Daily Archives: March 8, 2016

ಆ ಒಂದು ಭಾಷಣ ಕನ್ಹಯ್ಯನನ್ನು ಹೀರೋ ಆಗಿಸಿದ್ದು ಹೇಗೆ?

– ದಿನೇಶ್ ಕುಮಾರ್ ಎಸ್.ಸಿ

ಕ್ರಿಕೆಟ್ನಲ್ಲಿ ಬೌಲರ್ನ ತಲೆ ಮೇಲೆ ಸಿಕ್ಸರ್ ಹೊಡೆಯುವುದೆಂದರೆ ದಾಂಡಿಗರಿಗೆ ಎಲ್ಲಿಲ್ಲದ ಹೆಮ್ಮೆ. ಬೌಲ್ ಮಾಡಿ ತಿರುಗಿ ನೋಡುವಷ್ಟKanhaiya-3 ರಲ್ಲಿ ಚೆಂಡು ತಲೆಯ ಮೇಲೆ ಬೌಂಡರಿ ಗೆರೆಯಾಚೆ ದಾಟುತ್ತಿದ್ದರೆ ಬೌಲರ್ನ ಗತಿ ಏನಾಗಬೇಡ? ಕನ್ಹಯ್ಯ ಮಾರ್ಚ್ 3ರ ಭಾಷಣದಲ್ಲಿ ಮಾಡಿದ್ದು ಅದನ್ನೇ. ಅವನಿಗೆ ಎದುರಾಳಿಗಳ ಚೆಂಡನ್ನು ಅವರ ತಲೆಯ ಮೇಲೇ ಸಿಕ್ಸರ್ಗೆ ಅಟ್ಟುವುದು ಹೇಗೆಂಬುದು ಗೊತ್ತಿತ್ತು. ಹೊಡೆದೂ ಬಿಟ್ಟ. ಇಡೀ ಜಗತ್ತು ಬೆರಗಾಗಿ ಈ ಹೊಸ ಹೀರೋನನ್ನು ನೋಡುತ್ತಿದೆ; ಬಹುಭಾರದ ನಿರೀಕ್ಷೆಗಳೊಂದಿಗೆ, ತುಸು ಅಚ್ಚರಿಯೊಂದಿಗೆ, ಒಂದಿಷ್ಟು ಭೀತಿಯೊಂದಿಗೆ.

 
ದೂರದೃಷ್ಟಿ, ಸೈದ್ಧಾಂತಿಕ ಖಚಿತತೆ, ಆಶಾವಾದ, ಆವೇಶ, ವ್ಯಂಗ್ಯ, ತುಂಟತನ, ಲೇವಡಿ, ನೇರವಂತಿಕೆ, ಭಾವುಕತೆ ಎಲ್ಲವೂ ಇದ್ದ ಕನ್ಹಯ್ಯನ ಆ ಐತಿಹಾಸಿಕ ಭಾಷಣ ಇಷ್ಟೊಂದು ಜನಪ್ರಿಯವಾಗಿದ್ದಾದರೂ ಹೇಗೆ? ನಿನ್ನೆಮೊನ್ನೆಯವರೆಗೂ `ದೇಶದ್ರೋಹಿ’ ಎಂದೇ ಕರೆಯುತ್ತಿದ್ದ ಜನರೂ ಕೂಡ, ಈ ಹುಡುಗನಲ್ಲಿ ಏನೋ ಇದೆ ಎಂದು ಹೇಳುತ್ತಿರುವುದಾದರೂ ಹೇಗೆ ಸಾಧ್ಯವಾಯಿತು?

