Monthly Archives: October 2015

ಪಯಣ: ಗಾಂಧೀ ಜಯಂತಿ ಕಥಾಸ್ಪರ್ಧೆ 2015- ಬಹುಮಾನ ಪಡೆದ ಕಥೆ


-ಶಾಂತಿ ಕೆ.ಎ.


“ಮ್ಯಾಡಮ್ ಸ್ಸಾರಿ ಐ ಕುಡಂಟ್ ಹೆಲ್ಪ್ ಯು.. ದಿ ಅದರ್ ಆಕ್ಯುಪೆಂಟ್ ಹ್ಯಾಸ್ ಕಮ್ .. ಯು ಹ್ಯಾವ್ ಟು ಶೇರ್ ದಿಸ್ ಸೀಟ್ ವಿಥ್ ಹಿಮ್.” ಟಿ ಟಿ ನಿರ್ಭಾವುಕನಾಗಿ ಹೇಳಿ ಅತ್ತ ಹೋಗುವಾಗ ಮೇಲಿನ ಬರ್ತ್ ನಲ್ಲಿ ಕುಳಿತಿದ್ದ ತಮಿಳು ಹುಡುಗ ಕಿಸಕ್ಕನೆ ನಕ್ಕ. ಮ್ಯಾಡಂ, ನಿಮ್ಮ ಪ್ರೇಯರ್ ವೇಸ್ಟ್ ಆಯ್ತು ನೋಡಿ.. “ನಾನು ತುಟಿ ತಿರುಗಿಸುತ್ತ ನಕ್ಕೆ. ಹಾಗೆ ನಗುವಾಗ ನಾ ಬೇಕಂತಲೇ ತುಸು ಹೆಚ್ಚೇ ತುಟಿ ವಾರೆ ಮಾಡಿ ನಕ್ಕೆನೇನೋ ಅನಿಸಿ ತಕ್ಷಣ ನಗು ಕರಗಿಸಿ ಆ ಭಾಗೇಶನ ದಾರಿ ಕಾಯತೊಡಗಿದೆ. ಜೊತೆಗೆ ಆ ತಮಿಳು ಹುಡುಗ ಮತ್ತು ಎದುರಿನ ಸೀಟಿನಲ್ಲಿದ್ದ ನಾಯ್ಡು ಸರ್ ಮತ್ತು ಆ ಮೂವರು ಮಧ್ಯವಯಸ್ಸಿನ ಗಂಡಸರು ಕೂಡ ಅವನದೇ ದಾರಿ ಕಾಯುತ್ತಿರುವಂತೆ ನನಗೆ ಅನಿಸಿತು. ಬರುವ ಮೊದಲೇ ಅದೋ ಬಂತು ಬಂತು ಇದೋ ಬಂತು ಅಂತ ಕಾದ ಭೂತವೊಂದು ಪ್ರತ್ಯಕ್ಷವಾಗುತ್ತಿದೆಯೇನೋ ಎಂಬಷ್ಟು ಕುತೂಹಲ ಅಲ್ಲಿ ಸಡನ್ನಾಗಿ ಎದ್ದು ನಿಂತಿತ್ತು, ಅದೇನೂ ಸುಖಾ ಸುಮ್ಮನೆ ಬಂದದ್ದಲ್ಲ ಬಿಡಿ.. ಅದಕೂ ಮುಂಚೆ ನಾವೆಲ್ಲ ಭಾಗೇಶನನ್ನು ಬಾಯಿಗೆ ಹಾಕಿಕೊಂಡು ಜಗಿದುಗಿದಿದ್ದೆವು. ಬಹುಃಶ ಇದರಲ್ಲಿ ಪ್ರಧಾನ ಪಾತ್ರ ನಂದೇ ಇರಬೇಕು. ಅಪರಿಚಿತ ಹುಡುಗನೊಬ್ಬನ ಜೊತೆ ಸೀಟು ಹಂಚಿಕೊಳ್ಳುವ ಪುಳಕ ಮತ್ತು ಭಯಮಿಶ್ರಿತ ಕುತೂಹಲ ನಂಗಿರಲಿಲ್ಲವೆಂದರೆ ಅದು ಅಪ್ಪಟ ಸುಳ್ಳಾದೀತು. ಆದರೆ ಅದನ್ನ ಯಾರಿಗೂ ತೋರಿಸಬಾರದಿತ್ತಲ್ಲ..! ಅದಕ್ಕೇ ಎಲ್ಲರಿಗಿಂತಲೂ ತುಸು ಹೆಚ್ಚಾಗೇ ಮಾತಾಡಿದ್ದೆನೇನೋ …

ಇದಕ್ಕಿಂತ ಮುಂಚೆ ಒಮ್ಮೆ ಥೇಟ್ ಹೀಗೇ ಆಗಿತ್ತು. ಅವತ್ತು ನಾನೂ ನನ್ನ ಗಂಡ ಸುಬ್ರಮಣಿಯೂ ಮದುವೆಯಾದ ಹೊಸತರಲ್ಲಿart-2 ಹೀಗೇ ಒಂದೇ ಸೀಟು ಹಂಚಿಕೊಳ್ಳಬೇಕಾದ ಸಂದರ್ಭವೊಂದು ಬಂದಿತ್ತು. ಅವೊತ್ತು ನಿಜಕ್ಕು ಅವತ್ತು ನಾನು ವಿಚಿತ್ರವಾದ ಎಕ್ಸೈಟ್ಮೆಂಟಿನಲ್ಲಿ ಚಡಪಡಿಸಿದ್ದೆ. ಅತ್ತೆ, ಮಾವ, ನಾದಿನಿ ಅವಳ ಸಂಸಾರ ಸಾರ ಸಗಟಿನ ಜೊತೆಗೆ ಇದ್ದೂ ಇದ್ದೂ ಅವತ್ತು ಮೊದಲ ಬಾರಿಗೆ ಗಂಡನೊಡನೆ  ಟ್ರೈನಿನಲ್ಲಿ ಒಂದೇ ಸೀಟು ಹಂಚಿಕೊಂಡು ಚೆನ್ನೈನತ್ತ ಹೊರಟಿದ್ದ ಎಳೆಯ ಖುಷಿಯದು. ಪುಟ್ಟಶಾಲಿನಲ್ಲಿ ಕಾಲುಗಳನ್ನ ಮುಚ್ಚಿಕೊಂಡು, ತುಟಿಗಳಲ್ಲಿ ಸುಮ್ಮ ಸುಮ್ಮನೆ ಇಣುಕಿ ನೋಡುತ್ತಿದ್ದ ನಾಚಿಕೆಯ ನಗುವನ್ನು ಸೈರಿಸಿಕೊಂಡು ನನ್ನದೇ ನನ್ನವನಾಗಿದ್ದ ಅವನತ್ತ ಮೆಲುವಾಗಿ ಕಾಲು ಚಾಚಿದ್ದೆ. ಆ ತುದಿಯಲ್ಲಿ ಅವನು,ಈ ತುದಿಯಲ್ಲಿ ನಾನು! ನಮ್ಮ ತುಂಬಿದ ಮನೆಯೊಳಗೆ ನಾನು ಎಲ್ಲಿ ಕಳೆದು ಹೋಗುತ್ತಿದ್ದೆ ನೋ ನನಗೇ ತಿಳಿಯುತ್ತಿರಲಿಲ್ಲ. ಗಂಡನ ಕೆಲಸವೇ ಅಂಥದು. ಬೆಳಗೆ ಏಳು ಗಂಟೆಗೆಲ್ಲ ಹೊರಟರೆ ಬರುವುದು ರಾತ್ರಿ ಕವಿದು ಕತ್ತಲಾಗಿ ಬಸ್ಸೆಲ್ಲ ನಿಂತು ಲಾರಿಗಳಷ್ಟೇ ಓಡಾಡುವ ಸರ ಹೊತ್ತಿನಲ್ಲಿ. ರೂಮಿನಲ್ಲಿ ಅತ್ತೆ ಒಬ್ಬಳೆ ಅಡ್ಡಾಗಿ ಹೂಸು ಬಿಡುತ್ತ ಒದ್ದಾಡುತ್ತಿದ್ದರೆ ಇತ್ತ ಹಾಲಿನಲ್ಲಿ ಮಾವ ರಾತ್ರಿಯಿಡೀ ಕೆಮ್ಮುತ್ತ, ಬೀಡಿ ಸೇದುತ್ತ, ಘಳಿಗೆಗೊಮ್ಮೆ ಎದ್ದು ಉಚ್ಚೆ ಹುಯ್ಯುತ್ತ ಬೆಳಕು ಹರಿಸುತ್ತಿರುತ್ತಿದ್ದ. ನಡು ನಡುವೆ ಒಮ್ಮೊಮ್ಮೆ ಎದ್ದು “ನೋಡು ಯಾರೋ ಕರೀತ ಇದಾರೆ, ಹಿಂದಿನ ಬೀದಿಯಲ್ಲಿ ದೆವ್ವ ಇದೆ “ಅಂತೆಲ್ಲ ಹೇಳುತ್ತ ನಡು ರಾತ್ರಿಯಲಿ ಬಾಗಿಲಿಗೆ ಹಳೆಯ ಚಪ್ಪಲಿ ಕಟ್ಟಿಟ್ಟು ಮನೆಯ ಸುತ್ತ ಮೂತ್ರ ಮಾಡುತ್ತ ಸುತ್ತುತ್ತಿರುತ್ತಿದ್ದ. ಇಷ್ಟೆಲ್ಲ ರಂಪ ಆಗುತ್ತಿರುವಾಗ ಇವನು ಅದ್ಯಾವುದೋ ಮಧ್ಯರಾತ್ರಿಯಲ್ಲಿ ಮನೆಗೆ ಬಂದು ಮಾರ್ಕೆಟ್ಟಿನಲ್ಲಿ ಬಿಸಾಕಿದ ಈರುಳ್ಳಿ ಮೂಟೆಯಂತೆ ಅಸಡ್ಡಾಳಾಗಿ ಅಡ್ಡಾಗುತ್ತಿದ್ದ. ಅವನು ಸ್ನಾನ ಮಾಡಿ ಬರಲಿ ಅಂತ ನನಗನಿಸುತ್ತಿತ್ತು ಆದರೆ ಸ್ನಾನ ಮಾಡಿಯೂ ಏನೂ ಕಾರ್ಯವಿರಲಿಲ್ಲ.. ಆ ಹಾಲಿ ನಲ್ಲಿ ನಾನು, ಇವನು, ಮಾವ, ಕೆಳಗೆ ಹಾಸಿಕೊಂಡು ನಾದಿನಿ ಮತ್ತವಳ ಸಂಸಾರ. ಅಲ್ಲಿ ಏನೂ ನಡೆಯಬೇಕಿರಲಿಲ್ಲ ….ಒಂಚೂರಾದರೂ ಏನಾದರೂ ನಡೆಯಲಿ ಅಂತ ನಾನು ಕಾದ ಮಣ್ಣಿನಂತೆ ಹೊಗೆಯಾಡುತ್ತ ಮಲಗಿದ್ದರೆ ಇವನು ಒಲಿಯದ ಬಿರುಮೋಡದಂತೆ ತನ್ನದೇ ಲೋಕದಲ್ಲಿ ತೇಲುತ್ತಿದ್ದ. ಅಷ್ಟೆಲ್ಲ ದಾಟಿ ಅದೇ ಮೊದಲು! ಅವನೊಂದಿಗೆ ಅಷ್ಟು ಖುಷಿಯಿಂದ ಹೊರಟ ಮೊದಲ ಪಯಣ. ಅವನತ್ತ ನಿಡಿದಾಗಿ ಕಾಲು ಚಾಚಿ ಅವನ ಕಾಲುಗಳಿಗೆ ಕಚಗುಳಿ ಇಡುವ ಪ್ರಯತ್ನ ಮಾಡಿದ್ದೆ ಕಣ್ಣುಗಳು ಚೆಲ್ಲುಚೆಲ್ಲು ನಾಚಿಕೆಯೊಂದನ್ನು ಚೆಲ್ಲುತ್ತಿದ್ದಿರಬೇಕು. “ಏ ಕಾಲ್ತೆಗಿ, ನನ್ನ ಪ್ಯಾಂಟ್ ಲೈಟ್ ಕಲರಿದೆ ನೋಡು ..” ಅವನು ಸಿಡುಕಿದಂತೆ ಹೇಳಿದ್ದ ..ನಾ ಮಿಡುಕಿ ಬಿದ್ದಿದ್ದೆ. ಕಣ್ಣುಗಳಲ್ಲಿ ಹೊತ್ತಿಕೊಂಡಿದ್ದ.. ಬೆಳಕು ಹಠಾತ್ತನೆ ನಂದಿ ಹೋಗಿ ಮುಖ ಕಪ್ಪಿಟ್ಟಿತ್ತು. ನಾನು ಮಾತಾಡದೆ ಹೊರಗೆ ಕಣ್ಣುಕೀಲಿಸಿ ಕತ್ತಲನ್ನು ಕಣ್ತುಂಬಿಕೊಳ್ಳತೊಡಗಿದ್ದೆ. “ನೀನು ಮಲಕೋ ನಾಳೆ ನಿಂಗೆ ಎಕ್ಸಾಮ್ ಇದೆಯಲ್ಲ.. “ಅವನು ಅಲ್ಲಿಂದ ಎದ್ದುಹೋಗಿ ಟ್ರೈನಿನ ಬಾಗಿಲ ಪಕ್ಕ ಬಹಳ ಹೊತ್ತು ನಿಂತಿದ್ದ. ನಾನು ಜೋಕಾಲಿಯಾಡುತ್ತಿದ್ದ ಟ್ರೈನಿನ ಬರ್ತಿಗೆ ಅಂಟಿಕೊಂಡು ಕಾಲು ಕೊಕ್ಕರಿಸಿ ಮಲಗಿದ್ದೆ. ಅವತ್ತು ರಾತ್ರಿಯ ಬೇಗೆಯ ಹೊತ್ತಿನಲೊಮ್ಮೆ ಅನಿಸಿತ್ತು.. ಒಂದು ವೇಳೆ ಬೇರೆ ಯಾವುದಾದರೂ ಹುಡುಗನೊಂದಿಗೆ ಹೀಗೆ ಬರ್ತ್ ಹಂಚಿಕೊಳ್ಳುವ ಹಾಗಿರುತ್ತಿದ್ದರೆ! ಅದೆಲ್ಲ ನಡೆದು  ವರುಷ ಹತ್ತಾಯಿತು. ಬದುಕು ನಿರ್ಭಾವುಕ ಹೆದ್ದಾರಿಯ ಹಾಗೆ ಸಂದ  ಸದ್ದುಗಳನ್ನೆಲ್ಲ ಒಳಗೆಳೆದುಕೊಳ್ಳುತ್ತ ತಾನು ಮೌ ನವಾಗಿ ಹೋಯ್ತು. ನಡೆದಷ್ಟೂ ಬೆಳೆಯುತ್ತಿರುವ ಬದುಕು ಎಂದಾದರೂ ಒಮ್ಮೆ ನಿಲುಗಡೆಗೆ ಬರುವುದೇ.. ಅಲ್ಲಿಯ ತ ನಕ ಹೀಗೇ ನಡೆಯುವುದು, ಯಾರಿಗೆ ಗೊತ್ತು ಯಾವ ತಿರುವಿನಲ್ಲಿ ಯಾವ ಸೋಜಿಗ ಅವಿತಿದೆಯೋ… ಹಾಗಂದುಕೊಂಡೇ ನಡೆದುಬಿಟ್ಟಿದ್ದೇನೆ. ಭರ್ತಿ ಹತ್ತು ವರ್ಷಗಳು!  ಬೆಂದಿದ್ದು ನೊಂದಿದ್ದು ಎಲ್ಲ ಮುಗಿದು ಬಿಸಿಯೇರಿ ತಣ್ಣಗಾದ ಸಂಧಿಪರ್ವ. ಬದುಕು ನಿಜಕ್ಕೂ ಒಂದು ಸ್ಥರಕ್ಕೆ ಬಂದಿತ್ತು.. ಏನೂ ಅಲ್ಲದೆ ಸುಮ್ಮನೇ ಸಂತೋಷವಾಗಿರುವುದನ್ನ ರೂಢಿಸಿಕೊಂಡು ಕಲಿತುಬಿಟ್ಟಿತ್ತು. ಅಲ್ಲೀತಂಕ ಸಂತೋಷವಾಗಿರೋದನ್ನ ಕೂಡ ಕಲಿ ಬಹುದು ಅಂತ ನನಗೆ ಗೊತ್ತೇ ಇರಲಿಲ್ಲ.

“ಸೀಟು ಕನ್ಫರ್ಮ್ ಇಲ್ಲ ಆರ್ ಎ ಸಿ. ಬಂದಿದೆ., ನೀನು ಯಾವುದಕ್ಕೂ ಬೇಗ ಹೊರಟುಬಿಡು .ಗುರ್ತಿರೋ ಟಿ ಟಿ ಇದ್ದರೆ ಒಂಚೂರು ಒಳ್ಳೆದು, ಸೆಬಾಸ್ಟಿನ್ ಡ್ಯೂಟಿ ಮೇಲಿದ್ದಾನ ನೋಡು” ಅಂತ ಸುಬ್ರಮಣಿ ಫೋನಿಸಿದ್ದ. ಅಂದುಕೊಂಡಂತೆಯೇ ಸೆಬಾಸ್ಟಿನ್ ಡ್ಯೂಟಿ ಮೇಲಿರಲಿಲ್ಲ.., ನನ್ನ ಸೀಟು ಭಾಗೇಶನೊಡನೆ ಹಂಚಿಕೆಯಾಗಿತ್ತು. ಅವನು ಬಾರದಿರಲಿ ಅಂತ ಎಲ್ಲರೆದುರು ಸುಳ್ಳೇ ಬೇಡಿದ್ದೆ ..ಇದೀಗ ಅವನು ಬರುತ್ತಿದ್ದಾನೆ ನಿಜಕ್ಕೂ. ಅವನೇನಾದರೂ ಹೇಳುವ ಮೊದಲೇ ನಾನು ಸರಿದು ಕೂತೆ. ಸೈಡ್ ಬರ್ಥ್ ಬೇರೆ. ಮನಸು ಮಾಡಿದ್ದರೆ ನಾಯ್ಡು ಸರ್ ಅವರ ಸೀಟ್ ನನಗೆ ಬಿಡಬಹುದಿತ್ತು ಆದರೆ ಅವರೆಲ್ಲ ಸದ್ದಿಲ್ಲದೆ ಕುತೂಹಲಿಗಳಾಗಿದ್ದಾರೆ ಅನಿಸಿತು. ಒಳ್ಳೆ ಎತ್ತರ ಅವನದು. ಕಂದು ಬಣ್ಣದ ಜೀನ್ಸ್ ಮೇಲೆ ನೀಲಿ ಟಿ ಶರ್ಟು. ಯಾವುದೋ ಮೋಹಕ ಸ್ಪ್ರೇ ಹೊಡಕೊಂಡಿದ್ದಾನೆ, ಅದು ಅವನ ಬೆವರಿ ನೊಡನೆ ಸೇರಿ ಅದು ಹಿತವಾಗಿ ತಾಗುತ್ತಿದೆ. ಎಸಿ ಕೋಚಿನ ಗದಗುಟ್ಟಿಸುವ ಚಳಿ..ಭಗವಂತ !ಮನಸೇ ಸುಮ್ಮನೆ ಸದ್ದು ಮಾಡದೆ ಮಲಗು ಅಂತ ನಾ ಒಳಗೊಳಗೇ ಅದನ್ನು ಸಮಾಧಾನಿಸಿದೆ. ಅವನು ನನ್ನತ್ತ ಒಂದು ಕುತೂಹಲಕ್ಕೂ ನೋಡಲಿಲ್ಲ.. ನಾನು ಮನಸನ್ನು ತಡವಿ ಸುಮ್ಮನಾಗಿಸಿ ಕೈಯಲ್ಲಿದ್ದ ಪುಸ್ತಕದೊಳಗೆ ಹುದುಗಿದಂತೆ ಮಾಡುತ್ತ ಕಡೆಗಣ್ಣಲ್ಲಿ ಅವನ ಚಲನವಲನಗಳನ್ನು ನೋಡಿದೆ. ಅವನ ಬಳಿ ಕೊಳೆಯಾದ ಬ್ಯಾಗೊಂದಿತ್ತು. ಅದು ಬಹಳ ದಿನಗಳಿಂದ ಅವನಿಗಾಗಿ ಜೀವ ತೇಯುತ್ತಿರುವುದು ಸ್ಪಷ್ಟವಿತ್ತು. ಅವನು ಸರಸರನೆ ಒಂದು ಬೆಡ್ಶೀಟೆತ್ತಿ ಕಾಲಿನ ಮೇಲೆ ಹಾಕಿಕೊಂಡು ಆ ತುದಿಯಲಿ ಕಾಲು ಮಡಚಿ ಕುಳಿತು ಬ್ಯಾಗಿನೊಳಗಿಂದ ಇಯರ್ ಫೋನ್ ಎತ್ತಿ ಕಿವಿಗೆ ಹಾಕಿಕೊಂಡು ಹಾಡು ಕೇಳುವವನಂತೆ ಮೊಬೈಲಿನಲ್ಲಿ ಕಣ್ಣು ಕೀಲಿಸಿ ಕುಳಿತ. ಅವನೀಗ ನನ್ನೆದುರು ಕೂತು ನನ್ನ ಫೋಟೋ ತೆಗೆದರೆ ಏನು ಗತಿ ಅದು ನನಗೆ ಗೊತ್ತಾಗುವ ಬಗೆ ಹೇಗೆ ಅಂತ ನನಗೆ ದಿ ಗಿಲಾಯಿತು. ಮೆಲ್ಲಗೆ ಕತ್ತೆತ್ತಿ ಪಕ್ಕದ ಸೀಟಿನಲ್ಲಿ ಕೂತಿದ್ದ ನಾಯ್ಡು ಸರ್ ನತ್ತ  ನೋಡಿದೆ ಅವರಿಗೂ ಏನೋ ಹೊಳೆದಿ ರಬೇಕು, ಅವರು ಅಕ್ಕರೆ ತೋರುವವರ ಹಾಗೆ “ಬೆಡ್ಶೀಟ್ ಹೊದ್ದುಕೊಂಡು ಕೂತ್ಕೋಮ್ಮ, ನಾವೆಲ್ಲ ಇಲ್ವೇ.. ಸಧ್ಯ ನಂಗೆ ಸ್ವಲ್ಪ ಸ್ಟ್ರೈನ್ ಆಗಿದೆ ಮಲಗ್ತೀನಿ ಅಂತ ಬರ್ತ್ ಬಿಡಿಸಿಕೊಂಡು ಮಲಗಿದ್ದರು. ನಾನು ಮುಖ ಕೊಡಬಾರದೆಂಬ ಭಯದಿಂದ ಮತ್ತಷ್ಟು ಬಗ್ಗಿ ಪುಸ್ತಕ ಓದುವಂತೆ ಮಾಡಿದೆ. “ಹಲ್ಲೋ ಮ್ಯಾಡಮ್,ಯಾಕಷ್ಟು ಅನ್ಕಂಫರ್ಟೇಬಲ್ ಆಗಿ ಕೂತ್ಕೊಂಡಿದೀರ? ಆರಾಮಾಗಿ ಕೂತ್ಕೊಳ್ಳಿ” ಅವನ ಕನ್ನಡ ಸ್ಪಷ್ಟವಿತ್ತು, ಅಂದರೆ ತಮಿಳವನೋ ತೆಲುಗಿನವನೋ ಅಲ್ಲ,ಅಪ್ಪಟ ಕನ್ನಡದವನೇ ಇರಬೇಕೆನಿಸಿತು. ” ಅಲ್ಲ ನೀವು ಮೊಬೈಲ್ ನಲ್ಲಿ ಏನು ನೋಡತಾ ಇದೀರ?,” “ಯಾಕೆ ?”ನನ್ನ ಪ್ರಶ್ನೆಯಿಂದ ಅವನೊಂಚೂರು ಇರಿಟೇಟ್ ಆಗಿರುವುದು ಸ್ಪಷ್ಟವಿತ್ತು. ಆದರೆ ನಾನು ನಿರ್ಧರಿಸಿದ್ದೆ. ಸುಮ್ಮನೆ ಮನದಲ್ಲೇ ಏನಾದರೊಂದು ಕಲ್ಪಿಸಿಕೊಂಡು ಕಷ್ಟಪಡೋದಕ್ಕಿಂತ ನೇರ ಮಾತಾಡೋದೇ ಸರಿಯೆನಿಸಿತ್ತು. “ಹಾಗಲ್ಲ, ನೋಡಿ ನೀವು ಏನು ನೋಡೋದಿದ್ದರೂ, ಫೋನು ಕೆಳಗೆ ಇಟ್ಕೊಂಡು ನೋಡಿ, ಅದೆಂಥ ನನ್ನ ಮುಖದ ನೇರ ಇಟ್ಕೊಂಡೆಂತ ನೋಡುದು? ಆಮೇಲೆ ನೀವು ನಂದು ಪೋಟೋ ತೆಗಿಯುದಿಲ್ಲಾಂತ ಎಂಥ ಗ್ಯಾರಂಟಿ?” “ಮ್ಯಾಡಂ, ಸುಮ್ನೆ ಇಲ್ದೇ ಇರೋ ಐಡಿಯಾ ಎಲ್ಲ ಕೊಡ್ಬೇಡಿ, ಇಷ್ಟೊತ್ತು ಹಾಗೆಲ್ಲ ಯೋಚನೆ ಮಾಡಿರ್ಲಿಲ್ಲ, ಇವಾಗ ನ್ನಿಸ್ತಿದೆ ಯಾಕ್ ಮಾಡ್ಬಾರದು ಅಂತ, ನೀವು ಚಂದ ಇದೀರಿ..ಯೂಸ್ ಆಗತ್ತೆ” ಅವನು ಮೀಸೆಯಡಿ ನಗುತ್ತಿರುವುದನ್ನು ಕಣ್ಣುಗಳು ಬಿಚ್ಚಿಡುತ್ತಿದ್ದವು.

