ಕೊಳ್ಳಿದೆವ್ವ ಮತ್ತು ವರಮಹಾಲಕ್ಷ್ಮೀ ಎಂಬ ಸಮೂಹ ಸನ್ನಿ…

                                                                                                                                                -ಜೀವಿ

ನನಗಾಗ ಹತ್ತು-ಹನ್ನೊಂದು ವರ್ಷ ವಯಸ್ಸು. ಶಾಲೆಗೆ ರಜೆ ಇದ್ದರೆ ದನಕರುಗಳೊಂದಿಗೆ ಬೆಟ್ಟ ಹತ್ತುವ ಕೆಲಸ ಕಾಯಂ. ವಾರವಿಡಿ ಶಾಲೆಯಲ್ಲಿ ಬೆರೆಯುತ್ತಿದ್ದ ಗೆಳೆಯರು ರಜೆ ದಿನ ಆಡು, ಕುರಿ, ದನ ಮತ್ತು ಎಮ್ಮೆಯೊಂದಿಗೆ ಬೆಟ್ಟ ಸೇರುತ್ತಿದ್ದೆವು. ತೋಳ, ಕಿರುಬನ ಕಾಟದ ನಡುವೆ ದನ-ಕರುಗKollidevvaಳನ್ನು ಜೋಪಾನ ಮಾಡುವ ಜತೆಗೆ ಆಡಿ-ನಲಿದು ತಲೆಗೊಂದು ಹೊರೆಯಷ್ಟು ಪುಳ್ಳೆ ಸೌದೆಯೊಂದಿಗೆ ಮನೆ ಸೇರುವುದು ರಜೆ ಕಾಲದ ದಿನಚರಿ.

ಅದೊಂದು ರಜೆ ದಿನದ ದಿನಚರಿ ಮುಗಿದು ಇಳಿಹೊತ್ತಿಗೆ ಬೆಟ್ಟ ಇಳಿದು ದನಕರುಗಳೊಂದಿಗೆ ಸೌದೆ ಹೊತ್ತು ಮನೆ ಮುಟ್ಟುವಷ್ಟರಲ್ಲಿ ನಸುಗತ್ತಲು ಆವರಿಸಿತ್ತು. ಮನೆ ಹಿಂದಿನ ಹಿತ್ತಲಿಗೆ ಸೌದೆ ಹಾಕಿ ಕೊಟ್ಟಿಗೆಗೆ ದನಕರುಗಳನ್ನು ಕಟ್ಟಿ ಮನೆಗೆ ಬಂದು ಕೈಕಾಲು ತೊಳೆದು ಬೆಳಗ್ಗೆ ಉಳಿದಿದ್ದ ರೊಟ್ಟಿ ಚೂರು ತಿಂದು ಬೀದಿಗೆ ಬಂದೆ.

ಅಷ್ಟರಲ್ಲಿ ಎಲ್ಲರು ಕೋಟೆ ಕಡೆಗೆ ಓಡುತ್ತಿದ್ದರು. ಕೋಟೆ ಎಂದರೆ ಚಿತ್ರದುರ್ಗದಂತ ದೊಡ್ಡ ಕೋಟೆ ಅಲ್ಲ. ಸುಮಾರು ಒಂದೂವರೆ ಗುಂಟೆಯಷ್ಟು ಜಾಗಕ್ಕೆ ಕಲ್ಲಿನಲ್ಲಿ ಕಟ್ಟಿದ ಕಾಂಪೌಡ್ನ ಒಳಭಾಗಕ್ಕೆ ಮಣ್ಣು ತುಂಬಿಸಿ ನಾಲ್ಕೈದು ಅಡಿ ಎತ್ತರ ಮಾಡಲಾಗಿದೆ. ಅದರ ಮೇಲೆ ಚಿಕ್ಕದೊಂದು ಗುಡಿ ಇದೆ. ಅದನ್ನೇ ಹಿಂದಿನಿಂದ ಕೋಟೆ ಎಂದು ಕರೆಯಲಾಗುತ್ತಿದೆ.

