ಕಾನ್ಶಿರಾಂ – ಕಲ್ಲಿದ್ದಲ ಕಗ್ಗತ್ತಲೆಯನ್ನು ಕೊಹಿನೂರೊಂದು ಕಳೆದ ಕಥೆ : ಭಾಗ- ೩

ಮಂಡಲ ವರದಿ ಜಾರಿಗೆ ತರಲು ಹೋರಾಡಿದ ಮೊಟ್ಟ ಮೊದಲ ದೃಷ್ಟಾರ

-ಶ್ರೀಧರ ಪ್ರಭು

sridhar-2

ಈ ದೇಶದಲ್ಲಿ ಹಿಂದುಳಿದ ವರ್ಗಗಳು (OBC) ಅತ್ಯಂತ ಹೆಚ್ಚು ಋಣಿಯಾಗಿರಬೇಕಿರುವುದು ಬಾಬಾಸಾಹೇಬ್ ಅಂಬೇಡ್ಕರರಿಗೆ. ಬಾಬಾಸಾಹೇಬರು ನೆಹರು ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ ನಾಲ್ಕು ಮುಖ್ಯ ಕಾರಣಗಳಲ್ಲಿ ಮೊಟ್ಟ ಮೊದಲ ಮತ್ತು ಪ್ರಮುಖ ಕಾರಣ ಸಂವಿಧಾನದ ೩೪೦ ನೆ ವಿಧಿಯ ಪ್ರಕಾರ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ದೊರಕೆದೇ ಇದ್ದದ್ದು.
ಹಿಂದುಳಿದ ವರ್ಗಗಳ ಅಭಿವೃದ್ದಿಗೆ ಬರೀ ಆಯೋಗವೊಂದನ್ನು ರಚಿಸುವ ಪ್ರಸ್ತಾವನೆ ಇಟ್ಟು ಸರಕಾರ ತನ್ನ ನೇರ ಜವಾಬ್ದಾರಿಯನ್ನು ಆಯೋಗಕ್ಕೆ ವರ್ಗಾಯಿಸಿ ಕೈತೊಳೆದುಕೊಂದಿದ್ದಲ್ಲದೇ ಆಯೋಗಕ್ಕೆ ನೇಮಕಾತಿ ಕೂಡ ಮಾಡದ ಕ್ರಮವನ್ನು ಖಂಡಿಸಿ ಹೊರಬಂದರು. ಸ್ವತಂತ್ರ ಭಾರತದ ಮೊದಲ ಸರಕಾರ ಅಂಬೇಡ್ಕರರಿಗೆ ಸಂಸತ್ತಿನಲ್ಲಿ ತಮ್ಮ ರಾಜೀನಾಮ ಕುರಿತು ಹೇಳಿಕೆ ನೀಡಲೂ ಅವಕಾಶ ಒದಗಿಸಲಿಲ್ಲ. ಹಾಗಾಗಿ ಅವರು ಯಾವ ಕಾರಣಗಳಿಗೋಸ್ಕರ ರಾಜೀನಾಮೆ ಇತ್ತದ್ದು ಎಂದು ದೇಶಕ್ಕೆ ಗೊತ್ತಾಗಲೇ ಇಲ್ಲ. ಅಂದಿನ ಮನುವಾದಿ ನಿಯಂತ್ರಿತ ಮಾಧ್ಯಮಗಳು ಭಾಷಣದ ಪಾಠವನ್ನು ಕೂಡ ಪ್ರಕಟಿಸಲಿಲ್ಲ. ಬಾಬಾ ಸಾಹೇಬರ ಈ ಐತಿಹಾಸಿಕ ತೀರ್ಮಾನ ನಂತರದಲ್ಲಿ (೧೯೫೩) ಕಾಕಾ ಕಲೇಲ್ಕರ್ (ಪುಣೆಯ ಗಾಂಧಿವಾದಿ ಬ್ರಾಹ್ಮಣ ಮುಖಂಡ – ಹುಟ್ಟಿದ್ದು ಬೆಳಗಾವಿ ತಾಲೂಕಿನ ಬೆಳಗುಂಡಿಯಲ್ಲಿ) ನೇತೃತ್ವದಲ್ಲಿ ದೇಶದ ಮೊಟ್ಟ ಮೊದಲ ಹಿಂದುಳಿದ ವರ್ಗಗಳ ಆಯೋಗ – ‘ಕಲೇಲ್ಕರ್ ಹಿಂದುಳಿದ ವರ್ಗಗಳ ಆಯೋಗ’ ರಚನೆಯಾಗಲು ನಾಂದಿಯಾಯಿತು.
