Daily Archives: October 31, 2015

ಆ್ಯಂಕರಿಂಗ್‍ v/s ಪತ್ರಿಕೋದ್ಯಮ!


-ವಿಶ್ವಾಸ್ ಕೆ


ಇದು ಸುದ್ದಿ ಓದುತ್ತಿರುವವರೇ ಸುದ್ದಿಯಾಗುತ್ತಿರುವ ಕಾಲ. ಕನ್ನಡವನ್ನು ಕನ್ನಡದ ರೀತಿಯಲ್ಲೇ ಓದುತ್ತಿದ್ದ, K S Bhagavanಸುದ್ದಿಗಳ ಹಿಂದಿರುವ ಭಾವಗಳನ್ನು ವೀಕ್ಷಕರಿಗೆ ತಲುಪಿಸುತ್ತಿದ್ದ, ಕನ್ನಡದ ಸುದ್ದಿ ಮಾಧ್ಯಮಕ್ಕೆ ಒಂದೊಳ್ಳೆಯ ಮಾದರಿಯಾಗಬಲ್ಲ ಸಾಧ್ಯತೆ ಹೊಂದಿದ್ದ ರೆಹಮಾನ್‍ ಹಾಸನ್‍, ಬಿಗ್‍ಬಾಸ್ ಮನೆಪಾಲಾಗಿದ್ದಾರೆ. ಮತ್ತೆಂದೂ ಹಳೆಯ ರೆಹಮಾನ್ ಸಿಗುವ ಸಾಧ್ಯತೆಗಳಿಲ್ಲ. ಹೀಗಿರುವಾಗಲೇ ಈ ವಾರ ಕನ್ನಡದ ಎರಡು ಸುದ್ದಿ ವಾಹಿನಿಗಳಲ್ಲಿ ಚಿಂತಕ ಭಗವಾನ್ ಸಂದರ್ಶನಗಳು ಪ್ರಸಾರವಾಗಿವೆ. ಭಗವಾನ್ ಮಾತು, ಅವರ ಪ್ರತಿಪಾದನೆಗಳು ಸುದ್ದಿಯಾಗುವ ಜಾಗದಲ್ಲಿ, ಅವರನ್ನು ಸಂದರ್ಶಿಸಿದ ಇಬ್ಬರೂ ಆ್ಯಂಕರ್‍ಗಳು ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ಪರ ಮತ್ತು ವಿರೋಧದ ದನಿಗಳು ಸದ್ದುಮಾಡುತ್ತಿವೆ. ಫೋನ್ ಕಾಲ್‍ಗಳು ‘ಸೌಂಡ್ ಕ್ಲೌಡ್’ ನಲ್ಲಿ ಬಿಕರಿಗಿಡಲಾಗಿದೆ. ಎರಡೂ ಪ್ರತ್ಯೇಕ ಘಟನೆಗಳಾದರೂ, ಒಂದಕ್ಕೊಂದು ಅಂತರ್ ಸಂಬಂಧ ಹೊಂದಿವೆ. ಜತೆಗೆ, ಕನ್ನಡದ ಸುದ್ದಿವಾಹಿನಿಗಳು, ಒಂದು ದಶಕದ ನಂತರವೂ ಎದುರಿಸುತ್ತಿರುವ ವೃತ್ತಿಪರತೆಯ ಕೊರತೆಯನ್ನು ಎತ್ತಿಹಿಡಿಯುತ್ತಿವೆ.

