ಉಮರ್ ಖಾಲಿದ್ ಭಾಷಣದ ಬರಹ ರೂಪ

Naveen Soorinje


-ಅನುವಾದ : ನವೀನ್ ಸೂರಿಂಜೆ


 

 

ಲಾಲ್ ಸಲಾಂ, ಲಾಲ್ ಸಲಾಂ, ವೀರ್ ಸೆಲ್ಯೂಟ್, ರೆಡ್ ಸೆಲ್ಯೂಟ್, ರೆಡ್ ಸೆಲ್ಯೂಟ್ ಟು ಕಾಮ್ರೇಡ್ ಎಂದು ವಿದ್ಯಾರ್ಥಿಗಳ ಭಾರೀ ಉದ್ಘೋಷದ ಜೊತೆ ದೇಶದ್ರೋಹಿ ಆರೋಪ ಹೊತ್ತ ಜೆ ಎನ್ ಯು ವಿದ್ಯಾರ್ಥಿ ಉಮ್ಮರ್ ಖಾಲಿದ್ ಮಾತನಾಡುತ್ತಿದ್ದಾರೆ. ಕೇಳಿ.

ಸ್ನೇಹಿತರೇ,

ನನ್ನ ಹೆಸರು ಉಮರ್ ಖಾಲಿದ್. ಆದರೆ ನಾನು ಭಯೋತ್ಪಾದಕ ಅಲ್ಲ.

ಮೊದಲನೆಯದಾಗಿ ಈ ಹೋರಾಟದಲ್ಲಿ ಭಾಗವಹಿಸಿದ ಮತ್ತು ವಿದ್ಯಾರ್ಥಿಗಳಾದ ನಮಗೆ ಬೆಂಬಲವನ್ನು ನೀಡಿದ ಪ್ರತಿಯೊಬ್ಬ ಜೆಎನ್ ಯು ಪ್ರಾಧ್ಯಾಪಕರಿಗೆ ಧನ್ಯವಾದ ಹೇಳ ಬಯಸುತ್ತೇನೆ. ಈ ಹೋರಾಟ ಕೇವಲ ನಮ್ಮ ನಾಲ್ಕೈದು ಜನರದ್ದಾಗಿರಲಿಲ್ಲ. ಈ ಹೋರಾಟ ನಮ್ಮೆಲ್ಲರ ಹೋರಾಟವಾಗಿದೆ. ಈ ಹೋರಾಟ ಕೇವಲ ಈ ಜೆಎನ್ ಯು ವಿಶ್ವವಿದ್ಯಾನಿಲಯದ ಹೋರಾಟ ಮಾತ್ರವೇ ಇಲ್ಲ, ಇದೊಂದು ದೇಶದ ಎಲ್ಲಾ ವಿಶ್ವವಿದ್ಯಾನಿಲಯಗಳ ಹೋರಾಟವಾಗಿದೆ. ಅಷ್ಟಕ್ಕೇ ಸೀಮಿತವಾಗದೆ ಇದು ಇಡೀಯ ಸಮಾಜದ ಹೋರಾಟವಾಗಿದೆ. ಮುಂದಿನ ಪೀಳಿಗೆಯ ಸಮಾಜ ಹೇಗಿರಬೇಕೆಂಬುದರ ಸೂಚಕ ಈ ಹೋರಾಟ.