ಈ ಕಾಲೇಲ್ಕರ್ ವರದಿ ತುಂಬಾ ಮಜವಾಗಿತ್ತು. ಅಲ್ಲಿ ಇಲ್ಲಿ ಏನಾದರೂ ಪ್ರಾತಿನಿಧ್ಯ ಕೊಡುವುದಾದರೆ ಶಾಲೆಗಳಲ್ಲಿ ಜವಾನನ ಹುದ್ದೆ ಮತ್ತು ಪೌರ ಕಾರ್ಮಿಕರ ಹುದ್ದೆ, ಇಂಥಹ ಹುದ್ದೆಗಳಿಗೆ ಬೇಕಾದರೆ ಕೊಡಬಹುದು; ಆದರೆ ಯಾವುದೇ ಕಾರಣಕ್ಕೂ ಮೊದಲ ಮತ್ತು ಎರಡನೇ ದರ್ಜೆಯ ಕೆಲಸಗಳಲ್ಲಿ ಪ್ರಾತಿನಿಧ್ಯ ಇರಲೇ ಬಾರದು ಎಂದು ಶಿಫಾರಸ್ಸು ಮಾಡಲಾಯಿತು! ಸ್ವತಃ ಆಯೋಗದ ಅಧ್ಯಕ್ಷರೇ ತಮ್ಮ ವರದಿಯ ಶಿಫಾರಸ್ಸುಗಳಿಗೆ ವಿರೋಧ ವ್ಯಕ್ತ ಪಡಿಸಿ ಸರಕಾರದ ಹುದ್ದೆಗಳಲ್ಲಿ ಹಿಂದುಳಿದವರಿಗೆ ಪ್ರತಿನಿಧ್ಯವೇ ಇರಬಾರದು ಬೇಕಾದರೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಬೇಕಾದರೆ ಕೊಡಿ ಎಂದರು. ಸರಕಾರಕ್ಕೆ ವರದಿ ಸಲ್ಲಿಸುವಾಗ ಬರೆದ ಪತ್ರದಲ್ಲೇ ತಮ್ಮ ವರದಿಗೆ ತಮ್ಮದೇ ವಿರೋಧವಿದೆ ಎಂದೂ ಹೇಳಿ ಬಿಟ್ಟರು. ಇನ್ನು ಇಂತಹ periyar-ambedkarಉಗುರು-ಹಲ್ಲಿಲ್ಲದ ಕಾಕಾ ಕಲೇಲ್ಕರ್ ವರದಿಗೆ ಕೂಡ ಅಂದು ಸಾಕಷ್ಟು ವಿರೋಧ ವ್ಯಕ್ತವಾಗಿ ಕಲೇಲ್ಕರ್ ಅವರಿಂದಲೇ ಮಣ್ಣು ಕೊಡಿಸಲಾಯಿತು. ಕೊಡಲಾಯಿತು. ಅಂಬೇಡ್ಕರರ ಸತತ ಪ್ರಯತ್ನದ ಫಲವಾಗಿಯೇ ಹಿಂದುಳಿದ ವರ್ಗಗಳಿಗೆ ಇಂದು ಮೀಸಲಾತಿ ದೊರೆತದ್ದು.
ಬಾಬಾಸಾಹೇಬರ ನಂತರದಲ್ಲಿ ಈ ದೇಶದ ಹಿಂದುಳಿದ ವರ್ಗಗಳು ಅತ್ಯಂತ ಹೆಚ್ಚು ಋಣಿಯಾಗಿರಬೇಕದದ್ದು ಯಾರಿಗೆ ಎಂದು ರಾಜಕೀಯ ಇತಿಹಾಸ ತಜ್ಞರು ಪ್ರಾಮಾಣಿಕ ಸಂಶೋದನೆ ಮಾಡಿದರೆ ಗೋಚರಿಸುವ ಮೊಟ್ಟ ಮೊದಲ ಹೆಸರು ದಾದಾಸಾಹೇಬ್ ಕಾನ್ಶಿರಾಂ. ಎಲ್ಲರೂ ನಂಬಿದಂತೆ ಮಂಡಲ ವರದಿಯ ರೂವಾರಿ ವಿ ಪಿ ಸಿಂಗ್ ಅಲ್ಲ. ಬದಲಿಗೆ ಮಾನ್ಯವರ ಕಾನ್ಶಿರಾಂ. ೧೯೮೭ ರಲ್ಲಿ ಹರ್ಯಾಣ ವಿಧಾನಸಭೆಗೆ ಚುನಾವಣಾ ಪ್ರಚಾರ ಭಾಷಣದಲ್ಲಿ ಮೊಟ್ಟ ಮೊದಲ ಬಾರಿಗೆ ಮಂಡಲ ಆಯೋಗದ ಶಿಫಾರಸ್ಸು ಜಾರಿಗೆ ಮಾಡಬೇಕು ಎಂದು ಗರ್ಜಿಸಿದ್ದು ಕಾನ್ಶಿರಾಂ. ಅಂದಿನವರೆಗೆ ಯಾರಿಗೂ ಮಂಡಲ ವರದಿ ಎಂದರೆ ಏನು ಎಂದೇ ಗೊತ್ತಿರಲಿಲ್ಲ. ೧೯೮೭ ರಲ್ಲಿ ಕಾನ್ಶಿರಾಮರು ಹರ್ಯಾಣ ಚುನಾವಣಾ ಪ್ರಚಾರ ಭಾಷಣಗಳು ಸಂಪಾದಿಸಿದರೆ ಅದು ಇಡೀ ಭಾರತದ ಹಿಂದುಳಿದ ವರ್ಗದ ಪಾಲಿಗೆ ಧರ್ಮ ಗ್ರಂಥವಾದೀತು.

