Daily Archives: September 2, 2015

ರಾಜ್ಯದ ಬೆನ್ನ ಮೇಲೆ ಬರೆ ಎಳೆದ ಮಳೆರಾಯ..!


– ಡಾ.ಎಸ್.ಬಿ. ಜೋಗುರ


ನಮ್ಮ ರೈತರಲ್ಲಿ ಕೊನೆಗೂ ಮುಗಿಲು ನೋಡುವ ಭರವಸೆ ಹೊರಟುಹೋಯಿತು. ಮೋಡ ಗರಿಗರಿಯಾಗಿ ಕರಿಗಟ್ಟುವದನ್ನು ನೋಡನೋಡುತ್ತಲೇ ಮಳೆಗಾಲ ಮುಗಿದು ಹೋದಂತಾಯಿತು. ಎಲ್ಲೆಲ್ಲೂ ಬೇಸಿಗೆ ಮಳೆಗಾಲವನ್ನು ಅತಿಕ್ರಮಿಸಿರುವ ಅನುಭವವಾಗುತ್ತಿದೆ. ಆರಂಭದಲ್ಲಿ ಮೋಡ ಹೆಪ್ಪುಗಟ್ಟುವ ವಾತಾವರಣವಾದರೂ ಇತ್ತು ಈಗೀಗ ಎಲ್ಲವೂ ತೊಳೆದು ಶುಭ್ರವಾದಂತಿದೆ. ಮಳೆ ಬರುವ ಭರವಸೆಯೇ ಮಂಗ ಮಾಯವಾಗಿದೆ. ಮಳೆಗಾಲದ ಅನುಭವವನ್ನು ತಂದು ಕೊಡದ ರೀತಿಯಲ್ಲಿ ಈ ಬಾರಿಯ ಮಳೆಗಾಲ ಮೆಲ್ಲಗೆ ಸರಿಯುತ್ತಿದೆ. ಮುಂಗಾರಿನ ಪೀಕು ಕೈಗೆ ಬರುವ ಯಾವ ಲಕ್ಷಣಗಳೂ ತೋರುತ್ತಿಲ್ಲ. ಅದಾಗಲೇ ಉತ್ತರ ಕರ್ನಾಟಕದ ಜನ ಈ ಬರದ ಬವಣೆಗೆ ಹೆದರಿ ಗುಳೆ ಹೋಗುತ್ತಿದ್ದಾರೆ. ದುಡಿಯಲಾಗದ ಮತ್ತು ತೀರಾ ವಯಸ್ಸಾದವರನ್ನು rural-karnataka-2ಊರಲ್ಲಿಯೇ ಬಿಟ್ಟು ಕೂಸು, ಕುನ್ನಿಗಳನ್ನು ಕಟ್ಟಿಕೊಂಡು ಊರು ತೊರೆಯುತ್ತಿದ್ದಾರೆ. ಜಾನುವಾರಗಳನ್ನು ಕೇಳುವವರಿಲ್ಲದೇ ಬಂದ ದುಡ್ಡಿಗೆ ಮಾರಿ ನಡೆದಿದ್ದಾರೆ. ಸಾಲ ಮಾಡಿ ತಂದು ಭೂಮಿಯ ಬಾಯಿಗೆ ಸುರಿದ ಬೀಜವೂ ಮರಳಿ ದಕ್ಕದ ಸ್ಥಿತಿಯಲ್ಲಿ ರೈತರಿದ್ದಾರೆ.

