ಕಲ್ಬುರ್ಗಿಯವರಿಗೆ ಬಿದ್ದ ಗುಂಡು ಮತ್ತು ನಮ್ಮವರ ಜಾಣ ಮೌನ

                                                                                                        – ಸದಾನಂದ ಲಕ್ಷ್ಮೀಪುರ

ಎಂ.ಎಂ. ಕಲ್ಬುರ್ಗಿಯವರ ಹಣೆಗೆ ಗುಂಡು ಬಿದ್ದ ನಂತರ ಚಿಮ್ಮಿದ ರಕ್ತ ತಣ್ಣಗಾಗುವ ಮೊದಲೇ, ಅವರ ಸಾವು ರಾಜ್ಯದ ಜನತೆಯ ಪ್ರಜ್ಞೆಯಲ್ಲಿ ತಣ್ಣಗಾಗಿದೆ. ಡಿ.ಕೆ. ರವಿ ಎಂಬ ಅಧಿಕಾರಿ ಮೃತ ದೇಹ ಪತ್ತೆಯಾದಾಗ ಬೀದಿಗಿಳಿದು, ರಸ್ತೆ ತಡೆ ಮಾಡಿ, ಪ್ರತಿಕೃತಿ ದಹಿಸಿ ಕೂಗಾಡುತ್ತಿದ್ದ ಜನ ಈಗ ಬೆಚ್ಚಗೆ ಮಲಗಿದ್ದಾರೆ. ಆಗ ರವಿಯ ಸಾವು Kalburgiಆತ್ಮಹತ್ಯೆಯಲ್ಲ, ಕೊಲೆ ಎಂದು ಅನುಮಾನ ಪಟ್ಟು, ಅಲ್ಲ ತೀರ್ಮಾನಿಸಿ, ಸರಕಾರವನ್ನು ಆರೋಪಿ ಸ್ಥಾನದಲ್ಲಿರಿಸಿ ಹೋರಾಟಕ್ಕೆ ಬಂದವರಿಗೆ ಈಗ ಪಾಯಿಂಟ್ ಬ್ಲಾಂಕ್ ರೇಂಜ್ ನಲ್ಲಿ ಗುಂಡಿಗೆ ಬಲಿಯಾದ ಕಲ್ಬುರ್ಗಿಯವರ ಸಾವು ಭೀಕರವಾಗಿ ಕಾಣುತ್ತಿಲ್ಲ. ಬೆಳಗ್ಗೆ, ಸಂಜೆ ರವಿಯ ಸಾವಿನ ಬಗ್ಗೆ ಹತ್ತಾರು ಪುಕಾರು ಹಬ್ಬಿಸಿ ಪ್ರಕರಣಕ್ಕೆ ಬಣ್ಣ ಕಟ್ಟಿ ‘ನ್ಯಾಯ’ ಕೇಳುತ್ತಿದ್ದವರಿಗೆ ಈಗ ನ್ಯಾಯ ಬೇಕಿಲ್ಲ!

