ಕಾಶ್ಮೀರ ಪ್ರತ್ಯೇಕತಾವಾದ, ಪಾಕಿಸ್ತಾನ್ ಜಿಂದಾಬಾದ್ ಮತ್ತು ಸಂವಿಧಾನ

Naveen Soorinje


ನವೀನ್ ಸೂರಿಂಜೆ


 

 

ಒಂದು ವೇಳೆ ಜೆಎನ್ ಯು ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದೇ ಆದಲ್ಲಿ ಅದು ದೇಶದ್ರೋಹ ಆಗುತ್ತದೆಯೇ? ಅಷ್ಟಕ್ಕೂJNU ಪಾಕಿಸ್ತಾನವು ಭಾರತದ ಅಧಿಕೃತ ಶತ್ರು ರಾಷ್ಟ್ರ ಎಂದು ಭಾರತದ ಸಂವಿಧಾನವೇನೂ ದಾಖಲಿಸಿಲ್ಲ. ಅಂತಹ ಕಾನೂನುಗಳೂ ಇಲ್ಲ. ಪಾಕಿಸ್ತಾನದ ಜೊತೆ ನಮ್ಮ ಸಂಬಂಧ ಸಮಸ್ಯಾತ್ಮಕವಾಗಿದೆ ಎಂಬುದೇನೋ ನಿಜ. ಅಂದಮಾತ್ರಕ್ಕೆ ಆ ದೇಶ ಶಾಶ್ವತವಾಗಿ ನಮ್ಮ ಅಹಿತ ನೆರೆಹೊರೆಯಾಗಿಯೇ ಇರುತ್ತದೆ ಎಂದು ಕಲ್ಪಿಸಿಕೊಳ್ಳುವುದು ಕೇವಲ ಭ್ರಾಂತಿಯಾಗುತ್ತದೆ. ಸುಧಾರಣೆಗೆ ಅವಕಾಶಗಳು ಇದ್ದೇ ಇರುತ್ತವೆ. ಪ್ರಧಾನಿ ಮೋದಿಯವರು ಪಾಕ್ ನೇತಾರ ನವಾಜ್ ಶರೀಫರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಹಠಾತ್ತನೆ ಆ ದೇಶಕ್ಕೆ ಭೇಟಿ ನೀಡಿರುವುದು ಅಂತಹ ಸಹಜ ಭವಿಷ್ಯದ ಅಪೇಕ್ಷೆಯಿಂದಲೇ.