ಕೋಟೆ ಕಡೆಗೆ ಓಡುತ್ತಿದ್ದ ಊರಿನವರನ್ನು ನಾನೂ ಹಿಂಬಾಲಿಸಿದೆ. ಅದಾಗಲೇ ಸೇರಿದ್ದ ಜನ ಬೆಟ್ಟದ ಕಡೆಗೆ ಮುಖ ಮಾಡಿದ್ದರು. ಅವರ ಹಿಂಭಾಗ ಮಾತ್ರ ಕಾಣುತ್ತಿತ್ತು. ಮುಂದೆ ಏನು ನಡೆಯುತ್ತಿದೆ ಎಂಬುದು ಗೊತ್ತಾಗಲಿಲ್ಲ. ನನ್ನೊಂದಿಗೆ ಮಹೇಶ, ರಾಜ, ಮಂಜ, ರವಿ, ಗೋವಿಂದ, ಪಾಪಕ್ಕ, ಮಂಜಿ, ಚಂದ್ರ, ಹೇಮಾ, ನಾಗ ಎಲ್ಲರು ಏನೂ ಕಾಣದೆ ನೋಡಲು ಎಗರುತ್ತಿದ್ದರು. ಜನರ ಮಧ್ಯ ನುಸುಳಿ ಯತ್ನಿಸಿದ ನನಗೆ ಜವರಣ್ಣ ತಲೆಗೆ ಬಾರಿಸಿ ಮಕ್ಕಳು ನೋಡಬಾರದು ಹೋಗು ಎಂದು ಗದರಿಸಿದ.

’ಕೊಳ್ಳಿ ದೆವ್ವ ಕುಣಿತೈತೆ ಮಕ್ಕಳೆಲ್ಲ ಮನೆಗೆ ಹೋಗಿ, ಬಂದ್ಬಿಟ್ರು ದೊಡ್ಡ ಮನುಷ್ಯರು’ ಎಂದು ಕರಿಯಣ್ಣ ಕೋಲು ಹಿಡಿದು ಅಬ್ಬರಿಸಿದ. ಚದುರಿದಂತೆ ಎದ್ದು ಬಿದ್ದು ಓಡಿದೆವು. ಕುತೂಹಲ ತಡೆಯಲಾಗದೆ ಮಕ್ಕಳ ಪೈಕಿ ನಾನು, ರಾಜ ಇಬ್ಬರು ಮತ್ತೊಮ್ಮೆ ಒಳ ನುಗ್ಗಲು ಯತ್ನಿಸಿದೆವು. ಹೇಗೋ ಕಷ್ಟಪಟ್ಟು ನಾನಂತೂ ಮುಂದೆ ನುಗ್ಗಿದೆ. ರಾಜನಿಂದ ಅದು ಸಾಧ್ಯವಾಗಲಿಲ್ಲ.
ಲಕ್ಕಜ್ಜನ ಹೆಂಡ್ತಿ ಪುಟ್ಟಕ್ಕೆ ಬೆಟ್ಟದ ಕಡೆಗೆ ಕೈ ತೋರಿಸಿ ಕೊಳ್ಳಿದೆವ್ವ ತೋರಿಸುತ್ತಿದ್ದಳು. ಕೆಲವರಿಗೆ ಇನ್ನೂ ಅದು ಕಂಡಿರಲಿಲ್ಲ, ನನ್ನ ಕೈ ನೇರದಲ್ಲಿ ನೋಡು ಎಂದು ಕಾಣದೆ ಪರದಾಡುತ್ತಿದ್ದವರನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ತೊರಿಸುತ್ತಿದ್ದಳು. ನಾನೇ ಮೊದಲು ನೋಡಿ ಎಲ್ಲರನ್ನು ಕರೆದು ತೋರಿಸಿದೆ ಎಂದು ಬೀಗುತ್ತಿದ್ದಳು. ದೂರಕ್ಕೆ ಕಾಣದಿದ್ದರೂ ಎಲ್ಲರೂ ನೆಟ್ಟಿದ್ದ ದೃಷ್ಟಿ ಗಮನಿಸಿ ನಾನು ದೃಷ್ಟಿ ನೆಟ್ಟೆ. ಬೆಟ್ಟದ ಒಂದು ಭಾಗದಲ್ಲಿ ದೀಪದಂತೆ ಬೆಂಕಿ ಉರಿಯುತ್ತಿತ್ತು. ಅದು ಅತ್ತಿತ್ತ ಕುಣಿದಂತೆ ಕಾಣಿಸುತ್ತಿತ್ತು.