ನಾಡಿನ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿದ, ತನ್ನ ಜೀವಿತಾವಧಿಯ ಬಹುಭಾಗವನ್ನು ಈ ನೆಲದಲ್ಲಿ ಬಂದು ಹೋದ ಕವಿ, ದಾರ್ಶನಿಕರ ಜೀವನಗಾಥೆಯನ್ನು ಸಂಶೋಧನೆಯ ಮೂಲಕ ಕಟ್ಟಲು ಮೀಸಲಿಟ್ಟ ಕಲ್ಬುರ್ಗಿಯವರ ಸಾವು ಈಗಾಗಲೇ ಮಾಧ್ಯಮಗಳಿಂದ ಮರೆಯಾಗುತ್ತಿದೆ. ಡಿ.ಕೆ.ರವಿ ಪ್ರಕರಣದಲ್ಲಿ ತನಿಖೆಯನ್ನು ತಾನೇ ವಹಿಸಿಕೊಂಡವರಂತೆ ಅಬ್ಬರಿಸುತ್ತಿದ್ದ ಅರ್ನಾಬ್ ಗೋಸ್ವಾಮಿ ಶೀನಾ ಬೋರಾ ಪ್ರಕರಣದ ‘ತನಿಖೆಯಲ್ಲಿ’ ಫುಲ್ ಬ್ಯುಸಿ. ಕೆಲ ಪ್ರಗತಿಪರ ಸಂಘಟನೆಗಳು ರಸ್ತೆಗೆ ಬಂದು ಘಟನೆಯನ್ನು ಖಂಡಿಸಿ, ಸೂಕ್ತ ತನಿಖೆಗೆ ಒತ್ತಾಯಿಸಿದ್ದು ಬಿಟ್ಟರೆ ಯಾರೂ ಬೀದಿಗಿಳಿಯಲಿಲ್ಲ. (ಟೌನ್ ಹಾಲ್ ಮುಂದೆ ಪ್ರತಿಭಟನೆ ಮಾಡಿದ ಪ್ರಗತಿಪರರು ಕೆಲವು ಕುಹುಕಿಗಳ ಪಾಲಿಗೆ ಕೆಲಸವಿಲ್ಲದವರು.) ಅಧಿಕಾರಿಯ ಪ್ರಕರಣದಲ್ಲಿ ಸರಕಾರವನ್ನು ಮುಜುಗರಕ್ಕೆ ಈಡುಮಾಡಲು ಹೋರಾಡಿದ ಬಿಜೆಪಿ, ಜೆಡಿಎಸ್ ಹಾಗೂ ಎಎಪಿ ಪಕ್ಷಗಳು ಈಗ ಬೀದಿಗಿಳಿಯಲಿಲ್ಲ. ಐಎಎಸ್ ಅಧಿಕಾರಿಯ ಪ್ರಕರಣದಲ್ಲಿ ಒಂದು ಜಾತಿ ಸಂಘಟನೆ ಬೀದಿಗಿಳಿಯಿತು. ಆದರೆ ಇಲ್ಲಿ ಅದೂ ಸಾಧ್ಯವಿರಲಿಲ್ಲ, ಏಕೆಂದರೆ ಕಲ್ಬುರ್ಗಿಯವರ ಸಂಶೋಧನೆ ಅವರ ಜಾತಿಯ ಬಹುತೇಕರಿಗೆ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ.

ಇನ್ನು ಕೆಲವು ಪ್ರಜ್ಞಾವಂತರಂತೂ.. “ಇದರ ಹಿಂದೆ ಅವರದೇನೋ ವೈಯಕ್ತಿಕ ಕಾರಣ ಇರಬೇಕು” ಎಂದು ಮೌನಕ್ಕೆ ಶರಣಾದರು. ವೈಯಕ್ತಿಕ ಕಾರಣಗಳಿಗೆ, ಹೀಗೆ ಗುಂಡು ಹೊಡೆದು ಸಾಯಿಸುವುದು ಈ ದೇಶದಲ್ಲಿ ಸಮ್ಮತವೇ? ಒಂದು ಖಂಡನೆಗೂ ಅರ್ಹವಾಗುಷ್ಟು ಭೀಕರವಾಗಿರಲಿಲ್ಲವೇ ಈ ಸಾವು? ಈ ಘಟನೆ ರಾಜ್ಯದ ಪೊಲೀಸ್ ವ್ಯವಸ್ಥೆಗೆ, ರಾಜ್ಯದ ನೇತಾರರಿಗೆ ಆದ ಅವಮಾನ ಅಲ್ಲವೆ? ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಯ ರಾಜೀನಾಮೆ ಕೇಳುವುದು ಸೂಕ್ತ ಎನಿಸುತ್ತಿಲ್ಲವೆ?

