ಕೋಮುವಾದ : ಚರಿತ್ರೆಯ ಗಾಯಗಳು, ವರ್ತಮಾನದ ಸ್ವರೂಪ ಮತ್ತು ಭವಿಷ್ಯದ ಸವಾಲು

-ಬಿ.ಶ್ರೀಪಾದ ಭಟ್

ಹಿಂಸೆಯ ಮೂಲಕ ಸಾಧಿಸಿದ ಪ್ರತಿಯೊಂದು ಸುಧಾರಣೆಯು ಖಂಡನೆಗೆ,ತಿರಸ್ಕಾರಕ್ಕೆ ಅರ್ಹವಾಗಿರುತ್ತದೆ.ಏಕೆಂದರೆ ಈ ಸುಧಾರಣೆಯು ದುಷ್ಟಶಕ್ತಿಗಳನ್ನು ನಿಗ್ರಹಿಸುವಂತಹ ಯಾವುದೇ ಕಾರ್ಯಕ್ರಮಗಳನ್ನು ಒಳಗೊಂಡಿರುವುದಿಲ್ಲ ಮತ್ತು ಮನುಷ್ಯರು ಯಥಾಸ್ಥಿತಿಯ ಜೀವನಕ್ರಮಕ್ಕೆ ಶರಣಾಗಿರುತ್ತಾರೆ.

– ಟಾಲ್ ಸ್ಟಾಯ್

ಅಬ್ದುಲ್ ಅಹಮದ್ ಅವರು ಕೋಮುವಾದವು ಎರಡು ವಿಭಿನ್ನ ಧರ್ಮಗಳಿಂದ ಗುಣಾರೋಪಣೆಗೊಳಗೊಂಡ ಸಾಮಾಜಿಕ ಘಟನೆ ಮತ್ತು ಈ ಘಟನೆಗಳು ಗಲಭೆಗಳಿಗೆ, ತಲ್ಲಣಗಳಿಗೆ, ಆತಂಕಗಳಿಗೆ, ಉಗ್ರತೆಗೆ ಕಾರಣವಾಗುತ್ತವೆ ಎಂದು ಹೇಳಿದರೆ, ಫರಾ ನಕ್ವಿ ಅವರು ಕೋಮು ಗಲಭೆಗಳಲ್ಲಿ ನಿಜಾಂಶಗಳು ಗೌಣಗೊಂಡು ಕಟ್ಟುಕಥೆಗಳು ಮೇಲುಗೈ ಸಾಧಿಸುತ್ತವೆ. ವದಂತಿಗಳು ಅನೇಕ ಬಗೆಯ ಹೌದು ಮತ್ತು ಅಲ್ಲಗಳೊಂದಿಗೆ ಪ್ರಾಮುಖ್ಯತೆ ಪಡೆದು ಪ್ರತಿಯೊಂದು ಕೋಮುಗಲಭೆಗಳನ್ನು ಹಿಂದಿನದಿಕ್ಕಿಂಲೂ ವಿಭಿನ್ನವೆಂಬಂತೆಯೂ, ಈ ಸಂದರ್ಭದಲ್ಲಿ ಹಿಂಸಾಚಾರ ಮತ್ತು ಹತ್ಯೆಗಳು ಅನಿವಾರ್ಯವೆಂಬಂತೆಯೂ ಸಮರ್ಥಿಸಲ್ಪಡುತ್ತವೆ ಮತ್ತು ಕಾಲಕ್ರಮೇಣ ತೆರೆಮರೆಗೆ ಸರಿಯಲ್ಪಡುತ್ತವೆ ಎಂದು ಹೇಳುತ್ತಾರೆ.

ಪ್ರಭಾ ದೀಕ್ಷಿತ್ ಅವರು ಕೋಮುವಾದವು ರಾಜಕೀಯ ಪ್ರೇರಿತ ಧರ್ಮತತ್ವವಾಗಿದ್ದು ಇದು ಧರ್ಮ ಮತ್ತು ಸಾಂಸ್ಕೃತಿಕ ವಿಭಿನ್ನತೆಗಳನ್ನು ದುರುಪಯೋಗಪಡಿಸಿಕೊಂಡು ತನ್ನ ರಾಜಕೀಯ ಉದ್ದೇಶಗಳನ್ನು ಸಾಧಿಸುತ್ತದೆ ಎಂದು ಹೇಳುತ್ತಾರೆ. ಅಸ್ಗರ್ ಅಲಿ ಇಂಜಿನಿಯರ್, ಮೊಯಿನ್ ಶಕೀರ್ ಮತ್ತು ಅಬ್ದುಲ್ ಅಹಮದ್ ಅವರು “ಇದು ಮೇಲ್ವರ್ಗಗಳ ಕೈಯಲ್ಲಿರುವ ಒಂದು ಆಯುಧ; ಇದನ್ನು ಬಳಸಿಕೊಂಡು ಜನರ ನಡುವೆ ಒಡಕುಂಟು ಮಾಡುತ್ತ ಆ ಮೂಲಕ ಅಧಿಕಾರವನ್ನು ತಮ್ಮ ಬಳಿ ಕೇಂದ್ರೀಕರಿಸಿಕೊಳ್ಳುತ್ತಾರೆ” ಎಂದು ವಿವರಿಸುತ್ತಾರೆ.

ಫ್ರೊ. ಸತೀಶ್ ದೇಶಪಾಂಡೆ ಅವರು “ಇಂಗ್ಲೀಷ್ ಮಾತನಾಡುವ ಪಶ್ಚಿಮ ರಾಷ್ಟ್ರಗಳು ಬಳಸುವ ಕೋಮುವಾದದ ಅರ್ಥವು ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳಿಗಿಂತ ಸಂಪೂರ್ಣ ವಿಭಿನ್ನವಾಗಿದೆ. ಪಶ್ಚಿಮ ರಾಷ್ಟ್ರಗಳಲ್ಲಿ ಕೋಮುವಾದವನ್ನು ‘ಎಲ್ಲಾ ಸಮುದಾಯಗಳ ನಡುವೆ ಸಮಾನ ಹಂಚಿಕೆ’ ಅಥವಾ ‘ಸಾಮಾನ್ಯ ಮಾಲೀಕತ್ವ’ ಎನ್ನುವ ಅರ್ಥದಲ್ಲಿ ಮಾತನಾಡಿದರೆ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಇದಕ್ಕೆ ತದ್ವಿರುದ್ಧವಾಗಿ ಧರ್ಮದ ಆಧಾರದ ಮೇಲೆ ವಿವಿಧ ಧರ್ಮದ ಸಮುದಾಯಗಳ ನಡುವಿನ ದ್ವೇಷ ಮತ್ತು ಪ್ರತ್ಯೇಕತೆಯೆಂದು ವಿವರಿಸಲಾಗುತ್ತದೆ” ಎಂದು ಹೇಳುತ್ತಾರೆ.

