ಬಂಜಗೆರೆ ಮತ್ತು ಕುಂವೀಯವರಿಗೊಂದು ಬಹಿರಂಗ ಪತ್ರ

ಹಿರಿಯರೂ, ಮಾರ್ಗದರ್ಶಕರೂ ಆಗಿರುವ ಡಾ ಬಂಜಗೆರೆ ಜಯಪ್ರಕಾಶ್ ಮತ್ತು ಕುಂ ವೀರಭದ್ರಪ್ಪನವರಿಗೆ,

ಆಳ್ವಾಸ್ ನುಡಿಸಿರಿಯ ಆಹ್ವಾನ ಪತ್ರಿಕೆ ನೋಡಿದ ಬಳಿಕ ತಮಗೆ ಪತ್ರ ಬರೆಯುತ್ತಿದ್ದೇವೆ. ತಾವು ಈ ನೆಲದಲ್ಲಿ ಎಷ್ಟೋ ಕಾಲದಿಂದ ಜಾತ್ಯಾತೀತತೆ ಕೋಮುಸೌಹರ್ದತೆ, ಸಾಮಾಜಿಕ ಸಮಾನತೆ ಮತ್ತು ಸಮಾನ ಅವಕಾಶದ ಸ್ವಾಭಿಮಾನಿ ಬದುಕಿಗಾಗಿ ತಮ್ಮ ಮಾತು-ಕೃತಿಗಳ ಮೂಲಕ ಹೋರಾಟ ಮಾಡುತ್ತಾ ಬಂದವರು. ಈ ಮೂಲಕ ಯುವಪೀಳಿಗೆಗೆ ಆದರ್ಶಪ್ರಾಯರಾಗಿರುವವರು.

ನೀವು  ಹೀಗೆ ಎಡವಬಹುದೇ? ಅದೂ ಈ ಕಾಲದಲ್ಲಿ.  ಇದೀಗ ದೇಶಾದ್ಯಂತ ಸಾಹಿತ್ಯ ವಲಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಚಳುವಳಿಯಲ್ಲಿ ತೊಡಗಿದೆ. ಹೆಚ್ಚುತ್ತಿರುವ ಅಸೈರಣೆಯ ವಾತಾವರಣದ ವಿರುದ್ಧ ಸಿಡಿದೆದ್ದಿದೆ. ದೇಶದಲ್ಲೆಡೆ ಭುಗಿಲೆದ್ದಿರುವ ಅಸಹಿಷ್ಣುತೆಯ ವಾತಾವರಣದ Alvas-Nudisiri-2010ವಿರುದ್ದ ಸಾಹಿತಿಗಳು, ನಟ-ನಟಿಯರು, ವಿಜ್ಞಾನಿಗಳು ಹೋರಾಟಕ್ಕಿಳಿದಿದ್ದಾರೆ. ದೇಶದಾದ್ಯಂತ ಪ್ರಶಸ್ತಿ ವಾಪ್ಸಿ ಚಳುವಳಿ ನಡೆಯುತ್ತಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ವಾಪಸು ಮಾಡುವ ಮೂಲಕ ಕುಂ.ವೀರಭದ್ರಪ್ಪ ಅವರೇ ಈ ಹೋರಾಟವನ್ನು ರಾಜ್ಯದಲ್ಲಿ ಮುನ್ನಡೆಸಿದ್ದಾರೆ. ನುಡಿಸಿರಿಯಲ್ಲಿ ಪಾಲ್ಗೊಳ್ಳುವ ನಿಮ್ಮ ನಿರ್ಧಾರವನ್ನು ಈ ಹಿನ್ನೆಲೆಯಲ್ಲಿ ಪುನರ್ ಪರಿಶೀಲಿಸುವುದು ಸೂಕ್ರವಲ್ಲವೇ?

ದಕ್ಷಿಣ ಕನ್ನಡ ಜಿಲ್ಲೆ ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಹಿಂದುತ್ವದ ಪ್ರಯೋಗಶಾಲೆಯಾಗಿ ರಾಷ್ಟ್ರಮಟ್ಟದಲ್ಲಿ ಕುಖ್ಯಾತಿ ಗಳಿಸಿರುವುದು ನಿಮಗೆ ತಿಳಿದಿದೆ. ಆದರೆ ಇಂತಹ ಬೆಳವಣಿಗೆಗೆ ಕಾರಣಗಳೇನು ಎಂಬ ಬಗ್ಗೆ ಆಳವಾದ ಅಧ್ಯಯನ ನಡೆದಿಲ್ಲ. ಮೇಲ್ನೋಟಕ್ಕೆ ಬಜರಂಗಿಗಳು ಸೇರಿದಂತೆ ಒಂದಿಷ್ಟು ಕೇಸರಿಪಡೆಯ ಸದಸ್ಯರು ಈ ಗಲಭೆಗಳ ರೂವಾರಿಗಳಂತೆ ಕಾಣುತ್ತಾರೆ. ಆದರೊ ಹಿಂದುಳಿದ ಮತ್ತು ದಲಿತ ವರ್ಗಕ್ಕೆ ಸೇರಿರುವ ಅಮಾಯಕ ಯುವಕರನ್ನು ದಾಳಗಳಂತೆ ಬಳಸಿಕೊಂಡು ರಾಜಕೀಯದ ಆಟವನ್ನು ಆಡುತ್ತಿರುವ ಸೂತ್ರಧಾರಿಗಳು ಯಾರ ಕಣ್ಣಿಗೂ ಕಾಣಿಸುತ್ತಿಲ್ಲ. ಇಂತಹ ಸೂತ್ರಧಾರರನ್ನು ಗುರುತಿಸುವ ವೈಚಾರಿಕ ಸ್ಪಷ್ಟತೆಯನ್ನು ನಿಮ್ಮಂತಹವರ ಬರವಣಿಗೆಗಳಿಂದಲೇ ನಾವು ಗಳಿಸಿಕೊಂಡದ್ದು. ಅದಕ್ಕಾಗಿ ನಿಮಗೆ ಋಣಿಯಾಗಿದ್ದೇವೆ.

ವಿಶ್ವ ಹಿಂದೂ ಪರಿಷತ್ 50 ವರ್ಷಗಳನ್ನು ಈ ನೆಲದಲ್ಲಿ ಪೂರೈಸುತ್ತಿರುವುದಕ್ಕೂ ಈ ದೇಶದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿರುವ  ಅಸಹಿಷ್ಣುತೆಗೂ ಸಂಬಂಧವಿದೆ ಎಂದು ನಿಮಗೆ ಅನಿಸುವುದಿಲ್ಲವೇ? ನೀವು ಗಮನಿಸದೆ ಇರಬಹುದಾದ ಕೆಲವು ಸಂಗತಿಗಳ ಕಡೆ ಗಮನ ಸೆಳೆಯುವ ಪ್ರಯತ್ನ ನಮ್ಮದು. ವಿಶ್ವಹಿಂದೂ ಪರಿಷತ್ತಿನ ಸುವರ್ಣ ಮಹೋತ್ಸವ ಸಮಿತಿಯ ರಾಜ್ಯ ಅಧ್ಯಕ್ಷರಾಗಿರುವವರು ನುಡಿಸಿರಿಯ ರೂವಾರಿಯಾಗಿರುವ  ಡಾ ಎಂ ಮೋಹನ ಆಳ್ವರು. ಆ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾಗಿರುವವರು ಡಾ ಡಿ ವೀರೇಂದ್ರ ಹೆಗ್ಗಡೆಯವರು.  ಇತ್ತೀಚೆಗಷ್ಟೇ ಸುವರ್ಣ ಮಹೋತ್ಸವದ ಹೆಸರಿನಲ್ಲಿ ಮೂರು ತಿಂಗಳು ದೇಶದಾದ್ಯಂತ ಸಮಾವೇಶಗಳನ್ನು ವಿಶ್ವ ಹಿಂದೂ ಪರಿಷತ್ ನಡೆಸಿತ್ತು. ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಮಾಜೋತ್ಸವಗಳನ್ನು ಆಯೋಜಿಸಲಾಗಿತ್ತು.

ಕರ್ನಾಟಕದಲ್ಲಿ ನಡೆದ ಎಲ್ಲಾ ಸಮಾವೇಶಗಳ ಯಜಮಾನಿಕೆ ಡಾ ಎಂ ಮೋಹನ ಆಳ್ವರದ್ದಾದರೆ, ರಾಷ್ಟ್ರಮಟ್ಟದkumvee ಸಮಾವೇಶಗಳ ಯಜಮಾನಿಕೆ ಡಾ ಡಿ ವೀರೇಂದ್ರ ಹೆಗ್ಗಡೆಯವರದ್ದು. ಇದರ ನಂತರ ಕರ್ನ್ಟಕವೂ ಸೇರಿದಂತೆ ದೇಶಾದ್ಯಂತ ಕೋಮುದ್ವೇಷದ ವಿಷಮಯ ವಾತಾವರಣ ನಿರ್ಮಾಣವಾಗಿರುವುದನ್ನು ತಾವು ಅಲ್ಲಗಳೆಯಲಾರಿರಿ ಎಂದು ನಂಬಿದ್ದೇವೆ. ದೇಶದಾದ್ಯಂತ ನಡೆಯುತ್ತಿರುವ ಕೋಮುಗಲಭೆ ಮತ್ತು ಧಾರ್ಮಿಕ ಅಸಹಿಷ್ಣುತೆಯ ಘಟನೆಗಳಿಗೂ ಈ ಸಮಾವೇಶಗಳಿಗೂ ಸಂಬಂಧವಿದೆ ಎಂದು ನಿಮಗೆ ಅನಿಸುವುದಿಲ್ಲವೇ? ಹೆಸರೇ ಸೂಚಿಸುವಂತೆ ಆಳ್ವಾಸ್ ನುಡಿಸಿರಿಯ ಯಜಮಾನಿಕೆ ಡಾ ಎಂ ಮೋಹನ ಆಳ್ವ  ಅವರದ್ದು. ಈ ವ್ಯಕ್ತಿ ಕೇಂದ್ರಿತ ಸಾಹಿತ್ಯದ ಜಾತ್ರೆಗೆ ಡಾ ಡಿ ವೀರೇಂದ್ರ ಹೆಗ್ಗಡೆಯವರದ್ದೇ ಆಶೀರ್ವಚನ. ಆಮಂತ್ರಣ ಪತ್ರಿಕೆಯ ಮುಖಪುಟದಲ್ಲಿ ಫೋಟೋ ಕೂಡಾ ಅಚ್ಚು ಹಾಕಲಾಗಿದೆ.

ಸತ್ಯ ಇಷ್ಟೊಂದು ಸ್ಪಷ್ಟವಾಗಿ ನಮ್ಮ ಕಣ್ಣೆದುರು ಇರುವಾಗ ಕೋಮುವಾದದ ಸೂತ್ರಧಾರರ ಯಜಮಾನಿಕೆಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿಯಲ್ಲಿ ನೀವು ಹೇಗೆ ಭಾಗವಹಿಸಲು ಸಾಧ್ಯ? ಇದು ನಮ್ಮನ್ನು ಕಾಡುತ್ತಿರುವ ಪ್ರಶ್ನೆ. ಆಮಂತ್ರಣ ಪತ್ರಿಕೆಯಲ್ಲಿ ಡಾ ಬಂಜಗೆರೆ ಜಯಪ್ರಕಾಶ ಸರ್ “ಸಾಮಾಜಿಕ ನ್ಯಾಯ-ಹೊಸತನದ ಹುಡುಕಾಟ” ಎಂಬ ವಿಚಾರದ ಬಗ್ಗೆ ವಿಶೇಷೋಪನ್ಯಾಸ ನೀಡಿಲಿದ್ದಾರೆ ಎಂದಿದೆ.  ಊಳಿಗಮಾನ್ಯ ಪದ್ದತಿ, ವ್ಯಕ್ತಿಪೂಜೆ ಮತ್ತು ಧರ್ಮದ ಹೆಸರಲ್ಲಿ ನಡೆಯುತ್ತಿರುವ ಶೋಷಣೆಯನ್ನು ವಿರೋಧಿಸಿಕೊಂಡು ಬಂದ ಈ ಆಹ್ಹಾನವನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ?