ಅವರು ರಂಗನಾಥ್ ಭಾರಧ್ವಾಜ್. ರಾಮೋಜಿ ಕನಸಿನ ಈ-ಟಿವಿ ಕನ್ನಡದಲ್ಲಿ ವಾರ್ತಾ ನಿರೂಪಕರಾಗಿದ್ದವರು. ನಂತರ ನಾನಾಚಾನಲ್‍ಗಳನ್ನು ನಾನಾರೀತಿಯ ಹುದ್ದೆಗಳನ್ನು ನಿಭಾಯಿಸಿದವರು. ಇದೀಗ ಅಂಬಾನಿ ಎಂಬ ಈ ದೇಶದ ಸಿರಿವಂತನ ಒಡೆತನಕ್ಕೆ ಮಾರಿಸಿಕೊಂಡ ಈ-ಟಿವಿ ಕನ್ನಡ ಸುದ್ದಿವಾಹಿನಿಯ ಎಡಿಟರ್ ಇನ್ ಚೀಫ್. ಇವರು ಒಂದು ತಿಂಗಳಿಂದ ಸಂದರ್ಶನ ನೀಡುವಂತೆ ಭಗವಾನ್ ಅವರಿಗೆ ದುಂಬಾಲುಬಿದ್ದದರು. ಅದಕ್ಕೆ ಅವರ ಹತ್ತಿರದ ಕೆಲವರಿಗೆ ಕರೆಮಾಡಿ, ಭಗವಾನ್ ಜತೆಗೆ ಮಾತುಕತೆಗೆ ಬರಲು ಅಹ್ವಾನಿಸಿದ್ದರು. ಭಗವಾನ್ ಬಂದರುಕೂಡ. ಬಹುಶಃ ರಂಗನಾಥ್ ಅಂತಹ ಅನುಭವಿ ಪತ್ರಕರ್ತ ಈ ಸಮಯದಲ್ಲಿ ಭಗವಾನ್ ಅವರ ಬಗ್ಗೆ ಅಧ್ಯಯನಕ್ಕೆ ಮೀಸಲಿಡಬೇಕಿತ್ತು. ಅವರ ಕೃತಿಗಳನ್ನು ಗುಡ್ಡೆಹಾಕಿಕೊಂಡು ಓದಬೇಕಿತ್ತು. ಅವರ ವಿವಾದಿತ ಮಾತುಗಳನ್ನು ರಿವಿಝಿಟ್‍ ಮಾಡಬೇಕಿತ್ತು. ನಂತರ, ಅವರ ಜತೆಗಿನ ಸಂದರ್ಶನಕ್ಕೆ ಪ್ರಶ್ನೆಗಳನ್ನು ರೆಡಿ ಮಾಡಿಕೊಳ್ಳಬೇಕಿತ್ತು. ಆದ್ರೆ, ರಂಗನಾಥ್‍ ಮಾಡಿದ್ದೇನು? ಬಲಪಂಥೀಯ ಹಿನ್ನೆಲೆಯವರಿಗೆ ಕರೆಮಾಡಿ, “ಲೆಫ್ಟ್-ರೈಟ್” ತಗೊಳ್ಳಿ ಎಂದುಬಿಟ್ಟರು.