 

ಬಹುಜನ ಸಮಾಜ ಪಕ್ಷದ ಮೊದಲ ಎರಡು ಐತಿಹಾಸಿಕ ಘೋಷಣೆಗಳು – “ಮಂಡಲ್ ಅಯೋಗ್ ಜಾರಿ ಕರೋ ನಹಿ ತೋ ಕುರ್ಸಿ ಖಾಲಿ ಕರೋ” ಮತ್ತು “ವೋಟ್ ಹಮಾರಾ – ರಾಜ್ ತುಮ್ಹಾರಾ ನಹಿ ಚಲೇಗಾ ನಹಿ ಚಲೇಗಾ” ಹರ್ಯಾಣ ಚುನಾವಣೆಯ ಈ ಎರಡು ಚುನಾವಣಾ ಘೋಷಣೆಗಳು ದೇಶದಾದ್ಯಂತ ಮನೆಮಾತಾದವು. ಕಾನ್ಶಿರಾಂ ಒಂದು ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳುತ್ತಾರೆ
“ಈ ದೇಶದ ೪೫೦ ಜನ ಜಿಲ್ಲಾಧಿಕಾರಿಗಳಲ್ಲಿ ೧೨೫ ಜನ ದಲಿತರು. ದೇಶದ ಶೇಕಡಾ ಐವತ್ತರಷ್ಟು ಜನಸಂಖ್ಯೆಯ ಹಿಂದುಳಿದ ವರ್ಗದವರು ವರು ಇಲ್ಲವೇ ಇಲ್ಲ ಎನ್ನುವಷ್ಟು ಸಂಖ್ಯೆಯಲ್ಲಿ ಜಿಲ್ಲಾಧಿಕಾರಿ ಗಳಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ೪೫೦ ಜನ ಐಎಎಸ್ ಅಧಿಕಾರಿಗಳಿದ್ದಾರೆ ಅದರಲ್ಲಿ ೧೩೭ ಜನ ದಲಿತರು ಆದರೆ ಹಿಂದುಳಿದವರು ಕೇವಲ ೭ (ಅದರಲ್ಲಿ ಆರು ಜನ ಯಾದವರು). ಏಕೆ ಎಂದು ಯೋಚಿಸಿ”
ಅನೇಕರಿಗೆ ಗೊತ್ತಿಲ್ಲದ ವಿಚಾರವೆಂದರೆ ಬಹುಜನ ಸಮಾಜ ಪಕ್ಷದ ಮೊಟ್ಟ ಮೊದಲ ಲೋಕ ಸಭಾ ಸದಸ್ಯ ಭೀಮ್ ಸಿಂಗ್ ಪಟೇಲ್ ( ೧೯೯೧ ರ ಲೋಕ ಸಭಾ ಚುನಾವಣೆಯಿಂದ ಮಧ್ಯ ಪ್ರದೇಶದ ರೀವಾ ಲೋಕ ಸಭಾ ಕ್ಷೇತ್ರ) ಹಿಂದುಳಿದ ವರ್ಗದ ಕುರ್ಮಿ ಜನಾಂಗದವರು. ಅಷ್ಟೇ ಅಲ್ಲ, ೧೯೯೬ ರಲ್ಲಿ ಮತ್ತು ಮೇಲ್ವರ್ಗದ ಭದ್ರ ಕೋಟೆ ಎನಿಸಿಕೊಂಡ ಮಧ್ಯ ಪ್ರದೇಶದ ಸತ್ನಾ ಲೋಕ ಸಭಾ ಕ್ಷೇತ್ರದಲ್ಲಿ ಬಹುಜನ ಸಮಾಜ ಪಕ್ಷದಿಂದ ಪ್ರಥಮ ಬಾರಿಗೆ ಸ್ಪರ್ಧಿಸಿದ ಸುಖ್ ಲಾಲ್ ಕುಶ್ವಾಹ ಅರ್ಜುನ ಸಿಂಗರನ್ನು ಸೋಲಿಸಿ ಬಿಟ್ಟರು. ವಾಜಪೇಯಿಯವರ ಅಲೆ ಇದ್ದಾಗ್ಯೂ ಭಾಜಪ ಮೂರನೇ ಸ್ಥಾನಕ್ಕೆ ಹೋಯಿತು. ಉತ್ತರ ಭಾರತದಲ್ಲಿ, ಅದರಲ್ಲೂ ಮುಖ್ಯವಾಗಿ ಉತ್ತರ ಪ್ರದೇಶ, ಹರ್ಯಾಣ, ವಿಂಧ್ಯ ಪ್ರದೇಶ (ಮಧ್ಯಪ್ರದೇಶದ ಉತ್ತರ ಭಾಗ) ದಲ್ಲಿ ಬಹು ದೊಡ್ಡ ಸಂಖ್ಯೆಯಲ್ಲಿ ಹಿಂದುಳಿದ ವರ್ಗ ಬಹುಜನ ಸಮಾಜ ಪಾರ್ಟಿಯ ಜೊತೆ ಗುರುತಿಸಿ ಕೊಂಡಿತು. ಹೀಗೆ ಅಧುನಿಕ ಭಾರತದ ರಾಜಕೀಯ ಸಂದರ್ಭದಲ್ಲಿ ಹಿಂದುಳಿದ ವರ್ಗಗಳಲ್ಲಿ ಮೊಟ್ಟ ಮೊದಲು ಜಾಗೃತಿ ಮೂಡಿಸಿದ ಕೀರ್ತಿ ಸಲ್ಲಬೇಕಿರುವುದು ಕಾನ್ಶಿರಾಂ ಅವರಿಗೆ.

