ರೇಡಿಯೋ ಸ್ಟ್ಯಾಂಡ್ ಕೆಳಗೆ ಹೆರಿಗೆ

 – ಜೀವಿ

ಅದೊಂದು ದಿನ ಸಂಜೆ ದೋ ಎಂದು ಸುರಿಯುತ್ತಿದ್ದ ಮಳೆಯ ಮಧ್ಯೆ ಢಬ್, ಢಬ್ ಎಂಬ ಸದ್ದು ಕೂಡು ಜೋರಾಗಿತ್ತು. ಹೊತ್ತು ಮುಳುಗುವುದೇ ತಡ ದಲಿತ ಕೇರಿ ಮನೆಗಳ ಮೇಲೆ ಕಲ್ಲುಗಳು ಬೀಳುತ್ತಿದ್ದ ಸದ್ದು ಹೊಸದೇನು ಆಗಿರಲಿಲ್ಲ. ಮೇಲ್ಜಾತಿ ಕೇರಿ ಕಡೆಯಿಂದ ಬರುತ್ತಿದ್ದ ಕಲ್ಲುಗಳು ಸಿಕ್ಕವರ ತಲೆ ಸೀಳುತ್ತಿದ್ದವು. ಮನೆಗಳಲ್ಲಿದ್ದ ಮಡಿಕೆ, ಕುಡಿಕೆಗಳನ್ನು ಒಡೆದು stones-2ಹಾಕುತ್ತಿದ್ದವು, ಕುಡಿಯುವ ನೀರಿನ ಕೊಳಗದಲ್ಲೂ ಜಾಗ ಪಡೆಯುತ್ತಿದ್ದವು. ಆ ಕಲ್ಲಿನ ಹೊಡೆತದಿಂದ ತಪ್ಪಿಸಲು ಮಕ್ಕಳನ್ನು ಅಟ್ಟದ ಕೆಳಗೆ ಜಾಗ ಮಾಡಿ ಮಲಗಿಸುತ್ತಿದ್ದ ಹೆತ್ತವರು, ಎಷ್ಟೋ ದಿನ ನಿದ್ರೆ ಬಿಟ್ಟು ಗೋಡೆಗೊರಗಿ ಕುಳಿತಿದ್ದ ಉದಾಹರಣೆಗಳಿವೆ.

ಅದೊಂದು ಸಂಜೆ ಮಳೆಯ ನಡುವೆ ಕಲ್ಲುಗಳು ತೂರಿ ಬರುತ್ತಿದ್ದವು. ಇತ್ತ ತಾಯವ್ವನ ಹೆರಿಗೆ ನೋವು ಜಾಸ್ತಿಯಾಗಿತ್ತು. ಆಕೆಯ ಮನೆ ಮೇಲ್ಜಾತಿ ಕೇರಿಗೆ ಹತ್ತಿರದಲ್ಲಿದ್ದ ಕಾರಣಕ್ಕೆ ಅರ್ಧದಷ್ಟು ಕಲ್ಲುಗಳಿಗೆ ಆ ಮನೆಯೇ ಮೊದಲ ಗುರಿ. ತಾಯವ್ವನ ಗಂಡ ರಂಗ ಹೊರ ಹೋಗಿ ಬಾಣಸಗಿತ್ತಿಯನ್ನು ಕರೆ ತರುವುದು ಕೂಡ ಕಷ್ಟವಾಯಿತು. ಹೊರ ಹೋದರೆ ಗಂಡನ ಮೇಲೆ ಕಲ್ಲು ಬೀಳುವ ಆತಂಕದಿಂದ ಹೊರ ಹೋಗಲು ಅವಕಾಶ ಕೊಡದೆ ಗಂಡನ ಕೈ ಹಿಡಿದು ತಾಯವ್ವ ಕುಳಿತಿದ್ದಳು. ಸ್ವಲ್ಪ ಹೊತ್ತಿನಲ್ಲೆ ಮಳೆ ಕಡಿಮೆಯಾಯಿತು. ಆದರೆ ತೂರಿ ಬರುವ ಕಲ್ಲಿನ ಸಂಖ್ಯೆ ಹೆಚ್ಚಾಯಿತು. ಮಳೆ ನಿಂತಿದ್ದು ಕಲ್ಲು ಬೀಸುವವರಿಗೆ ಅನುಕೂಲಕರವಾಗಿತ್ತು.