ಶ್ರದ್ಧಾಂಜಲಿ ಸಲ್ಲಿಸಲು ಧಾರವಾಡಕ್ಕೆ ಧಾKalburgi-2ವಿಸಿದ ಮುಖ್ಯಮಂತ್ರಿ ಮಾಧ್ಯಮದವರ ಎದುರು ಮಾತನಾಡುತ್ತ, “ಕಲ್ಬುರ್ಗಿಯವರ ಸಾವು ರಾಜ್ಯಕ್ಕೆ ತುಂಬಲಾರದ ನಷ್ಟ. ರಾಜ್ಯಕ್ಕೆ ಅವರ ಕೊಡುಗೆ ಅಪಾರ. ಅವರು ಉತ್ತಮ ಸಂಶೋಧಕರು, ಲೇಖಕರು…” ಎಂದು ತಮ್ಮ ಸಂದೇಶ ಆರಂಭಿಸುತ್ತಾರೆ. ಕೊನೆಯಲ್ಲಿ, ಇವರ ಸಾವಿಗೆ ಕಾರಣರಾದವರನ್ನು ಸರಕಾರ ಖಂಡಿತ ಹಿಡಿಯುತ್ತದೆ. ಪ್ರಕರಣವನ್ನು ಸಿಬಿಐಗೆ ವಹಿಸುತ್ತೇವೆ ಎಂದು ಹೇಳುತ್ತಾರೆ. ನಿಜ ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಬಾರದು. ಆದರೆ ಜನರ ಭಾವನೆಗಳಿಗೂ ಸ್ಪಂದಿಸುವುದಿಲ್ಲ ಎಂದರೆ ಏನರ್ಥ..?

ಅದು ಟಿಪಿಕಲ್ ರಾಜಕಾರಣಿಯ ಮಾತು ಬಿಡಿ. ಕೆಲ ಸೋಕಾಲ್ಡ್ ಪ್ರಗತಿಪರ ಲೇಖಕರು ಇದಕ್ಕಿಂತ ಭಿನ್ನವಾಗೇನೂ ಇಲ್ಲ. ವಯೋ ಸಹಜ ಕಾರಣಗಳಿಂದ ಸಾವನ್ನಪ್ಪಿದರೆ ವ್ಯಕ್ತಪಡಿಸಬಹುದಾದ ಮಾತು-ವಿವರಗಳಿಂದಲೇ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಘಟನೆ ಸೃಷ್ಟಿಸಿರುವ ಆತಂಕ, ಆಘಾತ ಅವರ ಬರಹಗಳಲ್ಲಿ ಕಾಣುತ್ತಿಲ್ಲ. ಅವರು ದೊಡ್ಡ ವಿದ್ವಾಂಸರು, ಸಂಶೋಧಕರು, ತಮಗಿಂತ ಕಿರಿಯರನ್ನು ಪ್ರೋತ್ಸಾಹಿಸಿದರು. ಕಿರಿಯರು ಟೀಕೆ ಮಾಡಿದರೆ ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಿದ್ದರು ಹಾಗೂ ಎದುರಿಗೆ ಸಿಕ್ಕಾಗ ಸಹಜವಾಗಿಯೇ ಮಾತನಾಡಿಸುತ್ತಿದ್ದರು ಎಂದೆಲ್ಲಾ ಬರೆದರು. ಅವರ ಸಾವಿನ ಬಗ್ಗೆ ಬರೆಯುವಾಗ, ಅದನ್ನು ತನಿಖಾಧಿಕಾರಿಗಳು ನೋಡಿಕೊಳ್ಳುತ್ತಾರೆ ಬಿಡಿ ಎನ್ನುವ ಧಾಟಿ ಅವರ ಮಾತಿನಲ್ಲಿತ್ತು. ಸಂವೇದನೆಗೆ ಗರ ಬಡಿದಿದೆಯೆ? ಎನ್ ಡಿಟಿವಿ ಯ ಶ್ರೀನಿವಾಸ್ ಜೈನ್ ಮಾತ್ರ ಧಾರವಾಡಕ್ಕೆಬಂದು ಹತ್ಯೆಯ ಹಿಂದೆ ಇರಬಹುದಾದ ಉದ್ದೇಶಗಳ ಬಗ್ಗೆ ಸುದ್ದಿ ಮಾಡಿದರು. ಆ ಕಾರಣಕ್ಕೆ ಈ ಸುದ್ದಿ ಅಲ್ಪ-ಸ್ವಲ್ಪ ಗಮನ ರಾಷ್ಟ್ರಮಟ್ಟದಲ್ಲಿ ಸೆಳೆಯಲು ಸಾಧ್ಯವಾಯಿತು. ಡಿ.ಕೆ.ರವಿ ಸಾವಿನ ನಂತರದ ಒಂದು ವಾರಗಳ ಕಾಲ ನಡೆದ ಪ್ರತಿಭಟನೆ, ರಾಷ್ರ್ರೀಯ ಸುದ್ದಿ ವಾಹಿನಿಗಳ ವರ್ತನೆಯನ್ನು ನೆನಪಿಸಿimageಕೊಂಡರೆ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತದೆ.

