ಮುಸ್ಲಿಮ್ ಸಮುದಾಯ ಹಾಗೂ ಉಮ್ಮರ್ ಖಾಲಿದ್ ಮತ್ತು ಶೆಹ್ಲಾ ರಶೀದ್ ರಂಥ ಪ್ರಗತಿಪರ ನಾಯಕತ್ವ


-ಇರ್ಷಾದ್ ಉಪ್ಪಿನಂಗಡಿ


“ನನ್ನ ಹೆಸರು ಉಮ್ಮರ್ ಖಾಲಿದ್. ಆದರೆ ನಾನು ಭಯೋತ್ಪಾದಕನಲ್ಲ. ಒಂದು ವಿಷಯವನ್ನು ನಾನಿಲ್ಲಿ ಹೇಳಲೇ ಬೇಕು. ನಾನು ಕಳೆದ ಆರು ವರ್ಷಗಳಿಂದ ಈ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿ ರಾಜಕಾರಣವನ್ನು ಮಾಡುತ್ತಾ ಬಂದಿದ್ದೇನೆ. ನಾನು ಇಲ್ಲಿಯವರೆಗೂ ನನ್ನನ್ನು ನಾನು ಮುಸ್ಲಿಮನೆಂದು ಅಂದುಕೊಂಡಿಲ್ಲ. ಈ ಸಮಾಜದಲ್ಲಿ ಮುಸ್ಲಿಮರು ಮಾತ್ರ ದಮನಕ್ಕೊಳಗಾಗಿಲ್ಲ. ದಲಿತರು, ಆದಿವಾಸಿಗಳು ಈ ಸಮಾಜದ ಶೋಷಿತರಾಗಿದ್ದಾರೆ. ಇವರೆಲ್ಲರ ಪರವಾಗಿ ಹೋರಾಟ ಮಾಡಿದ್ದೇನೆ. ಆದಿವಾಸಿಗಳು, ಶೋಷಿತರ ಪರವಾಗಿ ಮಾತನಾಡಿದಷ್ಟೇ ಶೋಷಿತ ಮುಸ್ಲಿಮರ ಪರವಾಗಿ ಮಾತನಾಡಿದ್ದೇನೆ ”. ಸದ್ಯ ದೇಶದ್ರೋಹದ ಆರೋಪ ಹೊತ್ತು ಜೈಲು ಸೇರಿರುವ ಜೆ.ಎನ್.ಯು ವಿದ್ಯಾರ್ಥಿ ಮುಖಂಡ ಉಮ್ಮರ್ ಖಾಲಿದ್ ತನ್ನ ಶರಣಾಗತಿಗಿಂತ ಮೊದಲು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆಡಿದ ಮಾತುಗಳಿವು. ಸಂಘಪರಿವಾರದ ಕೋಮುವಾದ ಹಾಗೂ ಅದಕ್ಕೆ ಪ್ರತಿಯಾಗಿ ಮುಸ್ಲಿಮ್ ಸಮಾಜದಲ್ಲಿ ಧಾರ್ಮಿಕ ಮೂಲಭೂತವಾದ ಆಳವಾಗಿ ಇಂದು ಬೇರೂರುತ್ತಿವೆ. ಒಂದು ಕಡೆಯಲ್ಲಿ ಬಹುಸಂಖ್ಯಾತ ಕೋಮುವಾದ ಮುಸ್ಲಿಮರಲ್ಲಿ ಅಭದ್ರತೆಯ ಭಾವವನ್ನು ಉಂಟುಮಾಡುತ್ತಿದ್ದರೆ ಇನ್ನೊಂದೆಡೆ ಇದಕ್ಕೆ ಪರ್ಯಾಯವಾಗಿ ಬೆಳೆಯುತ್ತಿರುವ ಮುಸ್ಲಿಮ್ ಕೋಮುವಾದ ಸಮುದಾಯವನ್ನು ಮತ್ತಷ್ಟು ಅಭದ್ರತೆಗೆ ತಳ್ಳುತ್ತಿದೆ. ಪ್ರಸಕ್ತ ಈ ಸನ್ನಿವೇಶದಲ್ಲಿ ಮುಸ್ಲಿಮ್ ಸಮಾಜವನ್ನು ಪ್ರತಿನಿಧಿಸುವ ಉದಾರವಾದಿ ಮುಸ್ಲಿಮ್ ನಾಯಕರ ಅಗತ್ಯತೆಯ ಚರ್ಚೆಯನ್ನ ಹುಟ್ಟುಹಾಕಿದೆ. ಬಹುಷಃ ಜೆ.ಎನ್.ಯು ಕ್ರಾಂತಿ ಕನ್ನಯ್ಯನಂತಹಾ ದಮನಿತ ಸಮುದಾಯಗಳ ಪರ ಧ್ವನಿ ಎತ್ತುವ ಮನೋಭಾವದ ಯುವನಾಯಕನನ್ನು ದೇಶಕ್ಕೆ ಪರಿಚಯಿಸುವುದರ ಜೊತೆಗೆ ಉಮ್ಮರ್ ಖಾಲಿದ್ ಹಾಗೂ ಶೆಹ್ಲಾ ರಶೀದ್ ನಂತಹಾ ಪ್ರಗತಿಪರ ಯುವ ಮುಸ್ಲಿಮ್ ವಿದ್ಯಾರ್ಥಿ ನಾಯಕತ್ವವನ್ನೂ ಪರಿಚಯಿಸಿದೆ.

