Monthly Archives: September 2015

ಆರೆಸ್ಸಸ್ : ಫ್ಯಾಸಿಸಂ ಪರವಾದ ಒಲವು ಮತ್ತು ಸಮರ್ಥನೆ

-ಬಿ.ಶ್ರೀಪಾದ ಭಟ್

ಈ ಆರೆಸ್ಸಸ್ ನ ಹುಟ್ಟೇ ಅತ್ಯಂತ ಕುತೂಹಲಕರ. ಇದಕ್ಕೆ ಬ್ರಾಹ್ಮಣ್ಯದ ಹಿನ್ನೆಲೆ ಇದೆ, ಹಿಂದೂ ರಾಷ್ಟ್ರೀಯತೆಯ ಹಿನ್ನಲೆ ಇದೆ, ರಾಜಕೀಯ ಹಿನ್ನಲೆ ಇದೆ, ಆರ್ಥಿಕ ಹಿನ್ನಲೆ ಇದೆ, ಧಾರ್ಮಿಕ  ಹಿನ್ನೆಲೆ ಇದೆ. 1930ರ ದಶಕದಲ್ಲಿ ತನ್ನದು ಒಂದು ಹಿಂದೂ ಸಾಂಸ್ಕೃತಿಕ ಪಕ್ಷ ಎಂದು ಬಣ್ಣಿಸಿಕೊಂಡಿದ್ದ ಆರೆಸ್ಸಸ್ ರಾಜಕೀಯಕ್ಕೂ ತನಗೂ ಸಂಬಂಧವಿಲ್ಲ ಎಂದು 1948ರ ದಶಕದಲ್ಲಿ ಆಗಿನ ಗೃಹ ಮಂತ್ರಿ ವಲ್ಲಭಾಯಿ ಪಟೇಲ್ ಅವರಿಗೆ ವಾಗ್ದಾನ ನೀಡಿತ್ತು. ಆದರೆ 2014ರ ಚುನಾವಣೆಯ ವೇಳೆಗೆ ಈ ವಾಗ್ದಾನವನ್ನು ಮುರಿದು ಸಕ್ರಿಯವಾಗಿ ಚುನಾವಣಾ ರಾಜಕೀಯದಲ್ಲಿ ಬಿಜೆಪಿ ಪರವಾಗಿ ಪಾಲ್ಗೊಂಡಿತ್ತು

ಈ ಮಧ್ಯದ ಸುಮಾರು 80 ವರ್ಷಗಳ ಕಾಲಘಟ್ಟದ ವಿಶ್ಲೇಷಣೆ ಮಾಡಿದಾಗ 1925-1952ರವರೆಗೆ ಸುಮಾರು ಎರಡೂವರೆ ದಶಕಗಳ ಕಾಲ ಆರೆಸ್ಸಸ್ ನ ಹಿಂದುತ್ವದ ಧಾರ್ಮಿಕ ಮತೀಯವಾದವನ್ನು ಬಿತ್ತನೆಯ ಕಾಲವೆಂದೇ ಪರಿಗಣಿಸಲಾಗುತ್ತದೆ. ಈ ಕಾಲಘಟ್ಟದಲ್ಲಿ ಹಿಂದೂ ಮಹಾಸಭಾ ಎನ್ನುವ ಮತ್ತೊಂದು ಮೂಲಭೂತವಾದಿ ಸಂಘಟನೆಯೊಂದಿಗೆ ಕೈ ಜೋಡಿಸಿದ್ದ ಆರೆಸ್ಸಸ್ ‘ಹಿಂದೂ; ಹಿಂದೂಯಿಸಂ, ಹಿಂದುತ್ವ’ ಎನ್ನುವ ತತ್ವವನ್ನು ಹೆಡ್ಗೇವಾರ್, ಗೋಳ್ವಲ್ಕರ್, ಸಾವರ್ಕರ್ ಎನ್ನುವ ಹಿಂದುತ್ವವಾದಿಗಳ ಮೂಲಕ ಸಮಾಜದಲ್ಲಿ ಬಿತ್ತನೆ ಮಾಡಿತು

1952 – 1979ರ ಕಾಲಘಟ್ಟದಲ್ಲಿ ರಾಜಕೀಯರಂಗದಲ್ಲಿ ತನ್ನ ಬಲವನ್ನು, ಪ್ರಭಾವವನ್ನು ಪರೀಕ್ಷೆ ಮಾಡಲು ಆರೆಸ್ಸಸ್RSS-mohanbhagwat ‘ಭಾರತೀಯ ಜನಸಂಘ’ ಎನ್ನುವ ರಾಜಕೀಯ ಪಕ್ಷವನ್ನು ಸ್ಥಾಪಿಸಿ ಆ ಮೂಲಕ 6 ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಪರ್ಧಿಸಿತು. ಕಳೆದ 25 ವರ್ಷಗಳ ತಾನು ಬಿತ್ತಿದ ಧಾರ್ಮಿಕ ಮತೀಯವಾದದ, ಹಿಂದುತ್ವ ಫೆನಟಿಸಂನ ಬೀಜಗಳನ್ನು ಈ ಕಾಲಘಟ್ಟದ ರಾಜಕೀಯದ ಉಳುಮೆಯಲ್ಲಿ ಪ್ರಯೋಗಗಳನ್ನು ನಡೆಸಿತು. 1967ರಲ್ಲಿ ವಿವಿಧ ಪಕ್ಷಗಳೊಂದಿಗೆ ಕೈಜೋಡಿಸಿ ಉತ್ತರ ಪ್ರದೇಶದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಪಾಲ್ಗೊಂಡಿತ್ತು. ಉಗ್ರ ದಾರ್ಮಿಕ ಮತಾಂಧತೆಯ ಮೂಲಕ ಅನೇಕ ಕೋಮು ಗಲಭೆಗಳಿಗೆ ಪ್ರಚೋದನೆ ನೀಡಿತ್ತು ಮತ್ತು ಸಂಯೋಜಿಸಿತ್ತು.

1980ರಲ್ಲಿ ಭಾರತೀಯ ಜನಸಂಘವನ್ನು ವಿಸರ್ಜಿಸಿ ‘ಭಾರತೀಯ ಜನತಾ ಪಕ್ಷ'(ಬಿಜೆಪಿ) ಎನ್ನುವ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿತು. ಆರಂಭದಲ್ಲಿ 1984ರಲ್ಲಿ ಕೇವಲ 2 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಪಕ್ಷಕ್ಕೆ 1989ರ ನಂತರದ ದಶಕಗಳು ಫಸಲಿನ ಕಾಲಘಟ್ಟವಾಗಿತ್ತು. ಧಾರ್ಮಿಕ ಮೂಲಭೂತವಾದ, ಹಿಂದುತ್ವದ ಫೆನಟಿಸಂ ಅನ್ನು ಸಮಾಜದಲ್ಲಿ ಬಿತ್ತಿ ಉಳುಮೆ ಮಾಡಿದ ಆರೆಸ್ಸಸ್ 70 ವರ್ಷಗಳ ನಂತರ ಅದರ ಫಸಲನ್ನು ಅನುಭವಿಸತೊಡಗಿತು. ಇದರ ಫಲವಾಗಿ 80 ವರ್ಷಗಳ ನಂತರ ಕೇಂದ್ರದಲ್ಲಿ ಸರಳ ಬಹುಮತದೊಂದಿಗೆ ಅಧಿಕಾರವನ್ನು ಪಡೆದುಕೊಂಡಿತು.

ಭಾರತದ ರಾಜಕೀಯದ ಕುರಿತಾಗಿ ಸಂಶೋಧನೆ ನಡೆಸಿದ ಇಟಾಲಿಯನ್ ಸಂಶೋಧಕಿ ‘ಮಾಜರಿಯಾ ಕೆಸೋಲರಿ’ ಅವರು  “ಇಟಾಲಿಯನ್ ಫ್ಯಾಸಿಸ್ಟ್ ಪ್ರತಿನಿಧಿಗಳು (ಮಸಲೋನಿ ಮತ್ತಿತರರು) ಮತ್ತು ಹಿಂದೂ ರಾಷ್ಟ್ರೀಯವಾದಿಗಳ ನಡುವಿನ ನೇರ ಸಂಪರ್ಕಗಳನ್ನು ವಿವರವಾಗಿ ಪರಿಶೀಲಿಸಿದಾಗ ಇದು ಹಿಂದೂ ರಾಷ್ಟ್ರೀಯವಾದಿಗಳು ಫ್ಯಾಸಿಸಂನ ಕುರಿತಾಗಿ ಕೇವಲ ಮೇಲ್ಮಟ್ಟದ ಕುತೂಹಲದಿಂದ ಅಥವಾ  ಕೆಲವು ವ್ಯಕ್ತಿಗಳ ಆ ಕ್ಷಣದ ಕೌತುಕದಿಂದ ಆಸಕ್ತಿ ಬೆಳಸಿಕೊಂಡಿದ್ದಾರೆ ಎಂದು ಹೇಳಲಾಗುವುದಿಲ್ಲ. ಆದರೆ ಹಿಂದೂ ರಾಷ್ಟ್ರೀಯವಾದಿಗಳು ಫ್ಯಾಸಿಸಂ ಅನ್ನು ಒಂದು ಸಂಪ್ರದಾಯವಾದಿ ನೆಲೆಯ ಕ್ರಾಂತಿ ಎಂದು ನಂಬುತ್ತಾರೆ ಮತ್ತು ಇಟಾಲಿಯನ್ ಮಾದರಿಯ ಸರ್ವಾಧಿಕಾರಿ ಆಡಳಿತದ ಕುರಿತಾಗಿ ಅಧ್ಯಯನ ನಡೆಸಿದ್ದಾರೆ” ಎಂದು ಹೇಳುತ್ತಾರೆ.

ಆರೆಸ್ಸಸ್ ಸ್ಥಾಪಕರಲ್ಲಿ ಒಬ್ಬರಾದ ಮೂಂಜೆ ಅವರು 19 ಮಾರ್ಚ್ 1931ರಂದು ಇಟಾಲಿಯನ್ ಸರ್ವಾದಿಕಾರಿ ಮಸಲೋನಿಯವರನ್ನು ವ್ಯಕ್ತಿಗತವಾಗಿ ಭೇಟಿಯಾಗುತ್ತಾರೆ. ಅದನ್ನು ಮೂಂಜೆ ತಮ್ಮ ಡೈರಿಯಲ್ಲಿ ಬರೆದುಕೊಂಡಿದ್ದಾರೆ. ಅದರ ಒಂದು ಸಾರಾಂಶ ಹೀಗಿದ, “ನಾನು ಅವರ( ಮಸಲೋನಿ) ಕೈ ಕುಲುಕಿದೆ ಮತ್ತು ನಾನು ಡಾ.ಮೂಂಜೆ ಎಂದು ಪರಿಚಯಿಸಿಕೊಂಡೆ. ಅವರಿಗೆ ನನ್ನ ಕುರಿತಾಗಿ ತಿಳುವಳಿಕೆ ಇತ್ತು ಮತ್ತು ಇಂಡಿಯಾದ ಸ್ವಾತಂತ್ರ ಹೋರಾಟವನ್ನು ಹತ್ತಿರದಿಂದ ಗಮನಿಸುತ್ತಿದ್ದರು. ನಾನು ನಮ್ಮ ಸ್ವಯಂಸೇವಕರಿಗೆ ಮಿಲಿಟರಿ ತರಬೇತಿಯ ಅವಶ್ಯಕತೆ ಇದೆ ಮತ್ತು ನಮ್ಮ ಹುಡುಗರು ಇಂಗ್ಲೆಂಡ್, ಪ್ರಾನ್ಸ್, ಜರ್ಮನಿಯ ಮಿಲಿಟರಿ ಶಾಲೆಗಳಗೆ ಭೇಟಿ ಕೊಡುತ್ತಿದ್ದಾರೆ. ನಾನು ಈಗ ಇದೇ ಉದ್ದೇಶಕ್ಕಾಗಿ ಇಟಲಿಗೆ ಬಂದಿದ್ದೇನೆ ಮತ್ತು ನನ್ನ ಮಿಲಿಟಿರಿ ಶಾಲೆಯ ಭೇಟಿಯನ್ನು ನಿಮ್ಮ ಅಧಿಕಾರಿಗಳು ಸುಗುಮವಾಗಿಸಿದ್ದಾರೆ. ನಾನು ಈ ಮುಂಜಾನೆ ಮತ್ತು ಮಧ್ಯಾಹ್ನ ಫ್ಯಾಸಿಸ್ಟ್ ಸಂಸ್ಥೆಗಳನ್ನು ನೋಡಿದೆ ಮತ್ತು ಅದರಿಂದ ತುಂಬಾ ಪ್ರಭಾವಿತನಾಗಿದ್ದೇನೆ. ಇಟಲಿಗೆ ಈ ಮಾದರಿಯ ಫ್ಯಾಸಿಸ್ಟ್ ಸಂಘಟನೆಗಳ ಅವಶ್ಯಕತೆ ಇದೆ. ಈ ಫ್ಯಾಸಿಸಂ ಸಂಘಟನೆಗಳಲ್ಲಿ ನನಗೆ ಅಂತಹ ವಿವಾದ ಎನ್ನುವಂತಹ ಅಂಶಗಳೇನು ಕಾಣಿಸಲಿಲ್ಲ. ನನ್ನ ಮಾತುಗಳಿಂದ ಮಸಲೋನಿ ಖುಷಿಯಾಗಿದ್ದರು” ಎಂದು ಬರೆದಿದ್ದಾರೆ.

1940ರಲ್ಲಿ ಮದುರಾದಲ್ಲಿ ಹಿಂದೂ ಮಹಾಸಭಾದ 22ನೇ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಾ ಸಾವರ್ಕರ್, “ಕೇವಲ ನಾಜಿ ಎನ್ನುವ ಕಾರಣಕ್ಕೆ ಹಿಟ್ಲರ್ ನನ್ನು ಒಬ್ಬ ರಾಕ್ಷಸ ಎಂದು ಕರೆಯುವುದು ತಪ್ಪಾಗುತ್ತದೆ. ಏಕೆಂದರೆ ನಾಜಿಯಿಸಂ ಜರ್ಮನಿಯನ್ನು ಕಾಪಾಡಿದೆ.” ಎಂದು ಭಾಷಣ ಮಾಡುತ್ತಾ ಮುಂದುವರೆದು ನೆಹರೂ ಅವರನ್ನು ಹೀಗೆಳೆಯುತ್ತ  “ಜರ್ಮನಿ, ಜಪಾನ್, ರಷ್ಯಾ ರಾಷ್ಟ್ರಗಳಿಗೆ ಒಂದು ನಿರ್ದಿಷ್ಟ ಮಾದರಿಯ ವ್ಯವಸ್ಥೆಯನ್ನು ಆರಿಸಿಕೊಳ್ಳಬೇಕೆಂದು ಹೇಳಲು ನಾವ್ಯಾರು? ಜರ್ಮನಿಗೆ ಏನು ಬೇಕೆಂದು ನೆಹರೂವಿಗಿಂತಲೂ ಹಿಟ್ಲರ್ ಗೆ ಚೆನ್ನಾಗಿ ಗೊತ್ತು. ಅದರಲ್ಲಿಯೂ ಈ ನಾಜಿಸಂನ ಸ್ಪರ್ಶದಿಂದ ಜರ್ಮನಿ, ಇಟಲಿ ರಾಷ್ಟ್ರಗಳು ಇಂದು ಶಕ್ತಿಶಾಲಿಯಾಗಿ ಬೆಳೆದಿವೆ, ಪುನವೃದ್ಧಿಯಾಗಿವೆ” ಎಂದು ಹೇಳಿದ್ದಾರೆ. 2014ರ ಚುನಾವಣೆಯ ಸಂದರ್ಭದಿಂದ ಇಡೀ ಸಂಘ ಪರಿವಾರದ ನಾಯಕರು ಬಳಸಿದ ಫೆನಟಿಸಂನ, ಹಿಂಸಾಚಾರದ ಭಾಷೆಗಳು ಹಿಟ್ಲರ್ ನ ನಾಜಿ ಪಾರ್ಟಿಯ ಫ್ಯಾಸಿಸಂ ಅನ್ನು ಹೋಲುತ್ತವೆ. ರಾಷ್ಟ್ರ ಮತ್ತು ಅದರ ಪ್ರಜಾಪ್ರಭುತ್ವ ಮಾದರಿಯ ಗಣರಾಜ್ಯ ವ್ಯವಸ್ಥೆಯ ಕುರಿತಾಗಿ ಅಸಹನೆಯಿಂದಿರುವ ಆರೆಸ್ಸಸ್ ಅದಕ್ಕೆ ಪರ್ಯಾಯವಾಗಿ ಹಿಂದೂರಾಷ್ಟ್ರವೆಂದು ಹೇಳುತ್ತಿದೆಯಾದರೂ ಅದರ ಸ್ವರೂಪದ ಕುರಿತಾಗಿ ಅವರಲ್ಲಿ ಯಾವುದೇ ಗೊಂದಲಗಳಿಲ್ಲ.

