Daily Archives: October 26, 2015

ಹೌದು, ಮಾಧ್ಯಮ ‘ಜಾತೀಯತೆ’ ಯಿಂದ ಮುಕ್ತವಾಗಬೇಕು

– ಶಂಶೀರ್ ಬುಡೋಳಿ

ಸಿಎಂ ಮಾಧ್ಯಮ ಸಲಹೆಗಾರ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ರವರ ಅಭಿಪ್ರಾಯಕ್ಕೆ ಗೌರವ ಕೊಟ್ಟು ಮತ್ತಷ್ಟು ಕಹಿ ವಿಚಾರಗಳನ್ನ ಇಲ್ಲಿ ಹಂಚಿಕೊಳ್ಳಲು ನಾನು ಇಚ್ಛೆಪಡುತ್ತೇನೆ.

ಇದಕ್ಕೆ ವಿರೋಧ ವ್ಯಕ್ತವಾಗಲೂಬಹುದು, ಸಹಮತ ದೊರೆಯಲೂಬಹುದು. ಆದರೆ ಕೆಲವೊಂದು ಸತ್ಯಗಳನ್ನ ಹೇಳಲೇಬೇಕಾದ ಅನಿವಾರ್ಯತೆ ಇದೆ. ಯಾಕೆಂದರೆ ಮಾಧ್ಯಮಕ್ಕೆ ಎಂಟ್ರಿ ಕೊmediaಡುವ ವೇಳೆ ಕೆಲವೊಂದು ವಿಚಾರಕ್ಕೆ, ಕೆಲವೊಂದು ವ್ಯಕ್ತಿಗಳಿಗೆ ನಾನು ಕೂಡಾ ಅಸ್ಪೃಶ್ಯನಾಗಿದ್ದೆ..!

ಖಾಸಗಿ ನ್ಯೂಸ್ ಚಾನೆಲ್ನಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿರುವ ನನಗೆ ಸತ್ಯವೊಂದನ್ನ ಬಿಟ್ಟು ಏನನ್ನೂ ಹೇಳೋಕೇ ಆಗಲ್ಲ. ಮಾಧ್ಯಮಗಳು ಇರೋದು ಜನಹಿತಕ್ಕಾಗಿ. ಆದರೆ ಇವತ್ತು ಈ ಎಲ್ಲಾ ಆಶಯಗಳಿಗೆ ಬೆಲೆನೇ ಸಿಗುತ್ತಿಲ್ಲ ಎಂಬ ಬೇಸರನೂ ಇದೆ. ಸಂವಿಧಾನದ ಮೂಲ ಆಶಯಗಳನ್ನೇ ಗಾಳಿಗೆ ತೂರಲಾಗುತ್ತಿದೆ. ಕಾರಣ ನಮ್ಮ ಮೇಲಿರುವ ಹುದ್ದೆಗಳಲ್ಲಿ ಸಮಾನ ಮನಸ್ಕರು ಇಲ್ಲದಿರುವುದು! ಇದಕ್ಕೆ ಏನೋ, ಜನರಿಗೆ ನ್ಯೂಸ್ ಚಾನೆಲ್ ಅಂದರೆ ಈಗೀಗ ನಿರಾಸೆ ಮೂಡುತ್ತಿರುವುದು ಹಾಗೂ ಪತ್ರಕರ್ತರು ಆಗಾಗ ಚಾನೆಲ್ನಿಂದ ಚಾನೆಲ್ಗೆ `ಜಂಪ್’ ಆಗುತ್ತಿರುವುದು.

