“ನನ್ನ ಮಕ್ಕಳು ವಿಧಾನಸೌಧದ ಕಡೆ ತಲೆಹಾಕಲಿಲ್ಲ” – ಗೋವಿಂದ ಗೌಡರು

– ಸ್ವಾಮಿ ದುರ್ಗ

ಮಾಜಿ ಮಂತ್ರಿ ಎಚ್.ಜಿ.ಗೋವಿಂದ ಗೌಡರು ನಿನ್ನೆ (ಬುಧವಾರ) ಪಯಣ ಮುಗಿಸಿದರು. ಅನೇಕ ಮಾಜಿ ಮಂತ್ರಿ, ಶಾಸಕರು ಸಾವನ್ನಪ್ಪಿರುವ ಸುದ್ದಿ ಆಗಾಗ ಪತ್ರಿಕೆಗಳ ಮೂಲೆಯಲ್ಲಿ ಅಥವಾ ತಳದಲ್ಲಿ ನಿಧನ ವಾರ್ತೆಯಾಗಿ ಬರುವುದುಂಟು. ಆದರೆ, ಗೋವಿಂದ ಗೌಡರದು ಹಾಗಲ್ಲ. ಅವರು ರಾಜಕೀಯ ನಿವೃತ್ತಿ ಪಡೆದ ಹದಿನೇಳು ವರ್ಷಗಳ ನಂgovindagowdaತರವೂ, ಅವರನ್ನು ತಂಪು ಹೊತ್ತಲ್ಲಿ ನೆನಪಿಸಿಕೊಳ್ಳುವ ಬಹುದೊಡ್ಡ ವರ್ಗ ನಮ್ಮ ಮಧ್ಯೆ ಇದೆ. ಅವರೆಲ್ಲರೂ ಇಂದು ತಪ್ಪದೇ ಈ ಮಾಜಿ ಶಿಕ್ಷಣ ಮಂತ್ರಿಯನ್ನು ನೆನಪಿಸಿಕೊಳ್ಳುತ್ತಾರೆ. ಕೊಪ್ಪ ಸುತ್ತ ಮುತ್ತಲಿನ ನೂರಾರು ಶಿಕ್ಷಕರು ಅವರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇದು ಸುಖಾ ಸುಮ್ಮನೆ ಬಂದ ಮನ್ನಣೆ ಅಲ್ಲ.
ಕೊಪ್ಪದ ಮುಖ್ಯರಸ್ತೆಯನ್ನು ತೋರಿಸಿ, ಆ ಊರಿನ ಒಬ್ಬರು ಒಮ್ಮೆ ಹೇಳುತ್ತಿದ್ದರು, “ನೋಡಿ ಈ ರಸ್ತೆ ಗೋವಿಂದ ಗೌಡರ ಕಾಲದ್ದು. ಅದು ಈಗಲೂ ಗಟ್ಟಿ ಮುಟ್ಟಾಗಿದೆ, ಆದರೆ ಈಗಿನವರು ಮೊನ್ನೆಯಷ್ಟೆ ಮಾಡಿಸಿದ್ದು ಈಗಾಗಲೇ ಗುಂಡಿ ಕಂಡಿದೆ”. ಪ್ರಾಮಾಣಿಕತೆ ಮತ್ತು ಬದ್ಧತೆ ಇರುವ ವ್ಯಕ್ತಿ ಆಡಳಿತಕ್ಕೆ ಬಂದರೆ ಏನಾಗಬಹುದು ಎನ್ನುವುದಕ್ಕೆ ಆ ಊರಿನ ಅದೊಂದು ಸಣ್ಣ ರಸ್ತೆಯ ಉದಾಹರಣೆ ಸಾಕು.
1926 ರಲ್ಲಿ ಜನಿಸಿದ ಗೌಡರು ಹರೆಯದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದರು. ನಂತರ ಮೈಸೂರು ಚಲೋ. ಸ್ವತಂತ್ರ ಭಾರತದಲ್ಲಿ ರಾಜಕೀಯ ಅವರನ್ನು ಆಕರ್ಷಿಸಿತು. 