Daily Archives: August 21, 2015

ಆರ್. ಎಲ್. ಜಾಲಪ್ಪಗೆ ‘ಅರಸು ಪ್ರಶಸ್ತಿ’ ಎಂಬ ವ್ಯಂಗ್ಯ

                                                                                                       ಬೆಳಚಿಕ್ಕನಹಳ್ಳಿ ಶ್ರೀನಾಥ್

ಆರ್.ಎಲ್.ಜಾಲಪ್ಪ… ರಾಜಕಾರಣದಲ್ಲಿರುವವರು ಹಾಗೂ ರಾಜ್ಯದ ಜನ ಈ ಹೆಸರನ್ನು ಬಹುತೇಕ ಮರೆತೇಹೋಗಿದ್ದಾರೆ. ಈಗ ಕರ್ನಾಟಕ ಸರ್ಕಾರ 2015ನೇ ಸಾಲಿನ ದೇವರಾಜ ಅರಸು ಪ್ರಶಸ್ತಿಯನ್ನು ಜಾಲಪ್ಪನವರಿಗೆ ನೀಡಿದೆ. ಜಾಲಪ್ಪ ಅವರ ರಾಜಕೀಯ ಶೈಲಿ ಹಾಗೂ ಸಾಮಾಜಿಕ ನ್ಯಾಯದ ಹಾದಿಯಲ್ಲಿ ಇವರು ಮೂಡಿಸಿದ ಹೆಜ್ಜೆ ಗುರುತುಗಳೇನು ಎನ್ನುವ ಬಗ್ಗೆ ಇದು ಹೊಸ ಚರ್ಚೆಗೆ ಕಾರಣವಾಗಿದೆ.

ಆರ್.ಎಲ್.ಜಾಲಪ್ಪ ಮೂಲತಃ ಬೆಂಗಳೂರಿಗೆ ಅಂಟಿಕೊಂಡಂತಿರುವ ದೊಡ್ಡಬಳ್ಳಾಪುರ ತಾಲ್ಲೂಕಿನವರು; ಕ್ರಾಂತಿರಂಗದ ಮೂಲಕ ರಾಜಕಾರಣ ಆರಂಭಿಸಿದರೂ ಅಲ್ಪಕಾಲದಲ್ಲಿಯೇ ಜನತಾ ಪಕ್ಷಕ್ಕೆ ನೆಗೆದರು. ನಂತರ ಜನತಾ ದಳದ ಜೊತೆ ಗುರುತಿಸಿಕೊಂಡರು. ಅಲ್ಲಿಯೂ ನಿಲ್ಲದೇ ಕಾಂಗ್ರೆಸ್ ಸೇರಿದರು. ಈ ಎಲ್ಲ ಪಕ್ಷಗಳಿಂದಲೂ ಶಾಸಕರಾಗಿ, ಮಂತ್ರಿಯಾRLJಗಿ ಅಧಿಕಾರ ಅನುಭವಿಸಿದರು. ಸತತ ನಾಲ್ಕು ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. ರಾಜ್ಯದಲ್ಲಿ ಸಹಕಾರ, ಕಂದಾಯ ಹಾಗೂ ಗೃಹ ಸಚಿವರಾಗಿ; ಕೇಂದ್ರದಲ್ಲಿ ದೇವೇಗೌಡ ಹಾಗೂ ಗುಜ್ರಾಲ್ ಸಂಪುಟಗಳಲ್ಲಿ ಜವಳಿ ಸಚಿವರಾಗಿ ಕೆಲಸ ಮಾಡಿದವರು ಜಾಲಪ್ಪ.