ಕಳೆದ ಎರಡು ವರ್ಷ ಆಳ್ವಾಸ್ ನುಡಿಸಿರಿಯಲ್ಲಿ ದಲಿತರ ಅವಹೇಳನ ಮಾಡಲಾಗಿತ್ತು. ಈ ಬಗ್ಗೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿರುವುದು ತಮ್ಮ ಗಮನಕ್ಕೆ ಬಂದಿರುವಂತಿಲ್ಲ. ತಾವು ಈಗಲೂ ಗೂಗಲ್ ಮೂಲಕ ಹುಡುಕಿದರೆೆ ಈ ಬಗ್ಗೆ ಮಾಹಿತಿ ದೊರೆಯುತ್ತದೆ. ಪಕ್ಕಾ ಶಿಕ್ಷಣದ ವ್ಯಾಪಾರಿಯಾಗಿರಾಗಿರುವ  ಡಾ ಎಂ ಮೋಹನ ಆಳ್ವರು ಇದೀಗ ಬಿಲ್ಡರ್ ಆಗಿಯೂ ಬೆಳೆದಿದ್ದಾರೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ರೆಸಾರ್ಟ್ ಸ್ಥಾಪಿಸಲು ಹೊರಟಿರುವ ಆಳ್ವರ ವಿರುದ್ಧ ಈಗಾಗಲೇ ಪರಿಸರ ಸಂಘಟನೆಗಳು ನ್ಯಾಯಾಲಯದ ಮೊರೆ ಹೋಗಿದೆ. ಜಮೀನ್ದಾರಿ ಪಳಿಯುಳಿಕೆಯಾಗಿರೋ ಡಾ ಎಂ ಮೋಹನ ಅಳ್ವರು ತಮ್ಮ ಶಿಕ್ಷಣ ವ್ಯಾಪಾರಕ್ಕಾಗಿ ಇಂತಹ ಸುಂದರವಾದ ವರ್ಣರಂಜಿತ ವಿಷಯಗಳನ್ನು ಇಟ್ಟುಕೊಂಡು ನುಡಿಸಿರಿ ಜಾತ್ರೆ ನಡೆಸುತ್ತಿದ್ದಾರೆ.

ಈ ಬಾರಿಯ ನುಡಿಸಿರಿಯಲ್ಲಿ ಸಾಮರಸ್ಯ- ಹೊಸತನದ ಹುಡುಕಾಟ ಎಂಬ ವಿಷಯದ ಬಗ್ಗೆ ನಮ್ಮ ನೆಚ್ಚಿನ ಮೇಷ್ಟ್ರಾಗಿರುವ ಕುಂ ವೀರಭದ್ರಪ್ಪನವರು ಮಾತನಾಡಲಿದ್ದಾರೆ ಎಂದು ತಿಳಿದು ಆಘಾತವಾಯಿತು. ಈ ಬಾರಿ 12 ನೇ ನುಡಿಸಿರಿ ನಡೆಯುತ್ತಿದೆ. ಕಳೆದ 11 ವರ್ಷಗಳಿಂದಲೂ ನುಡಿಸಿರಿಯಲ್ಲಿ ಇಂತಹ ಪ್ರಗತಿಪರ ವಿಷಯಗಳ ಮೇಲೆ ಆಳ್ವರು ಭಾಷಣ ಮಾಡಿಸಿದ್ದಾರೆ. ಆದರೆ ಇದರಿಂದ ಸಾಮಾಜಿಕ ಸಾಮರಸ್ಯ ಇನ್ನಷ್ಟು ಹಾಳಾಗುತ್ತಾ ಹೋಯಿತೇ ಹೊರತು ಸುಧಾರಣೆಯಾಗಲಿಲ್ಲ. ನಿಮ್ಮಂತಹ ಗೌರವಾನ್ವಿತ ಸಾಹಿತಿಗಳು ನುಡಿಸಿರಿ ವೇದಿಕೆ ಹತ್ತಿ ಭಾಷಣ ಮಾಡುವುದರಿಂದ ಆಳ್ವರಿಗೆ ವಿಶ್ವಾಸಾರ್ಹತೆ ತಂದುಕೊಂಡುತ್ತಿದ್ದಾರೆ. ಈ ರೀತಿ ಗಳಿಸಿಕೊಂಡ ವಿಶ್ವಾಸಾರ್ಹ ನಾಯಕತ್ವದ ಲಾಭವನ್ನು ಅವರು ಹಿಂದೂ ಸಂಘಟನೆಗಳಿಗೆ ಧಾರೆ ಎರೆಯುತ್ತಿದ್ದಾರೆ.  ಸರ್, ದಯವಿಟ್ಟು ಯೋಚನೆ ಮಾಡಿ.

ದಕ್ಷಿಣ ಕನ್ನಡದ ಇತಿಹಾಸದಲ್ಲೇ ಕೋಮುಗಲಭೆ ನಡೆಯದ ಏಕೈಕ ವಿಧಾನಸಭಾ ಕ್ಷೇತ್ರವೆಂದರೆ ಅದು ಮೂಡಬಿದ್ರೆ.Banjagere-Jayaprakash ಜೊತೆಗೆ ಕರಾವಳಿಯ ಇತಿಹಾಸದಲ್ಲೇ ಒಂದೇ ಒಂದು ಬಾರಿಯೂ ಬಿಜೆಪಿ ಗೆಲ್ಲಲಾಗದ ಕ್ಷೇತ್ರವಿದ್ದರೆ ಅದೂ ಮೂಡಬಿದ್ರೆಯೇ. ಇಂತಹ ಮೂಡಬಿದ್ರೆಯಲ್ಲಿ ಇತ್ತೀಚೆಗೆ ಕೋಮುಗಲಭೆಗಳು ನಡೆದುಹೋಯಿತು. ದನ ಸಾಗಾಟದ ಹೆಸರಿನಲ್ಲಿ ಹಲ್ಲೆಗಳಾಯಿತು. ಕೊಲೆ ನಡೆಯಿತು. ಇದನ್ನೇ ಬಳಸಿಕೊಂಡು ಮುಸ್ಲಿಮರ ಅಂಗಡಿ ಮನೆಗಳ ದ್ವಂಸ ಮಾಡಲಾಯಿತು. ಈ ಎಲ್ಲಾ ಸಾಮರಸ್ಯ ಕದಡುವ ಘಟನೆಗಳಿಗೂ ಹಿಂದೂ ಸಮಾಜೋತ್ಸವಗಳಿಗೂ, ವಿಶ್ವ ಹಿಂದೂ ಪರಿಷತ್ ಸುವರ್ಣ ಮಹೋತ್ಸವಕ್ಕೂ, ಅದರ ಸಂಘಟಕರ ತೆರೆಯಮರೆಯ ನೆರವು-ಬೆಂಬಲಕ್ಕೂ ಸಂಬಂಧವಿಲ್ಲ ಎನ್ನುವಿರಾ ಸರ್ ?

”ನಮ್ಮ ಪ್ರಗತಿಪರ ವಿಚಾರಧಾರೆಗಳನ್ನು ಅವರ ವೇದಿಕೆಯಲ್ಲೇ ಹೋಗಿ ಹೇಳ್ತೀವಿ” ಎಂದು ಕಳೆದ ಹತ್ತು ವರ್ಷಗಳಲ್ಲಿ ಅಲ್ಲಿ ಹೋಗಿ ಭಾಷಣ ಮಾಡಿದವರು ಹೇಳುತ್ತಲೇ ಇದ್ದಾರೆ. ಇದರಿಂದ ಛದ್ಮವೇಷಧಾರಿಗಳಾದ ಬಲಪಂಥೀಯರು ಲಾಭ ಮಾಡಿಕೊಂಡರೇ ಹೊರತು ಪ್ರಗತಿಪರ ಹೋರಾಟಗಳಿಗೆ ಯಾವ ಲಾಭಗಳೂ ಆಗಿಲ್ಲ. ಶಿಕ್ಷಣದ ವ್ಯಾಪಾರಿಗಳಿಗೆ, ಧರ್ಮಾಧಿಕಾರಿಗಳಿಗೆ, ರಿಯಲ್ ಎಸ್ಟೇಟ್ ಮಾಫೀಯಾಕ್ಕೆ ಇದರಿಂದ ಸಮಾಜದಲ್ಲಿ ಗೌರವ ದೊರೆಯುತ್ತಿದೆಯೇ ಹೊರತು ಬೇರಾವ ಸಾಧನೆಯೂ ಆಗಿಲ್ಲ ಎಂಬುದು ನಾವು ಕಂಡುಕೊಂಡ ಸತ್ಯ.

ನಮ್ಮೆಲ್ಲರ ಗುರುಗಳಂತಿದ್ದ ಯು.ಆರ್. ಅನಂತಮೂರ್ತಿಯವರು ತೀರಿಕೊಂಡ ದಿನವನ್ನು ನಾವು ಮರೆಯುವಂತಿಲ್ಲ. ಇಡೀ ರಾಜ್ಯದ ಶಾಲಾ ಕಾಲೇಜುಗಳಿಗೆ ಮರುದಿನ ರಜೆ ಘೋಷಿಸಲಾಗಿತ್ತು.  ರಾಜ್ಯದಲ್ಲಿ ಒಂದು ರೀತಿಯ ಸೂತಕದ ವಾತಾವರಣ ಇತ್ತು. ಆದರೆ ಕರಾವಳಿ ಮತ್ತ್ತು ಮಲೆನಾಡು ಭಾಗದಲ್ಲಿ ಕೋಮುವಾದಿಗಳು ಪಟಾಕಿ ಸಿಡಿಸಿದರು. ಈ ಪಟಾಕಿ ಸಿಡಿಸಿದ ಕೋಮುವಾದಿಗಳ ಪೋಷಕರು ಯಾರೆಂದು ಮತ್ತೆ ಬಿಡಿಸಿ ಹೇಳಬೇಕಿಲ್ಲ. ಇರಲಿ. ರಾಜ್ಯಾಧ್ಯಂತ ಶಾಲಾ ಕಾಲೇಜಿಗೆ ರಜೆ ಘೋಷಿಸಿದ್ದರೂ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ರಜೆ ಘೋಷಿಸಿರಲಿಲ್ಲ. ರಜೆ ಕೊಟ್ಟೇ ಸಂತಾಪ ಸೂಚಿಸಬೇಕು ಎಂದೇನಿಲ್ಲ ಎನ್ನುವುದು ನಿಜ, ಆದರೆ ಅಂತಹದ್ದೊಂದು ರಜೆ ಕೋಮುವಾದಿಗಳ ಆರ್ಭಟಕ್ಕೆ ಒಂದು ಸಣ್ಣ ಪ್ರತಿರೋಧ ವ್ಯಕ್ತಪಡಿಸಿದಂತಾಗುತ್ತಿತ್ತು. ಸಾಹಿತಿಗಳನ್ನು ಪಲ್ಲಕ್ಕಿ ಮೇಲೆ ಕೂರಿಸಿ ಮೆರವಣಿಗೆ ಮಾಡುವ ಆಳ್ವಾರ ಮನಸ್ಸನ್ನು ಒಬ್ಬ ಹಿರಿಯ ಸಾಹಿತಿಯ ಸಾವು ಮತ್ತು ಅದನ್ನು ಸಂಭ್ರಮಿಸಿದ ದುಷ್ಟರ ಅಟ್ಟಹಾಸ ಕಲಕಲಿಲ್ಲ ಎನ್ನುವುದು ಎಷ್ಟೊಂದು ವಿಚಿತ್ರ ಅಲ್ಲವೇ?

ಇದೆಲ್ಲದರ ಹೊರತಾಗಿಯೂ ಡಾ ಎಂ ಮೋಹನ ಆಳ್ವರು ತಾವು ಸಾಹಿತ್ಯದ ಪೋಷಕರು ಹೇಳಿಕೊಳ್ಳುತ್ತಾರೆ. ಅನಂತ ಮೂರ್ತಿಯವರ ಸಾವಿನ ನಂತರ ನಮ್ಮನ್ನೆಲ್ಲ ಆಘಾಥಕ್ಕೀಡುಮಾಡಿರುವುದು ಡಾ ಎಂ ಎಂ ಕಲ್ಬುರ್ಗಿ ಕೊಲೆ.  ಆದರೆ ಸಾಹಿತ್ಯ ಪ್ರೇಮಿಗಳು, ಪೋಷಕರೂ ಆಗಿರುವ ಡಾ.ಆಳ್ವರು ಕನಿಷ್ಠ ನೂರು ಜನರನ್ನು ಸೇರಿಸಿ ಕಲ್ಪುರ್ಗಿಯವರ ಹತ್ಯೆಯನ್ನು ಖಂಡಿಸಲು ಮುಂದಾಗದಿರುವುದು ಏನನ್ನೂ ಸೂಚಿಸುತ್ತದೆ. ಹಾಗೆ ಮಾಡಿದರೆ ವಿಶ್ವಹಿಂದು ಪರಿಷತ್ ನಾಯಕರನ್ನು ಎದುರುಹಾಕಿಕೊಂಡಂತಾಗುತ್ತದೆ ಎಂದು ಅವರು ಭಯಪಟ್ಟಿರಬಹುದೇ?