kanshiram
ವಿಶೇಷವೆಂದರೆ ಕುಶ್ವಾಹ ಮತ್ತು ಪಟೇಲ್ ಸಂಸದರಾದಾಗ ಅವರ ವಯಸ್ಸು ಮೂವತ್ತೈದು ವರ್ಷ ಮೀರಿರಲಿಲ್ಲ. ಹೀಗೆ ಹಿಂದುಳಿದ ವರ್ಗಗಳಲ್ಲಿನ ಹೊಸ ತಲೆಮಾರಿಗೆ ಅವಕಾಶಗಳನ್ನು ಕೊಟ್ಟು ಬೆಳೆಸಿದ ಕಾನ್ಶಿರಾಂ ಬರದೇ ಇದ್ದಿದ್ದರೆ ಇಡೀ ಉತ್ತರ ಭಾರತದ ರಾಜಕೀಯ ಕೇಸರಿಮಯವಾಗಿರುತ್ತಿತ್ತು.
೧೯೯೧ ರಲ್ಲಿ ಉತ್ತರ ಪ್ರದೇಶದಲ್ಲಿ ೨೨೧ ಸ್ಥಾನ ಗಳನ್ನು ಗೆದ್ದು ಅಧಿಕಾರದಲ್ಲಿದ್ದ ಭಾರತೀಯ ಜನತಾ ಪಾರ್ಟಿ ಸರಕಾರವನ್ನು ಬಾಬರಿ ಮಸೀದಿ ಧ್ವಂಸದ ಹಿನ್ನೆಲೆಯಲ್ಲಿ ವಿಸರ್ಜಿಸಿ ರಾಷ್ಟ್ರಪತಿ ಆಡಳಿತ ತರಲಾಯಿತು. ನಂತರ ನಡೆದ ಚುನಾವಣೆಗಳಲ್ಲಿ ಎಲ್ಲರೂ ಭಾವಿಸಿದ್ದು ಭಾಜಪ ಸಂಪೂರ್ಣ ಬಹುಮತ ಪಡೆಯುತ್ತದೆ ಎಂದು. ಆದರೆ ಎಲ್ಲರ ನಿರೀಕ್ಷೆ ಹುಸಿಗೊಳಿಸಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ-ಬಹುಜನ ಸಮಾಜ ಪಾರ್ಟಿಯ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಿತು. ಕೋಮು ಜ್ವಾಲೆಯಲ್ಲಿ ಬೆಂದು ಹೋಗಿದ್ದ ಈ ಚುನಾವಣೆಯಲ್ಲಿ ಕೋಮುವಾದಿ ರಾಜಕಾರಣವನ್ನು ಹತ್ತಿಕ್ಕಿ ಜನಪರ ಆಶಯ ಹೊತ್ತ ಹಿಂದುಳಿದ ವರ್ಗಗಳಿಗೆ ಅಧಿಕಾರ ದೊರಕಿಸಿಕೊಡಲು ಕಾರಣ ಕಾನ್ಶಿರಾಂ ಅವರ ಸಂಘಟನಾ ಚಾತುರ್ಯ. ಮೊತ್ತ ಮೊದಲ ಬಾರಿಗೆ ಯಶಸ್ಸಿಗೆ ಕಾರಣ.
