ಪಾಕಿಸ್ತಾನದಿಂದ ಬಂದ ಪತ್ರ : ಗಾಂಧಿ ಜಯಂತಿ ಕಥಾಸ್ಪರ್ಧೆ 2015 – ಬಹುಮಾನಿತ ಕಥೆ

– ಮಹಾಂತೇಶ್ ನವಲ್ಕಲ್

ಕಾಶ್ಮೀರದ ಝೇಲಂ ನದಿಯ ಅನತಿ ದೂರದಲ್ಲಿನ ಈ ರಾತ್ರಿ ಎಂದಿನಂತೆ ಇರಲಿಲ. ಅಲ್ಲಿಯ ತೋಟಗಳ ಪ್ಲಮ್ ಪೀಚು ಹಣ್ಣುಗಳು ಕೊಳೆತು ಮೆಲ್ಲಗೆ ಮಧ್ಯವಾಗಿ ಆ ಗಂಧಗಾಳಿಯನ್ನು ಪರಿಸರದ ತುಂಬಾ ಹರಡಿದ್ದವು.ಆತನ ಮನಸ್ಸು 11ನೇ ಶತಮಾನದ ಕಾಶ್ಮೀರದ ಕವಿ ಕಲ್ಹಣ ಮತ್ತು ಆತನ ಗ್ರಂಥ “ರಾಜತರಂಗಿಣಿ” ಬಗ್ಗೆ ಯೊಚಿಸುತ್ತಿತ್ತು. ಅತನ ಈ ಕಾವ್ಯ ತನ್ನನ್ನು ದೇಶದ್ರೋಹದ ಅಪವಾದನೆಗೆ ತಳ್ಳುತ್ತದೆ ಎಂದುಕೊಂಡಿರಲಿಲ್ಲ.

ದೂರದ ಕಲ್ಬುರ್ಗಿಯಿಂದ ಬಂದ ಇವನಿಗೆ ಪಂಜಾಬಿನ ವಾಘ ಗಡಿ, ಜಮ್ಮುವಿನ ದೇಶ ವಿಭಾಂತರ ನಿಯಂತ್ರಣ ಮತ್ತು ಕಾಶ್ಮೀರದ ಈಗ ಇರುವ ಮಿಲಟರಿ ಕ್ಯಾಂಪ್ ಹೀಗೆ ತಿರಗಿಣಿಯಂತೆ ತಿರುಗಿ ತಿರುಗಿ ಬಂದುದ್ದು ಒಂದು ಕಡೆಯಾದರೆ, ದೇಶದ್ರೋಹದ ಅಪವಾದನೆಯ ದೀವಿಟಿಗೆಗೆ ಮುಖಕೊಟ್ಟು ಓಡಾಡುವದು ಮತ್ತೊಂದು ಕಡೆ. ಈ ಆರು ತಿಂಗಳ ನರಕ ಸದೃಶ ಕಾಲವನ್ನು ಹೇಗೆ ಕಳೆದೆನೆಂಬುವದೆ ಒಂದು ಪವಾಡ. ಇಲ್ಲಿಂದ ಊರಿಗೆ ಹೋಗುವ ಹಾಗಿಲ್ಲ. ಊರಿಗೆ ದೂರವುಳಿಯಿತು, ಜಮ್ಮುವಿನ ಗಡಿ ದಾಟುವಂತಿಲ್ಲ. ಇಲ್ಲಿ ವಿಚಾರಣೆ ಇದೆ ಮಾತುಗಳಿವೆ ಸಾಂತ್ವನಗಳಿವೆ, ಆದರೆ ಅಲ್ಲಿ ಅಂದರೆ ಪಾಕಿಸ್ತಾನದಲ್ಲಿ ಏನಿದೆ? ವಿಚಾರಣೆ ಎಂದರೆ ಸಾವಿನ ಮನೆಯ ಅಂಗಳಕ್ಕೆ ಒಯ್ಯುವದು ಎಂದರ್ಥ. ಅವನೆ ಹೇಳುತ್ತಿದ್ದ, ಮಗನೆ ನನ್ನ ತಾತ ತೆಗೆದುಕೊಂಡ ತಪ್ಪು ನಿರ್ದಾರಗಳಲ್ಲಿ ನಾವು ಭಾರತಬಿಟ್ಟು ಹೋಗಿದ್ದು ಒಂದು. abstract-art-sheepಅಲ್ಲಿರುವ ಶಾಂತಿ ನೆಮ್ಮದಿ ಇಲ್ಲಿ ಇರಲು ಸಾಧ್ಯವಿಲ್ಲ. ಭಾರತ ಎಂಥಹ ಸುಂದರ ದೇಶ ಎಂದು ವಾಘ ಗಡಿಯ ತನ್ನ ದೇಶಕ್ಕೂ ಸೇರದ ಅವನ ದೇಶಕ್ಕೂ ಸೇರದ ಭೂಮಿಯಲ್ಲಿ ನಿಂತು ಹೇಳುತ್ತಿದ್ದಾಗಲೆ ಪಾಕಿಸ್ತಾನದ ಬಾರ್ಡರ್ ಸೆಕ್ಯೂರಿಟಿ ಆಧಿಕಾರಿ ರೇಂಜರ್ ಎಂದು ಕರೆಯಿಸಿ ಕೊಳ್ಳುವ ಆ ದಾಂಡಿಗ ಚಾಚನ ಮುಖಕ್ಕೆ ರಪ್ಪಂತ ಗುದ್ದಿದ್ದ. ಇಂಥಹ ಗುದ್ದಿಕೆಗಳು ಬಹು ಸಹಜವೆಂಬಂತೆ ಜೀರ್ಣಿಸಿಕೊಂಡು ಅಂದಿನ ಕೆಲಸ ಕಾರ್ಯಗಳಲ್ಲಿ ಭಾಗವಹಿಸಿದ್ದನಲ್ಲ ಚಾಚ.