ಉಮ್ಮರ್ ಖಾಲಿದ್ ಜೆ.ಎನ್.ಯು ಡೆಮೋಕ್ರಟಿಕ್ ಸ್ಟುಡೆಂಟ್ ಯೂನಿಯನ್ (DSU) ಎಂಬ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ಮುಖಂಡ.Ummar_Khalid ಉಮ್ಮರ್ ಖಾಲಿದ್ ಕಳೆದ 6 ವರ್ಷಗಳಿಂದ ಜೆ.ಎನ್.ಯು ಕ್ಯಾಂಪಸ್ ನಲ್ಲಿ ಎಡ ಪ್ರಗತಿಪರ ಚಳುವಳಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡವರು. ಸಂಪ್ರದಾಯ ಕುಟುಂಬದಲ್ಲಿ ಹುಟ್ಟಿ ಬೆಳೆದ ಉಮ್ಮರ್ ಖಾಲಿದ್ ತಂದೆ ಜಮಾತೇ- ಇಸ್ಲಾಮೀ-ಹಿಂದ್ ಮುಸ್ಲಿಮ್ ಮೂಲಭೂತವಾದಿ ಸಂಘಟನೆಯ ಶೂರಾ ಕಮಿಟಿ ಸದಸ್ಯ. ಆದರೆ ತಂದೆಯ ಇಸ್ಲಾಮಿ ಮೂಲಭೂತವಾದಿ ಚಿಂತನೆಗೆ ವಿರುದ್ಧವಾಗಿ ಉದಾರವಾದಿ ಹಾಗೂ ಪ್ರಗತಿಪರ ಚಿಂತನೆಯನ್ನು ಮೈಗೂಡಿಸಿಕೊಂಡು ಬೆಳೆದವರು ಉಮ್ಮರ್ ಖಾಲಿದ್. “ಉಮ್ಮರ್ ಎಡಪಂಥೀಯ ಹಾಗೂ ಪ್ರಗತಿಪರ ವಿಚಾರಧಾರೆಗಳಿಂದ ಪ್ರಭಾವಿತವಾಗಿದ್ದ. ಮುಸ್ಲಿಮ್ ಸಮಾಜದಲ್ಲಿ ಬೇರೂರಿರುವ ಮೂಲಭೂತವಾದ, ಧಾರ್ಮಿಕ ಕಟ್ಟರ್ ವಾದ ಹಾಗೂ ಮಹಿಳಾ ಶೋಷಣೆಯನ್ನು ಖಂಡಿಸುತ್ತಿದ್ದ. ಇವುಗಳನ್ನೆಲ್ಲಾ ಪ್ರಶ್ನಿಸುವ ಮನೋಭಾವ ಆತನದ್ದಾಗಿತ್ತು. ಈ ಕಾರಣಕ್ಕಾಗಿ ನಮ್ಮ ನಡುವೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು” ಎನ್ನುತ್ತಾರೆ ಉಮ್ಮರ್ ಖಾಲಿದ್ ತಂದೆ ಸೈಯದ್ ಖಾಲಿದ್ ರಸೂಲ್ ಇಲ್ಯಾಸ್. ಇಲ್ಲಿ ನಾವು ಗಮನಿಸಬೇಕಾದ ಅಂಶವೇನೆಂದರೆ, ಉಮ್ಮರ್ ಖಾಲಿದ್ ಇಸ್ಲಾಮ್ ಧಾರ್ಮಿಕ ಕಟ್ಟರ್ ವಾದದ ವಿರೋಧಿಸುತ್ತಾ ಶೋಷಿತ ಮುಸ್ಲಿಮರ ಪರವಾಗಿ ಧ್ವನಿ ಎತ್ತುತ್ತಿದ್ದರು. ಜೊತೆಗೆ ಜಾತಿವಾದ, ಮಹಿಳಾ ಶೋಷಣೆ, ಆದಿವಾಸಿ ಹಾಗೂ ದಲಿತರ ಮೇಲಾಗುತ್ತಿರುವ ದಬ್ಬಾಳಿಕೆ ದೌರ್ಜನ್ಯದ ವಿರುದ್ದದ ಹೋರಾಟದಲ್ಲೂ ಉಮ್ಮರ್ ಮುಂಚೂಣಿಯಲ್ಲಿದ್ದರು.

