ಅಂತಃಕರಣದ ಮಾದರಿಗಳಿಗೆ ಪುಟ್ಟ ವಂದನೆ


– ರೂಪ ಹಾಸನ


ಮುದ್ದು ಮುಖದ ಆ ಹುಡುಗಿಯ ಮುಖದಲ್ಲಿ ನೋವು ಹರಡಿ ನಿಂತಿದ್ದರೂ ಆತ್ಮವಿಶ್ವಾಸವಿತ್ತು. ತನ್ನ ಪ್ರತಿಯೊಂದು ಹೆಜ್ಜೆಯನ್ನೂ ಕಷ್ಟಪಟ್ಟು ಎತ್ತಿಡುತ್ತಿದ್ದಳು. ಪೋಲಿಯೋ ಪೀಡಿತ ಎರಡೂ ಕಾಲಿಗೆ ಭಾರವಾದ ಕ್ಯಾಲಿಪರ್ಸ್ ತೊಟ್ಟು ಊರುಗೋಲಿನ ಸಹಾಯದಿಂದ ಹೆಜ್ಜೆ ಊರಬೇಕಿತ್ತು. ಓದು, ಕೌಶಲ್ಯಗಳಿಕೆ, ಆಮೇಲಿನ ಉದ್ಯೋಗಾನ್ವೇಷಣೆ ಯಾವುದೂ ಸುಲಭವಾಗಿರಲಿಲ್ಲ. ದಿನದಿನದ ಒಳ-ಹೊರಗಿನ ಯುದ್ಧದಲ್ಲಿ ಸೋಲನುಭವಿಸಿದರೂ ಮತ್ತೆ ನಾಳಿನ ಹೆಣಗಾಟಕ್ಕೆ ಸಿದ್ಧತೆ ನಡೆಸಬೇಕಿತ್ತು. ಸಮಾಜದ ಮುಖ್ಯವಾಹಿನಿಯಲ್ಲಿ ಒಂದಾಗಲು ಹೊರಟ ಅವಳ ಅವಿರತ ಪ್ರಯತ್ನದಲ್ಲಿ ಹೆತ್ತವರು, ಬಂಧುಬಳಗ, ಜಾತಿಬಾಂಧವರು, ಸರ್ಕಾರ ಯಾರೂ ಇರಲಿಲ್ಲ. ಆದರೆ ಜೊತೆಗೆ ನಿಂತದ್ದು ಒಂದು ಪೋಲಿಯೋ ಪುನರ್ವಸತಿ ಕೇಂದ್ರ.

ಅಂಗವೈಕಲ್ಯತೆ ಒಂದು ಶಾಪವೆಂದೇ ಭಾವಿಸಿರುವ ನಮ್ಮ ಸಮಾಜದಲ್ಲಿ, ಹೆಚ್ಚಿನ ಬಡ ಪೋಷಕರು ಅಂಗವಿಕಲ ಮಕ್ಕಳನ್ನು ಹೊರೆ ಎಂದೇ ಭಾವಿಸುತ್ತಾರೆ. ಇಂತಹ ಮಕ್ಕಳ ಹೆಸರಿನಲ್ಲಿ ಸರ್ಕಾರದಿಂದ ದೊರಕುವ ವಿಶೇಷ ಅಲ್ಪಭತ್ಯೆಯನ್ನೂ ಮಕ್ಕಳಿಗಾಗಿ ಖರ್ಚು ಮಾಡದೇ ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಳ್ಳುವವರೂ ಹಲವರಿದ್ದಾರೆ. ಬಡ ಅಂಗವಿಕಲ ಮಕ್ಕಳನ್ನು ಕುಟುಂಬದವರೇ ನಿಕೃಷ್ಟವಾಗಿ ಕಂಡು ನಿರ್ಲಕ್ಷಿಸುವುದು ಮಾಮೂಲು. ಅವರಿಗೆ ಅವಶ್ಯಕ ಶಿಕ್ಷಣ ನೀಡಿ, ಸ್ವಾವಲಂಬಿಗಳಾಗಿಸುವ ಪ್ರಯತ್ನಗಳು ನಡೆಯುವುದೂ ಕಡಿಮೆ. ಅಂತಹ ಮಕ್ಕಳಿಗೆ ಆಶಾಕಿರಣವಾದ ಈ ಪೋಲಿಯೋ ಪುನರ್ವಸತಿ ಕೇಂದ್ರ ಕಳೆದ 25 ವರ್ಷಗಳಿಂದ ನೂರಾರು ಮಕ್ಕಳಿಗೆ ಆಸರೆಯಾಗಿದೆ.