“ಏನ್ ಮಾತಾಡ್ತಾ ಇದೀರ? ” ಕೋಪ ಬಂದರೂ.. ನೀವು ಚಂದ ಇದೀರ ಅಂದದ್ದು ಹಿತವಾಗೇ ಕೇಳಿಸಿತ್ತು. “ಏನಾಯ್ತಮ್ಮ , ಎನೀ ಪ್ರಾಬ್ಲಮ್ ?” ನಾಯ್ಡು ಸರ್ ಸೀಟು ಬಿಟ್ಟೆದ್ದಿದ್ದರು. “ನಥಿಂಗ್ ಅಂಕಲ್, ಸುಮ್ನೆ ತಮಾಷೆಗಂದೆ ಮ್ಯಾಡಮ್, ಹಾಗೆಲ್ಲ ಏನೂ ಮಾಡಲ್ಲ..ಯು ಪ್ಲೀಸ್ ಬಿ ಕಂ ಫರ್ಟೇಬಲ್. ನೀವು ಬೇಕಾದ್ರೆ ಆ ಅಂಕಲ್ ನ ಕರೆದು ಕೂರಿಸ್ಕೊಳ್ಳಿ, ನಾ ಅವರ ಸೀಟಲ್ಲಿ ಕೂತ್ಕೊತ್ತೀನಿ” ಅವನು ಬೇಕಂತಲೇ ತುಂಬ ನಾಟಕೀಯವಾಗಿ ಮಾತಾಡುತ್ತಿದ್ದಾನೆ ಅನಿಸಿ ನನಗೆ ಪೆಚ್ಚಾಯ್ತು. ನಾಯುಡು ಸರ್ ಬೇರೆ ತಮ್ಮ ಬುಡಕ್ಕೆ ಬರುತ್ತಿರುವ ಸಮಸ್ಯೆಯನ್ನು ನಾಜೂಕಾಗಿ ತಳ್ಳಿ ಹಾಕುವ ಸನ್ನಾಹದಲ್ಲಿ, “ಅದೆಲ್ಲ ಏನೂ ಬೇಡ ನೀ ಮೊಬೈಲು ಮಡಿಲಲ್ಲಿಟ್ಟುಕೊಂಡು ನೋಡು..ಸಾಕು, ನಾನೇ ಒಬ್ಬ ಬಿಪಿ ಪೇಷಂಟ್ ನಂಗೆ ಟೆನ್ಶನ್ ಕೊಡಬೇಡಿ ಅನ್ನುತ್ತ ಮುಸುಕೆಳೆದು ಮಲಗಿ ಬಿಟ್ಟರು. ಈ ಭಾಗೇಶನ ತುಟಿಯಲ್ಲಿ ಮತ್ತೆ ಸಣ್ಣ ತುಂಟ ನಗು. “ಸರಿ ಅಂಕಲ್ ನೀವು ಮಲಗಿ ನಾ ಲೈಟ್ ಆಫ್ ಮಾಡ್ತೀ ನಿ.” ಅನ್ನುತ್ತ ಅವನು ಕರ್ಟನ್ ಎಳೆದು ಲೈಟ್ ಆರಿಸಿದಾಗ ನಂಗೆ ನಿಜಕೂ ಧಿಗ್ಗೆಂದಿದತ್ತು. ಆದರೆ ಯಾವುದನ್ನೂ ತೋರಿಸಿಕೋ ಬಾರದು ಅನ್ನುತ್ತ ನಿರುಮ್ಮಳವಾಗಿ ಕುಳಿತವಳಂತೆ ಬುಕ್ ಮುಚ್ಚಿ ಸುಮ್ಮನೆ ಆನಿ ಕುಳಿತೆ. “ಮ್ಯಾಡಂ,ನಿಮ್ಮ ಬೆಡ್ ಲೈಟ್ ಆನ್ ಮಾಡ್ಕೊಳ್ಳೀ, ಅದರಲ್ಲೇ ಓದಬಹುದು.” ಅವನು ಹಾಗನ್ನುತ್ತ ಮೊಬೈಲು ಮುಚ್ಚಿ ಹಾಡಿನಲ್ಲೇ ಕಳೆದು ಹೋಗುತ್ತಿರುವವನಂತೆ ಕಣ್ಮುಚ್ಚಿ ಹಿಂದಕ್ಕೊರಗಿದ. ಚೇ ಚೇ ನಾನೇ ಅವಸರ ಪಟ್ಟೆನಾ, ಈ ಪ್ರಯಾಣವನ್ನು ಚೆಂದಗೊಳಿಸಿಕೊಳ್ಳಬಹುದಿತ್ತೇನೋ..ಮಿಡುಕಿದೆ.. “ನೀವು ಬೆಂಗಳೂರಿನ ತನಕವಾ?” ಮಾತು ಮುಂದುವರಿಸಬೇಕೆನಿಸಿತ್ತು. “ಇಲ್ಲ ಮೇಡಂ ಚೆನ್ನೈ ಗೆ ಅಲ್ಲಿ ಒಂದು ಇಂಟರ್ವ್ಯೂ ಅಟೆಂಡ್ ಮಾಡೂದಿದೆ” “ಯಾತರದ್ದು?” “ಟಿ ಸಿ ಎಸ್ ನಲ್ಲಿ. ನೋಡಬೇಕು” ಗುಡ್ಲಕ್, ಅದು ತರಮಣಿಲಿದೆ ಅಲ್ವಾ?” ಮ್, ಅಲ್ಲಿಗೆ ಹೋಗೋಕೆ ಹೇಗೆ? ಬಸ್ ಹಿಡೀಬೇಕಾ? ಆಟೋದಲ್ಲಿ ಹೋಗಬಹುದಾ?” “ಬಸ್ ಬೇಕಾದಷ್ಟಿವೆ, ಬಸ್ಸಲ್ಲೇ ಹೋಗಿ. ದೂರ ಇದೆ ಅದು, ನಮ್ಮಲ್ಲಿ ಬಸ್ ಫೇರ್ ಕಡಿಮೆ ಇದೆ, ಇಲ್ಲಾಂದ್ರೆ ಪ್ರಿ ಪೇಯ್ಡ್ ಆಟೋ ಕೂಡಾ ಸಿಗುತ್ತೆ ಸಮಸ್ಯೆ ಏನಾಗಲ್ಲ” “ಮ್…”

“…” “ನೀವು ಚೆನ್ನೈನಲ್ಲೇ ಸೆಟಲ್ಡಾ?” “ಸಧ್ಯಕ್ಕೆ ಅಲ್ಲಿದೀವಿ, ಆದ್ರೆ ಸೆಟಲ್ ಆಗೋದು ಅಂತ ಏನಿಲ್ಲ, ಅಸಲು ಮನುಷ್ಯ ಸಾಯೋ ತಂಕ ಸೆಟಲ್ ಆಗಕ್ಕಾಗಕ್ಕಾಗಲ್ಲಾಂತ ನಂಗನ್ಸುತ್ತೆ” ಹೀಗಂದ ಮೇಲೆ ನಾನ್ಯಾಕೋ ಅವನನ್ನ ಇಂಪ್ರೆಸ್ ಮಾಡುವಂತೆ ಮಾತಾಡಬೇಕು ಅನ್ಕೊಂತಾ ಮಾತಾಡ್ತಾ ಇದೀನೇನೋ ಅನಿಸಿ ತಲೆ ಕೊಡವಿದೆ. ಅವನು ನಕ್ಕ..”ವಿನೋದವಾಗಿದೆ ನಿಮ್ಮ ಮಾತು, ಆದರೆ ಒಪ್ಪತಕ್ಕಂತ್ತದ್ದೇ ಬಿಡಿ” “ಅದೇನು ಹಾಡು ಕೇಳುತ್ತಿದ್ದೀರಿ..ನಮಗೂ ಕೇಳಿಸಿ ಅಲ್ಲ” “ಓ ಅದರಲ್ಲೇನು, ಚಂದ ಹಾಡು ನೀವೂ ಕೇಳಿ..” ಅವನು ಇಯರ್ ಫೋನ್ ಕಿತ್ತ. ‘ಪಾಸ್ ಆಯಿಯೇ..ಕಿ ಹಮ್ ನಹೀ ಆಯೇಂಗೆ ಬಾರ್ ಬಾರ್…. ‘ಆ ಹಗುರ ಮೌನವನು ಭೇದಿಸಿಕೊಂಡು ಮಧುರ ಹಾಡು ಹೊಮ್ಮಿತು. ಗಂಡು ದನಿ. “ಇದ್ಯಾರ ಹಾಡು?” ಇದು ಸನಮ್ ಪುರಿ ಹಾಡು,ಹಳೇ ಹಾಡುಗಳನ್ನೇ ತುಸು ಹೊಸತಾಗಿ ಟ್ರೈ ಮಾಡಿದ್ದಾನೆ ನಂಗೆ ತುಂಬ ಇಷ್ಟದ ಹಾಡುಗಳಿವು. “ನಂಗೂ ಇಷ್ಟವಾಯ್ತು” ಅವನು ಚೆಂದಗೇ ಹಾಡುತ್ತಿದ್ದ, ಲಗ್ ಜಾ ಗಲೇ ನನ್ನ ಅತ್ಯಂತ ಇಷ್ಟದ ಹಾಡು.

ನಮ್ಮಿಬ್ಬರ ನಡುವೆ ಹಾಡು ತೇಲತೊಡಗಿತು.ನಾಯ್ಡು ಸರ್, ತಮಿಳು ಹುಡುಗ ಎಲ್ಲ ಮಲಗಿದ್ದಂತೇ ತೋರಿತು. ಮುಚ್ಚಿದ ಕರ್ಟನ್ನಿನ ಮಂದ ದೀಪದ ಬೆಳಕಲ್ಲಿ, ಮಧುರ ಹಾಡುಗಳ ಜೊತೆ, ಹಿತವಾಗಿ ಓಲಾಡುತ್ತ ಹೋಗುತ್ತಿರುವ ಟ್ರೈನಿನ ಓಟಕ್ಕೆ ತಕ್ಕಂತೆ ನನ್ನ ಎದೆಯೂ ಮಿಡಿಯತೊಡಗಿತ್ತು. ಎದುರಿಗೆ ಹರೆಯದ ಕುದುರೆಯಂಥ ಹುಡುಗ.. ಇಲ್ಲಿ ಬಯಕೆಯ ನಿಗಿ ಕೆಂಡ ನುಂಗಿ ಒಳಗೊಳಗೇ ಬೇಯುತ್ತಿರುವ ಸುಡುಸುಡು ಹೆಣ್ಣು!.. ಭಗವಂತ ಈ ಬಯಕೆ ಬಲಿಯದಂತೆ ಕಾಯಿ.. ನಾನು ಮೆಲ್ಲಗೆ ಅವನತ್ತ ನೋಡಿದೆ. ಅವನು ಹಿಂದಕ್ಕೆ ತಲೆ ಒರಗಿಸಿಕೊಂಡು ಕಣ್ಣು ಮುಚ್ಚಿಕೊಂಡಿದ್ದ. ಅವನನ್ನು ಆ ಭಂಗಿಯಲ್ಲಿ ನೋಡಲು ಆರ್ಕಷಕವೆನಿಸಿತು. ಇನ್ನೂ ರಾತ್ರಿಯ ಹತ್ತೂವರೆಯಷ್ಟೇ. ಬೆಳಗಾಗೋದು ಯಾವಾಗ, ಅಲ್ಲೀ ತಂಕ ಹೀಗೇ ಕಾಲು ಮುದುರಿಕೊಂಡು ಹೇಗೆ ಕೂರುವುದು? ಯೋಚಿಸುತ್ತಿರುವಂತೇ ಸುಬ್ರಮಣಿಯ ಫೋನು. “ಏನು ಸೀಟಿಂದು ಏನಾದ್ರೂ ಆಯ್ತಾ? ಸೆಬಾಸ್ಟಿನ್ ನಂ ಗೆ ಫೋನ್ ಮಾಡಿದೆ, ನಾಟ್ ರೀಚೇಬಲ್ ಇದೆ, ನಿಂಗೆ ಸಿಕ್ಕಿದ ನಾ? “ಇಲ್ಲ, ಸಧ್ಯಕೆ ಒಂದು ಹುಡುಗನ ಜೊತೆ ಸೀಟು ಹಂಚ್ಕೊಂಡಿದೀನಿ, ಸಧ್ಯಕ್ಕೆ ಒಕೆ. ನಾಳೆ ಮಾತಾಡ್ತೀನಿ, ಎಲ್ಲ ಮಲಗಿದಾರೆ ..” “ಸರಿ ಸರಿ, ಬೆಳಗೆ ನಾ ಸ್ಟೇಷನ್ನಿಗೆ ಬರ್ತೀನಿ, ನೀನು ಆರಾಮಾಗಿ ಕೂತ್ಕೋ.. ಕಾಲು ಚಾಚ್ಕೊಂಡು ಕೂತ್ಕೋ” ಸುಬ್ರಮಣಿಯ ಪ್ರೀತಿಯನು ಹೇಗೆ ಅರ್ಥೈಸುವುದೆಂದೇ ತಿಳಿಯುವುದಿಲ್ಲ. ಅವನು ಏನನ್ನೂ  ದೊಡ್ಡದಾಗಿ ಹೇಳಿಕೊಳ್ಳುವುದಿಲ್ಲ.. ಅವನ ಹಾಗೆ ಮಾತಾಡದೆ ಸುಮ್ಮನಿರುವುದಾದರೆ ನಾನು ಎದೆಯೊಡೆದು ಸತ್ತೇ ಹೋದೇನು. ಅಷ್ಟು ದೊಡ್ಡ ಮನೆಯೊಳಗೆ ಗಡಿಯಾರದ ಟಿಕ್ ಟಿಕ್ ನಷ್ಟೇ ನೀರಸವಾಗಿ ಬದುಕು ಚಲಿಸುತ್ತಲೇ ಇತ್ತು… ಅಪರೂಪಕ್ಕೊಮ್ಮೆ ಒಂದು ಮಾತಾಡುವ ಸುಬ್ರಮಣಿ, ದಿನದ ಅಷ್ಟೂ ಹೊತ್ತೂ ಹಳೆಯ ಹಾಡುಗಳಿಗೆ ಜೋತು ಬೀಳುವ ನಾನು. “ನಮ್ಮ ಮನೆಯೊಳಗೆ ಜೀವ ತುಂಬುವುದೇ ಹಾಡುಗಳೂ.” ಮನಸಿನ ಮಾತು ದನಿ ಪಡೆದು ಹೊರಬಂದಿತ್ತು. “ಎಲ್ಲದಕ್ಕೂ ಅನುಭವಿಸುವ ಮನಸಿರಬೇಕು ಮೇಡಂ, ನೋಡಿ ಆ ಸರ್ದಾರ್ಜಿ ಹಾಡಿನ ವಾಲ್ಯುಮ್ ಕಡಿಮೆ ಮಾಡೂಂತ ಹೇಳ್ತಿದ್ದಾನೆ” ” ನಿಜ.. ಅವರಿಗೆ ಬರ್ತ್ ಸಿಕ್ಕಿದೆಯಲ್ಲ ಮಲಗುವ ಯೋಚನೆ. ಇರಲಿ ಕಡಿಮೆ ಮಾಡಿ.” “ಸರಿ ಮಾಡ್ತೀನಿ ಬಿಡಿ” ಅವನು ವಾಲ್ಯೂಮ್ ಕಡಿಮೆ ಮಾಡಿ ನನ್ನತ್ತ ನೋಡಿದ.

ನನಗೆ ಮಾತು ಮುಂದುವರಿಸುವ ತವಕ..”ಇಬ್ಬರಿಗೂ ಸರಿಯೆನಿಸುವ ವಿಚಾರ ಮೂರನೆಯವನೊಬ್ಬನಿಗೆ ಸರಿಯೆನಿಸದೇ ಇರಬಹುದು, ಅಥವಾ ಇಡೀ ಜಗತ್ತೇ ಒಪ್ಪಿಕೊಂಡಂತೆ ಕಾಣುವ ವಿಚಾರವನ್ನೂ ವಿರೋಧಿಸಲು ಯಾರಾದರೂ ಇದ್ದೇ ಇರುತ್ತಾರೆ ಅಲ್ಲವೇ?”

“ನಿಜವೇ, ಇಲ್ಲಿ ವಿಚಾರ ಸರಿಯೋ ತಪ್ಪೋ ಅನ್ನುವುದಕ್ಕಿಂತ ಯಾರು ಹೇಗೆ ಭಾವಿಸುತ್ತಾರೆಂಬುವುದೇ ಮುಖ್ಯವಾಗುತ್ತದೇನೋ.., ಅವರಿವರಿಗೆ ಕಂಡಂತೆ” ಅವನು ಉತ್ತರಿಸಿದ.

“ಆದರೆ ಅದೆಲ್ಲದರಾಚೆಗೆ ಸತ್ಯವೆಂಬುವುದೊಂದು ಇಲ್ಲವೇ ಹಾಗಾದರೇ?” ನಾನು ಕೇಳಿದೆ.

“ಈ ಸತ್ಯ ಕೂಡ ಸೋಜಿಗವಾದ್ದೇ,ಅದು ಒಂದೇ ಸಮಯದಲ್ಲಿ ಇಬ್ಬರ ಕಣ್ಣಿಗೆ ಬೇರೆಬೇರೆಯಾಗಿ ಕಾಣಬಹುದು..,ಈಗ ನೋಡಿ ನಾವಿಲ್ಲಿ ಕೂತಿರುವುದು ಸಧ್ಯದ ಸತ್ಯ ಅಂತಾದರೆ ಅದು ಎದುರಿಗೆ ಕೂತವರ ಕಣ್ಣಿಗೆ ಬೇರೆ ಬೇರೆ ರೀತಿಯಾಗಿ ಕಾಣಿಸುತ್ತಿದೆ ಅನಿಸುವುದಿಲ್ಲವೇ? ಅವರವರ ಭಾವದಂತೆ ?ಮ್ ?”

 “ಅಂದರೇನು? ಬೇರೆ ದಾರಿಯಿಲ್ಲ ಅದಕ್ಕೆ ಕೂತಿದೀವಿ ಅಷ್ಟೇ, ಅಷ್ಟು ಬಿಟ್ಟರೆ ಇಲ್ಲಿ ಬೇರೇನಿದೆ ಕಾಣಲು?”

“ಏನೂ ಇಲ್ಲವೇ? ಕೆಲವೊಮ್ಮೆ ವಾಸ್ತವ ಸತ್ಯ ಹೊರಗೆ ಪ್ರಕಟಗೊಳ್ಳುವುದೇ ಇಲ್ಲ, ಅದರ ಬದಲು ಅದರ ಹಾಗೇ ಕಾಣುವ ಮತ್ತೊಂದೇನೋ ಅಲ್ಲಿ ಗೋಚರಿಸುತ್ತಿರುತ್ತದೆ” ಅವನು ಸಣ್ಣಗೆ ನಗುತ್ತ ಹೇಳಿದ.

“ಆದರೆ ಎಲ್ಲ ಭ್ರಮೆಗಳಾಚೆಗೂ .., ಸತ್ಯ ತನ್ನ ಸರದಿ ಬರುವವರೆಗೆ ಸುಮ್ಮನೇ ನಿಂತಿರುತ್ತದೆ” ಹೀಗನ್ನುತ್ತ ನನ್ನ ಮನಸು ಕದಡಿತು. ಈಗ ತನ್ನೊಳಗೆ ಇರುವ ಸತ್ಯವೇನು? ಅದನ್ನು ಮುಟ್ಟಿ ಕಣ್ಣಲ್ಲಿ ಕಣ್ಣಿಟ್ಟು ನೋಡುವಾಗ ಸ್ವತಃ ತನಗೇ ಭಯವಾಗುತ್ತದೆ! ಅದಷ್ಟೇನೆ? ನಾ ಎಷ್ಟೇ ಧೃಢವಾಗಿ ಕೂತಿರುವುದು ನಿಜವೇ ಆದರೂ.. ವಾಸ್ತವ ಸತ್ಯ ಅದಲ್ಲ.

ಅಲ್ಲವೇ? ತಾನು ಈ ಕ್ಷಣ ಕುಳಿತಲ್ಲೇ ಕರಗಿ ನದಿಯಾಗುತ್ತಿಲ್ಲವೇ? ಬಹುಃಶabstract-painting-sex ಇರಬಹುದೇನೋ ಅನಿಸಿದಾಗ ತನ್ನ ಯೋಚನೆಯ ಧಾಟಿಯ ಬಗೆ ತನಗೇ ಕೆಡುಕೆನಿಸಿ ದಿಗಿಲಾಗಿ ತಲೆ ಕೊಡವಿದೆ. ಇದರಲ್ಲಿ ಸತ್ಯ ಯಾವುದು? ಆ ಕ್ಷಣಕ್ಕೆ ದಕ್ಕಿದ ಭಾವವಷ್ಟೇ ಸತ್ಯ ಅನ್ನುವುದಾದರೆ ಸತ್ಯವೂ ಕಾಲಕ್ಕನುಗುಣವಾಗಿ ರೂಪಂತರ ಆಗಬಲ್ಲುದೇ? ಅದು ಬದಲಾಗುವಂಥದ್ದಾದರೆ ಅದು ಸತ್ಯ ಹೇಗಾದೀತು? ಸತ್ಯ ಅವಿಚ್ಛಿನ್ನವಾದರಷ್ಟೇ ಅಲ್ಲವೇ ಅದು ಸತ್ಯವೆ ನಿಸಿಕೊಳ್ಳುವುದು? ಹುಟ್ಟು ಮತ್ತು ಸಾವಿನ ಹೊರತಾಗಿ ಮತ್ತೊಂದು ಅವಿಚ್ಛಿನ್ನ ಸತ್ಯ ಇಡೀ ಜಗತ್ತು ಆಕಾಶ ಪಾತಾಳದಲ್ಲೂ ಇಲ್ಲವೇನೋ ಅನಿಸಿ ಸತ್ಯದ ಅಸ್ತಿತ್ವದ ಬಗೆಗಿನ ಗೊಂದಲ ಮತ್ತೂ ಗುಮಿಗುಡಿದಂತೆ ಕಂಡಿತು. ನಾನು ನನ್ನೊಳಗೆ ಹೀಗೆ ಗೊಂದಲವನು ಕರಗಿಸಿಕೊಳ್ಳುತ್ತಿರುವ ಘಳಿಗೆಯಲ್ಲಿ ಅವನು ಖುಕ್ಕನೆ ನಕ್ಕಂತೆ ಕೇಳಿಸಿತು. ನೋಡಿದರೆ ಅವನು ಕಣ್ಣುಮುಚ್ಚಿ ಹಾಡಿನೊಳಗೆ ತಲ್ಲೀನನಾಗಿರುವಂತೆ ಕಂಡ. ಹಾಗಾದರೆ ಅವನು ನಗಲಿಲ್ಲವೇ? ನಕ್ಕಂತೇ ಕೇಳಿಸಿತಲ್ಲ.. ಅವನೊಳಗೆ ಅದ್ಯಾವ ಸತ್ಯ ಓಡುತ್ತಿದೆಯೋ.. ಅನಿಸಿ ಈಗ ನನಗೇ ನಗು ಬಂದು ಖಿಲ್ಲನೆ ನಕ್ಕೆ. ಅವನು ಕಣ್ಣುತೆರೆದು ನೋಡಿ, ಇದನ್ನು ನಾನು ಊಹಿಸಿದ್ದೆ ಎಂಬಂತೆ ಮುಗುಳ್ನಕ್ಕ, ಈ ಮುಗುಳ್ನಗು ಅವನು ನನ್ನ ಗುಟ್ಟು ಹಿಡಿದನೇನೋ ಎಂಬ ಗೊಂದಲವೊಂದನ್ನು ನನ್ನೊಳಗೆ ಹೊಸತಾಗಿ ಹುಟ್ಟುಹಾಕಿ ವಿಷಯ ಸತ್ಯ ಶೋಧದಿಂದ ಬೇರೆಡೆಗೆ ಜಿಗಿಯಿತು. ಇನ್ನು ತಡೆಯಲಿಕ್ಕಿಲ್ಲ ಅನಿಸಿ.. “ನಾನು ಕಾಲು ಚಾಚಿ ಕೂರಬೇಕು ಅಂದು ಕೊಂಡಿರುವೆ, ಎನೀ ಪ್ರಾಬ್ಲಮ್ ಫಾರ್ ಯು” ಅಂತ ಕೇಳಿದೆ? “ಅದಕ್ಕೇನು ಕೂತ್ಕೊಳ್ಳಿ ಆದರೆ ನೀವು ಸರ್ಯಾಗಿ ಕಂಫರ್ಟೇಬಲ್ ಆಗಿ ಕೂರಬೇಕೆಂದರೆ ಬಹುಃಶ ನಾನೂ ಕಾಲು ಚಾಚಿ ಕೂರಬೇಕಾಗಬಹುದು” ಅಂದ. ನಾನು ಅವನ ಮುಖವನ್ನು ಓದುವ ಯತ್ನ ಮಾಡಿ ಸೋತೆ.. ಬೆಡ್ ಲೈಟಿನ ಮಂದಬೆಳಕಲ್ಲಿ ಅವು ಸರಿಯಾದ ಬಣ್ಣ ಹೊರಗೆ ತೋರದೆ, ಬೇರೆಯದೇ ರೂಪ ಪ್ರಕಟಿಸುತ್ತಿತ್ತು. “ಏನು ನೋಡ್ತಿದೀರಿ? ಇಷ್ಟೊಂದು ಗಹನವಾಗಿ? ಬ್ಲಡೀ ಹಿಡನ್ ಟ್ರೂತ್! ನಾವಾದರೂ ಯಾಕೆ ಅದನ್ನು ಕೆಣಕಲು ಹೋಗಬೇಕು,ಅದಿರುವ ಪಾಡಿಗೆ ಇರುತ್ತದೆ, ಈ ಜಗತ್ತಿನ ಅತ್ಯಂತ ಅಪಾಯಕಾರಿ ಶೋಧವೆಂದರೆ ಸತ್ಯ ಶೋಧ! ಅದನ್ನು ಹುಡುಕಹೊರಟವನು ಅದೆಷ್ಟು ನುಣುಪಿನ ನುಣುಪನ್ನು ತಲುಪಿಬಂದರೂ ಎಲ್ಲೋ ಏನೋ ಅ ಪೂರ್ಣವಾಗೇ ಉಳಿದಿರುತ್ತದೆ, ಅದು ಇಂದಿಲ್ಲದಿದ್ದರೂ ನಾಳೆ ಗೋಚರಿಸುತ್ತದೆ ಹಾಗಾಗಿ ನಾವು ಸತ್ಯವನ್ನು ಶೋದಿಸಲೇಬಾರದು. ಆ ಕ್ಷಣವನ್ನಷ್ಟೇ ನಂಬಬೇಕು.” ಅರೆ! ಅವನ ಮಾತಿಂದ ನಾನು ಸೋಜಿಗಗೊಂಡೆ, ಮನಸು ಗಿನಸು ಓದ್ತಾನಾ ಹೇಗೆ? ಹಾಳಾದವನು, ಎಲ್ಲ ಬಿಟ್ಟು ನನ್ನ ಸೀಟಿಗೆ ಅಥವಾ ನಾನು ಅವನ ಸೀಟಿಗೇ ಬರಬೇಕೆಂದರೆ ಇಲ್ಲೇನೋ ಸೋಜಿಗದ ಸತ್ಯವೊಂದು ಹುದುಗಿರಬೇಕು, ಯಾರೋ ಇದನ್ನೆಲ್ಲ ನಮಗರಿವಿಲ್ಲದೆ ನಿರ್ದೇಶಿಸುತ್ತಿದ್ದಾರೆ ಅನ್ನುವ ಭಾವನೆ ಒಂದು ಬಗೆಯ ಭಯವನ್ನೂ, ನಿರ್ಭೀಡೆತೆಯನ್ನೂ ಒಟ್ಟಿಗೇ ನನ್ನೊಳಗೆ ತಂದವು. ಆದದ್ದಾಗಲಿ, ನಾವು ಈ ಕ್ಷಣವನ್ನಷ್ಟೇ ನಂಬಬೇಕು.. ಅನ್ನುವ ಭಾವ ಅತ್ಯಂತ ಅಪ್ಯಾಯಮಾನವೆನಿಸಿ ಒಳಗೆ ನಸೆನಸೆ ಮಾಡುತ್ತಿದ್ದ ಸಣ್ಣ ಭಯ ಕರಗಿತು. ನಾನು ದಿಟ್ಟ ಕಾಲು ಚಾಚಿ ಆರಾಮಮಾಗಿ ಹಿಂದಕ್ಕೆ ಒರಗಿ ಕೂತೆ. ಹಾಗೆ ಕೂರುವಾಗ ಮುದುರಿಕೊಂಡಿದ್ದ ಕೀಲುಗಳೆಲ್ಲ ಸಡಿಲಾಗಿ ತೀರ ವಿಲಾಸವಾಗಿ ಮೈ ಮುರಿಯಬೇಕೆನ್ನುವ ಹಾಯಾದ ಭಾವವೊಂದು ಒಳಗಿಂದ ತೇಲಿ ದೇಹ ಹಗುರಾಯ್ತು. ಅವನೂ ಕಾಲು ಚಾಚಿ ಕೂತ, ಅವನಿಗೂ ಹಾಗೇ ಅನಿಸಿರಬೇಕು ಅವನು ಕೈಮೇಲೆತ್ತಿ ಹಗುರಾಗಿ ಮೈಮುರಿದೇ ತೀರಿದ. ಎದುರು ಬರ್ತಿನ ಮೇಲೆ ನಾಯ್ಡು ಸರ್, ಮತ್ತು ಆ ಸರ್ದಾರ್ಜಿ ಗ್ಯಾಂಗ್ ಮಲಗಿರಬಹುದೇ ಅನುಮಾನ ಕಾಡಿತು. ಮಲಗಿರಬೇಕು, ಇಲ್ಲವಾದರೆ ಇಷ್ಟೊತ್ತಿಗೆ ಹಾಡು ನಿಲ್ಲಿಸಿ ಅಂತ ತಕರಾರ ಹೂಡದೇ ಇರುತ್ತಿರಲಿಲ್ಲ ಅನಿಸಿ ಮತ್ತೂ ಹಾಯೆನಿಸಿತು. ಅವರ್ಯಾರೂ ತಾವು ಹೀಗೆ ಕೂತಿರುವುದನ್ನ ಕಂಡಿಲ್ಲ ಆದರೆ ಖಂಡಿತಾ ಊಹಿಸಿಕೊಂಡಿರುತ್ತಾರೆ ಅನಿಸಿದಾಗ ಖುಷಿಯೆನಿಸಿತು. ಅಷ್ಟೂ ಯೋಚಿಸ್ದೇ ಬಿಡ್ತಾರಾ ಬೋಳೀಮಕ್ಕಳು, ಹಾಗೇ ನೋಡಿದರೆ ಇರೋ ಒಂದೇ ಸಾಧ್ಯತೆ ಇದು, ಕಾಲು ಚಾಚಿ ಕೂತರೇ ನು ಅಷ್ಟರಿಂದ ಅದೇನು ನಡೆದು ಹೋಗುವುದುಂಟು? ಆದರೆ ನಿಜಕ್ಕೂ ಏನೂ ನಡೆಯುತ್ತಿಲ್ಲವೇ? ಅವನ ತೊಡೆಯನ್ನು ನನ್ನ ಕಾಲು ತಲುಪಿದೆ, ಬೆಡ್ಶೀಟ್ನಿಂದ ಕಾಲುಗಳನ್ನ ಮುಚ್ಚಿಕೊಂಡಿದ್ದೇನಾದರೂ ಯಾವುದೋ ಒಂದು ಹಿತವಾದ ಶಾಖ?ಶಾಖದಂಥದ್ದೇ ಏನೋ ಒಂದು ಅವನ ತೊಡೆಗಳಿಂದ ಹಾದು ನನ್ನ ಹೆಬ್ಬರಳಿಗೆ ಇಳಿದು ಕಾಲುಂಗುರದ ಬೆರಳಿಗೆ ಹಾದು, ಅಂಗಾಲಿಡೀ ತುಂಬಿ, ಮೀನಖಂಡದ ಮೇಲೆ ಹತ್ತಿ, ತೊಡೆಯನೆಲ್ಲ ತುಂಬಿ, ಮುಂಬರಿದು ಮತ್ತೆಲ್ಲೋ ಜಮೆಯಾಗಿ, ಮತ್ತೂ ಹಾಗೆ ಮೇಲು ಮೇಲಕ್ಕೆ ತಲುಪಿ ಹಂತ ಹಂತವಾಗಿ ಬಿಡುಗಡೆಯಾಗುತ್ತಿದೆ ಅನಿಸಿತು. ಚಿಕ್ಕಂದಿ ನಲ್ಲಿ ಗೆಳತಿಯೊಬ್ಬಳು ಹೇಳಿದ ಕಥೆಯೊಂದು ಆ ಸಮಯದಲ್ಲಿ ನೆನಪಾಗಿ ತಾನಾದರೂ ಅದಕ್ಕಿಂತ ಯಾವ ಬಗೆಯಲ್ಲೂ ಬೇರೆಯಿಲ್ಲವೇನೋ ಅನಿಸಿ ಈ  ಹೋಲಿಕೆಯೇ ವಿಭಿನ್ನವೆನಿಸಿ ಮೋಜೆನಿಸಿತು. ಅದೊಮ್ಮೆ ಒಬ್ಬ ಬೆಳಬೆಳಗೆದ್ದು ಹೊಲಕ್ಕೆ ಉಳಲೆಂದು ಹೋದಾಗ, ಅಲ್ಲೊಬ್ಬಳು ಅತಿ ಲಾವಣ್ಯವತಿ ಸುಂದರಿಯನ್ನ ಕಾಣುತ್ತಾನೆ. ಹದವಾದ ಮಳೆ, ಮಂಜು ಎಲ್ಲ ಕರಗಿದ ಆ ನಸುಮುಂಜಾನೆ ಹೊತ್ತಿನಲ್ಲಿ ಮಂಜಿನದೇ ಬಣ್ಣದ ಬಿಳೀ ಸೀರೆಯುಟ್ಟು ಕೂದಲು ಇಳಿಬಿಟ್ಟ ಕೂದಲ ಕಡು ಮೋಹಕ ಚೆಲುವೆ. ಅವಳನ್ನು ಕಂಡೊಡನೇ ಇವನು ಕರುಣೆಯಲಿ, ಕಾತರದಲಿ ಉಕ್ಕಿ, ಅವಳು ಯಾರು ಏನು, ಕುಲ ಗೋತ್ರ ಕೇಳಲಾಗಿ, ಅವಳು ಕಣ್ಣಂಚಿನಲ್ಲಿ ಮಂಜಿನಂತ ಕಣ್ಣೀರಿಳಿಸಿ, ತಾನು ಕೇರಳದವಳೆಂದೂ ಅನಾಥೆಯೆಂದೂ, ಆಶ್ರಯ ಬೇಕೆಂದೂ ಕೇಳುತ್ತಾಳೆ ಅದಕ್ಕವನು ಒಂದಿಷ್ಟೂ ತಡವರಿಸದೇ ಆ ಮಂಜಿನಂಥ ಸುಂದರಿಯ ತಲೆಗೆ ತನ್ನ ಗೊರಬು ಹಾಕಿ ಅವಳನ್ನು ಮನೆಗೆ ಕರೆತರುತ್ತಾನೆ. ಮ ನೆಯಲ್ಲಿ ಅವನೊಬ್ಬನೇ.. ಮದುವೆ ಬೇರೆ ಆಗಿಲ್ಲ, ಇಂಥ ಸುಂದರಿಯನ್ನು ಮದುವೆಯಾಗುವುದಕ್ಕಿಂತ ಬೇರೆ ಭಾಗ್ಯವುಂಟೇ ಎಂದವನು ಒಳಗೊಳಗೇ ಖುಷಿ ಪಡುತ್ತಾನೆ. ‘ಬೆಳಬೆಳಗೆ ನಿಮ್ಮ ಕೆಲಸ ಕೆಡಿಸಿದ ಹಾಗಾಯ್ತ, ಹೋಗಿ ಅದೇನು ಹೊಲದ ಕೆಲಸ ಮುಗಿಸಿ ಬನ್ನಿ ನಾನು ರೊಟ್ಟಿ ಮಾಡಿಟ್ಟು ನಿಮಗೆ ಕಾಯುತ್ತೇನೆ’ ಎಂದು  ಆ ಮಂಜಿನ ಸುಂದರಿ ಅವನನ್ನು ಹೊಲಕ್ಕೆ ಕಳಿಸಿ ಕದ ಮುಚ್ಚಿಕೊಳ್ಳುತ್ತಾಳೆ. ಸರಿ ಇವನು ಹೊಲದ ಕೆಲಸ ಮುಗಿಸಿ ಸಮಾ ಹಸಿವಿನಲಿ ಮನೆಗೆ ಬಂದು ಇವಳನ್ನ ಕರೀತಾನೇ ಕರೀತಾನೇ, ಆದರೆ ಅವಳು ಹೊರಗೇ ಬರಲ್ಲ! ಸರಿ ಅಂತ ತಾನೇ ಒಳಹೋಗಿ ನೋಡಿದರೆ ಅವಳು ಅಡುಗೆ ಮನೇಲಿ ರೊಟ್ಟಿ ಸುಡ್ತಾ ಇರ್ತಾಳೆ, ಒಲೆಗೆ ಸೌದೆ ಹಾಕಿದಾಳಾ ಅಂದ್ರೆ ಇಲ್ಲ! ತನ್ನ ಕಾಲುಗಳನ್ನೇ ಒಟ್ಟಿಕೊಂಡು ಬೆಂಕಿ ಉರಿಸ್ತಾ ಇದಾಳೆ! ಅವನಿಗೆ ಆಗ ಎಲ್ಲ ಖಾತ್ರಿಯಾಗುತ್ತದೆ, ಇದು ಹೆಣ್ಣಲ್ಲ ಮೋಹಿನಿ! ಅವನು ಸತ್ನೋ ಬಿದ್ನೋ ಅಲ್ಲಿಂದ ಪರಾರಿಯಾಗ್ತಾನೆ. ಇದು ಕಥೆ. ನಾನು ಕಥೆ ಮುಗಿಸಿ ಪಕ ಪಕ ನಕ್ಕೆ. ಅವನು ನಗಲಿಲ್ಲ, ಬದಲಿಗೆ “ಸಧ್ಯ ನಿಮಗೆ ನಾನು ಭಸ್ಮಾಸುರನ ಥರ ಕಾಣಿಸ್ತಿಲ್ಲ ತಾನೇ ?” ಅಂತ ಕೇಳಿಬಿಟ್ಟ. ನಾನು ಗಾಬರಿಯಾದೆ, ಇದು ಕಾಕತಾಳೀಯವಷ್ಟೇ ಆಗಿರಲೂ ಬಹುದು, ಆದರೆ ಅವನ ಪ್ರಶ್ನೆ ಅತ್ಯಂತ ನೇರವಾಗಿದೆ, ಇದು ಮೋಹಿನಿಯ ಹೆಸರು ಕೇಳುತ್ತ ಹುಟ್ಟಿಕೊಂಡ ಸಹಜ ಪ್ರಶ್ನೆಯೋ ಅಥವಾ, ಅವನ ತೊಡೆಯಂಚಿಗೆ ತಗುಲಿಕೊಂಡು ತಾನು ಥೇಟ್ ಅದೇ ಮೋಹಿನಿಯ ಹಾಗೆ ಉರಿಯುತ್ತಿದ್ದೇನೆಂಬ ಸತ್ಯದ ಜಾಡು ಹಿಡಿದೇ ಹೀಗೆ ಕೇಳುತ್ತಿರುವನೇ? ಹಾಗೆ ನೋಡಿದರೆ ಅವನೇ ವಾಸಿ ಅಟ್ಲೀಸ್ಟ್ ಅವನಿಗೊಂದು ಪ್ರಾಂಜಲ ಮನಸಿದೆ, ನಾನೇ ಇಲ್ಲಿ ಅನಾವಶ್ಯಕವಾಗಿ ಮೋಹಿನಿಯ ರಂಗಪ್ರವೇಶ ಮಾಡಿಸಿ ಅಂತರಾಳದ ಗುಟ್ಟೊಂದನ್ನು ಬೇರೆ ಬಣ್ಣದಲ್ಲಿ ಕಟ್ಟಿಕೊಡಲು ನೋಡಿದೆನೇ ನೋ! ಇಲ್ಲವಾದರೆ ಎಲ್ಲಬಿಟ್ಟು ಈ ಹೊತ್ತಲ್ಲಿ ಈ ಭಾಗೇಶನೆಂಬ ನಾಮಮಾತ್ರ ಪರಿಚಿತನೆದುರು ಈ ಮೋಹಿನೀ ಕಥಾವೃತ್ತಾಂತ ಆಡುವ ಪ್ರಮೇಯವಾದರೂ ಏನಿತ್ತು. ಅವನು ಸರಿಯಾದ ಜಾಡೇ ಹಿಡಿದಿದ್ದಾನೆ, ನಾನು ಉತ್ತರಿಸದೆ ಮತ್ತೆ ನಕ್ಕೆ. ಅಂದರೂ ಆ ಇಕ್ಕಟ್ಟಿನ ಸಮಯದಲ್ಲೂ ತುಂಬ ಸಹಜವಾಗೆಂಬಂತೆ ಬಂದೊದಗಿ ಉಪಕರಿಸಿದ ನಗು ಎಂದಿಗಿಂತಲೂ ಅಪ್ಯಾಯಮಾನವೆನಿಸಿತು.

