Daily Archives: September 1, 2015

ಜಾಲದಲ್ಲಿ ಸಮಾನತೆ: ಅಂತರ್ಜಾಲ ದತ್ತಾಂಶದ ಹರಿಹೊಳೆಯಲ್ಲಿ ದೈತ್ಯ ಕಂಪನಿಗಳ ಲಾಭಕೋರತನ

– ಜೈಕುಮಾರ್
[Free Software Movement Karnataka]

‘ಜಾಲದಲ್ಲಿ ಸಮಾನತೆ’ಗಾಗಿ ನಡೆಸುವ ಹೋರಾಟವು ಪ್ರಜಾಪ್ರಭುತ್ವದ ಉಳಿವಿಗಾಗಿ ನಡೆಯುವ ಯುದ್ದಗಳಲ್ಲೇ ಪ್ರಮುಖವಾದದ್ದು.
– ಮಾಧ್ಯಮ ಚಿಂತಕ ರಾಬರ್ಟ್ ಮ್ಯಾಚೆಸ್ನಿ

ಜಾಲದಲ್ಲಿ ಸಮಾನತೆ ಕುರಿತು ಚರ್ಚಿಸುವ ಮುನ್ನ ಒಂದೆರಡು ಸರಳ ಉದಾಹರಣೆಗಳ ಮೂಲಕ ಅದನ್ನು ಅರ್ಥ ಮಾಡಿಕೊಳ್ಳಲು ಯತ್ನಿಸೋಣ.

ದೀರ್ಘ ಪ್ರಯಾಣ ನಡೆಸುವ ವೇಳೆ ಬಹುತೇಕ ಎಲ್ಲ ಬಸ್ಸುಗಳು ಈಗಾಗಲೇ ನಿಗಧಿಮಾಡಿಕೊಂಡಿರುವ ಹೋಟೆಲ್‌ಗಳ ಬಳಿಯೇ ನಿಲ್ಲಿಸುತ್ತವೆ. ಅವುಗಳ ನಡುವೆ ಮೊದಲೇ ಕೊಡುಕೊಳ್ಳುವಿಕೆಯ ಒಪ್ಪಂದವಾಗಿರುತ್ತದೆ. ಆ ಹೋಟೆಲ್‌ಗಳು ಪ್ರಯಾಣಿಕರಿಗೆ ಇಷ್ಟವಿದೆಯೋ ಇಲ್ಲವೋ, ಅವುಗಳ ಗುಣಮಟ್ಟ ಚೆನ್ನಾಗಿದೆಯೋ ಇಲ್ಲವೋ ಅದು ಮುಖ್ಯವಾಗುವುದಿಲ್ಲ. ಸರ್ಕಾರವೇ ಗುಣಮಟ್ಟವಿರುವ ಎಲ್ಲ ಹೋಟೆಲ್‍ಗಳನ್ನು ಅಂತಿಮಗೊಳಿಸಿ ಇಂತಿಂಥ ಬಸ್ಸುಗಳು ಇಂತಿಂಥ ಹೋಟೆಲ್‌ಗಳ ಬಳಿ ನಿಲುಗಡೆಯಾಗಬೇಕೆಂದು ನಿರ್ಧರಿಸಿದರೆ ಎಲ್ಲಾ ಹೋಟೆಲ್‌ಗಳೂ ಮತ್ತು ಪ್ರಯಾಣಿಕರಿಗೂ ಸಮಾನ ನೆಲೆ ಒದಗಿಸಿದಂತಾಗುತ್ತದೆಯಲ್ಲವೇ?…

ಹಲವಾರು ಖಾಸಗಿ ಶಾಲೆಗಳಲ್ಲಿ ಪ್ರವೇಶ ಶುಲ್ಕ ಮಾತ್ರವಲ್ಲದೇ ಸಮವಸ್ತ್ರ, ಪ್ರತ್ಯೇಕ ಟ್ಯೂಷನ್, ಕ್ರೀಡಾ ತರಬೇತಿ, ಇತ್ಯಾದಿ ಗಳಿಗೆಲ್ಲ ಪ್ರತ್ಯೇಕ ಶುಲ್ಕಗಳಿವೆ. ಆ ಶುಲ್ಕವನ್ನು ಕಟ್ಟಲು ಒಪ್ಪುವವರಿಗೆ ಮಾತ್ರವೇ ಪ್ರವೇಶ ನೀಡುತ್ತವೆ. ಇಲ್ಲದಿದ್ದಲ್ಲಿ, ಪ್ರವೇಶ ನಿರಾಕರಿಸುವುದು ಸರ್ವೇ ಸಾಮಾನ್ಯವಾಗಿದೆ.

ಇಂಥಹ ಪರಿಸ್ಥಿತಿ, ಜಾಲದಲ್ಲಿ ಸಮಾನತೆ ಇಲ್ಲವಾದಾಗ ನೆಟ್ ಬಳಕೆದಾರರಿಗೂ ಬರುವ ದಿನಗಳು ದೂರವಿಲ್ಲ.net-neutrality2

‘ಏರ್‌ಟೆಲ್ ಝೀರೋ’ ಎಂಬ ಯೋಜನೆಯಡಿ ಬಳಕೆದಾರರಿಗೆ ಉಚಿತವಾಗಿ ಇಂಟರ್ನೆಟ್ ಸೌಲಭ್ಯ ಒದಗಿಸುವುದಾಗಿ ಮತ್ತು ದತ್ತಾಂಶ ವರ್ಗಾವಣೆಗಾಗಿ ವೆಚ್ಚವನ್ನು ಇಂಟರ್ನೆಟ್ ಕಂಪನಿಗಳಿಂದ ಪಡೆಯುವುದಾಗಿ ಇತ್ತೀಚೆಗೆ ಏರ್‌ಟೆಲ್ ಕಂಪನಿಯು ಹೆಜ್ಜೆ ಹಾಕಿತ್ತು! ಈ ಯೋಜನೆಯಲ್ಲಿ ಭಾಗೀದಾರನಾಗಿ ‘ಪ್ಲಿಪ್‍ಕಾರ್ಟ್’ ಎಂಬ ಆನ್‍ಲೈನ್ ಕಂಪನಿಯು ಕೈಜೋಡಿಸಿತು. ಇದು ಮೇಲ್ನೋಟಕ್ಕೆ ಉಚಿತ ಸೇವೆಯಂತೆ ಕಾಣುವುದರಲ್ಲಿ ಸಂದೇಹವೇನು ಇಲ್ಲ. ಆದರೆ, ಏರ್‌ಟೆಲ್‌ನಂತಹ ಟೆಲಿಕಾಂ ಕಂಪನಿಗಳು ದೈತ್ಯ ಇಂಟರ್ನೆಟ್ ಕಂಪನಿಗಳ ಜೊತೆ ಸೇರಿ ಲಾಭಕ್ಕಾಗಿ ಇಂಟರ್ನೆಟ್ ವ್ಯವಸ್ಥೆಯನ್ನು ಕೈವಶ ಮಾಡಿಕೊಳ್ಳುವುದರ ವಿರುದ್ದ ಲಕ್ಷಾಂತರ ಇಂಟರ್ನೆಟ್ ಬಳಕೆದಾರರು ಮತ್ತು ಸ್ವಾತಂತ್ರ್ಯ ಪ್ರೇಮಿಗಳು ಇದನ್ನು ಪ್ರತಿಭಟಿಸಿದರು. ಇದು ಇಂಟರ್‌ನೆಟ್‌ ಬಳಕೆದಾರರ ಹಕ್ಕಿನ ಉಲ್ಲಂಘನೆ ಎಂದೂ, ‘ಜಾಲದ ಅಲಿಪ್ತತೆ’ / ‘ಜಾಲದಲ್ಲಿ ತಾಟಸ್ಥ್ಯ ಅಥವಾ ಜಾಲದಲ್ಲಿ ಸಮಾನತೆ’ ಅಥವಾ ‘Net Neutrality’ ಯನ್ನು ಬುಡಮೇಲು ಮಾಡುವುದೆಂದೂ ಜಾಲತಾಣಗಳಲ್ಲಿ ಚರ್ಚೆಗಳು ನಡೆಯತೊಡಗಿದವು. ಇದರಿಂದ ಮುಖಭಂಗ ಅನುಭವಿಸಿದ ‘ಪ್ಲಿಪ್‍ಕಾರ್ಟ್’ ಕಂಪನಿಯು ಮೊದಲಿಗೆ ಈ ಯೋಜನೆಯಿಂದ ಆಚೆಗೆ ಬಂದಿತು. ನಂತರ ಏರ್‌ಟೆಲ್ ಕಂಪನಿಯು ನಿಧಾನವಾಗಿ ಹಿಂದೆ ಸರಿದಂತೆ ಮಾಡಿತು.

‘ಜಾಲದಲ್ಲಿ ಸಮಾನತೆ’ ಅಥವಾ ‘Net Neutrality’ ಸಮಸ್ಯೆಯು ಬಹಳ ಸಂಕೀರ್ಣ ವಿಷಯದಂತೆಯೂ, ಕೇವಲ ನೆಟ್ ಬಳಕೆದಾರರಿಗೆ ಮಾತ್ರವೇ ಸಂಬಂಧಿಸಿರುವಂತೆಯೂ ಮೇಲ್ನೋಟಕ್ಕೆ ಕಾಣುತ್ತಿದೆ. ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ಮುಖ್ಯ ವಿಷಯವೇನೆಂದರೆ, ಇಂಟರ್‌ನೆಟ್‌ ಮೇಲಿನ ನಿಯಂತ್ರಣಕ್ಕಾಗಿ ನಡೆಯುತ್ತಿರುವ ಕಾಳಗದ ರಣಭೂಮಿಯೇ ‘ಜಾಲದಲ್ಲಿ ಸಮಾನತೆ’ ಎಂಬ ಪರಿಕಲ್ಪನೆ. ಅಂದರೆ, ಭೌತಿಕ ನೆಟ್‍ವರ್ಕ್‍ಗಳ ಮಾಲೀಕತ್ವ ಹೊಂದಿರುವವರು ಅಥವಾ ನಿಯಂತ್ರಿಸುತ್ತಿರುವವರು, ಆ ನೆಟ್‍ವರ್ಕ್‍ಗಳ ಮೇಲೆ ಹರಿಯುವ ಇಂಟರ್‌ನೆಟ್‌ ಮುಖೇನಾ ಒದಗಿಸಲಾಗುವ ವಿವಿಧ ರೀತಿಯ ಸೇವೆಗಳು ಅಥವಾ ಜಾಲತಾಣಗಳ ನಡುವೆ ತಾರತಮ್ಯ ಮಾಡಬಾರದು. ಇದು ತಾರತಮ್ಯ-ರಹಿತ ತತ್ವವಾಗಿದ್ದು, ತಂತಿಗಳ ಮೇಲೆ ಏಕಸ್ವಾಮ್ಯ ಹೊಂದಿರುವ ಟೆಲಿಕಾಂ ಕಂಪನಿಗಳು ಅಥವಾ ತರಂಗಗಳ ಮೇಲೆ ಏಕಸ್ವಾಮ್ಯ ಹೊಂದಿರುವ ಮೊಬೈಲ್ ಕಂಪನಿಗಳು ಬಳಕೆದಾರರದಿಂದ ಅಗಾಧ ಪ್ರಮಾಣದ ಶುಲ್ಕ ವಿಧಿಸುವುದನ್ನು ತಡೆಯುತ್ತದೆ.