ಇದು ಆರೆಸ್ಸಸ್ ಗೆ ಫ್ಯಾಸಿಸಂ ಕುರಿತು ಇರುವ ಒಲವನ್ನು ಸಾಬೀತುಪಡಿಸುತ್ತದೆ

1920ರ ದಶಕದಲ್ಲಿ ಯುರೋಪ್ ರಾಷ್ಟ್ರಗಳಲ್ಲಿ ಈ ಫ್ಯಾಸಿಸ್ಟ್ ಪದ ಮತ್ತು ಇದರ ವ್ಯವಸ್ಥೆ ಆಸ್ತಿತ್ವಕ್ಕೆ ಬಂತು. ಜರ್ಮನಿಯ ಗುಟೇನ್ಬರ್ಗ ಯೂನಿವರ್ಸಿಟಿಯಲ್ಲಿ ಫ್ರೊಫೆಸರ್ ಆಗಿರುವ ಡಾ. ಮಾರ್ಕ ಟ್ರಿಶ್ಚ್ ಅವರು ಫ್ಯಾಸಿಸಂ ಅನ್ನು ಈ ಕೆಳಗಿನಂತೆ ವಿವರಿಸುತ್ತಾರೆ ಎಂದು ಚಿಂತಕ ಪಾರ್ಥ ಬ್ಯಾನರ್ಜಿಯವರು ತಮ್ಮ ಸಂಶೋಧನ ಲೇಖನಗಳಲ್ಲಿ ವಿವರಿಸುತ್ತಾರೆ. ಉದಾಹರಣೆಗೆ ಫ್ಯಾಸಿಸಂನ ಪ್ರಮುಖ ಲಕ್ಷಣಗಳೆಂದರೆ

  1. ಸಾವಿರಾರು ವರ್ಷಗಳ ಹಿಂದಿನ ಸಂಪ್ರದಾಯಗಳಿಗೆ ( ಭಾರತದ ಸಂದರ್ಭದಲ್ಲಿ ವರ್ಣಾಶ್ರಮದ ವ್ಯವಸ್ಥೆಗೆ) ಮರಳಬೇಕೆಂಬ ಸಿದ್ಧಾಂತ
  2. ಶ್ರೇಣೀಕೃತ, ಮಿಲಿಟರಿ ಆಧಾರಿತ, ಕಾರ್ಪೋರೇಟ್ ಸಮಾಜದ ನಿರ್ಮಾವನ್ನು ಕಟ್ಟಬೇಕೆಂಬ ಸಿದ್ಧಾಂತ
  3. ನಾಯಕತ್ವದ, ನಾಯಕನ ವೈಭವೀಕರಣ. ನಾಯಕನ ಮಾತೇ ಅಂತಿಮವೆನ್ನುವ ಸಿದ್ಧಾಂತ
  4. ರಾಷ್ಟ್ರೀಯತೆಯನ್ನು ದೇಶಪ್ರೇಮದೊಂದಿಗೆ ಸಮೀಕರಿಸಿ ವೈಭವೀಕರಿಸುವುದು
  5. ಈ ರಾಷ್ಟ್ರೀಯತೆಯ ಆಧಾರದ ಮೇಲೆಯೇ ವಿದೇಶಾಂಗ ನೀತಿಗಳನ್ನು ರೂಪಿಸಿವುದು

ಹಾಗಾದರೆ ಆರೆಸ್ಸಸ್ ಮತ್ತು ಅದರ ಅಂಗ ಪಕ್ಷಗಳಾದ ಬಿಜೆಪಿ, ವಿಎಚ್ಪಿ, ಬಜರಂಗದಳಗಳು ಫ್ಯಾಸಿಸಂನ ಮೇಲಿನ ಗುಣಲಕ್ಷಣಗಳನ್ನು ಹೊಂದಿವೆಯೇ?? ಉತ್ತರ ಹೌದು. ಈ ಸಂಘ ಪರಿವಾರದ ಎಲ್ಲಾ ನೀತಿನಿಯಮಗಳು ಮೇಲಿನ ಫ್ಯಾಸಿಸಂನ ಗುಣಲಕ್ಷಣಗಳನ್ನು ಹೊಂದಿವೆ

ಆರೆಸ್ಸಸ್ ಕಳೆದ ಎಂಬತ್ತು ವರ್ಷಗಳಿಂದ ಪ್ರತಿಪಾದಿಸುತ್ತಾ ಬಂದಿರುವ  ಭಾರತೀಯ ಸಂಸ್ಕೃತಿ, ಭಾರತೀಯ ಸಂಸ್ಕಾರrss-2 ಅಂದರೆ ಹಿಂದೂ ಸಂಸ್ಕೃತಿ ಮತ್ತು ಹಿಂದೂ ಸಂಸ್ಕಾರ, ಇದು ಫ್ಯಾಸಿಸಂನ ಮೊದಲ ಸಿದ್ಧಾಂತ. ಅಂದರೆ ವೈವಿಧ್ಯತೆಯನ್ನೇ ನಿರಾಕರಿಸುವುದು. ಬಹುರೂಪಿ ಸಂಸ್ಕೃತಿಯನ್ನೇ ಧ್ವಂಸಗೊಳಿಸುವುದು. ತನ್ನ ದಿನನಿತ್ಯದ ಬೈಠಕ್ಗಳಲ್ಲಿ, ಮಿಲಿಟರಿ ಶಾಖೆಗಳಲ್ಲಿ, ಸ್ವಯಂಸೇವಕರ ಸಮಾವೇಶಗಳಲ್ಲಿ ಬೋಧಿಸುವುದು ಮತ್ತು ಕಡ್ಡಾಯವಾಗಿ ಪಾಲಿಸಬೇಕೆಂದು ಒತ್ತಾಯಿಸುವುದು ಪ್ರಾಚೀನ ಕಾಲದ ಭರತವರ್ಷವನ್ನು. ಇದು ಭೂಖಂಡದಲ್ಲೇ ಅತ್ಯುತ್ತಮವಾದದ್ದೆಂದು ಬಣ್ಣಿಸುತ್ತದೆ ಈ ಆರೆಸ್ಸಸ್. ಮುಂದುವರೆದು ಇಂಥ ಶ್ರೇಷ್ಠ ಹಿಂದೂ ರಾಷ್ಟ್ರದ ಅವನತಿ ಪ್ರಾರಂಭವಾಗಿದ್ದು ಹಿಂದೂಗಳ ನಡುವಿನ ಒಡಕಿನಿಂದ (ಅದರೆ ಜಾತೀಯತೆ ಎನ್ನುವ ಪದವನ್ನು ಎಲ್ಲಿಯೂ ಬಳಸುವುದಿಲ್ಲ) ಮತ್ತು ಮುಸ್ಲಿಂ ದೊರೆಗಳ, ಬ್ರಿಟೀಷರ ಆಕ್ರಮಣದಿಂದ ನಮ್ಮ ದೇಶದ ಪಾವಿತ್ರ್ಯವೇ ನಾಶವಾಯಿತು ಎಂದು ಅಭಿಪ್ರಾಯ ಪಡುತ್ತಾರೆ. ಹಿಂದೂ ಧರ್ಮದ ಅಖಂಡ ಭಾರತವನ್ನು ಅಂದರೆ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ, ಗಂಧಾರದಿಂದ ಭ್ರಹ್ಮದೇಶದವರೆಗೆ (ಉತ್ತರದ ಟಿಬೆಟ್ ನಿಂದ ದಕ್ಷಿಣದ ತುದಿಯವರೆಗೆ ಮತ್ತು ಪಶ್ಚಿಮದ ಅಫಘಾನಿಸ್ತಾನದಿಂದ ಮಯಮಾರ್, ಥೈಲಾಂಡ್, ಕಾಂಬೋಡಿಯ, ಲ್ಹಾಸಾಗಳನ್ನೊಳಗೊಂಡ ವಾಯುವ್ಯ ಏಷ್ಯಾದವೆರೆಗೆ) ಕಟ್ಟಬೇಕೆಂಬುದೇ ತಮ್ಮ ಸಿದ್ಧಾಂತವೆಂದು ಇವರು ಪ್ರತಿಪಾದಿಸುತ್ತಾರೆ. ಇದು ಮೇಲೆ ಹೇಳಿದ ಫ್ಯಾಸಿಸಂ ಮೊದನೇ ಗುಣಲಕ್ಷಣವನ್ನು ಸಂಪೂರ್ಣವಾಗಿ ಪ್ರತಿಪಾದಿಸುತ್ತದೆ.

ಆರೆಸ್ಸಸ್ ಪಕ್ಷದ ಸಂವಿಧಾನವನ್ನು ಅದರ ಚೌಕಟ್ಟನ್ನು ವಿವರವಾಗಿ ಪರಿಶೀಲಿಸಿದಾಗ ಅದು ಮಿಲಿಟರಿಯ ರೆಜಿಮೆಂಟ್ ಮಾದರಿಯನ್ನು ಅಳವಡಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ. ಆರೆಸ್ಸಸ್ ಮುಖ್ಯಸ್ಥನನ್ನು ಸರಸಂಚಾಲಕ ರೆಂದು ಕರೆಯುತ್ತಾರೆ. ಅಂದರೆ ಪರಮೋಚ್ಛ ನಾಯಕ. ಅಂದರೆ ಮಿಲಿಟರಿ ಮುಖ್ಯಸ್ಥನಂತೆ. ಈ ಸರ ಸಂಚಾಲಕರನ್ನು ಯಾವುದೇ ಅಂತರಿಕ ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ಚುನಾಯಿಸುವುದಿಲ್ಲ. ಅಲ್ಲಿ ಅಂತರಿಕ ಚುನಾವಣೆಯೇ ಇಲ್ಲ. ಆತನ ಪಾತ್ರ ಮತ್ತು ಹೊಣೆಗಾರಿಕೆಗಳು ಪರಮೋಚ್ಛ ನಾಯಕನ ಹೊಣೆಗಾರಿಕೆಗಳಿಗೆ ಸಮ. ಪ್ರತಿ ವರ್ಷ ವಿಜಯದಶಮಿ ದಿನದಂದು ನಾಗಪುರದ ಆರೆಸ್ಸಸ್ ನ ಕೇಂದ್ರ ಕಛೇರಿಯಲ್ಲಿ ಈ ಸ್ವರಸಂಚಾಲಕ ಮಾಡುವ ಭಾಷಣ ಮತ್ತು ನೀಡುವ ಸಂದೇಶವೇ ಸಂಘಪರಿವಾರಕ್ಕೆ ಮುಂದಿನ ಗುರಿಗಳ ಕುರಿತಾದ ಆಜ್ಞೆಯ ಸ್ವರೂಪ. ಆತನ ಮಾತೇ ಅಂತಿಮ. ಅವರು ಹೇಳಿದ್ದು ಲಕ್ಷ್ಮಣ ರೇಖೆ. ಡಾ.ಕೆ.ಬಿ.ಹೆಡ್ಗೇವಾರ್, ಸಾವರ್ಕರ್ ಮತ್ತು ಗೋಳ್ವಲ್ಕರ್ ಅವರನ್ನು ಇಂದಿಗೂ ದೇವತಾ ಸ್ವರೂಪಿಗಳಾಗಿಯೇ ಪೂಜಿಸುತ್ತಾರೆ. ಈ ಮೂವರನ್ನು ಅವತಾರ ಪುರುಷರೆಂಬ ಪಟ್ಟವನ್ನು ಕಟ್ಟಲಾಗಿದೆ. ಇವರ ಕುರಿತಾಗಿ ದಂತಕತೆಗಳನ್ನು ದಿನನಿತ್ಯದ ಬೈಠಕ್ಗಳಲ್ಲಿ, ತಮ್ಮ ಶಾಖೆಗಳಲ್ಲಿ, ಸಮಾವೇಶಗಳಲ್ಲಿ ಭಕ್ತಿಯಿಂದ ಮಾತನಾಡುತ್ತಾರೆ. ಈ ಅಂಶಗಳು ಫ್ಯಾಸಿಸಂನ ಎರಡನೇ ಮತ್ತು ಮೂರನೇ ಅಂಶಗಳನ್ನು ಧೃಡೀಕರಿಸುತ್ತದೆ

ಮತ್ತೊಂದು ಕಡೆ ಆರೆಸ್ಸಸ್ ರಾಜಕೀಯ ಪಕ್ಷವಾದ ಬಿಜೆಪಿಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಅಧಿಕಾರವನ್ನು ಕೊಡುವುದಿಲ್ಲ. ಆರೆಸ್ಸಸ್ ಬಯಸುವುದು ತನ್ನ ಐಡಿಯಾಜಿಯನ್ನು ರಾಜಕೀಯ ನೆಲೆಯಲ್ಲಿ ವಿಸ್ತರಿಸುವುದಕ್ಕಾಗಿ ಬಿಜೆಪಿ ಪಕ್ಷ ಕಾನೂನುಗಳನ್ನು ರೂಪಿಸಬೇಕು. ತಾನು ಸ್ವತಃ ರಾಜಕೀಯವನ್ನು ಪ್ರವೇಶಿಸಲು ನಿರಾಕರಿಸುವ ಆರೆಸ್ಸಸ್ ‘ನಮ್ಮ ಸಾಂಸ್ಕೃತಿಕ ನೀತಿಗಳೇ ನಮ್ಮ ರಾಜಕೀಯ’ ಎಂದು ಹೇಳುತ್ತದೆ. ತನ್ನ ಐಡಿಯಾಲಜಿಯನ್ನು ಪ್ರಶ್ನಿಸುವುದಿರಲಿ, ಚರ್ಚೆಗೆ ಎಳೆದುತಂದವರನ್ನು ನಿರ್ದಾಕ್ಷೀಣ್ಯವಾಗಿ ಹೊರ ತಳ್ಳುತ್ತದೆ ಆರೆಸ್ಸಸ್. ಉದಾಹರಣೆಗೆ ಜನಸಂಘ ರಾಜಕೀಯ ಪಕ್ಷವಾಗಿದ್ದ ಎಪ್ಪತ್ತರ ದಶಕದಲ್ಲಿ ಆಗಿನ ಅಧ್ಯಕ್ಷ  ಬಲರಾಜ್ ಮಾಧೋಕ್ ಅವರು ಜನಸಂಘದ ಪಧಾದಿಕಾರಿಗಳನ್ನು ಆರೆಸ್ಸಸ್ ಸಂಘಟನೆಯಿಂದ ಹೇರುವುದನ್ನು ನಿಲ್ಲಿಸಿ ಜನಸಂಘದ ಒಳಗಡೆಯಿಂದಲೇ ಚುನಾವಣೆಯ ಮೂಲಕ ಆಯ್ಕೆ ಮಾಡಬೇಕು ಎಂದು ಪತ್ರ ಬರೆದಿದ್ದರು. ಆ ಕೂಡಲೆ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಲಾಯಿತು. ಪಾಕಿಸ್ತಾನಕ್ಕೆ ಭೇRSSಟಿ ಕೊಟ್ಟ ಸಂದರ್ಭದಲ್ಲಿ ಅಡ್ವಾನಿ ಜಿನ್ನಾ ಅವರನ್ನು ಪ್ರಶಂಸಿದ ಕಾರಣಕ್ಕೆ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದಲೇ ಪದಚ್ಯುತಿಗೊಳಿಸಲಾಯಿತು. ತೀರಾ ಇತ್ತೀಚೆಗೆ ಆರೆಸ್ಸಸ್ ವಿರುದ್ಧ ಭಿನ್ನ ರಾಗ ಹಾಡಿದ ಹಿರಿಯ ರಾಜಕಾರಣಿ ಜಸ್ವಂತ್ ಸಿಂಗ್ ಅವರನ್ನು ಪಕ್ಷದಿಂದಲೇ ಉಚ್ಛಾಟನೆ ಮಾಡಲಾಯಿತು. ಇತಿಹಾಸಕಾರ ಡಿ.ಆರ್.ಗೋಯಲ್ ಅವರು “ಒಂದು ಕಾಲದ ಜನಸಂಘ ಅಥವಾ ಇಂದಿನ ಬಿಜೆಪಿ ಅದು ಬೆಳವಣಿಗೆ ಕಂಡುಕೊಳ್ಳುವುದು ರಾಜಕೀಯವಾಗಿ ಅಲ್ಲ, ಆರೆಸ್ಸಸ್ ಸಂಘಟನೆಯಲ್ಲಿ ಮಾತ್ರ. ಏಕೆಂದರೆ ಆರೆಸ್ಸಸ್ ಅದಕ್ಕೆ ಜನ್ಮ ನೀಡಿದ್ದು, ಹೀಗಾಗಿ ಆರೆಸ್ಸಸ್ ಗೆ ಶರಣಾಗಲೇಬೇಕು. ಬಿಜೆಪಿ ಪಕ್ಷವು ನಾವು ವಿಭಿನ್ನ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂದು ಹೇಳಿದರೂ ವಾಸ್ತವದಲ್ಲಿ ಆರೆಸ್ಸಸ್ ಅನ್ಯ ಸಂಸ್ಕೃತಿಯನ್ನು ಮಾನ್ಯ ಮಾಡಿರುವುದೇ ಇಲ್ಲ. ಸಾರ್ವಜನಿಕ ಹೇಳಿಕೆಗೆ ಮಾತ್ರ ಇದನ್ನು ಸೀಮಿತಗೊಳಿಸಲಾಗುತ್ತದೆ, ಆಚರಣೆಗೆ ಆಲ್ಲ. ಉದಾಹರಣೆಗೆ ಗುಜರಾತ್ ಹತ್ಯಾಕಾಂಡ ನಡೆದ 2002ರ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ವಾಜಪೇಯಿ ಸಾರ್ವಜನಿಕವಾಗಿ ರಾಜಧರ್ಮ ಪಾಲಿಸುವಂತೆ ಹೇಳಿಕೆ ಇತ್ತರು. ಆದರೆ ಆಚರಣೆಯಲ್ಲಿ ಮೋದಿ ಸರ್ಕಾರವನ್ನು ಪದಚ್ಯುತಗೊಳಿಸಲಿಲ್ಲ. ತನ್ನ ಐಡಿಯಾಲಜಿಯನ್ನು ಸಹಿಸಿಕೊಳ್ಳುವ ನಾಯಕ ಇರುವವರೆಗೂ ಆರೆಸ್ಸಸ್ ಸಂತುಷ್ಟದಿಂದಿರುತ್ತದೆ” ಎಂದು ಹೇಳುತ್ತಾರೆ. ಇದು ನಿಜ. ಮೊನ್ನೆ ಪ್ರಧಾನಿ ನರೇಂದ್ರ ಮೋದಿ ‘ನಮ್ಮ ಸರ್ಕಾರವು ಯಾವುದೇ ಬಗೆಯ ಅಸಹನೆ, ಹಲ್ಲೆಗಳನ್ನು ಸಹಿಸುವುದಿಲ್ಲ.ಇಲ್ಲಿ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುತ್ತೇವೆ’ ಎಂದು ಹೇಳಿಕೆ ಇತ್ತರು. ಆರೆಸ್ಸಸ್ ಅದನ್ನು ಹೇಳಿಕೆ ಮಟ್ಟದಲ್ಲಿಯೇ ಇರಲು ಬಯಸುತ್ತದೆ. ಆಚರಣೆಯಲ್ಲಿ ಅಲ್ಲ. ಇದು 56 ಇಂಚಿನ ಎದೆಯ ಮೋದಿಗೂ ಸಹ ಗೊತ್ತು. ಇದು ಮೂಲಭೂತವಾದದ ಮನಸ್ಥಿತಿ,  ಚಹರೆ, ಸ್ವರೂಪ