“ಮ್ಯಾಡಂ ಬೆಂಗಳೂರು ಬಂತು ನೋಡಿ, ನಾನು ಇಳಿದು ಕುಡಿಯಲೇನಾದರೂ ತರಲೇ? ತಿನ್ನಲು?” ಅವನು ಏಳುತ್ತ ಕೇಳಿದ. ಅವನು ಹಾಗೆ ಎದ್ದಾಗ ನನ್ನೊಳಗಿನ ಕುದಿತವೂ ಒಂದು ನಿಲುಗಡೆಗೆ ಬಂತು. “ಕಾಫಿ ಆಗಬಹುದು.ಇಲ್ಲವಾದರೆ ಇನ್ನು ಸ್ವಲ್ಪ ಹೊತ್ತಿಗೆ ನಿದ್ರೆ ಬಂದು ಕಂಗೆಡಿಸಬಹುದು, ಅದಕ್ಕಾದರೂ ಒಂದು ಕಾಫಿ ಆಗಲೇ ಬೇಕು, ಜೊತೆಗೆ ಈ ಚಳಿ ಬೇರೆ.” ನಾನು ಈಗ ನಿಜಕ್ಕೂ ನಡುಗಿದೆ. ಮೈಯಲ್ಲಿ ಹೊತ್ತಿಕೊಂಡಿದ್ದ ಬೆಂಕಿ ಆರಿದ್ದಕ್ಕೋ ಏನೋ..! ಅವನೂ ಕೈಯುಜ್ಜುತ್ತ ಅದನ್ನೇ ಅನುಮೋದಿಸಿದ, “ಹೌದು ಚಳಿಯಾಗುತ್ತಿದೆ.” ಚಳಿಯಾಗುತ್ತಿದೆ? ಅಂದರೆ ಅವನೂ ಉರಿಯುತ್ತಿದ್ದನೆ? ಅವನ ಕಾಲುಗಳು ತೀರ ನನ್ನ ಸೊಂಟವನ್ನೇ ತಲುಪುವಷ್ಟು ಹತ್ತಿರವಿದ್ದವು! ನಾನು ತಲೆಕೊಡವಿ ಕರ್ಟನ್ ಸರಿಸಿ ಅವನು ಹೋದ ದಿಕ್ಕಿಗೆ ನೋಡಿದೆ. ನಾಯ್ಡು ಸರ್ ಎದ್ದು ಕೂತು ಲೈಟ್ ಹಾಕಿದ್ದರು, ” ಏನಮ್ಮ, ಆರ್ ಯು ಒಕೆ?” ಅವರು ಕಕ್ಕುಲತಿಯ ಗೆರೆಗಳನ್ನು ಮುಖದಲ್ಲಿ ಮೂಡಿಸುತ್ತ ಮೃದುವಾಗಿ ಕೇಳಿದರು. ಆದರೆ ಆ ಗೆರೆಗಳು ಪೊಳ್ಳೆಂದು ನನಗೆ  ಖಚಿತವಾಗಿ ಅನಿಸಿತು.” “ಯಸ್ ಅಂಕಲ್, ಹುಡುಗ ಒಳ್ಳೆಯವನೆನಿಸಿದ, ನಾವೀಗ ದೋಸ್ತರಾಗಿದೇವೆ” ಅಂದೆ. ಇದನ್ನು ಧೃಡವಾಗಿ ಹೇಳುವ ಭರದಲ್ಲಿ ತುಸು ನಿಷ್ಠುರವಾಗೇ ಹೇಳಿಬಿಟ್ಟೆನೇನೋ ಮನಸು ಮಿಡುಕಿತು. ಹಿಂದೆಯೇ ಯಾರಿಗೆ ಗೊತ್ತು, ಅಂಕಲ್ ಮುಖದಲ್ಲಿ ಕಂಡ ಅಕ್ಕರೆಯ ಹೊಳಹು ನಿಜವಿದ್ದಿರಲೂ ಬಹುದು ಅನಿಸಿ ತುಸು ಮೆತ್ತಗಾಗಿ.”ಇರೋದರಲ್ಲೇ ,ದೋಸ್ತಿ ಮಾಡಿಕೊಳ್ಳೋದೇ ಅತ್ಯಂತ ಬೆಸ್ಟ್ ಆಯ್ಕೆ ಅನಿಸಿತು ಅಂಕಲ್, ಸುಮ್ಮನೆ ಇಲ್ಲದ ಗೊಂದಲಗಳಿಗೆ ತಲೆಕೊಡುವುದಕ್ಕಿಂತ ಸೇಫಾದ ಒಂದು ದೋಸ್ತಿ ಮಾಡೋದು ಒಳ್ಳೇದು ಅಲ್ವಾ?” ಅಂದೆ. ಹೀಗನ್ನುತ್ತ ನನ್ನ ನಾ ಅವರೆದುರು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಅವರಿಗೂ ಸೇರಿದಂತೆ ನನಗೂ ನಿಚ್ಚಳವಾಗಿತ್ತು. ಇದು ಅವರಿಗೆ ಬೇಕಿತ್ತೋ ಇಲ್ಲವೋ ಗೊತ್ತಿಲ್ಲ ಅಸಲು ನ ನಗಾದರೂ ಬೇಕಿತ್ತೇ? ಹೀಗೆ ಅವರಿಗೆ ಹೇಳುವ ಮೂಲಕ ನಾನು ಏನು ನಿರೂಪಿಸುತ್ತಿದ್ದೇನೆ? ನೀವಂದುಕೊಂಡ ಹಾಗೆ ನಾನು ಅವನ ಸ್ಪರ್ಶಕೆ ಕರಗಲಿಲ್ಲ, ಉರಿಯಲಿಲ್ಲ ..ಅತ್ಯಂತ ಸಹಜವಾಗಿ ,ಸರಳವಾಗಿ ಯಾವೊಂದು ಕಲಕಾಟವೂ ಇಲ್ಲದೆ, ನಿದ್ರೆಗೆ ಬಿದ್ದ ನೀರಿನ ಕೊಳದಹಾಗೆ ಇದೇನೆ ಅಂತಲಾ? ನನ್ನನ್ನು ಇವರೆಲ್ಲ ಸುಳ್ಳೆ ನಂಬಲಿ ಎಂಬ ಆಸೆಯಾದರೂ ಯಾಕೆ? ಯೋಚನೆ ಹರಿಯುತ್ತ ಹೋಯಿತು. ” ವೆರಿ ಗುಡ್ ಯಂಗ್ ಲೇಡಿ,” ಈಗ ಮಾತಾಡಿದ್ದು ನಾಯುಡು ಸರ್ ಪಕ್ಕದ ಸೀಟಿನ ಹಿಂದೀ ತಾತ. ನಾನು ನಕ್ಕೆ. ಅದಕ್ಕೆ ಜೀವವಿತ್ತಾ? ಆದರೂ ಈ ದೋಸ್ತನೆಂಬ ರಿಲೇಶನ್ಶಿಪ್ಪಿನ ಎಳೆಯನ್ನು ಎಷ್ಟುದ್ದಕ್ಕೂ ವಿಸ್ತರಿಸಬಹುದು ಬಿಡು, ನಾ ಸುಳ್ಳಾಡಿಲ್ಲ  ಅಂದುಕೊಂಡು ನನ್ನೊಳಗೇ ಸಮಾಧಾನ ಪಟ್ಟುಕೊಳ್ಳುತ್ತ ಇನ್ನಷ್ಟು ಚಂದ ನಗುವ ಯತ್ನ ಮಾಡಿದೆ, ನಮ್ಮ ಮೇಲಿನ ಬರ್ತಿನಿಂದ ತಮಿಳು ಹುಡುಗ ಕೆಳಗೆ ಇಣುಕಿ ನನ್ನೆ ನೋಡುತ್ತ ನನ್ನ ಕಂಗಳನ್ನು ಸೆರೆಹಿಡಿದು ನಕ್ಕ,ಅದರಲ್ಲಿ ಒಂದು ಆಶೆಯೂ ಹತಾಶೆಯೂ ಅಡಗಿರುವ ಸಾಧ್ಯತೆ ನನಗೆ ಕಂಡಿತು. ಅದು ನಾನೇ ಆಗಬೇಕೆಂದೇನೂ ಅಲ್ಲ, ಆದರೂ ಅಪರಿಚಿತಳೊಬ್ಬಳೊಡನೆ ಸೀಟುಹಂಚಿಕೊಳ್ಳುತ್ತ ಹೊಸ ದೋಸ್ತಿ ಮಾಡಿಕೊಳ್ಳುವುದು ಅವನಿಗೂ ರೊಮ್ಯಾಂಟಿಕ್ ಅನಿಸಿರಬೇಕೇನೋ, ನಾನೇನು ಅಂಥ ಮಾಹಾ ಸುಂದರಿಯಲ್ಲ ಆದರೂ ಈ ಕತ್ತಲೆಗೆ ಬೆಳಕಿನಲ್ಲಿ ಕೂಡ ಕಾಣದ ಕೆಲವು ಸತ್ಯವನ್ನು ಕಾಣಿಸುವ ಶಕ್ತಿಯಿರುತ್ತದೆ ಇದನ್ನು ನಾವು ಒಪ್ಪಬೇಕು.. ಆದರೆ ಇದೆಲ್ಲ ಸುಬ್ರಮಣಿಗೇಕೆ ಹೊಳೆಯುವುದಿಲ್ಲ? ಅವನು ನನ್ನ ಎಷ್ಟೊಂದು ಮುಚ್ಚಟೆ ಮಾಡುತ್ತಾನೆ, ಆದರೆ ಅದೇಕೆ ಅಷ್ಟೊಂದು ರೋಮಾಂಚಕ ಅನಿಸುವುದಿಲ್ಲ? ಅಸಲು ಪ್ರೀತಿಯೆಂದರೆ ಹೇಗಿರುತ್ತದೆ, ಎಲ್ಲಿರುತ್ತದೆ? ಯಾರಿಗೆ ಹೇಗೆ ಪ್ರೀತಿಸಿದರೆ ಇಷ್ಟವಾಗುತ್ತದೆ? ಅಥವಾ ಈ ಪ್ರೀತಿಯೆಂಬ ಪ್ರೀತಿ ಕೂಡಾ ಹೋಗ್ತಾ ಹೋಗ್ತಾ ಯಾವ ನವಿರತೆಯನ್ನೂ ಅರಳಿಸದೆ ಸುಮ್ಮನೆ ಅಭ್ಯಾಸವಾಗಿಬಿಡುತ್ತದೆಯೇ? ಈ ಪ್ರೀತಿ ಕೂಡ ಸತ್ಯದ ಹಾಗೇ ಬಗೆದಷ್ಟೂ ವಿವಿಧ ಆಯಾಮಗಳನ್ನ ಕೊಡುತ್ತ, ಹಿಡಿದಷ್ಟೂ ನುಣುಚಿಕೊಳ್ಳುವ ಹಾವಸೆಕಲ್ಲಿನಂತೆ ತೋರಿತು.

“ಮೇಡಂ ತಗೊಳ್ಳಿ ಕಾಫೀ,” ಅವನು ಹಾಗೆ ಕಾಫೀ ತಂದಾಗ ಅಕ್ಕರೆಯುಳ್ಳವನೇ ಅನಿಸಿ ಅವನ ಮೇಲೆ ನನಗೂ ಅಕ್ಕರೆ ಉಕ್ಕಿತು. ಆ ಖುಷಿಗೆ ಕಾಫಿ ಮತ್ತಷ್ಟು ಸೊಗಸೆನಿಸಿತು.

” ಏನು ವಿಶೇಷ ಮೈಸೂರಿಗೆ ಬಂದದ್ದು ?” ನಡುವಿನ ಮೌನ ಸರಿಸಲೆಂಬಂತೆ ಅವನು ಹಠಾತ್ತನೆ ಕೇಳಿದ.

” ಇಲ್ಲಿ ನನ್ನ ತಂಗಿ ಇರುತ್ತಾಳೆ, ಹೊಸತಾಗಿ ಮದುವೆಯಾಗಿದೆ, ಅಷ್ಟರಲ್ಲೇ ಗಂಡ ಹೆಂಡಿರ ನಡುವೆ ಏನೋ ಸಮಸ್ಯೆ”

“ಏನಂತಾರೆ ಇಬ್ಬರೂ?”ಅವನು ಮತ್ತೆ ಕರ್ಟನ್ ಎಳೆದು ಲೈಟ್ ನಿಲ್ಲಿಸಿದ. ಎಂಜಿನ್ ಬದಲಿಸಿದ್ದು ಮುಗಿದಿರಬೇಕು, ರೈಲು ಸಣ್ಣಗೊಮ್ಮೆ ಸೊಂಟ ಕುಲುಕಿ ವೇಗ ಪಡೆದುಕೊಂಡು ಓಡತೊಡಗಿತು. “ನಮ್ಮ ಹುಡುಗಿದೇ ಸಮಸ್ಯೆ, ಏನೋ ಹೊಂದಾಣಿಕೆ ಆಗ್ತಿಲ್ಲ, ಇದನ್ನ ಬರಾಖಾಸ್ತ್ ಮಾಡುವಾಂತಾಳೆ.”

“ಮದುವೆಯಾದ ಒಡನೇ ಹೀಗಂತಾಳೆ ಅಂದರೆ ಅವಳೇನೋ ಹೊಸ ಸತ್ಯ ಕಂಡು ಹಿಡಿದಿರಬೇಕು.” ಹಾಗನ್ನುತ್ತ ಅವನು ತುಂಟತನದಿಂದ ನಗುತ್ತಿದ್ದಾನೆ ಅನಿಸಿತು.

“ತಮಾಶೆಯ ಸಮಯವೇ ಇದು?” ನಾನು ರೇಗಿದೆ.

“ಹಾಗಲ್ಲರಿ, ಹೊಳೆದಿದ್ದೆಲ್ಲ ಸತ್ಯವೇ ಆಗಿರಬೇಕಿಲ್ಲ, ಎಲ್ಲ ಕಾಲಾಂತರದಲ್ಲಿ ಬದಲಾಗುತ್ತೆ, ಯಾವುದಕ್ಕೂ ಒಂಚೂರು ಸಮಯ ಕೊಡು ಅಂತ ಹೇಳಿ”

“ಹಾಗಂದರೆ ಎಲ್ಲಿ ಕೇಳ್ತಾಳೆ! ಎಷ್ಟು ಖರ್ಚು ಮಾಡಿ, ಊರೆಲ್ಲ ಕರೆದು  ನಡೆಸಿದ ಮದುವೆ ಗೊತ್ತೆ? ಇದನ್ನೀಗ ಮುರೀಬೇಕೆಂದರೆ..”

“ಅವಳು ಮದುವೆ ಮುರಿಯದೆ, ಅತ್ತ ಅಲ್ಲೂ ಸಂತೋಷವಾಗಿರದೇ ಇದ್ದರೆ ಮಾಡಿದ ಖರ್ಚೇನಾದರೂ ತಿರುಗಿ ಬಂದೀತೆ? ಖರ್ಚಾಗಿದ್ದು ಮುಗಿದ ವಿಷಯ, ಅದೀಗ ಅವರು ಒಂದಾಗಿ ಬದುಕಿದರೂ ಬೇರೆಯಾದರೂ ಯಾವ ಬದಲಾವಣೆ ಕಾಣದ ವಿಷಯ, ಅದಕ್ಯಾಕೆ ಯೋಚಿಸ್ತೀರಿ? ಮುಖ್ಯ ಅವರ ಸಂತೋಷ.. ಅದನ್ನಷ್ಟೇ ಯೋಚಿಸಬೇಕು.”

ಅವನ ಮಾತುಗಳು ನನಗೆ ಹಿಡಿಸಿದವು. ಆದರೆ ಇದನ್ನು ಕಾರ್ಯಗತಗೊಳಿಸುವಾಗಲೂ ಇಷ್ಟೇ ಖುಷಿಯಾಗಬಹುದು ಅನಿಸಲಿಲ್ಲ. ಮದುವೆಯೆಂಬುದನ್ನು ಅದು ಹೇಗೋ ಮನೆತನದ ಮರ್ಯಾದೆಯ ಜೊತೆಗೆ ಜೋಡಿಸಿಕೊಂಡು ನಾವೆಲ್ಲ ಸಿಲುಕಿ ತಪಿಸುತ್ತಿದ್ದೇವೋ ಅ ನಿಸಿತು.

“ನಿಮ್ಮ ಮದುವೆ ಆಗಿದೆಯೇ?” ನಾನು ವಿಷಯ ಬದಲಿಸಿದೆ.

“ಇನ್ನೂ ಇಲ್ಲ, ಇದಿನ್ನೂ ಒಂದು ಬ್ರೇಕಪ್ ಆಗಿದೆ.. ಮೊದಲು ಅದರಿಂದ ಹೊರಗೆ ಬರಬೇಕು, ಆಮೇಲೆ ಮದುವೆ.”

“ಮ್? ಸೋಸ್ಯಾಡ್..”

“ಸ್ಯಾಡ್ ಏನಿಲ್ಲ ಬಿಡಿ ,ಒಳ್ಳೇದೇ ಆಯ್ತು. ಮೂರು ವರ್ಷ ಲಿವ್ ಇನ್ ರಿಲೇಶನ್ಶಿಪ್ ನಲ್ಲಿದ್ವಿ, ಬೆಂಗಳೂರಲ್ಲಿ ಒಟ್ಟಿಗೇ ಕೆಲಸ ಮಾಡುತ್ತಿದ್ವಿ, ಮೊದಲೆಲ್ಲ ಚೆನ್ನಾಗೇ ಇತ್ತು ಅದೇನೋ ಕಡೆಗೆ ಸರಿ ಬರಲಿಲ್ಲ”

“ತೀರ ಸರಿ ಮಾಡಲಿಕ್ಕೇ ಆಗದ ಸಮಸ್ಯೆಯೇ?” ನನ್ನ ಕುತೂಹಲ ಅನವಶ್ಯಕವೋ ಏನೋ ಅಂತೂ ತಡೆಯಲಾರದೆ ಕೇಳಿಬಿಟ್ಟಿದ್ದೆ.