6-7 ವರ್ಷದವರಿದ್ದಾಗಲೇ ಅಂಗವಿಕಲ ಮಕ್ಕಳು ಇಲ್ಲಿಗೆ ಸೇರಿದರೆಂದರೆ ಮುಂದೆ ಅವರಿಗೆ ಬೇಕಾಗುವ ವಿಶೇಷ ಶಸ್ತ್ರಚಿಕಿತ್ಸೆ, ಆನಂತರದ ಕೃತಕ ಲಿಂಬ್- ಕ್ಯಾಲಿಪರ್ಸರ್ ಗಳ ಅಳವಡಿಕೆ, govt-school-kidsದಿನನಿತ್ಯದ ಫಿಸಿಯೋಥೆರಪಿ ಚಿಕಿತ್ಸೆ, ಊರುಗೋಲುಗಳೊಂದಿಗೇ ಊಟ-ವಸತಿ-ವಿದ್ಯಾಭ್ಯಾಸ, ಮಕ್ಕಳ ಆಸಕ್ತಿ, ಪ್ರತಿಭೆ, ಸಾಮಥ್ರ್ಯಕ್ಕನುಗುಣವಾಗಿ ವೃತ್ತಿತರಬೇತಿಗಳನ್ನು ಉಚಿತವಾಗಿ ನೀಡಿ ಕೆಲಸದಲ್ಲೂ ತೊಡಗಿಸಿ ಕುಟುಂಬಕ್ಕೆ, ಸಮಾಜಕ್ಕೆ ಹೊರೆಯಾಗದಂತೆ ಸ್ವಾವಲಂಬಿಯಾಗಿಸುವ ಸ್ವಯಂ ಹೊಣೆಗಾರಿಕೆವಹಿಸಿಕೊಂಡಿದೆ ಈ ಕೇಂದ್ರ. ಕನಿಷ್ಠ 12-15 ವರ್ಷಗಳ ನಿರಂತರ ಪಾಲನೆ, ಪ್ರತಿಯೊಂದು ಮಗುವಿನ ಬಗೆಗೆ ವಿಶೇಷ ಗಮನಿಸುವಿಕೆ, ವ್ಯಕ್ತಿತ್ವ ನಿರ್ಮಾಣದ ಜವಾಬ್ದಾರಿ ಖಂಡಿತಾ ಸಾಮಾನ್ಯವಾದ ಕೆಲಸವಂತೂ ಅಲ್ಲ. ಸ್ವತಹ ಅಥೋರೇ ಸ್ಪಿಂಟ್ ಯೂನಿಟ್ ಹೊಂದಿ ಕ್ಯಾಲಿಪರ್ಸರ್ ಗಳನ್ನು ತಾನೇ ತಯಾರಿಸುತ್ತಿರುವುದರೊಂದಿಗೆ, ಮಕ್ಕಳು ಬೆಳೆದಂತೆಲ್ಲಾ ದೇಹದ ಆಕಾರಕ್ಕೆ ತಕ್ಕಂತೆ ಉಪಕರಣವನ್ನು ಮಾರ್ಪಾಟುಗೊಳಿಸಲು ಎಲ್ಲ ಅನುಕೂಲಗಳೂ ಇಲ್ಲಿವೆ.

