ಮನ್ವಂತರ : ಗಾಂಧಿ ಜಯಂತಿ ಕಥಾಸ್ಪರ್ಧೆ 2015 – ಬಹುಮಾನಿತ ಕಥೆ

ಸಂವರ್ತಸಾಹಿಲ್

“ಇಲ್ಲ ಸಾರ್ ತಲುಪಿಲ್ಲ.”

“ನಾನು ಕಳುಹಿಸಿ ಹತ್ತು ದಿನದ ಮೇಲಾಯ್ತು.”

“ಅಡ್ರೆಸ್ ಸರಿ ಬರ್ದಿದ್ದೀರಾ?”

“ಹೌದು. ಸರಿಯಾಗೇ ಬರೆದಿದ್ದೇನೆ.”

“ಆದರೂ ಬಂದಿಲ್ಲ ಯಾಕೋ ಗೊತ್ತಿಲ್ಲ.”

ಫೋನ್ ಇಟ್ಟ ಶ್ರೀನಿವಾಸ ಮೇಷ್ಟ್ರಿಗೆ ಸಿಟ್ಟು ಬಂದಿತ್ತು. ಫೋನ್ ಇಟ್ಟ ರಭಸಕ್ಕೆ ಟೀಪಾಯಿ ಅಂಚಿನಲ್ಲಿ ಇದ್ದ ಪೆನ್ ಸ್ಟಾಂಡ್ ಗುರುತ್ವಾಕರ್ಷಣೆಯನ್ನು ನಿರೂಪಿಸಿತ್ತು. ಮಧ್ಯಾಹ್ನಕ್ಕೆ ಅಡುಗೆ ತಯಾರಿಸುತ್ತಿದ್ದ ಮೇಷ್ಟ್ರ artಹೆಂಡತಿ ಅಡುಗೆಮನೆಯ ಬಾಗಿಲ ತನಕ ಬಂದು ಇವರು ಪೆನ್ ಸ್ಟಾಂಡ್ ಎತ್ತಿಡುವುದನ್ನು ನೋಡಿ ಮತ್ತೆ ಗ್ಯಾಸ್ ಒಲೆಯ ಬಳಿಗೆ ಹೋದರು.

ಒಂದೆರಡು ನಿಮಿಷ ಬಿಟ್ಟು ಅಡುಗೆ ಮನೆ ಹೊಕ್ಕ ಮೇಷ್ಟ್ರು, “ತರಕಾರಿ ಹೆಚ್ಚಿ ಕೊಡ್ಲಾ?” ಎಂದು ವಿಚಾರಿಸಿದರೆ ಹೆಂಡತಿ, “ಬೇಡ” ಎಂದು ತನ್ನ ಕೆಲಸ ಮುಂದುವರಿಸಿದರು. ಮತ್ತೆ ತನ್ನ ಕೊಠಡಿಗೆ ಹೋದ ಮೇಷ್ಟ್ರು ತನ್ನ ಕಪಾಟಿನ ಒಳಕ್ಕೆ ಇಟ್ಟಿದ್ದ ಹಲವು ಪುಸ್ತಕಗಳಲ್ಲಿ ಒಂದನ್ನು ಆಯ್ದು ಓದಲು ಆರಂಬಿಸಿದರು. ಓದುತ್ತ ಓದುತ್ತಾ ಹಾಗೆ ನಿದ್ದೆ ಹೋದರು.

ಕುಕ್ಕರ್ ಸೀಟಿ ಹೊಡೆದಾಗ ಎಚ್ಚರಾದ ಮೇಷ್ಟ್ರು ಹೋಗಿ ಹೆಂಡತಿ ಬಳಿ, “ನಿನಗೋಸ್ಕರ ಹಪ್ಪಳ ಕಾಯಿಸಿಕೋ ಬೇಕಾದ್ರೆ,” ಎಂದರೆ ಹೆಂಡತಿ “ನನಗೆ ಈ ಸೆಖೆಗೆ ಗಂಜಿ ಊಟ ಮಾತ್ರ ಸಾಕು ಅಂತಾಗಿದೆ,” ಎಂದರು. ಅಲ್ಲೇ ಇದ್ದ ಡ್ರಮ್ಮಿನ ಒಳಗಿಂದ ಒಂದು ಲೋಟ ನೀರು  ಕುಡಿದು ಮೇಷ್ಟ್ರು, “ನನ್ನ ಲೇಖನ ತಲುಪಲೇ ಇಲ್ಲ ಅಂತಾ ಹೇಳ್ತಾರಲ್ಲಾ ಪ್ರತಿ ಸತಿ,” ಎಂದು ಸುಮಾರು ಹೊತ್ತಿನಿಂದ ಒಳಗೇ ಇಟ್ಟುಕೊಂಡಿದ್ದ ಕೊರಗನ್ನು ಹೊರ ಹಾಕಿದರು. “ನೀವು ಅಡ್ರೆಸ್ ಸರಿಯಾಗೇ ಬರ್ದಿದ್ರಾ?” ಎಂದು ಹೆಂಡತಿ ಕೇಳಿದಾಗ ಸಿಟ್ಟುಗೊಂಡ ಮೇಷ್ಟ್ರು, “ಏನು ನನಗೆ ಬರೆಯಲಿಕ್ಕೆ ಗೊತ್ತಿಲ್ಲವಾ?” ಎಂದು ಗುಡುಗಿ ರಭಸದಲ್ಲಿ ಅಡುಗೆಮನೆಯಿಂದ ಹೊರಹೋದರು.

ಕಪಾಟಿನ ಗಾಜಿಗಂಟಿ ಕೂತಿದ್ದ ಧೂಳನ್ನು ಒರೆಸುತ್ತಿದ್ದ ಮೇಷ್ಟ್ರನ್ನು ಅವರ ಹೆಂಡತಿ ಊಟಕ್ಕೆ ಕರೆದರು. ಕೈ ತೊಳೆದುಕೊಂಡು ಊಟಕ್ಕೆ ಕೂತ ಶ್ರೀನಿವಾಸ ಮೇಷ್ಟ್ರು, “ರಿನ್ಜೆನ್ ಫೋನ್ ಮಾಡಿದ್ಲಾ?” ಎಂದು ಹೆಂಡತಿಯನ್ನು ಕೇಳಿದರು. “ಹೌದು ಮಾಡಿದ್ಲು. ಬರ್ತಾಳನ್ತೆ ಈ ವಾರ,” ಎಂದು ಹೇಳುತ್ತಾ ಹೆಂಡತಿ ಗಂಜಿ ಬಳಸಿದರು.

ನಾಸ್ತಿಕರಾದ ಮೇಷ್ಟ್ರು ತಮ್ಮ ಮಗಳಿಗೆ ಬೌದ್ಧ ಹೆಸರಾದ ರಿನ್ಜೆನ್ ಅನ್ನು ಆಯ್ಕೆ ಮಾಡಿದ್ದರು. ರಿನ್ಜೆನ್ ಎಂದರೆ ಬೌಧಿಕ ಶಕ್ತಿ ಉಳ್ಳಾಕೆ ಎಂದು. ಆಕೆಯೂ ತನ್ನಂತೆ ಆಗಬೇಕು ಎಂಬುದು ಮೇಷ್ಟ್ರ ಆಸೆಯಾಗಿತ್ತು. ಬೌಧಿಕ ಮತ್ತು ವೈಚಾರಿಕವಾಗಿ ಇವರಂತೆ ಆದ ರಿನ್ಜೆನ್ ಸ್ವಭಾವದಲ್ಲಿ ಮಾತ್ರ ತನ್ನ ತಾಯಿಯಂತೆ ಮೃದು ಸ್ವಭಾವದವಳಾಗಿ ಬೆಳೆದಳು.

“ಈ ಬಾರಿ ನೀವೇ ಒಮ್ಮೆ ಮಾತಾಡಿ ಅವಳ ಹತ್ರ,” ಎಂದು ಹೆಂಡತಿ ಹೇಳಿದರೆ ಮೇಷ್ಟ್ರು “ಅವಳಿಷ್ಟ. ಹೆಚ್ಚು ಒತ್ತಾಯ ಮಾಡಬಾರದು,” ಎಂದರು.

“ಒತ್ತಾಯ ಮಾಡಬಾರದೇನೋ ಹೌದು, ಆದರೆ ಒಬ್ಬಳೇ ಇರೋದು ಅಂದ್ರೆ ಅದೂ ಕಷ್ಟ.”