ಮತೀಯ ಶಕ್ತಿಗಳು ಈ ಘಟನೆಯ ಹಿಂದೆ ಇದೆ ಎಂದು ಯಾರೇ ಮಾತನಾಡಿದರು, ಅನೇಕ ಮಂದಿ “ನಿಮಗೆ ಹೇಗೆ ಗೊತ್ತು? ಪೊಲೀಸರು ತನಿಖೆ ನಡೆಸುವ ತನಕ ಸುಮ್ಮನಿರಿ” ಎಂದು ಉಪದೇಶ ನೀಡುತ್ತಾರೆ. ಹೌದು ಸ್ವಾಮಿ, ನರೇಂದ್ರ ದಾಭೋಲ್ಕರ್ ಹಾಗೂ ಗೋವಿಂದ್ ಪನ್ಸಾರೆಯವರನ್ನು ಕೊಂದವರನ್ನು ಈಗಾಗಲೇ ಪೊಲೀಸರು ಬಂಧಿಸಿ ತನಿಖೆ ಮುಗಿಸಿದ್ದರೆ, ಸುಮ್ಮನಿದ್ದು ಬಿಡಬಹುದಿತ್ತು. ಆದರೆ, ಹಾಗೆ ಆಗಲಿಲ್ಲವಲ್ಲ. ವಿಚಿತ್ರ ಎಂದರೆ, ಹತ್ಯೆಯ ತನಿಖೆ ಮಾಡಲಾಗದ ದುರ್ಬಲ ಸರಕಾರ ಪ್ರಕರಣವನ್ನು ಸಿಬಿಐಗೆ ವಹಿಸುತ್ತಂತೆ. ಹಾಗಾದರೆ, ಸರಕಾರ ತನ್ನ ಪೊಲೀಸರನ್ನು ಅವಮಾನಿಸುತ್ತಿಲ್ಲವೆ? ಯಾರೂ ಕೇಳದೇ ಇರುವಾಗ ಸಿಬಿಐಗೆ ವಹಿಸುವಂತಹ ಅವಸರ ಏಕೆ..? ಸಿಬಿಐಗೆ ಇದುವರೆಗೆ ವಹಿಸಿದ ಪ್ರಕರಣಗಳ ಪ್ರಗತಿ ಏನಾಗಿದೆ? ಸೌಜನ್ಯ ಪ್ರಕರಣದ ಆರೋಪಿಗಳನ್ನು ಹಿಡಿದರೆ? ಡಿ.ಕೆ.ರವಿ ಪ್ರಕರಣ ಭೇದಿಸಿದರೆ? ವಿಶೇಷ ಎಂದರೆ, ಸಿಬಿಐ ಗೆ ವಹಿಸಿದ ನಂತರ ಸೌಜನ್ಯ ಹಾಗೂ ಡಿ.ಕೆ.ರವಿ ಪ್ರಕರಣಗಳು ಮರೆಯಾದವು. ಕಲ್ಬುರ್ಗಿ ಪ್ರಕರಣಕ್ಕೂ ಅಂತಹದೇ ಪರಿಸ್ಥಿತಿಗೆ ಬರುತ್ತದೆ.

