Daily Archives: September 14, 2015

ಜೀವೋ ಜೀವಸ್ಯ ಜೀವನಂ – ಮಾಂಸಾಹಾರದ ಮೀಮಾಂಸೆ


– ಶ್ರೀಧರ್ ಪ್ರಭು


 

ಸಸ್ಯವನ್ನು ಕೊಲ್ಲುವುದೂ ಮಹಾಪಾಪ

ಬರೋಬ್ಬರಿ ಒಂದು ಶತಮಾನದ ಹಿಂದಿನ ಘಟನೆ. ೧೯೧೫ ರಲ್ಲಿ ಬ್ರಿಟಿಷ್ ಇಂಡಿಯಾದ ಭಾಗವಾಗಿದ್ದ (ಇಂದು ಬಾಂಗ್ಲಾದೇಶದಲ್ಲಿರುವ) ಬಿಕ್ರಮಪುರದಲ್ಲೆಲ್ಲ ಬಹು ದೊಡ್ಡ ಸಂಭ್ರಮ ಆವರಿಸಿತ್ತು. ಬಿಕ್ರಮಪುರದಲ್ಲಿ ಹುಟ್ಟಿದ ಒಬ್ಬ ಹುಡುಗ ವಿಶ್ವಮಾನ್ಯ ವಿಜ್ಞಾನಿಯಾಗಿ ಬೆಳೆದು ಈ ಊರಿನ ಒಂದು ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ. ಈ ವಿಜ್ಞಾನಿ ಬಿಕ್ರಮಪುರದ ಜನತೆಯನ್ನು ಉದ್ದೇಶಿಸಿ ಹೇಳಿದ ಮಾತುಗಳಿವು:

“ನನ್ನ ಬಾಲ್ಯದಲ್ಲಿ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳುಹಿಸುವುದೇ ಒಂದು ಪ್ರತಿಷ್ಠೆಯ ಪ್ರತೀಕವಾಗಿತ್ತು. ಅಲ್ಲಿ ರಾಜ ಮಹಾರಾಜರ ಇಲ್ಲವೇ ಪ್ರತಿಷ್ಟಿತ ಮನೆತನದ ಮಕ್ಕಳು ಮಾತ್ರ ಓದಲು ಸಾಧ್ಯವಿತ್ತು. ನನ್ನ ತಂದೆಗೆ ಇಂಗ್ಲಿಷ್ ಶಾಲೆಗೆ ಹಾಕಲು ಸಾಧ್ಯವಿತ್ತಾದರೂ ನನ್ನನ್ನು ಸಾಮಾನ್ಯ ಜನರ ಮಕ್ಕಳು ಓದುತ್ತಿದ್ದ ಮಾತೃಭಾಷೆಯ ಶಾಲೆಗೇ ಕಳುಹಿಸಿದರು. ಅಲ್ಲಿ ನನ್ನ ಎಡಗಡೆ ಒಬ್ಬ ಮುಸಲ್ಮಾನ ಜವಾನನ ಮಗ ಕುಳಿತುಕೊಳ್ಳುತ್ತಿದ್ದರೆ ಬಲಗಡೆ ಒಬ್ಬ ಮೀನುಗಾರನ ಮಗ ಕುಳಿತುಕೊಳ್ಳುತ್ತಿದ್ದ. ಈ ನೆಲದ ಗುಣವನ್ನು ಹೀರಿ ಬೆಳೆದ ಮಕ್ಕಳೊಂದಿಗೆ ನಾನು ಬೆರೆತು ಅವರು ಹೇಳುತ್ತಿದ್ದ ಪಶು, ಪಕ್ಷಿಗಳ, ಮೀನು-ಏಡಿಗಳ ಕಥೆಗಳನ್ನು ನಾನು ಇನ್ನಿಲ್ಲದ ಕುತೂಹಲದಿಂದ ಆಲಿಸುತ್ತಿದ್ದೆ. ಹೀಗಾಗಿಯೇ ನನ್ನಲ್ಲಿ ಪ್ರಕೃತಿಯ ಕುರಿತು ಅತೀವ ಆಸಕ್ತಿ ಬೆಳೆಯಿತು. ನನ್ನ ತಾಯಿ ಒಬ್ಬ ಸಂಪ್ರದಾಯಸ್ಥ ಹಿನ್ನೆಲೆಯಿಂದ ಬಂದವರಾಗಿದ್ದರೂ, ಶಾಲೆಯಿಂದ ಆಟವಾಡಿ ನನ್ನೊಂದಿಗೆ ಬಂದ ನನ್ನೆಲ್ಲ ಸ್ನೇಹಿತರಿಗೆ ತುಂಬು ಪ್ರೀತಿಯಿಂದ ಕೈತುತ್ತು ನೀಡುತ್ತಿದ್ದರು. ಅಸ್ಪೃಶ್ಯತೆ ಎಂಬುದು ಅವರಿಗೆ ಇರಲೇ ಇಲ್ಲ. ಇನ್ನೊಂದು ಜೀವವನ್ನು ಅಥವಾ ವ್ಯಕ್ತಿಯನ್ನು “ಕೀಳು” ಅಥವಾ ಅಸ್ಪೃಶ್ಯ ಎಂದು ಪರಿಗಣಿಸುವುದು ನನ್ನ ಕಲ್ಪನೆಗೆ ಕೂಡ ಎಟುಕುತ್ತಿರಲಿಲ್ಲ.”