“ಹೊಸ ಕಾಲ ಇದು. ಹೊಸ ಕಾಲದ ಹುಡುಗಿ ಅವಳು. ಏನೂ ಕಷ್ಟ ಆಗೋಲ್ಲ.”

“ಕಾಲ ಯಾವುದೇ ಆದರೂ ಮನುಷ್ಯ ಒಂಟಿಯಾಗಿ ಬದುಕಲಾರ.”

ಏನೂ ಉತ್ತರಿಸದೆ ಮೇಷ್ಟ್ರು ಊಟ ಮಾಡುತ್ತಾ ಹೋದರು. ಊಟ ಮುಗಿಸಿ ತಟ್ಟೆ ತೊಳೆದಿಟ್ಟು ಒಂದೆರಡು ಘಂಟೆ ನಿದ್ರಿಸಿದರು. ಇವರಿಗೆ ಎಚ್ಚರಾದಾಗ ಇವರ ಹೆಂಡತಿ ಇನ್ನೂ ಮಲಗಿಕೊಂಡೆ ಇದ್ದರು. ಅಡುಗೆ ಮನೆಗೆ ಹೋಗಿ ಎರಡು ಕಪ್ ಚಹಾ ತಯಾರಿಸಿದ ಮೇಷ್ಟ್ರು ಬಂದು ಹೆಂಡತಿಯನ್ನು, “ಘಂಟೆ ನಾಲ್ಕುವರೆಯಾಯಿತು” ಎಂದು ಎಬ್ಬಿಸಿ ಬಿಸಿ ಚಹಾ ಕೊಟ್ಟರು.

ತಾವು ಮತ್ತು ತಮ್ಮ ಹೆಂಡತಿ ಕುಡಿದ ಚಹದ ಲೋಟೆಯನ್ನು ಮೇಷ್ಟ್ರು ತೊಳೆಯುತ್ತಿರುವಾಗ ಮನೆಯ ಬಾಗಿಲು ಯಾರೋ ಬಡಿದರು. ಲೋಟಗಳನ್ನು ಇನ್ನೂ ಸಂಪೂರ್ಣವಾಗಿ ತೊಳೆದಿರದ ಕಾರಣ ಮೇಷ್ಟ್ರು ಅಲುಗಾಡಲಿಲ್ಲ. ಆದರೆ ಮೇಷ್ಟ್ರ ಕಿವಿ ಬಾಗಿಲ ಕಡೆ ಕೇಂದ್ರಗೊಂಡಿತ್ತು. ಹೆಂಡತಿ ಬಾಗಿಲು ತೆಗೆಯುವ ಸದ್ದು ಕೇಳಿದಾಗ ನೆಟ್ಟಗಿದ್ದ ಕಿವಿಯನ್ನು ಸ್ವಲ್ಪ ಸಡಿಲಗೊಳಿಸಿದ್ದರು.

“ಬಾ ಮಾರಾಯ…” ಎಂಬ ಹೆಂಡತಿಯ ಸ್ವರ ಕೇಳಿದ ಮೇಷ್ಟ್ರು ಬಹಳ ಕುತೂಹಲದಿಂದ ಬೇಗಬೇಗನೆ ಲೋಟೆ ತೊಳೆದಿಟ್ಟು ಹೊರಬಂದರು. ಅವರ ಹಳೆಯ ಶಿಷ್ಯನಾದ ಶ್ರೀಕರ್ ಬಂದಿದ್ದ.

ರಿನ್ಜೆನ್ ಸಹಪಾಟಿಯಾಗಿದ್ದ ಈತ ಶ್ರೀನಿವಾಸ್ ಮೇಷ್ಟ್ರ ಮೆಚ್ಚಿನ ಶಿಷ್ಯರಲ್ಲಿ ಒಬ್ಬ. ಮೊದಮೊದಲಿಗೆ ಮೇಷ್ಟ್ರನ್ನು ಶ್ರೀಕರ್ abstract-art-sheepಇಷ್ಟ ಪಡುತ್ತಿರಲಿಲ್ಲ ಮತ್ತು ಶ್ರೀಕರ್ ಎಂದರೆ ಮೇಷ್ಟರಿಗೂ ಅಷ್ಟಕ್ಕೇ ಅಷ್ಟೇ. ಆದರೆ ಶಾಲೆ ಮುಗಿದ ನಂತರ ಮೇಷ್ಟ್ರ ಪಾಠ ಅವರ ವೈಚಾರಿಕತೆ ಶ್ರೀಕರನಿಗೆ ಹೆಚ್ಹು ಅರ್ಥವಾಗಿ ಮೇಷ್ಟ್ರ ಅಭಿಮಾನಿಯಾಗಿದ್ದ. ಹೆಚ್ಚಿನ ವಿಧ್ಯಾಭ್ಯಾಸಕ್ಕೆ ಬೇರೆ ಊರಿಗೆ ಹೋಗಿದ್ದರೂ ರಜೆಯಲ್ಲಿ ಊರಿಗೆ ಬಂದಾಗ ತಪ್ಪದೆ ಮೇಷ್ಟ್ರನ್ನು ಭೇಟಿ ಆಗಿ, “ನೀವು ಆವಾಗ ಹೇಳಿದ ಮಾತು ಈಗ ಅರ್ಥ ಆಗ್ತಿದೆ,” ಎಂದು ಮೇಷ್ಟ್ರೊಂದಿಗೆ ಘಂಟೆಗಟ್ಟಲೆ ಮಾತನಾಡಿ ಹೋಗುತ್ತಿದ್ದ. ಮೊದಮೊದಲಿಗೆ ಈತನ್ನು ಎಲ್ಲಾ ಹುಡುಗರಂತೆ ಎಂದು ಭಾವಿಸಿದ್ದ ಮೇಷ್ಟ್ರು ಆಮೇಲೆ ಈತ ತನ್ನ ಪ್ರಭಾವಕ್ಕೆ ಒಳಗಾಗಿ ತಾನು ನಂಬಿದ್ದ ಸಿದ್ಧಾಂತಕ್ಕೆ ಬಾಗಿ ಅದರಲ್ಲೇ ಮಾಗಿದ ಕಾರಣ ತನ್ನ ಬಗ್ಗೆಯೂ ಹೆಮ್ಮೆ ಪಡುತ್ತಾ ಅವನನ್ನು ಮೆಚ್ಚಲಾರಂಭಿಸಿದ್ದರು.

“ಏನೋ ಮಾರಾಯ ಯಾವಾಗ ಬಂದಿ ಊರಿಗೆ?”

“ಎರಡು ವಾರ ಆಯ್ತು”

“ಸರಿ… ಎಲ್ಲಿರೋದು ಇವಾಗ?”

“ಅಹ್ಮೆದಾಬಾದಿನಲ್ಲಿ.”

“ಖುಷಿಯಲ್ಲಿ ಇದ್ದಿಯಲ್ವಾ?”

“ಹ್ಞೂ ಸಾರ್.”

ಹೀಗೆ ಮೇಷ್ಟ್ರು ಮತ್ತು ಶ್ರೀಕರ್ ಮಾತನಾಡುತ್ತಾ ಇರಬೇಕಾದರೆ ಮೇಷ್ಟ್ರ ಹೆಂಡತಿ, “ಚಹಾ ಕುಡಿತಿಯಾ ಇಲ್ಲ ಜ್ಯೂಸು ಮಾಡಲಾ?” ಎಂದು ವಿಚಾರಿಸಿದರು. “ಜ್ಯೂಸ್” ಎಂದ ಶ್ರೀಕರ್.

“ನಿಮ್ಮ ಆರೋಗ್ಯ ಸರಿ ಇಲ್ಲ ಅಂತ ಗೊತ್ತಾಯ್ತು…”

“ಪ್ರಿನ್ಸಿಪಾಲ ಆಗಾದಾಗಿನಿಂದ ಒತ್ತಡ ಜಾಸ್ತಿ ಆಗಿ ಕ್ರಮೇಣ ಹದಗೆಡುತ್ತಾ ಬಂತು ಮಾರಾಯ.”

“ಓಹ್… ನಿಮ್ಮ ರಿಟೈರ್ಮೆಂಟ್ ದಿನ ನಾನು ಬಂದು ಭೇಟಿ ಆಗಿದ್ದೆ ನಿಮ್ಮನ್ನು ಆಫೀಸಿನಲ್ಲಿ. ಆಗ ಹೇಳ್ತಾ ಇದ್ರಿ.”

