Daily Archives: September 16, 2015

ಭಾರತದ ಕುಲ ತಿಲಕರ ಪರಾಮರ್ಶೆ : ಭಾಗ 1


– ಶ್ರೀಧರ್ ಪ್ರಭು


 

“In spite of the verdict of the Jury, I maintain that I am innocent. There are higher powers that rule the destiny of men and nations and it may be the will of providence that the cause which I represent may prosper more by my suffering than my remaining free.”

(“ಜೂರಿಗಳ ತೀರ್ಮಾನವೇನೆ ಇರಲಿ, ನನ್ನ ಪ್ರಕಾರ ನಾನೊಬ್ಬ ನಿರಪರಾಧಿ. ಮಾನವರ ಮತ್ತು ದೇಶಗಳ ಭವಿಷ್ಯವನ್ನು ತೀರ್ಮಾನಿಸುವದು ಮಹಾನ್ ಶಕ್ತಿಗಳು. ನಾನು ನಂಬಿದ ಅದರ್ಶಗಳನ್ನು ಸಿದ್ದಿಸಲು, ನಾನು ಮುಕ್ತವಾಗಿ ಬದುಕುವುದಕ್ಕಿಂತ ಸಂಘರ್ಷ ಪಟ್ಟು ಬಂಧನದಲ್ಲಿರರುವುದರಿಂದಲೇ ಹೆಚ್ಚು ಸೂಕ್ತವೆಂದು ಆ ವಿಧಿಯೇ ತೀರ್ಮಾನಿಸಿರಬೇಕು.” )

ಬಾಂಬೆ ಹೈ ಕೋರ್ಟ್‌ನ ಹೃದಯ ಭಾಗದಲ್ಲಿರುವ ನ್ಯಾಯಂಗಣ ಕೊಠಡಿಯ ೪೬ ರ ಹೊರ ಪಾರ್ಶ್ವದಲ್ಲಿರುವ ಒಂದು ಆಕರ್ಷಕ ಫಲಕದ ಮೇಲೆ ಈ ವಾಕ್ಯಗಳನ್ನು ಕೆತ್ತಲಾಗಿದೆ. ಒಂದು ನ್ಯಾಯಾಲಯದಲ್ಲಿ ಒಬ್ಬ ಆರೋಪಿ ನೀಡಿದ ಹೇಳಿಕೆಗಳನ್ನು lokmanya-tilakಅದೇ ನ್ಯಾಯಾಲಯದ ಆವರಣದಲ್ಲಿ ಕೆತ್ತಿದ ಉದಾಹರಣೆ ಪ್ರಾಯಶಃ ಇಡೀ ವಿಶ್ವದಲ್ಲೇ ಇರಲಿಕ್ಕಿಲ್ಲ.

ಈ ವಾಕ್ಯಗಳನ್ನು ಹೇಳಿದ ರಾಷ್ಟ್ರೀಯ ಅಸಂತುಷ್ಟಿಯ ಜನಕ (Father of the Indian unrest), ಭಾರತದ ರಾಷ್ಟ್ರೀಯ ಚಳುವಳಿಯ ಪಿತಾಮಹ, ಸ್ವರಾಜ್ಯವೇ ತನ್ನ ಜನ್ಮ ಸಿದ್ಧ ಹಕ್ಕೆಂದು ಸಾರಿದ ಲೋಕಮಾನ್ಯ ಬಾಳ ಗಂಗಾಧರ ತಿಲಕರು ಸರ್ವತ್ರ ಮನ್ನಣೆ ಮತ್ತು ಗೌರವಕ್ಕೆ ಪಾತ್ರರಾದವರು. ಅವರು ಪ್ರಾರಂಭಿಸಿದ ಸಾರ್ವಜನಿಕ ಗಣೇಶೋತ್ಸವ ಇಂದು ಭಾರತಾದ್ಯಂತ ಆಚರಿಸಲಾಗುತ್ತಿದೆ.