ಈ ಮಹಾನ್ ವ್ಯಕ್ತಿ ಇನ್ಯಾರೂ ಅಲ್ಲ “ಸಸ್ಯಗಳಿಗೆ ಜೀವವಿದೆ” ಎಂದು Jagadish_Chandra_Boseತೋರಿಸಿಕೊಟ್ಟ ಮಹಾನ್ ವಿಜ್ಞಾನಿ ಸರ್ ಜಗದೀಶ್ ಚಂದ್ರ ಬೋಸ್.

ಸಸ್ಯಗಳಿಗೆ ಜೀವವಿದೆ ಎಂಬ ಕಾಣ್ಕೆ ಅನೇಕ ಮಹಾನ್ ವೈಜ್ಞಾನಿಕ ಸಂಶೋಧನೆಗಳಿಗೆ ದಾರಿಯಾಯಿತು. ಹಾಗೆಯೇ ಈ ಸಂಶೋಧನೆ ಸಾಮಾಜಿಕ ಪರಿಸರದ ಮೇಲೂ ಅಗಾಧ ಪರಿಣಾಮ ಬೀರಿದೆ. ಸಸ್ಯ ಜನ್ಯ ಆಹಾರದಿಂದ ಯಾವುದೇ ಹಿಂಸೆಯಾಗದು ಎಂಬ ಸಾವಿರಾರು ವರ್ಷಗಳ ಗೊಡ್ಡು ವಾದಕ್ಕೆ ಈ ಸಂಶೋಧನೆ ಕೊಡಲಿ ಪೆಟ್ಟು ಕೊಟ್ಟಿತು. ಹಿಂಸೆಯಾಗುತ್ತದೆ ಎಂಬ ಕಾರಣದಿಂದ ಒಂದು ಪ್ರಾಣಿಯನ್ನು ಕೊಲ್ಲಬಾರದಾದರೆ, ಒಂದು ಸಸ್ಯವನ್ನು ಏಕೆ ನೋಯಿಸಬೇಕು – ಎಂಬುದಕ್ಕೆ ಯಾರಲ್ಲೂ ಉತ್ತರ ಹುಟ್ಟಲಿಲ್ಲ, ಈ ಸಂಶೋಧನೆಯ ನಂತರ.