ಕಳೆದ ಎಂಬತ್ತು ವರ್ಷಗಳಲ್ಲಿ ಮೊದಲ ಎಪ್ಪತ್ತು ವರ್ಷಗಳು ಕೇವಲ ಬ್ರಾಹ್ಮಣರ, ಮಾರ್ವಾಡಿಗಳ ಮತ್ತು ಬನಿಯಾಗಳ ಪಕ್ಷವೆಂದು ಗೇಲಿಗೊಳಗಾಗುತ್ತಿದ್ದ ಸಂಘ ಪರಿವಾರಕ್ಕೆ ಇಂದು ಹಿಂದುಳಿದವರು, ದಲಿತರು, ಆದಿವಾಸಿಗಳು, ಕಾರ್ಮಿಕರನ್ನು ಒಳಗೊಂಡಂತಹ ಒಂದು ವ್ಯಾಪಕವಾದ ನೆಲೆಗಟ್ಟು ಗಟ್ಟಿಗೊಳ್ಳತೊಡಗಿದೆ. ವರ್ಣಾಶ್ರಮದ ಶ್ರೇಣೀಕೃತ ವ್ಯವಸ್ಥೆಯಲ್ಲಿ ಊರ ಹೊರಗೆ ಅಸ್ಪೃಶ್ಯರಾಗಿ ಬದುಕುವ ತಳ ಸಮುದಾಯಗಳು ಇಂದು ನೀವು ಬಹುಸಂಖ್ಯಾತರು ಎನ್ನುವ ಆರೆಸ್ಸಸ್ ನ ಪ್ರಚೋದನೆಯ ಮೋಡಿಗೆ ಒಳಗಾಗಿ ಇಂದು ಹಿಂದೂ ವರ್ಸಸ್ ಮುಸ್ಲಿಂರು ಎಂದರೆ ತಳಸಮುದಾಯಗಳು ವರ್ಸಸ್ ಮುಸ್ಲಿಂ ಸಮುದಾಯಗಳು ಎನ್ನುವ ಅಖಾಡ ರೂಪುಗೊಂಡು ತಳಸಮುದಾಯಗಳು ಬಾಣದಂತೆ ಬಳಕೆಗೊಳ್ಳತೊಡಗಿದ್ದಾರೆ

(‘ಚಿಂತನ ಪ್ರಕಾಶನ’ದಿಂದ ಪ್ರಕಟಣೆಗೆ ಸಿದ್ಧವಾಗಿರುವ ಹಿಂದುತ್ವದ ರಾಜಕಾರಣ ಪುಸ್ತಕದಿಂದ ಆಯ್ದ ಭಾಗ)

ಹಂಪಿಯಲ್ಲಿ ಇದೇ ಶನಿವಾರ-ಭಾನುವಾರದಂದು “ನಾವು ನಮ್ಮಲ್ಲಿ” ಕಾರ್ಯಕ್ರಮ

ಆತ್ಮೀಯರೇ,

ನಮ್ಮ ವರ್ತಮಾನ.ಕಾಮ್ ಓದುಗರಿಗೆ “ನಾವು ನಮ್ಮಲ್ಲಿ” ಮತ್ತು ಅದರ ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಪರಿಚಯಿಸುವ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ. ವರ್ತಮಾನ.ಕಾಮ್ ಆರಂಭವಾದಾಗಿನಿಂದಲೂ “ನಾವು ನಮ್ಮಲ್ಲಿ”ಯೊಡನೆ ವರ್ತಮಾನ ಬಳಗಕ್ಕೆ ಅವಿನಾಭಾವ ಸಂಬಂಧವಿದೆ. ನಿಮಗೆ ಗೊತ್ತಿರುವಂತೆ ವರ್ತಮಾನ.ಕಾಮ್ ಆರಂಭಿಸಬೇಕೆಂಬ ಯೋಚನೆ ಬಂದಿದ್ದೇ ನಾನು 2011 ರಲ್ಲಿ ಚಿತ್ರದುರ್ಗದಲ್ಲಿ ನಡೆದ “ನಾವು ನಮ್ಮಲ್ಲಿ” ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಂದರ್ಭ ಬಂದಾಗ. ಪ್ರಾಮಾಣಿಕತೆ ಮತ್ತು ಬದ್ಧತೆಯನ್ನು ಹೊಂದಿರುವ ಯುವ ತಲೆಮಾರಿನ ಸಮಾಜಮುಖಿ ಕನ್ನಡ ಮನಸ್ಸುಗಳು ಈ ಕಾರ್ಯಕ್ರಮವನ್ನು ಪ್ರತಿವರ್ಷ ಆಯೋಜನೆ ಮಾಡುತ್ತಿವೆ. ಮತ್ತು ಸಮಾನಮನಸ್ಕರು ಇದರಲ್ಲಿ ಪಾಲ್ಗೊಳ್ಳುತ್ತ ಬಂದಿದ್ದಾರೆ. ಕೊಟ್ಟೂರಿನ ’ಬಯಲು ಸಾಹಿತ್ಯ ವೇದಿಕೆ’ ವತಿಯಿಂದ ಆರಂಭವಾದ ಈ ವಾರ್ಷಿಕ ಕಾರ್ಯಕ್ರಮಕ್ಕೆ ಈಗ ಹನ್ನೊಂದನೇ ಪ್ರಾಯ.

ಈ ಬಾರಿಯ ಕಾರ್ಯಕ್ರಮ ಇದೇ ಶನಿವಾರ ಮತ್ತು ಭಾನುವಾರ (ಅಕ್ಟೋಬರ್ 3-4, 2015) ದಂದು ಹಂಪಿಯ naavu-nammalli-2015-1 ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ನಾಡಿನ ಅನೇಕ ಚಿಂತಕರು ಮತ್ತು ಹೋರಾಟಗಾರರು “ಸಂವಿಧಾನ ಭಾರತ” ದ ಬಗ್ಗೆ ಚರ್ಚೆ, ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ರೀಪಾದ್ ಭಟ್, ಶ್ರೀಧರ್ ಪ್ರಭು ಸೇರಿದಂತೆ ವರ್ತಮಾನ ಬಳಗದ  ಹಲವಾರು ಮಿತ್ರರು ಅದರಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವರ್ತಮಾನ.ಕಾಮ್‌ನಲ್ಲಿ ಇತ್ತೀಚೆಗೆ ಅನೇಕ ಲೇಖನಗಳನ್ನು ಬರೆದ ವಿಜಯಕುಮಾರ್ ಸಿಗರನಹಳ್ಳಿಯವರ ಆ ಲೇಖನಗಳ ಸಂಗ್ರಹ ಈ ಕಾರ್ಯಕ್ರಮದಲ್ಲಿ ಬಿಡುಗಡೆ ಆಗಲಿದೆ. ’ನಾವು ನಮ್ಮಲ್ಲಿ’ ಸಹಯೋಗದಲ್ಲಿ ನಮ್ಮ ಬಳಗದ ಇನ್ನೊಬ್ಬರಾದ ಅಕ್ಷತಾ ಹುಂಚದಕಟ್ಟೆಯವರ ’ಅಹರ್ನಿಶಿ’ ಈ ಪುಸ್ತಕ ಪ್ರಕಟಿಸಿದೆ.

ಎಂದಿನಂತೆ ಈ ವಾರ್ಷಿಕ ಕಾರ್ಯಕ್ರಮಕ್ಕೆ ಹೋಗಲು ನಾನೂ ಉತ್ಸುಕನಾಗಿದ್ದೇನೆ. ನಿಮ್ಮೆಲ್ಲರನ್ನೂ ಅಲ್ಲಿ ನೋಡುವ ವಿಶ್ವಾಸದಲ್ಲಿ…

ನಮಸ್ಕಾರ,
ರವಿ

naavu-nammalli-2015
naavu-nammalli-2015
naavu-nammalli-book

ಭಾರತದ ಕುಲತಿಲಕರ ಪರಾಮರ್ಶೆ : ಭಾಗ 2


– ಶ್ರೀಧರ್ ಪ್ರಭು


 

‘ಸ್ವರಾಜ್ಯ’ ದಲ್ಲೇ ಶಾಹು ಮಹಾರಾಜರಿಗೆ ‘ಸತ್ಕಾರ’

೧೮೯೪ ರಲ್ಲಿ ಪಟ್ಟಾಭಿಷೇಕವಾಗಿ ರಾಜರ್ಷಿ ಶಾಹು ಮಹಾರಾಜರು ಕೊಲ್ಹಾಪುರದ ಮಹಾರಾಜರಾಗಿ ಅಧಿಕಾರ ವಹಿಸಿಕೊಂಡರು. ೧೯೦೧ ರ ಶ್ರಾವಣ ಮಾಸದಲ್ಲಿ ಶಾಹು ಮಹಾರಾಜರು ಪಂಚಗಂಗಾ ನದಿ ಸ್ನಾನಕ್ಕೆ ಹೋದಾಗ ಒಂದು ಮಹತ್ತರ ಘಟನೆ ನಡೆಯಿತು. ರೂಢಿಯಂತೆ ಮಹಾರಾಜರು ಶ್ರಾವಣ ಮಾಸದಲ್ಲಿ ನದಿ ಸ್ನಾನ ಮಾಡುವಾಗ ಆಸ್ಥಾನ ಪುರೋಹಿತರು ಮಂತ್ರೋಚ್ಚಾರಣೆ ಮಾಡುತ್ತಾರೆ. ಹಾಗೆ ಕೊಲ್ಹಾಪುರದ ಆಸ್ಥಾನ ಪುರೋಹಿತ ನಾರಾಯಣ ರಾಜ್ಯೋಪಧ್ಯಾಯನಿಗೆ ಬುಲಾವು ಹೋಯಿತು. ಆ ಹೊತ್ತಿಗೆ ಈ ವೈದಿಕ ಮಹಾಶಯರು ತಮ್ಮ ವೇಶ್ಯೆಯ ಮನೆಯಲ್ಲಿದ್ದರಂತೆ. ಹಾಗಾಗಿ ಸ್ನಾನ ಸಂಧ್ಯಾವಂದನೆ ಏನೂ ಆಗಿರಲಿಲ್ಲ. ಅದರೂ ಈ ರಾಜ ಪುರೋಹಿತರು ಸೀದಾ ನದೀ ತೀರಕ್ಕೆ ಬಂದು ಮಂತ್ರೋಚ್ಚಾರಣೆ ಶುರು ಮಾಡಿದರು. ಅಷ್ಟು ಹೊತ್ತಿಗೆ ಅಲ್ಲಿದ್ದ ಇನ್ನೊಬ್ಬ ಪುರೋಹಿತ ರಾಜಾರಾಮ ಶಾಸ್ತ್ತ್ರಿ ಪುರೋಹಿತರು ಈ ಮಂತ್ರೋಚ್ಚಾರಣೆ ಸರಿಯಾಗಿ ನಡೆಯುತ್ತಿಲ್ಲ ಎಂದು ತಕರಾರು ತೆಗೆದರು. bal-gangadhar-tilakಆಗ ಈ ನಾರಾಯಣ ರಾಜ್ಯೋಪಾಧ್ಯಾಯ ಯಾವುದೇ ಅಂಜಿಕೆ ಅಳುಕಿಲ್ಲದೇ:

‘ನೋಡಿ ಸ್ವಾಮಿ, ನಿಮ್ಮ ಈ ಮಹಾರಾಜರು ಶೂದ್ರ ವರ್ಣಕ್ಕೆ ಸೇರಿದ ಕುಣಬಿ ಜಾತಿಯವರು. ಇಂತಹ ಕೀಳು ಜಾತಿಯ ಜನರ ಸಮ್ಮುಖದಲ್ಲಿ ಸ್ನಾನವನ್ನು ಮಾಡಿ ಹೇಳುವ ವೇದೋಕ್ತ ಮಂತ್ರಗಳನ್ನು ಪಠಿಸಬೇಕಿಲ್ಲ. ನಾನು ಪುರಾಣೊಕ್ತ ಮಂತ್ರಗಳನ್ನಷ್ಟೇ ಹೇಳಲು ಸಾಧ್ಯ. ನೀವು ಏನಾದರೂ ಮಾಡಿಕೊಳ್ಳಿ’ ಎಂದು ಮಹಾರಾಜರ ಸಮ್ಮುಖದಲ್ಲೇ ಧಮಕಿ ಹಾಕಿದ.

ಸಹಜವಾಗಿ ಮಹಾರಾಜರು ರಾಜನಿಂದೆಯ ಆರೋಪದ ಮೇಲೆ ಇವನನ್ನು ಗಲ್ಲಿಗೆರಿಸಬಹುದಿತ್ತು. ಆದರೆ ಶಾಹು ಮಹಾರಾಜರದ್ದು ರಾಜರ್ಷಿ ಸ್ವರೂಪದ ವ್ಯಕ್ತಿತ್ವ. ವಿಶೇಷವೆಂದರೆ ಮಹಾರಾಜರು ತಮ್ಮರಾಜ್ಯದ ಕಾರ್ಮಿಕರಿಗೆ ಕಾರ್ಮಿಕ ಸಂಘ ಗಳನ್ನು ಕಟ್ಟಿಕೊಳ್ಳಲು ಅನುಮತಿ ನೀಡಿದ್ದರಲ್ಲದೇ, ಅತ್ಯಂತ ಪ್ರಗತಿಪರ ಕಾರ್ಮಿಕ ಕಾನೂನುಗಳನ್ನೂ ಸಹ ಜಾರಿಮಾಡಿ ದ್ದರು. ಮಹಾರಾಜರಲ್ಲಿನ ಅಪಾರ ಅನುಕಂಪ ಜಾಗೃತವಾಗಿ, ಈ ‘ಪೊಂಗ’ ಪಂಡಿತನಿಗೆ ಮೂರು ತಿಂಗಳ ಸಮಯಾವಕಾಶ ನೀಡಿ ವೇದೋಕ್ತ ಮಂತ್ರೋಚ್ಚಾರಣೆ ಮಾಡುವ ರಾಜಾಜ್ಞೆ ಹೊರಡಿಸಿದರು. ಮೂರು ತಿಂಗಳು ಎಂದು ರಾಜಾಜ್ಞೆ ಇದ್ದರೂ ಮೂರು ತಿಂಗಳ ನಂತರವೂ ಮಹಾರಾಜರು ಈ ‘ಪಂಡಿತ’ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಕೆಲಸದಿಂದ ವಜಾ ಕೂಡ ಮಾಡಲಿಲ್ಲ. ಒಂಭತ್ತು ತಿಂಗಳು ಕಳೆದವು, ಈ ಪುರೋಹಿತ ಬಗ್ಗಲಿಲ್ಲವೆಂದರೆ ಅವನ ದುರಹಂಕಾರ ಯಾವ ಮಟ್ಟದಲ್ಲಿತ್ತು ಗಮನಿಸಿ!

