Daily Archives: September 30, 2015

ಆರೆಸ್ಸಸ್ : ಫ್ಯಾಸಿಸಂ ಪರವಾದ ಒಲವು ಮತ್ತು ಸಮರ್ಥನೆ

-ಬಿ.ಶ್ರೀಪಾದ ಭಟ್

ಈ ಆರೆಸ್ಸಸ್ ನ ಹುಟ್ಟೇ ಅತ್ಯಂತ ಕುತೂಹಲಕರ. ಇದಕ್ಕೆ ಬ್ರಾಹ್ಮಣ್ಯದ ಹಿನ್ನೆಲೆ ಇದೆ, ಹಿಂದೂ ರಾಷ್ಟ್ರೀಯತೆಯ ಹಿನ್ನಲೆ ಇದೆ, ರಾಜಕೀಯ ಹಿನ್ನಲೆ ಇದೆ, ಆರ್ಥಿಕ ಹಿನ್ನಲೆ ಇದೆ, ಧಾರ್ಮಿಕ  ಹಿನ್ನೆಲೆ ಇದೆ. 1930ರ ದಶಕದಲ್ಲಿ ತನ್ನದು ಒಂದು ಹಿಂದೂ ಸಾಂಸ್ಕೃತಿಕ ಪಕ್ಷ ಎಂದು ಬಣ್ಣಿಸಿಕೊಂಡಿದ್ದ ಆರೆಸ್ಸಸ್ ರಾಜಕೀಯಕ್ಕೂ ತನಗೂ ಸಂಬಂಧವಿಲ್ಲ ಎಂದು 1948ರ ದಶಕದಲ್ಲಿ ಆಗಿನ ಗೃಹ ಮಂತ್ರಿ ವಲ್ಲಭಾಯಿ ಪಟೇಲ್ ಅವರಿಗೆ ವಾಗ್ದಾನ ನೀಡಿತ್ತು. ಆದರೆ 2014ರ ಚುನಾವಣೆಯ ವೇಳೆಗೆ ಈ ವಾಗ್ದಾನವನ್ನು ಮುರಿದು ಸಕ್ರಿಯವಾಗಿ ಚುನಾವಣಾ ರಾಜಕೀಯದಲ್ಲಿ ಬಿಜೆಪಿ ಪರವಾಗಿ ಪಾಲ್ಗೊಂಡಿತ್ತು

ಈ ಮಧ್ಯದ ಸುಮಾರು 80 ವರ್ಷಗಳ ಕಾಲಘಟ್ಟದ ವಿಶ್ಲೇಷಣೆ ಮಾಡಿದಾಗ 1925-1952ರವರೆಗೆ ಸುಮಾರು ಎರಡೂವರೆ ದಶಕಗಳ ಕಾಲ ಆರೆಸ್ಸಸ್ ನ ಹಿಂದುತ್ವದ ಧಾರ್ಮಿಕ ಮತೀಯವಾದವನ್ನು ಬಿತ್ತನೆಯ ಕಾಲವೆಂದೇ ಪರಿಗಣಿಸಲಾಗುತ್ತದೆ. ಈ ಕಾಲಘಟ್ಟದಲ್ಲಿ ಹಿಂದೂ ಮಹಾಸಭಾ ಎನ್ನುವ ಮತ್ತೊಂದು ಮೂಲಭೂತವಾದಿ ಸಂಘಟನೆಯೊಂದಿಗೆ ಕೈ ಜೋಡಿಸಿದ್ದ ಆರೆಸ್ಸಸ್ ‘ಹಿಂದೂ; ಹಿಂದೂಯಿಸಂ, ಹಿಂದುತ್ವ’ ಎನ್ನುವ ತತ್ವವನ್ನು ಹೆಡ್ಗೇವಾರ್, ಗೋಳ್ವಲ್ಕರ್, ಸಾವರ್ಕರ್ ಎನ್ನುವ ಹಿಂದುತ್ವವಾದಿಗಳ ಮೂಲಕ ಸಮಾಜದಲ್ಲಿ ಬಿತ್ತನೆ ಮಾಡಿತು

1952 – 1979ರ ಕಾಲಘಟ್ಟದಲ್ಲಿ ರಾಜಕೀಯರಂಗದಲ್ಲಿ ತನ್ನ ಬಲವನ್ನು, ಪ್ರಭಾವವನ್ನು ಪರೀಕ್ಷೆ ಮಾಡಲು ಆರೆಸ್ಸಸ್RSS-mohanbhagwat ‘ಭಾರತೀಯ ಜನಸಂಘ’ ಎನ್ನುವ ರಾಜಕೀಯ ಪಕ್ಷವನ್ನು ಸ್ಥಾಪಿಸಿ ಆ ಮೂಲಕ 6 ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಪರ್ಧಿಸಿತು. ಕಳೆದ 25 ವರ್ಷಗಳ ತಾನು ಬಿತ್ತಿದ ಧಾರ್ಮಿಕ ಮತೀಯವಾದದ, ಹಿಂದುತ್ವ ಫೆನಟಿಸಂನ ಬೀಜಗಳನ್ನು ಈ ಕಾಲಘಟ್ಟದ ರಾಜಕೀಯದ ಉಳುಮೆಯಲ್ಲಿ ಪ್ರಯೋಗಗಳನ್ನು ನಡೆಸಿತು. 1967ರಲ್ಲಿ ವಿವಿಧ ಪಕ್ಷಗಳೊಂದಿಗೆ ಕೈಜೋಡಿಸಿ ಉತ್ತರ ಪ್ರದೇಶದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಪಾಲ್ಗೊಂಡಿತ್ತು. ಉಗ್ರ ದಾರ್ಮಿಕ ಮತಾಂಧತೆಯ ಮೂಲಕ ಅನೇಕ ಕೋಮು ಗಲಭೆಗಳಿಗೆ ಪ್ರಚೋದನೆ ನೀಡಿತ್ತು ಮತ್ತು ಸಂಯೋಜಿಸಿತ್ತು.

