ಕಟ್ಟಿದ ಗಡಿಯಾರ ಮತ್ತು ಕಳಚಿದ ಮುಖವಾಡ!


-ಸಂತೋಷ್


ಅವು ಅಹಿಂದ ಕಾರ್ಯಕ್ರಮದ ದಿನಗಳು. ರಾಜ್ಯದ ಹಲವೆಡೆ ಅಹಿಂದ ಸಮಾವೇಶಗಳು ನಡೆದವು. ಆಗಿನ್ನೂ ಕಾಂಗ್ರೆಸ್ ಸೇರದ ಸಿದ್ದರಾಮಯ್ಯನವರಿಗೆ ಬೆಂಬಲವಾಗಿ ಕೆಲ ಕಾಂಗ್ರೆಸ್ ಶಾಸಕರು ಜನರನ್ನು ಒಟ್ಟು ಮಾಡಿ ಸಭೆಗಳಿಗೆ ಕಳುಹಿಸುತ್ತಿದ್ದರು. ಕೆಲವರು ಬಸ್ ವ್ಯವಸ್ಥೆ ಮಾಡಿದ್ದರು. ಹಲವೆಡೆ ಕೆ.ಎಸ್.ಆರ್.ಟಿ.ಸಿಗೆ ಬೃಹತ್ ಮೊತ್ತದ ದುಡ್ಡು ಕಟ್ಟಿ ಬಸ್ ಗಳನ್ನು ಬಾಡಿಗೆಗೆ ತಂದವರು ಸತೀಶ್ ಜಾರಕಿಹೊಳಿ ಬಳಗSiddu-2. ಆಗ ಜಾರಕಿಹೊಳಿ ಸಿದ್ದರಾಮಯ್ಯ ಜೊತೆ ಗುರುತಿಸಿಕೊಂಡು ದಳ ತೊರೆದಿದ್ದರು. ರಾಜ್ಯದ ನಾನಾ ಕಡೆ ಸಮಾವೇಶಗಳು ಯಶಸ್ವಿಯಾಗಿ ನಡೆಯಲು ನೂರಾರು ಜನರ ಶ್ರಮವಿತ್ತು. ಅವರಲ್ಲಿ ಅನೇಕರಿಗೆ ಸಿದ್ದರಾಮಯ್ಯ ಮುಂದೆ ಮುಖ್ಯಮಂತ್ರಿಯಾಗುತ್ತಾರೆ ಎಂಬ ಯೋಚನೆ ಇದ್ದಿರಬಹುದು, ಆದರೆ ಅವರು ಅಧಿಕಾರಕ್ಕೆ ಬಂದರೆ, ನಾವೊಂದಿಷ್ಟು ಲಾಭ ಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರ ಇದ್ದದ್ದಂತೂ ಕೆಲವೇ ಕೆಲವರಿಗೆ.