ಒಂದು ಕಾಲದಲ್ಲಿ ರಾಜ್ಯ ರಾಜಕಾರಣದ ‘ಶಕ್ತಿ ಮೂಲ’ ಆಗಿದ್ದದ್ದು ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳು. ಈ ಟ್ರೆಂಡ್ ಅನ್ನು ಅತ್ಯಂತ ಕ್ಷಿಪ್ರವಾಗಿ ಗ್ರಹಿಸಿದ ಜಾಲಪ್ಪ ರಾಜ್ಯದ ಪ್ರಮುಖ ಕ್ಯಾಪಿಟೇಷನ್ ಕುಳವಾದರು; ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಿದರು. ದಶಕಗಳ ಕಾಲ ಅವಿಭಜಿತ ಕೋಲಾರ ಜಿಲ್ಲೆಯನ್ನು ಆಳಿದರು. ಇದೆಲ್ಲದರಿಂದ ಜಾಲಪ್ಪನವರ ಸ್ವಂತದ ಅಭಿವೃದ್ಧಿಯೇನೋ ಚೆನ್ನಾಗಿಯೇ ಆಗಿದೆ. ಕೋಲಾರ, ದೊಡ್ಡಬಳ್ಳಾಪುರ ಮುಂತಾದೆಡೆ ಇವರ ಒಡೆತನದ ವೃತ್ತಿಪರ ಕಾಲೇಜುಗಳು ತಲೆಯೆತ್ತಿವೆ. ಅಲೀಪುರ ಸೇರಿದಂತೆ ಹಲವು ಕಡೆ ಇವರ ಮಾಲೀಕತ್ವದ ಎಸ್ಟೇಟ್ಗಳಿವೆ. ಆದರೆ, ಇವರು ಪ್ರತಿನಿಧಿಸುತ್ತಿದ್ದ ಚಿಕ್ಕಬಳ್ಳಾಪುರ ಕ್ಷೇತ್ರ ಮಾತ್ರ ಇವತ್ತು ಪಾತಾಳಕ್ಕೆ ಕುಸಿದಿದೆ. ಒಂದು ಕಾಲದಲ್ಲಿ ಮಲೆನಾಡಿನಂತೆ ಹಸಿರು ಚಿಮ್ಮುತ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಚಿಕ್ಕಬಳ್ಳಾಪುರದಂಥ ತಾಲ್ಲೂಕುಗಳು ಕೂಡ ಇವತ್ತು ಬೆಂಗಾಡಿನಂತಾಗಿಬಿಟ್ಟಿವೆ. ನೀರಾವರಿ ವ್ಯವಸ್ಥೆ ಸರ್ವನಾಶವಾಗಿದೆ. ಅಂತರ್ಜಲ ಪಾತಾಳ ಮುಟ್ಟಿದೆ. ಜಿಲ್ಲೆಯ ನೂರಾರು ಹಳ್ಳಿಗಳಿಗೆ ಟ್ಯಾಂಕರ್ಗಳಲ್ಲಿ ನೀರು ಪೂರೈಸಲಾಗುತ್ತಿದೆ. ಹೈನುಗಾರಿಕೆ, ರೇಷ್ಮೆ ಕೃಷಿ ಮಾಡುವವರು ದಿಕ್ಕೆಟ್ಟಿದ್ದಾರೆ. ಜಿಲ್ಲೆಯ ರೈತರಿಗೆ ಆಸರೆಯಾಗಿದ್ದ ಗೌರಿಬಿದನೂರಿನ ಸಿರಿಗುಪ್ಪ ಸಕ್ಕರೆ ಕಾರ್ಖಾನೆಯಂಥ ಹಲವು ಉದ್ದಿಮೆಗಳು ಬಂದ್ ಆಗಿವೆ. ಅವುಗಳಿಂದ ಬರಬೇಕಿದ್ದ ಬಾಕಿಗಾಗಿ ದಶಕಗಳಿಂದಲೂ ಹೋರಾಡಿ ಹೋರಾಡಿ ರೈತರು ಹೈರಾಣಾಗಿಹೋಗಿದ್ದಾರೆ. ದೊಡ್ಡಬಳ್ಳಾಪುರದ ಕೈಮಗ್ಗ ನೇಕಾರರು ಆತ್ಮಹತ್ಯೆಯ ಹಾದಿಯಲ್ಲಿದ್ದಾರೆ. ಇವೆಲ್ಲವುಗಳಲ್ಲಿ ಜಾಲಪ್ಪನವರ ದಶಕಗಳ ಅಧಿಕಾರದ ಕೊಡುಗೆಯೂ ದೊಡ್ಡದಾಗಿದೆ.