ಗೆಳೆಯರೇ

ಈ ಕೆಲ ದಿನಗಳಲ್ಲಿ ನನ್ನ ಬಗ್ಗೆ ನನಗೇ ಗೊತ್ತಿಲ್ಲದ ಹಲವಾರು ವಿಷಯಗಳನ್ನು ತಿಳಿದುಕೊಂಡೆ. ನಾನು ಎರಡು ಬಾರಿ ಪಾಕಿಸ್ತಾನ ಹೋಗಿ ಬಂದಿದ್ದೇನೆ ಎಂದು ನನಗೇ ಇತ್ತಿಚೆಗೆೆ ತಿಳಿಯಿತು. ನನ್ನ ಬಳಿ ಪಾಸ್ ಪೋರ್ಟೇ ಇಲ್ಲ. ಹಾಗಿದ್ದರೂ ನಾನು ಪಾಕಿಸ್ತಾನ ಹೋಗಿ ಬಂದೆ ಎಂಬುದು ನನಗೇ ಆಶ್ಚರ್ಯ ತರುವ ವಿಚಾರ. ನನಗೆ ಆನಂತರ ಮತ್ತೊಂದು ವಿಚಾರವೂ ತಿಳಿಯಿತು. ನಾನು ಮಾಸ್ಟರ್ ಮೈಂಡ್ ಎಂದು. ಜೆಎನ್ ಯು ವಿದ್ಯಾರ್ಥಿಗಳೇ ವಂಡರಫುಲ್ ಮೈಂಡ್ ಇರುವವರು. ಅವರಲ್ಲೇ ನಾನು ಮಾಸ್ಟರ್ ಮೈಂಡ್. ಇದು ತುಂಬಾ ಚೆನ್ನಾಗಿದೆ. ನಾನು ಇಂತಹ ಕಾರ್ಯಕ್ರಮವನ್ನು ದೇಶದ 70 ರಿಂದ 80 ವಿಶ್ವವಿದ್ಯಾನಿಲಯಗಳಲ್ಲಿ ಆಯೋಜಿಸಲು ಪ್ಲ್ಯಾನ್ ಮಾಡಿದ್ದೆನಂತೆ. ನಿಜವಾಗಲೂ ನನ್ನ ಲೀಡರ್ ಶಿಫ್ ಇಷ್ಟೊಂದು ವಿಸ್ತಾರವಾಗಿ ಬೆಳೆದಿದ್ದು ನನಗೇ ಗೊತ್ತಿರಲಿಲ್ಲ. ಈ ಕಾರ್ಯಕ್ರಮ ಆಯೋಜಿಸಲು ನಾವು ನಾಲ್ಕೈದು ತಿಂಗಳು ತಯಾರಿ ಮಾಡಿದ್ದೆವಂತೆ. ಜೆಎನ್ ಯು ನಲ್ಲಿ ಒಂದೊಂದು ಕಾರ್ಯಕ್ರಮ ಸಂಘಟಿಸಲು ಐದು-ಹತ್ತು ತಿಂಗಳು ಪಡೆದುಕೊಂಡರೆ ಜೆಎನ್ ಯು ಕತೆ ಏನಾಗಬಹುದು? ಅದೂ ಇರಲಿ. ನಾನು ಕೆಲ ದಿನಗಳಿಂದ 800 ಕರೆಗಳನ್ನು ಮಾಡಿದ್ದೇನಂತೆ. ಈ ಮಾಧ್ಯಮಗಳಿಗೆ ಯಾವ ನಾಚಿಕೆಯೂ ಇಲ್ಲ. ಸುದ್ದಿ ಪ್ರಸಾರಕ್ಕೆ ಮುನ್ನ ದಾಖಲೆಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ. ಯಾವುದೇ ದಾಖಲೆಯಿಲ್ಲದೆ, ಸತ್ಯಾಂಶವಿಲ್ಲದ ಸುದ್ದಿಗಳನ್ನು ಮಾಡಿದ್ರು. ನನಗೆ ಜೈಶ್ ಎ ಮಹಮ್ಮದ್ ಸಂಘಟನೆಯ ಕೈವಾಡ ಇದೆ ಎಂದು ಹೇಳಿದ್ರು. ಅದಕ್ಕೂ ಯಾವುದೇ ದಾಖಲೆ ಇಲ್ಲ. ನನಗೆ ನಿಜಕ್ಕೂ ಆಗ ನಗು ಬಂದಿತ್ತು. ನಿಜವಾಗಿಯೂ ಆ ಸಂಧರ್ಭದಲ್ಲಿ ಜೈಶ್ ಎ ಮಹಮ್ಮದ್ ಸಂಘಟನೆಯವರು ಪ್ರತಿಭಟನೆ ಮಾಡಬೇಕಿತ್ತು. ನನ್ನಂತವನನ್ನು ಅವರ ಸಂಘಟನೆಯವನು ಎಂದು ಹೇಳಿದ್ದಕ್ಕಾದರೂ ಅವರು ಪ್ರತಿಭಟಿಸಬೇಕಿತ್ತು. ಕೊನೆಗೆ ಕೇಂದ್ರ ಸರಕಾರದ ಗುಪ್ತಚರ ಇಲಾಖೆಯೇ ಸ್ಪಷ್ಟಪಡಿಸಿ, ಜೈಶ್ ಎ ಮಹಮ್ಮದ್ ಸಂಘಟನೆಗೂ ಈ ಹೋರಾಟಕ್ಕೂ ಸಂಬಂಧ ಇಲ್ಲ ಎಂದು ಹೇಳಿದರೂ ಮಾಧ್ಯಮಗಳು ಕ್ಷಮೆ ಕೇಳಲಿಲ್ಲ. ಈ ಮೀಡಿಯಾಗಳು ನಮ್ಮನ್ನು ಮೂರ್ಖರನ್ನಾಗಿಸುತ್ತಿವೆ. ಮೀಡಿಯಾಗಳು ಪೂರ್ವನಿರ್ಧರಿತವಾಗಿ ನಮ್ಮನ್ನು ಮಿಡಿಯಾ ಟ್ರಯಲ್ ಗೆ ಒಳಪಡಿಸಿದ್ವು. ಯಾವ ನಾಚಿಕೆಯೂ ಇಲ್ಲದೆ ವರ್ತಿಸಿದ್ರು.