‘ಮೀಸಲಾತಿ’ಗಾಗಿ ದೇಶದಲ್ಲಿ ಹೋರಾಟ ನಡೆಯುತ್ತಿರುವ ಈ ಹೊತ್ತಲ್ಲಿ ಮಾಧ್ಯಮದಲ್ಲೂ ಮೀಸಲಾತಿ ಬೇಕಾ..? ಬೇಡವಾ..? ಎಂಬ ಪ್ರಶ್ನೆ ಉದ್ಭವಿಸುವುದು ಸರಿ. ಇಡೀ ಭಾರತೀಯ ಮಾಧ್ಯಮ ಲೋಕದತ್ತ ನೋಡಿದಾಗ ಇಲ್ಲಿ ‘ಜಾತೀಯತೆ’ ಪ್ರಬಲವಾಗಿ ಬೇರೂರಿದ್ಯಾ.. ಎಂಬ ಪ್ರಶ್ನೆ ಹೆಚ್ಚಿನ ಮಂದಿಯಲ್ಲಿದೆ. ಯಾಕೆಂದರೆ ನೀವೊಮ್ಮೆ ಭಾಷಾವಾರು ನ್ಯೂಸ್ ಚಾನೆಲ್, ಪತ್ರಿಕೆಗಳಲ್ಲಿ, ರೇಡಿಯೋ ಚಾನೆಲ್, ವೆಬ್ ಸೈಟ್ಗಳಲ್ಲಿ ಹಾಗೂ ಚಿತ್ರರಂಗದಲ್ಲಿ ಉನ್ನತ ಸ್ಥಾನದಲ್ಲಿರುವವರು ಯಾರೆಂದು ಕಣ್ಣಾಡಿಸಿ. ಉನ್ನತ ಸ್ಥಾನ ಎಂದು ಕರೆಯಲ್ಪಡುವ ಹುದ್ದೆಗಳಲ್ಲಿ ಯಾವ್ಯಾವ ಜಾತಿಯವರು ಇದ್ದಾರೆಂಬುದು ನಿಮಗೆ ಗೊತ್ತಾಗುತ್ತೆ. ಅಂದರೆ ಯಾವ ರೀತಿ ಈ ಕ್ಷೇತ್ರದಲ್ಲಿ ‘ಜಾತೀಯತೆ’ ಎಂಬುದು ನುಸುಳಿತು ಎನ್ನುವುದೇ ದೊಡ್ಡ ಪ್ರಶ್ನೆ. ನನ್ನ ಪ್ರಕಾರ ಮಾಧ್ಯಮ ‘ಜಾತೀಯತೆ’ಯಿಂದ ಮುಕ್ತವಾಗಬೇಕು. ಮನುಷ್ಯತ್ವ ಇರುವ ಮಂದಿ ಜಾಸ್ತಿಯಾಗಬೇಕು. ಆ ಜಾತಿ, ಈ ಜಾತಿ ಅನ್ನೋದನ್ನ ತೊಲಗಿಸಿ, ಸಮಾಜದ ಹಿತಕ್ಕಾಗಿ ದುಡಿಯುವವರ ಸಂಖ್ಯೆ ಜಾಸ್ತಿಯಾಗಬೇಕು.

ಪ್ರಜಾಪ್ರಭುತ್ವ ದೇಶದಲ್ಲಿರುವ ಮಾಧ್ಯಮವೊಂದು ‘ಜಾತೀಯತೆ’ ಮಾಡಿ ಸುದ್ದಿ ಪ್ರಸಾರ ಮಾಡುವುದು ಎಷ್ಟು ಸರಿ..? ಈ ದೇಶ, ನೆಲ, ಜಲ ಯಾವ ರೀತಿ ಹಿಂದೂ, ಮುಸ್ಲಿಂ, ಜೈನ, ಸಿಖ್ ಹೀಗೆ ಮುಂತಾದ ಧರ್ಮೀಯರಿಗೆ ಬದುಕಲು ಅವಕಾಶ ನೀಡಿದೆಯೋ ಅದೇ ರೀತಿ ಮಾಧ್ಯಮದಲ್ಲಿಯೂ ಸಹ ಎಲ್ಲಾ ಧರ್ಮ, ಜಾತಿಯವರಿಗೂ ಪ್ರಾತಿನಿಧ್ಯ ಸಿಗಬೇಕು.

ಒಂದಂತೂ ಸತ್ಯ. ಕನ್ನಡ ಮಾಧ್ಯಮ ಇಂದು ‘ಜಾತೀಯತೆ’, `ಜಿಲ್ಲಾವಾರು ಬೇದಭಾವ’ದ ಸುಳಿಯಲ್ಲಿ ಸಿಲುಕಿದೆ. ಅದಕ್ಕಿಂತಲೂ ಬಳಲುತ್ತಿದೆ ಅಂತಾ ಹೇಳಬಹುದು. ಕರಾವಳಿ, ಮಲೆನಾಡು, ಉತ್ತರ
ಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಮೈಸೂರು ಕರ್ನಾಟಕ ಎಂದು ವಿಂಗಡಿಸುವ ಮಂದಿ ಜಾಸ್ತಿಯಾಗುತ್ತಿದ್ದಾರೆ. ಹೀಗಾಗಿ ಪತ್ರಕರ್ತರ ಮಧ್ಯೆ `ಮಾನಸಿಕ ಸಂಘರ್ಷ’ ನಡೀತಿದೆ ಅಂತಾ ಹೇಳಬಹುದು. ಪತ್ರಕರ್ತರೇನೂ ದೇವತಾ ಪುರುಷರಲ್ಲ. ಆದರೆ ಸಮಾಜದ ಪಾಲಿಗೆ ಅವರು ಪ್ರಮುಖ ವ್ಯಕ್ತಿಗಳು ಅಷ್ಟೇ. ಸುಲಭವಾಗಿ ಹೇಳುವುದಾದರೆ ಸಮಾಜವನ್ನ ಸರಿದಾರಿಯಲ್ಲಿ ನಡೆಸುವಂತಹವರು. ಸರಿದಾರಿಗೆ ಹೋಗಿ ಅಂತಾ ದಾರಿ ತೋರಿಸುವವರು.

