Daily Archives: March 7, 2016

ಮಹಿಳಾ ದಿನ: ಆಚರಿಸಲು ಒಂದಿಷ್ಟು ನೈತಿಕತೆ ಬೇಡವೆ?

– ಪ್ರದೀಪ್ ಇ.

ನಾಳೆ ವಿಶ್ವ ಮಹಿಳಾ ದಿನ. ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಕ್ರಮ ಮಾಡುತ್ತೆ. ಮುಖ್ಯಮಂತ್ರಿ ಸೇರಿದಂತೆ ಹಲವರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾತನಾಡುತ್ತಾರೆ. ಅವರೆಲ್ಲರ ಮಾತುಗಳಿಗೆ ಮೊದಲು ಹೇಳಬೇಕಾದ್ದು — For god sake, hold your tongue. ಇಲ್ಲಿ ಸ್ವಲ್ಪ ಕೇಳಿ.

ಈ ಸರಕಾರಕ್ಕೆ ಮಹಿಳಾ ದಿನಾಚರಣೆ ಕಾರ್ಯಕ್ರಮ ಮಾಡುವ ನೈತಿಕ ಹಕ್ಕಿಲ್ಲ. ಇದು ಲೇಖನದ ಆರಂಭದಲ್ಲಿಯೇ ತೀರ್ಪು ಕೊಟ್ಟಂತೆ ಅನ್ನಿಸಬಹುದು. ಆದರೆ, ಇನ್ನು ಮುಂದೆ ಮಂಡಿಸಲಾಗುವ ಅಂಶಗಳಿಂದ ಈ ಲೇಖನ ಓದುತ್ತಿರುವ ಕೆಲವರಿಗಾದರೂ ಆ ಅಭಿಪ್ರಾಯದ ಬಗ್ಗೆ ಸಹಮತ ಮೂಡಬಹುದು.

ನಿಮಗೆ ಕೆಲವರಿಗೆ ಗೊತ್ತಿರಬಹುದು. ರಾಜ್ಯದ ಕೆಲವೆಡೆ ಹಲವು ವೈದ್ಯರು ಸಾವಿರಾರು ಅನಗತ್ಯ ಹಿಸ್ಟೆರೆಕ್ಟೊಮಿ (hysterectomy-ಗರ್ಭಕೋಶ ತೆಗೆಯುವ ಸರ್ಜರಿ) ಗಳನ್ನು ಮಾಡಿದ್ದಾರೆ. 2014 ರ ಅಂತ್ಯದ ಹೊತ್ತಿಗೆ ಚಿಕ್ಕಮಗPhoto Captionಳೂರ ಜಿಲ್ಲೆ ಬೀರೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರು ಅನಗತ್ಯವಾದ ಸರ್ಜರಿಗಳನ್ನು ಮಾಡಿ, ನೂರಾರು ಮಹಿಳೆಯರಿಂದ ದುಡ್ಡು ವಸೂಲಿ ಮಾಡಿದ್ದ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಸುದ್ದಿ ಬಂತು.