ಇತ್ತೀಚೆಗೆ ಪ್ರಭಾವಿ ಮುಸ್ಲಿಮ್ ಧಾರ್ಮಿಕ ಮುಖಂಡರೊಬ್ಬರು ತಮ್ಮ ಭಾಷಣದಲ್ಲಿ ಮಹಿಳೆಯರ ಶಕ್ತಿ ಸಾಮರ್ಥ್ಯದ ಕುರಿತಾಗಿ ಕೇವಲವಾಗಿ ಮಾತನಾಡಿದ್ದರು. ಮಹಿಳೆ ಸ್ವತಂತ್ರವಾಗಿ ಹೋರಾಡಲು ಅಶಕ್ತಳು ಎಂದಿದ್ದರು. ಮುಸ್ಲಿಮ್ ಸಮಾಜದಲ್ಲಿ ಇಂದಿಗೂ ಮಹಿಳೆಯರನ್ನು ಈ ದೃಷ್ಟಿಕೋನದಲ್ಲಿ ನೋಡುವ ಧಾರ್ಮಿಕ ಪಂಡಿತರೇ ಅಧಿಕ. ಪರಿಣಾಮ ಸಮಾಜದ ಮುಖ್ಯವಾಹಿನಿಯಲ್ಲಿ ಮುಸ್ಲಿಮ್ ಮಹಿಳೆಯರ ಪಾಲ್ಗೊಳ್ಳುವಿಕೆ ತೀರಾ ನಗಣ್ಯ. ಈ ಸಂಧರ್ಭದಲ್ಲಿ ನಮ್ಮ ಕಣ್ಣ ಮುಂದೆ ಬರುವ ದಿಟ್ಟ ಯುವ ನಾಯಕಿ ಶ್ರೀನಗರ ಮೂಲದ ಶೆಹ್ಲಾ ರಶೀದ್. ಜೆ.ಎನ್.ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ನಯ್ಯ ದೇಶದ್ರೋಹದ ಆರೋಪದಲ್ಲಿ ಜೈಲು ಸೇರಿದಾಗ ಅದನ್ನು ವಿರೋಧಿಸಿ ನಡೆದ ಬೃಹತ್ ಹೋರಾಟಕ್ಕೆ ನಾಯಕತ್ವವನ್ನು ನೀಡಿದವರು ಶೆಹ್ಲಾ ರಶೀದ್. ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷೆಯಾಗಿರುವ ಶೆಹ್ಲಾ ರಶೀದ್ ಎಡ-ಪ್ರಗತಿಪರ ಚಳುವಳಿಯಲ್ಲಿ ಮುಂಚೂಣಿಯಲ್ಲಿರುವ ವಿದ್ಯಾರ್ಥಿ ಮುಂದಾಳು. ಮಧ್ಯಮ ವರ್ಗದ ಕಾಶ್ಮೀರಿ ಕುಟುಂಬದಲ್ಲಿ ಹುಟ್ಟಿ ಬೆಳೆದು ಜೆ.ಎನ್.ಯುನ AISA ಎಡ ವಿದ್ಯಾರ್ಥಿ ಚಳುವಳಿಯಲ್ಲಿ ತನ್ನನ್ನು ಗುರುತಿಸಿಕೊಂಡು ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿ ನಾಯಕಿ. ಜೆ.ಎನ್.ಯು ಹೋರಾಟದ ಸಂದರ್ಭದಲ್ಲಿ ಕ್ಯಾಂಪಸ್ ನ ಮೂರು ಸಾವಿರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಈಕೆ ಮಾಡಿದ ಭಾಷಣ ಹಾಗೂ ಆ ಹೋರಾಟಕ್ಕೆ ನೀಡಿದ ನಾಯಕತ್ವ ನಿಜಕ್ಕೂ ಶೆಹ್ಲಾ ರಶೀದ್ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ. ಪ್ರಗತಿಪರ ಚಿಂತನೆಗಳೊಂದಿಗೆ ತನ್ನ ಸಮುದಾಯದೊಳಗಿನ ಮೂಲಭೂತವಾದ, ಮುಸ್ಲಿಮ್ ಮಹಿಳೆಯರ ತವಕ – ತಲ್ಲಣಗಳನ್ನು ಪ್ರಶ್ನಿಸುವುದರ ಜೊತೆಗೆ ತನ್ನ ಸಮುದಾಯದ ಶೋಷಿತ ಜನರ ಪರವಾಗಿ ದನಿಯಾಗುತ್ತಿರುವ ಈಕೆಯ ನಾಯಕತ್ವ ಮುಸ್ಲಿಮ್ ಮಹಿಳೆಯರಿಗೆ ಮಾದರಿ.

