Monthly Archives: November 2015

ಕಾನ್ಶಿರಾಂ – ಕಲ್ಲಿದ್ದಲ ಕಗ್ಗತ್ತಲೆಯನ್ನು ಕೊಹಿನೂರೊಂದು ಕಳೆದ ಕಥೆ : ಭಾಗ- ೩

ಮಂಡಲ ವರದಿ ಜಾರಿಗೆ ತರಲು ಹೋರಾಡಿದ ಮೊಟ್ಟ ಮೊದಲ ದೃಷ್ಟಾರ

-ಶ್ರೀಧರ ಪ್ರಭು

sridhar-2

ಈ ದೇಶದಲ್ಲಿ ಹಿಂದುಳಿದ ವರ್ಗಗಳು (OBC) ಅತ್ಯಂತ ಹೆಚ್ಚು ಋಣಿಯಾಗಿರಬೇಕಿರುವುದು ಬಾಬಾಸಾಹೇಬ್ ಅಂಬೇಡ್ಕರರಿಗೆ. ಬಾಬಾಸಾಹೇಬರು ನೆಹರು ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ ನಾಲ್ಕು ಮುಖ್ಯ ಕಾರಣಗಳಲ್ಲಿ ಮೊಟ್ಟ ಮೊದಲ ಮತ್ತು ಪ್ರಮುಖ ಕಾರಣ ಸಂವಿಧಾನದ ೩೪೦ ನೆ ವಿಧಿಯ ಪ್ರಕಾರ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ದೊರಕೆದೇ ಇದ್ದದ್ದು.
ಹಿಂದುಳಿದ ವರ್ಗಗಳ ಅಭಿವೃದ್ದಿಗೆ ಬರೀ ಆಯೋಗವೊಂದನ್ನು ರಚಿಸುವ ಪ್ರಸ್ತಾವನೆ ಇಟ್ಟು ಸರಕಾರ ತನ್ನ ನೇರ ಜವಾಬ್ದಾರಿಯನ್ನು ಆಯೋಗಕ್ಕೆ ವರ್ಗಾಯಿಸಿ ಕೈತೊಳೆದುಕೊಂದಿದ್ದಲ್ಲದೇ ಆಯೋಗಕ್ಕೆ ನೇಮಕಾತಿ ಕೂಡ ಮಾಡದ ಕ್ರಮವನ್ನು ಖಂಡಿಸಿ ಹೊರಬಂದರು. ಸ್ವತಂತ್ರ ಭಾರತದ ಮೊದಲ ಸರಕಾರ ಅಂಬೇಡ್ಕರರಿಗೆ ಸಂಸತ್ತಿನಲ್ಲಿ ತಮ್ಮ ರಾಜೀನಾಮ ಕುರಿತು ಹೇಳಿಕೆ ನೀಡಲೂ ಅವಕಾಶ ಒದಗಿಸಲಿಲ್ಲ. ಹಾಗಾಗಿ ಅವರು ಯಾವ ಕಾರಣಗಳಿಗೋಸ್ಕರ ರಾಜೀನಾಮೆ ಇತ್ತದ್ದು ಎಂದು ದೇಶಕ್ಕೆ ಗೊತ್ತಾಗಲೇ ಇಲ್ಲ. ಅಂದಿನ ಮನುವಾದಿ ನಿಯಂತ್ರಿತ ಮಾಧ್ಯಮಗಳು ಭಾಷಣದ ಪಾಠವನ್ನು ಕೂಡ ಪ್ರಕಟಿಸಲಿಲ್ಲ. ಬಾಬಾ ಸಾಹೇಬರ ಈ ಐತಿಹಾಸಿಕ ತೀರ್ಮಾನ ನಂತರದಲ್ಲಿ (೧೯೫೩) ಕಾಕಾ ಕಲೇಲ್ಕರ್ (ಪುಣೆಯ ಗಾಂಧಿವಾದಿ ಬ್ರಾಹ್ಮಣ ಮುಖಂಡ – ಹುಟ್ಟಿದ್ದು ಬೆಳಗಾವಿ ತಾಲೂಕಿನ ಬೆಳಗುಂಡಿಯಲ್ಲಿ) ನೇತೃತ್ವದಲ್ಲಿ ದೇಶದ ಮೊಟ್ಟ ಮೊದಲ ಹಿಂದುಳಿದ ವರ್ಗಗಳ ಆಯೋಗ – ‘ಕಲೇಲ್ಕರ್ ಹಿಂದುಳಿದ ವರ್ಗಗಳ ಆಯೋಗ’ ರಚನೆಯಾಗಲು ನಾಂದಿಯಾಯಿತು.
ಈ ಕಾಲೇಲ್ಕರ್ ವರದಿ ತುಂಬಾ ಮಜವಾಗಿತ್ತು. ಅಲ್ಲಿ ಇಲ್ಲಿ ಏನಾದರೂ ಪ್ರಾತಿನಿಧ್ಯ ಕೊಡುವುದಾದರೆ ಶಾಲೆಗಳಲ್ಲಿ ಜವಾನನ ಹುದ್ದೆ ಮತ್ತು ಪೌರ ಕಾರ್ಮಿಕರ ಹುದ್ದೆ, ಇಂಥಹ ಹುದ್ದೆಗಳಿಗೆ ಬೇಕಾದರೆ ಕೊಡಬಹುದು; ಆದರೆ ಯಾವುದೇ ಕಾರಣಕ್ಕೂ ಮೊದಲ ಮತ್ತು ಎರಡನೇ ದರ್ಜೆಯ ಕೆಲಸಗಳಲ್ಲಿ ಪ್ರಾತಿನಿಧ್ಯ ಇರಲೇ ಬಾರದು ಎಂದು ಶಿಫಾರಸ್ಸು ಮಾಡಲಾಯಿತು! ಸ್ವತಃ ಆಯೋಗದ ಅಧ್ಯಕ್ಷರೇ ತಮ್ಮ ವರದಿಯ ಶಿಫಾರಸ್ಸುಗಳಿಗೆ ವಿರೋಧ ವ್ಯಕ್ತ ಪಡಿಸಿ ಸರಕಾರದ ಹುದ್ದೆಗಳಲ್ಲಿ ಹಿಂದುಳಿದವರಿಗೆ ಪ್ರತಿನಿಧ್ಯವೇ ಇರಬಾರದು ಬೇಕಾದರೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಬೇಕಾದರೆ ಕೊಡಿ ಎಂದರು. ಸರಕಾರಕ್ಕೆ ವರದಿ ಸಲ್ಲಿಸುವಾಗ ಬರೆದ ಪತ್ರದಲ್ಲೇ ತಮ್ಮ ವರದಿಗೆ ತಮ್ಮದೇ ವಿರೋಧವಿದೆ ಎಂದೂ ಹೇಳಿ ಬಿಟ್ಟರು. ಇನ್ನು ಇಂತಹ periyar-ambedkarಉಗುರು-ಹಲ್ಲಿಲ್ಲದ ಕಾಕಾ ಕಲೇಲ್ಕರ್ ವರದಿಗೆ ಕೂಡ ಅಂದು ಸಾಕಷ್ಟು ವಿರೋಧ ವ್ಯಕ್ತವಾಗಿ ಕಲೇಲ್ಕರ್ ಅವರಿಂದಲೇ ಮಣ್ಣು ಕೊಡಿಸಲಾಯಿತು. ಕೊಡಲಾಯಿತು. ಅಂಬೇಡ್ಕರರ ಸತತ ಪ್ರಯತ್ನದ ಫಲವಾಗಿಯೇ ಹಿಂದುಳಿದ ವರ್ಗಗಳಿಗೆ ಇಂದು ಮೀಸಲಾತಿ ದೊರೆತದ್ದು.
ಬಾಬಾಸಾಹೇಬರ ನಂತರದಲ್ಲಿ ಈ ದೇಶದ ಹಿಂದುಳಿದ ವರ್ಗಗಳು ಅತ್ಯಂತ ಹೆಚ್ಚು ಋಣಿಯಾಗಿರಬೇಕದದ್ದು ಯಾರಿಗೆ ಎಂದು ರಾಜಕೀಯ ಇತಿಹಾಸ ತಜ್ಞರು ಪ್ರಾಮಾಣಿಕ ಸಂಶೋದನೆ ಮಾಡಿದರೆ ಗೋಚರಿಸುವ ಮೊಟ್ಟ ಮೊದಲ ಹೆಸರು ದಾದಾಸಾಹೇಬ್ ಕಾನ್ಶಿರಾಂ. ಎಲ್ಲರೂ ನಂಬಿದಂತೆ ಮಂಡಲ ವರದಿಯ ರೂವಾರಿ ವಿ ಪಿ ಸಿಂಗ್ ಅಲ್ಲ. ಬದಲಿಗೆ ಮಾನ್ಯವರ ಕಾನ್ಶಿರಾಂ. ೧೯೮೭ ರಲ್ಲಿ ಹರ್ಯಾಣ ವಿಧಾನಸಭೆಗೆ ಚುನಾವಣಾ ಪ್ರಚಾರ ಭಾಷಣದಲ್ಲಿ ಮೊಟ್ಟ ಮೊದಲ ಬಾರಿಗೆ ಮಂಡಲ ಆಯೋಗದ ಶಿಫಾರಸ್ಸು ಜಾರಿಗೆ ಮಾಡಬೇಕು ಎಂದು ಗರ್ಜಿಸಿದ್ದು ಕಾನ್ಶಿರಾಂ. ಅಂದಿನವರೆಗೆ ಯಾರಿಗೂ ಮಂಡಲ ವರದಿ ಎಂದರೆ ಏನು ಎಂದೇ ಗೊತ್ತಿರಲಿಲ್ಲ. ೧೯೮೭ ರಲ್ಲಿ ಕಾನ್ಶಿರಾಮರು ಹರ್ಯಾಣ ಚುನಾವಣಾ ಪ್ರಚಾರ ಭಾಷಣಗಳು ಸಂಪಾದಿಸಿದರೆ ಅದು ಇಡೀ ಭಾರತದ ಹಿಂದುಳಿದ ವರ್ಗದ ಪಾಲಿಗೆ ಧರ್ಮ ಗ್ರಂಥವಾದೀತು.

 

ಬಹುಜನ ಸಮಾಜ ಪಕ್ಷದ ಮೊದಲ ಎರಡು ಐತಿಹಾಸಿಕ ಘೋಷಣೆಗಳು – “ಮಂಡಲ್ ಅಯೋಗ್ ಜಾರಿ ಕರೋ ನಹಿ ತೋ ಕುರ್ಸಿ ಖಾಲಿ ಕರೋ” ಮತ್ತು “ವೋಟ್ ಹಮಾರಾ – ರಾಜ್ ತುಮ್ಹಾರಾ ನಹಿ ಚಲೇಗಾ ನಹಿ ಚಲೇಗಾ” ಹರ್ಯಾಣ ಚುನಾವಣೆಯ ಈ ಎರಡು ಚುನಾವಣಾ ಘೋಷಣೆಗಳು ದೇಶದಾದ್ಯಂತ ಮನೆಮಾತಾದವು. ಕಾನ್ಶಿರಾಂ ಒಂದು ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳುತ್ತಾರೆ
“ಈ ದೇಶದ ೪೫೦ ಜನ ಜಿಲ್ಲಾಧಿಕಾರಿಗಳಲ್ಲಿ ೧೨೫ ಜನ ದಲಿತರು. ದೇಶದ ಶೇಕಡಾ ಐವತ್ತರಷ್ಟು ಜನಸಂಖ್ಯೆಯ ಹಿಂದುಳಿದ ವರ್ಗದವರು ವರು ಇಲ್ಲವೇ ಇಲ್ಲ ಎನ್ನುವಷ್ಟು ಸಂಖ್ಯೆಯಲ್ಲಿ ಜಿಲ್ಲಾಧಿಕಾರಿ ಗಳಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ೪೫೦ ಜನ ಐಎಎಸ್ ಅಧಿಕಾರಿಗಳಿದ್ದಾರೆ ಅದರಲ್ಲಿ ೧೩೭ ಜನ ದಲಿತರು ಆದರೆ ಹಿಂದುಳಿದವರು ಕೇವಲ ೭ (ಅದರಲ್ಲಿ ಆರು ಜನ ಯಾದವರು). ಏಕೆ ಎಂದು ಯೋಚಿಸಿ”
ಅನೇಕರಿಗೆ ಗೊತ್ತಿಲ್ಲದ ವಿಚಾರವೆಂದರೆ ಬಹುಜನ ಸಮಾಜ ಪಕ್ಷದ ಮೊಟ್ಟ ಮೊದಲ ಲೋಕ ಸಭಾ ಸದಸ್ಯ ಭೀಮ್ ಸಿಂಗ್ ಪಟೇಲ್ ( ೧೯೯೧ ರ ಲೋಕ ಸಭಾ ಚುನಾವಣೆಯಿಂದ ಮಧ್ಯ ಪ್ರದೇಶದ ರೀವಾ ಲೋಕ ಸಭಾ ಕ್ಷೇತ್ರ) ಹಿಂದುಳಿದ ವರ್ಗದ ಕುರ್ಮಿ ಜನಾಂಗದವರು. ಅಷ್ಟೇ ಅಲ್ಲ, ೧೯೯೬ ರಲ್ಲಿ ಮತ್ತು ಮೇಲ್ವರ್ಗದ ಭದ್ರ ಕೋಟೆ ಎನಿಸಿಕೊಂಡ ಮಧ್ಯ ಪ್ರದೇಶದ ಸತ್ನಾ ಲೋಕ ಸಭಾ ಕ್ಷೇತ್ರದಲ್ಲಿ ಬಹುಜನ ಸಮಾಜ ಪಕ್ಷದಿಂದ ಪ್ರಥಮ ಬಾರಿಗೆ ಸ್ಪರ್ಧಿಸಿದ ಸುಖ್ ಲಾಲ್ ಕುಶ್ವಾಹ ಅರ್ಜುನ ಸಿಂಗರನ್ನು ಸೋಲಿಸಿ ಬಿಟ್ಟರು. ವಾಜಪೇಯಿಯವರ ಅಲೆ ಇದ್ದಾಗ್ಯೂ ಭಾಜಪ ಮೂರನೇ ಸ್ಥಾನಕ್ಕೆ ಹೋಯಿತು. ಉತ್ತರ ಭಾರತದಲ್ಲಿ, ಅದರಲ್ಲೂ ಮುಖ್ಯವಾಗಿ ಉತ್ತರ ಪ್ರದೇಶ, ಹರ್ಯಾಣ, ವಿಂಧ್ಯ ಪ್ರದೇಶ (ಮಧ್ಯಪ್ರದೇಶದ ಉತ್ತರ ಭಾಗ) ದಲ್ಲಿ ಬಹು ದೊಡ್ಡ ಸಂಖ್ಯೆಯಲ್ಲಿ ಹಿಂದುಳಿದ ವರ್ಗ ಬಹುಜನ ಸಮಾಜ ಪಾರ್ಟಿಯ ಜೊತೆ ಗುರುತಿಸಿ ಕೊಂಡಿತು. ಹೀಗೆ ಅಧುನಿಕ ಭಾರತದ ರಾಜಕೀಯ ಸಂದರ್ಭದಲ್ಲಿ ಹಿಂದುಳಿದ ವರ್ಗಗಳಲ್ಲಿ ಮೊಟ್ಟ ಮೊದಲು ಜಾಗೃತಿ ಮೂಡಿಸಿದ ಕೀರ್ತಿ ಸಲ್ಲಬೇಕಿರುವುದು ಕಾನ್ಶಿರಾಂ ಅವರಿಗೆ.