ತಮ್ಮದೇ ವೈಜ್ಞಾನಿಕ ಸಂಶೋಧನೆಗೆ ಪುರಸ್ಕಾರ ಸ್ವೀಕರಿಸಲು ತಮ್ಮದೇ ಪ್ರತ್ಯೇಕ ರೈಲು ಚೊಂಬಿನ ನೀರು ಮಾತ್ರ ಕುಡಿದು ಬರುವ ವಿಜ್ಞಾನಿಗಳು ಇಂದಿಗೂ ಇದ್ದಾರಾದರೂ ಆ ಕಾಲದಲ್ಲಿ ಅವರೇ ತುಂಬಿದ್ದರು. ಅಂಥವರ ಕಾಲದಲ್ಲಿ ಅಂತ ವಿಷಮತೆಯ ಮಧ್ಯೆ ಒಬ್ಬ ನೈಜ ವೈಜ್ಞಾನಿಕನಾಗಿ ಬದುಕಿದ ಮಹಾನುಭಾವ ಬೋಸ್.

ನಮ್ಮ ಸಮಾಜದಲ್ಲಿ ಪ್ರಾಣಿಜನ್ಯ ಆಹಾರಕ್ಕೆ ಒಂದು ಬಗೆಯ ವಿಚಿತ್ರವಾದ “ದೋಷ” ಅಂಟಿಕೊಂಡಿದೆ. ಪ್ರಾಣಿಜನ್ಯ ಆಹಾರವನ್ನು ತುಚ್ಚೀಕರಣ ಮಾಡುವ ಪರಿಪಾಠ ಬೆಳೆದು ಬಂದು ಪ್ರಾಣಿಜನ್ಯ ಆಹಾರದಿಂದ ತಮೋ ಗುಣ ಬರುತ್ತದೆ ಇತ್ಯಾದಿ ರೂಪದ, ರೂಪಾಂತರದ ವಾದಗಳು ಇಂದಿಗೂ ಪ್ರಚಲಿತವಿವೆ.

ಶ್ರದ್ಧೆಯಿಂದ ಶ್ರೀ ಕೃಷ್ಣನ ದರ್ಶನ ಮಾಡಲು ಎಲ್ಲ ಜಾತಿಗಳ ಭಕ್ತಾದಿಗಳು ವಿಶ್ವದ ಎಲ್ಲೆಡೆಯಿಂದ ಸಂಪಾದಿಸಿ ಭಕ್ತಿಯಿಂದ ಹರಿಸಿದ ಹಣವನ್ನು ಪಡೆಯಲು ಎಂದಿಗೂ ಸಂಕೋಚ ಪಡದ (ಕೇವಲ ಅನ್ನದಲ್ಲಿ ಮಾತ್ರ ಪಂಕ್ತಿ ಭೇದ ಮಾಡುವ) ವಿಶ್ವ ಹಿಂದೂಗಳೆಲ್ಲರ ನೇತಾರರಾದ ಪೇಜಾವರ ಶ್ರೀಗಳು ಮೇ ೨೦೧೨ ರಲ್ಲಿ ಮಾಂಸಾಹಾರ ಸೇವಿಸುವ ಜನರೊಂದಿಗೆ ಸಹಭೋಜನ ಮಾಡಿದರೆ ತಾಮಸೀ ಗುಣಗಳು ಬರುತ್ತವೆಂದು ಅಪ್ಪಣೆ ಕೊಡಿಸಿದ್ದರು. ದಲಿತ ಕೇರಿಗಳಿಗೆ ಹೋಗಿ ಬಂದ ಮೇಲೆ ಪ್ರಾಣಿಜನ್ಯವಾದ ಪಂಚಗವ್ಯ ಪ್ರೋಕ್ಷಣೆ ಎಷ್ಟು ’ಶಾಸ್ತ್ರ ಸಮ್ಮತ’ ವೆಂದೂ ಅವರೇ ಹೇಳಬೇಕು. ಆ ವಿಷಯ ಹಾಗಿರಲಿ.

