ಪೋಲಿಸರೇ ಸಂತ್ರಸ್ತರಾಗುವ ಅಪಾಯ: ಎಡಪಂಥೀಯರ ಕೊಡುಗೆ

Naveen Soorinje


ನವೀನ್ ಸೂರಿಂಜೆ


 

ಅಸಂಖ್ಯ ಹೋರಾಟ, ಚಳುವಳಿಗಳನ್ನು ಕಂಡ ಕರ್ನಾಟಕದಲ್ಲಿ ಇದೀಗ ಪೋಲಿಸರ ಪ್ರತಿಭಟನೆ ದಿನೇದಿನೇ ಸುದ್ದಿಯಾಗುತ್ತಿದೆ. ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ನೇತೃತ್ವದಲ್ಲಿ ಹಲವು ತಳಹಂತದ ಪೋಲಿಸ್ ಸಿಬಂದಿಗಳು ವೇತನ ತಾರತಮ್ಯ, ಸಾಕಷ್ಟು ಸೌಲಭ್ಯಗಳು ಇಲ್ಲದಿರುವುದು, ರಜೆ ನಿರಾಕರಣೆ, ಮೇಲಾಧಿಕಾರಿಗಳ ಕಿರುಕುಳ ಹಾಗೂ ರಾಜಕೀಯ ಹಸ್ತಕ್ಷೇಪವನ್ನು ವಿರೋಧಿಸಿ ಇಂತಹ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ತಮ್ಮ ಅನ್ಯಾನ್ಯ ಬೇಡಿಕೆಗಳ ಈಡೇರಿಕೆಯ ವಿಚಾರವನ್ನು ಮುಂದಿಟ್ಟುಕೊಂಡು ಸಾವಿರಾರು ಪೊಲೀಸರು ಜೂನ್ 4 ರಂದು ಸಾಮೂಹಿಕ ರಜೆ ಹಾಕಲು ನಿರ್ಧರಿಸುವ ಮೂಲಕ ಸಂಘರ್ಷಾತ್ಮಕ ಹೋರಾಟದ ಮಾರ್ಗವನ್ನು ಹಿಡಿದಿದ್ದಾರೆ. ಅನ್ಯ ಸಂದರ್ಭಗಳಲ್ಲಿ ಪೋಲಿಸ್ ಇಲಾಖೆಯ ಮಟ್ಟದಲ್ಲೇ ಮಂಥನಕ್ಕೆ ಒಳಗಾಗಬಹುದಾಗಿದ್ದ, ಇತ್ಯರ್ಥವಾಗಬಹುದಾಗಿದ್ದ ಪೋಲಿಸರ ಪ್ರತಿಭಟನೆ ಮತ್ತು ಅವರ ಹಕ್ಕೊತ್ತಾಯದ ವಿಚಾರವು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ಹೊಸ ಆಯಾಮವನ್ನು ಪಡೆದುಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಕ್ರಿಯಾಶೀಲವಾಗಿರುವ ಯುವ ಕಾರ್ಯಕರ್ತರು ಹಾಗೂ ಲೇಖಕರು ಈ ವಿಚಾರದಲ್ಲಿ ಹೋರಾಟಕ್ಕೆ ಕಟಿಬದ್ಧವಾಗಿರುವ ಪೋಲಿಸರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ; ಸಹಾನುಭೂತಿ ಹಾಗೂ ಅನುಕಂಪವನ್ನು ಸೂಚಿಸುತ್ತಿದ್ದಾರೆ.