1980ರಲ್ಲಿ ಭಾರತೀಯ ಜನಸಂಘವನ್ನು ವಿಸರ್ಜಿಸಿ ‘ಭಾರತೀಯ ಜನತಾ ಪಕ್ಷ'(ಬಿಜೆಪಿ) ಎನ್ನುವ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿತು. ಆರಂಭದಲ್ಲಿ 1984ರಲ್ಲಿ ಕೇವಲ 2 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಪಕ್ಷಕ್ಕೆ 1989ರ ನಂತರದ ದಶಕಗಳು ಫಸಲಿನ ಕಾಲಘಟ್ಟವಾಗಿತ್ತು. ಧಾರ್ಮಿಕ ಮೂಲಭೂತವಾದ, ಹಿಂದುತ್ವದ ಫೆನಟಿಸಂ ಅನ್ನು ಸಮಾಜದಲ್ಲಿ ಬಿತ್ತಿ ಉಳುಮೆ ಮಾಡಿದ ಆರೆಸ್ಸಸ್ 70 ವರ್ಷಗಳ ನಂತರ ಅದರ ಫಸಲನ್ನು ಅನುಭವಿಸತೊಡಗಿತು. ಇದರ ಫಲವಾಗಿ 80 ವರ್ಷಗಳ ನಂತರ ಕೇಂದ್ರದಲ್ಲಿ ಸರಳ ಬಹುಮತದೊಂದಿಗೆ ಅಧಿಕಾರವನ್ನು ಪಡೆದುಕೊಂಡಿತು.

ಭಾರತದ ರಾಜಕೀಯದ ಕುರಿತಾಗಿ ಸಂಶೋಧನೆ ನಡೆಸಿದ ಇಟಾಲಿಯನ್ ಸಂಶೋಧಕಿ ‘ಮಾಜರಿಯಾ ಕೆಸೋಲರಿ’ ಅವರು  “ಇಟಾಲಿಯನ್ ಫ್ಯಾಸಿಸ್ಟ್ ಪ್ರತಿನಿಧಿಗಳು (ಮಸಲೋನಿ ಮತ್ತಿತರರು) ಮತ್ತು ಹಿಂದೂ ರಾಷ್ಟ್ರೀಯವಾದಿಗಳ ನಡುವಿನ ನೇರ ಸಂಪರ್ಕಗಳನ್ನು ವಿವರವಾಗಿ ಪರಿಶೀಲಿಸಿದಾಗ ಇದು ಹಿಂದೂ ರಾಷ್ಟ್ರೀಯವಾದಿಗಳು ಫ್ಯಾಸಿಸಂನ ಕುರಿತಾಗಿ ಕೇವಲ ಮೇಲ್ಮಟ್ಟದ ಕುತೂಹಲದಿಂದ ಅಥವಾ  ಕೆಲವು ವ್ಯಕ್ತಿಗಳ ಆ ಕ್ಷಣದ ಕೌತುಕದಿಂದ ಆಸಕ್ತಿ ಬೆಳಸಿಕೊಂಡಿದ್ದಾರೆ ಎಂದು ಹೇಳಲಾಗುವುದಿಲ್ಲ. ಆದರೆ ಹಿಂದೂ ರಾಷ್ಟ್ರೀಯವಾದಿಗಳು ಫ್ಯಾಸಿಸಂ ಅನ್ನು ಒಂದು ಸಂಪ್ರದಾಯವಾದಿ ನೆಲೆಯ ಕ್ರಾಂತಿ ಎಂದು ನಂಬುತ್ತಾರೆ ಮತ್ತು ಇಟಾಲಿಯನ್ ಮಾದರಿಯ ಸರ್ವಾಧಿಕಾರಿ ಆಡಳಿತದ ಕುರಿತಾಗಿ ಅಧ್ಯಯನ ನಡೆಸಿದ್ದಾರೆ” ಎಂದು ಹೇಳುತ್ತಾರೆ.