kanshiram
ವಿಶೇಷವೆಂದರೆ ಕುಶ್ವಾಹ ಮತ್ತು ಪಟೇಲ್ ಸಂಸದರಾದಾಗ ಅವರ ವಯಸ್ಸು ಮೂವತ್ತೈದು ವರ್ಷ ಮೀರಿರಲಿಲ್ಲ. ಹೀಗೆ ಹಿಂದುಳಿದ ವರ್ಗಗಳಲ್ಲಿನ ಹೊಸ ತಲೆಮಾರಿಗೆ ಅವಕಾಶಗಳನ್ನು ಕೊಟ್ಟು ಬೆಳೆಸಿದ ಕಾನ್ಶಿರಾಂ ಬರದೇ ಇದ್ದಿದ್ದರೆ ಇಡೀ ಉತ್ತರ ಭಾರತದ ರಾಜಕೀಯ ಕೇಸರಿಮಯವಾಗಿರುತ್ತಿತ್ತು.
೧೯೯೧ ರಲ್ಲಿ ಉತ್ತರ ಪ್ರದೇಶದಲ್ಲಿ ೨೨೧ ಸ್ಥಾನ ಗಳನ್ನು ಗೆದ್ದು ಅಧಿಕಾರದಲ್ಲಿದ್ದ ಭಾರತೀಯ ಜನತಾ ಪಾರ್ಟಿ ಸರಕಾರವನ್ನು ಬಾಬರಿ ಮಸೀದಿ ಧ್ವಂಸದ ಹಿನ್ನೆಲೆಯಲ್ಲಿ ವಿಸರ್ಜಿಸಿ ರಾಷ್ಟ್ರಪತಿ ಆಡಳಿತ ತರಲಾಯಿತು. ನಂತರ ನಡೆದ ಚುನಾವಣೆಗಳಲ್ಲಿ ಎಲ್ಲರೂ ಭಾವಿಸಿದ್ದು ಭಾಜಪ ಸಂಪೂರ್ಣ ಬಹುಮತ ಪಡೆಯುತ್ತದೆ ಎಂದು. ಆದರೆ ಎಲ್ಲರ ನಿರೀಕ್ಷೆ ಹುಸಿಗೊಳಿಸಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ-ಬಹುಜನ ಸಮಾಜ ಪಾರ್ಟಿಯ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಿತು. ಕೋಮು ಜ್ವಾಲೆಯಲ್ಲಿ ಬೆಂದು ಹೋಗಿದ್ದ ಈ ಚುನಾವಣೆಯಲ್ಲಿ ಕೋಮುವಾದಿ ರಾಜಕಾರಣವನ್ನು ಹತ್ತಿಕ್ಕಿ ಜನಪರ ಆಶಯ ಹೊತ್ತ ಹಿಂದುಳಿದ ವರ್ಗಗಳಿಗೆ ಅಧಿಕಾರ ದೊರಕಿಸಿಕೊಡಲು ಕಾರಣ ಕಾನ್ಶಿರಾಂ ಅವರ ಸಂಘಟನಾ ಚಾತುರ್ಯ. ಮೊತ್ತ ಮೊದಲ ಬಾರಿಗೆ ಯಶಸ್ಸಿಗೆ ಕಾರಣ.
ಅದರೊಂದಿಗೇ ೧೯೯೮ ರ ಮಧ್ಯ ಪ್ರದೇಶದ ವಿಧಾನ ಸಭಾ ಚುನಾವಣೆಯಲ್ಲಿ ಕಾನ್ಶಿರಾಂ ತಮ್ಮ ಪ್ರಸಿದ್ದ ಘೋಷಣೆ “ಜಿಸ್ಕಿ ಜಿತನಿ ಸಂಖ್ಯಾ ಭಾರಿ – ಉಸ್ಕಿ ಉತನಿ ಭಾಗಿದಾರಿ” (ಅವರವರ ಸಂಖ್ಯೆ ಯಷ್ಟು ಅವರ ಪ್ರಾತಿನಿಧ್ಯ’) ಯನ್ನು ಸಂಪೂರ್ಣ ಜಾರಿ ಗೊಳಿಸಿ ೫೦.೫ % ರಷ್ಟು ಟಿಕೆಟ್ ಗಳನ್ನು ಹಿಂದುಳಿದ ವರ್ಗಗಳಿಗೆ ಕೊಟ್ಟರು. ಬಿ.ಎಸ್.ಪಿ ಗೆದ್ದುಕೊಂಡ ಹನ್ನೊಂದು ಕ್ಷೇತ್ರ ಗಳಲ್ಲಿ ಹೆಚ್ಚಿನ ಕ್ಷೇತ್ರಗಳು ಸಾಮಾನ್ಯ ಕ್ಷೇತ್ರಗಳಾಗಿದ್ದವು. ಅವರ ಜೀವನ ಕಾಲದಲ್ಲಿ ಮಧ್ಯ ಪ್ರದೇಶದ ಹಿಂದುಳಿದ ವರ್ಗ ಕಾನ್ಶಿರಾಂರ ನಾಯಕತ್ವ ಮತ್ತು ಸಿದ್ಧಾಂತಗಳ ಜೊತೆ ಸಂಪೂರ್ಣವಾಗಿ ಸಮಾವೇಶಗೊಂಡಿತ್ತು.
ಒಂದು ಲೆಕ್ಕದಲ್ಲಿ ನೋಡಿದರೆ ಕಲ್ಯಾಣ್ ಸಿಂಗ್, ವಿನಯ್ ಕಟಿಯಾರ್, ಉಮಾ ಭಾರತಿಯವರಿಗೆ ಸಂಘ ಪರಿವಾರ ನಾಯಕತ್ವ ಕೊಡಲು ಕಾರಣ ಉತ್ತರ ಪ್ರದೇಶದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಹಿಂದುಳಿದವರು ಸಾಮಾಜಿಕವಾಗಿ ಸಮಾಜವಾದಿ ಮತ್ತು ಬಹುಜನ ಚಳುವಳಿಯ ಜೊತೆ ಗುರಿತಿಸಿಕೊಂಡಿದ್ದೇ ಆಗಿತ್ತು. ಹೀಗಾಗಿ ಒಂದು ಲೆಕ್ಕದಲ್ಲಿ ಸಂಘಪರಿವಾರಕ್ಕೆ ಒಬಿಸಿಗಳನ್ನ ಮುಂಚೂಣಿಗೆ ತರುವ ಅನಿವಾರ್ಯತೆ ಬಂದದ್ದು ಬಹುಜನ ರಾಜಕಾರಣದಿಂದ.
‘ಅಯೋಧ್ಯಾ ಕಾಂಡ’ ಜರುಗಿದ ಮೂರು ವರ್ಷಗಳಲ್ಲಿ (೧೮, ೧೯, ಸೆಪ್ಟೆಂಬರ್, ೧೯೯೫) ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಾರ್ಟಿಯ ಸರಕಾರ ರಚನೆಯಾಗಿದ್ದಲ್ಲದೆ, ಮನುವಾದದ ಹೃದಯ ಕೇಂದ್ರ ಲಖನೌ ನಲ್ಲಿ ಪೆರಿಯಾರ್ ಮೇಳ ಆಯೋಜಿಸಲಾಯಿತು. ದಕ್ಷಿಣ ಭಾರತದ ಅದರಲ್ಲೂ ರಾಮನನ್ನು ವಿರೋಧಿಸಿದ ತಮಿಳುನಾಡಿನ ರಾಜಕೀಯ ಚಿಂತಕರೊಬ್ಬರ ನೆನಪಿನಲ್ಲಿ ಬೃಹತ್ ಮೇಳವೊಂದನ್ನು ಭಾಜಪದ ನೆರವು ಪಡೆದುಕೊಂಡೇ ಇದ್ದ ಕಾಲದಲ್ಲಿ ಆಚರಿಸಿದ ಛಾತಿ ಕನ್ಶಿರಾಂರಿಗೆ ಮಾತ್ರ ಸಾಧ್ಯವಿತ್ತು.
ಒಂದು ವೇಳೆ ಅನೇಕರು ಆರೋಪಿಸಿದ ಹಾಗೆ ಕಾನ್ಶಿರಾಂ ಅವಕಾಶವಾಗಿದ್ದರೆ, ರಿಪಬ್ಲಿಕನ್ ಪಾರ್ಟಿಯ ಅಠವಳೆ, ಉದಿತ್ ರಾಜ್, ಪಾಸ್ವಾನ್ ಮಾದರಿಯಲ್ಲಿ ಬಿಜೆಪಿ ತಾಳಕ್ಕೆ ಕುಣಿದು ಅವರಲ್ಲೇ ಲೀನವಾಗುತ್ತಿದ್ದರು. ಬಿಜೆಪಿಗೆ ಕಾನ್ಶಿರಾಂ ಅನಿವಾರ್ಯರಾಗಿದ್ದರೆ ಹೊರತು ಕಾನ್ಶಿರಾಂ ಭಾಜಪವನ್ನು ನೆಚ್ಚಿಕೊಂಡಿರಲಿಲ್ಲ. ಹಾಗಲ್ಲದಿದ್ದರೆ, ಉತ್ತರ ಪ್ರದೇಶದಲ್ಲಿ ಮಾಯಾವತಿ ಸರಕಾರಕ್ಕೆ ಬಾಹ್ಯ ಬೆಂಬಲ ಕೊಡುವುದಾಗಿ ಘೋಷಣೆ ಮಾಡಿದ ಯಾರ ಮುಲಾಜೂ ಇಲ್ಲದೆ, ನಮ್ಮ ಗುರಿ ಸಾಧನೆಗೆ ನಾವು ಭಾಜಪವನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ಬಹಿರಂಗವಾಗಿ ಅವರು ಘೋಷಣೆ ಮಾಡುತ್ತಿರಲಿಲ್ಲ. ಮತ್ತೆ ಅಧಿಕಾರಕ್ಕೆ ಅಂಟಿಕೊಳ್ಳಲು ಬೇಕಾದ ‘ನಾಜೂಕಯ್ಯನ’ ಅವತಾರವೆತ್ತುತ್ತಿದ್ದರು.
ಕಾನ್ಶಿರಾಂ ಅವರ ಅಂತರಂಗ ಮತ್ತು ಬಹಿರಂಗ ಒಂದೇ ಆಗಿತ್ತು.

ಕನ್ನಡಪ್ರಭದಲ್ಲಿ ಹರಿಕುಮಾರ್ – ಹೀಗೊಂದು ಅನಿರೀಕ್ಷಿತ

ಗೋಪಾಲ್ ಬಿ. 

ಕನ್ನಡ ಪತ್ರಿಕೋದ್ಯಮದಲ್ಲಿ Hari kumar-picಕಳೆದ ಒಂದು ವಾರ ಅಪರೂಪದ ಸಂಗತಿಯೊಂದು ನಡೆಯಿತು. ಪ್ರಜಾವಾಣಿ ಪತ್ರಿಕೆಗೆ ಹೊಸ ದಿಕ್ಕು ಹಾಗೂ ಕರ್ನಾಟಕದ ಚಿಂತನಾವಲಯಕ್ಕೆ ಹೊಸದೊಂದು ದೆಸೆ ತೋರಿಸಿದ್ದ ಕೆ.ಎನ್.ಹರಿಕುಮಾರ್ ಅವರ ದೀರ್ಘ ಲೇಖನವೊಂದು ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾಯಿತು. ಬರಹದ ಮೊದಲ ಕಂತು ಪ್ರಕಟವಾದಾಗ ಅನೇಕರಿಗೆ ಅಚ್ಚರಿಯಾದದ್ದಂತೂ ಸತ್ಯ. ಅದು ಅನಿರೀಕ್ಷಿತ.
ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಇತ್ತೀಚೆಗೆ ಮಾತನಾಡುತ್ತಾ ತುರ್ತು ಪರಿಸ್ಥಿತಿಯಂತಹ ಸನ್ನಿವೇಶ ಮತ್ತೆ ಬಂದೀತೇನೋ ಎಂಬ ಆತಂಕ ವ್ಯಕ್ತಪಡಿಸಿದ್ದರು. ಆ ಮಾತಿನ ಎಳೆಯೊಂದಿಗೆ ಆರಂಭವಾಗುವ ಹರಿಕುಮಾರ್ ಅವರ ಮಾತುಗಳು, ಈ ಹೊತ್ತು ಪ್ರಜಾಪ್ರಭುತ್ವ ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸಿ
ದ್ದಾರೆ. ತುರ್ತು ಪರಿಸ್ಥಿತಿ ಹೇರಿಕೆ ತಂದುಕೊಡಬಹುದಾದ ಅಪಾಯಗಳನ್ನು ಮನಗಂಡು, ಕೇವಲ ಪ್ರಜಾಪ್ರಭುತ್ವದ ಮೇಲ್ಮೈ ರೂಪುರೇಷೆಗಳನ್ನು ಹಾಗೇ ಉಳಿಸಿಕೊಂಡು, ಇದೇ ವ್ಯವಸ್ಥೆ ಜನವಿರೋಧಿಯಾಗುವ ಅಪಾಯ ಇದೆ Hari Kumar.jpg - 2ಎಂದು ಎಚ್ಚರಿಸುವ ಹರಿಕುಮಾರ್ ಅವರು “ನಮ್ಮ ಸ್ವಾತಂತ್ರ್ಯ ಹಾಗೂ ಹಕ್ಕುಗಳನ್ನು ಹತ್ತಿಕ್ಕುವ, ಕಬಳಿಸುವ ಪ್ರಯತ್ನಗಳನ್ನು ಹಿಮ್ಮೆಟ್ಟಿಸಲು, ಸಾಮಾಜಿಕ ಅಭಿಪ್ರಾಯ ರೂಪಿಸುವ ಹಾಗೂ ಸಾಮಾಜಿಕ ಹೋರಾಟ ಕಟ್ಟುವ ಮೂಲಕ ಮಾತ್ರ ಸಾಧ್ಯ” – ಎಂದು ಸಲಹೆ ನೀಡುತ್ತಾರೆ.

Hari Kumar
ಅವರ ಈ ಲೇಖನ ಪ್ರಕಟವಾಗುವ ಕೆಲವು ವಾರಗಳ ಹಿಂದಷ್ಟೇ ಫೇಸ್ ಬುಕ್ ನಲ್ಲಿ ಹರಿಕುಮಾರ್ ಅವರು ಸಕ್ರಿಯ ಪತ್ರಿಕೋದ್ಯಮ ಹಾಗೂ ಸಾ ಮಾಜಿಕ ಹೋರಾಟಗಳಿಂದ ದೂರ ಉಳಿದಿರುವ ಬಗ್ಗೆ ಚರ್ಚೆಯಾಗಿತ್ತು. ಈ ನಾಡಿನ ಆಸ್ತಿಗಳೇ ಎನ್ನಬಹುದಾದ ಕೆಲ ಹಿರಿಯ ಪ ತ್ರಕರ್ತರು (ಜಗದೀಶ್ ಕೊಪ್ಪ, ದಿನೇಶ್ ಅಮಿನ್ ಮಟ್ಟು, ನಾಗೇಶ್ ಹೆಗಡೆ…ಇನ್ನೂ ಹಲವರು) ಆ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಹರಿಕುಮಾರ್ ಮತ್ತೆ ಚಾಲ್ತಿಗೆ ಬರಬೇಕು. ಅವರು ಮಾತನಾಡಬೇಕು, ಬರೆಯಬೇಕು – ಎನ್ನುವ ಅಭಿಪ್ರಾಯ ಅಲ್ಲಿ ವ್ಯಕ್ತವಾಗಿತ್ತು. ಬಹುಶಃ ಆ ಚರ್ಚೆಯ ವಿವರಗಳು ಅವರಿಗೆ ಸಾಮಾಜಿಕ ತಾಣದ ಮೂಲಕ ತಲುಪಿದ್ದವೇನೋ, ಆ ಕಾರಣದಿಂದ ಅವರು ಸುದೀರ್ಘ ಲೇಖನವೊಂದನ್ನು ಬರೆದು ಕನ್ನಡ ಪ್ರಭಕ್ಕೆ ಕಳುಹಿಸಿದರೆ… ಗೊತ್ತಿಲ್ಲ.
ಆದರೆ, ಈ ಬೆಳವಣಿಗೆ ಆಶಾದಾಯಕ. ಕನ್ನsugataಡಪ್ರಭ ನವೆಂಬರ್ 1 ರಂದು ಕರ್ನಾಟಕದ 60 ಮಹನಿಯರನ್ನು ಆಯ್ಕೆ ಮಾಡುವಾಗ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹರಿಕುಮಾರ್ ಅವರನ್ನು ಗುರುತಿಸಿದ್ದರು. ಅದಾದ ಬಳಿಕೆ ಕೆಲವೇ ದಿನಗಳಲ್ಲಿ ಲೇಖನ ಸರಣಿ ಆರಂಭವಾಯಿತು. ಇಂತಹದೊಂದು ಅಪರೂಪದ ಬೆಳವಣಿಗೆ ಘಟಿಸಲು ಕಾರಣರಾದ ಹರಿಕುಮಾರ್ ಹಾಗೂ ಕನ್ನಡಪ್ರಭ ಸಂಪಾದಕರಾದ ಸುಗತ ಶ್ರೀನಿವಾಸರಾಜು ಅವರು ಅಭಿನಂದನಾರ್ಹರು.