ಮಾಧ್ಯಮಗಳ ಈ ರೀತಿಯ ವರ್ತನೆ ಇದೇ ಮೊದಲಲ್ಲ. ಅವುಗಳು ಏನು ಮಾಡಿದ್ರೂ ನಡೀತದೆ ಅಂದುಕೊಂಡಿದ್ದಾರೆ. ಮುಸ್ಲೀಮರನ್ನು ಭಯೋತ್ಪಾದಕರನ್ನಾಗಿಯೂ, ಆದಿವಾಸಿಗಳನ್ನು ನಕ್ಸಲರನ್ನಾಗಿಯೂ ಚಿತ್ರಿಸಿ ಅವರಿಗೆ ಅಭ್ಯಾಸವಾಗಿ ಬಿಟ್ಟಿದೆ. ಆದರೆ ಈ ಬಾರಿ ನೀವು ತಪ್ಪು ಜನರಿಗೆ ತಗಳ್ಳಾಕ್ಕೊಂಡಿದ್ದೀರಿ. ನಾವು ಪ್ರತೀ ಚಾನೆಲ್ ಗಳು ನಮ್ಮ ಬಗ್ಗೆ ಮಾಡಿದ ಸುದ್ದಿಗೆ ವಿವರಣೆ ನೀಡುವಂತಹ ಸಂಧರ್ಭ ಸೃಷ್ಠಿ ಮಾಡುತ್ತೇವೆ.