 
ಈ ಪ್ರಶ್ನೆಗೆ ಉತ್ತರವನ್ನು ಕನ್ಹಯ್ಯನೇ ಕೊಟ್ಟುಬಿಟ್ಟಿದ್ದಾನೆ. ನಾವು ಯೂನಿವರ್ಸಿಟಿಗಳಲ್ಲಿ ಕುಳಿತುಕೊಂಡವರು ಮಾತನಾಡುವ ಭಾಷೆ ಈ ದೇಶದ ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಅವರಿಗೆ ಅರ್ಥವಾಗುವ ಭಾಷೆಯಲ್ಲಿ ನಾವು ಮಾತನಾಡುವುದಿಲ್ಲ ಎಂದು ತನ್ನ ಭಾಷಣದಲ್ಲೇ ಆತ್ಮವಿಮರ್ಶೆಯ ಮಾತುಗಳನ್ನು ಆಡಿದ ಕನ್ಹಯ್ಯ. ಅಷ್ಟು ಮಾತ್ರವಲ್ಲ ತನ್ನ ಐವತ್ತು ನಿಮಿಷಗಳ ಭಾಷಣದಲ್ಲಿ ಸಾಮಾನ್ಯ ಜನರಿಗೆ ಅರ್ಥವಾಗುವ ಭಾಷೆಯನ್ನೇ ಮಾತನಾಡಿದ. ತನ್ನ ಸುತ್ತಮುತ್ತ ಕುಳಿತವರು, ಭಾಷಣ ಕೇಳುತ್ತಿರುವವರು ಜೆಎನ್ಯುನ ಪ್ರಜ್ಞಾವಂತ ವಿದ್ಯಾಥರ್ಿಗಳು ಎಂಬುದು ಗೊತ್ತಿದ್ದರೂ ಕನ್ಹಯ್ಯಗೆ ಈ ಭಾಷಣ ಭಾರತದ ಮೂಲೆಮೂಲೆಗಳನ್ನು ತಲುಪಲಿದೆ ಎಂಬುದು ಗೊತ್ತಿತ್ತು. ಹೀಗಾಗಿ ಪ್ರಜ್ಞಾಪೂರ್ವಕವಾಗಿ ಆತ ಜನರ ಭಾಷೆಯನ್ನೇ ಮಾತನಾಡಿದ.

 
ಕನ್ಹಯ್ಯ ಹೇಳಿಕೇಳಿ ಹಳ್ಳಿ ಹುಡುಗ, ಅವನಿಗೆ ತನ್ನ ಹಳ್ಳಿ ಐಡೆಂಟಿಟಿಯೇ ಹೆಚ್ಚು ಅಪ್ಯಾಯಮಾನ. ಅವನು ಬಳಸಿದ ಭಾಷೆಯೂ ದೇಸೀ ಸೊಗಡಿನ ಬಿಹಾರಿ ಶೈಲಿಯ ಹಿಂದಿ. ಜತೆಗೆ ಒಂದಷ್ಟು ಉರ್ದು ಶಬ್ದಗಳು ಢಾಳಾಗಿ ಕಾಣಿಸಿಕೊಂಡವು. ಒಮ್ಮೊಮ್ಮೆ ಅವನು ಕವಿಯಂತೆ ಮಾತನಾಡುತ್ತಾನೆ, ಆಮೇಲೆ ಬಿಹಾರದ ಯಾವುದೋ ಹಳ್ಳಿಯ ಕಟ್ಟೆ ಮೇಲೆ ಕುಳಿತು ಮಾತನಾಡುವ ಅಪ್ಪಟ ದೇಸೀ ಶೈಲಿಗೆ ಬದಲಾಗಿಬಿಡುತ್ತಾನೆ. ಅವನಿಗೆ ಚೆನ್ನಾಗಿ ಗೊತ್ತು, ಜನರ ಭಾಷೆ ಮಾತನಾಡಿದರಷ್ಟೇ ಜನರಿಗೆ ಅರ್ಥವಾಗೋದು. ಅವನು ಅದನ್ನೇ ಮಾಡಿದ, ಜನರನ್ನು ತಲುಪಿಯೂಬಿಟ್ಟ.