ಇಂಟರ್‌ನೆಟ್‌ ಎಂದರೆ ಪರಸ್ಪರ ಸಂಪರ್ಕದಲ್ಲಿರುವ ಕಂಪ್ಯೂಟರುಗಳ ಜಾಲದ ಮುಖೇನಾ ಹರಿವ ದತ್ತಾಂಶ ಸಂವಹನ ವ್ಯವಸ್ಥೆ. ಕಂಪ್ಯೂಟರುಗಳ ನಡುವಿನ ಜಾಲವನ್ನು ಆಪ್ಟಿಕಲ್ ಫೈಬರ್‌ನಿಂದ ಸಂಪರ್ಕ ಕಲ್ಪಿಸಲಾಗುತ್ತದೆ. ತಂತುರಹಿತ ವ್ಯವಸ್ಥೆಯಲ್ಲಿ ತರಂಗಗಳ ಮೂಲಕ ಸಾಧ್ಯವಾಗುತ್ತದೆ. ಜಾಲ ವ್ಯವಸ್ಥೆಯ ಮೂಲಸೌಲಭ್ಯವನ್ನು ಬಿಎಸ್‍ಎನ್‍ಎಲ್, ಏರ್‌ಟೆಲ್‌ನಂತಹ ಟೆಲಿಕಾಂ ಕಂಪನಿಗಳು ನಿರ್ವಹಿಸಿದರೆ, ಈ ಜಾಲದಲ್ಲಿ ಹರಿದಾಡುವ ದತ್ತಾಂಶವನ್ನು ಸೃಷ್ಟಿಸಿ ನಿರ್ವಹಿಸುವವರು ಗೂಗಲ್, ಫೇಸ್‍ಬುಕ್‍ನಂಥ ದೈತ್ಯ ಕಂಪನಿಗಳು. ದತ್ತಾಂಶ ಸೃಷ್ಟಿಯಲ್ಲಿ ಜಾಲತಾಣಗಳ ಮೂಲಕ net-neutralityಜನ ಸಾಮಾನ್ಯರೂ ದೊಡ್ಡ ಪ್ರಮಾಣದಲ್ಲಿ ತೊಡಗಿದ್ದಾರೆ. ಜಾಲ ಸಮಾನತೆ ಪರಿಕಲ್ಪನೆಯಂತೆ ಜಾಲ ವ್ಯವಸ್ಥೆ ಮತ್ತು ಅದರಲ್ಲಿ ಚಲಿಸುವ ದತ್ತಾಂಶಗಳೆರಡೂ ಸ್ವತಂತ್ರವಾಗಿರಬೇಕು.

ಜಾಲದಲ್ಲಿ ಸಮಾನತೆ ಎಂದರೇನು?

ಟೆಲಿಕಾಂ ಆಪರೇಟರ್‍ಗಳು ಮತ್ತು ಇಂಟರ್‌ನೆಟ್ ಸೇವಾ ಪೂರೈಕೆದಾರ ಕಂಪನಿಗಳು ನಿಮಗೆ ಇಂಟರ್‌ನೆಟ್‌‌ ಪ್ರವೇಶಾವಕಾಶ ಒದಗಿಸುತ್ತವೆ. ಹಾಗೆಯೇ ಎಷ್ಟರಮಟ್ಟಿಗೆ ನಿಮಗೆ ಪ್ರವೇಶಾವಕಾಶ ನೀಡಬಹುದು, ನೀವು ಎಷ್ಟು ವೇಗವಾಗಿ ಪ್ರವೇಶಾವಕಾಶ ಪಡೆಯಬಹುದು ಮತ್ತು ಅಂತರ್ಜಾಲದ ವಿಷಯ ಮತ್ತು ಸೇವೆಗಳಿಗೆ ಪ್ರವೇಶಾವಕಾಶ ಪಡೆಯಲು ನೀವೆಷ್ಟು ಪಾವತಿಸಬೇಕು ಎಂಬುದನ್ನು ಈ ಕಂಪನಿಗಳು ನಿಯಂತ್ರಿಸುತ್ತವೆ. ಜ್ಞಾನ ಎಲ್ಲೆಡೆ ಪಸರಿಸಲು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಖಾತರಿಪಡಿಸಲು ಇಂಟರ್‌ನೆಟ್‌ ಸೇವೆಯು ಸಮಾನತೆ ಹೊಂದಿರಬೇಕಾಗಿರುತ್ತದೆ. ಇದಕ್ಕಾಗಿ:
– ಎಲ್ಲಾ ಜಾಲ ತಾಣ ಬಳಸುವುದಕ್ಕೂ ಸಮಾನ ಅವಕಾಶವಿರಬೇಕು.
– ಎಲ್ಲಾ ಜಾಲ ತಾಣ ಪ್ರವೇಶಾವಕಾಶಕ್ಕೂ ಟೆಲಿಕಾಂ/ಇಂಟರ್‌ನೆಟ್‌ ಪೂರೈಕೆದಾರರ ಮಟ್ಟದಲ್ಲಿ ಒಂದೇ ತೆರನಾದ ವೇಗ ಇರಬೇಕು.
– ಎಲ್ಲಾ ಜಾಲ ತಾಣ ಬಳಸುವುದಕ್ಕೂ ಒಂದೇ ದತ್ತಾಂಶ ವೆಚ್ಚ ಇರಬೇಕು.

ಜಾಲದಲ್ಲಿ ಸಮಾನತೆ ಎಂದರೆ, ಟೆಲಿಕಾಂ ಕಂಪನಿಗಳಿಗೆ ವೆಬ್ ಸೈಟ್ ಹೊಂದಿರುವ ಕಂಪನಿಗಳು ಹಣ ನೀಡಲಿ ಅಥವಾ ನೀಡದಿರಲಿ, ಎಲ್ಲ ವೆಬ್ ಸೈಟ್ ಡೌನ್ ಲೋಡ್ ವೇಗ ಒಂದೇ ಇರಬೇಕು.

ಪರಸ್ಪರ ಸಂಪರ್ಕಿಸಲು, ಜ್ಞಾನವನ್ನು ಪಡೆಯಲು, ಸರಕುಗಳನ್ನು ಖರೀದಿ ಮತ್ತು ಮಾರಾಟ ಮಾಡಲು ನಮ್ಮ ಸಂವಹನ ವ್ಯವಸ್ಥೆಯಲ್ಲಿ ಇಂಟರ್‌ನೆಟ್‌ ಪ್ರಮುಖ ಸಾಧನವಾಗಿ ಮೂಡಿಬಂದಿದೆ. ಇದೊಂದು ನವ ಮಾಧ್ಯಮವಾಗಿದ್ದು, ಕೇವಲ ಸಾಮಾಜಿಕ ಮಾಧ್ಯಮವಷ್ಟೇ ಅಲ್ಲ, ಸಾಂಪ್ರದಾಯಿಕ ಮಾಧ್ಯಮವೂ ಆಗುತ್ತಿದೆ; ಮುದ್ರಣ ಮಾಧ್ಯಮ ಮತ್ತು ಟೆಲಿವಿಷನ್‍ಗಳು ಇಂಟರ್‌ನೆಟ್‌‍ಗೆ ವಲಸೆ ಹೋಗುತ್ತಿವೆ.

ಜಾಲದಲ್ಲಿ ಸಮಾನತೆಯನ್ನು ಕಳಕೊಂಡರೆ, ನಮ್ಮ ಇಂಟರ್‌ನೆಟ್‌ ಪ್ರವೇಶಾವಕಾಶವನ್ನು ನಿಯಂತ್ರಿಸುತ್ತಿರುವ ಟೆಲಿಕಾಂ ಕಂಪನಿಗಳು ನಾವು ಏನನ್ನು, ಎಷ್ಟನ್ನು ನೋಡಬೇಕು ಎಂದು ನಿರ್ಧರಿಸುತ್ತವೆ. ಸಣ್ಣ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿಪರ ಮಾಧ್ಯಮಗಳು ತಮ್ಮ ಜಾಲತಾಣಗಳು ಎಲ್ಲೆಡೆ ಕಾಣಸಿಗುವಂತಾಗಲೆಂದು ವಿಶ್ವದ ಪ್ರತಿಯೊಂದು ಟೆಲಿಕಾಂ ಕಂಪನಿಗಳಿಗೆ ಹಣ ನೀಡಲಾರದೆ ಸಾಯುತ್ತವೆ.

ಭಾರತ ದೂರವಾಣಿ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವು ತನ್ನ ಇತ್ತೀಚಿನ ಸಮಾಲೋಚನಾ ಟಿಪ್ಪಣಿಯಲ್ಲಿ ಟೆಲಿಕಾಂ ನೆಟ್‍ವರ್ಕ್ net-neutrality-1ಮೇಲೆ ಒದಗಿಸಲಾಗುವ ಎಲ್ಲಾ ಸೇವೆಗಳನ್ನು ಒವರ್-ದ-ಟಾಪ್ ಸೇವೆಗಳೆಂದು ವ್ಯಾಖ್ಯಾನಿಸಿದೆ. ಇದರಿಂದ ಇಂಟರ್‌ನೆಟ್‌ ಕೂಡ ಹೆಚ್ಚುವರಿ (ಒವರ್-ದ-ಟಾಪ್) ಸೇವೆಯಾಗಿದೆ. ಇದು ಜಾಲದಲ್ಲಿ ಸಮಾನತೆ ತತ್ವಕ್ಕೆ ವಿರುದ್ದವಾಗಿದೆ.

ಒಂದೆಡೆ, ಟೆಲಿಕಾಂ ಕಂಪನಿಗಳು ‘ಜಾಲದಲ್ಲಿ ಸಮಾನತೆ’ ವ್ಯವಸ್ಥೆಯನ್ನು ತೊಡೆದುಹಾಕಲು ನಿಂತಿದ್ದರೆ, ಮತ್ತೊಂದೆಡೆ, ಅತಿ ದೊಡ್ಡ ಇಂಟರ್‌ನೆಟ್‌ ಕಂಪನಿಗಳಾದ ಗೂಗಲ್, ಫೇಸ್‍ಬುಕ್, ಇತ್ಯಾದಿಗಳು ಅವುಗಳಿಗೆ ಹೆಗಲುಕೊಟ್ಟು ನಿಂತಿವೆ. ಇದರ ಜೊತೆಗೆ ‘ಜಾಲದಲ್ಲಿ ಸಮಾನತೆ’ಯನ್ನು ದುರ್ಬಲಗೊಳಿಸಲು ಏರ್‍ಟೆಲ್ ಕಂಪನಿಯು ಏರ್‍ಟೆಲ್ ಝೀರೋ ಯೋಜನೆ ಜಾರಿಗೆ ತರಲು ಯತ್ನಿಸುತ್ತಿದ್ದರೆ, ಫೇಸ್‍ಬುಕ್ ಕಂಪನಿಯು ರಿಲಯನ್ಸ್ ಕಂಪನಿಯ ಜೊತೆ ಸೇರಿ ಕಡಿಮೆ ಬೆಲೆಗೆ ಸೀಮಿತ ಇಂಟರ್‌ನೆಟ್‌ (ಇಂಟರ್‌ನೆಟ್‌.ಆರ್ಗ್) ಯೋಜನೆ ತರುತ್ತಿದೆ.

