Monthly Archives: October 2015

ಭಾರತದ ಕುಲತಿಲಕರ ಪರಾಮರ್ಶೆ : ಭಾಗ 3


– ಶ್ರೀಧರ್ ಪ್ರಭು


ತಳಸಮುದಾಯ ಮತ್ತು ಮಹಿಳಾ ಶಿಕ್ಷಣದಿಂದ ರಾಷ್ಟ್ರೀಯತೆ ಸಂಪೂರ್ಣ ನಾಶವಾಗುತ್ತದೆ ಎಂದು ಟಿಳಕರು ಬಲವಾಗಿ ನಂಬಿದ್ದರು. ಆದ್ದರಿಂದಲೇ ಅವರು ಫುಲೆ-ಅಂಬೇಡ್ಕರರ ಶೂದ್ರ-ದಲಿತ ಮತ್ತು ಮಹಿಳಾ ಪರ ಹೋರಾಟಗಳು ರಾಷ್ಟ್ರ ವಿರೋಧಿ ಎಂಬ ಖಚಿತ ಅಭಿಪ್ರಾಯಕ್ಕೆ ಬಂದಿದ್ದರು. ಒಂದಷ್ಟು ವರ್ಷಗಳ ಕಾಲ ರಾಜಕೀಯ ಅಧಿಕಾರ ಕಳೆದುಕೊಂಡ ವೈದಿಕ ವರ್ಗಗಳು ಮದ್ದು ಗುಂಡು ಸಹಿತ ಹೋರಾಟ ಮಾಡಿದ್ದನ್ನು ಸಮರ್ಥಿಸಿಕೊಂಡ ಟಿಳಕರಿಗೆ ಸಾವಿರಾರು ವರ್ಷಗಳಿಂದ ಪಶುಗಳಿಗಿಂತ ತುಚ್ಚ ಜೀವನ ನಡೆಸಿದ ಶೂದ್ರ-ದಲಿತರ ಸಾತ್ವಿಕ ಅಕ್ರೋಶದಲ್ಲಿ ಸತ್ವ ಕಾಣಿಸಲಿಲ್ಲ.

ಹೇಗೆ ಟಿಳಕರು ಸಾಮಾಜಿಕ ಕ್ರಾಂತಿಯನ್ನು ವಿರೋಧಿಸಿದರೋ ಹಾಗೆಯೇ ಕಾರ್ಮಿಕ ಚಳುವಳಿಗಳನ್ನೂ ವಿರೋಧಿಸಿದರು. ೧೯೦೮ ರ ಮುಂಬೈ ಗಿರಣಿ ಕಾರ್ಮಿಕರ ಹೋರಾಟ ಬಿಟ್ಟರೆ ೧೯೨೦ ರ ವರೆಗೂ ಯಾವ ಕಾರ್ಮಿಕ ಹೋರಾಟಗಳನ್ನೂ ಟಿಳಕರು ಸಂಘಟಿಸಲಿಲ್ಲ. ೧೯೦೯ ರಿಂದ ೧೯೨೦ ರ ವರೆಗೆ ಕಲ್ಲು ಎಸೆದರೆ ಹೋಗಿ ಬೀಳುವಷ್ಟು ದೂರದಲ್ಲಿದ್ದ ಮುಂಬೈಗೆ ಒಂದೆರಡು ಬಾರಿ ಮಾತ್ರ ಹೋಗಿದ್ದು ಬಿಟ್ಟರೆ, bal-gangadhar-tilakಕಾರ್ಮಿಕ ಸಂಘರ್ಷಗಳ ಕುಲುಮೆಯಾಗಿದ್ದ ಮುಂಬೈ ಕಾರ್ಖಾನೆಗಳು, ಕಾರ್ಮಿಕ ಬಸ್ತಿಗಳಿಗೆ ಟಿಳಕರು ಹೋಗಲೇ ಇಲ್ಲ. ನವೆಂಬರ್ ೧೯೧೯ ನವೆಂಬರ್ ನಲ್ಲಿ ಒಮ್ಮೆ ತೀರ ಮುಲಾಜಿಗೆ ಬಿದ್ದು ಮುಂಬೈ ಗಿರಣಿ ಕಾರ್ಮಿಕರ ಪ್ರತಿಭಟನಾ ಸಭೆಗೆ ಹೋದ ಟಿಳಕರು ಕಾರ್ಮಿಕರಿಗೆ ಉಪದೇಶ ನೀಡಿದ್ದೇನು ಗೊತ್ತೇ: ‘ಭಾರತದ ಬಂಡವಾಳಶಾಹಿಗಳ ಮೇಲೆ ಮುಷ್ಕರ ಮಾಡಬೇಡಿ. ಭಾರತದಲ್ಲಿ ಎಲ್ಲರೂ ಕಾರ್ಮಿಕರೆ, ಬ್ರಿಟಿಷರು ಮಾತ್ರ ಮಾಲೀಕರು’. ಹೀಗೆ ಕಾರ್ಮಿಕ ಚಳುವಳಿಗಳನ್ನು ಎಂದೂ ಅರ್ಥಿಕ ಸಮತೆಯ ಸಾಧನೆಗೆ ಟಿಳಕರು ಬಳಸಲೇ ಇಲ್ಲ.