ಆರೆಸ್ಸಸ್ ಸ್ಥಾಪಕರಲ್ಲಿ ಒಬ್ಬರಾದ ಮೂಂಜೆ ಅವರು 19 ಮಾರ್ಚ್ 1931ರಂದು ಇಟಾಲಿಯನ್ ಸರ್ವಾದಿಕಾರಿ ಮಸಲೋನಿಯವರನ್ನು ವ್ಯಕ್ತಿಗತವಾಗಿ ಭೇಟಿಯಾಗುತ್ತಾರೆ. ಅದನ್ನು ಮೂಂಜೆ ತಮ್ಮ ಡೈರಿಯಲ್ಲಿ ಬರೆದುಕೊಂಡಿದ್ದಾರೆ. ಅದರ ಒಂದು ಸಾರಾಂಶ ಹೀಗಿದ, “ನಾನು ಅವರ( ಮಸಲೋನಿ) ಕೈ ಕುಲುಕಿದೆ ಮತ್ತು ನಾನು ಡಾ.ಮೂಂಜೆ ಎಂದು ಪರಿಚಯಿಸಿಕೊಂಡೆ. ಅವರಿಗೆ ನನ್ನ ಕುರಿತಾಗಿ ತಿಳುವಳಿಕೆ ಇತ್ತು ಮತ್ತು ಇಂಡಿಯಾದ ಸ್ವಾತಂತ್ರ ಹೋರಾಟವನ್ನು ಹತ್ತಿರದಿಂದ ಗಮನಿಸುತ್ತಿದ್ದರು. ನಾನು ನಮ್ಮ ಸ್ವಯಂಸೇವಕರಿಗೆ ಮಿಲಿಟರಿ ತರಬೇತಿಯ ಅವಶ್ಯಕತೆ ಇದೆ ಮತ್ತು ನಮ್ಮ ಹುಡುಗರು ಇಂಗ್ಲೆಂಡ್, ಪ್ರಾನ್ಸ್, ಜರ್ಮನಿಯ ಮಿಲಿಟರಿ ಶಾಲೆಗಳಗೆ ಭೇಟಿ ಕೊಡುತ್ತಿದ್ದಾರೆ. ನಾನು ಈಗ ಇದೇ ಉದ್ದೇಶಕ್ಕಾಗಿ ಇಟಲಿಗೆ ಬಂದಿದ್ದೇನೆ ಮತ್ತು ನನ್ನ ಮಿಲಿಟಿರಿ ಶಾಲೆಯ ಭೇಟಿಯನ್ನು ನಿಮ್ಮ ಅಧಿಕಾರಿಗಳು ಸುಗುಮವಾಗಿಸಿದ್ದಾರೆ. ನಾನು ಈ ಮುಂಜಾನೆ ಮತ್ತು ಮಧ್ಯಾಹ್ನ ಫ್ಯಾಸಿಸ್ಟ್ ಸಂಸ್ಥೆಗಳನ್ನು ನೋಡಿದೆ ಮತ್ತು ಅದರಿಂದ ತುಂಬಾ ಪ್ರಭಾವಿತನಾಗಿದ್ದೇನೆ. ಇಟಲಿಗೆ ಈ ಮಾದರಿಯ ಫ್ಯಾಸಿಸ್ಟ್ ಸಂಘಟನೆಗಳ ಅವಶ್ಯಕತೆ ಇದೆ. ಈ ಫ್ಯಾಸಿಸಂ ಸಂಘಟನೆಗಳಲ್ಲಿ ನನಗೆ ಅಂತಹ ವಿವಾದ ಎನ್ನುವಂತಹ ಅಂಶಗಳೇನು ಕಾಣಿಸಲಿಲ್ಲ. ನನ್ನ ಮಾತುಗಳಿಂದ ಮಸಲೋನಿ ಖುಷಿಯಾಗಿದ್ದರು” ಎಂದು ಬರೆದಿದ್ದಾರೆ.

1940ರಲ್ಲಿ ಮದುರಾದಲ್ಲಿ ಹಿಂದೂ ಮಹಾಸಭಾದ 22ನೇ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಾ ಸಾವರ್ಕರ್, “ಕೇವಲ ನಾಜಿ ಎನ್ನುವ ಕಾರಣಕ್ಕೆ ಹಿಟ್ಲರ್ ನನ್ನು ಒಬ್ಬ ರಾಕ್ಷಸ ಎಂದು ಕರೆಯುವುದು ತಪ್ಪಾಗುತ್ತದೆ. ಏಕೆಂದರೆ ನಾಜಿಯಿಸಂ ಜರ್ಮನಿಯನ್ನು ಕಾಪಾಡಿದೆ.” ಎಂದು ಭಾಷಣ ಮಾಡುತ್ತಾ ಮುಂದುವರೆದು ನೆಹರೂ ಅವರನ್ನು ಹೀಗೆಳೆಯುತ್ತ  “ಜರ್ಮನಿ, ಜಪಾನ್, ರಷ್ಯಾ ರಾಷ್ಟ್ರಗಳಿಗೆ ಒಂದು ನಿರ್ದಿಷ್ಟ ಮಾದರಿಯ ವ್ಯವಸ್ಥೆಯನ್ನು ಆರಿಸಿಕೊಳ್ಳಬೇಕೆಂದು ಹೇಳಲು ನಾವ್ಯಾರು? ಜರ್ಮನಿಗೆ ಏನು ಬೇಕೆಂದು ನೆಹರೂವಿಗಿಂತಲೂ ಹಿಟ್ಲರ್ ಗೆ ಚೆನ್ನಾಗಿ ಗೊತ್ತು. ಅದರಲ್ಲಿಯೂ ಈ ನಾಜಿಸಂನ ಸ್ಪರ್ಶದಿಂದ ಜರ್ಮನಿ, ಇಟಲಿ ರಾಷ್ಟ್ರಗಳು ಇಂದು ಶಕ್ತಿಶಾಲಿಯಾಗಿ ಬೆಳೆದಿವೆ, ಪುನವೃದ್ಧಿಯಾಗಿವೆ” ಎಂದು ಹೇಳಿದ್ದಾರೆ. 2014ರ ಚುನಾವಣೆಯ ಸಂದರ್ಭದಿಂದ ಇಡೀ ಸಂಘ ಪರಿವಾರದ ನಾಯಕರು ಬಳಸಿದ ಫೆನಟಿಸಂನ, ಹಿಂಸಾಚಾರದ ಭಾಷೆಗಳು ಹಿಟ್ಲರ್ ನ ನಾಜಿ ಪಾರ್ಟಿಯ ಫ್ಯಾಸಿಸಂ ಅನ್ನು ಹೋಲುತ್ತವೆ. ರಾಷ್ಟ್ರ ಮತ್ತು ಅದರ ಪ್ರಜಾಪ್ರಭುತ್ವ ಮಾದರಿಯ ಗಣರಾಜ್ಯ ವ್ಯವಸ್ಥೆಯ ಕುರಿತಾಗಿ ಅಸಹನೆಯಿಂದಿರುವ ಆರೆಸ್ಸಸ್ ಅದಕ್ಕೆ ಪರ್ಯಾಯವಾಗಿ ಹಿಂದೂರಾಷ್ಟ್ರವೆಂದು ಹೇಳುತ್ತಿದೆಯಾದರೂ ಅದರ ಸ್ವರೂಪದ ಕುರಿತಾಗಿ ಅವರಲ್ಲಿ ಯಾವುದೇ ಗೊಂದಲಗಳಿಲ್ಲ.