ಕಾಲ ಉರುಳಿತು. ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದರು. ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆ ಜಿದ್ದಾಜಿದ್ದಿನ ಕಣ. ಸಿದ್ದರಾಮಯ್ಯನವರಿಗೆ ಬಹುಶಃ ಇನ್ನೂ ನೆನಪಿರಬಹುದು, ನಾಡಿನ ಮೂಲೆ ಮೂಲೆಯಿಂದ ಅವರ ಬಗ್ಗೆ ಒಲವು, ಅಭಿಮಾನ ಇಟ್ಟುಕೊಂಡಿದ್ದ ನೂರಾರು ಮಂದಿ ತಮ್ಮ ಕೈಲಾದಷ್ಟು ಹಣವನ್ನು ಸ್ನೇಹಿತರ ಮೂಲಕ ಅವರ ಗೆಲುವಿಗೆ ಕಳುಹಿಸಿದರು. ಒಂದು ಸಾವಿರದಿಂದ ಐದು ಸಾವಿರ ರೂಗಳ ವರೆಗೆ ಕೊಟ್ಟವರ ಸಂಖ್ಯೆ ದೊಡ್ಡದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ಹೊತ್ತಿಗೆ ಅವರಲ್ಲಿ ಕೆಲವರು ಅಸುನೀಗಿರಬಹುದು. ಅವರಲ್ಲಿ ಬಹುಪಾಲು ಮಂದಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದರಿಂದ ವೈಯಕ್ತಿಕವಾಗಿ ಯಾವ ಲಾಭವೂ ಬೇಕಿರಲಿಲ್ಲ. ಅವರಲ್ಲಿ ಬಹುತೇಕರು ಕುರುಬರೇ ಇರಬಹುದು, ಆದರೆ ಜಾತಿ ಒಂದೇ ಕಾರಣಕ್ಕೆ ಅಭಿಮಾನ ಇರಲಿಲ್ಲ. (ಜಾತಿ ಮಾತ್ರ ಕಾರಣಕ್ಕೆ ಅಭಿಮಾನ ಪಡುವುದಾಗಿದ್ದರೆ, ಕೆ.ಎಸ್. ಈಶ್ವರಪ್ಪ ಉಪಮುಖ್ಯಮಂತ್ರಿಯಾದಾಗ ಆ ಸಮುದಾಯ ಸಂಭ್ರಮಿಸಬೇಕಿತ್ತು. ಅಥವಾ ಮತ್ತೊಬ್ಬ ನಾಯಕ ಸಿಕ್ಕ ಎಂದು ಖುಷಿಪಡ ಬಹುದಿತ್ತು. ಹಾಗೇನೂ ಕಾಣಲಿಲ್ಲ). ಸಿದ್ದರಾಮಯ್ಯನವರನ್ನು ಜಾತಿ ಹೊರತಾಗಿ ಇಷ್ಟ ಪಡುವ ಒಂದು ದೊಡ್ಡ ವರ್ಗವಿತ್ತು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಮೊದಲ ದಿನಗಳಲ್ಲಿ ಅವರು ಬೆಂಗಳೂರ ಹೊರಗೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾಗ ಅಕ್ಕ ಪಕ್ಕದಲ್ಲಿ ಎಚ್.ಎಂ.ರೇವಣ್ಣ ನಂತಹವರು ಕಾಣುತ್ತಿದ್ದರು. ಸಭೆಯಲ್ಲಿ ಹಾಜರಿದ್ದ ಜನ, ರೇವಣ್ಣನೂ ಅವರದೇ ಜಾತಿಯವರಲ್ಲವೇ, ಅದಕ್ಕೆ ಯಾವಾಗಲೂ ಜೊತೆಯಲ್ಲೇ ಇರ್ತಾರೆ ಎಂದು ಮಾತನಾಡಿಕೊಂಡರು. ಆದರೆ, ಅದೇ ಊರುಗಳಿಗೆ ಕೆಲ ತಿಂಗಳುಗಳ ನಂತರ ಸಿಎಂ ಭೇಟಿ ಕೊಟ್ಟಾಗ, ರೇವಣ್ಣ ಇರುತ್ತಿರಲಿಲ್ಲ. ಆ ಸ್ಥಾನದಲ್ಲಿ ಕಾಣುತ್ತಿದ್ದ ಮುಖ ಭೈರತಿ ಬಸವರಾಜು. ಅವರು ವಿದಾನಸಭೆ ಸದಸ್ಯ. ಅವರ ಸೋದರ ಸಂಬಂಧಿ ಭೈರತಿ ಸುರೇಶ್ ವಿಧಾನ ಪರಿಷತ್ ಸದಸ್ಯ. ಕಾಂಗ್ರೆಸ್ ನ ಕೆಲ ಸದಸ್ಯರು ಪಕ್ಷದ ನಿರ್ದೇಶನದ ವಿರುದ್ಧ ಮತ ನೀಡಿ, ಅರ್ಥಾತ್ ಹಣಕ್ಕೆ ತಮ್ಮ ಮತ ಮಾರಿಕೊಂಡು, ಆತನನ್ನು ಗೆಲ್ಲಿಸಿದ್ದರು. ಹೆಬ್ಬಾಳ್ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು ಭೈರತಿ ಸುರೇಶ್ ರನ್ನು. ರೇವಣ್ಣ ಬಹಳ ಕಾಲ ಜನರ ಮಧ್ಯೆ ಇದ್ದು ರಾಜಕಾರಣ ಮಾಡಿಕೊಂಡು ಬಂದವರು. ಆದರೆ ಭೈರತಿಯವರ ವ್ಯವಹಾರ ರಿಯಲ್ ಎಸ್ಟೇಟ್. ಹಣವಂತರು ಅಧಿಕಾರಕ್ಕೆ ಹಾತೊರೆದು ರಾಜಕಾರಣಕ್ಕೆ ಬಂದರೆ ಆಗುವ ಅನಾಹುತಗಳು ಅನೇಕ.