ಈ ಪ್ರಕರಣ ಈ ರೀತಿ ಸುದ್ದಿಯಾದ ನಂತರ ನಂತರ ನನ್ನ ತಂಗಿ, ತಂದೆಗೆ ಬೆದರಿಕೆ ಒಡ್ಡಲಾಯ್ತು. ತಂಗಿಗೆ ಅತ್ಯಾಚಾರದ ಬೆದರಿಕೆ ಒಡ್ಡಲಾಯ್ತು. ಕೊಲೆ ಬೆದರಿಕೆಯನ್ನೂ ನೀಡಲಾಯ್ತು. ಈ ಜನಗಳು ಏನೂ ಮಾಡಲೂ ಹೇಸದವರು. ತಂಗಿಗೆ ಅತ್ಯಾಚಾರದ ಬೆದರಿಕೆ ನೀಡಿದ ಈ ದೇಶಪ್ರೇಮಿಗಳ ಕಂದಮಾಲ್ ಘಟನೆ ಆ ಸಂಧರ್ಭ ನನಗೆ ನೆನಪಿಗೆ ಬಂದಿತ್ತು. ನಿಮಗೂ ನೆನಪಿರಬಹುದು. ಕಂದಮಾಲ್ ನಲ್ಲಿ ಭಜರಂಗದಳದವರು ಕ್ರಿಶ್ಚಿಯನ್ ಸನ್ಯಾಸಿನಿ ಮೇಲೆ ಅತ್ಯಾಚಾರ ಮಾಡಿ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದರು. ಆದುದರಿಂದ ನನಗೆ ತಂಗಿಯ ಬಗ್ಗೆ ಆತಂಕ ಉಂಟಾಗಿತ್ತು. ಇವರು ಅತ್ಯಾಚಾರ ಮಾಡಿಯೂ ಭಾರತ ಮಾತೆಗೆ ಜೈ ಎನ್ನುವವರು. ಇಂತಹ ಮಾತೆ ನಮಗೆ ಬೇಕಾಗಿಲ್ಲ. ಇಂತಹ ಮಾತೆ ನಮ್ಮದಲ್ಲ.

ನನ್ನ ತಂದೆಯನ್ನು ಕೆಲವು ಮಾಧ್ಯಮಗಳು ಮಾತನಾಡಿಸಿದ್ವು. ಅದನ್ನು ಸಂದರ್ಶನ ಅನ್ನೋದಕ್ಕಿಂತ ಮಾಧ್ಯಮಗಳ ವಿಚಾರಣೆ ಅನ್ನಬಹುದು. ನಮ್ಮಲ್ಲಿ ಕೆಲವು ಪತ್ರಕರ್ತರಿದ್ದಾರೆ. ಟೈಮ್ಸ್ ನೌ ನಲ್ಲಿ ಒಬ್ಬ ಪತ್ರಕರ್ತ ಇದ್ದಾರೆ. ಅವರ ಹೆಸರು ಹೇಳಲು ನಾನು ಬಯಸೋದಿಲ್ಲ. ಈ ಪತ್ರಕರ್ತರಿಗೆಲ್ಲಾ ನಮ್ಮ ವಿಚಾರದಲ್ಲಿ ಇಷ್ಟೊಂದು ಕೋಪ ಯಾಕೆ ಎಲ್ಲಿಂದ ಬರುತ್ತದೆ ಎಂಬುದೇ ಗೊತ್ತಾಗ್ತಾ ಇಲ್ಲ. ಆ ರೀತಿಯಲ್ಲಿ ಮಾಧ್ಯಮಗಳ ಕೋರ್ಟ್ ನಡೆಸಿದ್ವು.