ಇನ್ನು ಸ್ವತಃ ಲೆನಿನ್ ತಿಳಕರನ್ನು ಹೊಗಳಿದ್ದು ನೋಡಿದ್ದೇವೆ, ಆದರೆ ಟಿಳಕರು ೧೯೨೦ ರಲ್ಲಿ ಲೆನಿನ್ ಬಗ್ಗೆ ‘ ರಷ್ಯದ ಬೊಲ್ಶೆವಿಕ್ ಕ್ರಾಂತಿಯ ಹೆದರಿಕೆ’ ಎಂಬ ಅಗ್ರ ಭಾಷಣದಲ್ಲಿ ಏನು ಹೇಳಿದರು ಎಂಬುದನ್ನೂ (ಅವರ ಜೀವನ ಚರಿತ್ರೆ ಬರೆದ ಧನಂಜಯ ಕೀರ್ ಪುಸ್ತಕದಲ್ಲಿ ದಾಖಲಾದಂತೆ) ಕೇಳೋಣ:
“ರಷ್ಯದ ಬೊಲ್ಶೆವಿಕ್ ಕ್ರಾಂತಿಯ ಬಗ್ಗೆ ಭಾರತವೇನೂ ಹೆದರಬೇಕಿಲ್ಲ. ರಷ್ಯಾದ ಕ್ರಾಂತಿ ಸಮಾನತೆಗಾಗಿ ನಡೆದ ಸಮರ. ನಮ್ಮ ದೇಶದಲ್ಲಿ ಯುಗ ಯುಗಗಳಿಂದ ಸಮಾನತೆ ನೆಲೆಸಿದೆ. ನಮ್ಮ ವೇದಾಂತದ ಪ್ರಕಾರ ಎಲ್ಲರೂ ಆತ್ಮ ಸ್ವರೂಪಿಗಳು. ಹಾಗಾಗಿ ನಮ್ಮ ದೇಶಕ್ಕೆ ಬೇಕಿರುವುದು ರಷ್ಯನ್ ಕ್ರಾಂತಿ ಸ್ಥಾಪಿಸುವ ಅರ್ಥಿಕ ಸಮಾನತೆಯಲ್ಲ ಅಧ್ಯಾತ್ಮಿಕ ಸಮಾನತೆ – ಅದು ನಮ್ಮ ವೇದಾಂತದಲ್ಲೇ ಇದೆ”