ಈ ಬಾರಿಯ ಆಳ್ವಾಸ್ ನುಡಿಸಿರಿಯನ್ನು ಉದ್ಘಾಟನೆ ಮಾಡಬೇಕು ಎಂದು ಹಿರಿಯ ರೈತ ಚಳುವಳಿಗಾರ ಕಡಿದಾಳು ಶ್ಯಾಮಣ್ಣರನ್ನು ಮೋಹನ ಆಳ್ವರು ಆಮಂತ್ರಿಸಿದ್ದರಂತೆ. ಶ್ಯಾಮಣ್ಣ ಅದನ್ನು ನಿರಾಕರಿಸಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಹೊಸತನದ ಹುಡುಕಾಟದ ಬಗ್ಗೆ ಮಾತನಾಡಲು ಡಾ ಸಿ ಎಸ್ ದ್ವಾರಕನಾಥ್ ಅವರನ್ನು ಕೇಳಿದ್ದರು. ಅವರೂ ಕೂಡಾ ಆಳ್ವರ ವಿಹಿಂಪ, ಆರ್ ಎಸ್ ಎಸ್ ನಂಟಿನ ಕಾರಣ ನೀಡಿ ಆಹ್ವಾನವನ್ನು ನೇರವಾಗಿಯೇ ನಿರಾಕರಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ನುಡಿಸಿರಿಯ ಬಣ್ಣ ಬಯಲಾಗುತ್ತಿರುವುದರಿಂದ ಎಚ್ಚೆತ್ತಿರುವ ನಮ್ಮ ಬಹುತೇಕ ಸಾಹಿತಿಗಳು, ಚಿಂತಕರು ಡಾ.ಆಳ್ವ ಅವರ ಆಹ್ಹಾನವನ್ನು ತಿರಸ್ಕರಿಸಿ ದೂರ ಉಳಿದಿದ್ದಾರೆ.  ಇದರಿಂದಾಗಿ ಬಲಪಂಥೀಯ ಗುಂಪು  ಬೌದ್ದಿಕ ಅಪೌಷ್ಠಿಕತೆಯಿಂದ ನರಳುವಂತಾಗಿದೆ. ಈ ಎಲ್ಲ ಸಂಗತಿಗಳು ನಿಮ್ಮ ಗಮನಕ್ಕೆ ಬಾರದೆಯೂ ಇರಬಹುದು. ಇದಕ್ಕಾಗಿ ಈ ಪತ್ರ ಬರೆಯುತ್ತಿದ್ದೇವೆ.  ಕೊನೆಗೂ ನಿರ್ಧಾರ ನಿಮ್ಮದು. ನಿಮ್ಮನ್ನು ಅಪಾರ ಗೌರವದಿಂದ ಕಾಣುತ್ತಿರುವ ನಮ್ಮ ಮನಸ್ಸಿಗೆ ನೀವು ನೋವುಂಟುಮಾಡುವ ನಿರ್ಧಾರ ಕೈಗೊಳ್ಳಲಾರಿರಿ ಎಂದು ನಂಬಿದ್ದೇವೆ.

ವಿಶ್ವಾಸದಿಂದ,

ಅಕ್ಷತಾ ಹುಂಚದಕಟ್ಟೆ, ಡಾ ಅರುಣ್ ಜೋಳದಕೂಡ್ಲಿಗಿ, ಬಿ ಶ್ರೀಪಾದ ಭಟ್, ಟಿ ಕೆ ದಯಾನಂದ, ನವೀನ್ ಸೂರಿಂಜೆ, ಮುನೀರ್ ಕಾಟಿಪಳ್ಳ, ಅನಂತ್ ನಾಯಕ್, ಮುದ್ದು ತೀರ್ಥಹಳ್ಳಿ, ಇರ್ಷಾದ್ ಉಪ್ಪಿನಂಗಡಿ, ಲಿಂಗರಾಜ್ ಪ್ರಜಾಸಮರ, ಪೀರ್ ಬಾಷಾ, ಕಾವ್ಯಾ ಅಚ್ಯುತ್, ಜೀವನ್ ರಾಜ್ ಕುತ್ತಾರ್, ಟಿ ಎಸ್ ಗೊರವರ, ಜಯಶಂಕರ್ ಅಲಗೂರು, ಅಬ್ಬಾಸ್ ಕಿಗ್ಗ, ಕೈದಾಳ ಕೃಷ್ಣಮೂರ್ತಿ, ಸೈಫ್ ಜಾನ್ಸೆ ಕೊಟ್ಟೂರು, ಬಿ ಶ್ರೀನಿವಾಸ, ಪಂಪರೆಡ್ಡಿ ಅರಳಹಳ್ಳಿ, ಅಭಿನಂದನ್ ಬಳ್ಳಾರಿ ಮತ್ತು ಬಸವರಾಜ್ ಪೂಜಾರ್

22 comments

 1. ಶುರುವಾಯಿತು ನಿಮ್ಮ ವಾರ್ಷಿಕ ವರಾತ. ಒಳ್ಳೆ ಮಿಲಿಟ್ರಿ ಲೈಬ್ರೇರಿಯನ್ ಥರ. ಅಲ್ಲೋಗ್ಬೇಡ ಇಲ್ನೋಡ್ಬೇದ ಅಲ್ ಮಾತಾಡ್ಬೇಡ ಇಲ್ ಕಾಣ್ಬೇಡ! ಎಂಥದ್ದು ಮಾರ್ರೆ ಇದು! ಯಾರೋ ಪುಂಡ್ರು ಮಾರಲ್ ಪೋಲಿಸಿಂಗ್ ಮಾಡೋ ಥರಾ ಆಡ್ತೀರಲ್ಲಾ. ’ನೀನು ಅವಂ ಜೊತೆ ಹೋದ್ಯ’. ಒಂದು ಗುದ್ದು. ’ಇವ್ನಾ! ಇವಂ ನಮ್ಮವನಲ್ಲ.’ ಒಂದು ಗುದ್ದು. ’ಅವಂದು ನಿಕ್ಕರ್ರು ಖಾಕಿ.’ ಒಂದು ಗುದ್ದು. ’ಕೆಂಪು ಬಹಳ ತಂಪು.. ಗೊತ್ತಿಲ್ಲ ನಿಂಗೆ’. ಟಪಾರ್.. ಟಪಾರ್! ಏನ್ರಪ್ಪಾ ಇದು! ಯಾವ್ ಸ್ಕೂಲಲ್ಲಿ ಕಲ್ತ್ರಿ ಈ ಪೋಲಿಸಿಕೆಯನ್ನ. ಯಾರ್ ಕಲ್ಸಿದ್ರು ಈ ಆಟಾನ. ಯಾರ್ ಸಹವಾಸ ಕೊಡ್ಸ್ತುಲಾಠೀನ.

  ಇದಕ್ಕೂ ಇನ್ ಟಾಲರೆನ್ಸ್ ಅನ್ನಲ್ವ ಗುರೂ. ಅಥವಾ ಅದ್ಕ ಬೇರೇನ ಬಣ್ಣ ಐತ. ಕೆಂಪು ಬಣ್ಣದ್ದು ಹೊಳೆಯುವ ಇನ್ ಟಾಲರೆನ್ಸ್. ಅದು ಒಳ್ಳೇ ಫ್ಯಾಟು. ಖಾಕಿದ್ದು ಅನಿಷ್ಟದ್ದು ಅಂತ? ಅಯ್ಯೋ ಶಿವ್ನೇ, ಇಲ್ನೋಡಿದ್ರ ಇಬ್ರ ಎಲೇಲೂ ಹೆಗ್ಣ ಬಿದ್ದೈತ್ತಲ್ಲೋ!!!

  ಬರೆಯೋರು, ಒದೋರು, ಕುಣಿಯೋರು, ಆಡೋರು ಹಿಂಗ ಎಲ್ರೂ ತಮ್ಮ ಸಾಚತೇನ, ಪ್ರಗತಿಪರತೇನ, ಸೆಕ್ಯುಲರಿಸಂನ ಪ್ರೂವ್ ಮಾಡ್ಬೇಕಂದ್ರ ನಿಮ್ ಲ್ಯಾಬ್ ನೊಳಗ ಟೆಸ್ಟ್ ಗೆ ಸ್ಯಾಂಪಲ್ಲು ಕೊಟ್ಟೇ ಹೋಗ್ಬೇಕೇನು? ಚಡ್ಡಿ ಬಣ್ಣ ಕನ್ಫರ್ಮ್ ಮಾಡಿಯೇ ಅಥವಾ ನಿಮ್ಬೇಕಿದ್ದು ಹಾಕ್ಸಿಯೇ ಕಳ್ಸೋರ ಥರ ಟೇಪು ಹಿಡ್ಕಂದು ಕುಂತಿರಲ್ಲ, ನಿಮ್ಗ ಮಾಡೋಕ್ ಬೇರೆ ಖೇಮೆ ಇಲ್ವಾ?

  ಸಂವಾದ ಅನ್ನೋದು ಭಾಳ ದೊಡ್ಡದು ಕಣ್ರಾ. ಮಾತು ಆಡ್ಬೇಕಪ್ಪ. ಜಗಳ ಮಾಡ್ಬೇಕು. ಅವಂದು ಗಲತ್ ಅನ್ಸಿದ್ರ ಅವನ ಕೂಡೆ ಅನ್ನು. ಹಂಗಂತ ಅವಂ ಕೂಡೆ ಬೋಂಡಾ ತಿಂದ್ರೆ ಅದು ಜಿಲೇಬಿ ಆಗಲ್ಲ ಅಣ್ಣಂದಿರಾ. ನಮ್ ಹಿರೀಕ್ರು ಹೇಳಿದ್ದು ಇದನ್ನೇ. ಕೊಟ್ಟು ಹೋದದ್ದ ಇದನ್ನೇ. ನೀವೇ ಕೈಮುಗಿದ ಮೂರ್ತಿ ಸರ್ರ ಕೂಡಾ ಮಾಡಿದ್ದ್ ಹಿಂಗೇ ಅಲ್ವಾ. ಅದು ಬಿಟ್ಟು ಗೀಟು ಹಾಕಿ ಕಾಂಟೆಕ್ಟೇ ಇಲ್ದ ಎರಡು ಐಸ್ ಲ್ಯಾಂಡ್ ಕಟ್ಟೋದೇನು? ಮೊನ್ನೆ ಮೊನ್ನೆ ನಿತೀಶಣ್ಣ ಗೆದ್ದದ್ದಕ್ಕ ಮೀನ್ ತಿಂದಷ್ಟೇ ಖುಷಿ ಪಟ್ರಿ. ಅವ್ರು ಇಷ್ಟು ದಿನ ಯಾರ್ ಕೂಡೆ ಇದ್ರು. ಈವಾಗ್ ಹೆಂಗಾದ್ರು ನಿಮ್ಮೋರು?

  ದೇವ್ರೇ, ಮೀನ್ ಮಾರ್ಕೇಟ್ಟಲ್ಲಿ ಕಾಣೇನೂ ಇರುತ್ತೆ, ಬೊಳ್ಂಜಿರ್ರೂ ಇರುತ್ತೆ, ಬಂಗುಡೇನೂ ಇರುತ್ತೆ, ಬೊಂಡಾಸ್ಸೂ ಇರುತ್ತೆ. ಬೆರಕೇನೂ ಇರುತ್ತೆ. ಅದು ನಂಗ್ ನಂಗೆ ಬ್ಯಾಡ. ಇದು ಚ್ವೋಡಿ.. ನಂಗ್ ಒಗ್ಗಲ್ಲ. ಹಂಗೆಲ್ಲಾ ಓಕೆ ಗೆಳೆಯ್ರಾ. ಆದ್ರ, ನೀನ್ ಕೊಡ್ಡ್ಯಾಯಿ ಮಾರೋನು ನಾಳೆಯಿಂದ ನಾನ್ ತಿನ್ನೋ ಫರ್ಸ್ಟ್ ಕ್ಲಾಸ್ ಕಾಸ್ಲೀ ಅಂಜಲ್ ಮೀನನ್ನ ಮಾರೋದ್ ಕೈದ್. ನೀನ್ ನಿನ್ನೆ ಬ್ಯಾರಿಯಿಂದ ಮದಿಮಾಲ್ ಮೀನ ಖರೀದಿ ಮಾಡಿದ್ದಿ; ಇವತ್ತ್ ನಾನ್ ನಿಂಗೆ ಮೀನೇ ಮಾರಲ್ಲ. ಸ್ವಸ್ತಗ್ ಹೋಗ್. ಇದ್ ಯಾವ ಮತ್ಸ್ಯ ನ್ಯಾಯ ಸಾಹೆಬ್ರ!

  “ನಮ್ಮ ಮನಸ್ಸಿಗೆ ನೀವು ನೋವುಂಟುಮಾಡುವ ನಿರ್ಧಾರ ಕೈಗೊಳ್ಳಲಾರಿರಿ ಎಂದು ನಂಬಿದ್ದೇವೆ”- ಈ ಮನಸ್ಸಿಗೆ ನೋವಾಗುವ, ಧಕ್ಕೆಯಾಗುವ, ಘಾಸಿಯಗುವ ರೋಗ ನಿಮಗೂ ತಗುಲಿತಾ? ಓ ಗಾಡ್!!!

 2. Baraguru started this trend of leftist liberal writers participating in the cash rich rightwing literary festival. Dalita Kavi siddalingaiah was the next in line. Now Banjagere and Kumvee. Of course they have their reasons for participating. Their detractors claim it’s hypocrisy. Truth is somewhere in between – even the most hardcore socialists among writers today crave for money and recognition. They like grand stages and large audience. Unfortunately media pampers only the English savvy intellectuals and doesn’t entertain the rustic and not so erudite writers. So many of these writers don’t get chance to feel important and be heard like Karnad, URA, Shivaprakash. Today if you’re not in the limelight your value as public intellectual is zero. Banjagere and Kumvee also know this bitter truth. When opportunity comes in the form of Nudi Siri, why will Banjagere and Kumvee refuse it? It’s their big ticket to get well earned recognition and be heard.

