“ಉಡುಗೊರೆ” : ಗಾಂಧಿ ಜಯಂತಿ ಕಥಾಸ್ಪರ್ಧೆ 2015 – ಬಹುಮಾನಿತ ಕಥೆ

– ಸ್ವಾಲಿಹ್ ತೋಡಾರ್

ಪ್ರೀತಿಯಲ್ಲಿ ಉಡುಗೊರೆಗೆ ಅಷ್ಟೊಂದು ಮಹತ್ವವಿದೆ ಎಂದು ಪೊಡಿಮೋನುವಿಗೆ ಎಂದೂ ತಿಳಿದಿರಲಿಲ್ಲ. “ಮದುವೆಯಾಗಿ ಎರಡು ವರ್ಷ ಮೀರುತ್ತಾ ಬಂತು. ಇದುವರೆಗೂ ನಾನು ಕೇಳದೆ ಏನನ್ನಾದರೂ ನನಗೋಸ್ಕರ ನೀವು ತಂದುಕೊಟ್ಟದ್ದಿದೆಯೇ? ನಿಮಗೆ ನನ್ನ ಮೇಲೆ ಪ್ರೀತಿಯೇ ಇಲ್ಲ”ಎಂದು ಸಕೀನ ಹುಸಿ ಮುನಿಸು ತೋರಿದಾಗ ಪೊಡಿಮೋನು ಏನೂ ಆಗದವನಂತೆ ಹಲ್ಕಿರಿಯುತ್ತಾ ನಿಂತಿದ್ದ. ಹೆಂಡತಿ ಹುಸಿ ಮುನಿಸು ತೋರುವಾಗಲೆಲ್ಲಾ ಹೀಗೆ ಹಲ್ಕಿರಿಯುವುದು ಪೊಡಿಮೋನುವಿನ ಒಂದು ಪಾರಂಪರಿಕ ರೋಗವಾಗಿತ್ತು. ಸಕೀನಾಳಿಗೆ ಇದೆಂದೂ ಇಷ್ಟವಾಗುತ್ತಿರಲಿಲ್ಲ. ಅವಳು ಅತ್ಯಂತ ಪ್ರೇಮದ ಮೂಡಿನಲ್ಲಿದ್ದಾಗಲೂ, “ನನಗೆ ನಿಮ್ಮ ನಗುವೆಂದರೆ ಒಂಚೂರು ಇಷ್ಟವಿಲ್ಲ, ಅದೇನು ಅಷ್ಟೊಂದು ಅಸಹ್ಯವಾಗಿ ಹಲ್ಕಿರಿಯುತ್ತೀರಿ” ಎನ್ನುತ್ತಿದ್ದಳು. ಪೊಡಿಮೋನುವಿಗೆ ಬೇಸರವಾಗುತಿತ್ತು. ಆದರೂ, ಆತ ತನ್ನ ಬೇಸರವನ್ನು ತೋರಿಸಿಕೊಳ್ಳದೆ, ಹೆಂಡತಿಯ ಮುಂಗುರುಳನ್ನು ನೇವರಿಸುತ್ತಾ, “ಅದು ತನಗೆ ತನ್ನ ಅಪ್ಪನಿಂದ ದೊರೆತ ಏಕೈಕ ಆಸ್ತಿಯೆಂದೂ, ತಾನು ಬೇಡವೆಂದರೂ ಅದು ತನ್ನನ್ನು ಬಿಡಲೊಲ್ಲದು ಎಂದೂ”ಪರಿತಪಿಸುತ್ತಿದ್ದನು. ಸಕೀನಾ, “ಸರಿ ಬಿಡಿ. ನಿಮ್ಮ ಆ ಏಕೈಕ ಆಸ್ತಿಯನ್ನು ಭದ್ರವಾಗಿ ಬ್ಯಾಂಕ್ ತಿಜೋರಿಯಲ್ಲಿಟ್ಟು ಬಿಡಿ. ಹೀಗೆ ಎಲ್ಲೆಂದರಲ್ಲಿ ಪ್ರದರ್ಶಿಸಬೇಡಿ, ಯಾರಾದರೂ ಕದ್ದೊಯ್ದಾರು”ಎಂದು ತಮಾಷೆ ಮಾಡುತ್ತಿದ್ದಳು.

ಆದರೆ, ಈ ದಿನ ತಾನು ಉಡುಗೊರೆಯ ವಿಷಯ ಹೇಳಿದಾಗಲೂ ಗಂಡ ಹಲ್ಕಿರಿಯುತ್ತಾ ನಿಂತಿರುವುದು affection-paintingಕಂಡು ಸಕೀನಾ ಸಿಡಿಮಿಡಿಗೊಂಡಳು. ಆತನ ನಗು ತನ್ನ ವ್ಯಕ್ತಿತ್ವವನ್ನು ಕನಿಷ್ಠಗೊಳಿಸುತ್ತಿದೆ ಎಂದು ಭಾವಿಸಿ ಅಪಮಾನಿತಳಾದ ಆಕೆ, ಪೋಡಿಮೋನನ್ನು ತನ್ನ ಕೋಣೆಯಿಂದ ಹೊರ ದಬ್ಬಿ ಬಾಗಿಲು ಹಾಕಿಕೊಂಡಳು. ಪೊಡಿಮೋನು ಇದೆಲ್ಲಾ ಒಂದೆರಡು ದಿನಕ್ಕೆ ಸರಿ ಹೋಗುತ್ತದೆಂದು ಕೊಂಡಿದ್ದ. ಆದ್ದರಿಂದ ಆತ ಹೆಂಡತಿಯನ್ನು ರಮಿಸಿ ಸಮಾಧಾನಿಸಲೂ ಹೋಗಿರಲಿಲ್ಲ. ಸುಮ್ಮನೆ ತಾನಾಯಿತು, ತನ್ನ ಕೆಲಸವಾಯಿತೆಂದು ರಾತ್ರಿಯಿಡೀ ಹೊರಗಡೆ ಸುತ್ತಾಡಿ ಹೆಂಡತಿಯ ನೆನಪಾದೊಡನೆ ಮನೆಗೆ ಬರುತ್ತಿದ್ದನು.

ಪೊಡಿಮೋನು ಊಟ ಮಾಡಿ ಎದ್ದು ಬರುವಷ್ಟರಲ್ಲಿ ಸಕೀನಾ ತನ್ನ ಕೋಣೆಗೆ ಒಳಗಿನಿಂದ ಚಿಲಕ ಹಾಕಿ ಮಲಗುತ್ತಿದ್ದಳು. ಪೊಡಿಮೋನು ಆ ತಡರಾತ್ರಿಯಲ್ಲಿ ಕೋಣೆಯ ಬಾಗಿಲು ಬಡಿಯುವ ಮನಸ್ಸೂ ಇಲ್ಲದವನಂತೆ ನೆಲ ಸಿಕ್ಕಲ್ಲಿ ಬಿದ್ದುಕೊಳ್ಳುತ್ತಿದ್ದ. ಪೊಡಿಮೋನು ಹತಾಶನಾಗುವಂತೆ ಸಕೀನಾ ಒಂದು ವಾರವಾದರೂ ತುಟಿ ಬಿಚ್ಚಲಿಲ್ಲ. ಅವನು ಮಾತನಾಡಲು ಪ್ರಯತ್ನಿಸಿದರೂ, ಆಕೆ ಮುಖ ತಿರುಗಿಸುತ್ತಿದ್ದಳು. “ಕೇವಲ ಒಂದು ಉಡುಗೊರೆಗಾಗಿ ಈಕೆ ಇಷ್ಟೆಲ್ಲಾ ಹಠ ಮಾಡುತ್ತಿದ್ದಾಳಲ್ಲಾ, ಎಂತಹ ದುಷ್ಟೆ ಈಕೆ”ಎನಿಸಿತು ಪೊಡಿಮೋನುವಿಗೆ. ಆತ ಪ್ರತಿನಿತ್ಯ ಬೆಳಗ್ಗೆ ಅಂಗಳದಲ್ಲಿ ನಿಂತು ಹೆಂಡತಿಗಾಗಿ ಕಾದು ಕಾದು ನಿರಾಶೆಯಿಂದ ಹೊರಡುತ್ತಿದ್ದ. ಮಾಡಲು ಏನೂ ಕೆಲಸವಿಲ್ಲದಿರುವುದರಿಂದ ಪೊಡಿಮೋನು ಮನೆಯಿಂದ ನೇರವಾಗಿ ಬಸ್ ನಿಲ್ದಾಣದತ್ತ ಸಾಗುತ್ತಿದ್ದ. ಸಂಜೆಯವರೆಗೂ ಅಲ್ಲೆಲ್ಲಾ ಗೊತ್ತುಗುರಿಯಿಲ್ಲದಂತೆ ಅದ್ದಾಡಿ ರಾತ್ರಿಯಾಗುತ್ತಿದ್ದಂತೆ ಬರಿಗೈ ದಾಸನಂತೆ ಹತಾಶೆಯ ಮುಖವೊತ್ತು ಮನೆಗೆ ಮರಳುತ್ತಿದ್ದನು.

ಪೊಡಿಮೋನು ಕೆಲಸ ಕಳೆದುಕೊಂಡು ಸೌದಿ ಅರೇಬಿಯಾದಿಂದ ಹಿಂದಿರುಗಿ ಇಂದಿಗೆ ಆರೇಳು ತಿಂಗಳು ಕಳೆದವು. ಹದಿನೈದು ವರ್ಷದ ಹಿಂದೆ ಆತ ಕೆಲಸ ಹುಡುಕಿಕೊಂಡು ತನ್ನ ಮಾವನೊಂದಿಗೆ ಸೌದಿ ಅರೇಬಿಯಾಕ್ಕೆ ಹೋಗಿದ್ದ. ಅಲ್ಲಿ ಅರಬಿಯ ಹತ್ತಾರು ಆಡುಗಳನ್ನು ಗುಡ್ಡದ ತನಕ ಅಟ್ಟಿಕೊಂಡು ಹೋಗಿ ಮೇಯಿಸಿ, ಅದು ಕಳ್ಳಕಾಕರ ಪಾಲಾಗದಂತೆ ಜೋಪಾನವಾಗಿ ನೋಡಿಕೊಂಡು, ಅದಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸಿ ಅಂತೂ ತನಗೂ, ತನ್ನ ಮನೆಯ ಖರ್ಚಿಗೂ ಸಾಕಾಗುವಷ್ಟು ಸಂಪಾದಿಸುತ್ತಿದ್ದನು. ಅಲ್ಲದೆ, ತನ್ನ ಇಬ್ಬರು ತಂಗಿಯಂದಿರ ಮದುವೆ ಖರ್ಚಿಗಾಗಿಯೂ ಇಂತಿಷ್ಟೆಂದು ಉಳಿಸುತ್ತಿದ್ದನು. ಮನೆಗೆ ಕರೆ ಮಾಡಿದಾಗಲೆಲ್ಲಾ ಆತನ ಅಮ್ಮ, “ನಿನಗೆ ಇಬ್ಬರು ತಂಗಿಯರಿದ್ದಾರೆ. ಅವರಿಗೆ ಮದುವೆ ವಯಸ್ಸಾಗುತ್ತಾ ಬಂತು, ದುಂದು ಮಾಡಬೇಡ” ಎಂದು ಪದೇ ಪದೇ ನೆನಪಿಸುತ್ತಾ ಆತ ಸಾಕಷ್ಟು ಜಾಗರೂಕನಾಗಿರುವಂತೆ ನೋಡಿಕೊಂಡಿದ್ದರು. ಅಂತೂ ಹತ್ತು ವರ್ಷ ಸೌದಿ ಅರೇಬಿಯಾದಲ್ಲಿ ದುಡಿದು ಕೂಡಿಟ್ಟ ಹಣದೊಂದಿಗೆ ಮರಳಿ ಬಂದಿದ್ದ ಪೊಡಿಮೋನು ತನ್ನ ಸಂಬಂಧಿಕರಿಗಾಗಿ ಸಾಕಷ್ಟು ಉಡುಗೊರೆಗಳನ್ನೂ ತಂದಿದ್ದನು. ಎಲ್ಲರಿಗೂ ಖುಷಿಯೋ ಖಷಿ. ಅಮ್ಮನಿಗೆ ಎರಡು ಜೊತೆ ಸೀರೆ, ಚಪ್ಪಲಿ, ಬುರ್ಖಾ, ತಂಗಿಯಂದಿರಿಗೆ ಚೂಡಿದಾರೆ ಪೀಸು, ಬುರ್ಖಾ, ವಾಚು, ತಲೆಸಿಂಗಾರ, ಚಿಕ್ಕಪ್ಪನಿಗೆ ಶರಟ್ಟು ಪೀಸು, ವಾಚು, ಸುಗಂಧದ ಬಾಟಲಿ, ಚಿಕ್ಕಮ್ಮನಿಗೆ ಎರಡು ಜೊತೆ ಚಪ್ಪಲಿ, ಸೀರೆ, ಮಾವನಿಗೆ ವಾಚು, ಅತ್ತೆಗೆ ಸೀರೆ, ಬುರ್ಖಾ ಹಾಗೂ ಕಂಡವರಿಗೆಲ್ಲಾ ಕೊಡಲು ಸಾಕಷ್ಟು ಚಾಕಲೇಟು..

ಪೊಡಿಮೋನು ಸಂಬಂಧಿಕರ ಮನೆಗೆ ಹೋಗುವಾಗ ಎಂದೂ ಬರಿಗೈಯಲ್ಲಿ ಹೋಗುತ್ತಿರಲಿಲ್ಲ. ಮಾರುಕಟ್ಟೆಯಿಂದ ಸಾಕಷ್ಟು ತಿಂಡಿತಿನಿಸುಗಳನ್ನು ಖರೀದಿಸಿ ಜೊತೆಗೆ ಕೊಂಡೊಯ್ಯುತ್ತಿದ್ದನು. ಅಷ್ಟೇ ಅಲ್ಲದೆ, ಪೊಡಿಮೋನು ಸಂಬಂಧಿಕರನ್ನೂ, oil-paintingಸ್ನೇಹಿತರನ್ನೂ ಪದೇ ಪದೇ ಮನೆಗೆ ಕರೆದು ಭರ್ಜರಿ ಬಿರ್ಂದ್ ನಡೆಸುತ್ತಿದ್ದನು. ಪೊಡಿಮೋನುವಿನ ದುಂದುವೆಚ್ಚ ಕಂಡು ಅವನ ಅಮ್ಮ, “ಇಷ್ಟೆಲ್ಲಾ ಹಣ ಯಾಕೆ ಪೋಳು ಮಾಡುತ್ತಿದ್ದೀಯಾ, ಕಷ್ಟಪಟ್ಟು ದುಡಿದದ್ದಲ್ಲವೇ? ಮುಂದಿನ ಜೀವನಕ್ಕೆ ಉಳಿಸಬೇಡವೇ”ಎಂದು ಬುದ್ಧಿ ಹೇಳುತ್ತಿದ್ದರು. ಪೊಡಿಮೋನು ನಗುತ್ತಾ, “ಉಮ್ಮಾ…ನಾವು ಯಾಕೆ ದುಡಿಯುತ್ತೇವೆ ಹೇಳು. ನೆಮ್ಮದಿಯಿಂದ ಬದುಕುವುದಕ್ಕೆ ತಾನೆ? ಇದ್ದಾಗ ಖರ್ಚು ಮಾಡಬೇಕು. ಖುಷಿ ಪಡಬೇಕು. ನಾಳೆ ನಾವು ಇರುತ್ತೇವಂತ ಏನು ಗ್ಯಾರಂಟಿ ಹೇಳು. ಹಣ ಖಾಲಿಯಾದರೆ, ಮತ್ತೆ ದುಡಿಯಬಹುದಲ್ಲವೇ?”ಎಂದೆಲ್ಲಾ ವೇದಾಂತಿಯ ಸಬೂಬು ನೀಡುತ್ತಿದ್ದನು. ಆದರೆ, ವಾಸ್ತವದಲ್ಲಿ ಅವನಿಗೆ ನಾಲ್ಕು ಜನರ ಮುಂದೆ ತನ್ನ ಅಂತಸ್ತನ್ನು ತೋರಿಸಿಕೊಳ್ಳಬೇಕೆಂಬ ಒಳ ಹಂಬಲವಿತ್ತು. ಅವನ ಮನಸ್ಸನ್ನು ಅರ್ಥ ಮಾಡಿಕೊಂಡಂತೆ ಅವನ ಅಮ್ಮ,“ಯಾವತ್ತೂ ಹೀಗೆ ಇರಲ್ಲಪ್ಪ…ಜೋಪಾನವಾಗಿರು”ಎಂದು ಎಚ್ಚರಿಸುತ್ತಿದ್ದರು.