ಹಣಬಲ, ಅಧಿಕಾರ ಬಲ ಹೊಂದಿದವರು ಇವತ್ತು ಮಾಧ್ಯಮವನ್ನ ಆಳುತ್ತಿದ್ದಾರೆ. ಕನ್ನಡದಲ್ಲಿ ಇವತ್ತು 11 ನ್ಯೂಸ್ ಚಾನೆಲ್ಗಳಿವೆ. 6 ಎಂಟರ್ಟೈನ್ಮೆಂಟ್ ಚಾನೆಲ್ಗಳಿವೆ. ಇದರ ಜತೆಗೆ ಮ್ಯೂಸಿಕ್, ಕಾಮಿಡಿ, ಮೂವೀಸ್, ಧಾರ್ಮಿಕ, ಮಕ್ಕಳ ಚಾನೆಲ್ಗಳಿವೆ. ಇವೆಲ್ಲಾ ಯಾರ ಒಡೆತನದಲ್ಲಿವೆ ಎಂಬುದನ್ನ ನೀವು ನೋಡುತ್ತಾ ಹೋದರೆ ಎಲ್ಲವೂ ಅರ್ಥವಾಗುತ್ತೆ. ಯಾವ್ಯಾವ ಜಾತಿಯವರಿಗೆ ನಮ್ಮ ಮಾಧ್ಯಮದಲ್ಲಿ ಎಷ್ಟು ಮನ್ನಣೆ ಸಿಗುತ್ತಿದೆ ಅಂತಾನೂ ಗೊತ್ತಾಗುತ್ತೆ. ಹಣದಾಸೆಗೋ, ಪ್ರಚಾರಕ್ಕಾಗಿಯೋ ಇವತ್ತು ಕೆಲ ಮಂದಿ ಮಾಧ್ಯಮ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಚಾನೆಲ್ಗಳನ್ನ, ಪತ್ರಿಕೆಗಳನ್ನ ಕಟ್ಟುತ್ತಿದ್ದಾರೆ. ಸಿನಿಮಾ ಮಾಡುವವರೂ ಇದ್ದಾರೆ. ಹೀಗಾಗಿ ವಿವಿಧ ಮನೋಭಾವದ ಪತ್ರಕರ್ತರ ಮಧ್ಯೆ ಮಾನಸಿಕ ಸಂಘರ್ಷ ನಡೆಯುತ್ತಿದೆ ಅಂತಾ ಹೇಳಬಹುದು. ಹೀಗಾಗಿ ಸುದ್ದಿ ಪ್ರಸಾರದ ವಿಷಯದಲ್ಲಿ ತಾರತಮ್ಯ ಕಾಣುತ್ತಿದೆ. ಪರಿಣಾಮ ಜನರಿಗೆ ಗೊಂದಲವುಂಟಾಗುತ್ತಿದೆ.
ಯೆಸ್. ನಾವೆಲ್ಲಾ ಸಮಾನ ಮನಸ್ಕರು. ಪ್ರಗತಿಪರ ಇರುವವರು. ಮನುಷ್ಯತ್ವ ಪರ ಇರುವವರು. ಧರ್ಮದ ತಳಹದಿಯಲ್ಲಿ ಬದುಕುವವರು. ಆಶಾದಾಯಕವಾದ, ಹೊಸ ಆದರ್ಶಗಳನ್ನ, ಹೊಸ ಚಿಂತನೆಗಳನ್ನ ಇಟ್ಟುಕೊಂಡು ಕಷ್ಟಪಟ್ಟು, ಬಹಳ ವಿರೋಧಭಾಸಗಳನ್ನ, ಅವಮಾನವನ್ನ, ಸವಾಲುಗಳನ್ನ ಎದುರಿಸಿ ಸಮಾಜದ ಪರವಾಗಿ ದುಡಿಯಬೇಕೆಂದು ಏನೇನೋ ಕನಸುಗಳನ್ನ ಕಟ್ಟಿಕೊಂಡು ಇವತ್ತು ಮಾಧ್ಯಮ ರಂಗಕ್ಕೆ ಎಂಟ್ರಿ ಕೊಡುವುದು ಸುಲಭದ ಮಾತಲ್ಲ. ಬರವಣಿಗೆ ಎಂಬ ಪ್ರತಿಭೆ ಜತೆಗೆ ಅಲ್ಪಸಂಖ್ಯಾತರ, ದಲಿತ, ಹಿಂದುಳಿದ, ಶೋಷಿತರ, ಅಸ್ಪೃಶ್ಯರ ಪರ ಹಾಗೂ ನೊಂದವರ ಪರ ನಾನು ದುಡಿಯಬೇಕೆಂಬ ಕನಸುಗಳನ್ನಿಟ್ಟುಕೊಂಡು ಮಾಧ್ಯಮ ರಂಗಕ್ಕೆ ( ಸ್ನಾತಕೋತ್ತರ ಪದವಿ ಪಡೆದು) ಎಂಟ್ರಿ ಕೊಟ್ಟೆ. ಖುಷಿ ಸಂಗತಿ ಏನೆಂದರೆ ಇಂತಹುದೇ ಆಶಯ ಹೊಂದಿರುವ ದೈನಿಕ ಪತ್ರಿಕೆಯಲ್ಲಿ ಮೊದಲು ಕೆಲಸ ಮಾಡಲು ಅವಕಾಶ ಸಿಕ್ಕಿದ್ದೇ ಒಂದು ಭಾಗ್ಯ. ಆ ಪತ್ರಿಕೆ ನನಗೆ ಕಲಿಸಿದ ಪತ್ರಿಕೋದ್ಯಮದ ಪಾಠ ನನ್ನ ಬದುಕಿಗೆ ದಾರಿ. ಹಾಗೆಯೇ ಆ ಪತ್ರಿಕೆ ಇವತ್ತಿಗೂ ನನ್ನ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿದೆ. ಕನ್ನಡ ಪತ್ರಿಕೋದ್ಯಮದಲ್ಲಿ ಇಂತಹ ಪತ್ರಿಕೆ ಇದೆ ಅನ್ನೋದೇ ಸಂತೋಷದ ವಿಷಯ.