ತಿಳಕರ ಸಮಕಾಲೀನ ಆದರೆ ಅವರ ಪಟ್ಟ ಶಿಷ್ಯ ಜೋಸೆಫ್ ಬ್ಯಾಪ್ಟಿಸ್ಟ ಎಂಬ ಗೋವಾ ಮೂಲದ ಮುಂಬೈನ ಪ್ರಖ್ಯಾತ ವಕೀಲರು ಆಗ ಕೆಲಕಾಲ ಕಾರ್ಮಿಕರ ಅಗ್ರ ಸಂಘಟನೆಯ AITUC ನ ಆಗ್ರ ಮುಖಂಡರಾಗಿದ್ದರು. ಇವರ ಸಹಾಯದಿಂದ ಟಿಳಕರು ಭಾರತದ ಪ್ರತಿನಿಧಿಯಾಗಿ ಲಂಡನ್ ನ ಲೇಬರ್ ಪಾರ್ಟಿಗೆ ಭೇಟಿ ಇತ್ತು ತಾವೊಬ್ಬ ಮಹಾನ್ ಕಾರ್ಮಿಕ ಸಂಘಟಕ ಎಂದು ವಿದೇಶಗಳಲ್ಲಿ ಬಿಂಬಿಸಿಕೊಂಡ ಟಿಳಕರು ಸ್ವದೇಶದಲ್ಲಿ ಮಾತ್ರ ಕಾರ್ಮಿಕರಿಗೆ ಭಾರತದ ಬಂಡವಾಳಶಾಹಿಗಳ ವಿರುದ್ದ ಹೋರಾಟ ಮಾಡಬೇಡಿ ಎಂಬ ಹಿತವಚನ ನೀಡುತ್ತಾರೆ. ಇಷ್ಟಾದರೂ ನಮ್ಮ ದೇಶದ ಕಮ್ಯುನಿಸ್ಟ್ ಚಳುವಳಿಗಳು ತಿಲಕರನ್ನು ಒಬ್ಬ ಕ್ರಾಂತಿಕಾರಿ ಎಂದು ಬಿಂಬಿಸುತ್ತವೆ. ಇದೇ ನೈಜ ದುರಂತ.