 
ನಮಗೆ ಬೇಕಿರೋದು ದೇಶದಿಂದ ಸ್ವಾತಂತ್ರ್ಯವಲ್ಲ, ದೇಶದೊಳಗೆ ಸ್ವಾತಂತ್ರ್ಯ ಎಂದು ಕನ್ಹಯ್ಯ ಬಹಳ ಸ್ಪಷ್ಟವಾಗಿ ಹೇಳುತ್ತ ಜನಸಾಮಾನ್ಯರು ಏನನ್ನು ಅರ್ಥ ಮಾಡಿಕೊಳ್ಳಬೇಕಿತ್ತೋ ಅದನ್ನು ಅರ್ಥಮಾಡಿಸಿಬಿಟ್ಟ. ಅಲ್ರೀ, ಇವನೇನು ಆಜಾದಿ ಆಜಾದಿ ಅಂತಾನೆ, ಆಜಾದಿ 1947ರಲ್ಲೇ ಬಂತಲ್ಲ ಎಂದು ಅಮಾಯಕವಾಗಿ ಮಾತನಾಡುತ್ತಿದ್ದ ಜನರಿಗೂ ಈಗ ಅರ್ಥವಾಗತೊಡಗಿದೆ, ಕನ್ಹಯ್ಯ ಕೇಳುತ್ತಿರುವ ಆಜಾದಿ ಬೇರೆಯದ್ದು ಎಂದು. ಜೈಲಿಗೆ ಹೋದಾಗ ಪೊಲೀಸರು, ಜೈಲು ಸಿಬ್ಬಂದಿ, ಇತ್ಯಾದಿ ಜನರಿಂದ ಪದೇ ಪದೇ ಇದೇ ಪ್ರಶ್ನೆಯನ್ನು ಎದುರಿಸಿದ್ದ ಕನ್ಹಯ್ಯನಿಗೆ ಇದಕ್ಕಿಂತ ಪರಿಣಾಮಕಾರಿಯಾದ ಉತ್ತರ ನೀಡಲು ಇನ್ನು ಹೇಗೆ ಸಾಧ್ಯವಿತ್ತು?

 
ಕನ್ಹಯ್ಯ ಆಗ ತಾನೇ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ. ಜಾಮೀನು ಕೊಟ್ಟ ನ್ಯಾಯಾಲಯ ಸಹಜವಾಗಿಯೇ ಒಂದಷ್ಟು ಷರತ್ತುಗಳನ್ನು ವಿಧಿಸಿರುತ್ತದೆ. ಅದನ್ನು ಮೀರಿದರೆ ನ್ಯಾಯಾಂಗ ನಿಂದನೆಯನ್ನು ಎದುರಿಸಬೇಕಾಗುತ್ತದೆ. ಕನ್ಹಯ್ಯ ತನ್ನ ಕುರಿತಾದ ಕೇಸಿನ ಕುರಿತು ಏನನ್ನೂ ಮಾತನಾಡುವಂತಿಲ್ಲ. ನಿಜ, ಕನ್ಹಯ್ಯ ಕಾನೂನು ಉಲ್ಲಂಘನೆ ಮಾಡಲಿಲ್ಲ, ಕೇಸಿನ ಬಗ್ಗೆ ಏನನ್ನೂ ಮಾತನಾಡಲಿಲ್ಲ. ಆದರೆ ಏನೂ ಮಾತನಾಡದೇKanhaiya-2 ಎಲ್ಲವನ್ನೂ ಮಾತನಾಡಿಬಿಟ್ಟಿದ್ದ. ನನ್ನ ಜನ ಜಾಣರು, ಸಂಜ್ಞೆಗಳಲ್ಲೇ ಎಲ್ಲವನ್ನು ಅರ್ಥ ಮಾಡಿಕೊಳ್ಳಬಲ್ಲರು ಎಂದು ಹೇಳುತ್ತ ಏನನ್ನು ಹೇಳಬೇಕೋ ಅದನ್ನು ಹೇಳಿಬಿಟ್ಟ. ಕನ್ಹಯ್ಯ ನ್ಯಾಯಾಂಗ ನಿಂದನೆಯಾಗುವಂಥದ್ದೇನಾದರೂ ಮಾತನಾಡಿದನಾ ಎಂದು ಟೀವಿ ಚಾನಲ್ಲುಗಳು ಕೆಕರುಪೆಕರಾಗಿ ಚರ್ಚೆ ನಡೆಸಿದರೂ ಅವುಗಳಿಗೆ ಸಿಗಬೇಕಾಗಿದ್ದೇನೂ ಸಿಗುತ್ತಿಲ್ಲ.