ಇದು ಆರೆಸ್ಸಸ್ ಗೆ ಫ್ಯಾಸಿಸಂ ಕುರಿತು ಇರುವ ಒಲವನ್ನು ಸಾಬೀತುಪಡಿಸುತ್ತದೆ

1920ರ ದಶಕದಲ್ಲಿ ಯುರೋಪ್ ರಾಷ್ಟ್ರಗಳಲ್ಲಿ ಈ ಫ್ಯಾಸಿಸ್ಟ್ ಪದ ಮತ್ತು ಇದರ ವ್ಯವಸ್ಥೆ ಆಸ್ತಿತ್ವಕ್ಕೆ ಬಂತು. ಜರ್ಮನಿಯ ಗುಟೇನ್ಬರ್ಗ ಯೂನಿವರ್ಸಿಟಿಯಲ್ಲಿ ಫ್ರೊಫೆಸರ್ ಆಗಿರುವ ಡಾ. ಮಾರ್ಕ ಟ್ರಿಶ್ಚ್ ಅವರು ಫ್ಯಾಸಿಸಂ ಅನ್ನು ಈ ಕೆಳಗಿನಂತೆ ವಿವರಿಸುತ್ತಾರೆ ಎಂದು ಚಿಂತಕ ಪಾರ್ಥ ಬ್ಯಾನರ್ಜಿಯವರು ತಮ್ಮ ಸಂಶೋಧನ ಲೇಖನಗಳಲ್ಲಿ ವಿವರಿಸುತ್ತಾರೆ. ಉದಾಹರಣೆಗೆ ಫ್ಯಾಸಿಸಂನ ಪ್ರಮುಖ ಲಕ್ಷಣಗಳೆಂದರೆ

  1. ಸಾವಿರಾರು ವರ್ಷಗಳ ಹಿಂದಿನ ಸಂಪ್ರದಾಯಗಳಿಗೆ ( ಭಾರತದ ಸಂದರ್ಭದಲ್ಲಿ ವರ್ಣಾಶ್ರಮದ ವ್ಯವಸ್ಥೆಗೆ) ಮರಳಬೇಕೆಂಬ ಸಿದ್ಧಾಂತ
  2. ಶ್ರೇಣೀಕೃತ, ಮಿಲಿಟರಿ ಆಧಾರಿತ, ಕಾರ್ಪೋರೇಟ್ ಸಮಾಜದ ನಿರ್ಮಾವನ್ನು ಕಟ್ಟಬೇಕೆಂಬ ಸಿದ್ಧಾಂತ
  3. ನಾಯಕತ್ವದ, ನಾಯಕನ ವೈಭವೀಕರಣ. ನಾಯಕನ ಮಾತೇ ಅಂತಿಮವೆನ್ನುವ ಸಿದ್ಧಾಂತ
  4. ರಾಷ್ಟ್ರೀಯತೆಯನ್ನು ದೇಶಪ್ರೇಮದೊಂದಿಗೆ ಸಮೀಕರಿಸಿ ವೈಭವೀಕರಿಸುವುದು
  5. ಈ ರಾಷ್ಟ್ರೀಯತೆಯ ಆಧಾರದ ಮೇಲೆಯೇ ವಿದೇಶಾಂಗ ನೀತಿಗಳನ್ನು ರೂಪಿಸಿವುದು

ಹಾಗಾದರೆ ಆರೆಸ್ಸಸ್ ಮತ್ತು ಅದರ ಅಂಗ ಪಕ್ಷಗಳಾದ ಬಿಜೆಪಿ, ವಿಎಚ್ಪಿ, ಬಜರಂಗದಳಗಳು ಫ್ಯಾಸಿಸಂನ ಮೇಲಿನ ಗುಣಲಕ್ಷಣಗಳನ್ನು ಹೊಂದಿವೆಯೇ?? ಉತ್ತರ ಹೌದು. ಈ ಸಂಘ ಪರಿವಾರದ ಎಲ್ಲಾ ನೀತಿನಿಯಮಗಳು ಮೇಲಿನ ಫ್ಯಾಸಿಸಂನ ಗುಣಲಕ್ಷಣಗಳನ್ನು ಹೊಂದಿವೆ