ಇಲ್ಲೊಂದು ಮಾತು ಹೇಳಲೇ ಬೇಕು. ಬಾಬಾಸಾಹೇಬ್ ರನ್ನು ಕಮ್ಯುನಿಸ್ಟರು ಮತ್ತು ತಿಳಕರಂಥ ತಥಾಕಥಿತ ಕ್ರಾಂತಿಕಾರಿಗಳು lokmanya-tilakಸಮಾನವಾಗಿ ವಿರೋಧಿಸುತ್ತಿದ್ದರು. ಆದರೆ ಇವೆರಡೂ ವಿರೋಧಗಳಲ್ಲಿ ಒಂದು ಗಮನಾರ್ಹ ವ್ಯತ್ಯಾಸವಿದೆ. ಕಮ್ಯುನಿಸ್ಟರು ಸಮಗ್ರ ಪರಿವರ್ತನೆ ಬರಲು ಅರ್ಥಿಕ ಪರಿವರ್ತನೆ ಆಗಲೇ ಬೇಕು ಎಂದು ನಂಬಿ ಬೇರೆಲ್ಲ ಹೋರಾಟಗಳನ್ನು ವಿರೋಧಿಸಿದರು. ಇದು ಶೂದ್ರ ಅಥವಾ ದಲಿತರ ಮೇಲಿನ ದ್ವೇಷದಿಂದಲ್ಲ; ಬದಲಿಗೆ ಭಾರತದಲ್ಲಿ ಜಾತಿಯೇ ವರ್ಗ ಎಂದು ಗ್ರಹಿಸದೇ ಹೋದ ಬಹುದೊಡ್ಡ ಐತಿಹಾಸಿಕ ತಪ್ಪಿನಿಂದಾಗಿ. ಭಾರತದ ಮಟ್ಟಿಗೆ ದಲಿತರೇ ಸರ್ವಹರಾ (proletariat) ಎಂದು ಕಮ್ಯುನಿಸಂ ಒಪ್ಪಲಿಲ್ಲ.ಇದು ಅಧುನಿಕ ಭಾರತದ ದೊಡ್ಡ ದುರಂತ. ಆದರೆ ಮಾರ್ಕ್ಸ್ ವಾದಿ ಚಳುವಳಿಯಿಂದಾಗಿಯೇ ದಲಿತ ಶೂದ್ರರು ನಗರ ಪ್ರದೇಶಗಳಲ್ಲಿ ಅಷ್ಟಿಷ್ಟು ಅರ್ಥಿಕ ಸ್ವಾವಲಂಬನೆ ಸಾಧಿಸಿದರು ಮತ್ತು ಹಳ್ಳಿಗಳಲ್ಲಿ ಭೂಸುಧಾರಣೆಗಳಾದವು. ಆದರೆ ತಿಳಕರಂಥವರು ಅತ್ತ ಅರ್ಥಿಕ ಸಮಾನತೆಗೂ ವಿರೋಧಿ ಇತ್ತ ಸಾಮಾಜಿಕ ಸಮಾನತೆಗೂ ವೈರಿ. ಅತ್ತ ವೈದಿಕಶಾಹಿಗಳನ್ನೂ ಸಂಘಟಿಸಿದರು; ಇತ್ತ ಸ್ವದೇಶಿ ಚಾಕುವಿನಿಂದ ಘಾಸಿಗೊಂಡ ಕಾರ್ಮಿಕರನ್ನು ವೇದಾಂತದ ಕಾಲ್ಪನಿಕ ಮುಲಾಮು ಹಚ್ಚಿ ಮೆತ್ತಗೆ ಮಾಡಿದರು.

ಇನ್ನು ಈ ದೇಶದಲ್ಲಿ ದೇಶಭಕ್ತಿಯನ್ನು ಮೂರ್ತಿ ಪೂಜೆಗೆ ಸಮೀಕರಿಸಿ ಕಡೆಗೆ ಭಕ್ತಿಯ ಹೆಸರಿನಲ್ಲಿ ಕೋಮು ಉನ್ಮಾದಕ್ಕೇರಿಸಿದ ಖ್ಯಾತಿ ಸೇರಬೇಕಿರುವುದು ತಿಳಕರಿಗೆ. ಇದನ್ನು ನಂತರದಲ್ಲಿ ಗಾಂಧಿ ಮತ್ತು ಇನ್ನೂ ವಿಕೃತ ಸ್ವರೂಪದಲ್ಲಿ ಹಿಂದೂ ಕೋಮುವಾದಿಗಳು ಬಳಸಿಕೊಂಡರು. MKGandhiಸಾರ್ವಜನಿಕ ಮೂರ್ತಿಪೂಜೆ ದೇಶವೆಂದರೆ ಒಂದು ಧರ್ಮದ ಜಹಗೀರು ಎಂದು ಜನರ ತಲೆಯಲ್ಲಿ ಬಿತ್ತಿದ್ದು ಟಿಳಕರ ಸಾಧನೆ. ಇವರ ಸಾರ್ವಜನಿಕ ದೇಶಭಕ್ತಿಯನ್ನು ಒಂದು ಇಂದ ಮೂರ್ತಿಪೂಜೆಯನ್ನಾಗಿ ಪರಿವರ್ತಿಸಿದ್ದರಿಂದ ಇಡೀ ದೇಶದಲ್ಲಿ ಯೋಚಿಸಿ ರಾಜಕಾರಣ ಮಾಡುವ ಸಂಸ್ಕೃತಿಯೇ ನಾಶವಾಯಿತು. ಒಂದು ಕಡೆ ಪುರೋಹಿತ ಶಾಹಿಗಳಿಂದ ಇನ್ನೊಂದೆಡೆ ಬ್ರಿಟೀಷರಿಂದ ಬೆಂದು ಬಳಲಿದ್ದ ನಗರ ಪ್ರದೇಶಗಳ ಶೂದ್ರ-ದಲಿತ ಕಾರ್ಮಿಕರಿಗೆ ಸಮಗ್ರ ಕ್ರಾಂತಿಯ ಬದಲು ತಿಳಕರ ಮೂರ್ತಿಪೂಜೆಯ ಭ್ರಾಂತಿಯೇ ಹೆಚ್ಚು ರುಚಿಸಿತು. ಫುಲೆ-ಅಂಬೇಡ್ಕರ್, ಮಾರ್ಕ್ಸ್ – ಲೆನಿನ್ ರನ್ನು ಅನುಸರಿಸಬೇಕಾದರೆ ಅವರ ಚಿಂತನೆಯ ಅಧ್ಯಯನ ಅತ್ಯಗತ್ಯ. ಆದರೆ ಮೂರ್ತಿ ಪೂಜೆಗೆ ಇದೇನೂ ಬೇಡ; ಬರಿಯ ಉನ್ಮಾದವೇ ಸಾಕು. ಹೀಗೆ ರಾಜಕೀಯ ಮತ್ತು ಧರ್ಮವನ್ನು ಬೆರೆಸುವ ಕಲೆಯನ್ನು ಟಿಳಕರು ಕಲಿಸಿಕೊಟ್ಟರು.