 
ಬಿಡುಗಡೆಯಾಗಿ ಬಂದ ಮಾರನೇ ದಿನವೇ ಈ ದೇಶದ ಘಟಾನುಘಟಿ ಪತ್ರಕರ್ತರ ಸಂದರ್ಶನವನ್ನು ಕನ್ಹಯ್ಯ ಎದುರಿಸಬೇಕಾಯಿತು. ರಾಜದೀಪ್ ಸರ್ದೇಸಾಯಿ, ಬರ್ಖಾ ದತ್, ರವೀಶ್ ಕುಮಾರ್… ಎಲ್ಲರೂ ಒಂದೊಂದು ಚಾನಲ್ನ ಮುಖ್ಯಸ್ಥರು. ಐದು ಅಡಿ ಉದ್ದದ ಕನ್ಹಯ್ಯ ಮುದುಡಿ ಕುಳಿತಿದ್ದ. `ಅಲ್ಲೋ ಮಾರಾಯ, ಅಲ್ಲಿ ಜೆಎನ್ಯುನಲ್ಲಿ ಭಾಷಣ ಮಾಡುವಾಗ ಹಾಗೆ ಅಬ್ಬರಿಸುತ್ತಿದ್ದೆ, ಇಲ್ಲೇಕೆ ಹೀಗೆ ತಣ್ಣಗೆ ಉತ್ತರಿಸುತ್ತಿದ್ದೀ?’ ಎಂದ ರಾಜದೀಪ್ಗೆ ಅಷ್ಟೇ ತಣ್ಣಗೆ ಕನ್ಹಯ್ಯ ಹೇಳಿದ್ದೇನು ಗೊತ್ತೇ? “ನೋಡಿ ಸರ್, ಅಲ್ಲಿ ಸಾಕಷ್ಟು ಜನರು ಇದ್ರು, ಎಲ್ಲರಿಗೂ ಕೇಳಬೇಕು, ಎಲ್ಲರನ್ನ ತಲುಪಬೇಕು, ಇಲ್ಲಿ ನಾವಿಬ್ರೇ ಕೂತಿದ್ದೇವೆ. ಟೆಕ್ನಾಲಜಿ ಇದೆ. ಗಟ್ಟಿಯಾಗಿ ಮಾತಾಡೋ ಅಗತ್ಯ ಏನಿದೆ?” ಒಂದು ಕ್ಷಣ ರಾಜದೀಪ್ ಕೂಡ ಕನ್ಹಯ್ಯನ ಮಾತಿಗೆ ಬೆರಗಾದರು. ಈ ಸಂದರ್ಶನವನ್ನು ನೋಡಿರಬಹುದಾದ ಅರ್ನಾಬ್ ಗೋಸ್ವಾಮಿ ಒಮ್ಮೆ ಬೆವೆತಿರಬೇಕು, ತನ್ನದೇ ಸ್ಟುಡಿಯೋದಲ್ಲಿ ಕುಳಿತು ತಾನೇ ಕಿರುಚಾಡುವುದೆಲ್ಲ ಅವನಿಗೆ ನೆನಪಾಗಿರಬಹುದು.