“ಹೌದು ಮಾರಾಯ. ಆ ಗಣಪತಿ ಮೇಷ್ಟ್ರು ಎಷ್ಟು ಕಾಟ ಕೊಟ್ಟರು ಅಂದ್ರೆ. ಸಾಕು ಸಾಕಾಗಿ ಹೋಯಿತು.”

ಶ್ರೀನಿವಾಸ್ ಮೇಷ್ಟ್ರು ತರಗತಿಯಲ್ಲಿ ಅನಗತ್ಯವಾಗಿ ಪಠ್ಯೇತರ ವಿಷಯಗಳ ಕುರಿತು ಮಾತನಾಡಿ ಮಕ್ಕಳ ಮನಸ್ಸು ಹಾಳು ಮಾಡುತ್ತಾರೆ ಮತ್ತು ಅವರನ್ನು ಇನ್ಫ್ಲುಯೆನ್ಸ್ ಮಾಡಲು ಪ್ರಯತ್ನಿಸುತ್ತಾರೆ ಎಂಬುದು ಗಣಪತಿ ಮೇಷ್ಟ್ರ ವಾದವಾಗಿತ್ತು. ಅದರ ಕುರಿತು ಇತರೆ ಸಹೋದ್ಯೋಗಿಗಳ ಜೊತೆ ಅವರು ಹಲಾವಾರು ವರ್ಷಗಳಿಂದ ಮಾತನಾಡುತ್ತಲೇ ಬಂದಿದ್ದರು ಮತ್ತು ಹೆಚ್ಚಿನವರಿಗೆ ಗಣಪತಿ ಮೇಷ್ಟ್ರ ಮಾತು ಸರಿ ಅನ್ನಿಸುತ್ತಿತ್ತು.

“ಸೈದ್ಧಾಂತಿಕವಾಗಿ ಅವರಿಗೆ ನನ್ನ ಬಗ್ಗೆ ಭಿನ್ನಾಭಿಪ್ರಾಯ. ಆದರೆ ಅದನ್ನು ನೇರ ಹೇಳುತ್ತಿರಲಿಲ್ಲ. ಹಿಂದಿನಿಂದ ಪಿತೂರಿ ನಡೆಸುವುದು. ನನ್ನ ಕೆಲಸದ ಬಗ್ಗೆ ದೂರು ನೀಡಲು ಬಾರೀ ಪ್ರಯತ್ನ ನಡೆಸಿದರು. ಆದರೆ ಆಗಲಿಲ್ಲ. ನನಗೆ ಗೊತ್ತಿತ್ತು. ಅದಿಕ್ಕೆ ಉಪಪ್ರಾಂಶುಪಾಲ ಆಗ್ತಾ ಇದ್ದ ಹಾಗೆ ನನ್ನ ರಾಜಕೀಯ ಚಟುವಟಿಕೆ ಸ್ವಲ್ಪ ಕಡಿಮೆ ಮಾಡಿದೆ. ನನ್ನ ವಿರುದ್ಧ ಸಂಚು ಹೂಡುತ್ತಿದ್ದರು ಎಂಬುದು ಗೊತ್ತಿದ್ದೂ ನಾನು ಜಾಗ್ರತೆ ವಹಿಸದಿದ್ದರೆ ಹೇಗೆ?”

ಈ ಎಲ್ಲಾ ಮಾತುಗಳನ್ನೂ ತಮ್ಮ ರಿಟೈರ್ಮೆಂಟ್ ದಿನದಂದು ಮೇಷ್ಟ್ರು ಶ್ರೀಕರ್ ಬಳಿ ಹೇಳಿಕೊಂಡಿದ್ದರು. ಅವರು ಎಷ್ಟೋ ವಿಷಯಗಳನ್ನು ಹೀಗೆ ಮತ್ತೆ ಮತ್ತೆ ಹೇಳಿಕೊಳ್ಳುತ್ತಿದರೆ ಈತ ಅವರ ಮಾತು ಕೇಳೋರು ಯಾರು ಇಲ್ಲ ಇರಬೇಕು ಅಂತ ಅಂದುಕೊಂಡು ತುಟಿಕ್ಪಿಟಿಕ್ ಎನ್ನದೆ ಅವ್ರ ಮಾತನ್ನು ಕೇಳುತ್ತಿದ್ದ ಮತ್ತೆ ಮತ್ತೆ. ಅವರು ಅಲ್ಪವಿರಾಮ ನೀಡಿದಾಗ ಬೇರೆ ಯಾವುದೋ ವಿಷಯದ ಪ್ರಸ್ತಾಪ ಮಾಡಿ ಹೊಸ ಮಾತು ಆರಂಭಿಸುವ ಕಲೆ ಇವನಿಗೆ ಗೊತ್ತಿತ್ತು. ಆದರೆ ಯಾವ ವಿಷಯವನ್ನೂ ತಾನು ಮಾತನಾಡಬೇಕು ಅಂತ ಅಂದುಕೊಂಡಿರುವ ವಿಷಯಕ್ಕೆ ತಂದು ತಲುಪಿಸುವ ಕಲೆ ಮೇಷ್ತ್ರಿಗಿತ್ತು.

ಹೀಗೆ ಅದೇ ಗಣಪತಿ ಮೇಷ್ಟ್ರು ನಡೆಸಿದ ಸಂಚಿನ ಮಾತು ಮತ್ತು ಪ್ರಾಂಶುಪಾಲನಾಗಿದ್ದಾಗ ಇದ್ದ ಒತ್ತಡದ ಮಾತು ಮತ್ತೆ ಮೇಷ್ಟ್ರು ಆರಂಬಿಸಿದಾಗ ಅವರು ಬರವಣಿಗೆ ಕಡಿಮೆ ಗೊಳಿಸಿದ್ದು ಅದೇ ಸಮಯದಲ್ಲಿ ಅಲ್ಲವೆ ಎಂದು ಪ್ರಶ್ನಿಸಿದ ವಿಷಯ ಬದಲಿಸುವ ಪ್ರಯತ್ನದಲ್ಲಿ. ಆಗ ಮೇಷ್ಟ್ರು “ಹೌದು” ಎನ್ನುತ್ತಾ ತಾನು ಬರೆಯುತ್ತಿದ್ದ ನ್ಯಾಯಪರ ಮತ್ತು ಅನ್ಯಾಯದ ವಿರುದ್ಧದ ಬರವಣಿಗೆಯನ್ನು ಗಣಪತಿ ಮೇಷ್ಟ್ರು ಒಂದೆರಡು ಬಾರಿ ಮ್ಯಾನೇಜ್ಮೆಂಟ್ ಅವರಿಗೆ ಕಳುಹಿಸಿ ಇದು ದೇಶದ್ರೋಹಿ ಬರವಣಿಗೆ ಎಂದು ದೂರು ಸಲ್ಲಿಸಿ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಒತ್ತಡ ಹೇರಿದ್ದನ್ನು ನೆನಪಿಸಿಕೊಂಡು ಆ ಕಾರಣಕ್ಕಾಗಿಯೇ ತಾನು ಉಪಪ್ರಾಂಶುಪಾಲ ಆಗುತ್ತಿದ್ದಂತೆಯೇ ಮಕ್ಕಳನ್ನು ಆಲೋಚಿಸುವಂತೆ ಮಾಡುವುದೇ ದೊಡ್ಡ ಕ್ರಾಂತಿ ಎಂದು ಭಾವಿಸಿ ಅವರ ಕಡೆ ಹೆಚ್ಚು ಗಮನ ಹರಿಸಲು ಆರಂಬಿಸಲು ನಿರ್ಧರಿಸಿದ್ದನ್ನು ಹೇಳಿಕೊಂಡರು. ಆಮೇಲೆ ಒಂದರೆ ಕ್ಷಣ ಸುಮ್ಮನಾಗಿ, “ಆದರೆ ನನ್ನ ಅಭಿಪ್ರಾಯ ನನ್ನ ಸಿದ್ಧಾಂತ ಮಕ್ಕಳಿಗೂ ಬೇಡ ಆಗಿತ್ತು,” ಅಂದರು. ಆ ಮಾತು ಹೇಳುವಾಗ ಅವರ ಮುಖದಲ್ಲಿ ಒಂದು ನಗುವಿತ್ತು. ಅದು ತಮಗಿದ್ದ ನೋವನ್ನು ಮುಚ್ಚಿಡಲು ತುಟಿಗೆ ಅಂಟಿಸಿಕೊಂಡ ನಗು ಎಂದು ಶ್ರೀಕರನಿಗೆ ಗೊತ್ತಿತ್ತು.