One thought on “ಕಲ್ಬುರ್ಗಿಯವರಿಗೆ ಬಿದ್ದ ಗುಂಡು ಮತ್ತು ನಮ್ಮವರ ಜಾಣ ಮೌನ

  1. Ananda Prasad

    ಪ್ರಗತಿಪರ ಚಿಂತಕರನ್ನು ಸಮಾಜವು ಸಹಿಸುವುದಿಲ್ಲ ಹಾಗೂ ನಿರಂತರ ಕಿರುಕುಳ ಕೊಡುತ್ತದೆ. ನಮ್ಮ ಸಮಾಜದ ಬಹುತೇಕ ಜನ ಸುಳ್ಳಿನ ನಂಬಿಕೆಯ ಮೇಲೆ ತಮ್ಮ ಜೀವನವನ್ನು ಸಾಗಿಸುತ್ತಿರುವಾಗ ಸತ್ಯದ ಪರ ನಿಲ್ಲುವವರು ಸಣ್ಣ ಸಂಖ್ಯೆಯ ಜನ ಮಾತ್ರ. ದೇವರು ಎಂಬ ಕಲ್ಪನೆಯು ಬಹುದೊಡ್ಡ ಸುಳ್ಳು, ಆದರೆ ಜನ ಅದರ ನಂಬಿಕೆಯ ಮೇಲೆಯೇ ತಮ್ಮ ಜೀವನ ಸಾಗಿಸುವಷ್ಟು ಪರಾವಲಂಬಿ ಮಾನಸಿಕತೆ ಬೆಳೆಸಿಕೊಂಡಿರುತ್ತಾರೆ. ಹೀಗಾಗಿ ದೇವರು, ಧರ್ಮಗಳ ಬಗ್ಗೆ ಸತ್ಯ ಸಂಗತಿಯನ್ನು ಎದುರಿಸುವ ಹಾಗೂ ಸಮಾಜವನ್ನು ಸುಧಾರಣೆಯ ಕಡೆಗೆ ಕೊಂಡೊಯ್ಯುವ ಪ್ರಯತ್ನ ಮಾಡುವವರಿಗೆ ಜನ ಬೆಂಬಲ ನೀಡುವುದಿಲ್ಲ. ಹೀಗಾಗಿಯೇ ಕಲಬುರ್ಗಿಯವರ ಕಗ್ಗೊಲೆ ನಮ್ಮ ಸಮಾಜದ ಬಹುತೇಕ ಜನರ ಹೃದಯ ಕಲಕಿಲ್ಲ. ಮಹಾರಾಷ್ಟ್ರದ ದಾಬೋಲ್ಕರ್, ಪನ್ಸಾರೆಯವರ ಹತ್ಯೆಯಲ್ಲಿ ಕೊಲೆಗಡುಕರನ್ನು ಪತ್ತೆ ಹಚ್ಚಿ ಬಂಧಿಸಲು ಅಸಾಧ್ಯವಾದಂತೆ ಕಲಬುರ್ಗಿಯವರ ಕೊಲೆಯೂ ಮುಚ್ಚಿಹೋಗುವ ಸಾಧ್ಯತೆ ಕಂಡುಬರುತ್ತಿದೆ. ಕರ್ನಾಟಕದಲ್ಲಿಯೇ ವರ್ಷದ ಹಿಂದೆ ಪ್ರಗತಿಪರ ಚಿಂತಕ ಲಿಂಗಣ್ಣ ಸತ್ಯಂಪೇಟೆಯವರನ್ನು ಕೊಂದ ದುಷ್ಕರ್ಮಿಗಳನ್ನು ಇನ್ನೂ ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ ಅಥವಾ ಅವರನ್ನು ಪತ್ತೆ ಹಚ್ಚದಂತೆ ಕಾಣದ ಪಟ್ಟಭದ್ರ ಧಾರ್ಮಿಕ ಶಕ್ತಿಗಳು ಪೋಲೀಸರ ಕೈ ಕಟ್ಟಿರಲೂ ಬಹುದು. ಪಟ್ಟಭದ್ರ ಧಾರ್ಮಿಕ ಶಕ್ತಿಗಳು ಬಾಡಿಗೆ ಹಂತಕರನ್ನು ನೇಮಿಸಿ ಇಂಥ ಕಗ್ಗೊಲೆಗಳನ್ನು ನಡೆಸುವ ಕಾರಣ ಇಂಥವರನ್ನು ಪತ್ತೆ ಹಚ್ಚುವುದು ಕೂಡಾ ಬಹುತೇಕ ಅಸಾಧ್ಯ ಏಕೆಂದರೆ ಇವರು ಯಾವುದೇ ಸುಳಿವು ಸಿಗದಂತೆ ಎಚ್ಚರ ವಹಿಸಿ ಕೊಲೆ ನಡೆಸಿ ಪರಾರಿಯಾಗುತ್ತಾರೆ. ಬಹುಶಃ ಇಂಥ ಸಂದರ್ಭಗಳಲ್ಲಿ ಸ್ಥಳೀಯ ಬಾಡಿಗೆ ಹಂತಕರನ್ನು ಬಳಸದೆ ದೂರದ ಬೇರೆ ರಾಜ್ಯಗಳ ಬಾಡಿಗೆ ಹಂತಕರನ್ನು ಧಾರ್ಮಿಕ ಪಟ್ಟಭದ್ರ ಶಕ್ತಿಗಳು ಬಾಡಿಗೆಗೆ ಪಡೆಯುತ್ತವೆ. ಹೀಗಾಗಿ ಇವರನ್ನು ಪತ್ತೆ ಹಚ್ಚುವುದು ಪೊಲೀಸರಿಗೂ ಭಾರೀ ಸವಾಲಿನ ಕೆಲಸ ಆಗುತ್ತದೆ ಎಂದು ಕಾಣುತ್ತದೆ. ಮಹಾರಾಷ್ಟ್ರದಲ್ಲಿ ದಾಬೋಲ್ಕರ್ ಅವರ ಹತ್ಯೆ ಆರೋಪಿಗಳನ್ನು ಬಂಧಿಸುವಂತೆ ಭಾರೀ ಪ್ರತಿಭಟನೆಗಳು ನಡೆದರೂ ಇಂದಿನವರೆಗೂ ಕೊಲೆಯ ರೂವಾರಿಗಳನ್ನು ಪತ್ತೆ ಹಚ್ಚಿ ಬಂಧಿಸಲು ಸಾಧ್ಯವಾಗಿಲ್ಲ.