ಆ ವರ್ಷವೇ ಪೊಡಿಮೋನು ಒಂದೆರಡು ವರ್ಷ ಅಂತರದ ತನ್ನ ಇಬ್ಬರು ತಂಗಿಯಂದಿರಿಗೂ ಮದುವೆ ಮಾಡಿ ಅವರನ್ನು ಗಂಡಂದಿರ ಮನೆಗೆ ಕಳುಹಿಸಿದ್ದ. ಇಷ್ಟೆಲ್ಲಾ ಮುಗಿಯುವಾಗ ಪೊಡಿಮೋನುವಿನ ಕೈಯಲ್ಲಿದ್ದ ನಾಕಾಸೂ ಮುಗಿದು, ಆತ ಮತ್ತೆ ಸೌದಿಗೆ ಹೊರಡ ಬೇಕಾಯಿತು. ಹೊರಡುವಾಗ ಮಾತ್ರ ಪೊಡಿಮೋನುವಿಗೆ ಯಾಕೋ ಎಂದಿಲ್ಲದ ವೇದನೆಯಾಯಿತು. ಈ ಹಿಂದೆ ಮೊದಲ ಬಾರಿ ಅವನು ಸೌದಿಗೆ ಹೊರಟು ನಿಂತಿದ್ದಾಗ ಕೊಂಚ ಭಯವಾಗಿತ್ತೇ ವಿನಾ ಈ ರೀತಿಯ ವೇದನೆಯಾಗಿರಲಿಲ್ಲ. ಆದರೆ, ಈಗ ಮಾತ್ರ ತಾಯಿ ನಾಡಿನಿಂದ ದೂರವಾಗಿ ಮತ್ತೆ ಆ ನರಕದಲ್ಲಿ ತಾನು ಇನ್ನೆಷ್ಟು ವರ್ಷ ಸಾಯಬೇಕೋ ಎಂದು ಆತನಿಗೆ ಯೋಚನೆಯಾಯಿತು. ಆದರೂ ಆತ, “ವರ್ಷ ಮೂವತ್ತಾಯಿತು ನಿನಗೂ ಒಂದು ಮದುವೆ ಗಿದುವೆ ಅನ್ನೋದು ಬೇಡವೆ?” ಎಂಬ ತಾಯಿಯ ಮಾತಿಗೆ ಪ್ರಭಾವಿತನಾದವನಂತೆ ಮತ್ತೆ ಹೊರಟು ನಿಂತಿದ್ದ. ಹೊರಡುವಾಗ ಅವನ ಮನಸ್ಸಿನಲ್ಲಿ -ಸೌದಿಯ ಆ ವಿಶಾಲ ಮರುಭೂಮಿ, ರಣ ಬಿಸಿಲು, ಬೇ ಬೇ ಎಂದು ತಾನು ಅಟ್ಟಿದತ್ತ ಓಡುತ್ತಿದ್ದ ಆ ನೂರಾರು ಆಡಿನ ಮರಿಗಳ ಮುಗ್ಧತೆ, ಅರಬಿಯ ಕ್ರೌರ್ಯ- ನಿಂತು ಗೊಂದಲಗೊಳಿಸಿದವು.

ಸೌದಿಯಲ್ಲಿ ಮತ್ತೆ ಎರಡು ವರ್ಷ ದುಡಿದು ಊರಿಗೆ ಮರಳಿದ್ದ ಪೊಡಿಮೋನು ಸಕೀನಾಳನ್ನು ಮದುವೆಯಾಗಿದ್ದನು. ಮನೆಯ ಸುತ್ತಲೂ, ಶಾಮಿಯಾನ ಕಟ್ಟಿಸಿ, ಜಗಮಗಿಸುವ ಚಿಕ್‌ಬುಕ್ ಏರಿಸಿ, ದಪ್‌ನವರನ್ನು ಕರೆಸಿ ಊರಿನ ಜನರ ನಡುವೆ ತನ್ನ ಮದುವೆ ಚಿರಾಯುವಾಗುವಂತೆ ನೋಡಿಕೊಂಡಿದ್ದನು. ಸಕೀನಾಳ ತಂದೆ ತನಗೆ ಶ್ರೀಮಂತ ಅಳಿಯನೇ ಸಿಕ್ಕಿದನೆಂದು ಖುಷಿಪಟ್ಟರು. ಹಣ ಇರುವುದು ಖರ್ಚು ಮಾಡುವುಕ್ಕೆ, ಅಲ್ಲದೆ, ಕನಿಷ್ಠ ಭರವಸೆಯೂ ಇಡಲಾಗದ ನಾಳೆಗಾಗಿ ಕೂಡಿಡುವುದಕ್ಕಲ್ಲ ಎಂಬಂತೆ ಪೊಡಿಮೋನು ತನ್ನ ಮದುವೆಗೆ ಬೇಕಾಬಿಟ್ಟಿ ಖರ್ಚು ಮಾಡಿದ್ದನು. ಬಿರಿಯಾನಿ ಬಾಯಿ ತುಂಬಾ ಚಪ್ಪರಿಸಿ ಹೊಗಳುತ್ತಿದ್ದ ಜನರನ್ನು ಕಂಡು ಪೊಡಿಮೋನು ಖುಷಿಪಡುತ್ತಿದ್ದನು. ಆ ಖುಷಿಯಲ್ಲೇ ಮದುವೆಯ ದಿನ ತಡರಾತ್ರಿಯವರೆಗೂ ಇದ್ದು ಹೊಟ್ಟೆ ತುಂಬಾ ತಿಂದುಂಡು ಹೋಗಿದ್ದ ಸ್ನೇಹಿತರಿಗಾಗಿಯೇ ಮರುದಿನ ಸ್ಪೆಷಲ್ ಪಾರ್ಟಿಯನ್ನೂ ಆಯೋಜಿಸಿದ್ದನು. ಪತ್ನಿಯ ಸಂಬಂಧಿಕರನ್ನು ಒತ್ತಾಯದಿಂದ ಮನೆಗೆ ಕರೆಸಿ ಮತ್ತೊಮ್ಮೆ ಧಾಂ ಧೂಂ ಪಾರ್ಟಿ ಮಾಡಿ ಎಲ್ಲರನ್ನೂ ಚಕಿತಗೊಳಿಸಿದ್ದನು.

ದಿನಗಳೆದಂತೆ ಸೌದಿಯಿಂದ ತಂದಿದ್ದ ಹಣವೆಲ್ಲಾ ಖಾಲಿಯಾಗಿ ಕೈ ಸುಟ್ಟುಕೊಂಡಿದ್ದ ಪೊಡಿಮೋನು ಮದುವೆಯ ಒಂದೆರಡು ತಿಂಗಳಿಗೇ ಜೇಬಿಗೆ ಕತ್ತರಿ ಬಿದ್ದವನಂತೆ ಒದ್ದಾಡತೊಡಗಿದನು. ಸೌದಿಗೆ ಮರಳಿದ ಮೇಲೆ ಹಿಂದಿರುಗಿಸುತ್ತೇನೆಂದು ಅವರಿವರಿಂದ ಸಾಲಸೋಲ ಮಾಡಿ ಒಂದೆರಡು ತಿಂಗಳನ್ನು ಅದು ಹೇಗೋ ಮುಂದೂಡಿದ್ದನು. ಆದರೆ, ಸಾಲಗಾರರ ಉಪಟಳ, ಮನೆಯ ಖರ್ಚು ದಿನದಿಂದ ದಿನಕ್ಕೆ suicide-paintingದುಪ್ಪಟ್ಟಾಗಿ ಪೊಡಿಮೋನುವಿನ ಮನಶ್ಶಾಂತಿಯೇ ಕಳೆದು ಹೋದವು. ಅಲ್ಲದೆ, ಅವನ ಅಮ್ಮ “ಈ ಕತ್ತಲ ಗುಹೆಯಂಥಾ ಮನೆಯಲ್ಲಿ ಇದ್ದೂ ಇದ್ದು ನಿನ್ನ ಹೆಂಡತಿಗೆ ಬೇಸರವಾಗಿರಬಹುದು ಎಲ್ಲಾದರೂ ಸುತ್ತಾಡಿಸಿಕೊಂಡು ಬಾ”ಎಂದೋ ಅಥವಾ “ಅವಳನ್ನು ನಿರಾಶೆ ಮಾಡಬೇಡ ಏನಾದರೂ ತೆಗೆದುಕೊಡು”ಎಂದೋ ಅಥವಾ “ಅವಳಿಗೆ ನಮ್ಮ ಕುಟುಂಬದ ಪರಿಚಯ ಆಗಲಿ, ನಿನ್ನ ಮಾವಂದಿರ ಮನೆಗೆ ಕರೆದುಕೊಂಡು ಹೋಗು. ಗಂಡ ಹೆಂಡತಿ ಹೀಗೆ ಮನೆಯೊಳಗೆ ಬೆಪ್ಪು ತಕ್ಕಡಿಗಳ ಹಾಗೆ ಕೂತಿದ್ದರೆ ಮನಸು ಬೆಸೆಯುವುದು ಹೇಗೆ?” ಹೇಳಿ ಪೀಡಿಸುತ್ತಿದ್ದರು. ಪೊಡಿಮೋನುವಿಗೆ ಇಂತಹ ಆಶೆಗಳಿರಲಿಲ್ಲವೆಂದಲ್ಲ. ಹೆಂಡತಿಯ ಜೊತೆಗೆ ಸುತ್ತಾಡುವುದನ್ನು ಅವನೂ ಬಯಸುತ್ತಿದ್ದನು. ಆದರೇನು ಮಾಡುವುದು? ಕನಸುಗಳು ದುಬಾರಿಯಾಗಿದ್ದ ಕಾಲದಲ್ಲಿ ಪೊಡಿಮೋನು ಬದುಕುತ್ತಿದ್ದನು. ಕಷ್ಟಕಾಲದಲ್ಲಿ ಬಡವರಿಗೆ ಶಕ್ತಿ ತುಂಬುವ ಕನಸುಗಳೇ ಕೆಲವೊಮ್ಮೆ ಒಲ್ಲದ ಸಮಯದಲ್ಲಿ ಹೆಗಲ ಮೇಲೆ ಕೂತು ಒಜ್ಜೆ ಎನಿಸತೊಡಗುತ್ತವೆ. ತಲೆ ಚಿಟ್ಟು ಹಿಡಿಸುತ್ತವೆ. ಹೀಗೆ ಒಜ್ಜೆಯಾದ ಕನಸುಗಳನ್ನು ನನಸು ಮಾಡುವ ದಾರಿಯೇ ಬಹಳ ಕಿರಿಕಿರಿಯದ್ದು ಎಂಬುದು ಪೊಡಿಮೋನುವಿಗೆ ತಿಳಿದಿತ್ತು. ಆದ್ದರಿಂದ ತನ್ನ ಅಮ್ಮನ ಉಪದೇಶಗಳಿಂದ, ಹೆಂಡತಿಯ ಆಶೆಗಣ್ಣಿನಿಂದ ತಪ್ಪಿಸಿಕೊಳ್ಳಲು ಮುಂಜಾನೆ ಆರು ಗಂಟೆಗೆ ಎದ್ದು ಹೊರಡುತ್ತಿದ್ದನು.

ಆದರೆ, ಅಮ್ಮನ ಉಪದೇಶ ನಿರಂತರವಾಗಿತ್ತು. ಬರಿಗೈದಾಸನಾಗಿದ್ದ ಪೊಡಿಮೋನು, ಅಮ್ಮ ತನ್ನನ್ನು ಬರ್ಬಾದ್ ಮಾಡುವ ದಾರಿ ಹುಡುಕುತ್ತಿದ್ದಾರೆ ಎಂದೇ ಕೋಪಾವಿಷ್ಠನಾಗುತ್ತಿದ್ದನು. ಹೀಗೆ ದಿನದಿಂದ ದಿನಕ್ಕೆ ಮನಸ್ಸಿನ ನೆಮ್ಮದಿ ಕೆಡಿಸಿಕೊಳ್ಳುತ್ತಿದ್ದ ಪೊಡಿಮೋನುವಿಗೆ ಬರಿಗೈಯಲ್ಲಿ ಊರಲ್ಲಿ ದಿನಗಳೆಯುವುದು ಸಾಧ್ಯವಿಲ್ಲವೆನಿಸಿತು. ಆದ್ದರಿಂದ ಮೂರು ತಿಂಗಳ ರಜೆ ಇನ್ನೂ ಬಾಕಿಯಿರುವಂತೆಯೇ ಅವನು ಮತ್ತೆ ಹೊರಟು ನಿಂತನು. ಪೊಡಿಮೋನುವಿಗೆ ಈಗ ಹಿಂದೆಂದಿಗಿಂತಲೂ ಹೆಚ್ಚು ವೇದನೆಯಾಯಿತು. ಮದುವೆಯಾಗಿ ಮೂರು ತಿಂಗಳಾಗಿತ್ತಷ್ಟೆ, ಕೆಲವು ತಿಂಗಳ ಹಿಂದೆ ಹೆಂಡತಿಯ ಜೊತೆಗಿನ ಸ್ವರ್ಗದ ಬದುಕನ್ನು ಆರಂಭಿಸಿದವನಿಗೆ ಈಗ ಇದ್ದಕ್ಕಿದ್ದಂತೆ ಅವೆಲ್ಲವನ್ನು ಬಿಟ್ಟು ನರಕಕ್ಕೆ ಹೊರಡುವುದು ಅಸಾಧ್ಯವೆನಿಸಿತು. ‘ತಾನು ಈ ನರಕಕ್ಕೆ ಹೋಗಲೇಬಾರದಿತ್ತು. ಒಮ್ಮೆ ದೀನಾರಿನ ರುಚಿ ಹತ್ತಿದವನಿಗೆ ಮತ್ತೆ ಊರಿನಲ್ಲಿ ದುಡಿದು ಬದುಕುವುದು ಸಾಧ್ಯವೇ ಇಲ್ಲ’ ಎಂದುಕೊಂಡ. ಜೊತೆಗೆ “ತಾನು ಅಷ್ಟೊಂದು ವೈಭೋಗದಿಂದ ಮದುವೆಯಾಗದೆ ಸರಳವಾಗಿ ಆಗಿದ್ದರೂ ಇನ್ನು ಮೂರು ತಿಂಗಳು ಊರಲ್ಲಿ ಕಳೆಯಬಹುದಾಗಿತ್ತು. ಹಾಳಾದ ಊರಿನವರನ್ನು ದಂಗುಬಡಿಸಲು ಹೋಗಿ ಕೈ ಸುಟ್ಟುಕೊಂಡೆ. ಒಟ್ಟಾರೆ ನನ್ನ ದುರ್ವಿಧಿ, ಅಲ್ಲದೆ ಏನು? ಎಷ್ಟು ಮಂದಿ ಈ ಊರಲ್ಲೇ ದುಡಿದು ತಂಗಿಯಂದಿರಿಗೆ ಮದುವೆ ಮಾಡಿ, ತಾವೂ ಮದುವೆಯಾಗಿ ಸುಖವಾಗಿ ಬದುಕುತ್ತಿದ್ದಾರೆ” ಎನಿಸಿ ಅವನ ಕಣ್ಣಲ್ಲಿ ನೀರು ನಿಂತವು. ಅವನಿಗೀಗ ಊರಿನಲ್ಲೇ ಇದ್ದು ಕೂಲಿನಾಲಿ ಮಾಡಿ ಬದುಕುತ್ತಿರುವ ದಟ್ಟ ದರಿದ್ರರೂ ಕೂಡ ತನಗಿಂತ ನೆಮ್ಮದಿಯ ಜೀವನ ಸಾಗಿಸುತ್ತಿರುವಂತೆ ಕಂಡು ಕರುಳು ಹಿಚುಕಿದಂತಾಯಿತು. “ಎಷ್ಟು ಸಂಬಳವಿದ್ದರೆ ಏನು, ಏಳು ಕಡಲು ದಾಟಿ, ವರ್ಷಾನು ಗಟ್ಟಲೆ ಬಂಧು ಬಳಗದ ಮುಖ ನೋಡಲೂ ಆಗದೆ ಅನ್ಯರಂತೆ ಆ ನಾಡಿನಲ್ಲಿ ಬದುಕುವುದಕ್ಕಿಂತ, ಇಲ್ಲಿ ಕೂಲಿನಾಲಿ ಮಾಡಿ ಗಂಜಿ ಕುಡಿದು ಬದುಕುವುದೇ ಮೇಲು. ಒಂದು ಕಷ್ಟಸುಖಕ್ಕೆಂದು ಅಲ್ಲಿ ಬಂಧುಗಳು ಇದ್ದಾರ? ಸತ್ತರೆ ತೆಗೆದು ದಫನ್ ಮಾಡುವವರು ಯಾರಾದರು ಇದ್ದಾರ? ಎಂಥಾ ಸೌದಿ ಎಂಥಾ ಸೌದಿ?” ಎಂಬ ಮೇಲ್ಮನೆಯ ಮೂಸಾಕನವರ ಮಾತು ವಿಮಾನ ಹತ್ತುವವರೆಗೂ ಪೊಡಿಮೋನುವಿನ ಕಿವಿಯಲ್ಲಿ ಗುಂಯ್‌ಗುಟ್ಟುತ್ತಿದ್ದವು.