ಬಹುಷಃ ಕಾಂಗ್ರೆಸ್, ಕಮ್ಯುನಿಸ್ಟರು ಮತ್ತು ಬಹು ಮುಖ್ಯವಾಗಿ ಸಂಘ ಪರಿವಾರದವರು ಮನ:ಪೂರ್ವಕವಾಗಿ ಮತ್ತು ಸಮಾನವಾಗಿ ಗೌರವಿಸುವ ಕೆಲವೇ ರಾಷ್ಟ್ರೀಯ ನಾಯಕರಲ್ಲಿ ತಿಲಕರೊಬ್ಬರು. ಕಾಂಗ್ರೆಸ್ ಮತ್ತು ಸಂಘ ಪರಿವಾರ ಅವರನ್ನು ಒಬ್ಬ ಅಪ್ಪಟ ರಾಷ್ಟ್ರವಾದಿಯಾಗಿ ಗೌರವಿಸಿದರೆ, ಕ್ರಾಂತಿಕಾರಿ ಮಾರ್ಗವನ್ನು ಬೆಂಬಲಿಸಿ, ೧೯೧೭ ರ ಸೊವಿಯಟ್ ಕ್ರಾಂತಿಯನ್ನು ಮತ್ತು ಅದರ ರೂವಾರಿ ಲೆನಿನ್ ರನ್ನು ಹಾರ್ದಿಕವಾಗಿ ಹಾಡಿ ಹೊಗಳಿದ ತಿಲಕರ ಬಗ್ಗೆ ಕಮ್ಯುನಿಸ್ಟರಿಗೆ ಅತೀವ ಅಭಿಮಾನವಿದೆ. ಸ್ವತಹ ಲೆನಿನ್ ಒಂದು ಕಡೆ ತಿಲಕರ ಬಗ್ಗೆ ‘ಅತ್ಯಂತ ಸುಸ್ಥಿರ ಮತ್ತು ಪುರೋಗಾಮಿ ನಾಯಕ…” (“…the most consistent and forward-looking leader”) ಎಂದಿದ್ದಾರೆ. ತಿಲಕರ ಮೇಲೆ ದೇಶದ್ರೋಹದ ಮೊಕದ್ದಮೆ ನಡೆದಾಗ ತಿಲಕರ ಪರ ವಕಾಲತ್ತು ನಡೆಸಿದ್ದು ಸ್ವತಹ ಮೊಹಮ್ಮದ್ ಅಲಿ ಜಿನ್ನಾ. ಜಿನ್ನಾ ಮತ್ತು ತಿಲಕರ ಸ್ನೇಹ ಮತ್ತು ಸಾಂಗತ್ಯ (comradeship) ಬಗ್ಗೆ ಪ್ರಸಿದ್ದ ಲೇಖಕ ಎ. ಜಿ. ನೂರಾನಿ “Tilak and Jinna – Comrades in Freedom Struggle” ಎಂಬ ಬಹು ಚರ್ಚಿತ ಪುಸ್ತಕವನ್ನೇ ಬರೆದಿದ್ದಾರೆ. ಮುಸ್ಲಿಂ ಸಮುದಾಯವೂ ತಿಲಕರನ್ನು ತೀಕ್ಷ್ಣವಾಗಿ ವಿರೋಧಿಸಿದ ನಿದರ್ಶನಗಳಿಲ್ಲ. ಹೀಗೆ ಸಾರ್ವತ್ರಿಕ ಮನ್ನಣೆಯಿರುವ ತಿಲಕರನ್ನು ವಿಮರ್ಶೆಗೊಳಪಡಿಸುವುದು ಹಿಂದೆಯೂ ಮತ್ತು ಇಂದಿಗೂ ಸಾಕಷ್ಟು ‘ರಾಷ್ಟ್ರೀಯ ಅಸಂತುಷ್ಟಿ’ ಗೆ ಕಾರಣವಾಗುವುದರಲ್ಲಿ ಸಂಶಯವೇ ಇಲ್ಲ.

ಪ್ರಾಯಶಃ ತಿಲಕರನ್ನು ಮೊಟ್ಟ ಮೊದಲ ಬಾರಿ ವಿಮರ್ಶೆ ಮಾಡಿದ್ದು ಮಹಾತ್ಮಾ ಫುಲೆ. ತಮ್ಮ ಕೇಸರಿ ಪತ್ರಿಕೆ ಪ್ರಾರಂಭಿಸಲು Jyotirao Phuleನಿಧಿ ಸಂಗ್ರಹ ಮಾಡಲೋಸುಗ ಸಾರ್ವಜನಿಕ ಸಭೆಗಳನ್ನು ಆಯೋಜಿಸಿದಾಗ ಮೊಟ್ಟ ಮೊದಲ ಬಾರಿಗೆ ಫುಲೆ ತಿಲಕರ ಐತಿಹಾಸಿಕ ಆಕರಗಳನ್ನು ಸಾರ್ವಜನಿಕವಾಗಿ ಪ್ರಶ್ನಿಸಿದರು.

ಹಂಟರ್ ಆಯೋಗದ ಮುಂದೆ ಫುಲೆ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಬಗ್ಗೆ ಮನವಿ ಸಲ್ಲಿಸಿದರು. ಇದು ತಿಲಕರೂ ಸೇರಿದಂತೆ ಅನೇಕ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಯಿತು.