ಎಂಥಹ ನಾಟಕ ಎಂಥಹ ಉನ್ಮತ್ತ ಉಮೇದಿ, ವಾಘ ಗಡಿಯಲ್ಲಿ ಪರೇಡಿನ ನೆಪದಲ್ಲಿ ಕಾಲನ್ನು ಅವನ ಮುಖಕ್ಕೆ ಬಲತ್ಕಾರವಾಗಿ ಒಯ್ಯುವ ಉನ್ಮಾದ ಅವನದು. ಅದೆ ತೆರನಾದ ಇಂಥಹದೆ ಇವನ ಮುಖಕ್ಕೆ ಅವನು, ಅಣುಕು ಚಪ್ಪಾಳೆ ತಟ್ಟುವವರೆಲ್ಲ ಎರಡು ದೇಶದ ದೇಶಭಕ್ತರು. ಕೋತಿಕುಣಿತದಾಟಕ್ಕೆ ಚಪ್ಪಾಳೆ ಚಪ್ಪಾಳೆ ಚಪ್ಪಾಳೆ. ಭಾರತ ಎಂಥ ಚಂದದ ದೇಶ ಎಂದು ಮೇಲೆ ಹೇಳಿದ ಮಾತು ದೂರದ ಬೆಟ್ಟದ ಮಾತೋ ಇರಬಹುದು. ಅಲ್ಲಿಯ ಪ್ರಮಾಣ ದೊಡ್ಡದಾಗಿದ್ದರೆ ಇಲ್ಲಿಯದು ಅಲ್ಪ ಪ್ರಮಾಣವಾಗಿರಬಹುದು. ಆದರೆ ಚಾಚನ ಮಗಳು ಅಕ್ಕ ರಜಿಯಾ ಅವಳು ಚಾಚನಮೇಲೆ ಸಂಪೂರ್ಣ ಅವಲಂಬಿತಳಾಗಿದ್ದಳಲ್ಲ, ಈಗ ಅವಳ ಬದುಕು? ಆಕೆಯ ಆ ಏಳು ಮಕ್ಕಳು? ಕೊನೆಯ ಮಗು ನೂರ್ ಇನ್ನೂ ಒಂದು ವರ್ಷದ ಒಳಗಿನವನು. ಅದು ಅಲ್ಲದೆ ಅವಳಿಗೆ ಗರ್ಭಾಶಯದ ಕ್ಯಾನ್ಸರ್ ಎಂಬ ಮಹಾ ರೋಗ. ಈತನ ತಲೆದಂಡವಾದರೆ ಅವರನ್ನು ನೋಡಿಕೊಳ್ಳುವವರು ಯಾರು. ಇದಕ್ಕೆಲ್ಲ ಕಾರಣಪುರುಷ ತಾನಾದೆನೆ? ಮನಸ್ಸು ಮುದಡಿಕೊಂಡಿತ್ತು. ಈದಿನ ರಜೆಯ ದಿನವಾದುದ್ದರಿಂದ ಶುಭಾಂಕರ ಹೇಳಿದ್ದ . ಖುರೇಶಿಯವರ ಸೇಬಿನ ತೋಟಕ್ಕೆ ಹೋಗೋಣ ಅವರು ಬಹಳ ದಿನದಿಂದಲೂ ಕರೆಯುತ್ತಿದ್ದಾರೆ. ಆದರೆ ಈಗ ಸೇಬು ಬಿಡುವ ಕಾಲವಲ್ಲ, ಇವನಿಗೂ ಹೋಗಬೇಕೆಂದು ಅನ್ನಿಸಿದರೂ ಹೋಗಲಿಲ್ಲ. ಏಕೆಂದರೆ ಅವನ ಜೊತೆ ಜೋಯ್ ಸಹ ಹೋಗುವವನಿದ್ದಾನೆಂದು ಗೊತ್ತಾದ ತಕ್ಷಣವೆ ತಾನು ಹೋಗುವದು ತರವಲ್ಲ ಎಂದುಕೊಂಡ.

ಹಿಮ ಜುಮುರು ಮಳೆಯಂತೆ ಸುರಿಯುತ್ತಿತ್ತು. ತಣ್ಣನೆಯ ಈ ನಾಡಿನಲ್ಲಿ ತಮ್ಮಂತವರು ಯಾವಾಗಲೂ artಬೆಂಕಿಯುಗುಳುವ ಬಂದೂಕುಗಳನ್ನು ಹೆಗಲಿಗೇರಿಸಿಕೊಂಡು ಅಡ್ಡಾಡುವ ವೈಪರಿತಯಕ್ಕೆ ಬೆರಗಾಗಿತ್ತು ಮನ. ಆದರೆ ಈಗ ವಿಚಾರಣೆ ಎದರಿಸುವ ಸಮಯದಲ್ಲಿ ಬಂದೂಕು ಮುಟ್ಟುವ ಕರ್ಮ ಇಲ್ಲ. ಅವರ ಜೊತೆ ಇರಬಹುದು ನಗಬಹುದು ವಾಸಿಸಬಹುದು ಆದರೆ ಇಂದು ತನಗೆ ಡಾರ್ಮೆನ್ಸಿ ಪಿರಿಯಡ್. ವಿಚಾರಣೆ ವಿಚಾರಣೆ ವಿಚಾರಣೆ ಇಲ್ಲಿಯ ಕೋರ್ಟು ಸಹ ಮಿಲಟರಿಯ ದರ್ಪದಿಂದ ಹೊರತಾಗಿಲ್ಲ ಎನ್ನಿಸಿತು ಅವನಿಗೆ. ಎಂಥಹ ವಿಚಾರಣೆ ಅದು, ಕೈಕಟ್ಟಿಕೊಳ್ಳುವಂತಿಲ್ಲ ಸೀದಾ ನಿಲ್ಲುವಂತಿಲ್ಲ ಮೈಮರೆತು ನಿಲ್ಲುವಂತಿಲ್ಲ. ಕಲಾತ್ಮಕ ಸಿನೆಮಾದಂತಹ ಮಾತುಗಳು ಆಗೊಂದೊ ಈಗೊಂದು.

‘ನಮ್ಮ ದೇಶದ ರಕ್ಷಣ ವ್ಯವಸ್ತೆಯ ಮಾಹಿತಿ ಆ ದೇಶಕ್ಕೆ ರವಾನಿಸಿದ ಅಪಾದನೆ ನಿನ್ನ ಮೇಲಿದೆ”.

ತನ್ನ ಕ್ಯಾಂಪಿನಲ್ಲೆ ಎಷ್ಟು ಜನರಿರುತ್ತಾರೆ ಎನ್ನುವ ಸತ್ಯ ತನಗಿನ್ನು ಗೊತ್ತಿಲ್ಲದೆ ಇರುವಾಗ ಅಂತಹದ್ದು ನಾನು ಹೇಗೆ ಮಾಡಲಿ.

ಆ ವಿರೋಧಿ ರಾಷ್ಟದ ಸೈನಿಕನಿಗೂ ನಿನಗೂ ಏನು ಸಂಬಂಧ? ವಿಚಿತ್ರವೆನ್ನಿಸುತ್ತಿದೆ ಈ ಪ್ರಶ್ನೆ. ಅದೆ ವಾಘ ಗಡಿಯಲ್ಲಿ ಸಿಹಿ ಹಂಚಿದ್ದು ಭಾಯಿ ಭಾಯಿ ಎಂದದ್ದು ಎಲ್ಲವೂ ನಾಟಕವೇ.? ದಿನಾಲು ಮಾತಾಡುವದರ ಹಿಂದಿನ ಮುಖವಾಡಗಳು ಯಾಕೆ? ಅವನಲ್ಲಿ ತನ್ನಲ್ಲಿ ಮೂಡಿದ್ದು ವಿರೋಧವಾಗಲಿ ಅಥವಾ ಅಗಮ್ಯ ದೇಶಪ್ರೇಮದ ಹಿನ್ನಲೆಯ ಪೂರ್ವಾಗ್ರಹದ ಭಾವನೆಗಳಲ್ಲ. ಸಹಜ ಮನುಷ್ಯ ಮನುಷ್ಯರಲ್ಲಿ ಒಡಮೂಡಿದ ಭಾವಗಳು ಅವು. ಅಲ್ಲಿ ನಾನು ಭಾರತೀಯನಲ್ಲ, ಅವನು ಪಾಕಿಯಲ್ಲ. ನಾವು ಕೇವಲ ಸಾಮಾನ್ಯ ಮನುಷ್ಯರು ಮಾತ್ರ.