ಆದರೆ, ಸೌದಿಗೆ ಮುಟ್ಟಿದ ಪೊಡಿಮೋನುವಿಗೆ ಅಲ್ಲ್ಲೊಂದು ಆಘಾತ ಕಾದಿತ್ತು. ಸೌದಿ ಅರೇಬಿಯಾದಲ್ಲಿ ಅದಾಗಲೇ ನಿತಾಖತ್ ಎಂಬ ಹೊಸ ಕಾನೂನೊಂದು ಜಾರಿಗೆ ಬಂದು, ಪರದೇಶದ ಲಕ್ಷೆಪಲಕ್ಷ ಜನರು ಕೆಲಸ ಕಳೆದುಕೊಂಡು ಅನಿವಾರ್ಯವಾಗಿ ಊರಿಗೆ ಮರಳಿದ್ದರು. ಊರಿಗೆ ಮರಳಲಾಗದೆ ಕದ್ದು ಮುಚ್ಚಿ ಅಲ್ಲಿ ಇಲ್ಲಿ ಓಡಾಡಿಕೊಂಡಿದ್ದ ಕೆಲವರು ಪೊಲೀಸರ ಕೈಗೆ ಸಿಕ್ಕು ಜೈಲುಪಾಲಾಗಿದ್ದರು.

ಪೊಡಿಮೋನು ತನ್ನ ಧಣಿಯ ಸಹಕಾರದಿಂದ ಅದು ಹೇಗೋ ಒಂದು ವರ್ಷ ಕದ್ದು ಮುಚ್ಚಿ ಕೆಲಸ ಮಾಡಿದ್ದ. ಆದರೆ, ಒಂದು ದಿನ ಅವನು ಯಾರದೋ ಚಿತಾವಣೆಯಿಂದ ಪೊಲೀಸರ ಕಣ್ಣಿಗೆ ಬಿದ್ದು, ಜೈಲು ಪಾಲಾದ. ಅರಬಿ ಆತನನ್ನು ಜೈಲಿನಿಂದ ಬಿಡಿಸಿ, “ಇನ್ನು ಮುಂದೆ ನಿನ್ನನ್ನು ಕಾಯುವುದು ನನ್ನಿಂದ ಸಾಧ್ಯವಿಲ್ಲ. ಪೊಲೀಸರು ಹಿಂದೆಂದಿಗಿಂತಲೂ ಚುರುಕಾಗಿದ್ದಾರೆ. ಅಕ್ಕಪಕ್ಕದ ಟ್ಯೂನಿಶೀಯಾ, ಈಜಿಪ್ಟ್, ಸಿರಿಯಾದಲ್ಲಿ ದಂಗೆಗಳಾಗಿವೆ. ಸೌದಿ ಅರೇಬಿಯಾದ ಯುವಕರೂ ಬುಸುಗುಟ್ಟಲು ಆರಂಭಿಸಿದ್ದಾರೆ. ಅವರಿಗೆಲ್ಲಾ ಉದ್ಯೋಗ ಕೊಟ್ಟು ಬಾಯಿ ಮುಚ್ಚಿಸುವ ಕೆಲಸವನ್ನು ಸುಲ್ತಾನರು ಮಾಡುತ್ತಿದ್ದಾರೆ. ಇನ್ನು ನೀನಿಲ್ಲಿ ಇರುವುದು ಕ್ಷೇಮವಲ್ಲ”ಎಂದು ಎಚ್ಚರಿಸಿ ಊರಿಗೆ ಹೋಗಲೇ ಬೇಕೆಂದು ಒತ್ತಾಯಿಸಿ ಕಳುಹಿಸಿದನು. ಆದರೆ, ಪೊಡಿಮೋನು ಅದುವರೆಗೂ ದುಡಿದ ಸಂಬಳ ನೀಡಿರಲಿಲ್ಲ. ಕೇಳಿದ್ದಕ್ಕೆ, “ನಿನ್ನ ಸಂಬಳವನ್ನೆಲ್ಲಾ ಜೈಲಿನ ಅಧಿಕಾರಿಗಳಿಗೆ ಕೊಡಬೇಕಾಯಿತು. ಇಲ್ಲಿಯ ಜೈಲಿನ ಬಗ್ಗೆ ನಿನಗೆ ಗೊತ್ತೇ ಇದೆಯಲ್ಲಾ? ಇದು ನಿಮ್ಮ ಊರಿನಂಥ ಜೈಲಲ್ಲ. ಇಲ್ಲಿ ನಿನ್ನ ಜೀವ ಉಳಿದದ್ದೇ ಹೆಚ್ಚು ಅನ್ನಬೇಕು. ಆದಷ್ಟು ಬೇಗ ಹೊರಡು ಇಲ್ಲಿಂದ. ಎಲ್ಲಾ ಸರಿಯಾದರೆ ನಾನೇ ಕರೆಸುತ್ತೇನೆ”ಎಂದನು.

ಪೊಡಿಮೋನು ಇಂಗುತಿಂದ ಮಂಗನಂತೆ ಅವನತ್ತ ನೋಡಿ ಹಲ್ಕಿರಿದು ಸುಮಾರು ಹೊತ್ತು ಕಾದನು. ಅರಬಿಯ ಮನಸ್ಸು ಕರಗಲೇ ಇಲ್ಲವಾದ್ದರಿಂದ ವಿಧಿಯಿಲ್ಲದೆ ಅವನು ಹಿಂದಿರುಗಿದನು. ಹಲ್ಕಿರುವುದಲ್ಲದೆ ಆತ ಬೇರೆ ಏನು ತಾನೆ ಮಾಡಬಲ್ಲ? ಆ ಶ್ರೀಮಂತ ಅರಬಿಯೊಂದಿಗೆ ಹುಲುಮಾನವನಾದ ಅವನು ಕಾದಾಡುವುದು ಸಾಧ್ಯವೇ? ಆದರೂ, ಅರಬಿಯ ಕಪಾಲಕ್ಕೊಂದೇಟು ಕೊಡದೇ ಬಂದದ್ದು ತಪ್ಪಾಯಿತೆಂದು ಪೊಡಿಮೋನು ವಿಮಾನದಲ್ಲಿ ಕೂತು ಒಂದು ರೀತಿಯ ಷಂಡ ಸಿಟ್ಟಿನಿಂದ ತನ್ನನ್ನು ತಾನೇ ಹಳಿದನು.

ಇದ್ದಕ್ಕಿದ್ದಂತೆ ಊರಿಗೆ ಬಂದಿದ್ದ ಪೊಡಿಮೋನನ್ನು ಕಂಡು ಸಕೀನಾ ಆನಂದ ತುಂದಿಲಳಾದಳು. ವರ್ಷದ ನಂತರ ಪ್ರೀತಿಯ ಗಂಡನನ್ನು ಎದುರುಗೊಳ್ಳುವುದೆಂದರೆ ಯಾವ ಹೆಂಡತಿಗೆ ತಾನೆ ಖುಷಿಯಾಗದು ಹೇಳಿ? ಬಾಡಿ ಹೋಗಿದ್ದ ಅವಳ ಒಡಲ ಬಳ್ಳಿಗಳು ಮತ್ತೆ ಜೀವ ತಾಳಿದವು. ಒಣಗಿದ ಗಂಟಲಲಿ ಮತ್ತೆ ಪಸೆ ತುಂಬಿ, ಮಾತುಗಳು ಕಲ್ಪನೆಯ ಅನಂತ ಆಕಾಶೆದೆಡೆಗೆ ರೆಕ್ಕೆ ಹಚ್ಚಿದವು. ಗಂಡ ಸೌದಿಗೆ ಹಿಂದಿರುಗಿದ ಮರುದಿನದಿಂದ ಮಾಸಿದ ಬಣ್ಣದ ಬಟ್ಟೆಗಳಲ್ಲಿ ಅತ್ತೆಯ ಒರಟು ಮಾತುಗಳ ನಡುವೆ ನೀರಸವಾಗಿ ಕಳೆಯುತ್ತಿದ್ದವಳು, ಈಗ ಮತ್ತೆ ಹೊಸ ಬಟ್ಟೆಗಳಲ್ಲಿ, ಹೊಸ ಕನಸುಗಳ ಜೀವಧರಿಸಿ ಕಂಗೊಳಿಸತೊಡಗಿದಳು.

ಆದರೆ, ಪಕ್ಕನೆ ಹೊಸತು ಹಳತಾಗಿ ಬಿಡುತ್ತವೆ. ಕನಸುಗಳು ಸಣ್ಣಪುಟ್ಟ ಗೀರುಗಾಯಗಳ ಒರಟು ಮೈಯಾಗುತ್ತವೆ. ಎಷ್ಟು ಸಣ್ಣ ಅವಧಿಯಲ್ಲಿ ಈ ಕನಸುಗಳು ಹುಟ್ಟುತ್ತವೆ, ಸಾಯುತ್ತವೆ. ಹೊಸತು ಹಳತಾಗುತ್ತವೆ. ಆದರೆ, ಹಳತು ಮಾತ್ರ ಸದಾ ಹಳತೇ ಆಗಿರುತ್ತವೆ, ಎಷ್ಟು ವರ್ಷ ಸಂದರೂ!

ಪೊಡಿಮೋನು ಬರಿಗೈಯಲ್ಲಿ ಹಿಂದಿರುಗಿದ್ದಾನೆಂದು ತಿಳಿದಾಗ ಸಕೀನಾಳಿಗೆ ತೀವ್ರ ನಿರಾಶೆಯಾಯಿತು. ಆದರೂ, ತನ್ನ ಗಂಡ ಸಂಕಟದಲ್ಲಿದ್ದಾನೆಂದೂ, ಈ ಸಂದರ್ಭದಲ್ಲಿ ಅಲ್ಲದ ಮಾತು ಆಡಿ ಮನಸ್ಸು ನೋವಿಸುವುದು ಸರಿಯಲ್ಲವೆಂದು ಸಕೀನಾ ಆತನನ್ನು ಸಮಾಧಾನಿಸಿದಳು. “ಇನ್ನು ಆ ನರಕಕ್ಕೆ ಹೋಗುವ ಯೋಚನೆ ಬಿಡಿ. ಇಲ್ಲೇ ಏನಾದರೂ ಕೆಲಸ ಮಾಡಿದರಾಯಿತು” ಇತ್ಯಾದಿ ಇತ್ಯಾದಿಯಾಗಿ ಪೊಡಿಮೋನುವಿನ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡುತ್ತಿದ್ದಳು. ಆದರೆ, ಪೊಡಿಮೋನು ಮಾತ್ರ ಹೆಚ್ಚಾಗಿ ಯಾವುದರಲ್ಲೂ ಆಸಕ್ತಿ ಇಲ್ಲದವನಂತೆ ಇದ್ದು ಬಿಡುತ್ತಿದ್ದನು. ತನ್ನದೆಲ್ಲವೂ ಮುಗಿಯಿತು ಎಂಬಂತೆ. ಕೆಲವೊಮ್ಮೆ ಆತ “ಇಲ್ಲಿ ತನಗೆ ಒಳ್ಳೆಯ ಸಂಬಳದ ಕೆಲಸ ಸಿಗುತ್ತಿದ್ದರೆ, ತಾನೇಕೆ ಸೌದಿಗೆ ಓಡುತ್ತಿದ್ದೆ, ಹೇಳು. ಇನ್ನು ಮುಂದೆ ನಮ್ಮದು ಅರೆ ಹೊಟ್ಟೆಯ ಬದುಕು”ಎಂದು abstract-painting-sexನಿಟ್ಟುಸಿರು ಬಿಡುತ್ತಿದ್ದನು. ಸೌದಿಯಿಂದ ಹಿಂದಿರುಗುವಾಗ ತಾನು ಯಾವುದೇ ಉಡುಗೊರೆ ತರಲಿಲ್ಲವೆಂದು ಸಂಬಂಧಿಕರ್‍ಯಾರು ತನ್ನನ್ನು ನೋಡಲು ಬರುತ್ತಿಲ್ಲವೆಂದು ಹೆಂಡತಿಯೊಂದಿಗೆ ಹಳಹಳಿಸುತ್ತಿದ್ದನು. ಆತನ ಹತಾಶೆಯ ದನಿ, ಹಳಹಳಿಕೆ ಸಕೀನಾಳಿಗೆ ಸಿಟ್ಟು ತರಿಸುತ್ತಿದ್ದವು. “ಈ ಗಂಡಸರಿಗೆ ಈ ಲೋಕದಲ್ಲಿ ಎಷ್ಟೊಂದು ಸಾಧ್ಯತೆಗಳಿವೆ. ಅವರ ವಿಶ್ವ ಎಷ್ಟು ವಿಶಾಲವಾದುದು, ಅನಂತವಾದುದು. ಆದರೂ, ಯಾಕಿಷ್ಟೊಂದು ಹತಾಶೆ, ಹಳಹಳಿಕೆ ಅವರ ಲೋಕದಲ್ಲಿ ತುಂಬಿಕೊಂಡಿವೆ? ಸೋಲುಗಳನ್ನು ಗಂಡಸಿನಷ್ಟು ಭಯಪಡುವವನೂ ಯಾರು ಇಲ್ಲ. ಅವನೊಬ್ಬ ಮಹಾ ಹೇಡಿ. ಹೆಣ್ಣಿಗೆ ಈ ಸಾಧ್ಯತೆಗಳಿದ್ದಿದ್ದರೆ…”ಎಂದು ಆಕೆ ತನ್ನಷ್ಟಕ್ಕೆ ಯೋಚಿಸುತ್ತಿದ್ದಳು. ಅವಳ ಸೀಮಿತ ಅನುಭವಕ್ಕೆ ಗಂಡಸಿನ ಈ ವಿಶಾಲ ಲೋಕ ಧರ್ಮ, ರಾಜಕೀಯ, ಬಡವ, ಶ್ರೀಮಂತ ಇತ್ಯಾದಿ ಯಾವುದ್ಯಾವುದೋ ಸಿಕ್ಕುಗಳಲ್ಲಿ ಸಿಕ್ಕಿಕೊಂಡು ರಿಪೇರಿಯಾಗದಷ್ಟು ಹಾಳಾಗಿವೆ ಎಂಬುದು ಮಾತ್ರ ಹೊಳೆಯುತ್ತಿರಲಿಲ್ಲ. ಅವಳಿಗೆ ಹೊಳೆಯುತ್ತಿದ್ದುದು ಒಂದೇ, “ಪದೇ ಪದೇ ದಿವ್ಯಾನುಭೂತಿ ಸೂಸುವ ತನ್ನ ಕಣ್ಣುಗಳಲ್ಲಿ ಪ್ರೇಮದ ಕಣ್ಣು ನೆಟ್ಟು, ಆಳಕ್ಕಿಳಿದು ಹುಡುಕಿದರೆ ಗಂಡಸಿನ ಯಾವ ಸಮಸ್ಯೆಗೂ ಪರಿಹಾರ ದೊರೆಯುತ್ತವೆ. ಆದರೆ, ಈ ಪೆದ್ದ ಗಂಡಸರಿಗೆ ಬದುಕಿನ ಕೆಸರುಗದ್ದೆಯಲ್ಲಿ ಓಡುವುದೇ ತಿಳಿದಿಲ್ಲ. ಕಂಬಳದೆತ್ತುಗಳ ಬುದ್ಧಿಯೂ ಇವರಿಗಿಲ್ಲ.”