೭ ನವೆಂಬೆರ್, ೧೯೦೧, ೮ ನವೆಂಬರ್, ೧೯೦೧ ಮತ್ತು ಕೊನೆಯದಾಗಿ ೧ ಮೇ, ೨೦೦೨ ಹೀಗೆ ಮೂರು ಕಾರಣ ಕೇಳಿ ನೋಟಿಸು ಜಾರಿ ಮಾದಲಾದವು. ಈ ಪಂಡಿತ ಅವ್ಯಾವ ನೋಟಿಸುಗಳಿಗೂ ಜಗ್ಗಲಿಲ್ಲ. ಕೊನೆಗೆ ಕಾಟಾಚಾರಕ್ಕೆಂದು ಒಂದು ಉತ್ತರ ರವಾನಿಸಿದ “ನೀವು ಕ್ಷತ್ರಿಯರೇ ಅಲ್ಲ; ಆದ್ದರಿಂದ ನಿಮ್ಮ ಸಮ್ಮುಖದಲ್ಲಿ ನಾನು ವೇದಮಂತ್ರ ಗಳನ್ನ ಪಠಿಸಲಾರೆ.”

ಸಹಜವಾಗಿಯೇ ಎಲ್ಲ ಸ್ವಾಭಾವಿಕ ನ್ಯಾಯದ (natural justice) ನ ಪ್ರಕಾರ ಸುಧಾರಣೆಗೆ ಸಾಕಷ್ಟು ಅವಕಾಶ ಕೊಟ್ಟಿದ್ದರೂ ಸುಧಾರಿಸದೆ ಮತ್ತು ರಾಜರನ್ನೇ ಜಾತಿಯ ಹೆಸರಿನಲ್ಲಿ ಅಪಮಾನಿಸಿದ ಪಂಡಿತನಿಗೆ ಕೆಲಸದಿಂದ ವಜಾ ಆಯಿತು. ಲೆಕ್ಕಕ್ಕೆ ಸೆರೆಮನೆಗೆ ಕಳುಹಿಸಬೇಕಿತ್ತು. ಆದರೆ ಮಹಾರಾಜರು ತಮ್ಮ ಅಪಾರ ಅನುಕಂಪದ ಮೇರೆಗೆ ಇಂತಹ ಕ್ರಮ ಕೈಗೊಳ್ಳಲಿಲ್ಲ.

ಬ್ರಹ್ಮಾಂಡ ಅಸಂತುಷ್ಟಿಯ ಜನಕ

ಆಗ ಶುರುವಾಯಿತು ನೋಡಿ ಬ್ರಾಹ್ಮಣರ ಮುಕ್ತ ವಿದ್ರೋಹ!

ಈ ಮುಕ್ತ ವಿದ್ರೋಹಕ್ಕೆ ಕಿಚ್ಚು ಹಚ್ಚಿದ್ದು ತಿಲಕರು ಕೇಸರಿಯಲ್ಲಿ ೨೬ ನೇ ಅಕ್ಟೋಬರ್ ೧೯೦೨ ಮತ್ತು ೩೦ ನೆ ಅಕ್ಟೋಬರ್ ೧೯೦೨ ರಲ್ಲಿ ಬರೆದ ‘ವೇದೋಕ್ತ ಮತ್ತು ಮರಾಠಿಗರ ಕರ್ಮ’ ವೆಂಬ ಒಕ್ಕಣೆಯ ಸರಣಿ ಸಂಪಾದಕೀಯ ಲೇಖನಗಳು. ಈ ಸಂಪಾದಕೀಯಗಳಲ್ಲಿ ಟಿಳಕರು ಹೇಳುತ್ತಾರೆ: ‘ಅಂಗ್ಲ ಶಿಕ್ಷಣದಿಂದ ಪ್ರಭಾವದಿಂದ ಈ ಮರಾಠರ ತಲೆಗಳೆಲ್ಲ ಕೆಟ್ಟು ಹೋಗಿವೆ. ಈ ವೇದೋಕ್ತ ಮಂತ್ರಗಳು ಅಬ್ರಾಹ್ಮಣರ ಸಮಕ್ಷಮದಲ್ಲಿ ಉಚ್ಚರಿಸುವುದು ಅಕ್ಷಮ್ಯ ಅಪರಾಧ. lokmanya-tilakಈ ಶಿವಾಜಿ ಮಹಾರಾಜ ಗೋ-ಬ್ರಾಹ್ಮಣರ ಸೇವೆ ಮಾಡಿದಕ್ಕೋಸ್ಕರ ರಿಯಾಯತಿ ತೋರಿಸಿ ಬ್ರಾಹ್ಮಣರು ಮಂತ್ರೋಚ್ಚಾರ ಮಾಡಿದ್ದ ಮಾತ್ರಕ್ಕೆ ಇವರ ಜಾತಿ ಹೋಗುತ್ತದೆಯೇ? ಇನ್ನು ಬ್ರಾಹ್ಮಣರು ಶಿವಾಜಿಗೆ ಮಾಡಿದ ಉಪಕಾರವೇನು ಕಡಿಮೆಯೇ? ಶುದ್ರನಾದ ಶಿವಾಜಿಗೆ ಬ್ರಾಹ್ಮಣರು ಛತ್ರಪತಿ ಎಂದು ಪಟ್ಟ ಕಟ್ಟಿ ಕ್ಷತ್ರಿಯ ಪದವಿ ಕೊಡಿಸಿದರು. ಆದರೆ ಈಗಿನ ತಲೆ ತಿರುಗಿದ ಮರಾಠರು ಈ ಉಪಕಾರಕ್ಕೆಲ್ಲ ಅಪಾತ್ರರು’.

ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ತಿಲಕರು ಈ ಲೇಖನ ಬರೆದಾಗ ರಾಜ್ಯೋಪಾಧ್ಯಾಯ ವಜಾ ಆಗಿರಲಿಲ್ಲ (ಮೇಲಿನ ದಿನಾಂಕ ಗಳನ್ನು ಗಮನಿಸಿ). ಕೇವಲ ನೋಟಿಸು ಕೊಡಲಾಗಿತ್ತು. ಹೀಗಿದ್ದೂ ತಿಲಕರು ಶಿವಾಜಿಯ ವಂಶದವರನ್ನು ಮತ್ತು ಮಹಾರಾಜರನ್ನು ತಲೆ ಕೆಟ್ಟವರು ಎಂದು ಸಂಪಾದಕೀಯ ಬರೆದರು ಸಮಾಜದಲ್ಲಿ ಒಡಕು ಮೂಡಿಸಿದರು. ಈಗ ಹೇಳಿ ಯಾರು ಭಾರತದಲ್ಲಿ ಜಾತಿವಾದದ ಬೀಜ ನೆಟ್ಟಿದ್ದು?

ನೀವು ನಂಬಲಿಕ್ಕಿಲ್ಲ, ಈ ಪ್ರತಿಭಟನೆಯ ಕಾವು ಇಲ್ಲಿವರೆಗೂ ಇತ್ತೆಂದರೆ, ಶಾಹು ಮಹಾರಾಜರಿಗೆ ಕೊಲೆ ಬೆದರಿಕೆಗಳು ಬರತೊಡಗಿದವು!

ಅಂದಿನ ಮುಂಬೈ ಪ್ರಾಂತ್ಯದ ಗವರ್ನರ್ ಆಗಿದ್ದ ಹೆನ್ರಿ ನಾರ್ತ್ಕೊಟ್ ಗೆ ಒಂದು ಟೆಲಿಗ್ರಾಂ ಕಳುಹಿಸಿ ಶಾಹು ಮಹಾರಾಜರು ಮಾಡಿದ ‘ಅನ್ಯಾಯ’ (ಬ್ರಾಹ್ಮಣನ ವಜಾ) ದ ಬಗ್ಗೆ ಚಾಡಿ ಚುಚುತ್ತಾರೆ. ಇದಕ್ಕೆ ಮೊದಲು ಕೊಲ್ಹಾಪುರದ ಕರ್ನಲ್ ಆಗಿದ್ದ ಫೆರ್ರಿಸ್ ಗೆ ಈ ವಜಾ ಪಂಡಿತನ ಹೆಸರಲ್ಲಿ ಒಂದು ಅರ್ಜಿ ಕಳಿಸುವಂತೆ ಮಾರ್ಗದರ್ಶನ ಮಾಡುತ್ತಾರೆ. ಈ ಅರ್ಜಿಯನ್ನುಕೊಲ್ಹಾಪುರದ ಕರ್ನಲ್ ಸೀದಾ ಕಸದ ಬುಟ್ಟಿಗೆ ರವಾನಿಸುತ್ತಾರೆ. ಅದರೂ ಛಲ ಬಿಡದ ತ್ರಿವಿಕ್ರಮರು ಬೊಂಬಾಯಿ ಗವರ್ನರ್ ವರೆಗೂ ಹೊಗಿತ್ತಾರೆ! ಆಗ ಹೊಸ ಗವರ್ನರ್ ಜೇಮ್ಸ್ ಮೊಂಟಿಥ್ ಕೂಡ ೧೯ ಫೆಬ್ರವರಿ ೧೯೦೩ ರಂದು ಅರ್ಜಿ ತಿರಸ್ಕರಿಸುತ್ತಾರೆ.

ಬ್ರಿಟಿಷರ ಚಾಡಿ ಸೇವೆ

ಟಿಳಕರು ಇಷ್ಟಕ್ಕೆ ಸುಮ್ಮನಾಗಲಿಲ್ಲ. ಅಂದಿನ ಮುಂಬೈ ಪ್ರಾಂತ್ಯದ ಗವರ್ನರ್ ಆಗಿದ್ದ ಹೆನ್ರಿ ನಾರ್ತ್ಕೊಟ್ ಗೆ ಒಂದು ಟೆಲಿಗ್ರಾಂ ಕಳುಹಿಸಿ ಶಾಹು ಮಹಾರಾಜರು ಮಾಡಿದ ‘ಅನ್ಯಾಯ’ (ಬ್ರಾಹ್ಮಣನ ವಜಾ) ದ ಬಗ್ಗೆ ಚಾಡಿ ಚುಚುತ್ತಾರೆ. ಇದಕ್ಕೆ ಮೊದಲು ಕೊಲ್ಹಾಪುರದ ಕರ್ನಲ್ ಆಗಿದ್ದ ಫೆರ್ರಿಸ್ ಗೆ ಈ ವಜಾ ಪಂಡಿತನ ಹೆಸರಲ್ಲಿ ಒಂದು ಅರ್ಜಿ ಕಳಿಸುವಂತೆ ಮಾರ್ಗದರ್ಶನ ಮಾಡುತ್ತಾರೆ. ಈ ಅರ್ಜಿಯನ್ನುಕೊಲ್ಹಾಪುರದ ಕರ್ನಲ್ ಸೀದಾ ಕಸದ ಬುಟ್ಟಿಗೆ ರವಾನಿಸುತ್ತಾರೆ. ಅದರೂ ಛಲ ಬಿಡದ ತ್ರಿವಿಕ್ರಮರು ಬೊಂಬಾಯಿ ಗವರ್ನರ್ ವರೆಗೂ ಹೊಗಿತ್ತಾರೆ! ಆಗ ಹೊಸ ಗವರ್ನರ್ ಜೇಮ್ಸ್ ಮೊಂಟಿಥ್ ಕೂಡ ೧೯ ಫೆಬ್ರವರಿ ೧೯೦೩ ರಂದು ಅರ್ಜಿ ತಿರಸ್ಕರಿಸುತ್ತಾರೆ.

ಅದರೂ ಸ್ವರಾಜ್ಯ ಸಾಧನೆಯ ದೇಶಭಕ್ತರ ಸಿಟ್ಟು ತಣಿಯಲಿಲ್ಲ!

೧೯೦೫ ರಲ್ಲಿ ಒಟ್ಟು ಮೂರು ಅರ್ಜಿಗಳನ್ನು ಬ್ರಿಟಿಷ್ ಪ್ರಭುತ್ವದ ಪರಮೋಚ್ಛ ಅಧಿಕಾರಿ ಲಾರ್ಡ್ ಕರ್ಜನ್ ಗೆ ಕಳುಹಿಸುತ್ತಾರೆ. ಅಲ್ಲೂ ೫ ಜನವರಿ ೧೯೦೫ ರಲ್ಲಿ ಕ.ಬು. ಸೇವೆ ಯಾದ ಮೇಲೆ ತಿಲಕರಿಗೆ ಅಭಾವ ವೈರಾಗ್ಯ ಬಂದು ಕೊನೆಗೆ ಟಿಳಕರು ಈ ಸಮಸ್ಯೆಯನ್ನು ಮಾತುಕತೆ ಮೂಲಕ ಪರಿಹರಿಸಬೇಕು ಎಂದು ಅಪ್ಪಣೆ ಕೊಡಿಸುತ್ತಾರೆ. ನಂತರವೇ ಬ್ರಾಹ್ಮಣರು ಬೇರೆ ಗತ್ಯಂತರವಿಲ್ಲದೆ ಮಹಾರಾಜರ ಪಟ್ಟಾಭಿಷೇಕ ಮಾಡಲು ೧೯೦೫ ರಲ್ಲಿ ಅಣಿಯಾದರು. ಮಹಾರಾಜರು ಎಲ್ಲವನ್ನೂ ಕ್ಷಮಿಸಿ ಹೊಸ ಅಧ್ಯಾಯ ಬರೆಯಲು ತಯಾರಾದರು.

ಇಂದು ಇಂದಿಗೆ ನಾಳೆ ನಾಳೆಗೆ – ತ್ರಿಕಾಲ ಜ್ಞಾನಿ ತಿಲಕರು

ಆಗ ಮಹಾರಾಜರ ಆಸ್ಥಾನದಲ್ಲಿ ಒಬ್ಬ ಚತುರ ಅಧಿಕಾರಿ ಮತ್ತು ಸತ್ಯಶೋಧಕ ಸಮಾಜದ ನೇತಾರ ಭಾಸ್ಕರ ಜಾಧವರು ಈ ದೇಶದ ಶೂದ್ರ ಮತ್ತು ದಲಿತರ ಪರವಾಗಿ ಬ್ರಾಹ್ಮಣರ ಪರ ಕ್ರಾಂತಿಯ ಕಹಳೆ ಊದುತ್ತಿದ್ದ ರೂವಾರಿ ತಿಲಕರಿಗೆ ಒಂದು ಪ್ರಶ್ನೆ ಕೇಳಿದರು:

“ದೇಶದ ಅಂತಿಮ ಅಧಿಕಾರಿಯ ತೀರ್ಪು ಬಂದ ಮೇಲೆ ಮಹಾರಾಜರನ್ನು ಕ್ಷತ್ರಿಯರು ಎಂದು ಒಪ್ಪಿಕೊಳ್ಳುವುದರಲ್ಲಿ ಯಾರಿಗೂ ತಕರಾರು ಇರಲು ಸಾಧ್ಯವೇ ಇಲ್ಲ. ಶಾಹು ಮಹಾರಾಜರು ಕ್ಷತ್ರಿಯರು ಎಂದ ಮೇಲೆ ಮಹಾರಾಜರ ಸಹೋದರ ಬಾಪುಸಾಹೇಬ್ ಮಹಾರಾಜರನ್ನು ಕ್ಷತ್ರಿಯ ಎಂದು ನೀವು ಪರಿಗಣಿಸುತ್ತೀರಿ ತಾನೆ?’ ಎಂದು.

