Daily Archives: November 4, 2015

ಪಾತಕಿ ಗಣೇಶ್ ಶೆಟ್ಟಿಯೂ ಕರಾವಳಿಯ ಧರ್ಮ ರಕ್ಷಕರೂ

Naveen Soorinje


– ನವೀನ್ ಸೂರಿಂಜೆ


 

 

ಧರ್ಮ ದೇವರ ಹೆಸರಿನಲ್ಲಿ ರಕ್ತ ಹರಿಸೋ ನಾಯಕರ ಮಧ್ಯೆ ನಮಗೆ ಒಮ್ಮೊಮ್ಮೆ ಒಬ್ಬ ಭೂಗತ ಪಾತಕಿಯೂ ಮಾದರಿಯಾಗಬಲ್ಲ. Mangalore_Jail_Murderಜೈಲಿನಲ್ಲಿ ಮಾಡೂರು ಯೂಸೂಫ್ ಎಂಬ ಭೂಗತ ಪಾತಕಿಯನ್ನು ಹಿಂದೂ ಕಮ್ಯೂನಲ್ ಗೂಂಡಾಗಳಿಂದ ರಕ್ಷಣೆ ಮಾಡಲು ಧಾವಿಸಿ ಹತನಾದ ಗಣೇಶ್ ಶೆಟ್ಟಿ ಎಂಬ ಭೂಗತ ಪಾತಕಿಯಿಂದ ಧರ್ಮದ ಅಮಲು ತುಂಬಿಕೊಂಡವರು ಕಲಿಯಬೇಕಿರುವುದು ಬಹಳಷ್ಟಿದೆ.

1994 ರಲ್ಲಿ ಮಹೇಂದ್ರ ಪ್ರತಾಪ್ ಎಂಬ ಉದ್ಯಮಿಯನ್ನು ಹಫ್ತಾಕ್ಕಾಗಿ ಮುಂಬೈನಲ್ಲಿ ಕೊಲೆ ಮಾಡಿದ ಭೂಗತ ಪಾತಕಿ, ಶಾರ್ಪ್ ಶೂಟರ್ ಗಣೇಶ್ ಶೆಟ್ಟಿ ಮಂಗಳೂರಿನ ಪ್ರಕರಣವೊಂದಕ್ಕೆ ಸಂಬಂಧಿಸಿ ಮಂಗಳೂರು ಜೈಲಿನಲ್ಲಿದ್ದ. ಶ್ರೀಮಂತ ಕುಟುಂಬದಿಂದ ಬಂದ ಗಣೇಶ್ ಶೆಟ್ಟಿಗೆ ಮಂಗಳೂರಿನ ಪ್ರಕರಣಕ್ಕೆ ಜಾಮೀನು ದೊರೆತಿದ್ದರೂ ಮುಂಬೈ ಪ್ರಕರಣದ ನ್ಯಾಯಾಲಯದ ತಾಂತ್ರಿಕ ಅಡಚಣೆಯಿಂದ ಜೈಲಿನಲ್ಲೇ ಬಾಕಿಯಾಗಿದ್ದ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇನ್ನೊಂದು ಎರಡು ಮೂರು ದಿನಗಳಲ್ಲಿ ಆತ ಬಿಡುಗಡೆಯಾಗಬೇಕಿತ್ತು.

ಹಿಂದೂ ಕೋಮುವಾದಿಗಳ ರಾಕ್ಷಸೀ ಪ್ರವೃತ್ತಿಯನ್ನು ಬಯಲಿಗೆಳೆದಿದ್ದಕ್ಕಾಗಿ ಅಂದಿನ ಬಿಜೆಪಿ ಸರಕಾರ ನನ್ನನ್ನು ಜೈಲಿಗೆ ಹಾಕಿದ್ದ ದಿನಗಳಲ್ಲಿ ಗಣೇಶ್ ಶೆಟ್ಟಿ ಐದನೇ ಬ್ಯಾರಕಿನಲ್ಲಿದ್ದ. ಮಂಗಳೂರು ಜೈಲಿನಲ್ಲಿ ರಾಜ್ಯದ ಯಾವ ಜೈಲಿನಲ್ಲೂ ಇಲ್ಲದ ವಿಶೇಷ ವ್ಯವಸ್ಥೆಯೊಂದಿದೆ. ಜೈಲನ್ನು ಎ ಮತ್ತು ಬಿ ಬ್ಲಾಕುಗಳೆಂದು ವಿಂಗಡನೆ ಮಾಡಲಾಗಿದೆ. ಎ ಬ್ಲಾಕು ಮತ್ತು ಬಿ ಬ್ಲಾಕುಗಳ ಮಧ್ಯೆ ಸಂಪರ್ಕ ಮತ್ತು ಸಂವಹನ ಸಾಧ್ಯವೇ ಇಲ್ಲ ಎನ್ನುವ ರೀತಿಯ ವ್ಯವಸ್ಥೆ ಇದೆ. ಇಲ್ಲಿನ ವಿಶೇಷವೆಂದರೆ ಎ ಬ್ಲಾಕಿನಲ್ಲಿ ಮುಸ್ಲೀಮರೂ, ಬಿ ಬ್ಲಾಕಿನಲ್ಲಿ ಹಿಂದೂಗಳನ್ನು ಕೂಡಿ ಹಾಕಲಾಗುತ್ತದೆ. ಮಂಗಳೂರು ಜೈಲಿನಲ್ಲಿ ಕೋಮುಗಲಭೆಗಳ ಕೈದಿಗಳೇ ಜಾಸ್ತಿ ಇರೋದ್ರಿಂದ ಮತ್ತು ಮಂಗಳೂರಿಗರಲ್ಲಿ ಕೋಮುಭಾವನೆಯೂ ಜಾಸ್ತಿ ಇರೋದ್ರಿಂದ ಜೈಲಿನಲ್ಲಿ ಕೋಮುಗಲಭೆ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಹಿಂದೂ ಕೋಮುವಾದಿಗಳಿಂದ ಬೆದರಿಕೆ ಇದ್ದ ನನ್ನನ್ನು ಹಿಂದೂವಾಗಿದ್ದರೂ ಮುಸ್ಲೀಮರಿರುವ ಎ ಬ್ಲಾಕಿಗೆ ಸೇರಿಸಲಾಗಿತ್ತು.  ಅಲ್ಲಿ ಗಣೇಶ್ ಶೆಟ್ಟಿಯೂ ಇದ್ದ. ಜೊತೆಗೆ ಕಮ್ಯೂನಲ್ ಅಲ್ಲದೇ ಇರುವ ಕೆಲವೊಂದು ಹಿಂದೂ ಕೈದಿಗಳೂ ಎ ಬ್ಲಾಕಿನಲ್ಲಿ ಇದ್ದರು.