ಆರೆಸ್ಸಸ್ ಕಳೆದ ಎಂಬತ್ತು ವರ್ಷಗಳಿಂದ ಪ್ರತಿಪಾದಿಸುತ್ತಾ ಬಂದಿರುವ  ಭಾರತೀಯ ಸಂಸ್ಕೃತಿ, ಭಾರತೀಯ ಸಂಸ್ಕಾರrss-2 ಅಂದರೆ ಹಿಂದೂ ಸಂಸ್ಕೃತಿ ಮತ್ತು ಹಿಂದೂ ಸಂಸ್ಕಾರ, ಇದು ಫ್ಯಾಸಿಸಂನ ಮೊದಲ ಸಿದ್ಧಾಂತ. ಅಂದರೆ ವೈವಿಧ್ಯತೆಯನ್ನೇ ನಿರಾಕರಿಸುವುದು. ಬಹುರೂಪಿ ಸಂಸ್ಕೃತಿಯನ್ನೇ ಧ್ವಂಸಗೊಳಿಸುವುದು. ತನ್ನ ದಿನನಿತ್ಯದ ಬೈಠಕ್ಗಳಲ್ಲಿ, ಮಿಲಿಟರಿ ಶಾಖೆಗಳಲ್ಲಿ, ಸ್ವಯಂಸೇವಕರ ಸಮಾವೇಶಗಳಲ್ಲಿ ಬೋಧಿಸುವುದು ಮತ್ತು ಕಡ್ಡಾಯವಾಗಿ ಪಾಲಿಸಬೇಕೆಂದು ಒತ್ತಾಯಿಸುವುದು ಪ್ರಾಚೀನ ಕಾಲದ ಭರತವರ್ಷವನ್ನು. ಇದು ಭೂಖಂಡದಲ್ಲೇ ಅತ್ಯುತ್ತಮವಾದದ್ದೆಂದು ಬಣ್ಣಿಸುತ್ತದೆ ಈ ಆರೆಸ್ಸಸ್. ಮುಂದುವರೆದು ಇಂಥ ಶ್ರೇಷ್ಠ ಹಿಂದೂ ರಾಷ್ಟ್ರದ ಅವನತಿ ಪ್ರಾರಂಭವಾಗಿದ್ದು ಹಿಂದೂಗಳ ನಡುವಿನ ಒಡಕಿನಿಂದ (ಅದರೆ ಜಾತೀಯತೆ ಎನ್ನುವ ಪದವನ್ನು ಎಲ್ಲಿಯೂ ಬಳಸುವುದಿಲ್ಲ) ಮತ್ತು ಮುಸ್ಲಿಂ ದೊರೆಗಳ, ಬ್ರಿಟೀಷರ ಆಕ್ರಮಣದಿಂದ ನಮ್ಮ ದೇಶದ ಪಾವಿತ್ರ್ಯವೇ ನಾಶವಾಯಿತು ಎಂದು ಅಭಿಪ್ರಾಯ ಪಡುತ್ತಾರೆ. ಹಿಂದೂ ಧರ್ಮದ ಅಖಂಡ ಭಾರತವನ್ನು ಅಂದರೆ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ, ಗಂಧಾರದಿಂದ ಭ್ರಹ್ಮದೇಶದವರೆಗೆ (ಉತ್ತರದ ಟಿಬೆಟ್ ನಿಂದ ದಕ್ಷಿಣದ ತುದಿಯವರೆಗೆ ಮತ್ತು ಪಶ್ಚಿಮದ ಅಫಘಾನಿಸ್ತಾನದಿಂದ ಮಯಮಾರ್, ಥೈಲಾಂಡ್, ಕಾಂಬೋಡಿಯ, ಲ್ಹಾಸಾಗಳನ್ನೊಳಗೊಂಡ ವಾಯುವ್ಯ ಏಷ್ಯಾದವೆರೆಗೆ) ಕಟ್ಟಬೇಕೆಂಬುದೇ ತಮ್ಮ ಸಿದ್ಧಾಂತವೆಂದು ಇವರು ಪ್ರತಿಪಾದಿಸುತ್ತಾರೆ. ಇದು ಮೇಲೆ ಹೇಳಿದ ಫ್ಯಾಸಿಸಂ ಮೊದನೇ ಗುಣಲಕ್ಷಣವನ್ನು ಸಂಪೂರ್ಣವಾಗಿ ಪ್ರತಿಪಾದಿಸುತ್ತದೆ.

ಆರೆಸ್ಸಸ್ ಪಕ್ಷದ ಸಂವಿಧಾನವನ್ನು ಅದರ ಚೌಕಟ್ಟನ್ನು ವಿವರವಾಗಿ ಪರಿಶೀಲಿಸಿದಾಗ ಅದು ಮಿಲಿಟರಿಯ ರೆಜಿಮೆಂಟ್ ಮಾದರಿಯನ್ನು ಅಳವಡಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ. ಆರೆಸ್ಸಸ್ ಮುಖ್ಯಸ್ಥನನ್ನು ಸರಸಂಚಾಲಕ ರೆಂದು ಕರೆಯುತ್ತಾರೆ. ಅಂದರೆ ಪರಮೋಚ್ಛ ನಾಯಕ. ಅಂದರೆ ಮಿಲಿಟರಿ ಮುಖ್ಯಸ್ಥನಂತೆ. ಈ ಸರ ಸಂಚಾಲಕರನ್ನು ಯಾವುದೇ ಅಂತರಿಕ ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ಚುನಾಯಿಸುವುದಿಲ್ಲ. ಅಲ್ಲಿ ಅಂತರಿಕ ಚುನಾವಣೆಯೇ ಇಲ್ಲ. ಆತನ ಪಾತ್ರ ಮತ್ತು ಹೊಣೆಗಾರಿಕೆಗಳು ಪರಮೋಚ್ಛ ನಾಯಕನ ಹೊಣೆಗಾರಿಕೆಗಳಿಗೆ ಸಮ. ಪ್ರತಿ ವರ್ಷ ವಿಜಯದಶಮಿ ದಿನದಂದು ನಾಗಪುರದ ಆರೆಸ್ಸಸ್ ನ ಕೇಂದ್ರ ಕಛೇರಿಯಲ್ಲಿ ಈ ಸ್ವರಸಂಚಾಲಕ ಮಾಡುವ ಭಾಷಣ ಮತ್ತು ನೀಡುವ ಸಂದೇಶವೇ ಸಂಘಪರಿವಾರಕ್ಕೆ ಮುಂದಿನ ಗುರಿಗಳ ಕುರಿತಾದ ಆಜ್ಞೆಯ ಸ್ವರೂಪ. ಆತನ ಮಾತೇ ಅಂತಿಮ. ಅವರು ಹೇಳಿದ್ದು ಲಕ್ಷ್ಮಣ ರೇಖೆ. ಡಾ.ಕೆ.ಬಿ.ಹೆಡ್ಗೇವಾರ್, ಸಾವರ್ಕರ್ ಮತ್ತು ಗೋಳ್ವಲ್ಕರ್ ಅವರನ್ನು ಇಂದಿಗೂ ದೇವತಾ ಸ್ವರೂಪಿಗಳಾಗಿಯೇ ಪೂಜಿಸುತ್ತಾರೆ. ಈ ಮೂವರನ್ನು ಅವತಾರ ಪುರುಷರೆಂಬ ಪಟ್ಟವನ್ನು ಕಟ್ಟಲಾಗಿದೆ. ಇವರ ಕುರಿತಾಗಿ ದಂತಕತೆಗಳನ್ನು ದಿನನಿತ್ಯದ ಬೈಠಕ್ಗಳಲ್ಲಿ, ತಮ್ಮ ಶಾಖೆಗಳಲ್ಲಿ, ಸಮಾವೇಶಗಳಲ್ಲಿ ಭಕ್ತಿಯಿಂದ ಮಾತನಾಡುತ್ತಾರೆ. ಈ ಅಂಶಗಳು ಫ್ಯಾಸಿಸಂನ ಎರಡನೇ ಮತ್ತು ಮೂರನೇ ಅಂಶಗಳನ್ನು ಧೃಡೀಕರಿಸುತ್ತದೆ