ಶಿಸ್ತುಬದ್ಧ, ವ್ಯವಸ್ಥಿತ ಅನುಕೂಲತೆಗಳನ್ನು ಹೊಂದಿರುವ ಇಂತಹ ಕೇಂದ್ರ ಇನ್ನೊಂದೆರಡು ವರ್ಷಗಳಲ್ಲಿ ಮುಚ್ಚಿಹೋಗಲಿದೆ! ಏಕೆಂದರೆ ಪೋಲಿಯೋ ಕರ್ನಾಟಕದಿಂದ ನಿರ್ಮೂಲನೆಗೊಂಡಿದೆ. ಕಳೆದ 5-6 ವರ್ಷಗಳಿಂದ ಹೊಸದಾಗಿ ಮಕ್ಕಳು ಇಲ್ಲಿಗೆ ಸೇರ್ಪಡೆಗೊಂಡಿಲ್ಲ. ಇದು ಸಂತಸದ ಸಂಗತಿಯೂ ಹೌದು. ಈ ಕೇಂದ್ರವನ್ನು ಮತ್ತಿನ್ನೊಂದು ಅಸಹಾಯಕ ಮಕ್ಕಳ ಸೇವಾ ಘಟಕವಾಗಿ ಪರಿವರ್ತಿಸುವ ಬಗೆಗೆ ಯೋಜಿಸಲಾಗುತ್ತಿದೆ. ಈಗಿಲ್ಲಿ ಉಳಿದ ಕೆಲವೇ ಕೆಲವು ಮಕ್ಕಳ ಬದುಕು ನೇರ್ಪುಗೊಳಿಸುವ ಶ್ರದ್ಧೆಯಿಂದ, ಅಲ್ಲಿನ ಮೇಲ್ವಿಚಾರಕಿ, ಅವರ ಸ್ವಾವಲಂಬನೆಗಾಗಿ ಕಂಡಕಂಡವರ ಬಳಿ ಅಂಗಲಾಚುವಾಗ, ಗೌರವಧನದ ರೂಪದಲ್ಲಿ ದೊರಕುವ ಅತ್ಯಲ್ಪ ಹಣಕ್ಕಾಗಿ, ತಾಳ್ಮೆಯಿಂದ ಒಂದೊಂದು ಮಗುವಿನ ವ್ಯಕ್ತಿತ್ವ ರೂಪಿಸುವ ಈ ಮಹಿಳೆಗೆ ಆ ಸಂಬಂಧವಿಲ್ಲದ ಮಕ್ಕಳು ಸ್ವಾವಲಂಬಿಗಳಾದರೆ ಏನು ಸಿಕ್ಕುತ್ತದೆ? ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಉದ್ದೇಶಿತ ಗುರಿಯೊಂದರ ಸಾಧನೆಯ ಜೊತೆಗೆ ಇಷ್ಟು ವರ್ಷ ತಾವಿದ್ದ ಹೆಮ್ಮೆ, ಇಲ್ಲಿಗೆ ಬಂದ ಪ್ರತಿಯೊಂದು ಅಂಗವಿಕಲ ಮಗುವೂ ದೃಢ ವ್ಯಕ್ತಿತ್ವವಾಗಿ ಸಮಾಜಕ್ಕೆ ಹಿಂದಿರುಗಿದ ಬಗೆಗೆ ಅಪರಿಮಿತ ಸಂತಸ, ಅಲ್ಲಿನ ಕೆಲಸಗಾರರೆಲ್ಲರಿಗೆ! ಈ ಭಾವಗಳು ಖಂಡಿತಾ ಬೆಲೆ ಕಟ್ಟಲಾಗದಂತಹವು.