ರಾಜ್ಯದ ದಕ್ಷಿಣ ಭಾಗಕ್ಕಿಂತಲೂ ಕಡಿಮೆ ಪ್ರಮಾಣದ ಮಳೆ ಉತ್ತರ ಕರ್ನಾಟಕದಲ್ಲಾಗಿದೆ. ಈಗಾಗಲೇ ರಾಜ್ಯದ 126 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿಯಾಗಿದೆ. ಮಿಕ್ಕ ಐವತ್ತು ತಾಲೂಕುಗಳ ಸ್ಥಿತಿಯೂ ಅಷ್ಟೇನು ಸುಖಕರವಿಲ್ಲ. ಆಹಾರಧಾನ್ಯಗಳ ಬೆಲೆ ದಿನೇ ದಿನೇ ಗಗನಕ್ಕೆ ಏರುತ್ತಿದೆ. ತೀರಾ ಅವಶ್ಯಕ ತರಕಾರಿಯಾಗಿರುವ ಈರುಳ್ಳಿಯ ದರವಂತೂ ನೂರರ ಆಸು ಪಾಸು ಹರಿದಾಡುತ್ತಿದೆ. ಅದರ ಬದಲಾಗಿ ಈರುಳ್ಳಿಯ ಪೇಸ್ಟ್ ಬಳಸಿ ಎಂದು ಸಲಹೆ ಕೊಡುವವರ ಪ್ರಮಾಣವೂ ಹೆಚ್ಚುತ್ತಿದೆ. ಹಿಂದೊಮ್ಮೆ ಹೀಗೆಯೇ ಈರುಳ್ಳಿಯ ದರ ಗಗನಕ್ಕೆ ತಲುಪಿದಾಗ ಆಗ ಕೇಂದ್ರ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್.ಶೇಷನ್ ಅವರು ಈರುಳ್ಳಿಯ ಬದಲಾಗಿ ಸೇಬು ಹಣ್ಣನ್ನು ಸೇವಿಸಲು ಕರೆನೀಡಿರುವದಿತ್ತು. ಆಗ ಸೇಬು ಹಣ್ಣಿನ ದರ ಈರುಳ್ಳಿಗಿಂತಲೂ ಕಡಿಮೆಯಿತ್ತು. rural-indiaನೀರಿಗಿಂತಲೂ ಬೀಯರ್ ದರ ಕಡಿಮೆ ಇದೆ ಎಂದಾಗ ಅದನ್ನು ನೀರಿಗೆ ಪರ್ಯಾಯವಾಗಿ ಕುಡಿದು ಇರಲು ಸಾಧ್ಯವಿದೆಯೇ..? ಈರುಳ್ಳಿಯ ಸ್ಥಾನವನ್ನು ಅದು ಮಾತ್ರ ತುಂಬಬಲ್ಲದೇ ಹೊರತು ಅದೇ ಜಾತಿಗೆ ಸೇರುವ ಬಳ್ಳೊಳ್ಳಿಯಿಂದಲೂ ಅದು ಸಾಧ್ಯವಿಲ್ಲ. ಕೇವಲ ಈರುಳ್ಳಿ ಮಾತ್ರವಲ್ಲ, ಇನ್ನೊಂದು ತಿಂಗಳಲ್ಲಿ ಬಹುತೇಕವಾಗಿ ಎಲ್ಲ ಆಹಾರ ಪದಾರ್ಥಗಳ ಬೆಲೆ ನಿಲುಕದ ಎತ್ತರ ತಲುಪುವದಂತೂ ಗ್ಯಾರಂಟಿ. ಇಲ್ಲಿ ಯಾವುದೇ ಕೃಷಿ ಪದಾರ್ಥಗಳ ದರ ಎಷ್ಟೇ ಹೆಚ್ಚಳವಾದರೂ ಅದರ ಲಾಭ ರೈತನನ್ನು ತಲುಪುವದಂತೂ ಸಾಧ್ಯವಿಲ್ಲ. ಕೊನೆಗೂ ಮಧ್ಯವರ್ತಿಗಳು ಮತ್ತು ಸಗಟು ಮಾರಾಟದಾರರೇ ಉದ್ದಾರವಾಗುವವರು.