ಸಂಘಪರಿವಾರದ ರಕ್ತಸಿಕ್ತ ಅಧ್ಯಾಯದಲ್ಲಿ ಬಿಲ್ಲವರ ಸರತಿಯಲ್ಲಿ ಬಂಟರು

Naveen Soorinje


– ನವೀನ್ ಸೂರಿಂಜೆ


 

 

ಜತೆಗೆ ಆಟವಾಡಿ ಬಂದ ಸಮೀಯುಲ್ಲಾನನ್ನು ಹಿಂದೂ ಕೋಮುವಾದಿಗಳಿಂದ ರಕ್ಷಿಸಲು ಹೊರಟ ಹರೀಶ್ ಪೂಜಾರಿ ಬಲಿಯಾಗಿದ್ದಾನೆ. ಹಿಂದುತ್ವ ಸಂಘಟನೆಯ ಪದಾಧಿಕಾರಿಯಾಗಿರೋ ಭುವಿತ್ ಶೆಟ್ಟಿ ಮತ್ತು ಅಚ್ಯುತ ಮುಂತಾದ ಏಳು ಮಂದಿಯ ತಂಡ ಹರೀಶ್ ಪೂಜಾರಿ ಕೊಲೆಯನ್ನೂ ಸಮೀಯುಲ್ಲಾನ ಕೊಲೆಯತ್ನವನ್ನೂ ಮಾಡಿದೆ ಎಂದು ಪೊಲೀಸರು ಕೇಸು ದಾಖಲಿಸಿ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಕೋಮುವಾದಿಗಳ ರಕ್ಕಸ ನಗೆಯ ಮಧ್ಯೆಯೂ ಹರೀಶ್ ಸಮೀಯುಲ್ಲಾನಂತಹ ಮಲಿನಗೊಳ್ಳದ ಮನಸ್ಸುಗಳು ಜಿಲ್ಲೆಯಲ್ಲಿದೆ ಎಂಬುದೇ ಸಮಾದಾನವಾಗಿದ್ದರೆ, ಆರ್.ಎಸ್.ಎಸ್ ಜಾತಿ ಲೆಕ್ಕಾಚಾರದಲ್ಲಿ ಕೋಮು ಕ್ರಿಮಿನಲ್ ಗಳನ್ನು ಸೃಷ್ಠಿಸುತ್ತಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ. ಈವರೆಗೂ ಹಿಂದುಳಿದ ಜಾತಿಗಳಾದ ಬಿಲ್ಲವರನ್ನು ಕೊಲೆಗಳಿಗೆ ಬಳಸುತ್ತಿದ್ದ ಆರ್.ಎಸ್.ಎಸ್ ಇದೀಗ ಬಲಿಷ್ಠ ಮತ್ತು ಬಲಿತ ಹಿಂದುಳಿದ ವರ್ಗವಾಗಿರುವ ಬಂಟರನ್ನೂ ಸಹ ಬಳಸಲು ಶುರು ಮಾಡಿದೆ. ಇದರ ಹಿಂದೆ ಆರ್.ಎಸ್.ಎಸ್ ನ ವ್ಯವಸ್ಥಿತ ಅಜೆಂಡಾ ಕೆಲಸ ಮಾಡಿದೆ. ಇದನ್ನು ತಡೆಯದೇ ಇದ್ದಲ್ಲಿ ಬಂಟರ ಸಮಾಜ ಮತ್ತು ಜಿಲ್ಲೆ ಮುಂಬರುವ ದಿನಗಳಲ್ಲಿ ಭಾರೀ ದಂಡ ತೆರಬೇಕಾಗುತ್ತದೆ.

ನಿನ್ನೆ ಮೊನ್ನೆಯವರೆಗೆ ಆರ್.ಎಸ್.ಎಸ್ ಬಿಲ್ಲವರನ್ನಷ್ಟೇ ಕೋಮುಗಲಭೆಗಳಿಗೆ ಬಳಕೆ ಮಾಡಿ ಜೈಲಿಗೆ ಕಳುಹಿಸುತ್ತಿತ್ತು.bhajarangadal  ಅಮ್ನೇಶಿಯಾ ಪಬ್ ನಲ್ಲಿ ಯುವತಿಯ ಮೇಲೆ ಶ್ರೀರಾಮಸೇನೆ ದಾಳಿ ನಡೆಸಿತು. ಬಂಧಿತ 25 ಆರೋಪಿಗಳಲ್ಲಿ ಎಲ್ಲರೂ ಹಿಂದುಳಿದ ವರ್ಗಗಳಿಗೆ ಸೇರಿದವರು. ಬಹುತೇಕ ಬಿಲ್ಲವರು. ನಂತರ ಹಲವಾರು ಕೋಮುಗಲಭೆಗಳು, ನೈತಿಕ ಪೊಲೀಸ್ ಗಿರಿಗಳು ನಡೆದವು. ದನ ಸಾಗಾಟಗಾರರ ಮೇಲೆ ಹಲ್ಲೆಗಳು ನಡೆದವು. ಆ ಹಲ್ಲೆಗಳಲ್ಲಿ ಕೋಮುಗಲಭೆಗಳಲ್ಲಿ ಒಂದೇ ಒಂದು ಜನಿವಾರಧಾರಿ ಆರೋಪಿ ಇರಲಿಲ್ಲ. ನಂತರ ಇಡೀ ರಾಷ್ಟ್ರವನ್ನು ಬೆಚ್ಚಿ ಬೀಳಿಸಿದ ಹೋಂ ಸ್ಟೇ ದಾಳಿಯಲ್ಲಿ ಹಿಂದೂ ಸಂಘಟನೆಯ 41 ಕಾರ್ಯಕರ್ತರನ್ನು ಬಂಧಿತರಾಗಿದ್ದರು. ಅದರಲ್ಲೂ ಸಹ ಬಹತೇಕ ಬಿಲ್ಲವರು ಮತ್ತು ಸಣ್ಣಪುಟ್ಟ ಜಾತಿಗಳವರು. ಈಗಲೂ ಮಂಗಳೂರು ಜೈಲಿನ ಬಿ ಬ್ಲಾಕ್ ನಲ್ಲಿ ಇರುವ ಕೋಮುಗಲಭೆಯ ಆರೋಪಿಗಳನ್ನು ಮಾತನಾಡಿಸಿದ್ರೆ ಅದರಲ್ಲಿ ಒಬ್ಬನೇ ಒಬ್ಬ ಜನಿವಾರಧಾರಿ ಇಲ್ಲ. ಎಲ್ಲರೂ ಹಿಂದುಳಿದ ವರ್ಗಗಳಿಗೇ ಸೇರಿದವರು. ಇನ್ನು ಕೋಮುಗಲಭೆಯಲ್ಲಿ ಸಾವನ್ನಪ್ಪಿದ ಹಿಂದತ್ವವಾದಿಗಳಲ್ಲೂ ಬಹುತೇಕ ಬಿಲ್ಲವರೇ ಆಗಿದ್ದಾರೆ. ಉದಯ ಪೂಜಾರಿ, ಜಗದೀಶ್ ಪೂಜಾರಿ, ಕ್ಯಾಂಡಲ್ ಸಂತು, ಪೊಳಲಿ ಅನಂತು, ಪ್ರಶಾಂತ್ ಪೂಜಾರಿ, ಹರೀಶ್ ಪೂಜಾರಿ, ಪ್ರೇಮ್ ಕೋಟ್ಯಾನ್, ಸುನೀಲ್ ಪೂಜಾರಿ, ಹೇಮಂತ್. ಹೀಗೆ ಬಿಲ್ಲವ ಹೆಸರುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. (ವಿಚಿತ್ರ ಎಂದರೆ ಕೋಮುವಾದಿಗಳ ವಿರುದ್ಧ ನಿಂತು ಸಾವನ್ನಪ್ಪಿದವರೂ ಕೂಡಾ ಬಿಲ್ಲವರೇ. ಹರೀಶ್ ಪೂಜಾರಿ, ಶ್ರೀನಿವಾಸ್ ಬಜಾಲ್, ಭಾಸ್ಕರ ಕುಂಬ್ಳೆ ಈ ರೀತಿ ಬಿಲ್ಲವರೇ ಕೋಮುವಾದಿಗಳಿಗೆ ಎದೆಯೊಡ್ಡಿ ಹುತಾತ್ಮರಾದವರು.) ಹೀಗೆ ಕೊಲೆ-ಕೊಲ್ಲು-ಕೊಲ್ಲಿಸು ಈ ಮೂರಕ್ಕೂ ಸಾಮಾಜಿಕವಾಗಿ ಹಿಂದುಳಿದ ಬಿಲ್ಲವರನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಆರ್.ಎಸ್.ಎಸ್ ಇದೀಗ ಬಲಿಷ್ಠ ಮತ್ತು ಬಲಿತ ಹಿಂದುಳಿದ ವರ್ಗವಾಗಿರುವ ಬಂಟರನ್ನು ಬಳಸಿಕೊಳ್ಳಲು ತಂತ್ರಗಾರಿಕೆ ರೂಪಿಸಿದೆ. ಅದರ ಭಾಗವಾಗಿಯೇ ಹರೀಶ್ ಪೂಜಾರಿಯನ್ನು ಕೊಲೆ ಮಾಡಿ ಭುವಿತ್ ಶೆಟ್ಟಿ ಎಂಬ ಬಂಟರ ಹುಡುಗ ಜೈಲುಪಾಲಾಗಿದ್ದಾನೆ.

ಮಂಗಳೂರು ಕೋಮುವಾದದ ಜಗತ್ತಿನಲ್ಲಿ ಈಗ ಬಂಟರು ಫೀಲ್ಡಿಗಿಳಿದಿದ್ದಾರೆ. ಬಿಲ್ಲವರ ರಾಜಕೀಯ ಮುಗ್ದತೆಯನ್ನು ಬಳಸಿಕೊಂಡು ಮೇಲ್ವರ್ಗಗಳು ಬಲಿ ಪಡೆಯುತ್ತಿದ್ದವು. ಆರ್.ಎಸ್.ಎಸ್ ಮತ್ತು ಬಿಜೆಪಿಯಲ್ಲಿ ಬಿಲ್ಲವರಿಗೆ ನಾಯಕತ್ವ ಬೇಕಾಗಿಯೂ ಇರಲಿಲ್ಲ ಮತ್ತು ಅದನ್ನು ಕೊಡಲೂ ಇಲ್ಲ. ಕೇವಲ ಕಾಲಾಳುಗಳಾಗಿ ಸತ್ತರು ಮತ್ತು ಸಾಯಿಸಿ ಜೈಲು ಪಾಲಾದ್ರು. ಆದರೆ ಬಂಟರು ಹಾಗಲ್ಲ. ಸಾಮಾಜಿಕ ಸ್ಥಾನಮಾನಗಳ ಜೊತೆಗೇ ಕೋಮುವಾದಿಗಳ ಜೊತೆ ಸೇರುತ್ತಿದ್ದಾರೆ. ಮುಂಬೈ ಅಂಡರ್ ವಲ್ಡ್ ಪ್ರಾರಂಭವಾಗಿದ್ದೇ ಕರಾವಳಿಯ ಬಂಟರಿಂದ. ಹಾಗಂತ ಅದೇನೂ ಅವರಿಗೆ ಮುಜುಗರ ತರುವಂತಹ ವಿಚಾರವಲ್ಲ. ಬದಲಾಗಿ ಪ್ರತಿಷ್ಠೆಯ ವಿಷಯವಾಗಿತ್ತು. ದೇವಸ್ಥಾನ ಪುನರುಜ್ಜೀವನ, ಬ್ರಹ್ಮಕಲಶ, ನಾಗಮಂಡಲ, ಕೋಲ ನೇಮಗಳಲ್ಲಿ ಈ ಭೂಗತ ಜಗತ್ತಿನ ಶೆಟ್ರುಗಳಿಗೆ ವಿಶೇಷ ಗೌರವವಿದೆ.

 ***

ತೊಂಭತ್ತರ ದಶಕದ ಆರ್ಥಿಕ ಸುಧಾರಣೆಗಳ ಫಲವಾಗಿ ಕರಾವಳಿಯ ಜಾತೀಯ ಸಮೀಕರಣದಲ್ಲಿ ಹಲವು ಬಗೆಯ20090124pub4 ಚಲನೆಗಳು ಕಂಡುಬಂದವು. ಜ್ಞಾನ ಹಾಗೂ ಉದ್ಯೋಗ ಆಧಾರಿತ ಹೊಸ ಸಮಾಜೋ ಆರ್ಥಿಕ  ಸನ್ನಿವೇಶದಲ್ಲಿ ಸೃಷ್ಟಿಯಾದ ನೂತನ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಮೂಲತಃ ವ್ಯವಸಾಯದ ಜೊತೆಗೆ  ಪೂರಕವಾಗಿ ಮುಂಬಯಿ ಉದ್ಯೋಗದ ಸಂಪರ್ಕದ ಹಣವನ್ನು ಅವಲಂಬಿಸಿದ್ದ ಇಲ್ಲಿಯ ಬಂಟ ಮತ್ತು ಬಿಲ್ಲವ ಜಾತಿಗಳು ಸಾಕಷ್ಟು ಯಶಸ್ಸನ್ನು ಕಂಡವು. ಅಲ್ಲದೆ ಆ ಕಾಲಕ್ಕಾಗಲೇ ಭೂಸುಧಾರಣೆಗಳ ಫಲವಾಗಿ ಭೂಮಿಯನ್ನು ಆಧರಿಸಿದ್ದ ಆರ್ಥಿಕ ಸಂಬಂಧಗಳು ಕೂಡಾ ಬಹತೇಕ ಸಡಿಲವಾಗಿದ್ದವು.

ಅಂತೆಯೇ ಒಂದು ಕಡೆ ಆರ್ಥಿಕ ಸಂಬಂಧಗಳಲ್ಲಿ ಉಂಟಾದ ಬದಲಾವಣೆ ಇನ್ನೊಂದೆಡೆ ಮಧ್ಯಮ ವರ್ಗೀಯ ಉದ್ಯೋಗಗಳ ಪ್ರಸರಣ- ಇವೆರಡೂ ಸಹಜವಾಗಿಯೇ ಸಾಮಾಜಿಕ ಸ್ತರೀಕರಣದಲ್ಲಿ ಮತ್ತು ಸಂಬಂಧಗಳಲ್ಲಿ ಮಾರ್ಪಾಡುಗಳಿಗೆ ಬೇಡಿಕೆಯಿಟ್ಟವು. ಅಂದರೆ ಹೊಸದಾಗಿ ದೊರೆತ ಆರ್ಥಿಕ ಸ್ಥಿತಿವಂತಿಕೆಯ ದೆಸೆಯಿಂದ ಇಲ್ಲಿಯ ಹಿಂದುಳಿದ ಜಾತಿಗಳು ಸಾಮಾಜಿಕ ಶ್ರೇಣೀಕರಣದಲ್ಲಿ ಮೇಲ್ಮುಖ ಚಲನೆಯನ್ನು ಅಪೇಕ್ಷಿಸಿದವು. ಯಕ್ಷಗಾನ ಮೇಳಗಳಲ್ಲಿ ಭಾಗವಹಿಸುವ ಹಕ್ಕಿಗೆ ಬಿಲ್ಲವರು ಬೇಡಿಕೆಯಿಟ್ಟದ್ದು ಅಥವಾ ಕಟೀಲು ಮೊದಲಾದೆಡೆ ದೇವಾಲಯಗಳ ಮ್ಯಾನೇಜ್ ಮೆಂಟ್ ಗೆ ಸಂಬಂಧಪಟ್ಟಂತೆ ಕಂಡುಬಂದ ಸಂಘರ್ಷಗಳು ಮತ್ತು ಇತರೆ ಕೆಲವು ಬೆಳವಣಿಗೆಗಳು ಅಂತಹ ಪ್ರವೃತ್ತಿಗಳನ್ನು ಸಂಕೇತಿಸಿದ್ದವು.