1952 ರಲ್ಲಿ ಮೊದಲ ಬಾರಿಗೆ ಅವರು ಕೊಪ್ಪ ಪುರಸಭೆಗೆ ಆಯ್ಕೆಯಾದರು. ನಂತರ ಅವರು ಶಾಸಕರಾಗಿದ್ದು 1983 ರಲ್ಲಿ. ಮೂರು ಬಾರಿ ಶಾಸಕರಾಗಿ ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ಎಚ್.ಡಿ.ದೇವೇಗೌಡ ಹಾಗೂ ಜೆ.ಎಚ್.ಪಟೇಲರ ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದರು. ಶಿಕ್ಷಣ ಇಲಾಖೆಯಲ್ಲಿನ ಬಹುಚರ್ಚಿತ ಹಾಗೂ ಅಪಾರ ಮನ್ನಣೆ ಗಳಿಸಿದ ಕಾರ್ಯಕ್ರಮಗಳ ಮೂಲಕ ಅವರು ಅಪಾರ ಜನಪ್ರಿಯತೆ ಹೊಂದಿದ ಸಂದರ್ಭದಲ್ಲಿಯೇ ಅವರು ರಾಜಕಾರಣಕ್ಕೆ ವಿದಾಯ ಹೇಳಿದರು. ಹಾಗೆ ಹೇಳಿದ ಅನೇಕರು ತಮ್ಮ ಮನೆ ಮಕ್ಕಳನ್ನು ರಾಜಕೀಯಕ್ಕೆ ತಂದಿರುತ್ತಾರೆ. ಆದರೆ, ಇವರು ಹಾಗೂ ಮಾಡಲಿಲ್ಲ. ಹಾಗಾಗಿ ಅವರು ಅಪರೂಪದ ರಾಜಕಾರಣಿ.
ಅವರು ಮೈಸೂರಿಗೆ ಭೇಟಿ ನೀಡಿದಾಗೊಮ್ಮೆ ಕೆಲ ವಿದ್ಯಾರ್ಥಿಗಳು ಭೇಟಿ ನೀಡಿ, ತಾವು ಅಂದಾಜಿಸಿದ್ದಕ್ಕಿಂತ ಕಡಿಮೆ ಅಂಕಗಳು ಬಂದಿವೆ ಎಂದು ದೂರಿದರು. ಸಚಿವರು ತಕ್ಷಣ ಅಂದಿನ ಶಿಕ್ಷಣ ಇಲಾಖೆ ಕಾರ್ಯದರ್ಶಿ ಎಸ್. ವಿ. ರಂಗನಾಥ್ ಹಾಗೂ ಹಿರಿಯ ಅಧಿಕಾರಿ ಹರೀಶ್ ಗೌಡರನ್ನು ಸಂಪರ್ಕಿಸಿ ಇದಕ್ಕೊಂದು ಪರಿಹಾರವೆಂಬಂತೆ ಉತ್ತರ ಪತ್ರಿಕೆಗಳ ಛಾಯಾಪ್ರತಿ ನೀಡುವ ವ್ಯವಸ್ಥೆ ಜಾರಿಗೆ ತಂದರು. ಅದು ಇಂದು ಅನೇಕ ಸಂಸ್ಥೆ, ವಿಶ್ವ ವಿದ್ಯಾನಿಲಯಗಳಿಗೆ ಅನುಕರಣನೀಯವಾಗಿದೆ.
ಮೊದಲು ಶಿಕ್ಷಕರನ್ನು ನೇಮಿಸಲು ಜಿಲ್ಲಾ ಮಟ್ಟದ ಆಯ್ಕೆ ಸಮಿತಿಗಳಿರುತ್ತಿದ್ದವು. ಸಮಿತಿಗಳಲ್ಲಿ ಕೆಲವೊಮ್ಮೆ ಪ್ರಾಮಾಣಿಕವಾಗಿ ನೇಮಕಾತಿ ಆದರೂ, ಬಹುತೇಕ ಸಂದರ್ಭಗಳಲ್ಲಿ ಜಾತಿ, ಹಣ, ಪ್ರಭಾವಗಳು ಕೆಲಸ ಮಾಡುತ್ತಿದ್ದವು. ಗೌಡರು ಆ ಪದ್ಧತಿಗೆ ಇತಿಶ್ರೀ ಹಾಡಿ, ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ನೇಮಕ ಮಾಡುವ ವ್ಯವಸ್ಥೆ ಜಾರಿಗೆ ತಂದರು. ಆ ಮೂಲಕ ಪರಿಶ್ರಮದಿಂದ ಅಭ್ಯಾಸ ಮಾಡಿದ್ದ ಅಭ್ಯರ್ಥಿಗಳಿಗೆ ಯಾವುದೇ ಲಂಚ, ಪ್ರಭಾವಗಳ ಅಗತ್ಯ ಬೀಳದೆ ಕೆಲಸ ಸಿಗುವಂತಾಯ್ತು.