ಭೂಗತ ಪಾತಕಿ ಗಣೇಶ್ ಶೆಟ್ಟಿ ಬೆಳಿಗ್ಗೆ 5 ಗಂಟೆಗೆ ಎದ್ದು ಸುಮಾರು ಒಂದು ಗಂಟೆಗಳ ಕಾಲ ದೇವರ ಫೋಟೋದ ಎದುರು ಕುಳಿತು ದ್ಯಾನ ಮಾಡುತ್ತಿದ್ದ. ಆತ ಪೂಜೆ ಮಾಡುವ ಜಾಗ ನೋಡೋದೇ ಚಂದ. ಕಟೀಲು ದುರ್ಗಾಪರಮೇಶ್ವರಿ ಪರಮ ಭಕ್ತನಾಗಿದ್ದ ಆತ ದೇವರ ಫೋಟೋ ಕಾಣದಷ್ಟು ನಿತ್ಯ ಹೂ ಹಾಕುತ್ತಿದ್ದ. ಫೋಟೋದ ಎದುರು ಕೇಜಿಗಟ್ಟಲೆ ಹಣ್ಣು ಹಂಪಲುಗಳನ್ನು ಇಡುತ್ತಿದ್ದ. ಯಾರಿಗೂ ಕೆಟ್ಟದಾಗಿ ಬೈದಿರೋದನ್ನು ನಾನು ಜೈಲಿನಲ್ಲಿದ್ದ ನಾಲ್ಕುವರೆ ತಿಂಗಳು ಕಂಡಿದ್ದಿಲ್ಲ. ಜೈಲಿನಲ್ಲಿ ಇದ್ದಷ್ಟೂ ದಿನ ಗಣೇಶ ಶೆಟ್ಟಿ ಸಸ್ಯಹಾರಿಯಾಗಿದ್ದ. ದೇವರ ಹೆಸರಿನಲ್ಲಿ ಆತ ಮಾಂಸಾಹಾರವನ್ನೂ ತ್ಯಜಿಸಿದ್ದ. ದೇವರ ಹೆಸರಿನ ಯಾವುದೇ ಉಪವಾಸಗಳನ್ನೂ ತಪ್ಪಿಸುತ್ತಿರಲಿಲ್ಲ. ಒಬ್ಬ ಶಾರ್ಪ್ ಶೂಟರ್ ಭೂಗತ ಪಾತಕಿಯೊಬ್ಬ ಧರ್ಮ, ದೇವರನ್ನು ಈ ರೀತಿಯಲ್ಲಿ ಆರಾಧನೆ ಮಾಡುತ್ತಿದ್ದ ಎಂದರೆ ಆಶ್ಚರ್ಯವಾಗುತ್ತಿತ್ತು. ದೇವರ ಆರಾಧನೆಯನ್ನು ತಪ್ಪದೇ ಮಾಡುತ್ತಿದ್ದ ಆತ ಯಾವತ್ತೂ ಕೂಡಾ ಯಾವುದೇ ವಿಷಯಕ್ಕೆ ಕಮ್ಯೂನಲ್ ಆಗಿ ಪ್ರತಿಕ್ರಿಯೆ ನೀಡಿಲ್ಲ. ಅದೇ ರೀತಿ ಬಹುತೇಕ ಮುಸ್ಲೀಮರೇ ಜಾಸ್ತಿಯಿದ್ದ ಐದನೇ ಬ್ಯಾರಕಿನಲ್ಲಿ ಗಣೇಶ್ ಶೆಟ್ಟಿಯ ಪೂಜೆ ವೃತಗಳಿಗೆ ಯಾವ ತೊಂದರೆಯೂ ಆಗಿರಲಿಲ್ಲ.