ಇತಿಹಾಸಕಾರ ಬಿಪಿನ್ ಚಂದ್ರ ಅವರು “ಈ ರಾಷ್ಟ್ರೀಯತೆ ಮತ್ತು ಕೋಮುವಾದ ಇವೆರಡೂ ಈ ದೇಶದ ಆರ್ಥಿಕ ಅಭಿವೃದ್ಧಿ, bajrang_dalರಾಜಕೀಯ ಮತ್ತು ಕಾರ್ಯಾಂಗದ ಚಟುವಟಿಕೆಗಳನ್ನೊಳಗೊಂಡ ಸದೃಶ್ಯವಾದ ಆಧುನಿಕ ಕಾರ್ಯವಿಧಾನಗಳು. ರಾಷ್ಟ್ರೀಯವಾದಿಗಳು ಮತ್ತು ಕೋಮುವಾದಿಗಳು ಚರಿತ್ರೆಯನ್ನು ಸದಾ ಉಲ್ಲೇಖಿಸುತ್ತಿರುತ್ತಾರೆ, ಸಂಭೋದಿಸುತ್ತಿರುತ್ತಾರೆ. ಚರಿತ್ರೆಯ ಐಡಿಯಾಜಿಗಳು, ಚಳುವಳಿಗಳು ಮತ್ತು ಇತಿಹಾಸವನ್ನು ವರ್ತಮಾನದೊಂದಿಗೆ ತಳಕು ಹಾಕಲು ಸದಾ ಕಾರ್ಯಪ್ರವೃತ್ತರಾಗಿರುತ್ತಾರೆ. ಆದರೆ ಈ ರಾಷ್ಟ್ರೀಯತೆ ಮತ್ತು ಕೋಮುವಾದಗಳು ಪ್ರಾಚೀನ ಮತ್ತು ಮಧ್ಯಯುಗೀನ ಭಾರತದಲ್ಲಿ ಆಸ್ತಿತ್ವದಲ್ಲಿ ಇರಲಿಲ್ಲ. ಇದನ್ನು ಆ ಕಾಲದ ರಾಷ್ಟ್ರೀಯವಾದಿಗಳಾದ ಸುರೇಂದ್ರನಾಥ ಬ್ಯಾನರ್ಜಿ ಮತ್ತು ಬಾಲಗಂಗಾಧರ ಟಿಲಕ ಅವರು ಸರಿಯಾಗಿಯೇ ಗುರುತಿಸುತ್ತಾರೆ. ಇವರು ಇಂಡಿಯಾ ದೇಶವನ್ನು 19ನೇ ಶತಮಾನದ ಕಡೆಯ ದಶಕ ಮತ್ತು 20ನೇ ಶತಮಾನದ ಆರಂಭದ ದಶಕದಲ್ಲಿ ನಿರ್ಮಿಸಲ್ಪಡುತ್ತಿರುವ ದೇಶವೆಂದು ವ್ಯಾಖ್ಯಾನಿಸುತ್ತಾರೆ. ರಾಷ್ಟ್ರೀಯವಾದದ ದೋಷಪೂರಿತ ಚಿಂತನೆಗಳು, ರಾಷ್ಟ್ರೀಯತೆಯ ಪರಿಕಲ್ಪನೆಯಲ್ಲಿ ಆಧುನಿಕ ಸ್ವರೂಪ ಮತ್ತು ಆಳವಾದ ಅಧ್ಯಯನದ ಕೊರತೆಯಿಂದಾಗಿ ಈ ಕೋಮುವಾದವು ಜನ್ಮ ತಳೆಯುತ್ತದೆ. ಇತಿಹಾಸದ ಪ್ರಕ್ರಿಯೆಯನ್ನು ತಪ್ಪಾಗಿ ಅರ್ಥೈಸಿಕೊಂಡ ಅಸತ್ಯದ, ಠಕ್ಕಿನ ಪ್ರಜ್ಞೆಯಿಂದಾಗಿ ಕಳೆದ 100 ವರ್ಷಗಳಿಂದ ಈ ಕೋಮುವಾದವು ಚಾಲ್ತಿಯಲ್ಲಿದೆ” ಎಂದು ಹೇಳುತ್ತಾರೆ.

ಆರಂಭದ ಟಿಪ್ಪಣಿಗಳು

ಇಂಡಿಯಾ ದೇಶವು ರಕ್ತಪಾತದ ಮೇಲೆ, ಪ್ರಾಣಹಾನಿಯ ಮೇಲೆ ಸ್ವಾತಂತ್ರವನ್ನು ಗಳಿಸಿಕೊಂಡಿದೆ. ಜಗತ್ತಿನ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವ ದೇಶವೆಂದು ಕರೆಯಲ್ಪಡುವ ಇಂಡಿಯಾದ ಮನಸ್ಥಿತಿ ‘ಹಿಂದೂ ದೇಶ’ದ ಫೋಬಿಯಾವನ್ನು ಒಳಗೊಂಡಿದೆ. ಗಾಂಧಿಯ ‘ಅಹಿಂಸೆ’ ತತ್ವವನ್ನು ಗೇಲಿ ಮಾಡುತ್ತಿದ್ದ ಸಂಘ ಪರಿವಾರ ಕಳೆದ ಎಂಬತ್ತು ವರ್ಷಗಳಲ್ಲಿ ಕೋಮು ಗಲಭೆಗಳ ಮೂಲಕ ಹಿಂಸಾಚಾರ, ದ್ವೇಷ, ಹತ್ಯೆಗಳನ್ನು ನಡೆಸಿದೆ ಎನ್ನುವ ಗಂಭೀರವಾದ ಆರೋಪಗಳನ್ನು ಎದುರಿಸುತ್ತಿದೆ ಮತ್ತು ಈ ಅಪಾದನೆಗಳಿಗೆ ಸಾವಿರಾರು ಸಾಕ್ಷಿಗಳಿವೆ. ಘಟನೆಗಳಿವೆ. ನಿರಾಶ್ರಿತರಿದ್ದಾರೆ. ಅವರ ತಲೆಮಾರುಗಳಿವೆ.