 3. “ನಮ್ಮನ್ನೆಲ್ಲ ಆಘಾಥಕ್ಕೀಡುಮಾಡಿರುವುದು ಡಾ ಎಂ ಎಂ ಕಲ್ಬುರ್ಗಿ ಕೊಲೆ”

  ಡಾ. ಪರಮೇಶ್ವರ್ ಅವರು ರಾಜ್ಯದ ಗೃಹಸಚಿವರಾಗಿ ಚಾರ್ಜ್ ತೆಗೆದುಕೊಂಡಿರುವುದರಿಂದ ಕಲ್ಬುರ್ಗಿ ಮರ್ಡರ್ ಕೇಸ್ ಈಗಲಾದರೂ ಪ್ರಗತಿಯನ್ನು ಕಾಣುತ್ತದೆ ಎಂದು ಭರವಸೆ ಇಡಬಹುದಾಗಿದೆ. ಮೂಢನಂಬಿಕೆಗಳಷ್ಟೇ ಅಲ್ಲ ಕೌಟುಂಬಿಕ ಕಲಹ ಹಾಗೂ ಹಣಕಾಸು ವ್ಯವಹಾರಗಳೂ ಪ್ರೊ. ಕಲ್ಬುರ್ಗಿ ಮರ್ಡರಿಗೆ ಕಾರಣವಿರಬಹುದು. ಪ್ರೊ. ಕಲ್ಬುರ್ಗಿ ಅವರ ಕೌಟುಂಬಿಕ ಸಮಸ್ಯೆಗಳ ಬಗ್ಗೆ ಹಾಗೂ ಹಣಕಾಸು ವ್ಯವಹಾರಗಳ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ ನಡೆಸಿ ಅದರ ವರದಿಯನ್ನು ನಾಡಿನ ಸಾಹಿತಿ ಚಿಂತಕರ ಅವಗಾಹನೆಗೆ ಕೊಡತಕ್ಕದ್ದು.

  1. ಸೀತಮ್ಮನವರೇˌ ಕೌಟಂಬಿಕ ಕಾರಣವಲ್ಲ ಎಂದು ತನಿಖೆಯಾಗಿ ಸಾಬೀತಾಗಿದೆ. ಬಹುಶಃ ಕೋಮುವಾದಿ ಪತ್ರಿಕೆಗಳಲ್ಲಿ ಇನ್ನೂ ಬಂದಿಲ್ಲವೇನೋ? ನಿಮ್ಮ ಕಣ್ಣುಗಳನ್ನು ಸತ್ಯದ ಕಡೆಗೆ ಮುಚ್ಚಿ ಸುಳ್ಳಿನ ಕಡೆಗೆ ತೆರೆದಿದ್ದರೇನೋ?ಣ

   1. “ಕೌಟಂಬಿಕ ಕಾರಣವಲ್ಲ ಎಂದು ತನಿಖೆಯಾಗಿ ಸಾಬೀತಾಗಿದೆ”

    ತನಿಖೆ ನಡೆಸುತ್ತಿರುವ ಪೋಲೀಸರೇ ಕಲ್ಬುರ್ಗಿ ಕೊಲೆ ಯಾವ ಕಾರಣಕ್ಕೆ ಆಗಿದೆ ಅಂತ ಇದುವರೆಗೂ ಧೃಢವಾಗಿಲ್ಲ, ಕೌಟಂಬಿಕ ವೈಮನಸ್ಯ, ವೈಯಕ್ತಿಕ ದ್ವೇಷ, ಹಣಕಾಸು ವ್ಯವಹಾರ, ಮೊದಲಾದ ಯಾವುದೇ ಕಾರಣಗಳನ್ನು ತನಿಖೆ ಮುಗಿಯುವವರೆಗೆ ತಳ್ಳಿ ಹಾಕಲಾಗುವುದಿಲ್ಲ ಅಂತ ಹೇಳಿರುವಾಗ ತಾವು “ಕೌಟಂಬಿಕ ಕಾರಣವಲ್ಲ ಎಂದು ತನಿಖೆಯಾಗಿ ಸಾಬೀತಾಗಿದೆ” ಅಂತ ಯಾವ ಆಧಾರದ ಮೇಲೆ ಹೇಳುತ್ತಿದ್ದೀರಿ? ಸಿ. ಐ. ಡಿ. ತನಿಖೆಯ ಪ್ರಾಥಮಿಕ ವರದಿ ತಮ್ಮ ಕೈ ಸೇರಿದೆಯೇ? ಅಥವಾ ಕಲ್ಬುರ್ಗಿ ಹಂತಕರು ನಿಮಗೆ ಫೋನ್ ಮಾಡಿ ಹೇಳಿದ್ದಾರ?

 4. ಇನ್ನೂ ಪಿ.ಯು.ಸಿ. ಓದುತ್ತಿರುವ ಎಳೆಯ ಮನಸ್ಸು ಮುದ್ದು ತೀರ್ಥಹಳ್ಳಿಯ ಹೆಸರು ಈ ಪತ್ರದ ಜೊತೆಗೆ ನೋಡಿ ಆಶ್ಚರ್ಯವಾಯಿತು. ಮೊನ್ನೆ ಮೊನ್ನೆ ತೊದಲು ನುಡಿಗಳಿಂದ ಖುಶಿ ಕೊಡುತ್ತಿದ್ದ ಮುದ್ದು ಇಂದು ಬಂಜಗೆರೆ-ಕುಂವೀ ಅವರಿಗೇ ಬರೆಯುವಷ್ಟು ದೊಡ್ಡವಳಾದಳಲ್ಲ ಅಂತ!

 5. ಎಲ್ಲಾ ಒಂದೆ ಗಿಡದ ತೊಪ್ಪಲುಗಳು!!.. ದಯವಿಟ್ಟು ಪ್ರತಿಭಟನೆಯಲ್ಲಿಯಾದರೂ ಎಲ್ಲರನ್ನೂ ಸೇರಿಸಿಕೊಳ್ಳಿ. ಸರ್ವ ಸಮಾಜವನ್ನು ಓಟ್ಟುಗೂಡಿಸಿ, ಪುನಃ ಪುನಃ ಅದೇ ‘ನನ್ನ ಬೆನ್ನು ನೀನು ಕೆರಿ ನಿನ್ನ ಬೆನ್ನು ನಾನು ಕೆರಿತೀನಿ’ ವ್ಯವಹಾರ ಬೇಡ. ಮುಗ್ಧರು ನಾಲ್ಕು ದಿನ ನಿಮ್ಮನ್ನು ನಂಬಬಹುದು. ಆಮೇಲೆ ಹಾಸ್ಯಾಸ್ಪದ ಆಗುವ ಅಪಾಯವಿದೆ. ಪ್ರತಿಭಟನೆಯಲ್ಲಿಯೂ ಗಾಂಭಿರ್ಯತೆ ಇರಲಿ! ಕಡಿದಾಳ್ ಶಾಮಣ್ಣ ಮೈಸೂರು ದಸರಾ ಉತ್ಸವ ನಿರಾಕರಿಸಿದಾಗ ಅಥವ ಚರಕ ಪ್ರಸನ್ನರ ಇತ್ತಿಚಿನ ಕೆಲವು ಮಾತುಗಳನ್ನು ಆಲಿಸಿ.

  ಸೀತಾ ಅವರು ಹೇಳಿದ ಹಾಗೆ .. ಮಕ್ಕಳನ್ನು ಈ ಎಡ-ಬಲ ವ್ಯವಹಾರದ ಮಧ್ಯೆ ದಯವಿಟ್ಟು ಎಳೆದು ತರಬೇಡಿ!

 6. “ಇವತ್ತಿಗೆ ನುಡಿ ಸಿರಿಯ ಹನ್ನೊಂದು ಕಾರ್ಯಕ್ರಮಗಳು ನಡೆದಿವೆ. ಮೊದಲ ವರ್ಷದಿಂದಲೂ ಅಲ್ಲಿಗೆ ನಾಡಿನ ಚಿಂತಕರನ್ನು, ನಾನಾ ಕ್ಷೇತ್ರಗಳಲ್ಲಿ ಜನರ ಸಾಕ್ಷಿ ಪ್ರಜ್ಞೆಯಾಗಿ ಕೆಲಸ ಮಾಡಿದವರನ್ನು ಗುರುತಿಸಿ, ಮಣೆ ಹಾಕುತ್ತಲೇ ಬಂದಿದ್ದಾರೆ. ನಾವು ಹಲವು ವರ್ಷದಿಂದಲೂ ಅದನ್ನು ವಿರೋಧಿಸುತ್ತಲೇ ಬರುತ್ತಿದ್ದೇವೆ. ನಮ್ಮ ವಿರೋಧಕ್ಕೆ ನೀವು ನೀಡಿದಂತೆ, ಹಲವರು ಸಮಜಾಯಿಷಿ ನೀಡಿದ್ದಾರೆ.
  ಈ ಸಮಯದಲ್ಲಿ ಇಲ್ಲೊಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇವೆ. ಅದೇನೆಂದರೆ, ಅನೇಕರು, ನಮ್ಮ ಒಡನಾಡಿಗಳು ಆಳ್ವಾಸ್ ನುಡಿಸಿರಿಯನ್ನು ಒಂದು ವೇದಿಕೆಯಾಗಿ ಬಳಸಿಕೊಂಡು, ತಮ್ಮತಮ್ಮ ವಿಚಾರವನ್ನು ಪ್ರತಿಪಾಧಿಸುತ್ತೇವೆ ಎಂದಿರುವುದು. ಇದು ಒಂದು ಆಯಾಮದಲ್ಲಿ ಸತ್ಯ ಅನ್ನಿಸುತ್ತದೆ. ಆದ್ರೆ, ಈವರೆಗೆ ಆಳ್ವರ ನುಡಿಸಿರಿಯ ವೇದಿಕೆ ಬಳಸಿಕೊಂಡು ಮಾತನಾಡಿದ ಯಾರ ಮಾತು ದಕ್ಷಿಣ ಕನ್ನಡದಲ್ಲಿ ಪರಿಣಾಮ ಬೀರಿಲ್ಲ ಎಂಬುದನ್ನು ನಾವು ಗಮನಿಸಬೇಕು.
  ಕಳೆದ ಹತ್ತು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ, ಕೋಮು ಶಕ್ತಿಗಳಿಂದ ನಲುಗಿದೆ. ಇದಕ್ಕೆ ಆಳ್ವ ಪ್ರತ್ಯಕ್ಷವಾಗಿ ಬೆಂಬಲಕ್ಕೆ ನಿಂತಿದ್ದಾರೆ. ವಿಶ್ವ ಹಿಂದೂ ಪರಿಷತ್ ರಾಜ್ಯ ಗೌರವ ಅಧ್ಯಕ್ಷರು ಮೋಹನ್ ಆಳ್ವ. ಅವರು ಇಡೀ ರಾಜ್ಯದಲ್ಲಿ VHPಯ ಸಭೆಗಳನ್ನು ಆಯೋಜಿಸಿದ್ದಾರೆ. ಇಂತಹವರು ಸಾಂಸ್ಕೃತಿಕ ಮುಖವಾಡ ಧರಿಸಿ, ವೇದಿಕೆ ನಿರ್ಮಿಸಿ ಕೊಡುವ ಹಿನ್ನೆಲೆಯನ್ನು ಗಮನಿಸದಷ್ಟು, ಅರ್ಥ ಮಾಡಿಕೊಳ್ಳದಷ್ಟು ನಾವು ದಡ್ಡರಾಗುವ ಅಗತ್ಯವಿಲ್ಲ.
  ಈ ಸಮಯದಲ್ಲಿ ವ್ಯಕ್ತಿಕೇಂದ್ರಿತವಾಗಿ, ಶಿಕ್ಷಣ ವ್ಯಾಪಾರದಲ್ಲಿ ಮುಳುಗಿರುವ ವ್ಯಕ್ತಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸದೇ ದೂರ ಉಳಿಯುವುದೇ ಒಂದು ಪ್ರತಿರೋಧ ಎಂದುಕೊಂಡಿದ್ದೇವೆ. ‘ಕೋಮುವಾದವನ್ನು ಬೆಂಬಲಿಸುವ, ರಕ್ತಪಾತದಲ್ಲಿ ತೊಡಗಿರುವ ಶಕ್ತಿಗಳಿಗೆ ಬೆಂಬಲವಾಗಿ ನಿಂತ ವ್ಯಕ್ತಿ ನಿರ್ಮಿಸುವ ವೇದಿಕೆ ಹತ್ತುವುದಿಲ್ಲ’ ಎಂಬ ಒಂದು ನಿರ್ಧಾರ ಕಳಿಸುವ ಸಂದೇಶ ದೊಡ್ಡದು ಎಂದು ಭಾವಿಸುತ್ತೇವೆ. ಇದು ನೀವು ಆಳ್ವಾಸ್ ನುಡಿಸಿರಿಯ ವೇದಿಕೆಯಲ್ಲಿ ನೀವು ಮಾಡಬಹುದಾದ ಭಾಷಣಕ್ಕಿಂತ ದೊಡ್ಡ ಸಂದೇಶವನ್ನು ಈ ನಾಡಿನ ಜನರಿಗೆ ರವಾನಿಸಲಿದೆ. ಇದೊಂದು ಸಾಂಸ್ಕೃತಿಕ ಪ್ರತಿರೋಧದ ಭಾಗ ಕೂಡ.
  ಇದರ ಜತೆಗೆ, ಮಠಾದೀಶರ, ಕೋಮು ಶಕ್ತಿಗಳ, ಶಿಕ್ಷಣ ವ್ಯಾಪಾರಿಗಳ, ದೇವಮಾನವರ (ವೀರೇಂದ್ರ ಹೆಗ್ಗಡೆ) ಮತ್ತಿತರ ಜನವಿರೋಧಿ ಪಡೆಯ ಸಮ್ಮಿಳಿತವಾಗಿರುವ ‘ಆಳ್ವಾಸ್ ನುಡಿಸಿರಿ’ಯ ಒಲುಮೆಯನ್ನು ವಿರೋಧಿಸುವ ಸಾಂಸ್ಕೃತಿಕ ಪರ್ಯಾಯ ರಾಜಕಾರಣದ ಆಶಯಗಳ ಜತೆ ನೀವು ಇರುತ್ತೀರಿ ಎಂದು ಕೊನೆಯ ಕ್ಷಣದವರೆಗೂ ನಂಬಿರುವ”