ಬಹುಷಃ ಉಮ್ಮರ್ ಖಾಲಿದ್ ಹಾಗೂ ಶೆಹ್ಲಾ ರಶೀದ್ ರಂತಹಾ ಯುವ ನಾಯಕರ ಕುರಿತಾಗಿ ಮುಸ್ಲಿಮ್ ಯುವ ಸಮೂಹದಲ್ಲಿ ಹೊಸShehla_Rashid ಚರ್ಚೆ ಹುಟ್ಟಬೇಕಿತ್ತು. ವಿಪರ್ಯಾಸವೆಂದರೆ ಮುಸ್ಲಿಮ್ ಯುವ ಸಮೂಹಕ್ಕೆ ಇಂಥಹ ಪ್ರಗತಿಪರ ಧೋರಣೆಯ ಮುಖಂಡರು ಹೀರೋ ಆಗಿ ಗುರುತಿಸಲ್ಪಡುವುದಿಲ್ಲ. ಬದಲಾಗಿ ಧಾರ್ಮಿಕ ಮೂಲಭೂತವಾದಿ, ಕೋಮುವಾದಿ ರಾಜಕಾರಣವನ್ನು ಪ್ರತಿನಿಧಿಸುವ ಉವೈಸಿ ಸಹೋದರರಂತಹ ನಾಯಕರು ಮುಸ್ಲಿಮ್ ಸಮಾಜದ ಬಹುತೇಕ ಯುವ ಮನಸ್ಸುಗಳ ಪಾಲಿಗೆ ಹೀರೋ ಆಗಿ ನೆಲೆ ನಿಲ್ಲುತ್ತಿದ್ದಾರೆ. ಉಮ್ಮರ್ ಖಾಲಿದ್ ಹಾಗೂ ಶೈಲಾ ರಶೀದ್ ಶೋಷಿತ ಮುಸ್ಲಿಮರ ಪರವಾಗಿ ಧ್ವನಿ ಎತ್ತಿದರೂ ಮುಸ್ಲಿಮ್ ಸಮಾಜದ ಮೂಲಭೂತವಾದಿಗಳು ಇವರ ನಾಯಕತ್ವವನ್ನು ಒಪ್ಪಲು ತಯಾರಿಲ್ಲ. ಕಾರಣ, ಇವರ ಪ್ರಗತಿಪರ ಧೋರಣೆ. ಸಂಘಪರಿವಾರದ ಕೋಮುವಾದದ ಜೊತೆಗೆ ಮುಸ್ಲಿಮ್ ಸಮಾಜದ ಮೂಲಭೂತವಾದವನ್ನು ಪ್ರಶ್ನಿಸುತ್ತಿರುವ ಇವರುಗಳ ನಡೆಯೇ ಈ ಬಿನ್ನಾಭಿಪ್ರಾಯಕ್ಕೆ ಕಾರಣ. “ಉಮ್ಮರ್ ಖಾಲಿದ್ ಚಿಂತನೆಯ ಕುರಿತಾಗಿ ಧಾರ್ಮಿಕ ಬಿನ್ನಾಭಿಪ್ರಾಯಗಳಿವೆ. ಅವರ ಸಾಮಾಜಿಕ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಆದರೆ ಮುಸ್ಲಿಮ್ ಮೂಲಭೂತವಾದ, ಕೋಮುವಾದದ ಕುರಿತಾದ ಅವರ ನಿಲುವಿನಲ್ಲಿ ನಮಗೆ ಸಹಮತ ಕಂಡುಬಂದಲ್ಲಿ ಮಾತ್ರ ಅಂಥವರ ನಾಯಕತ್ವವನ್ನು ನಾವು ಒಪ್ಪುತ್ತೇವೆ” ಎನ್ನುತ್ತಾರೆ ಜಮಾತೇ- ಇಸ್ಲಾಮೀ-ಹಿಂದ್ ಸಂಘಟನೆಯ ಯುವ ಮುಖಂಡ ಶಬ್ಬೀರ್ ಅಹಮ್ಮದ್.

ಭಾರತದಲ್ಲಿ ಸಂಘಪರಿವಾರದ ಕೋಮುವಾದದಿಂದ ಅಭದ್ರತೆಯಲ್ಲಿ ಬದುಕುತ್ತಿರುವ ಶೋಷಿತ ಮುಸ್ಲಿಮ್ ವರ್ಗದ ಪ್ರತಿನಿಧಿಗಳಾಗಿ ಮುಸ್ಲಿಮ್ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳು ಹಾಗೂ ಅದರ ನಾಯಕರು ಹೊರಹೊಮ್ಮುತ್ತಿದ್ದಾರೆ. ಸಮುದಾಯದ ರಕ್ಷಣೆ ಹಾಗೂ ಸಬಲೀಕರಣದ ಪರವಾಗಿ ಧ್ವನಿ ಎತ್ತುತ್ತಿರುವ ಮೂಲಭೂತವಾದಿ ಸಂಘಟನೆಗಳು ಸಮುದಾಯದ ಯುವ ಮನಸ್ಸುಗಳಲ್ಲಿ ಧಾರ್ಮಿಕ ಕಟ್ಟರ್ ವಾದವನ್ನು ಬಿತ್ತುತ್ತಿವೆ. ಪರಿಣಾಮ ಶೋಷಿತ ಮುಸ್ಲಿಮರ, ಬಡವರ, ದಮನಿತರ, ಶೋಷಿತರ, ಮಹಿಳೆ, ಆದಿವಾಸಿ ಹಾಗೂ ದಲಿತರ ಪರವಾಗಿ ಆಡುವ ಉದಾರವಾದಿ ಮುಸ್ಲಿಮ್ ನಾಯಕರ ಮಾತುಗಳಿಗಿಂತ ಸಂಘಪರಿವಾರದ ಪರಿಭಾಷೆಯಲ್ಲಿ ಮಾತನಾಡುವ ಕೋಮುವಾದಿ ಮುಸ್ಲಿಮ್ ನಾಯಕರ ಮಾತುಗಳು ಮುಸ್ಲಿಮ್ ಯುವಮನಸ್ಸುಗಳಿಗೆ ಹತ್ತಿರವಾಗುತ್ತಿವೆ.