ಅದರೊಂದಿಗೇ ೧೯೯೮ ರ ಮಧ್ಯ ಪ್ರದೇಶದ ವಿಧಾನ ಸಭಾ ಚುನಾವಣೆಯಲ್ಲಿ ಕಾನ್ಶಿರಾಂ ತಮ್ಮ ಪ್ರಸಿದ್ದ ಘೋಷಣೆ “ಜಿಸ್ಕಿ ಜಿತನಿ ಸಂಖ್ಯಾ ಭಾರಿ – ಉಸ್ಕಿ ಉತನಿ ಭಾಗಿದಾರಿ” (ಅವರವರ ಸಂಖ್ಯೆ ಯಷ್ಟು ಅವರ ಪ್ರಾತಿನಿಧ್ಯ’) ಯನ್ನು ಸಂಪೂರ್ಣ ಜಾರಿ ಗೊಳಿಸಿ ೫೦.೫ % ರಷ್ಟು ಟಿಕೆಟ್ ಗಳನ್ನು ಹಿಂದುಳಿದ ವರ್ಗಗಳಿಗೆ ಕೊಟ್ಟರು. ಬಿ.ಎಸ್.ಪಿ ಗೆದ್ದುಕೊಂಡ ಹನ್ನೊಂದು ಕ್ಷೇತ್ರ ಗಳಲ್ಲಿ ಹೆಚ್ಚಿನ ಕ್ಷೇತ್ರಗಳು ಸಾಮಾನ್ಯ ಕ್ಷೇತ್ರಗಳಾಗಿದ್ದವು. ಅವರ ಜೀವನ ಕಾಲದಲ್ಲಿ ಮಧ್ಯ ಪ್ರದೇಶದ ಹಿಂದುಳಿದ ವರ್ಗ ಕಾನ್ಶಿರಾಂರ ನಾಯಕತ್ವ ಮತ್ತು ಸಿದ್ಧಾಂತಗಳ ಜೊತೆ ಸಂಪೂರ್ಣವಾಗಿ ಸಮಾವೇಶಗೊಂಡಿತ್ತು.
ಒಂದು ಲೆಕ್ಕದಲ್ಲಿ ನೋಡಿದರೆ ಕಲ್ಯಾಣ್ ಸಿಂಗ್, ವಿನಯ್ ಕಟಿಯಾರ್, ಉಮಾ ಭಾರತಿಯವರಿಗೆ ಸಂಘ ಪರಿವಾರ ನಾಯಕತ್ವ ಕೊಡಲು ಕಾರಣ ಉತ್ತರ ಪ್ರದೇಶದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಹಿಂದುಳಿದವರು ಸಾಮಾಜಿಕವಾಗಿ ಸಮಾಜವಾದಿ ಮತ್ತು ಬಹುಜನ ಚಳುವಳಿಯ ಜೊತೆ ಗುರಿತಿಸಿಕೊಂಡಿದ್ದೇ ಆಗಿತ್ತು. ಹೀಗಾಗಿ ಒಂದು ಲೆಕ್ಕದಲ್ಲಿ ಸಂಘಪರಿವಾರಕ್ಕೆ ಒಬಿಸಿಗಳನ್ನ ಮುಂಚೂಣಿಗೆ ತರುವ ಅನಿವಾರ್ಯತೆ ಬಂದದ್ದು ಬಹುಜನ ರಾಜಕಾರಣದಿಂದ.