ಆರ್ಥಿಕ ನೆಲೆಯಲ್ಲಿ ಬಲಗೊಳ್ಳುತ್ತಿದ್ದ ಕೆಳವರ್ಗಗಳ ಮಹತ್ವಾಕಾಂಕ್ಷೆಗಳು ಮತ್ತು ಹಕ್ಕೊತ್ತಾಯ ಸಾಮಾಜಿಕ ಶ್ರೇಣೀಕರಣದ ಪೀಠಭಾಗದಲ್ಲಿ ಸ್ಥಾಪಿಸಲ್ಪಟ್ಟಿದ್ದ ಜನಿವಾರಿಗಳಿಗೆ ಹೊಸ ಸವಾಲುಗಳನ್ನು ಸೃಷ್ಟಿಸಿದವು. ಆರಂಭದಲ್ಲಿ ಜೀರ್ಣೋದ್ಧಾರ, ನಾಗಮಂಡಲ ಅಥವಾ ಬ್ರಹ್ಮಕಲಶೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳ ನಾಯಕತ್ವವನ್ನ ಹೊಸ ಆರ್ಥಿಕ ವರ್ಗಗಳಾಗಿರೋ ಬಂಟರು ಮತ್ತು ಬಿಲ್ಲವರಿಗೆ ನೀಡುವ ಮೂಲಕ ಹೊಸ ಯುಗದ ಸವಾಲುಗಳನ್ನ ಎದುರಿಸುವ ಪ್ರಯತ್ನಗಳನ್ನ ಬ್ರಾಹ್ಮ,ಣರು ನಡೆಸಿದ್ದನ್ನ ನಾವು ನೋಡಿದ್ದೇವೆ.

ಹಾಗೇಯೇ ಆರ್ಥಿಕ ಸುಧಾರಣೆಯ ಫಲ ಮತ್ತು ಅದರ ಜೊತೆಯೇ ಸೃಷ್ಟಿಯಾದ ಅತೃಪ್ತಿ ರಾಜಕೀಯ ನೆಲೆಯಲ್ಲೂ ಸಂಚಲನವನ್ನ ಕಾಣಿಸಿದವು. ಚುನಾವಣಾ ರಾಜಕಾರಣದಲ್ಲಿ ಅವಶ್ಯವಿದ್ದ ಸಂಖ್ಯಾಬಲ ಮತ್ತು ಸಂಪನ್ಮೂಲ- ಇವೆರಡೂ ಕ್ರಮವಾಗಿ ಕರಾವಳಿಯ ಹಿಂದುಳಿದ ವರ್ಗವಾಗಿರೋ ಬಿಲ್ಲವ ಮತ್ತು ಬಂಟರಲ್ಲಿ ಇದ್ದವು. ಹೀಗಾಗಿ, ಅಂತಹ ವರ್ಗಗಳ ಒಳಗೊಳ್ಳುವಿಕೆ ಆರ್.ಎಸ್.ಎಸ್ ಗೆ ಅನಿವಾರ್ಯವಾಗಿತ್ತು. ಅದರ ಭಾಗವಾಗಿಯೇ ಯಕ್ಷಗಾನ, ನಾಗಮಂಡಲ, ಭ್ರಹ್ಮಕಲಶ, ಜಾತ್ರೆ, ನೇಮಗಳಲ್ಲಿ ಬಂಟ- ಬಿಲ್ಲವರಿಗೆ ಪುರೋಹಿತಶಾಹಿಗಳು ನಾಯಕತ್ವ ನೀಡಿದವು. ಇಂದೊಂದು ಜನಿವಾರಧಾರಿಗಳ ಮಲ್ಟಿ ಪ್ಲ್ಯಾನ್ ಆಗಿದೆ. ಇಂತಹ ಒಂದು ವಿಶಿಷ್ಟ ಸನ್ನಿವೇಶದಲ್ಲಿಯೇ ನಾವು ಹಿಂದೂಪರ ಸಂಘಟನೆಗಳ ಪ್ರಸರಣವನ್ನು ಕಾಣುವುದು. ಇದು ಒಂದು ನೆಲೆಯಲ್ಲಿ ಹೊಸಕಾಲದ ಹೊಸ ಒತ್ತಡಗಳಿಗೆ ಪುರೋಹಿತಶಾಹಿ ಪ್ರತಿಕೃಯಿಸಿದ ರೀತಿಯಾಗಿದ್ದರೆ ಇನ್ನೊಂದೆಡೆ ಜೀರ್ಣೋದ್ಧಾರಗಳಂತಹ ಮೊದಲ ಸುತ್ತಿನ ಕಾರ್ಯತಂತ್ರಗಳ ಮುಂದುವರಿಕೆಯೂ ಆಗಿದೆ.

ಹಿಂದುತ್ವ ಸಂಘಟನೆಯ ಕಾಲಾಳುಗಳ ಸಂಘಟನೆಯ ನಾಯಕತ್ವ ದೊರಕಿದ್ದು ಹೊಸಕಾಲದಲ್ಲಿ ಹೊಸ ಕಸವು ಪಡೆದುಕೊಂಡ ವರ್ಗಗಳಿಗೇ.Accused_Homestay_Attack ಪುರೋಹಿತಶಾಹಿಯ ಇಂತಹ ಕಾರ್ಯತಂತ್ರಗಳ ಇನ್ನೊಂದು ಅಂಶ ಹಿಂದುಳಿದ ಜಾತಿಗಳಿಗೆ ಸಮಾನ ಶತ್ರುವೊಂದನ್ನು ಸ್ಷಷ್ಟಪಡಿಸಿಕೊಟ್ಟದ್ದು. ಅದು ಮುಸ್ಲೀಮರು. ಹೀಗಾಗಿ ಕರಾವಳಿಯ ಕೆಳವರ್ಗಗಳಲ್ಲಿ ಹೊಸದಾಗಿ ಸೃಷ್ಟಿಯಾದ ಎನರ್ಜಿಗೆ, ಕ್ರೀಯಾಶೀಲಿತೆಗೆ ಒಂದು ವೇದಿಕೆ ನಿರ್ಮಿಸಿಕೊಡುವ ಮೂಲಕ ಪುರೋಹಿತಶಾಹಿ ಅವುಗಳ ಹಕ್ಕೊತ್ತಾಯದ ಬೇಡಿಕೆಗಳು ತನ್ನತ್ತವೇ ತಿರುಗಿ ತಾನು ಅನುಭವುಸುತಿದ್ದ ಪಂಕ್ತಿಭೇದಗಳಂತಹ ವಿಶೇಷ ಸಾಮಾಜಿಕ ಸ್ಥಾನಮಾನ, ಸೌಲಭ್ಯಗಳು ಸಾರ್ವತ್ರಿಕವಾಗಿ ಪ್ರಶ್ನೆಯಾಗುವುದರಿಂದ ಸ್ವಯಂ ರಕ್ಷಿಸಿಕೊಂಡಿದೆ. ಪಂಕ್ತಿಬೇದವನ್ನು, ದೇವಸ್ಥಾನದ ಸ್ಥಾನ ಮಾನವನ್ನು ಪ್ರಶ್ನೆ ಮಾಡಬೇಕಾಗಿದ್ದವರನ್ನೇ ಪುರೋಹಿತಶಾಹಿಗಳು ತನ್ನ ತೆಕ್ಕೆಯಲ್ಲಿ ಇರಿಸಿಕೊಂಡಿದ್ದಾರೆ.

ಉತ್ತರದಲ್ಲಿ ಹಿಂದುಳಿದ ವರ್ಗಗಳನ್ನ ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಪ್ರಕ್ರಿಯೆಯನ್ನ ನಾವು ಕಾಣುತ್ತೇವೆ. ಆದರೆ ಅಲ್ಲಿ ಅಂತಹ ಹೊಸ ಆರ್ಥಿಕತೆಯ ಸುಳಿವುಗಳು ಇಲ್ಲದಿರುವಂತದ್ದು ಮತ್ತು ಅಲ್ಲಿ ಚಲನೆ ಮುಖ್ಯವಾಗಿ ಮೀಸಲಾತಿ ಆಧರಿಸಿದ್ದು. ಹೀಗಾಗಿ ಅಲ್ಲಿನ ಹಿಂದುಳಿದ ಜಾತಿಗಳು ಮುಸ್ಲಿಮರನ್ನು ಮೀಸಲಾತಿಗೆ ಸಹಸ್ಪರ್ಧಿಗಳು ಮತ್ತು ಆ ಮೂಲಕ ಅವರು ತಮ್ಮ ಸೌಲಭ್ಯಗಳಿಗೆ ಸಂಚಕಾರ ಎನ್ನುವಂತೆ ಪರಿಗಣಿಸುವಲ್ಲಿ ಹಿಂದುತ್ವ ಪ್ರಾಜೆಕ್ಟ್ ಕಾರ್ಯನಿರ್ವಹಿಸಿದೆ. ಇತ್ತೀಚೆಗೆ ನಡೆದ ಬಿಹಾರದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಲಾಲು ಹಾಗೂ ನಿತೀಶ್ ಅವರನ್ನ ಕುರಿತಂತೆ “ಅವರು ದಲಿತ, ಮಹಾದಲಿತ ಹಾಗೂ ಹಿಂದುಳಿದ ವರ್ಗಗಳಿಂದ ಶೇಕಡಾ ಐದರಷ್ಟು ಮೀಸಲು ಕೋಟಾವನ್ನು ಕಿತ್ತುಕೊಂಡು ಇನ್ನೊಂದು ಸಮುದಾಯಕ್ಕೆ ಕೊಡಲು ಪಿತೂರಿ ಮಾಡುತ್ತಿದ್ದಾರೆ” ಎಂದು ನುಡಿದದ್ದು ಇದೇ ತಂತ್ರದ ಭಾಗವಾಗಿಯೇ.

ಕರಾವಳಿಯಲ್ಲಿ ಹಿಂದುತ್ವ ಸಂಘಟನೆಗಳ ಮೂಲಕ ಅಂತಹ ಒಂದು ಗೋಲ್ ಪೋಸ್ಟ್ ಅನ್ನು ಕೆಳವರ್ಗಗಳಿಗೆ ಬ್ರಾಹ್ಮಣಶಾಹಿ ಸಂಘಪರಿವಾರ ಒದಗಿಸಿಕೊಟ್ಟಿದೆ. ಪರಿವಾರದ ಕಾಲಾಳು ಸಂಘಟನೆಗಳಲ್ಲಿ ಹಿಂದುಳಿದ ಜಾತಿಗಳಿಗೆ ನಾಯಕತ್ವವನ್ನ ಕೊಡುವುದು ಮತ್ತು ಅದೇ ವೇಳೆಗೆ ಅವುಗಳ ದೃಷ್ಟಿ ತನ್ನ ವಿರುದ್ಧ ಬೀಳದಂತೆ ನೋಡಿಕೊಳ್ಳುವುದು- ಇವೆರಡೂ ಸ್ಪಷ್ಟವಾಗಿ ವ್ಯಾಖ್ಯಾನಿಸಲ್ಪಟ್ಟ ಹಾಗೂ ಸಂಕೀರ್ಣ ಸ್ವರೂಪದ ನಿಯಂತ್ರಣ ವ್ಯವಸ್ಥೆಯನ್ನ ಅಪೇಕ್ಷಿಸಿದವು. ಇವತ್ತು ಕಲ್ಲಡ್ಕ ಅನ್ನೋದು ಇಡೀ ಕರಾವಳಿಯ ಹೈಕಮಾಂಡ್ ಅನ್ನೋ ರೀತಿಯಲ್ಲಿ ಉದಯಿಸಿದ್ದು ಸಂಘಪರಿವಾರದ ಅಂತಹ ಪ್ರಯತ್ನಗಳು ಯಶಸ್ವಿಯಾಗಿರುವುದನ್ನ ಸಂಕೇತಿಸುತ್ತವೆ.

***

ಬಿಲ್ಲವರ ಸಮುದಾಯದಲ್ಲಿ ಆರ್.ಎಸ್.ಎಸ್ ನ ಯೂಸ್ ಅ್ಯಂಡ್ ತ್ರೋ ಗೆ ಬಲಿಯಾದುದರ ಬಗ್ಗೆ ಗಂಭಿರ ಚರ್ಚೆಗಳು ನಡೆಯುತ್ತಿದೆ. ಹಿಂದುತ್ವವಾದದಿಂದ ಬೀದಿಪಾಲಾದ ಬಿಲ್ಲವ ಕುಟುಂಬಗಳ ಉದಾಹರಣೆಯನ್ನು ಮುಂದಿಟ್ಟುಕೊಂಡು ಸಮುದಾಯದೊಳಗೇ ಜಾಗೃತಿ ಕಾರ್ಯ ಸ್ವಲ್ಪ ಮಟ್ಟಿಗೆ ಪ್ರಾರಂಭವೇನೋ ಆಗಿದೆ. ಅದರ ಅರಿವಿದ್ದೇ ಇದೀಗ ಆರ್ ಎಸ್ ಎಸ್ ಕಣ್ಣು ಬಂಟ ಸಮುದಾಯದತ್ತಾ ಬಿದ್ದಿದೆ. ಅಂಡರ್ ವಲ್ಡ್ ಅನ್ನು ಹತ್ತಿರದಿಂದ ನೋಡಿದ ಸಮುದಾಯವಾಗಿರೋ ಬಂಟ ಸಮುದಾಯದಲ್ಲಿ ರೌಡೀಸಂ ಎನ್ನುವುದೂ ಕೂಡಾ ಪ್ರತಿಷ್ಠೆಯ ವಿಚಾರವಾಗಿದೆ. ದೇವಸ್ಥಾನಗಳಲ್ಲಿ ಯಜಮಾನಿಕೆಯನ್ನು ಕೊಟ್ಟು ತಮ್ಮ ನೈವೇದ್ಯ ಬೇಯಿಸಿಕೊಂಡವರು ಇದೀಗ ತಮ್ಮ ದ್ವೇಷದ ರಾಜಕಾರಣಕ್ಕೂ ಬಂಟರನ್ನು ಬಳಸಿಕೊಳ್ಳಲು ಹವಣಿಸುತ್ತಿದ್ದಾರೆ. ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಸದೃಡವಾಗಿರುವ ಇಂತಹ ಸಮುದಾಯ ಕೋಮುವಾದಿಗಳಿಗೆ ಅಸ್ತ್ರವಾಗುತ್ತಿರೋದು ಬಂಟ ಸಮುದಾಯ ಮತ್ತು ಸಮಾಜಕ್ಕೆ ಅತ್ಯಂತ ಆತಂಕಕಾರಿ.

ಸಾಮಾಜಿಕ ಜಾಲತಾಣ ಹಾಗೂ ಮುಸ್ಲಿಮ್ ಮಹಿಳೆಯರ ಪ್ರಾತಿನಿಧ್ಯ


-ಇರ್ಷಾದ್ ಉಪ್ಪಿನಂಗಡಿ


ಅಲ್ಲಾರಿ, ನಿಮ್ಮ ಮುಸ್ಲಿಮ್ ಯುವಕರು ಸಾಮಾಜಿಕ ಜಾಲ ತಾಣಗಳಲ್ಲಿ ತುಂಬಾ ಆಕ್ಟ್ವೀವ್ ಆಗಿ ಗುರುತಿಸಿಕೊಳ್ತಾರೆ, ಆದ್ರೆ ಮುಸ್ಲಿಮ್ ಮಹಿಳೆಯರು ಇಲ್ಲಿ ಯಾಕೆ ಕಾಣಿಸಿಕೊಳ್ತಿಲ್ಲ?  ನನ್ನ ಜೊತೆ ಮಾತನಾಡುವ ಅನೇಕ ಸ್ನೇಹಿತರು ನನ್ನಲ್ಲಿ ಕೇಳುವ ಸಹಜ ಪ್ರೆಶ್ನೆ. ಹೌದಲ್ವಾ, ಅಂತinidan-muslim-woman ಕುತೂಹಲಕ್ಕಾಗಿ ನಾನು ನನ್ನ ಫೇಸ್ ಬುಕ್ ಖಾತೆಯಲ್ಲಿ ಎಷ್ಟು ಮುಸ್ಲಿಮ್ ಮಹಿಳೆಯರು ಸ್ನೇಹಿತರಾಗಿದ್ದಾರೆ ಎಂದು ಚೆಕ್ ಮಾಡಿದೆ. ನನ್ನ ಸುಮಾರು ಮೂರು ಸಾವಿರ ಸ್ನೇಹಿತರ ಪೈಕಿ ಮುಸ್ಲಿಮ್ ಮಹಿಳೆಯರ ಸಂಖ್ಯೆ ಕೇವಲ ಆರು! ಈ ಪೈಕಿ ಎಷ್ಟು ಖಾತೆಗಳು ಅಸಲಿ ಅಥವಾ ಎಷ್ಟು ಖಾತೆಗಳು ನಕಲಿ ಎಂಬುವುದನ್ನು ನನಗೆ ಇದುವರೆಗೂ ಕಂಡುಹಿಡಿಯೋದಕ್ಕೆ ಸಾಧ್ಯವಾಗಿಲ್ಲ. ಕಾರಣ, ಖಾತೆ ಹೊಂದಿದವರ ಪ್ರೊಫೈಲ್ ಫೋಟೋವಾಗಲಿ ಇತರ ಮಾಹಿತಿಗಳಾಗಲಿ ಅಲ್ಲಿಲ್ಲ. ಆದ್ರೆ ನನ್ನ ಫೇಸ್ ಬುಕ್ ಖಾತೆಯ ಸ್ನೇಹಿತರಲ್ಲಿ ಇತರ ಧರ್ಮೀಯ ಮಹಿಳೆಯರ ಸಂಖ್ಯೆ ಬರೋಬ್ಬರಿ 400 ಕ್ಕೂ ಅಧಿಕ!