ಮಳೆಯ ಪ್ರಮಾಣ ಈ ಬಾರಿ ತೀರಾ ಕಡಿಮೆಯಾಗಿದೆ. ಕರಾವಳಿ ತೀರದ ಜಿಲ್ಲೆಗಳಲ್ಲಿಯೂ ಈ ಬಾರಿ ಬರಗಾಲದ ಛಾಯೆ ತೋರುತ್ತಿದೆ. ಅಲ್ಲಿಯೂ ಕೆಲ ತಾಲೂಕುಗಳಲ್ಲಿ ಈಗಾಗಲೇ ಮಳೆಯ ಪ್ರಮಾಣ ವರ್ಷಕ್ಕಿಂತಲೂ ಕಡಿಮೆಯಾಗಿದೆ. ಉತ್ತರ ಕರ್ನಾಟಕದಲ್ಲಂತೂ ಬಹುತೇಕ ಕಡೆಗಳಲ್ಲಿ ಅದರಲ್ಲೂ ಕೃಷಿಯನ್ನೇ ಪ್ರಧಾನವಾಗಿಸಿಕೊಂಡ ತಾಲೂಕುಗಳು ಅದಾಗಲೇ ಬರದ ಬವಣೆಗೆ ಸಿಲುಕಿವೆ. ಮಳೆಗಾಲದಲ್ಲಿಯೂ ಕುಡಿಯುವ ನೀರಿಗಾಗಿ ಹಾಹಾಕಾರ ಆರಂಭವಾಗಿದೆ. ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರಿನ ಪೂರೈಕೆ ಶುರುವಾಗಿ ತಿಂಗಳೇ ಕಳೆಯಲು ಬಂತು. ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟ, ಕಲಬುರಗಿ, ಯಾದಗಿರ, ಗದಗ, ಬಳ್ಳಾರಿ, ಕೊಪ್ಪಳ, ಬೆಳಗಾವಿ, ಹಾವೇರಿ, ಧಾರವಾಡ, ರಾಯಚೂರ ಮುಂತಾದವುಗಳು ಅದಾಗಲೇ ಬರದ ಬವಣೆಗೆ ಸಿಲುಕಿರುವದಿದೆ. byahatti-nargund-kalasa-banduriಇನ್ನೊಂದೆಡೆ ಮಹದಾಯಿ ನದಿ ನೀರಿನ ವಿಷಯವಾಗಿ ಹೋರಾಟವೂ ನಡೆದಿದೆ. ಇಡೀ ಉತ್ತರ ಕರ್ನಾಟಕ ಒಂದೆಡೆ ಬರಗಾಲ ಇನ್ನೊಂದೆಡೆ ಕಳಸಾ ಬಂಡೂರಿ ನದಿ ಜೋಡಣೆಯ ವಿಷಯವಾಗಿ ಪ್ರತಿನಿತ್ಯ ಬಂದ್ ಮತ್ತು ಹರತಾಳದ ಸ್ಥಿತಿಯನ್ನು ಅನುಭವಿಸುತ್ತಿದೆ. ರಾಜ್ಯದಿಂದ ಮುಖ್ಯಮಂತ್ರಿಗಳು ಕೇಂದ್ರಕ್ಕೆ ನಿಯೋಗವನ್ನು ಕೊಂಡೊಯ್ದಿದ್ದರೂ ಪ್ರಧಾನಿಯವರೊಂದಿಗಿನ ಮಾತುಕತೆಗಳು ಅಷ್ಟೊಂದು ಫಲಪ್ರದವಾದಂತಿಲ್ಲ ಪರಿಣಾಮವಾಗಿ ಹೋರಾಟದ ಕಾವು ಇನ್ನಷ್ಟು ತೀವ್ರವಾಗಿದೆ.

ಒಂದೆಡೆ ಬರದ ಬಿಸಿ, ಇನ್ನೊಂದೆಡೆ ನದಿ ನೀರಿನ ಹೋರಾಟದ ತೀವ್ರತೆ ಇವೆರಡರ ನಡುವೆ ಉತ್ತರ ಕರ್ನಾಟಕ ಕೊತಕೊತ ಕುದಿಯುವಂಥ ಸ್ಥಿತಿಯಲ್ಲಿದೆ.ಈ ಬಗೆಯ ವಾತಾವರಣದ ನಡುವೆ ನಮ್ಮ ರಾಜಕಾರಣಿಗಳು ತಮ್ಮ ತಮ್ಮ ಸಣ್ಣ ಪುಟ್ಟ ರಾಜಕೀಯ ಹಿತಾಸಕ್ತಿಯನ್ನು ಬದಿಗಿಟ್ಟು, ಪಕ್ಷಭೇದವನ್ನು ಮರೆತು ಸಮೈಕ್ಯರಾಗಿ ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡುವ ಅಗತ್ಯವಿದೆ. ನೆರೆಯ ಗೋವಾ ಸರಕಾರ ಮಹದಾಯಿ ನದಿ ನೀರಿನ ವಿಷಯವಾಗಿ ತನ್ನ ಅದೇ ಹಳೆಯ ರಾಗವನ್ನೇ ಹಾಡುತ್ತಿದೆ. ಎಲ್ಲ ರೀತಿಯಿಂದಲೂ ಸದ್ಯದ ಆಡಳಿತರೂಢ ಸರಕಾರಕ್ಕೆ ಈ ಬಾರಿಯ ಬರಗಾಲ ಮತ್ತು ಈ ನದಿ ನೀರಿನ ಹೋರಾಟಗಳೆರಡೂ ನುಂಗಲಾರದ ತುತ್ತಾಗಿವೆ. ಬರಗಾಲ ನಿರ್ವಹಣೆ ಮತ್ತು ಈಗಾಗಲೇ ತೀವ್ರವಾಗಿ ನಡೆಯುತ್ತಿರುವ ಮಹದಾಯಿ ನದಿ ನೀರಿನ ಹೋರಾಟವನ್ನು ಅತ್ಯಂತ ಸೂಕ್ಷ್ಮವಾಗಿ ನಿರ್ವಹಿಸುವವಲ್ಲಿಯೇ ಆಡಳಿತರೂಢ ಸರಕಾರದ ಯಶಸ್ಸು ಅಡಗಿದೆ.