‘ಅಯೋಧ್ಯಾ ಕಾಂಡ’ ಜರುಗಿದ ಮೂರು ವರ್ಷಗಳಲ್ಲಿ (೧೮, ೧೯, ಸೆಪ್ಟೆಂಬರ್, ೧೯೯೫) ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಾರ್ಟಿಯ ಸರಕಾರ ರಚನೆಯಾಗಿದ್ದಲ್ಲದೆ, ಮನುವಾದದ ಹೃದಯ ಕೇಂದ್ರ ಲಖನೌ ನಲ್ಲಿ ಪೆರಿಯಾರ್ ಮೇಳ ಆಯೋಜಿಸಲಾಯಿತು. ದಕ್ಷಿಣ ಭಾರತದ ಅದರಲ್ಲೂ ರಾಮನನ್ನು ವಿರೋಧಿಸಿದ ತಮಿಳುನಾಡಿನ ರಾಜಕೀಯ ಚಿಂತಕರೊಬ್ಬರ ನೆನಪಿನಲ್ಲಿ ಬೃಹತ್ ಮೇಳವೊಂದನ್ನು ಭಾಜಪದ ನೆರವು ಪಡೆದುಕೊಂಡೇ ಇದ್ದ ಕಾಲದಲ್ಲಿ ಆಚರಿಸಿದ ಛಾತಿ ಕನ್ಶಿರಾಂರಿಗೆ ಮಾತ್ರ ಸಾಧ್ಯವಿತ್ತು.
ಒಂದು ವೇಳೆ ಅನೇಕರು ಆರೋಪಿಸಿದ ಹಾಗೆ ಕಾನ್ಶಿರಾಂ ಅವಕಾಶವಾಗಿದ್ದರೆ, ರಿಪಬ್ಲಿಕನ್ ಪಾರ್ಟಿಯ ಅಠವಳೆ, ಉದಿತ್ ರಾಜ್, ಪಾಸ್ವಾನ್ ಮಾದರಿಯಲ್ಲಿ ಬಿಜೆಪಿ ತಾಳಕ್ಕೆ ಕುಣಿದು ಅವರಲ್ಲೇ ಲೀನವಾಗುತ್ತಿದ್ದರು. ಬಿಜೆಪಿಗೆ ಕಾನ್ಶಿರಾಂ ಅನಿವಾರ್ಯರಾಗಿದ್ದರೆ ಹೊರತು ಕಾನ್ಶಿರಾಂ ಭಾಜಪವನ್ನು ನೆಚ್ಚಿಕೊಂಡಿರಲಿಲ್ಲ. ಹಾಗಲ್ಲದಿದ್ದರೆ, ಉತ್ತರ ಪ್ರದೇಶದಲ್ಲಿ ಮಾಯಾವತಿ ಸರಕಾರಕ್ಕೆ ಬಾಹ್ಯ ಬೆಂಬಲ ಕೊಡುವುದಾಗಿ ಘೋಷಣೆ ಮಾಡಿದ ಯಾರ ಮುಲಾಜೂ ಇಲ್ಲದೆ, ನಮ್ಮ ಗುರಿ ಸಾಧನೆಗೆ ನಾವು ಭಾಜಪವನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ಬಹಿರಂಗವಾಗಿ ಅವರು ಘೋಷಣೆ ಮಾಡುತ್ತಿರಲಿಲ್ಲ. ಮತ್ತೆ ಅಧಿಕಾರಕ್ಕೆ ಅಂಟಿಕೊಳ್ಳಲು ಬೇಕಾದ ‘ನಾಜೂಕಯ್ಯನ’ ಅವತಾರವೆತ್ತುತ್ತಿದ್ದರು.
ಕಾನ್ಶಿರಾಂ ಅವರ ಅಂತರಂಗ ಮತ್ತು ಬಹಿರಂಗ ಒಂದೇ ಆಗಿತ್ತು.