“ಸರ್ ಅಲ್ಲಿದ್ದವ ಸೈನಿಕ ಮಾತ್ರ ಉಗ್ರಗಾಮಿಯಲ್ಲ ಸೈನಿಕನಿಗೂ ಉಗ್ರಗಾಮಿಗೂ ಬಹಾಳ ವ್ಯತ್ಯಾಸವಿದೆ.” ಅಷ್ಟಕ್ಕೂ ನಾನು ಮಾತಾಡಿದ್ದು ಸೈನಿಕನ ಜೊತೆ ಮಾತ್ರ.

“ನಮಗೆ ತಿಳುವಳಿಕೆ ಹೇಳಲು ಬರಬೇಡ ಅಲ್ಲಿ ಇರುವವರೆಲ್ಲ ಉಗ್ರಗಾಮಿಗಳೆ. ಅವರಾರು ಸೈನಿಕರಲ್ಲ. ಇರಲಿ ಅತನಿಗೂ ನಿನಗೂ ಎನು ಸಂಬಂಧ ಹೇಳು.” ಏನು ಹೇಳುವದು ಸರ್ ಆತ ನನ್ನ ಚಾಚಾ. ಚಾಚಾನೆಂದರೆ ನಿಮ್ಮಪ್ಪನ ತಮ್ಮನೆ? ಇರಬಹುದು ಸಂಬಂಧಗಳ ಹೆಜ್ಜೆಗಳನ್ನು ನೀರಿನಲ್ಲಿ ಹುಡುಕಬಾರದು. ಅಜ್ಜಿ ಹೇಳುತ್ತಿದ್ದಳು ತಮ್ಮ ವಂಶದವನೊಬ್ಬನು ಕಲಬುರ್ಗಿಗೆ ಬಂದೇನವಾಜ ದರ್ಗಾ ನೋಡಲು ಬಂದ ದೆಹಲಿಯ ಸೂಫಿಯ ಒಬ್ಬನ ಪ್ರಭಾವಕ್ಕೆ ಒಳಗಾಗಿ ದೆಹಲಿಗೆ ಹೋದನಂತೆ, ಅದೇ ವಂಶದವರು ಮುಂದೆ ದೇಶ ವಿಭಜನೆಯಾದಾಗ ಪಾಕಿಸ್ತಾನಕ್ಕೆ ಹೋದರಂತೆ ಈಗಲೂ ಅವರ ಹೆಸರಿನ ಮುಂದೆ ನಿಷ್ಟಿ ಹೆಸರಿದೆ ಎಂದು ಅದು ನೆನಪಾಗಿ ಮಾತಾಡಲು ಬಾಯ್ತೆರೆದಾಗಲೆ ಆ ಮಿಲಿಟರಿ ಅಧಿಕಾರಿ “ಒಹೊಹೋ ಇದು ಧರ್ಮವನ್ನು ಮೀರಿದ ಜಾಲವಿರಬಹುದು. ಇಲ್ಲ ಆತನ ಹೆಸರು ಬಂದೇನವಾಜ. ಅದು ತನ್ನ ಊರಿಗೆ ಸಂಬಂಧಪಟ್ಟಿದ್ದು. ಇನ್ನೊಂದು ಆತನ ಮುಂದೆ ಇರುವ ಮನೆತನದ ಹೆಸರು ನಿಷ್ಟಿಯೆಂಬುದು.” ನನ್ನ ಮನೆತನಕ್ಕೆ ಸಂಬಂಧಪಟ್ಟದ್ದು ಎಂದು ಹೇಳಲು ಸಾಧ್ಯವಾಗಿದ್ದು ಮಾತ್ರ ಇಷ್ಟು.

“ಬದ್ಮಾಶ್ ದೇಶದ್ರೋಹಿಗಳೇ ನಮ್ಮ ಸರ್ಕಾರಗಳಿದ್ದರೆ ನಿಮ್ಮನ್ನು ಇಲ್ಲವಾಗಿಸಲು ಕಾರಣವೇ ಇರುತ್ತಿರಲಿಲ್ಲ.” ಆತನ ಆಸ್ಪೋಟಕ ಧ್ವನಿಗೆ ಬೆಚ್ಚಗೆ ಬೆರಗಾಗಿದ್ದ ಇವನು.

“ಮುಂಬೈ ಘಟನೆಯಲ್ಲಿ ನೀನು ಎಲ್ಲಿದ್ದೆ?”

“ಬಾಲಕನಾಗಿದ್ದೆ.”

ಅದು ಅಲ್ಲದೆ ಮುಂಬೈ ನೋಡಿದ್ದು ಕಡಿಮೆಯೆ ಅನ್ನುವಾಗಲೆ ಆ ಹಿನ್ನಲೆಯೂ ಪತ್ತೆ ಹಚ್ಚಬೇಕು ಎಂದು ವಿಚಾರಣೆ ಮುಗಿಸಿದ್ದರು. ಮತ್ತೆ ಪಾಕಿಸ್ತಾನದ ಯೋಚನೆ ಅವನಿಗೆ ಅಲ್ಲಿ ಹೀಗೂ ಇರಲು ಸಾಧ್ಯವಿಲ್ಲದೆ ಇರಬಹುದು. ಏನು ಏಕೆ ಹೇಗೆ ಏಲ್ಲಿ ಪ್ರಶ್ನೆಗಳು ಮುಗಿದ ನಂತರ ಶಿರಶ್ಚೇದನವೇ ಇರಬಹುದು. ಪಾಪ ಚಾಚ ಮಾಡಿದ ತಪ್ಪು ಯಾವುದು? ಗೆದ್ದಲು ತಿಂದ ಪರ್ಶಿಯನ್ ಭಾಷೆಯ ’ರಾಜ ತರಂಗಿಣಿ’ಯನ್ನು ತನಗೆ ಕೊಟ್ಟಿದ್ದು. ಅದೇ ದೇಶದ್ರೋಹವಾಯಿತಲ್ಲ. ಅಕ್ಬರ್ ಕಾಶ್ಮೀರದ ರಾಜನಿಗೆ ಹೇಳಿ ಅದನ್ನು ಪರ್ಶಿಯನ್ ಭಾಷೆಗೆ ಅನುವಾದಿಸಿದನಂತೆ. ಅದೇ ಪ್ರತಿ ಇದು. ಇಂದು ಇಲ್ಲಿ ತನಗೆ ಹಾಗು ಅಲ್ಲಿ ಚಾಚನಿಗೆ ದೇಶದ್ರೋಹದ ಪಟ್ಟ ಕಟ್ಟಿದೆ.