ಸಾಲಗಾರರ ಉಪಟಳ ಸಹಿಸಲಾರದೆ ಪೊಡಿಮೋನು ಹೆಂಡತಿಯ ಮೈಮೇಲಿದ್ದ ಚಿನ್ನ ಮಾರಿದನು. ಅದರಿಂದ ಸಾಲಗಾರರ ಉಪಟಳವೂ ನಿಂತಿತೆನ್ನುವಾಗ ಸಕೀನಾ ಬರಿಮೈಯಲ್ಲಿ ಜನರಿಗೆ ಮುಖ ತೋರಿಸುವುದು ಇಷ್ಟವಿಲ್ಲದೆ ಮದುವೆಮುಂಜಿಗೆ ಹೋಗುವುದನ್ನೇ ನಿಲ್ಲಿಸಿದಳು. “ವೃಥಾ ಅವರಿವರ ನಡುವೆ ಕೀಳರಿಮೆ ಯಾಕೆ? ಅಲ್ಲದೆ, ಈ ಹೆಂಗಸರ ಕಣ್ಣುಗಳೇ ಸರಿಯಿಲ್ಲ, ಅವು ಸದಾ ಚಿನ್ನತುಂಬಿದ ಕತ್ತುಗಳನ್ನೇ ಹುಡುಕುತ್ತಿರುತ್ತವೆ. ಬರಿದಾದ ಕತ್ತುಗಳನ್ನು ಕಂಡರೆ ಅವುಗಳಿಗೆ ಖುಷಿ”ಎಂದು ಅವಳು ಸಬೂಬು ನೀಡುತ್ತಿದ್ದಳು. ತಾನು ಬರಿದಾದೆನೆಂಬ ನೋವು ಅವಳ ಮಾತುಗಳಲ್ಲಿ ಇಣುಕುತ್ತಿದ್ದಂತೆ ಪೊಡಿಮೋನುವಿಗೆ ತೋರಿ, ಅವನನ್ನು ಗಾಢ ಖಿನ್ನತೆ ಆವರಿಸಿದವು. “ಇವಳ ಮಾತುಗಳಲ್ಲಿರುವ ‘ತಾನು ಬರಿದಾದೆನೆಂಬ ನೋವು’ಯಾವುದಕ್ಕೆ ಸಂಬಂಧಿಸಿದ್ದು?” ಅವನು ಯೋಚಿಸುತ್ತಿದ್ದನು, “ಬರಿಯ ಚಿನ್ನಕ್ಕಾಗಿ ಆಗಿರಲಿಕ್ಕಿಲ್ಲ? ಹಾಗಾದರೆ ಇನ್ನೇನನ್ನು ಇವಳು ಕಳೆದುಕೊಂಡಿರಬಹುದು? ಕನಸನ್ನೇ? ಯಾವ ಕನಸನ್ನು? ತಾಯಿಯಾಗುವ ಕನಸನ್ನೇ? ಒಳ್ಳೆಯ ಬದುಕು ಸಾಗಿಸುವ ಕನಸನ್ನೇ? ಅವರಿವರ ನಡುವೆ ಮೆರೆಯುವ ಕನಸನ್ನೇ? ಅಥವಾ ಇವೆಲ್ಲವನ್ನು ಒಳಗೊಂಡಿರುವ ಮತ್ತೊಂದು ಕನಸನ್ನೇ?”

ದಿನಗಳು ಕಳೆದಂತೆ ಮನೆಯಲ್ಲಿ ಅಕ್ಕಿ ಮುಗಿಯುತ್ತಾ ಬಂದು ಗಂಜಿಗೂ ತತ್ವಾರವಾಯಿತು. ಯಾವುದೋ ದೊಡ್ಡ ಕೆಲಸಕ್ಕಾಗಿ ಕಾದು ಕುಳಿತಿದ್ದ ಪೊಡಿಮೋನು ಈಗ ಕೂಲಿ ಕೆಲಸಕ್ಕೆ ಹೋಗುವುದು ಅನಿವಾರ್ಯವಾಯಿತು. ಮೊದ ಮೊದಲು ಪೊಡಿಮೋನುವಿಗೆ ಕೂಲಿ ಕೆಲಸಕ್ಕೆ ಹೋಗುವುದು ಮುಜುಗುರದ ಸಂಗತಿಯಾಗಿತ್ತು. ಸೌದಿಯಲ್ಲಿ ಎಂಥಾ ದರಿದ್ರ ಕೆಲಸ ಮಾಡುತ್ತಿದ್ದರೂ, ಊರಿಗೆ ಮರಳುವಾಗ ಸುಗಂಧ ಪೂಸಿಕೊಂಡು, ದೊಡ್ಡ ಆಫೀಸರನಂತೆ ಬಂದಿಳಿದು ಊರಿನವರಲ್ಲಿ ವಿಚಿತ್ರ ಭ್ರಮೆಯುಟ್ಟಿಸುತ್ತಿದ್ದರಿಂದ ಸೌದಿಯಿಂದ ಆಗಮಿಸುತ್ತಿದ್ದ ಯಾರೂ ಊರಲ್ಲಿ ಕೂಲಿ ಕೆಲಸ ಮಾಡುವುದನ್ನು ಇಷ್ಟಪಡುತ್ತಿರಲಿಲ್ಲ. ಅದು ತಮ್ಮ ಘನತೆಗೆ ಕಡಿಮೆಯೆಂದೇ ಭಾವಿಸುತ್ತಿದ್ದರು. ಕೆಲವು ದಿನಗಳ ಮಟ್ಟಿಗೆ ಪೊಡಿಮೋನುವಿಗೂ ಅಂತಹದ್ದೇ ರೋಗ ಬಡಿದಿತ್ತು. ಆತ “ಸೌದಿಯಲ್ಲಿ ತಾನು ಅರಬಿಯ ದಿನಸಿ ಅಂಗಡಿಯ ಮ್ಯಾನೇಜರ್ ಆಗಿದ್ದೆನೆಂದೂ, ಅಲ್ಲಿಯ ಜನರಿಗೆ ತಾನೆಂದರೆ ತುಂಬಾ ಗೌರವವೆಂದೂ, ಆದರೆ, ಇಲ್ಲಿಯ ಜನರು ಕೊಳಕರೆಂದೂ, ಮನುಷ್ಯರ ಬಗ್ಗೆ, ಅವರ ದುಡಿಮೆಯ ಬಗ್ಗೆ ಇಲ್ಲಿ ಯಾರಿಗೂ ಗೌರವವಿಲ್ಲವೆಂದೂ, ಇಲ್ಲಿ ಒಂದು ದಿನಸಿ ಅಂಗಡಿಯ ಮ್ಯಾನೇಜರಾಗಬೇಕಾದರೆ, ಎಷ್ಟು ಕಲಿತ್ತಿದ್ದಾನೆಂಬುದೇ ಮುಖ್ಯವೆಂದೂ, ಆದರೆ, ಸೌದಿಯಲ್ಲಿ ಆತ ಎಷ್ಟು ಚುರುಕಾಗಿದ್ದಾನೆ ಮತ್ತು ಹೇಗೆ ದುಡಿಯುತ್ತಾನೆ ಎಂಬುದೇ ಮುಖ್ಯವೆಂದೂ, ಸೌದಿಯಲ್ಲಿ ಮ್ಯಾನೇಜರಾಗಿದ್ದ ತಾನು ಇಲ್ಲಿ ಕೂಲಿ ಕೆಲಸಕ್ಕೆ ಹೋಗುವುದು ಸಾಧ್ಯವೇ ಇಲ್ಲವೆಂದು” ಊರ ಕಟ್ಟೆಯಲ್ಲಿ ಕೂತು ಬಡಾಯಿ ಕೊಚ್ಚುತ್ತಿದ್ದನು.

“ಮತ್ತೆ ಸೌದಿ ಎಂದರೆ ಸುಮ್ಮನೆಯೇ? ಅದಕ್ಕೇ ಅಲ್ಲವೇ ಕೇರಳ, ಕರ್ನಾಟಕ, ಬಿಹಾರದಿಂದ ಯುವಕರೆಲ್ಲಾ ಸೌದಿಗೆ ಓಡುವುದು”ಎಂದು ಒಬ್ಬ ಮುದುಕ ಪೊಡಿಮೋನುವಿಗೆ ಸಾಥ್ ನೀಡುತ್ತಿದ್ದನು.

“ಇಲ್ಲಿ ಕಲಿತವರಿಗೆ ಮಾತ್ರ ಒಳ್ಳೆಯ ಸಂಬಳ, ಒಳ್ಳೆಯ ಬದುಕು, ಆದರೆ, ಸೌದಿಯಲ್ಲಿ ಹಾಗೋ? ಅಲ್ಲಿ ಕಲಿಯದವರೂ ಹೋಗಿ ಸಂಪಾದಿಸುವುದಿಲ್ಲವೇ? ಮುತ್ತುನೆಬಿ ಓಡಾಡಿದ ಸ್ಥಳವಲ್ಲವೇ ಅದು. ಬರ್ಕತ್ತಿನ ನಾಡು. ಪುಣ್ಯ ಮಾಡಿರಬೇಕು ಅಲ್ಲಿಗೆ ಹೋಗಲು” ಎಂದು ಇನ್ನೋರ್ವ ಮುದುಕ ಹೇಳುತ್ತಿದ್ದಂತೆ ಅಲ್ಲಿ ಮಾತಿನ ರಂಗೇರುತ್ತಿದ್ದವು.

ಆದರೆ, ಪೊಡಿಮೋನುವಿಗೆ ತನ್ನ ಇತರ ಅನುಭವಗಳನ್ನು ಹಂಚಿಕೊಳ್ಳುವ ತವಕ. ಎಲ್ಲರೂ ಗರಬಡಿಯುವಂತೆ ಆತ ಹೇಳುತ್ತಿದ್ದನು, “ಎಷ್ಟು ಹಣ ಸಂಪಾದಿಸಿದರೆ ಏನು? ನಮ್ಮಂತಹ ಬಡಪಾಯಿಗಳು ಗತ್ತಿನ ಅರಬಿಗಳ ನಡುವೆ ಬದುಕುವುದು ಸಾಧ್ಯವೇ? ತರಕಾರಿ ತರಲೆಂದು ಮಾರುಕಟ್ಟೆಗೆ ಹೋದರೆ ತಮ್ಮ ಮನೆಯ ಮಾಳಿಗೆಯ ಮೇಲೆ ನಿಂತು ಅರಬಿಯ ಮಕ್ಕಳು ಹಾಳಾದ ಟೊಮಟೋ ಎಸೆದು ಕೇಕೆ ಹಾಕಿ ನಗುತ್ತಾರೆ. ಒಮ್ಮೆ ಒಬ್ಬ ಪಾಕಿಸ್ತಾನಿ ಸಿಟ್ಟಿನಿಂದ ಆ ಮಕ್ಕಳಿಗೆ ಎರಡೇಟು ಬಾರಿಸಿದ್ದಕ್ಕೆ ‘ಅರಬಿಯ ಮಕ್ಕಳಿಗೆ ಹೊಡೆಯುತ್ತಿಯೇನೋ ಹಿಂದ್’ ಎಂದು ಜರೆದು ಆತನನ್ನು ಜೈಲಿಗಟ್ಟಿದರು. ಅರಬಿಗಳಿಗೆ ಪಾಕಿಸ್ತಾನಿಯರೂ, ಭಾರತೀಯರು ಎಲ್ಲರೂ ಹಿಂದೂಗಳೇ”

“ಇರಬಹುದು, ಇರಬಹುದು ಕೆಟ್ಟವರು ಎಲ್ಲಾ ಕಡೆಯೂ ಇರುತ್ತಾರಲ್ಲವೇ?” ಮುತ್ತುನೆಬಿಯ ನಾಡನ್ನು ದೂರಲು ಇಷ್ಟವಿಲ್ಲದೆ ಒಬ್ಬ ಹೇಳಿದ.

“ಈಗಿನ ಅರಬಿಗಳು ಹೆಣ್ಣು ಹೆಂಡ ಎಂದು ಬಾಯಿ ಬಿಡುವವರಂತೆ. ಅಲ್ಲಿಯ ಯುವಕರು ದುಡಿಯುವುದೇ ಇಲ್ಲವಂತೆ. ಅದಕ್ಕೆ ನಿತಾಖತ್ ಅಂತ ಕಾನೂನು ತಂದು ಹೊರಗಿನವರನ್ನೆಲ್ಲಾ ಓಡಿಸಿ, ಅಲ್ಲಿಯ ಯುವಕರಿಗೆ ಕೆಲಸ ಕೊಡುವ ಹುನ್ನಾರ ಮಾಡಿದ್ದಾರೆ ಸೌದಿಯ ದೊರೆಗಳು. ಆದರೆ, ಇದೆಲ್ಲಾ ನಡೆಯುವಂತಹದ್ದೇ? ಮನುಷ್ಯನ ಆದಿಮ ಆಲಸ್ಯಕ್ಕೆ ದುರ್ಗತಿ ಕಾಣಿಸುವುದು ಕಾಗದದ ತುಂಡಿನ ಮೇಲಿನ ಯಾಂತ್ರಿಕ ವಾಕ್ಯಗಳಿಗೆ ಸಾಧ್ಯವೆ?”

“ಒಟ್ಟಾರೆ ಸರಳ ಜೀವನದ ಇಸ್ಲಾಮಿಗೂ ಭೋಗಿಗಳಾದ ಅವರಿಗೂ ಸಂಬಂಧವೇ ಇಲ್ಲ ಅನ್ನಬೇಕು. ಇಲ್ಲದಿದ್ದರೆ, ಅಷ್ಟೆಲ್ಲಾ ಸಂಪತ್ತಿದ್ದೂ ಅಮೆರಿಕದ ಎದುರು ನಾಯಿಯಂತೆ ಬದುಕಬೇಕಿತ್ತೇ ಅವರಿಗೆ.”

ಹೀಗೆ ಮಾತು ಒಂದರಿಂದ ಇನ್ನೊಂದಕ್ಕೆ ಜಿಗಿಯುತ್ತಿದ್ದಂತೆ ಅನ್ಯಮನಸ್ಕನಾಗುತ್ತಿದ್ದ ಪೊಡಿಮೋನುವಿಗೆ ಇದ್ದಕ್ಕಿದ್ದಂತೆ ತಾನೊಬ್ಬ ನಿರುದ್ಯೋಗಿ ಎಂಬ ವಾಸ್ತವ ಹೊಳೆದು ಖಿನ್ನನಾಗಿ ಅಲ್ಲಿಂದ ಕಾಲ್ಕೀಳುತ್ತಿದ್ದನು.

ಪೊಡಿಮೋನು ಮನೆಗೆ ಬರುತ್ತಿದ್ದಂತೆ ಅವನ ಅಮ್ಮ ಬೀಡಿ ಸೂಪನ್ನು ಮಡಿಲಲ್ಲಿಟ್ಟುಕೊಂಡೇ “ತನ್ನ ಮಗನೊಬ್ಬ ಪೋಲಿ ಅಲೆಯುತ್ತಿದ್ದಾನೆಂದೂ, ತಾನು ಸಾಯಲು ಬಿದ್ದಿರುವ ಮುದುಕಿ ಬೀಡಿ ಕಟ್ಟಿ ಮನೆಯ ಖರ್ಚುವೆಚ್ಚ ನೋಡಿಕೊಳ್ಳಬೇಕೆಂದೂ, ಅಕ್ಕಪಕ್ಕದ ಮನೆಯ ಹುಡುಗರೆಲ್ಲಾ ಚೆನ್ನಾಗಿ ದುಡಿದು ತಮ್ಮ ತಮ್ಮ ಮನೆಗಳನ್ನು ಬೆಲೆಬಾಳುವ ಅತ್ಯಮೂಲ್ಯ ವಸ್ತುಗಳಿಂದ ತುಂಬಿಸಿದ್ದಾರೆಂದೂ, drought-kelly-stewart-sieckಆದರೆ, ನಾವಿನ್ನೂ ಒಂದು ಹಿಡಿ ಅಕ್ಕಿಗಾಗಿ ಪರದಾಡುತ್ತಿದ್ದೇವೆಂದೂ, ಇದಕ್ಕೆಲ್ಲಾ ಪೊಡಿಮೋನುವಿನ ದುರ್ಬುದ್ಧಿಯೇ ಕಾರಣವೆಂದೂ, ತನ್ನ ಸೊಸೆ ಗಂಡನನ್ನು ಪೋಲಿ ಅಳೆಯ ಬಿಟ್ಟಿದ್ದಾಳೆಂದೂ” ಹಳಿಯುತ್ತಿದ್ದರು. ಇದರಿಂದ ಸಕೀನಾಳಿಗೆ ಸಿಟ್ಟು ಬರುತಿತ್ತು. ಆಕೆ, ಗಂಡನ ಮೇಲೆ ಹರಿಹಾಯುತ್ತಿದ್ದಳು. “ನನ್ನ ಮಾವ ನನ್ನನ್ನು ಮದುವೆ ಮಾಡಿಕೊಡುವಂತೆ ಕೇಳಿದರೂ, ಅಪ್ಪ ಸೌದಿಯಲ್ಲಿ ದುಡಿಯುತ್ತಿದ್ದಾನೆಂದು ನಿಮಗೆ ನನ್ನನ್ನು ಮದುವೆ ಮಾಡಿಕೊಟ್ಟರೆಂದೂ, ನನ್ನ ದುರ್ವಿಧಿ ನಾನು ಈ ನರಕದಲ್ಲಿ ಬದುಕಬೇಕಾಯಿತೆಂದೂ, ಮಾವನೊಂದಿಗಿದ್ದಿದ್ದರೆ ಸುಖವಾಗಿ ರಾಣಿಯಂತೆ ಬದುಕುತ್ತಿದ್ದೆನೆಂದೂ” ಪೊಡಿಮೋನುವಿನ ಮನಶ್ಶಾಂತಿಯನ್ನೇ ಕೆಡಿಸುತ್ತಿದ್ದಳು. ಮನೆಯೊಳಗಿನ ಕಿರಿಕಿರಿ ತಾಳಲಾರದೆ ಪೊಡಿಮೋನು ಕೆಲಸಕ್ಕಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದನು.