ಪೊಲೀಸರ ಹೆಸರಿನಲ್ಲಿ ನಡೆಯುವ ಪ್ರತಿಭಟನೆಗೆ ಇದೀಗ ದೊರಕುತ್ತಿರುವ ಅಭೂತಪೂರ್ವ ಬೆಂಬಲ ಹಲವು ಅನಪೇಕ್ಷಿತ ಪರಿಣಾಮಗಳಿಗೆ ಆಹ್ವಾನ ನೀಡುವ state-logoರೀತಿಯಲ್ಲಿ ಗೋಚರಿಸುತ್ತಿದೆ. ಯಜಮಾನ ಸ್ವರೂಪಿ ಪ್ರಭುತ್ವದ ಮೂರ್ತ ರೂಪವಾಗಿರುವ ಪೊಲೀಸರನ್ನೇ ಸಂತ್ರಸ್ತರನ್ನಾಗಿ ಬಿಂಬಿಸುವ ಪ್ರಯತ್ನ ಎಡಪಂಥೀಯ ಹೋರಾಟಗಾರರು ಮತ್ತು ಯುವ ಸಾಹಿತಿಗಳಿಂದ ನಡೆಯುತ್ತಿದೆ. ಇಂತಹ ಚಟುವಟಿಕೆಗಳು ಪರೋಕ್ಷವಾಗಿ ಪ್ರಭುತ್ವವನ್ನೇ ಸಂತ್ರಸ್ತರ ಸ್ಥಾನದಲ್ಲಿ ನಿಲ್ಲಿಸುವ ಅಪಾಯಕಾರಿ ಸಾಧ್ಯತೆಗಳನ್ನು ಹೊಂದಿವೆ. ಯುವ ಕಾರ್ಯಕರ್ತರ ಔದಾರ್ಯದ ಫಲವಾಗಿ ಇಂದು ಸಾಂಪ್ರದಾಯಿಕ ಶೋಷಿತ-ಶೋಷಕ ಸಮೀಕರಣದ ಸ್ವರೂಪವೇ ಒಮ್ಮೆಗೆ ಮಾರ್ಪಾಡಾದಂತೆ ಕಂಡುಬರುತ್ತಿದೆ.

ಅದಿರಲಿ. ಪೊಲೀಸರ ಬೇಡಿಕೆಗಳೇನು ಎಂಬುದರ ಬಗ್ಗೆ ಚರ್ಚಿಸೋಣಾ. ಸಾಮಾಜಿಕ ಜಾಲತಾಣದಲ್ಲಿ “ಪೊಲೀಸರ ಪರಿಸ್ಥಿತಿ ತೀರಾ ಹೀನಾಯವಾಗಿದೆ” ಎಂದು ಥರೇವಾರಿ ಬಿಂಬಿಸಲಾಗುತ್ತಿದೆ. ಅದರಲ್ಲೂ ಯುವ ಸಾಹಿತಿಗಳು ಮತ್ತು ಹೋರಾಟಗಾರರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, “ಪೊಲೀಸರೂ ನಮ್ಮಂತೆ ಮನುಷ್ಯರು!” ಎಂದು ಕೂಗಿ ಹೇಳುತ್ತಿದ್ದಾರೆ. ಆ ಮೂಲಕ ವ್ಯವಸ್ಥೆ ಪೊಲೀಸರನ್ನು ಕನಿಷ್ಠ ಮನುಷ್ಯರಂತೆ ನಡೆಸಿಕೊಳ್ಳುತ್ತಿಲ್ಲ ಎನ್ನುತ್ತಿದ್ದಾರೆ. ಇದನ್ನಂತೂ ಒಪ್ಪಲು ಅಸಾಧ್ಯ.