“ಹಾಗೇ ಒಂಥರ. ಮೊದಲು ಒಂದು ವರ್ಷ ಏನೂ ಇರಲಿಲ್ಲ ಆದರೆ ಆಮೇಲೆ ಹೆಚ್ಚೇ ಹತ್ತಿರ ಬಂದ್ವಿ. ಈಗೇನೋ ಅವಳು ಹೇಳ್ತಾಳೆ ಶಿ ಕಾಂಟ್ ಎಂಜಾಯ್ ಸೆಕ್ಸ್ ವಿಥ್ ಮಿ ಅಂತ, ಸಾರಿ ಇಫ್ ಐ ಆಮ್ ಟೂ ಡಿರೆಕ್ಟ್.” ‘ನೀವಿಬ್ಬರೂ ಕೂತು ಮಾತಾಡಬಹುದಿತ್ತು, ತೀರ ಸಾಲ್ವ್ ಮಾಡಲಿಕ್ಕಾಗದ ಸಮಸ್ಯೆಯೇನಲ್ಲ ಇದು, ಯು ಶುಡ್ ಹ್ಯಾವ್ ಗಾನ್ ಫಾರ್ ಅ ಕೌನ್ಸಲಿಂಗ್, ಮೆಡಿಕಲ್ ಫೀಲ್ಡ್ ಭಾಳ ಅಡ್ವಾನ್ಸ್ ಆಗಿರೋ ಹೊತ್ತಲ್ಲಿ…….. ‘ನನ್ನ ಮ ನಸು ಮಾತುಗಳನ್ನ ಮಥಿಸಿ ಒಂದನ್ನೂ ಹೊರಬಿಡದೆ ಕಾಯಿತು. ಇಬ್ಬರಿಗೂ ಬೇಕೆನಿಸದ ಹೊರತು ಅದೆಂಥ ಪ್ರಣಯ….? ಮಿಲನವೆಂಬುದು ಒಂದು ಸಂಭ್ರಮವಾಗಬೇಕು.. ಮನಸುಗಳು ಸೇರದ ಹೊರತು ಸಂಭ್ರಮ ಅಶಕ್ಯ. “ಓ..ಈಸ್ ದಟ್?” ನಾನು ನನ್ನ ದನಿ ಆದಷ್ಟು ನಿರ್ವಿಕಾರವಾಗಿರುವಂತೆ ಗಮನವಿಟ್ಟು ಮಾತಾಡಿದೆ. “ಮ್ ಹೌದು, ಲೈಫ್ ಲಿ ಅಲ್ಟಿಮೇಟಾಗಿ ಬೇಕಾಗಿರೋದು ಸಂತೋಷ, ಏನಿತ್ತೋ ಏನಿಲ್ವೋ ಖುಷಿಯಾಗಿದಿ ವಾ, ಅದು ಸಾಕು.. ಒಂದು ವೇಳೆ ಖುಷಿಯಿಲ್ಲಾಂದರೆ ಅದೇನೇ ಇರಲಿ ಅಲ್ಲಿಂದ ಹೊರಬಂದುಬಿಡಬೇಕು. ” “ಐ ಡೂ ಬಿಲೀವ್ ಇನ್ ದಿಸ್ ಕಾನ್ಸೆಪ್ಟ್” ನಾನು ನಕ್ಕೆ. ನಾನೀಗ ಕಾಲುಗಳನ್ನ ಮಡಿಸಿ ಕುಳಿತಿದ್ದೆ, ಹಾಗೊಂದು ವೇಳೆ ಕಾಲು ಚಾಚಿದರೂ ಪುಳಕವೇಳದ ಒಂದು ತಂಪು ಸ್ನೇಹ ಅಲ್ಲಿ ಎದ್ದಿದೆಯೆಂದು ತೋರಿ, ಅಷ್ಟು ಹೊತ್ತು ಬೆಂದಿದ್ದೇ ಸುಳ್ಳೆನಿಸಿತು. “ಮತ್ತೆ?” ನಾನು ಮೌನ ಮುರಿದೆ. ಬೆಳಕಿನ ಕಿಡಿಗಷ್ಟೇ ಕಾಯುತ್ತಿದ್ದನೇನೋ ಎಂಬಂತೆ ಅವನು ಮಾತಿನ ಮತಾಪು ಹಚ್ಚಿದ. ಮಾತಿನ ಅಲೆಯೊಳಗೆ ಇಂಥದ್ದು ಅನ್ನಲಾಗದಂತೆ ಬಹಳಷ್ಟು ವಿಷಯಗಳು ಬಂದು ಹೋದವು. ಅಸಲು ನಿದ್ರೆಯೆಂಬುದು ಅದೆಲ್ಲಿ ಫೇರಿ ಕಿತ್ತಿತೋ.. ಇದು ಬಹುಃಶ ಬದುಕಿನುದ್ದಕ್ಕೂ ನೆನಪಲ್ಲುಳಿಯಬಹುದಾದ ದಿನವೇ ಅನಿಸಿ ಮುದವೆನಿಸಿತು. ಆದರೂ ಈ ಮನಸು ಯಾರೋ ಅಪರಿಚಿತನೊಂದಿಗೆ ಇಷ್ಟು ಸರಾಗವಾಗಿ ತೆರೆದುಕೊಳ್ಳುತ್ತಿರುವುದಾದರೂ ಏಕೆ…? ಅಸಲು ಯಾರೋ ಒಬ್ಬರು  ಯಾಕಾದರೂ ನಮಗೆ ಇಷ್ಟವಾಗ್ತಾರೆ ..? ಅಕಾರಣವಾಗಿ..? ದಾರಿ ಕ್ರಮಿಸಿದ್ದೇ ತಿಳಿದಿರಲಿಲ್ಲ.. ಬೆಳಗಿನ ಐದು ಘಂಟೆಯಾಗಿತ್ತಾದರೂ ನಿದ್ರೆ ಸುಳಿದಿರಲಿಲ್ಲ.. “ಇನ್ನು ಸ್ವಲ್ಪ ಹೊತ್ತಿಗೆಲ್ಲ ನಾ ಇಳಿಯೋ ಸ್ಟೇಷನ್ನು ಬರುತ್ತೆ, ಪೆರಂಬೂರು, ಅಂದರೂ ಇವತ್ತಿನ ರಾತ್ರಿ ನಿದ್ರೆಯಿಲ್ಲದೆ ಕಳೆದೆ!” ನನ್ನ ದನಿಯಲ್ಲಿ ಒಂದೆಳೆ ವಿಷಾದವೂ, ಒಂದೆಳೆ ಸಂತೋಷವೂ ಹದವಾಗಿ ಬೆರೆತಿತ್ತು.

 “ಓ ಪೆರಂಬೂರು! ನಮ್ಮತ್ತೆ ಒಬ್ಬರು ಅಲ್ಲಿರ್ತಾ ಇದ್ದರು, ಆಗ ಅಲ್ಲಿ ಬಂದಿದ್ದೆ ಆಮೇಲೆ ಇದೇ ನೋಡಿ ಬರ್ತಿರೋದು, ಸರಿ ನಾನೊಂಚೂರು ಕಣ್ಮುಚ್ತೀನಿ, ಇಲ್ಲಾಂದರೆ ಇಂಟರ್ವ್ಯೂವ್ ನಲ್ಲಿ ನನ್ನ ನಿದ್ರೆ ಮುಖಕ್ಕೆ ಮೈನಸ್ ಆಗಬಹುದು” ಅವನು ನಕ್ಕ, ಮೋಹಕವಾಗಿ ಕಾಣ್ತಾನೆ ಅನಿಸಿ ಅನಿವರ್ಚನೀಯ ಮುದ್ದು ಉಕ್ಕಿತು.

“ಸರಿ ಆರಾಮಾಗಿ ಕಾಲು ಚಾಚಿ ಮಲಗಿ ನಾ ಸರಿದು ಕೂರ್ತೇನೆ.” ನಾನು ಸರಿದೆ. ಅವನ ಹರವಾದ ಎದೆ,art-1 ಎದೆಯಮೇಲಿಟ್ಟ ರೋಮಭರಿತ ಒರಟೆನಿಸುವ ಕೈಗಳು, ಅನಾಸಕ್ತಿಯಿಂದ ಹರಡಿಕೊಂಡ ತಲೆಗೂದಲು, ಅಷ್ಟೇ ಅನಾಸಕ್ತಿಯಿಂದ ಹರಡಿಕೊಂಡ ಗಡ್ಡ.., ಬಿಗಿದ ತುಟಿ..ನಸುವೇ ಸುರುಗಿದ ಹುಬ್ಬು.. ಅಷ್ಟಾದರೂ ಮುಖದಲ್ಲಿ ತೇಲುತ್ತಿದ್ದ ನಿರಾಳತೆ.. ಅಥವಾ ನಿರ್ಲಕ್ಷ್ಯತೆಯೂ ಇರಬಹುದು..ಒಟ್ಟು ನಂಗೆ ಇಷ್ಟವಾದ, ಮತ್ತೊಮ್ಮೆ ಸಣ್ಣಗೆ ಆಸೆ ಹುಟ್ಟುವಷ್ಟು ಇಷ್ಟವಾದ. ಸೊಂಟದ ಬುಡಕ್ಕೆ ತಗುಲುತ್ತಿದ್ದ ಅವನ ಕಾಲುಗಳು ಆರಿದ ಕೆಂಡಕೆ ಕಿಡಿ ತಗುಲಿಸತೊಡಗಿದ್ದವು. ಹಾಗೇ ಬಗ್ಗಿ ಅವನ ತುಟಿಯನ್ನು ಮುದ್ದಿಸಿದರೆ ಎಂಬ ವಾಂಛೆಯೊಂದು ಬಲವಾಗಿ ಕರ್ಟನ್ನನ್ನು ಜೋರಾಗಿ ಹಿಡಿದೆಳೆದು.. ತಲೆ ಕೊಡವಿದೆ. ಒಳಗೆ ಇಷ್ಟೊಂದು ಬಲವಾಗಿ ಕಾಡುತ್ತಿರುವ ಈ ಮೋಹ ಮದಿರೆಯ ಹಾಗೆ ಸುಡುತ್ತಿತ್ತು.. ನಶೆಯೇರಿಸುತ್ತಿತ್ತು. ಇನ್ನೇನು ಎರಡು ಸ್ಟೇಷನ್ ದಾಟಿದರೆ ಪೆರಂಬೂರು..ಇವನು ಮರಳಿ ಸಿಗುತ್ತಾನೋ ಇಲ್ಲವೋ, ಸಿಗಬೇಕಂತಲೂ ಏನಿಲ್ಲ, ಸಧ್ಯಕ್ಕೆ ಇಷ್ಟೊಂದು ಬೇಕೆನಿಸುತ್ತಿರುವ ಇವನು ಮತ್ತು ನನ್ನ  ನಡುವಿನ ಕುತೂಹಲಗಳು ಕೂಡ ಒಂದಿನ ಮುಗಿದು..ತಣ್ಣನೆಯ ಸೋ ಕಾಲ್ಡ್ ಅಂಡರ್ಸ್ಟ್ಯಾಂಡಿಂಗ್ ಫೇಸೊಂದು ಓಡಿದರೂ ಓಡಬಹುದು, ಅದೆಲ್ಲ ಸಾಯಲಿ ಈಗ ಈ ಕ್ಷಣ ಬೇಕೆನಿಸುತ್ತಿರುವ ಇವನ ತುಟಿಗಳನ್ನು ಮುದ್ದಿಸದ ಹೊರತು ಬಿಡುಗಡೆಯಿಲ್ಲ ಅನಿಸಿ ಒಳಗೆ ಒತ್ತಡ ಬಲವಾಯ್ತು. ಇದಕ್ಕೆ ಅವನ ಪ್ರತಿಕ್ರಿಯೆ ಏನಿರಬಹುದು….,ಇಂಥದ್ದೊಂದು ತಳಮಳದ ಸಮಯ ಇದುವರೆಗೂ ಬಂದಿರಲಿಲ್ಲ..!

ಇದ್ದಿದ್ದೇ ಒಂದು ಬ್ಯಾಗು, ಅದನ್ನೆಳೆದು ಹೊರಗಿಟ್ಟೆ, ಕರ್ಟನ್ ಸರಿಸಿ ನೋಡಿದರೆ ಪಕ್ಕದ ಬರ್ತಿನವರಿನ್ನೂ ಮಲಗೇ ಇದ್ದರು.. ಅವರು ಸೀದಾ ಸೆಂಟ್ರಲ್ ಗೆ  ಇರಬೇಕು. ನಿರಾಳವಾಗಿ ಮಲಗಿದ್ದರು. ವಿಳ್ಳಿವಾಕ್ಕಂ ಕೂಡ ಬಂತು, ಇನ್ನು ಹತ್ತು ನಿಮಿಷವೂ ಇಲ್ಲ…ನಾನು ಅವನ ಮೇಲೆ ಬಗ್ಗಿದೆ…ಅವನ ತುಟಿಗಳು ಬಿಸಿಯಾಗಿದ್ದು..ನನ್ನ ತುಟಿಯೊಳಗೆ ತುಂಬುವಷ್ಟು ತುಂಬಿಕೊಂಡಿದ್ದವು…ಅವನ ಎದೆಗೆ ಬಿದ್ದವಳಿಗೆ ಆ ಕ್ಷಣ ಭೂಮಿ  ನಿಂತಿದೆ ಅನಿಸಿತು… ಅವನು ತಡೆಯಲಿಲ್ಲ.. ಅವಕ್ಕಾಗಲೂ  ಇಲ್ಲ..ತೋಳುಗಳಿಂದ ಬಳಸಿ ನನ್ನ ಸೋಲಿಸುವಷ್ಟು ತೀವ್ರವಾದ… ಇದು ಬೇಕಿತ್ತೇ ಬೇಡವೇ ಮನಸು ಶಂಕೆಗೆ ಹೊರತಾಗಿ ನಿಂತು ಸಹಕರಿಸಿತು.. ದೇಹ ಹಗುರಾಗಿ ಕಾಲುಗಳು ತಾರಾಡಿದವು. ಅವನ ನಂಬರ್  ಪಡೆಯಬಹುದಿತ್ತು.. ಆದರೆ ಪಡೆಯಲಿಲ್ಲ.. ಮತ್ತೆ ಸಿಗು ಅನ್ನಬಹುದಿತ್ತು ಅದನ್ನೂ ಹೇಳಲಿಲ್ಲ. ಅವನು ನನ್ನ ಲಗೇಜೆತ್ತಿಕೊಂಡು  ಹಿಂದೆಯೇ ಬಂದ. ಕೈಗೆ ಲಗೇಜ್ ಇಟ್ಟು ಮೆಲ್ಲಗೆ ಕೈ ಅದುಮಿದ.. ಅದರಲ್ಲಿ ಏನೆಲ್ಲವೂ ಇತ್ತು.. ಅದೆಲ್ಲ ಸಮ್ಮತ ಎಂಬಂತೆ ನನ್ನ ಕಂಗಳು ಮೃದುವಾಗಿರಬೇಕು. ಪ್ಲ್ಯಾಟ್ಫಾರ್ಮ್ ನಲ್ಲಿ ಸುಬ್ರಮಣಿ ನಿಂತಿದ್ದ.. ಅದೇ ಹಳೆಯ ಕಪ್ಪು ಶಾರ್ಟ್ಸ್,ತಿಳಿಹಳದಿ ಟಿ ಶರ್ಟು ಮತ್ತು ನಿರ್ವಿಕಾರ ಮುಖದೊಡನೆ ಶಾಂತವಾಗಿ ನಿಂತಿದ್ದ. ನಾನು ತಿರುಗಿ ನೋಡಿ ಭಾಗೇಶನಿಗೆ ಕೈಯಾಡಿಸಿದೆ. ನನ್ನ ಕಣ್ಣುಗಳ ಹೊಳಪು,ತುಟಿಯ ಕೆಂ ಪು ಸುಬ್ರಮಣಿಯ ಕಣ್ಣುಗಳಿಗೆ ಬೀಳಲೇ ಇಲ್ಲವೇ? ಹೋಗಲಿ ಕೈಯಾಡಿಸಿದ ಚಂದದಹುಡುಗನೂ? “ನಿದ್ದೆ ಮಾಡಕ್ಕಾಯ್ತಾ?” ಅವನು ಲಗೇಜ್ ಇಸಿದುಕೊಳ್ತಾ ಕೇಳಿದ. “ಇಲ್ಲ ಮನೆಗೆ ಹೋಗಿ ಮಲಗೋದೇ.. ನೀರು ಬಿಸಿಗಿಟ್ಟಿದ್ದೀಯಾ?” “ಎಲ್ಲ ರೆಡಿ ಇದೆ,ನೀನು ನಾಷ್ಟ ಮಾಡಿ ಮಲಗು” ಮೆಟ್ಟಿಲಿಳಿದು ಅವನ ಜೊತೆ ಬೈಕಿನಲ್ಲಿ ಕೂಡುವಾಗ ತಂಗಿ ಫೋನಿಸಿದಳು “ಅಕ್ಕ,ತಲುಪಿದ್ಯಾ?ನಂಗೆ ಇಲ್ಲಿ ತಲೆ ಬಿಸಿ ಮಾರಾಯ್ತಿ”

“ನೋಡು, ತಲೆ ಕೆಡಿಸಿಕೋ ಬೇಡ, ಬದುಕನ್ನ ಬಂದಂತೆ ಬದುಕ್ತಾ ಹೋಗಬೇಕು..ಕಣ್ಣಿಗೆ ಕಂಡಿದ್ದು, ಅನಿಸಿದ್ದೆಲ್ಲ ಅಂತಿಮ ಸತ್ಯವಲ್ಲ.. ಸತ್ಯ ಕೂಡ ಆಗಾಗ ಬದಲಾದ ಬಣ್ಣದಲ್ಲಿ ಕಾಣಸಿಗುತ್ತದೆ.. ಹಾಗಾಗಿ ಸಧ್ಯ ಕಂಡ ಸತ್ಯವನ್ನೇ ನೆಚ್ಚಿಕೊ ಬೇಡ, ನಾಳೆ ಹೊಸ ಸತ್ಯವೊಂದು ಕಾಣಬಹುದು..,ಸಮಯದ ಜೊತೆ ನಡಿ..,ಇವತ್ತು ಕಾಣುತ್ತಿರೋ ಸತ್ಯ ನಾಳೆ ಸುಳ್ಳೆನಿಸಬಹುದು.. ಅವಸರಕೆ ಬೀಳಬೇಡ, ಬದುಕು ಹೊಸ ಹೊಸಸತ್ಯಗಳನ್ನ ಆಗಾಗ ಹೊಳೆಯಿಸುತ್ತೆ…..” ನಾನೇನು ಮಾತಾಡುತ್ತಿದ್ದೆನೋ..ಅವಳಿಗೇನು ಹೊಳೀತೋ..

“ಥೂ ನೀ ಫೋನಿಡು ಮಾರಾಯ್ತಿ..” ಅವಳು ಬಿರುಸಿನಿಂದ ಕಟ್ ಮಾಡಿದಳು. ಖುಕ್ಕನೆ ಒಂದು ನಗು ಕೇಳಿದಂತಾಯ್ತು. ಸುಬ್ರಮಣಿ ನಕ್ಕನೇ…?

ಕೋಮುವಾದ : ಚರಿತ್ರೆಯ ಗಾಯಗಳು, ವರ್ತಮಾನದ ಸ್ವರೂಪ ಮತ್ತು ಭವಿಷ್ಯದ ಸವಾಲು

-ಬಿ.ಶ್ರೀಪಾದ ಭಟ್

ಹಿಂಸೆಯ ಮೂಲಕ ಸಾಧಿಸಿದ ಪ್ರತಿಯೊಂದು ಸುಧಾರಣೆಯು ಖಂಡನೆಗೆ,ತಿರಸ್ಕಾರಕ್ಕೆ ಅರ್ಹವಾಗಿರುತ್ತದೆ.ಏಕೆಂದರೆ ಈ ಸುಧಾರಣೆಯು ದುಷ್ಟಶಕ್ತಿಗಳನ್ನು ನಿಗ್ರಹಿಸುವಂತಹ ಯಾವುದೇ ಕಾರ್ಯಕ್ರಮಗಳನ್ನು ಒಳಗೊಂಡಿರುವುದಿಲ್ಲ ಮತ್ತು ಮನುಷ್ಯರು ಯಥಾಸ್ಥಿತಿಯ ಜೀವನಕ್ರಮಕ್ಕೆ ಶರಣಾಗಿರುತ್ತಾರೆ.

– ಟಾಲ್ ಸ್ಟಾಯ್

ಅಬ್ದುಲ್ ಅಹಮದ್ ಅವರು ಕೋಮುವಾದವು ಎರಡು ವಿಭಿನ್ನ ಧರ್ಮಗಳಿಂದ ಗುಣಾರೋಪಣೆಗೊಳಗೊಂಡ ಸಾಮಾಜಿಕ ಘಟನೆ ಮತ್ತು ಈ ಘಟನೆಗಳು ಗಲಭೆಗಳಿಗೆ, ತಲ್ಲಣಗಳಿಗೆ, ಆತಂಕಗಳಿಗೆ, ಉಗ್ರತೆಗೆ ಕಾರಣವಾಗುತ್ತವೆ ಎಂದು ಹೇಳಿದರೆ, ಫರಾ ನಕ್ವಿ ಅವರು ಕೋಮು ಗಲಭೆಗಳಲ್ಲಿ ನಿಜಾಂಶಗಳು ಗೌಣಗೊಂಡು ಕಟ್ಟುಕಥೆಗಳು ಮೇಲುಗೈ ಸಾಧಿಸುತ್ತವೆ. ವದಂತಿಗಳು ಅನೇಕ ಬಗೆಯ ಹೌದು ಮತ್ತು ಅಲ್ಲಗಳೊಂದಿಗೆ ಪ್ರಾಮುಖ್ಯತೆ ಪಡೆದು ಪ್ರತಿಯೊಂದು ಕೋಮುಗಲಭೆಗಳನ್ನು ಹಿಂದಿನದಿಕ್ಕಿಂಲೂ ವಿಭಿನ್ನವೆಂಬಂತೆಯೂ, ಈ ಸಂದರ್ಭದಲ್ಲಿ ಹಿಂಸಾಚಾರ ಮತ್ತು ಹತ್ಯೆಗಳು ಅನಿವಾರ್ಯವೆಂಬಂತೆಯೂ ಸಮರ್ಥಿಸಲ್ಪಡುತ್ತವೆ ಮತ್ತು ಕಾಲಕ್ರಮೇಣ ತೆರೆಮರೆಗೆ ಸರಿಯಲ್ಪಡುತ್ತವೆ ಎಂದು ಹೇಳುತ್ತಾರೆ.

ಪ್ರಭಾ ದೀಕ್ಷಿತ್ ಅವರು ಕೋಮುವಾದವು ರಾಜಕೀಯ ಪ್ರೇರಿತ ಧರ್ಮತತ್ವವಾಗಿದ್ದು ಇದು ಧರ್ಮ ಮತ್ತು ಸಾಂಸ್ಕೃತಿಕ ವಿಭಿನ್ನತೆಗಳನ್ನು ದುರುಪಯೋಗಪಡಿಸಿಕೊಂಡು ತನ್ನ ರಾಜಕೀಯ ಉದ್ದೇಶಗಳನ್ನು ಸಾಧಿಸುತ್ತದೆ ಎಂದು ಹೇಳುತ್ತಾರೆ. ಅಸ್ಗರ್ ಅಲಿ ಇಂಜಿನಿಯರ್, ಮೊಯಿನ್ ಶಕೀರ್ ಮತ್ತು ಅಬ್ದುಲ್ ಅಹಮದ್ ಅವರು “ಇದು ಮೇಲ್ವರ್ಗಗಳ ಕೈಯಲ್ಲಿರುವ ಒಂದು ಆಯುಧ; ಇದನ್ನು ಬಳಸಿಕೊಂಡು ಜನರ ನಡುವೆ ಒಡಕುಂಟು ಮಾಡುತ್ತ ಆ ಮೂಲಕ ಅಧಿಕಾರವನ್ನು ತಮ್ಮ ಬಳಿ ಕೇಂದ್ರೀಕರಿಸಿಕೊಳ್ಳುತ್ತಾರೆ” ಎಂದು ವಿವರಿಸುತ್ತಾರೆ.

ಫ್ರೊ. ಸತೀಶ್ ದೇಶಪಾಂಡೆ ಅವರು “ಇಂಗ್ಲೀಷ್ ಮಾತನಾಡುವ ಪಶ್ಚಿಮ ರಾಷ್ಟ್ರಗಳು ಬಳಸುವ ಕೋಮುವಾದದ ಅರ್ಥವು ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳಿಗಿಂತ ಸಂಪೂರ್ಣ ವಿಭಿನ್ನವಾಗಿದೆ. ಪಶ್ಚಿಮ ರಾಷ್ಟ್ರಗಳಲ್ಲಿ ಕೋಮುವಾದವನ್ನು ‘ಎಲ್ಲಾ ಸಮುದಾಯಗಳ ನಡುವೆ ಸಮಾನ ಹಂಚಿಕೆ’ ಅಥವಾ ‘ಸಾಮಾನ್ಯ ಮಾಲೀಕತ್ವ’ ಎನ್ನುವ ಅರ್ಥದಲ್ಲಿ ಮಾತನಾಡಿದರೆ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಇದಕ್ಕೆ ತದ್ವಿರುದ್ಧವಾಗಿ ಧರ್ಮದ ಆಧಾರದ ಮೇಲೆ ವಿವಿಧ ಧರ್ಮದ ಸಮುದಾಯಗಳ ನಡುವಿನ ದ್ವೇಷ ಮತ್ತು ಪ್ರತ್ಯೇಕತೆಯೆಂದು ವಿವರಿಸಲಾಗುತ್ತದೆ” ಎಂದು ಹೇಳುತ್ತಾರೆ.

ಇತಿಹಾಸಕಾರ ಬಿಪಿನ್ ಚಂದ್ರ ಅವರು “ಈ ರಾಷ್ಟ್ರೀಯತೆ ಮತ್ತು ಕೋಮುವಾದ ಇವೆರಡೂ ಈ ದೇಶದ ಆರ್ಥಿಕ ಅಭಿವೃದ್ಧಿ, bajrang_dalರಾಜಕೀಯ ಮತ್ತು ಕಾರ್ಯಾಂಗದ ಚಟುವಟಿಕೆಗಳನ್ನೊಳಗೊಂಡ ಸದೃಶ್ಯವಾದ ಆಧುನಿಕ ಕಾರ್ಯವಿಧಾನಗಳು. ರಾಷ್ಟ್ರೀಯವಾದಿಗಳು ಮತ್ತು ಕೋಮುವಾದಿಗಳು ಚರಿತ್ರೆಯನ್ನು ಸದಾ ಉಲ್ಲೇಖಿಸುತ್ತಿರುತ್ತಾರೆ, ಸಂಭೋದಿಸುತ್ತಿರುತ್ತಾರೆ. ಚರಿತ್ರೆಯ ಐಡಿಯಾಜಿಗಳು, ಚಳುವಳಿಗಳು ಮತ್ತು ಇತಿಹಾಸವನ್ನು ವರ್ತಮಾನದೊಂದಿಗೆ ತಳಕು ಹಾಕಲು ಸದಾ ಕಾರ್ಯಪ್ರವೃತ್ತರಾಗಿರುತ್ತಾರೆ. ಆದರೆ ಈ ರಾಷ್ಟ್ರೀಯತೆ ಮತ್ತು ಕೋಮುವಾದಗಳು ಪ್ರಾಚೀನ ಮತ್ತು ಮಧ್ಯಯುಗೀನ ಭಾರತದಲ್ಲಿ ಆಸ್ತಿತ್ವದಲ್ಲಿ ಇರಲಿಲ್ಲ. ಇದನ್ನು ಆ ಕಾಲದ ರಾಷ್ಟ್ರೀಯವಾದಿಗಳಾದ ಸುರೇಂದ್ರನಾಥ ಬ್ಯಾನರ್ಜಿ ಮತ್ತು ಬಾಲಗಂಗಾಧರ ಟಿಲಕ ಅವರು ಸರಿಯಾಗಿಯೇ ಗುರುತಿಸುತ್ತಾರೆ. ಇವರು ಇಂಡಿಯಾ ದೇಶವನ್ನು 19ನೇ ಶತಮಾನದ ಕಡೆಯ ದಶಕ ಮತ್ತು 20ನೇ ಶತಮಾನದ ಆರಂಭದ ದಶಕದಲ್ಲಿ ನಿರ್ಮಿಸಲ್ಪಡುತ್ತಿರುವ ದೇಶವೆಂದು ವ್ಯಾಖ್ಯಾನಿಸುತ್ತಾರೆ. ರಾಷ್ಟ್ರೀಯವಾದದ ದೋಷಪೂರಿತ ಚಿಂತನೆಗಳು, ರಾಷ್ಟ್ರೀಯತೆಯ ಪರಿಕಲ್ಪನೆಯಲ್ಲಿ ಆಧುನಿಕ ಸ್ವರೂಪ ಮತ್ತು ಆಳವಾದ ಅಧ್ಯಯನದ ಕೊರತೆಯಿಂದಾಗಿ ಈ ಕೋಮುವಾದವು ಜನ್ಮ ತಳೆಯುತ್ತದೆ. ಇತಿಹಾಸದ ಪ್ರಕ್ರಿಯೆಯನ್ನು ತಪ್ಪಾಗಿ ಅರ್ಥೈಸಿಕೊಂಡ ಅಸತ್ಯದ, ಠಕ್ಕಿನ ಪ್ರಜ್ಞೆಯಿಂದಾಗಿ ಕಳೆದ 100 ವರ್ಷಗಳಿಂದ ಈ ಕೋಮುವಾದವು ಚಾಲ್ತಿಯಲ್ಲಿದೆ” ಎಂದು ಹೇಳುತ್ತಾರೆ.

ಆರಂಭದ ಟಿಪ್ಪಣಿಗಳು

ಇಂಡಿಯಾ ದೇಶವು ರಕ್ತಪಾತದ ಮೇಲೆ, ಪ್ರಾಣಹಾನಿಯ ಮೇಲೆ ಸ್ವಾತಂತ್ರವನ್ನು ಗಳಿಸಿಕೊಂಡಿದೆ. ಜಗತ್ತಿನ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವ ದೇಶವೆಂದು ಕರೆಯಲ್ಪಡುವ ಇಂಡಿಯಾದ ಮನಸ್ಥಿತಿ ‘ಹಿಂದೂ ದೇಶ’ದ ಫೋಬಿಯಾವನ್ನು ಒಳಗೊಂಡಿದೆ. ಗಾಂಧಿಯ ‘ಅಹಿಂಸೆ’ ತತ್ವವನ್ನು ಗೇಲಿ ಮಾಡುತ್ತಿದ್ದ ಸಂಘ ಪರಿವಾರ ಕಳೆದ ಎಂಬತ್ತು ವರ್ಷಗಳಲ್ಲಿ ಕೋಮು ಗಲಭೆಗಳ ಮೂಲಕ ಹಿಂಸಾಚಾರ, ದ್ವೇಷ, ಹತ್ಯೆಗಳನ್ನು ನಡೆಸಿದೆ ಎನ್ನುವ ಗಂಭೀರವಾದ ಆರೋಪಗಳನ್ನು ಎದುರಿಸುತ್ತಿದೆ ಮತ್ತು ಈ ಅಪಾದನೆಗಳಿಗೆ ಸಾವಿರಾರು ಸಾಕ್ಷಿಗಳಿವೆ. ಘಟನೆಗಳಿವೆ. ನಿರಾಶ್ರಿತರಿದ್ದಾರೆ. ಅವರ ತಲೆಮಾರುಗಳಿವೆ.