ಕೋಮುವಾದವೆಂದರೆ ಅದು ಒಂದು ಐಡೆಂಟಿಟಿ ರಾಜಕೀಯ. ದ್ವೇಷದ, ಹಗೆತನದ ರಾಜಕೀಯ. ಇಲ್ಲಿ ಈ ಐಡೆಂಟಿಟಿಯು ಸ್ಪಷ್ಟವಾಗಿ ಧಾರ್ಮಿಕ ನೆಲೆಯನ್ನು ಅವಲಂಬಿಸುತ್ತದೆ. ಈ ಕೋಮುವಾದವು ‘ನಾವು’ ಮತ್ತು ‘ಅವರು’ ಎಂದು ಎರಡು ಧರ್ಮಗಳ ನಡುವೆ ಸ್ಪಷ್ಟವಾದ ಗೆರೆಯನ್ನು ಎಳೆಯುತ್ತದೆ. ಕೋಮುವಾದ ಶಕ್ತಿಗಳು ಬಲಿಷ್ಠಗೊಂಡಂತೆ ಈ ಗೆರೆಯು ಒಂದು ಗೋಡೆಯಾಗಿ ಬೆಳೆಯುತ್ತ ಹೋಗುತ್ತದೆ, ಈ ಕೋಮುವಾದವು ತನ್ನ ಧಾರ್ಮಿಕ ಶ್ರೇಷ್ಠತೆಯನ್ನು ವೈಭವೀಕರಿಸುತ್ತಲೇ ಅನ್ಯ ಧರ್ಮ ಮತ್ತು ಅನ್ಯ ಧರ್ಮೀಯರನ್ನು ದ್ವೇಷಿಸುತ್ತಾ ಬಹುಸಂಖ್ಯಾತ ತತ್ವವನ್ನು ಸಾರ್ವಜನಿಕವಾಗಿ ಬಿತ್ತುತ್ತಿರುತ್ತದೆ. ಚಿಂತಕರು ಇಂಡಿಯಾದಲ್ಲಿ ಹಿಂದೂ ಕೋಮುವಾದವನ್ನು ಫ್ಯಾಸಿಸ್ಟ್ ನ ಮತ್ತೊಂದು ಮುಖವೆಂದೇ ಬಣ್ಣಿಸುತ್ತಾರೆ. ತನ್ನ ಧರ್ಮವನ್ನು ಶ್ರೇಷ್ಠವೆಂದು ಪರಿಗಣಿಸುವ ಈ ಧಾರ್ಮಿಕ ಐಡೆಂಟಿಟಿಯನ್ನು ಒಂದು ಫ್ಯಾಸಿಸ್ಟ್ ಶಕ್ತಿಯಾಗಿ ಕ್ರೋಢೀಕರಿಸಿದ್ದು ಸಾವರ್ಕರ್. ಸಾವರ್ಕರ್ ರ ಹಿಂದುತ್ವದ ಕೋಮುವಾದವನ್ನೊಳಗೊಂಡ ಫ್ಯಾಸಿಸ್ಟ್ ಚಿಂತನೆಗಳನ್ನು ತನ್ನ ಸೀಕ್ರೆಟ್ ಕಾರ್ಯಸೂಚಿಯನ್ನಾಗಿಸಿಕೊಂಡ ಆರೆಸ್ಸಸ್ ದಶಕಗಳ ಕಾಲ ಸಾರ್ವಜನಿಕವಾಗಿ ಕೇವಲ ಹಿಂದುತ್ವವನ್ನು ಪ್ರಚಾರ ಮಾಡಿತು. ಇಂದು ಕೇಂದ್ರದಲ್ಲಿ ಅಧಿಕಾರ ಗಳಿಸಿದ ನಂತರ ತನ್ನೊಳಗೆ ಮಡುಗಟ್ಟಿಕೊಂಡ ಫ್ಯಾಸಿಸಂನ ಮುಖಗಳನ್ನು ಸಹ ಬಹಿರಂಗಗೊಳಿಸತೊಡಗಿದೆ.

ಶ್ರೇಣೀಕೃತ, ಅಸಮಾನತೆಯ ಜಾತಿ ಸಮಾಜವನ್ನು ಸಾಂಸ್ಥೀಕರಣಗೊಳಿಸಿದ ಹಿಂದೂಯಿಸಂ ಧಾರ್ಮಿಕ ಭೇಧಭಾವದ ಒಡಕನ್ನು ಸೃಷ್ಟಿಸಿತು. RSS_meeting_1939ಇತ್ತ ತಮ್ಮ ಐಡೆಂಟಿಟಿ, ಜೀವನ ಕ್ರಮ, ಸಂಸ್ಕೃತಿಗಳನ್ನು ಇಸ್ಲಾಂ ಎನ್ನುವ ಧರ್ಮದ ಮೂಲಕ, ಕುರಾನ್ ನ ಮೂಲಕ ಕಂಡುಕೊಳ್ಳಲು ಬಯಸುವ ಮುಸ್ಲಿಂ ಸಮುದಾಯ ಇಂಡಿಯಾದಲ್ಲಿ ಹಿಂದೂಯಿಸಂನ ಬಹುಸಂಖ್ಯಾತ ತತ್ವದ ಮತೀಯವಾದದೊಂದಿಗೆ ಸದಾಕಾಲ ಮುಖಾಮುಖಿಯಾಗುವಂತಹ ಅನಿವಾರ್ಯತೆ ಉಂಟಾಗಿತ್ತು. ಜಿನ್ನಾ ಅವರ ಎರಡು ದೇಶದ ಸಿದ್ಧಾಂತವನ್ನು (ಧರ್ಮದ ನೆಲೆಯಲ್ಲಿ) ಆರೆಸ್ಸಸ್ ನ ಸಾವರ್ಕರ್ ಸಹ ಪರೋಕ್ಷವಾಗಿ ಬೆಂಬಲಿಸಿದ್ದರು. ಕಡೆಗೆ 1947ರಲ್ಲಿ ನಡೆದ ದೇಶ ವಿಭಜನೆಯ ಸಂದರ್ಭದಲ್ಲಿ ಸುಮಾರು 1946-1948ರ ಕಾಲಘಟ್ಟದಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡ, ಅತ್ಯಾಚಾರ, ಕೋಮು ಗಲಭೆಗಳಲ್ಲಿ ಅಪಾರ ಸಾವುನೋವು, ಲೂಟಿ, ದಂಗೆಗಳು ಉಂಟಾದವು. 1925ರಿಂದಲೇ ಸಂಘ ಪರಿವಾರದ ಮತೀಯ ಮೂಲಭೂತವಾದಿಗಳು ಆಕ್ರಮಣಕಾರಿ ಮುಸ್ಲಿಂರು, ರಕ್ಷಣೆಯಲ್ಲಿರುವ ಹಿಂದೂಗಳು, ಮುಸ್ಲಿಂ ಫೆನಟಿಸಂ, ಹಿಂದೂ ಸಹನಶೀಲತೆ ಎನ್ನುವ ಮಿಥ್ ಅನ್ನು ದೇಶಾದ್ಯಾಂತ ಪ್ರಚಾರ ಮಾಡಿದ್ದರು. ಜನರ ಮನದಲ್ಲಿ ಅಭದ್ರತೆಯ ಸ್ಥಿತಿಯನ್ನು ಬಿತ್ತಿದ್ದರು. ದೇಶ ವಿಭಜನೆಯ ಸಂದರ್ಭದಲ್ಲಿ ಇದರ ಕರಾಳತೆ ಬಿಚ್ಚಿಕೊಂಡಿತು. ಹಿಂದೂರಾಷ್ಟ್ರದ ಪರಿಕಲ್ಪನೆಯನ್ನು ಬೋಧಿಸುತ್ತ ಮುಸ್ಲಿಂರ ದೇಶ ಇದಲ್ಲ ಎಂದು ಮತೀಯವಾದಿ ನುಡಿಕಟ್ಟಿನಲ್ಲಿ ಮಾತನಾಡುವುದು, ಮುಸ್ಲಿಂರ ಏಜೆಂಟ್ ಎಂದು ಗಾಂಧೀಜಿಯನ್ನು ಹತ್ಯೆಗೈಯುವುದರ ಮೂಲಕ ಕೋಮುವಾದ, ಫ್ಯಾಸಿಸಂ ಅನ್ನು ಒಂದಕ್ಕೊಂದು ಬೆರೆಸಲಾಯಿತು.

ಇತಿಹಾಸಕಾರ ಬಿಪಿನ್ ಚಂದ್ರ ಅವರು “ಭಾರತದಲ್ಲಿ 19ನೇ ಶತಮಾನದ ಕಡೆಯ ದಶಕಗಳಲ್ಲಿ ಕೋಮುವಾದದ ಘಟನೆಗಳು ಸಂಭವಿಸತೊಡಗಿದವು. ಗ್ರಾಮ ಪ್ರದೇಶಗಳು ಹೆಚ್ಚೂ ಕಡಿಮೆ ಕೋಮುಗಲಭೆಗಳಿಂದ ಮುಕ್ತವಾಗಿದ್ದವು. 1937-1939ರವೆರಗೂ ಕೋಮುವಾದವು ಒಂದು ರಾಜಕೀಯ ಶಕ್ತಿಯಾಗಿ ರೂಪುಗೊಂಡಿರಲಿಲ್ಲ, 1946ರಲ್ಲಿ ಮೊಟ್ಟ ಮೊದಲ ಬಾರಿಗೆ ಕೋಮು ಗಲಭೆಗಳಿಗೂ ಮತ್ತು ರಾಜಕೀಯಕ್ಕೂ ನೇರ ಸಂಬಂಧಗಳು ಕೂಡಿಕೊಳ್ಳತೊಡಗಿದವು. ಆದರೆ ಕೋಮುವಾದವು ಹೇಗೆ ಹುಟ್ಟಿಕೊಂಡಿತು ಎನ್ನುವ ಪ್ರಶ್ನೆ ಸ್ವ ಸಂಕೀರ್ಣ. ಉದಾಹರಣೆಗೆ ಕಲೋನಿಯಲ್ ಭಾರತದಲ್ಲಿ ಮುಸ್ಲಿಂರು ಅವರು ಮುಸ್ಲಿಮರಾಗಿದ್ದಕ್ಕೆ ಶೋಷಣೆಗೆ ಒಳಗಾಗಿರಲಿಲ್ಲ, ಬದಲಾಗಿ ಅವರು ರೈತರು, ಕೂಲಿ ಕಾರ್ಮಿಕರು, ಜೀತದಾಳುಗಳಾಗಿದ್ದರು. ಹಾಗೆಯೇ ಹಿಂದೂಗಳೂ ಸಹ. ಅಥವಾ ಈ ಕೋಮುವಾದವು ಕಲೋನಿಯಲ್ ಸಾಮ್ರಾಜ್ಯದ ಉಪ ಉತ್ಪನ್ನ ಎಂದೂ ಸಹ ಹೇಳಬಹುದು. ಏಕೆಂದರೆ ಕಲೋನಿಯಲ್ ಆಡಳಿತವು ಕೋಮುವಾದಕ್ಕೆ ಪೂರಕವಾಗುವಂತಹ ಸಾಮಾಜಿಕ ವಾತಾವರಣವನ್ನು ನಿರ್ಮಿಸುತ್ತದೆ. ಮುಂದೆ ಇಂಡಿಯಾದ ಮಧ್ಯಮವರ್ಗವು ತನ್ನ ವೈಯುಕ್ತಿಕ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಈ ಕೋಮುವಾದವನ್ನು ಉಪಯೋಗಿಸಿಕೊಂಡಿತು. ಇದಕ್ಕೆ ಪ್ರತಿಯಾಗಿ ಕೋಮುವಾದವು ಫ್ಯೂಡಲ್ಲಿಸಂ ಅನ್ನು, ಕಲೋನಿಯಲಿಸಂ ಅನ್ನು, ಅಧಿಕಾರಶಾಹಿಯನ್ನು ಸಹ ಪೋಷಿಸಿತು” ಎಂದು ಬರೆಯುತ್ತಾರೆ. ಇಂಡಿಯಾದ ನಗರಗಳಲ್ಲಿನ ಹಳೇ ಪ್ರದೇಶಗಳನ್ನು ಸದಾ ಕೋಮು ಗಲಭೆಗಳ ಪ್ರದೇಶಗಳನ್ನಾಗಿ ಮಾರ್ಪಡಿಸಿದ ಕೀರ್ತಿ ಸಂಘ ಪರಿವಾರಕ್ಕೆ ಸಲ್ಲಬೇಕು.

Violette Graff and Juliette Galonnier ಅವರು “1950ರ ದಶಕದ ಪೂರ್ತಿ ಇಂಡಿಯಾದ ಅಲ್ಪಸಂಖ್ಯಾತರು ನೆಹರೂ ಮತ್ತು ಅವರ ಸುತ್ತುವರೆದಿದ್ದ ಮೌಲಾನ ಕಲಾಂ ಅಜಾದ್, ರಫಿ ಅಹ್ಮದ್ ಕಿದ್ವಾಯಿಯಂತಹ ಸೆಕ್ಯುಲರ್ ರಾಜಕಾರಣಿಗಳಿರುವ ಕಾಂಗ್ರೆಸ್ ಪಕ್ಷದ ಕಾರಣಕ್ಕಾಗಿ ಭದ್ರತೆಯ ಮತ್ತು ಸುರಕ್ಷತೆಯ ವಾತಾವರಣದಲ್ಲಿದ್ದೇವೆ ಎಂದೇ ನಂಬಿಕೊಂಡಿದ್ದರು. ಮೊದಲ ಸಾರ್ವತ್ರಿಕ ಚುನಾವಣೆ ನಡೆದ 1952 ರಿಂದ ಮೂರನೇ ಸಾರ್ವತ್ರಿಕ ಚುನಾವಣೆ ನಡೆದ 1962ರವರೆಗೆ ಕಾಂಗ್ರೆಸ್ ಶೇಕಡಾ ನೂರರಷ್ಟು ಮುಸ್ಲಿಂ ಅಲ್ಪಸಂಖ್ಯಾತರ ಮತಗಳನ್ನು ಗಳಿಸುತ್ತಿತ್ತು. ಆದರೆ 1961ರಲ್ಲಿ ಮಧ್ಯಪ್ರದೇಶದ ಜಬ್ಬಲ್ಪುರದಲ್ಲಿ ನಡೆದ ಕೋಮುಗಲಭೆ ದೇಶದ ಒಂದು ಮಾದರಿಯ ಸೆಕ್ಯುಲರ್ ಸ್ವರೂಪವನ್ನೇ ಬದಲಾಯಿಸಿತು” ಎಂದು ಹೇಳುತ್ತಾರೆ.

