ

      A.K. Kukkaje ಅವರೇ,

      “ಎಲ್ಲವನ್ನೂ ನೀವು ನಾವು ಹಿಂದೂ ಮುಸ್ಲಿಂ ಎಂದೆಲ್ಲ ವಿಭಾಗಿಸದೆ ಬರಹಗಳು ಭಾರತೀಯ ಎಂಬ ಅಲ್ಲವೇ ಮಾನವೀಯ ನೆಲೆಯಲ್ಲಿ ಇರಲಿ”

      ಎಲ್ಲವನ್ನೂ ನೀವು ವೈದಿಕ – ಅವೈದಿಕ ಎಂದು ವಿಭಾಗಿಸಿಯೇ ಬರೆಯುವ ನೀವು ಹೀಗೆ ಅಪ್ಪಣೆ ನೀಡುವುದು ಹಿಪಾಕ್ರಸಿ ಅಲ್ಲವೇ? ಮಾನವೀಯತೆ ಎಂಬುದು ಮುಸಲ್ಮಾನರ ಅಥವಾ ಸೋ ಕಾಲ್ಡ್ ಪ್ರಗತಿಪರರ ಸ್ವತ್ತೆ?

      “ಜನರನ್ನು ಹಿಂದೂ ಮುಸ್ಲಿಂ ಎಂದು ಬೇರ್ಪಡಿಸಿ ತೆರೆಮೆರೆಯಲ್ಲಿ ಸವರ್ಣೀಯ ಹಿತಾಸಕ್ತಿಯನ್ನು ಕಾಪಾಡುವ ಕೋಮು ವಿಭಜನೆ ಮತ್ತು ತನ್ಮೂಲಕ ಹಿಂದುಳಿದ ವರ್ಗದ ಜನರ ಶೋಷಣೆಯನ್ನು ಇನ್ನಾದರೂ

      ನಿಲ್ಲಿಸಿ.”

      ಹಿಂದೂ ಸಮುದಾಯಗಳನ್ನು ವೈದಿಕ-ಅವೈದಿಕ ಎಂದು ಬೇರ್ಪಡಿಸಿ ತೆರೆ ಮರೆಯಲ್ಲೂ ತೆರೆಯ ಮುಂದೆಯೂ ಕೋಮುವಾದ ಭಯೋತ್ಪಾದನೆ ಗಲ್ಫ್ ಹಣದ ಮೂಲಕ ಹಿಂದೂ ಸಮಾಜದ ಮೇಲೆ ನಡೆಸುವ ದೌರ್ಜನ್ಯವನ್ನು ಇನ್ನಾದರೂ ನಿಲ್ಲಿಸಿ ಅಂತ ತಮಗೆ ಹೇಳಿದರೆ ಹೇಗಿರುತ್ತದೆ ಸಾರ್?

      Reply
      1. M A Sriranga

        ಕುಕ್ಕಾಜೆ ಅವರಿಗೆ— ತಮ್ಮ ಆಶಯದ ಎಡಪಂಥೀಯ ಪಕ್ಷದ ರಾಜ್ಯ ರಾಜಕಾರಣವನ್ನು ಪಶ್ಚಿಮ ಬಂಗಾಳದಲ್ಲಿ ಸುಮಾರು ಮೂವತ್ತುವರ್ಷಗಳ ಕಾಲ ಅಖಂಡವಾಗಿ ನೋಡಿದ್ದಾಗಿದೆ ಆ ಮೂವತ್ತು ವರ್ಷಗಳ ನಂತರ ಪಶ್ಚಿಮ ಬಂಗಾಳದ ಸ್ಥಿತಿಗಳು ಹೇಗಾಯಿತು ಎಂಬುದು ತಮಗೆ ತಿಳಿದ್ದದ್ದೆ ಆಗಿದೆ. ಆಮ್ ಆದ್ಮಿಯ ಆಡಳಿತವನ್ನು ದೆಹಲಿಯಲ್ಲಿ ಒಮ್ಮೆ ೪೯ದಿನಗಳು ನೋಡಿದೆವು. . ಮತ್ತು ಈಗ (ಮುಂದೆ ಇನ್ನು ಎಷ್ಟು ದಿನ/ತಿಂಗಳು/ವರ್ಷವೋ ತಿಳಿಯದು) ನೋಡುತ್ತಿದ್ದೇವೆ. . ಮತ್ತೆ ಸಮ್ಮಿಶ್ರ ಸರ್ಕಾರಗಳ ಆಡಳಿತವನ್ನು ಕೇಂದ್ರದಲ್ಲಿ ಸಹ ನೋಡಿದ್ದಾಗಿದೆ. ಸದ್ಯಕ್ಕೆ ಏನೂ ಬಾಕಿ ಉಳಿದಿಲ್ಲ. ಎಡ ಪಕ್ಷಗಳಲ್ಲಿ ಎಲ್ಲರೂ ನಾಯಕರಾಗಲು ಬಯಸುವವರೆ!! ಇಂತಹ ಪರಿಸ್ಥಿತಿಯಲ್ಲಿ ಹೆಚ್ಚಿನ ಆಸೆ ಇಟ್ಟುಕೊಳ್ಳುವುದರಿಂದ ಪ್ರಯೋಜನವಿಲ್ಲ. ಆಸೆಯೇ ದುಃಖಕ್ಕೆ ಕಾರಣ. ಅಲ್ಲವೇ?