ಕೋಮುವಾದವೆಂದರೆ ಅದು ಒಂದು ಐಡೆಂಟಿಟಿ ರಾಜಕೀಯ. ದ್ವೇಷದ, ಹಗೆತನದ ರಾಜಕೀಯ. ಇಲ್ಲಿ ಈ ಐಡೆಂಟಿಟಿಯು ಸ್ಪಷ್ಟವಾಗಿ ಧಾರ್ಮಿಕ ನೆಲೆಯನ್ನು ಅವಲಂಬಿಸುತ್ತದೆ. ಈ ಕೋಮುವಾದವು ‘ನಾವು’ ಮತ್ತು ‘ಅವರು’ ಎಂದು ಎರಡು ಧರ್ಮಗಳ ನಡುವೆ ಸ್ಪಷ್ಟವಾದ ಗೆರೆಯನ್ನು ಎಳೆಯುತ್ತದೆ. ಕೋಮುವಾದ ಶಕ್ತಿಗಳು ಬಲಿಷ್ಠಗೊಂಡಂತೆ ಈ ಗೆರೆಯು ಒಂದು ಗೋಡೆಯಾಗಿ ಬೆಳೆಯುತ್ತ ಹೋಗುತ್ತದೆ, ಈ ಕೋಮುವಾದವು ತನ್ನ ಧಾರ್ಮಿಕ ಶ್ರೇಷ್ಠತೆಯನ್ನು ವೈಭವೀಕರಿಸುತ್ತಲೇ ಅನ್ಯ ಧರ್ಮ ಮತ್ತು ಅನ್ಯ ಧರ್ಮೀಯರನ್ನು ದ್ವೇಷಿಸುತ್ತಾ ಬಹುಸಂಖ್ಯಾತ ತತ್ವವನ್ನು ಸಾರ್ವಜನಿಕವಾಗಿ ಬಿತ್ತುತ್ತಿರುತ್ತದೆ. ಚಿಂತಕರು ಇಂಡಿಯಾದಲ್ಲಿ ಹಿಂದೂ ಕೋಮುವಾದವನ್ನು ಫ್ಯಾಸಿಸ್ಟ್ ನ ಮತ್ತೊಂದು ಮುಖವೆಂದೇ ಬಣ್ಣಿಸುತ್ತಾರೆ. ತನ್ನ ಧರ್ಮವನ್ನು ಶ್ರೇಷ್ಠವೆಂದು ಪರಿಗಣಿಸುವ ಈ ಧಾರ್ಮಿಕ ಐಡೆಂಟಿಟಿಯನ್ನು ಒಂದು ಫ್ಯಾಸಿಸ್ಟ್ ಶಕ್ತಿಯಾಗಿ ಕ್ರೋಢೀಕರಿಸಿದ್ದು ಸಾವರ್ಕರ್. ಸಾವರ್ಕರ್ ರ ಹಿಂದುತ್ವದ ಕೋಮುವಾದವನ್ನೊಳಗೊಂಡ ಫ್ಯಾಸಿಸ್ಟ್ ಚಿಂತನೆಗಳನ್ನು ತನ್ನ ಸೀಕ್ರೆಟ್ ಕಾರ್ಯಸೂಚಿಯನ್ನಾಗಿಸಿಕೊಂಡ ಆರೆಸ್ಸಸ್ ದಶಕಗಳ ಕಾಲ ಸಾರ್ವಜನಿಕವಾಗಿ ಕೇವಲ ಹಿಂದುತ್ವವನ್ನು ಪ್ರಚಾರ ಮಾಡಿತು. ಇಂದು ಕೇಂದ್ರದಲ್ಲಿ ಅಧಿಕಾರ ಗಳಿಸಿದ ನಂತರ ತನ್ನೊಳಗೆ ಮಡುಗಟ್ಟಿಕೊಂಡ ಫ್ಯಾಸಿಸಂನ ಮುಖಗಳನ್ನು ಸಹ ಬಹಿರಂಗಗೊಳಿಸತೊಡಗಿದೆ.

ಶ್ರೇಣೀಕೃತ, ಅಸಮಾನತೆಯ ಜಾತಿ ಸಮಾಜವನ್ನು ಸಾಂಸ್ಥೀಕರಣಗೊಳಿಸಿದ ಹಿಂದೂಯಿಸಂ ಧಾರ್ಮಿಕ ಭೇಧಭಾವದ ಒಡಕನ್ನು ಸೃಷ್ಟಿಸಿತು. RSS_meeting_1939ಇತ್ತ ತಮ್ಮ ಐಡೆಂಟಿಟಿ, ಜೀವನ ಕ್ರಮ, ಸಂಸ್ಕೃತಿಗಳನ್ನು ಇಸ್ಲಾಂ ಎನ್ನುವ ಧರ್ಮದ ಮೂಲಕ, ಕುರಾನ್ ನ ಮೂಲಕ ಕಂಡುಕೊಳ್ಳಲು ಬಯಸುವ ಮುಸ್ಲಿಂ ಸಮುದಾಯ ಇಂಡಿಯಾದಲ್ಲಿ ಹಿಂದೂಯಿಸಂನ ಬಹುಸಂಖ್ಯಾತ ತತ್ವದ ಮತೀಯವಾದದೊಂದಿಗೆ ಸದಾಕಾಲ ಮುಖಾಮುಖಿಯಾಗುವಂತಹ ಅನಿವಾರ್ಯತೆ ಉಂಟಾಗಿತ್ತು. ಜಿನ್ನಾ ಅವರ ಎರಡು ದೇಶದ ಸಿದ್ಧಾಂತವನ್ನು (ಧರ್ಮದ ನೆಲೆಯಲ್ಲಿ) ಆರೆಸ್ಸಸ್ ನ ಸಾವರ್ಕರ್ ಸಹ ಪರೋಕ್ಷವಾಗಿ ಬೆಂಬಲಿಸಿದ್ದರು. ಕಡೆಗೆ 1947ರಲ್ಲಿ ನಡೆದ ದೇಶ ವಿಭಜನೆಯ ಸಂದರ್ಭದಲ್ಲಿ ಸುಮಾರು 1946-1948ರ ಕಾಲಘಟ್ಟದಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡ, ಅತ್ಯಾಚಾರ, ಕೋಮು ಗಲಭೆಗಳಲ್ಲಿ ಅಪಾರ ಸಾವುನೋವು, ಲೂಟಿ, ದಂಗೆಗಳು ಉಂಟಾದವು. 1925ರಿಂದಲೇ ಸಂಘ ಪರಿವಾರದ ಮತೀಯ ಮೂಲಭೂತವಾದಿಗಳು ಆಕ್ರಮಣಕಾರಿ ಮುಸ್ಲಿಂರು, ರಕ್ಷಣೆಯಲ್ಲಿರುವ ಹಿಂದೂಗಳು, ಮುಸ್ಲಿಂ ಫೆನಟಿಸಂ, ಹಿಂದೂ ಸಹನಶೀಲತೆ ಎನ್ನುವ ಮಿಥ್ ಅನ್ನು ದೇಶಾದ್ಯಾಂತ ಪ್ರಚಾರ ಮಾಡಿದ್ದರು. ಜನರ ಮನದಲ್ಲಿ ಅಭದ್ರತೆಯ ಸ್ಥಿತಿಯನ್ನು ಬಿತ್ತಿದ್ದರು. ದೇಶ ವಿಭಜನೆಯ ಸಂದರ್ಭದಲ್ಲಿ ಇದರ ಕರಾಳತೆ ಬಿಚ್ಚಿಕೊಂಡಿತು. ಹಿಂದೂರಾಷ್ಟ್ರದ ಪರಿಕಲ್ಪನೆಯನ್ನು ಬೋಧಿಸುತ್ತ ಮುಸ್ಲಿಂರ ದೇಶ ಇದಲ್ಲ ಎಂದು ಮತೀಯವಾದಿ ನುಡಿಕಟ್ಟಿನಲ್ಲಿ ಮಾತನಾಡುವುದು, ಮುಸ್ಲಿಂರ ಏಜೆಂಟ್ ಎಂದು ಗಾಂಧೀಜಿಯನ್ನು ಹತ್ಯೆಗೈಯುವುದರ ಮೂಲಕ ಕೋಮುವಾದ, ಫ್ಯಾಸಿಸಂ ಅನ್ನು ಒಂದಕ್ಕೊಂದು ಬೆರೆಸಲಾಯಿತು.

ಇತಿಹಾಸಕಾರ ಬಿಪಿನ್ ಚಂದ್ರ ಅವರು “ಭಾರತದಲ್ಲಿ 19ನೇ ಶತಮಾನದ ಕಡೆಯ ದಶಕಗಳಲ್ಲಿ ಕೋಮುವಾದದ ಘಟನೆಗಳು ಸಂಭವಿಸತೊಡಗಿದವು. ಗ್ರಾಮ ಪ್ರದೇಶಗಳು ಹೆಚ್ಚೂ ಕಡಿಮೆ ಕೋಮುಗಲಭೆಗಳಿಂದ ಮುಕ್ತವಾಗಿದ್ದವು. 1937-1939ರವೆರಗೂ ಕೋಮುವಾದವು ಒಂದು ರಾಜಕೀಯ ಶಕ್ತಿಯಾಗಿ ರೂಪುಗೊಂಡಿರಲಿಲ್ಲ, 1946ರಲ್ಲಿ ಮೊಟ್ಟ ಮೊದಲ ಬಾರಿಗೆ ಕೋಮು ಗಲಭೆಗಳಿಗೂ ಮತ್ತು ರಾಜಕೀಯಕ್ಕೂ ನೇರ ಸಂಬಂಧಗಳು ಕೂಡಿಕೊಳ್ಳತೊಡಗಿದವು. ಆದರೆ ಕೋಮುವಾದವು ಹೇಗೆ ಹುಟ್ಟಿಕೊಂಡಿತು ಎನ್ನುವ ಪ್ರಶ್ನೆ ಸ್ವ ಸಂಕೀರ್ಣ. ಉದಾಹರಣೆಗೆ ಕಲೋನಿಯಲ್ ಭಾರತದಲ್ಲಿ ಮುಸ್ಲಿಂರು ಅವರು ಮುಸ್ಲಿಮರಾಗಿದ್ದಕ್ಕೆ ಶೋಷಣೆಗೆ ಒಳಗಾಗಿರಲಿಲ್ಲ, ಬದಲಾಗಿ ಅವರು ರೈತರು, ಕೂಲಿ ಕಾರ್ಮಿಕರು, ಜೀತದಾಳುಗಳಾಗಿದ್ದರು. ಹಾಗೆಯೇ ಹಿಂದೂಗಳೂ ಸಹ. ಅಥವಾ ಈ ಕೋಮುವಾದವು ಕಲೋನಿಯಲ್ ಸಾಮ್ರಾಜ್ಯದ ಉಪ ಉತ್ಪನ್ನ ಎಂದೂ ಸಹ ಹೇಳಬಹುದು. ಏಕೆಂದರೆ ಕಲೋನಿಯಲ್ ಆಡಳಿತವು ಕೋಮುವಾದಕ್ಕೆ ಪೂರಕವಾಗುವಂತಹ ಸಾಮಾಜಿಕ ವಾತಾವರಣವನ್ನು ನಿರ್ಮಿಸುತ್ತದೆ. ಮುಂದೆ ಇಂಡಿಯಾದ ಮಧ್ಯಮವರ್ಗವು ತನ್ನ ವೈಯುಕ್ತಿಕ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಈ ಕೋಮುವಾದವನ್ನು ಉಪಯೋಗಿಸಿಕೊಂಡಿತು. ಇದಕ್ಕೆ ಪ್ರತಿಯಾಗಿ ಕೋಮುವಾದವು ಫ್ಯೂಡಲ್ಲಿಸಂ ಅನ್ನು, ಕಲೋನಿಯಲಿಸಂ ಅನ್ನು, ಅಧಿಕಾರಶಾಹಿಯನ್ನು ಸಹ ಪೋಷಿಸಿತು” ಎಂದು ಬರೆಯುತ್ತಾರೆ. ಇಂಡಿಯಾದ ನಗರಗಳಲ್ಲಿನ ಹಳೇ ಪ್ರದೇಶಗಳನ್ನು ಸದಾ ಕೋಮು ಗಲಭೆಗಳ ಪ್ರದೇಶಗಳನ್ನಾಗಿ ಮಾರ್ಪಡಿಸಿದ ಕೀರ್ತಿ ಸಂಘ ಪರಿವಾರಕ್ಕೆ ಸಲ್ಲಬೇಕು.

Violette Graff and Juliette Galonnier ಅವರು “1950ರ ದಶಕದ ಪೂರ್ತಿ ಇಂಡಿಯಾದ ಅಲ್ಪಸಂಖ್ಯಾತರು ನೆಹರೂ ಮತ್ತು ಅವರ ಸುತ್ತುವರೆದಿದ್ದ ಮೌಲಾನ ಕಲಾಂ ಅಜಾದ್, ರಫಿ ಅಹ್ಮದ್ ಕಿದ್ವಾಯಿಯಂತಹ ಸೆಕ್ಯುಲರ್ ರಾಜಕಾರಣಿಗಳಿರುವ ಕಾಂಗ್ರೆಸ್ ಪಕ್ಷದ ಕಾರಣಕ್ಕಾಗಿ ಭದ್ರತೆಯ ಮತ್ತು ಸುರಕ್ಷತೆಯ ವಾತಾವರಣದಲ್ಲಿದ್ದೇವೆ ಎಂದೇ ನಂಬಿಕೊಂಡಿದ್ದರು. ಮೊದಲ ಸಾರ್ವತ್ರಿಕ ಚುನಾವಣೆ ನಡೆದ 1952 ರಿಂದ ಮೂರನೇ ಸಾರ್ವತ್ರಿಕ ಚುನಾವಣೆ ನಡೆದ 1962ರವರೆಗೆ ಕಾಂಗ್ರೆಸ್ ಶೇಕಡಾ ನೂರರಷ್ಟು ಮುಸ್ಲಿಂ ಅಲ್ಪಸಂಖ್ಯಾತರ ಮತಗಳನ್ನು ಗಳಿಸುತ್ತಿತ್ತು. ಆದರೆ 1961ರಲ್ಲಿ ಮಧ್ಯಪ್ರದೇಶದ ಜಬ್ಬಲ್ಪುರದಲ್ಲಿ ನಡೆದ ಕೋಮುಗಲಭೆ ದೇಶದ ಒಂದು ಮಾದರಿಯ ಸೆಕ್ಯುಲರ್ ಸ್ವರೂಪವನ್ನೇ ಬದಲಾಯಿಸಿತು” ಎಂದು ಹೇಳುತ್ತಾರೆ.

1961- 1971 ರ ಕಾಲಘಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಸೆಕ್ಯುಲರ್ ಇಮೇಜ್ ತನ್ನ ಹೊಳಪನ್ನು ಕಳೆದುಕೊಳ್ಳತೊಡಗಿತ್ತು. ಒಂದು ದಶಕದಲ್ಲಿGujarat ಎರಡು ಯುದ್ಧಗಳು (ಚೀನಾ ಮತ್ತು ಪಾಕಿಸ್ತಾನ) ಜರುಗಿದವು. ಕಾಂಗ್ರೆಸ್ ಇಬ್ಭಾಗವಾಗಿ ಅನೇಕ ಬಗೆಯ ಬಿಕ್ಕಟ್ಟುಗಳನ್ನು ಎದುರಿಸುತ್ತಿತ್ತು. ದೇಶವು ಭೀಕರ ಕ್ಷಾಮದ ಪರಿಸ್ಥಿತಿಯನ್ನು ಎದುರಿಸುತ್ತಿತ್ತು. 1967ರಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ ವಿವಿಧ ರಾಜ್ಯಗಳಲ್ಲಿ ಸೋಲನ್ನು ಅನುಭವಿಸಿ ವಿರೋಧ ಪಕ್ಷಗಳಿಗೆ ಅಧಿಕಾರವನ್ನು ಬಿಟ್ಟುಕೊಡಬೇಕಾಯಿತು. ಆರೆಸ್ಸಸ್ ಗೋಳ್ವಲ್ಕರ್ ಅವರ ನೇತೃತ್ವದಲ್ಲಿ ಹಿಂದೂ ಮತೀಯವಾದವನ್ನು ರಾಜಕೀಯದಲ್ಲಿ ಭಾರತೀಯ ಜನಸಂಘದ ಮೂಲಕ ಪ್ರಯೋಗಿಸಿ ಅಲ್ಪಮಟ್ಟದ ಯಶಸ್ಸನ್ನು ಸಹ ಗಳಿಸಿತ್ತು. ದೇಶದ ರಾಜಕೀಯ-ಸಾಮಾಜಿಕ ವಲಯಗಳಲ್ಲಿ ಒಂದು ಬಗೆಯ ಆತಂಕ, ಭ್ರಮನಿರಸನ, ತಲ್ಲಣಗಳು ಕಾಡುತ್ತಿದ್ದವು. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಆರೆಸ್ಸಸ್ ‘ವಿಶ್ವ ಹಿಂದೂ ಪರಿಷತ್’ ಎನ್ನುವ ಹಿಂದೂ ಸಂಘಟನೆಯನ್ನು ಸ್ಥಾಪಿಸಿತು. ಈ ವಿ ಎಚ್ ಪಿ ನೇರವಾಗಿಯೇ ಕೋಮು ಗಲಭೆಯ ಅಖಾಡಕ್ಕೆ ಧುಮುಕಿತು. Violette Graff and Juliette Galonnier ಅವರು “1961ರ ನಂತರದ ದಶಕಗಳಲ್ಲಿ ಅಲ್ಪಸಂಖ್ಯಾತರನ್ನು (ಅದರಲ್ಲೂ ಪ್ರಮುಖವಾಗಿ ಮುಸ್ಲಿಂರು) ತಂಟೆಕೋರರು ಎಂದು ಬಣ್ಣಿಸುವುದು, ಧಾರ್ಮಿಕ ಸ್ಥಳಗಳನ್ನು ಅಪವಿತ್ರಗೊಳಿಸುವುದು, ಕರ್ಕಶವಾಗಿ ಧ್ವನಿವರ್ಧಕಗಳನ್ನು ಬಳಸುವುದು, ಧಾರ್ಮಿಕ ಗುರು ಪ್ರಾಫೆಟ್ ಗೆ ಅಪಮಾನ ಮಾಡುವುದು, ಈದ್, ಮೊಹರಂ, ಹೋಳಿ, ಗಣೇಶ ಹಬ್ಬಗಳನ್ನು ಒಂದೇ ಸಮಯದಲ್ಲಿ ಪರಸ್ಪರ ತಿಕ್ಕಾಟವಾಗುವಂತೆ ಯೋಜಿಸುವುದು, ಗೋಹತ್ಯೆಯ ವಿವಾದದ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು, ಮಸೀದಿಯಲ್ಲಿ ಹಂದಿಯನ್ನು ಬಿಸಾಡುವುದು, ಮಹಿಳೆಯರನ್ನು ಚುಡಾಯಿಸುವುದು ಹೀಗೆ ಸಾಮಾಜಿಕ-ಸಾಂಸ್ಕೃತಿಕ ಆಯಾಮಗಳೊಂದಿಗೆ ಕೋಮುಗಲಭೆಗಳಿಗೆ ಸಂಬಂಧಗಳಿವೆ. ಆಸ್ತಿ ವಿವಾದಗಳು, ಮುಸ್ಲಿಂ ವ್ಯಾಪಾರಿಗಳು, ಮುಸ್ಲಿಂರ ಭೂಮಿ ಒಡೆತನ, ಮುಸ್ಲಿಂ ಲೇವಾದೇವಿಗಾರರುಗಳೊಂದಿಗೂ ಸಂಬಂಧಗಳಿವೆ. ಆರ್ಥಿಕ, ಶೈಕ್ಷಣಿಕ ಅಸಮಾನತೆಗಳೊಂದಿಗೂ ಸಂಬಂಧಗಳಿವೆ. ರಾಜಕೀಯ ಮತ್ತು ಚುನಾವಣಾ ಪ್ರಕ್ರಿಯೆಗಳೊಂದಿಗೂ ಕೋಮುಗಲಭೆಗಳಗೆ ಸಂಬಂಧಗಳಿವೆ” ಎಂದು ಹೇಳುತ್ತಾರೆ. ಮೇಲ್ಕಾಣಿಸಿದ ಎಲ್ಲಾ ಮಾದರಿಯ ಆಯಾಮಗಳನ್ನು ಬಳಸಿಕೊಂಡು ಸಂಘ ಪರಿವಾರವು ನೇರವಾಗಿ ಕೋಮು ಗಲಭೆೆಗಳಿಗೆ ಪ್ರಚೋದನೆ ಮತ್ತು ಕುಮ್ಮುಕ್ಕು ಕೊಡತೊಡಗಿತ್ತು. ಈ 1961-1979 ರ ಕಾಲಘಟ್ಟವು ಸಂಘ ಪರಿವಾರದ ಧಾರ್ಮಿಕ ಮತೀಯವಾದದ ಪ್ರಯೋಗಗಳ ಕಾಲಘಟ್ಟವೆಂದೇ ಕರೆಯಲಾಗುತ್ತದೆ.

1979-1989 ಕಾಲಘಟ್ಟವು ಮೊರದಾಬಾದ್-ಮೀನಾಕ್ಷಿಪುರಂ-ಶಾಬಾನು-ರಾಮಜನ್ಮ ಭೂಮಿಯಂತಹ ಧಾರ್ಮಿಕ ವಿವಾದಗಳ ಮೂಲಕ ಕೋಮುವಾದದ ಘೋರತೆಗೆ ನೇರವಾಗಿ ಮತ್ತು ಬಹಿರಂಗವಾಗಿ ರಾಜಕೀಯ-ಧಾರ್ಮಿಕ ಆಯಾಮಗಳನ್ನು ತಂದು ಕೊಟ್ಟಿತು. 1979ರಲ್ಲಿ ಜಾಗತಿಕ ಮಟ್ಟದಲ್ಲಿ ಇರಾನಿನಲ್ಲಿ ಖೊಮೇನಿಯ ಮೂಲಕ ನಡೆದ ಪ್ರತಿಕ್ರಾಂತಿ, ಅಫ್ಘಾನಿಸ್ತಾನದಲ್ಲಿ ಸೋವಿಯತ್ ಯೂನಿಯನ್ನ ಆಕ್ರಮಣಗಳಂತಹ ಸಂಗತಿಗಳು ಮುಸ್ಲಿಂ ಜಗತ್ತಿನಲ್ಲಿ ತಲ್ಲಣಗಳನ್ನುಂಟು ಮಾಡಿದ್ದವು. ಇಂಡಿಯಾದಲ್ಲಿ ಭಾರತೀಯ ಜನಸಂಘ ವಿಸರ್ಜನೆಗೊಂಡು ಭಾರತೀಯ ಜನತಾ ಪಕ್ಷ ಆಸ್ತಿತ್ವಕ್ಕೆ ಬಂದಿತ್ತು. ಸಂಘ ಪರಿವಾರಕ್ಕೆ 50 ವರ್ಷಗಳ ಧಾರ್ಮಿಕ-ಸಾಮಾಜಿಕ ಮೂಲಭೂತವಾದದ ಮತ್ತು 25 ವರ್ಷಗಳ ರಾಜಕೀಯದ ಅನುಭವಗಳು ಭವಿಷ್ಯದ ದಿನಗಳಿಗೆ ಅನುಕೂಲಕರವಾದ ದಾರಿಗಳನ್ನು ನಿರ್ಮಿಸಿತ್ತು. ಕೋಮುಗಲಭೆಗಳಿಗೆ ಕಾರಣವಾಗುವಂತಹ ಧಾರ್ಮಿಕ ವಿವಾದಗಳನ್ನು ನೇರವಾಗಿ ಪ್ರಚೋದಿಸಲು ವಿ ಎಚ್ ಪಿ ಸದಾ ಸನ್ನದ್ಧವಾಗಿರುತ್ತಿತ್ತು. ಏಕಾತ್ಮ ಯಗ್ಞ ಯಾತ್ರ, ಗಂಗಾ ಯಾತ್ರಾ, ಹಿಂದೂ ಧರ್ಮ ಸಮ್ಮೇಳನಗಳ ಮೂಲಕ ವಿ ಎಚ್ ಪಿ ನಿರಂತರವಾಗಿ ಧಾರ್ಮಿಕ ಮತೀಯವಾದವನ್ನು ಚಾಲನೆಯಲ್ಲಿಟ್ಟಿತ್ತು. ಅದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಬಿಜೆಪಿ ಪಕ್ಷವನ್ನು ಅಖಾಡದಲ್ಲಿ ತೇಲಿಬಿಟ್ಟು ಆರೆಸ್ಸಸ್ ನೇಪಥ್ಯದಲ್ಲಿ ಕಾಯುತ್ತಿತ್ತು. ಇದಕ್ಕೆ 1980ರಲ್ಲಿ ಉತ್ತರ ಪ್ರದೇಶದ ಮೊರದಾಬಾದ್ ನಲ್ಲಿ ನಡೆದ ಕೋಮು ಗಲಭೆಗಳು ದೊಡ್ಡ ವೇದಿಕೆಯನ್ನು ಕಲ್ಪಿಸಿಕೊಟ್ಟಿತು. ಆಗ ಕಾಂಗ್ರೆಸ್ ನ ವಿ.ಪಿ.ಸಿಂಗ್ ಮುಖ್ಯಮಂತ್ರಿಯಾಗಿದ್ದರು. ಮತ್ತು ಇದೇ ಸಂದರ್ಭದಲ್ಲಿ ಮೊಟ್ಟ ಮೊದಲ ಬಾರಿಗೆ ಪೋಲೀಸ್ ವ್ಯವಸ್ಥೆ ಪರೋಕ್ಷವಾಗಿ ಬಹುಸಂಖ್ಯಾತರ ಲುಂಪೆನ್ ಗುಂಪಿನ ಪರವಾಗಿ ಸಕ್ರಿಯವಾಗಿ ವರ್ತಿಸಿದ್ದು ಆರೆಸ್ಸಸ್ ನ ಮತೀಯವಾದಕ್ಕೆ ದೊಡ್ಡ ಶಕ್ತಿಯನ್ನು ನೀಡಿತ್ತು. 1981ರಲ್ಲಿ ತಮಿಳು ನಾಡಿನ ಮೀನಾಕ್ಷಿಪುರಂನಲ್ಲಿ ಹಿಂದೂ ಧರ್ಮದ ಜಾತಿ ವ್ಯವಸ್ಥೆಯಿಂದ ಬೇಸತ್ತ ತಳಸಮುದಾಯಗಳು ಸಾಮೂಹಿಕವಾಗಿ ಇಸ್ಲಾಂಗೆ ಮತಾಂತರಗೊಂಡಿದ್ದರು. ಈ ಘಟನೆಯನ್ನು ಆರೆಸ್ಸಸ್ ಬಹುಸಂಖ್ಯಾತರ ಧಾರ್ಮಿಕ ಭಾವನೆಗಳನ್ನು ಕೆರಳಿಸಲು ಸಂಪೂರ್ಣವಾಗಿ ಬಳಸಿಕೊಂಡಿತು.