1961- 1971 ರ ಕಾಲಘಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಸೆಕ್ಯುಲರ್ ಇಮೇಜ್ ತನ್ನ ಹೊಳಪನ್ನು ಕಳೆದುಕೊಳ್ಳತೊಡಗಿತ್ತು. ಒಂದು ದಶಕದಲ್ಲಿGujarat ಎರಡು ಯುದ್ಧಗಳು (ಚೀನಾ ಮತ್ತು ಪಾಕಿಸ್ತಾನ) ಜರುಗಿದವು. ಕಾಂಗ್ರೆಸ್ ಇಬ್ಭಾಗವಾಗಿ ಅನೇಕ ಬಗೆಯ ಬಿಕ್ಕಟ್ಟುಗಳನ್ನು ಎದುರಿಸುತ್ತಿತ್ತು. ದೇಶವು ಭೀಕರ ಕ್ಷಾಮದ ಪರಿಸ್ಥಿತಿಯನ್ನು ಎದುರಿಸುತ್ತಿತ್ತು. 1967ರಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ ವಿವಿಧ ರಾಜ್ಯಗಳಲ್ಲಿ ಸೋಲನ್ನು ಅನುಭವಿಸಿ ವಿರೋಧ ಪಕ್ಷಗಳಿಗೆ ಅಧಿಕಾರವನ್ನು ಬಿಟ್ಟುಕೊಡಬೇಕಾಯಿತು. ಆರೆಸ್ಸಸ್ ಗೋಳ್ವಲ್ಕರ್ ಅವರ ನೇತೃತ್ವದಲ್ಲಿ ಹಿಂದೂ ಮತೀಯವಾದವನ್ನು ರಾಜಕೀಯದಲ್ಲಿ ಭಾರತೀಯ ಜನಸಂಘದ ಮೂಲಕ ಪ್ರಯೋಗಿಸಿ ಅಲ್ಪಮಟ್ಟದ ಯಶಸ್ಸನ್ನು ಸಹ ಗಳಿಸಿತ್ತು. ದೇಶದ ರಾಜಕೀಯ-ಸಾಮಾಜಿಕ ವಲಯಗಳಲ್ಲಿ ಒಂದು ಬಗೆಯ ಆತಂಕ, ಭ್ರಮನಿರಸನ, ತಲ್ಲಣಗಳು ಕಾಡುತ್ತಿದ್ದವು. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಆರೆಸ್ಸಸ್ ‘ವಿಶ್ವ ಹಿಂದೂ ಪರಿಷತ್’ ಎನ್ನುವ ಹಿಂದೂ ಸಂಘಟನೆಯನ್ನು ಸ್ಥಾಪಿಸಿತು. ಈ ವಿ ಎಚ್ ಪಿ ನೇರವಾಗಿಯೇ ಕೋಮು ಗಲಭೆಯ ಅಖಾಡಕ್ಕೆ ಧುಮುಕಿತು. Violette Graff and Juliette Galonnier ಅವರು “1961ರ ನಂತರದ ದಶಕಗಳಲ್ಲಿ ಅಲ್ಪಸಂಖ್ಯಾತರನ್ನು (ಅದರಲ್ಲೂ ಪ್ರಮುಖವಾಗಿ ಮುಸ್ಲಿಂರು) ತಂಟೆಕೋರರು ಎಂದು ಬಣ್ಣಿಸುವುದು, ಧಾರ್ಮಿಕ ಸ್ಥಳಗಳನ್ನು ಅಪವಿತ್ರಗೊಳಿಸುವುದು, ಕರ್ಕಶವಾಗಿ ಧ್ವನಿವರ್ಧಕಗಳನ್ನು ಬಳಸುವುದು, ಧಾರ್ಮಿಕ ಗುರು ಪ್ರಾಫೆಟ್ ಗೆ ಅಪಮಾನ ಮಾಡುವುದು, ಈದ್, ಮೊಹರಂ, ಹೋಳಿ, ಗಣೇಶ ಹಬ್ಬಗಳನ್ನು ಒಂದೇ ಸಮಯದಲ್ಲಿ ಪರಸ್ಪರ ತಿಕ್ಕಾಟವಾಗುವಂತೆ ಯೋಜಿಸುವುದು, ಗೋಹತ್ಯೆಯ ವಿವಾದದ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು, ಮಸೀದಿಯಲ್ಲಿ ಹಂದಿಯನ್ನು ಬಿಸಾಡುವುದು, ಮಹಿಳೆಯರನ್ನು ಚುಡಾಯಿಸುವುದು ಹೀಗೆ ಸಾಮಾಜಿಕ-ಸಾಂಸ್ಕೃತಿಕ ಆಯಾಮಗಳೊಂದಿಗೆ ಕೋಮುಗಲಭೆಗಳಿಗೆ ಸಂಬಂಧಗಳಿವೆ. ಆಸ್ತಿ ವಿವಾದಗಳು, ಮುಸ್ಲಿಂ ವ್ಯಾಪಾರಿಗಳು, ಮುಸ್ಲಿಂರ ಭೂಮಿ ಒಡೆತನ, ಮುಸ್ಲಿಂ ಲೇವಾದೇವಿಗಾರರುಗಳೊಂದಿಗೂ ಸಂಬಂಧಗಳಿವೆ. ಆರ್ಥಿಕ, ಶೈಕ್ಷಣಿಕ ಅಸಮಾನತೆಗಳೊಂದಿಗೂ ಸಂಬಂಧಗಳಿವೆ. ರಾಜಕೀಯ ಮತ್ತು ಚುನಾವಣಾ ಪ್ರಕ್ರಿಯೆಗಳೊಂದಿಗೂ ಕೋಮುಗಲಭೆಗಳಗೆ ಸಂಬಂಧಗಳಿವೆ” ಎಂದು ಹೇಳುತ್ತಾರೆ. ಮೇಲ್ಕಾಣಿಸಿದ ಎಲ್ಲಾ ಮಾದರಿಯ ಆಯಾಮಗಳನ್ನು ಬಳಸಿಕೊಂಡು ಸಂಘ ಪರಿವಾರವು ನೇರವಾಗಿ ಕೋಮು ಗಲಭೆೆಗಳಿಗೆ ಪ್ರಚೋದನೆ ಮತ್ತು ಕುಮ್ಮುಕ್ಕು ಕೊಡತೊಡಗಿತ್ತು. ಈ 1961-1979 ರ ಕಾಲಘಟ್ಟವು ಸಂಘ ಪರಿವಾರದ ಧಾರ್ಮಿಕ ಮತೀಯವಾದದ ಪ್ರಯೋಗಗಳ ಕಾಲಘಟ್ಟವೆಂದೇ ಕರೆಯಲಾಗುತ್ತದೆ.