ನಾನು ಜೈಲು ಸೇರಿದ ನಂತರದ ನಾಲ್ಕುವರೆ ತಿಂಗಳಿನಲ್ಲಿ ಹಲವು ಅಮಾಯಕ ಕೈದಿಗಳನ್ನು ನೋಡಿದ್ದೇನೆ. ಹಲವಾರು ಬಾರಿ ಪೊಲೀಸರುMangalore_Jail ಅನುಮಾನಾಸ್ಪದ ಪ್ರಕರಣ ಎಂಬ ನೆಲೆಯಲ್ಲಿ ಅಮಾಯಕ ಯುವಕರ ಬಂಧನ ಮಾಡುತ್ತಾರೆ. ಹೆಚ್ಚಾಗಿ ಮುಸ್ಲಿಂ ಯುವಕರು ಅಥವಾ ವೃದ್ದರನ್ನು ಪೊಲೀಸರು ಬಸ್ ನಿಲ್ದಾಣದಲ್ಲೋ, ರೈಲ್ವೇ ನಿಲ್ದಾಣದಲ್ಲೋ ಬಂಧನ ಮಾಡಿ ಅನುಮಾನಾಸ್ಪದ ಎಂಬ ಸೆಕ್ಷನ್ನಿನ ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ಹಾಕುತ್ತಾರೆ. ನ್ಯಾಯಾಲಯದಲ್ಲಿ ಎರಡು ಸಾವಿರವೋ, ಎರಡುವರೆ ಸಾವಿರವೋ ದಂಡ ಕಟ್ಟಿದರೆ ನ್ಯಾಯಾಲಯ ಬಿಡುಗಡೆ ಮಾಡುತ್ತದೆ. ದಂಡ ಕಟ್ಟಲು ಸಾಧ್ಯವಾಗದೇ ಇರೋರು ಜೈಲು ಸೇರುತ್ತಾರೆ. ಈ ಅನುಮಾನಾಸ್ಪದ ಬಂಧನ ಎನ್ನುವುದೇ ವಿಚಿತ್ರವಾಗಿರೋದು. ಯಾವುದೋ ಒಬ್ಬ ರೌಡಿಯ ಮೇಲೆ ಹಲ್ಲೆ ಹಲವು ಪ್ರಕರಣಗಳಿದ್ದು, ಆತ ಜಾಮೀನಿನ ಮೇಲೋ, ಖುಲಾಸೆಗೊಂಡೋ ಹೊರಗಿದ್ದು, ಅತ ಅನಗತ್ಯವಾಗಿ ತನ್ನದಲ್ಲದ ಪ್ರದೇಶದಲ್ಲಿ ಸುತ್ತಾಡುತ್ತಿದ್ದಾಗ ಪೊಲೀಸರು ವಿಚಾರಿಸಿದ ಸಂಧರ್ಭದಲ್ಲಿ ಆತ ಸೂಕ್ತ ರೀತಿಯ ಉತ್ತರ ನೀಡದೇ ಇದ್ದಾಗ ಆತನ ಮೇಲೆ ಅನುಮಾನಾಸ್ಪದ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬಹುದು. ಪೊಲೀಸರು ಅಪರಾಧ ಚಟುವಟಿಕೆಯನ್ನು ನಿಯಂತ್ರಿಸಲು ಕೆಲಸ ಮಾಡವ ನಿಟ್ಟಿನಲ್ಲಿ ಇದು ಸಹಕಾರಿ. ಆದರೆ ಪೊಲೀಸರು ಇದೇ ಕಾಯ್ದೆಯನ್ನು ಬಳಸಿಕೊಂಡು ಯಾರೋ ಅಬ್ಬೇಪಾರಿಗಳು, ಅನಾಥರು, ನಿಸ್ಸಾಹಯಕರನ್ನು ಈ ಕಾಯ್ದೆಯಡಿ ಬಂಧಿಸುತ್ತಾರೆ. ಅಪರಾಧ ಚಟುವಟಿಯನ್ನು ನಿಯಂತ್ರಿಸಲು ನಾವು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ದಾಖಲೆ ಮೂಲಕ ತೋರಿಸಲು ಪೊಲೀಸರು ಹಲವು ಬಾರಿ ಎಲ್ಲೋ ಬಸ್ ನಿಲ್ದಾಣದಲ್ಲಿ ಮಲಗಿದ್ದ ಅಮಾಯಕರನ್ನು ಬಂಧಿಸುತ್ತಾರೆ. ಇಂತಹ ಹಲವು ಯುವಕರನ್ನು ಸಾಮಾಜಿಕ ಕಾರ್ಯಕರ್ತರ ನೆರವು ಪಡೆದು ಜೈಲಿನಿಂದ ಬಿಡುಗಡೆ ಮಾಡಿಸಿದ್ದೆವು.  ಹಲವು ಸಂದರ್ಭದಲ್ಲಿ ಹಲವು ಯುವಕರನ್ನು ಬಿಡುಗಡೆ ಮಾಡಿಸುವಲ್ಲಿ ಗಣೇಶ್ ಶೆಟ್ಟಿ ಆಸಕ್ತಿ ವಹಿಸಿದ್ದ. ಜೊತೆಗೆ ಹಣಕಾಸಿನ ನೆರವನ್ನೂ ನೀಡಿದ್ದ.