ಕೆಳ ಹಂತದ ಪೊಲೀಸರಿಗೆ ಸರಕಾರ ತೀರಾ ಕಡಿಮೆ ಸಂಬಳವನ್ನೇನೂ ನೀಡುತ್ತಿಲ್ಲ. ಕೇವಲ ಎಸ್ ಎಸ್ ಎಲ್ ಸಿ ಶಿಕ್ಷಣವನ್ನು ಹೊಂದಿದ ಪೊಲೀಸ್ ಸಿಬಂದಿಯೊಬ್ಬ ಕಾರ್ಯನಿರ್ವಹಿಸುವ ಜಿಲ್ಲೆಯ ವ್ಯಾಪ್ತಿಯಲ್ಲಿ ವಸತಿ ಸೌಲಭ್ಯದ ಜೊತೆಗೆ ವೇತನ ಪ್ರಾರಂಭವಾಗುವುದೇ 18 ಸಾವಿರ ರೂಪಾಯಿಗಳಿಂದ. ಸೈನ್ಯ ಹೊರತುಪಡಿಸಿ ಯಾವ ಸರಕಾರಿ ನೌಕರನಿಗೂ ಇಲ್ಲದ ಉಚಿತ ರೇಷನ್ ವ್ಯವಸ್ಥೆ ಪೊಲೀಸರಿಗಾಗಿ ಕರ್ನಾಟಕದಲ್ಲಿ ಜಾರಿಯಲ್ಲಿದೆ. ಪೊಲೀಸ್ ಸಿಬಂದಿಯೊಬ್ಬ ಕರ್ತವ್ಯದಲ್ಲಿ ಇದ್ದಾಗ ಸಾವನ್ನಪ್ಪಿದಲ್ಲಿ ಆತನ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲಾಗುತ್ತದೆ. ಈ ರೀತಿ ಬೇರೆ ಇಲಾಖೆಗಳಲ್ಲಿ ಇದ್ದರೂ ಅದಕ್ಕಾಗಿ ಅಲೆದಾಡಿಸಲಾಗುತ್ತದೆ. ಆದರೆ ಪೊಲೀಸ್ ಇಲಾಖೆಯಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯಲು ಸಲ್ಲಿಸಿದ ಒಂದೇ ಒಂದೇ ಅರ್ಜಿ ಇತ್ಯರ್ಥವಾಗದೆ ಬಾಕಿಯಾಗಿಲ್ಲ. ಒಂದು ವೇಳೆ ಪೊಲೀಸ್ ಪೇದೆಯೊಬ್ಬ ಕರ್ತವ್ಯ ನಿರ್ವಹಿಸುವ ಸಂದರ್ಭ ಮೃತನಾದಲ್ಲಿ ತಕ್ಷಣವೇ ಆತನ ಕುಟುಂಬಕ್ಕೆ 50 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಸಣ್ಣಪುಟ್ಟ ಗಾಯಗಳಾದಲ್ಲಿ 2 ಲಕ್ಷ ರೂಪಾಯಿಗಳನ್ನು ತಕ್ಷಣ ನೀಡಲಾಗುತ್ತದೆ. ಇನ್ನು ಪೊಲೀಸ್ ಸಿಬಂದಿಯೊಬ್ಬ ಯಾವುದೇ ಸಂದರ್ಭದಲ್ಲಿ ಅನಾರೋಗ್ಯಕ್ಕೀಡಾದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಸೌಲಭ್ಯ ಪಡೆಯುವ ವ್ಯವಸ್ಥೆ ಇದೆ. ಇಷ್ಟು ವ್ಯವಸ್ಥೆಗಳು ಬೇರಾವ ಇಲಾಖೆಯಲ್ಲೂ ಊಹಿಸಲೂ ಅಸಾಧ್ಯ. ಆದುದರಿಂದಲೇ ಈಗೀಗ ನಡೆಯುತ್ತಿರುವ ಪೋಲಿಸ್ ಪೇದೆ ನೇಮಕಾತಿ ಸಂದರ್ಭಗಳಲ್ಲಿ ಲಕ್ಷ ಲಕ್ಷ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಇದು ಮನುಷ್ಯನೊಬ್ಬನನ್ನು ನಡೆಸಿಕೊಳ್ಳುವ ರೀತಿಯಲ್ಲದೆ ಇನ್ನೇನು ಅನ್ನಬೇಕು?