ಹೀಗೆ ಹೊಸ ಮುಖಗಳ ಪ್ರವೇಶದ ಪರಿಣಾಮವೇ ಕೈಗೆ ದುಬಾರಿ ಬೆಲೆಯ ವಾಚ್ ಬಂತು. ಕಣ್ಣು ತಂಪಾಗಿಸಲು ಲಕ್ಷಗಟ್ಟಲೆ ಬೆಲೆ ಬಾಳುವ ಗ್ಲಾಸ್ ಬೇಕಾಯ್ತು. (ಪಾಪ ಇವರ ಅಹಿಂದ ಸಮಾವೇಶಗಳಿಗೆ ದುಡ್ಡು ಹೊಂದಿಸಿಕೊಟ್ಟು ಸಾಮಾಜಿಕ ನ್ಯಾಯದ ಹರಿಕಾರ ಮುಖ್ಯಮಂತ್ರಿಯಾಗಲಿ ಎಂದು ಆಶಿಸಿದ್ದ ಸತೀಶ್ ಜಾರಕಿಹೊಳಿ, ಬುದ್ಧ ಹಾಗೂ ಅಂಬೇಡ್ಕರ್ ಭಾವಚಿತ್ರಗಳನ್ನು ಇಟ್ಟುಕೊಂಡು ಸಾಮಾಜಿಕ ಜಾಗೃತಿ ಪ್ರಯತ್ನಿಸುತ್ತಿದ್ದಾರೆ. ಸ್ಮಶಾನದಲ್ಲಿ ಮಲಗುವ ಮೂಲಕ ಮೂಢನಂಬಿಕೆಗಳನ್ನು ತೊಡೆದು ಹಾಕಲು ತಮ್ಮ ಮಿತಿಯೊಳಗೇ ಪ್ರಯತ್ನಿಸುತ್ತಿದ್ದಾರೆ.) ಕೆಲ ಕಾಲದ ವರೆಗೆ ಇದೆಲ್ಲವೂ ಕೇವಲ ಗಾಳಿಸುದ್ದಿಯಾಗಿಯೇ ಇದ್ದವು. ಆದರೆ, ಜನ ಅಸಹ್ಯ ಪಡುವ ಹಂತಕ್ಕೆ ಹೋಗಲು ಕಾರಣ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಗಳಿಗೆ ಉತ್ತರಿಸಿದ ರೀತಿ, ಮತ್ತು ಹಾಗೆ ಉತ್ತರಿಸುವಾಗ ಹಿಂದೆ ನಿಂತು ಗಹಗಹಿಸಿದರಲ್ಲ ಅವರು ಇಡೀ ಪ್ರಕರಣದಲ್ಲಿ ಮುಖ್ಯಮಂತ್ರಿಯನ್ನು ಖಳನಾಯಕನನ್ನಾಗಿಸಿದರು.

“ನನಗೆ ಈ ವಾಚ್ ಐದು ಲಕ್ಷ ರೂಪಾಯಿ ಕೊಡಿಸಿರಪ್ಪಾ ಸಾಕು…ಈ ಕನ್ನಡಕಕ್ಕೆ 50,000 ರೂ ಕೊಡಿಸಿ ಸಾಕು” – ಅದನ್ನು ಭಾರೀ ಚಾಲಾಕಿನ ಉತ್ತರ ಅಂದುಕೊಂಡಿರಾ ಸಿದ್ದರಾಮಯ್ಯ? ನಿಮ್ಮ ಹಿಂದೆ ನಿಂತವರು ನಿರ್ಲಜ್ಜರಾಗಿ ನಕ್ಕಿರಬಹುದು, ಆದರೆ ಜನರು ನಿಮ್ಮ ಉತ್ತರದ ಧಾಟಿಯನ್ನು ಅದೇ ರೀತಿ ಸ್ವೀಕರಿಸಲಿಲ್ಲ. “ಇವನಿಗ್ಯಾಕೆ ಬೇಕಿತ್ತು ಇಂತಹ ಶೋಕಿ? ಅದೂ 60-70 ಲಕ್ಷ ರೂಪಾಯಿದ್ದಂತೆ..ವಾಚ್..ವಜ್ರದ ಹರಳು ಇದ್ದಾವಂತೆ” – ಇದು ಸಾಮಾನ್ಯ ಜನರು ಇಡೀ ಪ್ರಕರಣವನ್ನು ನೋಡುವ ಬಗೆ. ಜನರ ಭಾವನೆ ಹೇಗಿರಬಹುದು ಎಂದು ಒಂದಿಷ್ಟೂ ಊಹಿಸದೆ, ನೀವು ಹಾಗೆ ಪ್ರತಿಕ್ರಿಯೆ ಕೊಟ್ಟಿರಲ್ಲ, ಅಷ್ಟು ಸಾಕು ನೀವು ಜನ ಸಾಮಾನ್ಯರನ್ನು ಭೇಟಿಯಾಗಿ, ಅವರೊಂದಿಗೆ ಮಾತನಾಡಿ ಎಷ್ಟೋ ದಿನಗಳಾದವು ಎಂದು ತಿಳಿಯುತ್ತದೆ.