ಧರ್ಮದ ಆಚರಣೆಗಳನ್ನು ಚಾಚೂ ತಪ್ಪದೆ ಆಚರಿಸೋ ವೃತ್ತಿಪರ ಪಾತಕಿಯೋರ್ವ ತನ್ನ ವೃತ್ತಿಯನ್ನು ಮೀರಿಯೂ ಮಾನವೀಯ ಗುಣಗಳನ್ನು ಬೆಳೆಸಿಕೊಳ್ತಾನೆ ಎಂದಾದರೆ ದನ ಕರುವನ್ನು ಪ್ರೀತಿಸುವವರಿಗೆ ಮನುಷ್ಯರನ್ನೇಕೆ ಪ್ರೀತಿಸಲಾಗಲ್ಲ ಎಂಬುದು ಯಕ್ಷ ಪ್ರಶ್ನೆ. ಧರ್ಮದ ಹೆಸರಿನಲ್ಲಿ ರಕ್ತ ಹರಿಸೋರು ವಿವೇಕಾನಂದರಂತವರನ್ನು ಅನುಸರಿಸೋಕೆ ಆಗದೇ ಇದ್ರ್ರೆ ಕನಿಷ್ಠ ಗಣೇಶ್ ಶೆಟ್ಟಿಯಂತಹ ಭೂಗತ ಪಾತಕಿಯ ಈ ಗುಣಗಳನ್ನಾದ್ರೂ ಅನುಸರಿಸಲಿ ಎಂಬುದಷ್ಟೇ ಆಶಯ.

ಕಾನ್ಶಿರಾಂ – ಕಲ್ಲಿದ್ದಲ ಕಗ್ಗತ್ತಲೆಯನ್ನು ಕೊಹಿನೂರೊಂದು ಕಳೆದ ಕಥೆ : ಭಾಗ-2


– ಶ್ರೀಧರ್ ಪ್ರಭು


ಕಾನ್ಶಿರಾಂ ಹುಟ್ಟಿದ್ದು ೧೫ ಮಾರ್ಚ್ ೧೯೩೪ ರಲ್ಲಿ ಪಂಜಾಬಿನ ರೂಪನಗರ ಜಿಲ್ಲೆಯ ಖವಾಸ್ಪುರ್ ಹೋಬಳಿಯ ಪಿಥಿಪುರ ಬಂಗ ಎಂಬ ಹಳ್ಳಿಯಲ್ಲಿ.

ಬಾಬು ಮಂಗು ರಾಮ ಚೌಧರಿ (೧೮೮೬-೧೯೮೦) ಎಂಬ ದಲಿತ ನಾಯಕ ೧೯೨೦ ರ ದಶಕದಲ್ಲಿ ಪಂಜಾಬಿನಲ್ಲಿ ’ಆದಿ-ಧರ್ಮ’ವೆಂಬ ಸಮಾನತೆಯ ಆಶಯವುಳ್ಳ ಚಳುವಳಿಯನ್ನು ಹುಟ್ಟುಹಾಕಿದರು. ಇಂದು ಹದಿನೈದನೆ ಶತಮಾನದ ಭಕ್ತಿ ಚಳುವಳಿಯ ಸಂತ ರಾಮದಾಸರ ಬೋಧನೆಗಳನ್ನು ವರ್ತಮಾನಕ್ಕೆ ಅಳವಡಿಸಿಕೊಂಡು ವೈದಿಕ ಧರ್ಮದಲ್ಲಿನ ಕೊಳಕುಗಳನ್ನು ತೊಳೆಯುವ ಪ್ರಯತ್ನವಾಗಿತ್ತು. ಕಾನ್ಶಿರಾಂ ಅವರ ಕುಟುಂಬ ರವಿದಾಸರ ಪಂಥಕ್ಕೆ ಸೇರಿದ್ದು ನಂತರದಲ್ಲಿ ಆದಿ-ಧರ್ಮದ ಚಳವಳಿಗೆ ಸೇರಿಕೊಂಡಿತ್ತು.