ಹಿಂಗ್ಯಾಕೆ ಅಂತ ನೀವು ತಲೆಕೆಡೆಸಿಕೊಂಡಿರಬಹುದು. ಆದ್ರೆ ನನಗೆ ಇದ್ರಲ್ಲಿ ಆಶ್ವರ್ಯ ಏನೂ ಅನ್ನಿಸೋದಿಲ್ಲ. ಬದಲಾಗಿ ಖೇಧ ಅನ್ನಿಸುತ್ತದೆ. ಕೆಲವು ತಿಂಗಳ ಹಿಂದೆ ಒಬ್ಬರು ಮುಸ್ಲಿಮ್ ಮಹಿಳೆ ನನ್ನ ಫೇಸ್ ಬುಕ್ ಖಾತೆಗೆ ಫ್ರೆಂಡ್ ರಿಕ್ವೆಸ್ಟ್ ಕಲುಹಿಸಿದ್ದರು. ಅವರ ಹೆಸರು ಉಮ್ಮು ರವೂಫ್ ರಹೀನಾ. ಅವರ ಮುಖಪುಟವನ್ನು ಗಮನಿಸಿದಾಗ ನನಗೆ ತುಂಬಾನೆ ಆಶ್ವರ್ಯವಾಯಿತು. ನನ್ನ ಫೇಸ್ ಬುಕ್ 6 ಮುಸ್ಲಿಮ್ ಗೆಳತಿಯರ ಪೈಕಿ ಇವರೊಬ್ಬರೇ ತಮ್ಮ ಪ್ರೊಫೈಲ್ ಫೋಟೋವನ್ನು ಹಾಕಿದ್ದರು. ಅವರ ಎಫ್.ಬಿ ವಾಲ್ ನೋಡ್ತಾ ಹೋದಂತೆ ಸಾಕಷ್ಟು ಪ್ರಗತಿಪರ ಬರಹಗಳು ಅಲ್ಲಿ ಕಂಡುಬಂದವು. ಧರ್ಮದ ಹೆಸರಲ್ಲಿ ನಡೆಯುತ್ತಿರುವ ಮೂಲಭೂತವಾದ, ಕೋಮುವಾದ, ಮಹಿಳಾ ಶೋಷಣೆಯ ವಿರುದ್ಧ ಧೈರ್ಯವಾಗಿ, ಲಾಜಿಕ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು ರಹೀನಾ. ಕುತೂಹಲಕಾರಿ ವಿಚಾರವೆಂದರೆ ಇವರ ಸ್ಟೇಟಸ್ಗೆ ಬರುತ್ತಿರುವ ಕಾಮೆಂಟ್ಗಳು ಮಾತ್ರ ಅಸಹನೀಯ.

ಅಲ್ಲಿರುವ ಮುಸ್ಲಿಮ್ ಯುವಕರ ಬಹುತೇಕ ಕಾಮೆಂಟ್ಗಳು ರಹೀನಾ ತಮ್ಮ ಪ್ರೊಫೈಲ್ನಲ್ಲಿ ಫೋಟೋ ಹಾಕಿದಕ್ಕಾಗಿ. ಜೊತೆಗೆ ಅವರ ಪ್ರಗತಿಪರ ಲಾಜಿಕ್ ಅಭಿಪ್ರಾಯಗಳಿಗೆ ಉತ್ತರ ನೀಡಲು ಸಾಧ್ಯವಾಗದಾಗ ಕೋಪದಿಂದ ಅವರ ಮೇಲೆ ಮುಗಿಬೀಳುತ್ತಿದ್ದರು. ಬಹುತೇಕ ಕಾಮೆಂಟ್ಗಳ ಒತ್ತಾಯ ಒಂದೇ ಮುಸ್ಲಿಮ್ ಮಹಿಳೆಯಾಗಿ ಫೇಸ್ ಬುಕ್ ಪ್ರೊಫೈಲ್ನಲ್ಲಿ ನಿನ್ನ ಫೋಟೋ ಹಾಕಿರೋದು ಧರ್ಮ ಬಾಹಿರ  ಎಂದು. ಫೋಟೋ ಹಾಕಿರೋದು ಅಲ್ಲದೆ ಧರ್ಮದ ಬಗ್ಗೆ ಮೂಲಭೂತವಾದದ ಕುರಿತಾಗಿ ಪ್ರಶ್ನಿಸಿದರೆ ಪರಿಸ್ಥಿತಿ ನೆಟ್ಟಗಿರೋದಿಲ್ಲ ಎಂಬ ಬೆದರಿಕೆಗಳು. ಹೀಗೆ ರಹೀನಾ ಮೇಲೆ ಮುಗಿಬಿದ್ದ ಯುವಕರ ಪ್ರೋಫೈಲ್ಗಳನ್ನು ನಾನು ಕುತೂಹಲಕ್ಕಾಗಿ  ಗಮನಿಸುತ್ತಿದ್ದೆ. ಅಬ್ಬಬ್ಬಾ,  ಅದೆಷ್ಟು ಅಂದ ಚೆಂದದ ಫೋಟೋಗಳು, ನಿಂತು ಕುಂತು, ಬೈಕ್ ಮೇಲೆ ಕೂತು, ಕಾರ್ ಮುಂದೆ ನಿಂತು ಬೇರೆ, ಹೀಗೆ ಭಿನ್ನ ವಿಭಿನ್ನ ಪೋಸುಗಳಿಂದ ಕೂಡಿದ ಪೋಟೋಗಳು ಅಲ್ಲಿ ರಾರಾಜಿಸುತ್ತಿದ್ದವು. ಇದಕ್ಕೆಲ್ಲಾ ನಿನ್ನ ಧರ್ಮ ಅನುಮತಿ ಕೊಡುತ್ತಾ ಎಂದು ಪ್ರಶ್ನಿಸಿದರೆ ಅವರಲ್ಲಿ ಉತ್ತರವೇ ಇಲ್ಲ. ಮುಸ್ಲಿಮ್ ಮಹಿಳೆಯೊಬ್ಬಳು ಹೀಗೆ ಬಹಿರಂಗವಾಗಿ ಪ್ರೆಶ್ನೆ ಮಾಡ್ತಿದ್ದಾರಲ್ಲಾ ಅಂತ ನಾನು ಖುಷಿ ಪಟ್ರೆ, ಕೊನೆಗೊಂದು ದಿನ ರಹೀನಾ ಫೇಸ್ ಬುಕ್ ಎಕೌಂಟ್ ಇದ್ದಕ್ಕಿದಂತೆ ನಾಪತ್ತೆಯಾಗೋದಾ!

ಮುಸ್ಲಿಮ್ ಮಹಿಳೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ನೀವು ಮಿಂಚಿದಾಗ ಆದಂತಹಾ ಅನುಭವಗಳೇನು ಎಂದು ರಹೀನರಲ್ಲಿ ಮಾತನಾಡಿದಾಗ  ನನ್ನ ಇನ್ ಬಾಕ್ಸ್ ಗೆ ಕೆಟ್ಟ ಕೆಟ್ಟ ಬೆದರಿಕೆಯ ಮೆಸೇಜ್ಗಳು ಬರುತ್ತಿದ್ದವು. ಫೋಟೋ ಯಾಕೆ ಹಾಕ್ತಿಯಾ ಅಂತ ಮುಗಿಬೀಳುತ್ತಿದ್ದರು. ಹೀಗೆ ಫೋಟೋ ಹಾಕೋದು, ಧರ್ಮದ ಬಗ್ಗೆ ಪ್ರಶ್ನಿಸೋದನ್ನು ಮುಂದುವರಿಸಿದ್ರೆ ಪರಿಣಾಮ ನೆಟ್ಟಗಿರೋದಿಲ್ಲ, ಮಹಿಳೆ ಹೇಗಿರಬೇಕು ಹಾಗೆಯೇ ಇರಬೇಕೆಂಬ ಬೆದರಿಕೆ ಕರೆಗಳೂ ಸಾಮಾನ್ಯವಾಗಿದ್ದವು. ಅನಿವಾರ್ಯವಾಗಿ ಖಾತೆಯ ಪ್ರೊಫೈಲ್ನಿಂದ ನನ್ನ ಪೋಟೋವನ್ನು ಡಿಲಿಟ್ ಮಾಡಬೇಕಾಗಿ ಬಂತು.  ಕೊನೆಗೊಂದು ದಿನ ನನ್ನ ಫೇಸ್ ಬುಕ್ ಖಾತೆ ಇದ್ದಕಿದ್ದಂತೆ ಬ್ಲಾಕ್ ಆಗೋಯ್ತು.

ರಹೀನಾ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲ  ಸನ್ಮಾರ್ಗ ವಾರ ಪತ್ರಿಕೆಗೆ ಲೇಖನಗಳನ್ನುsocial_media ಬರೆದು ಕಳುಹಿಸುತ್ತಿದ್ದರು. ಜಮಾತೇ ಇಸ್ಲಾಮಿ ಹಿಂದ್ ಎಂಬ ಮುಸ್ಲಿಂ ಸಂಘಟನೆಯ ಅಧೀನದಲ್ಲಿರುವ ವಾರ ಪತ್ರಿಕೆಯಿದು. ಆರಂಭದಲ್ಲಿ ಇವರು ಬರೆದ ಲೇಖನಗಳು ಸನ್ಮಾರ್ಗದಲ್ಲಿ ಪ್ರಕಟವಾಗುತಿತ್ತು. ಆದರೆ ಯಾವಾಗ ರಹೀನಾ ಧರ್ಮದ ಹುಳುಕುಗಳನ್ನು ಬಹಿರಂಗವಾಗಿ ಪ್ರಶ್ನಿಸಲು ಶುರುಮಾಡಿದ್ರೋ, ಸಾಮಾಜಿಕ ಜಾಲತಾಣಗಳಲ್ಲಿ ಇವರಿಗೆ ವಿರೋಧ ವ್ಯಕ್ತವಾಗತೊಡಗಿದ್ವೋ, ಪ್ರಗತಿಪರ ಎಂದು ಬಿಂಬಿಸಿಕೊಳ್ಳೋ ಪ್ರಯತ್ನ ಮಾಡುತ್ತಿರುವ ಜಮಾತೇ ಇಸ್ಲಾಮೀಯ ವಾರ ಪತ್ರಿಕೆ ಸನ್ಮಾರ್ಗದಲ್ಲಿ ರಹೀನಾ ಲೇಖನ ಪ್ರಕಟನೆಗೆ ಅವಕಾಶ ನಿರಾಕರಿಸಲಾಯಿತು. ಇನ್ನು ದಲಿತ ಪರ, ಅಲ್ಪಸಂಖ್ಯಾತರ ಪರ, ಅಭಿವ್ಯಕ್ತಿಯ ಪರ ಹಾಗೂ ಮಹಿಳಾ ಪರ ಧ್ವನಿ ಎಂದು ಬಿಂಬಿಸಿಕೊಳ್ಳುವ ಕನ್ನಡ ದಿನಪತ್ರಿಕೆಯೊಂದರಲ್ಲೂ ರಹೀನಾ ಕೆಲಸ ಕಳೆದುಕೊಳ್ಳಬೇಕಾಯಿತು.

ಜೋಹಾ ಕಬೀರ್. ಎಂಜಿನಿಯರ್ ಪಧವೀಧರೆ ಮುಸ್ಲಿಮ್ ಯುವತಿ. ಈಕೆಯ ಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಖಾತೆಹೊಂದಲು, ತನ್ನ ಪ್ರೋಫೈಲ್ನಲ್ಲಿ  ಭಾವಚಿತ್ರ ಹಾಕಿಕೊಳ್ಳಲು ಹಾಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಇವರಿಗೆ ಪೋಷಕರ-ಪತಿಯ ವಿರೋಧವೇನಿಲ್ಲ. ಆದರೆ  ಸಾಮಾಜಿಕ ಜಾಲತಾಣಗಳಲ್ಲಿರುವ ಮುಸ್ಲಿಮ್ ಯುವಕರಿಗೆ ಸಮುದಾಯದ ಹೆಣ್ಣುಮಕ್ಕಳ ಮೇಲೆ ಎಲ್ಲಿಲ್ಲದ ಕಾಳಜಿ! ಪ್ರೋಫೈಲ್ ಫೋಟೋ ಹಾಕಿದಕ್ಕಾಗಿಯೇ ಇವರಿಗೂ ಕೊಟ್ಟ ಕಿರುಕುಳ ಅಷ್ಟಿಷ್ಟಲ್ಲ. ಒತ್ತಡ ಹೆಚ್ಚಾಗಿ ಇವರೂ ತಮ್ಮ ಪ್ರೋಫೈಲ್ ಪೋಟೋವನ್ನು ಕಿತ್ತುಹಾಕಬೇಕಾಗಿ ಬಂತು. ಇನ್ನು ತನ್ನ ಪತಿಯ ಜೊತೆ ಮದುವೆ ದಿನದ ಪೋಟೋವನ್ನು ಫೇಸ್ ಬುಕ್ ಖಾತೆಯಲ್ಲಿ ಹಾಕಿದಾಗ ಅದಕ್ಕೂ ವಿರೋಧ. ತನ್ನ ಪತಿಯ ಜೊತೆ ನಿಂತ ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಸ್ವಾತಂತ್ಯ್ರವೂ ನನಗಿಲ್ಲ. ನನ್ನಂತೆಯೇ ಅನೇಕ ಗೆಳತಿಯರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಬಯಸುತ್ತಾರೆ, ಆದರೆ ಅದಕ್ಕೆ ಎದುರಾಗುತ್ತಿರುವ ವಿರೋಧ ನಮ್ಮೆನ್ನೆಲ್ಲಾ ಸೋಷಿಯಲ್ ಮಿಡಿಯಾಗಳಿಂದ ದೂರ ಉಳಿದುಕೊಳ್ಳುವಂತೆ ಮಾಡಿದೆ ಅಂತಿದ್ದಾರೆ ಜೋಹಾ ಕಬೀರ್. ಜೋಹಾರದ್ದೇ ಕಥೆ ಆಕೆಯ ಇತರ ಮುಸ್ಲಿಮ್ ಗೆಳತಿಯರದ್ದು.