ರಾಜ್ಯದಲ್ಲಿಯ ಬರಗಾಲದ ಸ್ಥಿತಿಯನ್ನು ಈಗಾಗಲೇ ಮುಖ್ಯಮಂತ್ರಿಗಳು ಪ್ರಧಾನಿ ಮೋದಿಯವರಿಗೆ ವಿವರಿಸಿದ್ದಾರೆ. ಸುಮಾರು 10 ಸಾವಿರ ಕೋಟಿ ರೂಪಾಯಿಯ ಅಂದಾಜು ನಷ್ಟದ ಮೊತ್ತವನ್ನು ನೀಡಿರುವದಿದೆ. ಕೇಂದ್ರ ಸರಕಾರ ಕೇಳಿದಷ್ಟು ಪರಿಹಾರವಂತೂ ನೀಡಲು ಸಾಧ್ಯವಿಲ್ಲ. ಕೇಂದ್ರದ ಬರ ಅಧ್ಯಯನ ತಂಡಗಳ ಸಮೀಕ್ಷೆಯ ಮೇಲೆ ಕೊಡಮಾಡುವ ಮೊತ್ತದ ಪ್ರಮಾಣ ನಿಂತಿದೆ. ಈಗಾಗಲೇ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿದೆ. ಪರಿಣಾಮವಾಗಿ ಕೆಲೆವೆಡೆ ವಿಧ್ಯುತ್ ಉತ್ಪಾದನೆಗೂ ತೊಂದರೆಯಾಗಲಿದೆ ಅದನ್ನು ಗಮನದಲ್ಲಿರಿಸಿಕೊಂಡೇ ಈಗಾಗಲೇ ಲೋಡ್ ಶೆಡ್ಡಿಂಗ್ ಆರಂಭವಾಗಿದೆ. kalasa-banduriಸುಮಾರು 60 ಪ್ರತಿಶತದಷ್ಟು ಸಣ್ಣ ಪ್ರಮಾಣದ ನೀರಿನ ಮೂಲಗಳು ಬತ್ತತೊಡಗಿವೆ. ಪರಿಣಾಮವಾಗಿ ಕುಡಿಯುವ ನೀರಿಗಾಗಿಯೂ ಹಾಹಾಕಾರ ಆರಂಭವಾಗುವ ದಿನಗಳು ದೂರಿಲ್ಲ. ಬಿತ್ತನೆ ಮಾಡಿರುವ ಒಟ್ಟು ಪ್ರದೇಶದಲ್ಲಿ ಅರ್ಧದಷ್ಟು ಅದಾಗಲೇ ಬಿಲ್ಕುಲ್ ಏನೂ ಬೆಳೆ ಬರುವದಿಲ್ಲ ಎನ್ನುವ ಸ್ಥಿತಿ ತಲುಪಿ ಆಗಿದೆ. ಇನ್ನೊಂದರ್ಧ ಜೀವ ಹಿಡಿದು ಹನಿ ಹನಿ ನೀರಿಗಾಗಿಯೂ ಪರಿತಪಿಸಿ ಒಣಗಿ ಹೋಗುವ ಸ್ಥಿತಿಯಲ್ಲಿದೆ. ಒಣ ಬೇಸಾಯವನ್ನು ಅವಲಂಬಿಸಿ, ಮಳೆಯನ್ನೇ ನೆಚ್ಚಿಕೊಂಡಿರುವ ರೈತರಂತೂ ಕಂಗಾಲಾಗಿದ್ದಾರೆ. ಈಗಾಗಲೇ ಸರಣಿ ರೂಪದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳಿಗೆ ಈ ಬರಗಾಲ ಇನ್ನಷ್ಟು ಚಾಲನೆ ಕೊಡದಿರಲಿ. ಅವರ ಬದುಕಿನಲ್ಲಿ ಭರವಸೆ ಮೂಡುವಂಥಾ ಹತ್ತಾರು