ಒಂದು ವಿಷಯವನ್ನು ನಾನಿಲ್ಲಿ ಹೇಳಲೇ ಬೇಕು. ಕಳೆದ ಆರು ವರ್ಷಗಳಿಂದ ಈ ಕ್ಯಾಂಪಸ್ಸಿನಲ್ಲಿ ವಿದ್ಯಾರ್ಥಿ ರಾಜಕಾರಣವನ್ನು ಮಾಡಿಕೊಂಡು ಬಂದಿದ್ದೇನೆ. ನಾನು ಇಲ್ಲಿಯವರೆಗೂ ನನ್ನನ್ನು ನಾನು ಮುಸ್ಲೀಮನೆಂದು ಅಂದುಕೊಂಡಿಲ್ಲ. ಈ ಸಮಾಜದಲ್ಲಿ ಮುಸ್ಲೀಮರು ಮಾತ್ರ ದಮನಕ್ಕೊಳಗಾಗ್ತಿಲ್ಲ. ಆದಿವಾಸಿಗಳು, ದಲಿತರು ಈ ಸಮಾಜದ ಶೋಷಿತರಾಗಿದ್ದಾರೆ. ನಾನು ಇವರೆಲ್ಲರ ಪರವಾಗಿ ಹೋರಾಟ ಮಾಡಿದ್ದೇನೆ. ದಲಿತರು, ಆದಿವಾಸಿಗಳು, ಶೋಷಿತರ ಪರವಾಗಿ ಮಾತನಾಡಿದಷ್ಟೇ ಶೋಷಿತ ಮುಸ್ಲೀಮರ ಪರವಾಗಿ ಮಾತನಾಡಿದ್ದೇನೆ. ಆದರೆ ಕಳೆದ ಹತ್ತು ದಿನಗಳಿಂದ ನಾನು ಮುಸ್ಲೀಂ ಎಂದು ನನಗೆ ಗೊತ್ತಾಯಿತು. ಈ ಮಾಧ್ಯಮಗಳಿಗೆ ನಾಚಿಕೆಯಾಗಬೇಕು.

ನಾನು ಪಾಕಿಸ್ತಾನಿ ಏಂಜೆಂಟ್ ಅಂತ ಹೇಳಿದ್ರು. ಈ ಸಂಧರ್ಭದಲ್ಲಿ ನನಗೆ ಒಂದು ಶಾಹಿರಿ ನೆನಪಾಗ್ತಿದೆ.

ಹಿಂದೂಸ್ತಾನವೂ ನನ್ನದೇ,
ಪಾಕಿಸ್ತಾನವೂ ನನ್ನದೇ….
ಹಿಂದೂಸ್ತಾನ ಪಾಕಿಸ್ತಾನದಲ್ಲಿ ಅಮೇರಿಕಾ ಟೆಂಟ್ ಹಾಕಲು ಬಯಸುತ್ತಿದೆ.
ನೀವೆಲ್ಲರೂ ಆ ಅಮೇರಿಕಾದ ಏಜೆಂಟರು.

ನಮ್ಮ ಸರಕಾರ ಕೂಡಾ ಅಮೇರಿಕಾದ ಏಜೆಂಟರಂತೆ ವರ್ತಿಸುತ್ತಿದೆ. ಮಲ್ಟಿ ನ್ಯಾಶನಲ್ ಕಂಪನಿಗಳಿಗೆ ಜನ ಪೂರೈಸೋ ಕೆಲಸವನ್ನು ಸರಕಾರ ಮಾಡುತ್ತಿದೆ. ಅದಕ್ಕಾಗಿ ಶಿಕ್ಷಣವನ್ನು ಸರಕಾರ ಮಾರಿದೆ. ಅದನ್ನು ಪ್ರಶ್ನಿಸಿದ್ರೆ ನಾವು ದೇಶದ್ರೋಹಿಗಳಾಗ್ತಿವೆ. ಈಗ ನಾವು ನೀವೆಲ್ಲಾ ದೇಶದ್ರೋಹಿಗಳು. ಜನರನ್ನು ಅಗಾಧವಾಗಿ ಪ್ರೀತಿಸುವ ನಾವುಗಳು ದೇಶದ್ರೋಹಿಗಳು. ನಮ್ಮ ಪ್ರೀತಿಗೆ ಗಡಿಗಳು ಇಲ್ಲ. ಈ ದೇಶ ಮಾತ್ರ ಅಲ್ಲ. ಇಡೀನ ಜಗತ್ತಿನ ಜನರನ್ನು ನಾವು ಪ್ರೀತಿಸುತ್ತೇವೆ. ನಾನು ಈ ನ್ಯಾಶನಿಲಿಸಂ ಅನ್ನು ನಂಬೋದಿಲ್ಲ. ಭಾರತದ ನ್ಯಾಶನಲಿಸಂ ಮಾತ್ರವಲ್ಲ. ಅಮೇರಿಕಾ ಸೇರಿದಂತೆ ಯಾವುದೇ ದೇಶದ ನ್ಯಾಶನಲಿಸಂ ಅನ್ನು ನಾನು ಒಪ್ಪೋದಿಲ್ಲ. ಇಡೀ ವಿಶ್ವವೇ ನಮ್ಮದು. ವಿಶ್ವದ ಎಲ್ಲರೂ ನಮ್ಮವರು.