  ಮೇಲಿನ ಪ್ರತಿಕಿಯೆ ನವೀನರು , ಕುಂ .ವಿ .ಯವರ ಸಮಜಾಯಿಸೆಗೆ ಕೊಟ್ಟ ಉತ್ತರ ,Face Book ನಿಂದ ಕಾಪಿ ಮಾಡಿದ್ದು . ಇದು ಇಲ್ಲಿ ಕಮೆಂಟ್ ಮಾಡಿದವರಿಗೂ ಸರಿಯಾದ ಪ್ರತಿಕಿಯೆ ಎಂದು ಭಾವಿಸುವೆ . ಇನ್ನು ಮುದ್ದು ತೀರ್ಥಹಳ್ಳಿಯವರ ಕುರಿತು ಸೀತಾ ಒಂದು ತರ ಕುಚೋದ್ಯ ಮಾಡಿದ್ದಾರೆ ,ಅದು ಅವರ ಅಹಂ ಅನ್ನು ತೋರಿಸುತ್ತದೆ !ಕಲಬುರ್ಗಿಯವರು ಹುತಾತ್ಮರು . ಇಲ್ಲಿ ಆಸ್ತಿ ,ವ್ಯಯುಕ್ತಿಕ ಎಂದೆಲ್ಲಾ ಹೇಳುವುದು ಸವಕಲು ನಾಣ್ಯ !
  ಮೋಹನ ಆಳ್ವರದ್ದು ಫ್ಯೂಡಲ್ ಮನೋಸ್ಥಿತಿ ,ಮುಸ್ಲಿಂ ರ ಬಗೆಗೆ ನನ್ನ ಹತ್ತಿರವೇ ಹೇಳಿದ್ದಾರೆ – ನೀವು ಮುಸ್ಲಿಮರು ಯಾವಗಲೂ ಲೋ ಪ್ರೊಫೈಲ್ ನಲ್ಲಿ ಇರಬೇಕು ,ಮತ್ತು ಹಿಂದೂ ಸಂಸ್ಕೃತಿಯನ್ನು ಹೆಚ್ಚು ತಮ್ಮದಾಗಿಸಿಕೊಳ್ಳಬೇಕು ಎಂದು .

  1. “ಕಲಬುರ್ಗಿಯವರು ಹುತಾತ್ಮರು . ಇಲ್ಲಿ ಆಸ್ತಿ ,ವ್ಯಯುಕ್ತಿಕ ಎಂದೆಲ್ಲಾ ಹೇಳುವುದು ಸವಕಲು ನಾಣ್ಯ !”

   ತಮ್ಮ ಪೂರ್ವಗ್ರಹಗಳಿಗೆ ಸಿದ್ಧಸೂತ್ರಗಳಿಗೆ ಬಗ್ಗದ ಒಪ್ಪದ ಕಮೆಂಟಿಗರ ಮೇಲೆ ಈ ಸಲಾಂ ಬಾವ ಎಂಬ ಪ್ರಭೃತಿ ಮೊದಲಿನಿಂದಲೂ ಮೂದಲಿಕೆ ಅವಹೇಳನೆ ನಿಂದನೆ ಮಾಡುತ್ತಾ ಬಂದಿದ್ದಾರೆ. ತಾನಿರುವುದೇ ಮಿಕ್ಕ ಕಮೆಂಟಿಗರಿಗೆ ಸರ್ಟಿಫಿಕೇಟ್ ಕೊಡಲು ಎಂಬ ಭ್ರಮೆಯಲ್ಲಿರುವ ಸಲಾಂ ಬಾವ ಅವರ ಅತಾರ್ಕಿಕ ವಾದಗಳಿಗೆ ವರ್ತಮಾನದ ದುರ್ಬಳಕೆ ಆಗುತ್ತಿದೆ. ಪ್ರೊ. ಕಲ್ಬುರ್ಗಿ ಅವರ ಕೊಲೆಯ ಬಗ್ಗೆ ಈ ಬಾವಯ್ಯನಿಗೆ ಮಾಹಿತಿ ಇದ್ದರೆ ಅದನ್ನು ತನಿಖೆ ಮಾಡುತ್ತಿರುವ ಮಾವಯ್ಯನಿಗೆ ಕೊಡುವುದು ಉತ್ತಮ.

   1. ಪ್ರೊ.ಕಲ್ಬುರ್ಗಿಯವರ ಹತ್ಯೆಯ ತನಿಖೆ ಅದರಷ್ಟಕ್ಕೆ ನಡೆಯುತ್ತಿರುವಾಗ ಮತ್ತೇಕೆ ಬಾವ ,ಮಾವ ಎಂದೆಲ್ಲಾ ಭಡಬಡಿಸುತ್ತೀರಿ . ಆದರೆ ಒಂದು ಮಾತ್ರಾ ಸತ್ಯ – ಈ ಹತ್ಯೆ ನಡೆಸಿದ್ದು ನಿಮ್ಮದೇ ಸಿದ್ದಾಂತದ ಹಿಂಬಾಲಕರು . ತಾವು ಸೀತಾಮಾತೆಯೋ ,ಸೀತಾ ರಮಣರೋ ಎಂದು ತಿಳಿಸಿದರೆ ವಾದ/ಪ್ರತಿವಾದಕ್ಕೆ ಉತ್ತಮ .

    1. “ಈ ಹತ್ಯೆ ನಡೆಸಿದ್ದು ನಿಮ್ಮದೇ ಸಿದ್ದಾಂತದ ಹಿಂಬಾಲಕರು”

     ಸಲಾಂ ಬಾವ ಅವರೇ, ನಿಮ್ಮ ಮಾತುಗಳು ನಿಮ್ಮ ಮನಸ್ಸಿನ ನಂಜನ್ನು ಜಾಹೀರು ಪಡಿಸಿವೆ. ಇನ್ನಾದರೂ ಸ್ವಲ್ಪ ಚಿತ್ತ ಶುದ್ಧಿ ಭಾವ ಶುದ್ಧಿ ಹಾಗೂ ವಾಕ್ ಶುದ್ಧಿ ನಡೆಸಿ ನಂತರ ವರ್ತಮಾನದ ಸಂವಾದಗಳಲ್ಲಿ ಭಾಗವಹಿಸಿ. ಕಲ್ಬುರ್ಗಿ ಅವರ ಹತ್ಯೆಯ ವಿಚಾರದಲ್ಲಿ ಅಲ್ಲಸಲ್ಲದ ಆಪಾದನೆಗಳನ್ನು ನನ್ನ ಮೇಲೆ ಮಾಡಿದರೆ ನಿಮ್ಮ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ , ಹುಷಾರ್!

     1. ಇದನ್ನೇ ಅಸಹಿಷುಣ್ತೆ ಎನ್ನುವುದು ,ನಿಮ್ಮ ವಾದಕ್ಕೆ ಭೋ ಪರಾಕು ಹಾಕಿದರೆ ಎಲ್ಲಾ ಶುದ್ದಿ ,ಇಲ್ಲವಾದರೆ ಧಮಕಿ . ಇದಕ್ಕೆ ನಾನು ಸೊಪ್ಪು ಆಕೋದಿಲ್ಲ ,ಧಮಕಿ ತಮ್ಮ ಹತ್ತಿರವೇ ಇಟ್ಟು ಕೊಳ್ಳಿ

     2. “ಇದನ್ನೇ ಅಸಹಿಷುಣ್ತೆ ಎನ್ನುವುದು”

      ಬಾವ ಭಾಯಿ, ಅಸಹಿಷ್ಣುತೆ ಅಂತೆ ಬದನೇಕಾಯಿ! ನೀವು ಕಾರುವ ನಂಜನ್ನು ಮಾತಿಲ್ಲದೆ ನುಂಗಿದರೆ ಮಾತ್ರ ಸಹಿಷ್ಣುತೆಯೇ? ನಾನೇನು ನಿಮ್ಮನ್ನು ಘಜನಿ ಘೋರಿಗಳ ಮಾನಸಪುತ್ರ ಎಂದು ಕರೆದೆನೆ ನನ್ನ ಬಗ್ಗೆ ಅಲ್ಲಸಲ್ಲದ ಆಪಾದನೆಗಳನ್ನು ಮಾಡಲು?!! ನಂಜನ್ನು ಕಾರುವುದನ್ನೇ ಚಟವಾಗಿಸಿಕೊಂಡಿರುವ ನಿಮ್ಮಂತವರಿಗೆ ಒಳ್ಳೆಯ ಮಾತುಗಳಿಂದ ತಿಳಿ ಹೇಳುವ ಯತ್ನ ಮಾಡಿದೆ. ಆದರೆ ನೀವು ಜಿಹಾದಿ ವರಸೆಯಲ್ಲಿ ಅಟಾಕ್ ಮಾಡುತ್ತಿದ್ದೀರಿ. ಏಕೆ ಇಷ್ಟೊಂದು ನಂಜು?

     3. ನಂಜು ನನಗಿಲ್ಲ,ಎಲ್ಲರ ಹತ್ತಿರ ಸಹೋದರ ಭಾವನೆ.ನಾನು ಸಹಾ ತಾರ್ಕಿಕ ವಾದಕ್ಕೆ ಆದ್ಯತೆ ಕೊಡುವುದು.ನಾನು ಭಾಯಿ ತಪ್ಪಿ ಸಹಾ ನಿಮ್ಮನ್ನು ಗೋಡ್ಸಯ ಸ೦ತಾನ ಅನ್ನಲಿಲ್ಲ!

     4. “ಎಲ್ಲರ ಹತ್ತಿರ ಸಹೋದರ ಭಾವನೆ” ಈತ ಕಾರುವ ನಂಜನ್ನೆಲ್ಲ ಚಾಚೂ ಅನ್ನದೆ ನುಂಗಿದರೆ. ಇಲ್ಲವಾದರೆ “ಗೋಡ್ಸಯ ಸ೦ತಾನ”. ಇಷ್ಟೇ ಸಾಕು ಅಲ್ಲವೇ ಈತನ ಮಾನವಾತಾವಾದದ ಹುರುಳನ್ನು ತೋರಿಸಲು! ;-P

     5. “ನಾನೇನು ನಿಮ್ಮನ್ನು ಘಜನಿ ಘೋರಿಗಳ ಮಾನಸಪುತ್ರ “- ಇದಕ್ಕೆ ಪ್ರತಿಕಯಿಸಿದೆ ಅಷ್ಟೇ ,ಆದರೆ ಏಕ ವಚನ ಉಪಯೋಗಿಸಿ ನಿಮ್ಮ ಸ್ಟ್ಯಾಂಡರ್ಡ್ ಏನೆಂದು ಪ್ರಕತಪಡಿಸಿದಿರಿ !

     6. ““ನಾನೇನು ನಿಮ್ಮನ್ನು ಘಜನಿ ಘೋರಿಗಳ ಮಾನಸಪುತ್ರ “- ಇದಕ್ಕೆ ಪ್ರತಿಕಯಿಸಿದೆ ಅಷ್ಟೇ”

      ಓ! ಅದು “ಈ ಹತ್ಯೆ ನಡೆಸಿದ್ದು ನಿಮ್ಮದೇ ಸಿದ್ದಾಂತದ ಹಿಂಬಾಲಕರು” ಎಂಬ ತಮ್ಮ ನುಡಿಮುತ್ತಿಗೆ ನನ್ನ ಪ್ರತಿಕ್ರಿಯೆ ಆಗಿತ್ತು ಬಾವ ಭಾಯಿ!