ಆದರೆ, ದೊಡ್ಡ ಸಂಬಳದ ಕೆಲಸಕ್ಕೆ ಈ ಊರಲ್ಲಿ ಕಾಯುವುದು ವ್ಯರ್ಥವೆಂದು ಬಹಳ ಬೇಗನೆ ಅರಿತ ಪೊಡಿಮೋನು ಮೇಸ್ತ್ರಿ ಮೋನಾಕರ ಜೊತೆ ಕೈಯಾಳಾಗಿ ಕೂಲಿ ಕೆಲಸಕ್ಕೆ ಹೋಗತೊಡಗಿದನು. ಅದರಿಂದ ಸಿಗುತ್ತಿದ್ದ ದಿನಗೂಲಿ ಇನ್ನೂರೋ, ಮುನ್ನೂರೋ ರೂ.ವನ್ನು ತಂದು ತಾಯಿಯ ಸಿಡಿಮಿಡಿಯನ್ನೂ ಗಮನಿಸದವನಂತೆ ಹೆಂಡತಿಯ ಕೈಗೊಪ್ಪಿಸುತ್ತಿದ್ದನು. ಆದರೆ, ಈ ಕೂಲಿ ಕೆಲಸ ಶಾಶ್ವತವೇನಾಗಿರಲಿಲ್ಲ. ಒಂದೆರಡು ವಾರ ಕೆಲಸವಿದ್ದರೆ ಇನ್ನೆರಡು ವಾರ ಆತ ಕೆಲಸವಿಲ್ಲದೆ ಕಾಲಯಾಪನೆ ನಡೆಸುತ್ತಿದ್ದನು. ಕೆಲಸ ಸಿಕ್ಕರೆ ಭಾಗ್ಯ ಎಂಬಂತೆ ಕಾಯುತ್ತಾ ಪೊಡಿಮೋನು ಕೆಲಸವಿಲ್ಲದ ದಿನ ಬಸ್ ನಿಲ್ದಾಣದಲ್ಲಿ ಕೂತು ಕನಸು ಕಾಣುತ್ತಾ ಕಳೆಯುತ್ತಿದ್ದನು. ಅದು ಅವನಿಗೆ ಒಂದು ಅಭ್ಯಾಸವೇ ಆಗಿ ಹೋಗಿ, ತನ್ನ ಅರೆಹೊಟ್ಟೆಯ ಬದುಕನ್ನು ಆತ ಸಹಜವಾಗಿಯೇ ಸ್ವೀಕರಿಸತೊಡಗಿದ್ದನು. ಸೌದಿಯ ದೊಡ್ಡ ಸಂಬಳದ ಕನಸು ಈಗ ಅವನಿಗೆ ಬೀಳುತ್ತಲೂ ಇರಲಿಲ್ಲ. ಅಂತಹ ಕನಸಿನಿಂದ ನೆಮ್ಮದಿ ಹಾಳಾಗುತ್ತದೆಯೇ ವಿನಾ ಬೇರೇನೂ ಉಪಯೋಗವಿಲ್ಲವೆಂದು ಅವನು ತಿಳಿದಿದ್ದ. ಆದ್ದರಿಂದ ಈಗೀಗ ಅವನಿಗೆ ತನ್ನ ಅರೆಹೊಟ್ಟೆಯ ಬದುಕಿನಿಂದ ಹೆಚ್ಚಿನ ಬೇಸರವೇನೂ ಆಗುತ್ತಿರಲಿಲ್ಲ.

ಆದರೆ, ಕಳೆದ ಒಂದು ವಾರದಿಂದ ತನ್ನ ಹೆಂಡತಿ ಉಡುಗೊರೆಗಾಗಿ ಪಟ್ಟು ಹಿಡಿದು ಕೂತಿರುವುದು ಕಂಡು ಅವನು ರೋಸಿ ಹೋಗಿದ್ದ. ಅಷ್ಟಕ್ಕೂ ಉಡುಗೊರೆಗೂ ಪ್ರೀತಿಗೂ ಏನೂ ಸಂಬಂಧ? ಎಂದು ಪೊಡಿಮೋನು ತಲೆಚಿಟ್ಟು ಹಿಡಿಯುವವರೆಗೂ ಯೋಚಿಸಿದ. ಆದರೆ, ಆತನಿಗೆ ಏನೂ ಹೊಳೆಯಲಿಲ್ಲ. “ಇವಳು ನಿಜವಾಗಿಯೂ ಉಡುಗೊರೆಗಾಗಿ ಪಟ್ಟು ಹಿಡಿಯುತ್ತಿದ್ದಾಳೋ ಅಥವಾ ತನ್ನ ಹಲ್ಕಿರಿಯುವ ಚಟದಿಂದ ರೋಸಿ ಹೀಗಾಡುತ್ತಿದ್ದಾಳೋ” ಎಂದು ಪೊಡಿಮೋನುವಿಗೆ ಶಂಕೆಯೂ ಆಯಿತು. ಈ ಶಂಕೆಯೊಂದಿಗೆ ಅವನಿಗೆ ತನ್ನ ಅಪ್ಪನ ಮೇಲಿನ ಲಾಗಾಯ್ತಿನ ಸಿಟ್ಟು ಬಲವಾದವು. ಅಪ್ಪನೆಂದರೆ ಅವನಿಗೆ ಮೊದಲೇ ಸಿಟ್ಟಿತ್ತು. ಅಪ್ಪ ತೀರಿ ಹೋದ ದಿನ ಅವನ ಕಣ್ಣಲ್ಲಿ ಒಂದು ಹನಿ ನೀರೂ ಉದುರಿರಲಿಲ್ಲ. ಯಾಕೆ ತನಗೆ ಅಪ್ಪನ ಮೇಲೆ ಇಷ್ಟೊಂದು ಸಿಟ್ಟೋ? ಎಂದು ಅವನು ಎಷ್ಟೋ ಸಲ ಯೋಚಿಸಿದ್ದರೂ ಸರಿಯಾದ ಕಾರಣ ಹೊಳೆದಿರಲಿಲ್ಲ. ಬಹುಷಃ ಅಪ್ಪ ತನ್ನ ಹಲ್ಕಿರಿಯುವ ಚಟವನ್ನು ತನಗೆ ದಾಟಿಸಿ ಹೋದರೆಂಬ ಕಾರಣಕ್ಕೆ ತನಗೆ ಸಿಟ್ಟಿರಬೇಕೆಂದು ಅವನಿಗೆ ಈ ಕ್ಷಣ ಅನಿಸಿತು. ಹಾಗೆ ಅನಿಸುವಾಗ ಅವನಿಗೆ ತನ್ನ ಅಪ್ಪ ಕಂಟ್ರಾಕ್ಟರ್ ಮೋನಾಕರ ಮನೆಗೆ ಸಂಬಳಕ್ಕಾಗಿ ಹಲ್ಕಿರಿಯುತ್ತಾ ಹೋಗುತ್ತಿದ್ದುದೂ, ಮೋನಾಕ ಸಂಬಳ ಕೊಡದೆ ಸತಾಯಿಸಿ ಅಟ್ಟಿದಾಗಲೂ ಹಲ್ಕಿರಿಯುತ್ತಲೇ ಹಿಂದಿರುಗುತ್ತಿದ್ದುದೂ ಅವನ ನೆನಪಿಗೆ ಬಂದವು. ಪ್ರತಿ ತಿಂಗಳ ಒಂದನೇ ತಾರೀಖಿನಂದು ಹಲ್ಕಿರಿಯುತ್ತಾ ಸಾಗುತ್ತಿದ್ದ ಈ ಹಲ್ಕಟ್ ಯಾನವೂ ಅವನಲ್ಲಿ ವಿಪರೀತ ಕೀಳರಿಮೆಯನ್ನು ಹುಟ್ಟಿಸಿದ್ದವು. ಆ ದಿನ ಹಲ್ಕಿರಿಯುತ್ತಾ ಹೋಗುತ್ತಿದ್ದ ಅಪ್ಪನನ್ನು ಕಂಡು ಶಾಲೆಯ ಕಂಡಿಯ ಪಕ್ಕ ಗುಂಪುಗೂಡಿ ನಿಂತು ಗೆಳೆಯರು ಗೇಲಿ ಮಾಡುತ್ತಿದ್ದರು. ಸರಾಗ ರಕ್ತ ಚಲನೆ ಇಲ್ಲದ್ದರಿಂದಲೋ ಏನೋ? ಬಿಳುಪಾಗಿದ್ದ ಅಪ್ಪನ ಒಂದು ತುಟಿ ಆಕಾಶದಲ್ಲೂ, ಮತ್ತೊಂದು ಭೂಮಿಯಲ್ಲೂ ಒಂದಕ್ಕೊಂದು ಸಂಬಂಧವಿಲ್ಲದಂತೆ ನಿಶ್ಚಲವಾಗಿರುತ್ತಿದ್ದವು. ನಡುವೆ ಶುಭಾ ಬೀಡಿಯ ಘಾಟು ಹೊಗೆಯಿಂದ ಕರ್ರಗಾಗಿ ಅಡ್ಡಾದಿಡ್ಡಿ ಬೆಳೆದ ಆ ಹಲ್ಲುಗಳು! ಅವುಗಳ ನೆನಪು ಅವನಲ್ಲಿ ಈಗಲೂ ಭಯ ಹುಟ್ಟಿಸುತ್ತವೆ. ಅವುಗಳು ಭೂಮಿ ಆಕಾಶಗಳ ನಡುವೆ ತ್ರಿಶಂಕುವಿನಂತೆ ಜೋತು ಬಿದ್ದಿರುವ ತನ್ನ ಇಂದಿನ ಬದುಕಿನ ಭಯಾನಕ ರೂಪಕದಂತೆ ಅವನಿಗೆ ಕಾಣಿಸುತ್ತಿದ್ದರಿಂದಲೋ ಏನೋ? ಅವನು ಅವುಗಳಿಂದ ಕಳಚಿಕೊಳ್ಳಲು ಪ್ರಯತ್ನಿಸುತ್ತಿದ್ದನು.

ಕೆಲವು ಸಲ ಪೊಡಿಮೋನು ಒತ್ತಾಯಪೂರ್ವಕವಾಗಿ ಹಲ್ಕಿರಿಯುವ ಚಟದಿಂದ ದೂರವಿರಲು ಪ್ರಯತ್ನಿಸುತ್ತಿದ್ದುದೂ ಉಂಟು. ಆದರೆ, ವಿಚಿತ್ರವೆಂಬಂತೆ ಪೊಡಿಮೋನುವಿನ ಈ ಒತ್ತಾಯಪೂರ್ವಕ ಪ್ರಯತ್ನವೇ ಒಂದು ಚಟವಾಗಿ ಅವನ ವ್ಯಕ್ತಿತ್ವದಲ್ಲೇ ಒಂದು ಗಂಭೀರ ಬದಲಾವಣೆಯಾದವು. ಅವನು ಸದಾ ಸಿಟ್ಟು ಬಂದವನಂತೆ ಮುಖ ಊದಿಸಿಕೊಂಡೇ ಇರ ತೊಡಗಿದನು. ಆದ್ದರಿಂದ ಹೆಚ್ಚಾಗಿ ಮೌನಿಯಾಗಿರುತ್ತಿದ್ದನು. ಇದರ ಹೊರತಾಗಿಯೂ ಜನರೊಂದಿಗೆ ಸಹಜ ಮಾತುಕತೆಯ ಸಂದರ್ಭದಲ್ಲಿ ಅವನು ಅವನಿಗರಿವಿಲ್ಲದಂತೆಯೇ ಹಲ್ಕಿರಿಯುತ್ತಿದ್ದನು. ಉದಾಹರಣೆಗೆ ಯಾರಾದರು ತನ್ನನ್ನೋ ಅಥವಾ ತನ್ನ ತಂದೆಯನ್ನೋ ತಾಯಿಯನ್ನೋ ನಿಂದಿಸಿದಾಗ ಪೊಡಿಮೋನು ಎದುರು ನಿಂತವರಿಗೆ ಸಂಪೂರ್ಣ ವಶವಾದವನಂತೆ ಏನನ್ನೂ ಹೇಳಲಾಗದೆ ಸುಮ್ಮನೆ ಹಲ್ಕಿರಿಯುತ್ತಾ ನಿಂತು ಬಿಡುತ್ತಿದ್ದನು. ನಂತರ ಇದು ಅವನನ್ನು ‘ತಾನು ಅವನ ಮಾತಿಗೆ ಹಾಗೆ ಹಲ್ಕಿರಿಯ ಬಾರದಿತ್ತೆಂದೂ, ಸಮಾ ಎರಡು ಹಿಂದಿರುಗಿ ಕೊಡಬೇಕಿತ್ತೆಂದೂ’ ಬಾಧಿಸುತ್ತಿದ್ದವು. ಇಂತಹ ಯೋಚನೆಗಳು ಅವನಲ್ಲಿ ಇನ್ನಿಲ್ಲದ ಕೀಳರಿಮೆ ಹುಟ್ಟಿಸುತ್ತಿದ್ದವು. ಸೌದಿಯಿಂದ ಕೆಲಸ ಕಳೆದುಕೊಂಡು ಬಂದ ಮೇಲಂತೂ ಅವನ ಈ ರೋಗ ಹೆಚ್ಚುತ್ತಾ ಹೋದವು. ಈ ಊರು ತನ್ನನ್ನು ವಿನಾಕಾರಣ ಹಲ್ಕಿರಿಯುವಂತೆ ಮಾಡುತ್ತಿದೆ ಎಂದೂ, ಆದ್ದರಿಂದ ಇದೊಂದು ದರಿದ್ರ ಊರೆಂದೂ ಅವನು ಕೆಲವೊಮ್ಮೆ ಊರಿನ ಮೇಲೆ ರೋಷ ಕಾರುತ್ತಿದ್ದನು. ಬೊಂಬಾಯಿಗೋ, ಬೆಂಗಳೂರಿಗೋ ಓಡಿ ಬಿಡಬೇಕೆಂದೂ ಅವನಿಗೆ ಅನಿಸುತ್ತಿದ್ದವು. ಈ ಅನಿಸಿಕೆ ತೀವ್ರವಾದಂತೆ ಊರುಬಿಡಲೊಲ್ಲದ ಅವನ ಮನಸ್ಸು ಸೂಕ್ಷ್ಮವಾಗಿ, ಊರಿನಲ್ಲಿ ಎಲ್ಲಿ ನೋಡಿದರೂ ಅವನಿಗೆ ಹಲ್ಕಿರಿಯುವವರೇ ಕಾಣಿಸುತ್ತಿದ್ದರು. ಇದರಿಂದ ಅವನಿಗೆ ಗೊಂದಲವಾಗುತ್ತಿದ್ದರೂ, “ಇಡೀ ಊರೇ ಹಲ್ಕಿರಿಯುವ ರೋಗ ಹತ್ತಿಸಿಕೊಂಡಿರುವಾಗ ಯಕಃಶ್ಚಿತ್ ನಾನೇನು ತಾನೆ ಮಾಡಬಲ್ಲೆ?” ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದನು.

ಆದ್ದರಿಂದ ಪೊಡಿಮೋನು, ಸಕೀನಾ ತನ್ನ ಮೇಲೆ ಕೋಪಿಸಿಕೊಂಡಿರುವುದು ತನ್ನ ಈ ಹಲ್ಕಿರಿಯುವ ಚಟದಿಂದ ಬೇಸತ್ತೇ ವಿನಾ ಉಡುಗೊರೆಗಾಗಿಯಲ್ಲ ಎಂದು ಗಟ್ಟಿಯಾಗಿ ನಂಬಿದನು. ಈ ಗಟ್ಟಿ ನಂಬಿಕೆಯ ಜೊತೆಗೆ ಹಾಗಾದರೆ ಈ ಊರಿನ ಎಲ್ಲಾ ಹೆಂಗಸರೂ ತಮ್ಮ ಗಂಡಂದಿರ ಜೊತೆ ಮುನಿಸಿಕೊಂಡಿರಬೇಕಲ್ಲ? ಎಂಬ ಪ್ರಶ್ನೆಯೂ ಅವನನ್ನು ಕಾಡಿದವು. ಆ ಪ್ರಶ್ನೆಯ ಬಿಸಿಯಿಂದ ತಪ್ಪಿಸಿಕೊಳ್ಳಲೆಂಬಂತೆ ಅವನು ‘ಗಂಡಂದಿರ ಜೊತೆಗೆ ಮುನಿಸಿಕೊಳ್ಳುವುದು ಹೆಂಗಸರಿಗೆ ಒಂದು ಪಾರಂಪರಿಕ ರೋಗ’ ಎಂದುಕೊಂಡನು.