ಮತ್ತೊಂದು ಕಡೆ ಆರೆಸ್ಸಸ್ ರಾಜಕೀಯ ಪಕ್ಷವಾದ ಬಿಜೆಪಿಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಅಧಿಕಾರವನ್ನು ಕೊಡುವುದಿಲ್ಲ. ಆರೆಸ್ಸಸ್ ಬಯಸುವುದು ತನ್ನ ಐಡಿಯಾಜಿಯನ್ನು ರಾಜಕೀಯ ನೆಲೆಯಲ್ಲಿ ವಿಸ್ತರಿಸುವುದಕ್ಕಾಗಿ ಬಿಜೆಪಿ ಪಕ್ಷ ಕಾನೂನುಗಳನ್ನು ರೂಪಿಸಬೇಕು. ತಾನು ಸ್ವತಃ ರಾಜಕೀಯವನ್ನು ಪ್ರವೇಶಿಸಲು ನಿರಾಕರಿಸುವ ಆರೆಸ್ಸಸ್ ‘ನಮ್ಮ ಸಾಂಸ್ಕೃತಿಕ ನೀತಿಗಳೇ ನಮ್ಮ ರಾಜಕೀಯ’ ಎಂದು ಹೇಳುತ್ತದೆ. ತನ್ನ ಐಡಿಯಾಲಜಿಯನ್ನು ಪ್ರಶ್ನಿಸುವುದಿರಲಿ, ಚರ್ಚೆಗೆ ಎಳೆದುತಂದವರನ್ನು ನಿರ್ದಾಕ್ಷೀಣ್ಯವಾಗಿ ಹೊರ ತಳ್ಳುತ್ತದೆ ಆರೆಸ್ಸಸ್. ಉದಾಹರಣೆಗೆ ಜನಸಂಘ ರಾಜಕೀಯ ಪಕ್ಷವಾಗಿದ್ದ ಎಪ್ಪತ್ತರ ದಶಕದಲ್ಲಿ ಆಗಿನ ಅಧ್ಯಕ್ಷ  ಬಲರಾಜ್ ಮಾಧೋಕ್ ಅವರು ಜನಸಂಘದ ಪಧಾದಿಕಾರಿಗಳನ್ನು ಆರೆಸ್ಸಸ್ ಸಂಘಟನೆಯಿಂದ ಹೇರುವುದನ್ನು ನಿಲ್ಲಿಸಿ ಜನಸಂಘದ ಒಳಗಡೆಯಿಂದಲೇ ಚುನಾವಣೆಯ ಮೂಲಕ ಆಯ್ಕೆ ಮಾಡಬೇಕು ಎಂದು ಪತ್ರ ಬರೆದಿದ್ದರು. ಆ ಕೂಡಲೆ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಲಾಯಿತು. ಪಾಕಿಸ್ತಾನಕ್ಕೆ ಭೇRSSಟಿ ಕೊಟ್ಟ ಸಂದರ್ಭದಲ್ಲಿ ಅಡ್ವಾನಿ ಜಿನ್ನಾ ಅವರನ್ನು ಪ್ರಶಂಸಿದ ಕಾರಣಕ್ಕೆ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದಲೇ ಪದಚ್ಯುತಿಗೊಳಿಸಲಾಯಿತು. ತೀರಾ ಇತ್ತೀಚೆಗೆ ಆರೆಸ್ಸಸ್ ವಿರುದ್ಧ ಭಿನ್ನ ರಾಗ ಹಾಡಿದ ಹಿರಿಯ ರಾಜಕಾರಣಿ ಜಸ್ವಂತ್ ಸಿಂಗ್ ಅವರನ್ನು ಪಕ್ಷದಿಂದಲೇ ಉಚ್ಛಾಟನೆ ಮಾಡಲಾಯಿತು. ಇತಿಹಾಸಕಾರ ಡಿ.ಆರ್.ಗೋಯಲ್ ಅವರು “ಒಂದು ಕಾಲದ ಜನಸಂಘ ಅಥವಾ ಇಂದಿನ ಬಿಜೆಪಿ ಅದು ಬೆಳವಣಿಗೆ ಕಂಡುಕೊಳ್ಳುವುದು ರಾಜಕೀಯವಾಗಿ ಅಲ್ಲ, ಆರೆಸ್ಸಸ್ ಸಂಘಟನೆಯಲ್ಲಿ ಮಾತ್ರ. ಏಕೆಂದರೆ ಆರೆಸ್ಸಸ್ ಅದಕ್ಕೆ ಜನ್ಮ ನೀಡಿದ್ದು, ಹೀಗಾಗಿ ಆರೆಸ್ಸಸ್ ಗೆ ಶರಣಾಗಲೇಬೇಕು. ಬಿಜೆಪಿ ಪಕ್ಷವು ನಾವು ವಿಭಿನ್ನ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂದು ಹೇಳಿದರೂ ವಾಸ್ತವದಲ್ಲಿ ಆರೆಸ್ಸಸ್ ಅನ್ಯ ಸಂಸ್ಕೃತಿಯನ್ನು ಮಾನ್ಯ ಮಾಡಿರುವುದೇ ಇಲ್ಲ. ಸಾರ್ವಜನಿಕ ಹೇಳಿಕೆಗೆ ಮಾತ್ರ ಇದನ್ನು ಸೀಮಿತಗೊಳಿಸಲಾಗುತ್ತದೆ, ಆಚರಣೆಗೆ ಆಲ್ಲ. ಉದಾಹರಣೆಗೆ ಗುಜರಾತ್ ಹತ್ಯಾಕಾಂಡ ನಡೆದ 2002ರ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ವಾಜಪೇಯಿ ಸಾರ್ವಜನಿಕವಾಗಿ ರಾಜಧರ್ಮ ಪಾಲಿಸುವಂತೆ ಹೇಳಿಕೆ ಇತ್ತರು. ಆದರೆ ಆಚರಣೆಯಲ್ಲಿ ಮೋದಿ ಸರ್ಕಾರವನ್ನು ಪದಚ್ಯುತಗೊಳಿಸಲಿಲ್ಲ. ತನ್ನ ಐಡಿಯಾಲಜಿಯನ್ನು ಸಹಿಸಿಕೊಳ್ಳುವ ನಾಯಕ ಇರುವವರೆಗೂ ಆರೆಸ್ಸಸ್ ಸಂತುಷ್ಟದಿಂದಿರುತ್ತದೆ” ಎಂದು ಹೇಳುತ್ತಾರೆ. ಇದು ನಿಜ. ಮೊನ್ನೆ ಪ್ರಧಾನಿ ನರೇಂದ್ರ ಮೋದಿ ‘ನಮ್ಮ ಸರ್ಕಾರವು ಯಾವುದೇ ಬಗೆಯ ಅಸಹನೆ, ಹಲ್ಲೆಗಳನ್ನು ಸಹಿಸುವುದಿಲ್ಲ.ಇಲ್ಲಿ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುತ್ತೇವೆ’ ಎಂದು ಹೇಳಿಕೆ ಇತ್ತರು. ಆರೆಸ್ಸಸ್ ಅದನ್ನು ಹೇಳಿಕೆ ಮಟ್ಟದಲ್ಲಿಯೇ ಇರಲು ಬಯಸುತ್ತದೆ. ಆಚರಣೆಯಲ್ಲಿ ಅಲ್ಲ. ಇದು 56 ಇಂಚಿನ ಎದೆಯ ಮೋದಿಗೂ ಸಹ ಗೊತ್ತು. ಇದು ಮೂಲಭೂತವಾದದ ಮನಸ್ಥಿತಿ,  ಚಹರೆ, ಸ್ವರೂಪ