ಹಿಮವರ್ಷ ತನ್ನ ಶ್ವಾಸ ನಿಶ್ವಾಸದ ಮುಖಾಂತರ ಇಡೀ ದೇಹವನ್ನು ಸೇರಿದ್ದರೂ ಉಸಿರು ಮಾತ್ರ ಬೆಚ್ಚಗಿನ ಹಬೆಯನ್ನು ಉಗುಳುತ್ತಿತ್ತು. ಈ ಆರು ತಿಂಗಳು ಸಂಬಳವನ್ನು ತಡೆದಿದ್ದಾರೆ, ಈಗ ಶುಭಾಂಕರನ ಮೇಲೆಯೇ ತಾನು ಅವಲಂಬಿತನಾಗಿದ್ದೇನೆ. ತನ್ನ ತಾಯಿಗೂ ಹಣಕಳಿಸಬೇಕು. ಎಲ್ಲಿಂದ ಕಳಿಸಬೇಕು?

ಕ್ಯಾಂಪಿನಿಂದ ಅನತಿ ದೂರದಲ್ಲಿದ್ದ ರಾತ್ರಿಯ ಪಾರ್ಟಿಯಲ್ಲಿ ನಡೆದ ಘಟನೆಗಳು ಅವು ಕಪ್ಪು ಅಲ್ಲ ಬಿಳಪು ಅಲ್ಲ ಎನ್ನುವಂತೆ ಇದ್ದವು. ಕಪ್ಪಾದರೆ ದೇಶ ದ್ರೋಹಿಯಾಗುತ್ತಿದ್ದೆ. ಬಿಳುಪಿನದಾಗಿದ್ದರೆ ದೇಶಭಕ್ತನಾಗಿರುತ್ತಿದ್ದೆ. ಆದರೆ ಅಲ್ಲಿ ನಡೆದ ಘಟನೆಗಳು ತನ್ನನ್ನು ಒಬ್ಬ ಭಫೂನನ್ನಾಗಿ ಮಾಡಿದವಲ್ಲ? ಆ ಮೂಲಕ ರಾಷ್ಟ್ರದ್ರೋಹದ ಅಪವಾದನೆಗಳು ಹೀಗೆಯೇ ಜರಗಿದವಲ್ಲ? ನಗಬೇಕೆಂದರೆ ನಗಲು ಆಗುತ್ತಿಲ್ಲ ಅಳಬೇಕೆಂದರೆ ಅಳಲು ಆಗುತ್ತಿಲ್ಲ. ಹಾಗೆಯೇ ಟೆಂಟಿನಲ್ಲಿ ಮುದರಿ ಮಲಗಿದ. ದೂರದಲ್ಲಿ ಎಲ್ಲೋ ತಾತ್ಕಾಲಿಕ ಹಿಮ art-3ನಿರೋಧಕ ಟೆಂಟಿನ ಕೆಳಗೆ ನಾಲ್ಕು ಕಡೆ ಉರಿಯುತ್ತಿದ್ದ ಅಗ್ಗಿಶ್ಟಿಕೆಯ ಮಧ್ಯ ಬೇಯುತ್ತಿರುವವು ಎರಡು ಕೋಳಿಗಳು ಮತ್ತು ಎರಡು ನಾಯಿಗಳು. ಕೋಳಿಗಳು ಬಂಗಾರವರ್ಣದಿಂದ ಜ್ವಾಲೆಯ ಜೊತೆ ಇನ್ನೂ ತೇಜೋಪುಂಜವಾಗಿ ಬೆಳಗಿದರೆ ನಾಯಿಗಳು ಪಾಳು ಬಿದ್ದು ಅವಶೇಷವಾಗಿರುವ ಗುಡಿಯ ಮಧ್ಯದಲ್ಲಿರುವ ಶಿವಲಿಂಗದಂತೆ ಕಪ್ಪು ಕಪ್ಪಾಗಿ ಹೊಳೆಯುತ್ತಿದ್ದವು.

ಮಣಿಪುರದ ಜೋಯ್ ಸಿಂಗ್ ಅಗ್ಗಿಷ್ಠೆಕೆಯ ಮಧ್ಯ ಜೋತುಬಿದ್ದ ನಾಯಿಮಾಂಸದ ತುಣುಕುಗಳನ್ನು ಒಂದೋದೆ ಎಸಳುಗಳಾಗಿ ಬಿಡಿಸಿ ತಿನ್ನುತ್ತ ಜೋರಾಗಿ ಕೂಗಿದ. ’ಬದ್ಮಾಶ್ ನಿನ್ನ ಚಾಚನನ್ನು ನಾನೇ ಕೊಂದೆ. ಆ ದಿನ ನುಸಳಿಕೋರರು ಅವನ ಸಹಾಯದಿಂದಲೇ ತಂತಿ ಹಾರಿ ಬರುತ್ತಿರುವಾಗಲೆ ನನ್ನ ಬುಲ್ಲೆಟುಗಳು ನುಸಳಿಕೋರರ ಜೊತೆ ನಿನ್ನ ಚಾಚನನ್ನು ಸುಟ್ಟು ಚಿಂದಿ ಮಾಡಿದ್ದವು. ಅವನ ರಕ್ತಮಾಂಸ ಮಜ್ಜೆಗಳೆಲ್ಲವೂ ನನ್ನ ಮೇಲೆ ಮಸ್ತಕಾಭಿಷೇಕ ಮಾಡಿದಂತೆ ಸಿಡದಿದ್ದವು. ಒಂದು ವೇಳೆ ನೀನು ಹೀಗೆ ಚಿಂತಾಕ್ರಾಂತನಾಗುತ್ತಿ ಎಂದಾದರೆ ನನ್ನ ಮೇಲೆ ಬಿದ್ದಿದ್ದ ಮಾಂಸ ಮಜ್ಜೆಗಳನ್ನು ನಿನಗೆ ಕೊಡುತ್ತಿದ್ದೆ, ನೀನು ಅವುಗಳನ್ನು ಒಂದು ಮಡಿಕೆಯಲ್ಲಿ ಹಾಕಿ ಝೇಲಂ ನದಿಗೆ ಬಿಟ್ಟು ಶ್ರಾಧ್ಧ ಮಾಡಬಹುದಿತ್ತು.’ ಎಂಥಹ ಉಡಾಫೆ ಮಾತು.

ಮತ್ತೆ ರಮ್ ಓಡ್ಕಾಗಳ ಬುರುಡೆ ಬಿಚ್ಚುತ್ತ ಜೋಯ್,’ಬಾ ಬಾ ನಿನಗೆ ನಾಯಿ ಬಿರ್ಯಾನಿ ತಿನ್ನಿಸುತ್ತೇನೆ’ ಎಂದು ಕೂಗಿದ. ಅವನ ಜೊತೆ ಮಿಜೋರಾಮ್‌ನ ವಿಲಿಯಂ , ಮೇಘಾಲಯದ ಡೆಂಗ್, ಬಂಗಾಲದ ಶುಭಾಂಕರ್ ಎಲ್ಲರೂ ಇದ್ದರಲ್ಲ. ಜೋಯ್ ಇನ್ನೂ ಮಾತಾಡಿದ್ದು ಹಾಡಿದ್ದು ಆ ಹುಳಿಮಿಶ್ರಿತ ಸೇಬು, ಪ್ಲಮ್ ಪೀಚುಗಳ ಮದ್ಯ ಒಂದಾಗಿತ್ತು.