ವೈದ್ಯ ವೃತ್ತಿಯಲ್ಲಿರುವವರು ಕೆಲ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಅದರಂತೆ, ಹಿಸ್ಟೆರೆಕ್ಟೊಮಿ ಸರ್ಜರಿಯನ್ನು ತೀರಾ ಅನಿವಾರ್ಯವಾದ ಪ್ರಸಂಗಗಳ ಹೊರತಾಗಿ ಮಾಡಬಾರದು. ಅದರಲ್ಲೂ 35 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಹೆಂಗಸರಿಗೆ ಆ ಸರ್ಜರಿಯನ್ನು ಮಾಡುವಾಗ, ಸಾಧ್ಯವಿರುವ ಎಲ್ಲಾ ಪರ್ಯಾಯ ಮಾರ್ಗಗಳನ್ನು ಮೊದಲು ಪರಿಶೀಲಿಸಬೇಕು. ಆ ಸರ್ಜರಿಯನ್ನು ಮಾಡದೇ ಹೋದರೆ ಅವರ ಆರೋಗ್ಯಕ್ಕೆ ತೊಂದರೆ ಆಗಬಹುದು ಎನ್ನುವ ಪರಿಸ್ಥಿತಿ ಇದ್ದಾಗ ಮಾತ್ರ ಮುಂದುವರಿಯಬಹುದು. ಈ ನೀತಿಗೆ ಕಾರಣಗಳಿವೆ. ಗರ್ಭಕೋಶ ತೆಗೆದರೆ ಸ್ತ್ರೀ ದೇಹದ ಹಲವು ಋಣಾತ್ಮಕ ಪ್ರತಿಕ್ರಿಯೆಗಳು ಆಗುತ್ತವೆ. ಆದರೆ, ಗೊತ್ತಿರಲಿ, ಆ ಬೀರೂರಿನ ವೈದ್ಯ ಮೂರು ವರ್ಷದ ಅವಧಿಯಲ್ಲಿ 1,428 ಮಹಿಳೆಯರ ಗರ್ಭಕೋಶ ತೆಗೆದಿದ್ದ. ಆತ ವರ್ಷಪೂರ್ತಿ ರಜಾ ದಿನಗಳಲ್ಲೂ ಕೆಲಸ ಮಾಡಿದ್ದಾರೆ ಎಂದು ಭಾವಿಸಿದರೂ, ದಿನಕ್ಕೆ ಒಂದಕ್ಕಿಂತ ಹೆಚ್ಚು ಸರ್ಜರಿ ಮಾಡಿದ್ದಾರೆ. ಆಘಾತಕಾರಿ ಸಂಗತಿ ಎಂದರೆ, ಹಾಗೆ ಪರೀಕ್ಷೆಗೆ ಒಳಪಟ್ಟವರಲ್ಲಿ ಶೇಕಡ 40 ಕ್ಕೂ ಹೆಚ್ಚು ಮಂದಿ 35 ವರ್ಷಕ್ಕಿಂತ ಚಿಕ್ಕ ಹರೆಯದವರು.