    ಭಾರತದಲ್ಲಿ ತಾಲಿಬಾನಿಕರಣ ಹೆಚ್ಚುತ್ತಿರುವುದರ ಪ್ರತೀಕವಾಗಿ ಇತ್ತೀಚೆಗಿನ ವರ್ಷಗಳಲ್ಲಿ ಪ್ರಗತಿಶೀಲ ಚಿಂತಕರು, ಲೇಖಕರು, ಬುದ್ಧಿಜೀವಿಗಳ ಮೇಲೆ ಧಾಳಿಯ ಬೆದರಿಕೆ ಹೆಚ್ಚುತ್ತಿದೆ. ಇಂಥ ಕೃತ್ಯಗಳನ್ನು ಕೆಲವು ಸಂಘಟನೆಗಳು ಸಮರ್ಥಿಸುತ್ತಿರುವ ಕಾರಣ ಇವುಗಳು ದೇಶದಾದ್ಯಂತ ಹೆಚ್ಚುತ್ತಿವೆ. ಪ್ರತಿಗಾಮಿಗಳ ಪರ ಇರುವ ಶಕ್ತಿಗಳು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವುದು ಕೂಡ ಇಂಥ ಕೃತ್ಯಗಳು ಹೆಚ್ಚುವಂತೆ ಮಾಡಿವೆ. ತಾಲಿಬಾನಿಗಳಾದರೆ ಇಂಥ ಕೊಲೆ ತಾವೇ ಮಾಡಿದ್ದು, ಇಂಥ ಕಾರಣಕ್ಕೆ ಮಾಡಿದ್ದು ಎಂದು ಹೊಣೆ ಹೊರುತ್ತವೆ ಆದರೆ ಭಾರತದ ಪ್ರತಿಗಾಮಿಗಳು ತಾವು ಈ ಕೃತ್ಯ ಮಾಡಿದ್ದೇವೆ ಎಂದು ಹೊಣೆ ಹೊರದೆ ಹೇಡಿಗಳಂತೆ ತೆರೆಯ ಮರೆಯಲ್ಲಿ ಇರುವ ಕಾರಣ ಇವರನ್ನು ಪತ್ತೆ ಹಚ್ಚುವುದು ಬಹುತೇಕ ಸಂದರ್ಭಗಳಲ್ಲಿ ಅಸಾಧ್ಯವಾಗಿರುತ್ತದೆ.