ಸಿಇಓ, ಪ್ರಧಾನ ಸಂಪಾದಕ, ಸಂಪಾದಕ, ಸಹಾಯಕ ಸಂಪಾದಕ ಹೀಗೆ ಉನ್ನತ ಮಟ್ಟದ ಜವಾಬ್ದಾರಿ ಹೊಂದಿರುವ ಹುದ್ದೆಗಳಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ಜಾತಿಗಳ ಪ್ರಮಾಣ ಬಹಳ ಕಡಿಮೆ ಇದೆ. ಮೊದಲಿಗಿಂತ ಈಗೀಗ ಮುಸ್ಲಿಮ್ ಸಮುದಾಯದಲ್ಲಿ ಮಾಧ್ಯಮ ಜಾಗೃತಿ ಮೂಡಿಸಲಾಗುತ್ತಿದೆ. ಹೀಗಾಗಿ ಕೆಲವರು ಪತ್ರಿಕೋದ್ಯಮದಲ್ಲಿ ಶಿಕ್ಷಣ ಪಡೆದು ಮಾಧ್ಯಮ ರಂಗಕ್ಕೆ ಬರಲು ಉತ್ಸುಕರಾಗಿದ್ದಾರೆ. ಅಂದಮಾತ್ರಕ್ಕೆ ಇವರಿಗೆ ಭರ್ಜರಿ ಸ್ವಾಗತವೇನೂ ಇಲ್ಲಿ ಸಿಗುತ್ತಿಲ್ಲ. ಯಾಕಂದ್ರೆ ಜಾತಿ, ಪ್ರಾಂತ್ಯವಾರು ಸಂಘರ್ಷದಿಂದ ಬಳಲಿರುವ ಕೆಲ ಮಾಧ್ಯಮದಲ್ಲಿ ಮುಸ್ಲಿಮ್, ದಲಿತ, ಹಿಂದುಳಿದ ವರ್ಗದ ವ್ಯಕ್ತಿಯನ್ನ ನೇಮಕ ಮಾಡುವಾಗ ಹಿಂದೆ-ಮುಂದೆ ನೋಡುವ ಮಂದಿಯೇ ಜಾಸ್ತಿ. ಅವನಲ್ಲಿ ಶೈಕ್ಷಣಿಕ ಅರ್ಹತೆ, ಪ್ರತಿಭೆ, ಕೆಲಸ ಮಾಡುವ ಸಾಮರ್ಥ್ಯ ಇದ್ದರೂ ನೇಮಕ ಮಾಡುವಲ್ಲಿ ಹಿಂದೇಟು ಹಾಕಲಾಗುತ್ತಿದೆ. ಸಂದರ್ಶನದ ವೇಳೆ ಮಾನಸಿಕವಾಗಿ ಕುಗ್ಗಿಸುವಂತೆ ವರ್ತಿಸುವ ಮಂದಿಯೂ ಇದ್ದಾರೆ. ಒಂದು ವೇಳೆ ನೇಮಕ ಮಾಡಿದರೂ ಕಡಿಮೆ ಸಂಬಳ ನೀಡಿ ನೇಮಕ ಮಾಡಲಾಗುತ್ತದೆ. ಇದಕ್ಕೆ ನೊಂದು ಎಷ್ಟೋ ಮಂದಿ ಪತ್ರಿಕೋದ್ಯಮದ ಸಹವಾಸವೇ ಬೇಡ ಅಂತಾ ಬೇರೆ ಕ್ಷೇತ್ರಕ್ಕೋ, ವಿದೇಶಕ್ಕೋ ಹೋಗಿ ದುಡಿಯುತ್ತಿದ್ದಾರೆ.
ನನ್ನಲ್ಲಿ ಒಮ್ಮೆ ಹಿರಿಯ ಪತ್ರಕರ್ತರೊಬ್ಬರು ಪ್ರಶ್ನಿಸಿದ್ದರು. ‘ಅಲ್ಲ, ಈ ಮುಸ್ಲಿಮ್, ದಲಿತ, ಹಿಂದುಳಿದ ವರ್ಗದ ಯುವಕ-ಯುವತಿಯರು ಪತ್ರಿಕೋದ್ಯಮದಲ್ಲಿ, ಪದವಿಯೋ/ ಸ್ನಾತಕೋತ್ತರ ಪದವಿಯೋ ಪಡೆದು ಎಲ್ಲಿಗೆ ಹೋಗುತ್ತಿದ್ದಾರೆ’ ಎಂದು ಪ್ರಶ್ನಿಸಿದ್ದರು. ಅದಕ್ಕೆ ನಾನು ಹೇಳಿದೆ. ‘ಸರ್, ಸಾಮಾಜಿಕ ಕಳಕಳಿಯುಳ್ಳ ಮಂದಿ ನಮ್ಮ ಮಧ್ಯೆ ಇಲ್ಲ ಅಂತಲ್ಲ. ಆದರೆ ಕಡಿಮೆ ಸಂಬಳದಲ್ಲಿ ಜೀವನಪೂರ್ತಿ ದುಡಿಯಿರಿ’ ಅಂತಾ ಆರಂಭದಲ್ಲೇ ಹೇಳಿದರೆ ಅವರೇನೂ ಮಾಡುತ್ತಾರೆ? ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊಂದಿರುವವರು ಈ ಸಂಬಳದಲ್ಲಿ ದುಡಿಯಿರಿ ಅಂತಾ ಹೇಳಿದರೆ ಏನ್ ಮಾಡುತ್ತಾರೆ? ಅಂದೆ..’ ಹೀಗಾಗಿ ಇಂದು ಮಾಧ್ಯಮದಲ್ಲಿ ಅರಳಬೇಕಾಗಿದ್ದ ಪ್ರತಿಭೆಗಳು ಅವಕಾಶ ಸಿಗದೇ ಸಾಯುತ್ತಿವೆ. ಆದರೆ ನನ್ನಂತಹ ಆಶಾವಾದಿಗಳು, ಪ್ರಗತಿಪರರು, ಹೊಸ ಆಲೋಚನೆಯನ್ನ, ಗುರಿಗಳನ್ನ ಹೊಂದಿರುವವರು ಅಪಮಾನ, ನಿರ್ಲಕ್ಷ್ಯವನ್ನ ಎದುರಿಸುತ್ತಾ ಅದರ ಜೊತೆಗೆ ಹೋರಾಡುತ್ತಿರುವುದರಿಂದಲೇ ಇವತ್ತು ನೆಲೆಯೂರಲು ಸಾಧ್ಯವಾಗಿದೆ.