  2. “…ನೀವು ಆಳ್ವಾಸ್ ನುಡಿಸಿರಿಯ ವೇದಿಕೆಯಲ್ಲಿ ನೀವು ಮಾಡಬಹುದಾದ ಭಾಷಣಕ್ಕಿಂತ ದೊಡ್ಡ ಸಂದೇಶವನ್ನು ಈ ನಾಡಿನ ಜನರಿಗೆ ರವಾನಿಸಲಿದೆ….”

   ಹಂಗದ್ರ ನೀವು ಭಾರತದಾಗೆ ಇವತ್ತ ಮಾತು ಸೋತಿದೆ ಅನ್ನೋದನ್ನ ಪ್ರೂವ್ ಮಾಡ್ಬಿಟ್ರಿ. ಥೇಟ್ ಟೆರರಿಸ್ಟು ಲಾಠಿಯಿಸ್ಟು ಮಂದಿ ಥರ. ಈ “ಲಿಂಗಮೆಚ್ಚಿ ಅಹುದು ಅಹುದು” ಅನ್ನೋದು “ಜ್ಯೋತಿರ್ಲಿಂಗ” ಸ್ವರೂಪದ್ದು ಅಂತೆಲ್ಲ ಯಾವದನ್ನ ನಮ್ಮ ಆದ್ಯರು ತಿಳ್ಕಂಡಿದ್ರೋ ಅವೆಲ್ಲಾ ಇವತ್ತಿನ ಸಿಚ್ಯುವೇಷನ್ನ್ಯಾಗೆ ಪೂರ ಯೂಸ್ ಲೆಸ್ಸ್, ಸವಕಲಾದದ್ದು ಅಂತ ಫಿಕ್ಸ್ ಆಯ್ತು. ಸ್ವಸ್ತ್ ಆಯ್ತ್ ಅಲ್ಗೆ. ಅದ್ಕ ನೋಡಿ ಮೊನ್ನೆ ಕುಲಕರ್ಣಿ ಸಾಹೇಬ್ರಿಗ ಅದ್ಯಾರೋ ಘಾತುಕರು ಮಸಿ ಎರ್ಚಿದ್ದು. ಅವಕ್ಕೆ ಮಾತ್ ಆಡೋದ್ರಲ್ಲಿ, ಸಂವಾದ ನಡ್ಸೋದ್ರಲ್ಲಿ ನಂಬ್ಕೇನೂ ಇರ್ಲಿಲ್ಲ ಮನ್ಸೂ ಇರ್ಲಿಲ್ಲ.

   ಇನ್ನು, ಈ ಪರ್ಯಾಯ ಅನ್ನೋದು ಪೂರ್ತ ಐಸೊಲೇಶನ್ನಲ್ಲಿ ಬರುವಂತದ್ದಲ್ಲ, ಬುದ್ದೀ. ಬಾಬಾಸಾಹೇಬ್ರು ಸಂವಾದಿಸ್ತ ಸಂವಾದಿಸ್ತಲೇ ಹೊಸತ್ತರ ಕಡೆಗೆ ಬೆರಳ್ ಮಾಡಿ ತೋರ್ಸಿದ್ರು. ಅಂದ್ರ ಪರ್ಯಾಯ ಅನ್ನೋದು ಮಂಥನದಿಂದ ಬರೋದು ಅಂತ. ಅಲ್ಲಿ ಜಗ್ಗೋಕೆ ಇಬ್ರೂ ಬೇಕು, ಅಣ್ಣೋರ. ಇಲ್ದಿದ್ರೆ ನಿಮ್ ಡ್ರೀಮ್ ಪರ್ಯಾಯ ಅನ್ನೋದು ಥೇಟ್ ಉಡುಪಿ ಪರ್ಯಾಯ ಅದಂಗೆ ಅಗೋದೇ. ಪೂರ್ತಿ ಎಕ್ಸಕ್ಲೂಸಿವ್ ಆಗಿ, ಗೆರೆ ಹಾಕಿ, ಬೆತ್ತ ಹಿಡ್ಕಂಡು ನಿಂತು ಓಡಿಸ್ತಾ ಓಡಿಸ್ತಾ ಗುಂಪುಕಟ್ಟೋದು. ಹೊರಗಡೆ ನೋಡಿದ್ರ ಈಗದ ಹಾಟ್ ಫೇವರಿಟ್ ಆಮ್ ಆದ್ಮಿ ಆಟದಲ್ಲಿ ಔಟಾಗಿರೋ ಲೈನಲ್ಲಿ ನಿಂತ್ಕೊಂಡವ್ನೆ.

   1. ಬಾಬಾಸಾಹೇಬ್ರು ಸಂವಾದಿಸ್ತ ಸಂವಾದಿಸ್ತಲೇ ಹೊಸತ್ತರ ಕಡೆಗೆ ಬೆರಳ್ ಮಾಡಿ ತೋರ್ಸಿದ್ರು”- ಸ್ವಾಮೀ, ಬಾಬಾ ಸಾಹೇಬರನ್ನು ಮತ್ತು ಹಿಂದುತ್ವದ ವಕ್ತಾರರನ್ನು ಯಾಕೆ ಹೋಲಿಕೆ ಮಾಡುತ್ತೀರಿ ? ಪೇಜಾವರ ಸ್ವಾಮೀಜಿ ಯವರು ಸಾದಾರಣ ವಾಗಿ ಎಲ್ಲಾ ಪ್ರಮುಖ ಮುಸ್ಲಿಂ ಸಬೆ,ಸಮಾರಂಭ ಗಳಲ್ಲಿ ಭಾಗವಹಿಸುತ್ತಾರೆ .ಸಂವಾದ ನಡೆಸುತ್ತಾರೆ , ಮತ್ತೆ ಮರು ದಿನ ಮುಸ್ಲಿಂರ ಕುರಿತಾಗಿ ವಿಷಪೂರಿತ ಹೇಳಿಕೆ ಕೊಡುತ್ತಾರೆ . ಕರಾವಳಿಯ ಕೋಮು ವಿಛೆದ್ರಿಕರಣಕ್ಕೆ ಮೋಹನ ಆಳ್ವರ ಕೊಡುಗೆಯೂ ತುಂಬಾ ಇದೆ . ಇವರಾರೂ ಎಂದಿಗೂ ಬದಲಾಗಲಿಕ್ಕಿಲ್ಲ ,ಸಿದ್ದಲಿಂಗಯ್ಯರಂತವರನ್ನೇ ತಮ್ಮ ದಾರಿಗೆ ತಂದಾರು . ಕೆಲವೊಮ್ಮೆ ಲಿಪ್ ಸರ್ವಿಸ್ ತೋರಿಸಿಯಾರು ಅಷ್ಟೇ !
    ಬಿಹಾರದ ಚುನಾವಣಾ ಗೆಲುವಿನಲ್ಲಿ ಪ್ರಗತಿಪರ ಬುದ್ದಿ ಜೀವಿಗಳ ಪಾತ್ರ ಸಹಾ ಇದೆ. ಅವರು ದೇಶದಲ್ಲಿ ಹೆಚ್ಚುತ್ತಿರುವ ಅಸಹಿಸ್ನತೆ ಬಗ್ಗೆ ಅತೀ ಶಕ್ತವಾಗಿ ಪ್ರತಿಭಟಿಸಿದ್ದು ತುಂಬಾ ಪರಿಣಾಮ ಬೀರಿತು .
    ಆದುರರಿಂದ ಡಾ ಬಂಜಗೆರೆ ಜಯಪ್ರಕಾಶ್ ಮತ್ತು ಕುಂ ವೀರಭದ್ರಪ್ಪನವರೇ – ಕನ್ನಡ ನಾಡು ಕಂಡ ಧೀಮಂತ ವ್ಯಕ್ತಿತ್ವ ಕಡಿದಾಳು ಶ್ಯಾಮಣ್ಣ ಮತ್ತು ಡಾ ಸಿ ಎಸ್ ದ್ವಾರಕನಾಥ್ , ಆಳ್ವರ ವಿಹಿಂಪ, ಆರ್ ಎಸ್ ಎಸ್ ನಂಟಿನ ಕಾರಣ ನೀಡಿ ಆಹ್ವಾನವನ್ನು ನೇರವಾಗಿಯೇ ನಿರಾಕರಿಸಿದ ಹಾಗೆ ,ಆಳ್ವಾಸ್ ನುಡಿಸಿರಿಯ ಆಹ್ವಾನವನ್ನುತಾವುಗಳು ನಿರಾಕರಿಸಬೇಕೆನ್ದು ಎಲ್ಲಾ ಶಾಂತಿಪ್ರಿಯ ಭಾರತೀಯರ ಹಾಗೆ ನನ್ನದೂ ತಮ್ಮಲ್ಲಿ ಕಳಕಳಿಯ ವಿನಂತಿ .

 7. “ಜಾತಿರಹಿತ ಸಮಾಜದಿಂದ ಮಾತ್ರವೇ ಅಸಹಿಷ್ಣುತೆ ಕಡಿಮೆಯಾಗಲು ಸಾಧ್ಯ” ಎಂದು ಕುಂ.ವೀ. “ನುಡಿಸಿರಿ”ಯಲ್ಲಿ ಹೇಳಿದರೆಂದು ವಾರ್ತಾಭಾರತಿಯಲ್ಲಿ ವರದಿಯಾಗಿದೆ. “ಜಾತಿರಹಿತ” ಎನ್ನುವುದನ್ನು ಧರ್ಮರಹಿತ ಅಥವಾ ಮತರಹಿತ ಎಂದು ವಿಸ್ತರಿಸಲು ಅವರು ಸಿದ್ಧರಿದ್ದಾರೋ ಗೊತ್ತಿಲ್ಲ. ಅದಕ್ಕೆ ಅವರು ಸಿದ್ಧರಿದ್ದರೆ ಅವರ ದನಿಗೆ ನನ್ನದನ್ನೂ ಸೇರಿಸುತ್ತೇನೆ. ಮೇಲಿನ ಪತ್ರಕ್ಕೆ ಸಹಿ ಹಾಕಿದ ಎಷ್ಟು ಜನ ಕುಂ.ವೀ. ಅವರ “ಜಾತಿರಹಿತ ಸಮಾಜ”ದ ಕುರಿತ ಈ ಅಭಿಪ್ರಾಯವನ್ನು ಒಪ್ಪುತ್ತಾರೆಂದು ತಿಳಿಯುವ ಕುತೂಹಲ ನನಗಿದೆ.

  1. ಮಾನ್ಯರೇ, ಜಾತಿ ಮತಗಳಿಲ್ಲದ ಸಮಾಜದಲ್ಲೂ ಅಸಹಿಷ್ಣುತೆ ಇರುತ್ತದೆ. ಸಮಕಾಲೀನ ಸಮಾಜಗಳಿಂದ ಹಾಗೂ ಚರಿತ್ರೆಯಿಂದ ಇದಕ್ಕೆ ಅನೇಕ ನಿದರ್ಶನಗಳಿವೆ. ಪ್ರೊ. ಕಲ್ಬುರ್ಗಿ ಅವರ ಹತ್ಯೆ ಅಸಹಿಷ್ಣುತೆಯನ್ನು ಟಾಕಿಂಗ್ ಪಾಯಿಂಟ್ ಆಗಿಸಿದೆ. ವಿಪರ್ಯಾಸವೇನೆಂದರೆ ಪ್ರೊ. ಕಲ್ಬುರ್ಗಿ ಅವರೇ ಬಗ್ಗೆಯೇ ಅಸಹಿಷ್ಣುತೆಯ ಆಪಾದನೆಗಳಿವೆ! ಹೆಸರಾಂತ ಸಂಸ್ಕೃತಿ ಚಿಂತಕರೊಬ್ಬರು ಪ್ರೊ. ಕಲ್ಬುರ್ಗಿ ಅವರ ಬಗ್ಗೆ ಹೀಗೆ ಹೇಳಿದ್ದಾರೆ:
   “He was totally intolerant of ideas that differed from his: he led a delegation of similar people to meet the owner of a Kannada daily newspaper successfully demanding that a column gets shut down because it propagated an unorthodox interpretation of Veerashaiva thinkers in Karnataka. He led another delegation to meet the current congress chief minister in Karnataka asking and effectively shutting down a research centre because he did not like its scientific research results.” (ನೋಡಿ: _http://bit.ly/1YxQQYR). ನಮ್ಮ ರಾಜ್ಯದ ಅದೆಷ್ಟೋ ಬುದ್ಧಿಜೀವಿಗಳು ನಾಡಿನ ಜನಸಂಸ್ಕೃತಿಯ ಅನೇಕ ಅಂಶಗಳ ಬಗ್ಗೆ ಅಸಹಿಷ್ಣುತೆ ತೋರಿದ್ದಾರೆ (ಉದಾ: ಮೂರ್ತಿ ಪೂಜೆ ಬಗ್ಗೆ ಪ್ರೊ. ಕಲ್ಬುರ್ಗಿ ಹಾಗೂ ಡಾ. ಅನಂತಮೂರ್ತಿಯವರ ಧೋರಣೆಗಳು). ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಬಹುತೇಕ ಪೀಠಭದ್ರರು ಭಾರತೀಯ ಸಂಸ್ಕೃತಿ ಬಗ್ಗೆ ಅಸಹಿಷ್ಣುತೆ ತೋರಿಸುತ್ತಲೇ ಬಂದಿದ್ದಾರೆ. ಸ್ವತಃ ಕುಂವೀ ಅವರೇ ಸಾಹಿತಿಗಳ ಬಗ್ಗೆ “ನಿರುಪದ್ರವಿ ಲೇಖಕರು ದೇವದಾಸಿಯರಂತೆ” ಅಂತ ಹೇಳಿ ಅಸಹಿಷ್ಣುತೆ ವ್ಯಕ್ತಪಡಿಸಿದ್ದಾರಲ್ಲವೇ?