“ಬೇರೆಯವರ ಬಗ್ಗೆ ಗೊತ್ತಿಲ್ಲ ಸರ್. ನನ್ನ ಬದುಕಿಗಂತೂ ತಿರುವು ಸಿಕ್ಕಿದ್ದು ನಿಮ್ಮ ಕ್ಲಾಸಿನಲ್ಲಿ ಕೂತ ಕಾರಣಕ್ಕೆಯೇ.”

“ಅದೇ ಮಾರಾಯ. ನಾನು ಪರೀಕ್ಷೆಗೆ ತಯಾರಿ ನಡೆಸುವ ಮೇಷ್ಟ್ರಲ್ಲ. ಬದುಕಿಗೆ ತಯಾರಿ ನಡೆಸುವ ಮೇಷ್ಟ್ರು. ಆದರೆ ಮಕ್ಕಳಿಗೆ ಪರೀಕ್ಷೆಗೆ ತಯಾರಿ ನಡೆಸುವವರೇ ಬೇಕು! ನಾನು ಕಲಿಸಲು ಆರಂಬಿಸಿದ ದಿನದಲ್ಲಿ ಮಕ್ಕಳು ಸ್ವಲ್ಪವಾದರೂ ಆಸಕ್ತಿ ತೋರಿಸುತ್ತಿದ್ದರು. ನಿಮ್ಮ ಸಮಯದಲ್ಲಿ ಇದ್ದ ವಿದ್ಯಾರ್ಥಿಗಳು ಮಾತ್ರ….” ಎಂದು ಅರೆಕ್ಷಣ ಮೌನ ಆದ ಮೇಷ್ಟ್ರು ಮಾತು ಮುಂದುವರಿಸುತ್ತಾ, “ಅವರ ತಪ್ಪಲ್ಲ ಬಿಡು. ಜಾಗತೀಕರಣದ ಸಂದರ್ಭದಲ್ಲಿ ಬೆಳೆದ ಮಕ್ಕಳು ನೀವೆಲ್ಲಾ…” ಎಂದರು ತಮಗೆ ತಾವೇ ಸಮಾಧಾನ ಹೇಳಿಕೊಳ್ಳುವ ರೀತಿಯಲ್ಲಿ.

ಅಷ್ಟುಹೊತ್ತಿಗೆ ಮೇಷ್ಟ್ರ ಹೆಂಡತಿ ಲಿಂಬೆ ಜ್ಯೂಸು ತೆಗೆದುಕೊಂಡು ಬಂದರು. “ಕುಡಿಬೇಡ. ಸ್ವಲ್ಪ ಇರು. ಸಕ್ಕರೆ ಹಾಕಲಿಲ್ಲ ಅದಿಕ್ಕೆ. art-1ತರುತ್ತೇನೆ ಈಗ,” ಎನ್ನುತ್ತಾ ಇವನಿಗೊಂದು ಗ್ಲಾಸ್ ಜ್ಯೂಸ್ ಮತ್ತೆ ಮೇಷ್ತ್ರಿಗೊಂದು ಗ್ಲಾಸ್ ಜ್ಯೂಸ್ ಕೊಟ್ಟರು. ತಕ್ಷಣ ಅಡುಗೆ ಮನೆಗೆ ಹೋಗಿ ಸಕ್ಕರೆಯ ಡಬ್ಬಿ ತೆಗೆದುಕೊಂಡು ಬಂದು, “ಎರಡು ಚಮಚ ಹಾಕ್ಲಾ?” ಎಂದು ಕೇಳಿದರೆ ಶ್ರೀಕರ್, “ಎರಡೂವರೆ ಹಾಕಿ,” ಎಂದ. ಎರಡೂವರೆ ಚಮಚ ಸಕ್ಕರೆ ಹಾಕಿ ಚಮಚವನ್ನು ಬಿಟ್ಟು ಹೋದರು. ಆ ಚಮಚದ ಸಹಾಯದಿಂದ ಶ್ರೀಕರ್ ಸಕ್ಕರೆ ಕರಗಿಸಿಕೊಳ್ಳುತ್ತಾ ಇರಲು ಸಕ್ಕರೆ ಡಬ್ಬಿ ಅಡುಗೆಮನೆಯಲ್ಲಿ ಇಟ್ಟು ಮೇಷ್ಟ್ರ ಹೆಂಡತಿ ವಾಪಸ್ ಬಂದರು.

“ನೀವು ಇನ್ನೂ ಸೆರ್ವಿಸಿನಲ್ಲಿ ಇದ್ದೀರಾ?” ಎಂದು ಮೇಷ್ಟ್ರ ಹೆಂಡತಿಯನ್ನು ಕೇಳಿದ ಶ್ರೀಕರ್.

“ಇಲ್ಲ. ಎರಡು ವರ್ಷ ಆಯ್ತು ರಿಟೈರ್ ಆಗಿ,” ಎಂದ ಮೇಷ್ಟ್ರ ಹೆಂಡತಿ “ನೀ ಜ್ಯೂಸ್ ಕುಡಿತಿರುವ ಗ್ಲಾಸ್ ನನ್ನ ಫೇರ್ವೆಲ್ ದಿನ ನನ್ನ ಸ್ಟೂಡೆಂಟ್ಸ್ ಕೊಟ್ಟಿದ್ದು,” ಎಂದು ಪ್ರಸನ್ನವದನರಾಗಿ ಹೇಳಿದರು.

ಹುಬ್ಬು ಹಾರಿಸಿ ಶ್ರೀಕರ್ “ಓಹ್” ಎನ್ನುವಾಗ ಮೇಷ್ಟ್ರು ಹೇಳಿದರು, “ದೊಡ್ಡ ಫೇರ್ವೆಲ್ ಕಾರ್ಯಕ್ರಮ ಮಾರಾಯ ಇವಳಿಗೆ! ನನಗೆ ಒಂದು ಫೇರ್ವೆಲ್ ಸಹ ಕೊಡಲಿಲ್ಲ ನಮ್ಮ ಶಾಲೆಯವರು! ಅಧಿಕಾರ ಹಸ್ತಾಂತರ ಮಾಡಿದ್ದು ಬಂದಿದ್ದು.” ಇದನ್ನು ಹೇಳುತ್ತಿದ್ದ ಮೇಷ್ಟ್ರು ಇದ್ದಕ್ಕಿದಂತೆ ತಮ್ಮ ಮಾತಿನ ವೇಗ ಬದಲಿಸಿ, “ಅಲ್ಲ, ನನಗೆ ಅದೆಲ್ಲ ಬೇಕಿಲ್ಲ. ಆದರೆ ಈ ಗಣಪತಿ ಮತ್ತು ಅವನ ಹಿಂಬಾಲಕರ ಅಲ್ಪತನ ನೋಡು” ಎಂದರು.

ಮೇಷ್ಟ್ರು ರಿಟೈರ್ ಆಗಿದ್ದ ದಿನ ಶ್ರೀಕರ್ ಅವರನ್ನು ಭೇಟಿ ಆದಾಗ ಮೇಷ್ಟ್ರು ಅವರಿಗೆ ಅವರ ಸಹೋದ್ಯೋಗಿಗಳು ಕಿರುಕುಳ ಕೊಟ್ಟಿದ್ದ ಕತೆಗಳನ್ನು ಹೇಳಿ, “ಸಧ್ಯ ಇವೆಲ್ಲಾ ಮುಗಿತು. ಇನ್ನು ಮೇಲೆ ನನ್ನ ಬರವಣಿಗೆ ಮುಂದುವರಿಸಬೇಕು. ಅಧ್ಯಯನ ಮತ್ತು ಬರವಣಿಗೆ ನನ್ನ ರಿಟೈರ್ಮೆಂಟ್ ಪ್ಲಾನ್,” ಎಂದಿದ್ದರು. ಅದನ್ನೇ ನೆನಪಿಸಿ ಶ್ರೀಕರ್ ಮೇಷ್ಟ್ರನ್ನು ಬರವಣಿಗೆ ಯಾಕೆ ಮಾಡುತ್ತಿಲ್ಲ ಎಂದು ಕೇಳಿದರೆ ಮೇಷ್ಟ್ರು ಹೇಳಿದರು, “ಸುಮಾರು ಲೇಖನ ಬರೆದು ಕಳಿಸಿದೆ. ಆದರೆ ತಲುಪಲೇ ಇಲ್ಲ ಅಂತಾರೆ ಪ್ರತಿ ಸತಿ.”