ನಮ್ಮಲ್ಲಿ ಓಬ್ಬನಿದ್ದಾನೆ ದೇಶದ್ರೋಹಿ
ಅವನು ಪಾಕಿಸ್ತಾನಿಯೊಬ್ಬನ ಸ್ನೇಹಿ
ಇವನಿಗೆ ಅವನದೇ ಚಿಂತೆ
ಅವನನ್ನು ಮಾಡಿದ್ದೇನೆ ಹರಿದ ಪಂಚೆ
ಇವನಿಗೆ ಅವನಾಗುತ್ತಾನೆ ಚಾಚಾ
ನಮ್ಮ ದೇಶಕ್ಕೆ ಇವನೆಷ್ಠು ಸಾಚ
ಕೊಲ್ಲುತ್ತೇನೆ ಇವನನ್ನು ಅವನಂತೆ
ಇದು ಒಂದು ಹುಚ್ಚರ ಸಂತೆ

ಎನ್ನುವ ಹಾಡು ಬೆಟ್ಟ ಗುಡ್ಡಗಳ ಮಧ್ಯ ಒಂದಾಗಿ ಪ್ರತಿಧ್ವನಿಸುತ್ತಿತ್ತು, ನೀರ್ಗಲ್ಲುಗಳು ಉರಳುತ್ತಿದೆಯೋ ಎನ್ನುವಂತೆ ಪ್ರತಿಧ್ವನಿ ಪದೆ ಪದೆ ಹಾಡುತ್ತಿತ್ತು. ದೂರದ ಬೆಟ್ಟಗಳು ರಜತಾದ್ರಿಯಂತೆ ಆ ಬೆಳ್ದಿಂಗಳಲ್ಲಿ ಹೊಳೆಯುತ್ತಿದ್ದವು. ಇದೆಲ್ಲ ನೆಡೆದಾಗ ತಾನು ಅಲ್ಲಿ ಇರಲಿಲ್ಲ ಕೂಡ. ತಾನು ಇದ್ದುದ್ದು ಅದೇ ಡೇರೆಯಲ್ಲಿಯೇ ಕಾಲು ಮಡಚಿಕೊಂಡು ಮಲಗಿದವನಿಗೆ ಅವರು ಹಾಡುಗಳ ಮೂಲಕ ಆಹ್ವಾನಿಸುವ ಉದ್ರೇಕಕಾರಿ ಆಹ್ವಾನ ಅಸಹ್ಯ ಮತ್ತು ಭಯ ಹುಟ್ಟಿಸಿತ್ತು. ಈ ಊರು ಕರ್ಪ್ಯೂ ಘೋಷಿಸಿಕೊಂಡು ನೇಣಿಗೇರಿದ್ದರೆ, ಸುತ್ತಮುತ್ತ ಹಳ್ಳಿಗಳು ಶಾಂತ ಸ್ಥಿತಿಯಲ್ಲಿ ಮಲಗಿದ್ದವು. ತಾನು ನಿರ್ಲಿಪ್ತನಾಗಿ ದೂರ ಉಳಿದರೂ ಅವರು ಕೇಳುವವರೆ ಅಲ್ಲ ಎಂದು ತನಗೂ ಗೊತ್ತು, ಹಾಡು ಹೇಳಿ ಹೇಳಿ ಅವರ ಗಂಟಲು ಶೋಷಣೆಯಯಿತೊ ಮೆಲಕು ನೋಯಿತೊ, ನೇರವಾಗಿ ತನ್ನನ್ನು ಕರೆಯಲು ದಾಂಗುಡಿ ಇಟ್ಟರು. ಅರೆ ಶರಣ ಬಾರೋ….. ಶರಣ್ ಬಾರೋ…..ಎನ್ನುವ ಒಕ್ಕರಲಿನ ದ್ವನಿಗಳುಮತ್ತೆ ಬಾರಲೋ ಬಾರಲೋ ಎನ್ನುವ ಘೋಷಗಳು ಒಂದೆರಡು ದ್ವನಿಗಳು ಮಾತ್ರ ಶರಣಕುಮಾರ್ ನಿಷ್ಟಿ ಬನ್ನಿ ಹೊರಗೆ ಎನ್ನುತ್ತಿದ್ದವು. ಬರುವದೋ ಬೇಡವೋ ಬಾಗವಹಿಸುವದೋ ಬೇಡವೋ? ಏಕೆಂದರೆ ಈ ವಿಕ್ಷಿಪ್ತ ಜೋಯ್ ತನ್ನನ್ನು ಮುಕ್ಕಿ ಮುಕ್ಕಿ ತಿನ್ನುವದರಲ್ಲಿ ಸಂದೇಹವಿಲ್ಲ. ಇಷ್ಟಕ್ಕು ಆ ಆಹ್ವಾನಿಸುತ್ತಿರುವ ದ್ವನಿಗಳು ಆಪೇಕ್ಷಣೀಯವೋ ಅಥವಾ ಅವಮಾನದ ಹಾದಿಗೆ ತಳ್ಳುವಂತಹವೋ? ಆದರೂ ಹೋಗಲೆ ಬೇಕಾಗಿತ್ತು. ತಾನು ಸಂಘ ಜೀವಿಯಲ್ಲವೆ. ಅವರಿಲ್ಲದೆ ಬದುಕಲು ಸಾಧ್ಯವೇ ಇಲ್ಲ. ಅಲ್ಲಿ ತನ್ನನ್ನು ಪ್ರೀತಿಸುವ ಶುಭಾಂಕರ ಇದ್ದನಲ್ಲ. ದೂರದ ಬೆಟ್ಟದ ಆ ಧಡಲ್ ಬಡಲ್ ಶಬ್ದಗಳು ನೀರ್ಗಲ್ಲುಗಳವೇ ಇರಬಹುದು. ಹೊರಗೆ ಹೋಗಲೇಬೇಕಾಗಿತ್ತು.

ಹೊರಬಂದ. ಅವರ ಚೀರಾಟ ಮುಗಿಲು ಮುಟ್ಟಿತ್ತು. ’ಶರಣ್ ಮಹಾರಾಜಕಿ ಜೈ ಬೋಲೊ ಶರಣ್ ಮಹಾರಾಜಕಿ ಜೈ ದೇಶದ್ರೋಹಿ ಶರಣ್ ಮಹಾರಾಜ ಕಿ ಜೈ.’