ಆಗ ಕೇಸರಿ ಪತ್ರಿಕೆಯ ತಮ್ಮ ಅಗ್ರ ಲೇಖನದಲ್ಲಿ ಮತ್ತೊಮ್ಮೆ ಬ್ರಹ್ಮ ಸಿಂಹ ತಿಲಕರು ಗುಡಿಗಿದರು: “ಮಹಾರಾಜರ ಸಹೋದರ ಬಾಪುಸಾಹೇಬ್ ಎಂದಿಗೂ ಶೂದ್ರನೆ! ಮಹಾರಾಜರನ್ನು ನಾವು ಕ್ಷತ್ರಿಯ ಎಂದು ಒಪ್ಪಿಕೊಂಡಿರುವುದು ಸಧ್ಯ ಅವರ ಪಟ್ಟಾಭಿಷೇಕ ನಡೆಯುತ್ತಿರುವ ಕಾರಣಕ್ಕಾಗಿ”

ಆಗ ಜಾಧವ್ ಒಂದು ಸರಳ ಪ್ರಶ್ನೆ ಕೇಳಿದರು ‘ ಸ್ವಾಮಿ ಲೊಕಮಾನ್ಯರೇ, ದೇಶ ಅಳುವವನು ಕ್ಷತ್ರಿಯ ಎಂದಾದರೆ, ನೂರಾರು ವರ್ಷ ನಮ್ಮ ದೇಶವನ್ನಾಳಿದ ಮುಸಲ್ಮಾನರು ಕ್ಷತ್ರಿಯರು ಎಂದು ನೀವು ಒಪ್ಪಿಕೊಳ್ಳುತ್ತೀರಾ? ಹಾಗೆಯೇ ಮುಂದೆ ಒಂದು ದಿನ ಒಬ್ಬ ಮುಸಲ್ಮಾನನಿಗೆ ಪಟ್ಟಾಭಿಷೇಕ ವಾದರೆ ಅವನೂ ನಿಮ್ಮ ಪ್ರಕಾರ ಕ್ಷತ್ರಿಯನೇ. ಆದರೆ ಬಾಪು ಸಾಹೇಬ್ ಮಹಾರಾಜ ಮಾತ್ರ ಕ್ಷತ್ರಿಯರಲ್ಲ, ಅಲ್ಲವೇ?”

ಆಗ ತ್ರಿಕಾಲ ಜ್ಞಾನಿ ತಿಲಕರು ಹೇಳುತ್ತಾರೆ: ‘ಹಿಂದಿನದು ಮುಗಿದ ಕಥೆ. ಅದನ್ನು ನೀವು ಅಂದು ಇದ್ದ ಬ್ರಾಹ್ಮಣರನ್ನು ಕೇಳಿ. ಮುಂದೆ ಎಂದಾದರು ಅಂಥಹ ಸಂದರ್ಭ ಬಂದರೆ ಆಗಿನ ಬ್ರಾಹ್ಮಣರು ಆಗ ಉತ್ತರ ನೀಡುತ್ತಾರೆ. ನಾವು ಇಂದಿನ ಪ್ರಶ್ನೆಗೆ ಮಾತ್ರ ಉತ್ತರಿಸಿದ್ದೇವೆ’

ನಂತರದ ದಿನಗಳಲ್ಲಿ ಕಾಂಗ್ರೆಸ್ ಅಧಿವೇಶನಗಳಲ್ಲಿ ಎಂದಿಗೂ ಅಸ್ಪ್ರುಶ್ಯತೆ ಬಗ್ಗೆ ಚರ್ಚಿಸಲು ತಿಲಕರು ಅವಕಾಶ ಮಾಡಿಕೊಡಲಿಲ್ಲ. ಸಾಮಾಜಿಕ ಪರಿವರ್ತನೆ ಪ್ರಶ್ನೆಯನ್ನು ಸಂಪೂರ್ಣವಾಗಿ ಕಾಂಗ್ರೆಸ್ ತ್ಯಾಗ ಮಾಡಿದ ಶ್ರೇಯ ತಿಳಕರಿಗೆ ಸಲ್ಲಬೇಕು. ಇಂಥಹ ಮಹಾಪುರುಷರ ಸಾರಥ್ಯದ ಕಾಂಗ್ರೆಸ್ ಒಂದು ಪಕ್ಕಾ ಅಗ್ರಹಾರವಾಗಿತ್ತು. ತಿಳಕರ ಕಲ್ಪನೆಯ ಸ್ವರಾಜ್ಯ ಕೇವಲ ಸವರ್ಣೀಯ ಹಿಂದೂಗಳ, ಅದರಲ್ಲೂ ವೈದಿಕರ ಸ್ವರಾಜ್ಯವಾಗಿತ್ತು. ಅದರಲ್ಲಿ ದಲಿತ ಶೂದ್ರರಿಗೆ ಸವರ್ಣೀಯರ ಸೇವೆಯೇ ಮುಕ್ತಿಯಾಗಿತ್ತು.

ತಂದೆಗೆ ‘ತಕ್ಕನಲ್ಲದ’ ಮಗ

ಒಂದು ಕೊನೆಯ ಮಾತು. ತಿಳಕರ ಮಗ ಶ್ರೀಧರ ತಿಲಕ್ ತಮ್ಮ ತಂದೆಯ ಹಾದಿ ಹಿಡಿಯಲಿಲ್ಲ. ಅವರು ಬಾಬಾ ಸಾಹೇಬರನ್ನು ತಮ್ಮ ಸ್ವಂತ ಸೋದರನಂತೆ ಕಂಡರು. ಬಾಬಾ ಸಾಹೇಬರನ್ನು ದಲಿತರೇ ಸಂಪೂರ್ಣವಾಗಿ ಒಪ್ಪಿಕೊಂಡು ಸಾಮಾಜಿಕ ಚಳುವಳಿಗೆ ಬರದಿದ್ದ ದಿನಗಳಲ್ಲಿ ಪುಣೆಯ ಸಂಪ್ರದಾಯಸ್ಥರ ವಿರೋಧ ಕಟ್ಟಿಕೊಂಡು ಶ್ರೀಧರ ತಿಲಕರು ಅಂಬೇಡ್ಕರ್ ಜೊತೆ ಗುರುತಿಸಿ ಕೊಂಡರು.

ಶ್ರೀಧರ ತಿಲಕ ಒಬ್ಬ ಅಪ್ಪಟ ಸಾಮಾಜಿಕ ಸಮಾನತೆಯ ಕಾಳಜಿ ಇದ್ದ ವ್ಯಕ್ತಿ ಯಾಗಿದ್ದರು. ಬಾಬಾ ಸಾಹೇಬರು ಸಮತಾ ಸೈನಿಕ ದಳ ವನ್ನು ಪ್ರಾರಂಭಿಸಲು ತಮ್ಮ ಸ್ವಂತ ಮನೆ ತಿಳಕ ವಾಡಾ ವನ್ನು ಈ ಶ್ರೀಧರ ತಿಲಕರು ಧಾರೆ ಎರೆದು ಅಂಬೇಡ್ಕರ್ ರಿಗೆ ಕೊಟ್ಟರು.

ವಯಕ್ತಿಕ ಕಾರಣಗಳಿಂದ ಶ್ರೀಧರ ತಿಲಕ್ ಆತ್ಮಹತ್ಯೆ ಮಾಡಿಕೊಂಡಾಗ ತಮ್ಮ ಆತ್ಮಹತ್ಯೆಯ ಚೀಟಿಯ ಒಂದು ಪ್ರತಿಯನ್ನು ಪುಣೆಯ ಜಿಲ್ಲಾಧಿಕಾರಿಗೆ ಕಳಿಸಿದ್ದರೆ ಇನ್ನೊಂದು ಪ್ರತಿಯನ್ನು ಶ್ರೀಧರ ತಿಲಕರು ಬಾಬಾ ಸಾಹೇಬರಿಗೆ ಕಳುಹಿಸಿ ಕೊಡುತ್ತಾರೆ. ತಿಳಕರ ಸಂಕುಚಿತತೆ ಮತ್ತು ಅವರ ಮಗನ ಉದಾತ್ತತೆ – ಎರಡನ್ನೂ ಇಂದು ಚರಿತ್ರೆ ಮರೆತು ಬಿಟ್ಟಿದೆ.

ಚಿತ್ರಾವತಿಗೆ ಮುನ್ನ

ಶಾಹು ಮಹಾರಾಜರನ್ನೇ ಕೋರ್ಟ್ ಕಚೇರಿಗೆ ಅಲೆಯಿಸಿದ ಬ್ರಹ್ಮ ಶಕ್ತಿ ಮತ್ತು ದೇಶ ಭಕ್ತಿ ಶಕ್ತಿ ಎಷ್ಟಿದ್ದೀತು ಲೆಕ್ಕ ಹಾಕಿ. ತಿಲಕರ ಬ್ರಿಟಿಷ್ ವಿರೋಧಕ್ಕೆ ಪ್ರಮುಖ ಕಾರಣ ಬ್ರಿಟಿಷರು ಸಾಮಾಜಿಕ ಸಮಾನತೆಗೆ ಒತ್ತು ಕೊಟ್ಟಿದ್ದೂ ಆಗಿತ್ತು.

ಅಂಬೇಡ್ಕರ್ ರನ್ನು ಬ್ರಿಟಿಷರ ಏಜೆಂಟ್ ಎಂದು ನಿಂದಿಸುವ ಶೌರಿ ತಿಲಕರ ಬಗ್ಗೆ ಏನನ್ನೂ ಹೇಳುವುದಿಲ್ಲ. ಅದಕ್ಕಿಂತ ಹೆಚ್ಚಿನ ಸಂಕಟವಾಗುವುದು ಇತರ ತಥಾಕಥಿತ ಎಡ ಮತ್ತು ಪ್ರಗತಿಪರ ಇತಿಹಾಸಕಾರರೂ ತಿಳಕರ ಇನ್ನೊಂದು ಮುಖದ ಬಗ್ಗೆ ಮಾತನಾಡುವುದಿಲ್ಲ. ತಿಳಕರ ಮಹಿಳಾ ವಿರೋಧಿ ನಿಲುವುಗಳ ಬಗ್ಗೆ ಸ್ವತಹ ಒಬ್ಬ ಮಹಿಳೆ ಮತ್ತು ಅಭೂತಪೂರ್ವ ಇತಿಹಾಸಜ್ಞೆ ರೋಮಿಲ ಥಾಪರ್ ಬರೆಯಬೇಕಿತ್ತು. ತಾಯಿ ಸಾವಿತ್ರಿಯನ್ನೇ ಮರೆತ ನಾವು ತಿಳಕರ ಪೂಜೆ ಮಾಡುವುದರಲ್ಲಿ ವಿಶೇಷವೆನಿಲ್ಲ. ಆದರೆ ಡಾ.ಪರಿಮಳಾ ರಾವ್ ಎಂಬ ಯುವ ಚಿಂತಕಿ ‘Tilak`s Approach to Women`s Education and Emancipation’ ಎಂಬ ಅದ್ಭುತ ಪುಸ್ತಕ ಬರೆದು ತಿಳಕರ ನೈಜ ‘ಸಾಮಾಜಿಕ’ ನಿಲುಮೆಗಳನ್ನು ಸಾಕ್ಷಿ ಸಮೇತ ಹೊರಹಾಕಿದ್ದಾರೆ.

ಒಟ್ಟಿನಲ್ಲಿ, ದಲಿತ ಬಹುಜನರ ತಟ್ಟೆಯಲ್ಲಿ ನೊಣ ಹಾಕಿ ಅನ್ನ ಕಸಿಯುವ ಶೌರಿಗಳು (ತಾವು ಚಿತ್ರಾವತಿ ಬಿಡುವ ಮುನ್ನ), ತಮ್ಮ ತಟ್ಟೆಯಲ್ಲಿ ದೊಡ್ಡದೇನೋ ಬಿದ್ದಿರುವದನ್ನು ನೋಡಿಕೊಂಡು ಎತ್ತಿ ಪಕ್ಕಕ್ಕಿಟ್ಟರೆ ದೇಶಕ್ಕೆ ಮಹದುಪಕಾರವಾದೀತು.

(ಮುಂದುವರೆಯುತ್ತದೆ…)

ಶೌಚಾಲಯ ಇರುವುದೇ ಮುಖ್ಯವಲ್ಲ..!


– ಡಾ.ಎಸ್.ಬಿ. ಜೋಗುರ


ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಚ ಭಾರತದ ಅಡಿಯಲ್ಲಿ ಇಡೀ ದೇಶದಲ್ಲಿ ಆರೋಗ್ಯ ಪ್ರಜ್ಞೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಅನೇಕ ಬಗೆಯ ಸ್ವಚ್ಚತಾ ಕಾರ್ಯಕ್ರಮಗಳನ್ನು ನಿರಂತರವಾಗಿ ಜಾರಿಗೊಳಿಸುತ್ತಿರುವ ವೇಗದಲ್ಲಿಯೇ ದೇಶದ ಜನರು ಪರಿವರ್ತನೆಗೆ ಹೊಂದಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಅದಕ್ಕೆ ಕಾರಣವೂ ಸ್ಪಷ್ಟವಾಗಿದೆ. ಯಾವಾಗಲೂ ಭೌತ ಸಂಸ್ಕೃತಿಯ ವೇಗದ ಸಮಸಮನಾಗಿ ಅಭೌತ ಸಂಸ್ಕೃತಿ ಬದಲಾವಣೆ ಹೊಂದುವುದು ಸಾಧ್ಯವಿಲ್ಲ ಅಲ್ಲೊಂದು ಅಂತರ ಇದ್ದೇ ಇರುತ್ತದೆ. ನೀವು ಕೊಂಡು ತಂದ ಹೊಸ ಮೊಬೈಲ್ ಒಂದಕ್ಕೆ ನೀವು ಸೆಟ್ ಆಗಲು ತೆಗೆದುಕೊಳ್ಳುವ ಸಮಯದಂತೆ. opendefecation_women_indiaಅದೂ ಅಲ್ಲದೇ ಬಯಲು ಶೌಚಾಲಯ ಎನ್ನುವುದು ನಮ್ಮಲ್ಲಿ ಅನೇಕ ವರ್ಷಗಳಿಂದಲೂ ಒಂದು ಸಂಪ್ರದಾಯವಾಗಿ, ನಮ್ಮ ಜೀವನ ವಿಧಾನದ ಭಾಗವಾಗಿ ಉಳಿದು ಬಂದಿರುವದಿದೆ. ಅಷ್ಟು ಮಾತ್ರವಲ್ಲದೇ ಮನೆಯಲ್ಲಿಯೇ ಇಲ್ಲವೇ ಮನೆಯ ಹತ್ತಿರ ಶೌಚಾಲಯಗಳನ್ನು ಕಟ್ಟಿ ಬಳಸುವ ಕ್ರಮವನ್ನು ಇಷ್ಟಪಡದಿರುವ ಒಂದು ತಲೆಮಾರು ಇನ್ನೂ ನಮ್ಮೊಂದಿಗಿದೆ. ಅವರು ಮನೆಯಲ್ಲಿಯ ಶೌಚಾಲಯದಲ್ಲಿ ಕುಳಿತು ಶೌಚ ಮಾಡುವುದನ್ನು ಅಸಹ್ಯ ಮತ್ತು ಅಹಿತಕರ ಎಂದೇ ಬಗೆಯುತ್ತಾರೆ. ಅಷ್ಟು ಮಾತ್ರವಲ್ಲ, ಎದ್ದು ತಿರುಗಾಡಲಾಗದವರು, ವಯಸ್ಸಾದವರಿಗೆ ಮಾತ್ರ ಈ ಬಗೆಯ ಶೌಚಾಲಯಗಳು ತಾವು ಏನಿದ್ದರೂ ಬಯಲು ಕಡೆಗೆ ಹೋಗುವವರು ಎನ್ನುವ ವಿಚಾರ ಅವರದು. ಛೇ.. ಛೇ..ಮನೆಯಲ್ಲಿ ತಮಗೆ ಸರಿ ಹೊಂದುವದಿಲ್ಲ ನಾವು ಯಾವಾಗಲೂ ಹೊರಗೇ ಹೋಗುವವರು. ಮನೆಯಲ್ಲಿ ಕುಳಿತು.. ಮಾಡುವುದೇ..? ನಮ್ಮ ಮನಸು ಒಪ್ಪುವದಿಲ್ಲ ಎನ್ನುವ ಮನ:ಸ್ಥಿತಿಯವರು ನಮ್ಮ ಗ್ರಾಮೀಣ ಭಾಗಗಳಲ್ಲಿ ಈಗಲೂ ಇದ್ದೇ ಇದ್ದಾರೆ ಹೀಗಾಗಿ ಪ್ರಧಾನಿಯವರು ನಿರೀಕ್ಷಿಸುವ ವೇಗದಲ್ಲಿಯೇ ಶೌಚಾಲಯದ ವಿಷಯವಾಗಿ ಪರಿವರ್ತನೆಯನ್ನು ತರಲಾಗುವದಿಲ್ಲ. ಭಾರತೀಯ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಮತ್ತು ನೈರ್ಮಲ್ಯದ ಪ್ರಜ್ಞೆ ಇಂದಿಗೂ ನಿರೀಕ್ಷಿತ ಮಟ್ಟದಲ್ಲಿಲ್ಲ. ಗಾಂಧೀಜಿಯವರು ತಮ್ಮ ಸರ್ವೋದಯ ಸಮಾಜದ SwachhBharath_Modiಸ್ಥಾಪನೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು, ಚರಂಡಿ, ರಸ್ತೆಗಳನ್ನು ನಿರ್ಮಿಸುವ ಕನಸು ಕಂಡಿದ್ದರು ಅದು ಕೂಡಾ ಸರ್ವೋದಯ ಸಮಾಜದ ಲಕ್ಷಣಗಳಲ್ಲಿ ಒಂದಾಗಿತ್ತು. ಆದರೆ ಆ ವಿಚಾರ ಕೇವಲ ಉಟೋಪಿಯಾ ಹಂತದಲ್ಲಿಯೇ ಉಳಿದದ್ದು ವಿಷಾದನೀಯ. ಈಗೀಗ ಸ್ವಚ್ಚ ಭಾರತದ ಅಡಿಯಲ್ಲಿ ಗ್ರಾಮೀಣ ಭಾಗಗಳಲ್ಲಿ ಶೌಚಾಲಯಕ್ಕೆ ಸಂಬಂಧಿಸಿ ಒಂದು ಅಭೂತಪೂರ್ವವಾದ ಕ್ರಾಂತಿ, ಬದಲಾವಣೆ ಸಾಧ್ಯವಾಗತೊಡಗಿದೆ. ಆ ದಿಸೆಯಲ್ಲಿ ಅದಾಗಲೇ ಸುಮಾರು 6 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ ಸುಮಾರು 1.3 ಕೋಟಿ ಶೌಚಾಲಯಗಳು ಬಳಕೆಯಾಗದೇ ವ್ಯರ್ಥವಾಗಿ ಹಾಳಾಗುತ್ತಿವೆ. ಅದಕ್ಕೆ ಕಾರಣ ನಮ್ಮ ಜನತೆಯ ಮನಸ್ಥಿತಿ ಇನ್ನೂ ಸಾಕಷ್ಟು ಬದಲಾಗಿಲ್ಲ. ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವರಾದ ಬೀರೆಂದ್ರ ಸಿಂಗ್ ಚೌಧರಿ ಹೇಳುವ ಹಾಗೆ ಸ್ಚಚ್ಚ ಭಾರತದ ಅಡಿಯಲ್ಲಿ ರೂಪಿಸಲಾದ ಕಾರ್ಯಕ್ರಮಗಳ ಯಶಸ್ಸು ಜನತೆಯ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಅವರ ಮನೋಭಾವಗಳಲ್ಲಿಯ ಬದಲಾವಣೆಯನ್ನು ಅವಲಂಬಿಸಿವೆ ಎನ್ನುತ್ತಾರೆ.