ಒಂದುವೇಳೆ ಸಧ್ಯೋಭವಿಷ್ಯದಲ್ಲಿ ಸಂಬಂಧಗಳು ಸುಧಾರಣೆಗೊಂಡು, ಸಹಜತೆ ನೆಲೆಸಿದಲ್ಲಿ ಮತ್ತು ಅಂತಹ ಸಂದರ್ಭದಲ್ಲಿ ಪಾಕ್ ಪರ ಘೋಷಣೆಗಳು ಕೂಗಲ್ಪಟ್ಟರೆ ಅವುಗಳ ಸ್ವೀಕರಣೆ ಹೇಗಿರುತ್ತದೆ? ನಮ್ಮಲ್ಲಿ ಅಮೇರಿಕಾ ಪರ, ಇಸ್ರೇಲ್ ಪರ ಅಥವಾ ಇಂಗ್ಲಂಡ್ ಪರ ಘೋಷಣೆ ಕೂಗಿದ್ದು ಎಂದಾದರೂ ದೇಶದ್ರೋಹವೆಂದು ಪರಿಗಣಿತವಾಗಿದ್ದಿದೆಯೇ? ಬೇರೆ ದೇಶಗಳ ಮಾನವ ಹಕ್ಕುಗಳಿಗೆ ಧಕ್ಕೆಯಾದಾಗ ಭಾರತ ಸೇರಿದಂತೆ ಯಾವುದೇ ರಾಷ್ಟ್ರವು ಸಂತ್ರಸ್ತ ದೇಶದ ಪರ ವಹಿಸುವುದು ವಾಡಿಕೆಯಲ್ಲವೇ? ಭಾರತ ಪಾಕಿಸ್ತಾನ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಾಸೀಂ ಅಕ್ರಮ್ ಅಥವಾ ಶಾಹಿದ್ ಅಫ್ರೀದಿ ಮಿಂಚುತಿದ್ದಾಗ ಅಭಿಮಾನದಿಂದ ಚಪ್ಪಾಳೆ ತಟ್ಟುವುದು, ಘೋಷಣೆ ಕೂಗುವುದು ಅಥವಾ ಕೇಕೆ ಹಾಕುವುದು ದೇಶದ್ರೋಹವಾಗುತ್ತದೆಯೇ? ಕೆಲ ದಿನಗಳ ಹಿಂದೆ ಭಾರತದ ಕ್ರಿಕೆಟಿಗ ವಿರಾಟ್ ಕೋಹ್ಲಿಯ ಪಾಕ್ ಅಭಿಮಾನಿಯೊಬ್ಬ ಅಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ, ಅಭಿಮಾನ ವ್ಯಕ್ತಪಡಿಸಿದ್ದಕ್ಕಾಗಿ ಪೋಲಿಸರಿಂದ ಬಂಧಿಸಲ್ಪಟ್ಟಿದ್ದಾನೆ ಎಂದು ವರದಿಯಾಗಿದೆ. ಇದು ಜೆ.ಎನ್.ಯು ಕ್ಯಾಂಪಸ್ಸಿನಲ್ಲಿ ನಮ್ಮ ಪೋಲೀಸರು ವರ್ತಿಸಿದ ರೀತಿ ಅಥವಾ ನಂತರದಲ್ಲಿ ಇಲ್ಲಿಯ ಬಲಪಂಥೀಯ ಸಂಘಟನೆಗಳು ಮತ್ತು ಅರ್ನಾಬ್ ಗೋಸ್ವಾಮಿ ಥರದ ಹೈಪರ್ ರಾಷ್ಟ್ರೀಯವಾದಿಗಳ ಅತಿರೇಕದ ವರ್ತನೆಗಳಿಗಿಂತ ಭಿನ್ನವಾಗಿದೆಯೇ? ಅಂದರೆ ಒಂದು ಘೋಷಣೆಗೆ ಕುಸಿದು ಬೀಳುವಷ್ಟು ದುರ್ಬಲವಾಗಿವೆಯೇ ಆಧುನಿಕ ರಾಷ್ಟ್ರಗಳು?