ಹೆಚ್ಚಿನ ಪತ್ರಕರ್ತ ಮಿತ್ರರು ಇತರರಿಗೆ ಆದ ಅನ್ಯಾಯ, ಮೋಸದ ಬಗ್ಗೆ ವರದಿ ಮಾಡುತ್ತಾರೆ. ಆದರೆ ತಮಗಾದ ಅನ್ಯಾಯದ ಬಗ್ಗೆ ಸಮಾಜದ ಜೊತೆ ಹೇಳಿಕೊಳ್ಳಲು ಇಚ್ಛೆಪಡಲ್ಲ. ಕಾರಣ ವೃತ್ತಿ ಗೌರವ..!

ಯೆಸ್. ಅಮಿನ್ಮಟ್ಟುರವರು ತಮ್ಮ ಭಾಷಣದಲ್ಲಿ ಹೇಳಿದಂತೆ ಮಾಧ್ಯಮ ಕ್ಷೇತ್ರದಲ್ಲಿ ದುಡಿಯುವವರ ಮೇಲೆ ಹೊಡೆಯಲ್ಲ, ಬಡಿಯಲ್ಲ, ಹಲ್ಲೆ ಮಾಡಲ್ಲ. ಬದಲು ಮಾನಸಿಕವಾಗಿ ಕಿರುಕುಳ ಕೊಟ್ಟರೆ ಸಾಕು, ಅವರಾಗಿಯೇ ಕೆಲಸ ಬಿಟ್ಟು ಹೋಗುತ್ತಾರೆ ಎಂಬ ಮಾತು ನಿಜ. ಇದಕ್ಕೆ ನಾನೊಂದು ಮಾತನ್ನ ಸೇರಿಸುತ್ತೇನೆ. ಅದೇನೆಂದರೆ ಕಡಿಮೆ ಸಂಬಳ ಕೊಟ್ಟು ಸಹ ಬೇಗನೇ ಓಡಿಸುವ ಮಂದಿನೂ ಇದ್ದಾರೆ..! ನನ್ನ ಪ್ರಕಾರ ಇಂತಹ ಕಡೆ ಕೆಲಸ ಮಾಡುವ ನನ್ನ ಪತ್ರಕರ್ತ ಮಿತ್ರರು ಹೇಡಿಯಂತೆ ಓಡಬಾರದು. ಹೋರಾಡಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿ ಸಂಬಳ ಜಾಸ್ತಿ ಗಿಟ್ಟಿಸಿಕೊಳ್ಳಬೇಕು. ಇಲ್ಲದಿದ್ದರೆ ಹೋರಾಡಿಯೇ ನಿರ್ಗಮಿಸಬೇಕು..!
ದೈಹಿಕವಾಗಿ ಕಿರುಕುಳ ಕೊಡುವುದಕ್ಕಿಂತ ಮಾನಸಿಕವಾಗಿ ಕಿರುಕುಳ ಕೊಟ್ಟರೆ ಆತನ ಮಾನಸಿಕ ನೆಮ್ಮದಿಗೆ ಭಂಗ ತರಬಹುದು. ಇದು ಉನ್ನತ ಸ್ಥಾನದಲ್ಲಿರುವ ಮಂದಿ ಕೆಲಸಗಾರರನ್ನ ಓಡಿಸಲು ಕಂಡುಕೊಂಡಿರುವ ಹೊಸ ಮಾರ್ಗ. ಹೀಗೆ ಮಾಡಿದರೆ ಕೆಲಸದಲ್ಲಿ ತಪ್ಪು ಆಗುತ್ತೆ. ಇದನ್ನೇ ನೆಪವನ್ನಾಗಿಟ್ಟುಕೊಂಡು ಇವತ್ತು ಎಷ್ಟೋ ಮಂದಿಯನ್ನ ಕೆಲಸದಿಂದ ತೆಗೆದು ಹಾಕಲಾಗಿದೆ.
ಯಾವುದೇ ವ್ಯಕ್ತಿ ಇರಲಿ, ಎಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾನೋ, ಅದನ್ನ ಪ್ರೋತ್ಸಾಹಿಸುವ ಬದಲು ಆತನಲ್ಲಿರುವ ನೆಗೆಟಿವ್ ಅಂಶಗಳನ್ನೇ ಎತ್ತಿಕೊಂಡು ಮತ್ತೆ ಮತ್ತೆ ಕೀಳರಿಮೆ ಮೂಡಿಸುವಂತೆ ಆತನ ಜೊತೆ ವರ್ತಿಸುವಸುವ ಮಂದಿಗೇನೂ ಕಡಿಮೆ ಇಲ್ಲ. ಸುಮ್ನೆ ಮೂದಲಿಸುತ್ತಾ ಆತನನ್ನ ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ವೇಳೆ ನಗು, ಮೌನದಿಂದ ಉತ್ತರ ನೀಡಿ ಅಂತಹ ವಿರೋಧಿಗಳನ್ನ ಸೋಲಿಸಬೇಕು. ಇನ್ನು ಪ್ರಾಮಾಣಿಕವಾಗಿ ಕೆಲಸ ಮಾಡುವುದಕ್ಕಿಂತ ವಾಮ ಮಾರ್ಗದಲ್ಲೋ ಹಣ ಮಾಡುವ ಮಂದಿನೂ ಇದ್ದಾರೆ. ಇನ್ನು ಕೆಲಸಕ್ಕಿಂತ ‘ಮಾತಿನ ಕೆಲಸ’ ಮಾಡುವ ಮಂದಿನೂ ಜಾಸ್ತಿ..! ಇದು ನಮ್ಮ ಮುಂದಿರುವ ವಾಸ್ತವ ಸಂಗತಿ.
ಒಂದು ಕಡೆ ಏಕಪಕ್ಷೀಯವಾಗಿ ವರದಿ ಪ್ರಸಾರ ಆಗುತ್ತಿರುವುದಕ್ಕೆ ಈ ಜಾತೀಯತೆಯೇ ಕಾರಣ. ಜೊತೆಗೆ ಪ್ರಾಂತ್ಯವಾರು ಭೇದಭಾವ. ಹಿಂದಿ, ಇಂಗ್ಲೀಷ್ ಚಾನೆಲ್ಗಳಲ್ಲಿ ಮುಸ್ಲಿಮ್, ದಲಿತ, ಹಿಂದುಳಿದ ವರ್ಗದ ಮಂದಿಗೆ ಒಳ್ಳೆಯ ಅವಕಾಶ ದೊರೆಯುತ್ತಿದೆ. ಆದರೆ ಕನ್ನಡ ಮಾಧ್ಯಮದಲ್ಲಿ ಇದ್ಯಾಕೆ ಸಾಧ್ಯವಾಗುತ್ತಿಲ್ಲ..? ನಮ್ಮ ಕನ್ನಡ ಟಿವಿ ಮಾಧ್ಯಮದಲ್ಲಿ ಎಷ್ಟು ಮಂದಿ ಸೆಕ್ಯುಲರ್ ಎಡಿಟರ್ಗಳಿದ್ದಾರೆ..? ಎರಡು-ಮೂರೋ ಮಂದಿ ಇದ್ದಾರೆ. ಇವರು ನಮ್ಮ ಜೊತೆಗೆ ಇದ್ದಾರೆ ಅನ್ನೋದೇ ಸಮಾಧಾನ, ಖುಷಿ. ಇನ್ನು ನಾವು, ನೀವು ಚಿಂತಿಸಬೇಕಾದ್ದು ಬಹಳವಿದೆ. ಪ್ರಗತಿಪರ ಚಿಂತನೆಯುಳ್ಳ ಯುವಕ-ಯುವತಿಯರಿಗೆ ಅವಕಾಶ ಕಡಿಮೆ ನೀಡಲಾಗುತ್ತಿದೆ. ಅಂದ ಮಾತ್ರಕ್ಕೆ ಎಲ್ಲಾ ಮಾಧ್ಯಮಗಳು ಜಾತೀಯತೆ ಮಾಡುತ್ತಿದೆ ಎಂದು ಹೇಳುತ್ತಿಲ್ಲ. ಬದಲು ಮೂಲ ಆಶಯಗಳನ್ನ ಮರೆತಂತಿದೆ. ಇನ್ನು ಕೆಲ ಮಾಧ್ಯಮಗಳಲ್ಲಿರುವ ಮಂದಿ ಜಾತೀಯತೆ ಪರವಾಗಿರುವುದರಿಂದ್ದ ಎಲ್ಲಾ ಮಾಧ್ಯಮಗಳಿಗೆ ಕೆಟ್ಟ ಹೆಸರು ಬರುತ್ತಿದೆ. ಮೂಲ ಆಶಯವನ್ನ ಮರೆತು ಸುದ್ದಿ ಮಾಡಲು ಹೋದರೆ ಏನಾಗುತ್ತೆ, ಹೇಳಿ..?