ನಾವು ಈ ಜನರಿಗೆಲ್ಲಾ ಹೆದರಬೇಕಿಲ್ಲ. ಅವರ ಬಳಿ ಬಹುಮತ ಇರಬಹುದು. ಮೀಡಿಯಾಗಳೂ, ಪೊಲೀಸರೂ ಇರಬಹುದು. ಆದರೆ ಅವರು ಹೆದರುಪುಕ್ಕಲರು. ಅವರು ನಮ್ಮ ಜನರಿಗೆ ಹೆದರುತ್ತಾರೆ. ಆವರು ನಮ್ಮ ಹೋರಾಟಗಳಿಗೆ ಹೆದರುತ್ತಾರೆ. ಅದಕ್ಕಾಗಿಯೇ ನೀವು ಜನರ ಪರವಾಗಿ ಯೋಚಿಸಲು ಶುರು ಮಾಡಿದ್ರೆ ನಿಮ್ಮನ್ನು ದೇಶದ್ರೋಹಿ ಎನ್ನುವ ಮೂಲಕ ಹೆದರಿಸಲಾಗ್ತಿದೆ.

ನಮ್ಮ ಜನರಿಗೆ ಹೆದರಿಯೇ ಈ ಜನರು ಹಲವು ವಿಶ್ವವಿದ್ಯಾನಿಲಯಗಳಿಗೆ ತೆರಳಿ ಗಲಭೆ ಎಬ್ಬಿಸಲು ಯಶಸ್ವಿಯಾದ್ರು. ಆದರೆ ಈ ವಿದ್ವವಿದ್ಯಾಲಯಕ್ಕೆ ಮಾತ್ರ ತಪ್ಪಾಗಿ ಬಂದ್ರಿ. ಇಲ್ಲಿ ನಿಮ್ಮ ಆಟ ನಡೆಯಲ್ಲ.

ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ರೋಹಿತ್ ವೆಮೂಲ ಹತ್ಯೆಯಾಯ್ತು. ಬನರಾಸ್ ವಿಶ್ವವಿದ್ಯಾನಿಲಯದಲ್ಲಿ ಸಂದೀಪ್ ಪಾಂಡೆ ಮೇಲೆ ದೌರ್ಜನ್ಯವಾಯಿತು. ಅ ಸಂಧರ್ಭದಲ್ಲಿ ನಡೆದ ಪ್ರತೀ ಹೋರಾಟದಲ್ಲಿ ಜೆ ಎನ್ ಯು ವಿದ್ಯಾರ್ಥಿಗಳು ಹೆಗಲು ಕೊಟ್ಟು ಸಾಥ್ ನೀಡಿದ್ದೇವೆ. ಅದು ನಮ್ಮ ಜವಾಬ್ದಾರಿ ಕೂಡಾ. ನೀವೇನಾದ್ರೂ ಜೆಎನ್ ಯು ವನ್ನು ಮುಗಿಸುತ್ತೇವೆ ಎಂದು ಒಂದಿರೋದಾದ್ರೆ ಒಂದಂತೂ ತಿಳಿದುಕೊಳ್ಳಿ. ಈ ಹಿಂದೆಯೂ ಈ ರೀತಿ ಯೋಚನೆ ಇಟ್ಟುಕೊಂಡು ತುಂಬಾ ಜನ ಇಲ್ಲಿಗೆ ಬಂದಿದ್ದರು. ಅಂತಹ ಹಲವು ಪ್ರಯತ್ನಗಳಾಗಿತ್ತು. ಅದನ್ನು ಅಷ್ಟೇ ನಾಜೂಕಾಗಿ ನಾವು ನಿಭಾಯಿಸಿ ನಾವು ಗೆದ್ದಿದ್ದೇವೆ.