ನೀವು ಹೇಳಿದಂತೆ, ಆ ಗಡಿಯಾರದ ಬೆಲೆ ಐದು ಲಕ್ಷ ರೂಪಾಯಿಗಳೇ ಇರಲಿ. ಆದರೆ, ಜನರು ತಮ್ಮ ಮುಖ್ಯಮಂತ್ರಿ ಸರಳವಾಗಿರಬೇಕೆಂದು ಬಯಸುತ್ತಾರೆ. ತ್ರಿಪುರ ಮುಖ್ಯಮಂತ್ರಿ ಬಗ್ಗೆ ನಮ್ಮ ಜನರಿಗೆ ಗೊತ್ತಿರುವುದು ಅವರ ಸರಳತೆ. ಮೊನ್ನೆ ಮೊನ್ನೆ ತೀರಿಕೊಂಡ ಎ.ಬಿ.ಬರ್ಧನ್ ಜೀವನ ಪೂರ್ತಿ ಸಂಪಾದಿಸಿದ್ದು ಒಂದು ಟ್ರಂಕ್ ಮತ್ತು ಹಾಸಿಗೆ. ಅಂತಹ ಸರಳತೆಯನ್ನು ಜನತೆ ಎಲ್ಲರಿಂದ ನಿರೀಕ್ಷಿಸುವುದಿಲ್ಲ. ನಾಳೆ ದಿನ ಯಾರಾದರೂ ಮೀಡಿಯಾ ಮುಂದೆ ನಿಂತು ಆರ್.ವಿ.ದೇಶಪಾಂಡೆ ಕೈಯಲ್ಲಿರುವ ಉಂಗುರದ ಬೆಲೆ ಒಂದು ಕೋಟಿ ಎಂದರೂ, ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅಥವಾ ಡಿ.ಕೆ.ಶಿವಕುಮಾರ್ ಹತ್ರ ಕೋಟಿ ಬೆಲೆ ಬಾಳುವ ಕಾರು ಇದೆ ಎಂದರೆ, ಯಾರೂ ಮನಸ್ಸಿಗೆ ಬೇಸರ ಮಾಡಿಕೊಳ್ಳಲ್ಲ. ಆದರೆ, ನೀವೀಗ ಎಂತಹ ಮಟ್ಟಕ್ಕೆ ಇಳಿದು ಬಿಟ್ಟೀದಿರೆಂದರೆ, ಯಾವುದೇ ಪತ್ರಿಕೆ ನಿಮ್ಮ ಒಂದು ಜೊತೆ ಶೂ ಬೆಲೆ ಒಂದೂವರೆ ಲಕ್ಷ ರೂಪಾಯಿ ಎಂದರೆ ನಂಬಿ ಬಿಡುತ್ತಾರೆ. “ಓಹ್..ಇರಬಹುದು. ಅಂತಹವು ಮೂರ್ನಾಲ್ಕು ಜೊತೆ ಇರಬಹುದು. ಒಂದೇ ಇಟ್ಟುಕೊಂಡರೆ, ಅದನ್ನೇ ದಿನಾSiddu-1ಲೂ ಹಾಕೋಕೆ ಆಗುತ್ತಾ” ಎಂದು ತೀರ್ಮಾನಕ್ಕೆ ಬರುತ್ತಿದ್ದಾರೆ.