        Reply
  14. Shridhar Prabhu

    ಮಾನ್ಯ ಶ್ರೀರಂಗ ರೇ,

    ಇದು ನನ್ನ ಈ ಲೇಖನದ ಚೌಕಟ್ಟಿಗೆ ಸೇರಿದ ವಿಷಯವಲ್ಲ. ಅದರೂ ಇದರ ಪ್ರಸ್ತಾಪ ಬಂದಿದ್ದಕ್ಕೆ ನನ್ನ ಅನಿಸಿಕೆ ಹಂಚಿಕೊಳ್ಳುತ್ತಿದ್ದೇನೆ.

    ನಾನೇನೂ ಎಡ ಪಂಥೀಯನಲ್ಲ. ಆದರೆ ನನ್ನ ಅಭಿಪ್ರಾಯದಲ್ಲಿ ಎಡ ಪಕ್ಷಗಳಲ್ಲಿ ಎಲ್ಲರೂ ನಾಯಕರಾಗಲು ಬಯಸುವುದಿಲ್ಲ. In fact, ದಶಕಗಳ ಹಿಂದೆ ಶ್ರೀ ಜ್ಯೋತಿ ಬಸು ಪ್ರಧಾನಮಂತ್ರಿಯಾಗುವ ಅವಕಾಶ ಬಂದಾಗ ತಮ್ಮ ಪಕ್ಷದ ಸಾಮೂಹಿಕ ನಿರ್ಧಾರದ ಮೇರೆಗೆ ಅವರು ಅದನ್ನು ತಿರಸ್ಕರಿಸಿದರು. ಸಾಮೂಹಿಕ ನಾಯಕತ್ವಕ್ಕೆ ಎಡ ಪಕ್ಷಗಳಲ್ಲಿ ಇದ್ದಷ್ಟು ಪ್ರಾಧಾನ್ಯ ಬೇರೆಡೆ ಇಲ್ಲ. ಇದನ್ನು ಎಡ ಪಕ್ಷಗಳ ವಿರೋಧಿಗಳೂ ಒಪ್ಪುತ್ತಾರೆ.

    Reply
  15. ak kukkaje

    ಚರ್ಚೆಯನ್ನು ಮುಕ್ತಾಯಗೊಳಿಸುವುದೇ ಉತ್ತಮ ಎಂದು (ಬರೆಯಲು ಬೇಕಾದ ನನ್ನಸಮಯದ ಅಭಾವದಿಂದಲೂ) ಭಾವಿಸಿ ಸುಮ್ಮನಿದ್ದೆ. ಆದರೂ ಇಲ್ಲಿ ಕಾಣಲಾಗುವ ಕೆಲವು ಮರು ಪ್ರತಿಕ್ರಿಯೆ ಮತ್ತು ಪ್ರತ್ಯುತ್ತ್ತರಗಳನ್ನು ಗಮನಿಸುವಾಗ ಸುಮ್ಮನಿರಲೂ ಕಷ್ಟವಿದೆ.
    ೧) ಹಿಂದೂ ಸಮುದಾಯಗಳನ್ನು ವೈದಿಕ-ಅವೈದಿಕ ಎಂದು ಬೇರ್ಪಡಿಸಿ ತೆರೆ ಮರೆಯಲ್ಲೂ ತೆರೆಯ ಮುಂದೆಯೂ ಕೋಮುವಾದ ಭಯೋತ್ಪಾದನೆ ಗಲ್ಫ್ ಹಣದ ಮೂಲಕ ಹಿಂದೂ ಸಮಾಜದ ಮೇಲೆ ನಡೆಸುವ ದೌರ್ಜನ್ಯವನ್ನು ಇನ್ನಾದರೂ ನಿಲ್ಲಿಸಿ ಅಂತ ತಮಗೆ ಹೇಳಿದರೆ ಹೇಗಿರುತ್ತದೆ ಸಾರ್?

