ರೋಹಿತ್ ಸಾವು: ಸಾಲು ಸಾಲು ಅಪರಾಧಿಗಳು!

-ಶಿವರಾಂ

ಪ್ರತಿಯೊಬ್ಬರೂ ಹುಟ್ಟೂ ಆಕಸ್ಮಿಕ. ಆದರೆ ‘ತನ್ನ ಹುಟ್ಟು ಮಾರಣಾಂತಿಕ ಅವಘಡ’ ಎಂದು ಬರೆದಿಟ್ಟು ನೇಣು ಹಾಕಿಕೊಂಡ ರೋಹಿತ್ ವೇಮುಲ ಮಾತ್ರ ಭಾರತದ ಪ್ರಜ್ಞೆಯನ್ನು ಬಹುವಾಗಿ ಬಹಳ ಕಾಲ ಕಾಡುತ್ತಾನೆ. ಜಾತಿಯ ಅಹಂ ಮತ್ತು ಅಸ್ಪೃಶ್ಯತೆಯನ್ನು ಪೋಷಿಸುವ ರಾಜಕಾರಣ ರೋಹಿತ್ ನನ್ನು ನೇಣಿಗೆ ಏರಿಸಿ, ತಮ್ಮದೇನೂ ತಪ್ಪೇ ಇಲ್ಲದಂತೆ ಬೀಗುತ್ತಿವೆ. ದೇಶದ ಕಾನೂನಿನಲ್ಲಿ ಮರಣ ದಂಡನೆಯಂತಹ ಘೋರ ಶಿಕ್ಷೆ ಇರಬಾರದು ಎಂದು ಪ್ರತಿಭಟಿಸಿದ್ದ ವೇಮುಲ ಈಗ ತಾನೇrohit-2 ನೇಣಿನ ಕುಣಿಕೆಗೆ ತಲೆ ಒಡ್ಡಿದ. ತನ್ನ ಸುತ್ತಲ ವ್ಯವಸ್ಥೆಯ ತಪ್ಪಿಗೆ, ತನಗೆ ತಾನೇ ಶಿಕ್ಷೆ ವಿಧಿಸಿಕೊಂಡ.
ಕಳೆದ ಡಿಸೆಂಬರ್ 16 ರಂದು ವಿಶ್ವವಿದ್ಯಾನಿಲಯ ರೋಹಿತ್ ಸೇರಿದಂತೆ ಐವರನ್ನು ಹಾಸ್ಟೆಲ್ನಿಂದ ಉಚ್ಚಾಟನೆ ಮಾಡಿತು. ಪ್ರತಿಭಾನ್ವಿತ ವಿದ್ಯಾರ್ಥಿಯಾದ ರೋಹಿತ್ ಮತ್ತು ಗೆಳೆಯರು ವಿದ್ಯಾರ್ಥಿ ವೇತನ ಪಡೆದು ಸಂಶೋಧನೆಗೆಂದು ವಿ.ವಿಗೆ ಬಂದವರು. ಅವರಿಗೆ ಬೇರೆ ಆದಾಯದ ಮೂಲಗಳಿರುವುದಿಲ್ಲ. ಅಂತಹವರಿಗೆ ಇರಲು ಜಾಗ ಕೊಡದೆ, ಹೊರಗೆ ನೂಕುವುದು ಘೋರ. ಅವರ ಮೇಲಿರುವ ಆರೋಪ (ಸುಳ್ಳು) ಗಳ ಕಾರಣಕ್ಕೆ ಪೊಲೀಸರು ಬಂಧಿಸಿದ್ದರೂ, ಆತನಿಗೆ ಅನ್ನ, ಆಶ್ರಯಕ್ಕೆ ತೊಂದರೆ ಮಾಡುತ್ತಿರಲಿಲ್ಲ. ಆದರೆ ಶಿಕ್ಷಣ ಪಡೆಯಲು ಸೇರಿಕೊಂಡಿದ್ದ ಸಂಸ್ಥೆಯೇ ಅವರನ್ನು ಹೊರಹಾಕಿತು. ನಿರ್ಧಾರವನ್ನು ಪ್ರತಿಭಟಿಸಿ ಉಪವಾಸ ಕುಂತರೂ, ಕುಲಪತಿಗೆ ಕರುಣೆ ಬಾರಲಿಲ್ಲ.
ವಿಶ್ವವಿದ್ಯಾನಿಲಯ ಈ ವಿದ್ಯಾರ್ಥಿಗಳ ಪ್ರವೇಶ ನಿರ್ಬಂಧಿಸಿದ್ದು – ಸಾಮಾಜಿಕವಾಗಿ ಇತರರೊಂದಿಗೆ ಬೆರೆಯಬಹುದಾದ ಎಲ್ಲಾ ಪ್ರದೇಶಗಳಿಗೆ. (ಹಾಸನ ಜಿಲ್ಲೆಯ ಸಿಗರನಹಳ್ಳಿ ಗ್ರಾಮದಲ್ಲಿ ದಲಿತರಿಗೆ ವಿಧಿಸಲಾಗಿರುವ ಸಾrohit-1ಮಾಜಿಕ ಬಹಿಷ್ಕಾರಕ್ಕೂ, ಈ ವಿ.ವಿ. ನಿರ್ಧಾರಕ್ಕೂ ಏನಾದರೂ ವ್ಯತ್ಯಾಸ ಇದೆಯೆ?) ಇತರರೊಂದಿಗೆ ಮಾತನಾಡಲು ಕನಿಷ್ಟ ಅವಕಾಶಗಳಿರುವ ತರಗತಿ ಹಾಗೂ ಲೈಬ್ರರಿಗೆ ಮಾತ್ರ ಪ್ರವೇಶ ಅವಕಾಶ ಇತ್ತು. ಮೇಲಾಗಿ, ವಿದ್ಯಾರ್ಥಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಇಂತಹ ನಿರ್ಧಾರಕ್ಕೆ ಇದ್ದ ಮೂಲ ಕಾರಣವಾದರೂ ಏನು – ತಮ್ಮನ್ನು ಗೂಂಡಾಗಳು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದ ಎಬಿವಿಪಿ ಹುಡುಗರ ಮೇಲೆ ಹಲ್ಲೆ ಮಾಡಿದರು ಎಂಬ ಆರೋಪ. ವಿಚಿತ್ರ ಎಂದರೆ, ಅಂತಹದೊಂದು ‘ಹಲ್ಲೆ’ ಗೆ ಒಳಗಾದ ವಿದ್ಯಾರ್ಥಿಯ ಮೇಲೆ ಯಾವುದೇ ಗಾಯದ ಕುರುಹುಗಳಿಲ್ಲ ಎಂದು ಪರೀಕ್ಷಿಸಿದ ವೈದ್ಯರು ವರದಿ ನೀಡಿದ್ದರು. ಅದೇ ವರದಿ ಆಧರಿಸಿ ವಿ.ವಿ ನೇಮಿಸಿದ್ದ ಮೊದಲ ಸಮಿತಿ ತನ್ನ ನಿರ್ಧಾರ ತಿಳಿಸಿತ್ತು.