ಇನ್ನು ಸಾಮಾಜಿಕ ನ್ಯಾಯಕ್ಕೆ ಇವರು ಸಲ್ಲಿಸಿದ ಕೊಡುಗೆಯೇನು ಎನ್ನುವುದನ್ನು ನೋಡೋಣ. ಜಾಲಪ್ಪ ಹಿಂದುಳಿದ ವರ್ಗದಿಂದ ಬಂದವರು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಕ್ಕಲಿಗರು ಹಾಗೂ ಬಲಿಜರು ನಿರ್ಣಾಯಕ ಮತಶಕ್ತಿ. ಆದರೆ, ಮತದಾರರು ಜಾತಿಗೀತಿ ಯಾವುದನ್ನೂ ನೋಡದೇ ಜಾಲಪ್ಪ ಅವರನ್ನು ನಿರಂತರವಾಗಿ ಗೆಲ್ಲಿಸುತ್ತಾ ಹೋದರು. ಒಕ್ಕಲಿArasu-awardಗ ಸಮುದಾಯದ ಸಿ.ಭೈರೇಗೌಡರು ಜಾಲಪ್ಪನವರ ವಿರುದ್ಧ ಸ್ಪರ್ಧಿಸಿದಾಗಲೂ ಜನ ಜಾಲಪ್ಪನವರನ್ನೇ ಗೆಲ್ಲಿಸಿ ತಮ್ಮ ಜಾತ್ಯತೀತ ಮನೋಭಾವ ತೋರಿದ್ದರು. ಹೀಗೆ ಸಾಮಾನ್ಯ ಮತದಾರರು ತೋರಿದ ಪ್ರಬುದ್ಧತೆಯನ್ನಾಗಲಿ, ಸಾಮಾಜಿಕ ನ್ಯಾಯದ ಮನೋಭಾವವನ್ನಾಗಲಿ ಜಾಲಪ್ಪ ತೋರಲಿಲ್ಲ. ಜಿಲ್ಲೆಯಲ್ಲಿ ಸಾದಗೌಡರು, ಜೈನರು, ಬಲಿಜರು, ಮುಸ್ಲಿಮರು ಹೀಗೆ ಅನೇಕ ಅವಕಾಶವಂಚಿತ ಜಾತಿಗಳಿವೆ. ಈ ಯಾವ ಜಾತಿಯ ಯಾವೊಬ್ಬ ನಾಯಕನನ್ನೂ ಜಾಲಪ್ಪನವರು ಬೆಳೆಯಗೊಡಲಿಲ್ಲ. ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಜಾಲಪ್ಪನವರು ಬೆಳೆಸಿದ ಒಬ್ಬನೇ ಒಬ್ಬ ಹಿಂದುಳಿದ ವರ್ಗದ ಶಾಸಕ ಅಥವಾ ಸಂಸದ ಇವತ್ತು ಕಾಣಸಿಗುವುದಿಲ್ಲ.
ಇನ್ನು ತಾವು ಕಾಂಗ್ರೆಸ್ನಲ್ಲಿದ್ದುಕೊಂಡು, ತಮ್ಮ ಮಗ ನರಸಿಂಹಸ್ವಾಮಿಯನ್ನು ಬಿಜೆಪಿಗೆ ಕಳಿಸಿ ಬೃಹನ್ನಾಟಕವನ್ನು ಆಡಿದವರು ಜಾಲಪ್ಪ. ಇವರು ಹಾಗೂ ಇವರ ಮಕ್ಕಳ ಪಾಳೇಗಾರಿಕೆಯ ಕಥೆಗಳಂತೂ ಜನರ ನಡುವೆ ದಂತಕಥೆಗಳಂತೆ ಚಾಲ್ತಿಯಲ್ಲಿವೆ. ತಮ್ಮ ಸಾಮಾಜಿಕ ಜವಾಬ್ದಾರಿ ಮರೆತು ವೈಯಕ್ತಿಕ ಅಭಿವೃದ್ಧಿಯ ನಾಗಾಲೋಟದಲ್ಲಿ ತೊಡಗಿದ್ದ ಜಾಲಪ್ಪ, ವಕೀಲ ರಶೀದ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಅದರಿಂದ ಗೃಹಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕಾಗಿ ಬಂದದ್ದು ಕರ್ನಾಟಕ ರಾಜಕಾರಣದ ಒಂದು ಪ್ರಮುಖ ವಿದ್ಯಮಾನ.
ಈ ಯಾವುದನ್ನು ಬೇಕಾದರೂ ಕರ್ನಾಟಕದ ಜನ ಕ್ಷಮಿಸಬಲ್ಲರೇನೋ. ಆದರೆ, ದೇಶದಲ್ಲೇ ಮಾದರಿ ವ್ಯವಸ್ಥೆ ಎನಿಸಿದ್ದ ರಾಜ್ಯದ ಸಿಇಟಿ ವ್ಯವಸ್ಥೆಯನ್ನು ನಾಶ ಮಾಡಿದ್ದನ್ನು ಮಾತ್ರ ನಾಡಿನ ಜನ ಕ್ಷಮಿಸಲಾರರು. ರಾಜ್ಯದ ಬಡವರು, ಹಳ್ಳಿಗಾಡಿನ ಜನರ ಪೈಕಿ ಕೆಲವರಾದರೂ ಇಂಜಿನಿಯರ್ಗಳು, ವೈದ್ಯರು ಆಗುವುದಕ್ಕೆ ಸಾಧ್ಯವಾಗಿದ್ದು ಆಗಿನ ಸಿಐಟಿ ವ್ಯವಸ್ಥೆಯಿಂದ. ಅಂಥದ್ದರಲ್ಲಿ ಸುಪ್ರೀಂ ಕೋರ್ಟಿನ ನೆಪ ಹಿಡಿದುಕೊಂಡು ತಮ್ಮದೇ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಸಿಇಟಿಗೆ ಸೆಡ್ಡು ಹೊಡೆದವರು ಜಾಲಪ್ಪ. ಅಷ್ಟೇ ಅಲ್ಲ, ಇವರ ಅಧ್ಯಕ್ಷತೆಯಲ್ಲೇ ಕಾಮೆಡ್ ಕೆ ರೂಪು ಪಡೆಯಿತು. ಮುಂದೆ ಇಡೀ ಸಿಇಟಿ ವ್ಯವಸ್ಥೆಯೇ ದಿಕ್ಕುತಪ್ಪಿತು; ಗೊಂದಲದ ಗೂಡಾಗಿ rljಪರಿವರ್ತನೆಯಾಯಿತು . ಕೊನೆಗೆ ಸಿಇಟಿಗೆ ಪರ್ಯಾಯವಾಗಿ ಕಾಮೆಡ್ ಕೆ ಕೂಡ ಪ್ರತ್ಯೇಕ ಪ್ರವೇಶ ಪ್ರಕ್ರಿಯೆಯನ್ನೇ ನಡೆಸತೊಡಗಿತು. ಅದರ ಫಲವಾಗಿ ಇವತ್ತು ಸರ್ಕಾರಿ ಕೋಟಾದ ಇಂಜಿನಿಯರಿಂಗ್ ಸೀಟುಗಳಿಗೂ ಕೂಡ ವಿದ್ಯಾರ್ಥಿಗಳು ಲಕ್ಷ ಲಕ್ಷ ವ್ಯಯಿಸಬೇಕಾಗಿ ಬಂದಿದೆ. ಇನ್ನು ಸಿಇಟಿ ಸೀಟು ಸಿಕ್ಕರೂ ಮೆಡಿಕಲ್ ಓದುವುದು ಬಡವರ ಪಾಲಿಗೆ ಕನಸಿನ ಮಾತಾಗಿದೆ. ತಮ್ಮ ಸ್ವಾರ್ಥಕ್ಕಾಗಿ, ಕ್ಯಾಪಿಟೇಷನ್ ಹಣಕ್ಕಾಗಿ ಬಡವರ ಪರವಾಗಿದ್ದ ಒಂದು ಅತ್ಯುತ್ತಮ ಶೈಕ್ಷಣಿಕ ವ್ಯವಸ್ಥೆಯನ್ನೇ ಹಾಳು ಮಾಡಿದವರು ‘ಸಾಮಾಜಿಕ ನ್ಯಾಯದ ಹರಿಕಾರ’ರಾದ ಸನ್ಮಾನ್ಯ ಜಾಲಪ್ಪ.