ಕಳೆದ ಎಂಬತ್ತು ವರ್ಷಗಳಲ್ಲಿ ಮೊದಲ ಎಪ್ಪತ್ತು ವರ್ಷಗಳು ಕೇವಲ ಬ್ರಾಹ್ಮಣರ, ಮಾರ್ವಾಡಿಗಳ ಮತ್ತು ಬನಿಯಾಗಳ ಪಕ್ಷವೆಂದು ಗೇಲಿಗೊಳಗಾಗುತ್ತಿದ್ದ ಸಂಘ ಪರಿವಾರಕ್ಕೆ ಇಂದು ಹಿಂದುಳಿದವರು, ದಲಿತರು, ಆದಿವಾಸಿಗಳು, ಕಾರ್ಮಿಕರನ್ನು ಒಳಗೊಂಡಂತಹ ಒಂದು ವ್ಯಾಪಕವಾದ ನೆಲೆಗಟ್ಟು ಗಟ್ಟಿಗೊಳ್ಳತೊಡಗಿದೆ. ವರ್ಣಾಶ್ರಮದ ಶ್ರೇಣೀಕೃತ ವ್ಯವಸ್ಥೆಯಲ್ಲಿ ಊರ ಹೊರಗೆ ಅಸ್ಪೃಶ್ಯರಾಗಿ ಬದುಕುವ ತಳ ಸಮುದಾಯಗಳು ಇಂದು ನೀವು ಬಹುಸಂಖ್ಯಾತರು ಎನ್ನುವ ಆರೆಸ್ಸಸ್ ನ ಪ್ರಚೋದನೆಯ ಮೋಡಿಗೆ ಒಳಗಾಗಿ ಇಂದು ಹಿಂದೂ ವರ್ಸಸ್ ಮುಸ್ಲಿಂರು ಎಂದರೆ ತಳಸಮುದಾಯಗಳು ವರ್ಸಸ್ ಮುಸ್ಲಿಂ ಸಮುದಾಯಗಳು ಎನ್ನುವ ಅಖಾಡ ರೂಪುಗೊಂಡು ತಳಸಮುದಾಯಗಳು ಬಾಣದಂತೆ ಬಳಕೆಗೊಳ್ಳತೊಡಗಿದ್ದಾರೆ