ಆ ತನಕ ಕೊಳ್ಳಿ ದೆವ್ವದ ಕುಣಿತದ ಬಗ್ಗೆ ಕೇಳಿದ್ದ ನಾನೂ ಅದನ್ನು ಕಣ್ತುಂಬಿಕೊಂಡೆ. ಯಾಲಕ್ಕಿಗೌಡರ ಹೊಲದ ಬಳಿಯೇ ಕುಣಿತಾ ಇದೆ ನೋಡಿ, ಗೌಡನಿಗೆ ಏನೋ ರಾವು ಕಾದೈತೆ ಎಂದಳು ಪುಟ್ಟಕ್ಕ. ಆ ತನಕ ಕೊಳ್ಳಿದೆವ್ವವೇ ಎಂದು ನಂಬಿದ್ದ ನಾನು. ಯಾಲಕ್ಕಿಗೌಡನ ಹೊಲದಲ್ಲಿದೆಯೇ? ಎಂದು ಪುಟ್ಟಕ್ಕನನ್ನು ಕೇಳಿದೆ. ಆವರೆಗೆ ನಾನು ಮುಂದೆ ಬಂದು ಕೊಳ್ಳಿದೆವ್ವ ನೋಡುತ್ತಿದ್ದನ್ನು ದೊಡ್ಡವರ್ಯಾರೂ ಗಮನಿಸಿರಲಿಲ್ಲ. ನೀನ್ಯಾವಗ್ ಮುಂದೆ ಬಂದೆ ಎಂದ ಸಿಂಗಾಪುರದ ಚೌಡಿ, ಜುಟ್ಟು ಹಿಡಿದು ಹಿಂದಕ್ಕೆ ಎಳೆದು ತಲೆಗೊಮ್ಮೆ ಮೊಟಕಿ ಹೋಗಲೇ ಮನೆಗೆ ಎಂದು ಗದರಿಸಿ ಮತ್ತೆ ಮುಂದೆ ಹೋಗಿ ನಿಂತಳು.

ಅಯ್ಯೋ ಅದು ಕೊಳ್ಳಿದೆವ್ವ ಅಲ್ಲ, ಯಾಲಕ್ಕಿಗೌಡರ ಹೊಲದಲ್ಲಿ ಮಂದೆ ಕುರಿಯವರು ಕ್ಯಾಂಪ್ ಹಾಕಿದ್ದಾರೆ. ಅವರೆKollidevva-1ಲ್ಲೋ ಬೆಂಕಿ ಹಾಕಿಕೊಂಡಿರಬೇಕು ಎಂದೆ. ಏಕೆಂದರೆ ಯಾಲಕ್ಕಿಗೌಡರ ಹೊಲದಲ್ಲಿ ಮಂದೆ ಕುರಿ ಬೀಡು ಬಿಟ್ಟಿರುವುದು ನನಗೆ ಖಾತ್ರಿ ಇತ್ತು.

ಅಂದು ಸಂಜೆ ಸೌದೆ ಹೊತ್ತು ನಾನು ಬೆಟ್ಟದಿಂದ ಇಳಿಮುಖವಾಗಿದ್ದರೆ, ಬೆಟ್ಟದ ಕಡೆಗೆ ಕುರಿಗಳ ಹಿಂಡು ಮೇಲ್ಮುಖವಾಗಿ ಹೊರಟಿತ್ತು. ಬರಿಗಾಲಲ್ಲಿ ನೆತ್ತಿ ಉರಿ ಬರುವಷ್ಟು ಹೊರೆಭಾರದ ಸೌದೆ ಹೊತ್ತಿದ್ದರೂ ನನಗೆ ಕುತೂಹಲ ಕಾಡಿತು. ಸಂಜೆ ಮನೆ ಕಡೆಗೆ ಹೊರಡುವ ಬದಲು ಬೆಟ್ಟದ ಕಡೆಗೆ ಮುಖ ಮಾಡಿರುವ ಕಾರಣ ತಿಳಿದುಕೊಳ್ಳಲು ಸೌದೆ ಹೊತ್ತುಕೊಂಡೆ ನಮ್ಮೂರಿನವರಲ್ಲದ ಕುರಿಗಳ ಮಾಲೀಕರನ್ನು ಮಾತನಾಡಿಸಿ ಸಮಾಚಾರ ವಿಚಾರಿಸಿದೆ.