 8. ನುಡಿಸಿರಿಯಲ್ಲಿ ನಾಲ್ಕು ದಿನವೂ ಭಾಗವಹಿಸಿದ್ದೆ.
  ನೂರಾರು ಮುಸಲ್ಮಾನ ಬಂಧುಗಳು ಬಂದು ಇಡೀ ಕಾರ್ಯಕ್ರಮ ಕಂಡು ಉಂಡು ಕಾರ್ಯಕ್ರಮವನ್ನು ಹೊಗಳಿ ಹೋದುದನ್ನು ಕಣ್ಣಾರೆ ಕಂಡೆ. ಕುತೂಹಲಕ್ಕಾಗಿ ಕೆಲವರನ್ನು ಮಾತನಾಡಿಸಿದೆ. ಕೆಲವರು ಕಳೆದ ಹತ್ತು ವರ್ಷಗಳಿಂದ ತಪ್ಪದೆ ಬರುತ್ತಿದ್ದವರಂತೆ. ಎಲ್ಲರೂ ಮೋಹನ ಆಳ್ವರ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿದರು. ಕೆಲವರು ಅವರು ಮಾಡಿದ ಉಪಕಾರವನ್ನು ಸ್ಮರಿಸಿಕೊಂಡರು. ಮುಸ್ಲಿಂ ವಿದ್ಯಾರ್ಥಿಗಳು ಸ್ವಯಂಸೇವಕರಾಗಿಯೂ ಇದ್ದರು. ಮುಸ್ಲಿಂ ಕಲಾವಿದರು ವೇದಿಕೆಯಲ್ಲಿ ಹಾಗೂ ವೇದಿಕೆಯ ಕೆಳಗೆ ಉತ್ತಮ ಕಾರ್ಯಕ್ರಮಗಳನ್ನಿತ್ತರು. ಮುಸ್ಲಿಂ ಕಲಾವಿದರೂ ಸೇರಿದಂತೆ ಕೆಲವು ವಿಶೇಷಚೇತನ ಕಲಾವಿದರನ್ನು ಸಂಘಟಿಸಿ ಕಾರ್ಯಕ್ರಮವನ್ನಿತ್ತ ಮುಸ್ಲಿಂ ಕಲಾವಿದರೊಬ್ಬರಿಗೆ ನುಡಿಸಿರಿ ಪ್ರಶಸ್ತಿಯೂ ಪ್ರದಾನವಾಯಿತು. ಇದೇ ಕಲಾವಿದರ ಕಾರ್ಯಕ್ರಮವನ್ನು ಕಿಕ್ಕಿರಿದ ಸಭಾಂಗಣ ಮೆಚ್ಚಿ ಪ್ರೋತ್ಸಾಹಿಸಿತು. ಯಾವ ಪ್ರಗತಿಪರರು ಸುಟ್ಟುಹಾಕಬೇಕೆಂದು ಬೊಬ್ಬಿರಿದರೋ ಅದೇ ಗೀತೆಯ ಶ್ಲೋಕಗಳನ್ನು ಹಾಡುವ ಮೂಲಕ, ಗೀತ ರೂಪಕಗಳನ್ನು ಪ್ರದರ್ಶಿಸುವ ಮೂಲಕ ಆ ಕಲಾವಿದರು ಜನರ ಮನಗೆದ್ದರು. ತನ್ನ ಒಂದು ಕೈಯ್ಯಲ್ಲಿ ಖುರಾನ್ ಇನ್ನೊಂದು ಕೈಯ್ಯಲ್ಲಿ ಪುರಾಣ ಎಂದ ಆ ಕಲಾವಿದರು ಮೋಹನ ಆಳ್ವರನ್ನು ಮನದುಂಬಿ ಪ್ರಶಂಸಿಸಿದರು.

  ಕಾರ್ಯಕ್ರಮದ ಉದ್ಘಾಟನೆಯಲ್ಲಿ ಅಂಧ ಕಲಾವಿದ ಬಾಲಕನೊಬ್ಬ ಹಿಂದಿನ ನುಡಿಸಿರಿಯ ಸ್ಮರಣಸಂಚಿಕೆಯನ್ನು ಬಿಡುಗಡೆಮಾಡಿದರು.

  ದಲಿತ ಕವಿಯ ಕಾವ್ಯವೂ ಸೇರಿದಂತೆ ಹಲವು ಧ್ವನಿಗಳು ವೇದಿಕೆಯಲ್ಲೂ ಸಭೆಯಲ್ಲೂ ಮೊಳಗಿದವು.
  ಕುಂ ವೀ ಯವರು ಕಪ್ಪು ಬಟ್ಟೆ ಕಟ್ಟಿ ಅಸಹಿಷ್ಣುತೆ ಬಗ್ಗೆ ಪ್ರತಿಭಟಿಸಿ ಮಾತನಾಡಿದರು. ನುಡಿಸಿರಿ ನೀಡುವ ಸನ್ಮಾನ ತೆಗೆದುಕೊಳ್ಳಲಾರೆ ಎಂದರು. ಕುದುರೆಮುಖದಲ್ಲಿ ಆಳ್ವರು ರೆಸಾರ್ಟ್ ಮಾಡುವ ವದಂತಿ ಬಗ್ಗೆ ಮಾತನಾಡಿದರು. ಅವರು ಭಾಷಣ ಮುಗಿಸಿದ ಬಳಿಕ ಪ್ರತಿಕ್ರಿಯೆ ನೀಡಿದ ಆಳ್ವಾರವರು ಕುದುರೆಮುಖದಲ್ಲಿ ರೆಸಾರ್ಟ್ ಮಾಡುವ ಬಗ್ಗೆ ತಾನೆಂದೂ ಯೋಚಿಸಿಲ್ಲ. ಅಲ್ಲಿನ ಗಣಿಗಾರಿಕೆ ಬಗೆಗೂ ತಾನು ಸಹಮತಿ ಹೊಂದಿಲ್ಲ. ಅಲ್ಲಿ ಗಣಿಗಾರಿಕೆ ನಿಂತ ಬಳಿಕ ಅತಂತ್ರವಾದ ಒಂದು ಸುಂದರ ಹಳ್ಳಿ, ಪಾಳುಬಿದ್ದ ಕಟ್ಟಡಗಳು, ಕೆಲವಾರು ಮನೆಗಳು, ಉದ್ಯೋಗ ಕಳಕೊಂಡ ನಿವಾಸಿಗಳು ಇವರಿಗಾಗಿ ಏನಾದರೂ ಮಾಡುವಂತೆ ಕುದುರೆಮುಖದವರು ಹಲವುಬಾರಿ ವಿನಂತಿಸಿದರೂ ನಿರಾಕರಿಸಿದ್ದೆ. ಕೊನೆಗೊಮ್ಮೆ ಅಲ್ಲಿಗೆ ಹೋಗಿ ನೋಡಿದಾಗ ಅಲ್ಲಿನವರ ಪರಿಸ್ಥಿತಿ ಅರಿವಾಗಿ ಅಲ್ಲಿನ ಅಭಿವೃದ್ಧಿಗಾಗಿ ಒಂದೆರಡು ಕಟ್ಟಡಗಳಿಗೆ ಸುಣ್ಣ ಬಣ್ಣ ಹೊಡೆಸಿ ಅಲ್ಲಿಗೆ ಬರುವವರು ತಾತ್ಕಾಲಿಕವಾಗಿ ತಂಗಲು ವ್ಯವಸ್ಥೆ ಮಾಡಿದೆ ಅಷ್ಟೆ. ಅಲ್ಲಿ ಹೊಸ ನಿರ್ಮಾಣವೇನನ್ನೂ ಮಾಡಿಲ್ಲ, ಪರಿಸರದ ಆಕ್ರಮಣ, ಮೋಜು ಗೀಜುಗಳಿಗೆ ಆಸ್ಪದ ಕಲ್ಪಿಸಿಲ್ಲ. ದಯಮಾಡಿ ಕುಂವೀ ಹಾಗೂ ನಾಗೇಶಹೆಗಡೆಯವರೇ ಅಲ್ಲಿಗೆ ಹೋಗಿ ಪರಿಶೀಲಿಸಬಹುದು ಎಂದರು.

  ಸಂವಾದದಲ್ಲಿ ಆಳ್ವರು ತಮ್ಮ ಬಗೆಗಿನ ಇನ್ನಷ್ಟು ಅಪಪ್ರಚಾರಗಳಿಗೆ ಉತ್ತರವಿತ್ತರು. ಓರ್ವ ಆಸ್ತಿಕನಾಗಿ ಹಿಂದೂಧರ್ಮದಲ್ಲಿ ವಿಶ್ವಾಸಿಯಾಗಿ ವಿಶ್ವಹಿಂದೂ ಪರಿಷತ್ತು ಎಂಬ ಧಾರ್ಮಿಕಸಂಸ್ಥೆಯ ಗೌರವಾಧ್ಯಕ್ಷನೋ ಉಪಾಧ್ಯಕ್ಷನೋ ಆಗಿರುವುದು ತಪ್ಪೆ? ಮುಸ್ಲಿಂ ಹಾಗೂ ಕ್ರೈಸ್ತ ಧಾರ್ಮಿಕ ಸಂಸ್ಥೆಗಳೊಂದಿಗೆ ಸಂಬಂಧವಿರಿಸಿಕೊಂಡ ಗಣ್ಯರು ಬೇರೆ ವಿವಿಧ ಕ್ಷೇತ್ರಗಳಲ್ಲಿ ಕೆಲಸಮಾಡುತ್ತಿಲ್ಲವೆ? ಅಪರಾದವೋ ಕೋಮುಗಲಭೆಯೋ ಜರಗಿದರೆ ಅದರಲ್ಲಿ ಭಾಗಿಗಳಾರು, ಅದಕ್ಕೆ ಕಾರಣರಾರು ಎಂಬುದನ್ನು ವಿಚಾರಣೆಗೊಳಪಡಿಸಿ ಸತ್ಯ ಸಾಬೀತಾಗುವವರೆಗೂ ‘ಅವರು ಹಾಗೆ ಮಾಡಿದರು, ಹೀಗೆ ಮಾಡಿದರು’ ಎಂಬುದು ಕೇವಲ ಆಪಾದನೆಯಾಗುತ್ತದೆಯೇ ಹೊರತು ಅದಕ್ಕೆ ಅಧಿಕೃತತೆಯ ಬೆಂಬಲವಿಲ್ಲ. ವಿವಿಧ ಪಂಥಗಳಿಗೆ ಸೇರಿದವರು ರಾಜಕೀಯಕಾರಣಗಳಿಗಾಗಿ ತಮ್ಮ ಪಂಥದಿಂದ ದೂರದಲ್ಲಿರುವವರ ಮೇಲೆ ಸಂಶಯವನ್ನು ಬಿತ್ತಿದರೆ ಯಾರ ಮೇಲಾದರೂ ಗೂಬೆ ಕೂರಿಸಿದರೆ ಅದನ್ನು ಸತ್ಯವೆಂದು ಭಾವಿಸಬೇಕಾಗಿಲ್ಲ, ಅದರ ಆಧಾರದಲ್ಲಿ ತಪ್ಪಿತಸ್ಥರನ್ನು ತೀರ್ಮಾನಿಸುವುದೂ ಸಾಧ್ಯವಿಲ್ಲ.