ಇಷ್ಟೆಲ್ಲಾ ಸೌಲಭ್ಯಗಳು ಇದ್ದರೂ ಪೊಲೀಸರು ಪ್ರತಿಭಟಿಸೋದ್ಯಾಕೆ? ಕೇವಲ ರಜೆಯ ಕಾರಣಕ್ಕಾಗಿಯಂತೂ ಅಲ್ಲ. ಪೊಲೀಸ್ ಅಥವಾ ಸೈನ್ಯKSP Recruitment 2015 ಸೇರುವಾಗಲೇ ಅಲ್ಲಿನ ರಜಾ ಸೌಲಭ್ಯದ ಬಗ್ಗೆ ಅರಿವು ಇರುತ್ತದೆ. ಹಾಗೆಂದು ಸೈನಿಕರ ರೀತಿ ಪೊಲೀಸರಿಗೆ ರಜೆ ನೀಡುವುದೇ ಇಲ್ಲವೆಂದಲ್ಲ. ಕೆಲವೊಂದು ಕಠಿಣ ಮತ್ತು ಸಹಜ ನಿಯಮಗಳು ಇದ್ದೇ ಇರುತ್ತವೆ. ರಜೆಯಲ್ಲಿ ಅನಿಶ್ಚಿತತೆ ವಿಶೇಷವಾಗಿ ಪೋಲಿಸ್ ಮೊದಲಾದ ರಕ್ಷಣಾ ಪಡೆಗಳ, ಸುರಕ್ಷಾ ಸಂಸ್ಥೆಗಳ ಸೇವಾವೃತ್ತಿಯ ಅನಿವಾರ್ಯ ಲಕ್ಷಣ. ಅಷ್ಟಕ್ಕೂ ಪೋಲಿಸರಿಗೆ ರಜೆ ಇರಲೇಬೇಕು ಅನ್ನುವ ಕಾರಣಕ್ಕಾಗಿ ಈಗ ಅವರಿಗೆ ಬೆಂಬಲ ಕೊಡುವ ಪಕ್ಷಗಳು ಅಥವಾ ಸಾಮಾಜಿಕ ಕಾರ್ಯಕರ್ತರು ವಾರದ ರಜಾದಿನಗಳಲ್ಲಿಲಿ ಪ್ರತಿಭಟನೆ, ಆಂದೋಲನಗಳನ್ನು ಹಮ್ಮಿಕೊಳ್ಳುವುದಿಲ್ಲವೆಂಬ ನಿರ್ಧಾರವನ್ನು ಮಾಡುತ್ತಾರೆಯೇ ಎಂಬ ಪ್ರಶ್ನೆ ವ್ಯಂಗ್ಯವಾಗಿ ಕಂಡರೂ ಇಲ್ಲಿ ಪ್ರಸ್ತುತ. ಹಾಗೆಂದುಕೊಂಡು ಪೊಲೀಸರು ಪ್ರತಿಭಟಿಸಲೇ ಬಾರದೆಂದಲ್ಲ. ವೇತನ ತಾರತಮ್ಯ ಮತ್ತು ರಜೆಯ ಬಗ್ಗೆ ಈವೆರೆಗೂ ಒಂದೇ ಒಂದು ಮನವಿ ಪೊಲೀಸ್ ಇಲಾಖೆಗೆ ತಲುಪಿಲ್ಲ ಎಂಬುದು ಗೃಹ ಸಚಿವ ಡಾ ಜಿ ಪರಮೇಶ್ವರ್ ಇತ್ತಿಚೆಗೆ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಕನಿಷ್ಠ ಮನವಿಯನ್ನೂ ಮಾಡದೇ, ಇಲಾಖಾ ಮಟ್ಟದಲ್ಲೇ ಇರತಕ್ಕಂತಹ ಸಾಂಸ್ಥಿಕ ಮಾಧ್ಯಮಗಳನ್ನು ಬಳಸದೇ ಪೊಲೀಸ್ ಮ್ಯಾನುವಲ್ ನಲ್ಲಿ ಅವಕಾಶ ಇಲ್ಲದ, ಸಂವಿಧಾನ ವಿರೋಧಿಯಾಗಿ ಪೊಲೀಸರು ದಿಡೀರನೆ ಪ್ರತಿಭಟನೆ ನಡೆಸುತ್ತಿರೋದ್ಯಾಕೆ ಎಂಬುದರ ಬಗ್ಗೆ ಸಂಶಯಗಳು ಮೂಡಲಾರಂಭಿಸಿದೆ.

ಪೊಲೀಸರ ಪ್ರತಿಭಟನೆಗಿಂತಲೂ ಆತಂಕ ಸೃಷ್ಟಿಸಿರುವುದು ಪ್ರಜಾಸತ್ತಾತ್ಮಕ ಚಳುವಳಿಗಾರರು ಮತ್ತು ಯುವ ಸಾಹಿತಿಗಳ ಮಾತುಗಳು. “ಪೊಲೀಸರು ಹಲವು ಬಾರಿ ಜನಸಾಮಾನ್ಯರ ಮೇಲೆ ನಡೆಸುವ ಹಲ್ಲೆ ದೌರ್ಜನ್ಯಗಳಿಗೆ ಅವರ ಮೇಲಿರುವ ಒತ್ತಡಗಳೇ ಕಾರಣ….” ಈ ರೀತಿಯ ಅಭಿಪ್ರಾಯಗಳನ್ನು ತೇಲಿಸಲಾಗುತ್ತಿದೆ. ಇಂತಹ ವಾದಗಳು ತಮ್ಮ ಕುಟುಂಬದಿಂದ ದೂರ ಇರುವ ಸೈನಿಕರು ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಅತ್ಯಾಚಾರಗಳನ್ನು ನಡೆಸುವುದು ಸಹಜ ಎಂಬಷ್ಟೇ ಆಪಾಯಕಾರಿ.

ಕರ್ನಾಟಕ ಪೊಲೀಸರ ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳು ಒಂದೆರಡಲ್ಲ. ಈಗಲೂ ಪ್ರತೀ ಠಾಣೆಯ ಲಾಕಪ್ಪಿನಲ್ಲಿ ನೋಡಿದರೆpolice-brutality ಬರಿಮೈಯ್ಯಲ್ಲಿ, ಕೇವಲ ಚೆಡ್ಡಿ ಹಾಕಿಕೊಂಡು ಕುಳಿತಿರುವ ನ್ಯಾಯಾಂಗದ ಮುಂದೆ ಹಾಜರುಪಡಿಸದ ಆರೋಪಿಗಳು ಕಂಡುಬರುತ್ತಾರೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಿವಿಲ್ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ವ್ಯಾಪ್ತಿ ಮೀರಿ ಮನೆಯ ಯಜಮಾನನ್ನು ಬಂಧಿಸಿ ಆತನ ಮಗನ ಎದುರೇ ವಿವಸ್ತ್ರಗೊಳಿಸಿ, ಮರ್ಮಾಂಗಕ್ಕೆ ಸೂಜಿ ಹಾಕಿಸಿದ್ದು ಯಾವ ಮೇಲಾಧಿಕಾರಿಯಾಗಲೀ, ಐಪಿಎಸ್ ಅಧಿಕಾರಿಯಾಗಲೀ ಅಲ್ಲ. ದನದ ವ್ಯಾಪಾರ ಮಾಡುತ್ತಿದ್ದವರ ಜೊತೆ ಕೆಲಸ ಮಾಡುತ್ತಿದ್ದ ಕಬೀರ್ ನನ್ನು ಗುಂಡು ಹಾಕಿ ಸಾಯಿಸಿದ್ದು ಇದೇ ತಳ ಹಂತದ ಪೊಲೀಸ್ ಸಿಬಂದಿಗಳು. ಮೊನ್ನೆ ಮೊನ್ನೆ ಸಿಎಂ ಮನೆಗೆ ದೂರು ಕೊಡಲು ಬಂದ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ಠಾಣೆಯಲ್ಲಿ ದೌರ್ಜನ್ಯ ಎಸಗಿದ್ದು ಕುಮಾರಸ್ವಾಮಿ ಹೇಳುವಂತೆ ಸಿಎಂ ಸಿದ್ದರಾಮಯ್ಯ ಅಲ್ಲ; ಯಾವ ಮೇಲಾಧಿಕಾರಿಯ ಅಥವಾ ರಾಜಕಾರಣಿಯ ಕುಮ್ಮಕ್ಕೂ ಇಲ್ಲದ ಪೊಲೀಸ್ ಸಿಬಂದಿಗಳು! ಇಂತಹ ಸಾವಿರ ಸಾವಿರ ಪ್ರಕರಣಗಳು, ನಮ್ಮ ಮನೆಯ, ನೆರೆ ಮನೆಯ ವ್ಯಕ್ತಿಗಳಿಗಾದ ಅನ್ಯಾಯಗಳು ಕೇವಲ ಪೊಲೀಸ್ ಸಿಬಂದಿಗಳ ಅಮಾನವೀಯತೆಯಿಂದ ಕಾನೂನುಬಾಹಿರ ವರ್ತನೆಯಿಂದ ಆಗಿವೆಯೇ ಹೊರತು ಮೇಲಾಧಿಕಾರಿಗಳು ಮತ್ತು ರಾಜಕರಣಿಗಳ ಕುಮ್ಮಕ್ಕಿನಿಂದಲೋ ಅಥವಾ ವೇತನ ತಾರತಮ್ಯ, ರಜಾ ನಿರಾಕರಣೆಯಿಂದ ಅಲ್ಲ ಎಂಬುದಂತೂ ಸತ್ಯ.