ಅಷ್ಟಕ್ಕೂ ಒಂದು ದೇಶದಲ್ಲಿ ಮತ್ತೊಂದು ದೇಶದ ಪರ ಘೋಷಣೆ ಕೂಗುವ ಕನಿಷ್ಠ ಅಭಿವ್ಯಕ್ತಿ ಸ್ವಾತಂತ್ರ್ಯವೇ ಇಲ್ಲವೇ? ಯಾವುದೇ ದೇಶದKanhaiya-Kumar-JNU ಆಡಳಿತೆ ನಡೆಯುವುದು ಆ ನೆಲದ ಕಾನೂನಿಗೆ ಅನುಗುಣವಾಗಿಯೇ ಹೊರತು ಅಲ್ಲಿಯ ಯಾವುದೇ ಪುಂಡು ದೇಶಭಕ್ತರ ಅಥವಾ ಮೀಡಿಯಾ ಜಡ್ಜುಗಳ ಖಯಾಲಿಗೆ ಅನುಗುಣವಾಗಿ ಅಲ್ಲ. ಮಾನಹಾನಿ, ರಾಷ್ಟ್ರದ್ರೋಹ ಅಥವಾ ಭಾವನೆಗಳಿಗೆ ಘಾಸಿ ಮೊದಲಾದ ನೆಪಗಳ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಾಂವಿಂಧಾನಿಕ ಉಪಬಂಧಗಳನ್ನು ಮೀರಿ ಮಿತಿಗಳನ್ನು ಹೇರುವ ಪ್ರಯತ್ನಗಳು ನಮ್ಮ ದೇಶದಲ್ಲಿ ನಡೆಯುತ್ತಲೇ ಇವೆ. ಜೆ.ಎನ್.ಯು ಪ್ರಕರಣವೂ ಅಂತಹದ್ದೇ ಪ್ರಯತ್ನದ ಒಂದು ಭಾಗವಾಗಿದೆ. ದೇಶದ ಖ್ಯಾತ ಕಾನೂನು ತಜ್ಞ ಮತ್ತು ಮಾಜಿ ಅಟಾರ್ನಿ ಜನರಲ್ ಶ್ರೀ ಸೋಲಿ ಸೊರಾಬ್ಜಿಯವರು ಜೆ.ಎನ್.ಯು ಕ್ಯಾಂಪಸ್ಸಿನಲ್ಲ ಕೂಗಲ್ಪಟ್ಟ ಘೋಷಣೆಗಳು ಸಮಸ್ಯಾತ್ಮಕವಾಗಿದ್ದರೂ ಅವು ದೇಶದ್ರೋಹದ ಆಪಾದನೆಯ ಪರಿಧಿಯಲ್ಲಿ ಬರುವುದಿಲ್ಲ ಎಂಬುವುದಾಗಿ ಅಭಿಪ್ರಾಯಪಟ್ಟಿದ್ದಾರೆ. ಸುಪ್ರೀಂ ಕೋರ್ಟ್ ಕೇದಾರನಾಥ್ ಪ್ರಕರಣ (1962) ದಲ್ಲಿ ಸೆಕ್ಷನ್ ೧೨೪ ರ ಸಾಂವಿಧಾನಿಕ ಅನ್ವಯಿಕತೆಯನ್ನು ಸ್ಪಷ್ಟಪಡಿಸಿದೆ. ಅಲ್ಲಿಯ ತೀರ್ಪಿನಲ್ಲಿ, ಸರ್ವೋಚ್ಚ ನ್ಯಾಯಲಯವು ಸೆಡೀಶನ್ ವಿಧಿಯ ವ್ಯಾಪ್ತಿಯನ್ನು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆjnu-kanhaiya-kumar-arrest-protest ಮತ್ತು ಹಿಂಸೆಗೆ ಪ್ರಚೋದನೆ ನೀಡಬಲ್ಲ ಮಾತು ಅಥವಾ ಕೃತ್ಯಗಳಿಗೆ ಮಾತ್ರವೇ ಸೀಮಿತಗೊಳಿಸಿ ಆದೇಶ ಹೊರಡಿಸಿದೆ. ಅಂದರೆ, ಸೋರಾಬ್ಜಿಯವರು ಅಭಿಪ್ರಾಯ ಪಡುವಂತೆ, ಕೇವಲ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗುವುದು ನಾವೇ ಒಪ್ಪಿಕೊಂಡಿರತಕ್ಕಂತಹ ಕಾನೂನು ಕಟ್ಟಳೆಗಳ ಪ್ರಕಾರ ರಾಷ್ಟ್ರದ್ರೋಹ ಅಲ್ಲ. ಹೆಚ್ಚೆಂದರೆ ಅದು ಒಂದು ಗುಂಪಿಗೆ ಸಿಟ್ಟು ತರಬಹುದಾದ, ಅಸಮಾಧಾನ ಉಂಟುಮಾಡಬಹುದಾದ ಆದರೆ ಸಹಜವಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಒಂದು ಸ್ವರೂಪ ಅಷ್ಟೇ. ‘ನೋವುಂಟುಮಾಡುತ್ತದೆ’ ಎಂಬುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಯ ನಿರ್ಧಾರಕ್ಕೆ ಒಂದು ಮಾನದಂಡ ಅಗುವುದು ಸ್ಪಷ್ಟವಾಗಿ ಅಪ್ರಜಾಸತ್ತಾತ್ಮಕ. ದಕ್ಷಿಣ ಆಫ್ರಿಕಾದ ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರ ಹೇಳಿಕೆಯೊಂದನ್ನು ಘನವೆತ್ತ ಕಾನೂನು ಚಿಂತಕ ಫಾಲಿ ಎಸ್ ನಾರಿಮನ್ ಹೀಗೆ ಉಲ್ಲೇಖಿಸುತ್ತಾರೆ: “Speech is really free only when it hurts”.