ಆದರೂ, ಅವನಿಗೆ ತನ್ನ ಹೆಂಡತಿಗೆ ಏನಾದರು ಉಡುಗೊರೆ ಕೊಟ್ಟು ರಮಿಸಬೇಕೆಂದೂ, ಈ ಒಂದು ದಿನ ಅವಳು ತನ್ನೊಂದಿಗೆ ಮಾತನಾಡಿದರೆ ತನ್ನ ಇದುವರೆಗಿನ ಸಂಕಷ್ಟವೆಲ್ಲಾ ಕಳೆದು ಹೋಗುತ್ತದೆಂದೂ ತೀವ್ರವಾಗಿ ಅನಿಸಿದ್ದಂತೂ ಸುಳ್ಳಲ್ಲ. ಹಾಗೆ ಅನಿಸುತ್ತಿದ್ದಂತೆ, “ಉಡುಗೊರೆಗೂ ಪ್ರೀತಿಗೂ ಸಂಬಂಧವಿದೆ. ಅಂತರಂಗದ ಅಮೂರ್ತ ಪ್ರೀತಿಯನ್ನು ಭೌತ ವಸ್ತುವಿನ ಮೂಲಕ ವ್ಯಕ್ತಪಡಿಸುವುದು ಅಪ್ಯಾಯಮಾನವಾದುದೆಂದೂ, ಅದರಷ್ಟು ರೋಮಾಂಚನಕಾರಿಯಾದುದು ಬೇರೆ ಇಲ್ಲ”ವೆಂದು ಪೊಡಿಮೋನು ಮೊದಲ ಬಾರಿ ಅರ್ಥಮಾಡಿಕೊಂಡನು. ಆದ್ದರಿಂದ ತನ್ನ ಹೆಂಡತಿ ಉಡುಗೊರೆಗಾಗಿ ಒಂದು ವಾರಗಳ ಕಾಲ ಸಿಟ್ಟು ಮಾಡಿಕೊಂಡು ಮಾತು ಬಿಟ್ಟಿರುವುದು ಅಸಹಜವೇನಲ್ಲ ಎನಿಸಿತು ಅವನಿಗೆ. “ಪ್ರೀತಿಗಾಗಿ ಅವಳು ಇಷ್ಟೂ ಮಾಡದಿದ್ದರೆ ಹೇಗೆ? ಅವಳೂ ಮನುಷ್ಯಳೇ ತಾನೆ” ಎಂದು ಯೋಚಿಸುತ್ತಲೇ ಪೊಡಿಮೋನುವಿಗೆ ಅಂದು ಹೆಂಡತಿಯ ಮೇಲೆ ಎಂದಿಲ್ಲದ ಪ್ರೀತಿಯುಕ್ಕಿತು. ಆದರೆ, ಅತ್ಯಂತ ದುಃಖದ ಸಂಗತಿ ಎಂದರೆ, ಆ ದಿನ ಅವನ ಕಿಸೆಯಲ್ಲಿ ಐದು ಪೈಸೆಯೂ ಇರಲಿಲ್ಲ.

ಪೊಡಿಮೋನು ಪರಿಚಯವಿದ್ದವರ ಜೊತೆಗೆಲ್ಲಾ ತನಗೆ ಅರ್ಜೆಂಟಾಗಿ ಐನೂರು ರೂ.ಬೇಕೆಂದೂ, ತಾನೂ ಒಂದೆರಡು ವಾರದಲ್ಲಿ ಹಿಂದಿರುಗಿಸುತ್ತೇನೆಂದೂ ಅಂಗಲಾಚಿದನು. ಆದರೆ, ಅವನಿಗೆ ಯಾರಿಂದಲೂ ಹಣ ಸಿಗಲಿಲ್ಲ. ಅವನ ಗೆಳೆಯರಲ್ಲಿ ಹೆಚ್ಚಿನವರು ಪೊಡಿಮೋನುವಿಗೆ ಹಣ ಕೊಡುವ ಸ್ಥಿತಿಯಲ್ಲೇ ಇರಲಿಲ್ಲ. ಆದರೆ, ಕೊಂಚ ಸ್ಥಿತಿವಂತರಾಗಿದ್ದವರು, ಕೆಲಸವಿಲ್ಲದೆ ವಾರದ ಮೂರು ದಿನ ಪೋಲಿ ಅಳೆವ ಪೊಡಿಮೋನು ಹಣ ಹಿಂದಿರುಗಿಸಲಾರನೆಂದು ಭಯದಿಂದ ಕೊಡಲೊಪ್ಪಲಿಲ್ಲ. ಕೊನೆಯ ಪ್ರಯತ್ನವೆಂಬಂತೆ ಪೊಡಿಮೋನು ತನ್ನ ಮನೆಗೆ ಹಿಂದಿರುಗಿ ಅಮ್ಮನೊಂದಿಗೆ ಎಂದಿಲ್ಲದ ಪ್ರೀತಿ ವಾತ್ಸಲ್ಯವನ್ನು ನಟಿಸಿ ಕೇಳಿದನು. ಐಶಮ್ಮಾದರಿಗೆ ಮಗನ ಮೇಲೆ ಕನಿಕರart-2 ಮೂಡಿದರೂ, ಬಹಳ ಪ್ರಯತ್ನಪೂರ್ವಕವಾಗಿ “ತನ್ನ ಬಳಿ ಐದು ಪೈಸೆಯೂ ಇಲ್ಲ, ಇದ್ದರೂ ಕೊಡುವುದಿಲ್ಲ, ಮದುವೆಯಾದ ನಂತರ ನೀನು ಎಂದಾದರೂ ನಿನಗಿರಲಿ ಇದೋ ಅಮ್ಮ ಎಂದು ಒಂದು ಪೈಸೆಯಾದರೂ ಕೊಟ್ಟಿದ್ದಿದೆಯಾ? ಈಗ ನಾನೇಕೆ ನಿನಗೆ ಹಣ ಕೊಡಲಿ?” ಎಂದು ಖಡಾಖಂಡಿತವಾಗಿ ಹೇಳಿದರು. ಪೊಡಿಮೋನು ಒಂದು ಅಕ್ಷರವೂ ಮಾತನಾಡದೆ ನಿರಾಶಿತನಾಗಿ ಅಲ್ಲಿಂದ ಮರಳಿದ.

ಆ ರಾತ್ರಿಯಿಡೀ ಪೊಡಿಮೋನು ಮಲಗಲಿಲ್ಲ. ತನ್ನ ಅಮ್ಮನೊಂದಿಗೆ ಆಕೆಯ ತಮ್ಮಂದಿರು ಅಪರೂಪಕ್ಕೊಮ್ಮೆ ಕೊಡುತ್ತಿದ್ದ ಹಣ ಇದೆ ಎಂದೂ ಅದನ್ನು ಹೇಗಾದರು ಮಾಡಿ ಕದಿಯಬೇಕೆಂದು ಅರೆಗಣ್ಣಲ್ಲೇ ಯೋಚಿಸುತ್ತಿದ್ದನು. ಮಧ್ಯರಾತ್ರಿಯಾಗುತ್ತಿದ್ದಂತೆ ಅವನ ನಿರ್ಧಾರ ಕಠಿಣವಾಗಿ ಎದ್ದು ಕೂತ. ಅಮ್ಮ ಹಣವನ್ನು ಎಲ್ಲಿ ಅಡಗಿಸಿಡುತ್ತಿದ್ದರೆಂದು ಪೊಡಿಮೋನುವಿಗೆ ತಿಳಿದಿತ್ತು. ಬಾಯಿಕತ್ತರಿಸಿದ ಆ ದೊಡ್ಡ ಕ್ಯಾನಿನೊಳಗಡೆ ಕತ್ತಿನ ಮಟ್ಟ ಅಕ್ಕಿಯನ್ನು ತುಂಬಿಸಿ, ನಂತರ ಆಳದವರೆಗೂ ಗುಳಿ ತೋಡಿ ಅಮ್ಮ ಅಲ್ಲಿ ತನ್ನ ಹಣದ ಪರ್ಸನ್ನು ಇಟ್ಟು ಅಕ್ಕಿಯಿಂದ ಮುಚ್ಚಿ ಹಾಕುತ್ತಿದ್ದರೆಂಬುದು ಪೊಡಿಮೋನು ಅದು ಹೇಗೋ ಕಂಡು ಹಿಡಿದಿದ್ದ. ಆ ರಾತ್ರಿ ಪೊಡಿಮೋನು ಕಳ್ಳನಂತೆ ಎದ್ದು, ಕ್ಯಾನನ್ನು ಒಕ್ಕಿ, ಪರ್ಸ್ ತೆಗೆದು ಎಣಿಸುತ್ತಾನೆ, ಮೂರು ಸಾವಿರಕ್ಕೂ ಮಿಕ್ಕಿ ಹಣವಿದೆ! ಪೊಡಿಮೋನುವಿಗೆ ಈ ಅಮ್ಮ ಎಂಥಾ ಖಂಜೂಸು ಎನಿಸಿತು. ಆದರೂ, ಆತ ತನಗೆ ಬೇಕಾಗಿರುವ ಐನೂರು ರೂ.ಮಾತ್ರ ತೆಗೆದು ಉಳಿದದ್ದು ಹಾಗೆಯೇ ಅಕ್ಕಿಯ ನಡುವೆ ಹೂತಿಟ್ಟು ಹಾಸಿಗೆಗೆ ಮರಳಿದನು.

ಮರುದಿನ ಪೊಡಿಮೋನು ಬಸ್‌ನಿಲ್ದಾಣದಲ್ಲಿ ಕೂತು ಸಕೀನಾಳಿಗೆ ಏನು ಉಡುಗೊರೆ ಕೊಡುವುದೆಂದು ಸಾಕಷ್ಟು ಬಾರಿ ಯೋಚಿಸಿದ. ಸೀರೆ? ಚೂಡಿದಾರ? ಚಿನ್ನ? ಇತ್ಯಾದಿ ಯೋಚನೆಗಳು ಬಂದರೂ ಈ ಐನೂರು ರೂ.ಗೆ ಅವೆಲ್ಲಾ ಸಿಗುವುದಿಲ್ಲವೆಂದು ಅವನಿಗೆ ತಿಳಿದಿತ್ತು. ಆದ್ದರಿಂದ ಅವನು ಮತ್ತೂ ಮತ್ತೂ ಯೋಚಿಸುತ್ತಲೇ ಕೂತ. ಇದ್ದಕ್ಕಿದ್ದಂತೆ ಅವನಿಗೆ ಎರಡು ಜೊತೆ ಚಪ್ಪಲಿ ತೆಗೆದುಕೊಟ್ಟರೆ ಹೇಗೆ ಎನಿಸಿತು. ನಾನೂರಕ್ಕೆ ಒಂದು ಜೊತೆ ಚಪ್ಪಲಿಯಂತೂ ಸಿಗುತ್ತದೆ, ನೂರು ರೂ.ವನ್ನು ಹೇಗೂ ತನ್ನ ಬಳಿ ಉಳಿಸಿಕೊಳ್ಳಬಹುದು ಎಂಬ ಯೋಚನೆ ಬಂದೊಡನೇ ಅವನು ಖುಷಿಯಿಂದ ಎದ್ದು ನಿಂತನು.

ಆದರೆ, ಅಷ್ಟರಲ್ಲಿ ಅವನಿಗೆ ತನ್ನ ಹಿಂದೆ ಯಾರೋ ಏನನ್ನೋ ಎಳೆದಂತಾಗಿ ಗಾಬರಿಯಾದವು. ದೂರದಲ್ಲಿ ಒಬ್ಬ ಹುಡುಗ ಆವೇಗದಿಂದ ಓಡುತ್ತಿರುವುದು ಕಾಣಿಸಿತು. ಪೊಡಿಮೋನು ಅನುಮಾನದಿಂದ ತನ್ನ ಕಿಸೆಯತ್ತ ನೋಡಿದನು. ಅರೆ..! ಅಲ್ಲಿದ್ದ ಐನೂರು ರೂ.ಮಂಗಮಾಯ! ಪೊಡಿಮೋನುವಿಗೆ ಒಂದು ಕ್ಷಣ ಏನೂ ಅರ್ಥವಾಗಲಿಲ್ಲ. ಗರಬಡಿದು ನಿಂತುಬಿಟ್ಟನು. ನಂತರ ಇದ್ದಕ್ಕಿದ್ದಂತೆ ಎಚ್ಚರಗೊಂಡವನಂತೆ ‘ಕಳ್ಳ, ಕಳ್ಳ….’ ಎಂದು ಬೊಬ್ಬೆ ಹೊಡೆದು ಸುತ್ತಲ ಜನರನ್ನು ಕರೆದನು. ಜನರೆಲ್ಲಾ ಗುಂಪು ಗೂಡಿದರು. ಕೆಲವು ಯುವಕರು ಓಡುತ್ತಿದ್ದ ಹುಡುಗನ ಬೆನ್ನಟ್ಟಿ ಹಿಡಿದು ತಂದರು. ಇನ್ನೂ ಮೀಸೆ ಮೂಡದ ಹದಿನೈದು, ಹದಿನಾರರ ಮಾಸಿದ ಬಟ್ಟೆಯ, ತುಂಡು ಚಪ್ಪಲಿಯ ಹುಡುಗ! ಏದುಸಿರು ಬಿಡುತ್ತಿದ್ದ. ಕೈಕಾಲು ಭೀತಿಯಿಂದ ನಡುಗುತ್ತಿದ್ದವು. ಯುವಕರು ಆತನ ಜುಟ್ಟು ಹಿಡಿದು ತಾರಾಮಾರ ಬಡಿದರು. ಯಾರೋ ಕೆಲವು ಹಿರಿಯರು ಸಾಕು ಎಂದಾಗ ನಿಲ್ಲಿಸಿ ‘ತೆಗಿಯೋ ಹಣ’ ಎಂದು ದಬಾಯಿಸಿದರು. ಹುಡುಗ ಕಣ್ಣೀರು ಹಾಕಿದ. ಪೊಡಿಮೋನುವಿಗೆ ವಿಪರೀತ ಸಿಟ್ಟು ಬಂತು, ಮುನ್ನುಗ್ಗಿ ಆ ಹುಡುಗನ ಕಪಾಲಕ್ಕೊಂದು ಏಟು ಕೊಟ್ಟ. ಯುವಕರು, “ನೀವು ಅತ್ತ ಸರಿಯಿರಿ ನಾವು ನೋಡಿಕೊಳ್ಳುತ್ತೇವೆ” ಎಂದು ಪೊಡಿಮೋನನ್ನು ದೂರ ತಳ್ಳಿದರು. ನಂತರ ಹುಡುಗನತ್ತ ತಿರುಗಿ, “ಹಣ ತೆಗಿಯಿತಿಯೋ ಇಲ್ಲವೋ ಬೋಳಿ…..” artಎಂದು ಕೈಯೆತ್ತಿದಾಗ ಹುಡುಗ ಭಯದಿಂದ ತತ್ತರಿಸಿ ಹರಿದ ಪ್ಯಾಂಟಿನ ಕಿಸೆಯಿಂದ ಐನೂರು ರೂ.ತೆಗೆದು ಅವರ ಮುಂದಿಟ್ಟನು. ಯುವಕರು ಅದನ್ನು ಪೊಡಿಮೋನುವಿಗೆ ದಾಟಿಸಿದರು. ಪೊಡಿಮೋನು ಹಣವನ್ನು ಎಣಿಸಿ, ಒಂದು ಕ್ಷಣ ಯೋಚಿಸಿ ಒಂದು ಸುಳ್ಳು ಹೇಳಬೇಕೆಂದು ತೀರ್ಮಾನಿಸಿದನು. ಅವನಿಗೆ ಇನ್ನಷ್ಟು ಹಣ ಹೊಂದಿಸಬೇಕೆಂಬ ಆಸೆಯೇನೂ ಇರಲಿಲ್ಲ. ಆದರೆ, ಗತಿಗೆಟ್ಟ ತನ್ನಿಂದ ಹಣ ಕಸಿದುಕೊಂಡ ಈ ಹುಡುಗನಿಗೆ ಸರಿಯಾದ ಪಾಠ ಕಲಿಸಬೇಕೆಂಬ ಆಸೆಯಾಗಿ, “ಇದು ಬರೀ ಐನೂರು ಇದೆಯಲ್ಲಾ, ಇನ್ನೂ ಐನೂರು ಆಗಬೇಕಿತಲ್ಲಾ…!” ಎಂದು ಬಾಂಬ್ ಸಿಡಿಸಿದನು. ಈಗ ಹುಡುಗ ನಿಜಕ್ಕೂ ಗಾಬರಿ ಬಿದ್ದ. ಜನರ ದೃಷ್ಟಿ ತನ್ನತ್ತ ಬಿದ್ದೊಡನೇ, “ಇಲ್ಲ ಇಲ್ಲ, ಸುಳ್ಳು” ಎಂದೇನೋ ಗೋಗರೆದನು. ಆತನ ದನಿ ಗೊಗ್ಗರು ಗೊಗ್ಗರಾಗಿತ್ತು. ಯುವಕರು ಅವನ ದೇಹವನ್ನಿಡೀ ಒಂದೊಂದು ಕೈಗೆ ಹರಿದು ಹಂಚಿ ಜಾಲಾಡಿದರು. ಅಲ್ಲಿ ನಯಾಪೈಸೆಯೂ ದೊರೆಯದಾಗ ಅನುಮಾನದಿಂದ ಪೊಡಿಮೋನುವಿನತ್ತ ದುರುಗುಟ್ಟಿದರು. ಪೊಡಿಮೋನುವಿನ ಎದೆ ಧಸಕ್ಕೆಂದಿತು. ಆತ ತಾನು ಹೇಳುತ್ತಿರುವುದು ನಿಜವೆಂದ. ಆದರೆ, ಅಲ್ಲಿ ಅವನು ಸಾಲ ಕೇಳಿದ ಕೆಲವರು ಇದ್ದದ್ದರಿಂದ ಅವರು ಅವನನ್ನು ಇನ್ನಷ್ಟು ಅನುಮಾನಿಸಿ ನೋಡಿದರು. ನಿನ್ನೆ ಐನೂರು ರೂ. ಸಾಲ ಕೇಳಿದವನ ಬಳಿ ಇಂದು ಸಾವಿರ ರೂ. ಹೇಗೆ ಬಂತೆಂದು ತಲೆಕೆಡಿಸಿಕೊಂಡರು.