    ಮೇಡಂ ಗಲ್ಫ್ ಹಣದಲ್ಲಿ ಭಯೋತ್ಪಾದನೆ ನಡೆಯುತ್ತಿದೆ ಎಂಬ ವಿಚಾರ ನಿಮಗೆ ಹೇಗೆ ತಿಳಿಯಲಾಯಿತು? ಈ ಮಾಹಿತಿಯನ್ನು ಕೂಡಲೇ ಸಂಬಂಧಪಟ್ಟ ಇಲಾಖೆಗೆ ಕಳುಹಿಸಿಕೊಡಿರಿ. ಇಲ್ಲವಾದರೆ ತಮ್ಮ ಸಂಸಾರ ಖರ್ಚಿನ ಹೊರೆಯನ್ನು ಸರಿದೂಗಿಸಲು ಊರಿನ ಹಲವು ಪ್ರಯತ್ನ ವ್ಯರ್ಥವಾದ ನಂತರ ಕೊಲ್ಲಿ ರಾಷ್ಟ್ರದ ಸುಡುಬಿಸಿಲಾದರೂ ಸರಿ ಎಂದು ಮರುಭೂಮಿಯಲ್ಲಿ ದುಡಿಯುವ ಬಡಪಾಯಿಗಳ ಮೇಲೆ ಈ ಆರೋಪವನ್ನು ಹೇಗೆ ಹೊರಿಸುತ್ತೀರಿ? ಅಥವಾ ಅಂತಹ ಭಯೋತ್ಪಾದಕ ವಿದೇಶಿ ಉದ್ಯೋಗಿ ಯಾ ಅನಿವಾಸಿಗಳ ಸಂಪರ್ಕ ತಮಗೆ ಇದ್ದುದರಿಂದ ಪುರಾವೆಯ ಮೇರೆಗೆ ತಿಳಿಸಿದ್ದಾದರೆ ದಯವಿಟ್ಟು ಇದನ್ನು ಮುಚ್ಚಿಡಬೇಡಿ. ತಿಳಿದು ಅಡಗಿಸುವುದು ಅದರೊಂದಿಗೆ ನೀವೂ ಶಾಮೀಲಾಗುವುದಕ್ಕೆ ಸಮಾನವಾಗಬಹುದು. ಆದ್ದರಿಂದ ಇನ್ನು ಮಾಧ್ಯಮ ಭಯೋತ್ಪಾದನೆಯಂತೆ ಮೂಲದಿಂದ ತಿಳಿಯಿತು ಎಂದು ನುಣುಚದೆ ಯಾವ ಮೂಲ ಹೇಗೆ ಯಾರಿಂದ ಯಾವಾಗ ತಿಳಿಯಲಾಯಿತು. ಎಂದು ವ್ಯಕ್ತಪಡಿಸಿ. ಅಲ್ಲವಾದಲ್ಲಿ ಅನಿವಾಸಿ ಭಾರತೀಯರಾದ ಹಿಂದೂ ಮುಸ್ಲಿಂ ಕ್ರೈಸ್ತ ಮಾತ್ರವಲ್ಲ ಮಾನವಶ್ರೇಷ್ಟರೆಂದು ನೀವು ಬಗೆಯುವ ವೈದಿಕ, ಕಳಪೆ ದರ್ಜೆ ಎನ್ನಲಾಗುವ, ಅವೈದಿಕ ಹೀಗೆ ಎಲ್ಲಾ ಜನಗಳೂ ಇಲ್ಲಿ ದುಡಿಯುತಿದ್ದು ಅವರಲ್ಲಿ ಯಾರೆಲ್ಲಾ ನಿಮ್ಮ ಆರೋಪಕ್ಕೆ ಒಳಪಡುತ್ತಾರೆ. ಎಂದಾದರೂ ವ್ಯಕ್ತಪಡಿಸಿ ಇನ್ನು ಹಾಗೊಂದು ಕಲ್ಲು ಹೊಡೆದು ನೋಡುವ ಎಂಬ ನಿಮ್ಮ ದುರ್ಬುದ್ದಿಯಾಗಿದ್ದರೆ, ದಯವಿಟ್ಟು ತನ್ನಮಡದಿ ಮಕ್ಕಳನ್ನು ಸಲಹುವ ಉದ್ಯೋಗ ಅರಸಿ ಬದುಕಿನ ಬಂಡಿದೂಡುತ್ತಿರುವ ಈ ಅನಿವಾಸಿ ಅಮಾಯಕರಲ್ಲಿ ನೀವು ಕ್ಷಮೆ ಕೇಳುವ ಸೌಜನ್ಯವಾದರೂ ಇರಲಿ.