“ಎಡಪಂಥೀಯ ಚಿಂತನೆ ಹಾಗೂ ಎಡ ಹೋರಾಟಗಾರರ ಕುರಿತಾಗಿ ಮುಸ್ಲಿಮ್ ಸಮುದಾಯದ ನಡುವೆ ಪೂರ್ವಾಗ್ರಹಗಳನ್ನು ಮೂಲಭೂತವಾದಿಗಳು ವ್ಯವಸ್ಥಿತವಾಗಿ ಸೃಷ್ಟಿ ಮಾಡುತ್ತಿದ್ದಾರೆ. ಈ ಕಾರಣಗಳಿಂದಾಗಿ ಬಡತನ, ಸಮಾನತೆ, ಸ್ತ್ರೀ ಸ್ವಾತಂತ್ಯ್ರ, ಕೋಮುವಾದ , ಮೂಲಭೂತವಾದದ ಕುರಿತಾಗಿ ಮಾತನಾಡುವ ಮುಸ್ಲಿಮ್ ಪ್ರಗತಿಪರ ಹೋರಾಟಗಾರರನ್ನು ಸ್ವೀಕರಿಸಲು ಮುಸ್ಲಿಮ್ ಸಮಾಜ ಹಿಂದೇಟು ಹಾಕುತ್ತಿದ್ದಾರೆ. ಈ ಬೆಳವಣಿಗೆಗಳ ಪರಿಣಾಮವೇ ಎಡ ಚಿಂತನೆಯ ಧ್ವನಿಯಾಗಿರುವ ಉಮ್ಮರ್ ಖಾಲಿದ್ ಹಾಗೂ ಶೆಹ್ಲಾ ರಶೀದ್ ನಂತಹಾ ಯುವ ವಿದ್ಯಾರ್ಥಿ ಮುಖಂಡರು ಮುಸ್ಲಿಮ್ ಯುವಕರ ಪಾಲಿಗೆ ಹೀರೋಗಳಾಗುವುದಿಲ್ಲ. ಇವರ ಹೋರಾಟ ಹಾಗೂ ನಾಯಕತ್ವದ ಕುರಿತಾಗಿ ಮುಸ್ಲಿಮ್ ಸಮಾಜದಲ್ಲಿ ಚರ್ಚೆ ಆಗೋದಿಲ್ಲ. ಬದಲಾಗಿ ಉವೈಸಿ ಸಹೋದರರಂತಹಾ ಕೋಮುವಾದಿ ನಾಯಕತ್ವ ಮುಸ್ಲಿಮ್ ಯುವ ಮನಸ್ಸುಗಳಲ್ಲಿ ಹೀರೋ ಸ್ಥಾನ ಪಡೆದುಕೊಳ್ಳುತ್ತಿರುವುದು ವಿಪರ್ಯಾಸ ಹಾಗೂ ಆತಂಕಕಾರಿ” ಎನ್ನುತ್ತಾರೆ ಡಿ.ವೈ.ಎಫ್.ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ.