ವಿಕೇಂದ್ರೀಕೃತ, ವಾಣಿಜ್ಯ-ರಹಿತ ಜಾಲದಿಂದ ಕೇಂದ್ರೀಕೃತ ಏಕಸ್ವಾಮ್ಯದೆಡೆಗೆ :

ಇಂಟರ್‌ನೆಟ್‌ ಜನ್ಮತಾಳಿದ್ದು ಅಮೇರಿಕಾ ಸರ್ಕಾರವು ಸ್ಥಾಪಿಸಿದ್ದ ರಕ್ಷಣಾ ಜಾಲಬಂಧ DARPANET ನಿಂದ. ಅಮೇರಿಕಾ ಸರ್ಕಾರವು ಶೈಶಾವಸ್ಥೆಯಲ್ಲಿದ್ದ ಇಂಟರ್‌ನೆಟ್‌‍ನ್ನು ಎಟಿ&ಟಿ ಕಂಪನಿಗೆ ಮಾರಾಟ ಮಾಡಲು ಮುಂದಾಗಿದ್ದು, ಅದರಲ್ಲಿ ವ್ಯಾಪಾರಿ ಮೌಲ್ಯ ಇಲ್ಲದ್ದರಿಂದ ಕಂಪನಿಯು ಅದನ್ನು ಕೊಳ್ಳಲು ನಿರಾಕರಿಸಿತ್ತು! ನಂತರದಲ್ಲಿ ಅಮೇರಿಕಾದ ವಿವಿಧ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ನಡುವೆ ಜಾಲಬಂಧ ಸಂಪರ್ಕವೇರ್ಪಟ್ಟು ಇತರೆ ದೇಶಗಳಲ್ಲಿಯೂ ಬೆಳೆಯತೊಡಗಿತು. ಈ ಹಂತದಲ್ಲಿ ಇಂಟರ್‌ನೆಟ್‌ ಸಂಪೂರ್ಣ ವಾಣಿಜ್ಯ-ರಹಿತ ಬಳಕೆಯಲ್ಲಿತ್ತು.

ಪ್ರಾರಂಭದಲ್ಲಿ ಸಂಶೋಧಕರ ನಡುವೆ ಸಂವಹನ ಸಾಧನವಾಗಿ, ನಂತರ ಮಾಹಿತಿಯ ಆಕರವಾಗಿ ಇಂಟರ್‌ನೆಟ್‌ ಬಳಕೆಯಲ್ಲಿತ್ತು. ಸಂವಹನ ಜಾಲವಾಗಿ ಅದರ ಯಶಸ್ಸಿನಿಂದ ಜಾಗೃತಗೊಂಡ ಅಮೇರಿಕಾ ಸರ್ಕಾರ ಮತ್ತು ದೊಡ್ಡ ಕಂಪನಿಗಳು ಅದರ ವಾಣಿಜ್ಯ ಸಾಮಥ್ರ್ಯವನ್ನು ಮನಗಂಡವು. 1995ರ ಹೊತ್ತಿಗೆ, ಇಂಟರ್‌ನೆಟ್‌ ಸಂಪೂರ್ಣವಾಗಿ ವಾಣಿಜ್ಯೀಕರಣಗೊಂಡಿತು ಮತ್ತು ದೊಡ್ಡ ಕಂಪನಿಗಳು ಬಂಡವಾಳದ ವಿಸ್ತರಣೆಗೆ ಅದನ್ನು ಸಾಧನವಾಗಿ ಬಳಸತೊಡಗಿದವು.

ಇಂಟರ್‌ನೆಟ್‌ ಸಂಪೂರ್ಣ ವಾಣಿಜ್ಯೀಕರಣಗೊಂಡಿದ್ದರೂ, ಅದರ ಬೆಳವಣಿಗೆಯ ವಂಶವಾಹಿನಿಯಲ್ಲಿ ಕೇಂದ್ರೀಕೃತ ವ್ಯವಸ್ಥೆಯಿರಲಿಲ್ಲ,netneutrality ಯಾರಾದರೂ ಸಂಪರ್ಕ ಪಡೆದುಕೊಳ್ಳಬಹುದಿತ್ತು, ಇಚ್ಛೆಪಟ್ಟ ಯಾವುದೇ ಮಾಹಿತಿಯನ್ನು ಕಳುಹಿಸುವ ಅಥವಾ ಸ್ವೀಕರಿಸಬಹುದಾಗಿತ್ತು. ಇಂಟರ್‌ನೆಟ್‌‍ನ ಜಾಲಬಂಧದ ರಚನೆ ಮತ್ತು ಸಂವಹನ ವಿಧಿಯಲ್ಲಿ ಇವುಗಳನ್ನು ಅಳವಡಿಸಲಾಯಿತು. ಇದನ್ನೇ ಕೆಲವರು ‘ಜನತೆಯ ಸರ್ವಸ್ವತಂತ್ರ ಜಾಗ’ ಎಂದು ಉತ್ಪ್ರೇಕ್ಷೆಯಿಂದ ಹೇಳತೊಡಗಿದರು.

ಆದರೆ, ಪ್ರಾರಂಭದಿಂದಲೂ ಜಾಗತಿಕ ಇಂಟರ್‌ನೆಟ್‌ ಮೇಲೆ ಅಮೇರಿಕಾ ತನ್ನ ಕಾನೂನು ನಿಯಂತ್ರಣವನ್ನು ಹೇರತೊಡಗಿತ್ತು. ವಿವಿಧ ದೇಶಗಳ ಕಾನೂನಿನಡಿ ಇರುವ ದೂರಸಂವಹನ ಜಾಲಗಳನ್ನು ಇಂಟರ್‌ನೆಟ್‌ ಬಳಸಿಕೊಳ್ಳುವುದರಿಂದ ಸಹಜವಾಗಿ ಇಂಟರ್‌ನೆಟ್‌ ಮೂಲಕ ಯಾವ ಮಾಹಿತಿಯನ್ನು ನೋಡಬಹುದು ಅಥವಾ ಕಳುಹಿಸಬಹುದು ಎಂಬುದನ್ನು ತೀರ್ಮಾನಿಸಲು ಎಲ್ಲ ರಾಷ್ಟ್ರಗಳು ಕಾನೂನು ಹಕ್ಕನ್ನು ಹೊಂದಿವೆ. ವಿಕೇಂದ್ರೀಕೃತ ಮಾದರಿಯಲ್ಲಿ ಯಾರ ನಿಯಂತ್ರಣವೂ ಇಲ್ಲದೇ ಇಂಟರ್‌ನೆಟ್‌ ಜನರ ನೈಜ ಸಂವಹನ ಮಾಧ್ಯಮವಾಗುತ್ತದೆಂಬ ಭರವಸೆಗೆ ನಂತರದ ದಿನಗಳಲ್ಲಿ ಹೊಡೆತ ಬೀಳಲಾರಂಭಿಸಿತು.

ಇಂಟರ್‌ನೆಟ್‌ ಶಕ್ತಿ:

ಕಂಪ್ಯೂಟರ್ ಮತ್ತು ಇಂಟರ್‌ನೆಟ್‌ ಸೌಲಭ್ಯ ಹೊಂದಿರುವ ಯಾರೇ ಆಗಲಿ ಕೇವಲ ಗ್ರಾಹಕರಾಗದೇ, ಸುದ್ದಿ ಮತ್ತು ಅನಿಸಿಕೆಗಳನ್ನು ಉತ್ಪಾದಿಸಲು ಇಂಟರ್‌ನೆಟ್‌ ಅವಕಾಶ ಕಲ್ಪಿಸುತ್ತದೆ. ಯೂಟ್ಯೂಬ್ ಮತ್ತು ವೀಡಿಯೋ ಕ್ಯಾಮೆರಾವನ್ನು ಬಳಸಿಕೊಂಡು ಒಂದು ಟೆಲಿವಿಷನ್ ಸ್ಟೇಷನ್ ಶುರು ಮಾಡಬಹುದು! ಇಂಟರ್‌ನೆಟ್‌‍ನಲ್ಲಿ ಸುಮಾರು 100 ಕೋಟಿ ಜಾಲತಾಣಗಳಿದ್ದು, ಅದರಲ್ಲಿ 8.50 ಲಕ್ಷ ಕ್ರಿಯಾಶೀಲತೆಯಿಂದಿವೆ. ಆದರೂ ಇಂಟರ್‌ನೆಟ್‌ ಕಂಪನಿಗಳು ದೈತ್ಯಾಕಾರವಾಗಿ ಬೆಳೆದಿವೆ. ಅಮೇರಿಕಾದಲ್ಲಿ 2010ರ ಹೊತ್ತಿಗೆ, ಒಟ್ಟಾರೆ ವೀಕ್ಷಣೆಯಾದ ಜಾಲಪುಟಗಳ ಪೈಕಿ ಶೇ. 75ರಷ್ಟು ಜಾಲಪುಟಗಳು ಟಾಪ್ 10 ಇಂಟರ್‌ನೆಟ್‌ ಕಂಪನಿಗಳಿಗೆ ಸೇರಿದ್ದವು. ಚೀನಾ ಹೊರತುಪಡಿಸಿ, ಇಡೀ ಜಾಗತಿಕ ಇಂಟರ್‌ನೆಟ್‌ ನಲ್ಲಿ ಅಮೇರಿಕಾದ ಕಂಪನಿಗಳೂ ಯಜಮಾನಿಕೆ ಹೊಂದಿವೆ. ಚೀನಾದಲ್ಲಿ ಕೆಲವು ಸಂರಕ್ಷಣ ನೀತಿಗಳನ್ನು ಅಳವಡಿಸಿಕೊಂಡಿರುವ ಜೊತೆಗೆ ಚೀನೀ ಭಾಷೆಯ ಸಂಕೀರ್ಣತೆಯಿಂದಾಗಿ ಅಲ್ಲಿ ಅಮೇರಿಕಾದ ಕಂಪನಿಗಳು ಪ್ರಾಬಲ್ಯ ಸಾಧಿಸಲಾಗಿಲ್ಲ. ಹೆಚ್ಚಿನ ಸಂಖ್ಯೆಯ ವೆಬ್‍ಸೈಟ್‍ಗಳಿದ್ದರೂ ಸಹ ದೊಡ್ಡ ಪ್ರಮಾಣದ ನೆಟ್ ಬಳಕೆದಾರರು ಕೆಲವೇ ವೆಬ್‍ಸೈಟ್‍ಗಳನ್ನು ವೀಕ್ಷಿಸುತ್ತಾರೆ.

ವಿವಿಧ ವಲಯಗಳಲ್ಲಿ ಕಂಪನಿಗಳ ಪ್ರಾಬಲ್ಯವನ್ನು ಅರಿಯುವುದಾದರೆ, – ಸರ್ಚ್ ಇಂಜೀನ್, ವೀಡಿಯೋ, ಇ-ರೀಟೈಲ್, ಇತ್ಯಾದಿ – ಗೂಗಲ್ ಕಂಪನಿಯು ವೆಬ್ ಸರ್ಚ್‍ಗಳಲ್ಲಿ ಶೇ. 90ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದರೆ, ಫೇಸ್ ಬುಕ್ ಮತ್ತು ಟ್ವಿಟ್ಟರ್ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಾಬಲ್ಯ ಹೊಂದಿವೆ. ಇಂಟರ್‌ನೆಟ್‌‍ನಲ್ಲಿ ಪ್ರಮುಖ ವೀಡಿಯೋ ಛಾನೆಲ್ ಎಂದರೆ ಗೂಗಲ್ ಕಂಪನಿಯ ಯೂಟ್ಯೂಬ್.