ವಾಟರ್ ಗೇಟ್ ಹಗರಣ ಹೊರಬಿದ್ದ ನಂತ್ರ ಅಮೆರಿಕಾದ ಅಧ್ಯಕ್ಷರಾಗಿದ್ದ ನಿಕ್ಸನ್ ರಾಜೀನಾಮೆಕೊಟ್ಟರು. ಆದ್ರೆ, ಅವರು ಎಲ್ಲಿಯೂRanganth Bharadhwaj ತಮ್ಮ ತಪ್ಪಿನ ಕುರಿತು ಚಿಕ್ಕ ವಿಷಾದವನ್ನೂ ವ್ಯಕ್ತಪಡಿಸಿರಲಿಲ್ಲ. ಈ ಸಮಯದಲ್ಲಿ ಆಸ್ಟ್ರೇಲಿಯಾದ ಸುದ್ದಿವಾಹಿನಿಗಳಿಗೆ ಸಂದರ್ಶನಗಳನ್ನು ನಡೆಸಿಕೊಡುತ್ತಿದ್ದ ಫ್ರೋಸ್ಟ್ ಎಂಬ ಪತ್ರಕರ್ತ ನಿಕ್ಸನ್ ಇಂಟರ್ವ್ಯೂಗೆ ಮುಂದಾದ. ಅದಕ್ಕೆನಿಕ್ಸನ್ ವಿರೋಧಿಸುತ್ತಿದ್ದ ಒಂದಿಬ್ಬರನ್ನು ಜತೆ ಇಟ್ಟುಕೊಂಡು ಅಧ್ಯಯನ ಶುರುಮಾಡಿದ. ನಿಕ್ಸನ್ ಅವರ ಪ್ರತಿನಡೆಯನ್ನೂ ಅವನು ಪರೀಕ್ಷೆಗೆ ಒಳಪಡಿಸಿದ. ನಂತ್ರವಷ್ಟೆ ನಿಕ್ಸನ್ ಸಂದರ್ಶನವನ್ನು ಶೂಟ್ ಮಾಡಲಾಯಿತು. ಮೊದಲಬಾರಿಗೆ ನಿಕ್ಸನ್ ಕಣ್ಣೀರುಹಾಕಿದರು. ನಾನು ಜನರನ್ನು ತಪ್ಪುಹಾದಿಗೆ ಎಳೆದೆ ಎಂದುಒಪ್ಪಿಕೊಂಡರು. ಆ ಒಂದು ಸಂದರ್ಶನದಿಂದಾಗಿ ಫ್ರೋಸ್ಟ್ ನೇ ಮಾತಾಗಿಹೋದ್ರು. ಬಹುಶಃ ಈ ಕಾರಣಕ್ಕೆ ನಾವಿಲ್ಲಿ, ಸಂದರ್ಶನಗಳ ವಿಚಾರ ಬಂದಾಗ ನಿಕ್ಸನ್ ಮತ್ತು ಫ್ರೋಸ್ಟ್  ನಡುವೆ ನಡೆದ ಈ ಸಂದರ್ಶನವನ್ನು ನೆನಪು ಮಾಡಿಕೊಳ್ಳುತ್ತಿದ್ದೇವೆ. ರಂಗನಾಥ್ ಅಂತಹ ಹಿರಿಯ ಪತ್ರಕರ್ತ ಇದನ್ನು ಗಮನಿಸದೇ ಹೋದ ಬಗೆಯೇ ಸೋಜಿಗ ಎನ್ನಿಸುತ್ತದೆ. ಭಗವಾನ್ ಮಾತುಗಳು ತಪ್ಪು, ಅವುಗಳಿಂದ ಸಮಾಜ ಹಾಳಾಗುತ್ತಿದೆ ಎಂದು ಅವರು ನಂಬಿಕೊಂಡಿದ್ದರೆ, ಅದು ಅವರ ನಂಬಿಕೆ. ಅದರ ಬಗ್ಗೆ ಭಿನ್ನಾಭಿಪ್ರಾಯ ಇಟ್ಟುಕೊಳ್ಳಬಹುದೇ ಹೊರತು, ಅದನ್ನು ತಪ್ಪು ಎಂದು ಹೇಳುವುದು ಕಷ್ಟ. ಆದ್ರೆ, ಒಬ್ಬ ಪತ್ರಕರ್ತರಾಗಿ ರಂಗನಾಥ್‍, ತಮ್ಮ ಭಿನ್ನಾಭಿಪ್ರಾಯಗಳನ್ನು ಪ್ರತಿಪಾದನೆ ಮಾಡಲು ಹೊರಡುತ್ತಾರೆ. ಅಲ್ಲಿ ವೃತ್ತಿಪರತೆಯಾಗಲೀ, ಸಿದ್ಧತೆ ಯಾಗಲೀ ಕಾಣುವುದಿಲ್ಲ. ಹಿಂದೆ ಅವರೊಮ್ಮೆ ನಟ ಪ್ರಕಾಶ್ ರಾಜ್ ಅವರ ಸಂದರ್ಶನ ಮಾಡಿದ್ದರು. ಮೊದಲುಪ್ರಕಾರ ಪ್ರಕಾಶ್ ರಾಜ್ ಅವರ ಹೊಗಳಿಕೆಗೆ ಸಂದರ್ಶನದ ಸಮಯವನ್ನು ಮೀಸಲಿಟ್ಟರು. ನಂತ್ರ, ಕಾಲೆಳೆಯಲು ಹೋದರು. ಆದ್ರೆ, ಸಮಚಿತ್ತವನ್ನು ಕಾಯ್ದುಕೊಂಡಿದ್ದ ಪ್ರಕಾಶ್ ರಾಜ್  ಅದ್ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ಬಹುಶಃ ಇದನ್ನು ನಿರೀಕ್ಷಿಸದೇ ಇದ್ದ ರಂಗನಾಥ್, ಕೊನೆ ಕೊನೆಯಲ್ಲಿ ಬುಸುಗುಡಲು ಶುರುಮಾಡಿದರು. ಆಗಲೂ, ಜೀವನಾನುಭವವನ್ನು ಕಂಡಿದ್ದ ನಟ ಫಾರ್ಮ್ ಕಳೆದುಕೊಳ್ಳಲಿಲ್ಲ. ಒಬ್ಬ ಪತ್ರಕರ್ತ ಸಿದ್ಧತೆ ಇಲ್ಲದೆ ಹೇಗೆ ಸಂದರ್ಶನ ನಡೆಸಬಾರದು ಎಂಬುದಕ್ಕೆ ಈ ಸಂದರ್ಶನವೊಂದು ಪಾಠ. ಇದು ನಡೆದ ವರ್ಷದ ನಂತ್ರ ಭಗವಾನ್ ‍ಸಂದರ್ಶನ. ರಂಗನಾಥ್ ಸುಧಾರಿಸಿಕೊಂಡಂತೆ ಕಾಣಿಸುವುದಿಲ್ಲ. ಇದರಿಂದ ವೈಯುಕ್ತಿಕವಾಗಿ ರಂಗನಾಥ್ ಅವರಿಗೆ ಲಾಭನಷ್ಟಗಳಿಗಿಂತ, ಪತ್ರಿಕೋದ್ಯಮದ ಒಟ್ಟಾರೆ ಬೆಳವಣಿಗೆ ದೃಷ್ಟಿಯಿಂದ ಒಳ್ಳೆಯದಲ್ಲ. ಯಾಕೆಂದರೆ, ಪತ್ರಿಕೋದ್ಯಮ ವ್ಯಕ್ತಿಗಳನ್ನು ಮೀರಿದ್ದು. ಅದು ಜರ್ನಲಿಸಂ. ಇಸಂ ಅಂದ್ರೆನೇ ಧರ್ಮ!