ವೈದಿಕಶಾಹಿಗಳ ಅನ್ನಕೋಶ ಮತ್ತು ಭಾವಕೋಶಗಳಲ್ಲಿ ಇನ್ನಿಲ್ಲದಂತೆ ಬೇರುಬಿಟ್ಟು ಕೊಂಡಿದ್ದ ಆದರೆ ಅಂದೊಮ್ಮೆ ಇಂದೊಮ್ಮೆ ಮೇಲಕ್ಕೆ ಬರುತ್ತಿದ್ದ ಈ ರೀತಿಯ ಧರ್ಮ ಸೂಕ್ಷ್ಮಗಳು ಇಂದು ರಾಜಕೀಯವನ್ನು ಢಾಳಾಗಿ ಪ್ರವೇಶಿಸಿ ಜನರ ಜೀವನ ಕೋಶವನ್ನೇ ಮುಕ್ಕಿ ಬಿಟ್ಟಿವೆ. ಧರ್ಮದ ದೃಷ್ಟಿಯಿಂದ ಯಾವುದು ಅಸಮ್ಮತವಾದದ್ದೋ ಅದು ಕಾನೂನಿನ ದೃಷ್ಟಿಯಲ್ಲಿಯೂ ಅಪರಾಧ ಎನ್ನುವ ಪರಸರದಲ್ಲಿ ನಾವಿದ್ದೇವೆ.

‘ಜೀವೋ ಜೀವಸ್ಯ ಜೀವನಂ’

ಒಂದು ಜೀವವೇ ಇನ್ನೊಂದು ಜೀವಕ್ಕೆ ಜೀವನ. ಸಂಸ್ಕೃತದ ಈ ಮಾತು ಬಹು ಅರ್ಥಗರ್ಭಿತ. ಜೀವವಿಲ್ಲದ spinach-fieldಅಥವಾ ಜೀವಜನ್ಯವಾದದ್ದೇ ಇನ್ನೊಂದು ಜೀವಕ್ಕೆ ಜೀವನ ನೀಡಬಲ್ಲದು. ಹಿಂದೂ ಧರ್ಮದ ಸುಮಾರು ತೊಂಬತ್ತು ಪ್ರತಿಶತ ಜನ ಇಂದು ಮಾಂಸಾಹಾರ ಸೇವಿಸುತ್ತಾರೆ. ಪೇಜಾವರ ಶ್ರೀಗಳ ಮಠಗಳಲ್ಲಿ ಬ್ರಾಹ್ಮಣರ ಪಂಕ್ತಿಯಲ್ಲಿ ಕುಳಿತು ಊಟ ಮಾಡಲು ಶಾಸ್ತ್ರೋಕ್ತವಾಗಿ ಹಕ್ಕಿರುವ ಸಾರಸ್ವತ ಮತ್ತು ಗೌಡ ಸಾರಸ್ವತ ಬ್ರಾಹ್ಮಣರು ಶಾಸ್ತ್ರಗಳನ್ನು ಆಧರಿಸಿಯೇ ಮೀನು ತಿನ್ನುತ್ತಾರೆ. ಅಂದ ಹಾಗೆ ಮಹಾರಾಷ್ಟ್ರ ಸರಕಾರ ಬಾಂಬೆ ಹೈಕೋರ್ಟ್ ಗೆ ಅಫಿಡವಿಟ್ ನೀಡಿ ಹೇಳಿದಂತೆ ಮೀನನ್ನು ಕೊಲ್ಲುವುದಿಲ್ಲವಲ್ಲ; ಹಾಗಾಗಿ ಅದು ಕಾನೂನಿನ ಪ್ರಕಾರ ಮಾಂಸಾಹಾರ ಅಲ್ಲ. ಮಾಂಸಾಹಾರಿಗಳ ಓಟಿನಿಂದ ತಮ್ಮಲ್ಲಿ ತಮೋ ಗುಣ ಬರುವುದೆಂದು ‘ನಮೋ’ ರವರು ಹೇಳಿ ಮಾಂಸಾಹಾರ ಸೇವಿಸುವ ಯಾರೂ ಕೂಡ ತಮಗೆ ಓಟು ಕೊಡಬಾರದೆಂದು ಫಾರ್ಮಾನು ಹೊರಡಿಸಿಬಿಟ್ಟರೆ ಏನಾಗುವುದೋ, ಅವರ ಗುರುಗಳೇ ಹೇಳಬೇಕು.