ಅಲ್ಲಿನ ಮಕ್ಕಳು, ಆಗು-ಹೋಗುಗಳೊಂದಿಗೆ ಹಲವು ವರ್ಷಗಳ ಒಡನಾಟವಿರುವುದರಿಂದ, ಅಂಗವೈಕಲ್ಯತೆಯ ಕೀಳರಿಮೆಯಿಂದ ಕುಗ್ಗುತ್ತಾ ಈ ಕೇಂದ್ರಕ್ಕೆ ಬಂದು ಸೇರುವ ಮಕ್ಕಳು,Polio ತಮ್ಮ ನೋವು ಮೀರಿ ಗಟ್ಟಿ ವ್ಯಕ್ತಿತ್ವಗಳಾಗಿ ಹೊರಬೀಳುವುದನ್ನು ಹತ್ತಿರದಿಂದ ಕಂಡ ಅನುಭವವಿದೆ. ಆ ಪ್ರಕ್ರಿಯೆ ಎಂಥಹ ಶ್ರಮ, ಶ್ರದ್ಧೆ, ಸಹನೆಯನ್ನು ಬೇಡುವಂತಹುದೆಂಬುದು ಅನುಭವಿಸಿದವರಿಗೇ, ಹತ್ತಿರದವರಿಗೇ ಗೊತ್ತಿರುವಂತದ್ದು. ಇಲ್ಲಿ ಬಂದು ಸ್ವಾವಲಂಬಿಗಳಾಗಿರುವ ಹೆಚ್ಚಿನ ಮಕ್ಕಳು ಮುಸ್ಲಿಂ, ಕ್ರೈಸ್ತ ಹಾಗೂ ಹಿಂದೂ, ಮತ್ತದರ ಎಲ್ಲಾ ಒಳ ಜಾತಿಗೆ ಸೇರಿದವರು. ಇಲ್ಲಿಂದ ಸಂಪೂರ್ಣ ಉಚಿತ ಸಹಾಯ, ಸಹಕಾರ ಪಡೆದು ತಮ್ಮ ನೆಲೆಗಳನ್ನು ಕಂಡು ಕೊಂಡಿರುವ ಎಲ್ಲ ಜಾತಿ, ಮತಗಳ ಯುವಕ-ಯುವತಿಯರು ತಮ್ಮ ಹೊಸ ಸಂಸಾರದೊಂದಿಗೆ ಈ ಕೇಂದ್ರಕ್ಕೆ ಭೇಟಿ ನೀಡಲು ಬರುವಾಗ ಮಕ್ಕಳಿಗಾಗಿ ಸಿಹಿಯೊಂದಿಗೇ ಪ್ರೀತಿಯನ್ನೂ ಹೊತ್ತು ತರುತ್ತಾರೆ. ತಾವು ಇಂದು ಮುಖ್ಯವಾಹಿನಿಯಲ್ಲಿ ತಲೆಎತ್ತಿ ಬದುಕಲು ಆಸರೆಯಾದ ಈ ಕೇಂದ್ರದ ಬಗೆಗೆ ಅಪಾರ ಗೌರವ, ಹೆಮ್ಮೆಯೂ ಜೊತೆಗಿರುತ್ತದೆ! ‘ನೀವು, ನಿಮ್ಮವರನ್ನೆಲ್ಲಾ ಬಿಟ್ಟು ಇಂತಹ ಕೇಂದ್ರವೊಂದರ ಆಶ್ರಯದಲ್ಲಿ ಇಷ್ಟು ವರ್ಷಗಳು ಇದ್ದುದಕ್ಕೆ ಬೇಸರವಿದೆಯೇ?’ ಎಂದು ಪ್ರಶ್ನಿಸಿದರೆ ಆ ಯುವಜನರು ಸಿಡಿದು ಬೀಳುತ್ತಾರೆ. ‘ನಮ್ಮ ಕುಟುಂಬ, ಜಾತಿ, ಸರ್ಕಾರ ಯಾರಿಗೂ ನಾವು ಬೇಡವಾಗಿದ್ದ ಕಾಲದಲ್ಲಿ ಈ ಕೇಂದ್ರ ನಮಗೆ ಆಶ್ರಯ, ವಿದ್ಯೆ, ಕೆಲಸ ನೀಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಿದೆ. ಅಂಗವಿಕಲತೆಗೆ, ನೋವಿಗೆ ಯಾವ ಜಾತಿ, ಮತ? ಮಾನವೀಯತೆಯೇ ನಿಜವಾದ ಧರ್ಮ.’ ಎನ್ನುವಾಗ ಮತಾಂಧತೆ, ಕೋಮುವಾದಗಳಿಗೆ ಉತ್ತರ ಸಿಕ್ಕಿಬಿಡುತ್ತದೆ!