ತಾಯವ್ವನ ನರಳಾಟ ಇಡೀ ಕೇರಿಗೆ ಕೇಳಿಸಿದರೂ ಹೊರ ಹೋದರೆ ಕಲ್ಲಿನ ಏಟು ಬೀಳುವ ಆತಂಕದಲ್ಲಿ ಎಲ್ಲರು ಜೀವ ಬಿಗಿ ಹಿಡಿದು ಕುಳಿತಿದ್ದರು. ಹೆಂಡತಿಯ ನೋವು ನೋಡಲಾರದ ರಂಗ ಬಾಗಿಲು ತೆರೆದು ಹೊರ ಹೋಗಿ ಬಾಣಸಗಿತ್ತಿ ಚಿಕ್ಕಮ್ಮಳಿಗೆ ವಿಷಯ ಮುಟ್ಟಿಸಿದ. ಜೀವಭಯದಲ್ಲೆ ಬೀದಿಗೆ ಬಂದ ಬಾಣಸಗಿತ್ತಿ ಹರಳೆಣ್ಣೆಯೊಂದಿಗೆ ತಾಯವ್ವನ ಮನೆ ಸೇರಿಕೊಂಡಳು. ಹೆಂಡತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಎತ್ತಿನ ಗಾಡಿ ಇರುವವರ ಮನೆ ಕದ ತಟ್ಟಲು ರಂಗ ಓಡಿ ಹೋದ.

ಮೂರ್ನಾಲ್ಕು ಬಿದಿರು ಬೊಂಬಿನ ಅಟ್ಟದ ಮೇಲೆ ಮಣ್ಣಿನ ದೊಡ್ಡ ಮಡಿಕೆಗಳಲ್ಲಿ ಬೀಜದ ರಾಗಿಯನ್ನು ತಾಯವ್ವ ಶೇಖರಿಸಿಟ್ಟಿದ್ದಳು. ಅದರ ಕೆಳಗೆ ಗೋಡೆಗೊರಗಿ ಕುಳಿತಿದ್ದಳು. ಮೇಲ್ಜಾತಿ ಕೇರಿ ಕಡೆಯಿಂದ ಬಂದ ಕಲ್ಲೊಂದು ಹೆಂಚು ಸೀಳಿ ಅದೇ ಮಡಿಕೆಗೆ ಬಡಿಯಿತು. ಮಡಿಕೆಯಲ್ಲಿದ್ದ ರಾಗಿ ನೇರವಾಗಿ ತಾಯವ್ವ ಮತ್ತು ಬಾಣಸಗಿತ್ತಿಯ ನೆತ್ತಿ ಮತ್ತು ಮೈ ಮೇಲೆ ಸುರಿಯಿತು. ಮನೆತುಂಬ ರಾಗಿ ಕಾಳು ಹರಡಿದವು. ಅದರ ನಡುವೆ ಕುಳಿತಿದ್ದ ತಾಯವ್ವನನ್ನು ಬಾಣಸಗಿತ್ತಿ ಹೇಗೋ ಎತ್ತಿ ಇನ್ನೊಂದೊಡೆಗೆ ಕೂರಿಸುವ ಪ್ರಯತ್ನ ಮಾಡಿದಳು. ಇಡೀ ಮನೆಗೆ ಅಟ್ಟಣಿಗೆ ಜೋಡಿಸದ ಕಾರಣ ಸುರಕ್ಷಿತವಾದ ಬೇರೆ ಜಾಗ ಇಲ್ಲದಾಯಿತು. ರೇಡಿಯೋ ಇರಿಸಲು ಮಾಡಿಸಿದ್ದ ಸ್ಟ್ಯಾಂಡ್ ವೊಂದರ ಕಳೆಗೆ ತಾಯವ್ವನನ್ನು ಕೂರಿಸಿದಳು. ಅತ್ತ ಎತ್ತಿನ ಗಾಡಿ ತರಲು ಹೋದ ರಂಗ ಬೀದಿ ಬೀದಿ ಅಲೆಯುತ್ತಿದ್ದ.