೧೯೩೦ ರ ದಶಕ – ಸಾಮಾಜಿಕ ಮತ್ತು ರಾಜಕೀಯ ತಲ್ಲಣಗಳ ಅವಧಿ
೧೯೩೦ ರ ದಶಕದ ಪಂಜಾಬಿನ ಸನ್ನಿವೇಶವನ್ನು ಗಮನಿಸಿ. ಇಂದಿನ ಹಿಮಾಚಲ ಪ್ರದೇಶ, ಹರಿಯಾಣ ಮತ್ತು ವಿಭಜನೆಯ ನಂತರ ಪಾಕಿಸ್ತಾನದ ಭಾಗವಾಗಿರುವ ಪ್ರಾಂತ್ಯಗಳೆಲ್ಲವೂ ಸೇರಿದ – ಪಂಜಾಬ್ – ಇತಿಹಾಸದುದ್ದಕ್ಕೂ undivided-punjabಅನೇಕ ಸಾಮಾಜಿಕ ರಾಜಕೀಯ ಕ್ರಾಂತಿಗಳು, ಸಂಘರ್ಷಗಳು, ಆಕ್ರಮಣಗಳಿಗೆ ಸಾಕ್ಷಿಯಾದ ನಾಡು. ಇಲ್ಲಿ ಹರಿದ ಐದು ನದಿಗಳು, ಹರಪ್ಪ-ಮೊಹೆಂಜೋದಾರೋ ನಾಗರೀಕತೆ, ವೈದಿಕ ಧರ್ಮ, ಬೌದ್ಧ ಧರ್ಮ, ನಂತರದಲ್ಲಿ ಇಸ್ಲಾಂ ಮತ್ತು ಸಿಖ್ ಧರ್ಮಗಳಿಗೆ ತೊಟ್ಟಿಲಾಗಿದ್ದವು. ಫಲವತ್ತಾದ ಐದು ನದಿಗಳು ಹುಟ್ಟಿ ಹರಿಯುವ ಪಂಜಾಬಿನ ಉತ್ತರದಲ್ಲಿ ಹಿಮಾಲಯವಿದ್ದರೆ, ದಕ್ಷಿಣ ಮತ್ತು ನೈಋತ್ಯ ಭಾಗದಲ್ಲಿ ಬರಡು ಮರುಭೂಮಿಯಿದೆ. ಹೀಗೆಯೇ ಒಂದು ಕಡೆ ಅತ್ಯಂತ ಕ್ರಾಂತಿಕಾರಿ ನಿಲುವಿನ ಭಕ್ತಿ ಪಂಥ, ಸಿಖ್ ಧರ್ಮ, (ಪಂಜಾಬಿನಲ್ಲಿ ಇಪ್ಪತ್ತನೇ ಶತಮಾನದಲ್ಲಿ ಹುಟ್ಟಿದ) ಆರ್ಯ ಸಮಾಜಗಳು ಹೇಗೆ ಪಂಜಾಬಿನಲ್ಲಿ ಹುಟ್ಟಿದವೋ ಅತ್ಯಂತ ವಿಷಮಪೂರಿತ ಧಾರ್ಮಿಕ ಮೂಲಭೂತವಾದವೂ ಇದೇ ನಾಡಿನಲ್ಲಿ ಬೆಳೆಯಿತು.ಎಲ್ಲ ರೀತಿಯ ಧಾರ್ಮಿಕ ಮತ್ತು ಜಾತಿ ವಿಷಮತೆಗಳ ಕುಲುಮೆಯಲ್ಲಿ ಬೆಂದ ಪಂಜಾಬಿಗೆ ಹಲವು ಕಾಲಮಾನಗಳಲ್ಲಿ ಹಲವು ಬಗೆಯ ನಂಜು ತಗುಲಿದೆ.

ಅವಿಭಜಿತ ಪಂಜಾಬಿನಲ್ಲಿ ೧೯೩೦ ರ ದಶಕದಲ್ಲಿ ಒಂದು ಕಡೆ ಉಗ್ರ ಮುಸ್ಲಿಂ ಮೂಲಭೂತವಾದ ದೈತ್ಯಾಕಾರವಾಗಿ ಬೆಳೆಯುತ್ತಿತ್ತು. ಒಂದು ಕಾಲದ ದೇಶಭಕ್ತ ಮಹಾಕವಿ ಅಲ್ಲಮಾ ಇಕ಼್ಬಾಲ್ ಇದೇ ದಶಕದಲ್ಲಿ ದೇಶ ವಿಭಜನೆಯ ಕೂಗು ಹಾಕಿದರು. ಅದರ ಮುಂದುವರಿಕೆಯ ಭಾಗವಾಗಿ ಜಿನ್ನಾ ಅತ್ಯಂತ ಪ್ರಗತಿಪರ ನಿಲುಮೆಯನ್ನು ತೊರೆದು ಒಬ್ಬ ಕೋಮುವಾದಿಯಾಗಿ ಬೆಳೆದದ್ದು ಪಂಜಾಬಿನಲ್ಲೇ. First_edition_of_Annihilation_of_Casteಇನ್ನೊಂದೆಡೆ ಪಂಜಾಬಿನ ಯುವ ಜನತೆ ಅತ್ಯುಗ್ರ ಹಿಂದೂ ಮೂಲಭೂತವಾದದ ಕಡೆ ಹೆಜ್ಜೆ ಹಾಕತೊಡಗಿದ್ದರು. ಹಿಂದೂ ಧರ್ಮದ ಐಕ್ಯತೆಯ ಉದ್ದೇಶ ದಿಂದ ಸ್ಥಾಪಿತವಾದ ಆರ್ಯ ಸಮಾಜ ಒಂದು ಉಗ್ರ ಧಾರ್ಮಿಕ ಸಂಘಟನೆಯ ಸ್ವರೂಪ ಪಡೆದಿತ್ತು. ಈ ಆರ್ಯ ಸಮಾಜದ ಭಾಗವಾಗಿದ್ದ ‘ಜಾತ್ – ಪಾತ್ ತೊಡಕ್ ಮಂಡಲ’ ದ ಯುವಕರು ಸಂಘಟಿಸಿದ್ದ ಸಭೆಯೊಂದರಲ್ಲಿ ಬಾಬಾ ಸಾಹೇಬರನ್ನು ಆಹ್ವಾನಿಸಿದ್ದು ನಂತರದಲ್ಲಿ ವಾಚನವಾಗದ ಅವರ ಭಾಷಣ “ಜಾತಿವಿನಾಶ” (Annihilation of Caste) ಪ್ರಬಂಧದ ಸ್ವರೂಪದಲ್ಲಿ ಹೊರಬಂದದ್ದು, ಪೂನ ಒಪ್ಪಂದವಾದದ್ದು ಈ ದಶಕದಲ್ಲಿಯೇ. ಹಾಗೆಯೇ, ಭಗತ್ ಸಿಂಗ್, ರಾಜಗುರು ಮತ್ತು ಸುಖದೇವರು ನೇಣುಗಂಬವೆರಿದ್ದೂ ಇದೇ ದಶಕದಲ್ಲಿ. ಒಟ್ಟಿನಲ್ಲಿ ಕಾನ್ಶಿರಾಂ ಹುಟ್ಟಿದ ಕಳೆದ ಶತಮಾನದ ಮೂವತ್ತರ ದಶಕ ಭಾರತವು ನಾನಾ ರೀತಿಯ ಕ್ರಾಂತಿ ಕುಲುಮೆಯಲ್ಲಿ ಕುದ್ದ ಅವಧಿ.