1979-1989 ಕಾಲಘಟ್ಟವು ಮೊರದಾಬಾದ್-ಮೀನಾಕ್ಷಿಪುರಂ-ಶಾಬಾನು-ರಾಮಜನ್ಮ ಭೂಮಿಯಂತಹ ಧಾರ್ಮಿಕ ವಿವಾದಗಳ ಮೂಲಕ ಕೋಮುವಾದದ ಘೋರತೆಗೆ ನೇರವಾಗಿ ಮತ್ತು ಬಹಿರಂಗವಾಗಿ ರಾಜಕೀಯ-ಧಾರ್ಮಿಕ ಆಯಾಮಗಳನ್ನು ತಂದು ಕೊಟ್ಟಿತು. 1979ರಲ್ಲಿ ಜಾಗತಿಕ ಮಟ್ಟದಲ್ಲಿ ಇರಾನಿನಲ್ಲಿ ಖೊಮೇನಿಯ ಮೂಲಕ ನಡೆದ ಪ್ರತಿಕ್ರಾಂತಿ, ಅಫ್ಘಾನಿಸ್ತಾನದಲ್ಲಿ ಸೋವಿಯತ್ ಯೂನಿಯನ್ನ ಆಕ್ರಮಣಗಳಂತಹ ಸಂಗತಿಗಳು ಮುಸ್ಲಿಂ ಜಗತ್ತಿನಲ್ಲಿ ತಲ್ಲಣಗಳನ್ನುಂಟು ಮಾಡಿದ್ದವು. ಇಂಡಿಯಾದಲ್ಲಿ ಭಾರತೀಯ ಜನಸಂಘ ವಿಸರ್ಜನೆಗೊಂಡು ಭಾರತೀಯ ಜನತಾ ಪಕ್ಷ ಆಸ್ತಿತ್ವಕ್ಕೆ ಬಂದಿತ್ತು. ಸಂಘ ಪರಿವಾರಕ್ಕೆ 50 ವರ್ಷಗಳ ಧಾರ್ಮಿಕ-ಸಾಮಾಜಿಕ ಮೂಲಭೂತವಾದದ ಮತ್ತು 25 ವರ್ಷಗಳ ರಾಜಕೀಯದ ಅನುಭವಗಳು ಭವಿಷ್ಯದ ದಿನಗಳಿಗೆ ಅನುಕೂಲಕರವಾದ ದಾರಿಗಳನ್ನು ನಿರ್ಮಿಸಿತ್ತು. ಕೋಮುಗಲಭೆಗಳಿಗೆ ಕಾರಣವಾಗುವಂತಹ ಧಾರ್ಮಿಕ ವಿವಾದಗಳನ್ನು ನೇರವಾಗಿ ಪ್ರಚೋದಿಸಲು ವಿ ಎಚ್ ಪಿ ಸದಾ ಸನ್ನದ್ಧವಾಗಿರುತ್ತಿತ್ತು. ಏಕಾತ್ಮ ಯಗ್ಞ ಯಾತ್ರ, ಗಂಗಾ ಯಾತ್ರಾ, ಹಿಂದೂ ಧರ್ಮ ಸಮ್ಮೇಳನಗಳ ಮೂಲಕ ವಿ ಎಚ್ ಪಿ ನಿರಂತರವಾಗಿ ಧಾರ್ಮಿಕ ಮತೀಯವಾದವನ್ನು ಚಾಲನೆಯಲ್ಲಿಟ್ಟಿತ್ತು. ಅದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಬಿಜೆಪಿ ಪಕ್ಷವನ್ನು ಅಖಾಡದಲ್ಲಿ ತೇಲಿಬಿಟ್ಟು ಆರೆಸ್ಸಸ್ ನೇಪಥ್ಯದಲ್ಲಿ ಕಾಯುತ್ತಿತ್ತು. ಇದಕ್ಕೆ 1980ರಲ್ಲಿ ಉತ್ತರ ಪ್ರದೇಶದ ಮೊರದಾಬಾದ್ ನಲ್ಲಿ ನಡೆದ ಕೋಮು ಗಲಭೆಗಳು ದೊಡ್ಡ ವೇದಿಕೆಯನ್ನು ಕಲ್ಪಿಸಿಕೊಟ್ಟಿತು. ಆಗ ಕಾಂಗ್ರೆಸ್ ನ ವಿ.ಪಿ.ಸಿಂಗ್ ಮುಖ್ಯಮಂತ್ರಿಯಾಗಿದ್ದರು. ಮತ್ತು ಇದೇ ಸಂದರ್ಭದಲ್ಲಿ ಮೊಟ್ಟ ಮೊದಲ ಬಾರಿಗೆ ಪೋಲೀಸ್ ವ್ಯವಸ್ಥೆ ಪರೋಕ್ಷವಾಗಿ ಬಹುಸಂಖ್ಯಾತರ ಲುಂಪೆನ್ ಗುಂಪಿನ ಪರವಾಗಿ ಸಕ್ರಿಯವಾಗಿ ವರ್ತಿಸಿದ್ದು ಆರೆಸ್ಸಸ್ ನ ಮತೀಯವಾದಕ್ಕೆ ದೊಡ್ಡ ಶಕ್ತಿಯನ್ನು ನೀಡಿತ್ತು. 1981ರಲ್ಲಿ ತಮಿಳು ನಾಡಿನ ಮೀನಾಕ್ಷಿಪುರಂನಲ್ಲಿ ಹಿಂದೂ ಧರ್ಮದ ಜಾತಿ ವ್ಯವಸ್ಥೆಯಿಂದ ಬೇಸತ್ತ ತಳಸಮುದಾಯಗಳು ಸಾಮೂಹಿಕವಾಗಿ ಇಸ್ಲಾಂಗೆ ಮತಾಂತರಗೊಂಡಿದ್ದರು. ಈ ಘಟನೆಯನ್ನು ಆರೆಸ್ಸಸ್ ಬಹುಸಂಖ್ಯಾತರ ಧಾರ್ಮಿಕ ಭಾವನೆಗಳನ್ನು ಕೆರಳಿಸಲು ಸಂಪೂರ್ಣವಾಗಿ ಬಳಸಿಕೊಂಡಿತು.

ಆಗ ರಾಜೀವ್ ಗಾಂಧಿಯವರು ತೆಗೆದುಕೊಂಡ ಎರಡು ರಾಜಕೀಯ ಅಪ್ರಬುದ್ಧ, ತಪ್ಪಾದ ಮತ್ತು ಅಪಾಯಕಾರಿ ನಿಲುವುಗಳು ಇಡೀ ದೇಶದ ಸೆಕ್ಯುಲರ್ ಸ್ವರೂಪವನ್ನೇ ಬದಲಾಯಿಸಿಬಿಟ್ಟಿತು. 1985ರಲ್ಲಿ ಶಾ ಬಾನು ಪ್ರಕರಣದಲ್ಲಿ ಆಗಿನ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಮುಸ್ಲಿಂ ಮೂಲಭೂತವಾದಿಗಳ ಪರವಾಗಿ ವರ್ತಿಸಿದ್ದು ಸಂಘ ಪರಿವಾರಕ್ಕೆ ಬಲು ದೊಡ್ಡ ರಾಜಕೀಯ ವೇದಿಕೆಯನ್ನು ಕಲ್ಪಿಸಿತು. ಈ ಪ್ರಕರಣದಿಂದ ಬಿಜೆಪಿ ರಾಜಕೀಯ ಲಾಭ ಪಡೆಯುವುದನ್ನು ತಡೆಯಲಿಕ್ಕಾಗಿ ಮತ್ತು ಹಿಂದೂ ಧರ್ಮದ ಮುಖಂಡರ ಒತ್ತಡ ತಂತ್ರಕ್ಕೆ ಮಣಿದು 1986ರಲ್ಲಿ ವಿವಾದಿತ ಬಾಬರಿ ಮಸೀದಿಯ ಬೀಗಗಳನ್ನು ತೆರೆಸಿ ರಾಮನ ಮೂರ್ತಿಗಳಿಗೆ ಪೂಜೆಗೆ ಅವಕಾಶ ಕಲ್ಪಿಸಿಕೊಟ್ಟರು. ಇಸ್ಲಾಂ ಮತ್ತು ಹಿಂದೂ ಮೂಲಭೂತವಾದಿಗಳನ್ನು ಓಲೈಸಲು ಹೊರಟ ರಾಜೀವ್ ಗಾಂಧಿ ಬಿಜೆಪಿ ಪಕ್ಷಕ್ಕೆ ವಿಶಾಲವಾದ ರಾಜಕೀಯ ವೇದಿಕೆಯನ್ನು ಕಲ್ಪಿಸಿಕೊಟ್ಟರು. ಇದರ ಫಲವಾಗಿ 1980-1989ರ ಕಾಲಘಟ್ಟದಲ್ಲಿ ಧರ್ಮಗಳ ಧೃವೀಕರಣ ಮತ್ತು ಜಾತಿಗಳ ಧೃವೀಕರಣದ ರಾಜಕೀಯ-ಸಾಮಾಜಿಕ ಭೂಮಿಕೆಗಳು ರೂಪುಗೊಂಡಿತ್ತು. ಇದರ ಸಂಪೂರ್ಣ ಜವಬ್ದಾರಿಯನ್ನು ಸಂಘ ಪರಿವಾರದೊಂದಿಗೆ ರಾಜೀವ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಹಂಚಿಕೊಳ್ಳಬೇಕಾಗುತ್ತದೆ. ಈ ಕಾಲದಲ್ಲಿ ಪ್ರತಿ 10 ಮಿಲಿಯನ್ ಗೆ ಸರಾಸರಿಯಾಗಿ 13 ಜನ ಸಾವನ್ನಪ್ಪಿದ್ದಾರೆ.