ನಮ್ಮ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಇನ್ನೂ ಪರಿಸ್ಥಿತಿ ಸಾಕಷ್ಟು ಪರಿವರ್ತನೆಯಾಗಿಲ್ಲ. ಬಯಲು ಶೌಚಾಲಯವೇ Women-cleaning-toilet-in-Indiaಅವರಿಗೆ ಹಿತಕರ ಎನ್ನುವ ಮನೋಭಾವವಿರುವವರು ಇನ್ನೂ ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಬೆಳಿಗ್ಗೆ ಎದ್ದದ್ದೇ ಕೈಯಲ್ಲಿ ತಂಬಿಗೆ ಹಿಡಿದು ತಮ್ಮ ಗದ್ದೆ ಕಡೆ ನಡೆಯುವದೇ ಒಂದು ಪರಿಪಾಠವಾಗಿರುವ ಪ್ರದೇಶಗಳಲ್ಲಿ ಹೀಗೆ ಸರಕಾರ ನಿರ್ಮಿಸಿದ ಶೌಚಾಲಯಗಳ ಬಳಕೆ ಹೆಚ್ಚೆಂದರೆ ಆ ಕುಟುಂಬದ ಮಹಿಳೆಯರು ಮತ್ತು ವಯಸ್ಸಾದವರಿಗೆ ಸೀಮಿತ ಎನ್ನುವಂಥಾ ಸ್ಥಿತಿ ನಿರ್ಮಾಣವಾದದ್ದು ವಿಪರ್ಯಾಸ. ಇಂಥಾ ಮನೋಭಾವದವರಿಂದಾಗಿಯೇ ಈ 1.3 ಕೋಟಿ ಶೌಚಾಲಯಗಳು ಬಳಕೆಯಾಗದೇ ಹಾಳಾಗುವ ಸ್ಥಿತಿಯನ್ನು ತಲುಪಬೇಕಾಯಿತು. ಬಯಲಲ್ಲಿ ಶೌಚ ಮಾಡುವದರ ಅಡ್ಡ ಪರಿಣಾಮಗಳ ಬಗ್ಗೆ ಸಾಕಷ್ಟು ತಿಳುವಳಿಕೆ ಮತ್ತು ಜಾಗೃತಿಯನ್ನು ಮೂಡಿಸುವ ಅವಶ್ಯಕತೆಯಿದೆ. 2019 ರಷ್ಟಿಗೆ ಇಡೀ ದೇಶದಲ್ಲಿ ಬಯಲು ಶೌಚಾಲಯ ಪದ್ಧತಿ ಇರದಂತೆ ಮಾಡುವ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿರುವದಿದೆ. ಅದರೊಂದಿಗೆ ದೇಶದ ಗ್ರಾಮೀಣ ಭಾಗಗಳಲ್ಲಿ ಕೊಳಚೆಯ ಸ್ಥಿತಿಯನ್ನು ನಿರ್ಮೂಲನ ಮಾಡುವ ನಿಟ್ಟಿನಲ್ಲಿ ಆಯಾ ಗ್ರಾಮೀಣ ಪ್ರದೇಶಗಳ ಗಾತ್ರ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಸುಮಾರು 7 ಲಕ್ಷ ರೂಪಾಯಿಯಿಂದ ಆರಂಭಿಸಿ 20 ಲಕ್ಷ ರೂಪಾಯಿಯವರೆಗೆ ಘನತ್ಯಾಜ್ಯ ನಿರ್ವಹಣೆಗಾಗಿಯೇ ಹಣಕಾಸಿನ ನೆರವನ್ನು ನೀಡುವ ಗುರಿಯನ್ನು ಹೊಂದಲಾಗಿದೆ. ಇಡೀ ದೇಶದಾದ್ಯಂತ 19800 ಕೋಟಿ ರೂ ಹಣವನ್ನು ಶೌಚಾಲಯಗಳ ನಿರ್ವಹಣೆಯಲ್ಲಿ ಖರ್ಚು ಮಾಡುವ ಗುರಿ ಹೊಂದಲಾಗಿದೆ. ಇದರಲ್ಲಿ 10800 ಕೋಟಿ ರೂಪಾಯಿ ಹಣವನ್ನು ದೇಶದ ಈಶಾನ್ಯ ಭಾಗದ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಖರ್ಚು ಮಾಡಲಾಗುವುದು. ನಮ್ಮ ದೇಶದ ಗ್ರಾಮೀಣ ಪರಿಸರದಲ್ಲಿ ಇನ್ನೂ ಸಾಕಷ್ಟು ಪರಿವರ್ತನೆಗಳಾಗಬೇಕಿದೆ. ಮುಖ್ಯವಾಗಿ ಜನರ ಮನೋಭಾವದಲ್ಲಿ ಬದಲಾಗಬೇಕು. ಕೇಂದ್ರ ಸರಕಾರ ಇಲ್ಲವೇ ರಾಜ್ಯ ಸರಕಾರದ ಯಾವುದೇ ಯೋಜನೆಗಳು ಅರ್ಥವತ್ತಾಗಿ ಜಾರಿಯಾಗಬೇಕಾದರೆ ಜನಜಾಗೃತಿ ಮತ್ತು ಅವರ ಮನೋಭಾವಗಳಲ್ಲಿ ಬದಲಾವಣೆ ಅಗತ್ಯ.

ಕೇವಲ ಶೌಚಾಲಯಗಳನ್ನು ಕಟ್ಟಿಸಿಕೊಡುವುದು ಮಾತ್ರ ಮುಖ್ಯವಾಗದೇ ಅದನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವ ಬಗ್ಗೆಯೂ ಹೇಳಿಕೊಡಬೇಕು. toilet-india-awarenessಚೈನಾದಂಥಾ ರಾಷ್ಟ್ರಗಳಲ್ಲಿ ಶೌಚಾಲಯಗಳನ್ನು ಹ್ಯಾಪಿ ಹೋಮ್ ಎಂದು ಕರೆಯಲಾಗುತ್ತದೆ. ಅದೇ ಮಟ್ಟದ ವಾತಾವರಣವನ್ನು ನಮ್ಮಲ್ಲೂ ಕಾಯ್ದುಕೊಳ್ಳುವ ಅಗತ್ಯವಿದೆ. ನಮ್ಮಲ್ಲಿ ಇಂದಿಗೂ ಐದು ಲಕ್ಷಕ್ಕಿಂತಲೂ ಹೆಚ್ಚು ಹಳ್ಳಿಗಳಿವೆ. ಅಲ್ಲಿಯ ಜನರು ಈ ಬಗೆಯ ಶೌಚಾಲಯಗಳನ್ನು ಬಳಸುವಾಗ ತಾವು ಬಯಲಿಗೆ ಹೋಗುವದಕ್ಕಿಂತಲೂ ಇದು ತುಂಬಾ ಹಿತಕರವಾಗಿದೆ ಎನ್ನುವ ಮನೋಭಾವ ಮೂಡಬೇಕು. ಹಾಗಾಗಬೇಕಾದರೆ ಶೌಚಾಲಯಗಳನ್ನು ಬಳಸುವ ಬಗ್ಗೆ ಮತ್ತು ಶುಚಿಯಾಗಿಡುವ ಬಗ್ಗೆ ಗ್ರಾಮೀಣ ಭಾಗದ ಜನತೆಗೆ ಸೂಕ್ತವಾದ ತಿಳುವಳಿಕೆ ಮತ್ತು ಮಾರ್ಗದರ್ಶನ ಮಾಡಬೇಕು.

ಆರೆಸ್ಸಸ್ನ ಮೂಲಭೂತವಾದಿ ಅಪಾಯಕಾರಿ ರಾಜಕಾರಣ

ಬಿ.ಶ್ರೀಪಾದ ಭಟ್

8, ಅಕ್ಟೋಬರ್, 2013ರ ಹಿಂದೂ ಪತ್ರಿಕೆಯಲ್ಲಿ ಪತ್ರಕರ್ತೆ ವಿದ್ಯಾ ಸುಬ್ರಮಣ್ಯಂ ಅವರು ಆರೆಸಸ್ ಅನ್ನು ಗಾಂಧಿಯವರ ಹತ್ಯೆಗೆ ನೇರವಾಗಿ ಕಾರಣವೆಂದು ಆಪಾದಿಸದಿದ್ದರೂ ಆರೆಸಸ್ನ ಹಿಂಸಾತ್ಮಕ ನಡುವಳಿಕೆ ಮತ್ತು ಪ್ರಚೋದನಾತ್ಮಕ ಚಿಂತನೆಗಳೇ ಗಾಂಧಿಯವರ ಹತ್ಯೆಗೆ ಕಾರಣಗಳಲ್ಲೊಂದು ಎಂದು ಪಟೇಲರು ನಂಬಿದ್ದರು. ಗಾಂಧೀಜಿrss-2ಯವರ ಹತ್ಯೆಯ ನಂತರ ಆರೆಸಸ್ ಅನ್ನು ನಿಷೇದಿಸಲು 4ನೇ ಫೆಬ್ರವರಿ 1948ರಂದು ಹೊರಡಿಸಿದ ನೊಟಿಫಿಕೇಶಿನಿನಲ್ಲಿ ಆಗಿನ ಸರ್ಕಾರವು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ಮೂಲಭೂತ ಆದರ್ಶಗಳಾದ ಭ್ರಾತೃತ್ವ, ಪ್ರೀತಿ, ಸಮಾನತೆಗಳನ್ನು ಪಾಲಿಸಲಿಲ್ಲ. ಬದಲಾಗಿ ಸಂಘಪರಿವಾರದ ಸದಸ್ಯರು ಗುರುತರವಾದ ಭಯ ಹುಟ್ಟಿಸುವ ಚಟುವಟಿಕೆಗಳಲ್ಲಿ ಭಾಗವಹಿಸಿದರು.

ಸಂಘಪರಿವಾರದ ಸದಸ್ಯರು ವ್ಯವಸ್ಥೆಯಲ್ಲಿ ಹಿಂಸೆಯನ್ನು ಹುಟ್ಟುಹಾಕಿದರು. ದರೋಡೆ, ಗಲಭೆ, ಹತ್ಯೆಗಳನ್ನು ನಡೆಸಿದರು. ಶಸ್ತ್ರಗಳನ್ನು, ಹಣವನ್ನು ವಸೂಲಿ ಮಾಡಿದರು. ದ್ವೇಷಮಯವಾದ, ಗಲಭೆಗಳನ್ನು ನಡೆಸುವಂತೆ ಕರೆಕೊಡುವಂತಹ, ಭಯೋತ್ಪಾದಕ ಪಾಠಗಳನ್ನು ತಿಳಿಸುವಂತಹ ಕರಪತ್ರಗಳನ್ನು ಸಾರ್ವಜನಿಕವಾಗಿ ಹಂಚಿದರು. ಈ ಕಾರ್ಯತಂತ್ರಗಳನ್ನು ಗುಪ್ತವಾಗಿ ನಡೆಸಿದರು ಎಂದು ಅಭಿಪ್ರಾಯಪಟ್ಟಿತು.

4ನೇ ನವೆಂಬರ್ ರಂದು ಪಟೇಲ್ ಅವರು ನೀಡಿದ ಪತ್ರಿಕಾ ಹೇಳಿಕೆಯಲ್ಲಿ ಇತರೇ ರಾಜ್ಯಗಳಿಂದಲೂ ಈ ಆರೆಸಸ್ ವಿರುದ್ಧ ನಮಗೆ ದೂರುಗಳು ಬಂದಿವೆ. ಆ ದೂರುಗಳ ಪ್ರಕಾರ ಆರೆಸಸ್ ಸದಸ್ಯರು ನಡಾವಳಿಗಳು ದೇಶ ವಿರೋಧಿ ಲಕ್ಷಣಗಳನ್ನು ಹೊಂದಿದ್ದು. ಸದಾ ಗಲಭೆಗಳನ್ನು ಪ್ರಚೋದಿಸುತ್ತಿದ್ದರು ಎಂದು ತಿಳಿಸಿದ್ದರು. ಇದಕ್ಕೂ ಮುಂಚೆ ಗೃಹ ಮಂತ್ರಿ ಎರಡು ಪತ್ರಗಳನ್ನು ಬರೆದಿದ್ದರು. ಮೊದಲನೇ ಪತ್ರವನ್ನು ಜುಲೈ 1948ರಲ್ಲಿ ಆಗಿನ ಆರೆಸಸ್ ಮುಖ್ಯಸ್ಥ ಶ್ಯಾಮ್ ಪ್ರಸಾದ್ ಮುಖರ್ಜಿಯವರಿಗೆ ಬರೆದಿದ್ದರು. ಅದರಲ್ಲಿ ಆರೆಸಸ್ ಚಟುವಟಿಕೆಗಳು ಸರ್ಕಾರದ ವಿರುದ್ಧದ ಪಿತೂರಿಯಾಗಿದೆ. ಸರ್ಕಾರದ ಇರುವಿಕೆಗೇ ಭಂಗ ತರುವಂತಿದೆ. ಬುಡಮೇಲು ಮಾಡುವಂತಹ ಅದರ ಕೃತ್ಯಗಳು ದಿನಗಳೆದಂತೆ ಹೆಚ್ಚಾಗುತ್ತಿವೆ ಎಂದು ಸ್ಪಷ್ಟವಾಗಿ ಬರೆದಿದ್ದರು. 11ನೇ ಸೆಪ್ಟೆಂಬರ್ 1948ರಂದು ಗೋಳ್ವಾಲ್ಕರ್ ಅವರಿಗೆ ಬರೆದ ಎರಡನೇ ಪತ್ರದಲ್ಲಿ ಪಟೇಲರು ಇಂದು ಆರೆಸಸ್ ಹುಟ್ಟುಹಾಕಿದ ದ್ವೇಷದ ಚಿಂತನೆಗಳಿಂದಾಗಿ ದೇಶದಲ್ಲಿ ಸೃಷ್ಟಿಗೊಂಡ ಕಮ್ಯೂನಲ್ ವಿಷಯುಕ್ತ ವಾತಾವರಣ ಗಾಂಧಿಯವರನ್ನು ಬಲಿ ತೆಗೆದುಕೊಂಡಿತು. ಗಾಂಧೀಜಿವರು ತೀರಿಕೊಂಡ ಬಳಿಕ ಆರೆಸಸ್ ಸದಸ್ಯರು ಸಿಹಿಯನ್ನು ಹಂಚಿದರು. ಇದು ನಾಗರಿಕರಲ್ಲಿ ತಿರಸ್ಕಾರವನ್ನು ಹುಟ್ಟಿಸಿದೆ ಎಂದು ಬರೆಯುತ್ತಾರೆ. (ಓದಿ – ಮರೆತು ಹೋದ ವಾಗ್ದಾನ, ವಿದ್ಯಾ ಸುಬ್ರಮಣ್ಯಂ)

ಈ ಎಲ್ಲ ಹಿನ್ನೆಲೆಗಳಲ್ಲಿ ಆಗಿನ ಗೃಹ ಮಂತ್ರಿ ವಲ್ಲಭಾಯ್ ಪಟೇಲರು ಆರೆಸಸ್ನಿಂದ ದೇಶದ ಧ್ವಜವನ್ನು ಗೌರವಿಸುವಂತೆ ಆದೇಶಿಸುತ್ತಾರೆ (ಕಡೆಗೆ ಆರೆಸಸ್ ಗೌರವಿಸುವುದು ತನ್ನದೇ ಸಿಂಬಲ್ ಆದ ಭಗವದ್ವಜವನ್ನು). ತನ್ನ ಎಲ್ಲಾ ಚಟುವಟಿಕೆಗಳನ್ನು ಬಹಿರಂಗವಾಗಿ ಕಾನೂನಿನ ಅಡಿಯಲ್ಲಿ ನಡೆಸಬೇಕೆಂತಲೂ,ಸಕ್ರಿಯ ರಾಜಕಾರಣದಿಂದ ದೂರವಿರಬೇಕೆಂತಲೂ ಆರೆಸಸ್ನಿಂದ ವಾಗ್ದಾನ ಪಡೆಯುತ್ತಾರೆ. ಎಂದು ಬರೆಯುತ್ತಾರೆ.