 
ಆದರೆ, ತನಗೆ ಒಪ್ಪಿತವಾಗದ ವರದಿಯನ್ನು ವಿ.ವಿ ತಿರಸ್ಕರಿಸಿ ಮತ್ತೊಂದು ವ್ಯತಿರಿಕ್ತ ವರದಿಗೆಂದೇ ಇನ್ನೊಮ್ಮೆ ಇನ್ನೊಂದು ಸಮಿತಿ ನೇಮಿಸಿ ತನಿಖೆಗೆ ಆದೇಶಿಸಿತು. ಕುಲಪತಿ ಅಪ್ಪಾರಾವ್ ಹೇಳುತ್ತಾರೆ, ಮೊದಲಿನದ್ದು ಮಧ್ಯಂತರ ವರದಿಯಂತೆ, ಎರಡನೆಯದು ಅಂತಿಮ ಅಂತೆ. ಮೊದಲನೆಯ ವರದಿ ಮಧ್ಯಂತರ ಆಗಿದ್ದರೆ, ಆರೋಪ ಹೊತ್ತಿರುವ ಹುಡುಗರ ಮೇಲೆ ಯಾವುದೇ ಶಿಕ್ಷೆಯ ಕ್ರಮಗಳು ಬೇಡ ಎಂದೇಕೆ ಶಿಫಾರಸ್ಸು ಮಾಡುತ್ತಿದ್ದರು? ಹೀಗೆ ದಿಕ್ಕುತಪ್ಪಿಸುವ ಹೇಳಿಕೆಗಳನ್ನು ನೀಡಿ, ತಮ್ಮ ತಪ್ಪುಗಳನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ ಕುಲಪತಿ. ಸನ್ನಿವೇಶ ಎಷ್ಟು ಕ್ರೂರವಾಗಿದೆ ಎಂದರೆ, ಈಗಲೂ ಕುಲಪತಿ ಹುಡುಗರ ಜೊತೆ ಮಾತುಕತೆಗೆ ಮುಂದಾಗಿಲ್ಲ, ಮೃತನ ಕುಟುಂಬದವರ ಜೊತೆ ಸಾಂತ್ವನದ ಮಾತುಗಳನ್ನಾಡಿಲ್ಲ. ಹುಡುಗರ ಉಪವಾಸ, ಪ್ರತಿಭಟನೆಗಳಿಗೆ ಬೆಲೆ ಇಲ್ಲವೆ?