ಹೆರಿಗೆ ನೋವು ಇನಷ್ಟು ಜಾಸ್ತಿಯಾಗಿ ತಾಯವ್ವನ ಕಿರುಚಾಟ ಹೆಚ್ಚಾಯಿತು. ಕೊನೆಗೂ ರೇಡಿಯೋ ಸ್ಟ್ಯಾಂಡ್ ಕೆಳಗೆ ಗಂಡು ಮಗುವಿಗೆ ತಾಯವ್ವ ಜನ್ಮ ನೀಡಿದಳು. ಹುಟ್ಟಿದ ಮಗು ಮಲಗಿಸಲು ಜಾಗವಿಲ್ಲದಂತಾಯಿತು. ತಾಯವ್ವನ ಕೈಯಲ್ಲಿ ಮಗು ಕೊಟ್ಟು ಅಟ್ಟದ ಕೆಳಗಿನ ರಾಗಿ ಗುಡಿಸಿ ಮಗು ಮಲಗಿಸಲು ಬಾಣಸಗಿತ್ತಿ ಜಾಗ ಮಾಡಿದಳು. ಮತ್ತೊಮ್ಮೆ ಕಲ್ಲು ಬಿದ್ದರೆ ಇನ್ನೊಂದು ಮಡಿಕೆಯಲ್ಲಿದ್ದ ರಾಗಿ ಕೂಡ ಮಗು ಮೇಲೆ ಬೀಳುವ ಆತಂಕ ಇತ್ತು. ಗೋಣಿ ಚೀಲ ಹೊದಿಸಿ ಮಗುವಿನ ಮೇಲೆ ರಾಗಿಕಾಳು ಬೀಳದಂತೆ ನೋಡಿಕೊಂಡ ತಾಯವ್ವ, ಹಾಗೇ ಗೋಡೆಗೊರಗಿ ಇಡೀ ರಾತ್ರಿ ಕಳೆದಳು. ಗಾಡಿ ಸಿಗದೆ ಬರಿಗೈಯಲ್ಲಿ ಬಂದ ರಂಗ ಕೂಡ ಕಣ್ಮುಚ್ಚದೆ ತಾಯವ್ವನೊಂದಿಗೆ ಕುಳಿತು ಕಣ್ಣೀರು ಸುರಿಸಿದ.

ಹರಿದ ಅರ್ಜಿ:stones
ದಲಿತರ ಮನೆಗಳ ಮೇಲೆ ಮಾತ್ರವಲ್ಲ ಅವರ ಜೀವನದ ಮೇಲೂ ಕಲ್ಲು ತೂರುವ ಕೆಲಸ ಮುಂದುವರಿಯಿತು. ದಲಿತರು ಹೊಲದಲ್ಲಿ ಬೆಳೆದಿದ್ದ ಬೆಳೆಗೆ ಮೇಲ್ಜಾತಿಯವರ ಕುರಿ ಮತ್ತು ದನಗಳನ್ನು ಬಿಟ್ಟು ಮೇಯಿಸಿದರೂ ಕೇಳುವಂತಿಲ್ಲ. ಕೆಳಜಾತಿಯವರ ಕುರಿಗಳನ್ನು ಕಣ್ಣೆದುರೇ ಕಡಿದು ಹಂಚಿಕೊಂಡರೂ ಪ್ರಶ್ನಿಸುವಂತಿಲ್ಲ. ಕೇಳುವ ಸಾಹಸ ಮಾಡಿದವರ ಜೀವ ಉಳಿಯುವುದು ಕೂಡ ಕಷ್ಟವಾಗಿತ್ತು.