 

ಇವತ್ತು ನಮ್ಮ ಮುಂದೆ ಪ್ರಗತಿಪರ ಚಿಂತನೆಯುಳ್ಳ ಪತ್ರಿಕೆ ಯಾವುದು ಅಂತಾ ಕೇಳಿದರೆ ಉತ್ತರ ಕೇವಲ ಮೂರೇ ಅಂತಾ ಹೇಳಬಹುದು. ಆದರೆ ಪ್ರಗತಿಪರ ಚಿಂತನೆಯುಳ್ಳ ಚಾನೆಲ್ ಇಲ್ಲ. ಕನ್ನಡ ಮಾಧ್ಯಮಕ್ಕೆ ಅಲ್ಪಸಂಖ್ಯಾತ, ದಲಿತ, ಹಿಂದುಳಿದ, ಶೋಷಿತರ, ಅಸ್ಪೃಶ್ಯರ ಪರ ಹಾಗೂ ನೊಂದವರ ಪರವಾಗಿರುವ ಟಿವಿ ಚಾನೆಲ್ವೊಂದು ಬೇಕು. ಜೊತೆಗೆ ಪ್ರಗತಿಪರ ಚಿಂತನೆಯುಳ್ಳ ಸಂಪಾದಕರು ಬೇಕು.. ಅದರ ಅಗತ್ಯತೆ ಜರೂರಾಗಿದೆ. ಅದು ಕೂಡಿ ಬರುವ ಕಾಲ ಸನ್ನಿಹಿತವಾಗಿದೆ..!

 

