ಜನನಾಯಕರೇ, ಸೆನ್ಸಾರ್ ಮಾಡಿ ಮಾತನಾಡಿ


– ಡಾ.ಎಸ್.ಬಿ. ಜೋಗುರ


ನುಡಿದರೆ ಮುತ್ತಿನ ಹಾರದಂತಿರಬೇಕು.. ಎನ್ನುವ ಶರಣರ ವಾಣಿ ಆ ಮಾತು ಹೌದು..ಹೌದು ಎಂದು ಲಿಂಗ ಮೆಚ್ಚುವಂತಿರಬೇಕು ಎನ್ನುತ್ತದೆ. ಕೊನೆಗೂ ಇಲ್ಲಿ ಲಿಂಗ ಎನ್ನುವುದು ನಮ್ಮ ಮನ:ಸಾಕ್ಷಿ ಎಂದರ್ಥ. ಮಾತು ಮನುಷ್ಯನ ಮನಸಿನ ಕನ್ನಡಿ, ವ್ಯಕ್ತಿತ್ವದ ಭಾಗ.ಹೀಗಿರುವಾಗ ಮನಸೊಪ್ಪದ ಮಾತನಾಡಿ ಪರಿತಪಿಸುವ ಅಗತ್ಯವಾದರೂ ಏನಿದೆ..? ಮಾತನಾಡುವವರಲ್ಲಿ ಮೂರು ಪ್ರಬೇಧಗಳಿವೆ ಒಂದನೆಯದು ಬರೀ ಮಾತನಾಡುತ್ತಾ ಹೋಗುವದು ಅದರ ಅಡ್ಡ ಪರಿಣಾಮ, ಉದ್ದ ಪರಿಣಾಮಗಳ ಬಗ್ಗೆ ಇವರು ಕಿಂಚಿತ್ತೂ ತಲೆ ಕೆಡಿಸಿಕೊಳ್ಳದವರು. ಎರಡನೆಯವರು ಮೊದಲು ಮಾತನಾಡಿ ಆಮೇಲೆ ಅಯ್ಯೋ ಹಾಗೆ ಮಾತನಾಡಬಾರದಿತ್ತು ಎಂದು ಕರಬುವವರು. ಮೂರನೇಯವರು ಮಾತನಾಡುವ ಮುನ್ನ ಒಂದೆರಡು ಬಾರಿ ಯೋಚಿಸಿ ಈ ಮಾತಿನ ಪರಿಣಾಮ ಏನಾಗಬಹುದು ಎಂದು ಲೆಕ್ಕಿಸಿ ಮಾತನಾಡುವವರು. ಈ ಮೂರೂ ಪ್ರಬೇಧಗಳಲ್ಲಿ ಮೂರನೇಯದು ಅತ್ಯುತ್ತಮವಾದುದು. ಅಲ್ಲಿ ತಕ್ಕ ಮಟ್ಟ್ತಿಗೆ ನೀವಾಡುವ ಮಾತು ನಿಮ್ಮಿಂದಲೇ ಸೆನ್ಸಾರ್ ಆಗಿ ಹೊರಬರುತ್ತದೆ.

ನಮ್ಮನ್ನಾಳುವ ಜನನಾಯಕರು ಗ್ರಾಮ ಪಂಚಾಯತದ ವ್ಯಾಪ್ತಿಯಿಂದ ಹಿಡಿದು ರಾಷ್ಟ್ರಪತಿಗಳ ವರೆಗೆ ಮಾತನಾಡುವಾಗ ಹತ್ತಾರು ಬಾರಿ ಯೋಚಿಸಿ ಮಾತನಾಡಬೇಕು. ಯಾಕೆಂದರೆ ಅವರೆಲ್ಲಾ ಜನರ ಪ್ರತಿನಿಧಿಗಳು ಅವರಾಡುವ ಮಾತುಗಳು ಪಾಲಿಶ್ ಆಗಿಯೇ ಹೊರಬರಬೇಕು. ಮನಸಿಗೆ ಬಂದಂತೆ ಮಾತನಾಡುವದಲ್ಲ. ಇತ್ತೀಚಿನ ದಿನಗಳಲ್ಲಿ ನಮ್ಮ ಜನನಾಯಕರು ಮಾತನಾಡುವಾಗ ಕಿವಿ ಮುಚ್ಚಿಕೊಳ್ಳುವುದೇ ಒಳಿತು ಎನ್ನುವ ಭಾವನೆ ಬರತೊದಗಿದೆ. ಅದಕ್ಕಿಂತಲೂ ದೊಡ್ದ ವಿಷಾದವೆಂದರೆ ಅವರು ಮಾಧ್ಯಮ ಎದುರಲ್ಲಿ ಮಾತನಾಡುವಾಗಲೂ ನಾಲಿಗೆಗೆ ಲಗಾಮಿರುವದಿಲ್ಲ ಎನ್ನುವುದು. ನಮ್ಮ ಖಾಸಗಿ ಮತ್ತು ಸಾರ್ವಜನಿಕ ವಲಯಗಳ ಅಂತರವೂ ನಮ್ಮ ಜನನಾಯಕರಿಗೆ ತಿಳಿಯದಾಯಿತೆ..? ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎನ್ನುವ ಮಾತಿದೆ. ಮಾತಾಡುವ ಮುನ್ನ ಹತ್ತಾರು ಬಾರಿ ಸಾರಾಸಾರ ಯೋಚಿಸಿ ಬಾಯಿ ತೆಗೆಯಬೇಕು. ಪಶ್ಚಿಮದ ರಾಷ್ಟ್ರಗಳಲ್ಲಿ ಒಬ್ಬ ಜನನಾಯಕ ಮಾಧ್ಯಮದೆದುರು ಹೋಗಬೇಕಾದರೆ ಒಂದು ಶಿಸ್ತುಬದ್ಧವಾದ ತಾಲೀಮನ್ನು ಮಾಡಿ ಆಮೇಲೆ ಬಯಲಾಗುತ್ತಾನೆ. ನಮ್ಮಲ್ಲಿ ಹಾಗಿಲ್ಲ. ಮನಸಿಗೆ ಬಂದಂತೆ ಮಾತನಾಡಿ ತನ್ನ ಕುಬ್ಜತನವನ್ನು ಪ್ರದರ್ಶನ ಮಾಡುವ ಜೊತೆಗೆ ಅವನನ್ನು ಆಯ್ಕೆ ಮಾಡಿದವರು ಪಶ್ಚಾತ್ತಾಪ ಪಡುವಂತೆ ಮಾಡುವ ಮೂಲಕ ಬಯಲಾಗುತ್ತಾನೆ.ಹಣ, ಅಧಿಕಾರ, ಜಾತಿ, ಇಂಥವುಗಳ ಮದದಿಂದಲೂ ನಮ್ಮ ಜನನಾಯಕರ ಮಾತುಗಳು ವಕ್ರವಾಗುವದಿದೆ. ಹಿಂದೆ ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಅವರು ಮಾತನಾಡುವ ರೀತಿ ಯಾರನ್ನೂ ನೋಯಿಸುತ್ತಿರಲಿಲ್ಲ ಬದಲಾಗಿ ನಗಿಸುವಂತಿರುತ್ತಿತ್ತು. ಹಾಗಂತ ಹೇಳುವದನ್ನು ಹೇಳದೇ ಅವರು ಬಿಡುತ್ತಿರಲಿಲ್ಲ. ನನಗಿನ್ನೂ ನೆನಪಿದೆ ಬೆಂಗಳೂರಿನಲ್ಲಿ ಸೌಂದರ್ಯ ಸ್ಪರ್ಧೆಯನ್ನು ನಡೆಯಿಸುವ ಸಂದರ್ಭದಲ್ಲಿ ವಿರೋಧ ಪಕ್ಷಗಳಿಗೆ ’ನಾನಂತೂ ಅದಕ್ಕೆ ಅವಕಾಶ ಕೊಡುವೆ ನೋಡುವವರು ನೋಡಲಿ ನೋಡದಿರುವವರು ಕಣ್ಣು ಮುಚ್ಚಿ ಕೊಳ್ಳಲಿ’ ಎಂದಿದ್ದರು. ಸದನದಲ್ಲಿಯೂ ಇಂಥಾ ಅನೇಕ ಮಾತುಗಳನ್ನು ತೇಲಿ ಬಿಟ್ಟು ಇಡೀ ಸದನವನ್ನೇ ನಗೆಗಡಲಲ್ಲಿ ತೇಲಿ ಬಿಡುತ್ತಿದ್ದರು. ಈಗ ಪರಿಸ್ಥಿತಿ ಎಷ್ಟು ಅತಿರೇಕಕ್ಕೆ ಹೋಗಿದೆ ಎಂದರೆ ಸದನದಲ್ಲಿ ಏನು ನಡೆಯಬಾರದೋ ಅವೆಲ್ಲವನ್ನೂ ನಮ್ಮ ಜನನಾಯಕರು ನಡೆಸಿ ಆಯಿತು. ಅವುಗಳಿಗಿಂತಲೂ ಅಗ್ಗವಾದದ್ದು ಏನೂ ಉಳಿದಿಲ್ಲ.