ಇಂಟರ್‌ನೆಟ್‌‍ನ ಪ್ರಜಾಸತ್ತಾತ್ಮಕ ಸಾಮಥ್ರ್ಯವನ್ನು ಜನತೆ ಪೂರ್ಣಪ್ರಮಾಣದಲ್ಲಿ ಪಡಕೊಳ್ಳಲು ಸಾಧ್ಯವಾಗಿಲ್ಲ ನಿಜ. ಆದರೆ, ಮುಖ್ಯವಾಹಿನಿಯ ಮಾಧ್ಯಮಗಳು ತಮಗೆ ‘ಇಚ್ಛಿಸದ ಸುದ್ದಿ’ಗಳನ್ನು ಬುಟ್ಟಿಗೆ ಎಸೆಯಲು ಸಾಧ್ಯವಾಗದ ಸ್ಥಿತಿಯಂತೂ ನಿರ್ಮಾಣವಾಗಿದೆ. ಈ ಕಾರಣದಿಂದಾಗಿಯೇ ಸುದ್ದಿ ಮತ್ತು ಅನಿಸಿಕೆಗಳನ್ನು ನೇರವಾಗಿ ಸೆನ್ಸಾರ್‍ಶಿಪ್ ಮಾಡುವ ಬದಲಿಗೆ ‘ಒಮ್ಮತದ ಉತ್ಪಾದನೆ’ (Manufacturing Consent) ಮಾಡುವುದು ಬಂಡವಾಳದ ಪ್ರಾಥಮಿಕ ಸಾಧನವಾಗಿದೆ.

ಇಂಟರ್‌ನೆಟ್‌‍ನ ವಿನ್ಯಾಸ ರಚನೆ ಕೂಡ ಬದಲಾವಣೆಗೊಂಡಿದೆ. ಈ ಮುಂಚಿನ ಕೇಂದ್ರೀಕೃತ ಸರ್ವರ್‍ಗಳು ಮತ್ತು ನೋಡ್‍ಗಳಿಲ್ಲದ, ಪ್ರತಿಯೊಬ್ಬರೂ ಪರಸ್ಪರ ನೇರವಾಗಿ ಕಂಪ್ಯೂಟರಿಗೆ ಸಂಪರ್ಕ ಮಾಡಿಕೊಳ್ಳುವ ವಿನ್ಯಾಸ ರಚನೆಯ ಸ್ಥಳದಲ್ಲಿ ಇಂದು ಬಳಕೆದಾರರು ಇಂಟರ್‌ನೆಟ್‌ ದೈತ್ಯ ಕಂಪನಿಗಳ ಕೇಂದ್ರೀಕೃತ ಸರ್ವರ್‍ಗಳಿಗೆ ಎಡತಾಕುತ್ತಾರೆ. ಇದನ್ನೇ ಕ್ಲೌಡ್ ಕಂಪ್ಯೂಟಿಂಗ್ ಎಂದು ಕರೆಯುವುದು. ಇಂಟರ್‌ನೆಟ್‌‍ನ ಸ್ವರೂಪದಲ್ಲಾಗಿರುವ ಈ ಮೂಲಭೂತ ಬದಲಾವಣೆಯು ಜಾಗತಿಕ ಇಂಟರ್‌ನೆಟ್‌ ಕಂಪನಿಗಳ ಏಳಿಗೆಯೊಂದಿಗೆ ನಡೆದಿದೆ.

ಆದರೂ, ಇಷ್ಟೆಲ್ಲ ಬೆಳವಣಿಗೆಯ ನಡುವೆ ಇಂಟರ್‌ನೆಟ್‌‍ನ ಎರಡು ಪ್ರಮುಖ ಗುಣಲಕ್ಷಣಗಳು ಅದರ ಪ್ರಾರಂಭದ ವಿನ್ಯಾಸ ರಚನೆಯಂತೆಯೇ ಉಳಿದುಕೊಂಡಿವೆ. ಟೆಲಿಕಾಂ ಟ್ರಾಫಿಕ್‍ನಲ್ಲಿ ಧ್ವನಿ ಕರೆಗಳ ಎಲ್ಲ ವಾಣಿಜ್ಯ ವ್ಯವಹಾರಗಳನ್ನು ಧ್ವನಿ ಜಾಲಗಳಲ್ಲಿ ಅಳವಡಿಸಲಾಗಿದ್ದು, ಬಿಲ್ಲಿಂಗ್ ಮಾಡುವುದು ಸುಲಭ. ಆದರೆ ಇಂಟರ್‌ನೆಟ್‌‍ನಲ್ಲಿ ದತ್ತಾಂಶ ಪೊಟ್ಟಣಗಳನ್ನು (Data Packets) ಪ್ರಸರಣ ಮಾಡುವಾಗ ಕಳುಹಿಸುವವರು ಮತ್ತು ಸ್ವೀಕರಿಸುವವರ ನಡುವೆ ಬಿಲ್ಲಿಂಗ್ ಮಾಡುವುದು ಬಹಳ ಕಷ್ಟ. ಏಕೆಂದರೆ ಆರಂಭದ ವಿನ್ಯಾಸ ರಚನೆಯಲ್ಲಿ ಇದನ್ನು ವಾಣಿಜ್ಯೋದ್ದೇಶಕ್ಕಾಗಿ ನಿರ್ಮಿಸಿರದ ಕಾರಣ ಪ್ರಸರಣ ಪ್ರೋಟೋಕಾಲ್‍ಗಳಲ್ಲಿ ಬಿಲ್ಲಿಂಗ್ ವ್ಯವಸ್ಥೆಯನ್ನು ಅಳವಡಿಸಿರುವುದಿಲ್ಲ. ಎರಡನೆಯದು, ದತ್ತಾಂಶ ಪೊಟ್ಟಣಗಳನ್ನು ಇಂಟರ್‌ನೆಟ್‌ ಮೂಲಕ ಕಳುಹಿಸುವಾಗ ಗೌಪ್ಯತೆಯ ಕೊರತೆಯಿಂದಾಗಿ, ಸರ್ಕಾರಗಳು ಅದರಲ್ಲೂ ಅಮೇರಿಕಾ ಸರ್ಕಾರ ಇಂಟರ್‌ನೆಟ್‌ ಟ್ರಾಫಿಕ್ ಮೇಲೆ ಬೇಹುಗಾರಿಕೆ ನಡೆಸುವುದು ಬಹಳ ಸುಲಭವಾಗಿದೆ.

‘ಜಾಲದಲ್ಲಿ ಸಮಾನತೆಗಾಗಿ’ ಯುದ್ದಗಳು

ಇಂಟರ್‌ನೆಟ್‌ ಕಂಪನಿಗಳು ಹಸುಳೆಗಳಾಗಿದ್ದಾಗ ಟೆಲಿಕಾಂ ಕಂಪನಿಗಳು ದೈತ್ಯ ಉರಗಗಳಾಗಿದ್ದವು. ಟೆಲಿಕಾಂ ಕಂಪನಿಗಳ ಮೂಲಸೌಲಭ್ಯದ ಮೂಲಕವೇ ಇಂಟರ್‌ನೆಟ್‌ ಕಂಪನಿಗಳು ಮತ್ತು ಬಳಕೆದಾರರು ಸಂಪರ್ಕ ಸಾಧಿಸಬೇಕಿತ್ತು! ಯಾರಾದರೂ ದತ್ತಾಂಶವನ್ನು ಜಾಲತಾಣದಲ್ಲಿ net-neutrality3ಅಪ್‍ಲೋಡ್ ಮಾಡಲಿ ಅಥವಾ ಸರ್ವರ್‍ನಲ್ಲಿ ಸಂಗ್ರಹಿಸಿಡಲಿ ಅಥವಾ ಇನ್ನಾರೊಬ್ಬರು ಅದನ್ನು ವೀಕ್ಷಿಸಲಿ, ಅವೆಲ್ಲವೂ ಟೆಲಿಕಾಂ ಜಾಲಗಳ ಮೂಲಕವೇ ಸಾಗಿ ಹೋಗಬೇಕು. ಇಂಥಹ ಸಂದರ್ಭದಲ್ಲಿ, ಟೆಲಿಕಾಂ ಕಂಪನಿಗಳು ಗೇಟ್ ಕೀಪರ್ ಕೆಲಸ ಮಾಡುವುದರಿಂದ ಇಂಟರ್‌ನೆಟ್‌ ಕಂಪನಿಗಳಿಂದ ಅಥವಾ ಗ್ರಾಹಕರಿಂದ ಪ್ರವೇಶ ತೆರಿಗೆಯನ್ನು ಅವು ವಿಧಿಸುತ್ತವೆ.

‘ಜಾಲದಲ್ಲಿ ಸಮಾನತೆ’ ಎಂಬ ಪದವನ್ನು ಬಳಕೆಗೆ ತಂದದ್ದು ಕೊಲಂಬಿಯಾ ಕಾನೂನು ವಿಶ್ವವಿದ್ಯಾಲಯದ ಪ್ರೊ. ಟಿಮ್ ವೂ. ಅವರು ಹೇಳುವಂತೆ “ಇಂಟರ್‌ನೆಟ್‌‍ನ ಅಸಲಿ ವಿನ್ಯಾಸದ ಪ್ರಮುಖ ಅಂಶವೆಂದರೆ ಹಲವು ಬೆಲೆಗಳನ್ನು ಪುಕ್ಕಟೆ ನೀಡುವುದು-ಅಂದರೆ ಶೂನ್ಯ-ಬೆಲೆಯ ನಿಯಮಗಳು. ಉಚಿತವಾಗಿ ಜಾಲಕ್ಕೆ ಸೇರ್ಪಡೆಯಾಗುವುದು. ಬಳಕೆದಾರರು ಮತ್ತು ಜಾಲತಾಣಗಳು ಪರಸ್ಪರರಿಗೆ ನೀಡುವ ಬೆಲೆ ಶೂನ್ಯ. ಬ್ಲಾಗರ್ ಒಬ್ಬ ಕಾಮ್‍ಕ್ಯಾಸ್ಟ್‍ನ ಗ್ರಾಹಕರನ್ನು ತಲುಪಲು ನೀಡುವ ಬೆಲೆ ಶೂನ್ಯ. ಬ್ರ್ಯಾಡ್‍ಬ್ಯಾಂಡ್ ಆಪರೇಟರ್‍ಗಳು ತಮ್ಮ ಮಾಹಿತಿಯನ್ನು ಸಾಗಿಸಲು ದೊಡ್ಡ ಜಾಲ ತಾಣಗಳು ವಿಧಿಸುವ ಶುಲ್ಕ ಶೂನ್ಯ.“ ಇದರಿಂದಾಗಿ ಇಂಟರ್‌ನೆಟ್‌ ತಾರತಮ್ಯ-ರಹಿತ ತತ್ವದ ಆಧಾರದಲ್ಲಿದ್ದು, ಶ್ರೀಮಂತ ಕಂಪನಿಗಳು ಮಾಡುವಂತೆಯೇ ಅತ್ಯಂತ ಕಡಿಮೆ ಸಂಪನ್ಮೂಲ ಹೊಂದಿರುವ ಯಾವುದೇ ಗುಂಪು ಅಥವಾ ವ್ಯಕ್ತಿಯು ಸಹ ಜಾಲತಾಣಗಳನ್ನು ಎಲ್ಲರಿಗೂ ಲಭ್ಯವಾಗುವಂತೆ ಸೃಜಿಸಬಹುದು.