 
ಭಾರತದ ಪ್ರತಿಷ್ಟಿತ ವೈದ್ಯಕೀಯ ಸಂಸ್ಥೆಯಲ್ಲಿ ದಲಿತ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ನಂತರ ಸುಖದೇವ್ ತೋರಟ್ ಅಧ್ಯಯನ ನಡೆಸಿ (2007ರಲ್ಲಿ) ವರದಿ ಸಲ್ಲಿಸಿದ್ದರು. ಅವರ ಶಿಫಾರಸ್ಸಿನ ಪ್ರಮುಖ ಅಂಶಗಳು, ಶಿಕ್ಷಣ ಸಂಸ್ಥೆಗಳಲ್ಲಿ ಅಸ್ಪೃಶ್ಯತೆ, ಶೋಷಣೆ ತಡೆಯಲು ಸೂಕ್ತ ಕಾನೂನಿನ ಅಗತ್ಯ ಇದೆ, ಸದ್ಯ ಚಾಲ್ತಿಯಲ್ಲಿರುವ ಎಸ್ಸಿ-ಎrohit-3ಸ್ಟಿ ಕಾಯ್ದೆ ಈ ವಿಚಾರದಲ್ಲಿ ಪರಿಣಾಮಕಾರಿಯಾಗಿಲ್ಲ ಎನ್ನುವುದು ಅವರ ಅನಿಸಿಕೆ. ಹಾಗೇ ಶಿಕ್ಷಣ ಸಂಸ್ಥೆಯ ಎಲ್ಲಾ ಆಯಕಟ್ಟಿನ ಸ್ಥಾನಗಳಲ್ಲಿ ನಿಮ್ನ ವರ್ಗದ ಪ್ರತಿನಿಧಿಗಳಿಗೆ ಸೂಕ್ತ ಅವಕಾಶ ಬೇಕು. ಜೊತೆಗೆ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಒಳಗೊಳ್ಳುವಂತೆ ಸಿವಿಕ್ ಎಜುಕೇಶನ್ ನೀಡುವುದು ಅಗತ್ಯ. ಜಾತಿ, ವರ್ಣ, ಲಿಂಗ, ವರ್ಗ ಆಧಾರಿತ ತಾರತಮ್ಯಗಳ ಬಗ್ಗೆ ಸೂಕ್ತ ತಿಳವಳಿಕೆ ನೀಡುವುದರಿಂದ ವಿದ್ಯಾರ್ಥಿ ಸಮೂಹ ಸಮಾನತೆಯನ್ನು ಬಯಸುತ್ತಾ ಎಲ್ಲರನ್ನೂ ಒಂದೇ ರೀತಿ ನೋಡವ ಮನೋಭಾವ ಬೆಳೆಸಲು ಈ ಕ್ರಮ ಅಗತ್ಯವಾಗಿತ್ತು.