ನಂತರದ 1990-2002 ರ ಕಾಲಘಟ್ಟದಲ್ಲಿ ಸಂಘ ಪರಿವಾರ ತಾನು ಕಲಿತ ಎಲ್ಲಾ ಪಟ್ಟುಗಳನ್ನು ಬಳಸಿಕೊಂಡು ಧರ್ಮrajiv_gandhi ಮತ್ತು ಜಾತಿ ಸಂಪೂರ್ಣವಾಗಿ ಧೃವೀಕರಣಗೊಳಿಸುವಲ್ಲಿ ಯಶಸ್ವಿಯಾಯಿತು. ಇದೆಲ್ಲದರ ತಾರ್ಕಿಕ ಅಂತ್ಯವೆನ್ನುವಂತೆ ಹಿಂಸಾತ್ಮಕವಾಗಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದು ಇಡೀ ದೇಶವು ಬಹುಸಂಖ್ಯಾತರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ಎನ್ನುವ ಇಬ್ಭಾಗಕ್ಕೆ ಬಲಿಯಾಗಬೇಕಾಯಿತು. ಅಲ್ಲಿಯವರೆಗೆ ಈ ಕೋಮುವಾದವನ್ನು ಕೇವಲ ಎರಡು ವಿಭಿನ್ನ ಧರ್ಮಗಳ ಲುಂಪೆನ್ ಗುಂಪುಗಳ ನಡುವಿನ ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ ಕಲಹವೆಂದು ಅರ್ಥೈಸಲಾಗುತ್ತಿತ್ತು. ಆದರೆ ಬಾಬರಿ ಮಸೀದಿಯ ದ್ವಂಸದ ನಂತರ ಬಹುಸಂಖ್ಯಾತರೆಲ್ಲರೂ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಧೃವೀಕರಣಗೊಂಡಿದ್ದು ಸಂಘ ಪರಿವಾರದ ಲುಂಪೆನ್ ಗುಂಪುಗಳಿಗೆ ಬಲವನ್ನು ಒದಗಿಸಿತು. 2002ರಲ್ಲಿ ಗುಜರಾತ್ ನ ಗೋಧ್ರಾ ದುರಂತದ ನಂತರ ನಡೆದ ಮುಸ್ಲಿಂ ಸಮುದಾಯದ ಹತ್ಯಾಕಾಂಡದಲ್ಲಿ, ಹೆಣ್ಣುಮಕ್ಕಳು, ಮಕ್ಕಳನ್ನು ಇರಿದು ಹಲ್ಲೆ ಮಾಡಿ, ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದನ್ನು ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಸಮಾನವಾಗಿರುತ್ತವೆ ಎಂದು ಅಲ್ಲಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು ಫ್ಯಾಸಿಸಂನ ಮುಖವನ್ನು ಬಹಿರಂಗೊಳಿಸುತ್ತದೆ. ಪ್ರತಿ ಕೋಮು ಗಲಭೆಗಳು ನಡೆದಾಗಲೆಲ್ಲ ಇದು ಮತ್ತೆ ಮರುಕಳಿಸುತ್ತದೆಯೇ ಎನ್ನುವ ಪ್ರಶ್ನೆಗಳು ಇಲ್ಲವೆಂದು ಹೇಳಲಿಕ್ಕಾಗದು ಎನ್ನುವ ಉತ್ತರ ದೊರಕುತ್ತಿತ್ತು. ಆದರೆ ಇಂದು ಇಡೀ ಚಿತ್ರಣವೇ ಬದಲಾಗಿದೆ. 2002ರ ಗುಜರಾತ್ ಹತ್ಯಾಕಾಂಡದ ನಂತರ ಸಂಘ ಪರಿವಾರ ಅಂಗ ಸಂಸ್ಥೆಗಳಾದ ವಿ ಎಚ್ ಪಿ ಮತ್ತು ಬಜರಂಗದಳಗಳನ್ನು ಬಳಸಿಕೊಂಡು ಒಂದು ನಿರ್ದಿಷ್ಠ ಮಾದರಿಯಲ್ಲಿ ಕೋಮು ಗಲಭೆಗಳನ್ನು ಹುಟ್ಟುಹಾಕುತ್ತಿದೆ. ಚುನಾವಣೆಗೆ ಕೆಲವು ತಿಂಗಳುಗಳ ಮುಂಚೆ ಹಿಂಸಾಚಾರವನ್ನು ಸೃಷ್ಟಿಸಲಾಗುತ್ತದೆ. ಅದರ ಮೂಲಕ ಧರ್ಮ ಮತ್ತು ಜಾತಿಗಳ ಧೃವೀಕರಣ ಸಾಧಿಸುತ್ತದೆ. ಒಮ್ಮೆ ಚುನಾವಣೆ ಮುಗಿದು ಅಧಿಕಾರಕ್ಕೆ ಬಂದ ನಂತರ ಕೆಲವು ವರ್ಷಗಳ ಕಾಲ ಕೋಮು ಗಲಭೆಗಳು ಸಂಭವಿಸುವುದೇ ಇಲ್ಲ. 2002ರಿಂದ ಇಲ್ಲಿಯವರೆಗೂ ಗುಜರಾತ್ ನಲ್ಲಿ ಕೋಮು ಗಲಭೆಗಳು ಸಂಭವಿಸಿಲ್ಲ. ಇದು ಒಂದು ಉದಾಹರಣೆ ಮಾತ್ರ.

( ಚಿಂತನ ಪ್ರಕಾಶನ’ದಿಂದ ಪ್ರಕಟಣೆಗೆ ಸಿದ್ಧವಾಗಿರುವ ‘ಹಿಂದುತ್ವದ ರಾಜಕಾರಣ’ ಪುಸ್ತಕದ ಆಯ್ದ ಭಾಗ)

3 thoughts on “ಕೋಮುವಾದ : ಚರಿತ್ರೆಯ ಗಾಯಗಳು, ವರ್ತಮಾನದ ಸ್ವರೂಪ ಮತ್ತು ಭವಿಷ್ಯದ ಸವಾಲು

  1. BNS

    ವರ್ತಮಾನದ ಲೇಖನಗಳಿಗೆ/ ಅನುವಾದಗಳಿಗೆ ‘ಅನುಕೂಲಕರ’ವಾಗಿಲ್ಲದ ಪ್ರತಿಕ್ರಿಯೆಗಳಿಗೆ ಕತ್ತರಿ ಪ್ರಯೋಗ ಏಕೆ ನಡೆಯುತ್ತಿದೆ? ಲೇಖಕರ ವಿಚಾರಗಳಿಗೆ ವಿರುದ್ಧವಾದ, ಸಮಂಜಸವಾದ, ಕೊಂಚ ವ್ಯಂಗ್ಯ ಇರುವ ಪ್ರತಿಕ್ರಿಯೆಗಳನ್ನು ಏಕೆ ತೆಗೆದು ಹಾಕಲಾಗುತ್ತಿದೆ? ಸಭ್ಯವಾದ, ಆದರೆ ತೂಕದ ಮಾತುಗಳ ಪ್ರತಿಕ್ರಿಯೆಯನ್ನು ತಾಳಿಕೊಳ್ಳದವರು ಲೇಖನ ಏಕೆ ಬರೆಯಬೇಕು? ನಿಮಗೆ ಭಿನ್ನಾಭಿಪ್ರಾಯದಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ನಂಬಿಕೆಯಿದ್ದರೆ ಲೇಖನವನ್ನು ವಿರೋಧಿಸುವ, ಲೇಖನದ ಮೌಲ್ಯವನ್ನು ಹೇಳುವ ಪ್ರತಿಕ್ರಿಯೆಗಳಿಗೆ ಅವಕಾಶವಿರಲಿ. ಇಲ್ಲದಿದ್ದರೆ ನೀವು ‘ಹೇಳುವುದು ಒಂದು, ಮಾಡುವುದಿನ್ನೊಂದು’ ಎನ್ನುವ ತತ್ವಕ್ಕೆ ಬದ್ಧರಾದವರು ಎಂದು ನೀವೇ ತೋರಿಸಿಕೊಂಡಂತೆ ಆಗುತ್ತದೆ.