ಪಾಕಿಸ್ತಾನಿಯ ಜೊತೆ ಮಾತಾಡುವದು ಅಪರಾಧವಾದರೆ ಅವರನ್ನು ಕೊಲ್ಲುವದು ಧರ್ಮ. ಅಲ್ಲಿಯೂ ಅಷ್ಟೆ ಕೊಲೆಯಾದ ವ್ಯಕ್ತಿಗಳ ತಲೆ ಎಣಿಸಿ ಹೇಳಿದರೆ ಬಹುಮಾನ ಮೆಡಲ್ಲುಗಳುಗಳು. ಇನ್ನೂ ಕ್ರೂರವಾಗಿ ಕೊಂದರೆ ಆತ ದೇಶ ಭಕ್ತ. ಕೊಲೆಗಡುಕರಿಗೆ ಪುರಸ್ಕಾರ ಸಿಗುವದು ಇಲ್ಲಿಯೇ ಇರಬಹುದು. ತನ್ನ ತಾಯಿಯ ಊರು ಆಳಂದದ ಖಜೂರಿಯಲ್ಲಿ ಕನಿಷ್ಟ ವರ್ಷಕ್ಕೆ ಎರಡು ಹೆಣ ಬೀಳುತ್ತವೆ. ಆ ಎರಡು ಹೆಣಗಳ ಸಲುವಾಗಿ ವರ್ಷದವರೆಗೂ ಸಂಪೂರ್ಣ ಸೂತಕದ ಛಾಯೆ ಆ ಊರಲ್ಲಿ. ಆದರೆ ಇಲ್ಲಿ ಎಲ್ಲವೂ ವಿಲೋಮ ಸ್ಥಿತಿ. ವಿಜಯೋತ್ಸವ, ಸಾವಿನ ಮನೆಯಲ್ಲಿ ಸಂಭ್ರಮ ಪಡುವ ಗಳಿಗೆ ಇದು ಒಂದೇ ಇರಬಹುದು. ಎಂದು ಏನೇನೋ ಯೋಚನೆಗಳು, ಬೋಲೋ ಶರಣ ಮಹಾರಾಜಕಿ ಜೈ.

ಟೆಂಟಿನಿಂದ ಹೊರಬರಲೇಬೇಕಾಗಿತ್ತು ಇಲ್ಲದಿದ್ದರೆ ಜೋಯ್ ನ ಗುಂಪು ಸುಮ್ಮನಿರಬೇಕಲ್ಲ. ಹೊರಬಂದ ತಕ್ಷಣವೇ ಹೋ ಹೋ ಶರಣ್ ಆಯೇ….. ಶರಣ್ ಆಯೇ…….ಆಗಿಂದಾಗಲೇ ದೂರದ ಕಂಟಿಯಲ್ಲಿದ್ದ ಅದೊಂದು ಸೇಬಿನ ಮರದ ದಿನ್ನೆಯನ್ನು ಉರಳಿಸಿಕೊಂಡು ಬಂದು ಅಲ್ಲಿ ನೆಡಲಾಯಿತು. ಅದರ ಮೇಲೆ ತನ್ನನ್ನು ಬಲಾತ್ಕಾರವಾಗಿ ಕೂಡಿಸಲಾಯಿತು. ಶರಣ್ ಗೆ ಈಗ ಸನ್ಮಾನ ಕಾರ್ಯಕ್ರಮ ಎಂದು ಹೇಳಲಾಯಿತು. ಕಾರ್ಯಕ್ರಮಕ್ಕೆ ಮುಂಚಿತವಾಗಿ ಮಾತಾಡಬೇಕಲ್ಲ. ಪ್ರಾಸ್ತಾವಿಕ ಅದು ಮಾತಾಡುವವರು ಮತ್ಯಾರು? ಅದೇ ಜೋಯ್‍ಸಿಂಗ್. ಇಂದು ಬಹಳ ಸಂತೋಷದ ದಿನ. ಏಕೆಂದರೆ ನನ್ನ ಸ್ನೇಹಿತರೊಬ್ಬರು ಬಹುವಾಗಿ ಒಂದು ಮಹತ್ಕಾರ್ಯವನ್ನು ಮಾಡಿದ್ದಾರೆ. oil-paintingಅವರನ್ನು ಈ ದೆಸೆಯಿಂದ ಹೇಗೆ ಸನ್ಮಾನಿಸಬೇಕು ತಿಳಿಯುತ್ತಿಲ್ಲ. ಆದರೂ ಅವರಿಗೆ ಸನ್ಮಾನಿಸಿ “ನಿಶಾನಿ ಏ ಪಾಕಿಸ್ತಾನ” ಕೊಟ್ಟು ಗೌರವಿಸಲಾಗುವದು ಏಕೆಂದರೆ ಅವರು ಪಾಕಿಸ್ಥಾನಕ್ಕೆ ಬೇಕಾದ ವ್ಯಕ್ತಿ ಎಂದು ಹೇಳಿದ. ಎಲ್ಲರೂ ಚಪ್ಪಾಳೆ ತಟ್ಟಿದರು ನಗುತ್ತಲೆ ಓಹೋ….. ಎಂದು ಸಂಭ್ರಮಿಸಿದರು. ಒಂದು ತಟ್ಟೆಯಲ್ಲಿ ಫರ್ನಗಿಡದ ಎಲೆಗಳಿಂದ ಮಾಡಿದ ಹಾರ ಮತ್ತು ಪೀಚ್ ಹೂಗಳ ಗುಚ್ಚ ಮತ್ತು ಅದರ ಜೊತೆ ನಾಯಿಯ ಎಲಬುಗಳನ್ನು ಆ ತಟ್ಟೆಯಲ್ಲಿ ಇಟ್ಟು ತನಗೆ ಕೊಡಮಾಡಿದರು . ರಭಸವಾಗಿ ನುಗ್ಗುವ ಗಾಳಿಗೆ ಸಣ್ಣ ಸಣ್ಣ ಹಿಮಹಳ್ಳುಗಳು ಟೆಂಟಿನೊಳಗೆ ನುಗ್ಗುತ್ತಿದ್ದವು. ಸನ್ಮಾನಕ್ಕೆ ಪ್ರತಿಯಾಗಿ ತಾನು ಮಾತಾಡಲೇಬೇಕು ಎಂದು ಎಲ್ಲರು ಪಟ್ಟು ಹಿಡದಿದ್ದರು ಏನು ಮಾತಾಡಬೇಕು? ಮಾತಾಡಲು ಏನಿದೆ ದೇಶದ್ರೋಹಿಯ ಬಾಯಿಂದ ಯಾವ ಮಾತು ಕೇಳಲಿದ್ದಿರಿ ಎನ್ನಬೇಕು ಎಂದುಕೊಂಡ. ಆದರೆ ಮಾತಾಡಲೇಬೇಕು ಎಂದು ಶುಭಾಂಕರನೊಡಗೂಡಿ ಎಲ್ಲರೂ ಒತ್ತಾಯಿಸಿದಾಗ ಮಾತಾಡಬೇಕೆನಿಸಿದರೂ ಮಾತಾಡಲಿಲ್ಲ. ಹಾಡಾದರು ಹೇಳು ಎಂದು ಎಲ್ಲರೂ ಒತ್ತಾಯಿಸುವವರೆ ಹಾಡು ಹಾಡಲು ತಾನೇನು ಗಾಯಕನಲ್ಲ. ಆದರೂ ಅವರು ಕೇಳುವುದಿಲ್ಲ ಕೂಡ ಹಾಡು ಶುರು ಮಾಡಿದ.

ಬಾ ಬಾ ಗಿಳಿಯೇ ಬಣ್ಣದ ಗಿಳಿಯೇ
ಹಸಿರು ಮೂಗಿನ ಚಂದದ ಗಿಳಿಯೇ
ಹಣ್ಣನು ಕೊಡುವೆನು ಬಾ ಬಾ ಬಾ

ಒಂದು ಪಲ್ಲವಿ ಮುಗಿದಾಕ್ಷಣವೇ ಜೋಯ್ ಜೋರಾಗಿ ಹಾಡಲು ಆರಂಭ ಮಾಡಿದ.

ಬಾಯ್ ಬಾಯ್ ಗಳಿಯೇ
ಬಾಣದ ಗಳಿಯೇ ಚಾಚಾ ಗಳಿಯೇ ಶರಣಗಳಿಯೇ ಚಾಚ ಶರಣ್ ಗಳಿಯಾ ಶರಣ್ ಚಾಚಾ ಶರಣ .. ಹಾಸ್ರ ಶರಣ ಹಣ ಶರಣ್ ಎಂದು ಕನ್ನಡ ಪದ್ಯವನ್ನು ಅಪಭ್ರಂಷಗೊಳಿಸಿ ಹಾಡಿದ ಆ ಪರ್ವತ ಶ್ರೇಣಿಗಳೆಲ್ಲವೂ ಆಮೇಲೆ ತಾವೆ ಹಾಡಲು ಶುರು ಮಾಡಿದವು . ಚಾಚಾ ಶರಣ್ ಗಳಿಯಾ ಶರಣ್ ಚಾಚಾ ಶರಣ ಗಳಿಯಾ ಶರಣ್…

ನಾನ್‍ಸೆನ್ಸ, ಬನ್ನಿ ಅಲ್ಲಿ ದಿಗ್ವಿಜಯ್ ಸಿಂಗ್ ನ ಹೆಣ ಬಿದ್ದಿದೆ. ನೀವು ಇಲ್ಲಿ ಕುಡಿದು ತಿಂದು ಮೋಜು ಮಾಡುತ್ತಿರುವಿರಿ ಇದು. ನಿಮಗೆ ನಾಚಿಕೆ ಆಗುವದಿಲ್ಲವೆ. ಕರೆದವನು ಸಾಮನ್ಯನಲ್ಲ ಸೈನ್ಯದ ಮೇಜರ್. ದಿಗ್ವಿಜಯ ಎಂದರೆ ಅಪ್ರತಿಮ ಧೈರ್ಯವಂತ. ಕಳೆದ ತಿಂಗಳು ಆರು ಉಗ್ರರನ್ನು ಕೊಂದ ಭೂಪಾಲದ ಹುಡುಗ. ಸಾಯುವ ಮುಂಚೆಯೂ ಇಬ್ಬರು ಉಗ್ರರನ್ನು ಕೊಂದಿದ್ದ. ಆತನ ಗ್ರೆನೈಡ್ ದಾಳಿಗೆ ಅವರು ಸುಟ್ಟು ಕರಕಲಾಗಿದ್ದರು.

ಎಲ್ಲರೂ ಗಾಬರಿಯಾಗಿದ್ದರು.

ಶರಣ್ ಕೈಯ್ಯಲ್ಲಿದ್ದ ಹೂವು ತುರಾಯಿ ನೋಡಿದ ಮೇಜರ್ ಸಾಹೆಬರಿಗೆ ಏನು ಅನ್ನಿಸಿತೋ ಏನೋ. ಅದನ್ನು ಜೋರಾಗಿ ಆಕಾಶಾಭಿಮುಖವಾಗಿ ತೂರಿದರು ಕಾಲನ್ನು ಭೂಮಿಗೆ ಜೋರಾಗಿ ಒದ್ದರು ದೇಶದ್ರೋಹಿಗಳೆ ಎಂದು ಕಿರುಚಿ ಆ ಹುಡಗನನ್ನು ನೋಡಿ ಕಲಿಯಿರಿ ಆ ಹುಡುಗನ ಧೈರ್ಯ ಸಾಹಸ ದೆಶದ್ರೋಹಿಗಳಿಗೆ ಒಂದು ಪಾಟವಾಗಬೇಕು ಎಂದು ಸಿಟ್ಟಿನಿಂದಲೆ ಮೂವ್ ಟು ಫೀಲ್ಡ ಎಂದು ಎಲ್ಲರನ್ನು ಕರೆದುಕೊಂಡು ಹೋದರು.ಆ ಒಂದು ವಾರ ದಿಗ್ವಿಜಯನ ನೆನಪಲ್ಲೆ ಹೋಯಿತು. ಅದರ ಜೊತೆ ತಾನು ಅನಾಥನಂತೆ ಈ ದೇಶಕ್ಕೆ ಸಂಬಂಧವಿಲ್ಲದ ಒಬ್ಬವನಾಗಿ ಆ ಢೇರೆಯಲ್ಲೆ ಕಾಲಕಳೆದನಲ್ಲ? ಎಲ್ಲಕ್ಕಿಂತಲೂ ತನ್ನನ್ನು ಬಹುವಾಗಿ ಭಾದಿಸಿದ್ದು ಕಾಡಿದ್ದು ತನ್ನನ್ನು ಇಂದಿಗೂ ಭಾಧಿಸುತ್ತಿರುವದು ಜೋಯ್‍ನ ಆಗಿನ ವರ್ತನೆ ಆತಟ್ಟೆಯಲ್ಲಿ ಇಟ್ಟು ನಾಯಿಎಲಬುಗಳನ್ನು ಕೊಟ್ಟಿದ್ದು ತಮಾಶೆಗಾಗಿ ಇರಬಹುದು, ಆದರೆ ಆತನ ಹಿಂದಿನ ಮಾತು ಮರೆಯಲು ಹೇಗೆ ಸಾಧ್ಯ ಅವನೇ ಯಾವಾಗಲೂ ಹೇಳುತ್ತಿದ್ದ ನಮ್ಮ ಗುಡ್ಡಗಾಡುಗಳ ರಾಜ್ಯಗಳಲ್ಲಿ ದ್ರೋಹಿಗಳಿಗೆ ನಾಯಿ ಎಲಬುಗಳನ್ನು ಉಡುಗರೆಯಾಗಿ ಕೊಡುತ್ತಾರೆ ಅದು ಒಂದು ರೀತಿಯ ಎಚ್ಚರಿಕೆಯಾಗಿಯೂ ಇರಬಹುದು. ಈ ಮಾತು ರಾತ್ರಿಯ ನಿದ್ರೆಯನ್ನು ಕಸಿಯುತ್ತದೆ. ಜೊಯ್ ನ ಮಾತುಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಶುಭಾಂಕರ ಹೇಳಿದರೂ ಕೂಡ ಆಂತರ್ಯದಲ್ಲಿರುವ ಆ ಸಂಶಯದ ವಾಸನೆ? ಯೋಚಿಸುತ್ತ ಯೋಚಿಚುಸುತ್ತ ನನ್ನ ಮನಸ್ಸು ಅದೇ ಆಗುತ್ತದೆ. ರಜಿಯಾ ತನಗಾಗಿ ಕಳುಹಿಸಿದ ಪತ್ರದಲ್ಲಿ ಅವಳು ಏನೆಂದು ಬರೆಯತ್ತಿದ್ದಳು. ಅದೆ ಕಣ್ಣಿಗೆ ಕಾಣದ ಎಂದೂ ಭೇಟಿಯಾಗಲಾಗದ ತಮ್ಮ ಶರಣ್ ಅಂತೆಲೋ ನನ್ನ ಅಜ್ಞಾತ ತಮ್ಮನೆಂತಲೋ ಹೌದಲ್ಲವೋ? ಏನೇನೋ ಯೋಚನೆಗಳು.