ಆಗ ರಾಜೀವ್ ಗಾಂಧಿಯವರು ತೆಗೆದುಕೊಂಡ ಎರಡು ರಾಜಕೀಯ ಅಪ್ರಬುದ್ಧ, ತಪ್ಪಾದ ಮತ್ತು ಅಪಾಯಕಾರಿ ನಿಲುವುಗಳು ಇಡೀ ದೇಶದ ಸೆಕ್ಯುಲರ್ ಸ್ವರೂಪವನ್ನೇ ಬದಲಾಯಿಸಿಬಿಟ್ಟಿತು. 1985ರಲ್ಲಿ ಶಾ ಬಾನು ಪ್ರಕರಣದಲ್ಲಿ ಆಗಿನ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಮುಸ್ಲಿಂ ಮೂಲಭೂತವಾದಿಗಳ ಪರವಾಗಿ ವರ್ತಿಸಿದ್ದು ಸಂಘ ಪರಿವಾರಕ್ಕೆ ಬಲು ದೊಡ್ಡ ರಾಜಕೀಯ ವೇದಿಕೆಯನ್ನು ಕಲ್ಪಿಸಿತು. ಈ ಪ್ರಕರಣದಿಂದ ಬಿಜೆಪಿ ರಾಜಕೀಯ ಲಾಭ ಪಡೆಯುವುದನ್ನು ತಡೆಯಲಿಕ್ಕಾಗಿ ಮತ್ತು ಹಿಂದೂ ಧರ್ಮದ ಮುಖಂಡರ ಒತ್ತಡ ತಂತ್ರಕ್ಕೆ ಮಣಿದು 1986ರಲ್ಲಿ ವಿವಾದಿತ ಬಾಬರಿ ಮಸೀದಿಯ ಬೀಗಗಳನ್ನು ತೆರೆಸಿ ರಾಮನ ಮೂರ್ತಿಗಳಿಗೆ ಪೂಜೆಗೆ ಅವಕಾಶ ಕಲ್ಪಿಸಿಕೊಟ್ಟರು. ಇಸ್ಲಾಂ ಮತ್ತು ಹಿಂದೂ ಮೂಲಭೂತವಾದಿಗಳನ್ನು ಓಲೈಸಲು ಹೊರಟ ರಾಜೀವ್ ಗಾಂಧಿ ಬಿಜೆಪಿ ಪಕ್ಷಕ್ಕೆ ವಿಶಾಲವಾದ ರಾಜಕೀಯ ವೇದಿಕೆಯನ್ನು ಕಲ್ಪಿಸಿಕೊಟ್ಟರು. ಇದರ ಫಲವಾಗಿ 1980-1989ರ ಕಾಲಘಟ್ಟದಲ್ಲಿ ಧರ್ಮಗಳ ಧೃವೀಕರಣ ಮತ್ತು ಜಾತಿಗಳ ಧೃವೀಕರಣದ ರಾಜಕೀಯ-ಸಾಮಾಜಿಕ ಭೂಮಿಕೆಗಳು ರೂಪುಗೊಂಡಿತ್ತು. ಇದರ ಸಂಪೂರ್ಣ ಜವಬ್ದಾರಿಯನ್ನು ಸಂಘ ಪರಿವಾರದೊಂದಿಗೆ ರಾಜೀವ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಹಂಚಿಕೊಳ್ಳಬೇಕಾಗುತ್ತದೆ. ಈ ಕಾಲದಲ್ಲಿ ಪ್ರತಿ 10 ಮಿಲಿಯನ್ ಗೆ ಸರಾಸರಿಯಾಗಿ 13 ಜನ ಸಾವನ್ನಪ್ಪಿದ್ದಾರೆ.

ನಂತರದ 1990-2002 ರ ಕಾಲಘಟ್ಟದಲ್ಲಿ ಸಂಘ ಪರಿವಾರ ತಾನು ಕಲಿತ ಎಲ್ಲಾ ಪಟ್ಟುಗಳನ್ನು ಬಳಸಿಕೊಂಡು ಧರ್ಮrajiv_gandhi ಮತ್ತು ಜಾತಿ ಸಂಪೂರ್ಣವಾಗಿ ಧೃವೀಕರಣಗೊಳಿಸುವಲ್ಲಿ ಯಶಸ್ವಿಯಾಯಿತು. ಇದೆಲ್ಲದರ ತಾರ್ಕಿಕ ಅಂತ್ಯವೆನ್ನುವಂತೆ ಹಿಂಸಾತ್ಮಕವಾಗಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದು ಇಡೀ ದೇಶವು ಬಹುಸಂಖ್ಯಾತರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ಎನ್ನುವ ಇಬ್ಭಾಗಕ್ಕೆ ಬಲಿಯಾಗಬೇಕಾಯಿತು. ಅಲ್ಲಿಯವರೆಗೆ ಈ ಕೋಮುವಾದವನ್ನು ಕೇವಲ ಎರಡು ವಿಭಿನ್ನ ಧರ್ಮಗಳ ಲುಂಪೆನ್ ಗುಂಪುಗಳ ನಡುವಿನ ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ ಕಲಹವೆಂದು ಅರ್ಥೈಸಲಾಗುತ್ತಿತ್ತು. ಆದರೆ ಬಾಬರಿ ಮಸೀದಿಯ ದ್ವಂಸದ ನಂತರ ಬಹುಸಂಖ್ಯಾತರೆಲ್ಲರೂ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಧೃವೀಕರಣಗೊಂಡಿದ್ದು ಸಂಘ ಪರಿವಾರದ ಲುಂಪೆನ್ ಗುಂಪುಗಳಿಗೆ ಬಲವನ್ನು ಒದಗಿಸಿತು. 2002ರಲ್ಲಿ ಗುಜರಾತ್ ನ ಗೋಧ್ರಾ ದುರಂತದ ನಂತರ ನಡೆದ ಮುಸ್ಲಿಂ ಸಮುದಾಯದ ಹತ್ಯಾಕಾಂಡದಲ್ಲಿ, ಹೆಣ್ಣುಮಕ್ಕಳು, ಮಕ್ಕಳನ್ನು ಇರಿದು ಹಲ್ಲೆ ಮಾಡಿ, ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದನ್ನು ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಸಮಾನವಾಗಿರುತ್ತವೆ ಎಂದು ಅಲ್ಲಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು ಫ್ಯಾಸಿಸಂನ ಮುಖವನ್ನು ಬಹಿರಂಗೊಳಿಸುತ್ತದೆ. ಪ್ರತಿ ಕೋಮು ಗಲಭೆಗಳು ನಡೆದಾಗಲೆಲ್ಲ ಇದು ಮತ್ತೆ ಮರುಕಳಿಸುತ್ತದೆಯೇ ಎನ್ನುವ ಪ್ರಶ್ನೆಗಳು ಇಲ್ಲವೆಂದು ಹೇಳಲಿಕ್ಕಾಗದು ಎನ್ನುವ ಉತ್ತರ ದೊರಕುತ್ತಿತ್ತು. ಆದರೆ ಇಂದು ಇಡೀ ಚಿತ್ರಣವೇ ಬದಲಾಗಿದೆ. 2002ರ ಗುಜರಾತ್ ಹತ್ಯಾಕಾಂಡದ ನಂತರ ಸಂಘ ಪರಿವಾರ ಅಂಗ ಸಂಸ್ಥೆಗಳಾದ ವಿ ಎಚ್ ಪಿ ಮತ್ತು ಬಜರಂಗದಳಗಳನ್ನು ಬಳಸಿಕೊಂಡು ಒಂದು ನಿರ್ದಿಷ್ಠ ಮಾದರಿಯಲ್ಲಿ ಕೋಮು ಗಲಭೆಗಳನ್ನು ಹುಟ್ಟುಹಾಕುತ್ತಿದೆ. ಚುನಾವಣೆಗೆ ಕೆಲವು ತಿಂಗಳುಗಳ ಮುಂಚೆ ಹಿಂಸಾಚಾರವನ್ನು ಸೃಷ್ಟಿಸಲಾಗುತ್ತದೆ. ಅದರ ಮೂಲಕ ಧರ್ಮ ಮತ್ತು ಜಾತಿಗಳ ಧೃವೀಕರಣ ಸಾಧಿಸುತ್ತದೆ. ಒಮ್ಮೆ ಚುನಾವಣೆ ಮುಗಿದು ಅಧಿಕಾರಕ್ಕೆ ಬಂದ ನಂತರ ಕೆಲವು ವರ್ಷಗಳ ಕಾಲ ಕೋಮು ಗಲಭೆಗಳು ಸಂಭವಿಸುವುದೇ ಇಲ್ಲ. 2002ರಿಂದ ಇಲ್ಲಿಯವರೆಗೂ ಗುಜರಾತ್ ನಲ್ಲಿ ಕೋಮು ಗಲಭೆಗಳು ಸಂಭವಿಸಿಲ್ಲ. ಇದು ಒಂದು ಉದಾಹರಣೆ ಮಾತ್ರ.

( ಚಿಂತನ ಪ್ರಕಾಶನ’ದಿಂದ ಪ್ರಕಟಣೆಗೆ ಸಿದ್ಧವಾಗಿರುವ ‘ಹಿಂದುತ್ವದ ರಾಜಕಾರಣ’ ಪುಸ್ತಕದ ಆಯ್ದ ಭಾಗ)

ಕಾನ್ಶಿರಾಂ – ಕಲ್ಲಿದ್ದಲ ಕಗ್ಗತ್ತಲೆಯನ್ನು ಕೊಹಿನೂರೊಂದು ಕಳೆದ ಕಥೆ : ಭಾಗ-1


– ಶ್ರೀಧರ್ ಪ್ರಭು


ಪುಣ್ಯನಗರಿಯಲ್ಲೊಂದು ಒಪ್ಪಂದ

ಅವನು ವಿಶ್ವನಾಥ. ಅವನೇ ಜಗನ್ನಾಥ. ಆ ಲೋಕ ಈ ಲೋಕ ಸಮಸ್ತ ಲೋಕಗಳ ನಿಖಿಲ ಚರಾ ಚರಗಳಿಗೆಲ್ಲ ನಾಥ. ಇವೆಲ್ಲಾ ಲೋಕಗಳ ನಡುಮಧ್ಯದಲ್ಲಿದ್ದು ಸಮಸ್ತ ಲೋಕಗಳಿಗೂ ಬೆಳಕು ನೀಡುವ ನಗರಿ – ಕಾಶಿ – ಅವನ ರಾಜಧಾನಿ. ಇಂಥಹ ಪರಮ ಪವಿತ್ರ ಕಾಶಿಯ ಹೃದಯವೆಂದರೆ ಮದ ಮತ್ತು ಮೋಹವನ್ನು ಮರ್ದಿಸಿ ಮದನ ಮೋಹನನೆನಿಸಿಕೊಂಡಿದ್ದ ಮಾಳವೀಯರು. ಅಂಥಹ ಮಾಳವೀಯರಂಥಹ ಮಾಳವೀಯರಿಗೆ ಸಮಸ್ತ ವಿಶ್ವದ ಹಿಂದೂ ಸಮಾಜದ ಪರವಾಗಿ ಭರತ ಭೂಮಿಯ ಮಾಂಗಲ್ಯದಂತಿದ್ದ ಮಹಾತ್ಮರ ಆತ್ಮವನ್ನು ಪರಮಾತ್ಮನೊಂದಿಗೆ ಲೀನವಾಗದಂತೆ ತಡೆಯುವ ಮಹತ್ತರ ಜವಾಬ್ದಾರಿ.

ಈ ಪಾರಮಾರ್ಥಿಕ ಕರ್ತವ್ಯಕ್ಕೆ ಮುಹೂರ್ತ ನಿಗದಿಯಾಗಿದ್ದು ಪರಮ ಭಯಂಕರನಾದ ಯಮದೇವನಿಗೆ ಸ್ವಂತ ಅಣ್ಣನಾದ ಶನಿದೇವರು ಅಧಿಪತಿಯಾಗಿರುವ ಶನಿವಾರ. ಕೆಂಪು ಮುಸುಡಿಯ ಮ್ಲೇಚ್ಚರು ಇನ್ನು ಅವರ ದಾಸ್ಯ ಸುಖವನ್ನೇ ನೆಚ್ಚಿದ ನಮ್ಮವರು ೧೯೩೨ ರನೇಯದ್ದು ಎಂದು ಕರೆಯುವ ವರ್ಷದ ಒಂಬತ್ತನೇ ತಿಂಗಳು. ಈ ಪುಣ್ಯ ಕಾರ್ಯಕ್ಕೆ ನಿಗದಿಯಾದ ಸ್ಥಳವೂ ಪುರಾಣ ಪ್ರಸಿದ್ದ ಪೇಶ್ವೆಗಳು ಆಳಿದ ಪುಣ್ಯ ಪುರಿ ಪುಣೆ. ಕೊನೆಗೂ ಪುಣೆ ಆ ಮಹಾನ್ ಒಪ್ಪಂದಕ್ಕೆ ಸಾಕ್ಷಿಯಾಯಿತು. ಪುಣೆಯ ಪುಣ್ಯದಿಂದ ದೇವ ನಿರ್ಮಿತ ವರ್ಣಾಶ್ರಮ ಧರ್ಮ ಚಿರಕಾಲ ರಕ್ಷಿಸಲು ಮಹಾತ್ಮರು ತೊಟ್ಟ ಸಂಕಲ್ಪ ಸಾರ್ಥಕವಾಯಿತು.

ಇದೆಲ್ಲಾ ನಡೆದು ಬರೋಬ್ಬರಿ ಅರ್ಧ ಶತಮಾನ ಉರುಳಿತು. ಈಗ ಮ್ಲೇಚ್ಚರ ವರ್ಷ ೧೯೮೨. ಪುಣೆಯ ಪುಣ್ಯ ಒಪ್ಪಂದದ ದಿನವೇ, ಈ ಘೋರ ಕಲಿಯುಗದಲ್ಲಿ ದೆಹಲಿಯೆಂದು ಕರೆಯಲಾಗುವ ಇಂದ್ರಪ್ರಸ್ಥದ ಕರೋಲ್ ಬಾಗ್ ಎಂಬಲ್ಲಿ ಒಬ್ಬ ನಗಣ್ಯ ಅತಿಶೂದ್ರ ಚಮ್ಮಾರರ ವಂಶದ ವ್ಯಕ್ತಿಯೊಬ್ಬ ಅಂಗ್ರೇಜಿ ಭಾಷೆಯಲ್ಲಿ “ಚಮಚಾ ಯುಗ” ವೆಂಬ ಪುಸ್ತಕ ಬರೆದು ಪ್ರಕಟಿಸಿದ. ಕ್ಷರದ ಲವ ಮಾತ್ರವೂ ಸೋಕದಂತೆ ಯುಗ ಯುಗಾದಿಗಳಿಂದ ಅಕ್ಷರವನ್ನು ಅತ್ಯಂತ ಜೋಪಾನವಾಗಿ ರಕ್ಷಿಸಿಕೊಂಡು ಬಂದಿದ್ದ ಸಮುದಾಯವನ್ನು ನಾಚಿಸುವಂತೆ ಈ ನವ ಸಾಕ್ಷರ ಇಂಗ್ಲಿಷ್ ಪುಸ್ತಕವೊಂದನ್ನು ಬರೆದು ಬಿಟ್ಟಿದ್ದ! ಅದೂ ಏನೆಂದು? ನಮ್ಮ ಪುಣ್ಯಪುರಿಯ ಒಪ್ಪಂದದ ದಿನವೇ ಚಮಚಾಗಳಿಗೆ ಯುಗಾದಿಯೆಂದು. ಇದನ್ನು ಬರೆದದ್ದು ಚಮಚಾಗಳಿಗೋಸ್ಕರವಾದರೂ, ಅದನ್ನು ಓದಲು ಈ ಚಮಚಾಗಳು ತಮ್ಮನ್ನು ಹಿಡಿದಿದ್ದ ಕೈಗಳ ಅನುಮತಿ ಕೋರಿದವು; ಎಂದಿನಂತೆ ಅನುಮತಿ ನಿರಾಕರಣೆಯಾಯಿತು. ಕೈಗಳು ಮಾತ್ರ ಈ ಪುಸ್ತಕವನ್ನು ಚೆನ್ನಾಗಿ ಮಸ್ತಕಕ್ಕೆ ಇಳಿಸಿಕೊಂಡರು. ಅದರೂ ಈ ಚಮಚಾಗಳ ಹಣೆ ಬರಹ ಗೊತ್ತಿದ್ದ ಕಾರಣ ಕೈಗಳು ಸುಮ್ಮನೆ ಕಿಸಕ್ಕೆಂದು ಒಮ್ಮೆ ನಕ್ಕು ಸುಮ್ಮನಾದವು. ಉತ್ತರ ದೇಶದ ಕೈಗಳ ರಾಣಿಗೆ ಮಾತ್ರ ಅಪಾಯದ ಗ್ರಹಿಕೆಯಾಯಿತು. ಇನ್ನು ಕೈಗಳ ಶೋಭೆಯನ್ನು ನೂರ್ಮಡಿಗೊಳಿಸಿ ಕಂಗೊಳಿಸುತ್ತಿದ್ದ ಕಮಲಕ್ಕೆ ಮಾತ್ರ ಬೇಗ ಈ ಅಪಾಯದ ಅರಿವಾಗಿತ್ತು.

ಇದಾಗಿ ಹತ್ತು ವಸಂತಗಳು ಕಳೆದವು. ಅನೇಕ ವರ್ಷಗಳು ಕರದಲ್ಲೇ ಶೋಭಿಸಿದ ಕಮಲವು ಕರವನ್ನೇ ನುಂಗಿ ಹಾಕಿತ್ತು. ಇನ್ನೊಂದು ರೀತಿ ನೋಡಿದರೆ ಕರಕ್ಕೂ ಕಮಲಕ್ಕೂ ಸಂಪೂರ್ಣ ತಾದಾತ್ಮ್ಯ ಸಾಧ್ಯವಾಗಿತ್ತು. ಹೀಗಾಗಿಯೇ, ಪುಣ್ಯ ಪುರಿಯ ಒಪ್ಪಂದಕ್ಕೆ ಸಹಿ ಹಾಕುವಂತೆ ನಾವು ಮಣಿಸಿದ ಬಹುಜನ ಶುದ್ರಾತಿಶೂದ್ರರ ಮಹಾ ಪುರುಷ ಬಾಬಾ ಸಾಹೇಬರ ಪುಣ್ಯ ತಿಥಿಯಂದೇ ರಾಮ ಜನ್ಮ ಭೂಮಿಗೆ ಮುಕ್ತಿಯೆಂದು ಕರಕಮಲಗಳು ನಿಶ್ಚಯ ಮಾಡಿಯಾಗಿತ್ತು. ಇನ್ನು ಕರಕಮಲಗಳ ಸ್ವಯಂ ಸೇವೆ ಸ್ವೀಕರಿಸುವ ಅಧಿಪತಿಗಳ ಆಶೀರ್ವಾದದಿಂದ ‘ಕರ’ ಸೇವೆ ಸಾಂಗವಾಗಿ ನೆರವೇರಿ ದೇಶ ಶತಮಾನಗಳ ಅಪಮಾನದಿಂದ ಮುಕ್ತಿಹೊಂದಿತು. ರಾಮ ರಾಜ್ಯ ಸ್ಥಾಪನೆಗೆ ಕ್ಷಣ ಗಣನೆ ಶುರುವಾಯಿತು.

ಇದಾಗಿ ಕೆಲಕಾಲ ಸಂದು ಈಗ ೧೯೯೫ ನೆ ವರ್ಷದ ಮಧ್ಯ ಭಾಗ. ಪುರುಷರಲ್ಲಿ ಸರ್ವೋತ್ತಮ ಶ್ರೀರಾಮಚಂದ್ರನ ಅನುಜ ಲಕ್ಷ್ಮಣನು ಕಟ್ಟಿಸಿದ ಊರು ಲಖನೌನಲ್ಲಿ ಬಡ ಚಮ್ಮಾರನ ಮಗಳೊಬ್ಬಳು ತನ್ನ ಎಡಗಾಲ ಹೆಬ್ಬೆರಳನ್ನು ಅಕಾರಣವಾಗಿ ನೆಲಕ್ಕೆ ಸೋಕಿಸಿದಳು. ಆ ಸಪ್ಪಳವನ್ನು ಕೇಳಿಸಿಕೊಂಡ ಗಂಗೆಯಲ್ಲಿ ಮಿಂದೆದ್ದು ಬಂದ ವಿರ್ಪೋತ್ತಮ ದಿವಾನರಾದಿಯಾಗಿ ಸಮಸ್ತ ಅಧಿಕಾರಿ ಗಣ ನತಮಸ್ತಕವಾಗಿ, ವಿನೀತ ಭಾವದಿಂದ ಕೈಮುಗಿತು ನಿಂತು “ಏನಪ್ಪಣೆ” ಎಂದಿತು!

ಯಾವ ಅರ್ಯಾವರ್ತವು ಎರಡು ಸಾವಿರ ವರ್ಷಗಳ ಕಾಲ ಬುದ್ಧನನ್ನು ಧಿಕ್ಕರಿಸಿ ವೈದಿಕ ದಿಗ್ವಿಜಯಕ್ಕೆ ಸಾಕ್ಷಿಯಾಗಿತ್ತೋ, mayawati_kashiramಅದೇ ನಾಡು ಇಂದು, ಎರಡು ಸಾವಿರ ವರ್ಷಗಳು ಕಳೆದ ಮೇಲೆ, ನಲವತ್ತು ವರ್ಷದ ಪ್ರಾಯವನ್ನೂ ತಲುಪಿರದ ಬಡ ದಲಿತನ ಮಗಳೊಬ್ಬಳನ್ನು ತನ್ನ ಭಾಗ್ಯದ ಅಧಿನಾಯಕಿ ಎಂದು ಒಪ್ಪಿಕೊಳ್ಳುವ ಅನಿವಾರ್ಯಕ್ಕೆ ಬಂದು ನಿಂತಿತ್ತು!

ಕಾಶಿಯನ್ನು ಆಳಿದ್ದ ಮಾಳವೀಯರು, ಸ್ವರ್ಗದಲ್ಲೇ ಒಮ್ಮೆ ನರಳಿದರು. ಅವರು ೧೯೩೨ ರಲ್ಲಿ, ಮಹಾತ್ಮರ ಅಣತಿಯಂತೆ, ಸ್ಥಾಪಿಸಿದ ಚಮಚಾ ಯುಗ ಮತ್ತೆ ೧೯೯೨ ರಲ್ಲಿ ಸ್ಥಾಪನೆ ಯಾಗಲು ಹೊರಟಿದ್ದ ರಾಮನ ಯುಗ ಮುಗ್ಗರಿಸಿದವು!

ಆ ‘ಕಾಶಿ’ ಯ ಶಕ್ತಿ ಮತ್ತು ಈ ‘ರಾಮ’ನ ಬಲ, ಕಾನ್ಶಿರಾಂನೆಂಬ ಸಾಮಾನ್ಯರಲ್ಲಿನ ಅಸಾಮಾನ್ಯನ ಬಲದ ಮುಂದೆ kanshiramಮೊಣಕಾಲೂರಿ ಬಿಟ್ಟಿತ್ತು. ಬುದ್ಧನನ್ನು ಮತ್ತು ಧಮ್ಮವನ್ನು ಧಿಕ್ಕರಿಸಿ ಸ್ಥಾಪಿಸಿದ ದ್ವಿಜ ಸಾಮ್ರಾಜ್ಯದ ಧ್ವಜ ಅರ್ಧಕ್ಕೆ ಇಳಿದಿತ್ತು. ತಿಲಕ, ತಕ್ಕಡಿ ಮತ್ತು ತಲವಾರುಗಳ ದೈತ್ಯ ಶಕ್ತಿ ಮತ್ತು ಕುಯುಕ್ತಿಗಳು ಇವರ ದಲಿತ ಬಹುಜನ ಸಂಘಟನಾ ಶಕ್ತಿಯ ಮುಂದೆ ಹುಡಿಯಾಗಿ ಹೋದವು!

ಆದರೆ ಇದರ ರೂವಾರಿ, ಸಾಧಕ ಮತ್ತು ಸೂತ್ರಧಾರ ಮಾನ್ಯವರ ಇದಾವುದರಿಂದಲೂ ಅತಿ ಪುಳಕಗೊಳ್ಳದೆ ಸಂಪೂರ್ಣ ನಿರ್ಲಿಪ್ತ ಭಾವದಿಂದ ತಮ್ಮ ಸಂಘಟನೆಯ ಕೆಲಸದಲ್ಲಿ ತಲ್ಲೀನರಾಗಿದ್ದರು.

ಇಂದು ಯಾವುದೇ ನಿಲುವಿನ ರಾಜಕೀಯ ಚಿಂತಕ ಅಥವಾ ಕಾರ್ಯಕರ್ತ ಅಥವಾ ನಾಯಕನೊಬ್ಬ ಅಗತ್ಯವಾಗಿ ಓದಬೇಕಾದದ್ದೆಂದರೆ ಮಾನ್ಯವರರ ಜೀವನ ಚರಿತ್ರೆ. ಇದು ಭಾರತದ ಅತ್ಯಂತ ಸಂಘರ್ಷಮಯ ಮತ್ತು ರೋಚಕ ಅಧ್ಯಾಯಗಳಲ್ಲೊಂದು.

ಇದೆಲ್ಲಾ ಅತಿರಂಜಿತವಾದ ನಾಟಕೀಯ ಮತ್ತು ಪೌರಾಣಿಕ ಶೈಲಿಯಲ್ಲಿ ಹೇಳಲು ಕಾರಣವಿದೆ. ಕಾನ್ಶಿರಾಮ್ ಪ್ರವೇಶವಾಗುವವರೆಗೆ ಅಧುನಿಕ ಭಾರತದ ರಾಜಕೀಯ ಚರಿತ್ರೆಯು ಗಾಂಧಿ ಕೇಂದ್ರಿತವಾಗಿದ್ದು ಹಾಗೆಯೇ ಸಂಪೂರ್ಣವಾಗಿ ಹಿಂದೂ ಮೇಲ್ಜಾತಿಯ ಗಂಡಸಿನ ಮನಸ್ಥಿತಿಯಲ್ಲೇ ಅದ್ದಿ ಹೋಗಿತ್ತು. ಗಾಂಧಿ ಸ್ವಾತಂತ್ರ್ಯ ತಂದುಕೊಟ್ಟು ನಂತರದಲ್ಲಿ ಅಧಿಕಾರ ತ್ಯಾಗ ಮಾಡಿದ್ದನ್ನು ಹೀಗೆಯೇ ಒಂದು ದೈವೀ ಪವಾಡದಂತೆ ವರ್ಣಿಸಲಾಗುತ್ತಿತ್ತು. ನಂತರದಲ್ಲೂ ಸೋನಿಯಾ ಗಾಂಧಿಯವರ ಅಧಿಕಾರ ತ್ಯಾಗದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. kanshiram-mayawatiಅಂದು ಸಂಸತ್ ಭವನದಲ್ಲಿ ಅತಿ ಹೆಚ್ಚು ಕಣ್ಣೀರು ಸುರಿಸಿದ ಮಾಜಿ ಪತ್ರಕರ್ತೆ ಮತ್ತು ಅಂದಿನ ಸಂಸದೆಯೊಬ್ಬರು ನಾಳೆಯಿಂದ ದೇಶವೇ ಇರದೇನೋ ಎಂಬಂತೆ ಪ್ರಲಾಪಿಸಿದ್ದರು. ಆದರೆ ಶತ ಶತಮಾನಗಳಿಂದ ಅನ್ನ ಮತ್ತು ಅಕ್ಷರಕ್ಕೆ ಹಾತೊರೆದ ವರ್ಗಗಳ ವ್ಯಕ್ತಿಯೊಬ್ಬ ಮೊಟ್ಟ ಮೊದಲ ಬಾರಿಗೆ ವೈದಿಕ ಶೋಷಣೆಯ ಕೇಂದ್ರಸ್ಥಾನದ ಗರ್ಭಗುಡಿಯನ್ನು ನಿಯಂತ್ರಿಸುವ ಅವಕಾಶ ಸಿಕ್ಕಿದ್ದರೂ, ಅದನ್ನು ಒಬ್ಬ ದಲಿತ ಮಹಿಳೆಗೆ ಬಿಟ್ಟು ಕೊಟ್ಟ ಪವಾಡವನ್ನು ದೇಶವಿಂದು ಮರೆತೇ ಬಿಟ್ಟಿದೆ. ಒಟ್ಟಾರೆ, ಅಧುನಿಕ ಭಾರತದ ನೈಜ ಪವಾಡವೆಂದರೆ ಕಾನ್ಶಿರಾಂ.

ನಮ್ಮ ಗಾದೆಗಳು ಯಾರನ್ನೂ ನೇರವಾಗಿ ಬೈಯ್ಯುವುದಿಲ್ಲ. ‘ಎಲ್ಲಾ ರಾಜಕಾರಣಿಗಳೂ ಬ್ರಷ್ಟರು’ ಎನ್ನುವ ಬದಲು ಹಿಂದಿ ಗಾದೆಯೊಂದು “ಕಲ್ಲಿದ್ದಲಿನ ವ್ಯಾಪಾರ ಮಾಡುವವರ ಮುಖ ಒಮ್ಮೆಯಾದರೂ ಕಪ್ಪಾಗಲೇ ಬೇಕು” ಎನ್ನುತ್ತದೆ. ಭಾರತದ ರಾಜಕೀಯವೆಂದರೇನೇ ಒಂದು ದೊಡ್ಡ ಕತ್ತಲು ಕವಿದ ಕಲ್ಲಿದ್ದಲಿನ ಗಣಿ, ಕಾನ್ಶಿರಾಂ ಅದರ ಕತ್ತಲೆಯನ್ನು ಕೆಲಹೊತ್ತಿಗಾದರೂ ಕಳೆದ ಕೋಹಿನೂರ್. ಅವರ ಚಿಂತನೆಯನ್ನು ಒಪ್ಪದಿರುವ ಜನರು ಚಿಂತನೆಯ ಹೊಸ ಹೊಳಹನ್ನು ಒಪ್ಪದಿರುವುದಿಲ್ಲ.