    Reply
  2. praveenhegdek

    ಆತ್ಮೀಯ ಶ್ರೀಪಾದ ಭಟ್ಟರೆ ,,ನಿಮ್ಮ ಕೋಮುವಾದದ ವ್ಯಾಖ್ಯಾನ ಬಹಳ ಅದ್ಬುತವಾಗಿದೆ. ಜಗತ್ತಿನಲ್ಲಿ ಕೋಮುವಾದ ಎನ್ನುವ ಶಬ್ದ ಹುಟ್ಟಿಕೊಂಡಾಗಿನಿಂದಲೇ ಕೌರ್ಯ ಹೆಚ್ಚಿ ಸಮಾಜದ ಅಸಮಾನತೆಗೆ ಕಾರಣವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ನಿಮ್ಮ ಲೇಖನದಲ್ಲಿ ನನಗೆ ಒಂದು ಅರ್ಥವಾಗದ ಸಂಗತಿ ಎಂದರೆ, ಕೋಮುವಾದ ಎನ್ನುವ ಪದ ಬಂದ ಕೂಡಲೇ ಹಿಂದೂ ಧರ್ಮ ಅಥವಾ ಸಂಘ ಪರಿವಾರಕ್ಕೆ ಮಾತ್ರ ಅನ್ವಯಿಸುವಂತೆ ಹೇಳುತ್ತಿರುವುದು. ಕೇವಲ ಸಂಘಪರಿವಾರದವರು ಮಾತ್ರ ಕೋಮುವಾದಿ ಧೋರಣೆ ಹೊಂದಿದ್ದಾರೆಯೇ..? ಸರಿ ಸಂಘ ಪರಿವಾರದವರು ಹಿಂದೂ ಕೋಮುವಾದಿ ಧೋರಣೆ ಹೊಂದಿದ್ದಾರೆ ಎಂದೇ ಇಟ್ಟುಕೊಳ್ಳೋಣ. ಆದರೆ ಕೋಮುವಾದ ಎನ್ನುವ ಶಬ್ದ ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದುಕೊಂಡಿದ್ದೇನೆ.
    ಹಾಗಾದರೆ ಉಳಿದ ಜಾತಿ ದರ್ಮದಲ್ಲಿ ಕೋಮುವಾದಿ ನಿಲುವು ಇಲ್ಲವೇ..? ಜಿಹಾದಿ ಹೆಸರಿನಲ್ಲಿ ಮುಸ್ಲಿಂ ಭಯೋತ್ವಾನೆ ಕೋಮುವಾದದ ಬಾಗವೇ ಅಲ್ಲವೇ..? ಭಾರತದ ಇತಹಾಸದ ಮೇಲೆ ಒಮ್ಮೆ ಕಣ್ಣಾಡಿಸಿದರೆ, ಬಾರತದ ಮೇಲೆ ಮುಸ್ಲಿಂ ದಾಳಿಗೆ ಉಂಟಾದ ಸಂದರ್ಭದಲ್ಲಿ ಮುಸ್ಲಿಂ ರಾಜರು ಬಲಾತ್ಕಾರವಾಗಿ ಮುಸ್ಲಿಂ ಮತಾಂತರ ಮಾಡಿದರು. ಇದು ಕೋಮುವಾದ ಎನಿಸುವುದಿಲ್ಲವೇ. ಕ್ರಿಶ್ಚಿಯನ್‌ ಧರ್ಮದವರು ಕೂಡ ತಮ್ಮ ದರ್ಮ ಪ್ರಚಾರದ ಹೆಸರಿನಲ್ಲಿ ಸಾಕಷ್ಟು ಮತಾಂತರ ಮಾಡಿದರು. ಇದು ಕೋಮುವಾದ ಭಾಗವಲ್ಲವೇ. ಕೋಮುವಾದ ಎನ್ನುವುದನ್ನು ಹಿಂದೂಗಳ ಮೇಲೆ ಮಾತ್ರ ಏಕೆ ಹೇರಲಾಗುತ್ತದೆ.
    ಜಗತ್ತಿನ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವ ದೇಶವೆಂದು ಕರೆಯಲ್ಪಡುವ ಇಂಡಿಯಾದ ಮನಸ್ಥಿತಿ ‘ಹಿಂದೂ ದೇಶ’ದ ಫೋಬಿಯಾವನ್ನು ಒಳಗೊಂಡಿದೆ. ಗಾಂಧಿಯ ‘ಅಹಿಂಸೆ’ ತತ್ವವನ್ನು ಗೇಲಿ ಮಾಡುತ್ತಿದ್ದ ಸಂಘ ಪರಿವಾರ ಕಳೆದ ಎಂಬತ್ತು ವರ್ಷಗಳಲ್ಲಿ ಕೋಮು ಗಲಭೆಗಳ ಮೂಲಕ ಹಿಂಸಾಚಾರ, ದ್ವೇಷ, ಹತ್ಯೆಗಳನ್ನು ನಡೆಸಿದೆ ಎನ್ನುವ ಗಂಭೀರವಾದ ಆರೋಪಗಳನ್ನು ಎದುರಿಸುತ್ತಿದೆ ಮತ್ತು ಈ ಅಪಾದನೆಗಳಿಗೆ ಸಾವಿರಾರು ಸಾಕ್ಷಿಗಳಿವೆ. ಘಟನೆಗಳಿವೆ. ನಿರಾಶ್ರಿತರಿದ್ದಾರೆ ಎಂದು ಬರೆದಿದ್ದೀರಿ. ಇದ್ದರೂ ಇರಬಹುದು. ಆದರೆ ಹಿಂದೂ ಕೋಮುವಾದದಿಂದ ಉಂಟಾದ ಅನಾಚಾರಗಳನ್ನು ಸಾಕ್ಷಿ ಸಮೇತ ಹುಡುಕುವ ನಿಮಗೆ ಉಳಿದ ದರ್ಮದವರು ಮಾಡುತ್ತಿರುವುದು ಕೋಮುವಾದ ಎಂದು ಏಕೆ ಅನ್ನಿಸುವುದಿಲ್ಲ.

    Reply
    1. ಚಂದ್ರಪ್ಪ ನೀಲಗುಂದ

      ಖಂಡಿತ ಕೋಮುವಾದಕ್ಕೆ ಕೇಸರಿ,ಹಸಿರು,ಬಿಳಿ ಎಂಬ ಭೇದವಿಲ್ಲ.ಎಲ್ಲ ಬಣ್ಣದ ಕೋಮುವಾದವೂ ಅಪಾಯಕಾರಿಯೇ.

      Reply

Leave a Reply to BNS Cancel reply

Your email address will not be published. Required fields are marked *