 
ಕನ್ಹಯ್ಯ ಜೈಲಿನಿಂದ ಬಂದ ಮೇಲೆ ಏನು ಮಾಡಬಹುದು ಎಂಬ ಸಹಜ ಕುತೂಹಲ ಎಲ್ಲರಲ್ಲಿತ್ತು. ದೇಶದ್ರೋಹದ ಆರೋಪದಲ್ಲಿ ಜೈಲು ಸೇರುವುದೇನು ಸಾಮಾನ್ಯ ವಿಷಯವೇ? ಅದೂ ಕೂಡ ಅವನ ಸೈದ್ಧಾಂತಿಕ ವಿರೋಧಿಗಳು ದೇಶದ್ರೋಹಿ ದೇಶದ್ರೋಹಿ ಎಂದು ಸಾರಿಸಾರಿ, ಕಿರುಚಿ ಕಿರುಚಿ ಹೇಳಿ ಸಾಮಾನ್ಯ ಜನರೂ ಅದನ್ನು ನಂಬುವಂತಾಗಿದ್ದಾಗ, ಕೋರ್ಟ್ ಆವರಣದಲ್ಲೇ ದೇಶಭಕ್ತ ವಕೀಲರಿಂದ ಹಲ್ಲೆಗೊಳಗಾದ ವ್ಯಕ್ತಿ ಜಾಮೀನು ಪಡೆದು ಬಂದ ನಂತರ ಏನು ಮಾತನಾಡಬಹುದು ಎಂಬ ಕುತೂಹಲ ಇಲ್ಲದೇ ಇರುತ್ತದೆಯೇ? ಜೈಲುವಾಸದ ನಂತರ ಆತ ಅಧೀರನಾಗಿರಬಹುದೇ ಎಂಬ ಅನುಮಾನಗಳೂ ಹಲವರಿಗಿತ್ತು. ಅವನ ಮಾತುಗಳನ್ನು ಕೇಳಲು ಅವನ ವಿರೋಧಿಗಳೂ ಕಾತುರರಾಗಿದ್ದರು.
ಕನ್ಹಯ್ಯ ಬಂದ, ಸಾವಿರ ಸಾವಿರ ವಿದ್ಯಾರ್ಥಿಗಳ ನಡುವೆ ನಿಂತು ತನ್ನ ಟ್ರೇಡ್ಮಾರ್ಕ್ ‘ಆಜಾದಿ’ಯ ಘೋಷಣೆಗಳನ್ನು ಕೂಗಿದ, ಆಮೇಲೆ ಮಾತು. ಅವನ ಧೈರ್ಯ ಉಡುಗುವುದಿರಲಿ, ಮೊದಲು ಇದ್ದದ್ದು ದುಪ್ಪಟ್ಟಾಗಿತ್ತು. ಹೊಸ ಕನ್ಹಯ್ಯ ಇನ್ನಷ್ಟು ಆಶಾವಾದಿಯಾಗಿದ್ದ, ಇನ್ನಷ್ಟು ಪಳಗಿಹೋಗಿದ್ದ, ಇನ್ನಷ್ಟು ಆತ್ಮವಿಶ್ವಾಸಿಯಾಗಿದ್ದ. ಎದುರಾಳಿಗಳ ಎದೆ ನಡುಗಲು ಇನ್ನೇನು ಬೇಕಿತ್ತು?

 
ಕನ್ಹಯ್ಯ ಮೇಲಿನ `ರಾಜದ್ರೋಹದ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಅಲ್ಲಿ ಆತ ಇನ್ನೂ ನಿರ್ದೋಷಿ ಎಂದು ತೀರ್ಮಾನವಾಗಿಲ್ಲ. ಆದರೆ ಕನ್ಹಯ್ಯ ಮೇಲೆ ಹೊರಿಸಲಾದ ಆರೋಪ ನ್ಯಾಯಾಲಯದ ಕಟಕಟೆಗಳನ್ನು ದಾಟಿ ಸದ್ದುಮಾಡಿತ್ತು. ಒಂದೊಮ್ಮೆ ನ್ಯಾಯಾಲಯದ ಕಟಕಟೆಯಲ್ಲಿ ನಿರ್ದೋಶಿ ಎಂದು ಸಾಬೀತಾದರೂ ಆತ ಅಷ್ಟು ಸುಲಭವಾಗಿ ಈ ಭಾರವನ್ನು ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲ. ಕನ್ಹಯ್ಯ ತನ್ನ ಭಾಷಣದ ಮೂಲಕ ಜನರ ನ್ಯಾಯಾಲಯಕ್ಕೆ ನುಗ್ಗಿಬಿಟ್ಟ. ತನ್ನ ಮೇಲಿನ ಆರೋಪಗಳೆಲ್ಲ ಹೇಗೆ ಹಸಿಹಸಿ ಸುಳ್ಳುಗಳು ಮತ್ತು ರಾಜಕೀಯ ಪ್ರೇರಿತವಾದವುಗಳು ಎಂಬುದನ್ನು ಹಳ್ಳಿಹುಡುಗನ ಸಹಜ ವಿನಯದಿಂದಲೇ ನಿರೂಪಿಸಿಬಿಟ್ಟ.