ಆದರೆ ಸದಾಕಾಲವು ಅಸಹನೀಯವಾದ ವಾತಾವರವನ್ನು ಸೃಷ್ಟಿಸುವುದರ ದಿಕ್ಕಿನಲ್ಲಿ ಈ ಆರೆಸ್ಸಸ್ನ ನಡೆಗಳು ಚಲಿಸುತ್ತಿರುತ್ತವೆ. ಧಾರ್ಮಿಕ ಮತೀಯವಾದವನ್ನು ಸಾರ್ವಜನಿಕವಾಗಿ ಹುಟ್ಟುಹಾಕುವುದರ ಮೂಲಕ ಆರೆಸ್ಸಸ್ ಸಮಾಜದಲ್ಲಿ ಸದಾಕಾಲವು ವಿಕೃತಿ ಚಿಂತನೆಗಳನ್ನು ಬಿತ್ತುತ್ತಲೇ ಇರುತ್ತದೆ.

ಡಿಸೆಂಬರ್,1949ರಲ್ಲಿ ಅಯೋಧ್ಯೆಯ ಬಾಬರಿ ಮಸೀದಿಯ ಪ್ರಾಂಗಣದಲ್ಲಿ ಗೌಪ್ಯವಾಗಿ ರಾಮನ ಮೂರ್ತಿಯನ್ನು ಸ್ಥಾಪಿಸಲಾಯಿತು. ಆದರೆ ವಲ್ಲಭಾಯಿ ಪಟೇಲರಿಗೆ ರಾಜಕಾರಣದಿಂದ ದೂರವುಳಿಯುವುದಾಗಿಯೂ, ಅಶಾಂತಿ ಕದಡುವಂತಹ ಕಾರ್ಯಗಳಿಂದ ದೂರವಿರುವುದಾಗಿಯೂ ವಾಗ್ದಾನ ನೀಡಿದ ಆರೆಸ್ಸಸ್ ಈrss-1 ರಾಮನ ಮೂರ್ತಿಯ ಉದ್ಭವವನ್ನು ಮುಂದಿಟ್ಟುಕೊಂಡು ಜನರಲ್ಲಿ ಮತೀಯ ಭಾವನೆಗಳನ್ನು ಕೆರಳಿಸತೊಡಗಿತು. ಆಗಿನ ಫೈಜಾಬಾದ್ ಜಿಲ್ಲಾ ಮಾಜಿಸ್ಟ್ರೇಟ್, ಐಸಿಎಸ್ ಅಧಿಕಾರಿ ಕೆ.ಕೆ.ನಾಯರ್ ಅವರು ವಿಗ್ರಹಗಳನ್ನು ತೆರವುಗೊಳಿಸಿದರೆ ಅತ್ಯಂತ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬರೆದರು. ಆದರೆ ಈ ಕೆ.ಕೆ. ನಾಯರ್ ಮೇಲೆ ಈ ವಿಗ್ರಹಗಳನ್ನು ಮಸೀದಿಯೊಳಗೆ ಅಕ್ರಮವಾಗಿ ಸ್ಥಾಪಿಸಿಸುವ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪವಿತ್ತು. ನಂತರದ ದಿನಗಳಲ್ಲಿ ಕೆ.ಕೆ.ನಾಯರ್ ತಮ್ಮ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಟ್ಟರು, ನಂತರ ಭಾರತೀಯ ಜನಸಂಘಕ್ಕೆ ಸೇರಿಕೊಂಡರು ಮತ್ತು 1967ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು.

ಅಡ್ವಾನಿಯವರು ತಮ್ಮ ಪಾಕಿಸ್ತಾನ ಭೇಟಿಯ ಸಂದರ್ಭದಲ್ಲಿ ಜಿನ್ನಾ ಅವರನ್ನು ಪ್ರಶಂಶಿಸಿ ಮಾತನಾಡಿದ್ದನ್ನು ವಿರೋಧಿಸಿದ ಆರೆಸ್ಸಸ್ ಅಡ್ವಾನಿಯವರು ಬಿಜೆಪಿಯ ಅಧ್ಯಕ್ಷ ಪದವಿಯಿಂದ ನಿರ್ಗಮಿಸುವವರೆಗೂ ಬಿಡಲಿಲ್ಲ. ಇದರಿಂದ ಹತಾಶರಾಗಿ ಅಡ್ವಾನಿಯವರು 2005ರ ಸೆಪ್ಪೆಂಬರ್ನಲ್ಲಿ ಚೆನ್ನೈಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯ ಅಂತಿಮ ದಿನದಂದು ಮಾತನಾಡುತ್ತ ತನ್ನ ಪಕ್ಷ ಬಿಜೆಪಿಯು ಆರೆಸಸ್ನೊಂದಿಗೆ ಸಮಾಲೋಚಿಸದೆ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳುವುದಿಲ್ಲ. ಈ ನೀತಿಯು ಪಕ್ಷಕ್ಕಾಗಲೀ ಆರೆಸಸ್ಗಾಗಲಿ ಯಾವುದೇ ಒಳಿತನ್ನು ಮಾಡುವುದಿಲ್ಲ. ಈ ನೀತಿಯಿಂದ ಆರೆಸಸ್ನ ಧ್ಯೇಯವಾದ ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಹಿನ್ನೆಡೆ ಉಂಟಾಗುತ್ತದೆ. ಆರೆಸಸ್ ಮತ್ತು ಬಿಜೆಪಿ ಈ ಭಾವನೆಯನ್ನು ಹೋಗಲಾಡಿಸಲು ಒಂದಾಗಿ ಪ್ರಯತ್ನಿಸಬೇಕು ಎಂದು ಹೇಳಿದರು.

ತನ್ನನ್ನು ಒಂದು ಸಾಂಸ್ಕೃತಿಕ ಸಂಘಟನೆ ಎಂದು ಕರೆದುಕೊಳ್ಳುವ ಆರೆಸಸ್ 2-4,ಸೆಪ್ಟೆಂಬರ್ 2015ರಂದು ದೆಹಲಿಯಲ್ಲಿ ನಡೆದ ಚಿಂತನ-ಮಂಥನ ಸಬೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಿಜೆಪಿ ಮಂತ್ರಿಗಳ ಸಾಧನೆಯನ್ನು ಪರಾಮರ್ಶೆ ನಡೆಸಿದೆ. ಸರ್ಕಾರದ ನೀತಿಗಳ ಕುರಿತಾಗಿ ಮಂತ್ರಿಗಳೊಂದಿಗೆ ಅಧಿಕೃತವಾಗಿ ಚರ್ಚೆ ನಡೆಸಿದೆ. ಕೇಂದ್ರ ಬಹುಪಾಲು ಎಲ್ಲಾ ಬಿಜೆಪಿ ಮಂತ್ರಿಗಳು ತಮ್ಮ ಮಾತೃಪಕ್ಷ ಆರೆಸ್ಸಸ್ಗೆ ವಿನಯಪೂರ್ವಕವಾಗಿ ಎಲ್ಲಾ ಸರ್ಕಾರಿ ವರದಿಗಳನ್ನು, ಅಂಕಿ ಅಂಶಗಳನ್ನು ಸಲ್ಲಿಸಿದ್ದಾರೆ. ಅದರಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ನಿಷ್ಠಾವಂತ ಸ್ವಯಂಸೇವಕ ಎಂದು ಮತ್ತು ಇಂದು ನನ್ನ ಸಾಧನೆಗೆ ಆರೆಸ್ಸಸ್ ಕಾರಣ ಬಣ್ಣಿಸಿಕೊಂಡಿದ್ದಾರೆ. ಬಿಜೆಪಿಯ ವಕ್ತಾರ ಸಿದ್ಧಾರ್ಥ ನಾಥ್ ಅವರು ನಾವು ಸ್ವಯಂಸೇವಕರೆಂದು ಹೇಳಿಕೊಳ್ಳಲು ಹಿಂಜರಿಕೆ ಇಲ್ಲ ಎಂದು ಹೇಳಿದ್ದಾರೆ. ನ್ಯಾಷನಲ್ ಬುಕ್ ಟ್ರಸ್ಟ್ನ ಹಾಲಿ ಛೇರ್ಮನ್ ಮತ್ತು ಆರೆಸ್ಸಸ್ನ ಸಿದ್ಧಾಂತವಾದಿ ಬಲದೇವ್ ಶರ್ಮ ಅವರು ತಂದೆ ತನ್ನ ಮಕ್ಕಳಿಗೆ ಹೇಗೆ ವ್ಯಾಸಂಗ ಮಾಡುತ್ತಿದ್ದೀರಿ ಎಮದು ಕೇಳುವುದರಲ್ಲಿ ತಪ್ಪೇನಿದೆ ಎಂದು ಉದ್ಗರಿಸಿದ್ದಾರೆ.

ಆದರೆ ಹಿಂದುತ್ವದ ರಾಷ್ಟ್ರಕ್ಕಾಗಿ ಸಂಘಟನೆಗೊಳ್ಳುತ್ತಿರುವ, ಈ ಹಿಂದೂ ರಾಷ್ಟ್ರವನ್ನು ಅಲ್ಪಸಂಖ್ಯಾತರ ತುಚ್ಛೀಕರಣದ ಮೂಲಕ ಕಟ್ಟಲು ಬಯಸುವ, ಕಳೆದ 60 ವರ್ಷಗಳ ಇತಿಹಾಸದಲ್ಲಿ ಸಮಾಜದಲ್ಲಿ ಕೋಮು ಗಲಭೆಗಳಿಗೆ ಕಾರಣವಾದ ಮೂಲಭೂತವಾದಿ ಸಂಘಟನೆ ಆರೆಸ್ಸಸ್ನೊಂದಿಗೆ ತನ್ನನ್ನು ಗುರುತಿಸಕೊಳ್ಳ ಬಯಸುವ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಈ ನಡೆ ಅಪಾಯಕಾರಿ. ಇದು ಕೇವಲ ಹಿಂದುತ್ವದ ಮತೀಯವಾದಿಗಳನ್ನು ಪ್ರೋತ್ಸಾಹಿಸುವುದಿಲ್ಲ ಜೊತೆಗೆ ಸಂವಿಧಾನದ ಎಲ್ಲಾ ಆಶಯಗಳನ್ನು, ಕಲಮುಗಳನ್ನು ಪರೋಕ್ಷವಾಗಿ ಭಗ್ನಗೊಳಿಸುತ್ತದೆ. ಇದೇ ಟ್ರೆಂಡ್ ಮುಂದುವರೆದರೆ ಶಿವ ವಿಶ್ವನಾಥನ್ ಅವರು ಹೇಳಿದಂತೆ ಬಿಜೆಪಿ ಆಡಳಿತದಲ್ಲಿ ಸಂವಿಧಾನವು ಒಂದು ಅನ್ಯಲೋಕದ ಗ್ರಹದಂತೆ ಬಿಂಬಿತವಾಗುತ್ತದೆ. ಇದು ತುಂಬಾ ಅಪಾಯಕಾರಿ.

2104ರ ಚುನಾವಣೆಯಲ್ಲಿ ಸದಾ ಸುಳ್ಳನ್ನೇ ನುಡಿಯುವ ನರೇಂದ್ರ ಮೋದಿ ಅಭಿವೃದ್ಧಿ ಕುರಿತಾಗಿ ಭರವಸೆ ಕೊಟ್ಟಿದ್ದಕ್ಕಾಗಿ, ಅಚ್ಛೇ ದಿನ್ ಎನ್ನುವ ಕನಸಿನ ಬೆಲೂನು ತೇಲಿ ಬಿಟ್ಟಿದ್ದಕ್ಕಾಗಿ ಲಕ್ಷಾಂತರ ಜನತೆ ಅವರಿಗೆ ಮತ ಹಾಕಿದ್ದರೇ ಹೊರತು ಸಂಪೂರ್ಣ ಪುರುಷರ, ಸಂಪೂರ್ಣ ಹಿಂದೂಗಳನ್ನೊಳಗೊಂಡ ಆರೆಸ್ಸಸ್ನ ಸಿದ್ಧಾಂತಕ್ಕೆ ಅಲ್ಲವೇ ಅಲ್ಲ. ಎಲ್ಲರ ವಿಕಾಸ ಎನ್ನುವ ಮೋಸದ ಸ್ಲೋಗನ್ಗೆ ಮಾರುಹೋಗಿ ವೋಟ್ ಮಾಡಿದರೇ ಹೊರತಾಗಿ ಈ ಆರೆಸ್ಸಸ್ನ ಸೋ ಕಾಲ್ಡ್ ಹಿಂದುತ್ವ ಸಿದ್ಧಾಂತಕ್ಕೆ ಅಲ್ಲವೇ ಅಲ್ಲ. ಇಂದು ಇದೇ ಪ್ರಜೆಗಳು ಈ ಕೇಂದ್ರ ಸರ್ಕಾರದ ಈ ತೆರೆಮರೆ ಹಿಂದಿನ ಚಟುವಟಿಕೆಗಳನ್ನು ಪ್ರಶ್ನಿಸಬೇಕಾಗಿದೆ.

ಸಂವಿಧಾನಬದ್ಧ ಸರ್ಕಾರವನ್ನು ಅಸಂವಿಧಾನ ಮಾದರಿಯಲ್ಲಿ, ಪ್ರಜಾಪ್ರಭುತ್ವದ ಆಶಯಗಳಿಗೆ ವಿರೋಧವಾಗಿ ಆರೆಸ್ಸಸ್ ಎನ್ನುವ ರಿಮೋಟ್ ಕಂಟ್ರೋಲ್ಗೆ ಸಾರ್ವಜನಿಕವಾಗಿ ಮಂಡಿಯೂರಿದ್ದನ್ನು ನಾವೆಲ್ಲ ಪ್ರತಿಭಟಿಸಬೇಕಾಗಿದೆ ಆದರೆ ತನ್ನನ್ನು ತಾನು ಮಹಾನ್ ಹಿಂದೂ ರಾಷ್ಟ್ರೀಯವಾದಿ ಮತ್ತು ಹಿಂದೂ ಧರ್ಮದ ಅತ್ಯುನ್ನತ ಮೌಲ್ಯಗಳನ್ನು ಒಳಗೊಂಡಂತಹ ಪ್ರಾಮಾಣಿಕ ಸಂಘಟನೆ ಎಂದು ಬೆನ್ನು ತಟ್ಟಿಕೊಳ್ಳುವ ಮತ್ತು ಮಾಧ್ಯಮಗಳಲ್ಲಿ ಕೂಗುಮಾರಿಯಂತೆ ಆರಚುವ ಆರೆಸ್ಸಸ್ ಮತ್ತು ಅದರ ಸಹ ಸಂಘಟನೆಗಳ ಅಣ್ಣನಂತಿರುವ ಬಿಜೆಪಿ ಪಕ್ಷ ಅಧಿಕಾರದಲ್ಲಿರುವ ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸಗಡ, ಹರ್ಯಾಣ, ಮಹಾರಾಷ್ಟ್ರ, ಗುಜರಾತ್ನಂತಹ ಪ್ರಮುಖ ರಾಜ್ಯಗಳಲ್ಲಿ ಆಡಳಿತ ಯಂತ್ರವು ಸಂಪೂರ್ಣ ಕುಸಿದು ಹೋಗಿದೆ.