ಪ್ರಜೆಗಳು ತಮ್ಮ ರಾಷ್ಟ್ರದ ವಿರುದ್ಧ ಘೋಷಣೆ ಕೂಗುವಂತಹ ಘಟನೆಗಳು, ಚಳುವಳಿಗಳು ವಿಶ್ವದಾದ್ಯಂತ ನಡೆಯುತ್ತಲೇ ಇವೆ. ಅದನ್ನು ಜಗತ್ತಿನ ನಾಗರಿಕ ರಾಷ್ಟ್ರಗಳು ಬಹಳ ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾ ಬಂದಿವೆ. ಅಂಥ ವರ್ತನೆಗಳನ್ನು ಅಭಿವ್ಯಕ್ತಿ ಸ್ವಾಂತಂತ್ರ್ಯದ ಭಾಗವಾಗಿಯೇ ಅವು ಪರಿಗಣಿಸುತ್ತಿವೆ. ಸ್ಕಾಟ್ಲಂಡ್ ಪ್ರಾಂತ್ಯದಲ್ಲಿ ಅದು ಬ್ರಿಟನ್ ದೇಶದಿಂದ ಪ್ರತ್ಯೇಕವಾಗುವ ದಿಕ್ಕಿನಲ್ಲಿ ಹೋರಾಟಗಳು ನಡೆಯುತ್ತಲೇ ಇವೆ. ಕೆನಾಡದಿಂದ ಕ್ಯೂಬೆಕ್, ಸ್ಪೇಯ್ನ್ ದೇಶದಿಂದ ಬಾಷ್ಕ್ ಪ್ರಾಂತ್ಯ ಬೇರೆಯಾಗಲು ಯತ್ನಿಸುತ್ತಿವೆ. ಇಂತಹ ಸಂದರ್ಭದಲ್ಲಿ ಆ ದೇಶಗಳು ವರ್ತಿಸುತ್ತಿರುವ ರೀತಿ ಭಾರತಕ್ಕೆ ಒಂದು ಮಾದರಿ. ಆ ದೇಶಗಳು ಸೆಡೀಷನ್ ವಿಧಿಯನ್ನು ನಮ್ಮಂತೆ ಸ್ವೇಚ್ಚೆಯಿಂದ ಬಳಸುತ್ತಿವೆಯೇ ಎಂಬುವುದನ್ನು ನಮ್ಮ ಮೀಡಿಯಾದ ಪ್ರಭೃತಿಗಳು,jnu-agitation ಬಲಪಂಥೀಯ ಸಂಘಟನೆಗಳು ನೋಡಬೇಕು. ಸ್ಕಾಟ್ಲೆಂಡ್ ಚಳುವಳಿಯ ಮಾದರಿಯಲ್ಲಿ, ನಮ್ಮ ದೇಶದಲ್ಲಿ ಕಾಶ್ಮೀರ ಪ್ರಾಂತ್ಯವು ಪ್ರತ್ಯೇಕವಾಗಬೇಕೆಂದು ಕೆಲವರು ಪ್ರತಿಪಾದಿಸುತ್ತಿದ್ದಾರೆ. ಅಂತಹ ಸಂಧರ್ಭದಲ್ಲಿ ಸ್ಕಾಟ್ಲಂಡಿನಲ್ಲಿ ಬ್ರಿಟನ್ ವಿರುದ್ಧ ಘೋಷಣೆಗಳು ಮೊಳಗಿದಂತೆ ಇಲ್ಲಿ ಭಾರತ ವಿರೋಧಿ ಕೂಗುಗಳು ಕೇಳಬಹುದು. ಮತ್ತು ಅದು ಪ್ರತ್ಯೇಕತಾ ಚಳುವಳಿಗಳ ಸಹಜ ಪ್ರವೃತ್ತಿಯೇ ಆಗಿರುತ್ತದೆ. ಪ್ರತ್ಯೇಕತೆಯ ಬೇಡಿಕೆಗಳನ್ನು, ಅಲ್ಲಿಯ ಜನರ ಆಶೋತ್ತರಗಳನ್ನು ನಾವು ವಸ್ತುನಿಷ್ಠ ನೆಲೆಯಲ್ಲಿ ನಾವು ಅನುಸಂಧಾನ ಮಾಡಬೇಕೇ ಹೊರತು ರಾಷ್ಟ್ರದ್ರೋಹದ ಪ್ರಕರಣಗಳಂತಹ ಕ್ಷುಲ್ಲಕ ವಿಧಾನಗಳಿಂದ ಅಲ್ಲ. ಅಂತಹ ಪ್ರಾಂತ್ಯದ ಸರ್ವತೋಮುಖ ಅಭಿವೃಧ್ಧಿಗೆ ನಾವು ಮಾಡಿರುವ, ಮಾಡುತ್ತಿರುವ ಅಥವಾ ಮಾಡಬಹುದಾದ ನಮ್ಮ ಪ್ರಯತ್ನಗಳು ಪ್ರತ್ಯೇಕತಾ ಬೇಡಿಕೆಗಳಿಗೆ ಉತ್ತರವಾಗಬೇಕು. ಅವಾಗಲೇ ಸ್ಕಾಟ್ಲಂಡ್ ನಲ್ಲಿ ನಡೆದ ಜನಮತಗಣನೆಯಲ್ಲಿ ಹೇಗೆ ಬಹು ಸಂಖ್ಯೆಯ ಸ್ಕಾಟಿಷ್ ಜನರು ಪ್ರತ್ಯೇಕತೆಯ ವಿರುದ್ಧ ಮತ ಹಾಕಿದರೋ ಅಂತಹ ಬೆಳವಣಿಗೆಗಳು ನಮ್ಮಲ್ಲೂ ನಡೆಯುತ್ತವೆ. ಆದರೆ ಕಾಶ್ಮೀರ ಪ್ರಾಂತ್ಯದ ಅಭಿವೃದ್ಧಿ ಹಾಗೂ ಅಲ್ಲಿಯ ಮಾನವ ಹಕ್ಕುಗಳ ರಕ್ಷಣೆಯ ವಿಚಾರದಲ್ಲಿ ಅಂತಹ ಕಲ್ಪನೆಗಳನ್ನು ಇಟ್ಟುಕೊಳ್ಳಬಹುದೇ?