ಕಾನ್ಶಿರಾಮರ ಮೂಸೆಯನ್ನು ಸೇರಿದ ಅನೇಕ ‘ಚಮಚಾ’ಗಳು ದೊಡ್ಡ ದೊಡ್ಡ ಹತ್ಯಾರುಗಳಾಗಿ ಹೊರಬಂದರು. ಇದಕ್ಕೂ ಮುಖ್ಯವಾಗಿ, ಅಂಬೇಡ್ಕರ್ ತೀರಿಹೋದ ಮೂರು ನಾಲ್ಕು ದಶಕಗಳ ಅವಧಿಯಲ್ಲಿಯೇ ಅದು ಬರೀ ಪುಸ್ತಕದ ಬದನೆಕಾಯಿಯಲ್ಲ Young_Ambedkarಬದಲಿಗೆ ಅಧಿಕಾರ ಸಾಧನೆಗೊಂದು ಕೈಪಿಡಿಯೆಂದು ಸಿದ್ಧವಾಯಿತು. ಯುಗ ಪ್ರವಾದಿಯೊಬ್ಬನ ಸಿದ್ಧಾಂತಕ್ಕೆ ಇಷ್ಟು ಬೇಗ ಮನ್ನಣೆ ಕೊಡಿಸಿದ ಮತ್ತೊಬ್ಬ ಪ್ರವಾದಿ ಕಾನ್ಶಿರಾಂ.

ಅಕ್ಟೋಬರ್ ಒಂಬತ್ತರಂದು ಕಾನ್ಶಿರಾಂ ನಮ್ಮನ್ನಗಲಿ ಹತ್ತಿರ ಹತ್ತಿರ ಒಂದು ದಶಕ; ಆದರೆ ಅವರ ಸಂದೇಶ ಮತ್ತು ಚಿಂತನೆ ಎಂದಿಗೂ ಚಿರಾಯು.

(ಮುಂದುವರೆಯುವುದು…)

56 ಇಂಚಿನ ಎದೆಯ ಪರಿಣಾಮ : ವಿಷಗಾಳಿಯ ಭಾರತ

-ಬಿ.ಶ್ರೀಪಾದ ಭಟ್

ಒಂದು, ಎರಡು ವರ್ಷಗಳ ಹಿಂದೆ ಲೋಕಸಭಾ ಚುನಾವಣೆಯ ಪ್ರಯುಕ್ತ 2, ಎಪ್ರಿಲ್ 2014 ರಂದು ಬಿಹಾರ್ ನ ನವಾಡ ದಲ್ಲಿ ನರೇಂದ್ರ ಮೋದಿ ಮಾಡಿದ ಭಾಷಣದ ಸಾರಾಂಶ “ನಾನು ದ್ವಾರಕಾ ನಗರದಿಂದ ಬಂದಿದ್ದೇನೆ ಮತ್ತು ದ್ವಾರಕೆಯೊಂದಿಗೆ ಯದುವಂಶಿಗಳಿಗೆ (ಬಿಹಾರದ ಯಾದವ ಸಮುದಾಯವನ್ನು ಉದ್ದೇಶಿಸಿ) modi_bjp_conclaveನೇರವಾದ ಸಂಪರ್ಕವಿದೆ. ಈ ಸಂಬಂಧದಿಂದಾಗಿ ನಾನು ಇಂದು ನನ್ನ ಮನೆಯಲ್ಲಿದ್ದೇನೆ ಎನ್ನುವ ಭಾವನೆ ಉಂಟಾಗುತ್ತಿದೆ. ಆದರೆ ಶ್ರೀ ಕ್ರಿಷ್ಣನನ್ನು ಪೂಜಿಸುವ, ಗೋವನ್ನು ತಮ್ಮ ದಿನಬಳಕೆಗೆ ಬಳಸುವ, ಪೂಜಿಸುವ ಇದೇ ಯಾದವರ ನಾಯಕರು ಈ ಪ್ರಾಣಿಗಳನ್ನು ಹೆಮ್ಮೆಯಿಂದ ನಾಶಪಡಿಸುವ ಜನರೊಂದಿಗೆ ಸೌಹಾರ್ದಯುತವಾಗಿ ವ್ಯವಹಾರ ಮಾಡುತ್ತಿದ್ದಾರೆ. ನಾವು ‘ಹಸಿರು ಕ್ರಾಂತಿ’ (ಗ್ರೀನ್ ರೆವಲ್ಯೂಶನ್)ಯ ಕುರಿತಾಗಿ ಕೇಳಿದ್ದೇವೆ, ನಾವು ಬಿಳಿ ಕ್ರಾಂತಿ (ವೈಟ್ ರೆವಲ್ಯೂಶನ್) ಕುರಿತಾಗಿ ಕೇಳಿದ್ದೇವೆ. ಆದರೆ ದೆಹಲಿ ಸರ್ಕಾರಕ್ಕೆ (ಯುಪಿಎ2) ಈ ಕ್ರಾಂತಿಗಳು ಬೇಕಾಗಿಲ್ಲ. ಅವರು ಇಂದು ಪಿಂಕ್ ರೆವಲ್ಯೂಶನ್ ಕುರಿತಾಗಿ ಸಮರ್ಥನೆಗೆ ತೊಡಗಿದ್ದಾರೆ. ಇದೇನೆಂದು ನಿಮಗೆ ಗೊತ್ತೆ (ಜನರನ್ನು ಉದ್ದೇಶಿಸಿ). ಅದು ಅವರ ಆಟ. ಅವರು ದೇಶವನ್ನು ಕತ್ತಲೆಯಲ್ಲಿಟ್ಟಿದ್ದಾರೆ. ನೀವು ಪ್ರಾಣಿಯೊಂದನ್ನು ವಧೆ ಮಾಡಿದಾಗ ಆಗ ಆ ಮಾಂಸದ ಬಣ್ಣವು ಪಿಂಕ್ ಆಗಿರುತ್ತದೆ. ಇದನ್ನೇ ‘ಪಿಂಕ್ ರೆವಲ್ಯೂಶನ್’ ಎಂದು ಕರೆಯುತ್ತಾರೆ. ಕೇಂದ್ರ ಸರ್ಕಾರವು ಈ ಮಾಂಸದ ರಫ್ತಿನಿಂದ ಅತ್ಯಧಿಕ ಆದಾಯ ಗಳಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ನಮ್ಮ ದಿನಬಳಕೆಯ ವಸ್ತುಗಳನ್ನು ಕದ್ದು ಬಾಂಗ್ಲಾ ದೇಶಕ್ಕೆ ಸಾಗಿಸಲಾಗುತ್ತಿದೆ. ದೇಶದಾದ್ಯಾಂತ ಈ ವಧಾಖಾನೆಗಳು ಕ್ರಿಯಾಶೀಲವಾಗಿವೆ. ಅಷ್ಟೇ ಅಲ್ಲ ದೆಹಲಿ ಸರ್ಕಾರವು ರೈತರಿಗೆ, ಯಾದವರಿಗೆ ಗೋವುಗಳನ್ನು ಪಾಲನೆ ಮಾಡಲು ಸಬ್ಸಿಡಿಯನ್ನು ಕೊಡುವುದಿಲ್ಲ, ಆದರೆ ಈ ಗೋವುಗಳನ್ನು ವಧೆ ಮಾಡುವ ವಧಾಖಾನೆಗಳಿಗೆ, ಹಾಲಿನ ನದಿಗಳನ್ನು ನಾಶಮಾಡುವವರಿಗೆ ಸಬ್ಸಿಡಿಯನ್ನು ಕೊಡುತ್ತದೆ. 2012ರಲ್ಲಿ ಹಿಂದೂ ರಾಜನೆಂದು ಖ್ಯಾತಿ ಗಳಿಸಿದ ಮಹಾರಾಣಾ ಪ್ರತಾಪ್ ಜನ್ಮ ದಿನದ ಸಮಾರಂಭದಲ್ಲಿ ಮಾತನಾಡುತ್ತಾ ನರೇಂದ್ರ ಮೋದಿಯವರು ರಾಣಾ ಪ್ರತಾಪ್ ಗೋರಕ್ಷಣೆಗಾಗಿ ತಮ್ಮ ಜೀವನವನ್ನು ಮೀಸಲಿಟ್ಟಿದ್ದರು. ಆದರೆ ಇಂದು ಏನಾಗುತ್ತಿದೆ? ಸುಪ್ರೀಂ ಕೋರ್ಟ ಸಹ ಇಂದು ರಾಷ್ಟ್ರೀಯ ಗೋವು ಸಂರಕ್ಷಣ ಮಸೂದೆಯ ಅವಶ್ಯಕತೆ ಇದೆ ಎಂದು ಹೇಳುತ್ತಿದೆ. ಆದರೆ ವೋಟ್ ಬ್ಯಾಂಕ್ ರಾಜಕಾರಕ್ಕಾಗಿ ಕೇಂದ್ರ ಸರ್ಕಾರವು ಈ ಮಸೂದೆಯನ್ನು ತರಲು ತಿರಸ್ಕರಿಸುತ್ತಿದೆ. ಹಣವನ್ನು ಗಳಿಸಲು ಗೋ ಮಾತೆಯನ್ನು ವಧೆ ಮಾಡಲು ಯೋಜನೆಗಳನ್ನು ರೂಪಿಸಲಾಗುತ್ತಿದೆ” ಎಂದು ಹೇಳಿದ್ದಾರೆ. (ಕೃಪೆ ; ಶೋಯೆಬ್ ಡೇನಿಯಲ್).

28, ಸೆಪ್ಟೆಂಬರ್, 2015ರಂದು ಪಶ್ಚಿಮ ಉತ್ತರ ಪ್ರದೇಶದ ದಾದ್ರಿ ಗ್ರಾಮದಲ್ಲಿ ಕಮ್ಮಾರ ವೃತ್ತಿಯನ್ನು ಮಾಡುತ್ತಿದ್ದ 51 ವರ್ಷದmohamad-ikhlaq-or-akhlaq-dadri ‘ಮೊಹಮ್ಮದ್ ಅಕ್ಲೇಖ್ ಅವರನ್ನು ತಮ್ಮ ಮನೆಯಲ್ಲಿ ದನದ ಮಾಂಸವನ್ನು ಬಚ್ಚಿಟ್ಟಿದ್ದಾರೆ ಎಂದು ಆಪಾದಿಸಿ ಹಿಂದೂ ಮತಾಂಧ ಯುವಕರು ಹತ್ಯೆ ಮಾಡಿದರು. ಆದರೆ ಅಕ್ಲೇಖ್ ಒಬ್ಬ ಸರಳ ಮುಸ್ಲಿಂ ನಾಗರಿಕರಾಗಿದ್ದರು. ಅವರ ಹಿರಿಯ ಮಗ ಸರ್ತಾಜ್ ಅವರು ಬಾರತೀಯ ವಾಯುಪಡೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಅವರ ಕಿರಿಯ ಮಗ ದಾನೀಶ್ ಈ ಮತಾಂಧರ ಹಲ್ಲೆಗೆ ಒಳಗಾಗಿ ಆಸ್ಪತ್ರೆಯಲ್ಲಿ ಜೀವ ಮರಣದ ನಡುವೆ ಹೋರಾಡುತ್ತಿದ್ದಾರೆ..

ಈ ಹತ್ಯೆಯನ್ನು ಖಂಡಿಸುತ್ತಾ ಶಿವ ವಿಶ್ವನಾಥನ್ ಅವರು ಹಿಂಸೆಯು ಮನಸ್ಸಿನ ಭಾವನೆಗಳ ಅಭಿವ್ಯಕ್ತಿ. ಈ ಹಿಂಸೆಯು ವರ್ಗೀಕರಣದ ತರ್ಕವನ್ನು ಅನುಸರಿಸುತ್ತದೆ ಮತ್ತು ಐಡಿಯಾಲಜಿಯು ಇದನ್ನು ಛಲದಿಂದ ಸಮರ್ಥಿಸಿಕೊಳ್ಳುತ್ತದೆ, ಇದು ನನ್ನನ್ನು ಭಯಗೊಳಿಸುತ್ತದೆ. ಒಬ್ಬ ವ್ಯಕ್ತಿ ಸತ್ತಿದ್ದಾನೆ ಇಲ್ಲಿ ನಾವು ಬೀಫ್ ಕುರಿತಾಗಿ ಒಂದು ಬಗೆಯ ದೇಶಪ್ರೇಮವನ್ನು ಮುಖ್ಯವಾಗಿಟ್ಟುಕೊಂಡು ಚರ್ಚೆಯಲ್ಲಿ ತೊಡಗಿದ್ದೇವೆ. 50 ವರ್ಷದ ಮೊಹಮ್ಮದ್ ಅವರು ಕೊಲೆಗೀಡಾಗಿದ್ದಾರೆ. ಆದರೆ ಈ ಘಟನೆಯನ್ನು ಬಳಸಿಕೊಳ್ಳುತ್ತಿರುವ ಬಗೆಯು ಈ ದುಷ್ಕೃತ್ಯಕ್ಕೆ ಒಂದು ಬಗೆಯ ಕೇಡಿನ ಕವಚವನ್ನು ತೊಡಿಸಿದೆ. ಆಹಾರದ ತರ್ಕವು ಕೊಲೆಯ ತರ್ಕವಾಗಿ ವಿಶದಪಡಿಸಿದೆ.

ಒಂದು ಪವಿತ್ರವಾದ ಗೋವನ್ನು ರಕ್ಷಿಸಲು ನೀವು ಮನುಷ್ಯನ ಪವಿತ್ರತೆಯನ್ನು ನಿರಾಕರಿಸಬಹುದು ಮತ್ತು ಕೇವಲ ಅನುಮಾನದ ಅಂಶಗಳಿಂದಲೇ ಅವನನ್ನು ಕೊಲೆ ಮಾಡಬಹುದು. ಬಿಜೆಪಿ ರಾಜಕಾರಣಿಗಳು ಬಹಿರಂಗವಾಗಿ ರಂಗಕ್ಕೆ ಧುಮುಕಿ ಈ ಕೊಲೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ಪ್ರಧಾನ ಮಂತ್ರಿಯವರು ಮಾತ್ರ ಮೌನದಿಂದಿದ್ದಾರೆ. ಈ ಪೂರ್ವಸಂಕಲ್ಪದ ಮೌನವು ಈ ಚಿಂತಾದಾಯಕ ಪರಿಸ್ಥಿತಿಗೆ ಕೇಡಿನ ಸ್ಪರ್ಶವನ್ನು ನೀಡಿದೆ. ನರೇಂದ್ರ ಮೋದಿಯವರ ಮೌನವು ವಿಶ್ಲೇಷಣೆಗೆ ಯೋಗ್ಯವಾಗಿದೆ. ಈ ವ್ಯಕ್ತಿಯು ಹಿಂದೊಮ್ಮೆ ಮನಮೋಹನ್ ಸಿಂಗ್ ಅವರ ದೌರ್ಬಲ್ಯವನ್ನು ಗೇಲಿ ಮಾಡಿದ್ದರು. ಆದರೆ ಇಂದು ಸ್ವತಃ ತಾವೇ ಒಬ್ಬ ದೌರ್ಬಲ್ಯ ರಾಜಕಾರಣಿಯಾಗಿದ್ದಾರೆ. ಮೋದಿಯವರ ಈ ಮೌನವು ದುಖತಪ್ತವಾದ ಶೋಕದ ಮೌನವಲ್ಲ. ಭಂಡತನದಿಂದ ಕೂಡಿದ ಈ ಮೌನವು ಬಲಿಪಶುವಿಗೆ ಘನತೆಯನ್ನು ನಿರಾಕರಿಸುತ್ತದೆ. ಇಂಡಿಯಾದ ನಾಗರಿಕರಿಗಿಂತಲು ನೀವು ಹೆಚ್ಚಿನ ಭಾರತೀಯರು ಎಂದು ಅನಿವಾಸಿ ಭಾರತೀಯರಿಗೆ ಹೇಳುವ ಪ್ರಧಾನ ಮಂತ್ರಿಯು ಭಾರತದ ವಾಯುಪಡೆಯಲ್ಲಿ ಕೆಲಸ ಮಾಡುತ್ತಿರುವವನ ತಂದೆ ಕೊಲೆಯಾದಾಗ ಅದು ನಡೆದೇ ಇಲ್ಲವೆಂಬಂತೆ ಹಗಲುವೇಷದಿಂದ ವರ್ತಿಸುತ್ತಾರೆ. ಮೋದಿಯವರ ಈ ವರ್ತನೆಯು ದಾದ್ರಿ ಗ್ರಾಮದ ಈ ಘಟನೆಯು ಮುಝಫರ್ ನಗರದಷ್ಟೇ ಭಯಹುಟ್ಟಿಸುತ್ತದೆ ಎಂದು ಹೇಳುತ್ತಾರೆ.

ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಈ ಮೌನವು ತನ್ನನ್ನು ಯಾರೂ ಪ್ರಶ್ನಿಸುವಂತಿಲ್ಲ, ತಾನು ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯವಿಲ್ಲ ಎನ್ನುವ ಠೇಂಕಾರದಿಂದ ಕೂಡಿದೆ. ಈ ದೇಶಕ್ಕೂ ತಾನೂ ಏನನ್ನೂ ಉತ್ತರಿಸುವ ಅಗತ್ಯವಿಲ್ಲ ಎನ್ನುವಂತಿದೆ ಈ ವಿಶ್ವಾಸದ್ರೋಹದ ಮೌನ. ಆದರೆ ಮೋದಿಯವರ ಈ ಮರೆಮೋಸದ ಮೌನವನ್ನು ಅಣಕಿಸುವಂತೆ ಬಿಜೆಪಿ ಪಕ್ಷದ ನಾಯಕರು ಮಾತನಾಡುತ್ತಿದ್ದಾರೆ. ಮೋದಿ ಸರ್ಕಾರದ ಸಂಸ್ಕೃತಿ ಸಚಿವ ಮಹೇಶ್ ಶರ್ಮ ಅವರು “ಈ ಕೊಲೆಯು ಒಂದು ಆಕಸ್ಮಿಕ ಘಟನೆ, ಮನೆಯಲ್ಲಿ ಮಟನ್ ಅನ್ನು ಗೋಮಾಂಸವೆಂದು ತಪ್ಪಾಗಿ ಭಾವಿಸಿದೆ ಅಷ್ಟೇ. ಅಷ್ಟಕ್ಕೂ ಈ ಗುಂಪು ಸುದೈವಕ್ಕೆ ಅಕ್ಲೇಖ್ ಅವರನ್ನು ಮಾತ್ರ ಕೊಲೆ ಮಾಡಿದೆ, ಇದು ಕಮ್ಯುನಲ್ ಹತ್ಯೆ ಅಲ್ಲ, ಏಕೆಂದರೆ ಈ ಹತ್ಯೆ ಮಾಡಿದ ಗುಂಪು ಮನೆಯಲ್ಲಿದ್ದ 17 ವಯಸ್ಸಿನ ಮಗಳನ್ನು ಅತ್ಯಾಚಾರ ಮಾಡಲಿಲ್ಲ” ಎಂದು ವ್ಯಾಖ್ಯಾನಿಸಿದ್ದಾರೆ.

ಉ.ಪ್ರ.ದ ಪಶ್ಚಿಮ ಘಟಕದ ಬಿಜೆಪಿ ಉಪಾಧ್ಯಕ್ಷ ಶ್ರೀಚಂದ್ ಶರ್ಮ ಅವರು “ಬಲಿಪಶುವಾದ ಕುಟುಂಬವನ್ನು ಗೋಹತ್ಯೆDadri-lynching ನಿಷೇಧದ ಕಾನೂನಿನ ಅಡಿಯಲ್ಲಿ ಕೇಸು ದಾಖಲಿಸಬೇಕು” ಎಂದು ಹೇಳಿದ್ದಾರೆ. ಮುಜಫರ್ ನಗರದ ಕೋಮು ಗಲಭೆಯ ಆರೋಪಿ ಬಿಜೆಪಿ ಸಂಸದ ಸಂಗೀತ್ ಸೋಮ್ ಅವರು “ಒಂದು ಧರ್ಮದವರನ್ನು ಓಲೈಸಲು ಅಕ್ಲೇಖ್ ಅವರ ಕೊಲೆಯ ಹಿನ್ನಲೆಯಲ್ಲಿ ಅಮಾಯಕರನ್ನು ಬಂಧಿಸಿದರೆ ತಕ್ಕ ಉತ್ತರವನ್ನು ಕೊಡುತ್ತೇವೆ” ಎಂದು ಎಚ್ಚರಿಸಿದ್ದಾರೆ. ಆರೆಸೆಸ್ ಸಂಚಾಲಕ, ಬಿಜೆಪಿಯ ರಾಜ್ಯಸಭಾ ಸದಸ್ಯ ತರುಣ್ ವಿಜಯ್ ಅವರು “ಮೊಹ್ಮದ್ ಅಕ್ಲೇಖ್ ಬೀಫ್ ತಿಂದಿದ್ದಾರೆ ಎನ್ನುವ ಅನುಮಾನದ ಹಿನ್ನೆಲೆಯಲ್ಲಿ ಕೊಲೆಯಾಗಿದ್ದಾರೆ” ಎಂದು ಬರೆದಿದ್ದಾರೆ. ಈ ಮತೀಯವಾದಿ ಸಂಘ ಪರಿವಾರದ ನಾಯಕರು ಅಕ್ಲೇಖ್ ಅವರ ಕುಟುಂಬ ಬೀಫ್ ತಿಂದಿದ್ದಾರೆ ಎನ್ನುವ ಅನುಮಾನದ ಮೇಲೆ ಅವರ ಕೊಲೆಯಾಗಿದೆ. ಆದರೆ ಅವರ ಮನೆಯಲ್ಲಿ ಇದ್ದದ್ದು ಮಟನ್ ಎಂದು ಸಾಬೀತಾಗಿರುವುದರಿಂದ ಅಕ್ಲೇಖ್ ಅವರ ಕುಟುಂಬ ನಿರಪರಾಧಿಗಳು. ಆದರೆ ಇದು ಒಂದು ಆಕಸ್ಮಿಕ ಘಟನೆ ಎಂದು ಮುಚ್ಚಿ ಹಾಕುತ್ತಿದ್ದಾರೆ.

ಇಲ್ಲಿ ಸಂಘ ಪರಿವಾರದ ಕ್ರೌರ್ಯ ಯಾವ ಮಟ್ಟದಲ್ಲಿದೆಯೆಂದರೆ “ಒಂದು ವೇಳೆ ಅಕ್ಲೇಖ್ ಅವರ ಮನೆಯಲ್ಲಿರುವುದು ಬೀಫ್ ಎಂದು ಸಾಬೀತಾಗಿದ್ದರೆ ಈ ಕೊಲೆ ಸಮರ್ಥನೀಯವಾಗಿರುತ್ತಿತ್ತು” ಎನ್ನುವಂತಿದೆ. ಈ ಬೀಫ್ ತಿನ್ನುವದರ ವಿರುದ್ಧದ ಪ್ರತಿಭಟನೆಗಳನ್ನು 19ನೇ ಶತಮಾನದಲ್ಲಿ ಆರ್ಯ ಸಮಾಜದ ದಯಾನಂದ ಸರಸ್ವತಿ ಅವರು ಉದ್ಘಾಟಿಸಿದರು. ಇದು ಇಂದು ದಾದ್ರಿಯ ಅಕ್ಲೇಖ್ ಅವರ ಕೊಲೆಯವರೆಗೆ ಬಂದು ತಲುಪಿದೆ. ಈ ಮಧ್ಯದ ದಶಕಗಳಲ್ಲಿ ಅನೇಕ ಬಗೆಯ ಗೋಹತ್ಯ ನಿಷೇಧದ ಉದ್ರೇಕಕಾರಿ ಭಾಷಣಗಳು, ಬೀಫ್ ತಿನ್ನುವವರ ಮೇಲೆ ಹಲ್ಲೆ, ಕೊಲೆಗಳು ನಡೆದುಹೋಗಿವೆ. ರಾಷ್ಟ್ರೀಯವಾದದ ಫ್ರೇಮಿನಲ್ಲಿ ಮತೀಯವಾದ, ಬಹುಸಂಖ್ಯಾತ ತತ್ವ, ಪುರೋಹಿತಶಾಹಿಗಳೂ ಬೆರೆತು ಹೋಗಿವೆ.

ಈ ಸಂಘ ಪರಿವಾರದ ಮೂಲಭೂತವಾದದ ವರ್ತನೆಗಳು ಮತ್ತು ಕೋಮುವಾದದ ಫೆನಟಿಸಂ ಸಮಾಜದಲ್ಲಿ ಒಂದು ಬಗೆಯ ಕ್ರೌರ್ಯ ಮತ್ತು ಹಿಂಸೆಯನ್ನು ಹುಟ್ಟುಹಾಕಿದ್ದರೆ ಮತ್ತೊಂದೆಡೆ 2014ರಲ್ಲಿ ಅಭಿವೃದ್ಧಿ ಮತ್ತು ಎಲ್ಲರ ವಿಕಾಸ ಎನ್ನುವ ಸ್ಲೋಗನ್ನೊಂದಿಗೆ ಯುವ ಜನತೆ ಮತ್ತು ಮಧ್ಯಮವರ್ಗವನ್ನು ಮೋಸಗೊಳಿಸಿ ಅಧಿಕಾರಕ್ಕೆ ಬಂದ ಮೋದಿಯವರ ಒಂದು ವರ್ಷದ ಆಡಳಿತ ಸಂಪೂರ್ಣವಾಗಿ ಹತೋಟಿ ಕಳೆದುಕೊಂಡಿದೆ. ಆರಂಭದಿಂದಲೂ ಈ ಬಕಾಸುರ ಬಂಡವಾಳಶಾಹಿಯ ಆರಾಧಕ ಮೋದಿಯವರ ಅನುಸಾರ ಅಭಿವೃದ್ಧಿಯೆಂದರೆ ಉಪಭೋಗ ಸಂಸ್ಕೃತಿಯ ವೈಭವೀಕರಣ, ಸರಕನ್ನು ಕೊಳ್ಳಲು ಹಣದ ಗಳಿಕೆ ಮತ್ತು ಡಿಜಿಟಲ್ ಇಂಡಿಯಾ ಎನ್ನುವ ಪಾಶ್ಚಿಮಾತ್ಯ ತಂತ್ರಜ್ಞಾನದ ಆಮದು ಹೀಗೆ ಗೊತ್ತುಗುರಿಯಿಲ್ಲದೆ ಸಾಗುತ್ತದೆ. ಆರಂಭದಲ್ಲಿ ಅಬ್ಬರ ಪ್ರಚಾರದೊಂದಿಗೆ ಶುರುವಾದ ಜನಧನ ಯೋಜನೆಯಡಿಯಲ್ಲಿ ಬಹುಪಾಲು ಬ್ಯಾಂಕುಗಳಲ್ಲಿ ಶೂನ್ಯ ಖಾತೆಗಳಿದ್ದರೆ, ಒಂದು ವರ್ಷದ ನಂತರವೂ ಸ್ವಚ್ಛ ಭಾರತ ಯೋಜನೆಯು ಇನ್ನೂ ಪ್ರಾರಂಭದ ಹಂತದಲ್ಲೇ ಮಲಗಿದೆ ಮತ್ತು ಇದರಲ್ಲಿ ಭಾಗವಹಿಸಿದ ರಾಜಕಾರಣಿಗಳ ಬಂಡವಾಳವೂ ಬಯಲಾಗಿದೆ.

ಅತ್ಯಂತ ಅಬ್ಬರದ ಮಾರ್ಕೆಟಿಂಗ್ ನಿಂದ ಪ್ರಚಾರಗೊಳ್ಳುತ್ತಿರುವ ‘ಡಿಜಿಟಲ್ ಇಂಡಿಯಾ’ ಎನ್ನುವ ಇ ಆಡಳಿತದ ಆಶಯಗಳು ಫೇಸ್ಬುಕ್ ನ ಇಂಟನರನೆಟ್.ಆರ್ಗ್ ನೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎನ್ನುವ ಅಪಾದನೆಗಳ ಜೊತೆಗೆ ಇಲ್ಲಿನ ಬಳಕೆದಾರರಿಗೆ ಅನೇಕ ಬಗೆಯಲ್ಲಿ ನಿರ್ಬಂಧನೆಗಳನ್ನು ಒಡ್ಡುತ್ತದೆ ಮತ್ತು ಅವರ ವೈಯುಕ್ತಿಕ ಸ್ವಾತಂತ್ರವನ್ನು ಮೊಟಕುಗೊಳಿಸುತ್ತದೆ. ಅಂಗುಶ್ಕಾಂತ ಅವರು “ದುಖತಪ್ತ ಮೊಹಮ್ಮದ್ ಅಕ್ಲೇಖ್ ಕುಟುಂಬಕ್ಕೆ ಈ ಡಿಜಿಟಲ್ ಇಂಡಿಯಾ ಯಾವ ಉಪಕಾರವನ್ನು ಮಾಡಿದೆ? ವಾಟ್ಸ್ಅಪ್, ಫೇಸ್ ಬುಕ್, ಟಿಟ್ಟರ್ ನಂಹ ಸಾಮಾಜಿಕ ಜಾಲತಾಣಗಳು ಯಾವ ಬಗೆಯಲ್ಲಿ ಸರ್ತಾಜ್ ಅವರನ್ನು ಡಿಜಿಟಲ್ ಇಂಡಿಯಾದ ಮೂಲಕ ನ್ಯಾಯವನ್ನು ಒದಗಿಸಬಲ್ಲವು? ಯುವ ಮಹಿಳೆಯು ತನ್ನ ಕೆಲಸದ ಜಾಗದಲ್ಲಿ ದಿನನಿತ್ಯ ಅನುಭವಿಸುವ ತಾರತಮ್ಯ ಮತ್ತು ಶೋಷಣೆಗೆ ಈ ಅಭಿವೃದ್ಧಿ ಈ ಮೇಲಿನ ಬಗೆಯದಾಗಿ ಸ್ಪಂದಿಸುತ್ತದೆ ಎನ್ನುವ ಸತ್ಯಸಂಗತಿಯು ಕೊಲೆಯಾದ ಅಕ್ಲೇಖ್ ನ ಪಾಲಿಗೂ ಸಹ ಸತ್ಯವಾಗಿರುತ್ತದೆ’ ಎಂದು ಹೇಳುತ್ತಾರೆ.