“ಸಾರ್, ಪೋಸ್ಟಲ್ ಸೆರ್ವಿಸ್ ಹದಗೆಟ್ಟಿದೆ. ಯಾವುದೋ ಎಲ್ಲೂ ಸರಿಯಾಗಿ ತಲುಪೋದೇ ಇಲ್ಲ. ನೀವು ಕಂಪ್ಯೂಟರ್ ಕಲಿಲ್ವಾ?”

“ಕಂಪ್ಯೂಟರ್ ಮೇಲೆ ಕೈಯಿಂದ ಬರೆದಷ್ಟೇ ವೇಗವಾಗಿ ಬರೆಯಲು ಆಗೋದಿಲ್ಲ. ಆಲೋಚನೆ ಫಾಸ್ಟ್ ಆಗಿ ಓಡ್ತಾ ಇರ್ತದೆ ಅದಕ್ಕೆ ಟೈಪಿಂಗ್ ಸ್ಪೀಡ್ ಮ್ಯಾಚ್ ಆಗೋಲ್ಲ. ಮತ್ತೆ ಕೈಯಿಂದ ಬರೆದೆ ಅಭ್ಯಾಸ ನೋಡು.”

“ಮತ್ತಿನೊಂದು ವಿಷ್ಯ ಇದೆ ಸಾರ್. ಈಗೀಗ ಪತ್ರಿಕೆಗಳಲ್ಲಿ ಡೆಸ್ಕ್ ಕೆಲಸಕ್ಕೆ ಬಂದಿರೋರೆಲ್ಲ ಹೊಸ ಹುಡುಗರು. ಅವರಿಗೆಲ್ಲ ಕೈಬರಹ ನೋಡಿ ಗೊತ್ತಿಲ್ಲ. ಅದನ್ನ ಓದಿ ಪ್ರೂಫ್ ನೋಡಿ ಟೈಪ್ ಮಾಡೋದೆಲ್ಲ ಆಗೋ ವಿಷ್ಯ ಅಲ್ಲ ಅವರಿಗೆ. ಅದಕ್ಕೊ ಕೆಲವೊಮ್ಮೆ ಲೇಖನ ತಲುಪಿಲ್ಲ ಅಂತ ಸುಳ್ಳೇ ಹೇಳ್ತಾರಂತೆ. ಇದನ್ನ ಪತ್ರಿಕೆಯೊಂದರಲ್ಲಿ ಕೆಲಸ ಮಾಡೋ ಒಬ್ಬ ಫ್ರೆಂಡ್ ಹೇಳಿದ್ದು ಸಾರ್ ನನಗೆ.”

“ಓಹ್, ಹೀಗೆಲ್ಲ ಇದೆಯಾ? ಅಲ್ಲ ಮಾರಾಯ ಒಂದು ಕಾಲದಲ್ಲಿ ಕೈಕಾಲು ಹಿಡಿತಾ ಇದ್ರೂ ನಂದು ಒಂದು ಲೇಖನ ಬರೆದು ಕೊಡಿ ಅಂತ. ಈಗ ಕಳಿಸಿದರೂ ತಲುಪಿಲ್ಲ ಅಂತ ಸುಳ್ಳು ಹೇಳೋ ಕಾಲ ಬಂತು,” ಎಂದು ಮೇಷ್ಟ್ರು ನಗಾಡಿದರು. ಶ್ರೀಕರ್ ಅವರ ನಗುವಿಗೆ ನಗುವಿನ ಸಾಥ್ ನೀಡಿದಾಗ ಮೇಷ್ಟ್ರು “ಒಂದು ನಿಮಿಷ” ಎಂದು ಒಳಗೆ ಹೋದರು.

ಶ್ರೀಕರ್ ತಾನು ಈ ವಿಷ್ಯ ಯಾಕಾದರೂ ಹೇಳಿದೆನೋ ಎಂದು ಅನಿಸತೊಡಗಿತು. ಆಗ ಮೇಷ್ಟ್ರ ಹೆಂಡತಿ ಸಣ್ಣಗಿನ ತಮ್ಮ ಸ್ವರವನ್ನು ಇನ್ನಷ್ಟು ಸಣ್ಣದಾಗಿಸಿ ಹೇಳಿದರು, “ತುಂಬಾ ನೋವು ಮಾಡಿಕೊಂಡಿದ್ದಾರೆ ಮಾರಾಯ. ಇವರಿಗೆ ಒಂದು ಕಾಲದಲ್ಲಿ ಇದ್ದ ಯಾವ ಫ್ರೆಂಡ್ಸ್ ಇವತ್ತು ಇಲ್ಲ. ಅವರ ತಪ್ಪು ಸಹ ಅಲ್ಲ ಬಿಡು. ಇವರು ಶಾಲೆ ಕೆಲಸಕ್ಕೆ ಅಂತ ಬೇರೆ ಎಲ್ಲದರಿಂದ ಹಿಂದೆ ಸರಿದರು ನೋಡು ಬಹುಷ್ಯ ಆಗ ಇವರ ಫ್ರೆಂಡ್ಸ್ ಎಲ್ಲ ಬೇರೆ ಟೀಂ ಕಟ್ಟಿಕೊಂಡು ಕೆಲಸ ಮುಂದುವರಿಸಿದರು. ಹೊಸ ಜನ ಸೇರಿಕೊಂಡರು. ಈಗ ಅವರ ಕೆಲಸ ಮತ್ತು ಹೊಸ ಟೀಂ ನಡುವೆ ಇವರ ನೆನಪಾಗುವುದಿಲ್ಲ. ಒಮ್ಮೆ ಇವರೇ ಹೋಗಿದ್ದರು. ಮೊದಲಿದ್ದಷ್ಟು ಜನ ಈಗ ಇಲ್ಲ ಅಂತಿದ್ರು. ಅಲ್ಲಿ ಇದು ಸರಿ ಇಲ್ಲ ಅದು ಸರಿ ಇಲ್ಲ ಹೀಗಲ್ಲ ಹಾಗಲ್ಲ ಅಂತೆಲ್ಲ ಹೇಳಿದ್ರು. ಚಳುವಳಿ ಅಂದ್ರೆ ನಾಲ್ಕಾರು ಚಟುವಟಿಕೆ ಅಲ್ಲ ಅಂತೆಲ್ಲ ಹೇಳಿದರಂತೆ. ಹೊಸ ಹುಡುಗರು ಇವರ ಮಾತು art-3ಯಾಕೆ ಕೇಳ್ತಾರೆ? ಅವರು ಮಾತು ಕೇಳಲಿಲ್ಲ ಅಂತ ಇವರಿಗೆ ಸಿಟ್ಟು. ಮತ್ತೆ ಹೋಗಲಿಲ್ಲ. ಅವರು ಸಹ ಕರೆಯಲಿಲ್ಲ. ಆದರೆ ನನಗೆ ಬೇಜಾರ್ ಆಗೋದು ಏನು ಗೊತ್ತ. ಹೊಸ ಹುಡುಗರು ಬಿಡು ಇವರ ಹಳೆ ದೋಸ್ತಿಗಳು ಸಹ ಇವರಿಗೆ ಆರೋಗ್ಯ ಕೆಟ್ಟಿದೆ ಅಂತ ಗೊತ್ತಾಗಿಯೂ ಒಂದು ಸತಿ ಮಾತನಾಡಿಸಲು ಬರಲಿಲ್ಲ. ಆಪರೇಷನ್ ಆಗಿದೆ ಅಂತ ಅವರಿಗೆಲ್ಲಾ ಗೊತ್ತು. ಆಪರೇಷನ್ ಆದಮೇಲೆ ಸರಿಯಾಗಿ ನಿಂತುಕೊಳ್ಳಲೂ ಆಗುದಿಲ್ಲ ಕೂತುಕೊಳ್ಳಲೂ ಆಗುದಿಲ್ಲ ಅಂತ ಸಹ ಗೊತ್ತು. ಆದರೂ ಯಾರು ಬರಲಿಲ್ಲ. ಪೇಟೆಯಲ್ಲಿ ನನಗೆಲ್ಲಾದರು ಸಿಕ್ಕರೆ ವಿಚಾರಿಸ್ತಾರೆ ಅಷ್ಟೇ. ಇವರಿಗಂತೂ ಅದು ತುಂಬಾನೇ ನೋವಾಗಿದೆ. ದಿನ ಹೇಳ್ತಾರೆ. ನಾನೇನು ಮಾಡೋದು ಮಾರಾಯ. ನೀನಾದ್ರು ಆಗೊಮ್ಮೆ ಈಗೊಮ್ಮೆ ಬಂದು ಹೋಗ್ತಾ ಇರು.”