ನಾವು ತುಮಕೂರಿನ ಕಡಿಯವರು ಮಂದೆ ಕುರಿಯೊಂದಿಗೆ ಬಂದಿದ್ದೇವೆ. ಬೆಟ್ಟದ ಮೇಲಿರುವ ಯಲಕ್ಕಿಗೌಡರ ಹೊಲದಲ್ಲಿ ಮಂದೆ ಬಿಡಲು ಹೊರಟಿದ್ದೇವೆ ಎಂದು ಹೇಳಿದರು. ಮಂದೆ ಕುರಿ ಎಂದರೆ ಇಡೀ ರಾತ್ರಿ ರೈತರ ಹೊಲದಲ್ಲಿ ಕುರಿಗಳನ್ನು ಕೂಡಿ ಹಾಕಿ ಹೊಲದ ಮಾಲೀಕರಿಂದ ಇಂತಿಷ್ಟು ಹಣ ಪಡೆಯುತ್ತಾರೆ. ಕುರಿಗೊಬ್ಬರ ಬಿದ್ದರೆ ಹೊಲದಲ್ಲಿ ಪೈರು ಕಚ್ಚಲಿದೆ ಎಂಬ ಕಾರಣಕ್ಕೆ ಬೇಸಿಗೆಯಲ್ಲಿ ರೈತರು ಹೊಲಗಳಲ್ಲಿ ಮಂದೆ ಕುರಿಗಳನ್ನು ಒಂದು ರಾತ್ರಿ ಕೂಡಿ ಹಾಕಿಸುವುದು ಸಾಮಾನ್ಯ. ಗೊಂದಲ ಪರಿಹರಿಸಿಕೊಂಡ ನಾನು ಮನೆ ಕಡಿ ಹೆಜ್ಜೆ ಹಾಕಿದ್ದೆ. ಹಾಗಾಗಿ ನನಗೆ ಕೊಳ್ಳಿದೆವ್ವ ಅಲ್ಲ ಎಂಬುದು ಖಚಿತವಾಗಿ ಗೊತ್ತಿತ್ತು.

ಕುರಿಗಳನ್ನು ಮಧ್ಯಕ್ಕೆ ಕೂಡಿ ಹಾಕಿ ಎರಡು ಕಡೆ ಸಣ್ಣಗೆ ಬೆಂಕಿ ಹಾಕಿದ್ದರಿಂದ ಅಲ್ಲೊಮ್ಮೆ ಇಲ್ಲೊಮ್ಮೆ ಬೆಂಕಿ ಕಾಣಿಸಿಕೊಂಡು ಅತ್ತಿತ್ತ ಅಡ್ಡಾಡಿದಂತೆ ಕಾಣುತ್ತಿತ್ತು. ನಾನು ಏನು ಹೇಳಿದರೂ ಕೇಳಿಸಿಕೊಳ್ಳದ ಜನ ಕೊಳ್ಳಿದೆವ್ವವೇ ಎಂದು ವಾದಿಸಿದರು. ಸಮೂಹ ಸನ್ನಿಗೆ ಒಳಗಾಗಿದ್ದ ಜನ ನಾನು ಹೇಳಿದ ಸತ್ಯ ಕೇಳಿಸಿಕೊಳ್ಳುವ ಪ್ರಯತ್ನವನ್ನೇ ಮಾಡಲಿಲ್ಲ. ಏನಾದ್ರು ಮಾಡಿಕೊಳ್ಳಿ ಎಂದು ಮನೆ ಹಾದಿ ಹಿಡಿದೆ. ಇಡೀ ಊರಿಗೆ ಕೊಳ್ಳಿದೆವ್ವ ತೋರಿಸಿದ ಕೀರ್ತಿಗೆ ಪುಟ್ಟಕ್ಕ ಪಾತ್ರಳಾದಳು.