ಮತಾಂತರ, ಕೋಮುಗಲಭೆಗಳನ್ನು ಕಂಡಾಗ ನನ್ನಂತಹ ಸಾಮಾನ್ಯರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳೇಳುತ್ತವೆ. ಇಂದಿನ ಸಾಮಾನ್ಯ ಜನರಿಗೆ ನಿಜವಾಗಿ ಏನು ಬೇಕು? ಅವರಿಗೆ ಯಾವುದು ಅತ್ಯಂತ ಮುಖ್ಯವಾದುದು? ವಿರೂಪಗೊಳ್ಳುತ್ತಿರುವ ಇಂದಿನ ಜಾತಿ, ಧರ್ಮ, ಮತಗಳು ಅವರಿಗೆ ಏನನ್ನು ನೀಡುತ್ತಿವೆ? ಸಹಜ ಹಾಗೂ ಸರಳ ಮನುಷ್ಯ ಧರ್ಮವನ್ನೂ ಮೀರಿದ ಮತ-ಧರ್ಮಗಳು ಎಲ್ಲಿವೆ? ಕೊನೆಯದಾಗಿ, ಇವು ಜನರ ಶಾಂತಿ ಮತ್ತು ನೆಮ್ಮದಿಯ ಬದುಕಿಗೆ ಎಷ್ಟು ಅನಿವಾರ್ಯವಾಗಿವೆ? ಎಂಬ ಪ್ರಶ್ನೆ.

ತೀವ್ರ- ಬಡತನ, ಅಸಹಾಯಕತೆ, ಅಸಮಾನತೆ, ನೋವು, ಅವಮಾನಕ್ಕೊಳಗಾದ ಜೀವಗಳಿಗೆ ಅಂತಃಕರಣದ ಸಣ್ಣ ಸಹಾಯಹಸ್ತವೂ ದೊಡ್ಡದಾಗಿಯೇ ಕಾಣುತ್ತದೆ.polio_2 ಮತ್ತು ಅವುಗಳನ್ನು ಅನುಭವಿಸುತ್ತಿರುವ ಜೀವಗಳಿಗೆ ಮುಖ್ಯವೆನಿಸುವ ಅಂಶಗಳೇ ಬೇರೆ! ‘ಸ್ವಾಭಿಮಾನದ ಬದುಕಿ’ಗೆ ಬೇರೆಲ್ಲಕ್ಕಿಂತಾ ಮೊದಲಿನ ಸ್ಥಾನ! ಇದು ಅತ್ಯಂತ ಸಹಜವೆಂಬುದು ಮನಃಶಾಸ್ತ್ರದ ಕನಿಷ್ಠ ತಿಳುವಳಿಕೆ ಹೊಂದಿರುವ ಎಲ್ಲರಿಗೂ ಗೊತ್ತಿರುವಂತದೆ. ಆದರೆ ನಾವೇಕೆ ಪುಟ್ಟ- ಪುಟ್ಟ ಜೀವಕಾರುಣ್ಯದ ‘ಎಲ್ಲಾ’ ಮಾದರಿಗಳನ್ನೂ ಸಲ್ಲದ ಅನುಮಾನ, ಅಹಂಕಾರಗಳಿಂದ ನೋಡುತ್ತಿದ್ದೇವೆ? ಇದಕ್ಕೆ ಪ್ರತಿಯಾಗಿ, ನಾವು ಸದಾ ಹೇಳುತ್ತ ಬಂದಿರುವ ಸರ್ವ-ಶ್ರೇಷ್ಠವಾದ, ಮಾನ್ಯವಾದ, ಅರ್ಹವಾದ ಮಾದರಿಗಳನ್ನು ನಿರ್ಮಿಸಲು ನಮಗೇಕೆ ಸಾಧ್ಯವಾಗಿಲ್ಲ? ಅಥವಾ ಅವುಗಳೆಲ್ಲಾ ಏಕೆ ಚಿಂತನೆ, ಆದರ್ಶ, ಸಿದ್ಧಾಂತಗಳ ಹಂತದಲ್ಲೇ ನಿಂತುಬಿಡುತ್ತವೆ?

ಜಾತಿ, ಮತ, ಧರ್ಮಗಳು ನಮ್ಮ ಅತ್ಯಂತ ಖಾಸಗಿ, ಹಾಗೂ ಸಾಮಾಜಿಕವಾಗಿ ಅಮುಖ್ಯ ವಿಷಯಗಳಾಗಬೇಕಿತ್ತು. ಆದರೆ ಅವೇ ಇಂದು ನಮ್ಮನ್ನು ಆಳುವ, ಒಡೆಯುವ, ಛಿದ್ರಗೊಳಿಸುವ ಹಂತ ತಲುಪಿ ಬಿಟ್ಟಿವೆ. ಅವುಗಳ ರಾಜಕಾರಣವೇ ಎಲ್ಲಕ್ಕಿಂತ ಮುಖ್ಯವಾಗುತ್ತಿದೆ. ಬಡತನ, ಅಸಮಾನತೆ, ಅಸಹಾಯಕತೆ, ಅಂಗವೈಕಲ್ಯ, ಶೋಷಣೆಗಳಿಂದ ನೋವನುಭವಿಸುವ ಜೀವಿಗಳ ಸಂಕಟ, ಅದಕ್ಕೆ ಬೆಂಬಲವಾಗಿ ನಿಲ್ಲುವ ಅಂತಃಕರಣದ ಮಾದರಿಗಳು ನಮಗಿಂದು ಮುಖ್ಯವಾಗುತ್ತಿಲ್ಲ.