ಮೇಷ್ಟ್ರ ಹೆಂಡತಿ ಇವನ್ನೆಲ್ಲ ಹೇಳಿ ಮುಗಿಸಿದ ಹೊತ್ತಿಗೆ ಸರಿಯಾಗಿ ಮೇಷ್ಟ್ರು ಒಳಗಿಂದ ಬಂದರು ಮೂಗಿಗೆ ನಶ್ಯ ಏರಿಸುತ್ತಾ, ಕಂಕುಳಿನಲ್ಲಿ ಒಂದು ಪುಸ್ತಕ ಇಟ್ಟುಕೊಂಡು. ಅವರು ಬರುತ್ತಿರುವ ಸೂಚನೆ ಸಿಕ್ಕಿದ ಮೇಷ್ಟ್ರ ಹೆಂಡತಿ ತಕ್ಷಣ ವಿಷಯ ಬದಲಾಯಿಸಿ “ರಿನ್ಜೆನ್ ಸಂಪರ್ಕದಲ್ಲಿ ಇದ್ದಾಳ?” ಎಂದು ವಿಚಾರಿಸಿದರು.

“ಕೆಲವೊಮ್ಮೆ ಫೇಸ್ಬುಕ್ ನಲ್ಲಿ ಚಾಟ್ ಮಾಡುತ್ತೇನೆ. ಇಲ್ಲದೆ ಇದ್ರೆ ಅವಳು ಏನಾದ್ರೂ ಫೋಟೋ ಹಾಕಿದಾಗ ನೋಡಿ ಗೊತ್ತಾಗುತ್ತೆ ಎಲ್ಲಿ ಹೋದಳು ಎಲ್ಲಿ ಬಂದ್ಲು ಅಂತ.”

“ಅದೇ ಅವಳು ಸಹ ಅವ್ರ ಮದ್ವೆ ಆಯ್ತು ಇವರಿಗೆ ಮಗುವಾಯ್ತು ಅಂತೆಲ್ಲ ಹೇಳ್ತಾ ಇರ್ತಾಳೆ. ಅವರು ಇನ್ನೂ ಟಚ್ನಲ್ಲಿ ಇದ್ದಾರ ಅಂತ ಕೇಳಿದ್ರೆ. ಇಲ್ಲ ಫೇಸ್ಬುಕ್ ಅಲ್ಲಿ ಫೋಟೋ ಹಾಕೊಂಡಿದ್ರು ಅಂತ ಹೇಳ್ತಾಳೆ. ಮಜಾ ಅನ್ಸೋತ್ತೆ ಕೇಳಿದ್ರೆ ಈ ಫೇಸ್ಬುಕ್ ವಿಚಾರ.”

ಆಗ ಮೇಷ್ಟ್ರು ತುಟಿ ಎರಡು ಮಾಡಿ, “ಅವಳಿಗೆ ಆ ನಿಮ್ಮ ಕ್ಲಾಸ್ಮೇಟ್ ಅಜಿಂಕ್ಯ ಮೋಸ ಮಾಡಿದ್ದಲ್ಲ ಮಾರಾಯ. ಇಷ್ಟ ಪಟ್ಟು ಮದುವೆ ಆಗಿದ್ದು ಇಬ್ಬರು. ಮದ್ವೆ ಆಗೋ ತನಕ ಎಲ್ಲ ಪ್ರೀತಿ ಪ್ರೇಮ. ಆಮೇಲೆ ಇವಳು ಹೆಂಡತಿ ತರ ಇರ್ಬೇಕು ಅಂತ ತಕರಾರು ಅವನದ್ದು. ಈಗ ಡೈವೋರ್ಸಿಗೆ ಅಪ್ಲೈ ಮಾಡಿದ್ದಾರೆ. ಮುಂದಿನ ತಿಂಗಳು ಬಿಡುಗಡೆ ಸಾಧ್ಯತೆ ಇದೆ.”

ಸುಮ್ಮನೆ ತಲೆ ಅಲುಗಾಡಿಸುತ್ತಿದ್ದ ಶ್ರೀಕರ್ “ಯಾರೋ ಫ್ರೆಂಡ್ಸ್ ಹೇಳಿ ಗೊತ್ತಾಯ್ತು ಅವರಿಬ್ಬರು ಈಗ ಒಟ್ಟಿಗೆ ಇಲ್ಲ ಅಂತ. ನಾನು ಮತ್ತೆ ಹೆಚ್ಚೇನೂ ಕೇಳಲು ಹೋಗಲಿಲ್ಲ,” ಎಂದ.

ಮೇಷ್ಟ್ರು ಏನೋ ಹೇಳುತ್ತಾರೆ ಎನ್ನುವಂತಿದ್ದಾಗ ಮೇಷ್ಟ್ರ ಹೆಂಡತಿ ನುಡಿದರು, “ಅಲ್ಲ ಮಾರಾಯ, ಇವಳಿಗಾದ್ರೆ ಬಿಡು ಅವನು ಸರಿಗಿರ್ಲಿಲ್ಲ. ಆದರೆ ನಿಮ್ಮ ಫ್ರೆಂಡ್ಸ್ ಅಲ್ಲೇ ಎಷ್ಟು ಜನರ ಡಿವೋರ್ಸ್ ಆಯ್ತು. ನಿಮ್ಮ ಜನರೇಶನ್ ಅವರಿಗೆ ಸಂಸಾರ ನಡೆಸೋದು ಗೊತ್ತಿಲ್ಲ. ಸಂಸಾರ ಅಂದ್ರೆ ಅಡ್ಜಸ್ಟ್ ಮಾಡಿಕೊಳ್ಳೋದು,” ಎಂದರು. ಆಗ ಮೇಷ್ಟ್ರು, “ಆಗದವರೊಂದಿಗೆ ಅಡ್ಜಸ್ಟ್ ಮಾಡಿಕೊಳ್ಳೋ ಅಗತ್ಯ ಇಲ್ಲ. ಒಂದು ರೀತಿಯಲ್ಲಿ ಇದು ಸರಿ,” ಎನ್ನುವಾಗ ಅವರ ಹೆಂಡತಿ, “ಏನು ಅಡ್ಜಸ್ಟ್ ಮಾಡಿಕೊಳ್ಳೋ ಅಗತ್ಯ ಇಲ್ಲ ಅಂದ್ರೆ? ನಿಮ್ಮೊಟ್ಟಿಗೆ ನಾನು ಅಡ್ಜಸ್ಟ್ ಮಾಡಿಕೊಂಡು ಇಷ್ಟು ವರ್ಷ ಇರಲಿಲ್ಲವ?” ಎಂದರು.

ಈ ಮಾತು ಕೇಳಿ ತುಸು ನಕ್ಕು ಮೇಷ್ಟ್ರು ಶ್ರೀಕರನನ್ನು ನೋಡುತ್ತಾ ಹೇಳಿದರು, “ಅದಂತೂ ಸತ್ಯ ನೋಡು. ನನ್ನನ್ನು ನನ್ನ ಹಟಮಾರಿತನವನ್ನು ಸಹಿಸಿ ಅನ್ನೋದಕ್ಕಿಂತ ಹೆಚ್ಚಾಗಿ ಅರ್ಥ ಮಾಡಿಕೊಂಡು ಬದುಕಿದ್ದಾಳೆ.”