ಹಾಗೆಯೇ ಈಗ ಪೊಲೀಸರ ಪ್ರತಿಭಟನೆಯನ್ನು ಬೆಂಬಲಿಸುವವರು ಎಡಪಂಥೀಯ ಹೋರಾಟಗಾರರು ಹೇಳುತ್ತಿರುವ “ನಾವು ಪ್ರತಿಭಟನೆ ಮಾಡುವ ಸಂದರ್ಭ ನಿಮ್ಮಿಂದ ಎಷ್ಟೇ ಹಲ್ಲೆಗೊಳಗಾದರೂ ನಿಮ್ಮ ಪ್ರತಿಭಟನೆಯನ್ನು ಬೆಂಬಲಿಸುತ್ತಿದ್ದೇವೆ” ಎಂಬ ಮಾತುಗಳೇ ಸಿನಿಕತನದ್ದು. ದಲಿತ ಅಥವಾ ಮುಸ್ಲೀಮನೊಬ್ಬ ತನ್ನ ಜಾತಿ ಧರ್ಮದ ಕಾರಣಕ್ಕಾಗಿಯೋ, ಕೇಳುವವರಿಲ್ಲ ಎನ್ನುವ ಕಾರಣಕ್ಕೋ ಲಾಕಪ್ಪಿನಲ್ಲಿ ಚಡ್ಡಿಯಲ್ಲಿ ಕುಳಿತು ಹಲ್ಲೆಗೊಳಗಾಗುವುದಕ್ಕೂ, ದಲಿತ ಮಹಿಳೆಯರು ವಿವಸ್ತ್ರಕ್ಕೊಳಗಾಗುವುದಕ್ಕೂ, ರಾಜಕೀಯ ಉದ್ದೇಶದ ಪ್ರತಿಭಟನೆಯ ಸಂದರ್ಭದ ಲಾಠಿಚಾರ್ಜ್ನ ಹಲ್ಲೆಗೂ ವ್ಯತ್ಯಾಸ ಇದೆ. ಕೇವಲ ಮುಸ್ಲೀಮರೆನ್ನುವ ಕಾರಣಕ್ಕೆ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಸಿಲುಕಿಸಲ್ಪಟ್ಟು ಹತ್ತು ವರ್ಷ ಜೈಲಿನಲ್ಲಿ ಕೊಳೆತು ಮೊನ್ನೆ ಮೊನ್ನೆಯಷ್ಟೇ ಬಿಡುಗಡೆಯಾದ ಒಂಬತ್ತು ದನಿಯಿಲ್ಲದ ನಿರಪರಾಧಿಗಳ ಜೈಲುವಾಸವೂ ರಾಜಕೀಯ ಪಕ್ಷಗಳು ಸಂಘಸಂಸ್ಥೆಗಳು ನಡೆಸುವ ಜೈಲ್ ಭರೋ ಆಂದೋಲನಗಳು ಏಕರೂಪದ್ದೇ? ಇದು ಸಮಸ್ಯೆಯನ್ನು ಸರಳೀಕರಿಸುವ ಪ್ರಯತ್ನವಲ್ಲವೇ?