ಈ ಎಲ್ಲಾ ಮಾಹಿತಿಗಳು ಸರಕಾರದ ಆರೋಗ್ಯ ಇಲಾಖೆ ಆದೇಶದ ಮೇಲೆ ತನಿಖೆ ನಡೆಸಿದ ಸಮಿತಿ ಕಲೆಹಾಕಿದ್ದು. ಮಾಧ್ಯಮದಲ್ಲಿ ಸುದ್ದಿ ಬಂದ ನಂತರ ಆರೋಗ್ಯ ಮಂತ್ರಿ ಯು.ಟಿ.ಖಾದರ್ ಸಮಿತಿ ನೇಮಿಸಿದರು. ಅದರಲ್ಲಿ ಇಬ್ಬರು ವೈದ್ಯರು ಮತ್ತೊಬ್ಬರು ವಕೀಲರು. ಆ ವಕೀಲರು ರಾಜ್ಯ ಮಹಿಳಾ ಆಯೋಗದ ಸದಸ್ಯರೂ ಹೌದು. ಆ ಮೂರೂ ಮಂದಿ, ಬೀರೂರಿನ ಆಸ್ಪತ್ರೆಗೆ ಹೋಗಿ ಮೂರು ವರ್ಷಗಳ ಕಾಲ ಆ ವೈದ್ಯ ಹ್ಯಾಂಡಲ್ ಮಾಡಿದ ಎಲ್ಲಾ ಕೇಸ್ ಶೀಟ್ ಗಳನ್ನು ತಡಕಾಡಿ ಮಾಹಿತಿ ಕಲೆ ಹಾಕಿದರು. ಸರ್ಜರಿಗಳಿಗೆ ಸಹಾಯ ಮಾಡಿದ ಸಿಬ್ಬಂದಿ ಹಾಗೂ ಸರ್ಜರಿಗೆ ಒಳಗಾದ ಹಲವಾರು ಮಹಿಳೆಯರನ್ನು ಸಂದರ್ಶಿಸಿ ವರದಿ ನೀಡಿದ್ದಾರೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಒಂದು ಹಳ್ಳಿಯಲ್ಲಿಯೇ ಅದೆಷ್ಟೋ ಮಹಿಳೆಯರು ಈ ವೈದ್ಯ ಮಹಾಶಯನ ಬಳಿ ಬಂದು ಗರ್ಭಕೋಶ ತೆಗೆಸಿಕೊಂಡಿದ್ದಾರೆ. ತನಿಖಾ ವರದಿ ಪ್ರಕಾರ, ಈ ಮಹಿಳೆಯರು ಸಾಕಷ್ಟು ಹಣ ನೀಡಿ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಕೆಲವರು 30,000 ರೂಗಳ ವರೆಗೆ ಲಂಚ ನೀಡಿದ್ದಾರೆ. ಒಟ್ಟು ಎಂಟು ಜಿಲ್ಲೆಯ ಮಹಿಳೆಯರು ಇಲ್ಲಿ ಬಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಕೆಲವರಿಗೆ ಮಹಿಳೆಯರು ಇಂತಹ ಸರ್ಜರಿಗೆ ಏಕೆ ಒಳಗಾಗುತ್ತಾರೆ ಎಂದು ತಿಳಿದರೆ ಆಶ್ಚರ್ಯ ಆಗಬಹುದು. ಚಿತ್ರದುರ್ಗ, ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿರುವ ಗೊಲ್ಲರ ಸಮುದಾಯದಲ್ಲಿ ಕೆಲ ಸಂಪ್ರಾದಯಗಳಿವೆ. ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ಊರ ಹೊರಗೆ ಕಟ್ಟಲಾಗಿರುವ, ಯಾವು ಮೂಲಭೂತ ವ್ಯವಸ್ಥೆಯೂ ಇಲ್ಲದ ಮನೆಯಲ್ಲಿ ಕಾಳ ಕಳೆಯಬೇಕು. ಶುಚಿತ್ವ ಇಲ್ಲದ ಕಾರಣಕ್ಕೋ ಅಥವಾ ಮತ್ತಾವ ಕಾರಣಕ್ಕೋ ಅವರಿಗೆ ವಿಪರೀತ ರಕ್ತಸ್ರಾವ ಆಗಿ, ವೈದ್ಯರ ಬಳಿ ಹೋಗುತ್ತಾರೆ. ಇದನ್ನೇ ವ್ಯಾಪಾರದ ಮೂಲವನ್ನಾKhaderಗಿ ಕಂಡ ವೈದ್ಯರು – ಇದಕ್ಕೆಲ್ಲಾ ಒಂದೇ ಪರಿಹಾರ ಹಿಸ್ಟೆರೆಕ್ಟೊಮಿ ಎನ್ನುತ್ತಾರೆ. ಗರ್ಭಕೋಶ ತೆಗೆದರೆ, ನಿಮಗೆ ಈ ಸಮಸ್ಯೆ ಇರುವುದಿಲ್ಲ, ಹಾಗೂ ನಿಮ್ಮ ಹಳ್ಳಿಯ ಸಂಪ್ರದಾಯದಂತೆ, ಮುಟ್ಟಿನ ಸಂದರ್ಭದಲ್ಲಿ ಊರ ಹೊರಗೆ ಇರಬೇಕಾದ ಪರಿಸ್ಥಿತಿನೂ ಇಲ್ಲ – ಎಂದು ಸಲಹೆ ನೀಡುತ್ತಾರೆ.