“ನಿನಗೆ ಗೊತ್ತಿಲ್ಲ ಶ್ರೀಕರ್ ಇವರೊಂದಿಗೆ ಬಾಳುವುದು ಅಷ್ಟು ಸುಲಭ ಇರಲಿಲ್ಲ. ಆದರೂ ಬದುಕಿದೆ. abstract-painting-sexಅದೇನು ಹೆಗ್ಗಳಿಕೆಯ ಮಾತಲ್ಲ. ಮದುವೆ ಅಂತ ಆದ ಮೇಲೆ ಇರಬೇಕಪ್ಪ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಅಡ್ಜಸ್ಟ್ ಮಾಡಿಕೊಂಡು. ಆದರೆ ನಿಮ್ಮ ಜನರೇಶನ್ ಅವರಿಗೆ ಇದೆಲ್ಲ ಗೊತ್ತೇ ಇಲ್ಲ. ಅದಿಕ್ಕೆ ಮದುವೆ ಆದ ಮುಂದಿನ ತಿಂಗಳೇ ಬೇರೆ ಆಗ್ತಾರೆ,” ಎಂದ ಮೇಷ್ಟ್ರ ಹೆಂಡತಿ ಗೇರ್ ಬದಲಿಸಿ, “ನೀನು ಮದ್ವೆ ಆಗಬಹುದಲ್ಲ ಈಗ,” ಎಂದು ಹೇಳಿದರು.

ಏನು ಹೇಳಬೇಕೋ ತಿಳಿಯದೆ ಶ್ರೀಕರ್, “ಹಾಂ ಆಗಬಹುದೇನೋ,” ಎಂದು ತಕ್ಷಣ ಮೇಷ್ಟ್ರ ಕಡೆ ತಿರುಗಿ “ಯಾವ ಪುಸ್ತಕ ಸರ್ ಅದು,” ಎಂದು ಕೇಳಿದ.

“ಹೇಗೆ ಮಾತು ಬದಲಾಯಿಸ್ತಾನೆ ನೋಡು” ಎಂದು ನಗುತ್ತ ಹೇಳಿದ ಮೇಷ್ಟ್ರು ಶ್ರೀಕರ್ ಕೈಯಿಂದ ಗ್ಲಾಸ್ ತೆಗೆದುಕೊಂಡು ತನ್ನ ಕುರ್ಸಿಯ ಪಕ್ಕದಲ್ಲಿ ಇದ್ದ ಗ್ಲಾಸ್ ಒಟ್ಟು ಸೇರಿಸಿ ತನ್ನ ಹೆಂಡತಿ ಕೈಯ್ಗೆ ಕೊಟ್ಟರು. ಅವರು ಆ ಗ್ಲಾಸುಗಳನ್ನು ತೆಗೆದುಕೊಂಡು ಅಡುಗೆ ಮನೆಗೆ ನಡೆಯುತ್ತಿದ್ದರೆ ತನ್ನ ತೊಡೆ ಮೇಲೆ ಇಟ್ಟುಕೊಂಡಿದ್ದ ಪುಸ್ತಕ ಶ್ರೀಕರ್ ಕೈಗೆ ನೀಡುತ್ತಾ ಹೇಳಿದರು, “ಹೊಬ್ಸಬಾಂನ ಕೊನೆ ಪುಸ್ತಕ ಇದು. ಫ್ರಾಕ್ಚರ್ಡ್ ಟೈಮ್ಸ್ ಅಂತ,” ಎನ್ನುವಾಗ ಶ್ರೀಕರ್, “ಹಾಂ ಗೊತ್ತು ಇದರ ಬಗ್ಗೆ ಓದಿದೆ,” ಎಂದ.

“ಬೇಕಿದ್ರೆ ತೆಗೊಂಡು ಹೋಗು ನಾನು ಓದಿ ಆಯ್ತು.”

“ಇಲ್ಲ ಸಾರ್ ನಾನು ಕಿಂಡಲ್ ಅಲ್ಲಿ ಖರೀದಿಸಿದೆ.”

“ಓಹ್ ನಿನ್ನ ಹತ್ರನೋ ಬಂತಾ ಇದೆಲ್ಲ. ಈ ರಿನ್ಜೆನ್ ಹತ್ರ ಸಹ ಇದೆ. ಅವಳು ಕಾದಂಬರಿ ಎಲ್ಲ ಓದೋದು ಅದರಲ್ಲೇ ಇವಾಗ. ನನ್ನ ಲೈಬ್ರರಿಯಷ್ಟೇ ದೊಡ್ಡ ಕಲೆಕ್ಷನ್ ತನ್ನ ಬಳಿ ಇದೆ ಅದು ಮನೆ ಜಾಗ ತಿನ್ನೋದಿಲ್ಲ ಅಂತ ತಮಾಷೆ ಮಾಡ್ತಾಳೆ.”

“ಸರ್ ನಿಮ್ಮ ಲೈಬ್ರರಿ ಅಷ್ಟು ದೊಡ್ಡದಿರಲಿಕ್ಕಿಲ್ಲ ಅವಳ ಲೈಬ್ರರಿ” ಎಂದ ಶ್ರೀಕರ್ ನಗುತ್ತ.

“ಊರೂರು ಸುತ್ತಿ ಚಹಾ ಕಾಪಿ ಬಿಟ್ಟು ಖರೀದಿ ಮಾಡಿದ್ದು ಮಾರಾಯ ಅಷ್ಟೆಲ್ಲ ಪುಸ್ತಕ.”

“ಗೊತ್ತು ಸರ್. ಹೇಳಿದ್ರಿ ಆ ಕತೆ ಒಂದ್ಸತಿ.”

ಅಡುಗೆಮನೆಯಿಂದ ಹೊರಗೆ ಬಂಡ ಮೇಷ್ಟ್ರ ಹೆಂಡತಿ ಕೇಳಿದ್ರು, “ಅಲ್ಲ… ನಾನು ಕೇಳ್ತೇನೆ ಅಂತ ಬೇಸರ ಮಾಡ್ಕೋಬೇಡ. ಆದ್ರೆ ನಿಂಗೆ ಮದುವೆ ವಯಸ್ಸಾಗಿದೆ. ಯಾಕೆ ಮದುವೆ ಆಗಬಾರದು?”

“ಅವನು ಯಾರನ್ನೋ ನೋಡಿಕೊಂಡಿರಬೇಕು,” ಎಂದು ಹೆಂಡತಿಯನ್ನು ನೋಡುತ್ತಾ ಹೇಳಿದ ಮೇಷ್ಟ್ರು ಇವನ ಕಡೆ ಮುಖ ತಿರುಗಿಸಿ “ಮನೆಯವರಿಗೆ ಬೇಕಿದ್ರೆ ನಾನು ಮಾತಾಡ್ತೇನೆ ಮಾರಾಯ” ಎಂದರು.

“ಇಲ್ಲ ಸಾರ್. ನನಗೆ ಮದ್ವೆ ಸಂಸಾರ ಇದರ ಬಗ್ಗೆ ಎಲ್ಲ ನಂಬಿಕೆ ಇಲ್ಲ.”

“ನಂಬಿಕೆ? ಅದೆಂತ ದೇವರೋ ಇಲ್ಲ ಭೂತವೋ ನಂಬಲಿಕ್ಕೆ?” ಮೇಷ್ಟ್ರ ಹೆಂಡತಿ ಪ್ರಶ್ನೆ ಮಾಡಿದರು. ಸ್ವರ ಸ್ವಲ್ಪ ಖಡಕ್ ಆಗಿತ್ತು.

“ಅಲ್ಲ. ನಂಬಿಕೆ ಅಂದ್ರೆ ಅಂಥಾ ನಂಬಿಕೆ ಅಲ್ಲ,” ಎಂದು ಶ್ರೀಕರ್ ಹೇಳುತ್ತಿರುವಾಗ ಮೇಷ್ಟ್ರು ಮಧ್ಯಕ್ಕೆ ಮಾತನಾಡಿದರು, “ಗೊತ್ತಾಯ್ತು. ಲಿವ್-ಇನ್ ಅಂತಾರಲ್ಲ ಅದ್ರ ಮೇಲೆಯಾ ನಿನಗೆ ನಂಬಿಕೆ?”

“ಅದೇ ಬೆಸ್ಟ್ ಅಲ್ವಾ ಸರ್. ಹೆಚ್ಚ್ ಸ್ವತಂತ್ರ ಅಲ್ವಾ ಅದು,” ಎಂದು ಶ್ರೀಕರ್ ವಾದಿಸಿದ.

“ಒಪ್ತೇನೆ. ಆದರೆ ಯಾಕೋ ಒಪ್ಪಿಗೆ ಆಗ್ತಾ ಇಲ್ಲ,” ಎಂದರು ಮೇಷ್ಟ್ರು. ಮೇಷ್ಟ್ರ ಹೆಂಡತಿ ಸುಮ್ಮನೆ ಒಳಗೆ ನಡೆದರು.