ದೂರದಲ್ಲಿ ಪೊಡಿಮೋನುವಿನ ತಾಯಿ ಓಡೋಡಿ ಬರುತ್ತಿದ್ದಳು. ಯಾರೋ ಒಬ್ಬ ಅತ್ತ ತಿರುಗಿದವನು ಎಲ್ಲರಿಗೂ ಹೇಳಿದ. ಎಲ್ಲರೂ ಅತ್ತ ತಿರುಗಿದರು. ಆಕೆ ಒಂದು ರೀತಿಯ ಆವೇಶದಿಂದಿದ್ದಳು. ಸಿಟ್ಟಿನಿಂದ ಬುಸುಗುಡುತ್ತಿದ್ದಳು. ಜನರ ಗುಂಪಿನ ನಡುವೆ ಬಂದವಳೇ ಸುತ್ತಲ ಜನರಿಗೆ ಮುಖಮಾಡಿ ನಿಂತು ಏದುಸಿರು ಬಿಡುತ್ತಾ, “ಈತನನ್ನು ನಂಬಬೇಡಿ, ಈ ಹಂಕು ತಾನು ಸತ್ತ ಮೇಲೆ ಸಮಾಧಿ ಕಟ್ಟುವುದಕ್ಕಾಗಿ ಕೂಡಿಟ್ಟಿದ್ದ ಹಣದಿಂದ ಐನೂರು ರೂ. ಕದ್ದಿರುವುದಲ್ಲದೆ, ಈಗ ಬೀದಿಯಲ್ಲಿ ನಿಂತು ತನ್ನ ಮತ್ತು ತನ್ನ ಕುಟುಂಬದ ಮಾನ ಮರ್ಯಾದೆ ಹರಾಜು ಹಾಕುತ್ತಿದ್ದಾನೆ’ ಎಂದು ಕೂಗಿದಳು. ಪೊಡಿಮೋನು ಅವಮಾನ ತಾಳಲಾರದೆ “ಸುಳ್ಳು ಸುಳ್ಳು..” ಎಂದು ಕಿರುಚಿದ. ಆದರೆ, ಯಾರೂ ಆತನನ್ನು ನಂಬಲಿಲ್ಲ. ಪೊಡಿಮೋನುವಿಗೆ ಅಳು ಬಂದವು. ಆತನ ನಿಸ್ತೇಜ ಕಣ್ಣಿನಿಂದ ಬಳ ಬಳನೆ ನೀರು ಸುರಿದವು. ಆ ಕ್ಷಣ ಪೊಡಿಮೋನುವಿಗೆ ತಾನೆಂಥ ದುಷ್ಟ ಸಂಕೋಲೆಯೊಳಗೆ ಸಿಕ್ಕಿಹಾಕಿಕೊಂಡಿದ್ದೇನೆಂದು ಅನಿಸಿತು. ತನ್ನ ಬಗ್ಗೆಯೇ ಅಸಹ್ಯ ಮೂಡಿತು. ಆದರೂ, ಅವನು ತನ್ನೆಲ್ಲಾ ದುಃಖವನ್ನು ಅದುಮಿಡಲು ಪ್ರಯತ್ನಿಸಿದ. ಆತನಿಗೀಗ ಹುಡುಗನ ನೆನಪಾದವು. ಆತನ ಹ್ಯಾಪೆ ಮೋರೆ ಕಂಡು ಕನಿಕರ ಮೂಡಿದವು. ಈ ಹುಡುಗನೂ ತನ್ನಂತೆ ದುಷ್ಟ ಸಂಕೋಲೆಯೊಳಗೆ ಸಿಕ್ಕಿಹಾಕಿಕೊಂಡಿದ್ದಾನೆ ಎನಿಸಿ, ಈ ಸಂಕೋಲೆಯಿಂದ ಆತನನ್ನೂ ಪಾರು ಮಾಡುವ art-1ಹೊಣೆಗಾರಿಕೆ ತನ್ನದು ಎಂದುಕೊಂಡ. ಅಷ್ಟರಲ್ಲಿ ಒಬ್ಬ ಯುವಕ ಪೊಡಿಮೋನುವಿನ ಬಳಿ ಬಂದು ನಿಂತು, “ಥೂ..ನಾಯಿ” ಎಂದು ಮುಖಕ್ಕೆ ಉಗಿದ. ಪೊಡಿಮೋನುವಿಗೆ ಸಿಟ್ಟು ತಡೆಯಲಾಗಲಿಲ್ಲ. ಆತ ಆ ಯುವಕನ ಎದೆಗೆ ಕಾಲಿನಿಂದ ಒದ್ದು, ನೆಲಕ್ಕೆ ಬೀಳಿಸಿದ. ಯುವಕ ಅನಿರೀಕ್ಷಿತವಾಗಿ ಬಿದ್ದ ಒಡೆತದಿಂದ ಚೇತರಿಸಿಕೊಳ್ಳಲಾಗದವನಂತೆ ನೆಲಕ್ಕೆ ಬಿದ್ದು ಹೊರಳಾಡಿದ. ಆತ ಹೊರಳಾಡಿದ ಜಾಗದಿಂದ ಧೂಳುಗಳೆದ್ದು ಆ ಇಡೀ ಪರಿಸರವೇ ಅಯೋಮಯವಾದವು. ಪೊಡಿಮೋನು ತಡಮಾಡಲಿಲ್ಲ. ತಬ್ಬಿಬ್ಬಾಗಿದ್ದ ಜನರು ವಾಸ್ತವಕ್ಕೆ ಮರಳುವ ಮೊದಲೇ ಇಲ್ಲಿಂದ ತಪ್ಪಿಸಿಕೊಳ್ಳಬೇಕೆಂದು ನಿರ್ಧರಿಸಿ, ದೂರದಲ್ಲಿ ಹ್ಯಾಪೆ ಮೋರೆ ಹಾಕಿ ನಿಂತಿದ್ದ ಹುಡುಗನ ಕೈಯಿಡಿದೆಳೆದು ನೆಲಕ್ಕೆ ಬಿದ್ದಿದ್ದ ಯುವಕನ ಎದೆ ತುಳಿದುಕೊಂಡೇ ಓಡಿದ. ಹುಡುಗ ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಪೊಡಿಮೋನು ಅವನನ್ನು ಬಹುದೂರಕ್ಕೆ ಒಯ್ದಿದ್ದ.

ತಮ್ಮ ಸುತ್ತಲೂ ಅನಿರೀಕ್ಷಿತವಾಗಿ ಜರುಗಿದ ಘಟನೆಯಿಂದ ತಬ್ಬಿಬ್ಬಾಗಿದ್ದ ಜನರೆಲ್ಲಾ ಆ ಇಬ್ಬರನ್ನೂ ಅಟ್ಟಿಸಿಕೊಂಡು ಓಡಿದರು. ಅವರ ಕಾಲುಗಳು ಬಲವಾಗಿ ತುಳಿದು ಹಿಂದಕ್ಕೆ ಬಿಟ್ಟು ಹೋದ ನೆಲದಿಂದ ದಟ್ಟ ಧೂಳುಗಳೆದ್ದು ಇಡೀ ಊರೇ ಅಸ್ಪಷ್ಟ, ಗೊಂದಲದಲ್ಲಿ ಸಿಕ್ಕಿಹಾಕಿಕೊಂಡವು. ದೂರದಲ್ಲಿ ನಿಂತು ನೋಡುತ್ತಿದ್ದವರಿಗೆ ಏನಾಗುತ್ತಿದೆ ಎಂದು ತಿಳಿಯದಂತೆ ಧೂಳು ಓಡುತ್ತಿದ್ದವರನ್ನೂ, ಓಡಿಸಿಕೊಂಡು ಹೋಗುತ್ತಿದ್ದವರನ್ನೂ ತನ್ನ ಕೋಟೆಯೊಳಗೆ ಮುಚ್ಚಿ ಹಾಕಿತ್ತು.

11 thoughts on ““ಉಡುಗೊರೆ” : ಗಾಂಧಿ ಜಯಂತಿ ಕಥಾಸ್ಪರ್ಧೆ 2015 – ಬಹುಮಾನಿತ ಕಥೆ

  1. Salam Bava

    ಮೊದಲೇ ಹೇಳುತ್ತೇನೆ – ನಾನು ಸಾಹಿತ್ಯದ ವಿದ್ಯಾರ್ಥಿಯೋ ,ಅಥವಾ ವಿಮರ್ಶಕ ನೋ ಅಲ್ಲ. ನನ್ನ ಸಾಹಿತ್ಯ ಜ್ಯಾನ್ಹ ತುಂಬಾ ಸೀಮಿತ . ಆದರೂ ಒಂದೆರಡು ನನ್ನ ಅನಿಸಿಕೆಯನ್ನು ಅಭಿವ್ಯಕ್ತ ಗೊಳಿಸಿದ್ದೇನೆ ! ಸ್ವಾಲಿಹ್ ತೋಡಾರ್- ಪರಿಚಿತ ಹೆಸರಲ್ಲ ,ಕತೆ ಸಾಧಾರಣ ,ಬೊಚ್ಚಲ ಕ್ರತಿಯೋ ಎಂಬ ಅನುಮಾನ . ಆದರೆ ಓರ್ವ ಅಶಿಕ್ಸಿತ , ನಿರುದ್ಯೋಗಿ ,ಗಲ್ಫ್ ರಿಟರ್ನ್ ಯುವಕನ ತೊಳಲಾಟ ,ಅವನ ಹೆಂಡತಿಯ ಅಸಹಾಯಕತೆ ಚೆನ್ನಾಗಿ ಮೂಡಿಬಂದಿದೆ .

    ಒಳ್ಳೆಯ ಜ್ಯಾಣ್ಹ ದಾಹಿ ಓದುಗನೇ, ಒಳ್ಳೆಯ ಕತೆಗಾರನಾಗಬಲ್ಲ ! ಅಪರಿತವಾಗಿ ಸಾಹಿತ್ಯ್ಯವನ್ನು ಅಭ್ಯಸಿಸಬೇಕು ,ಭಾಷೆ ,ವ್ಯಾಕರಣ ಶುದ್ದಿ ಬೇಕು !

    ಬೊಳುವಾರು ಮಹಮ್ಮದ್ ಕುಣ್ಹಿ ಮತ್ತು ಪಕೀರ್ ಮಹಮ್ಮದ್ ಕಟಪಾಡಿ -ಇವರನ್ನು ಬಿಟ್ಟರೆ,ಕರಾವಳಿಯಲ್ಲಿ ಅದರಲ್ಲೂ ಸಮುದಾಯದ ತರುಣ ಜನಾಂಗದಲ್ಲಿ ಮೇಲುಸ್ತರದ ಸಾಹಿತಿಗಳು ಇಲ್ಲವೇ ಇಲ್ಲ ! ನೆರೆಯ ಕೇರಳದಲ್ಲಿ ಪುರೋಗಮನವಾದಿ,ಸೆಕ್ಯುಲರ್ ಮತ್ತು ಹೊಸತನ್ನು ಚಿಂತಿಸುವ ಸಾಹಿತಿಗಳ ಹಿಂಡೇ ಇದೆ . ಆದರೆ ಕರಾವಳಿಯಲ್ಲಿ, ಅದರಲ್ಲೂ ನನ್ನ ಸಮುದಾಯದಲ್ಲಿ ಬೌದ್ದಿಕ ಚಲನವಲನವೇ ಕಾಣಿಸುತ್ತಿಲ್ಲ .ಇದು ನಮ್ಮ ಜಡಸ್ಥಿತಿಯನ್ನು ಸಾರುತ್ತದೆ !ಪುತ್ತಿಗೆ ಸಾಹೇಬ್ರು , ಬಿ.ಎಮ್. ಬಷೀರ್ ,ಎ.ಕೆ.ಕುಕ್ಕಿಲರೆಲ್ಲಾ ತಮ್ಮ ಪತ್ರಿಕಾ ವ್ರತ್ತಿಯಲ್ಲಿಯೇ ಬ್ಯುಸಿ ಆಗಿದ್ದಾರೆ !ಸ್ವಾಲಿಹ್ ತೋಡಾರ್ರವರ ಪ್ರಯತ್ನಕ್ಕೆ ಅಭಿನಂದನೆಗಳು

    Reply
    1. ಸೀತಾ

      “ನನ್ನ ಸಾಹಿತ್ಯ ಜ್ಯಾನ್ಹ ತುಂಬಾ ಸೀಮಿತ”

      ಮದ್ರಸಾ ಶಿಕ್ಷಣದ ಪರಿಣಾಮವಿದು.

      “ರೆಲ್ಲಾ ತಮ್ಮ ಪತ್ರಿಕಾ ವ್ರತ್ತಿಯಲ್ಲಿಯೇ ಬ್ಯುಸಿ ಆಗಿದ್ದಾರೆ”

      ಏಕೆಂದರೆ ಅಲ್ಲಿ ಒಳ್ಳೆಯ ಆದಾಯವಿದೆ ಅವಕಾಶವಿದೆ. ಸಮುದಾಯದವರು ಗಲ್ಫಿಗೆ ಹೋಗಿ ತೈಲ ಹಣದ ರುಚಿ ಸವಿಯುತ್ತಿರುವಾಗ ಸಂತನಂತೆ ಇದ್ದು ಸಾಹಿತ್ಯದ ಕೃಷಿ ನಡೆಸಲು ಸಾಧ್ಯವೆ ಬಾವಯ್ಯ?

      Reply
      1. Salam Bava

        ನಿಮ್ಮದು ಅಸಹಿಸುತ್ಣೆಯ ಪರಮಾವದಿ , ನನ್ನ ವಿನಯವನ್ನು ,ದೆಕಾರೋಮನ್ನು ನೀವು ನಿಮ್ಮ ಮೂಗಿನ ನೇರಕ್ಕೆ ತೆಗೆದು ಕೊಂಡಿರಿ . ನಿಮ್ಮ ಮದ್ರಸ ದ್ವೇಷಕ್ಕೆ ಮದ್ದಿಲ್ಲ ! ೧೦,೦೦೦ಕ್ಕೂ ಅದಿಕವಿರುವ ,೧೬ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ದಾರ್ಮಿಕ ಶಿಕ್ಹಣ ಪಡೆಯುವ ಒಂದು ವ್ಯವಸ್ಥೆಯನ್ನು ಉಡಾಪೆಯಿಂದ ತಳ್ಳಬೇಡಿ . ಯಾವುದೇ ವಿಷಯವನ್ನು ಪೂರ್ತಿ ತಳ್ಳುವ ಮೊದಲು ,ಅದರಲ್ಲಿ ಆಸಕ್ತಿ ಬೆಳೆಸಿ ,ಅದನ್ನು ಸಾದ್ಯಂತವಾಗಿ ಅರಿತುಕೊಳ್ಳಲು ಪ್ರಯತ್ನಿಸಿ . ಸಹನೆಯಿದ್ಧಷ್ಟು ಹೊತ್ತು ಆ ವಿದ್ಯೆಯ ಪ್ರಯೋಗಗಳನ್ನು ಖುದ್ದಾಗಿ ಕಲಿಯಲು ಪ್ರಯತ್ನಿಸಿ ,ಇನ್ನು ಅದರ ಆಳ ,ವಿಸ್ತಾರ,ಧಾರ್ಮಿಕ ವಿದ್ಯೆಯಾಚಗಿನ ಪರಿಣಿತಿ ಗಳ ಕುರಿತು ಅರಿವನ್ನು ವಿಸ್ತಾರ ಗೊಳಿಸಿ ,ತದನಂತರ ಬೇಕಾದರೆ ನಾವು ಒಂದು ವಾಗ್ವಾದ ನಡೆಸುವ . ಜಗತ್ತಿನ ತುಂಬಾ ಪ್ರಗಲ್ಭರು ಅರಿವಿನ ಕೊರತೆಯಿಂದ ಮದ್ರಸವನ್ನು ದೂಷಿಸಿ ,ಅನಂತರ ಸಾದ್ಯಂತವಾಗಿ ಅಧ್ಯಯನ ನಡೆಸಿ ತಮ್ಮ ತಪ್ಪು ತಿದ್ದಿದಾರೆ . ಕೆಲವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆ .

        ಇನ್ನು ಗಲ್ಫ್ ನಿಂದ ನಿಮ್ಮವರು ತಿಂಗಳಿಗೆ ಲಕ್ಸಾಂತರ ಬಾಚುವಾಗ( ನನಗೆ ನೋ ಪ್ರಾಬ್ಲಮ್) ,ಸಾವಿರದ ಲೆಕ್ಕ ಮಾತ್ರ ಇತರರಿಗೆ! ಕರಾವಳಿಯಲ್ಲಿ ಈಗ ಯಾವುದೇ ಸಾಹಿತ್ಯಿಕ ಚಟುವಟಿಕೆ ನಡೆಯುತ್ತಾದಾ ?ಓರ್ವ ಶಿಕ್ಣಣ ವ್ಯಾಪಾರಿ ಒಂದು ಅದ್ದೂರಿ ಯಾ ಜಾತ್ರೆ ನಡೆಸುತ್ತಾರೆ ,ಶಿವರಾಂ ಕಾರಂತ ರಂತ ಕಡಲತಡಿಯ ಭಾರ್ಗವರು ಹುಟ್ಟಿದ ಕರಾವಳಿ ಈಗ ಸಾಹಿತ್ಯಿಕವಾಗಿ ಬರದಾಡಿದೆ ! ನಾನು ಮತ್ತು ನೀವು ಭಾವನೆ ಅಭಿವ್ಯಕ್ತ ಗೊಳಿ ಸುವ ‘ ವರ್ತಮಾನ ‘ ಕೂಡಾ ಬೆಂಗಳೂರಿಗರ ಕ್ರಪೆ .
        ಇನ್ನು ನಿಮಗೆ ಒಂದು ಕಹಿ ಸುದ್ದಿ -ನಾನು ಒಂದನೇ ತರಗತಿಯಿಂದ ಪದವಿ ವರೆಗೆ ಕಲಿತದ್ದು,ಇಂಗ್ಲೀಷ್ ಮೀಡಿಯಂ -ಕ್ರಿಶ್ಚಿಯನ್ ವಿಷನರಿಗಳ ಕಾಲೇಜಿನಲ್ಲಿ, ಸಾಯಂಕಾಲ ಮದ್ರಸ ಶಿಕ್ಹಣ ಪಡೆದೆ ಎಂಬ ಹೆಮ್ಮೆ . ನೀವು ಗಣವೇಷಧಾರಿಗಳಿಂದ ಶಿಕ್ಷಿತರಾ ?

        Reply
        1. ನಾರಾಯಣ ಹೊಳ್ಳ

          ಬಾವ ಅವರೇ, ಮತ್ತೆ ಅಸಹಿಷ್ಣುತೆಯ ಆರೋಪವನ್ನು ಸೀತಾ ಅವರ ಮೇಲೆ ಮಾಡಿದ್ದೀರಿ. ಇತ್ತೀಚಿಗೆ ನಿಮ್ಮ ಮತ ಬಾಂಧವರು ಲಕ್ಷಕ್ಕೂ ಹೆಚ್ಚು ಜನ ದೇಶದ ಹಲವೆಡೆ ಗುಂಪು ಸೇರಿ ಮತಿಗೇಡಿಯೊಬ್ಬನ ಹೇಳಿಕೆಗೆ ಪ್ರತಿಯಾಗಿ ಆತನ ಹತ್ಯೆಗೆ ಕರೆ ನೀಡಿದ್ದಾರಲ್ಲ ಅದು ಸಹಿಷ್ಣುತೆಯೇ? ನೀವಾಗಲಿ ನಿಮ್ಮ ಪ್ರಗತಿಪರ ಸಾಹಿತಿಗಳಾಗಲಿ ತಿವಾರಿಯ ಸಾವಿಗೆ ಕರೆ ನೀಡಿದ ಮತಾಂಧರನ್ನು ಖಂಡಿಸಿದ್ದೀರಾ?

          Reply
          1. ಸೀತಾ

            ಹೊಳ್ಳರೇ, ತಿವಾರಿಯ ಹತ್ಯೆಗೆ ಸುಪಾರಿ ಕೊಟ್ಟ ಮತಾಂಧರು ಮದರಸಾದಲ್ಲಿ ಅಲ್ಲದೆ ಮತ್ತೆಲ್ಲಿ ಶಿಕ್ಷಣ ಪಡೆದರು ಅಂತ ಭಾವಿಸಿದ್ದೀರಿ? ಅಸಹಿಷ್ಣುತೆಯನ್ನು ಚಿಕ್ಕ ವಯಸ್ಸಿನಲ್ಲಿಯೇ ಮುಗ್ಧ ಮಕ್ಕಳ ಭಾವಲೋಕದಲ್ಲಿ ಬಿತ್ತಿದರೆ ಮಾತ್ರ ಇಂತಹ ಫಸಲು ಸಿಗುವುದು ಮಾರಾಯರೇ! ಇನ್ನು ಬಾವಯ್ಯನವರ ಮೌನವೇ ಸಾರಿ ಹೇಳಿದೆ ಅವರಿಗೆ ತಮ್ಮ ಮತಬಾಂಧವರ ಮತಾಂಧತೆಯನ್ನು ವಿರೋಧಿಸುವ ನೈತಿಕ ಶಕ್ತಿ ಇಲ್ಲ ಅಂತ!

          2. Pramod Kumar

            ‘ಕಾಮಾಲೆ ಕಣ್ಣಿಗೆ ಎಲ್ಲಾವೂ ಹಳದಿ’ ಮಹನೀಯರಿಬ್ಬರು ಮದ್ರಸದ ಕುರಿತು ಅತೀ ದ್ವೇಷ ಪೂರಿತವಾಗಿ ಬರೆಯುತ್ತಾರೆ . ನಾನು ಚಿಕ್ಕಂದಿನಿಂದ ಮದ್ರಸದ ಪರಿಸರದಲ್ಲಿ ,ಮುಸ್ಲಿಂ ಸ್ನೇಹಿತರೊಟ್ಟಿಗೆ ಬೆಳೆದವನು . ಇಂದೂ ಆ ಸ್ನ್ಹೇಹ ಕಾಯಿದಿರುವಿಟ್ಟಿರುವೆನು . ಎಲ್ಲಾ ಧರ್ಮದಲ್ಲಿಯೂ ಉಗ್ರವಾದಿಗಳಿದ್ದಾರೆ ,ಅವರ ಸಂಖ್ಯೆ ಅತೀ ಕಡಿಮೆ . ಆದರೆ ಅವರು ಮಾಡುವ ಅನಾಹುತ ಹೆಚ್ಚು . ಸಂಘ ಪರಿವಾರದವರ ಅತೀ ಕ್ರೂರ ಹೇಳಿಕೆಗಳು ,ಅವರು ನಡೆಸುವ ಹಿಂಸಾ ಪ್ರವತ್ತಿಗಳು ಸೀತಾ ಮತ್ತು ಹೊಳ್ಳಗೆ ಸಮ್ಮತಿಯೇ ? ಅಲ್ಲವಾದರೆ ಯಾಕೆ ಖಂಡಿಸಲಿಲ್ಲ . ಯಾರ್ರ್ಯ್ರೋ ಪ್ರತಿಬಟಿಸಿದ್ದಕ್ಕೆ ಸಲಾಂ ಯಾಕೆ ಖಂಡಿಸಬೇಕು ,ಅದನ್ನು ಅವರ ಮೇಲೆ ಹೇರಲು ತಮಗೆ ಯಾವ ಅಧಿಕಾರವಿದೆ .

            ಒಂದು ಸಮೂದಾಯವನ್ನು ಕೇವಲ ವಿದ್ವೇಷಿ ಸುದಕ್ಕೇ ತಾವು ಬರೆಯುವ ಕಾಮೇಂಟ್ ಗಳಿಗೆ ನನ್ನ ದಿಕ್ಕಾರವಿದೆ !

          3. Pramod Kumar

            ‘ಕಾಮಾಲೆ ಕಣ್ಣಿಗೆ ಎಲ್ಲಾವೂ ಹಳದಿ’ ಮಹನೀಯರಿಬ್ಬರು ಮದ್ರಸದ ಕುರಿತು ಅತೀ ದ್ವೇಷ ಪೂರಿತವಾಗಿ ಬರೆಯುತ್ತಾರೆ . ನಾನು ಚಿಕ್ಕಂದಿನಿಂದ ಮದ್ರಸದ ಪರಿಸರದಲ್ಲಿ ,ಮುಸ್ಲಿಂ ಸ್ನೇಹಿತರೊಟ್ಟಿಗೆ ಬೆಳೆದವನು . ಇಂದೂ ಆ ಸ್ನ್ಹೇಹ ಕಾಯಿದಿರುವಿಟ್ಟಿರುವೆನು . ಎಲ್ಲಾ ಧರ್ಮದಲ್ಲಿಯೂ ಉಗ್ರವಾದಿಗಳಿದ್ದಾರೆ ,ಅವರ ಸಂಖ್ಯೆ ಅತೀ ಕಡಿಮೆ . ಆದರೆ ಅವರು ಮಾಡುವ ಅನಾಹುತ ಹೆಚ್ಚು . ಸಂಘ ಪರಿವಾರದವರ ಅತೀ ಕ್ರೂರ ಹೇಳಿಕೆಗಳು ,ಅವರು ನಡೆಸುವ ಹಿಂಸಾ ಪ್ರವತ್ತಿಗಳು ಸೀತಾ ಮತ್ತು ಹೊಳ್ಳಗೆ ಸಮ್ಮತಿಯೇ ? ಅಲ್ಲವಾದರೆ ಯಾಕೆ ಖಂಡಿಸಲಿಲ್ಲ . ಯಾರ್ರ್ಯ್ರೋ ಪ್ರತಿಬಟಿಸಿದ್ದಕ್ಕೆ ಸಲಾಂ ಯಾಕೆ ಖಂಡಿಸಬೇಕು ,ಅದನ್ನು ಅವರ ಮೇಲೆ ಹೇರಲು ತಮಗೆ ಯಾವ ಅಧಿಕಾರವಿದೆ .
            ಒಂದು ಸಮೂದಾಯವನ್ನು ಕೇವಲ ವಿದ್ವೇಷಿ ಸುದಕ್ಕೇ ತಾವು ಬರೆಯುವ ಕಾಮೇಂಟ್ ಗಳಿಗೆ ನನ್ನ ದಿಕ್ಕಾರವಿದೆ !

          4. ನಾರಾಯಣ ಹೊಳ್ಳ

            ಪ್ರಮೋದ ಅವರೇ, ಸಹಿಷ್ಣುತೆ ಬಗ್ಗೆ ನಿಮ್ಮ ಸಲಾಂ ಬಾವ ಅವರಿಗೇ ಮೊದಲು ಪಾಠ ಮಾಡಿ. ಏಕೆಂದರೆ ಅವರು ಮೊದಲಿಂದಲೂ ಈ ವೇದಿಕೆಯಲ್ಲಿ ಹಿಂದೂ ಸಮುದಾಯದ ಬಗ್ಗೆ ಅಸಹಿಷ್ಣುತೆಯನ್ನು ತೋರಿಸುತ್ತಾ ಬಂದಿದ್ದಾರೆ. ತಮ್ಮ ಮತದ ಹೊಲಸನ್ನು ಚೊಕ್ಕ ಮಾಡಿ ಹಿಂದೂ ಸಮುದಾಯದ ಲೋಪದೋಷಗಳ ಬಗ್ಗೆ ಮಾತನಾಡಲು ಅವರಿಗೆ ಹೇಳಿ. ಇನ್ನು ಮದ್ರಸಾಗಳ ಬಗ್ಗೆ ಹೇಳುವುದಾದರೆ ಮೊನ್ನೆ ಬಂಗಾಳದಿಂದ ಬಂದ ವರದಿಯೇ ಸಾಕು ಅವು ಅಸಹಿಷ್ಣುತೆಯನ್ನು ಬೆಳೆಸುವ ಫ್ಯಾಕ್ಟರಿಗಳು ಅಂತ.

            “Kazi Masum Akhtar, the headmaster of Talpukur Aara High Madarsa in Kolkata, was assaulted by maulanas and their followers, for teaching students the National Anthem for the Republic Day.The Muslim clerics who attacked Akhtar are said to be ISIS sympathisers.”

            ನೋಡಿ:
            _http://indiatoday.intoday.in/story/kolkata-headmaster-asks-students-to-sing-national-anthem-banned-from-madarsa/1/563476.html

        2. ನಾರಾಯಣ ಹೊಳ್ಳ

          ಕಲ್ಕತ್ತೆಯ ಮದ್ರಸವೊಂದರ ಪ್ರಗತಿಪರ ಮುಖ್ಯೋಪಾಧ್ಯಾಯರೊಬ್ಬರಿಗೆ ತಾಲಿಬಾನಿ ಮನಸ್ಥಿತಿಯ ಮತಾಂಧರು ಕೊಟ್ಟ ಕಿರುಕುಳ ಹಿಂಸೆಯ ಒಂದು ಚಿತ್ರಣ ಇಲ್ಲಿದೆ ನೋಡಿ:

          _http://www.huffingtonpost.in/2016/01/05/kazi-masum-akhtar_n_8915324.html

          “In March 2015, an incensed mob surrounded the school and beat him up with iron rods before police could get to him.”

          “he got calls saying “You will be eliminated.””

          “the Metiabruz madrasah managing committee had petitioned the board to remove him”

          ಪ್ರಗತಿಪರ ಮುಸಲ್ಮಾನರ ಪರ ನಿಲ್ಲಲು ಬಾವ ರೆಡಿ ಇದ್ದಾರಾ? ಅಥವಾ ಅವರದ್ದು ಮದ್ರಸಾಗಳಿಗೆ ಜೀತವಾಗಿರುವ ಮನಸ್ಸಾ?

          Reply
  2. Salam Bava

    ನಿಮ್ಮದು ಅಸಹಿಸುತ್ಣೆಯ ಪರಮಾವದಿ , ನನ್ನ ವಿನಯವನ್ನು ,ದೆಕಾರೋಮನ್ನು ನೀವು ನಿಮ್ಮ ಮೂಗಿನ ನೇರಕ್ಕೆ ತೆಗೆದು ಕೊಂಡಿರಿ . ನಿಮ್ಮ ಮದ್ರಸ ದ್ವೇಷಕ್ಕೆ ಮದ್ದಿಲ್ಲ !ಇನ್ನು ಗಲ್ಫ್ ನಿಂದ ನಿಮ್ಮವರು ತಿಂಗಳಿಗೆ ಲಕ್ಸಾಂತರ ಬಾಚುವಾಗ( ನನಗೆ ನೋ ಪ್ರಾಬ್ಲಮ್) ,ಸಾವಿರದ ಲೆಕ್ಕ ಮಾತ್ರ ಇತರರಿಗೆ! ಕರಾವಳಿಯಲ್ಲಿ ಈಗ ಯಾವುದೇ ಸಾಹಿತ್ಯಿಕ ಚಟುವಟಿಕೆ ನಡೆಯುತ್ತಾದಾ ?ಓರ್ವ ಶಿಕ್ಣಣ ವ್ಯಾಪಾರಿ ಒಂದು ಅದ್ದೂರಿ ಯಾ ಜಾತ್ರೆ ನಡೆಸುತ್ತಾರೆ ,ಶಿವರಾಂ ಕಾರಂತ ರಂತ ಕಡಲ್ಕರೆಯ ಭಾರ್ಗವರು ಹುಟ್ಟಿದ ಕರಾವಳಿ ಈಗ ಸಾಹಿತ್ಯಿಕವಾಗಿ ಬರದಾಡಿದೆ ! ನಾನು, ನೀವು ಅರಚಾಡುವ’ ವರ್ತಮಾನ ‘ ಕೂಡಾ ಬೆಂಗಳೂರಿಗರ ಕ್ರಪೆ .

    Reply
  3. Reader

    ಸೀತಕ್ಕ ಮತ್ತು ಬಾವಯ್ಯನವರ ಜಗಳ ಸೊಗಸಾಗಿ ಬರುತ್ತಿದೆ.

    Reply

Leave a Reply to ನಾರಾಯಣ ಹೊಳ್ಳ Cancel reply

Your email address will not be published. Required fields are marked *