ಇಂದು ನಡೆಯುತ್ತಿರುವ ಮಾಂಸಾಹಾರ ನಿಷೇಧ ಪ್ರಹಸನ ಕೇವಲ ಜನರ ಆಹಾರದ ಹಕ್ಕಿನ ಮೇಲಿನ ದಬ್ಬಾಳಿಕೆ ಅಲ್ಲ. milking-cowಇದರ ಬೇರು ಇನ್ನೂ ಅಳದಲ್ಲಿದೆ. ತಮ್ಮ ಅಸಹಿಷ್ಣುತೆಯ ಅಜೆಂಡಾವನ್ನೇ ಧರ್ಮವೆಂದು ಮೊದಲು ಘೋಷಿಸುವುದು, ನಂತರದಲ್ಲಿ ಆ “ಧರ್ಮ” ಕ್ಕೆ ಕಾನೂನಿನ ಕವಚ ತೊಡಿಸುವ ಹುನ್ನಾರವಿದೆ. ಮನುಷ್ಯನ ಪ್ರತಿ ನಡೆ ನುಡಿಯನ್ನು ಧರ್ಮ ಬೆರೆಸಿ ನಿಯಂತ್ರಿಸುವ ಇವರ ಅಲಿಖಿಕ ‘ಸಂವಿಧಾನ’ ಕ್ಕೆ ಅತೀ ದೊಡ್ಡ ಕೊಡಲಿ ಪೆಟ್ಟು ಕೊಟ್ಟ ಲಿಖಿತ ಸಂವಿಧಾನವನ್ನು ಸೋಲಿಸಲು ಇವರ ಕಾರ್ಖಾನೆ ಗಳಲ್ಲಿ ಒಂದಲ್ಲ ಒಂದು ಸಂಚು ತಯಾರಿ ಯಾಗುತ್ತಲೇ ಇರುತ್ತದೆ. ಒಮ್ಮೆ ಪಟೇಲರನ್ನು ಬಳಸಿ ಸಾಮಾಜಿಕ ಸ್ವಾಸ್ಥ್ಯ ಕೆಡಿಸಿದರೆ ಮತ್ತೊಮ್ಮೆ ಜೈನರನ್ನು ಬಳಸಿ ಆಹಾರದಲ್ಲಿ ಧರ್ಮ ಬೆರೆಸಿ ನೋಡುತ್ತಾರೆ.