ಸದ್ಯ, ‘ಜೆಎನ್ ಯು ವಿದ್ಯಾರ್ಥಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ, ಅಫ್ಜಲ್ ಪರ ಘೋಷಣೆ ಕೂಗಿಲ್ಲ’ ಎಂದು ಮಾನವ ಹಕ್ಕು ಕಾರ್ಯಕರ್ತರು, ಪ್ರಗತಿಪರರು ಮತ್ತು ಚಿಂತಕರು ವಾದಿಸುತ್ತಿದ್ದಾರೆ. ಅದಕ್ಕಾಗಿ ಬಂಧಿತ ವಿದ್ಯಾರ್ಥಿ ಸಂಘದ ನಾಯಕ ಕನ್ನಯ್ಯರ ಭಾಷಣವನ್ನು ಮತ್ತೆ ಮತ್ತೆ ಪ್ರಸ್ತುತಪಡಿಸಿ “ನೋಡಿ, ಇದರಲ್ಲಿ ದೇಶವಿರೋಧಿ ಘೋಷಣೆ ಏನಿದೆ? ಪಾಕ್ ಪರ ಘೋಷಣೆ ಇದರಲ್ಲಿ ಇಲ್ಲ. ಅಫ್ಜಲ್ ಗುರು ಬಗ್ಗೆ ಭಾಷಣದಲ್ಲಿ ಉಲ್ಲೇಖವೇ ಇಲ್ಲ” ಎಂಬಂತಹ ಮಾತುಗಳನ್ನು ಆಡುತ್ತಿದ್ದಾರೆ. ಇದು ಬಹಳ ಅಪಾಯಕಾರಿಯಾದ ವಾದ. ಅಂತಹ ಪ್ರತಿಪಾದನೆಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಯನ್ನು ಕುಗ್ಗಿಸುವ ಬಲಪಂಥೀಯರ ಪಿತೂರಿಗೆ ಇಂಬು ಕೊಟ್ಟಂತೆ. ಜೆ.ಎನ್.ಯು ಹೋರಾಟ ಬಲಪಂಥೀಯರನ್ನು ಹಿಮ್ಮೆಟ್ಟುವ ವಿಚಾರದಲ್ಲಿ ತಕ್ಕ ಮಟ್ಟಿಗೆABVP ಯಶಸ್ವಿಯಾಗಬಹುದು. ಆದರೆ ಪ್ರತ್ಯೇಕತೆಯ ಬಗ್ಗೆ ಅಥವಾ ಘೋಷಣೆಯಂತಹ ಕ್ಷುಲ್ಲಕ ವಿಚಾರಗಳಲ್ಲಿ ಬಲಪಂಥೀಯ ಸಂಘಟನೆಗಳು ನಿರ್ಣಯಿಸಿರುವ ಕುತ್ಸಿತ ಸ್ವರೂಪದ ರಾಷ್ಟ್ರೀಯತೆಯ ವ್ಯಾಖ್ಯಾನಗಳಿಗೆ ಮಾನ್ಯತೆ ದೊರತಂತೆ ಕಾಣುತ್ತದೆ. ಇದು ಆತಂಕದ ವಿಚಾರ. ನಾವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅದರ ಪೂರ್ಣ ಸಾಂವಿಧಾನಿಕ ನೆಲೆಯಲ್ಲಿ ಸಾಕ್ಷತ್ಕರಿಸುವ ದಿಶೆಯಲ್ಲಿ ಕಾರ್ಯಶೀಲರಾಗುವುದು ಅವಶ್ಯ. ಅದನ್ನು ಹರಣಮಾಡುವ, ಮಿತಿಗೊಳಿಸುವ ಪ್ರತಿಗಾಮಿಗಳ ಟ್ರ್ಯಾಪ್ ಗೆ ಬೀಳಲೇಬಾರದು. ಯಾವುದೇ ದೇಶದಲ್ಲಿ ಆ ದೇಶದ ಪ್ರಭುತ್ವ ಜೀವ ವಿರೋಧಿಯಾಗಿ ವರ್ತಿಸಿದಾಗ ಅದನ್ನು ಪ್ರಶ್ನಿಸುವ, ಅದರ ವಿರುದ್ಧ ಗಟ್ಟಿ ದ್ವನಿಯಲ್ಲಿ ಮಾತನಾಡುವ ಸ್ವಾತಂತ್ರ್ಯ ಇರಲೇಬೇಕು. ಕಾಶ್ಮೀರ ಸ್ವಾತಂತ್ರ್ಯವಾಗಬೇಕು ಎಂಬಂಥ ಅಹಿಸಾತ್ಮಕ ಘೋಷಣೆಗಳು ಅಥವಾ ಅಂತಹ ವಿಚಾರದ ಕುರಿತಾದ ಕಮ್ಮಟ, ಶಿಬಿರ ಹಾಗೂ ಚರ್ಚಾಕೂಟಗಳು ಕೂಡಾ ಸದ್ಯದ ಕಾನೂನುಗಳ ಪ್ರಕಾರ ದೇಶವಿರೋಧಿ ಆಗೋದಿಲ್ಲ. ಪ್ರಜಾಪ್ರಭುತ್ವದಲ್ಲಿ ಭಿನ್ನ ಮತೀಯರಿಗೆ ನಿರ್ಭೀತ ಅವಕಾಶ ಸಹಜವಾಗಿಯೇ ಇರುತ್ತದೆ. ಮುಕ್ತ ಸಮಾಜಗಳು ಅಹಿಂಸಾತ್ಮಕ ಪ್ರತ್ಯೇಕತಾವಾದಿಗಳನ್ನು ಜೈಲಿಗೆ ಹಾಕುವುದಿಲ್ಲ (Free societies do not jail non-violent secessionists) ಎಂದು ಖ್ಯಾತ ಅರ್ಥ ಶಾಸ್ತ್ರಜ್ಞ ಮತ್ತು ಚಿಂತಕ ಸ್ವಾಮಿನಾಥನ್ ಅಯ್ಯರ್ ಅಭಿಪ್ರಾಯ ಪಡುತ್ತಾರೆ. ಅಂತಹ ಮುಕ್ತ ಸಮಾಜದ ನಿರ್ಮಾಣಕ್ಕೆ ನಾವು ತುಡಿಯಬೇಕು. ಇಲ್ಲವಾದಲ್ಲಿ ಮುಂದೆ ಕಾಶ್ಮೀರದ ಬಗ್ಗೆ ಮಾತಾಡುವ ಪ್ರತಿಯೊಬ್ಬ ಚಿಂತಕನೂ ದೇಶದ್ರೋಹದ ಅಪಾದನೆಯ ಅಡಿಯಲ್ಲಿ, ಪ್ರಭುತ್ವದ ಕೈಯಲ್ಲಿ ಬಂಧಿಯಾಗುವ ಅಪಾಯವಿರುತ್ತದೆ. ಮತ್ತು ಅಂತಹ ಸಂದರ್ಭದಲ್ಲಿ ಇಂದಿನ ನಮ್ಮ ವರ್ತನೆ ವಿರೋಧಾಭಾಸವಾಗಿ ಅಂದು ನಮ್ಮನ್ನು ಭೂತದಂತೆ ಕಾಡುತ್ತದೆ.