ತಿಲಕರು “ಮರಾಠ” ಎಂಬ ತಮ್ಮ ಇಂಗ್ಲಿಷ್ ಪತ್ರಿಕೆಯಲ್ಲಿ ಸರಣಿ ಲೇಖನಗಳನ್ನು ಮತ್ತು ಸಂಪಾದಕೀಯಗಳನ್ನು ಬರೆದು ಶೂದ್ರ ಮತ್ತು ದಲಿತ ವಿದ್ಯಾರ್ಥಿಗಳು ಅಧುನಿಕ ಶಿಕ್ಷಣ ಪಡೆಯುವುದನ್ನು ಉಗ್ರವಾಗಿ ವಿರೋಧಿಸಿ ಲೇಖನ ಬರೆದರು. ಇದರ ಸಾರಾಂಶವೆಂದರೆ: ಕುಂಬಾರ, ಕುಣಬಿ, ಚಮ್ಮಾರ ಇತ್ಯಾದಿ ಜನಾಂಗಗಳ ತಮ್ಮ ವೃತ್ತಿಗಳನ್ನೇ ಮುಂದುವರೆಸಿಕೊಂಡು ಹೋಗಬೇಕು. ಶೂದ್ರರ ಮಕ್ಕಳು ಅಧುನಿಕ ಶಿಕ್ಷಣ ಪಡೆದರೆ ಅವರು ತಮ್ಮ ತಂದೆ ತಾಯಿಯರನ್ನೇ ತುಚ್ಚವಾಗಿ ಕಂಡು ಅಧುನಿಕತೆಯನ್ನೇ ಆರಾಧಿಸ ತೊಡಗುತ್ತಾರೆ. ಇತಿಹಾಸ, ಗಣಿತ, ಭೂಗೋಳ ಇತ್ಯಾದಿ ವಿಷಯಗಳನ್ನು ಓದಿದರೆ ಈ ಕೆಳಜಾತಿಯ ಜನಕ್ಕೆ ಪ್ರಯೋಜನವಾದರೂ ಏನು? ಇನ್ನು ಇಂಥವರ ಮಕ್ಕಳೆಲ್ಲ ಓದಿ ವಿದ್ಯಾವಂತರಾದರೆ ಹೊಲಗಳಲ್ಲಿ ದುಡಿಯುವವರು ಯಾರು? ತೆರಿಗೆದಾರರ ಸಾವಿರಗಟ್ಟಲೆ ಹಣವನ್ನು ಈ ರೀತಿ ಅಪಾತ್ರರ ಮೇಲೆ ಖರ್ಚು ಮಾಡಲು ಸರಕಾರಕ್ಕೆ ನಾಚಿಗೆಯಾಗಬೇಕು ತಮ್ಮ ತಮ್ಮ ಕುಲ ಕಸುಬಿನಲ್ಲೇ ಶೂದ್ರ ಮತ್ತು ದಲಿತರ ಅವರ ಮುಕ್ತಿ ಇರುವುದು.

ಹಾಗೆಯೇ, ತಿಲಕರು ಇಂತಹುದೇ ಕಾರಣಗಳಿಗಾಗಿ ಮಹಿಳೆಯರು ವಿದ್ಯಾವಂತರಾಗುವುದನ್ನು ಕೂಡ ವಿರೋಧಿಸಿದರು. ಮಹಿಳೆ ಅಧುನಿಕ ಶಿಕ್ಷಣ ಪಡೆದರೆ ತನ್ನ ತಂದೆ ತಾಯಿ ಮತ್ತು ಗಂಡಂದಿರಿಗೆ ವಿಧೇಯಳಾಗಿರಲು ಸಾಧ್ಯವೇ ಎಂದು ಪ್ರಶ್ನಿಸಿದರು.