“ಹಾಗಾದ್ರೆ ಯಾರದೋ ಜೊತೆಗಿದ್ದೀಯ ಇವಾಗ?” ಎಂದು ಮೇಷ್ಟ್ರು ಪ್ರಶ್ನೆ ಕೇಳಿದರೆ ಶ್ರೀಕರ್, “ಇಲ್ಲ ಸಾರ್. ಒಬ್ಬನೇ ಇರೋದು. ಆದರೆ ನನ್ನ ಅಭಿಪ್ರಾಯ ತಿಳಿಸಿದ್ದು ಅಷ್ಟೇ. ಹಾಗೆ ಇರಲಿಕ್ಕೆ ಶುರು ಮಾಡಿದ್ರೆ ಮನೆಯವರಿಗೆ ಏನು ಹೇಳೋದು ಅನ್ನೋದು ಸಮಸ್ಯೆ ಆಗೊತ್ತೆ ಆಮೇಲೆ,” ಹೇಳಿ ನಕ್ಕ. ಮೇಷ್ಟ್ರು ಸಹ ನಕ್ಕರು.

ಒಳಗಿಂದ ಹೊರ ಬಂದ ಮೇಷ್ಟ್ರ ಹೆಂಡತಿ ಊಟಕ್ಕೆ ನಿಲ್ಲು. ಅಡುಗೆ ಮಾಡುತ್ತೇನೆ ಎಂದರೆ ಶ್ರೀಕರ್ ನಿರಾಕರಿಸಿದ. ಮೇಷ್ಟ್ರು “ಒತ್ತಾಯ ಮಾಡಬೇಡ, ಅವನಿಗೇನು ಕೆಲಸ ಇದೆಯೋ ಏನೋ,” ಎಂದು ಹೆಂಡತಿಗೆ ಹೇಳಿದರು. ತಕ್ಷಣವೇ ಹೊರಡುವುದು ಉಚಿತ ಇಲ್ಲವಾದಲ್ಲಿ ಊಟಕ್ಕೆ ನಿಲ್ಲಬೇಕಾಗುತ್ತದೆ ಎಂದು ಶ್ರೀಕರ್, “ಹೊರಡುತ್ತೇನೆ” ಎಂದ.

“ಹೊರಡ್ತೀಯ?” ಕೇಳಿದರು ಮೇಷ್ಟ್ರ ಹೆಂಡತಿ.

“ಹೌದು. ಕೆಲವು ಫ್ರೆಂಡ್ಸ್ ಜೊತೆ ಊಟಕ್ಕೆ ಹೋಗೋ ಪ್ಲಾನ್ ಇದೆ.”

“ಸರಿ ಮಾರಾಯ ಹಾಗಿದ್ರೆ, ಹೋಗೋ ಮೊದಲು ಇನ್ನೊಮ್ಮೆ ಬಂದು ಹೋಗು” ಎಂದ ಮೇಷ್ಟ್ರು, “ಓದೋದು ಬರಿಯೋದು ಮಾಡ್ತಾ ಇರು,” ಎಂದರು.

“ಸರಿ” ಎಂದ ಶ್ರೀಕರ್, “ನೀವು ಕಂಪ್ಯೂಟರ್ ಕಲೀರಿ ಸಾರ್. ಆಗ ಖಂಡಿತ ಪ್ರಕಟ ಮಾಡ್ತಾರೆ. ನಾನು ಇಲ್ಲೇ ಊರಲ್ಲೇ ಇದಿದ್ದರೆ ನಿಮ್ಮ ಲೇಖನ ನಾನೇ ಟೈಪ್ ಮಾಡಿ ಕಳಿಸ್ತಿದ್ದೆ. ಹಾಗೆ ಯಾರಾದ್ರು ಸಿಗ್ತಾರ ನೋಡಿ.”

“ಬೇಡ ಮಾರಾಯ. ಯಾರಿಗೆ ಬೇಕಿದೆ ಈಗ ನನ್ನ ವಿಚಾರ ನನ್ನ ಅಭಿಪ್ರಾಯ ಎಲ್ಲ?”

ಶ್ರೀಕರನಿಗೆ ಏನು ಹೇಳಬೇಕೋ ತೋಚದೆ, “ಬರ್ತೇನೆ ಸರ್,” ಎಂದು ಹಿಂದೆ ನಿಂತಿದ್ದ ಮೇಷ್ಟ್ರ ಹೆಂಡತಿಯನ್ನು ನೋಡಿ, “ಬರ್ತೇನೆ ಮೇಡಂ” ಎಂದ. ಇಬ್ಬರು, “ಸರಿ ಹೋಗಿ ಬಾ” ಎಂದರು.

ಶ್ರೀಕರ್ ಹೋದ ಬೆನ್ನಿಗೆ ಮೇಷ್ಟ್ರ ಹೆಂಡತಿ ಅಡುಗೆಮನೆಗೆ ಹೋಗಿ ಅಡುಗೆ ಆರಂಬಿಸಿದರೆ ಮೇಷ್ಟ್ರು, “ಮ್ಯಾಚ್ ಇದೆ,” The_Totoal_Defeat_abstract_human_bodyಎಂದು ಎಂದು ಟಿ.ವಿ. ಹಾಕಿಕೊಂಡರು. ಸ್ವಲ್ಪ ಹೊತ್ತಿನಲ್ಲೇ ಅಡುಗೆ ಮನೆಗೆ ಬಂದು ಒಂದು ಲೋಟ ನೀರು ಕುಡಿಯುತ್ತಾ, “ದರಿದ್ರ ಐ.ಪಿ.ಎಲ್. ಆಟದ ಜೀವ ತೆಗೆದುಹಾಕಿದೆ,” ಎಂದರು. “ಆದರೂ ನೋಡ್ತೀರಲ್ಲ,” ಎಂದು ಹೆಂಡತಿ ಹೇಳಿದಾಗ, “ಏನ್ ಮಾಡ್ಲಿ. ಟೆಸ್ಟ್ ಆಟ ಕಡಿಮೆ ಆಗಿದೆ. ಇದನ್ನೇ ನೋಡ್ಬೇಕು ನನ್ನ ಚಪಲಕ್ಕೆ,” ಎಂದು ಅಡುಗೆ ಮನೆಯಿಂದ ಹೊರ ನಡೆದರು.

ಸುಮಾರು ಒಂದು ಗಂಟೆ ಬಳಿಕ ಹೆಂಡತಿ ಊಟಕ್ಕೆ ಕರೆದಾಗ ಬಂದು ಒಂದು ತುತ್ತು ಉಂಡು ಮಾತ್ರ ತೆಗೆದುಕೊಂಡು ಮೇಷ್ಟ್ರು ಬಟ್ಟೆ ಒಣಗಿಸುವ ಜಾಗದಲ್ಲಿ ನೇತುಹಾಕಿದ್ದ ಬಾಳೆಗೊನೆಯಿಂದ ಎರಡು ಹಣ್ಣು ಕೊಯ್ದು ಒಂದನ್ನು ಹೆಂಡತಿಗೆ ನೀಡಿ ತಾನೂ ಒಂದು ತಿಂದರು.

ಮೇಷ್ಟ್ರ ಹೆಂಡತಿ ಪಾತ್ರೆ ತೊಳೆದು ಮಲಗುವ ಕೋಣೆ ಸೇರುವ ಹೊತ್ತಿಗೆ ಮೇಷ್ಟ್ರು ಹಾಸಿಗೆ ಮೇಲೆ ಅಡ್ಡ ಬಿದ್ದಾಗಿತ್ತು. ಪಕ್ಕದಲ್ಲೇ ಮಲಗಿದ ಹೆಂಡತಿ ಹೇಳಿದರು, “ನಾನು ಕಂಪ್ಯೂಟರ್ ಕಲ್ತು ನಿಮ್ಮ ಲೇಖನ ಟೈಪ್ ಮಾಡಿ ಕಳಿಸಿದರೆ ಆಗಬಹುದೇನೋ. ನನಗೂ ಟೈಮ್ ಪಾಸ್ ಆಗೊತ್ತೆ. ಈ ವಾರ ರಿನ್ಜೆನ್ ಬಂದಾಗ ಅವಳ ಹತ್ರ ಕೇಳೋಣ ಕಡಿಮೆ ಕ್ರಯದ ಒಳ್ಳೆ ಕಂಪ್ಯೂಟರ್ ಯಾವುದು ಅಂತ.”

***

Leave a Reply

Your email address will not be published. Required fields are marked *