ಅಮೇರಿಕಾದಲ್ಲಿ ಆರಂಭವಾದ ‘ಜಾಲದಲ್ಲಿ ಸಮಾನತೆಯ’ ಯುದ್ದ:

ಅಮೇರಿಕಾದ 1996ರ ಸಂವಹನ ಕಾಯಿದೆಯಲ್ಲಿ ಕೆಲವು ವೈಚಿತ್ರ್ಯಗಳಿವೆ. ಈ ಕಾಯಿದೆಯಡಿ ಎರಡು ಗುಂಪಿನ ಸೇವೆಗಳನ್ನು ವ್ಯಾಖ್ಯಾನಿಸಲಾಗಿದೆ. ಮೊದಲನೇ ಗುಂಪಿನಲ್ಲಿ ಮಾಹಿತಿ ಸೇವೆಗಳನ್ನು ಸೇರಿಸಲಾಗಿದ್ದು, ಇವು ಕಡಿಮೆ ನಿಯಂತ್ರಣ ಹೊಂದಿವೆ. ಎರಡನೇ ಗುಂಪಿನಲ್ಲಿ ದೂರಸಂಪರ್ಕ ಸಂವಹನ ಸೇವೆಗಳನ್ನು ಸೇರಿಸಲಾಗಿದ್ದು, ಇವು ಕಟ್ಟುನಿಟ್ಟಿನ ನಿಯಂತ್ರಣಕ್ಕೊಳಪಟ್ಟಿವೆ. ಆರಂಭದಲ್ಲಿ ಹಾಲಿಯಿರುವ ದೂರವಾಣಿ ಲೈನುಗಳ ಮೂಲಕ ಟೆಲಿಕಾಂ ಕಂಪನಿಗಳು ಬ್ರ್ಯಾಡ್‍ಬ್ಯಾಂಡ್ ಸೇವೆಗಳನ್ನು ಒದಗಿಸುತ್ತಿದ್ದು, ಅವುಗಳನ್ನು ದೂರಸಂಪರ್ಕ ಸಂವಹನ ಸೇವೆಗಳೆಂದು ಎರಡನೇ ಗುಂಪಿಗೆ ಸೇರಿಸಲಾಗಿತ್ತು. ನಂತರದಲ್ಲಿ ಕೇಬಲ್ ಟಿವಿ ಕಂಪನಿಗಳೂ ಕೂಡ ಬ್ರ್ಯಾಡ್‍ಬ್ಯಾಂಡ್ ಸೇವೆಗಳನ್ನು ಒದಗಿಸತೊಡಗಿ ತಮ್ಮ ಸೇವೆಗಳನ್ನು ಮಾಹಿತಿ ಸೇವೆಗಳೆಂದು ಮೊದಲನೇ ಗುಂಪಿಗೆ ಸೇರಿಸಬೇಕೆಂದು ಕೇಳಿಕೊಂಡವು. 2003ರಲ್ಲಿ, ಅಮೇರಿಕಾದ ಸಂವಹನ ಮತ್ತು ಟೆಲಿಕಾಂ ನಿಯಂತ್ರಣ ಸಂಸ್ಥೆಯಾದ ಫೆಡರಲ್ ಸಂವಹನ ಆಯೋಗವು ಇದಕ್ಕೆ ಒಪ್ಪಿಗೆ ನೀಡಿ ಬ್ರ್ಯಾಡ್‍ಬ್ಯಾಂಡ್ ಸೇವೆಗಳನ್ನು ಮಾಹಿತಿ ಸೇವೆಗಳೆಂದು ವರ್ಗೀಕರಿಸಿತು. 2005ರಲ್ಲಿ, ಈ ಆಯೋಗವು ತಂತು ಬ್ರ್ಯಾಡ್‍ಬ್ಯಾಂಡ್ ಸೇವೆಗಳನ್ನು ಸಹ ಮಾಹಿತಿ ಸೇವೆಗಳೆಂದು ವರ್ಗೀಕರಿಸಿತು. ಇವೆರಡು ನಿರ್ಧಾರಗಳಿಂದ ಜಾಲದಲ್ಲಿ ಸಮಾನತೆಗಾಗಿ ಕಾದಾಡುವ ಪರಿಸ್ಥಿತಿಯುಂಟಾಯಿತು.

ಇದೀಗ ಟೆಲಿಕಾಂ ಕಂಪನಿಗಳು ಮತ್ತು ಕೇಬಲ್ ಕಂಪನಿಗಳು ನಿಯಂತ್ರಣದಿಂದ ಜಾರಿಕೊಂಡು ತಾವು ಇಂಟರ್‌ನೆಟ್‌ ಸೌಲಭ್ಯ ಒದಗಿಸುವಾಗ ತಾರತಮ್ಯ-ರಹಿತವಾಗಿ ಇರಬೇಕಿಲ್ಲ ಎಂದು ವಾದಿಸಿದವು. ಈ ಕಾಯಿದೆಗೆ ಟೆಲಿಕಾಂ ದೈತ್ಯ ಕಂಪನಿಗಳಾದ ಎಟಿ&ಟಿ, ವೆರಿಜಾನ್ ಮತ್ತು ಕಾಮ್ ಕ್ಯಾಸ್ಟ್ ಗಳು ಬೆಂಬಲ ನೀಡಿದ ಪರಿಣಾಮವಾಗಿ ಇಂಟರ್‌ನೆಟ್‌ ಹೆದ್ದಾರಿಯಲ್ಲಿ ಹಲವು ಆನ್ ಲೈನ್ ಸೇವೆಗಳಿಗೆ ಬೆಲೆ ನಿಗಧಿಪಡಿಸಿ ಲಾಭಗಳಿಸಲಾರಂಭಿಸಿದವು. ಅದರ ಆಧಾರದ ಮೇಲೆ ಯಾವುದಕ್ಕೆ ಎಷ್ಟು ಆದ್ಯತೆ ನೀಡಬೇಕೆಂದು ತೀರ್ಮಾನಿಸುವ ಗೇಟ್ ಕೀಪರ್ ಕೆಲಸ ಶುರು ಮಾಡಿದವು.

ನಾನಾ ಮೂಲೆಗಳಿಂದ ನೆಟ್ ಬಳಕೆದಾರರು ಒತ್ತಡ ತರಲಾರಂಭಿಸಿದ್ದರಿಂದ, 2015ರ ಫೆಬ್ರುವರಿಯಲ್ಲಿ ಅಮೇರಿಕಾದ ಅಧ್ಯಕ್ಷ ಒಬಾಮ ಮಧ್ಯಪ್ರವೇಶಿಸಬೇಕಾಯಿತು. ಕೊನೆಗೆ ಫೆಡರಲ್ ಸಂವಹನ ಆಯೋಗವು ಬ್ರ್ಯಾಡ್‍ಬ್ಯಾಂಡ್ ಸೇವೆಗಳನ್ನು ಮತ್ತೆ ಟೆಲಿಕಾಂ ಸೇವೆಗಳೆಂದು ಪುನರ್-ವರ್ಗೀಕರಿಸಿ ಜಾಲದಲ್ಲಿ ಸಮಾನತೆಯನ್ನು ಗಟ್ಟಿಗೊಳಿಸಿತು.

ಇಂಟರ್‌ನೆಟ್‌ – ಟೆಲಿಕಾಂ ಕಂಪನಿಗಳ ಐಕ್ಯಕೂಟ:

ಜಾಲದಲ್ಲಿ ಸಮಾನತೆಯನ್ನು ತೆಗೆದುಹಾಕಲು ಟೆಲಿಕಾಂ ಕಂಪನಿಗಳು ಇನ್ನೂ ಯತ್ನಿಸುತ್ತಿವೆ. ಪ್ರತಿ ದೇಶದಲ್ಲೂ ಪ್ರತಿ ವಲಯದಲ್ಲೂ ಅವು ಜಾಲದಲ್ಲಿನ ಸಮಾನತೆಯನ್ನು ಕಿತ್ತೊಗೆಯಲು ಹಣಾಹಣಿ ನಡೆಸಿವೆ. ಟೆಲಿಕಾಂ ಕಂಪನಿಗಳು ಆಯೋಗದ ತೀರ್ಮಾನವನ್ನು ಬುಡಮೇಲು ಮಾಡಲು ಅಮೇರಿಕಾದ ಸಂಸತ್ತಿನಲ್ಲಿ ಲಾಬಿ ನಡೆಸಿವೆ.

ಜಾಲದಲ್ಲಿ ಸಮಾನತೆಯ ಯುದ್ದದ ಮೊದಲ ಹಂತದಲ್ಲಿ ಟೆಲಿಕಾಂ ಕಂಪನಿಗಳು ಸಣ್ಣ ಇಂಟರ್‌ನೆಟ್‌ ಕಂಪನಿಗಳು ಮತ್ತು ನೆಟ್ ಬಳಕೆದಾರರ ವಿರುದ್ದ ನಿಂತಿದ್ದವು. ಇಂದು ಜಾಗತಿಕ ಇಂಟರ್‌ನೆಟ್‌ ಕಂಪನಿಗಳು ಮಾರುಕಟ್ಟೆ ಮೌಲ್ಯದಲ್ಲಿ ಹೇಳುವುದಾದರೆ ಟೆಲಿಕಾಂ ಕಂಪನಿಗಳಿಗಿಂತ ದೊಡ್ಡದಾಗಿವೆ. ಟಾಪ್ 5 ಇಂಟರ್‌ನೆಟ್‌ ಕಂಪನಿಗಳ (ಗೂಗಲ್, ಫೇಸ್ ಬುಕ್, ಅಮೆಜಾನ್, ಟೆನ್ಸೆಂಟ್, ಬೈಡು) ಮಾರುಕಟ್ಟೆ ಮೌಲ್ಯ 2014ರಲ್ಲಿ ಸುಮಾರು ರೂ. 58,69,500 ಕೋಟಿ ಗಳಿದ್ದರೆ, ಟಾಪ್ 5 ಟೆಲಿಕಾಂ ಕಂಪನಿಗಳ (ಚೈನಾ ಮೊಬೈಲ್, ವೆರಿಜಾನ್, ಎಟಿ&ಟಿ, ವೊಡಾಫೋನ್ & ಸಾಫ್ಟ್ ಬ್ಯಾಂಕ್) ಮಾರುಕಟ್ಟೆ ಮೌಲ್ಯ ರೂ. 53,43,000 ಕೋಟಿ ಗಳಷ್ಟಿದೆ. ಇದರಿಂದ ಇಂಟರ್‌ನೆಟ್‌ ಕಂಪನಿಗಳು ಇಂದು ಟೆಲಿಕಾಂ ಕಂಪನಿಗಳ ಮರ್ಜಿಯಲ್ಲೇನೂ ಇಲ್ಲವೆಂಬುದು ತಿಳಿಯುತ್ತದೆ.