ಇನ್ನು, ಚಂದನ್ ಶರ್ಮ ಸಂದರ್ಶನದ ಬಗ್ಗೆ. ಚಂದನ್ ವಿದೇಶದಲ್ಲಿ ಓದಿದ್ದು. ಅದಕ್ಕಿಂತ ಹೆಚ್ಚಾಗಿ ಬಳ್ಳಾರಿChandan Sharma ಎಂಬ ಸುಡುನಾಡಿನಲ್ಲಿ ಅಜ್ಜಿ ಪ್ರೀತಿಯೊಂದಿಗೆ ಬೆಳೆದವರು. ಸುದ್ದಿ ಮತ್ತು ಮನೋರಂಜನೆ ಎಂಬ ಎರಡೂ ದೋಣಿಯಲ್ಲಿ ಕಾಲಿಟ್ಟವರು. ಇತ್ತ ಸಂದರ್ಶನದ ನೆಪದಲ್ಲಿ ಸಿನೆಮಾ ನಟರನ್ನು ಮಾತನಾಡಿಸುತ್ತಲೇ, ಅತ್ತ ಟಿವಿ ಸೀರಿಯಲ್‍ಗಾಗಿ ಬಣ್ಣಹಚ್ಚಿದವರು. ಅಂತವರು ಮೊನ್ನೆ ಭಗವಾನ್ ಜತೆಗೆ ಸಂದರ್ಶನದ ಹೆಸರಿನಲ್ಲಿ ಬಾಲಿಶ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಉದಾಹರಣೆಗೆ; ನೀವ್ಯಾಕೆ ಭಗವಾನ್ ಅಂತ ಹೆಸರಿಟ್ಟುಕೊಂಡಿದ್ದೀರಾ? ನೂರು ಚಿಲ್ಲರೆ ರೂಪಾಯಿ ಕೊಟ್ಟರೆ ಹೆಸರು ಚೇಂಜ್ ಮಾಡಿಸಬಹುದಲ್ಲಾ? ಭಗವಾನ್ ಅಂದ್ರೆ ಬುದ್ಧ ಅಂತೀರಾ? ಬುದ್ಧ ದೇವರಲ್ಲವಾ? ಹೀಗೆ ಅವರ ಪ್ರಶ್ನೆಗಳ ಸರಮಾಲೆಸಾಗಿದೆ. ಬುದ್ಧ ದೇವರಲ್ಲ ಮಗು, ನೀನು ಅಲ್ಪಜ್ಞಾನಿ ಅಂದಿದ್ದಾರೆ ಭಗವಾನ್. ಇದಕ್ಕಿಂತ ಹೆಚ್ಚು ಚಂದನ್ ಬಗ್ಗೆ ಏನೇ ಹೇಳಿದರೂ ಅತೀ ಅನ್ನಿಸುತ್ತದೆ. ಇನ್ನೂ ಮಾಗದ ವಯಸ್ಸು, ಜೀವನಾನುಭವದ ಕೊರತೆ ಮತ್ತು ಜನರ್ನಲಿಸಂ ಎಂಬ ಪವಿತ್ರ ಕೆಲಸಕ್ಕೆ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾಗದ ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ.

ಇವೆಲ್ಲವನ್ನೂ ಪಕ್ಕಕ್ಕಿಟ್ಟು ನೋಡುವುದಾದರೆ, ಇಲ್ಲಿ ರಂಗನಾಥ್ ಮತ್ತು ಭಾರಧ್ವಾಜ್ ಗಳಿಗಿಂತ ಪತ್ರಿಕೋದ್ಯಮದ ಇತಿಹಾಸ ದೊಡ್ಡದು. ಕನ್ನಡದ ಪಾಲಿಗೆ ಸುದ್ದಿವಾಹಿನಿಗಳು ಬಂದು ಒಂದು ದಶಕ ಕಳೆದಿದೆ ಅಷ್ಟೆ. ಇನ್ನೂ ಈ ಕ್ಷೇತ್ರ ತನ್ನ ಬಾಲ್ಯಾವಸ್ಥೆಯಲ್ಲಿದೆ. ಹೊಸ ಪ್ರತಿಭೆಗಳು ಪ್ರವೇಶವಾಗುತ್ತಿದೆ. ಅವರಿಗೆಲ್ಲಾ, ಟಿವಿಚಾನಲ್‍ಗಳಲ್ಲಿ  ಹೇಗೆ  ಸಂದರ್ಶನಗಳನ್ನು ನಡೆಸಬೇಕು ಎಂಬುದಕ್ಕಿಂತ, ಹೇಗೆ ನಡೆಸಬಾರದು ಎಂಬುದನ್ನು ಇವರಿಬ್ಬರು ಅಮೂಲ್ಯ ಪಾಠವೊಂದನ್ನು ನೀಡಿದ್ದಾರೆ.