ಅಷ್ಟಕ್ಕೂ ಪೊಲೀಸರ ಬೇಡಿಕೆಗಳ ಬಗ್ಗೆ ಯಾವ ಆಕ್ಷೇಪಗಳೂ ಇಲ್ಲ. ಸೌಲಭ್ಯಗಳನ್ನು ಹೊಂದಿರುವವರು ಮತ್ತಷ್ಟೂ ಸೌಲಭ್ಯಗಳು ಬೇಕು ಎನ್ನುವುದಕ್ಕೆ ಯಾರflowers in gun ಆಕ್ಷೇಪವೂ ಇಲ್ಲ. ಪೋಲಿಸರೇ ಖುದ್ದು ತಮಗೆ ಅದು ಬೇಕು ಇದು ಬೇಕು, ನಮ್ಮ ಸೇವಾಸ್ಥಿತಿ ಹಾಗಿರಬೇಕು ಹೀಗಿರಬೇಕು ಅನ್ನಲಿ. ಹಾಗೆಂದು ಜವಾಬ್ಧಾರಿಯುತ ರಾಜಕೀಯ ಪಕ್ಷಗಳು ಅಥವಾ ಸಾಮಾಜಿಕ ಕಾರ್ಯಕರ್ತರು “ಪೊಲೀಸರಿಗೆ ಮೂಲಭೂತ ಸೌಲಭ್ಯಗಳು ಇಲ್ಲದ ಕಾರಣಕ್ಕಾಗಿ ಅವರು ದೌರ್ಜನ್ಯ ಎಸಗುತ್ತಾರೆ” ಎಂಬಂತಹ ಮಾತುಗಳನ್ನು ಆಡುವುದು, “ಅವರೂ ಮನುಷ್ಯರೇ” ಎಂದು ಘೋಷಣೆ ಕೂಗುವುದು ಅನುಚಿತ. ಅವರ ಸದ್ಯದ ತುರ್ತು ಪೋಲಿಸ್ ವ್ಯವಸ್ಥೆಯನ್ನು ಹೆಚ್ಚು ಹೆಚ್ಚು ಮಾನವೀಯಗೊಳಿಸುವುದು ಹಾಗು ಅದನ್ನು ಪೂರ್ಣವಾಗಿ ಸಂವಿಧಾನ ಮತ್ತು ನೆಲದ ಕಾನೂನಿನ ಪರಿಧಿಗೆ ತರುವ ಕೆಲಸವಾಗಿದೆ. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಮಾರ್ಗದರ್ಶಿ ಸೂತ್ರಗಳನ್ನು ಅನುಷ್ಠಾನ ಮಾಡುವಂತೆ ಪೋಲಿಸ್ ಇಲಾಖೆ ಹಾಗೂ ಸರಕಾರಗಳನ್ನು ಒತ್ತಾಯಿಸುವ ಕಾರ್ಯವನ್ನು ನಾವು ಮೊದಲು ಮಾಡಬೇಕಾಗಿದೆ. ಮಾನವ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಮತ್ತು ರಾಷ್ಟೀಯ ಮಾನವ ಹಕ್ಕು ಆಯೋಗಗಳು ಸಲ್ಲಿಸಿದ ಶಿಫಾರಸ್ಸುಗಳ ಜಾರಿಗೆ ಒತ್ತಡ ಸೃಷ್ಟಿಸುವುದು ಎಡಪಂಥೀಯ ಹೋರಾಟಗಾರರ ಮೊದಲ ಕಾರ್ಯವಾಗಬೇಕೇ ಹೊರತು ಪೋಲಿಸರ ಆಂತರಿಕ ಪ್ರತಿಭಟನೆಗಳಲ್ಲಿ ಭಾಗಿಯಾಗುವುದಲ್ಲ.

3 thoughts on “ಪೋಲಿಸರೇ ಸಂತ್ರಸ್ತರಾಗುವ ಅಪಾಯ: ಎಡಪಂಥೀಯರ ಕೊಡುಗೆ

  1. NagarajaM

    Police force is next only to Army in security of borders and home-monetarily they are better placed than other civil servants both in centre and state, their duty demands risk factors, all aspects are taken care of monetarily. within the orgn. discipline is foremost, personnel need not be tongue tied- Home Minister has to address this situation with humanity and consideration.

    Reply

Leave a Reply

Your email address will not be published. Required fields are marked *