ಹೊರಗೆ ಜಾತಿ, ಮತಗಳ ಹೆಸರಿನಲ್ಲಿ ನಿತ್ಯ ಗಲಭೆಗಳು ನಡೆಯುತ್ತಿದ್ದರೂ, ಅವುಗಳನ್ನು ಮೀರಿ ಅಸಹಾಯಕ ಜೀವದ ನೋವಿಗೆ ಪ್ರೀತಿಯಿಂದ ಸ್ಪಂದಿಸುತ್ತಾ, ಆ ಜೀವ ಒಂದಿಷ್ಟಾದರೂ ನೆಮ್ಮದಿಯಿಂದ ಬದುಕುವ ನೆಲೆಗಳನ್ನು ಸದ್ದಿಲ್ಲದೇ ನಿತ್ಯ ನಿರ್ಮಾಣ ಮಾಡುತ್ತಿದ್ದರೂ, ಸಾಮಾನ್ಯರಂತೆ ಬದುಕುವ, ಬದುಕಲು ಬಿಡುವ, ಬದುಕಲು ಪ್ರೇರೇಪಿಸುವ ಮಾದರಿಗಳನ್ನು ನಾವೇಕೆ ಗೇಲಿಮಾಡಿ ನಗುತ್ತಿದ್ದೇವೆ? ಅಥವ ನಿರ್ಲಕ್ಷಿಸುತ್ತಿದ್ದೇವೆ? ಇಂತಹ ನೂರಾರು ಮಾನವೀಯ ಮಾದರಿಗಳು ಇಂದಿಗೂ ನಮ್ಮ ಮುಂದಿರುವುದು ಹೆಮ್ಮೆಯ ಸಂಗತಿಯೇ. ಆದರೆ ಅವುಗಳಿಗಿಂತ ನಮಗೆ ‘ರೋಚಕತೆ’ ನೀಡುವ ಋಣಾತ್ಮಕ ಸುದ್ದಿಗಳೇ ದೊಡ್ಡವೆನಿಸಿಬಿಡುತ್ತವಲ್ಲಾ? ನಮ್ಮ ಅಭಿರುಚಿಯಲ್ಲಿಯೇ ಈ ದೋಷವಿದೆಯೇ? ಅಥವಾ ನಮ್ಮ ಮಾಧ್ಯಮಗಳು ನಮ್ಮ ಅಭಿರುಚಿಯ ದಿಕ್ಕನ್ನೇ ರೋಚಕತೆಯ ಹೆಸರಿನಲ್ಲಿ ಕೆಡಿಸಿಬಿಟ್ಟಿವೆಯೇ?