ಸಚಿವರಾಗಿ ಉತ್ತಮ ಆಡಳಿತ ಅಂದ್ರೇನು ಎನ್ನುವುದನ್ನೂ ತೋರಿಸಿದರು. ಯಾವುದೇ ವ್ಯಕ್ತಿ, ಅಧಿಕಾರಿ ತಪ್ಪು ಮಾಡಿದ್ದಾರೆ ಎಂದು ಗೊತ್ತಾದರೆ, ಮುಲಾಜಿಲ್ಲದೆ ಕ್ರಮ ಕೈಗೊಂಡಿದ್ದರು. ಹತ್ತಿರದ ಸಂಬಂಧಿ ಎಂದೋ, ಪ್ರಭಾವಿ ಸಚಿವರಿಗೆ ಬೇಕಾದವರೆಂದೋ ಸುಮ್ಮನಾದವರಲ್ಲ.
ಅವರು ಒಮ್ಮೆ ಹೇಳಿದ್ದ ನೆನಪು, “ನಾನು ವಿಧಾನಸೌಧದಲ್ಲಿರುವ ತನಕ, ನನ್ನ ಆರು ಮಕ್ಕಳಲ್ಲಿ ಯಾರೊಬ್ಬರೂ ಒಮ್ಮೆಯೂ ಆಕಡೆ ತಲೆ ಹಾಕಲಿಲ್ಲ”. ಈಗಿನ ಯಾವುದೇ ಮಂತ್ರಿ ಇಂತಹ ಮಾತನ್ನು ವಿಶ್ವಾಸದಿಂದ ಹೇಳಲು ಸಾಧ್ಯವಿದೆಯೇ?
ಮೂರು ವರ್ಷಗಳ ಹಿಂದೆ ಹರಿಯಾಣ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ ಚೌತಾಲ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಆರೋಪಿಗಳಾಗಿ ಜೈಲಿಗೆ ಹೋಗಿದ್ದರು. ಅದೇ ಸಂದರ್ಭದಲ್ಲಿ ಗೌಡರು ಮಾತನಾಡುತ್ತಾ, “ನಾನು ಇಂದು ನೆಮ್ಮದಿಯಾಗಿ ನನ್ನ ತೋಟದ ಮನೆಯಲ್ಲಿ ಕಾಲ ಕಳೆಯುತ್ತಿದ್ದೇನೆ. ಅದರರ್ಥ, ನಾನು ನನಗೆ ಸಿಕ್ಕ ಅಧಿಕಾರವನ್ನು ತಪ್ಪಾಗಿ ಎಲ್ಲಿಯೂ ಬಳಸಿಕೊಂಡಿಲ್ಲ”.

One thought on ““ನನ್ನ ಮಕ್ಕಳು ವಿಧಾನಸೌಧದ ಕಡೆ ತಲೆಹಾಕಲಿಲ್ಲ” – ಗೋವಿಂದ ಗೌಡರು

  1. ಎಚ್. ಸುಂದರ ರಾವ್

    ಕೊಪ್ಪದ ನನ್ನೊಬ್ಬ ಗೆಳೆಯ ಹೇಳಿದ್ದು: “ನಮ್ಮ ಕ್ಲಬ್ಬಿಗೆ ಒಂದು ವರ್ಷ ಗೋವಿಂದ ಗೌಡರು ಅಧ್ಯಕ್ಷರಾಗಿದ್ರು ಮಾರಾಯ. ಕಾಪಿ, ಚಾ, ಹಾಲು ಬಿಟ್ರೆ ಬ್ಯಾರೆ ಏನೂ ಒಳಗೆ ಬರೋ ಹಂಗೇ ಇರ್ಲಿಲ್ಲ!”

    Reply

Leave a Reply

Your email address will not be published. Required fields are marked *