ಶೂದ್ರ-ದಲಿತ-ರೈತ-ಕಾರ್ಮಿಕರ ಹೋರಾಟಗಳ ಹಾದಿ ತಪ್ಪಿಸಿದ ಟಿಳಕರು ಕಾಂಗ್ರೆಸ್ ನಲ್ಲಿ ಸಂಪೂರ್ಣ ಅರಿಶಿಣ ಕುಂಕುಮದ ಸಂಸ್ಕೃತಿ ಹರಡಿ ಬಿಟ್ಟರು.

ಕೊನೆಯದಾಗಿ ತಿಳಕರ ಸಂಪೂರ್ಣ ವ್ಯಕ್ತಿತ್ವವನ್ನು ಬಿಚ್ಚಿಡುವ ಇದೊಂದು ಘಟನೆಯನ್ನು ಹೇಳಲೇ ಬೇಕು. ೧೯೮೧ ರಲ್ಲಿ ಟಿಳಕರು ಒಂದು ಅತ್ಯಂತ ಘನಂದಾರಿ ಹೋರಾಟವನ್ನು ಸಂಘಟಿಸಿದರು. ಆ ವರ್ಷ ಬ್ರಿಟಿಷ್ ಸರಕಾರ ‘Age of Consent Act ಎಂಬ ಒಂದು ಕಾನೂನು ಜಾರಿಗೆ ತಂದಿತು. ಈ ಕಾನೂನಿನ ಪ್ರಕಾರ ಹನ್ನೆರಡು ವರ್ಷಕ್ಕೆ ಕಡಿಮೆಯಿರುವ ಯಾವ ಮಗುವಿನ ಮೇಲೆ ಜೊತೆ ಲೈಂಗಿಕ ಸಂಪರ್ಕ ಮಾಡಿದರೂ ಅದು ಬಲಾತ್ಕಾರಕ್ಕೆ ಸಮ ಮತ್ತು ಶಿಕ್ಷಾರ್ಹ ಅಪರಾದ ಎಂಬ ಕಾನೂನು ಜಾರಿಗೆ ತಂದಿತು.

