Daily Archives: January 11, 2016

ಏಕೆ ಹೀಗಾಡಿದೆಯೇ ಗೆಳತಿ…… !?


-ಸುಧಾ ಚಿದಾನಂದಗೌಡ


“You won’t get marks for this…”

“I don’t want marks sir…”

ಒಂದು ಕ್ಷಣ ಡಿಯೋ ಲೋಬೋ, ಫಿಸಿಕ್ಸ್ ಲೆಕ್ಚರರ್ ನನ್ನ ಪೇಪರನ್ನು ನೋಡುವುದನ್ನು ನಿಲ್ಲಿಸಿ ತಲೆ ಮೇಲೆತ್ತಿ ನನ್ನನ್ನೇ ನೋಡಿದರು. ನಾನೋ…. ಹಲ್ಲು ಕಚ್ಚಿ, ಗಂಟಲುಬ್ಬಿಬಂದ ದುಃಖವನ್ನು ಹೊರಚೆಲ್ಲಕೂಡದೆಂಬ ನಿರ್ಧಾರದಿಂದ ಕಂಬನಿಯನ್ನು ರೆಪ್ಪೆಗಳಡಿಯಲ್ಲಿ ತಡೆ ಹಿಡಿದಿದ್ದೆ. ಮತ್ತೇನು ಮಾಡಲಿ..? ಅವರು ಹೇಳುವುದಕ್ಕೆ ಮುಂಚೆಯೇ ನನಗೇ ಗೊತ್ತಿತ್ತು- ಈ ಟೆಸ್ಟ್ ನಲ್ಲಿ ಮಾರ್ಕ್ಸ್ ಬರುವುದಿಲ್ಲ ಎಂದು. ಓದಿದ್ದರೆ ತಾನೇ..? ಓದಲು ಜತನದಿಂದ, ಏಕಾಗ್ರತೆಯಿಂದ ಮಾಡಿಟ್ಟುಕೊಂಡಿದ್ದ ನೋಟ್ಸ್ ಇದ್ದರೆ ತಾನೇ..? ಕಳುವಾಗಿ ಹೋಗಿತ್ತಲ್ಲ ನಾಲ್ಕುದಿನಗಳ ಹಿಂದೆಯೇ..! ಆದರೆ ನೋವಾಗಿದ್ದು ಕಳೆದುಕೊಂಡೆ ಎಂಬುದಕ್ಕಾಗಿ ಅಲ್ಲ. ಯಾರು, ಯಾಕಾಗಿ ಕದ್ದರು ಎಂಬುದು ತಿಳಿದುಬಂದಿದ್ದರಿಂದ..! ನೋಟ್ಸ್ ಇಲ್ಲ ಎಂದಲ್ಲ. ಓದಬಾರದು ಎಂಬ ಸಿಟ್ಟಿನಿಂದಾಗಿಯೇ ಓದಿರಲಿಲ್ಲ.