ನಾಲ್ಕು ವರ್ಷಗಳ ಹಿಂದೆ ಮುಬೀನಾ (ಹೆಸರು ಬದಲಾಯಿಸಲಾಗಿದೆ) ಎಂಬ  ವೈದ್ಯಕೀಯ ಶಿಕ್ಷಣ ಓದುತ್ತಿದ್ದUpload-Facebook-photo ಮುಸ್ಲಿಮ್ ಯುವತಿ ಫೇಸ್ ಬುಕ್ ನಲ್ಲಿ ತುಂಬಾ ಆಕ್ವೀವ್ ಆಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪ್ರೊಫೈಲ್ ನಲ್ಲಿ ತಮ್ಮ ಪೋಟೋವನ್ನು ಹಾಕಿಕೊಂಡಿದ್ದರು. ಮುಕ್ತವಾಗಿ ಮೂಲಭೂತವಾದ, ನೈತಿಕ ಪೊಲೀಸ್ ಗಿರಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿಸುತ್ತಿದ್ದರು. ಆದ್ರೆ ಕೆಲವೇ ದಿನಗಳಲ್ಲಿ ಮೂಲಭೂತವಾದಿಗಳ ಕೆಂಗಣ್ಣಿಗೆ ಅವರು  ಗುರಿಯಾಗಬೇಕಾಯಿತು. ಇಷ್ಟಾದರೂ, ಸಾಮಾಜಿಕ ಜಾಲತಾಣಗಳ ಬೆದರಿಕೆಗೆ ಜಗ್ಗದ ಮುಬೀನಾ ಮನೆಗೆ ಮೂಲಭೂತವಾದಿ ಪುಂಡರ ಗುಂಪು ಹೋಗಿ ಎಚ್ಚರಿಕೆ ನೀಡಿ ಫೇಸ್ ಬುಕ್ ಖಾತೆಯನ್ನೇ ಸ್ಥಗಿತಗೊಳಿಸಿಬಿಟ್ಟರು ಅಂತಾರೆ ಡಿ.ವೈ.ಎಫ್.ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ. ಮುನೀರ್ ಕಾಟಿಪಳ್ಳ ಸಾಮಾಜಿಕ ಜಾಲ ತಾಣಗಳಲ್ಲೂ ತುಂಬಾನೇ ಆಕ್ಟೀವ್ ಆಗಿ ತಮ್ಮನ್ನು ತೊಡಗಿಸಿಕೊಂಡಿರುವ ವ್ಯಕ್ತಿ. ವರ್ಷದ ಹಿಂದೆ ಅವರು ಪತ್ನಿ ಶಬಾನಾ ಜೊತೆಗಿದ್ದ ಪೋಟೋವನ್ನು ಫೇಸ್ ಬುಕ್ ನಲ್ಲಿ  ಹಾಕೊಂಡಿದ್ದರು. ತಮಾಷೆಯಂದ್ರೆ ಮುಸ್ಲಿಮ್ ಮೂಲಭೂತವಾದಿ ಹುಡುಗರು ಅದಕ್ಕೂ ವಿರೋಧ ವ್ಯಕ್ತಪಡಿಸಿದ್ದರು.

ಇದನ್ನು ಮೀರಿ ಮುಸ್ಲಿಮ್ ಹೆಣ್ಣುಮಕ್ಕಳು ಸೋಷಿಯಲ್ ಮೀಡಿಯಾಗಳಲ್ಲಿ ಮುಂದುವರಿದರೆ, ಅವರ ಹೆಸರಲ್ಲಿ ಫೇಕ್ ಖಾತೆಗಳನ್ನು ತೆರೆದು ಅಶ್ಲೀಲ ವಿಡಿಯೋಗಳನ್ನು ಟ್ಯಾಗ್ ಮಾಡಲಾಗುತ್ತದೆ. ಅಥವಾ ಕೆಟ್ಟ ಮೆಸೇಜ್ಗಳನ್ನು ಹರಿಯಬಿಡಲಾಗುತ್ತದೆ. ಇಂಥಹಾ ಅನೇಕ ಕೀಳುಮಟ್ಟದ ಕಿರುಕುಳದ ಅನುಭವಗಳು ಈ ಮೇಲಿನ ಎಲ್ಲಾ ಮಹಿಳೆಯರಿಗಾಗಿದೆ. ಈ ಮೂಲಕ ಸಾಮಾಜಿಕ ಜಾಲ ತಾಣಗಳಿಂದ ಅವರನ್ನು ಹೊರದಬ್ಬುವ ಪ್ರಯತ್ನವನ್ನು ಮೂಲಭೂತವಾದಿಗಳು ಮಾಡ್ತಿದ್ದಾರೆ. ಇನ್ನೊಂದೆಡೆ ಹಿಂದೂ ಪರ ಸಂಘಟನೆಗಳು ಲವ್ ಜಿಹಾದ್ ಭಯಹುಟ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿರುವ ಹಿಂದೂ ಹೆಣ್ಣುಮಕ್ಕಳನ್ನು ನಿಯಂತ್ರಿಸುವ ಪ್ರಯತ್ನ ನಡೆಸುತ್ತಿರುವುದು ಕೂಡಾ ಗಮನಿಸಬೇಕಾದ ವಿಚಾರ.

ಈ ಹಿಂದೆ ಮುಸ್ಲಿಮ್ ಹೆಣ್ಣುಮಕ್ಕಳಿಗೆ ವಿದ್ಯಾಬ್ಯಾಸ ಪಡೆಯಲೂ ಅವಕಾಶವಿರಲಿಲ್ಲ. ಸಾರಾ ಅಬೂಬಕ್ಕರ್ ಅಂತಹಾ ಅನೇಕ ದಿಟ್ಟ ಮಹಿಳೆಯರ ಹೋರಾಟದ ಫಲವೆಂಬುವಂತೆ ಇಂದು ಮುಸ್ಲಿಮ್ ಹೆಣ್ಣುಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಆದರೆ ಸಮಾಜದಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರು ಏನೂ ಸಾಧನೆ ಮಾಡಬೇಕಾದ್ರೂ ಅದು ಬುರ್ಖಾದೊಳಗಡೆಗೆ ಮಾತ್ರ ಸೀಮಿತ ಎಂಬ ವಾದದಲ್ಲಿ ಇಂದಿಗೂ ಯಾವುದೇ ಬದಲಾವಣೆಯಾಗಿಲ್ಲ. ಇದನ್ನು ಮೀರಿ ಕೆಲವೊಂದು ಮುಸ್ಲಿಮ್ ಮಹಿಳೆಯರು ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ತಮ್ಮ ಅಭಿವ್ಯಕ್ತಿಯ ಹಕ್ಕನ್ನು ಪಡೆದುಕೊಳ್ಳುವ ಪ್ರಯತ್ನ ಅಲ್ಲೊಂದು ಇಲ್ಲೊಂದರಂತೆ ನಡೆಯುತ್ತಿದೆ. ಧರ್ಮದ ಹೆಸರಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಮುಸ್ಲಿಂ ಮಹಿಳೆಯರ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುವುದನ್ನು ಮುಸ್ಲಿಮ್ ಸಮಾಜದ ಪ್ರಜ್ಞಾವಂತರು ಗಮನಿಸಬೇಕಿದೆ.

ಪ್ರತಿ ಸವಾಲಿಗೂ ಸಿದ್ಧ ಉತ್ತರ – ಬುದ್ಧ-ಚಾಣಕ್ಯರ ಬಿಹಾರ


– ಶ್ರೀಧರ್ ಪ್ರಭು


ಪರಿಹಾರವೇ ಇಲ್ಲವೇನೋ ಎಂಬಂಥ ಪ್ರಶ್ನೆಗಳನ್ನು ಸವಾಲಾಗಿ ಸ್ವೀಕರಿಸಿ ಇತಿಹಾಸದುದ್ದಕ್ಕೂ ದಿಟ್ಟ ಮತ್ತು ಸರ್ವಕಾಲಿಕ ಪರಿಹಾರ ನೀಡಿದ ನಾಡು ಬಿಹಾರ. ಸಿದ್ಧಾರ್ಥ ಗೌತಮನನ್ನು ಬುದ್ಧನನ್ನಾಗಿ, ಚಂಡ ಅಶೋಕನನ್ನು ದೇವನಾಂಪ್ರಿಯನನ್ನಾಗಿ, ಜಯಪ್ರಕಾಶರನ್ನು ಲೋಕನಾಯಕನನ್ನಾGautama-Buddhaಗಿ ಮಾಡಿ ಸಮಸ್ತ ನಾಡಿಗೆ ಬೆಳಕು ನೀಡಿದ ನಾಡು ಬಿಹಾರ.  ಆರ್ಯಭಟ, ಕೌಟಿಲ್ಯ, ಚಂದ್ರಗುಪ್ತ ಮೌರ್ಯ, ಗುರು ಗೋವಿಂದ ಸಿಂಹ ಹೀಗೆ ಸಾವಿರ ಸಾವಿರ ರತ್ನಗಳ ಖನಿ ಬಿಹಾರ. ನಳಂದದ (ನಳಂದಾ ಎಂದರೆ ಕೊನೆಯಿಲ್ಲದೆ ಮಾಡುವ ದಾನ) ವಿಶ್ವವಿದ್ಯಾಲಯದಿಂದ ಮೊದಲ್ಗೊಂಡು ಶಿಕ್ಷಣದ ಉತ್ತುಂಗವನ್ನು ಸಾಧಿಸಿದವರ, ಬೌದ್ಧ ಧರ್ಮವನ್ನು ಪ್ರಪಂಚಕ್ಕೆ ಮುಟ್ಟಿಸಿದವರ ಬಿಹಾರ ಅತ್ಯಂತ ಜಾಗೃತ ಭೂಮಿ. ನಮ್ಮ ದೇಶದ ಪ್ರತಿ ಹತ್ತು ಐಎಎಸ್ ಅಧಿಕಾರಿಗಳಲ್ಲಿ ಒಬ್ಬರು ಬಿಹಾರದವರು. ಅನೇಕ ಪ್ರತಿಭಾವಂತ ವಿಜ್ಞಾನಿಗಳು, ರಾಜಕೀಯ ವಿಶ್ಲೇಷಕರು, ವಿಜ್ಞಾನಿಗಳನ್ನು ಕೊಡುಗೆ ನೀಡಿದ ಬಿಹಾರ ಇಂದು ತನ್ನ ಮುಂದಿದ್ದ ಬಹುದೊಡ್ಡ ಸವಾಲಿಗೆ ತನ್ನದೇ ಛಾತಿ ಮೆರೆದು ಉತ್ತರಿಸಿದೆ.

ಬಿಹಾರ್ ರಾಜಕಾರಣದ ಹಿನ್ನೋಟ

ಹಲವು ಸಾಮಾಜಿಕ, ರಾಜಕೀಯ ಚಳುವಳಿಗಳಿಗೆ ಮಡಿಲಾಗಿದ್ದ ಬಿಹಾರವನ್ನು ಸ್ವಾತಂತ್ರ್ಯಾ ನಂತರ ನಾನಾ ಕಾರಣಗಳಿಗಾಗಿ ನಿರ್ಲಕ್ಷಿಸಲಾಯಿತು. ಭಾರತದ ಮೊದಲ ರಾಷ್ಟ್ರಪತಿಗಳು ಬಿಹಾರದವರೇ ಅದರೂ, ರಾಜಕೀಯ ಇಚ್ಛಾ ಶಕ್ತಿ ಮತ್ತು ಒಂದು ನಿರ್ದಿಷ್ಟ ಗೊತ್ತು ಗುರಿಯಿಲ್ಲದ ನೀತಿಗಳಿಂದಾಗಿ ಬಿಹಾರವನ್ನು ಸಂಪೂರ್ಣವಾಗಿ ಕೊನೆಗಾಣಿಸಲಾಯಿತು.

ಹಾಗೆ ನೋಡಿದರೆ ನೆಹರೂ ಸಂಪುಟದಲ್ಲಿ ಬಿಹಾರಕ್ಕ ಎರಡೇ ಸ್ಥಾನ ಸಿಕ್ಕಿದ್ದು. ಒಬ್ಬರು ಸಂಸದೀಯjp-jayaprakash-narayan ವ್ಯವಹಾರಗಳ ಖಾತೆ ಸಚಿವ ಸತ್ಯನಾರಾಯಣ ಸಿನ್ಹಾ ಇನ್ನೊಬ್ಬರು ಕಾರ್ಮಿಕ ಸಚಿವ ಬಾಬು ಜಗಜೀವನ ರಾಮ. ಬೌದ್ಧಿಕ ವಲಯಗಳಲ್ಲಿ ಬಿಹಾರ ಅಪಾರ ಸಾಧನೆ ಮೆರೆದಿತ್ತು. ಜಗಜೀವನ್ ರಾಮ್ ಇನ್ನೊಬ್ಬ ಬಿಹಾರದ ನಾಯಕ ಅನುಗ್ರಹ ನಾರಾಯಣ ಸಿನ್ಹಾ ಜೊತೆಗೆ ೧೯೪೭ ರಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಗೆ ಹೋಗಿ ಉಪನ್ಯಾಸ ನೀಡಿ ಬಂದಿದ್ದರು. ಹೀಗೆ ಬಿಹಾರದ ಪ್ರಭಾವಳಿ ಸಾಕಷ್ಟಿದ್ದರೂ, ಸಾಮಾಜಿಕ ಅಸಮಾನತೆಯ ನಿರ್ಮೂಲನೆಗೆ ಒತ್ತು ಸಿಗದ ಕಾರಣ ಬಿಹಾರದ ದಲಿತ ಮತ್ತು ಹಿಂದುಳಿದವರ ಬದುಕು ಒಂದು ದೊಡ್ಡ ಕಾರಾಗೃಹದಲ್ಲಿ ಬಂಧಿತ ಕೈದಿಗೂ ಕೀಳಾಗಿತ್ತು. ಇಡೀ ಬಿಹಾರವೇ ಒಂದು ಜೀತದ ಮನೆಯಾಗಿತ್ತು. ಬಿ ಪಿ ಮಂಡಲ್ (ಮಂಡಲ ಆಯೋಗದ ಕರ್ತ) ಕೆಲ ಸಮಯ ಮುಖ್ಯ ಮಂತ್ರಿಯಾದದ್ದು ಬಿಟ್ಟರೆ ದಲಿತ ಮತ್ತು ಹಿಂದುಳಿದವರಿಗೆ ಇಲ್ಲಿ ಅಧಿಕಾರವೇ ಸಿಗಲಿಲ್ಲ.

ಆದರೆ ೧೯೭೦ ರಲ್ಲಿ ಮೊದಲ ಬಾರಿಗೆ ಅಂದಿನ ಸಮಾಜವಾದಿ ಪಕ್ಷ  ಅಧಿಕಾರಕ್ಕೆ ಬಂದು ಕರ್ಪೂರಿ ಠಾಕುರ್ ಮುಖ್ಯ ಮಂತ್ರಿಯಾದರು. ಹೆಸರಿಗೆ ಮಾತ್ರ ಠಾಕುರ್ ಆಗಿದ್ದ ಇವರು ನೈಜ ಅರ್ಥದಲ್ಲಿ ಬಿಹಾರದ ತಳಸಮುದಾಯಕ್ಕೆ ನಾಯಕತ್ವ ನೀಡಿದರು. ಲಾಲು ಪ್ರಸಾದ್, ನಿತೀಶ್, ಪಾಸ್ವಾನ್ ಸೇರಿದಂತೆ ಇಂದಿನ ಬಿಹಾರದ ಬಹುತೇಕ ದಲಿತ ಮತ್ತು ಹಿಂದುಳಿದವರ ನಾಯಕರನ್ನು ಬೆಳೆಸಿದರು. ಬಿಹಾರವನ್ನು ಮೇಲ್ಜಾತಿಗಳ ಹಿಡಿತದಿಂದ ಮುಕ್ತಿಗೊಳಿಸಿದ  ಮೊದಲ ಕೀರ್ತಿ ಸಲ್ಲಬೇಕಾದದ್ದು ಜನನಾಯಕರಾದ ಕರ್ಪೂರಿಯವರಿಗೆ.

ಅವರ ಸಮಾಜವಾದಿ ಗರಡಿಯಲ್ಲಿ ಬೆಳೆದ ನಾಯಕತ್ವ ೧೯೭೫ ರಲ್ಲಿ ಹೇರಿದ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿತು. devegowda-vpsingh-chandrashekar-gujralತುರ್ತು ಪರಿಸ್ಥಿತಿಯ ವಿರೋಧಿಸಿ ಕಟ್ಟಿದ ಚಳುವಳಿಯ ಕಾವಿನಲ್ಲಿ ನೆಂದ ಬಿಹಾರದ ಜನಮಾನಸ ಮತ್ತೆ ಕರ್ಪೂರಿ ಯವರನ್ನು ನಾಯಕನನ್ನಾಗಿ ಆರಿಸಿತು. ಆದರೆ ನಂತರದಲ್ಲಿ ಬಂದ ಕಾಂಗ್ರೆಸ್ ಪಕ್ಷ ೧೯೯೦ ರ ವರೆಗೂ  ಅಧಿಕಾರದಲ್ಲಿತ್ತು. ಜಗನ್ನಾಥ ಮಿಶ್ರಾ ಸರಕಾರದ ಆಡಳಿತದಿಂದ ಬೇಸತ್ತು ಹೋಗಿದ್ದ ಜನತೆ ಅಂದಿನ ಯುವ ನಾಯಕ ಲಾಲೂ ಪ್ರಸಾದರನ್ನು ಸಿಂಹಾಸನದ ಮೇಲೆ ಕೂರಿಸಿತು. ಬಾಬರಿ ಮಸೀದಿ ಕೆಡವುವ ಆಂದೋಲನದಲ್ಲಿ ಮಗ್ನವಾಗಿದ್ದವರು ಕೋಮು ದಳ್ಳುರಿ ಅಂಟಿಸಿ ಬಿಟ್ಟಿದ್ದರೂ ಅದರ ಬೇಗುದಿಯಿಂದ ಬಿಹಾರ ಬಚಾವಾಗಿತ್ತು.