ದಲಿತ ಶೂದ್ರರ ಮಕ್ಕಳು ಸವರ್ಣೀಯ ಮಕ್ಕಳ ಜೊತೆ ಓದುವುದನ್ನೂ ಕೂಡ ತಿಲಕರು ಉಗ್ರವಾಗಿ ಟೀಕಿಸಿದರು. ಸ್ವತಃ ದಲಿತ ಶೂದ್ರರೇ ತಮ್ಮ ಮಕ್ಕಳನ್ನು ಸವರ್ಣೀಯರ ಜತೆ ವ್ಯಾಸಂಗ ಮಾಡಲು ಕಳುಹಿಸುತ್ತಿಲ್ಲ ಅಂಥದ್ದರಲ್ಲಿ ಕೆಲವು ಮೂರ್ಖ ಬ್ರಿಟಿಷ್ ಅಧಿಕಾರಿಗಳು ನಮ್ಮವರೇ ಆದ ಕೆಲ ನಿಷ್ಪ್ರಯೋಜಕ ಸಮಾಜ ಸುಧಾರಕರ ಮಾತು ಕಟ್ಟಿಕೊಂಡು ಈ ತರಹದ ‘ಅಪ್ರಯೋಜಕ ಮತ್ತು ಕಾರ್ಯಸಾಧುವಲ್ಲದ’ ಕ್ರಮಗಳನ್ನು ಜಾರಿ ಮಾಡುತ್ತಿದ್ದಾರೆ ಎಂದು ಬ್ರಿಟಿಷರ ಮೇಲಧಿಕಾರಿಗಳಿಗೆ ದೂರು ಸಹ ಸಲ್ಲಿಸಿದರು. ಬ್ರಿಟೀಷರ ವಿರುದ್ಧ ಹೋರಾಟ ಮಾಡುತ್ತಲೇ ಫುಲೆ ಮತ್ತವರ ಸಂಗಡಿಗರ ಮೇಲೆ ಚಾಡಿ ಚುಚ್ಚಲು ತಿಲಕರಿಗೆ ಯಾವ ದೇಶಪ್ರೇಮವೂ ಅಡ್ಡಿ ಬರಲಿಲ್ಲ.

ತಿಲಕರು ಇಷ್ಟೆಲ್ಲಾ ದ್ವೇಷ ಸಾಧಿಸಿದರೂ ಮಹಾತ್ಮಾ ಫುಲೆ ತಿಲಕರನ್ನು ಹೇಗೆ ನಡೆಸಿಕೊಂಡರು ಎಂಬುದು ಬಹು ಮುಖ್ಯ.

೧೮೮೨ ರಲ್ಲಿ, ಶಿವಾಜಿ ಮಹಾರಾಜರ ವಂಶದವರಿಗೆ ಬ್ರಿಟಿಷ್ ಸರಕಾರ ಅನ್ಯಾಯವೆಸಗಿದೆ ಎಂದು (ತಿಲಕರು ಶಾಹು ಮಹಾರಾಜರಿಗೆ ಅಪಮಾನ ಮಾಡಿದಷ್ಟೇನೂ ಬ್ರಿಟಿಷರು ಮಾಡಿರಲಿಕ್ಕಿಲ್ಲ), ತಿಲಕರು ಮತ್ತು ಅಗರ್ಕರ್ ಎಂಬ ಇನ್ನೊಬ್ಬ ಮುಖಂಡರ ಜೊತೆ ಸೇರಿಕೊಂಡು ಒಂದು ಚಳುವಳಿ ಸಂಘಟಿಸಿದರು. ಇದರಿಂದ ಕಾನೂನು ಭಂಗವಾಯಿತೆಂಬ ಆರೋಪ ಹೊರಿಸಿ ಬ್ರಿಟಿಷರು ಇವರಿಬ್ಬರನ್ನೂ ಮುಂಬೈನಲ್ಲಿನ ಡೊಂಗ್ರಿಯಲ್ಲಿ ಬಂಧಿಸಿದರು. ಆಗ ನ್ಯಾಯಾಲಯದಲ್ಲಿ ೧೦೦೦೦ ರೂಪಾಯಿಗಳ ಜಾಮೀನು ಕೊಡಬೇಕೆಂಬ ಶರತ್ತನ್ನು ವಿಧಿಸಲಾಯಿತು. ಅಷ್ಟು ಆಗುವಾಗ ತಿಲಕರ ಹಿಂದೆ ಓಡಾಡಿಕೊಂಡಿದ್ದ ಸುಧಾರಕರೆಲ್ಲ ದಿಕ್ಕಾ ಪಾಲಾಗಿ ಓಡಿದ್ದರು. ಮಹಾತ್ಮಾ ಫುಲೆ ತಾವೇ ಸ್ವಯಂ ಪ್ರೇರಣೆಯಿಂದ ಸತ್ಯಶೋಧಕ ಸಮಾಜದ ವತಿಯಿಂದ ಹಳ್ಳಿ ಹಳ್ಳಿಗೆ ತಿರುಗಿ ವಂತಿಗೆ ಸಂಗ್ರಹ ಮಾಡಿ ತಿಲಕ ಮತ್ತು ಅವರ ಸಂಗಡಿಗರನ್ನು ಬೇಲ್ ಹಣ ಕೊಟ್ಟು ಬಿಡಿಸಿದರು.ನಂತರ ನಡೆದ ತಿಲಕರ ಮೇಲೆ ಹೂಡಲಾದ ಮೊಕದ್ದಮೆಯಲ್ಲಿ ತಿಲಕರಿಗೆ ಮೂರು ತಿಂಗಳ ಕಾರಾವಾಸ ಶಿಕ್ಷೆಯಾಯಿತು. ತಿಲಕರ ಬಿಡುಗಡೆಗೆ ಒತ್ತಾಯಿಸಿ ನಂತರದಲ್ಲಿ ತಿಲಕರ ಬಂಧನವನ್ನು ಖಂಡಿಸಿ ಬೃಹತ್ ಪ್ರತಿಭಟನೆಯನ್ನು ಆಯೋಜಿಸಿದ ಮಹಾತ್ಮಾ ಫುಲೆ ಒಂದು ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಿದರು. ಈ ಕಾರ್ಯಕ್ರಮದಿಂದಾಗಿಯೇ ಮುಂಬೈ ಪ್ರಾಂತ್ಯದಲ್ಲೆಲ್ಲ ತಿಲಕರು ಪ್ರಸಿದ್ದಿಗೆ ಬಂದರು.

ಇದಾದ ನಂತರ, ತಿಲಕರು ಫುಲೆ ಮಹಾತ್ಮರಿಗೆ ‘ನಿಮ್ಮ ಈ ಮಹದುಪಕಾರ ಹೇಗೆ ತೀರಿಸಲಿ’ ಎಂದು ಕೇಳಿದಾಗ bal-gangadhar-tilakಮಹಾತ್ಮರು ಒಂದೇ ಒಂದು ಮಾತು ಹೇಳಿದರು ” ತಿಲಕ್, ನೀವು ಒಬ್ಬ ಮಹಾನ್ ನಾಯಕನಾಗಿ ಬೆಳೆದು ನಿಲ್ಲುವ ಸರ್ವ ಸಾಧ್ಯತೆಗಳನ್ನೂ ನಾನು ನೋಡಬಲ್ಲೆ. ನಿಮ್ಮಲ್ಲಿ ಒಂದೇ ಒಂದು ದೋಷವಿದೆ; ಕೇವಲ ಬ್ರಾಹ್ಮಣರನ್ನು ಸಂಘಟಿಸುವುದನ್ನು ಬಿಟ್ಟುಬಿಡಿ. ಸಮಾಜದ ಎಲ್ಲ ವರ್ಗಗಳಿಗೂ ನೇತೃತ್ವ ಕೊಡಿ. ಇಷ್ಟೇ ನಿಮ್ಮಲ್ಲಿ ನಾನು ಕೇಳಿಕೊಳ್ಳುವುದು”.

ದುರ್ದೈವವೆಂದರೆ, ಹೀಗೆ ತಮ್ಮನ್ನು ಸಲುಹಿದ ಮಹಾತ್ಮಾ ಫುಲೆ ಹುತಾತ್ಮರಾದಾಗ ತಮ್ಮ ದೈನಿಕದಲ್ಲಿ ಮಹಾತ್ಮರ ನಿಧನದ ಕುರಿತು ಒಂದೇ ಒಂದು ಚಿಕ್ಕ ಸಾಲನ್ನು ಸುದ್ದಿಯ ರೂಪದಲ್ಲಿ ಕೂಡ ಕೂಡ ಬರೆಯಲಿಲ್ಲ! ಇನ್ನು ತಿಲಕರ ಸಂಗಡಿಗ ಅಗರ್ಕರ್ ಕೂಡ ಈ ವಿಷಯದಲ್ಲಿ ಹಿಂದೆ ಬೀಳಲಿಲ್ಲ. ತಮ್ಮ ಪತ್ರಿಕೆ “ಸುಧಾರಕ” (!?) ದಲ್ಲಿ ಮಹಾತ್ಮರ ನಿಧನದ ಬಗ್ಗೆ ಒಂದು ಅಕ್ಷರವನ್ನೂ ಬರೆಯಲಿಲ್ಲ. ಇದೇ ತಿಲಕರು ಮಹಾತ್ಮರಿಗೆ ಸಲ್ಲಿಸಿದ ಕಾಣಿಕೆ!

ಇನ್ನು ತಿಲಕರು ಶಾಹು ಮಹಾರಾಜ್ ಮತ್ತು ಬಾಬಾ ಸಾಹೇಬರನ್ನು ನಡೆಸಿಕೊಂಡ ರೀತಿ ಇನ್ನೂ ಆಸಕ್ತಿಕರವಾಗಿದೆ.

(ಮುಂದುವರೆಯುತ್ತದೆ…)