 

ಆದರೆ, ಈ ಯಾವ ಶಿಫಾರಸ್ಸುಗಳ ಬಗೆಯೂ ಸರಕಾರಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿಲ್ಲ. ಆ ಕಾರಣ ಅಂಬೇಡ್ಕರ್ ಅಥವಾ ಪೆರಿಯಾರ್ ಹೆಸರಿಟ್ಟುಕೊಂಡು ಚಟುವಟಿಕೆ ನಡೆಸುವವರನ್ನೆಲ್ಲಾ ದೇಶದ್ರೋಹಿಗಳೆಂದು ಕೆಲವರು ದೂರುತ್ತಾರೆ, ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಈ ಹುಡುಗರ ಮೇಲೆ ಕ್ರಮ ಜರುಗಿಸಲೆಂದು ಪದೇ ಪದೇ ಪತ್ರ ಬರೆದೂ, ತನ್ನದೇನೂ ಪಾತ್ರವಿಲ್ಲ ಎನ್ನುತ್ತಾರೆ. ಆದರೆ ರೋಹಿತ್ ಮಾತ್ರ ಯಾರನ್ನೂ ದೂಷಿಸಬೇಡಿ ಎಂದು ಸಾವಿಗೆ ಶರಣಾಗಿದ್ದಾನೆ. ಅವನ ಸಾವಿಗೆ ಯಾರನ್ನೇ ಆಗಲಿ ದೂಷಿಸಿ, ಇಂದಿನ ಕಾನೂನಿನಡಿ ‘ಆತ್ಮಹತ್ಯೆಗೆ ಪ್ರಚೋದನೆ’ ಎಂದು ತೀರ್ಪು ಪಡೆಯುವುದು ದೀರ್ಘದ ಪ್ರಕ್ರಿಯೆ ಇರಬಹದುದು. ಆದರೆ ಒಂದಂತೂ ಸತ್ಯ, ಆತನನ್ನು ಸಾವಿಗೆ ದೂಡಿದ್ದು, ಈ ದೇಶ, ವ್ಯವಸ್ಥೆ, ಶಿಕ್ಷಣ, ಮಧ್ಯಮ ವರ್ಗದ ಮೀಸಲಾತಿ-ವಿರೋಧಿ, ದಲಿತ-ವಿರೋಧಿ ಆಲೋಚನೆ ಹಾಗೂ ಎಲ್ಲಡೆ ಹೇರಳವಾಗಿ ಹಬ್ಬುತ್ತಿರುವ ‘ಮೇಲ್ವರ್ಗ ಕೇಂದ್ರಿತ ರಾಜಕಾರಣ’.

4 thoughts on “ರೋಹಿತ್ ಸಾವು: ಸಾಲು ಸಾಲು ಅಪರಾಧಿಗಳು!