ಈ ಕಾನೂನು ಬರಲು ಒಂದು ಬಲವಾದ ಕಾರಣವಿತ್ತು ೧೮೮೯ ರಲ್ಲಿ ಫುಲ್ ಮಣಿ ಎಂಬ ಹನ್ನೊಂದು ವರ್ಷದ ಹಸುಳೆಯ ಮೇಲೆ child-rapeಹರಿ ಮೋಹನ ಮೈತಿ ಎಂಬ ೩೫ ವರ್ಷದ ವ್ಯಕ್ತಿ ಲೈಂಗಿಕ ಸಂಪರ್ಕ ಮಾಡಿದ ಪರಿಣಾಮ ರಕ್ತಪಾತವಾಗಿ ಆ ಹೆಣ್ಣು ಮಗು ಸತ್ತು ಹೋಯಿತು. ಈ ಹರಿ ಮೋಹನನಿಗೆ ಅತ್ಯಾಚಾರ ಶಿಕ್ಷೆ ಆಗಲೇ ಇಲ್ಲ; ಏಕೆಂದರೆ ಈ ಮಗು ಅವನ ಪತ್ನಿ!

ಇದನ್ನು ಕಂಡ ವಿದೇಶಿ ಸರಕಾರ ಹೆಣ್ಣು ಮಗುವಿನ ಪ್ರಾಣ ರಕ್ಷಣೆ ಮಾಡುವ ಈ ಕಾನೂನು ತಂದರೆ ನಮ್ಮ ಸ್ವದೇಶೀ ಟಿಳಕರು ಇದರ ವಿರುದ್ಧ ಅತ್ಯಂತ ಭಯಂಕರ ಹೋರಾಟ ಸಂಘಟಿಸಿಬಿಟ್ಟರು. ಇದು ನಮ್ಮ ಹಿಂದೂ ಧಾರ್ಮಿಕ ವಿಚಾರಗಳಲ್ಲಿ ಮೂಗು ತೋರಿಸುವ ಪ್ರಯತ್ನ ಎಂದು ತಮ್ಮ ಪತ್ರಿಕೆಗಳಲ್ಲಿ ಗುಡುಗಿ ಸಂಪಾದಕೀಯ ಬರೆದದ್ದಲ್ಲದೇ, ಸಮಾನ ಮನಸ್ಕ ಧರ್ಮಭೀರುಗಳ ಜೊತೆ ದೇಶವ್ಯಾಪಿ ಬೀದಿ ಹೋರಾಟವನ್ನು ಸಂಘಟಿಸಿದರು.

ಹನ್ನೊಂದು ವರ್ಷದ ಹಸುಳೆಯ ಮೇಲಿನ ಅತ್ಯಾಚಾರವನ್ನು ಸಮರ್ಥಿಸಿ ಹೋರಾಟ ಮಾಡಿದ ಟಿಳಕರು ಒಬ್ಬ ಲೋಕಮಾನ್ಯ; ಆದರೆ ಮಹಿಳೆಯರ ಅಸ್ತಿ ಹಕ್ಕನ್ನು ಕಾಪಾಡಬೇಕು ಎಂದು ಸಂಪುಟಕ್ಕೆ ರಾಜಿನಾಮೆ ಇತ್ತ ಬಾಬಾಸಾಹೇಬ್ ಒಬ್ಬ ಬ್ರಿಟಿಷ್ ಏಜೆಂಟ್!

ಮೇರಾ ಭಾರತ್ ಮಹಾನ್!

“ಗಾಂಧಿ ಜಯಂತಿ ಕಥಾ ಸ್ಪರ್ಧೆ – 2015″ರ ಫಲಿತಾಂಶ

ಆತ್ಮೀಯರೇ,

ಎಲ್ಲರಿಗೂ 2015ರ “ಗಾಂಧಿ ಜಯಂತಿ”ಯ ಶುಭಾಶಯಗಳು.