ಹಿಂದೂ ಮೂಲಭೂತವಾದಿಗಳ ದೌರ್ಜನ್ಯ ಮತ್ತು ಹಲ್ಲೆಗಳು ಕ್ರೌರ್ಯದ ಹಂತವನ್ನು ತಲುಪಿವೆ. ಘರ್ ವಾಪಸಿ, ಭೀಫ್ ನಿಷೇಧ, ಜೈನ್ರ ಹಬ್ಬದ ಸಂದರ್ಭದಲ್ಲಿ ಮಾಂಸದ ನಿಷೇಧ, ಪಠ್ಯಪುಸ್ತಕಗಳ ಕೇಸರೀಕರಣ, ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವ ಕಾನೂನುಗಳು, ವ್ಯಾಪಂ ಹಗರಣ, ಸರ್ಕಾರಿ ಸಂಸ್ಥೆಗಳಲ್ಲಿ ಆರೆಸ್ಸಸ್ ಸ್ವಯಂಸೇವಕರು, ಸಿದ್ಧಾಂತವಾದಿಗಳ ನೇಮಕಗಳು, ಅಲ್ಪಸಂಖ್ಯಾತರ ಮೇಲೆ ನಿರಂತರ ಹಲ್ಲೆಗಳು ಹೀಗೆ ಈ ಹಿಂದುತ್ವದ ಮೂಲಭೂತವಾದವು ಈ ಬಿಜೆಪಿ ಸರ್ಕಾರದ ರಾಜ್ಯಗಳಲ್ಲಿ ಮೇಲುಗೈ ಸಾಧಿಸಿವೆ. ಇತ್ತೀಚೆಗೆ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಸಂಸ್ಕೃತಿ ಸಚಿವರಾಗಿರುವ ಮಹೇಶ್ ಶರ್ಮ ಎನ್ನುವ ಮತೀಯವಾದಿ ಮುಸ್ಲಿಂರಾಗಿದ್ದರೂ ಸಹ ಅಬ್ದುಲ್ ಕಲಾಂ ಅವರು ಮಹಾನ್ ರಾಷ್ಟ್ರೀಯವಾದಿಯಾಗಿದ್ದರು ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ಮಂತ್ರಿಯೊಬ್ಬರು ಮುಸ್ಲಿಂ ಸಮುದಾಯವನ್ನು ಅವಮಾನಿಸುವಂತಹ, ಅವರ ಮೌಲ್ಯಗಳನ್ನೇ ಪ್ರಶ್ನಿಸುವಂತಹ ಇಂತಹ ಮಾತುಗಳನ್ನು ಕೇವಲ ಆಕಸ್ಮಿಕವಾಗಿ ಆಡಿದ್ದಲ್ಲ. ಪ್ರಜ್ಞಾಪೂರ್ವಕವಾಗಿಯೇ ನುಡಿದಿದ್ದಾರೆ. ಆರೆಸ್ಸಸ್ನ ಅಂತರಂತಗದ ಮಾತುಗಳನ್ನು ಬಹಿರಂಗವಾಗಿ ಆಡಿದ್ದಾರೆ ಈ ಸ್ವಯಂಸೇವಕ ಕಂ ಸಚಿವ ಮಹೇಶ್ ಶರ್ಮ. ಇದೇ ಸಂಸ್ಕೃತಿ ಸಚಿವ ಮಹೇಶ್ ಶರ್ಮ ಆರೆಸ್ಸಸ್ನ ಚಿಂತನ ಭೈಠಕ್ನಲ್ಲಿ ಸಾರ್ವಜನಿಕ ವಲಯಗಳಲ್ಲಿ ಪಶ್ಚಿಮದ ಪ್ರಭಾವಕ್ಕೆ ಒಳಪಟ್ಟ ಇತಿಹಾಸವಾಗಿರಲಿ, ಸಾಂಸ್ಕೃತಿಕ ಸ್ಮಾರಕಗಳಾಗಿರಲಿ, ಸಂಸ್ಥೆಗಳಾಗಿರಲಿ ಎಲ್ಲವನ್ನೂ ಶುದ್ಧೀಕರಿಸುತ್ತೇವೆ ಮತ್ತು ಆ ಸ್ಥಾನದಲ್ಲಿ ಭಾರತದ ಸಂಸ್ಕೃತಿಯನ್ನು,ನಾಗರಿಕತೆಯನ್ನು ಸ್ಥಾಪಿಸುತ್ತೇವೆ ಎಂದು ಹೇಳಿದ್ದಾರೆಂದು ವರದಿಯಾಗಿದೆ. ಇಲ್ಲಿ ಭಾರತೀಯ ಸಂಸ್ಕೃತಿ ಎಂದರೆ ಆರೆಸ್ಸಸ್ ಪ್ರತಿಪಾದಿಸುವ ಕರ್ಮಠತನದ,ಸನಾತನವಾದಿ ಹಿಂದೂ ಸಂಸ್ಕೃತಿ ಎಂದು ಬೇರೆ ಹೇಳಬೇಕಿಲ್ಲ.

ಈ ಹಿಂದೂ ಮೌಲ್ಯಗಳ ಸ್ಯಾಂಪಲ್ಗಾಗಿ ಇತ್ತೀಚೆಗೆ ಮುಚ್ಚಿಕೊಂಡ ಹಿಂದೂಯಿಸಂ ಎನ್ನುವ ಸನಾತನ ಧರ್ಮವನ್ನು ಪ್ರತಿಪಾದಿಸುವ ಗೀತಾ ಪ್ರೆಸ್ ಕಡೆಗೆ ಗಮನ ಹರಿಸೋಣ. 1923ರಲ್ಲಿ ಸ್ಥಾಪನೆಗೊಂಡ ಈ ಗೀತಾ ಪ್ರೆಸ್ ಅನ್ನು ಉ.ಪ್ರ. ಗೋರಖ್ಪುರದಲ್ಲಿ ಜಯದಯಾಲ್ ಗೊಯೆಂಕ ಎನ್ನುವ ಮಾರ್ವಾಡಿ ಪ್ರಾರಂಭಿಸಿದರು. ಅಲ್ಲಿ ಹಿಂದೂ ಧರ್ಮದ ಪ್ರಚಾರ ಮತ್ತು ಅದರ ಸನಾತನ ಪರಂಪರೆಯನ್ನು ಪ್ರತಿಪಾದಿಸುವ ಸಲುವಾಗಿ ಕಲ್ಯಾಣ್ ಎನ್ನುವ ಮಾಸಿಕ ಪತ್ರಿಕೆಯನ್ನು ಮುದ್ರಿಸುತ್ತಿದ್ದರು. ಈ ಮುದ್ರಣಾಲಯವು ಭಗವದ್ಗೀತೆ, ತುಲಸೀ ರಾಮಾಯಣ, ಉಪನಿಷತ್, ಪುರಾಣದ ಪುಸ್ತಕಗಳನ್ನು ಮುದ್ರಿಸಿ ಮಾರಾಟ ಮಾಡುತ್ತಿತ್ತು. ಮೊನ್ನೆಯವರೆಗೂ ಈ ಕಲ್ಯಾಣ್ ಪತ್ರಿಕೆಯ ಪ್ರಸಾರ 2 ಲಕ್ಷವನ್ನು ದಾಟಿತ್ತು ಎಂದು ವರದಿಯಾಗಿದೆ. ಆರೆಸ್ಸಸ್ ಬ್ರಾಹ್ಮಣ-ಬನಿಯಾ ಸಂಘಟನೆ ಎಂದು ಗೇಲಿಗೊಳಗಾಗುತ್ತಿತ್ತು ಮತ್ತು ಈ ಕಲ್ಯಾಣ್ ಮಾಸಿಕ ಪತ್ರಿಕೆಯಲ್ಲಿಯೂ ಸಹ ಕೇವಲ ಬ್ರಾಹ್ಮಣ, ಬನಿಯಾ, ಮಾರ್ವಾಡಿ ಮಾತ್ರ ಬರೆಯುತ್ತಿದ್ದರು. ಇದರ ಸಂಪಾದಕರಾಗಿದ್ದ ಹನುಮಾನ್ ಪ್ರಸಾದ್ ಪೊದ್ದಾರ್ ಮತ್ತು ಮಾರ್ವಾಡಿ ಮಾಲೀಕರ ಅನುಸಾರ ಬ್ರಾಹ್ಮಣ, ಬನಿಯಾ, ಕ್ಷತ್ರಿಯರು ಮಾತ್ರ ದ್ವಿಜರು (ಎರಡು ಜನ್ಮವನ್ನು ಪಡೆದವರು) ಅಂದರೆ ಶ್ರೇಷ್ಠರು ಎಂದು ಪರಿಗಣಿಸುತ್ತಿದ್ದರು. ಜಿ.ಸಂಪತ್ ಅವರು ಈ ಗೀತಾ ಪ್ರೆಸ್ನ ಟ್ರಸ್ಟ್ ಆಗಿದ್ದ ಗೋವಿಂದ ಭವನ ಕಾರ್ಯಾಲಯಕ್ಕೆ ಕೇವಲ ಸನಾತನ ಧರ್ಮದ ಹಿಂದೂಗಳಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗೆ ಮಾತ್ರ ಸದಸ್ಯರಾಗುವ ಅವಕಾಶವಿತ್ತು, ಆದರೆ ಶೂದ್ರ ಮತ್ತು ದಲಿತರು ಮತ್ತು ಆದಿವಾಸಿಗಳಿಗೆ ಸದಸ್ಯರಾಗುವ ಅವಕಾಶವಿರಲಿಲ್ಲ. ಏಕೆಂದರೆ ಅವರು ದ್ವಿಜರಾಗಿರಲಿಲ್ಲ. ಈ ಗೀತಾ ಪ್ರೆಸ್ ರಾಜಸ್ತಾನದಲ್ಲಿಯೂ ಸಹ ಶಾಲೆಯೊಂದನ್ನು ನಡೆಸುತ್ತಿದೆ. ಅಲ್ಲಿ ದ್ವಿಜರಾದ ಕೇವಲ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರ ಮಕ್ಕಳಿಗೆ ಮಾತ್ರ ಪ್ರವೇಶ ಮಾಡಿಕೊಳ್ಳಲಾಗುತ್ತದೆ ಎಂದು ಬರೆಯುತ್ತಾರೆ. ಲೇಖಕ ಅಮಿತ್ ಪಾಲ್ ಅವರು ಈ ಗೀತಾ ಪ್ರೆಸ್ ಕುರಿತು ಸಾರಾಂಶದಲ್ಲಿ ಹೇಳಬೇಕೆಂದರೆ ಅದು ಇಂಡಿಯಾದಲ್ಲಿ ಮುಸ್ಲಿಂರು ಅತಿಥಿಗಳಂತೆ ಬದುಕಬೇಕು, ಸತಿ ಪದ್ಧತಿಯನ್ನು ಅನುಸರಿಸದ ಮಹಿಳೆಯರು ಬಹಿರಂಗವಾಗಿ ಕಾಣಿಸಿಕೊಳ್ಳಬಾರದು, ಮಹಿಳೆಯರಿಗೆ ವಾಕ್ ಸ್ವಾತಂತ್ರ ಕೊಡಬಾರದು, ದಲಿತರಿಗೆ ಅವರ ಸ್ಥಾನವೇನೆಂದು ಅರಿವಿರಬೇಕು ಮತ್ತು ಮೇಲ್ಜಾತಿಗಳ ಸೇವೆ ಮಾಡಬೇಕು ಎಂದು ಪ್ರವಚನ ನೀಡುತ್ತದೆ.

1926ರಲ್ಲಿ ಅದರ ಕಲ್ಯಾಣ್ ಪತ್ರಿಕೆ ಸ್ತ್ರೀ ಧರ್ಮದ ಹೆಸರಿನಲ್ಲಿ 46 ಪುಟಗಳ ಪ್ರಶ್ನೋತ್ತರಗಳನ್ನು ಪ್ರಕಟಿಸಿತು. ಅದರಲ್ಲಿ ಬಾಲ್ಯದಲ್ಲಿ ಮಹಿಳೆ ತನ್ನ ತಂದೆಯ ಅಡಿಯಲ್ಲಿ, ಯೌವನದಲ್ಲಿ ತನ್ನ ಗಂಡನ ಅಡಿಯಲ್ಲಿ, ಗಂಡನ ಸಾವಿನ ನಂತರ ತನ್ನ ಮಕ್ಕಳ ಅಡಿಯಲ್ಲಿ ಬದುಕಬೇಕು ಎಂದು ಬರೆಯಲಾಗಿದೆ ಎಂದು ವಿವರಿಸುತ್ತಾರೆ. ಇದು ಆರೆಸ್ಸಸ್ನ ಸಿದ್ಧಾಂತವೂ ಹೌದು. ಮೇಲಿನ ಗೀತಾ ಪ್ರೆಸ್ನ ಎಲ್ಲಾ ಐಡಿಯಾಲಜಿಗಳೂ ಆರೆಸ್ಸಸ್ನ ಐಡಿಯಾಲಜಿಗಳು. 90 ವರ್ಷಗಳ ಈ ಗೀತಾ ಪ್ರೆಸ್ನ ಚಟುವಟಿಕೆಗಳು ಆರೆಸ್ಸಸ್ನ ಪ್ರತಿಬಿಂಬಗಳು. ಈ ಹಿಂದೂ ರಾಷ್ಟ್ರೀಯತೆ,ಹಿಂದೂ ಇಂrss-3ಡಿಯಾ ಎನ್ನುವ ಐಡಿಯಾಲಜಿಗಳನ್ನು ಪ್ರಚಾರ ಮಾಡುವ ಆರೆಸ್ಸಸ್ನ ಪ್ರಣಾಳಿಕೆಯ ಅನುಸಾರ ಸೆಕ್ಯುಲರ್ ಇಂಡಿಯಾ ಎನ್ನುವ ತತ್ವವು ಎಂದಿಗೂ ಮಾನ್ಯವಾಗಿಲ್ಲ ಮತ್ತು ಅದಕ್ಕೆ ಆಸ್ತಿತ್ವವೇ ಇಲ್ಲ. ಆರೆಸ್ಸಸ್ ಸದಾ ಕಾಲ ಜಪಿಸುವ ಹಿಂದೂ ಪ್ರತಿಷ್ಠೆ ಸನಾತನ ಧರ್ಮದ ಐಡಿಯಾಲಜಿಯಿಂದ ಒಡಮೂಡಿದೆ. ಇತರೇ ಧರ್ಮದವರ ನಂಬಿಕೆಗಳನ್ನು ಅಪಹಾಸ್ಯ ಮಾಡುವ ಆರೆಸ್ಸಸ್ ಆಧ್ಯಾತ್ಮವನ್ನು ಹಿಂದೂ ಸನಾತನ ಧರ್ಮವೆಂದು ವ್ಯಾಖ್ಯಾನಿಸುತ್ತದೆ ಮತ್ತು ಈ ಸನಾತನ ಧರ್ಮಕ್ಕಾಗಿ ಹಿಂಸೆಯನ್ನು ಪ್ರಚೋದಿಸುತ್ತದೆ.

ಇಂದು ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಈ ಬಿಜೆಪಿ ಸರ್ಕಾರ ಮಂದುವರೆದ ರೆ ಪ್ರಜಾಪ್ರಭುತ್ವ ಮತ್ತು ಗಣರಾಜ್ಯ ವ್ಯವಸ್ಥೆ ಅಳಿವಿನಂಚಿಗೆ ತಳ್ಳಲ್ಪಡುತ್ತದೆ. ಈ ಆರೆಸ್ಸಸ್ ಸಂಘಟನೆಯ ಎಲ್ಲಾ ಚಟುವಟಿಕೆಗಳನ್ನು ಕೂಲಂಕುಶ ತನಿಖೆಗೊಳಿಸಬೇಕಾಗಿದೆ. ಪ್ರಜಾಪ್ರಭುತ್ವದ ಗಣರಾಜ್ಯದ ರಾಷ್ಟ್ರವೊಂದರ ಎಲ್ಲಾ ಕಾನೂನು ಮತ್ತು ನಿಯಮಗಳಿಗೆ ಒಳಪಡುವಂತೆ ಮತ್ತು ತನ್ನ ಎಲ್ಲಾ ಸಹ ಸಂಘಟನೆಗಳ ಭಯೋತ್ಪಾದಕ ಕಾರ್ಯಚಟುವಟಿಕೆಗಳಿಗೆ ಹಕ್ಕುದಾರನಾಬೇಕೆಂದು ಆರೆಸ್ಸಸ್ ಸಂಘಟನೆಯ ವಿರುದ್ಧ ಆಂದೋಲನವನ್ನೇ ರೂಪಿಸಬೇಕಾಗಿದೆ.