ಎಂಟು ದಿನಕ್ಕೊಮ್ಮೆ ಸೈನಿಕ ಕೋರ್ಟಿನ ಕಟ್ಟಳೆಗಳು, ತರಹೇವಾರಿ ಪ್ರಶ್ನೆಗಳು, ತನಗೇ ಅಸಂಭದ್ಧವೋ ಅವರಿಗೆ ಸಂಬದ್ದವೋ ತಿಳಿಯದು. ಅಂದು ಮಂಜುಮುಸುಕಿ ಶ್ರೀನಗರವೆಲ್ಲ ಮಂಜಿನಿಂದಾವೃತ್ತವಾಗಿತ್ತು. ಅವರು ಇಂದು ಬಹಳ ಮರ್ಯಾದೆಯಿಂದಲೇ ಮಾತಾಡಿಸಿದರು. ಕೆಲ ಎಚ್ಚರಿಕೆಯನ್ನು ಕೊಟ್ಟರು, ಬೇರೆದೇಶದ ಸೈನಿಕನ ಜೊತೆ ನನ್ನ ವರ್ತನೆ ಹೇಗೆ ಇರಬೇಕೆಂದು ಹೇಳಿದರು. ಈ ಬಡತನದಲ್ಲಿ ತಾಯಿಯ ಜವಬ್ದಾರಿಯನ್ನು ಹೇಗೆ ನಿಭಾಯಿಸಬೇಕೆಂದು ಮಾತಿನಿಂದಲೇ ಜಂಕಿಸಿದರು. ಇದಕ್ಕೆ ಪೂರಕವಾಗಿ ಚಾಚಾನ ಜೊತೆ ನಮ್ಮ ಕೆಲ ಸೈನಿಕರು ಕೆಲಸಮಾಡಿದ್ದರಲ್ಲ ವಾಘಗಡಿಯಲ್ಲಿ? ಆತನ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಘನ ನ್ಯಾಯಾಧೀಶರು ಒಂದು ಲಿಖಿತ ಹಿಮ್ಮಾಯಿತಿಯನ್ನು ಓದಿದರು. ಬಂದೇನವಾಜ ನಿಷ್ಟಿ ಎನ್ನುವ ಈತನಿಗೆ ಏನನ್ನಬೇಕೋ ತಿಳಿಯದು. ಬಹುಶ ಸಂತ ಮಹಾತ್ಮ ಎನ್ನುವ ಶಬ್ದಗಳು ಸೂಕ್ತ ಎನ್ನಿಸುತ್ತವೆ ಅಂಥಹ ಅದಮ್ಯ ಕಾಳಜಿ ಇರುವ ಶಾಂತಮೂರ್ತಿ, ಇನ್ನೂ ಇವನ ಬಗ್ಗೆ ಏನು ಹೇಳಲಿ ಪ್ರೀತಿಯ ಸಂಕೇತವಾದ ಅದಮ್ಯ ಜೀವ ಇವನು, ಇದನ್ನು ಬರೆದಿದ್ದು ಜೋಯ್ ಸಿಂಗ್. ಕಣ್ಣೀರು ಭೂಮಿ ಸೇರಿದ್ದವು.

ಮರುದಿನ ಮತ್ತೆ ಅದೆ ಲೆಫ್ಟ್ ರೈಟ್, ಸೈನ್ಯದ ಪೋಷಾಕುಗಳು, ಇದರ ಜೊತೆ ಆರು ತಿಂಗಳ ಸಂಬಳಕ್ಕೆ ಅರ್ಜಿ ಹಾಕುವ ಕೆಲಸ ಅಮ್ಮನಿಗೆ ಶುಭಾಂಕರನಿಂದ ಮತ್ತಷ್ಟು ಹಣ ಕಳುಹಿಸುವ ಕೆಲಸ, ಇದರ ಜೊತೆ ಲೆಟರ್ ಟ್ರೇನಲ್ಲಿ ತನ್ನದೊಂದು ಪತ್ರ ಆಗಲೇ ಒಡೆದಾಗಿತ್ತು. ಅದು ಪಾಕಿಸ್ತಾನದಿಂದ ಬಂದ ಪತ್ರ. ಪತ್ರ ತೆರೆದ. ಬಿಳಿಯ ದ್ರಾವಣದಿಂದ ಅದರಲ್ಲಿರು ಅಕ್ಷರಗಳನ್ನು ಕೆಡೆಸಲಾಗಿತ್ತು, ಪತ್ರದ ಮೇಲ್ಬಾಗ ಹೆಬ್ಬಟ್ಟಿನ ಗುರುತು. ಇದು ಮಾಡಿದ್ದು ಯಾರು ನಮ್ಮ ಸೈನ್ಯವೇ? ಅಲ್ಲಿಯ ಸೈನ್ಯವೇ ಆದರೂ ಆ ಹೆಬ್ಬಟ್ಟಿನ ಕರಿ ಗುರಿತು ಅಲ್ಲಿ ಯಾರೋ ಸತ್ತಿದ್ದನ್ನು ಹೇಳುತ್ತಿತ್ತು. ಸತ್ತವರು ಯಾರು ಎಂದು ಮನ ಪ್ರಶ್ನಿಸುತ್ತಿತ್ತು. ಎಂಥಹ ಯೋಚನೆಗಳು ಅವು ಮೆದಳು ಬಳ್ಳಿಗಳೆಲ್ಲ ದಣದಿದ್ದವು, ಅರಗಿನ ಕೊರಡಿಗೆ ತೀವ್ರವಾಗಿ ತಾಗುವ ಬೆಂಕಿಯಂತೆ ನಿದ್ರೆ ಎಂಬುದು ತಗಲಿಕೊಂಡಿತಲ್ಲ.

Leave a Reply

Your email address will not be published. Required fields are marked *