ಇಲ್ಲಿ ಪ್ರತಿಯೊಂದು ಜೀವಿಯ ನೋವೂ ಮುಖ್ಯವಾದುದೇ. ಅದಕ್ಕೆ ಬೇಕಿರುವುದು ಒಣ ಅನುಕಂಪ, ತರ್ಕವಲ್ಲ. ಆ ಜೀವದೊಂದಿಗೆ ಒಂದಾಗಿ ಅದನ್ನೆದುರಿಸುವ ಛಲವನ್ನು ಮೂಡಿಸುವ ವಾಸ್ತವದ ಸಾಮಾನ್ಯ ನಡೆ, ಶ್ರಮ, ಕೆಲಸಗಳು ಹಾಗೂ ಆ ದಿಕ್ಕಿನೆಡೆಗಿನ ಸಣ್ಣ ಪ್ರಯತ್ನಗಳೂ ನಮಗಿಂದು ಮುಖ್ಯವಾಗಬೇಕಿದೆ. ಅವುಗಳನ್ನು ಮತ್ತೆ ಮತ್ತೆ ‘ಎತ್ತಿ’ಹಿಡಿಯಬೇಕಿದೆ. ಈ ಹಿನ್ನೆಲೆಯಲ್ಲಿಯೇ ನಮಗಿಂದು, ಸದ್ದಿಲ್ಲದೇ ಸಾಮಾನ್ಯ ಜನರಲ್ಲಿ ಬೆರೆತು ಈ ನೆಲಕ್ಕೆ ಆಪ್ತವಾಗುವಂತಾ ತಮ್ಮ ಸಾಮಾನ್ಯ ನಡೆಗಳಿಂದ ಜಾತಿ, ಮತಗಳನ್ನು ಮೀರಿ ಸಾಮಾಜಿಕ ಹಿತಾಸಕ್ತಿಯಿಂದ, ಜೀವಗಳ ಒಳಿತಿಗೆ ಕೈ ನೀಡುವಂತಾ ಕೆಲಸಗಳಲ್ಲಿ ತೊಡಗಿದ ಮದರ್ ಥೆರೆಸಾ, ಬಾಬಾ ಆಮ್ಟೆ, ಅಣ್ಣಾ ಹಜಾರೆ, ಸಾಲುಮರದ ತಿಮ್ಮಕ್ಕ, ಸುಂದರ್ಲಾಲ್ ಬಹುಗುಣ, ರಾಜೇಂದ್ರ ಸಿಂಗ್, ಪಿ. ಸಾಯಿನಾಥ್……. ರಂತಹ ಧೀಮಂತ ವ್ಯಕ್ತಿಗಳ ಬದುಕು ವಿಶಿಷ್ಟವೂ, ಮಾದರಿಯೂ ಎನಿಸುತ್ತದೆ.

ಬದುಕಿನ ಅಂತಿಮಗುರಿ, ಮಾಹಿತಿ ಎಂಬ ಜ್ಞಾನವೇ ಎಂಬ ಭ್ರಮೆಗೆ ಬಿದ್ದು, ಅಂತಃಕರಣದ ಅರಳುವಿಕೆಯನ್ನು ನಾವಿಂದು ನಿರ್ಲಕ್ಷಿಸುತ್ತಿದ್ದೇವೆ. ಸಾಮಾನ್ಯ ಮನುಷ್ಯನ ಶ್ರಮವನ್ನೂ, ಹೃದಯ ವೈಶಾಲ್ಯತೆಯನ್ನೂ, ಬೆವರಿನ ಫಲವನ್ನೂ ನಾವು ನಿರಂತರ ಅವಮಾನಿಸುತ್ತಲೇ ಬಂದಿದ್ದೇವೆ. ಅದರಿಂದಾಗಿಯೇ ವ್ಯಕ್ತಿ-ವ್ಯಕ್ತಿಗಳ ನಡುವೆ ಇಂದು ಅಗಾಧ ಕಂದಕ ಏರ್ಪಟ್ಟಿದೆ. ಇಂದು ಮಾನವೀಯತೆ, ನಿಷ್ಕಾರಣ ಕಾಳಜಿ, ಶ್ರದ್ಧೆ, ಪ್ರೀತಿಯ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಸಾಮಾನ್ಯ ಜೀವಗಳನ್ನೂ, ಅಂತಹ ಸಣ್ಣ-ಪುಟ್ಟ ಕ್ರಿಯೆಗಳನ್ನು ಗೌರವದಿಂದ ಕಂಡಾಗ ಮಾತ್ರ ಕಂದಕಗಳು ಮುಚ್ಚಿಕೊಳ್ಳಬಹುದಷ್ಟೇ. ಅದು ಎಲ್ಲಕ್ಕಿಂತ ಮುಖ್ಯವಾದುದು. ಹಾಗೂ ಅದೇ ಎಲ್ಲಾ ಜಾತಿ, ಮತಗಳನ್ನೂ ಮೀರಿದ ಜೀವಕಾರುಣ್ಯಕ್ಕೆ ನಾವು ನೀಡುವ ಬೆಲೆಯೂ ಹೌದು.

Leave a Reply

Your email address will not be published.