ಕನ್ನಡ ಮಾಧ್ಯಮದಲ್ಲಿ ಕೆಲಸ ಮಾಡುವವರಲ್ಲಿ ಹೆಚ್ಚಾಗಿ ಕರಾವಳಿ, ಮಲೆನಾಡು ಮಂದಿನೇ ಜಾಸ್ತಿ. ಇದಕ್ಕೆ ಕಾರಣನೂ ಇದೆ. ಯಾಕೆಂದರೆ ಈ ಭಾಗದಲ್ಲಿ ಪತ್ರಿಕೋದ್ಯಮ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಹಾಗೆಯೇ ಪತ್ರಿಕೋದ್ಯಮ ಕಲಿಸುವ ಕಾಲೇಜುಗಳಿವೆ. ಜೊತೆಗೆ ಪ್ರೋತ್ಸಾಹನೂ ಜಾಸ್ತಿ. ಅಲ್ಲದೇ ಈಗಿರುವ ನ್ಯೂಸ್ ಚಾನೆಲ್ಗಳಲ್ಲಿ ನ್ಯೂಸ್ ರೀಡರ್ ಗಳು ಸಹ ಈ ಭಾಗದ ಮಂದಿನೇ ಜಾಸ್ತಿ. ಇದೆಷ್ಟು ನಿಜವೋ, ಅಷ್ಟೇ ನಿಜವಾದ ಇನ್ನೊಂದು ಸಂಗತಿ – ಸುದ್ದಿಮನೆಯಲ್ಲಿ ಇಂದಿಗೂ ಕರಾವಳಿ, ಮಲೆನಾಡು ಭಾಗದ ಯುವಕ-ಯುವತಿಯರನ್ನ (ಅದರಲ್ಲೂ ಮುಸ್ಲಿಮ್, ದಲಿತ) ನ್ಯೂಸ್ ರೀಡರೋ, ಆ್ಯಂಕರೋ ಮಾಡೋಕೇ ಹಿಂದೇಟು ಹಾಕಲಾಗುತ್ತಿದೆ. ಕಾರಣವಲ್ಲದ ಕಾರಣ ನೀಡಿ ಅಂದರೆ ‘ಮಂಗಳೂರಿನವರಿಗೆ/ ಮುಸ್ಲಿಮರಿಗೆ ಕನ್ನಡ ಬರಲ್ಲ’ ಹೀಗೆ ಏನೇನೋ ಅಸಂಬದ್ಧ ಕಾರಣ ಹೇಳಿ ಅವಕಾಶದಿಂದ ವಂಚಿತರನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಅದರಲ್ಲೂ ಮುಸ್ಲಿಮ್, ದಲಿತ, ಹಿಂದುಳಿದ ವರ್ಗಗಳ ಯುವಕ-ಯುವತಿಯರಿಗೆ ಈ ವಿಷಯದಲ್ಲಿ ಟಾರ್ಚರೇ ನೀಡಲಾಗುತ್ತೆ. ಅವರಿಗೆ ‘ಟ್ರೈನಿಂಗ್’ ನೆಪದಲ್ಲಿ ತಿಂಗಳುಗಟ್ಟಲೇ ಹಿಂಸೆ ನೀಡಲಾಗುತ್ತದೆ. ಮನುಷ್ಯತ್ವವನ್ನ ಮರೆತವರೇ ಹೆಚ್ಚಾಗುತ್ತಿದ್ದಾರೆ. ‘ನನಗೆ ಮಾತ್ರ ಗೊತ್ತು’ ಅನ್ನೋರೇ ಜಾಸ್ತಿ. ತಮ್ಮ ಬಳಿ ಪ್ರತಿಭೆ ಇದ್ದರೂ ಅದನ್ನ ಬೆಳೆಸುವ ನಾಯಕರು ಕಡಿಮೆ ಇದ್ದಾರೆ.
ನನ್ನ ಪ್ರಕಾರ ಮಾಧ್ಯಮದಲ್ಲಿ ಉನ್ನತ ಹುದ್ದೆಯಲ್ಲಿರುವವರಿಗೆ ಜಾತಿಭೇದ ಇರಬಾರದು. ಪ್ರಾಂತ್ಯವಾರು ದ್ವೇಷ ಇರಬಾರದು. ಎಲ್ಲಾ ಧರ್ಮ, ಜಾತಿಯವರಿಗೂ ಪ್ರಾತಿನಿಧ್ಯ ಕೊಡಬೇಕು. ಪ್ರತಿಭೆಗೆ, ಸಾಮರ್ಥ್ಯಕ್ಕೆ, ಪ್ರಾಮಾಣಿಕವಾಗಿ ಕೆಲಸ ಮಾಡುವ ಮಂದಿಗೆ ಅವಕಾಶ ನೀಡಬೇಕು. ಇಂತಹ ದೃಢ ನಿರ್ಧಾರವನ್ನು ಮಾಡುವವರು ಸಂಪಾದಕರು ಬೇಕಾಗಿದ್ದಾರೆ. ಕನ್ನಡ, ಗುಜರಾತಿ ಹೀಗೆ ಕೆಲ ಭಾಷಾ ಮಾಧ್ಯಮದಲ್ಲಿ ಜಾತೀಯತೆ ತೊಲಗಬೇಕೆಂದರೆ ಪ್ರಗತಿಪರ ಚಿಂತನೆಯುಳ್ಳ ಸಂಪಾದಕರ ಸಂಖ್ಯೆ ಜಾಸ್ತಿಯಾಗಬೇಕು. ಸುದ್ದಿಯನ್ನ ಸುದ್ದಿಯಾಗಿ ನೀಡುವ ಪತ್ರಕರ್ತರ ಸಂಖ್ಯೆ ಹೆಚ್ಚಾಗಬೇಕು. ಇದು ಕಾಲದ ಅನಿವಾರ್ಯತೆ ಕೂಡಾ. ಜನರ ಬೇಡಿಕೆ ಕೂಡಾ.