ಸಂಘ ಪರಿವಾರದ ಬ್ರಾಹ್ಮಿನಿಸಂ ಮತ್ತು ಮೋದಿಯವರ ಕ್ಯಾಪಿಟಲಿಸಂ ಎರಡೂ ಸಸ್ಯಾಹಾರ ಮತ್ತುgujarat_violence_1 ಮಾಂಸಾಹಾರವನ್ನು ದೇಶಪ್ರೇಮ ಆಧಾರದಲ್ಲಿ ವರ್ಗೀಕರಿಸಿದೆ. ಮಾಂಸಹಾರಿಯು ದೇಶದ್ರೋಹಿ ಎನ್ನುವ ತಾರ್ಕಿಕ ಅಂತ್ಯಕ್ಕೆ ಮುಟ್ಟಲು ತನ್ನ ಫ್ಯಾಸಿಸಂ ಚಟುವಟಕೆಗಳ ಮೂಲಕ ಸಂಘ ಪರಿವಾರವು ಪ್ರಜಾಪ್ರಭುತ್ವದ ಬುನಾದಿಯನ್ನು ಭಗ್ನಗೊಳಿಸುತ್ತಿದೆ. ಇಂದು ಅಹಾರವನ್ನು ಬಳಸಿಕೊಂಡು ಅಲ್ಪಸಂಖ್ಯಾತರನ್ನು, ದಲಿತರನ್ನು ಕೊಲೆಯ ತರ್ಕದಲ್ಲಿ ಅಂತ್ಯಗೊಳಿಸುವುದನ್ನು ದಾದ್ರಿ ಗ್ರಾಮದ ಹಿಂಸೆಯ ಮೂಲಕ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಇಲ್ಲಿ ಬಾಬರಿ ಮಸೀದಿಯ ಧ್ವಂಸ ಮತ್ತು ಆ ಮೂಲಕ ನಡೆದ ಹತ್ಯೆಗಳು, 2002ರ ಗುಜರಾತ್ ಗಲಭೆ ಮತ್ತು ಹತ್ಯಾಕಾಂಡದ ನಂತರ ಇಂದು ದಾದ್ರಿ ಕೊಲೆಯು ಆಹಾರವೂ ಒಂದು ಸಂಕೇತವಾಗಿಯೂ ಆ ಮೂಲಕ ಅಲ್ಪಸಂಖ್ಯಾತರು ಮತ್ತು ತಳಸಮುದಾಯಗಳ ವಿರುದ್ಧ ಬುಹುಸಂಖ್ಯಾತ ಧರ್ಮದ ಹಿಂಸೆಗೆ ಯಾವುದೇ ಪ್ರತಿಬಂಧವಿಲ್ಲ ಮತ್ತು ನ್ಯಾಯಾಂಗದ ಹಂಗೂ ಇಲ್ಲವೆಂದು ಸಾಬೀತುಪಡಿಸುತ್ತದೆ. ಏಕೆಂದರೆ 2002ರಲ್ಲಿ ಹರ್ಯಾಣದ ಜಾಜ್ಜರ್ ಗ್ರಾಮದಲ್ಲಿ ದನವನ್ನು ಕೊಂದು ಮಾಂಸವನ್ನು ಸುಲಿಯುತ್ತಿದ್ದಾರೆ ಎನ್ನುವ ಅನುಮಾನದ ಮೇಲೆ 5 ದಲಿತರನ್ನು ಸಜೀವವಾಗಿ ಹತ್ಯೆ ಮಾಡಿದ್ದರು. ದಲಿತ ಯುವಕನೊಬ್ಬ ದೇವಸ್ಥಾನ ಪ್ರವೇಶಕ್ಕೆ ಯತ್ನಿಸಿದಾಗ ಅವನನ್ನು ಜೀವಂತವಾಗಿ ಬೆಂಕಿ ಹಚ್ಚಿ ಸಾಯಿಸಿದರು. ಇದು ನಿಜಕ್ಕೂ ಘೋರವಾದ ದಿನಗಳು. ಇಲ್ಲಿನ ‘ಅನುಮಾನಿತರು’ ಮತ್ತು ‘ಅವಮಾನಿತರ’ ಬದುಕು ಬಹುಸಂಖ್ಯಾತ ಹಿಂದೂಗಳ ಹಂಗಿನಲ್ಲಿದೆ ಎನ್ನುವ ವ್ಯವಸ್ಥೆಯನ್ನು ಸೃಷ್ಟಿಸುತ್ತಿರುವ ಸಂಘ ಪರಿವಾರ ತಮ್ಮ ಪುರೋಹಿತಶಾಹಿ ತತ್ವಗಳನ್ನು ಉಲ್ಲಂಘಿಸಿದವರನ್ನು ಸದೆಬಡೆಯಲು ತನ್ನ ಯುವಪಡೆಗೆ ಹತ್ಯಾರಗಳನ್ನು ಕೊಟ್ಟು ಹಲ್ಲೆ, ಕೊಲೆ, ಅತ್ಯಾಚಾರಕ್ಕೆ ಪ್ರಚೋದಿಸುತ್ತಿದೆ. ಮತ್ತೊಂದು ದೊಡ್ಡ ವ್ಯಂಗವೆಂದರೆ ಇದನ್ನು ಖಂಡಿಸುತ್ತಿರುವ ಕೆಲವೇ ಬಿಜೆಪಿ ನಾಯಕರು ಈ ಕೊಲೆಯಿಂದ ಮೋದಿಯವರ ಅಭಿವೃದ್ಧಿ ಯೋಜನೆಗಳಿಗೆ ಧಕ್ಕೆ ಉಂಟಾಗುತ್ತದೆ, ವಿದೇಶಗಳಲ್ಲಿ ಭಾರತದ ಮಾನ ಹರಾಜಾಗುತ್ತದೆ ಎಂದು ಗೋಳಿಡುತ್ತಿದ್ದಾರೆ.

ಆದರೆ ದುರಂತವೆಂದರೆ ಕಳೆದ 10 ವರ್ಷಗಳಲ್ಲಿ ಬಂಡವಾಳಶಾಹಿಗಳ ಅಭಿವೃದ್ಧಿಯನ್ನು ಸಾಧಿಸಿದ ಗುಜರಾತ್ ನಲ್ಲಿ ಕೋಮುವಾದಿ ಶಕ್ತಿಗಳು ಇಂದಿಗೂ ಬಲಶಾಲಿಯಾಗಿವೆ. ಧರ್ಮಗಳು ಸಂಪೂರ್ಣವಾಗಿ ಧೃವೀಕರಣಗೊಂಡು ಬಹುಸಂಖ್ಯಾತ ತತ್ವದ ಫೆನಟಿಸಂ ಮೇಲುಗೈ ಸಾಧಿಸಿದೆ. ಇದು ಮೋದಿ ಮಾದರಿಯ ಅಭಿವೃದ್ಧಿಗೆ ಜೀವಂತ ಸಾಕ್ಷಿ. ಏಕೆಂದರೆ ಈ ಮೋದಿ ಮಾದರಿಯ ಅಭಿವೃದ್ಧಿಯ ಪ್ರಭುತ್ವದಲ್ಲಿ ಫ್ಯಾಸಿಸಂ ಮತ್ತು ಮತೀಯವಾದ ಪ್ರಜಾಪ್ರಭುತ್ವದಲ್ಲಿ ಕರಗಿ ಹೋಗುವುದಿಲ್ಲ. ಇವು ಮತ್ತಷ್ಟು ಗಟ್ಟಿಗೊಳ್ಳುತ್ತವೆ. ಧಾರ್ಮಿಕ ಮೂಲಭೂತವಾದದ ಅರಾಜಕತೆ ತುಂಬಿಕೊಳ್ಳುತ್ತದೆ. ಏಕೆಂದರೆ ಮೋದಿ ಮತ್ತವರ ಸಚಿವರು ಇದೇ ಆರೆಸೆಸ್ ನ ನೀರು ಕುಡಿದು ಬೆಳೆದವರು. ಅದರ ಎಲ್ಲಾ ಮತೀಯವಾದಿ ಚಿಂತನೆಗಳನ್ನು ಅರಗಿಸಿಕೊಂಡ ಸ್ವಯಂಸೇವಕರು. ಇವರೆಲ್ಲಾ ತಂತ್ರಜ್ಞಾನದ ಅಭಿವೃದ್ಧಿ, ಡಿಜಿಟಲ್ ಇಂಡಿಯಾ ಎಂದು ಮಾತನಾಡತೊಡಗಿದಾಗ ಅದು ಕೋಮುವಾದಿ ಪ್ರಚೋದನೆಗಳನ್ನು, ಉದ್ರೇಕಕಾರಿ ಭಾಷಣಗಳನ್ನು, ಧಾರ್ಮಿಕ ಫೆನಟಿಸಂ ಅನ್ನು ಪ್ರಚಾರ ಮಾಡುವ ತಂತ್ರಜ್ಞಾನವಾಗಿರುತ್ತದೆ. ಮೋದಿ ಅಭಿವೃದ್ಧಿ ತರಲು ಬಯಸಿರುವ ವಾಟ್ಸ್ ಅಪ್, ಟ್ವಟ್ಟರ್, ಫೇಸ್ಬುಕ್ ತಂತ್ರಜ್ಞಾನದಲ್ಲಿ ಬೀಫ್ ತಿನ್ನುವವರ, ಮಾಂಸಹಾರಿಗಳ ವಿರುದ್ಧ ಪ್ರಚೋದನಕಾರಿ ಬೋಧನೆಗಳು, ಇಸ್ಲಾಂ ಧರ್ಮದ ವಿರುದ್ಧ ನಿರಂತರ ವಾಗ್ದಾಳಿಗಳು ಮುಂತಾದ ಹಿಂದು ರಾಷ್ಟ್ರೀಯತೆಯ ಕೂಗುಮಾರಿತನವು ನಿರಂತರವಾಗಿ ಪ್ರಸಾರವಾಗುತ್ತಿರುತ್ತವೆ.

ಈ 56 ಇಂಚಿನ ಎದೆಯ ಪ್ರಧಾನ ಮಂತ್ರಿಯವರ ಆಡಳಿತದಲ್ಲಿ ಪ್ರಜಾಪ್ರಭುತ್ವ, ಮಾನವೀಯತೆ, ಮಾನವತವಾದDadri_Lynching_Sartaz ಮಣ್ಣುಗೂಡುತ್ತವೆ ಮತ್ತು ಇಂದು ಆಗುತ್ತಿರುವುದೂ ಇದೇ. ಈ ಮೋದಿ ಮತ್ತು ಅವರ ಸಂಘ ಪರಿವಾರ ಹಿಂಸೆಗೆ ಹೊಸ ಹೊಸ ಭಾಷ್ಯೆಗಳನ್ನು ಬರೆಯುತ್ತಿದ್ದಾರೆ. ಶಿವ ವಿಶ್ವನಾಥನ್ ಅವರು “ಮೋದಿ ಕೋಮುವಾದದ ತಿಳುವಳಿಕೆಗೆ ಯಾವುದೇ ಕೊಡುಗೆಯನ್ನು ನೀಡಿಲ್ಲ. ಆದರೆ ಮೋದಿಯವರು ಹಿಂಸೆಯ ಭಾಷೆಗಳಿಗೆ ಕೊಡುಗೆಯನ್ನು ನೀಡಿದ್ದಾರೆ” ಎಂದು ಹೇಳಿದ್ದಾರೆ. ಆದರೆ ಈ ಕೊಲೆಗಡುಕರ ಗುಂಪಿಗೆ ಮತ್ತು ಈ ಹಿಂದೂ ರಾಷ್ಟ್ರೀಯವಾದಿಗಳಿಗೆ ಅಕ್ಲೇಖ್ ಅವರ ಮಗ ಪ್ರತಿಕ್ರಯಿಸುತ್ತಾ “ಕೆಲ ದುಷ್ಟಶಕ್ತಿಗಳು ತಮ್ಮ ತಂದೆಯನ್ನು ಹತ್ಯೆ ಮಾಡಿದ್ದಾರೆ, ಅವರಿಗೆ ಶಿಕ್ಷೆ ಆಗಲೇಬೇಕು, ಸಾರೇ ಜಹಾ ಸೆ ಅಚ್ಛಾ ಹಿಂದುಸ್ತಾನ್ ಹಮಾರಾ” ಎಂದು ಅತ್ಯಂತ ಘನತೆಯಿಂದ ನುಡಿದ. ಅಕ್ಲೇಖ್ ಅವರ ಕುಟುಂಬ ಅತ್ಯಂತ ಮಾನವೀಯತೆ, ಬುದ್ಧನ ಕರುಣೆಯಿಂದ ತಮ್ಮ ಘನತೆಯನ್ನು, ಜೀವಪರ ಗುಣಗಳ ಮೂಲಕ ಈ ಕೊಲೆಗಡುಕರಿಗೆ ಉತ್ತರಿಸಿದ್ದಾರೆ. ಆದರೆ ನಾವು ???

ಗಾಂಧಿ ಜಯಂತಿ ಕಥಾಸ್ಪರ್ಧೆ 2015 : ತೀರ್ಪುಗಾರರ ಮಾತು

– ಭಾರತೀದೇವಿ.ಪಿ

  • ಮೊದಲ ಬಹುಮಾನ : “ಪಯಣ” – ಶಾಂತಿ.ಕೆ.ಎ
  • ಎರಡನೆಯ ಬಹುಮಾನ : “ಹಾಳು ಸುಡುಗಡ ಬದುಕು” – ಹನುಮಂತ ಹಾಲಿಗೇರಿ
  • ಮೂರನೆಯ ಬಹುಮಾನ : “ಮನ್ವಂತರ” – ಸಂವರ್ಥ ಸಾಹಿಲ್
  • ಪ್ರೋತ್ಸಾಹಕ ಬಹುಮಾನಗಳು :
    • ಪಾಕಿಸ್ಥಾನದಿಂದ ಪತ್ರ” – ಮಹಾಂತೇಶ್ ನವಲ್ಕಲ್
    • ಉಡುಗೊರೆ” – ಸ್ವಾಲಿಹ್ ತೋಡಾರ್

ವರ್ತಮಾನ ನಡೆಸುವ “ಗಾಂಧಿ ಜಯಂತಿ ಕಥಾ ಸ್ಪರ್ಧೆ”ಗೆ ಬಂದ ಒಟ್ಟು 23 ಕತೆಗಳನ್ನು ಓದುವಾಗ ನನಗೆ ತೀವ್ರವಾಗಿ ಕಾಡಿದ್ದು ಕತೆಗಳ ಕುರಿತಾದ ನಮ್ಮ ಪೂರ್ವಗ್ರಹೀತಗಳು ಯಾವ ಯಾವ ಬಗೆಯಲ್ಲಿ ನಮ್ಮ ಪ್ರಜ್ಞೆಯಲ್ಲಿ ಬೇರೂರಿಬಿಟ್ಟಿವೆ ಮತ್ತು ಆ ಜಾಡಿನಲ್ಲಿ ಕತೆಗಾರ ಹೇಗೆ ಸಿಕ್ಕಿ ಹಾಕಿಕೊಂಡಿದ್ದಾನೆ ಎಂಬ ಸಂಗತಿಗಳು. ಕಾರಂತ, ತೇಜಸ್ವಿ, ಕುಂ.ವೀ, ವೈದೇಹಿ ಮೊದಲಾದವರ ಕಥಾಹಂದರಗಳು ಸರಳೀಕರಣಗೊಂಡು ಇಲ್ಲಿನ ಹಲವು ಕತೆಗಳಲ್ಲಿ ಕಾಣಿಸಿಕೊಂಡಿವೆ.

ಅನುಭವಗಳ ದಟ್ಟತೆ ಇದ್ದ ಮಾತ್ರಕ್ಕೆ ಒಂದು ನೆರೇಷನ್ ಕತೆಯಾಗಿಬಿಡುತ್ತದೆಯೇ? ಕತೆಯೆಂದ ಕೂಡಲೇ ವರ್ತಮಾನಕ್ಕೆ ಮುಖಾಮುಖಿಯಾಗುವುದಕ್ಕಿಂತ ಹೆಚ್ಚಾಗಿ ಬಾಲ್ಯದ, ಗ್ರಾಮ್ಯ ಜಗತ್ತಿಗೆ ಉತ್ಸಾಹದಿಂದ ಹೊರಳುವುದನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ವಿಶಿಷ್ಟ ಸೊಗಡಿನ ಭಾಷೆಯಿದ್ದ ಮಾತ್ರಕ್ಕೆ ಕತೆ ಶ್ರೀಮಂತವಾಗಿಬಿಡುತ್ತದೆಯೇ? ಪೂರ್ವನಿರ್ಧರಿತ ವಿಷಯಗಳನ್ನು gandhi-katha-spardge-2015ತಿಳಿಯಪಡಿಸುವುದಕ್ಕೆ ಕತೆಯ ಹಂದರವನ್ನು ಹೆಣೆಯುವುದು ಕತೆಯ ಸಾಧ್ಯತೆಯನ್ನೇ ಕುಂಠಿತಗೊಳಿಸುವುದಿಲ್ಲವೇ? ಐಡಿಯಾಲಜಿಯನ್ನು ತಿಳಿಯಪಡಿಸುವುದಕ್ಕೆ ಹೆಣೆಯುವ ಕತೆಯ ಆವರಣ ಸೃಜನಶೀಲ ಬರಹದ ಸೀಮೆಗಳನ್ನು ನಿರ್ಬಂಧಿಸುವುದಿಲ್ಲವೇ?

ಹೀಗೆ ನೋಡಿದಾಗ ಕತೆಯ ಕಸುಬುಗಾರಿಕೆ ಸಿದ್ಧಿಸಿಕೊಂಡು ಪ್ರಜ್ಞಾಪೂರ್ವಕವಾಗಿ ಹೆಣೆದ ಕತೆಗಳಿಗಿಂತ ತುಸು ಒರಟು, ಹಸಿ ಎನಿಸಿದರೂ ಬದುಕಿನ ಅನಂತ ಸಾಧ್ಯತೆಗಳ ಕಿಟಕಿಯನ್ನು ತೆರೆದೇ ಇರಿಸಿಕೊಂಡ ಕತೆಗಳು ಆಪ್ತವಾಗುತ್ತವೆ. ಕತೆಯನ್ನು ಹೇಳುವ ಪ್ರಕ್ರಿಯೆಯಲ್ಲೇ ಕತೆ ಮತ್ತು ಕತೆಗಾರ ಜೊತೆಜೊತೆಗೇ ತಮಗೇ ಅರಿಯದ ಬದುಕಿನ ಅಜ್ಞಾತಗಳನ್ನು ತಟ್ಟುತ್ತಾ ಸಾಗುವ ಕ್ರಿಯೆ ಎಲ್ಲೆಲ್ಲಿ ಕಾಣುತ್ತದೋ ಅಂತಹ ಕತೆಗಳು ಓದುಗನಿಗೂ ಬದುಕಿನ ಸಂಕೀರ್ಣತೆಯ ದರ್ಶನ ಮಾಡಿಸುತ್ತವೆ. ಅವು ಪ್ರಾದೇಶಿಕತೆ, ವ್ಯಕ್ತಿ, ತತ್ವಗಳ ಮೇರೆ ಮೀರಿ ಎಲ್ಲರ ಕತೆಗಳೂ ಆಗಿಬಿಡುತ್ತವೆ. ಈ ದಿಕ್ಕಿನಲ್ಲಿ ಇಲ್ಲಿನ ಕೆಲವು ಕತೆಗಳು ಇವೆ.

ಸ್ಪರ್ಧೆಗೆ ಬಂದಿರುವ ಒಟ್ಟು 23 ಕತೆಗಳಲ್ಲಿ ಪ್ರಥಮ ಬಹುಮಾನ ಗಳಿಸಿದ ಕತೆ ಶಾಂತಿ.ಕೆ.ಎ ಅವರ ‘ಪಯಣ’. ಬದುಕಿನ ಸಂಕೀರ್ಣತೆ ಸಮಾಜದ ಸೀಮಿತ ನೈತಿಕ ಸೀಮೆಗಳನ್ನು ಮೀರಿದ್ದು. ಯಾವ ತೀರ್ಮಾನ, ಪಶ್ಚಾತ್ತಾಪ ಅಥವಾ ಹಲುಬುವಿಕೆಗಳಿಲ್ಲದೆ ಬದುಕಿನ ವರ್ತಮಾನವನ್ನು ತೀವ್ರವಾಗಿ ಅನುಭವಿಸುವ ಬಗೆ ಈ ಕತೆಯಲ್ಲಿ ಮೂಡಿದೆ. ಇದು ಒಂದು ಬಗೆಯ ಎಚ್ಚರದ ಕನಸು. ಇದನ್ನು ಕಥನವಾಗಿಸುವ ಪ್ರಕ್ರಿಯೆಯಲ್ಲಿ ಅವರ ಭಾಷಾ ಬಳಕೆಯ ಸೂಕ್ಷ್ಮತೆ ಮತ್ತು ಎಚ್ಚರ ವಿಶಿಷ್ಟವಾಗಿದೆ.

ಎರಡನೇ ಬಹುಮಾನ ಗಳಿಸಿದ ಹನುಮಂತ ಹಾಲಿಗೇರಿ ಅವರ ‘ಹಾಳು ಸುಡುಗಾಡ ಬದುಕು’ ಕತೆ ವಿವರಗಳ ಮೂಲಕ ಅನುಭವವನ್ನು ತೀವ್ರವಾಗಿ ಕಟ್ಟಿಕೊಡುತ್ತದೆ.  ಬದುಕು ಮತ್ತು ಧರ್ಮಗಳ ಅಸ್ತಿತ್ವದ ಹೊಯ್ದಾಟದಲ್ಲಿ ಹೆಣ ಸುಡುವ ಕಾಯಕ ನಡೆಸುವ ದರಿಯಜ್ಜನಂಥವರ ಬದುಕು ಚಿಂದಿಯಾಗುವುದನ್ನು ಕತೆ ಪರಿಣಾಮಕಾರಿಯಾಗಿ ಹೇಳುತ್ತದೆ. ಹೆಚ್ಚು ಸಂಕೀರ್ಣತೆಗೆ ವಾಲದೇ ದಟ್ಟ ವಿವರಗಳೇ ಈ ಕತೆಯ ಶಕ್ತಿಯಾಗಿದೆ.

ಮೂರನೇ ಬಹುಮಾನ ಗಳಿಸಿದ ಸಂವರ್ಥ ಸಾಹಿಲ್ ಅವರ ಕತೆ ‘ಮನ್ವಂತರ’ ಹಲವು ನೆಲೆಗಳಲ್ಲಿ ಬದುಕಿನ ಚಲನೆಯ ಗತಿಗೆ ಸೂಕ್ಷ್ಮವಾಗಿ ಪ್ರತಿಕ್ರಯಿಸುತ್ತದೆ. ಹಿಂದಿನ ತಲೆಮಾರಿನ ಜೀವ ಬದಲಾದ ಗತಿಗೆ ಸ್ಪಂದಿಸುತ್ತಾ, ಜೊತೆಗಿರುವವರ ಬಗ್ಗೆ ವಿಮರ್ಶಾತ್ಮಕವಾಗಿ ಇರುತ್ತಲೇ ಕೆಲವೊಂದು ವಿಚಾರಗಳಲ್ಲಿ ಹಳೆಯ ಜಾಡನ್ನು ಬಿಡದೆ ಒದ್ದಾಡುವ ಬಗೆಯನ್ನು ಸಂವರ್ಥ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಇವರ ಜೊತೆ ಇವರಂತೆಯೇ ಭಿನ್ನ ಭಿನ್ನ ಗತಿಯಲ್ಲಿ ಸ್ಥಿತ್ಯಂತರಗಳಿಗೆ ಒಡ್ಡಿಕೊಳ್ಳುವ ಹಿರಿಯ, ಯುವ ಜೀವಗಳಿವೆ. ಈ ತೊಳಲಾಟಗಳನ್ನು, ಚಲನೆಯನ್ನು ದಾಖಲಿಸುವಲ್ಲಿ ಭಾಷೆಯ ಬಳಕೆ ಇನ್ನಷ್ಟು ಸೂಕ್ಷ್ಮವಾಗಿದ್ದರೆ ಕತೆಗೆ ವಿಸ್ತಾರವಾದ ಆಯಾಮ ದೊರೆಯುತ್ತಿತ್ತು. ಪಾತ್ರಗಳ ಸರಳೀಕರಣವಾಗುವುದು ತಪ್ಪುತ್ತಿತ್ತು.

ಮಹಾಂತೇಶ ನವಲ್‍ಕಲ್ ಅವರ ‘ಪಾಕಿಸ್ತಾನದಿಂದ ಪತ್ರ’ ದೇಶ ಇಬ್ಭಾಗವಾದಾಗ ಮನಸ್ಸುಗಳೂ ಒಡೆಯುತ್ತಾ ಹೇಗೆ ಸಹಜ ಮನುಷ್ಯ ಸಂಬಂಧಗಳ ಬಗೆಗೂ ಸಂವೇದನೆ ಕಳೆದುಕೊಂಡಿವೆ ಎಂಬುದನ್ನು ಹೇಳುತ್ತದೆ. ಮನಮುಟ್ಟುವಂತೆ ಕತೆಯ ನಿರೂಪಣೆ ಇದ್ದರೂ ಅದು ಕಾಣದ ದಾರಿಗಳನ್ನು ತಡಕುವ ಯತ್ನ ಮಾಡುವುದಿಲ್ಲ.

ಸ್ವಾಲಿಹ್ ತೋಡಾರ್ ಅವರ ‘ಉಡುಗೊರೆ’ ಹೊಟ್ಟೆಪಾಡಿಗಾಗಿ ಪರದೇಶದಲ್ಲಿ ಏನೆಲ್ಲ ಪಾಡು ಪಡುವ ಪುಡಿಮೋನು ಅರಬ್ ದೇಶಗಳ ಆಂತರಿಕ ಸಂಘರ್ಷಗಳಿಂದ ಬದುಕುವ ದಾರಿ ಕಳೆದುಕೊಂಡು ಊರಲ್ಲೂ ನೆಲೆ ಕಾಣದೆ ನಲುಗುವ ಕತೆ. ಧರ್ಮ, ಸ್ವಾರ್ಥಗಳ ಮೇಲಾಟದಲ್ಲಿ ಪುಡಿಮೋನುವಿನಂತಹ ಬಡವರ ಬದುಕು ಮೂರಾಬಟ್ಟೆಯಾಗುವುದು, ಪುಡಿಮೋನು ಉಳ್ಳವರನ್ನು ಅನುಕರಿಸ ಹೋಗಿ ಕೈಲಿದ್ದ ಅಲ್ಪಸ್ವಲ್ಪವನ್ನೂ ಕಳೆದುಕೊಳ್ಳುವುದು ಇವೆಲ್ಲವೂ ಓದುವಾಗ ವಿಷಾದ ಮೂಡಿಸುತ್ತದೆ. ಈ ಕತೆ ಓದುವಾಗ ಹಲವು ಕತೆಗಳ ನೆರಳು ಕಾಣುವುದು ಸುಳ್ಳಲ್ಲ.

ಇವು ಒಬ್ಬ ಸಾಹಿತ್ಯದ ವಿದ್ಯಾರ್ಥಿಯಾಗಿ ಇಲ್ಲಿನ ಕತೆಗಳನ್ನು ಓದಿದಾಗ ನನಗನಿಸಿದ ಸಂಗತಿಗಳು. ಕತೆಗಳ ಬಗ್ಗೆ ಹಿಂದೆಂದಿಗಿಂತ ಹೆಚ್ಚು ತಲೆಕೆಡಿಸಿಕೊಳ್ಳಲು ಕಾರಣವಾದ ಹಾಗೂ ವಿಭಿನ್ನ ಅನುಭವಗಳಿಗೆ ಒಡ್ಡಿಕೊಳ್ಳುವ ಅವಕಾಶವನ್ನು ಕತೆಗಳ ಓದಿನ ಮೂಲಕ ನೀಡಿದ ಎಲ್ಲ ಕತೆಗಾರರಿಗೆ ನಾನು ಆಭಾರಿ.