ಇಂದಿಗೆ ಇಪ್ಪತ್ತೈದು ವರ್ಷಗಳ ಹಿಂದೆ ಅಡ್ವಾಣಿಯವರ ರಥಯಾತ್ರೆಯನ್ನು ತಡೆದ ಲಾಲೂ ಪ್ರಸಾದ್ ಇಂದು ಬಿಹಾರದ ಜನತೆಯ ಮಧ್ಯೆ ಮತ್ತೆ ಕಿಂಗ್ ಮೇಕರ್ ಆಗಿ ಪ್ರಸ್ತುತರಾಗಿದ್ದಾರೆ. ಬಿಹಾರದ ಚುನಾವಣಾ ಫಲಿತಾಂಶ ಬಂದ ಮೇಲೆ ನಿತೀಶ್ ಗೆಲುವಿಗೆ ಕಾರಣವಾದ ಅನೇಕಾನೇಕ ಅಂಶಗಳನ್ನು ಪ್ರಸ್ತಾಪಿಸಲಾಗುತ್ತಿದೆ. ಕೆಲ ಪ್ರಮುಖ ಮಾಧ್ಯಮಗಳು ಇಡೀ ಚುನಾವಣೆಯ ಯಶಸ್ಸಿಗೆ ಪ್ರಶಾಂತ್ ಕಿಶೋರ್ ಎಂಬ ಮೋದಿಯವರ ಆಪ್ತ ವಲಯದ ಚುನಾವಣಾ ತಂತ್ರ ನಿಪುಣ ಕಾರಣ ಎಂದು ಹೊಗಳಿವೆ. ಕೆಲವರು ಜಾತಿ ಸಮೀಕರಣದ ಕಾರಣ ನೀಡಿ ಇದು ಜಾತಿ ಲೆಕ್ಕಾಚಾರಗಳ ಮೇಲಿನ ಗೆಲುವು ಎಂದಿದ್ದಾರೆ.

ಒಂದು ಚುನಾವಣೆಯ ಯಶಸ್ಸು ಒಬ್ಬ ವ್ಯಕ್ತಿ ಅಥವಾ ಬರಿ ಜಾತಿ ಲೆಕ್ಕಾಚಾರಗಳ ಮೊತ್ತವಾಗಿ  ನೋಡದೇ ಬಿಹಾರದ ಜನಸಾಮಾನ್ಯ ಇಷ್ಟೊಂದು ಸ್ಪಷ್ಟ ಬಹುಮತ ನೀಡಲು ಕಾರಣವಾದ ಬಹು ಮುಖ್ಯ ಆದರೆ ಮುಖ್ಯವಾಹಿನಿಯಲ್ಲಿ ಚರ್ಚೆಯಾಗದ ಅಂಶಗಳನ್ನು ನಾವು ಗಮನಿಸಬೇಕಿದೆ.

ಲಾಲೂ ಎಂಬ ಮಾಂತ್ರಿಕ

ನಮ್ಮ ಚಡ್ಡಿ ಚತುರರು ಇಂಗ್ಲೀಷ್ ಬರದ ಗಾವಂಟಿ ಗಮಾರ ಎಂದು ಬಿಂಬಿಸುವ ಲಾಲೂ ಪ್ರಸಾದ್ ಎಂಬ lalu-sharad-biharಅದ್ಭುತ ಶಕ್ತಿ ಈ ಗೆಲುವಿನ ರೂವಾರಿ ಮೊದಲ ಕಾರಣ. ಲೋಕಸಭಾ ಚುನಾವಣೆಯಲ್ಲಿಯೇ ಪಾಸ್ವಾನ್ ಎಂಬ ದಲಿತ ನಾಯಕ ಬಿಜೆಪಿ ಬುಟ್ಟಿಗೆ ಬಿದ್ದಿದ್ದರು. ನಂತರದಲ್ಲಿ ಮಾಂಝಿಯವರನ್ನು ಓಲೈಸಿ ಮಹದಲಿತರನ್ನು ಸೆಳೆಯುವ ಪ್ರಯತ್ನವಾಯಿತು. ದಲಿತರ ಅಲ್ಪ ಸ್ವಲ್ಪ ಮತ ಪಡೆಯಬಲ್ಲ ಸಮರ್ಥ್ಯವಿದ್ದ ಬಿಎಸ್ಪಿ ಮತ್ತು ಎಡ ಪಕ್ಷಗಳು ಈ ಚುನಾವಣೆಗಳು ಶುರುವಾಗುವ ಮೊದಲೇ ತಾವು ಸ್ವಾತಂತ್ರ್ಯ ವಾಗಿ ಹೋರಾಟ ಮಾಡುವುದಾಗಿ ಘೋಷಿಸಿ ಬಿಟ್ಟಿದ್ದವು. ಲಾಲೂ ಅವರ ಸಮೀಪವರ್ತಿ ಪಪ್ಪು ಯಾದವರನ್ನು ಕೂಡ ಬಿಜೆಪಿ ಸೆಳೆದುಬಿಟ್ಟಿತ್ತು. ಹೀಗೆ ದಲಿತ ಮತ್ತು ಯಾದವ ಮತದಾರದ ಮಧ್ಯೆ ಬಿಜೆಪಿ ಬೇರೂರಲು ಸಾಕಷ್ಟು ಪ್ರಯತ್ನ ಮಾಡಿ ತಕ್ಕ ಮಟ್ಟಿಗೆ ಸಫಲವಾಯಿತು. ಇವ್ಯಾವುದನ್ನೂ ಲಕ್ಷಿಸದ ಲಾಲೂ ಬಿಹಾರದ ಅಸಲಿ ಸಂಘಟನಾ ಸಾಮರ್ಥ್ಯ ಮೆರೆದರು. ಬಿಹಾರದ ಹೃದಯವನ್ನು ಬಲ್ಲ ಲಾಲೂ ತಮ್ಮ ಸಂಪೂರ್ಣ ಶಕ್ತಿಯನ್ನು ಪಣಕ್ಕೆ ಒಡ್ಡಿ ಪರಿಹರಿಸಲು ಸಾಧ್ಯವೇ ಇಲ್ಲದ ಸವಾಲುಗಳನ್ನು ಸ್ವೀಕರಿಸಿದರು. ನಿತೀಶ್ ರನ್ನು  ಮುಖ್ಯಮಂತ್ರಿ ಎಂದು ಬಿಂಬಿಸಿ ಕಾಂಗ್ರೆಸ್ ಪಕ್ಷದ ಸಮರ್ಥನೆಯನ್ನೂ ಪಡೆದರು. ಸೋನಿಯಾ ಮತ್ತು ರಾಹುಲ್ರನ್ನು ಎಷ್ಟು ಬೇಕೋ ಅಷ್ಟೇ ಪ್ರಯೋಗಿಸಿದ ಲಾಲೂ ಸಂಪೂರ್ಣವಾಗಿ ಚುನಾವಣೆಯನ್ನು ಬೇರುಮಟ್ಟದ ಸಂಘಟನೆಯ ಭಾರ ಹೊತ್ತರು. ಅಪ್ರತಿಮ ವಾಗ್ಮಿ ಮತ್ತು ಮನಸೆಳೆಯುವ ಮಾತುಗಳಿಗೆ ಹೆಸರಾದ ಲಾಲೂ ಚುನಾವಣೆಯ ಮೊದಲು ಮತ್ತು ನಂತರದಲ್ಲಿ ನಡೆದ ಯಾವುದೇ ಭಾಷಣ ಮತ್ತು ಪತ್ರಿಕಾಗೋಷ್ಠಿಗಳಲ್ಲಿ  ನಿತೀಶ್ ತಮ್ಮ ಜೊತೆಗಿದ್ದರೆ ಮೊದಲ ಪ್ರಾಶಸ್ತ್ಯ ನಿತೀಶ್ ಗೇ ನೀಡಿದರು. ಸೀಟು ಹೊಂದಾಣಿಕೆಯಲ್ಲಿ ನಿತೀಶ್ ಮತ್ತು ಲಾಲೂ ತಾದಾತ್ಮ್ಯ ಅನುಕರಣೀಯ ವಾಗಿತ್ತು. ಸಣ್ಣ ಪುಟ್ಟ ಸ್ಥಳೀಯ ಗಲಾಟೆಗಳನ್ನು ಸಮರ್ಥವಾಗಿ ಲಾಲೂ ನಿಭಾಯಿಸಿದರು.

ನಿತೀಶ್ ಎಂಬ ಮೌನ ಸಾಧಕ

ಎರಡನೇ ಬಹು ಮುಖ್ಯ ಅಂಶ ನಿತೀಶ್ ಆಡಳಿತಾವಧಿಯಲ್ಲಿನ ಅವರ ಅದ್ಭುತ ಸಾಧನೆ. ಎಲೆಕ್ಟ್ರಿಕಲ್ ಎಂಜಿನೀರಿಂಗ್ ಪದವೀಧರ ನಿತೀಶ್ ಭಾರತೀಯ ತಾಂತ್ರಿಕ ಸೇವೆಯಲಿದ್ದು ನಂತರ ರಾಜಕೀಯಕ್ಕೆ ಹೊರಳಿದವರು. ನಿತೀಶ್ ಅತ್ಯಧ್ಭುತ lalu_nitishಪ್ರತಿಭಾವಂತ ಆಡಳಿತಗಾರ. ೨೦೦೯ ರಲ್ಲಿ ಲೋಕಪಾಲದ ಸುದ್ದಿಯೇ ಇಲ್ಲದಾಗ ಅತ್ಯಂತ ಪುರೋಗಾಮಿ ಬಿಹಾರ ವಿಶೇಷ ನ್ಯಾಯಾಲಯಗಳ ಕಾಯಿದೆ, ೨೦೦೯ ನ್ನು ಜಾರಿಗೆ ತಂದು ಸದ್ದಿಲ್ಲದೇ ಬ್ರಷ್ಟಾಚಾರವನ್ನು ಮಟ್ಟ ಹಾಕಿದರು. ಬ್ರಷ್ಟ ಅಧಿಕಾರಿಗಳ ಮನೆಗಳನ್ನು ಜಪ್ತಿ ಮಾಡಿ ಶಾಲೆ, ಆಸ್ಪತ್ರೆ, ಗ್ರಂಥಾಲಯ ಮತ್ತು ಸಮುದಾಯ ಭವನಗಳನ್ನಾಗಿ ಪರಿವರ್ತಿಸಿಬಿಟ್ಟರು. ಬಿಹಾರ ಅರ್ಥಿಕ ಪ್ರಗತಿಯ ಹೊಸ ಮೈಲುಗಲ್ಲು ಮೀಟಿತು. ನಿತೀಶ್ ಹಳ್ಳಿ ಹಳ್ಳಿ ಗಳಲ್ಲಿ ಹೆಣ್ಣುಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಿ  ಶಾಲೆ ಮತ್ತು ಉದ್ಯೋಗ ಪಸರಿಸಿದರು. ಹೆಣ್ಣು ಮಕ್ಕಳಿಗೆ ಉಚಿತ ಸಮವಸ್ತ್ರ, ಸೈಕಲ್ ಮತ್ತು ವಿದ್ಯಾರ್ಥಿ ವೇತನ ಜಾರಿ ಮಾಡಿದರು. ಮಧ್ಯಾಹ್ನದ ಊಟ ಯೋಜನೆ ಅತ್ಯಂತ ಸಮರ್ಪಕವಾಗಿ ಜಾರಿ ಮಾಡಿದರು. ಆರು ಗಂಟೆಯ ಮೇಲೆ ಹೆಣ್ಣುಮಕ್ಕಳು ಹೋಗಲಿ ಗಂಡಸರೇ ಮನೆಯಿಂದ ಹೊರಬರುವ ಪ್ರಮೇಯವಿರಲಿಲ್ಲ. ಕೆಲವೇ ತಿಂಗಳುಗಳಲ್ಲಿ ನಿತೀಶ್ ಈ ಚಿತ್ರಣ ಬದಲಿಸಿಬಿಟ್ಟರು. ಕಾನೂನು ಸುವ್ಯವಸ್ಥೆ ಸ್ಥಾಪನೆಯಾದ ನಂತರದಲ್ಲಿ ಬಿಹಾರದ ಅತ್ಯಂತ ಪ್ರಭಾವಿ ಮತ್ತು ಪ್ರತಿಭಾನ್ವಿತ ವರ್ಗ ಭಾರತದ ಮತ್ತು ಪ್ರಪಂಚದ ಬೇರೆ ಬೇರೆ ಭಾಗಗಳಿಂದ ಬಂದು ಬಿಹಾರದಲ್ಲಿ ನೆಲೆಸಿ ಉದ್ಯೋಗ ಮತ್ತು ವ್ಯಾಪಾರ ಕೈಗೊಂಡರು. ೨೦೧೩ ರಲ್ಲಿ ವಾಣಿಜ್ಯ ಸಂಸ್ಥೆ ಬಿಹಾರ ಮತ್ತು ಗುಜರಾತ್ ಮಧ್ಯೆ ಹೋಲಿಕೆ ಮಾಡಿ ಒಂದು ವರದಿ ಮಾಡಿತು. ಈ ವರದಿಯ ಪ್ರಕಾರ ಗುಜರಾತ್ ಖಾಸಗಿ ವಲಯಕ್ಕೆ ಮಣೆ ಹಾಕಿ ಬಂಡವಾಳ ಹೂಡಿಸಿ ಲಾಭ ಮಾಡಿಸಿದ್ದರೆ, ಬಿಹಾರದಲ್ಲಿ ಸರಕಾರವೇ ಅಗತ್ಯ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿ ಲಾಭ ಜನರಿಗೇ ದಕ್ಕುವಂತೆ ಮಾಡಿತ್ತು. ಬಡವರ ಹೊಟ್ಟೆ ಮೇಲೆ ಹೊಡೆದು ಭೂಮಿ ವಶಪಡಿಸಿಕೊಳ್ಳದೇ, ಯಾವುದೇ ಅಬ್ಬರದ ಪ್ರಚಾರ ವಿಲ್ಲದೆ, ಸೇಡು ದ್ವೇಷದ ರಾಜಕಾರಣ ಮಾಡದೇ ನಿತೀಶ್ ಅತ್ಯಧ್ಭುತವನ್ನು ಸಾಧಿಸಿ ತೋರಿಸಿದ್ದರು. ಲಾಲೂ ಬಗ್ಗೆ ಅಲ್ಲಲ್ಲಿ ಅಸಮಾಧಾನವಿದ್ದ ಮೇಲ್ವರ್ಗ ಕೂಡ ನಿತೀಶ್ ಎಂದರೆ ಗೌರವಿಸುತ್ತಿತ್ತು. ಮೋದಿಯವರು ನಿತೀಶ್ರ ಕುರಿತು ವಯಕ್ತಿಕ ಟೀಕೆ ಮಾಡಿದಾಗ ನಿತೀಶ್ ಆಡಳಿತದ ಸಮಬಾಳ್ವೆಯ ಮಹತಿ ಅರಿತಿದ್ದ ಈ ವರ್ಗ ತನ್ನ ಸೇಡು ತೀರಿಸಿಕೊಂಡಿತು.