 

3 thoughts on “ಕಾಶ್ಮೀರ ಪ್ರತ್ಯೇಕತಾವಾದ, ಪಾಕಿಸ್ತಾನ್ ಜಿಂದಾಬಾದ್ ಮತ್ತು ಸಂವಿಧಾನ

  1. im unknown

    ಅಷ್ಟಕ್ಕೂ,

    ಅವಸ್ಥೆ ಮಾರೆ!! ನಮ್ಮ ದೇಶದ ಅವಸ್ಥೆ!

    ನಿಮ್ಮ ಈ “ಅಷ್ಟಕ್ಕೂ”ಗಳನ್ನು ಸಹಿಸ್ತಾ ಇದೀವಿ. ನಾವು ಅಸಹಿಷ್ಣುಗಳು!

    Reply
  2. BNS

    ಭಾರತದ ‘ಬರ್ಬಾದಿ’ ಯನ್ನು ಕೋರುವ, ದೇಶದ ಸಂಸತ್ ಅನ್ನೇ ಮುಗಿಸಲು ಪ್ರಯತ್ನಿಸುವ ಅಫ್ಜಲ್ ‘ಮನೆ ಮನೆಯಲ್ಲೂ ಹುಟ್ಟಿ ಬರಲಿ’ ಎಂದು ಹಾರೈಸುವ, ಚಳುವಳಿಗಾರರು ಅದೆಷ್ಟು ಅಹಿಂಸಾತ್ಮಕವಾಗಿ ತಮ್ಮ ವಾದವನ್ನು ಮುಂದಿಟ್ಟರೂ, ಅವರನ್ನು ದೇಶದ ಸಾಮಾನ್ಯ ಜನತೆ ಕೂಡಾ ಅನುಮಾನದ ಕಣ್ಣಿನಿಂದಲೇ ನೋಡುತ್ತಾರೆ. ಇಂತಹ ಸಂದರ್ಭದಲ್ಲಿ ಕೇವಲ ಒಂದು ಪಕ್ಷದ ಸರ್ಕಾರವನ್ನು ಈ ವಿಷಯಕ್ಕೆ ದೂರುವುದು ಇಡೀ ಪ್ರಸಂಗವನ್ನು ರಾಜಕೀಯಗೊಳಿಸುವ, ಮತ್ತು ನೈಜ ತನಿಖೆಯನ್ನು ದಿಕ್ಕು ತಪ್ಪಿಸುವ ಹುನ್ನಾರವಾಗಿ ಕಾಣುತ್ತದೆ. ಈ ವಿಷಯದಲ್ಲಿ ಸರ್ಕಾರದ ನಡೆ ಅದೇನೇ ಇರಲಿ, ಎಡ ಪಕ್ಷಗಳು ಮತ್ತು ಕಾಂಗ್ರೆಸ್ ಬಜೆಟ್ ಅಧಿವೇಶನವನ್ನು ಹಳ್ಳ ಹಿಡಿಸುವ ತಯಾರಿಯಲ್ಲಿ ದೇಶದ ಸಾಧಾರಣ ಜನತೆಯ ದೃಷ್ಟಿಯಲ್ಲಿ ದೇಶದ್ರೋಹಿಗಳಾಗಿ, ಅನುಮಾನಾಸ್ಪದವಾಗಿ ಕಾಣಲು ಪ್ರಾರಂಭಿಸಿದ್ದು ಸುಳ್ಳಲ್ಲ.