ಉಳುವವರಿಗೆ ಭೂಮಿ, ವೃದ್ಧಾಪ್ಯ, ಅಂಗವಿಕಲ ಮತ್ತು ವಿಧವಾ ವೇತನ..ಹೀಗೆ ನಾನಾ ಕಾರಣಗಳಿಗಾಗಿ ಒಂದು ಪಕ್ಷಕ್ಕೆ ನಿಷ್ಠೆ ಮೀಸಲಿರಿಸಿಕೊಂಡು ಬಂದಿದ್ದ ದಲಿತರನ್ನು ಕಂಡರೆ ಇತರೆ ಪಕ್ಷದ ಮುಖಂಡರಿಗೆ ಹಾಗೂ ಹಳ್ಳಿಗಳಲ್ಲಿದ್ದ ಅವರ ಹಿಂಬಾಲಕರಿಗೆ ಇನ್ನಿಲ್ಲದ ಅಸಹನೆ. ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕೆಂಬ ಹಟ. ದಲಿತರು ಕಡಿಮೆ ಸಂಖ್ಯೆಯಲ್ಲಿದ್ದ ಊರುಗಳಲ್ಲಂತೂ, ಅವರ ಪಾಡು ಹೇಳ ತೀರದು. ಸಣ್ಣ ಸಣ್ಣ ಊರುಗಳಲ್ಲಿ ಇಂತಿಂತಹ ಮನೆಯವರೇ ನಮ್ಮ ಅಭ್ಯರ್ಥಿಗೆ ಮತ ಹಾಕಿಲ್ಲ ಎಂದು ಲೆಕ್ಕ ಹಾಕುವುದು ಸುಲಭ. ಅದರ ಪರಿಣಾಮ ಮುಂದಿನ ಚುನಾವಣೆ ತನಕ ಅನುಭವಿಸಬೇಕಿತ್ತು. ಒಂದು ಪಕ್ಷ ದಲಿತರ ವಿರೋಧದ ನಡುವೆಯೂ, ಅವರ ಕಡೆಯ ಅಭ್ಯರ್ಥಿ ಗೆದ್ದರಂತೂ, ಸರಕಾರದ ಯಾವ ಸವಲತ್ತೂ ಅವರಿಗೆ ತಲುಪದಂತೆ ನೋಡಿಕೊಳ್ಳುತ್ತಿದ್ದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಮೀಸಲಿದ್ದ ಸವಲತ್ತುಗಳು ಎಲ್ಲರನ್ನೂ ತಲುಪುತ್ತಿರಲಿಲ್ಲ. ಸವಲತ್ತು ಬೇಕಿದ್ದರೆ, ಅವರ ನಾಯಕರಲ್ಲಿ ನಿಷ್ಠೆಯನ್ನು ವ್ಯಕ್ತಪಡಿಸಬೇಕಿತ್ತು. ಶಾಸಕರ ಯಜಮಾನಿಕೆಯಲ್ಲಿಯೇ ಇರುವ ಸಂಸ್ಥೆಯ ಹುದ್ದೆಯೊಂದಕ್ಕೆ ದಲಿತರ ಹುಡುಗ ಅರ್ಜಿ ಹಾಕಿದ. ಮೀಸಲಿದ್ದ ಹುದ್ದೆಯನ್ನು ಪಡೆಯುವಲ್ಲಿ, ಆ ಶಾಸಕರ ಕೃಪೆ ಅನಿವಾರ್ಯವಾಗಿತ್ತು. ಏಕೆಂದರೆ, ಅಲ್ಲಿ ಸಂದರ್ಶನ, ನೇಮಕಾತಿ ಪ್ರಕ್ರಿಯೆ ಎಲ್ಲವೂ ನೆಪ ಮಾತ್ರ. ಅಭ್ಯರ್ಥಿಗಳ ಆಯ್ಕೆಯಾಗುತ್ತಿದ್ದುದ್ದು ಅವರ ಮೂಗಿನ ನೇರಕ್ಕೆ. ಆ ದಲಿತರ ಹುಡುಗ ತನಗೂ ಒಂದು ಒಳ್ಳೆ ಕೆಲಸ ಸಿಕ್ಕರೆ ಕಷ್ಟಗಳು ಕಡಿಮೆಯಾಗುತ್ತವೆ ಎಂದು, ಶಾಸಕರನ್ನು ಸಂಪರ್ಕಿಸಲು ಹರಸಾಹಸ ಪಟ್ಟ.