ಭಾರತೀಯ ಮುಸ್ಲಿಮರು ಸಂಘಪರಿವಾರದ ಕೋಮುವಾದಿಗಳನ್ನು ಕೋಮುವಾದದ ಪರಿಭಾಷೆಯಲ್ಲೇ ಮುಖಾಮುಖಿಯಾಗಲು ಹೊರಟಿದ್ದಾರೆ.Owaisi ಆದರೆ ಭಾರತದಲ್ಲಿ ಬಹುಸಂಖ್ಯಾತ ಕೋಮುವಾದವನ್ನು ಎದುರಿಸುವ ಬಗೆ ಇದಲ್ಲ. ಬದಲಾಗಿ ಇಲ್ಲಿಯ ಶೋಷಿತ ವರ್ಗಗಳು ಜೊತೆಗೂಡಿ ಚಳುವಳಿ ಕಟ್ಟಬೇಕಾದ ಅಗತ್ಯವಿದೆ. ಈ ಸಂಧರ್ಭದಲ್ಲಿ ಚಳುವಳಿಯ ನಾಯಕತ್ವ ಮುಸ್ಲಿಮ್ ಕೋಮುವಾದಿಗಳ ಪಾಲಾದರೆ ಕೋಮುವಾದದ ವಿರುದ್ದದ ಹೋರಾಟ ಅರ್ಥ ಕಳೆದುಕೊಳ್ಳುತ್ತದೆ. ಒಂದು ವರ್ಗದ ಕೋಮುವಾದದ ವಿರುದ್ಧದ ಹೋರಾಟ ಮತ್ತೊಂದು ಕೋಮುವಾದಿಗಳ ಹುಟ್ಟಿಗೆ ಕಾರಣವಾಗಬಾರದು. ಇಂದು ಮುಸ್ಲಿಮ್ ಸಮುದಾಯದ ಬೆಳವಣಿಗೆಯನ್ನು ಗಮನಿಸುತ್ತಿದ್ದರೆ ಮೂಲಭೂತವಾದ, ಧಾರ್ಮಿಕ ಕಟ್ಟರ್ ವಾದ ಸಮುದಾಯದ ಯುವ ಸಮೂಹದದೊಳಗೆ ಹೇಗೆ ಬೆರೂರುತ್ತಿದೆ ಎಂಬುವುದು ಸ್ಪಷ್ಟಗೊಳ್ಳುತ್ತದೆ. ಇದು ಆತಂಕಕಾರಿ ವಿಚಾರವೂ ಹೌದು. ಶೋಷಿತ ಮುಸ್ಲಿಮರ ಪರ ನಡೆಸುತ್ತಿರುವ ಮುಸ್ಲಿಮ್ ಸಮುದಾಯದ ಹೋರಾಟಕ್ಕೆ ಸಮುದಾಯದ ಉದಾರವಾದಿಗಳ ಹಾಗೂ ಪ್ರಗತಿಪರರ ನಾಯಕತ್ವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಮುದಾಯದೊಳಗಿನಿಂದ ಉದಾರವಾದಿ, ಪ್ರಗತಿಪರ ನೆಲೆಯಲ್ಲಿ ಚಿಂತಿಸುವ ನೂರಾರು ಯುವ ಮುಂದಾಳುಗಳು ಬೆಳೆದು ಬರಬೇಕಿದೆ. ದೇಶದಲ್ಲಿ ಕ್ರಾಂತಿಯ ತಂಗಾಳಿ ಎಬ್ಬಿಸಿದ ಉಮ್ಮರ್ ಖಾಲಿದ್ ಹಾಗೂ ಶೆಹ್ಲಾ ರಶೀದ್ ನಂತಹಾ ವಿದ್ಯಾರ್ಥಿ ಮುಖಂಡರು ಮುಸ್ಲಿಮ್ ಯುವ ಸಮೂಹಕ್ಕೂ ಸ್ಪೂರ್ತಿಯಾಗಲಿ. ಯುವ ನಾಯಕರನ್ನು ಈ ನಾಡಿಗೆ ನೀಡಿದ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯಕ್ಕೆ ಧನ್ಯವಾದಗಳು.

6 thoughts on “ಮುಸ್ಲಿಮ್ ಸಮುದಾಯ ಹಾಗೂ ಉಮ್ಮರ್ ಖಾಲಿದ್ ಮತ್ತು ಶೆಹ್ಲಾ ರಶೀದ್ ರಂಥ ಪ್ರಗತಿಪರ ನಾಯಕತ್ವ

  1. B T Jahnavi

    ತುಂಬಾ ಚನ್ನಾಗಿದೆ. ಅವರನ್ನೂ ಒಳಗೊಂಡ ಎಲ್ಲರೂ ಒಂದೇ ಎಂಬ ಮನೋಭಾವದೊಂದಿಗೆ ಒಗ್ಗೂಡಿ ಹೋರಾಟ ಮಾಡುವಂಥ ದಿನಗಳು ಬರಲಿ ಎಂದು ಆಶಿಸೋಣ. ಹಾಗಾದಲ್ಲಿ ಎಲ್ಲರ ನೋವೂ ಒಂದೇ, ಎಲ್ಲರ ಹಾದಿಯೂ ಒಂದೇ ಆಗಿ ಬದುಕೂ ಸುಗಮವಾಗುತ್ತದೆ.

    Reply
  2. im unknown

    ಸಂಘಪರಿವಾರದ ಕೋಮುವಾದ ಹಾಗೂ ಅದಕ್ಕೆ ಪ್ರತಿಯಾಗಿ ಮುಸ್ಲಿಮ್ ಸಮಾಜದಲ್ಲಿ ಧಾರ್ಮಿಕ ಮೂಲಭೂತವಾದ ಆಳವಾಗಿ ಇಂದು ಬೇರೂರುತ್ತಿವೆ

    hahahahahahhahhahhahhahahhahahhahhahhahhahha!!!! 😀 Nice joke!

    Reply
  3. Vishwas Sonu

    ಅಂದ ಹಾಗೆ ನಾವೀಗ ಶೆಹ್ಲಾಳನ್ನು ಮುಸ್ಲಿಮ್ ಸಮುದಾಯದ ನಾಯಕಿಯಾಗಿ ಕಾಣಬೇಕೆ ಅಥವಾ ನಮ್ಮಂತಹ ಪ್ರಗತಿಪರ, ಜಾತ್ಯತೀಯ ಚಳವಳಿಯ ಭಾಗ ಎಂದು ಪರಿಗಣಿಸಬೇಕೆ ಎಂದು ಲೇಖಕರು ಹೇಳುವಂತಾಗಲಿ. ಮತ್ತೆ ಮತ್ತೆ ನಮಗೆ ಶೆಹ್ಲಾ ಮುಸ್ಲಿಂ, ಉಮರ್ ಖಾಲಿದ್ ಮುಸ್ಲಿಮ್. ಅವರೇ ಆ ಐಡೆಂಟಿಟಿಗಳಿಂದ ಕಳಚಿಕೊಂಡು ಆಚೆ ಬಂದಿದ್ದಾರೆ. ನೀವೇಕೆ ಮತ್ತೆ ಮತ್ತೆ ಅವರಿಗೆ ಮುಸ್ಲಿಂ ನಾಯಕ, ನಾಯಕಿ ಎಂದು ಪಟ್ಟ ಕಟ್ಟಿತ್ತೀರಿ ಇರ್ಷಾದ್ ಅವರೆ.