ಗಣವೇಶದ ಬೆಲ್ಟ್ ಮತ್ತು ಬೂಟು ತಯಾರಿ ಮಾಡುವ ಚರ್ಮ ಉದ್ಯಮ

ಇನ್ನು ಇವರದ್ದೇ ದೃಷ್ಟಿಯಲ್ಲಿ ನೋಡಿದರೆ ಜೈನರ ಪ್ರಕಾರ ಮಾಂಸಾಹಾರ ಕೇವಲ ಹಬ್ಬಗಳಲ್ಲಿ ಮಾತ್ರವಲ್ಲ ಎಲ್ಲ ದಿನವೂ ನಿಷಿದ್ಧವೇ. ಜೈನ ಧರ್ಮವನ್ನು ಅತಿಯಾಗಿ ಪ್ರೀತಿಸುವ ಜನ ಅದೇಕೆ ಮಾಂಸಾಹಾರವನ್ನು ಸಂಪೂರ್ಣ ನಿಷೇಧಿಸಬಾರದು? ಸೂರ್ಯಾಸ್ಥದ ನಂತರ ಊಟವೇ ಮಾಡಬಾರದು ಎಂದು ಕಾನೂನು ಏಕೆ ತರಬಾರದು? ಇನ್ನು ಪ್ರಾಣಿಜನ್ಯವಾದ ಹಾಲು, ಜೇನು, ಮೊಸರು, ಮಜ್ಜಿಗೆ, ಪಂಚಾಮೃತ, ರೇಷ್ಮೆ ಇತ್ಯಾದಿ ಎಲ್ಲವನ್ನೂ ನಿಷೇಧಿಸಬಾರದು? ಇಷ್ಟೆಲ್ಲಾ ಮಾತನಾಡುವ ಈ ಜನರು ಇಂದು ಯಂತ್ರಗಳ ಮೂಲಕ ದಿನನಿತ್ಯ ಹಸುಗಳ ಕೆಚ್ಚಲಿನಿಂದ ತನ್ನ ಕರುವಿಗೆ ಸೇರಬೇಕಾದ ಹಾಲನ್ನು ಬಲಪ್ರಯೋಗದಿಂದ ತೆಗೆದು ಹಸುವಿಗೆ ಹಿಂಸಿಸಿ ಬೃಹತ್ ಪ್ರಮಾಣದಲ್ಲಿ ವಂಚಿಸಿ ಮಾನವರು ಕುಡಿಯುವುದರಿಂದ ಹಾಲನ್ನೂ ಮತ್ತು ಹಾಲಿನ ಎಲ್ಲ ಉತ್ಪನ್ನಗಳನ್ನೂ ನಿಷೇಧಿಸಬೇಕು. ಹಾಗೆಯೇ ಪ್ರಾಣಿ ಹಿಂಸೆಯಿರುವ ರೇಷ್ಮೆ ಉದ್ಯಮ, ಔಷಧಿ ಉದ್ಯಮ, ಕುಕ್ಕುಟ ಉದ್ಯಮ, ಮೀನುಗಾರಿಕೆ, ಪ್ರಾಣಿಗಳನ್ನು ಬಳಸಿ ನಡೆಸುವ ಕೃಷಿ, ಸಂಚಾರ, ಸಾಮಾನು-ಸರಂಜಾಮು ಸಾಗಾಣಿಕೆ, chicken-curryಚರ್ಮ ಉದ್ಯಮ, ಮುಖ್ಯವಾಗಿ ಗಣವೇಶದ ಬೆಲ್ಟ್ ಮತ್ತು ಬೂಟು ತಯಾರಿ ಮಾಡುವ ಚರ್ಮ ಉದ್ಯಮ ಇತ್ಯಾದಿಗಳ ಮೇಲೂ ನಿಷೇಧ ಹೇರಬೇಕು. ಇದೆಲ್ಲ ಬಿಟ್ಟು ಬರೀ ಒಂದೆರಡು ದಿನ ಮಾಂಸ ತಿನ್ನಬಾರದು ಅಂದರೆ ಹೇಗೆ?

ನಮ್ಮ ದೇಶದ ಸಂವಿಧಾನದಲ್ಲಿರುವ ಬದುಕಿನ ಸ್ವಾತಂತ್ರ್ಯ ಆಹಾರದ ಸ್ವಾತಂತ್ರ್ಯವನ್ನೂ ಒಳಗೊಂಡಿದೆ. ಕಾನೂನಿನ ಪ್ರಕಾರ, ಯಾರು ಏನು ತಿಂದು ಬದುಕಬೇಕು ಎಂಬುದನ್ನು ತೀರ್ಮಾನಿಸಲು ಮತ್ತೊಬ್ಬರಿಗೆ ತೀರ್ಮಾನಿಸಲು ಹಕ್ಕಿಲ್ಲ. ಸಸ್ಯಾಹಾರಿಗಳಿಗೆ ನೋವಾಗುವುದೆಂದು ಬಹುಜನರು ಮಾಂಸಾಹಾರ ತ್ಯಾಗ ಮಾಡಬೇಕಿದ್ದರೆ, ಸಸ್ಯಾಹಾರಿಗಳು ಮಾಂಸಾಹಾರಿಗಳ ಮೇಲೆ ಪ್ರೀತಿ ತೋರಿಸಿ ಒಂದೇ ಒಂದು ದಿನ ಮಾಂಸಾಹಾರ ತಿನ್ನಲು ಸಾಧ್ಯವೇ? ಇನ್ನು ಇವರ ಆಹಾರ ಭಯೋತ್ಪಾದನೆಯನ್ನು ಯಾವ ಜೈನರೂ, ಇತರೇ ಸಸ್ಯಾಹಾರಿಗಳೂ ಇದನ್ನು ಒಪ್ಪುವುದಿಲ್ಲ. ಇದು ಕೆಲವರನ್ನು ಹಲವರ ಮೇಲೆ ಎತ್ತಿ ಕಟ್ಟಿ ಪಡುವ ವಿಘ್ನ ಸಂತೋಷ; ಜನರನ್ನು ಆಹಾರದ ಹೆಸರಿನಲ್ಲೂ ಒಡೆದು ಆಳುವ ಹುನ್ನಾರ.