ಅಂಜನಾ ಹೀಗೆ ಮಾಡಬಹುದಿತ್ತೇ..? ರೂಂಮೇಟ್ ಗಳನ್ನೂ ನಂಬಬಾರದು ಎಂದಾದರೆfriendship-art ಇನ್ನು ಯಾರನ್ನಾದರೂ ಹೇಗೆ ನಂಬುವುದು ಆ ಹಾಸ್ಟೆಲ್ ಎಂಬ ನಮಗೆ ನಾವೇ ರಾಣಿಯರೆನ್ನಬಹುದಾದ ಹೊಸಪ್ರಪಂಚದಲ್ಲಿ..? ಇಷ್ಟಕ್ಕೂ ನಾನು ಮಾಡಿದ ತಪ್ಪಾದರೂ ಏನಿತ್ತು..? ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಸೈನ್ಸ್ ಓದುತ್ತಿದ್ದ ನಾನೂ ಅಂಜನಾಳೂ ಚೆನ್ನಾಗೇ ಇದ್ದೆವು ಒಂದೇ ರೂಮನ್ನು ಹಂಚಿಕೊಂಡು. “Come, let’s play a game..” ಎಂದು ಆ ಸಂಜೆ ಆಹ್ವಾನಿಸಿದ್ದು ಅವಳೇ. ನಾನು ಲ್ಯಾಬ್ ಮ್ಯಾನ್ಯುಯಲ್ ಹಿಡಿದು ಕೂತಿದ್ದೆ ರೆಕಾರ್ಡ ಬರೆಯಲು. ಬಿಡದೆ ಜಗ್ಗಿ ಸೇರಿಸಿಕೊಂಡಿದ್ದರು ಐದಾರು ಜನ ಗೆಳತಿಯರು ನಮ್ಮ ರೂಮಿನಲ್ಲೇ. ಆಟವೇನೆಂದರೆ- ವ್ಯಕ್ತಿಗಳ ಹೆಸರುಗಳನ್ನು ಹೇಳುತ್ತಾ ಹೋಗಬೇಕು. ಯಾವುದೇ ಧರ್ಮದ್ದು, ಹೆಂಗಸರು, ಗಂಡಸರು ಒಟ್ಟಿನಲ್ಲಿ ನಾಮಧೇಯಗಳು. ಆದರೆ ರಿಪೀಟ್ ಆಗಬಾರದು, ತೊದಲಬಾರದು, ಯೋಚಿಸಲು ನಿಲ್ಲಿಸಬಾರದು. ಓತಪ್ರೋತ ಯಾರು ಎಷ್ಟು ಹೆಚ್ಚು ಹೆಸರು ಹೇಳುತ್ತಾರೋ ಅವರು ಗೆದ್ದಂತೆ. ನನ್ನ ಸರದಿ ಬಂತು. ಅದೇನ್ಮಹಾ…. ಲಲಿತಾ ಸಹಸ್ರನಾಮ, ಗೌರೀ ಅಷ್ಟೋತ್ತರ ಶತನಾಮಾವಳಿ, ಶಿವ ಸಹಸ್ರನಾಮ, ಗಣಪತೀ ಅಷ್ಟೋತ್ತರಗಳೆಲ್ಲ ಮನೇಲೂ, ರಾಷ್ಟ್ರೋತ್ಥಾನ ಸ್ಕೂಲಲ್ಲೂ ಹೇಳಿ ಹೇಳಿ ಕಂಠಪಾಠ ಆಗೋಗಿದ್ದವು. (ಈಗಲೂ..!)  ಸರಿ, ಮೊದಲಿನ ಓಂ ಅನ್ನೂ, ಕೊನೆಯ ನಮಃವನ್ನೂ ತೆಗೆದುಹಾಕಿ ಮಧ್ಯಭಾಗದಲ್ಲಿ ಬರುವ ಹೆಸರುಗಳನ್ನೆಲ್ಲ ನಿರರ್ಗಳ ಹೇಳುತ್ತಾ ಹೋದೆ, ಅನಾಯಾಸ ಗೆದ್ದೂಬಿಟ್ಟೆ….. ಎನಫ್, ಎನಫ್.. ಎಂದು ಒಂದಿಬ್ಬರು ಹೇಳಿ ನಿಲ್ಲಿಸಿದ್ದರು ನನ್ನನ್ನು….. ಅಂಜನಾಗೆ ಶಾಕ್ ಆದಂತಿತ್ತು. ಅದುವರೆಗೂ ಈ ನಾಮಸ್ಫರ್ಧೆಯಲ್ಲಿ ಅವಳೇ ಗೆಲ್ಲುತ್ತಿದ್ದಳಂತೆ. ನಂಗೇನ್ಗೊತ್ತು…. ಇಷ್ಟಕ್ಕೂ ನಾನ್ಯಾಕೆ ಗೆಲ್ಲಬಾರದು..? ಅವಳು ಕುವೇತ್ ನಿಂದ ಬಂದಿದ್ಲು. ಸೋ, ವಾಟ್? ನಂ ಹಗರಿಬೊಮ್ನಳ್ಳಿ ಏನ್ ಕಮ್ಮೀನಾ? ಎಂಬ ಧಿಮಾಕು ನನ್ನಲ್ಲೂ ಇತ್ತು. ನಿರ್ಲಕ್ಷಿಸಿದೆ.