    ೨) ವೈದಿಕ ಮತ್ತು ಅವೈದಿಕವೆಂದು ನಾನು ಬೇರ್ಪಡಿಸಿಲ್ಲ ಮೇಡಂ ಈ ಶ್ರೆಣೇಕೃತ ಸಮಾಜ ವಿಭಾಗಿಸಿದೆ. ಅದಕ್ಕಾಗಿ ಇದೆ ವರ್ತಮಾನ ಬ್ಲಾಗಿನಲ್ಲಿ ಕಾಣಸಿಗುವ ಜೀವಿಯವರ ಬರಹಗಳೇ ಸಾಕ್ಷಿ.ಅವರ ಕೆಲವೊಂದು ಬರಹ ಓದುತ್ತಿದ್ದರೆ ಇದೇನೋ ಸ್ವಾತಂತ್ರ್ಯಪೂರ್ವದ ಅಸ್ಪ್ರಷ್ಯತೆ ಅಳಿಯುವ ಮೊದಲಿನ ಕಥೆ ಇರಬಹುದೋ ಎಂದು ಭಾಸವಾಗುತ್ತಿದ್ದು ಪೂರ್ಣ ಓದಿದಾಗ ಇವೆಲ್ಲವೂ ಇನ್ನೂ ಅಸ್ತಿತ್ವದಲ್ಲಿವೆಯೋ? ಎಂಬ ದಿಗಿಲು ಉಂಟಾಗುತ್ತದೆ. ಅದಲ್ಲವಾದಲ್ಲಿಯೂ ಇಂದು ಸಮಾಜದಲ್ಲಿ ಜಾರಿಯಲ್ಲಿರುವ ದೇವಾಲಯದಲ್ಲಿನ ಮಡೆಸ್ನಾನ ಪದ್ಧತಿ ಅಥವಾ ಪಂಕ್ತಿ ಬೇಧ ಪದ್ಧತಿಯು ಮುಸಲ್ಮಾನರ ಕುಮ್ಮಕ್ಕಿನಿಂದ ಇರಲಾರದು ತಾನೆ? ಅಥವಾ ಇದಕ್ಕೂ ನಿಮ್ಮ ಆರೋಪದ ಗಲ್ಫ್ ಭಯೋತ್ಪಾದನೆ ಕೈವಾಡವಿದೆಯೋ? ಆದ್ದರಿಂದ ನೀವು ನನ್ನ ಬರಹಕ್ಕೆ ನೀವು ನಾವು ಹಿಂದೂ ಮುಸ್ಲಿಂ ಎಂದೆಲ್ಲಾ ಗಿರಕಿ ಹೊಡೆಯದೆ ಸಮಾಜದ ಕೊಳಕನ್ನು ತಿದ್ದಲು ಎಲ್ಲರೂ ಶ್ರಮಿಸೋಣ ಅದು ಭಾರತೀಯ ಮುಸ್ಲಿಂ ಸಮಾಜದಲ್ಲಿದ್ದರೆ ಅದರ ಬಗ್ಗೆಯೂ ಬರೆಯಿರಿ. ಜಾತ್ಯತೀತ ನಿಲುವಿನ ವರ್ತಮಾನ ಖಂಡಿತಾ ಪ್ರಕಟಿಸುತ್ತದೆ ಎಂಬ ವಿಶ್ವಾಸ ಹೊಂದಿರುವೆ. ಅದೂ ಚರ್ಚೆಗೊಳ್ಳಲಿ (ಈ ಮೊದಲು ಅದೆಷ್ಟೋ ಚರ್ಚೆಯಾಗಿದೆ) ಅದರ ಬಗ್ಗೆಯೂ ಸರಿಯಿದ್ದರೆ ಸಮರ್ಥಿಸೋಣ ತಪ್ಪಿದ್ದಲ್ಲಿ ವಿರೋಧಿಸೋಣ. ಸಮಾಜದಲ್ಲಿನ ಮೇಲು ಕೀಳು ವಿವಾದಗಳು ಇಲ್ಲಿ ಸಾಕಷ್ಟು ಚರ್ಚೆಯಾಗಿದೆ. ಅದರ ಬಗ್ಗೆ ಸನ್ಮಾನ್ಯ ಶ್ರೀಧರ ಪ್ರಭುಗಳು ಬರೆದಾಗ ಒಂದು ನೋಟ ಜೀವಿಯವರು ಬರೆದರೆ ಇನ್ನೊಂದು ನೋಟ AK kukkaje ಯ ಪ್ರತಿಕ್ರಿಯೆಯಾದಲ್ಲಿ ಮಗದೊಂದು ವ್ಯಾಖ್ಯಾನ ಬೇಡ. ಒಳಿತಿನಲ್ಲಿ ಎಲ್ಲರೂ ಸಹಕರಿಸೋಣ ಮೊದಲು ನಿಮ್ಮ ಪೂರ್ವಗ್ರಹ ಕನ್ನಡಕವನ್ನು ತೆಗೆದಿರಿಸಿರಿ ಎಲ್ಲವೂ ಸರಿಹೋಗುವುದು

    Reply

Leave a Reply

Your email address will not be published. Required fields are marked *