ನೀನು ನಿನ್ನ ಅಪ್ಪ-ಅಮ್ಮ ರನ್ನು ಕರೆದುಕೊಂಡು ಹೋಗಿ ಅವರ ಕಾಲಿಗೆ ನಮಸ್ಕಾರ ಮಾಡುವಂತೆ ಮಾಡು, ಅವರ ಮನdalit_panther ಕರಗಿ ನಿನಗೆ ಒಳ್ಳೆಯದಾಗುತ್ತೆ ಎಂದು ಶಾಸಕರ ಆಪ್ತರು ಸಲಹೆ ಕೊಟ್ಟರು. ಏನೂ ಅರಿಯದ ಅಮ್ಮ, ತನ್ನ ಮಗನಿಗೆ ಕೆಲಸ ಸಿಗುವುದಾದರೆ, ವಯಸ್ಸಿನಲ್ಲಿ ತನಗಿಂತಲೂ ಚಿಕ್ಕವನಾದ ಶಾಸಕನ ಕಾಲಿಗೆ ಬಿದ್ದರು. ಆದರೆ ಮನಸ್ಸು ಕರಗಿದಂತೆ ಕಾಣಲಿಲ್ಲ. ಸಂದರ್ಶನ ಪತ್ರ ಹಾಗೂ ಅರ್ಜಿಯ ಪ್ರತಿಯೊಂದನ್ನು ಅವರ ಕೈಗೆ ಆ ಅಭ್ಯರ್ಥಿ ಕೊಟ್ಟರೆ, ಅವನ ಎದುರೇ, ಅದನ್ನು ಹರಿದು ತಾನು ಕೂತಿದ್ದ ಕುರ್ಚಿಯ ಹಿಂದಕ್ಕೆ ಬಿಸಾಕಿದರು. ಆ ಮೂಲಕ ಆ ಹುಡುಗನ ನೌಕರಿ ಕನಸು ಕಮರಿತು. ಹೀಗೆ ಜಾತಿ ಹಾಗೂ ರಾಜಕೀಯ ಕಾರಣಗಳಿಗೆ ಅವಕಾಶಗಳನ್ನು ಕಳೆದುಕೊಂಡವರು ನೂರಾರು ಮಂದಿ. ಇಂದಿಗೂ ಇಂತಹ ಘಟನೆಗಳು ನಡೆಯುತ್ತಲೇ ಇವೆ.

2 thoughts on “ರೇಡಿಯೋ ಸ್ಟ್ಯಾಂಡ್ ಕೆಳಗೆ ಹೆರಿಗೆ

  1. ಎಚ್. ಸುಂದರ ರಾವ್

    ಹುಡುಕಿದರೆ ಇಂಥ ದೌರ್ಜನ್ಯವನ್ನು ಎದುರಿಸಿ ನಿಂತವರ, ಧಿಕ್ಕರಿಸಿ ನಿಂತವರ, ಗೆದ್ದವರ ಪ್ರಕರಣಗಳು ಸಿಗುವುದು ಸಾಧ್ಯ. ಹುಡುಕದೆಯೂ ನಿಮ್ಮ ಅನುಭವದಲ್ಲಿ ಅಂಥ ಪ್ರಕರಣಗಳು ಇರಬಹುದು. ಅಂಥವನ್ನು ಬರೆದರೆ ಪ್ರಯೋಜನವಿದೆ. ಈಗ ನೀವು ಬರೆಯುತ್ತಿರುವ ಪ್ರಕರಣಗಳು ಕರುಣಾಜನಕವಾಗಿವೆ. ದೌರ್ಜನ್ಯವನ್ನು ಎದುರಿಸಲು ಬೇಕಾದ ಮಾನಸಿಕ ಬಲವನ್ನು ಅವು ಕೊಡುವುದಿಲ್ಲ ಎಂದು ನನಗನಿಸುತ್ತದೆ.