ಹೌದು.. ಕೆಲವರು ಜಾಲಪ್ಪನವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎನ್ನುವಂತೆ ಮಾತಾಡುವುದನ್ನು ನಾನು ಕೇಳಿದ್ದೇನೆ. ಅದನ್ನು ಸಮರ್ಥಿಸುವಂತೆ ಸಿದ್ದರಾಮಯ್ಯನವರ ಸರ್ಕಾರ ಜಾಲಪ್ಪನವರಿಗೆ ಈಗ ದೇವರಾಜ ಅರಸು ಪ್ರಶ ಸ್ತಿಯನ್ನು ಘೋಷಿಸಿದೆ. ದಿವಂಗತ ದೇವರಾಜ ಅರಸು ಅವರನ್ನು ಅವರ ಸಾಮಾಜಿಕ ನ್ಯಾಯದ ಕೆಲಸಗಳಿಗಾಗಿ ನೆನಪಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ತನ್ನ ಜೀವಿತ ಕಾಲದಲ್ಲಿಯೇ ಜನರಿಂದ ವಿಸ್ಮೃತಿಗೆ ಗುರಿಯಾಗಿರುವ ರಾಜಕಾರಣಿಯೊಬ್ಬರಿಗೆ ಅವರ ಹೆಸರಿನ ಪ್ರಶಸ್ತಿ ನೀಡಿರುವುದು ದೊಡ್ಡ ವ್ಯಂಗ್ಯವೇ ಸರಿ.