 
ನೀನು ನಿನ್ನ ಭಾಷಣದಲ್ಲಿ ಅತಿ ಎನಿಸುವಷ್ಟು ಪರ್ಸನಲ್ ಅಟ್ಯಾಕ್ ಮಾಡಿದೆ ಎಂದು ರಾಜದೀಪ್ ಸರ್ದೇಸಾಯಿ ಕನ್ಹಯ್ಯನನ್ನು ಟೀಕಿಸಿದರು. ಕನ್ಹಯ್ಯ ಮುಗುಳು ನಗುತ್ತ ಆ ಟೀಕೆಯನ್ನು ಸ್ವೀಕರಿಸಿದ. ಕನ್ಹಯ್ಯ ರಾಜಕೀಯ ಪಕ್ಷದ ವಿದ್ಯಾರ್ಥಿ ಸಂಘಟನೆಯ ಮುಖಂಡ. ರಾಜಕಾರಣ ಆತನಿಗೆ ಚೆನ್ನಾಗಿ ಗೊತ್ತು. ಏಟಿಗೆ ಎದಿರೇಟು ಎನ್ನುವುದು ರಾಜಕಾರಣದ ಪ್ರಾಥಮಿಕ ಪಾಠ. ದಾಳಿಗೆ ಪ್ರತಿದಾಳಿ ಇರಲೇಬೇಕು. ಹೀಗಾಗಿ ಆಗೊಮ್ಮೆ ಈಗೊಮ್ಮೆ ನರೇಂದ್ರ ಮೋದಿ, ಸ್ಮೃತಿ ಇರಾನಿಯವರನ್ನು ತನ್ನ ಭಾಷಣದಲ್ಲಿ ಗೇಲಿ ಮಾಡಿದ. ಕೆಲವೊಮ್ಮೆ ವಯೋಸಹಜ ತುಂಟತನದಿಂದ ಛೇಡಿಸಿದ.

 

ಕನ್ಹಯ್ಯ ಕಮ್ಯುನಿಸ್ಟ್ ಪಕ್ಷದ ವಿದ್ಯಾರ್ಥಿ ಮುಖಂಡ. ಅದಕ್ಕಾಗಿ ಅವನಿಗೆ ಹೆಮ್ಮೆಯೂ ಇದೆ. ಆದರೆ ಅವನು ಮಾತನಾಡುತ್ತಿರುವುದು ಸಂಪೂರ್ಣ ಕಮ್ಯುನಿಸ್ಟ್ ಪಕ್ಷಗಳ ನುಡಿಗಟ್ಟುಗಳಲ್ಲ. ಅದಕ್ಕೆ ಕಾರಣವೂ ಇದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ವರ್ಗ ಸಂಘರ್ಷವೊಂದನ್ನು ನಂಬಿಕೊಂಡಿದ್ದ ಕಮ್ಯುನಿಸ್ಟರು ಈ ಭಾರತದ ಜಾತಿಯ ಕರಾಳತೆಗಳ ಕಡೆ ಕೊಡಬೇಕಾದಷ್ಟು ಗಮನವನ್ನು ಕೊಡಲಿಲ್ಲ. ಆದರೆ ಕನ್ಹಯ್ಯ ದೊಡ್ಡ ಧ್ವನಿಯಲ್ಲಿ `ಜಾತಿವಾದದಿಂದ ಆಜಾದಿ’ ಎನ್ನುತ್ತಿದ್ದಾನೆ, `ರೋಹಿತ್ ವೇಮುಲಾ ನನ್ನ ಆದರ್ಶ’ ಎನ್ನುತ್ತಿದ್ದಾನೆ. ಕನ್ಹಯ್ಯನಿಗೆ ತತ್ತ್ವ ಸಿದ್ಧಾಂತದಲ್ಲಿ ಗಟ್ಟಿಯಾಗಿರುವ ಕಮ್ಯುನಿಸ್ಟರು ಜನರನ್ನು ತಲುಪವಲ್ಲಿ ಸೋಲುತ್ತಿದ್ದಾರೆ ಎಂಬ ವಾಸ್ತವ ಅವನಿಗೆ ಗೊತ್ತಿದೆ. ತನ್ನದೇ ಪಕ್ಷದ ಇತಿಮಿತಿಗಳೂ ಅವನಿಗೆ ಗೊತ್ತು. ಹೀಗಾಗಿ ಆತ ತನ್ನ ಪಕ್ಷದ ಚೌಕಟ್ಟನ್ನೂ ಮೀರಿ ಯೋಚಿಸುತ್ತಾನೆ, ಮಾತನಾಡುತ್ತಾನೆ. ಜೈಲಿನಲ್ಲಿ ತನಗೆ ನೀಡಿದ ನೀಲಿ ಮತ್ತು ಕೆಂಪು ಬಣ್ಣದ ಬೌಲ್ಗಳನ್ನು ರೂಪಕವಾಗಿ ಬಳಸಿ ಆತ ಕಮ್ಯುನಿಸ್ಟರು-ಅಂಬೇಡ್ಕರ್ವಾದಿಗಳೂ ಒಂದಾಗಬೇಕು ಎನ್ನುತ್ತಾನೆ. ಎಂಥ ಸುಂದರ ಕನಸು?