ಅಗಲಿದ ಯುಗ ಪ್ರವರ್ತಕ
೧೯೩೬ ರಲ್ಲಿ ಬಾಬಾ ಸಾಹೇಬ್ ‘ಸ್ವತಂತ್ರ ಕಾರ್ಮಿಕರ ಪಕ್ಷ’ (Indepedent Labour Party) ಎಂಬ ಪಕ್ಷವನ್ನು ಹುಟ್ಟು ಹಾಕಿದರೂ ಅದು ಯಶಸ್ಸು ಕಂಡಿರಲಿಲ್ಲ. ಚೆನ್ನೈ ನಲ್ಲಿ ೧೯೪೪ ರ ಸೆಪ್ಟೆಂಬರ್ ೨೪ ರಂದು ಬಾಬಾಸಾಹೇಬ್ ಒಂದು ಐತಿಹಾಸಿಕ ಕರೆ ನೀಡಿ “ನಮ್ಮ ಅಂತಿಮ ಗುರಿ ಈ ದೇಶವನ್ನು ಅಳುವುದು” ಎಂದು ಘೋಷಿಸಿದ್ದರು. ರಾಜಕೀಯ ಸ್ವಾತಂತ್ರ್ಯ ಬಂದ ನಲವತ್ತರ ದಶಕವು ಸಂದು ಐವತ್ತರ ದಶದ ಅಂಚಿಗೆ ಭಾರತವು ಬಂದು ನಿಂತಾಗ ಬಾಬಾ ಸಾಹೇಬ್ ದೇಶದ ಮೊದಲ ನೆಹರು ಮಂತ್ರಿ ಮಂಡಲದಲ್ಲಿ ಕಾನೂನು ಮಂತ್ರಿಗಳಾದರು. ನಂತರದಲ್ಲಿ ಸೆಪ್ಟೆಂಬರ್ ೨೯, ೧೯೫೧ರಲ್ಲಿ ಮಹಿಳೆಯರ ಹಕ್ಕು ರಕ್ಷಣೆ ಮತ್ತು ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ವಿಚಾರದಲ್ಲಿ ತಮ್ಮದೇ ಮಂತ್ರಿಮಂಡಲದ ಸಹೋದ್ಯೋಗಿಗಳು ಅಸಹಕಾರ ತೋರಿದ್ದನ್ನು ಪ್ರತಿಭಟಿಸಿ ರಾಜೀನಾಮೆ ಇತ್ತರು. Young_Ambedkar೧೯೫೬ ರ ಅಂಚಿಗೆ ಬಾಬಾ ಸಾಹೇಬರನ್ನು ಕಳೆದುಕೊಂಡ ದಲಿತ ಚಳುವಳಿ ಬಹುತೇಕವಾಗಿ ಅನಾಥವಾಗಿತ್ತು.

೩ ಅಕ್ಟೋಬರ್ ೧೯೫೭ ರಲ್ಲಿ ಬಾಬಾ ಸಾಹೇಬರ ಆಶಯಗಳನ್ನು ಹೊತ್ತ ರಿಪಬ್ಲಿಕನ್ ಪಾರ್ಟಿ ಸ್ಥಾಪನೆಯಾಯಿತು. ಒಂದೇ ವರ್ಷದಲ್ಲಿ ಒಟ್ಟಾರೆ ತಳಸಮುದಾಯಗಳನ್ನು ಜೊತೆಗೂಡಿಸಿಕೊಂಡು ಸಾಗಬೇಕಿದ್ದ ಈ ಪಕ್ಷ ಕೇವಲ ಮಹಾರಾಷ್ಟ್ರದ ಮಹರ್ ಸಮುದಾಯದ ಒಂದು ಪಕ್ಷವಾಗಿ ಪರಿವರ್ತನೆಯಾಯಿತು.

ಹೊಸ ಯುಗ ಪ್ರವರ್ತಕನೊಬ್ಬನ ಜನನ:
ಕಾನ್ಶಿರಾಂರ ತಂದೆಯ ತಂದೆ ತಾತ ಮೊದಲನೇ ಮಹಾ ಯುದ್ಧದಲ್ಲಿ ಸೇನಾ ಸೇವೆ ಸಲ್ಲಿಸಿದ್ದರು. ಅವರ ಪರಿವಾರದಲ್ಲಿ ಅವರ ತಂದೆಯವರನ್ನು ಬಿಟ್ಟು ಬಹುತೇಕ ಹಿರಿಯರೂ ಸೈನ್ಯದಲ್ಲಿ ಸೇವೆ ಸಲ್ಲಿಸಿದವರೇ ಆಗಿದ್ದರು. ಇನ್ನು ಅವರ ಪರಿವಾರ ಬಹು ಹಿಂದೆ ಸಿಖ್ ಧರ್ಮಕ್ಕೆ ಸೇರಿದ್ದ ಕಾರಣ ಬಹುತೇಕ ದಲಿತ ಕುಟುಂಬಗಳ ಮೇಲೆ ಜರುಗುವಷ್ಟು ಪ್ರಮಾಣದ ದೌರ್ಜನ್ಯ ಮತ್ತು ಅಸ್ಪೃಶ್ಯತೆಯ ಕ್ರೌರ್ಯ ಅವರನ್ನು ತಟ್ಟಿರಲಿಲ್ಲ.