ಕಾರ್ಯಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕಿದೆ. ಒಟ್ಟಂದವನ್ನು ಮಸಿ ನುಂಗಿತು ಎನ್ನುವ ಮಾತಿನಂತೆ ಸರಕಾರದ ಇಲ್ಲಿಯವರೆಗಿನ ಸಾಧನೆಗಳನ್ನು ಈ ಬರಗಾಲ ಮಸಿಯಾಗಿ ಮರೆಸಿಬಿಡುವಂತಾಗಬಾರದು ಎನ್ನುವದಾದರೆ ಈಗಿನಿಂದಲೇ ಸರಕಾರ ಜಾಗೃತವಾಗಿ ಬರ ಪರಿಹಾರ ಕಾಮಗಾರಿಯ ಕಾರ್ಯಕ್ರಮಗಳನ್ನು ಆದಷ್ಟು ಬೇಗನೇ ಚಾಲನೆಗೊಳಿಸಬೇಕು. ಇದೊಂದು ಆಹ್ವಾನವಾಗಿ ಸ್ವೀಕರಿಸಿ ಸರಕಾರ ಮತ್ತು ಜನತೆ ಕೈಗೂಡಿಸಿ ಬರಗಾಲದ ಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಬೇಕು.

ಅಗಷ್ಟ ತಿಂಗಳು ಕಳೆಯಲು ಬಂದರೂ ಯಾವ ಜಿಲ್ಲೆಗಳಲ್ಲೂ ಸಾಕಷ್ಟು ಮಳೆಯಾಗಿಲ್ಲ. ರಾಜ್ಯದ ಯಾವ ನದಿಗಳೂ ಪೂರ್ಣ ಪ್ರಮಾಣದಲ್ಲಿ ತುಂಬಿಲ್ಲ. droughtಕೃಷಿ ಕಾರ್ಯಗಳು ದೂರ, ಕುಡಿಯಲು ನೀರು ಸಿಕ್ಕರೂ ಸಾಕು ಎನ್ನುವಂತಹ ಸ್ಥಿತಿ ಬರ ಪೀಡಿತ ತಾಲೂಕುಗಳಲ್ಲಿದೆ. ನೀರಿಗಾಗಿ ದಿನವಿಡೀ ಟ್ಯಾಂಕರ್‌ಗಳಿಗಾಗಿ ಕಾದು ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿದೆ. ನಿಸರ್ಗ ಮುನಿಸಿಕೊಂಡರೆ ಎಷ್ಟೆಲ್ಲಾ ವೈಪರೀತ್ಯಗಳು ಮತ್ತು ಮಾರಕ ಪರಿಣಾಮಗಳು ಸಾಧ್ಯ ಎನ್ನುವುದನ್ನು ಅನೇಕ ಬಾರಿ ಹೀಗೆ ಮತ್ತೆ ಮತ್ತೆ ಅನಾವೃಷ್ಟಿಯ ಮೂಲಕ ತೋರಿಸಿಕೊಟ್ಟರೂ ನಾವು ಪಾಠ ಕಲಿತಿಲ್ಲ. ಬರಗಾಲದ ವಿಷಯವಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ವ್ಯವಸ್ಥಿತವಾಗಿ ನಿರ್ವಹಿಸಲ್ಪಟ್ಟರೆ ಅರ್ಧ ಸಮಸ್ಯೆಗಳನ್ನು ನಿಯಂತ್ರಿಸಿದಂತೆ. ಆ ದಿಸೆಯಲ್ಲಿ ಸರಕಾರ ಮತ್ತು ನಾವೆಲ್ಲರೂ ಸನ್ನದ್ಧರಾಗಬೇಕಿದೆ.