ವರ್ತಮಾನ ಬಳಗ ಆಯೋಜಿಸಿದ್ದ ಈ ವರ್ಷದ “ಗಾಂಧಿ ಜಯಂತಿ ಕಥಾ ಸ್ಪರ್ಧೆ”ಗೆ ಸುಮಾರು 25 ಕತೆಗಳು gandhi-katha-spardge-2015ಬಂದಿದ್ದವು; ಅದರಲ್ಲಿ ಒಂದೆರಡು ಕತೆಗಳು ಇಲ್ಲಿ ಫಲಿತಾಂಶ ಪ್ರಕಟಣೆಗೆ ಮೊದಲೇ ಬೇರೆ ಕಡೆ ಪ್ರಕಟವಾದದ್ದು ನಮ್ಮ ಗಮನಕ್ಕೆ ಬಂದಿದ್ದರಿಂದ ಅವನ್ನು ಪರಿಗಣಿಸಲಾಗಿಲ್ಲ. ಈ ಸಾರಿಯ ತೀರ್ಪುಗಾರರು ಕವಿ, ಲೇಖಕಿ, ಮತ್ತು ಪ್ರಾಧ್ಯಾಪಕಿ ಭಾರತೀದೇವಿ.ಪಿ. ಈ ಜವಾಬ್ದಾರಿಯನ್ನು ನಿಭಾಯಿಸಲು ಒಪ್ಪಿಕೊಂಡ ಅವರಿಗೆ ವರ್ತಮಾನ ಬಳಗ ಕೃತಜ್ಞತೆಗಳನ್ನು ಅರ್ಪಿಸುತ್ತದೆ. ಅವರು ಆಯ್ಕೆ ಮಾಡಿರುವ ಉತ್ತಮ ಕತೆಗಳು ಹೀಗಿವೆ:

  • ಮೊದಲ ಬಹುಮಾನ : “ಪಯಣ” – ಶಾಂತಿ.ಕೆ.ಎ
  • ಎರಡನೆಯ ಬಹುಮಾನ : “ಹಾಳು ಸುಡುಗಡ ಬದುಕು” – ಹನುಮಂತ ಹಾಲಿಗೇರಿ
  • ಮೂರನೆಯ ಬಹುಮಾನ : “ಮನ್ವಂತರ” – ಸಂವರ್ಥ ಸಾಹಿಲ್
  • ಪ್ರೋತ್ಸಾಹಕ ಬಹುಮಾನಗಳು :
    • ಪಾಕಿಸ್ಥಾನದಿಂದ ಪತ್ರ” – ಮಹಾಂತೇಶ್ ನವಲ್ಕಲ್
    • ಉಡುಗೊರೆ” – ಸ್ವಾಲಿಹ್ ತೋಡಾರ್

ಕಥಾ ಸ್ಪರ್ಧೆಗೆ ತಮ್ಮ ಕತೆಗಳನ್ನು ಆಸಕ್ತಿಯಿಂದ ಕಳುಹಿಸಿ, ಈ ಕಥಾಸ್ಪರ್ಧೆಯನ್ನು ಬೆಂಬಲಿಸಿದ ಮತ್ತು ಪ್ರೋತ್ಸಾಹಿಸಿದ ಎಲ್ಲಾ ಕತೆಗಾರರಿಗೂ ಧನ್ಯವಾದಗಳು ಮತ್ತು ಕೃತಜ್ಞತೆಗಳು. ಮತ್ತು ವಿಜೇತರಿಗೆ ಅಭಿನಂದನೆಗಳು.

ತೀರ್ಪುಗಾರರ ಅಭಿಪ್ರಾಯದ ಲೇಖನವನ್ನು ಇಷ್ಟರಲ್ಲಿಯೇ ಪ್ರಕಟಿಸಲಾಗುವುದು.

ಬಹುಮಾನಿತ ಕತೆಗಳನ್ನು ಮುಂದಿನ ದಿನಗಳಲ್ಲಿ ವಾರಕ್ಕೊಂದರಂತೆ ಪ್ರಕಟಿಸಲಾಗುವುದು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ
ವರ್ತಮಾನ.ಕಾಮ್