    Reply
  3. Ananda Prasad

    ದೊಡ್ಡ ಸಂಖ್ಯೆಯಲ್ಲಿ ಜನರ ಗುಂಪು ಕಟ್ಟಿ ಧರ್ಮದ ಹೆಸರಿನಲ್ಲಿ ಹಿಂಸಾಚಾರ ನಡೆಸುವುದು ನಮ್ಮ ಸ್ವಯಂಘೋಷಿತ ದೇಶಭಕ್ತರ ದೃಷ್ಟಿಯಲ್ಲಿ ದೇಶದ್ರೋಹ ಅಲ್ಲ. ಉದಾಹರಣೆಗೆ ಬಾಬ್ರಿ ಮಸೀದಿ ನಾಶ ಮಾಡಿದ್ದು, ಅದರಿಂದ ಉಂಟಾದ ಗಲಭೆಯಿಂದ ದೇಶಕ್ಕೆ ಸಾವಿರಾರು ಕೋಟಿ ರೂಪಾಯಿಗಳ ನಷ್ಟ ಹಾಗೂ ನೂರಾರು ಪ್ರಾಣಹಾನಿ ಆದರೂ ಅದು ದೇಶದ್ರೋಹ ಅಲ್ಲ ಬದಲಿಗೆ ಅದು ಅಧಿಕಾರ ಹಿಡಿಯಲು ಬಳಸುವ ಮೆಟ್ಟಿಲು. ಹರ್ಯಾಣದಲ್ಲಿ ಜಾಟರು ಮೀಸಲಾತಿಗೆ ತಮ್ಮನ್ನು ಸೇರಿಸಲು ನಡೆಸಿದ ಘನಘೋರ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ದೇಶದ್ರೋಹ ಅಲ್ಲ. ಇದೇ ರೀತಿ ಮುಂದುವರಿದ ಬಲಿತ ಜಾತಿಗಳು ಬೇರೆ ಬೇರೆ ರಾಜ್ಯಗಳಲ್ಲಿ ತಮ್ಮನ್ನು ಮೀಸಲಾತಿ ಪಟ್ಟಿಗೆ ಸೇರಿಸಬೇಕೆಂದು ಸಾರ್ವಜನಿಕ ಆಸ್ತಿಪಾಸ್ತಿಗೆ ಅಪಾರ ಹಾನಿ ಮಾಡಿದರೂ ಅವರ ಮೇಲೆ ದೇಶದ್ರೋಹದ ಆರೋಪ ಹೊರಿಸಿ ಅದನ್ನು ಪ್ರತಿಭಟಿಸಲು ನಮ್ಮ ಸ್ವಯಂಘೋಷಿತ ದೇಶಭಕ್ತರಿಗೆ ಧೈರ್ಯ ಇಲ್ಲ. ಎಲ್ಲೋ ಸಂಘಟಿತರಲ್ಲದ ಕೆಲವು ಹುಡುಗರು ಒಂದು ಘೋಷಣೆ ಕೂಗಿದ ಕೂಡಲೇ ಅದು ಮಹಾ ದೇಶದ್ರೋಹವಾಗುತ್ತದೆ. ಇದು ನಮ್ಮ ಸ್ವಯಂಘೋಷಿತ ದೇಶಭಕ್ತರ ಆಷಾಢಭೂತಿತನವಲ್ಲದೆ ಮತ್ತೇನೂ ಅಲ್ಲ. ದೇಶದ ನೈಜ ಸಮಸ್ಯೆಗಳಾದ ಭ್ರಷ್ಟಾಚಾರ, ಸರ್ಕಾರೀ ನೌಕರರ ಕೆಂಪು ಪಟ್ಟಿಯಿಂದ ಜನಸಾಮಾನ್ಯರ ಬರ್ಬರ ಶೋಷಣೆ, ಕಪ್ಪು ಹಣದ ಖದೀಮರು ದೇಶದ ಕಾನೂನಿನ ಕಣ್ತಪ್ಪಿಸಿ ದೇಶ ಹಾಗೂ ವಿದೇಶಗಳಲ್ಲಿ ಕಪ್ಪು ಹಣ ಸಂಗ್ರಹಿಸಿ ದೇಶದ ಅರ್ಥ ವ್ಯವಸ್ಥೆಯನ್ನು ಹದಗೆಡಿಸುವುದು ಇದರ ಬಗ್ಗೆ ಚಕಾರ ಎತ್ತಲು ನಮ್ಮ ಸ್ವಯಂಘೋಷಿತ ದೇಶಭಕ್ತರಿಗೆ ಧಂ ಇಲ್ಲ.

    ಕೊನೆಯ ಮಾತು: ನೀವು ಭಾರೀ ಸಂಖ್ಯೆಯಲ್ಲಿ ಜನ ಸೇರಿಸಿ ಧರ್ಮ ದೇವರ ಹೆಸರಿನಲ್ಲಿ ಎಷ್ಟೇ ಹಿಂಸಾಚಾರ ಮಾಡಿದರೂ ಅದು ದೇಶದ್ರೋಹ ಅಲ್ಲ, ನಿಮ್ಮನ್ನು ಕೋರ್ಟು, ಕಾನೂನು ಏನೂ ಮಾಡಲಾಗುವುದಿಲ್ಲ, ಕೊನೆಗೆ ಇದೇ ರೀತಿಯ ಹಿಂಸಾಚಾರ ನಡೆಸಿ ರಾಜಕೀಯ ಸೇರಿದರೆ, ಚುನಾವಣೆಗೆ ನಿಂತರೆ ನೀವು ಭವಿಷ್ಯದಲ್ಲಿ ಅಧಿಕಾರವನ್ನೂ ಗಿಟ್ಟಿಸಬಹುದು, ಎಲ್ಲ ಕೇಸುಗಳನ್ನು ಅಧಿಕಾರಕ್ಕೆ ಬಂದ ನಂತರ ಹಿಂತೆಗೆದುಕೊಳ್ಳಬಹುದು. ಕೋರ್ಟು ಕೂಡ ನಿಮ್ಮನ್ನು ಏನೂ ಮಾಡುವುದಿಲ್ಲ. ಇದು ನಮ್ಮ ದೇಶದ ದುರಂತ.

    Reply

Leave a Reply

Your email address will not be published. Required fields are marked *