ಬಹುಶಃ ನೀವು ಇಂದಿರಾಗಾಂಧಿಯನ್ನು ಮರೆತಿದ್ದೀರಿ. ತುರ್ತು ಪರಿಸ್ಥಿತಿ ನಂತರ ಅವರು ಜೆ ಎನ್ ಯು ಕಡೆಗೆ ಬಂದಿದ್ದರು. ನಾವು ಅವರನ್ನು ಬರಲು ಬಿಟ್ಟಿರಲಿಲ್ಲ. ನಂತರ ನೀವು ಮನಮೋಹನ ಸಿಂಗ್ ರನ್ನೂ ಮರೆತಿದ್ದೀರಿ. ದೇಶವನ್ನು ಮಾರಾಟ ಮಾಡಲು ಹೊರಟ ಮನಮೋಹನ ಸಿಂಗ್ ಇಲ್ಲಿಗೆ ಬಂದಾಗ ಅವರಿಗೂ ಕಪ್ಪು ಬಾವುಟ ತೋರಿಸಿದ್ವಿ. ನಂತರ ಚಿದಂಬರಂ ಬಂದ್ರು. ಆಗ ಇಲ್ಲಿನ ವಿದ್ಯಾರ್ಥಿಗಳು ಚಿದಂಬರಂ ಅನ್ನು ಸ್ವಾಗತ ಮಾಡ್ತಾರೆ ಅಂದುಕೊಂಡಿದ್ರು. ಆದರೆ ಇಲ್ಲಿನ ವಿದ್ಯಾರ್ಥಿಗಳು ಯಾರ ಜೊತೆ ಇರ್ತೀವಿ ಎಂಬುದನ್ನು ತೋರಿಸಿಕೊಟ್ಟರು. ಇಲ್ಲಿನ ವಿದ್ಯಾರ್ಥಿಗಳು ಯಾವತ್ತೂ ಶೋಷಿತ ಜನರ ಜೊತೆ ಇರ್ತಾರೆ. ಈಗಿನ ಸರಕಾರ ನಾವು ಹೆದರುತ್ತೇವೆಯೋ ಎಂದು ಪರೀಕ್ಷೆ ಮಾಡುತ್ತಿದೆ. ನಾವು ಹೆದರುವುದಿಲ್ಲ. ನಾವು ಸಂಘರ್ಷ ಮಾಡುತ್ತೇವೆ.

ಗೆಳೆಯರೇ,

ನಾವು ಈ ಜನಗಳಿಗೆಲ್ಲಾ ಹೆದರುವ ಅಗತ್ಯವೇ ಇಲ್ಲ. ಈ ಕ್ಯಾಂಪಸ್ಸಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಎಂಬ ವಾನರ ಸೇನೆ ಇದೆ. ಇಲ್ಲೂ ಕೂಡಾ ಹೈದರಾಬಾದ್ ನ ದತ್ತಾತ್ರೆಯ ರೀತಿಯವರು ಇದ್ದಾರೆ. ಆದರೆ ಇಲ್ಲಿ ಮತ್ತೊಬ್ಬ ರೋಹಿತನನ್ನು ನಾವು ನಿಮ್ಮ ಕೈಗೆ ಕೊಡೋದಿಲ್ಲ ಎಂದು ಸ್ಪಷ್ಟಪಡಿಸುತ್ತೇವೆ. ನಾವು ಸಂಘರ್ಷಕ್ಕೆ ಸಿದ್ದರಿದ್ದೇವೆ. ರೋಹಿತನ ಸಾವಿಗೆ ಉತ್ತರ ಕೊಡಲು ಸಿದ್ದರಿದ್ದೇವೆ.