ಅಷ್ಟೇ ಅಲ್ಲ, ಕುಮಾರಸ್ವಾಮಿ ಇದು ಕದ್ದ ವಾಚ್ ಎಂದು ಆರೋಪಿಸಿದಾಗ, ಜನರು “ಹೌದು..ಇರಲೂ ಬಹುದು” ಎಂದು ಸಂಶಯಿಸುತ್ತಿದ್ದಾರೆ. ಏಕೆಂದರೆ, ಅವರು ವಾಚ್ ಬಗ್ಗೆ ಕೊಟ್ಟ ಸಮಜಾಯಿಷಿ ಜನ ಸಾಮಾನ್ಯರಲ್ಲಿ ಸಮಾಧಾನ ತಂದಿಲ್ಲ. ಒಂದಿಷ್ಟು ತಿಂಗಳುಗಳ ಹಿಂದೆ, ಮೈಸೂರು ಬಳಿ ಪೊಲೀಸರೇ ಭಾಗಿಯಾಗಿದ್ದ ಕಳ್ಳತನವನ್ನು ಜನರು ಮರೆತಿಲ್ಲ. ಭಾಗಿಯಾಗಿದ್ದ ಸಣ್ಣ ಪುಟ್ಟ ಅಧಿಕಾರಿಗಳು ಶಿಕ್ಷೆ ಅನುಭವಿಸುತ್ತಿದ್ದಾರೆ, ಆದರೆ ಹಿರಿಯ ಅಧಿಕಾರಿ ಆರಾಮಾಗಿದ್ದಾರೆ. ಕ್ಷುಲ್ಲಕ ಘಟನೆಯಂತೆ ಆರಂಭವಾದ ಪ್ರಕರಣ ದಿನೇ ದಿನೇ ವಿಸ್ತಾರವಾಗುತ್ತಿದೆ. ಇದಕ್ಕೆಲ್ಲಾ ಕಾರಣ, ಸ್ವತಃ ಮುಖ್ಯಮಂತ್ರಿ ಹಾಗೂ ಅವರ ಸುತ್ತಲಿನವರು. ಮಕ್ಕಳು ದುಶ್ಚಟ ಕಲಿತರೆ ಸಹವಾಸ ದೋಷ ಎನ್ನಬಹುದು ಆದರೆ, ವ್ಯಕ್ತಿ ಭ್ರಷ್ಟನಾಗಲು, ಶೋಕಿಲಾಲನಾಗಲು ಸಹವಾಸ ಕಾರಣ ಅಲ್ಲ, ವಾಂಛೆ ಹಾಗೂ ದುರಾಸೆಗಳು ಕಾರಣ.

ಮುಖ್ಯಮಂತ್ರಿಯ ವಾಚ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ, ಸಿದ್ದರಾಮಯ್ಯನನ್ನು ಇದುವರೆಗೆ ಬೆಂಬಲಿಸಿಕೊಂಡು ಬಂದವರ ದನಿ ಬಂದ್ ಆದಂತಿದೆ. ತಮಗೂ, ಈ ಘಟನೆಗೂ ಸಂಬಂಧವೇ ಇಲ್ಲವೆಂಬಂತೆ ಮೌನವಾಗಿದ್ದಾರೆ. ಹಾಗಂತ, ಅವರಾರಿಗೂ ಈ ಪ್ರಕರಣ ಕಾರಣ ಸಿದ್ದರಾಮಯ್ಯನವರ ಬಗ್ಗೆ ಸಿಟ್ಟು, ಬೇಸರ ಬಂದಿಲ್ಲ ಎಂದಲ್ಲ. ಕೆಲವರು ತಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ವ್ಯಕ್ತ ಪಡಿಸುವ ಗೋಜಿಗೆ ಹೋಗದಿರಬಹುದು, ಅಥವಾ ಕೆಲ ಆತ್ಮೀಯರು ಖಾಸಗಿಯಾಗಿ ಮುಖ್ಯಮಂತ್ರಿಯೊಂದಿಗೆ ತಮ್ಮ ಸಿಟ್ಟು ವ್ಯಕ್ತಪಡಿಸಿರಬಹುದು. ಆದರೆ, ಅಷ್ಟು ಸಾಲದು. ಮುಂದೊಂದು ದಿನ, ಪಾಪಪ್ರಜ್ಞೆ ಕಾಡದೇ ಇರಲು ಈಗ ಮಾತನಾಡಬೇಕು. ಸಮಾಜದಲ್ಲಿ ಒಳ್ಳೆಯವರ ಸಂಖ್ಯೆ ಹೆಚ್ಚಿದೆ. ಅವರು ಹೆಚ್ಚೆಚ್ಚು ಮಾತನಾಡಬೇಕು.