ಆದೇ ರೀತಿಯ ಸಮೂಹ ಸನ್ನಿ ಈಗ ವರಮಹಾಲಕ್ಷ್ಮಿ ಹಬ್ಬದ ಕಡೆಗೆ ತಿರುಗಿದೆ. ಕೇವಲ ಹತ್ತು ವರ್ಷದ ಹಿಂದೆ ಒಂದೆರಡು ಜಾತಿಗೆ ಸೀಮಿತವಾಗಿದ್ದ ಈ ಹಬ್ಬ ಇಂದು ಯಾವ ಕೇರಿಯನ್ನು ಬಿಟ್ಟಿಲ್ಲ. ನಗರ ಮಾತ್ರವಲ್ಲದೇ ಗ್ರಾಮೀಣ ಪ್ರದೇಶಕ್ಕೂ ವಿಸ್ತಾರಗೊಂಡಿದೆ. ಪೈಪೋಟಿಯ ನಡುವೆ ಲಕ್ಷ್ಮಿ ಎಂದುಕೊಂಡಿರು ಕಳಸವನ್ನು ಅಲಂಕರಿಸಿ ಆರಾಧಿಸುತ್ತಿದ್ದಾರೆ. ಹಬ್ಬ ಆಚರಿಸದಿದ್ದರೆ ಅವಮಾನ ಆಗಲಿದೆ ಎನ್ನುವಷ್ಟರ ಮಟ್ಟಿಗೆ ಫ್ಯಾಷನ್ ರೂಪ ಪಡೆದುKollidevva-2ಕೊಂಡಿದೆ.

ಕಲ್ಲು, ಮರ, ಕಂಚು, ತಾಮ್ರ, ಹಿತ್ತಾಳೆಯಲ್ಲಿ ಮಾಡಿದ ವಿಗ್ರಹವನ್ನು ದೇವರೆಂದು ನಂಬಿ ಪೂಜಿಸಿದ ಜನ ಈ ಹಬ್ಬದ ಮೂಲಕ ಕಾಗದದ ತುಂಡಿನ ನೋಟನ್ನೂ ದೇವರು ಎಂದು ಪೂಜಿಸಲು ಶುರು ಮಾಡಿದ್ದಾರೆ. ಹಣದ ಬಗ್ಗೆ ಇರುವ ಜನರ ಹಪಾಹಪಿ ಎಷ್ಟೆಂಬುದಕ್ಕೆ ಈ ಹಬ್ಬ ಕಣ್ಣೆದುರು ವಿಸ್ತರಣೆಗೊಂಡಿರುವುದೇ ಸಾಕ್ಷಿ. ಕೊಳ್ಳಿದೆವ್ವ ನೋಡಲು ನಮ್ಮೂರಿನ ಜನ ಮುಗಿಬಿದ್ದಂತೆ ವರಮಹಾಲಕ್ಷ್ಮೀ ಹಬ್ಬದ ಆಚರಣೆಗೆ ಎಲ್ಲರೂ ಮುಗಿಬಿದ್ದಿದ್ದಾರೆ. ಕಾಯಕ ಮಾಡಿಯೋ, ಮಾಡದೆಯೋ ಲಕ್ಷ್ಮಿಯ ವರದಿಂದ ಹಣ ಸಂಪಾದನೆ ಆದರೆ ಸಾಕು ಎಂಬ ಮನಸ್ಥಿತಿ ಹೆಚ್ಚುತ್ತಿದೆ. ಇದು ಅಪಾಯಕಾರಿ!.