ಅವರಿಗೆ ಜನರ ಬಳಿ ಹೋಗಿ ಸಂಘಟನೆ ಮಾಡಲು ಆಗುವುದಿಲ್ಲ. ಅವರೇನಿದ್ದರೂ ಮಧ್ಯಮಗಳನ್ನು ಬಳಸಿಕೊಂಡು ದೇಶಪ್ರೇಮ ಉಕ್ಕುವಂತೆ ಮಾಡುತ್ತಾರೆ. ಅಷ್ಟೊಂದು ಮಾಧ್ಯಮಗಳನ್ನು ಬಳಸಿಯೂ ಅವರು ಸಾವಿರ ಜನ ಸೇರಿಸಲು ಕಷ್ಟಪಟ್ಟರು. ಆದರೆ ಇಲ್ಲಿ ನಮ್ಮವರು 15 ಸಾವಿರಕ್ಕೂ ಮಿಕ್ಕಿ ಜಮಾವಣೆಗೊಂಡರು. ಆದರೆ ಚೀ ನ್ಯೂಸ್ ಮಾತ್ರ ಸುಳ್ಳೇ ಸುದ್ದಿ ಪ್ರಸಾರ ಮಾಡ್ತು. ನಾಚಿಗೆ ಇಲ್ಲದೆ ಸುಳ್ಳು ಹೇಳ್ತಾರೆ ಈ ಜನಗಳು.

ಜೆ ಎನ್ ಯು ನಲ್ಲಿ ಅವರು ನಡೆಸಿದ ದೌರ್ಜನ್ಯಕಾರಿ ತಂತ್ರಗಾರಿಕೆಯನ್ನು ಬೇರೆಡೆಯಲ್ಲೂ ಯಶಸ್ವಿಯಾಗಿ ಮಾಡಿದ್ದಾರೆ. ಈ ರೀತಿಯ ತಂತ್ರಗಾರಿಕೆ ನಮ್ಮಲ್ಲಿ ನಡೆಯಲ್ಲ. ಇದೇ ರೀತಿಯ ದೌರ್ಜನ್ಯವನ್ನು ಹೋಂಡಾ ಕಾರ್ಮಿಕರ ಮೇಲೆ, ಸೋನಿ ಸೋರಿ ಆದಿವಾಸಿ ಮೇಲೆ ಪ್ರಯೋಗಿಸಿದ್ರು. ಇವೆಲ್ಲವನ್ನೂ ನೋಡಿದ್ರೆ ಇದು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಹೋರಾಟ ಮಾತ್ರವಲ್ಲ. ಈ ಹೋರಾಟವು ಇಡೀ ದೇಶದ ಹೋರಾಟವನ್ನು ಸಂಧಿಸಬೇಕು.

ಧನ್ಯವಾದಗಳು
ಇಂಕ್ವಿಲಾಬ್ ಜಿಂದಾಬಾದ್

8 thoughts on “ಉಮರ್ ಖಾಲಿದ್ ಭಾಷಣದ ಬರಹ ರೂಪ

  1. john

    i do not see any difference between jaish/LeT agenda and that of sangh parivaar.their aim is to destroy the humanity.sedition charges should be applied against sanghis not against JNU students

    Reply
  2. Anonymous

    ಚೆನ್ನಾಗಿದೆ. ಆದ್ರೆ ಎಲ್ಲೂ ವಿಶ್ವವಿದ್ಯಾಲಯದ ಗುಣಮಟ್ಟ ಏರಿಸುವ ಅದನ್ನು ವಿಶ್ವದಲ್ಲೇ ಎತ್ತರಕ್ಕೆ ಏರಿಸುವ ಆಶಯಗಳಿಲ್ಲ . ನಮ್ಮ ನಿಜವಾದ ಹೋರಾಟ ಈ ನಿಟ್ಟಿನಲ್ಲಿ ನಡೆಯಬೇಕು.

    Reply

Leave a Reply to john Cancel reply

Your email address will not be published. Required fields are marked *