ನಮ್ಮ ಜನನಾಯಕರ ಮಾತು ಕೇಳಿದರೆ ಅವು ತೀರಾ ಖಾಸಗಿ ಸಂದರ್ಭದಲ್ಲಿ ಆಡಬೇಕಾದಂತವುಗಳು. ಹಾಗಿರುವಾಗಲೂ ಅವರು ಹಿಂಡು ಹಿಂಡಾಗಿರುವ ಮಾಧ್ಯಮದವರ ಎದುರು ಅತ್ಯಂತ ಅಸಹ್ಯವಾಗಿ ಮಾತನಾಡುವದನ್ನು ನೋಡಿದರೆ ಒಬ್ಬ ತೀರಾ ಜನಸಾಮಾನ್ಯನೂ ಅವರಿಗಿಂತಲೂ ತಾನು ನೂರು ಪಾಲು ಮೇಲು ಎನ್ನುವ ಸಮಾಧಾನ ಪಡುವಂತಿದೆ. ಕೈ ಕತ್ತರಿಸುವೆ, ರುಂಡ ಚಂಡಾಡುವೆ, ಒಂದು ಕೂದಲೂ ಅಲ್ಲಾಡಿಸಲಾಗಲ್ಲ, ತಾಕತ್ತಿದ್ದರೆ ಬಾ, ಇಂಥಾ ಮಾತುಗಳು ನಮ್ಮ ಜನನಾಯಕರ ಬಾಯಿಂದ ಬರಬಹುದೆ..? ಇಲ್ಲಿ ಯಾವುದೋ ಒಂದು ಪಕ್ಶವನ್ನು ಕುರಿತು ನಾನು ಹೇಳುತ್ತಿಲ್ಲ. ಎಲ್ಲ ಪಕ್ಷಗಳಲ್ಲೂ ಹೀಗೆ ಅಸಹ್ಯವಾಗಿ ಮಾತನಾಡುವವರು ಇದ್ದೇ ಇದ್ದಾರೆ. ಅವರು ತಮ್ಮ ನಾಲಿಗೆಯನ್ನು ಪಾಲಿಶ್ ಮಾಡದೇ ಸಾರ್ವಜನಿಕ ವಲಯದಲ್ಲಿ ಹರಿ ಬಿಡಬಾರದು.yeddy-eshwarappa ನಿಮ್ಮ ಮುಂದಿರುವ ಪೀಳಿಗೆಗೆ ಮಹತ್ತರವಾದುದದನ್ನು ನೀವು ಕೊಡುಗೆಯಾಗಿ ನೀಡಬೇಕೇ ಹೊರತು ಇಂಥದ್ದನ್ನಲ್ಲ. ಇಂಥವರನ್ನು ಗಮನದಲ್ಲಿಟ್ಟುಕೊಂಡೇ ಮಾತು ಬೆಳ್ಳಿ ಮೌನ ಬಂಗಾರ ಎಂದಿರುವದಿದೆ. ನಾವು ನಮ್ಮ ಮೊಬೈಲ್ ಲ್ಲಿ ರಿಂಗ ಟೋನ್ ಯಾವುದನ್ನು ಇಟ್ಟುಕೊಂಡಿದ್ದೇವೆ ಎನ್ನುವದರ ಆಧಾರದ ಮೇಲೆಯೇ ನಮ್ಮ ವ್ಯಕ್ತಿತ್ವವನ್ನು ಅಳೆಯಬಹುದು ಎನ್ನುವ ಮಾತಿನಂತೆ ನಾವಾಡುವ ಮಾತು, ವರ್ತನೆ ನಮ್ಮ ವ್ಯಕ್ತಿತ್ವದಿಂದ ಅದು ಹೇಗೆ ಭಿನ್ನವಾಗಲು ಸಾಧ್ಯ..? ಜನ ಪ್ರತಿನಿಧಿಗಳು ಯಾವುದೇ ಪಕ್ಷದವರಾಗಿರಲಿ ನಿಮ್ಮ ಮಾತುಗಳು ನಮ್ಮ ಮುಂದಿನ ಪೀಳಿಗೆಗೆ ಅನುಕರಣೀಯವಾಗಿರಬೇಕು. ಅಧಿಕಾರವಿದೆ ಮತ್ತು ಬಾಯಿ ಇದೆ ಎನ್ನುವ ಕಾರಣಕ್ಕೆ ಏನೇನೋ ಮಾತಾಡಬಾರದು. ಒಂದು ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ನಿಮ್ಮ ಮಾತುಗಳ ಪಾತ್ರ ಅಗಾಧವದುದು. ಮಾತು ಮನೆ ಕೆಡಿಸುವ ಬಗ್ಗೆ ನೀವು ತಿಳಿದಿರುವಿರಿ. ಈಗ ನಾವು ಜಾಗತೀಕರಣದ ಸಂದರ್ಭದಲ್ಲಿದ್ದೇವೆ. ನಮ್ಮ ಮಾತುಗಳು ರಾಜ್ಯ ಮತ್ತು ರಾಷ್ಟ್ರವನ್ನು ಕೆಡಿಸುವಲ್ಲಿಯೂ ಕಾರಣವಾಗಿ ಕೆಲಸ ಮಾಡಬಹುದು. ಮಾಧ್ಯಮಗಳ ಎದುರಲ್ಲಿ ಮಾತನಡುವಾಗ ನಿಮ್ಮ ಮಾತುಗಳು ಫ಼ಿಲ್ಟರ್ ಆಗದಿದ್ದರೆ ಅದು ಇಡೀ ರಾಜ್ಯವನ್ನು ನಾಚಿಸುವಂತಾಗುತ್ತದೆ. ಹಿಂಸಾತ್ಮಕವಾದ ಹೇಳಿಕೆಗಳನ್ನು, ಪುಂಡಾಟಿಕೆಯನ್ನು, ಭಂಡತನವನ್ನು ಎಂದೂ ನಮ್ಮ ಜನನಾಯಕರು ಪ್ರದರ್ಶಿಸಬಾರದು. ಟೀಕೆಯನ್ನು ಮಾಡುವಾಗ ನಮ್ಮ ಮನಸು ಸ್ಥಿತಪ್ರಜ್ಞೆಯಲ್ಲಿದ್ದರೆ ಬಳಸುವ ಭಾಷೆಯಲ್ಲಿಯೂ ಸ್ವಚ್ಚತೆಯಿರುತ್ತದೆ. ಬಾಯಿ ತೆಗೆದರೆ ಸಾಕು, ಕೊಳಕುತನದ ಪ್ರದರ್ಶನವಾಗುವಂತಿದ್ದರೆ ಅಂಥಾ ಬಾಯಿಯನ್ನು ತೆಗೆಯುವದಕ್ಕಿಂತಲೂ ತೆಗೆಯದಿರುವಾಗಲೇ ಹೆಚ್ಚು ಗೌರವ ಸಾಧ್ಯ. ಟಿ.ವಿ ವೀಕ್ಷಕರು ಇವತ್ತು ಯಾವ ಪಕ್ಷದ ಯಾವ ರಾಜಕಾರಣಿ ಕೊಳಕು ಮಾತನ್ನಾಡಿದ್ದಾನೆ ಎನ್ನುವದನ್ನು ನೊಡಲೆಂದೇ ಕುಳಿತುಕೊಳ್ಳುವ ಅಪ ಸಂಸ್ಕೃತಿಯನ್ನು ರೂಪಿಸುವ ವಕ್ತಾರರಾಗಬೇಡಿ. ಮಾತಿನಲ್ಲಿ ಮೋಡಿಯಿರಲಿ.. ಟೀಕೆಯಲ್ಲಿಯೂ ವಿನಯವಿರಲಿ. ನೀವೆಲ್ಲಾ ನಮ್ಮ ಜನನಾಯಕರು ರಾಜ್ಯದ ಜನತೆಗೆ ನೀವು ಮಾತಿನಲ್ಲಾದರೂ ಮಾದರಿಯಾಗುವುದು ಬೇಡವೇ..ನಿಮ್ಮಿಂದ ಯಾವ ಮಹತ್ತರ ಕೆಲಸಗಳನ್ನು ಮಾಡಲಾಗದಿದ್ದರೂ ಒಳ್ಳೆಯ ಮಾತುಗಳನ್ನಾಡುವುದಾದರೂ ಸಾಧ್ಯವಿದೆ. ಇನ್ನು ಮುಂದಾದರೂ ಸಾರ್ವಜನಿಕ ವೇದಿಕೆಗಳಲ್ಲಿ ಅಸಹ್ಯವಾದ ಮಾತು ಮತ್ತು ವರ್ತನೆಗಳನ್ನು ಅನಾವರಣಗೊಳಿಸದಿರಿ. ನೀವೇ ಖುದ್ದಾಗಿ ಸೆನ್ಸಾರ್ ಮಾಡಿ ಮಾತನಾಡುವ ಗುಣ ಬೆಳೆಸಿಕೊಳ್ಳಿ.

Leave a Reply

Your email address will not be published. Required fields are marked *