 

ನೀವು ನನ್ನ ಎದುರಾಳಿಗಳು (ವಿರೋಧಪಕ್ಷ), ಆದರೆ ನೀವು ನನ್ನ ಶತ್ರುಗಳಲ್ಲ ಎಂದು ಕನ್ಹಯ್ಯ ಹೇಳುವಾಗ ಎದುರಾಳಿಗಳಿಗೂ ನಡುಕ ಹುಟ್ಟುವುದು ಸಹಜ. ಯಾಕೆಂದರೆ ಈ ಬಗೆಯ ಭಾಷೆ ನೇರವಾಗಿ ಜನರ ಎದೆಯನ್ನು ಮುಟ್ಟುತ್ತದೆ. ತನ್ನ ಎದುರಾಳಿಗಳದು ಹೊಡಿ, ಬಡಿ, ಕೊಲ್ಲು ಎನ್ನುವ ಭಾಷೆ ಅನ್ನುವುದು ಕನ್ಹಯ್ಯಗೆ ಗೊತ್ತು. ಆದರೆ ಇದಕ್ಕೆ ಪ್ರತಿಯಾಗಿ ಭಿನ್ನಧ್ವನಿಗಳನ್ನೂ ಗೌರವಿಸುತ್ತೇವೆ ಎಂದು ಹೇಳುವ ಮೂಲಕ ಪ್ರಜಾಪ್ರಭುತ್ವದ ನೈಜ ವ್ಯಾಖ್ಯಾನ ತನಗೆ ಗೊತ್ತಿದೆ ಎಂಬ ಸಂದೇಶವನ್ನು ರವಾನೆ ಮಾಡುತ್ತಾನೆ.

 

`ಅಲ್ಲಿ, ಪಾಟಿಯಾಲ ಕೋರ್ಟ್ ಆವರಣದಲ್ಲಿ ನಿನ್ನನ್ನು ಅವರು ಹೊಡೆದರು, ಒದ್ದರು. ಆ ಕೇಸೂ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿದೆ, ನೀನು ಯಾಕೆ ಆ ವಿಷಯ ನಿನ್ನ ಭಾಷಣದಲ್ಲಿ ಪ್ರಸ್ತಾಪ ಮಾಡಲಿಲ್ಲ ಎಂದು ರಾಜದೀಪ್ ಕೇಳಿದಾಗ ಕನ್ಹಯ್ಯ ಕೊಟ್ಟ ಉತ್ತರ ಆತನ ಸ್ಥಿತಪ್ರಜ್ಞತೆಗೆ, ವಿವೇಕಕ್ಕೆ ಹಿಡಿದ ಕನ್ನಡಿ. ನಾನು, ನನ್ನಂಥ ಕೋಟ್ಯಂತರ ಯುವಕರ ಭವಿಷ್ಯದ ಬಗ್ಗೆ ಮಾತನಾಡಬೇಕಿತ್ತು. ಅದೇ ನನ್ನ ಆದ್ಯತೆಯಾಗಿತ್ತು. ನನ್ನ ಮೇಲೆ ದಾಳಿಯಾಗಿದ್ದು ನಿಜ. ನನ್ನ ವೈಯಕ್ತಿಕ ನೋವಿಗಿಂದ ಸಮೂಹ ಅನುಭವಿಸುತ್ತಿರುವ ನೋವಿನ ಚರ್ಚೆಯೇ ಮುಖ್ಯ. ಅದಕ್ಕಾಗಿಯೇ ನಾನು ಆ ವಿಷಯವನ್ನು ಪ್ರಜ್ಞಾಪೂರ್ವಕವಾಗಿ ಪ್ರಸ್ತಾಪಿಸಲಿಲ್ಲ ಎಂದ ಕನ್ಹಯ್ಯ!