ಟಾಪ್ 5 ಇಂಟರ್‌ನೆಟ್‌ ಕಂಪನಿಗಳು ಮತ್ತು ಟೆಲಿಕಾಂ ಕಂಪನಿಗಳ ನಡುವಣ ಹೋಲಿಕೆ:
net-neutrality-statistics

ಲಾಭಕ್ಕಾಗಿ ಪೈಪೋಟಿ:

ಇಂಟರ್‌ನೆಟ್‌ ಕಂಪನಿಗಳು ತಮ್ಮ ಆರಂಭಿಕ ಷೇರುಗಳ ವಿಕ್ರಯದಿಂದ (ಐಪಿಒ) ದೊಡ್ಡ ಮೊತ್ತದ ಹಣವನ್ನು ಮಾರುಕಟ್ಟೆಯಲ್ಲಿ ಸಂಗ್ರಹಿಸುತ್ತಿವೆ. ಇಂಟರ್‌ನೆಟ್‌ ಕಂಪನಿಗಳ ಈ ಅಚಾನಕ್ ಬೆಳವಣಿಗೆಯನ್ನು ಕಂಡು ಪೈಪೋಟಿಗೆ ಬಿದ್ದಂತೆ ಟೆಲಿಕಾಂ ಕಂಪನಿಗಳು ಕೂಡ ಲಾಭಕ್ಕಾಗಿ ಯಾವ ಸೇವೆಯನ್ನು ಮತ್ತಷ್ಟು ಸರಕನ್ನಾಗಿಸಬಹುದೆಂದು ಹವಣಿಸುತ್ತಿವೆ.

ಅಮೇರಿಕದಲ್ಲಿಯಾಗಲೀ, ಅಥವಾ ಭಾರತದಲ್ಲಿಯಾಗಲೀ ಟೆಲಿಕಾಂ ಕಂಪನಿಗಳು ಕಷ್ಟವನ್ನೇನು ಅನುಭವಿಸುತ್ತಿಲ್ಲ. ಅವುಗಳು ಆರೋಗ್ಯಕರ ಬೆಳವಣಿಗೆಯನ್ನು ಕಾಣುತ್ತಾ ಬಂದಿವೆ. ಮೂಲಸೌಲಭ್ಯ ಈಗಾಗಲೇ ವೃದ್ದಿಯಾಗಿರುವ ಅಮೇರಿಕಾದಲ್ಲಿ ಅವುಗಳ ಲಾಭ ಶೇ. 90 ರಷ್ಟಿದ್ದರೆ, ಇದೀಗಷ್ಟೇ ಬೆಳವಣಿಗೆಯಾಗುತ್ತಿರುವ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ತಮ್ಮ ಧ್ವನಿ ಮತ್ತು ಎಸ್.ಎಂ.ಎಸ್ ಸೇವೆಗಳ ಮೂಲಕ ಶೇ. 100 ರಷ್ಟು ಲಾಭ ಗಳಿಸುತ್ತಿವೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ದೊಡ್ಡ ಇಂಟರ್‌ನೆಟ್‌ ಕಂಪನಿಗಳ ಏಳಿಗೆಯಿಂದಾಗಿ ಟೆಲಿಕಾಂ ಕಂಪನಿಗಳು ಮತ್ತು ನೆಟ್ ಕಂಪನಿಗಳ ನಡುವೆ ಐಕ್ಯಕೂಟ (ಕಾರ್ಟೆಲ್) ಏರ್ಪಡುವ ಸ್ಥಿತಿಯುಂಟಾಗಿದೆ. ಇದರಿಂದಾಗಿ ಸಣ್ಣ ನೆಟ್ ಕಂಪನಿಗಳು ಮಾರುಕಟ್ಟೆಯಿಂದ ಹೊರದಬ್ಬಲ್ಪಟ್ಟು, ಗ್ರಾಹಕರು ದೊಡ್ಡ ನೆಟ್ ಕಂಪನಿಗಳು ಒದಗಿಸುವ ಕೆಲವೇ ಕೆಲವು ನೆಟ್ ಸೇವೆಗಳೊಂದಿಗೆ ಲಾಕ್ ಆಗಬೇಕಾಗುತ್ತದೆ. ದೊಡ್ಡ ಇಂಟರ್‌ನೆಟ್‌ ಕಂಪನಿಗಳ ಜೊತೆ ಕೈಜೋಡಿಸಿದರೆ ಟೆಲಿಕಾಂ ಕಂಪನಿಗಳಿಗೆ ಎರಡು ರೀತಿಯ ಲಾಭವಿದೆ. ಟೆಲಿಕಾಂ ಕಂಪನಿಗಳು ತಮ್ಮ ಬಳಕೆದಾರರ ನೆಲೆಯನ್ನು ನೆಟ್ ಕಂಪನಿಗಳಿಗೆ ನೀಡಬಹುದು, ಅದೇ ವೇಳೆ, ನೆಟ್ ಕಂಪನಿಗಳು ತಮ್ಮ ಬಳಕೆದಾರರನ್ನು ಜಾಹೀರಾತುದಾರರಿಗೆ ನೀಡಬಹುದು. ಅಲ್ಲದೆ ಟೆಲಿಕಾಂ ಕಂಪನಿಗಳು ಒಂದೇ ಹೊಡೆತಕ್ಕೆ ಜಾಲದಲ್ಲಿ ಸಮಾನತೆಯನ್ನು ಹೊಡೆದುರುಳಿಸಬಹುದು. ಆಗ ಪ್ರತಿಯೊಂದು ಇಂಟರ್‌ನೆಟ್‌ ಸೇವೆಗಳಿಗೆ ಟಾಲ್ ಗೇಟ್ ಹಾಕಿ ಹಣ ಸಂಗ್ರಹಿಸಲು ಸುಲಭಸಾಧ್ಯವಾಗುತ್ತದೆ. ಏಕೆಂದರೆ ಟೆಲಿಕಾಂ ಕಂಪನಿಗಳಿಗೆ ಹಣ ನೀಡುವ ವೆಬ್ ಸೈಟ್‍ಗಳು ಮಾತ್ರ ಬಳಕೆದಾರರಿಗೆ ಲಭ್ಯವಾಗುತ್ತವೆ; ಹಣ ನೀಡದೇ ಇದ್ದಲ್ಲಿ ಅವುಗಳು ಬಹಳ ನಿಧಾನವಾಗಿ ಲೋಡ್ ಆಗುತ್ತವೆ, ಹಾಗೆಯೇ ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಎದುರಿಸಲಾರದೇ ಅಳಿಯುತ್ತವೆ. ಇದರಿಂದ ಇಂಟರ್‌ನೆಟ್‌ ನ ಪ್ರಜಾಸತ್ತಾತ್ಮಕ ಸಾಮಥ್ರ್ಯದ ಕೊನೆಯ ಬಳಕೆಯೂ ಅಂತ್ಯಗೊಳ್ಳುತ್ತದೆ.

ಜಾಲದಲ್ಲಿ ಸಮಾನತೆಯ ಯುದ್ದದ ಸ್ವರೂಪವೂ ಬದಲಾಗುತ್ತಿದೆ. ಉದಾಹರಣೆಗೆ, ಟೆಲಿಕಾಂ ಕಂಪನಿಗಳು ತಮ್ಮ ಜಾಲದ ಮೂಲಕ ನೀಡುತ್ತಿರುವ ಧ್ವನಿ ಮತ್ತು ಎಸ್.ಎಂ.ಎಸ್ ಸೇವೆಗಳನ್ನು ಇಂಟರ್‌ನೆಟ್‌ ಕಂಪನಿಗಳೂ ಕೂಡ ಇಂಟರ್‌ನೆಟ್‌ ಮೂಲಕ ನೀಡಬಹುದು. ನೇರವಾಗಿ ಕರೆಮಾಡಿ ಮಾತನಾಡುವುದಕ್ಕೆ ತೆರಬೇಕಾದ ಬೆಲೆಗಿಂತ ಸ್ಕೈಪ್ ನಂಥಹ ಇಂಟರ್‌ನೆಟ್‌ ಸೇವೆಯ ಮೂಲಕ ಕರೆ ಮಾಡುವುದಕ್ಕೆ ತೆರಬೇಕಾದ ಬೆಲೆ ಬಹಳ ಕಡಿಮೆ. ಇದು ಮತ್ತೊಂದು ರೀತಿಯ ಸಮಾನತೆಯ ಯುದ್ದಕ್ಕೆ ಕಾರಣವಾಗಿದೆ.

ಭಾರತದಲ್ಲಿ ಜಾಲದಲ್ಲಿ ಸಮಾನತೆ ಕುರಿತ ಪರಿಸ್ಥಿತಿ:

ಸ್ಪರ್ಧಾತ್ಮಕ ವ್ಯವಹಾರ ಆಯೋಗವು ಜಾಲದಲ್ಲಿ ಸಮಾನತೆಯನ್ನು ಭಾರತೀಯ ಟೆಲಿಕಾಂ ಆಪರೇಟರ್ ಗಳು ಉಲ್ಲಂಘಿಸುತ್ತಿದ್ದಾರೆಯೇ ಎಂದು ಪರಿಶೀಲನೆ ನಡೆಸುತ್ತಿತ್ತು. ಅದೇ ಸಮಯದಲ್ಲಿ ದುರದೃಷ್ಟವಶಾತ್, ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವು ಇತ್ತೀಚೆಗೆ ಬಿಡುಗಡೆ ಮಾಡಿರುವ “ಒವರ್-ದಿ-ಟಾಪ್ (ಒಟಿಟಿ) ಸೇವೆಗಳನ್ನು ನಿಯಂತ್ರಿಸುವ ಕುರಿತಾದ ಸಮಾಲೋಚನ ಡಾಕ್ಯುಮೆಂಟ್ ಕೇವಲ ಎರಡು ಆಯ್ಕೆಗಳನ್ನು ಮಾತ್ರವೇ ಮುಂದಿಟ್ಟಿದೆ: ಒಂದೋ ಇಂಟರ್‌ನೆಟ್‌ ಸೇವೆಗಳಿಗೆ ಪರವಾನಗಿ ವಿಧಿಸುವುದನ್ನು ಒಪ್ಪುವುದು ಅಥವಾ ಜಾಲದಲ್ಲಿ ಸಮಾನತೆ ಕುರಿತು ರಾಜಿಯಾಗುವುದು. ಟ್ರಾಯ್ ಸಂಸ್ಥೆಯ ವಾದವನ್ನೇನಾದರೂ ಒಪ್ಪಿಕೊಂಡಲ್ಲಿ ಇಂಟರ್‌ನೆಟ್‌ ಬಳಸಿಕೊಂಡು ನಡೆಯುತ್ತಿರುವ ಯಾವುದೇ ವ್ಯಾಪಾರ – ಇ-ರಿಟೈಲ್, ಮಾಧ್ಯಮ ಅಥವಾ ಆರೋಗ್ಯ ರಕ್ಷಣೆ – ಗಳನ್ನು ಅದೊಂದು ಹೆಚ್ಚುವರಿ ಸೇವೆಗಳು (ಒಟಿಟಿ) ಎಂದು ಟ್ರಾಯ್ ನಿಯಂತ್ರಿಸತೊಡಗಬೇಕಾಗುತ್ತದೆ. ಇದು ದೊಡ್ಡ ಮಟ್ಟದಲ್ಲಿ ನಿಯಂತ್ರಣ ಸಾಧಿಸುವ ಹೆಜ್ಜೆಯಾಗಿದೆ. ಒಟಿಟಿ ಸೇವೆಗಳಿಗೆ ಉದಾಹರಣೆ: ವಾಟ್ಸ್ ಆಪ್, ವೈಬರ್, ಸ್ಕೈಪ್, ಒಲಾ, ಇತ್ಯಾದಿ..

ಇಂಟರ್‌ನೆಟ್‌ ಸೇವಾ ಪೂರೈಕೆದಾರರು (ಐಎಸ್‍ಪಿ) ದತ್ತಾಂಶ ಸೇವೆಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸಲು ಪರವಾನಗಿ ಹೊಂದಿರುತ್ತಾರೆ. ಈ ಸಂಸ್ಥೆಗಳು ಬಳಕೆದಾರರ ಕಂಪ್ಯೂಟರುಗಳಿಂದ ಉತ್ಪತ್ತಿಯಾಗುವ ದತ್ತಾಂಶ ಪೊಟ್ಟಣಗಳನ್ನು ಸಾಗಿಸುತ್ತವೆ. ಈ ಪೊಟ್ಟಣಗಳಲ್ಲಿರುವುದನ್ನೇ ಕಂಟೆಂಟ್ ಎಂದು ಪರಿಗಣಿಸಲಾಗುತ್ತದೆ – ವೀಡಿಯೋ, ಆಡಿಯೋ, ಅಕ್ಷರ, ಅಥವಾ ಬರೀ ದತ್ತಾಂಶ – ಹಾಗೂ ಇವುಗಳು ಟೆಲಿಕಾಂ ನಿಯಂತ್ರಣಕ್ಕೊಳಪಡುವುದಿಲ್ಲ. ಅದರಿಂದಾಗಿಯೇ ನಾವು ವೆಬ್ ಸೈಟ್ ಸೃಷ್ಟಿಸಲು, ಇಂಟರ್‌ನೆಟ್‌ ಮೇಲೆ ಸೇವೆ ಒದಗಿಸಲು, ಅಥವಾ ಟ್ಯಾಬ್ಲೆಟ್, ಮೊಬೈಲ್ ಪೋನ್ ಅಥವಾ ಕಂಪ್ಯೂಟರಿನ ಮೇಲೆ ಅಪ್ಲಿಕೇಷನ್ ಬಳಸಲು ಪರವಾನಗಿ ಪಡೆಯುವುದಿಲ್ಲ. ಏಕೆಂದರೆ ಇವೆಲ್ಲ ಟೆಲಿಕಾಂ ಸೇವೆಗಳಾಗಿರದೇ, ಕೇವಲ ಕಂಟೆಂಟ್ (ದತ್ತಾಂಶ ಮಾಹಿತಿ) ಆಗಿರುತ್ತವೆ. ಈ ಪರಿಸ್ಥಿತಿಯು ಒಟಿಟಿ ಸೇವೆಗಳ ಕುರಿತು ಟ್ರಾಯ್ ಸಂಸ್ಥೆಯು ಮಾಡಿರುವ ವ್ಯಾಖ್ಯಾನವನ್ನು ಒಪ್ಪಿಕೊಂಡರೆ ಪೂರ್ಣ ಬದಲಾಗುತ್ತದೆ. ಇಂಟರ್‌ನೆಟ್‌ ಬಳಸುವ ಯಾವುದೇ ಒಂದು ಅಪ್ಲಿಕೇಷನ್ ಅಥವಾ ಸೇವೆಯನ್ನು ಒಟಿಟಿ ಎಂದು ವ್ಯಾಖ್ಯಾನಿಸಿದಾಗ ಅದು ಟ್ರಾಯ್ ನಿಯಂತ್ರಣಕ್ಕೊಳಪಡುತ್ತದೆ.

ಹೀಗೆ, ಟ್ರಾಯ್ ಸಂಸ್ಥೆಯು ಟೆಲಿಕಾಂ ಸೇವೆಗಳಾದ ಮೂಲ ಸೇವೆಗಳು (ಧ್ವನಿ ಮತ್ತು ಎಸ್.ಎಂ.ಎಸ್) ಮತ್ತು ಮೌಲ್ಯ ವರ್ಧಿತ ಸೇವೆಗಳು (ದತ್ತಾಂಶ ಅಥವಾ ಇಂಟರ್‌ನೆಟ್‌) – ಇವುಗಳನ್ನು ನಿಯಂತ್ರಿಸುವುದಕ್ಕಷ್ಟೇ ತನ್ನನ್ನು ಸೀಮಿತಗೊಳಿಸದೇ, ದತ್ತಾಂಶ ಅಥವಾ ಇಂಟರ್‌ನೆಟ್‌ ನ ವ್ಯಾಖ್ಯಾನವನ್ನು ಹೆಚ್ಚುವರಿ (ಒಟಿಟಿ) ಸೇವೆಗಳೆಂದು ಮಾರ್ಪಾಟು ಮಾಡುವ ಮೂಲಕ ಎಲ್ಲ ಇಂಟರ್‌ನೆಟ್‌ ಆಧಾರಿತ ಸೇವೆಗಳನ್ನು ತನ್ನ ವ್ಯಾಪ್ತಿಗೆ ತಂದು ನಿಯಂತ್ರಿಸಲು ಹವಣಿಸುತ್ತಿದೆ. ಪ್ರತಿಯೊಂದು ನೆಟ್ ಸೇವೆಯನ್ನು ಹೆಚ್ಚುವರಿ (ಒಟಿಟಿ) ಸೇವೆಗಳೆಂದು ದರ ನಿಗಧಿ ಮಾಡುವ ಪ್ರಯತ್ನಗಳು ನಡೆದಿವೆ.

ನಿಯಂತ್ರಣ ಪಡಿಸುವ ಉದ್ದೇಶದಿಂದ ಇಂಟರ್‌ನೆಟ್‌ ಮೇಲೆ ಒದಗಿಸಲಾಗುವ ವಿವಿಧ ಅಪ್ಲಿಕೇಷನ್‍ಗಳು ಮತ್ತು ಸೇವೆಗಳ ನಡುವೆ ವ್ಯತ್ಯಾಸ ಗುರುತಿಸಲು ಆರಂಭಿಸಿದಲ್ಲಿ ಸಮಸ್ಯೆಗಳ ಪೆಟ್ಟಿಗೆಯನ್ನೇ ತೆರೆದಂತೆಯೇ. ಇದರಿಂದ ಟ್ರಾಯ್ ಸಂಸ್ಥೆಯು ಕೆಲವೇ ಕೆಲವು ಸೇವೆಗಳಿಗೆ ಪರವಾನಗಿ ನೀಡಬಹುದು. ಉದಾಹರಣೆಗೆ, ಮುಂದೊಮ್ಮೆ ಟ್ರಾಯ್ ಸಂಸ್ಥೆಯು ಸ್ಕೈಪ್ ಮತ್ತು ವಾಟ್ಸ್ ಆಪ್ ಅಪ್ಲಿಕೇಷನ್ ಗಳು ತಮ್ಮ ಆನ್ ಲೈನ್ ಸೇವೆಗಳಿಗೆ ತನ್ನಿಂದ ಪರವಾನಗಿ ಪಡೆಯಬೇಕು ಎಂದು ನಿಲುವು ತಳೆಯಬಹುದು. ಪ್ರಸ್ತುತ ಸ್ಕೈಪ್ ಮತ್ತು ವಾಟ್ಸ್ ಆಪ್ ಅಪ್ಲಿಕೇಷನ್ ಗಳು ಉಚಿತವಾಗಿ ಧ್ವನಿ ಮತ್ತು ಎಸ್.ಎಂ.ಎಸ್ ಸೌಲಭ್ಯವನ್ನು ಒದಗಿಸುತ್ತಿದ್ದು, ಟೆಲಿಕಾಂ ಕಂಪನಿಗಳು ಈ ಸೌಲಭ್ಯಕ್ಕೆ ಅಧಿಕ ದರ ವಿಧಿಸುತ್ತಿವೆ.

ಅಂತರ್ಜಾಲವನ್ನು ಹಲವು ಸೇವೆಗಳ ಗೊಂಚಲು (ಒಟಿಟಿ) ಎಂದು ವ್ಯಾಖ್ಯಾನಿಸಿ ಅವುಗಳಿಗೆ ಪರವಾನಗಿ ಪಡೆಯಬೇಕು ಎಂದು ನಿರ್ಧರಿಸುವುದರಿಂದ ಅಂತರ್ಜಾಲವು ತನ್ನ ಈಗಿರುವ ತೆರೆದ ಸ್ವರೂಪದಿಂದ ಮುಚ್ಚಿದ ಸ್ವರೂಪಕ್ಕೆ ಬರುತ್ತದೆ. ಇಂಟರ್‌ನೆಟ್‌ ಬೆಳೆದಿರುವುದೇ ತನ್ನ ತೆರೆದ ಗುಣದಿಂದಾಗಿ, ಪರವಾನಗಿಯಿಲ್ಲದ ಆವಿಷ್ಕಾರದಿಂದಾಗಿ.

ವಿಶ್ವದಾದ್ಯಂತ ಇಂಟರ್‌ನೆಟ್‌ ಕಂಪನಿಗಳು ದಿಢೀರ್ ಲಾಭಗಳಿಸಿ ದೈತ್ಯರೂಪದಲ್ಲಿ ಬೆಳೆಯುತ್ತಿರುವುದನ್ನು ಟೆಲಿಕಾಂ ಕಂಪನಿಗಳು ತಮ್ಮ ಕಾಮಾಲೆ ಕಣ್ಣುಗಳಿಂದ ನೋಡುತ್ತಿವೆ. ದೂರಸಂಪರ್ಕ ಸೌಲಭ್ಯ ಒದಗಿಸಲು ತಾವು ಮೂಲಸೌಲಭ್ಯವನ್ನು ನಿರ್ಮಿಸಿರುವುದರಿಂದ ತಮಗೂ ಇಂಟರ್‌ನೆಟ್‌ ಸೇವೆಗಳಲ್ಲಿ ಪಾಲು ಬೇಕೆಂದು, ಇಲ್ಲದಿದ್ದಲ್ಲಿ ತಾವು ಇನ್ನಷ್ಟು ಮೂಲಸೌಲಭ್ಯ ಒದಗಿಸಲು ಕಷ್ಟವೆಂದು ವಾದಿಸುತ್ತಿವೆ. ಆದರೆ ಇದೇ ಟೆಲಿಕಾಂ ಕಂಪನಿಗಳು ಅವು ಪ್ರಸ್ತುತ ಒದಗಿಸುತ್ತಿರುವ ಧ್ವನಿ ಮತ್ತು ಎಸ್.ಎಂ.ಎಸ್ ಸೇವೆಗಳಲ್ಲಿ ನಷ್ಟವಾಗುತ್ತಿರುವುದರಿಂದ ಇನ್ನಷ್ಟು ಮೂಲಸೌಲಭ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲು ಆಗುವುದಿಲ್ಲ. ಏಕೆಂದರೆ, ಪ್ರಸ್ತುತ ಸೇವೆಗಳಿಂದಲೇ ಅವು ಸಿಕ್ಕಾ ಪಟ್ಟೆ ಲಾಭಗಳಿಸುತ್ತಿವೆ, ಆದರೆ ಇನ್ನಷ್ಟು ಲಾಭಕ್ಕಾಗಿ ಹವಣಿಸುತ್ತಿವೆ.