  1. ಸೀತಾ

    ಸಾವಿನ ಮೊದಲು ಬರೆದ ಕೊನೆಯ ಪತ್ರದಲ್ಲಿ ರೋಹಿತ್ ತಾನು ಸಕ್ರಿಯನಾಗಿದ್ದ ಅಂಬೇಡ್ಕರ್ ವಿದ್ಯಾರ್ಥಿ ಸಂಘವನ್ನೂ ಪ್ರತಿಸ್ಪರ್ಧಿ ವಿದ್ಯಾರ್ಥಿ ಸಂಘಗಳನ್ನೂ ದೂರಿದ್ದಾನೆ ಅಂತ ವರದಿಯಾಗಿದೆ. ಆದರೆ ಈ ಸಾಲುಗಳನ್ನು ಪತ್ರದಿಂದ ಹೊಡೆದು ಹಾಕಲಾಗಿದೆ. ಆತನೇ ಹಾಗೆ ಮಾಡಿದನೇ ಅಥವಾ ಆತನ ಮರಣಾನಂತರ ಹೊಡೆದು ಹಾಕಲಾಯಿತೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಉತ್ತಮ ಶಿಕ್ಷಣ ಹಾಗೂ ಸುಭದ್ರ ಭವಿಷ್ಯದ ಆಕಾಂಕ್ಷೆ ಹೊತ್ತು ವಿಶ್ವವಿದ್ಯಾಲಯಗಳಿಗೆ ಪ್ರವೇಶ ಪಡೆಯುವ ರೋಹಿತನಂತಹ ಅನೇಕ ಅಮಾಯಕ ಅಸಹಾಯಕ ಬಡ ದಲಿತ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಿ ಶಿಕ್ಷಣದಿಂದ ವಿಮುಖಗೊಳಿಸಿ ಬೀದಿ ಕಾಳಗಗಳಿಗೆ ಸೀಮಿತಗೊಳಿಸುವ ವಿದ್ಯಾರ್ಥಿ ಸಂಘಟನೆಗಳನ್ನು ತಹಬದಿಗೆ ತರತಕ್ಕದ್ದು. ವಿಶ್ವವಿದ್ಯಾನಿಲಯಗಳು ಕ್ಷುದ್ರ ರಾಜಕಾರಣಕ್ಕೆ ಗೂಂಡಾಗಿರಿಗೆ ತರಬೇತಿ ನೀಡುವ ಅಕಾಡಗಳಾಗಕೂಡದು. ಅಂಬೇಡ್ಕರ್ ಅವರು ಸ್ವತಹ ದೊಡ್ಡ ವಿದ್ವಾಂಸರಾಗಿದ್ದರು ಹಾಗೂ ವಿದ್ಯಾರ್ಜನೆಯ ಸಮಯದಲ್ಲಿ ಶಿಸ್ತುಬದ್ಧ ವಿದ್ಯಾರ್ಥಿಯಾಗಿದ್ದರು. ಅವರದೇ ಹೆಸರಿನ ವಿದ್ಯಾರ್ಥಿ ಸಂಘಟನೆಗಳು ಅಂಬೇಡ್ಕರ್ ಅವರ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಮಾಡಬಾರದು.

    Reply
      1. ಸೀತಾ

        ರೋಹಿತನ ತಂದೆ ಟಿವಿ ಸಂದರ್ಶನದಲ್ಲಿ ಜುಡಿಷಿಯಲ್ ಇನ್ಕ್ವೈರಿ ಆಗಬೇಕು ಅಂತ ಆಗ್ರಹಪಡಿಸಿದ್ದಾರೆ ಹಾಗೂ ಶವರಾಜಕೀಯವನ್ನು ನಿಲ್ಲಿಸಬೇಕು ಎಂದು ರಾಜಕಾರಣಿಗಳನ್ನೂ ಮಾಧ್ಯಮಗಳನ್ನೂ ಕೋರಿದ್ದಾರೆ: _https://twitter.com/dev12jan/status/690741990615461888

        Reply
        1. ಸೀತಾ

          “The response to Rohith Vemula’s suicide and to his letter is indeed a symptom of a corrupt system, not the so-called ‘caste system’, but something very different: namely, the systematic corruption of politics, academics, and the media in India, which is so manifest in their reporting about, and responding to, the genuine problems in Indian society. Today, this system is doing to Rohith what has been happening again and again from the colonial era onwards: inflicting violence upon people’s experiences instead of making sense of them.”

          ನೋಡಿ: _http://witness-to-our-times.org/2016/01/26/taking-rohith-seriously/

          Reply

Leave a Reply to ಸೀತಾ Cancel reply

Your email address will not be published. Required fields are marked *