(‘ಚಿಂತನ ಪ್ರಕಾಶನ’ದಿಂದ ಪ್ರಕಟಣೆಗೆ ಸಿದ್ಧವಾಗಿರುವ ಹಿಂದುತ್ವದ ರಾಜಕಾರಣ ಪುಸ್ತಕದಿಂದ ಆಯ್ದ ಭಾಗ)

ಹಂಪಿಯಲ್ಲಿ ಇದೇ ಶನಿವಾರ-ಭಾನುವಾರದಂದು “ನಾವು ನಮ್ಮಲ್ಲಿ” ಕಾರ್ಯಕ್ರಮ

ಆತ್ಮೀಯರೇ,

ನಮ್ಮ ವರ್ತಮಾನ.ಕಾಮ್ ಓದುಗರಿಗೆ “ನಾವು ನಮ್ಮಲ್ಲಿ” ಮತ್ತು ಅದರ ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಪರಿಚಯಿಸುವ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ. ವರ್ತಮಾನ.ಕಾಮ್ ಆರಂಭವಾದಾಗಿನಿಂದಲೂ “ನಾವು ನಮ್ಮಲ್ಲಿ”ಯೊಡನೆ ವರ್ತಮಾನ ಬಳಗಕ್ಕೆ ಅವಿನಾಭಾವ ಸಂಬಂಧವಿದೆ. ನಿಮಗೆ ಗೊತ್ತಿರುವಂತೆ ವರ್ತಮಾನ.ಕಾಮ್ ಆರಂಭಿಸಬೇಕೆಂಬ ಯೋಚನೆ ಬಂದಿದ್ದೇ ನಾನು 2011 ರಲ್ಲಿ ಚಿತ್ರದುರ್ಗದಲ್ಲಿ ನಡೆದ “ನಾವು ನಮ್ಮಲ್ಲಿ” ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಂದರ್ಭ ಬಂದಾಗ. ಪ್ರಾಮಾಣಿಕತೆ ಮತ್ತು ಬದ್ಧತೆಯನ್ನು ಹೊಂದಿರುವ ಯುವ ತಲೆಮಾರಿನ ಸಮಾಜಮುಖಿ ಕನ್ನಡ ಮನಸ್ಸುಗಳು ಈ ಕಾರ್ಯಕ್ರಮವನ್ನು ಪ್ರತಿವರ್ಷ ಆಯೋಜನೆ ಮಾಡುತ್ತಿವೆ. ಮತ್ತು ಸಮಾನಮನಸ್ಕರು ಇದರಲ್ಲಿ ಪಾಲ್ಗೊಳ್ಳುತ್ತ ಬಂದಿದ್ದಾರೆ. ಕೊಟ್ಟೂರಿನ ’ಬಯಲು ಸಾಹಿತ್ಯ ವೇದಿಕೆ’ ವತಿಯಿಂದ ಆರಂಭವಾದ ಈ ವಾರ್ಷಿಕ ಕಾರ್ಯಕ್ರಮಕ್ಕೆ ಈಗ ಹನ್ನೊಂದನೇ ಪ್ರಾಯ.

ಈ ಬಾರಿಯ ಕಾರ್ಯಕ್ರಮ ಇದೇ ಶನಿವಾರ ಮತ್ತು ಭಾನುವಾರ (ಅಕ್ಟೋಬರ್ 3-4, 2015) ದಂದು ಹಂಪಿಯ naavu-nammalli-2015-1 ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ನಾಡಿನ ಅನೇಕ ಚಿಂತಕರು ಮತ್ತು ಹೋರಾಟಗಾರರು “ಸಂವಿಧಾನ ಭಾರತ” ದ ಬಗ್ಗೆ ಚರ್ಚೆ, ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ರೀಪಾದ್ ಭಟ್, ಶ್ರೀಧರ್ ಪ್ರಭು ಸೇರಿದಂತೆ ವರ್ತಮಾನ ಬಳಗದ  ಹಲವಾರು ಮಿತ್ರರು ಅದರಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವರ್ತಮಾನ.ಕಾಮ್‌ನಲ್ಲಿ ಇತ್ತೀಚೆಗೆ ಅನೇಕ ಲೇಖನಗಳನ್ನು ಬರೆದ ವಿಜಯಕುಮಾರ್ ಸಿಗರನಹಳ್ಳಿಯವರ ಆ ಲೇಖನಗಳ ಸಂಗ್ರಹ ಈ ಕಾರ್ಯಕ್ರಮದಲ್ಲಿ ಬಿಡುಗಡೆ ಆಗಲಿದೆ. ’ನಾವು ನಮ್ಮಲ್ಲಿ’ ಸಹಯೋಗದಲ್ಲಿ ನಮ್ಮ ಬಳಗದ ಇನ್ನೊಬ್ಬರಾದ ಅಕ್ಷತಾ ಹುಂಚದಕಟ್ಟೆಯವರ ’ಅಹರ್ನಿಶಿ’ ಈ ಪುಸ್ತಕ ಪ್ರಕಟಿಸಿದೆ.

ಎಂದಿನಂತೆ ಈ ವಾರ್ಷಿಕ ಕಾರ್ಯಕ್ರಮಕ್ಕೆ ಹೋಗಲು ನಾನೂ ಉತ್ಸುಕನಾಗಿದ್ದೇನೆ. ನಿಮ್ಮೆಲ್ಲರನ್ನೂ ಅಲ್ಲಿ ನೋಡುವ ವಿಶ್ವಾಸದಲ್ಲಿ…

ನಮಸ್ಕಾರ,
ರವಿ

naavu-nammalli-2015
naavu-nammalli-2015
naavu-nammalli-book