    Reply
  4. Abbas Ali Konanooru

    All these so called youth leaders have no stature and influence outside JNU. They’re media tigers not real leaders.

    Reply
  5. Reader

    ಮಿಸ್ಟರ್ ಲೇಖಕರೇ ನಿಮ್ಮ ಈ ಲೇಖನವನ್ನು ಓದಿ ಯಾವ ರೀತಿಯ ಪ್ರತಿಕ್ರಿಯೆ ಇದಕ್ಕೆ ಹೆಚ್ಚು ಸೂಕ್ತವೆ೦ದು ಅರ್ಥವಾಗುತ್ತಿಲ್ಲ.
    ಬಹುಸ೦ಖ್ಯಾತ ಕೋಮುವಾದ ಮತ್ತು ಮುಸ್ಲಿಮ್ ಕೋಮುವಾದವೆ೦ದು ನೀವು ವಿಭಜಿಸಿದ್ದೀರಿ. ಬಹುಸ೦ಖ್ಯಾತ ಕೋಮುವಾದಿಗಳೆ೦ದು ಯಾರನ್ನು ಬೆಟ್ಟುಮಾಡಿದ್ದೀರಿ, ಭಾರತಲ್ಲಿರುವ ಬಹುಸ೦ಖ್ಯಾತ ಜನಸ೦ಖ್ಯೆಯಲ್ಲಿ ಯಾರು ಕೂಡ ಕೋಮುವಾದಿಗಳಲ್ಲ ಬದಲಾಗಿ ಬೆರಳನಿಕೆಯಷ್ಟು ಸ೦ಘಪರಿವಾರದ ಕಟ್ಟರ್ ವಾದಿಗಳು ಇಲ್ಲಿ ಕೋಮುವಾದವನ್ನು ಸೃಷ್ಟಿಸಿ ಸಮಾಜದಲ್ಲಿ ಅಶಾ೦ತಿಯನ್ನು ಮತ್ತು ಗೊ೦ದಲವನ್ನು ಹಬ್ಬಿಸುತ್ತಿದ್ದಾರೆ ಮತ್ತು ಹೆಚ್ಚಿನ ಎಲ್ಲ ಮೇಲ್ಜಾತಿಯ ಮತ್ತು ಕೆಳಜಾತಿಯ ಶೋಷಿತ ಧಮನಿತ ಪ೦ಗಡಗಳು ಶಾ೦ತಿಪ್ರಿಯರಾಗಿದ್ದಾರೆ. ಈ ಕೋಮು ವಾ೦ತಿ ಮಾಡುವ ಅಲ್ಪ ಮ೦ದಿಗಳನ್ನು ಬಹುಸ೦ಖ್ಯಾತರೆ೦ದು ಕರೆದರೆ ಅದು ಸೋಗಲಾಡಿತನವಾದೀತು.
    ಮುಸ್ಲಿಮ್ ಕೋಮುವಾದಿಗಳೆ೦ದು ನೀವು ಯಾರಿಗೆ ಬೆರಳು ತೋರಿಸುತ್ತಿದ್ದಿರಿ, ನಿಜವಾಗಿ ಮುಸ್ಲಿಮರಲ್ಲಿ ಕೋಮುವಾದವು ಬೆಳೆಯಲು ಸಾಧ್ಯವೇ ? ಇಸ್ಲಾಮಿನ ನೈಜ ಅನುಯಾಯಿಗಳಿಗೆ ಕೋಮುವಾದಿಗಳಾಗಲು ಸಾಧ್ಯವೇ, ಇದು ಕೆಲವು ಪ್ರಗತಿಪರ ಎ೦ದು ಬಿ೦ಬಿಸುವ ಧರ್ಮದ ಗ೦ಧಗಾಳಿಯೂ ಇಲ್ಲದ ಮೋಡರೇಟ್ ಮುಸ್ಲಿಮ್ ಎ೦ದು ಹೇಳಿಕೊಳ್ಳುವವ ಮ೦ದಿ ಮಾಡುವ ಪಿತೂರಿಯಲ್ಲವೇ ?
    ಶೆಹ್ಲಾ ರಶೀದ್ ಳನ್ನು ಪ್ರಗತಿಪರ ಮಹಿಳೆ ಎ೦ದು ಹೇಳಿಕೊಳ್ಳಲು ನೀವು ಕ೦ಡುಕೊ೦ಡಿರುವ ಮಾನದ೦ಡವೇನು ? ಪರ್ದಾ ಧರಿಸದೆ ಸಾರ್ವಜನಿಕ ವಲಯದ ಮುಖ್ಯವಾಹಿಣಿಯನ್ನು ಪ್ರತಿನಿಧಿಸಿದರೆ ಪ್ರಗತಿಪರ ಮತ್ತು ಪರ್ದಾಧಾರಿಣಿಯಾಗಿ ಧಾರ್ಮಿಕ ಸೀಮೋಲ್ಲ೦ಘನೆ ಮಾಡದೆ ತಮ್ಮ ಸೀಮಿತ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದರೆ ಧಾರ್ಮಿಕ ಮೂಲಭೂತವಾದಿಗಳು ಹೀಗೆ ವಿಭಜಿಸುವುದು ಸರಿಯೇ ? ನಿಮ್ಮ ದೃಷ್ಟಿಯಲ್ಲಿ ಪ್ರಗತಿಪರ ಮುಸ್ಲಿಮರು ಯಾರು ಇಸ್ಲಾಮಿನ ಪ೦ಚಸ್ತ೦ಭಗಳಲ್ಲೊ೦ದಾದ ಇಸ್ಲಾಮಿನ ಬುನಾದಿಯಾದ ಐದು ಸಮಯದ ನಮಾಝನ್ನು ಎರಡಕ್ಕೆ ಇಳಿಸಬೇಕೆ೦ದು ವಾದಿಸುವ ತಸ್ಲೀಮ ನಸ್ರೀನ್ ? ಅಥವಾ ಒ೦ದು ಧರ್ಮವನ್ನು ಮತ್ತು ಅದರ ನಾಯಕರನ್ನು ಹಿಯಾಳಿಸುವ ಸಲ್ಮಾನ್ ರುಶ್ದಿ ಅಥವಾ ಕೆಲವು ಮೋಡರೇಟ್ ಮುಸ್ಲಿಮ್ ಎ೦ದು ಸ್ವಯ೦ ಹೇಳಿಕೆ ನೀಡುವ ಚಲನ ಚಿತ್ರ ನಟರು ? ಒ೦ದು ನೆನಪಿಡಿ, ಇಸ್ಲಾಮಿನ ಆದೇಶಗಳಲ್ಲೊ೦ದಾದ ಪರ್ಧಾ ಧರಿಸುವ ಅದೆಷ್ಟೋ ಮಹಿಳಾ ಮಣಿಯರು ಇ೦ದು ಕೂಡ ಜಗತ್ತಿನಲ್ಲಿ ಧರ್ಮದ ಆಚಾರ ವಿಚಾರಗಳನ್ನು ಪಾಲಿಸುತ್ತಲೇ ಸಮಾಜದ ಮುಖ್ಯವಾಹಿಣಿಯಲ್ಲಿ ಕಾರ್ಯಾಚರಿಸುತ್ತಿದ್ದಾರೆ ಉದಾ, ಹಿ೦ದೂ ಧರ್ಮದಿ೦ದ ಇಸ್ಲಾಮಿನ ಐಡೆ೦ಟಿಟಿಯಾದ ಪರ್ದಾ ವನ್ನು ನೆಚ್ಚಿ ಇಸ್ಲಾಮ್ ಸ್ವೀಕರಿಸಿದ ಖ್ಯಾತ ಬರಹಗಾರ್ತಿ ಕಮಲ ಸುರಯ್ಯಾ ಪರ್ಧಾದೊಳಗೆ ಇದ್ದು ಕೆಲಸ ಮಾಡಿದವರಾಗಿದ್ದಾರೆ. ಅದೇ ರೀತಿ ತಮಿಳು ಚಲನಚಿತ್ರ ನಟಿ ಇತ್ತೀಚಿಗೆ ಪರ್ಧಾ ವನ್ನು ನೆಚ್ಚಿ ಅದರಲ್ಲಿ ಸುರಕ್ಷಿತತೆಯಿದೆ ಎ೦ಬ ಒ೦ದೇ ಒ೦ದು ಕಾರಣಕ್ಕೆ ಧರ್ಮವನ್ನು ಬದಲಾಯಿಸಿದ ಎಮ್ ಜಿ ರಹೀಮ ಹೀಗೆ ಅದೆಷ್ಟು ಉದಾಹರಣೆಗಳು ನಮ್ಮ ಮು೦ದೆ ಇವೆ.

    Reply
  6. ಸೀತಾ

    ತೃಪ್ತಿ ದೇಸಾಯಿ ಎಂಬ ಸಾಮಾನ್ಯ ಮಹಿಳೆ ಶನಿ ಶಿಂಘನಪುರ ದೇವಸ್ಥಾನದಲ್ಲಿ ಮಾಡಿದ ಕ್ರಾಂತಿಯನ್ನು ಶೆಹ್ಲಾ ರಶೀದಳು ಹಾಜಿ ಅಲಿಯಲ್ಲಿ ಮಾಡುವಂತಾಗಲಿ ಎಂದು ನಾವೆಲ್ಲರೂ ಆಶಿಸೋಣ. ಆಗ ಅವಳು ಮುಸಲ್ಮಾನರ ನಾಯಕಿಯಷ್ಟೇ ಅಲ್ಲ, ಪ್ರಗತಿಪರ ಪ್ರಜೆಗಳ ನಾಯಕಿ ಎನಿಸಿಕೊಳ್ಳುತ್ತಾಳೆ.

    Reply

Leave a Reply to B T Jahnavi Cancel reply

Your email address will not be published. Required fields are marked *