ಆದರೆ….. ಮಾರನೆಯ ದಿನ ನನ್ನ ಮಾರ್ಕರ್ ಕಾಣೆಯಾಯಿತು ಇದ್ದಕ್ಕಿದ್ದಂತೆ. ಅನಂತರ ಪೆನ್ಸಿಲ್ ಬಾಕ್ಸ್ ಕೂಡಾ. ನಾನೇ ಎಲ್ಲೋ ಬಿಟ್ಟುಬಂದಿದ್ದೇನೆ ಎಂದುಕೊಂಡು ಸುಮ್ಮನಾದೆ. ಆದರೆ ಅಂದು ಬಯಾಲಜಿ ಲ್ಯಾಬ್ ನಲ್ಲಿ ಇನ್ಸ್ಟ್ರುಮೆಂಟ್ ಬಾಕ್ಸ್ ತೆಗೀತೇನೆ….. ನೈಫ್ ಕಾಣಿಸ್ತಿಲ್ಲ.. ಹೇಗೆ ಎಕ್ಸ್ಪೆರಿಮೆಂಟ್ ಮಾಡಲಿ..? ಸಂಜೆಯಷ್ಟೊತ್ತಿಗೆ  “S” ಅಕ್ಷರದ ಕಸೂತಿ ಹಾಕಿದ್ದ ಮೊಲದಷ್ಟು ಬಿಳುಪೂ, ಮೃದುವೂ ಆಗಿದ್ದ ನನ್ನ ಫೇವರೇಟ್ ಕರ್ಚೀಫೂ ಕಾಣೆಯಾಗಿಹೋಯ್ತು..! ಆಗ ಅನಿಸಿತು..  “Something is wrong..” ಅಂತ.

ಮಾರನೆಯ ದಿನ…. ಅತಿಕ್ರೂರ ಭಾನುವಾರ…. ನನ್ನ ಪಾಲಿಗೆ ಬ್ಲ್ಯಾಕ್ ಸಂಡೇ

ಬೆಳಿಗ್ಗೆ ಬ್ರೇಕ್ ಫಾಸ್ಟ್ ಮುಗಿಸಿಬರುವಷ್ಟರಲ್ಲಿ ಫಿಸಿಕ್ಸ್ ನೋಟ್ಸೇ ಇಲ್ಲವಾಗಿಹೋಗಿತ್ತು. ಚೆನ್ನಾಗಿ ನೆನಪಿತ್ತು, ಬೆಳಿಗ್ಗೆ ಒಂದಷ್ಟು ಓದಿ. ತಿಂಡಿ ತಿನ್ಕೊಂಡು ಬಂದು ಮತ್ತೆ ಓದೋಣವೆಂದು ಟೇಬಲ್ ಮೇಲೇನೇ ಇಟ್ಟಿದ್ದು ಚೆನ್ನಾಗಿ ನೆನಪಿದೆ. ಅರ್ಧಘಂಟೆಯಲ್ಲಿ ಕಾಣಿಸ್ತಿಲ್ಲ ಎಂದರೆ…. ಸಿಟ್ಟು, ದುಃಖ, ಹತಾಶೆ, ಸೋತ ಭಾವ, ಮತ್ತು ನಾಲ್ಕುದಿನಗಳಲ್ಲಿ ಟೆಸ್ಟ್ ಇದೆಯೆಂಬ ಟೆನ್ಷನ್.. ಎಲ್ಲ ಸೇರಿ ವಾರ್ಡನ್ ಸಿಸ್ಟರ್ ಜ್ವನಿತಾ ಬಳಿ ಕಂಪ್ಲೇಂಟ್ ಮಾಡಿಬಿಡಲು ಸಿದ್ಧಳಾದೆ….. ಆಗ ಹೇಳಿದ್ದು ಕುಮುದಾ…..