ಊರಿನ ಕಟ್ಟಳೆಗಳಿಂದ ಎಷ್ಟೇ ಬೇಸತ್ತಿದ್ದರೂ, ಅದರ ವಿರುದ್ಧ ದನಿ ಎತ್ತಲಾಗದ ಮಹಿಳೆಯರಿಗೆ ಇದು ಸುಲಭ ಮಾರ್ಗದಂತೆ ಕಾಣುತ್ತದೆ. ಅದಕ್ಕೆ ಸಾಲ ಮಾಡಿ ಹಣ ಹೊಂದಿಸ ವೈದ್ಯರಿಗೆ ನೀಡಿ ಸರ್ಜರಿ ಮಾಡಿಸಿಕೊಳ್ಳುತ್ತಾರೆ. ಇದಲ್ಲದೆ, ಬೇರೆ ಬೇರೆ ಸಮುದಾಯದ ಹಲವಾರು ಹೆಂಗಸರು ಈ ವೈದ್ಯರ ಸಂಪರ್ಕಕ್ಕೆ ಬಂದು ಈ ಸರ್ಜರಿ ಮಾಡಿಸಿಕೊಂಸಿದ್ದಾರೆ. ಬೇರೆ ಚಿಕಿತ್ಸೆಯಿಂದ ಹಲವರ ಅನಾರೋಗ್ಯ ಗುಣಪಡಿಸಲು ಸಾಧ್ಯವಿದ್ದರೂ, ಇದೇ ಸರ್ಜರಿ ಮಾಡಿ ದುಡ್ಡು ಪಡೆದಿದ್ದಾರೆ. ಇದೆಲ್ಲವನ್ನೂ ತಜ್ಞರ ವರದಿ ವಿವರವಾಗಿ ನಮೂದಿಸಿ ಸರಕಾರಕ್ಕೆ ವರದಿ ಕೊಟ್ಟು ಒಂದು ವರ್ಷವಾಗಿದೆ. ಈ ಪ್ರಾಥಮಿಕ ಮಾಹಿತಿ ಇಟ್ಟುಕೊಂಡು ಇಡೀ ಪ್ರಕರಣಗಳ ಬಗ್ಗೆ ಒಂದು ಸಿ.ಐ.ಡಿ ತನಿಖೆ ಮಾಡಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಚಾರ್ಜ್ ಶೀಟ್ ಹಾಕಿಸಿ, ಶಿಕ್ಷೆ ಸಿಗುವಂತಾಗಬೇಕು ಎಂದು ವರದಿ ಹೇಳುತ್ತದೆ.

ಆದರೆ…

ಇದುವರೆಗೆ, ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಶಿಕ್ಷೆಯ (??) ಹೆಸರಿನಲ್ಲಿ ಪ್ರಸ್ತುತ ವೈದನನ್ನು ಬೀರೂರಿನಿಂದ ಜಿಲ್ಲಾ ಕೇಂದ್ರವಾದ ದಾವಣಗೆರೆಗೆ ವರ್ಗಾವಣೆ ಮಾಡಿದ್ದಾರೆ. ಸಿಐಡಿ ತನಿಖೆ ಬಗ್ಗೆ ಇದುವರೆಗೆ ತೀರ್ಮಾನ ಇಲ್ಲ. ನೆನಪಿರಲಿ, ವರದಿ ಮಂಡಿಸಿದ್ದು ಕಳೆದ ವರ್ಷ ಮಾರ್ಚ್ ನಲ್ಲಿ. ಇದುವರೆಗೆ ಏನೂ ಆಗಿಲ್ಲ. ಇಂತಹದೇ ಅನಗತ್ಯ ಹಿಸ್ಟೆರೆಕ್ಟೊಮಿ ಸರ್ಜರಿ ಮಾಡಿದ ಆರೋಪಗಳು ಗುಲ್ಬರ್ಗಾ ಸೇರಿದಂತೆ, ಹಲವು ಭಾಗಗಳಲ್ಲಿ ಕೇಳಿ ಬಂದಿವೆ. ಅಲ್ಲಿಯೂ ತನಿಖೆ ನಡೆಯುತ್ತಿದೆ. ಆದರೆ, ತಪ್ಪಿತಸ್ಥರಿಗೆ ಶಾಸ್ತಿ ಆಗುತ್ತದೆಂದು ಹೇಳಲಾಗದು.

ಈಗ ಹೇಳಿ, ಮಹಿಳೆಯರ ದೇಹದ ಮೇಲೆ ಚಿಕಿತ್ಸೆಯ ಹೆಸರಿನಲ್ಲಿ ದುಡ್ಡು ಮಾಡಿದವರ ಮೇಲೆ ಸೂಕ್ತ ತನಿಖೆ ನಡೆಸಿ ಶಿಕ್ಷೆ ಕೊಡಿಸಲಾಗದ ಸರಕಾರಕ್ಕೆ ಮಹಿಳಾ ದಿನ ಆಚರಿಸುವ ನೈತಿಕತೆ ಇದೆಯೆ?