3 thoughts on “ಕಟ್ಟಿದ ಗಡಿಯಾರ ಮತ್ತು ಕಳಚಿದ ಮುಖವಾಡ!

  1. john

    absolutely correct.so far his supporters (including me) could justify his other mistakes like having corrupt & non-active ministers in the cabinet,filthy spending on elections,crawling governance etc.but not any more.CM should come out with truth.apologize for any wrong doing on his part and quit his post in order to uphold the values which he preached and practiced all his life.politics,CMgiri is not permanent. sachaarithrya in.

    Reply
  2. ನಾರಾಯಣ ಹೊಳ್ಳ

    ಮುಖ್ಯಮಂತ್ರಿಗಳು ತಮಗೊಬ್ಬರಿಗೆ ಮಾತ್ರ ವಾಚ್ ಭಾಗ್ಯವನ್ನು ಜಾರಿಗೆ ತಂದಿರುವುದು ಸಮಾಜವಾದ ಹಾಗೂ ಸಮತೆಯ ದೃಷ್ಟಿಯಿಂದ ಸರಿಯಲ್ಲ. ವಾಚ್ ಭಾಗ್ಯವನ್ನು ಇಡೀ ಅಹಿಂದ ಸಮಾಜದ ಅರ್ಹರಿಗೆಲ್ಲರಿಗೂ ಸಿಗುವಂತೆ ತಕ್ಷಣ ಕ್ರಮ ತೆಗೆದುಕೊಂಡು ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳತಕ್ಕದ್ದು ಅಂತ ವಿನಂತಿ.

    Reply
  3. Salam Bava

    ಲೇಖಕರ ಅಭಿಪ್ರಾಯಕ್ಕೆ ನನ್ನ ಸಹಮತ ಇದೆ . ಭಾರತದಂಥ ದೇಶದಲ್ಲಿ ಓರ್ವ ರಾಜಕಾರಣಿ ,ಅದರಲ್ಲೂ ಒಂದು ರಾಜ್ಯದ ಮುಖ್ಯಮಂತ್ರಿ ,ಅದರಲ್ಲೂ ಸಿದ್ದರಾಮಯ್ಯ ರಂಥ ಓರ್ವ ಕಳಂಕ ರಹಿತ ರಾಜಕಾರಣಿ ಒಂದು ದುಬಾರಿ ಬೆಲೆಯ ಉಡುಗೊರೆಯನ್ನು ಸ್ವೀಕರಿಸುವಾಗ ಸಾವಿರ ಸಲ ಆಲೋಚಿಸಬೇಕಿತ್ತು . ಕುಮಾರ ಸ್ವಾಮಿ ಅದನ್ನು ಕೆದಕಿದಾಗ ಆ ವಾಚನ್ನು ನೇರವಾಗಿ ಸರಕಾರಕ್ಕೆ ಒಪ್ಪಿಸಬೇಕಿತ್ತು .
    ನನಗೆ ಮತ್ತೂ ಒಂದು ಆಶ್ಚರ್ಯ ಏನೆಂದರೆ – ಸಿದ್ದರಾಮಯ್ಯನವರ ಕೈಯಲ್ಲಿ ಅಂದ ಕಾಲದಿಂದ ರೋಲೆಕ್ಷ್ ವಾಚ್ ಇದೆ . ಅದರ ಬೆಲೆಯೂ ೬-೭ಲಕ್ಷ ರೂಪಾಯಿ . ಇನ್ನು ಅಹಿಂದ ನಾಯಕ ಎಂದು ಅವರನ್ನು ಸ್ಥಾಪಿತ ಹಿತಾಸಕ್ತಿಗಳು ಟಾರ್ಗೆಟ್ ಮಾಡುವುದು ಎಂಬುದು ಸತ್ಯವೇ ಹಾಗಿದ್ದರೂ ,ಅದು ಇದನ್ನು ನ್ಯಾಯಿಕರಿಸುದಿಲ್ಲ !

    Reply

Leave a Reply

Your email address will not be published. Required fields are marked *