“May be she…. You defeated her so badly on that day…I am not sure….but…”

ಉಳಿದ ಗೆಳತಿಯರ ಮುಖಗಳೂ ಅದನ್ನೇ ಹೇಳುತ್ತಿದ್ದವು..

ಆ ದಿನ ಉಂಟಾದ ದಿಗ್ಭ್ರಮೆ ಬಹುಕಾಲ ನನ್ನ ಮಿದುಳು, ಮನಸುಗಳನ್ನು ರಾಕ್ಷಸನಂತೆ ಆಳಿತು. “Lost everything..everyone..everywhere..”ಎಂಬಂತೆ ಕುಸಿದುಹೋದೆ. ಸಾಲದ್ದಕ್ಕೆ ಡಿಯೋ ಲೋಬೋ ಕ್ಲಾಸಿನಲ್ಲಿ

ಯಾಕೆ ರೂಮಲ್ಲಿ ನೀನು ಬರೀ ಹರಟೆ ಹೊಡ್ಕೊಂಡು ಎಲ್ರಿಗೂ ಡಿಸ್ಟರ್ಬ ಮಾಡ್ತಿರ್ತಿಯಂತೆ..?

ಎನ್ನಬೇಕೇ? ಇದೂ ಅವಳದೇ ಕೆಲಸವೆಂದು ಸ್ಪಷ್ಟವಾಗಿಹೋಯ್ತು. ನನ್ನ ಮುಖ ನೋಡಿ ಅವರಿಗೇನನಿಸಿತೋ “do well next time” ಎಂದಷ್ಟೇ ಹೇಳಿ ಒಳ್ಳೆ ಅಂಕಗಳನ್ನೇ ನೀಡಿದ್ದರು. ಆದರೆ ನಂಗೆ ಬೇಡವೆನಿಸಿಬಿಟ್ಟಿತ್ತು.

ಇಪ್ಪತ್ತೆಂಟು ವರ್ಷಗಳಾಗಿಹೋಗಿವೆ ಅದೆಲ್ಲ ಆಗಿಹೋಗಿ..

ಏಕೆ ಹೀಗಾಡಿದೆ ಗೆಳತೀ.. ನೋಡು ಈಗಲೂ ನಂಗೆ ಮರೆಯಲಾಗುತ್ತಿಲ್ಲ.. ಒಂದು ಸೋಲು ಅಥವಾ ಒಂದು ಗೆಲುವು.. ಅದೂ ಚಿಕ್ಕದೊಂದು ಸ್ಫರ್ಧೆಯಲ್ಲಿ….. ಇಷ್ಟು ಮುಖ್ಯವಾ? ಅಷ್ಟೊಂದು ಅವಮಾನಕಾರಿಯಾ..?ಇವೊತ್ತಿಗೂ ನಾನು ಗೆಲುವನ್ನು ಸಂಪೂರ್ಣ ಆಸ್ವಾದಿಸಲಾರೆ.. ಸೋತಾಗ ಅಂಥ ದುಃಖವೂ ಆಗೋದಿಲ್ಲ. ಮನಸು ಮತ್ತೆ ಮತ್ತೆ ಕೇಳುವುದು ಅದೇ ಪ್ರಶ್ನೆ.. ಅಂದು ಹಾಗೇಕಾಡಿದೆ ಗೆಳತೀ.. ಅದರ ಅವಶ್ಯಕತೆಯಿತ್ತೇ? ಎಂದು.