3 thoughts on “ಕೊಳ್ಳಿದೆವ್ವ ಮತ್ತು ವರಮಹಾಲಕ್ಷ್ಮೀ ಎಂಬ ಸಮೂಹ ಸನ್ನಿ…

  1. Girish, Bajpe

    ಉತ್ತಮ ಬರಹ! ಕೆಲವು ವರ್ಷಗಳ ಹಿಂದೆ ನಾವು (ದಕ್ಷಿಣ ಕನ್ನಡಿಗರು) ವರ ಮಹಾಲಕ್ಷ್ಮಿ ಪೂಜೆಯನ್ನು ಬರೇ ಸಿನೆಮಾಗಳಲ್ಲಷ್ಟೇ ನೋಡುತ್ತಿದ್ದೆವು. ಯಾರೂ ಆಚರಿಸುತ್ತಿದ್ದುದು ನಮಗೆ ಗೊತ್ತಿಲ್ಲ (ಬ್ರಾಹ್ಮಣ ರಲ್ಲಿ ಇದ್ದಿತ್ತಂತೆ – ಇತ್ತೀಚೆಗೆ ಗೊತ್ತಾಯಿತು). ಇತ್ತೀಚೆಗೆ ಅದು ಹೇಗೋ ಇಲ್ಲೂ ವ್ಯಾಪಕವಾಗಿ ಆಚರಿಸಲ್ಪಡುತ್ತಿದೆ (ಟಿ ವಿ ಧಾರಾವಾಹಿಗಳ ಪ್ರಭಾವವಿದ್ದರೂ ಇರಬಹುದು.. ಹಾಗಂತ ಓರ್ವ ಮಹಿಳೆ ಹೇಳಿಕೊಳ್ಳುತ್ತಿದ್ದರು) . ಕೆಲವರಿಗೆ ಸಾರ್ಥಕತೆ, ಕೆಲವರಿಗೆ ಸಮಾಧಾನ, ಕೆಲವರಿಗೆ ಕಿರಿಕಿರಿಯಾದರೆ ಇನ್ನೂ ಕೆಲವರಿಗೆ ಒಂದಷ್ಟು ಆದಾಯ.

    Reply
  2. timepasshumor

    ಸುಮಾರು ಐವತ್ತು ಅರುವತ್ತು ವರ್ಷಗಳ ಹಿಂದೆ ಸತ್ಯನಾರಾಯಣ ಪೂಜೆ ಬ್ರಾಹ್ಮಣರಲ್ಲೂ ಅಪರೂಪದ ಪೂಜೆಯಾಗಿತ್ತಂತೆ. ಹಾಗೆಯೇ ಸಾರ್ವಜನಿಕ ಸತ್ಯನಾರಾಯಣ ಪೂಜೆ ಮತ್ತು ಸಾರ್ವಜನಿಕ ಗಣೇಶೋತ್ಸವಗಳು ಕೂಡ. ಅದೇ ಬ್ರಾಹ್ಮಣರಲ್ಲಿ ಕಾಶೀ ಸಮಾರಾಧನೆ ಮತ್ತು ತಿರುಪತಿ ಸಮಾರಾಧನೆ (ಕಾಶಿಗೆ, ತಿರುಪತಿಗೆ ಹೋದವರು ಹಿಂತಿರುಗಿ ಬಂದು ಮಾಡುವ ವಿಧಿಗಳು)ಅಲ್ಲಲ್ಲಿ ನಡೆಯುತ್ತಿದ್ದವಂತೆ. ಈಗ ಸತ್ಯನಾರಾಯಣ ಪೂಜೆ ಎಲ್ಲೆಲ್ಲೂ ನಡೆಯುತ್ತಿದೆ, ಕಾಶಿ ಅಥವಾ ತಿರುಪತಿ ಸಮಾರಾಧನೆಗಳ ಹೆಸರೇ ಅಳಿದು ಹೋಗಿದೆ. ಹಿಂದೆ ಕಷ್ಟಕರ ಪ್ರಯಾಣದ ದಿನಗಳಲ್ಲಿ ಕಾಶಿಗೆ, ತಿರುಪತಿಗೆ ಹೋಗುವುದು ಬಹಳ ದೊಡ್ಡ ವಿಶೇಷ, ಇವತ್ತಲ್ಲ..ಇದು ಕಾರಣವಿರಲೂ ಬಹುದೇನೋ.. ಹೇಗೆ ಪೂಜೆ ಪುನಸ್ಕಾರಗಳು ಕೂಡ ಬದಲಾಗುವ ಜನಜೀವನದೊಂದಿಗೆ ಮಾರ್ಪಾಡು ಹೊಂದುತ್ತ ಹೋಗುತ್ತವೆ ಎಂಬುದು ಅಧ್ಯಯನಯೋಗ್ಯ ವಿಚಾರ ಅನ್ನಿಸುವುದಿಲ್ಲವೇ..!
    ಗೋಪೀನಾಥ ರಾವ್

    Reply

Leave a Reply

Your email address will not be published. Required fields are marked *