 

ಕನ್ಹಯ್ಯ ಮಾಡಿದ್ದು ಮತ್ತೇನನ್ನೂ ಅಲ್ಲ, ಆತ ಕಳೆದ ಎರಡು ವರ್ಷಗಳಿಂದ ಈ ದೇಶದ ಬಹುಸಂಖ್ಯಾತ ಜನರ ಎದೆಯಲ್ಲಿ ಅದುಮಿ ಇಟ್ಟುಕೊಂಡಿದ್ದ ಮಾತುಗಳನ್ನೇ ಹೊರಗೆ ಹಾಕಿದ. ಎಲ್ಲೆಲ್ಲೋ ಚದುರಿ ಹೋಗಿದ್ದ ಪ್ರತಿರೋಧದ ಧ್ವನಿಗಳನ್ನು ಸರಿಯಾಗಿ ಗ್ರಹಿಸಿ ಅವುಗಳನ್ನೇ ಜನರ ಮುಂದೆ ಇಟ್ಟ. ಅರೆ, ಇದೆಲ್ಲ ನಾವು ಹೇಳಬೇಕಿದ್ದ ಮಾತುಗಳಲ್ಲವೇ ಎಂದು ಎಲ್ಲರೂ ತಮ್ಮೊಳಗೆ ಒಮ್ಮೆ ಹೋಗಿ ಮುಟ್ಟಿ ನೋಡಿಕೊಂಡು ಬರುವಂತೆ ಮಾಡಿಬಿಟ್ಟ. ಮೋದಿ ಮೇನಿಯಾದಲ್ಲಿ ಮಂಕಾಗಿ ಹೋಗಿದ್ದ ಸಮಸ್ತ ವಿರೋಧಪಕ್ಷಗಳೂ ಮಾಡಲು ಸಾಧ್ಯವಾಗದ್ದನ್ನು ಕನ್ಹಯ್ಯ ಮಾಡಿತೋರಿಸಿದ.

 

ವಿದ್ಯಾರ್ಥಿಗಳು, ದಲಿತರು, ಆದಿವಾಸಿಗಳು, ಸೈನಿಕರು, ರೈತರು, ಹಿಂದುಳಿದವರು, ಅಲ್ಪಸಂಖ್ಯಾತರು, ಕಾರ್ಮಿಕರು, ಮಹಿಳೆಯರು ಎಲ್ಲರೂ ಅವನ ಭಾಷಣದಲ್ಲಿ ಬಂದರು. ಎಲ್ಲರ ಧ್ವನಿಯಾಗಿಯೂ ಕನ್ಹಯ್ಯ ಗುಡುಗಿದ. ಕೆಲವೇ ದಿನಗಳ ಹಿಂದೆ `ದೇಶದ್ರೋಹಿ’ ಎಂದು ಜರೆಯಲಾಗಿದ್ದ ಹುಡುಗ ತನ್ನ ಮೇಲಿನ ಆರೋKanhaiya-1ಪಗಳನ್ನು ಹುಸಿ ಎಂದು ಸಾರುತ್ತಲೇ ನಿಜವಾದ ದೇಶದ್ರೋಹಿಗಳನ್ನು ಇಂಚಿಂಚಾಗಿ ಬೆತ್ತಲುಗೊಳಿಸಿಬಿಟ್ಟ.

ಕನ್ಹಯ್ಯನ ಮೇಲಿನ ನಿರೀಕ್ಷೆಗಳು ವಿಪರೀತವಿದೆ, ಆ ಭಾರವನ್ನು ಐದು ಅಡಿ ಉದ್ದದ ಈ ಹುಡುಗ ತಡೆದುಕೊಳ್ಳುತ್ತಾನೋ ಇಲ್ಲವೋ ಎಂಬುದನ್ನು ಕಾಲವೇ ಹೇಳಬೇಕು. ಆದರೆ ಅದೊಂದು ಭಾಷಣ ಇಂಡಿಯಾದ ರಾಜಕಾರಣದಲ್ಲಿ ಹೊಸ ತಿರುವನ್ನಂತೂ ನೀಡಿದೆ, ಅದನ್ನು ಅವನ ಎದುರಾಳಿಗಳೂ ಅಲ್ಲಗೆಳೆಯಲಾರರು.