ಕೇಂದ್ರದ ಕುರಿತ ಹತಾಶೆ    

ಮೂರನೆಯ ಕಾರಣ,  ಬಿಹಾರದ ಜನತೆಗೆ ಮೋದಿ ಆಡಳಿತದ ಕುರಿತು ಆದ ತೀವ್ರ ಹತಾಶೆ. ಲೋಕಸಭಾ ಚುನಾವಣೆಯಲ್ಲಿ ನಲವತ್ತರಲ್ಲಿ ಮೂವತ್ತೊಂದು ಸ್ಥಾನ ಗೆದ್ದ ಬಿಜೆಪಿಯಿಂದ ಜನತೆಗೆ ಅಪಾರ ನಿರೀಕ್ಷೆಗಳಿದ್ದವು. ಬಿಹಾರ ಆರ್ಯಭಟನ ನಾಡು ಇಲ್ಲಿಯ ಜನಸಾಮಾನ್ಯರೂ ಗಣಿತದಲ್ಲಿ ಮಹಾ ಪ್ರಕಾಂಡರು! ಮೋದಿಯವರ ಲೋಕ ಸಭಾ ಚುನಾವಣೆಯಲ್ಲಿ ಆಶ್ವಾಸನೆ ನೀಡಿದ ಪ್ಯಾಕೇಜ್ ನ ಒಂದೊಂದು ರೂಪಾಯಿಯ ಲೆಕ್ಕವನ್ನೂ ಬಾಯಲ್ಲೇ ಹೇಳುವಷ್ಟು ಬುದ್ಧಿವಂತರು. ಇವರ ನಿರೀಕ್ಷೆಗಳು ಸಂಪೂರ್ಣ bihar-modi-nitishಸುಳ್ಳಾಗಿ ಜನಜೀವನ ಇನ್ನಷ್ಟು ದುರ್ಭರವಾದಾಗ ಮೋದಿಯವರ ಮೂವತ್ತೈದು ಸಭೆಗಳ ಸೇಡುಭರಿತ ವಯಕ್ತಿಕ ಟೀಕೆಭರಿತ ಭಾಷಣಗಳು ಜನತೆಗೆ ಕರ್ಕಶ ಶಬ್ದದಂತೆ ಕೇಳಿಸಿದವು.

ನಿತೀಶ್ ಲಾಲೂ ಜೋಡಿಯ ಬಿಹಾರದ ಗೆಲುವಿಗೆ ದೀರ್ಘಕಾಲೀನ ಐತಿಹಾಸಿಕ ಕಾರಣಗಳಿವೆ. ಬರಿ ಪ್ರಚಾರ ವೈಖರಿ, ಸೇಡಿನ ಭಾಷಣ, ಒಬ್ಬ ವ್ಯಕ್ತಿಯ ಚಾತುರ್ಯ ಯಾವ ಚುನಾವಣೆಯನ್ನು ಗೆಲ್ಲಿಸಲೂ ಸಾಧ್ಯವಾಗದು.

ಕೋಮು ಭಾವನೆಗಳ ತಿರಸ್ಕಾರ

ಇನ್ನೊಂದು ಕಾರಣ ಬಿಹಾರದ ಮತದಾರ MIM ನಂಥಹ ಮುಸ್ಲಿಂ ಮೂಲಭೂತವಾದಿ ಪಕ್ಷಗಳ ಬಗ್ಗೆ ಸ್ಪಷ್ಟತೆ ಮೆರೆದದ್ದು. ನಿತೀಶರ ಒಂದು ಕಾಲದ ಬಿಜೆಪಿ ಮೈತ್ರಿಯನ್ನು ಮುಂದಿಟ್ಟು ಮುಸ್ಲಿಮರಿಗೆ ತಮ್ಮದೇ ಜನಾಂಗದ ನಾಯಕತ್ವದ ನೆಲೆ ಬೇಕು ಎಂದು ಪ್ರಚಾರ ಮಾಡಿ ಒಂದು ಒಕ್ಕೂಟದ ಭಾಗವಾಗಿ ಸ್ಪರ್ಧಿಸಿದ ಪಪ್ಪು ಮತ್ತು ಒವೈಸಿಗಳು ಗಾಳಿಯಲ್ಲಿ ತೂರಿಹೊಗಿದ್ದಾರೆ. ಮಹಾರಾಷ್ಟ್ರದಲ್ಲಾದಂತೆ ಮುಸ್ಲಿಂ ಮೂಲಭೂತವಾದಿ ಪಕ್ಷ MIM ಗೆ ಯಾವ ಬೆಂಬಲವೂ ಸಿಕ್ಕಿಲ್ಲ. ‘ಅತಿಂ ಸರ್ವತ್ರ ವರ್ಜಯೇತ್’ bjp-bihar-election-amitshahಎಂಬಂತೆ ಹಿಂದೂ ಮತ್ತು ಮುಸ್ಲಿಂ ಕೋಮುವಾದಕ್ಕೆ ಬಲಿಯಾಗದೇ ಬಿಹಾರದ ಜನತೆ ತಮ್ಮ ಬೌದ್ಧಿಕ ಮತ್ತು ನೈತಿಕ ಬಲ ಪ್ರದರ್ಶಿಸಿದ್ದಾರೆ. ತಮ್ಮ ವೋಟು ಒಡೆಯಲು ಮಾಡಿದ ಸಂಚನ್ನು ಮತದಾರರು ತುಂಬಾ ಸರಿಯಾಗಿ ಗ್ರಹಿಸಿದರು. ಗೋವನ್ನು ಬಳಸಿ ಸಮಾಜವನ್ನು ಕೋಮು ಆಧಾರದ ಮೇಲೆ ಒಡೆಯುವ ಎಷ್ಟೇ ಪ್ರಯತ್ನ ಮಾಡಿದರೂ ಜನತೆ ಅದಕ್ಕೆ ಸೊಪ್ಪು ಹಾಕಲಿಲ್ಲ.

ಶರದ್ ಯಾದವ್ ಎಂಬ ಮುತ್ಸದ್ದಿ

ಇನ್ನೊಂದು ಮುಖ್ಯ ಕಾರಣ ರಾಷ್ಟ್ರ ಮಟ್ಟದಲ್ಲಿ ಮೀಡಿಯಾ ಮತ್ತು ಬುದ್ಧಿಜೀವಿಗಳನ್ನು ತಮ್ಮೊಂದಿಗೆ ಸೆಳೆಯಲು ಸಮರ್ಥರಾದ ಜೆಡಿಯು ಅಧ್ಯಕ್ಷರಾದ ಶರದ್ ಯಾದವ್. ಇವರು ಇಂಜಿನಿಯರಿಂಗ್ ಪದವಿಯಲ್ಲಿ ಸ್ವರ್ಣ ಪದಕ ಪಡೆದ ಪ್ರತಿಭಾವಂತ. ಇವರ ನಿರೀಕ್ಷೆ ಎಷ್ಟು ನಿಖರವಾಗಿತ್ತೆಂದರೆ ಚುನಾವಣಾ ಫಲಿತಾಂಶ ಬರುವ ಕೆಲವೇ ದಿನಗಳ ಮೊದಲು ಶರದ್ ಯಾದವ್ ತಮಗೆ ೧೫೦ ಸ್ಥಾನಗಳು ಖಚಿತ ಎಂದು ನುಡಿದಿದ್ದರು. ನಿತೀಶ ಗಿಂತ ಸಾಕಷ್ಟು ಹಿರಿಯರೂ ಆದ ಇವರು ನಿತೀಶ್ ನೇತೃತ್ವವನ್ನು ಶರತ್ತಿಲ್ಲದೇ ಒಪ್ಪಿ ಒಬ್ಬ ನೈಜ ಮುತ್ಸದ್ದಿಯಂತೆ ಕಾರ್ಯ ನಿರ್ವಹಿಸಿ ಪಕ್ಷದ ಅಧ್ಯಕ್ಷರ ಸ್ಥಾನಕ್ಕೆ ಗೌರವ ತಂದು ಕೊಟ್ಟರು.

ಮಮತೆಯ ಕರೆಯೋಲೆ

ಒಂದು ಚಿಕ್ಕ ಆದರೆ ಕಡೆಗಣಿಸಲು ಆಗದ ಅಂಶವೆಂದರೆ, ಮಮತಾ ಬ್ಯಾನರ್ಜಿ ಬಿಹಾರದ swabhimaan-rally_sonia-nitish-laluಜನತೆಗೆ ಮಹಗಠ ಬಂಧನದ ಪರ ನಿಲ್ಲಲು ಕರೆ ಕೊಟ್ಟರು. ಸೀಮಂಚಲವೆಂದು ಕರೆಯಲ್ಪಡುವ ಪುರ್ನಿಯ, ಕಟಿಹಾರ್, ಕಿಷೆನ್ ಗಂಜ್, ಅರಾರಿಯ, ಮಿಥಿಲ ಪ್ರಾಂತ ಗಳಲ್ಲಿ ಸಾಕಸ್ಟು ಸಂಖ್ಯೆಯಲ್ಲಿರುವ ಬಂಗಾಳಿಗಳು ಲಾಲೂ ನಿತೀಶ್ ಪರ ನಿಂತರು. ಜಾತ್ಯತೀತ ವೋಟಿನ ವಿಭಜನೆಯಾಗದಂತೆ ತಡೆಯುವಲ್ಲಿ  ಕೆಜ್ರಿವಾಲ್ ಮತ್ತು ಮಮತಾ ಬೆಂಬಲ ರಾಷ್ಟ್ರೀಯ ವಾಗಿಯೂ ಮಹತ್ತರವಾಗಿತ್ತು. ಬಿಹಾರದ ಚುನಾವಣಾ ರಂಗ ಸಮಾನ ಮನಸ್ಕರನ್ನು ಒಂದು ಮಾಡಿತು.

ಕಾಂಗ್ರೆಸ್ ಪುನರುಜ್ಜೀವನ

ಕಾಂಗ್ರೆಸ್ ಪ್ರಚಾರವನ್ನು ಸಾಕಷ್ಟು ಕಡಿಮೆ ಗೊಳಿಸಿದ ಬಿಹಾರದ ಸ್ಥಳೀಯ ನಾಯಕತ್ವ ಅನಗತ್ಯ ಗೊಂದಲಗಳನ್ನು ನಿವಾರಿಸಿತು. ರಾಹುಲ್ ಭಾಷಣದ ಟೀಕೆ, ಸೋನಿಯಾರ ಭಾಷೆಯ ಕುರಿತು ಅನಗತ್ಯ ವಿವಾದ ಇತ್ಯಾದಿ ಇಲ್ಲಿ ಕಾಣಸಿಗಲೇ ಇಲ್ಲ. ಕಾಂಗ್ರೆಸ್ ಈ ಚುನಾವಣೆಯಲ್ಲಿ ಮರುಜೀವ ಪಡೆದಿದೆ. ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ವೋಟು ಸಿಗದೇ ಹೋಗಬಹುದು ಆದರೆ ಕಾಂಗ್ರೆಸ್ಸಗೆ ಅಲ್ಲಿ ಬಹು ದೊಡ್ಡ ಸಂಘಟನೆಯಿದೆ. ಇದರ ಸಂಪೂರ್ಣ ಲಾಭ ಈ ಬಾರಿ ದಕ್ಕಿದೆ.

ಪ್ಯಾಕೇಜ್ ಮರೆಯದಿರಲಿ

ಇನ್ನೊಂದು ಮಾತು. ಜನರು ತಮ್ಮ ನಾಯಕರ ಗುಣಾವಗುಣಗಳನ್ನು ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಾರೆ. ಒಂದು ಕಡೆ ತುಂಬಾ ನಿರೀಕ್ಷೆ ಇಟ್ಟುಕೊಂಡ ಒಬ್ಬ ಪ್ರಧಾನ ಮಂತ್ರಿಯವರು ರಾಜಕೀಯ ವಿರೋಧಿಗಳ ಕುಟುಂಬ, ಮಕ್ಕಳು ಇತ್ಯಾದಿಗಳ ಕುರಿತು ಟೀಕೆ ಮಾಡುತ್ತಿದ್ದಾರೆ, ಒಬ್ಬ ನೈಜ ಮುತ್ಸದ್ದಿಯ ಮಾದರಿಯಲ್ಲಿ ಯಾವುದಕ್ಕೂ ತೀಕ್ಷ್ಣವಾಗಿ ಮತ್ತು ವಯಕ್ತಿಕ ಮಟ್ಟಕ್ಕಿಳಿದು ಪ್ರತಿಕ್ರಯಿಸದ ಲಾಲೂ-ನಿತೀಶರನ್ನೂ ಮೌನವಾಗಿ ತುಲನೆ ಮಾಡುತ್ತಿತ್ತು. ಜನತೆಯ ತೀರ್ಮಾನ ಈಗ ದೇಶದ ಮುಂದಿದೆ. ತಮ್ಮ ಒಂದು ಕಾಲದ ಬಲಗೈ modi-in-biharಬಂಟ ಪಪ್ಪು ಯಾದವ್ ಮತ್ತವರ ಹೆಂಡತಿಯ ತಮ್ಮ ಸುಭಾಷ್ ಯಾದವ್ ಇದೇ ಸೆಪ್ಟೆಂಬರ್ ತಿಂಗಳಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತ, ‘ಲಾಲು ಸುಮ್ಮನೇ ವೋಟು ಒಡೆಯಲು ಕಣದಲ್ಲಿದ್ದಾರೆ; ಗೆಲವು ಖಂಡಿತಾ ನಮ್ಮದೇ ಎಂದಾಗ’, ಲಾಲೂ ಅವರಿಗೆ ಸೊಪ್ಪು ಕೂಡ ಹಾಕಲಿಲ್ಲ. ಮೋದಿಯವರು ಅತಿಯಾಗಿ ಕೆಣಕಿದಾಗ ಮಾತ್ರ ಲಾಲೂ ಮೋದಿಯವರಿಗೆ ತಾಕತ್ತಿದ್ದರೆ ತಮ್ಮೊಂದಿಗೆ ಇಂಗ್ಲಿಷ್ ಸಂವಾದಕ್ಕೆ ಬರಲಿ ಎಂದು ಸವಾಲು ಹಾಕಿದರು. ಈ ಸವಾಲನ್ನು ಮೋದಿಯವರು ಸ್ವೀಕರಿಸುವ ಔದಾರ್ಯ ತೋರಲಿಲ್ಲವೇಕೋ?

ಬಿಹಾರದ ಗೆಲುವು ಮೈಮರೆಸಬಾರದು. ಜನತೆಯ ಹೆದರಿಕೆ ಬರುವಷ್ಟು ಅಪಾರ ಪ್ರಮಾಣದ ನಿರೀಕ್ಷೆ ನೋಡಿದರೆ ನಿತೀಶ್ ರ ಜವಾಬ್ದಾರಿ ಎಷ್ಟು ದೊಡ್ಡದು ಎಂದು ಗೋಚರವಾಗುತ್ತದೆ.

ಹಾಗೆಯೇ, ನಿತೀಶರನ್ನು ಒಬ್ಬ ವೈರಿಯಂತೆ ಕಾಣದೇ ಈ ದೇಶದ ಪ್ರಧಾನಿಗಳು ತಾವು ಆಶ್ವಾಸನೆ ನೀಡಿದಂತೆ ಬಿಹಾರದ ಜನತೆಗೆ ಒಂದೂ ಕಾಲು ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜನ್ನು ಕೊಟ್ಟು ಒಬ್ಬ ನೈಜ ಮುತ್ಸದ್ದಿಯಂತೆ ನಡೆದುಕೊಳ್ಳಬೇಕು.

ಲಾಲೂ ಅವರೊಂದಿಗೆ ಇಂಗ್ಲಿಷ್ ಸಂವಾದದ ಸವಾಲು ಮರೆತರೂ ಪರವಾಗಿಲ್ಲ ಮೂವತ್ತೊಂದು ಸಂಸದರನ್ನು ತಮಗೆ ಕೊಟ್ಟ ಬಿಹಾರದ ಅಭಿವೃದ್ಧಿಯ ಪ್ಯಾಕೇಜ್ ಮಾತ್ರ ಮರೆಯಬಾರದು.

ಬುದ್ಧ ನಕ್ಕ ನಾಡು ಬಿಹಾರ ಹೌದಾದರೂ, ಮಾತಿಗೆ ತಪ್ಪಿದರೆ, ಪಾಟಲಿಪುತ್ರದ ಚಾಣಕ್ಯನ ಮಾದರಿ ಸೇಡು ತೀರಿಸದೆ ಸುಮ್ಮನಿರುವ ಜಾಯಮಾನದ್ದಲ್ಲ!