‘ಮ್ಲೇಚ್ಚ’ ರಿಂದ ಐದು ಬಿಲಿಯನ್ ಡಾಲರ್ – ಮೇಕ್ ಇನ್ ಇಂಡಿಯಾ

ಇಂದು ಕೋಟಿಗಟ್ಟಲೆ ಮನುಷ್ಯ ಜೀವಿಗಳನ್ನು ಬಳಸಿ , ಜೀತಮಾಡಿಸಿ ದಿನವೂ ಅವರ ರಕ್ತ ಕುಡಿದರೆ ಪರವಾಗಿಲ್ಲ baadoota-nonveg-meals-served-to-thousandsಆದರೆ ಕೋಳಿ ಕುರಿ ಮಾತ್ರ ತಿನ್ನಬಾರದು. ಹಾಗೆಯೇ ಮುಂಬೈ ಕಾಮಾಟಿಪುರದ ಹೆಣ್ಣುಮಕ್ಕಳ ‘ಮಾಂಸದ’ ಧಂದೆ (ಅಲ್ಲಿ ಧರ್ಮ ಜಾತಿ ಏನೂ ಇಲ್ಲ) ಅವ್ಯಾಹತವಾಗಿ ಸಾಗಬಹುದು; ಅದರಿಂದ ಸ್ತ್ರೀಯನ್ನು ಮಾತೆಯೆಂದು ಪೂಜಿಸುವ ಯಾವ ಧರ್ಮೀಯರಿಗೂ ನೋವಾಗುವುದಿಲ್ಲ. ಆದರೆ ಪ್ರಾಣಿಗಳ ಮಾಂಸದ ಮೇಲೆ ಮಾತ್ರ ನಿಷೇಧ. ಗೋವನ್ನು ಮಾತೆಯೆಂದು ಪೂಜಿಸುವ ನಮ್ಮ ದೇಶದಿಂದ ಗೋಮಾಂಸವನ್ನು “ಮ್ಲೇಚ್ಚ” ದೇಶಗಳಿಗೆ ರಫ್ತು ಮಾಡಿ ಪ್ರತಿ ವರ್ಷ ಐದು ಬಿಲಿಯನ್ ಡಾಲರ್ ಸಂಪಾದಿಸಬಹುದು; ಆದರೆ ಧರ್ಮವನ್ನು ರಕ್ಷಿಸಲು ನಮ್ಮ ಜನ ಐದು ದಿನ ತಮ್ಮ ದುಡ್ಡು ಕೊಟ್ಟು ತಮ್ಮ ಮನೆಗಳಲ್ಲಿ ಮಾಂಸ ತಿಂದು ಜೀವಿಸುವಂತಿಲ್ಲ.

ಇದನ್ನೇ ಬಹುಶಃ “ನಂಬಲಾಗದ (Incredible) ಇಂಡಿಯಾ” ಎನ್ನುವುದು!