ರೂಪನಗರದ ಸರಕಾರಿ ವಿಜ್ಞಾನ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದ ಕಾನ್ಶಿರಾಂ ೧೯೫೫ ರಲ್ಲಿ ಇಂದಿನ ಉತ್ತರಾಖಂಡದ ರಾಜಧಾನಿ ಡೆಹ್ರಾಡೂನನಲ್ಲಿನ ಸರ್ವೇ ಆಫ್ ಇಂಡಿಯಾ ಸೇರಿಕೊಂಡರು. ಯೌವನದಲ್ಲಿ ಕಾನ್ಶಿರಾಂರನ್ನು ದೇಹದಾಢ್ಯದಲ್ಲಿ ಮೀರಿಸಿದವರೇ ಇರಲಿಲ್ಲ. ಡೆಹ್ರಾಡೂನ್ ನಲ್ಲಿ ನಡೆಯುತ್ತಿದ್ದ ಅನೇಕ ಸೈಕಲ್ ಸ್ಪರ್ಧೆಗಳಲ್ಲಿ ಅವರು ಪಾಲ್ಗೊಳ್ಳುತ್ತಿದ್ದರು. ಹಾಗೆಯೇ ಡೆಹ್ರಾಡೂನ್ ಸುತ್ತಮುತ್ತಲಿನ ಕೆಮ್ಟಿ ಜಲಪಾತ, ಮಸ್ಸೂರಿ ಅನೇಕ ಪ್ರೇಕ್ಷಣೀಯ ಸ್ಥಳಗಳಿಗೆ ಸೈಕಲ್ ಮುಖಾಂತರವೇ ಸಂಚರಿಸಿದ್ದರು. ಡೆಹ್ರಾಡೂನ್ನಲ್ಲಿ ಶುರುವಾದ ಅವರ ಸೈಕಲ್ ಯಾತ್ರೆ ಅವರ ಜೀವನದಾದ್ಯಂತ ಮುಂದುವರೆದಿತ್ತು.

೧೯೫೬ ರ ಡಿಸೆಂಬರ್ ೭ ರಂದು ಶುಕ್ರವಾರ ಕಾನ್ಶಿರಾಂ ಎಂದಿನಂತೆ ತಮ್ಮ ಕಚೇರಿಗೆ ಹೋದರು. ಅಲ್ಲಿ ತಮ್ಮ ಒಬ್ಬ ಸಹೋದ್ಯೋಗಿ ಪರಶುರಾಮ್ ಅಂದು ಊಟ ತಂದಿರಲಿಲ್ಲ. ತಮ್ಮ ಊಟವನ್ನು ಹಂಚಿಕೊಳ್ಳಲು ಕಾನ್ಶಿರಾಂ ಅವರನ್ನು ಕೇಳಿಕೊಂಡರು. ತುಂಬಾ ದುಃಖ ಮತ್ತು ಬೇಸರದಲ್ಲಿದ್ದ ಈ ಸಹೋದ್ಯೋಗಿ ಅಂದು ತಾವು ಉಪವಾಸವಿರುವುದಾಗಿ ತಿಳಿಸಿದರು. ಅದಕ್ಕೆ ಕಾರಣ ವಿಚಾರಿಸಿದಾಗ ಪರಶುರಾಮ್ ‘ನೆನ್ನೆ ದಿನ ಬಾಬಾಸಾಹೇಬ್ ಮಹಾ ಪರಿನಿಬ್ಬಾಣ ಹೊಂದಿದ್ದಕ್ಕೆ ನಾನು ಶೋಕಾಚರಣೆಯಲ್ಲಿದ್ದೇನೆ’ ಎಂದು ತಿಳಿಸಿದರು.

ಅದೇ ಮೊದಲ ಬಾರಿ ಕಾನ್ಶಿರಾಂ ಬಾಬಾಸಾಹೇಬ ಮತ್ತವರ ಮಹತಿಯನ್ನು ಕುರಿತು ಅರಿತದ್ದು. ತಕ್ಷಣವೇ ಕಾನ್ಶಿರಾಂ ಪರಶುರಾಮರಿಂದ ಬಾಬಾಸಾಹೇಬರ ಪಟವೊಂದನ್ನು ಪಡೆದು ತಮ್ಮ ಕೋಣೆಯಲ್ಲಿ ಹಾಕಿಕೊಳ್ಳುತ್ತಾರೆ. ಹಾಗೆಯೇ ತುಂಬಾ ಅಂದಿನ ದಿನಗಳಲ್ಲಿ ದುರ್ಲಭವಾಗಿದ್ದ ಬಾಬಾಸಾಹೇಬರ ಬರಹಗಳನ್ನು ಸಂಗ್ರಹಿಸಲು ತೊಡಗುತ್ತಾರೆ. ಅಂದಿನಿಂದಲೇ ಶುರುವಾದ ದಮನಿತರ ಕುರಿತ ಕಾಳಜಿ ಮತ್ತು ತಮ್ಮ ಗುರಿಯನ್ನು ತಲುಪಲು ಬೇಕಿರುವ ಶ್ರದ್ಧೆಯನ್ನು ಕಾನ್ಶಿರಾಂ ತಮ್ಮ ಕೊನೆಯುಸಿರಿನವರೆಗೂ ಕಾಪಾಡಿಕೊಂಡು ಬಂದರು.