One thought on “ಕಾನ್ಶಿರಾಂ – ಕಲ್ಲಿದ್ದಲ ಕಗ್ಗತ್ತಲೆಯನ್ನು ಕೊಹಿನೂರೊಂದು ಕಳೆದ ಕಥೆ : ಭಾಗ- ೩

  1. Salam Bava

    ಕಂತಿನಲ್ಲಿ ಬಂದ ಲೇಖನ ವಿಚಾರ ಬೋದಕ !ಬಾಭಾ ಸಾಹೇಬ್ ಅಂಬೇಡ್ಕರ್ ರು ದಲಿತ ಕುಟುಂಬದಲ್ಲಿ ಹುಟ್ಟಿದ್ದು ಭಾರತದ ದಲಿತರ ಪುಣ್ಯ . ಇಂತಹಾ ಒಬ್ಬ ನಾಯಕ ನಮ್ಮಲ್ಲಿ ಹುಟ್ಟಿದ್ದರೆ ಎಂದು ಎಲ್ಲಾ ಸಮುದಾಯವೂ ಆಶಿಸುವಂಥ ,ನಿರೀಕ್ಷಿಸುವಂತ ದ್ಯೆತ್ಯ ಪ್ರತಿಭೆಯ ,ವಿದ್ವತ್ತಿನ ಒಡೆಯ ಅವರು. ದಲಿತರಿಗೆ ಅವರ ಘನತೆ ,ನೆಲ ,ಜಲ ಮತ್ತು ಸ್ವಾಭಿಮಾನವನ್ನು ಕೊಡಿಸಿದ ಈ ಮಹಾನಾಯಕ ,ಕಾನ್ಸ್ಯಿರಾಂ ,ಮಾಯಾವತಿಯವರಂತ ನಾಯಕತ್ವದ ಬೆಳವಣಿಗೆಗೆ ಕಾರಣವಾದದ್ದು ಕೂಡ ಅದ್ಭುತ ಸಾದನೆ.

    Reply

Leave a Reply

Your email address will not be published. Required fields are marked *