ಜಾಲದಲ್ಲಿ ಸಮಾನತೆ ಕುಸಿದುಬಿದ್ದರೆ, ಟೆಲಿಕಾಂ ಕಂಪನಿಗಳು ತಮ್ಮ ಮೂಲಸೌಲಭ್ಯ ಮತ್ತು ಬ್ಯಾಂಡ್ ವಿಡ್ತ್ ಗಳನ್ನು ವಿಸ್ತರಿಸುವ ಗೋಜಿಗೆ ಹೋಗುವುದಿಲ್ಲ. ಬ್ಯಾಂಡ್ ವಿಡ್ತ್ ವಿಸ್ತರಣೆಯಾಗದೇ ಹೋದರೆ, ದತ್ತಾಂಶಗಳ ಹರಿವಿಗೆ ಅಡೆತಡೆಯಾಗುತ್ತದೆ, ದೊಡ್ಡ ಇಂಟರ್‌ನೆಟ್‌ ಕಂಪನಿಗಳು ತಮ್ಮ ದತ್ತಾಂಶ ಪೊಟ್ಟಣಗಳನ್ನು ವೇಗವಾಗಿ ರವಾನಿಸಲು ಟೆಲಿಕಾಂ ಕಂಪನಿಗಳಿಗೆ ಹೆಚ್ಚುವರಿ ಹಣ ನೀಡುತ್ತವೆ. ಹಾಗಾಗಿ, ಜಾಲದಲ್ಲಿ ಸಮಾನತೆಯು ಟೆಲಿಕಾಂ ಕಂಪನಿಗಳು ಮೂಲಸೌಲಭ್ಯ ವಿಸ್ತರಿಸಲು ಪ್ರೋತ್ಸಾಹ ನೀಡುತ್ತದೆ, ದತ್ತಾಂಶ ಟ್ರಾಫಿಕ್ ಸುಲಭವಾಗಿ ಹರಿಯಲು ದಾರಿ ಮಾಡುತ್ತದೆ.

ಈ ಹಿನ್ನೆಲೆಯಲ್ಲಿ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವು ಟೆಲಿಕಾಂ ಕಂಪನಿಗಳು ಮತ್ತು ಅತಿದೊಡ್ಡ ನೆಟ್ ಕಂಪನಿಗಳ ಲಾಬಿಗೆ ಮಣಿಯದೇ ಜಾಲದಲ್ಲಿ ಸಮಾನತೆ ಕಾಯುವ ನಿಟ್ಟಿನಲ್ಲಿ ಬಲಿಷ್ಟ ನಿಯಮಗಳನ್ನು ರೂಪಿಸಬೇಕು. ಇದಕ್ಕಾಗಿ ಎಲ್ಲ ಸಣ್ಣ & ಮಧ್ಯಮ ಇಂಟರ್‌ನೆಟ್‌ ಕಂಪನಿಗಳು, ನೆಟ್ ಬಳಕೆದಾರರು, ಕಂಪ್ಯೂಟರ್ ಬಳಕೆದಾರರು, ಮತ್ತು ಜನ ಸಾಮಾನ್ಯರು ಇಂಟರ್‌ನೆಟ್‌ ಸೇವೆಗಳು ಸರಕಾಗದಂತೆ ಪ್ರಜ್ಞಾವಂತಿಕೆಯಿಂದ ಒತ್ತಾಯ ತರಬೇಕು.

******

ಪ್ರಶ್ನೋತ್ತರಗಳು:

1. ನೆಟ್ ನ್ಯೂಟ್ರಾಲಿಟಿ ಅಥವಾ ಜಾಲದಲ್ಲಿ ಸಮಾನತೆ ಎಂದರೇನು?
ಜಾಲದಲ್ಲಿ ಹರಿವ ದತ್ತಾಂಶದ ಮೂಲ, ಮಾಲೀಕತ್ವ, ಅಥವಾ ವಿಷಯಗಳ ಆಧಾರದ ಮೇಲೆ ವಿವಿಧ ವೆಬ್ ಸೈಟ್ ಗಳ ನಡುವೆ ತಾರತಮ್ಯ ಮಾಡಬಾರದು, ಎಲ್ಲ ವೆಬ್ ಸೈಟ್ ಗಳು ಒಂದೇ ವೇಗದಲ್ಲಿ ಡೌನ್ ಲೋಡ್ ಆಗಬೇಕು, ಎಲ್ಲ ಜಾಲತಾಣಗಳನ್ನು ಬಳಸಲು ಸಮಾನ ಅವಕಾಶ ಇರಬೇಕು & ಒಂದೇ ದತ್ತಾಂಶ ವೆಚ್ಚ ವಿಧಿಸಬೇಕು ಙಎಂಬುದೇ ‘ಜಾಲದಲ್ಲಿ ಸಮಾನತೆ’ ಯ ಪರಿಕಲ್ಪನೆ. ಅಂದರೆ, ಭೌತಿಕ ನೆಟ್‍ವರ್ಕ್‍ಗಳ ಮಾಲೀಕತ್ವ ಹೊಂದಿರುವವರು ಅಥವಾ ನಿಯಂತ್ರಿಸುತ್ತಿರುವವರು, ಆ ನೆಟ್‍ವರ್ಕ್‍ಗಳ ಮೇಲೆ ಹರಿಯುವ ಇಂಟರ್‌ನೆಟ್‌ ಮುಖೇನಾ ಒದಗಿಸಲಾಗುವ ವಿವಿಧ ರೀತಿಯ ಸೇವೆಗಳು ಅಥವಾ ಜಾಲತಾಣಗಳ ನಡುವೆ ತಾರತಮ್ಯ ಮಾಡಬಾರದು.

2. ಜಾಲದಲ್ಲಿ ಸಮಾನತೆ ಇದೀಗ ಸುದ್ದಿಯಲ್ಲಿರುವುದು ಏಕೆ?
ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವು ಇತ್ತೀಚೆಗೆ ಬಿಡುಗಡೆ ಮಾಡಿರುವ “ಒವರ್-ದಿ-ಟಾಪ್ (ಒಟಿಟಿ) ಸೇವೆಗಳನ್ನು ನಿಯಂತ್ರಿಸುವ ಕುರಿತಾದ ಸಮಾಲೋಚನ ಡಾಕ್ಯುಮೆಂಟ್ ಕೇವಲ ಎರಡು ಆಯ್ಕೆಗಳನ್ನು ಮಾತ್ರವೇ ಮುಂದಿಟ್ಟಿದೆ: ಒಂದೋ ಇಂಟರ್‌ನೆಟ್‌ ಸೇವೆಗಳಿಗೆ ಪರವಾನಗಿ ವಿಧಿಸುವುದನ್ನು ಒಪ್ಪುವುದು ಅಥವಾ ಜಾಲದಲ್ಲಿ ಸಮಾನತೆ ಕುರಿತು ರಾಜಿಯಾಗುವುದು. ಇದು ಸಾಕಷ್ಟು ವಿವಾದ ಸೃಷ್ಟಿಸಿದ್ದು ಚರ್ಚೆ ಹುಟ್ಟುಹಾಕಿದೆ.

3. ಹೆಚ್ಚುವರಿ ಸೇವೆಗಳು (ಒಟಿಟಿ) ಎಂದರೇನು?
ಟ್ರಾಯ್ ಸಂಸ್ಥೆಯ ವಾದವನ್ನೇನಾದರೂ ಒಪ್ಪಿಕೊಂಡಲ್ಲಿ ಇಂಟರ್‌ನೆಟ್‌ ಬಳಸಿಕೊಂಡು ನಡೆಯುತ್ತಿರುವ ಯಾವುದೇ ವ್ಯಾಪಾರ – ಇ-ರಿಟೈಲ್, ಮಾಧ್ಯಮ ಅಥವಾ ಆರೋಗ್ಯ ರಕ್ಷಣೆ – ಗಳನ್ನು ಅದೊಂದು ಹೆಚ್ಚುವರಿ ಸೇವೆಗಳು (ಒಟಿಟಿ) ಎಂದು ಟ್ರಾಯ್ ನಿಯಂತ್ರಿಸತೊಡಗಬೇಕಾಗುತ್ತದೆ. ಇದು ದೊಡ್ಡ ಮಟ್ಟದಲ್ಲಿ ನಿಯಂತ್ರಣ ಸಾಧಿಸಿ, ಇಂಟರ್‌ನೆಟ್‌ ನ್ನು ವ್ಯಾಪಾರೀಕರಣ ಮಾಡುವ ಹೆಜ್ಜೆಯಾಗಿದೆ. ಒಟಿಟಿ ಸೇವೆಗಳಿಗೆ ಉದಾಹರಣೆ: ವಾಟ್ಸ್ ಆಪ್, ಮೆಸ್ಸೆಂಜರ್, ವೈಬರ್, ಸ್ಕೈಪ್, ಒಲಾ, ಇತ್ಯಾದಿ..

4. ಜಾಲದಲ್ಲಿ ಸಮಾನತೆಯಿಂದ ಯಾರಿಗೆ ಲಾಭ?
ಜಾಲದಲ್ಲಿ ಸಮಾನತೆಯಿಂದ ಸರ್ವರಿಗೂ ಇಂಟರ್‌ನೆಟ್‌ ನ ಸೇವೆ ಯಾವುದೇ ದರದ ತಾರತಮ್ಯಗಳಿಲ್ಲದೇ ಲಭ್ಯವಾಗುತ್ತದೆ. ಇದು ಜನಸಾಮಾನ್ಯರಿಗೂ ನೆಟ್ ಬಳಕೆದಾರರಿಗೂ ಸಣ್ಣ ಮತ್ತು ಮಧ್ಯಮ ನೆಟ್ ಕಂಪನಿಗಳಿಗೂ ಅನುಕೂಲಕರ. ಜಾಲದಲ್ಲಿ ಸಮಾನತೆ ಇಲ್ಲದಿದ್ದಲ್ಲಿ, ಹೆಚ್ಚು ಲಾಭ ಮಾಡಲು ಅತಿದೊಡ್ಡ ಇಂಟರ್‌ನೆಟ್‌ ಮತ್ತು ಟೆಲಿಕಾಂ ಕಂಪನಿಗಳಿಗೆ ಅನುಕೂಲಕರ.

5. ಜಾಲದಲ್ಲಿ ಸಮಾನತೆಯ ಖಾತರಿಗಾಗಿ ನಾವೇನು ಮಾಡಬೇಕು?
ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವು ಟೆಲಿಕಾಂ ಕಂಪನಿಗಳು ಮತ್ತು ಅತಿದೊಡ್ಡ ನೆಟ್ ಕಂಪನಿಗಳ ಲಾಬಿಗೆ ಮಣಿಯದೇ ಜಾಲದಲ್ಲಿ ಸಮಾನತೆ ಕಾಯುವ ನಿಟ್ಟಿನಲ್ಲಿ ಬಲಿಷ್ಟ ನಿಯಮಗಳನ್ನು ರೂಪಿಸಬೇಕು. ಇದಕ್ಕಾಗಿ ಎಲ್ಲ ಸಣ್ಣ & ಮಧ್ಯಮ ಇಂಟರ್‌ನೆಟ್‌ ಕಂಪನಿಗಳು, ನೆಟ್ ಬಳಕೆದಾರರು, ಕಂಪ್ಯೂಟರ್ ಬಳಕೆದಾರರು, ಮತ್ತು ಜನ ಸಾಮಾನ್ಯರು ಇಂಟರ್‌ನೆಟ್‌ ಸೇವೆಗಳು ಲಾಭಕೋರ ಕಂಪನಿಗಳ ಸರಕಾಗದಂತೆ ಪ್ರಜ್ಞಾವಂತಿಕೆಯಿಂದ ಒತ್ತಾಯ ತರಬೇಕು.