ಕಾನ್ಶಿರಾಂ ಪುಣೆಯಲ್ಲಿರುವಾಗ ಬಾಬಾಸಾಹೇಬರ ಬಹುತೇಕ ಪ್ರಬಂಧ ಮತ್ತು ಲೇಖನಗಳನ್ನು ಓದಿಕೊಂಡರು. ಅವರ ಮೇಲೆ ಅತ್ಯಂತ ಪ್ರಭಾವ ಬೀರಿದ ಕೃತಿ ಎಂದರೆ ಬಾಬಾಸಾಹೇಬರ ‘ಅನಿಹಿಲೇಶನ್ ಆಫ್ ಕಾಸ್ಟ (“Annihilation of Caste”). ಈ ಪ್ರೌಢ ಪ್ರಬಂಧವನ್ನು ಒಂದೇ ರಾತ್ರಿಯಲ್ಲಿ ಮೂರು ಬಾರಿ ಓದಿಕೊಂಡರು. ಹೀಗಿರುವಾಗ ೧೯೬೫ ರ ಆರಂಭದಲ್ಲಿ ಕೇಂದ್ರ ಸರಕಾರ ತನ್ನ ರಜಾ ಪಟ್ಟಿಯನ್ನು ಪರಿಷ್ಕರಿಸಿ ಪ್ರಕಟಣೆ ಹೊರಡಿಸಿತು. ಬುದ್ಧ ಮತ್ತು ಅಂಬೇಡ್ಕರ್ ಜಯಂತಿಗಳ ರಜೆಯನ್ನು ರದ್ದುಗೊಳಿಸಿ ತಿಲಕ ಜಯಂತಿಗೆ ರಜಾ ಘೋಷಿಸಿ ದೀಪಾವಳಿಗೆ ಒಂದು ದಿನ ಜಾಸ್ತಿ ರಜೆ ಕೊಡಲಾಗಿತ್ತು. kanshiramಇದನ್ನು ಪ್ರತಿಭಟಿಸಿ ರಾಜಸ್ಥಾನದ ದಲಿತ ಉದ್ಯೋಗಿ ದೀನಾ ಭಾನ ಎಂಬುವವರು ಅಂದಿನ ಕೇಂದ್ರ ಸರಕಾರದ ವಿರುದ್ದ ಪ್ರತಿಭಟನೆ ಮಾಡಿದರು. ದೀನಾರನ್ನು ಕೇಂದ್ರ ಸರಕಾರದ ಸೇವೆಯಿಂದ ಸಸ್ಪೆಂಡ್ ಮಾಡಲಾಯಿತು.

ಇದನ್ನು ಪ್ರತಿಭಟಿಸಿ ರಾಷ್ಟ್ರಾದ್ಯಂತ ಚಳುವಳಿಯನ್ನು ಸಂಘಟಿಸಿದ ಕಾನ್ಶಿರಾಂ ದೀನಾ ಭಾನರಿಗೆ ಕಾನೂನು ನೆರವನ್ನೂ ಒದಗಿಸಿ ಕೊಡುತ್ತಾರೆ. ರಾಷ್ಟ್ರವ್ಯಾಪಿ ಚಳವಳಿಗೆ ಮಂಡಿಯೂರಿದ ಸರಕಾರ ಬುದ್ಧ ಮತ್ತು ಅಂಬೇಡ್ಕರ್ ಜಯಂತಿಗಳ ರಜೆಯನ್ನು ಮರುಸ್ಥಾಪನೆ ಮಾಡಿತು; ಹಾಗೆಯೇ ದೀನಾ ಭಾನರನ್ನೂ ಕೆಲಸಕ್ಕೆ ಸೇರಿಸಿಕೊಂಡಿತು. ಈ ಸಂಘಟಿತ ಹೋರಾಟದಿಂದ ಪ್ರೇರಣೆಗೊಂಡ ಮನ್ಯವರರು ೧೯೬೫ ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ಇತ್ತು ಸಾರ್ವಜನಿಕ ಜೀವನಕ್ಕೆ ಧುಮುಕುತ್ತಾರೆ.

ಅಂದು ಆವರು ತೊಟ್ಟ ಪ್ರತಿಜ್ಞೆ: “I will never get married, I will never acquire any property, I will never visit my home, I will devote and dedicate the rest of my life to achieve the goals of Phule-Ambedkar movement.” (“ನಾನೆಂದೂ ಮದುವೆಯಾಗುವುದಿಲ್ಲ, ನಾನೆಂದಿಗೂ ಅಸ್ತಿಯನ್ನು ಸಂಪಾದಿಸುವುದಿಲ್ಲ, ನನ್ನ ಮನೆಗೆ ಎಂದಿಗೂ ಹೋಗುವುದಿಲ್ಲ, ನನ್ನ ಸಂಪೂರ್ಣ ಜೀವನವನ್ನು ಫುಲೆ-ಅಂಬೇಡ್ಕರ್ ಚಳುವಳಿಗೆ ಮುಡಿಪಾಗಿಡುತ್ತೇನೆ.”)

(ಮುಂದುವರೆಯುತ್ತದೆ…)