  ಕನ್ನಡಮಾಧ್ಯಮಶಾಲೆಗಳನ್ನು ಈಗಿನ ಕಾಲಕ್ಕೆ ತಕ್ಕಂತೆ ಅಪ್ ಡೇಟ್ ಮಾಡಬೇಕು. ಮಾತಿನಲ್ಲಿ ಸಮಾನಶಿಕ್ಷಣನೀತಿ ಎನ್ನುತ್ತ ಒಳ್ಳೆಯ ಖಾಸಗಿಶಾಲೆಗಳನ್ನು ತಳಕ್ಕೆ ತಳ್ಳುವ ಬದಲು ಸರಕಾರಿ ಕನ್ನಡಶಾಲೆಗಳನ್ನು ಹೇಗೆ ಉತ್ತಮಗೊಳಿಸುವುದು, ಕನ್ನಡಶಾಲೆಯ ಮಕ್ಕಳನ್ನು ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಾಗೂ ಅವರ ಸಂಪೂರ್ಣ ವ್ಯಕ್ತಿತ್ವದಲ್ಲಿ ಅತ್ತುತ್ತಮರನ್ನಾಗಿ ಮಾಡುವುದರ ಬಗ್ಗೆ ಯೋಚಿಸಬೇಕಿದೆ. ತಾನು ಹಲವಾರು ಶಿಕ್ಷಕರೊಂದಿಗೆ, ಶಿಕ್ಷಣತಜ್ಞರೊಂದಿಗೆ ಸಮಾಲೋಚಿಸಿ ಅಭಿವೃದ್ಧಿಪಡಿಸಿದ ಅಧ್ಯಯನ ಸಾಮಾಗ್ರಿಗಳಿಂದ ತಾನು ಸ್ಥಾಪಿಸಿದ ಕನ್ನಡಮಾಧ್ಯಮಶಾಲೆಯಲ್ಲಿ ಅತ್ಯುತ್ತಮ ಫಲಿತಾಂಶ ಬಂದಿದೆ. ಇದರ ಲಾಭ ರಾಜ್ಯದ ಎಲ್ಲ ಕನ್ನಡಶಾಲೆಗಳ ಮಕ್ಕಳಿಗೂ ದೊರೆಯಬೇಕು. ಎಲ್ಲೆಡೆ ಉತ್ತಮ ಕನ್ನಡಮಾಧ್ಯಮಶಾಲೆಗಳ ನಿರ್ಮಾಣವಾಗಬೇಕು. ಇದಕ್ಕೆ ಸರಕಾರ ಹಾಗೂ ಶಿಕ್ಷಣೋದ್ಯಮಿಗಳು, ಕರ್ನಾಟಕದ ಮಣ್ಣಿನಿಂದ ಪ್ರಯೋಜನ ಪಡೆದ ದೊಡ್ಡ ಸಂಸ್ಥೆಗಳು, ಬ್ಯಾಂಕುಗಳು ಮುಂದೆ ಬರಬೇಕು, ಸರಕಾರ ತಮ್ಮಂಥವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕನ್ನಡಶಾಲೆಗಳನ್ನು ಅಭಿವೃದ್ಧಿಪಡಿಸುವುದ ಬಗ್ಗೆ ಚರ್ಚೆ ನಡೆಸಬೇಕು. ಸರಕಾರದ ನೆರವು ನೇರವಾಗಿ ವಿದ್ಯಾರ್ಥಿಗಳಿಗೆ ನೀಡಿದರೂ ಒಳ್ಳೆಯದೇ. ಸರಕಾರ ಇಂದು ಕೋಟ್ಯಂತರ ರೂಪಾಯಿ ಖರ್ಚುಮಾಡುತ್ತಿದ್ದರೂ ಕನ್ನಡಶಾಲೆಗಳು ಅಭಿವೃದ್ಧಿಯಾಗದಿರಲು ಸರಕಾರೀ ವ್ಯವಸ್ಥೆಯಲ್ಲಿನ ಲೋಪದೋಷಗಳೇ ಕಾರಣ. ಎಂದು ಆಳ್ವರು ತಮ್ಮ ಅನುಭವವನ್ನು ವಿವರಿಸಿದರು. ಆಳ್ವಾ ಶಿಕ್ಷಣ ಸಂಸ್ಥೆಗಳ ಗುಣಮಟ್ಟ, ಅವು ಹೇಗೆ ಕೇವಲ ದುಡ್ಡುಹೊಡೆದು ಅಂಕಗಳಿಸುವ ಯಂತ್ರಗಳನ್ನು ತಯಾರಿಸದೆ ಸರ್ವತೋಮುಖ ವ್ಯಕ್ತಿತ್ವಗಳನ್ನು ರೂಪಿಸುತ್ತವೆ ಎಂಬುದು ಅಲ್ಲಿ ನೆರೆದಿದ್ದ ಪೋಷಕರ ಅಭಿಪ್ರಾಯದಿಂದಲೂ ಅಲ್ಲಿನ ವ್ಯವಸ್ಥೆಯ ವೀಕ್ಷಣೆಯಿಂದಲೂ ಮನವರಿಕೆಯಾಯಿತು.

  ಆಳ್ವರ ಸಂಸ್ಥೆಯಲ್ಲೇ ಹಿಂದೆ ದುಡಿಯುತ್ತಿದ್ದ ಶಿಕ್ಷಕರೊಬ್ಬರು ತಮ್ಮ ಅಂತಧರ್ಮೀಯ ವಿವಾಹವನ್ನು ಆಳ್ವಾರೇ ನಿಂತು ಮಾಡಿಸಿದ್ದನ್ನು ಸ್ಮರಿಸಿಕೊಂಡರು. ಆಳ್ವಾರು ಹಿಂದುಳಿದವರೂ ಸೇರಿದಂತೆ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿದ್ದು, ರಾಜ್ಯದ ಮೊದಲ ಕೊರಗ ಜನಾಂಗದ ವೈದ್ಯಕೀಯ ವಿದ್ಯಾರ್ಥಿನಿ ಆಳ್ವಾ ಸಂಸ್ಥೆಯಲ್ಲಿ ಕಲಿತವರೆಂಬುದು ಮೊದಲಾದ ವಿಶೇಷ ವಿಚಾರಗಳು ತಿಳಿದುಬಂದವು.

  ತಾನು ದೊಡ್ಡ ಸಾಲಗಾರ. ಸಾಲಗಾರನಾಗಿರುವುದು ಇಷ್ಟ. ಸಾಲಗಾರ ಹೆಚ್ಚು ಚುರುಕಾಗಿ ದಿನದ ಬಹುಭಾಗ ದುಡಿಮೆಯಲ್ಲಿ ಕಳೆಯುತ್ತಾನೆ ಎಂದು ಆಳ್ವರು ಮನವರಿಕೆಮಾಡಿದರು.

  ಆಳ್ವರ ಕುರಿತು ನನಗೆ ಮನವರಿಕೆಯಾದ ವಿಚಾರ ಹೀಗಿದೆ:
  1. ಆಳ್ವರು ಕೋಮುವಾದಿಯಲ್ಲ. ಹಿಂಸಾಪ್ರವೃತ್ತಿಯವರಲ್ಲ. ಅವರು ಬಲಪಂಥೀಯರು, ಧರ್ಮನಿಷ್ಠರು ಎಂಬುದು ನಿಜ. ಆದರೆ ಅವರು ಯಾವುದೇ ಧರ್ಮಕ್ಕೆ ಕೇಡಾಗುವಂತೆ ವರ್ತಿಸಿಲ್ಲ. ಎಲ್ಲ ಮತಗಳಲ್ಲೂ ಅವರ ಮಿತ್ರರಿದ್ದಾರೆ. ಅವರ ಮೇಲೆ ಗೌರವ ಹೊಂದಿದವರು ಇದ್ದಾರೆ. ಅವರಿಗೂ ವಿವಿಧ ಧರ್ಮೀಯರ ಬಗ್ಗೆ ಪ್ರೀತಿ ಗೌರವವಿದೆ.
  2,. ಬಲಪಂಥೀಯರಾದರೂ ಎಲ್ಲ ಚಿಂತನೆಗಳಿಗೂ ವೇದಿಕೆಯೊದಗಿಸಿದ್ದಾರೆ. ಎಡಪಂಥೀಯ ಚಿಂತನೆಗಳನ್ನು ಯಾರೂ ಅಲ್ಲಿ ಅಡ್ಡಿಪಡಿಸಿಲ್ಲ. ಮಾತನಾಡದಂತೆ ತಡೆದಿಲ್ಲ. ಯಾರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಬೆದರಿಕೆಯೊಡ್ಡಿಲ್ಲ. ವೇದಿಕೆಯಲ್ಲೇ ಆಳ್ವಾರ ವಿರುದ್ಧ ಮಾತುಗಳಿಗೂ ಅಲ್ಲಿ ತಡೆಬೇಲಿ ಹಾಕಿರಲಿಲ್ಲ.
  3. ಆಳ್ವಾರು ಬಂಡವಾಳಶಾಹಿ. ಆದರೆ ಒಳ್ಳೆಯ ಬಂಡವಾಳಶಾಹಿ, ಬಲಪಂಥ, ಬಂಡವವಾಳಶಾಹಿ ಎಂದರೆ ಯಾವತ್ತೂ ಕೆಟ್ಟದ್ದೇ ಆಗಿರಬೇಕಿಲ್ಲ.
  4. ಉತ್ತಮ ಶಿಕ್ಷಣ ನೀಡುತ್ತಿರುವುದರಿಂದಲೇ ಆಳ್ವರ ಸಂಸ್ಥೆಗಳಲ್ಲಿ ಹೆಚ್ಚು ಕಡಿಮೆ ಮೂವತ್ತು ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅವರು ಸಾಕಷ್ಟು ಮಂದಿಗೆ ಉಚಿತ ಶಿಕ್ಷಣವನ್ನೂ ಪ್ರೋತ್ಸಾಹವನ್ನೂ ನೀಡುತ್ತಿದ್ದಾರೆ.
  5. ಕಲೆ, ಸಾಹಿತ್ಯ, ಕ್ರೀಡೆ, ವಿವಿಧ ವಿಚಾರಗಳ ಮುಕ್ತ ಚಿಂತನೆಗೆ ಆಳ್ವಾರು ಪ್ರೋತ್ಸಾಹ ನೀಡುತ್ತಿದ್ದಾರೆ.ಅವರ ಸಂಘಟನಾ ಸಾಮರ್ಥ್ಯ, ಬಹುಮುಖಿ ಆಸಕ್ತಿ, ಕ್ರಿಯಾಶೀಲತೆ, ನಾಯಕತ್ವಗುಣ, ಯೋಜನಾಶೀಲತೆ ಬಗ್ಗೆ ಎರಡುಮಾತಿಲ್ಲ.
  6. ಆಳ್ವಾ ಸಂಸ್ಥೆಯಲ್ಲಿ ದುಡಿಯುತ್ತಿರುವವರು, ಊರವರು ಯಾರಲ್ಲಿ ವಿಚಾರಿಸಿದರೂ ಆಳ್ವರ ಬಗ್ಗೆ ಒಳ್ಳೆಯ ಅಭಿಪ್ರಾಯಗಳೇ ಹೊರತು ಕೆಟ್ಟ ಅಭಿಪ್ರಾಯ ಮೂಡಿಬಂದಿಲ್ಲ.
  7. ಆಳ್ವಾರನ್ನು ವಿರೋಧಿಸುವವರು ಒಂದೋ ವೈಯಕ್ತಿಕ ದ್ವೇಷಕ್ಕಾಗಿ ಹಾಗೆ ಮಾಡುತ್ತಿದ್ದಾರೆ ಅಥವಾ ತಮ್ಮ ಎಡಪಂಥ ಚಿಂತನೆಗಿಂತ ಭಿನ್ನವಾಗಿರುವ ಇನ್ನೊಂದು ಚಿಂತನೆ ಹಲವಾರು ಜನರನ್ನು ಪ್ರಭಾವಿಸುತ್ತಿರುವುದನ್ನು ಕಂಡು ಅಸಹನೆ ಹೊಂದಿದ್ದಾರೆ. ಈ ಅಸಹನೆಯಿಂದಲೇ ‘ನುಡಿಸಿರಿಗೆ ಹೋಗಬೇಡಿ, ಮಾತನಾಡಬೇಡಿ’ ಎಂಬ ಪ್ರಜಾಪ್ರಭುತ್ವ ವಿರೋಧಿ ಪ್ರವೃತ್ತಿ ತಾಳುತ್ತಿದ್ದಾರೆ.
  ಒಟ್ಟಿನಲ್ಲಿ ತಮ್ಮ ಚಿಂತನೆಗೆ ವಿರುದ್ಧವಾದ ಚಿಂತನೆಗಳಿಗೂ ವೇದಿಕೆಯೊದಗಿಸಿ ಮುಖಾಮುಖಿಯಾಗಬಯಸುವ, ಮುಕ್ತ ಸಂವಾದಕ್ಕೆ ಚಿಂತನಮಂಥನಕ್ಕೆ ಅವಕಾಶ ನೀಡುವ ಆಳ್ವರು ಹಾಗೂ ತಮ್ಮ ಚಿಂತನೆಗೆ ವಿರುದ್ಧವಾದುದನ್ನು ಆಲಿಸಲೂ ಅಸಹಿಷ್ಠುವಾಗಿರುವವರನ್ನು ಹೋಲಿಸುವಾಗ ಆಳ್ವರನ್ನು ವಿರೋಧಿಸಲೆಂದೇ ಹೊರಟವರು ದಿನದಿನಕ್ಕೆ ಬೆತ್ತಲಾಗುತ್ತಿರುವುದು ಕಾಣಿಸುತ್ತಿದೆ.

Leave a Reply

Your email address will not be published.