    ಬುದ್ಧಿಜೀವಿಗಳ ಚಿಂತನೆಗಳು ಸಮಾಜದಲ್ಲಿ ಸುಧಾರಣೆಗೆ ಕಾರಣವಾಗುವ ಕಾರಣ ಜನರನ್ನು ಧರ್ಮದ ಹೆಸರಿನಲ್ಲಿ ಶೋಷಿಸಿ ತಮ್ಮಐಶಾರಮಿ ಜೀವನ ಕಟ್ಟಿಕೊಳ್ಳುವ ಪಟ್ಟಭದ್ರ ಧಾರ್ಮಿಕ ಹಿತಾಸಕ್ತಿಗಳಿಗೆ ಬುದ್ಧಿಜೀವಿಗಳ ಮೇಲೆ ಬಹಳ ಹಿಂದಿನಿಂದಲೂ ದ್ವೇಷ (ಮಾನವನ ಇತಿಹಾಸದಷ್ಟೇ ಪುರಾತನ ಕಾಲದಿಂದ) ಹಾಗೂ ಸಿಟ್ಟು ಇದೆ. ಹೀಗಾಗಿಯೇ ಬುದ್ಧಿಜೀವಿಗಳನ್ನು ಬೈಯ್ಯುವುದು, ಹಂಗಿಸುವುದು, ಕಿರುಕುಳ ಕೊಡುವುದು ಬಹಳ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. ಕೆಲವು ಪ್ರತಿಗಾಮಿಗಳಿಗೆ ಬುದ್ಧಿಜೀವಿಗಳನ್ನು ಹಂಗಿಸದೆ ನಿದ್ದೆ ಬರುವುದಿಲ್ಲವೆಂದು ಕಾಣುತ್ತದೆ. ಇಂದಿನ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ, ಇಂದು ನಾವು ಅನುಭವಿಸುತ್ತಿರುವ ವೈಜ್ಞಾನಿಕ ಮುನ್ನಡೆಗೆ, ಸುಧಾರಿತ ಜೀವನಕ್ಕೆ ಬುದ್ಧಿಜೀವಿಗಳ ಚಿಂತನೆ ಕಾರಣ ಎಂಬುದನ್ನು ಈ ಪ್ರತಿಗಾಮಿಗಳು ಮರೆಯುತ್ತಾರೆ.

    Reply

Leave a Reply

Your email address will not be published. Required fields are marked *