    Reply
  2. Ananda Prasad

    ದಲಿತರ ಮನೆಗಳ ಮೇಲೆ ಮೇಲ್ಜಾತಿಯ ಜನ ಕಲ್ಲು ತೋರುವ ಈ ಘಟನೆಗಳು ಇಂದಿಗೂ ನಡೆಯುತ್ತಿರುವುದು ಶೋಚನೀಯ. ಈ ರೀತಿ ಮೇಲ್ಜಾತಿ ಜನ ದಲಿತರ ಮೇಲೆ ಕಲ್ಲು ತೂರಲು ದಲಿತರು ಮಾಡಿರುವ ಅನ್ಯಾಯವಾದರೂ ಏನು? ದೇವರು, ಧರ್ಮಗಳ ಹೆಸರಿನಲ್ಲಿ ಹಿಂದೂ ಧರ್ಮದ ರಕ್ಷಣೆಯ ಹೆಸರಿನಲ್ಲಿ ಬುದ್ಧಿಜೀವಿಗಳ ಮೇಲೆ ಹರಿಹಾಯುವ ಸಂಘಟನೆಗಳು ಹಿಂದೂಗಳೇ ಆದ ದಲಿತರ ಮೇಲೆ ಹಿಂದೂಗಳೇ ನಡೆಸುವ ಇಂಥ ಅನ್ಯಾಯಗಳ ವಿರುದ್ಧ ಏಕೆ ಬೊಬ್ಬೆ ಹಾಕುವುದಿಲ್ಲ? ಇಂಥ ಅನ್ಯಾಯಗಳನ್ನು ತನ್ನ ಮಡಿಲಿನಲ್ಲಿ ಕಟ್ಟಿಕೊಂಡು ಭಾರತವು ವಿಶ್ವಗುರುವಿನ ಸ್ಥಾನ ಪಡೆಯಬೇಕು ಎಂದು ಉಪದೇಶ ಕೊಡುವ ಸನಾತನಿ ಚಿಂತಕರು ಈ ಬಗ್ಗೆ ಏಕೆ ಚಕಾರ ಎತ್ತುವುದಿಲ್ಲ?

    ಒಂದು ಕಾಲದಲ್ಲಿ ನೀಗ್ರೋಗಳನ್ನು ಆಫ್ರಿಕಾದಿಂದ ಗುಲಾಮಗಿರಿಯ ದುಡಿಮೆಗೆ ಬಳಸುತ್ತಿದ್ದ ಪಾಶ್ಚಾತ್ಯ ದೇಶಗಳು ಇಂದು ಯಂತ್ರಗಳ ಆವಿಷ್ಕಾರ ಮಾಡಿ ಮನುಷ್ಯರ ಗುಲಾಮಗಿರಿ ಹಾಗೂ ಶೋಷಣೆಗೆ ಅಂತ್ಯ ಕಾಣಿಸಿವೆ. ಭಾರತದ ಮೇಲ್ಜಾತಿಗಳ ಜನ ಕೂಡ ದಲಿತರು ತಮ್ಮ ಸೇವೆಗೆ ಮೀಸಲಾಗಿರಬೇಕು ಎಂಬ ಸನಾತನ ಚಿಂತನೆಯಿಂದ ಹೊರಗೆ ಬಂದು ಅವರು ಕೂಡ ತಮ್ಮ ಸಮನಾಗಿ ಬೆಳೆಯಲು ಅವಕಾಶ ಮಾಡಿಕೊಡಬೇಕಾಗಿರುವುದು ಇಂದಿನ ಅಗತ್ಯ. ಮನುಷ್ಯರನ್ನು ಶೋಷಿಸುವ ಬದಲು ಯಂತ್ರಗಳನ್ನು ಆವಿಷ್ಕರಿಸಿ ಅವುಗಳ ಮೂಲಕ ಕೆಲಸಗಳನ್ನು ಸುಲಭ ಮಾಡಿಕೊಳ್ಳುವುದು ಹಾಗೂ ದಲಿತರನ್ನು ಇತರ ಮೇಲ್ಜಾತಿಯ ಜನರಂತೆ ಬಾಳಲು ಅನುವುಮಾಡಿಕೊಡಬೇಕಾಗಿರುವುದು ಉತ್ತಮ ನಾಗರಿಕತೆಯ ಲಕ್ಷಣ. ದಲಿತರು ವಿದ್ಯಾವಂತರಾದರೆ ತಮ್ಮ ಹೊಲಗಳಲ್ಲಿ ದುಡಿಯುವುದು ಯಾರು ಎಂಬ ಸನಾತನ ಚಿಂತನೆಯಿಂದ ಹಿಂದೂ ಮೇಲ್ಜಾತಿಗಳ ಜನ ಹೊರಗೆ ಬಂದು ವಿಶಾಲ ಹೃದಯವನ್ನು ಬೆಳೆಸಿಕೊಳ್ಳಬೇಕಾಗಿದೆ.

    Reply

Leave a Reply

Your email address will not be published. Required fields are marked *