Daily Archives: May 30, 2016

ಪ್ರಭುತ್ವ, ಪೋಲಿಸ್ ವ್ಯವಸ್ಥೆ ಮತ್ತು ಪ್ರತಿಭಟನೆ


– ಶ್ರೀಧರ್ ಪ್ರಭು


ಪತ್ರಕರ್ತ ನವೀನ ಸೂರಿಂಜೆ ಅವರು ವರ್ತಮಾನದಲ್ಲಿ ಬರೆದ ಪೋಲಿಸರೇ ಸಂತ್ರಸ್ತರಾಗುವ ಅಪಾಯ: ಎಡಪಂಥೀಯರ ಕೊಡುಗೆ ಲೇಖನದಲ್ಲಿ ಪೋಲಿಸ್ ಪ್ರತಿಭಟನೆಯ ವಿಚಾರವನ್ನು ತುಂಬಾ ಅರ್ಥಪೂರ್ಣವಾಗಿ ವಿಶ್ಲೇಷಿಸಿ ಬರೆದಿದ್ದಾರೆ. ಅವರೆಲ್ಲಾ ವಿಚಾರಗಳಿಗೂ ಸಂಪೂರ್ಣ ಸಹಮತಿ ಸೂಚಿಸುತ್ತಾ, ನನ್ನ ಕೆಲವು ಮಾತುಗಳನ್ನು ಸೇರಿಸುತ್ತಿದ್ದೇನೆ.

೧೯೧೭ ರಲ್ಲಿ ‘ಪ್ರಭುತ್ವ ಮತ್ತು ಕ್ರಾಂತಿ’ ಎಂಬ ತಮ್ಮ ಅಗ್ರ ಲೇಖದಲ್ಲಿ ಲೆನಿನ್ ಹೇಳುತ್ತಾರೆ: “A standing army and police are the chief instruments of state power.” ಪೋಲಿಸ್ ವ್ಯವಸ್ಥೆ ಪ್ರಭುತ್ವದ ಪ್ರಮುಖ ಅಸ್ತ್ರ. ಪೋಲೀಸರ ಪರವಾಗಿ ರಾಜಕೀಯ ಪಕ್ಷ ಮತ್ತು ಸಂಘಟನೆಗಳು ಜೊತೆಗೂಡಿ ಸೇನೆಯ ಅಥವಾ ಪೋಲೀಸರ ‘ಮುಕ್ತಿಗೆ’ ನಿಲ್ಲುವುದು ಅತ್ಯಂತ ದೊಡ್ಡ ಅಭಾಸ. ಪೇದೆಗಳು, ಕೆಳಹಂತ, ಮೇಲು ಹಂತ ಎಂದೆಲ್ಲಾ ಕೂದಲು ಸೀಳಿ ವಿಂಗಡಣೆ ಮಾಡುವುದು ಪ್ರಭುತ್ವದ ಒಂದು ಸಮಷ್ಟಿಪೂರ್ಣ ಸ್ವರೂಪವನ್ನು ಕೈ, ಕಾಲು, ತಲೆ ಎಂದೆಲ್ಲಾ ವಿಂಗಡಣೆ ಮಾಡುವ ರೀತಿ ಅನರ್ಥಪೂರ್ಣವಾದದ್ದು.

ನವೀನ್ ಸೂರಿಂಜೆ ಅವರು ಹೇಳುವ ಹಾಗೆ ಇಂದು ಧರ್ಮ ಮತ್ತು ಜಾತಿಯನ್ನು ಬಳಸಿ ಸಮಾಜದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವ ‘ಸಾಮಾಜಿಕ ಪೋಲಿಸ’ ರೊಂದಿಗೆ ಪ್ರಭುತ್ವದ ಪೊಲೀಸರು ಒಟ್ಟು ಸೇರಿದ್ದಾರೆ. ಹೀಗಾಗಿ, ಪೋಲೀಸರ ಬಗೆಗಿನ ಸಹಾನುಭೂತಿ ಪ್ರಭುತ್ವದ ಕುರಿತ ಸಹಾನುಭೂತಿಯೇ.

ಸಮಾಜದ ಎಲ್ಲ ವರ್ಗ ವಿಭಾಗಗಳಿಗೂ ಸಂಘಟನೆಯ ಹಕ್ಕಿದೆ. ನಿಜ. Police Forces (Restriction of Rights) Act, 1966 ಎಂಬ ಕಾಯಿದೆಯcaste-riot-police ಪ್ರಕಾರ ಪೊಲೀಸರು ಯಾವುದೇ ರಾಜಕೀಯ ಅಥವಾ ಕಾರ್ಮಿಕ ಸಂಘಟನೆಯ ಸದಸ್ಯರಾಗಲು ಕೇಂದ್ರ ಸರಕಾರದ ಅನುಮತಿ ಅವಶ್ಯಕ. ಕಾನೂನಿನಲ್ಲಿ ಇವರು ಸಂಘಟನೆಗಳನ್ನು ಸ್ಥಾಪಿಸಬಹುದು. ಆದರೆ ಈ ಸಂಘಟನೆಗೆ ಇಲಾಖೆ ಮಾನ್ಯತೆ ಕೊಟ್ಟಿರಬೇಕು. ಇಷ್ಟು ಬಿಟ್ಟರೆ ಪೊಲೀಸರಿಗೆ ಮುಷ್ಕರ, ಪ್ರತಿಭಟನೆ ಇತ್ಯಾದಿ ನಡೆಸುವ ಹಕ್ಕಿಲ್ಲ. ಈ ಕಾಯಿದೆ ಇಂದು ಎಡಪಂಥೀಯ ಆಡಳಿತವಿದ್ದ ರಾಜ್ಯಗಳಲ್ಲೂ ಜಾರಿಯಲ್ಲಿದೆ. ಇದನ್ನು ಬದಲಾಯಿಸಲು ಯಾವ ಸರಕಾರಗಳೂ ಪ್ರಯತ್ನಿಸಿಲ್ಲ. ಎಡ ಪಕ್ಷಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಪೋಲಿಸ್ ವ್ಯವಸ್ಥೆಯನ್ನು ಮಾನವೀಯವಾಗಿಸಲು ತಮ್ಮ ಸರಕಾರದ ಹಂತದಲ್ಲಿ ಏನೇನು ಕ್ರಮ ಕೈಗೊಂಡಿದ್ದಾರೆ ಮೊದಲು ಸ್ಪಷ್ಟಪಡಿಸಬೇಕು. ಒಂದು ವೇಳೆ ಈ ರೀತಿ ಪೋಲಿಸರ ಪ್ರತಿಭಟನೆ ಎಡ ಪಕ್ಷಗಳು ಆಡಳಿತವಿರುವ ಕೇರಳದಲ್ಲಿ ನಡೆದರೆ ಇವರ ನಿಲುವೇನು ಎನ್ನುವುದನ್ನೂ ಸ್ಪಷ್ಟಪಡಿಸಬೇಕು.

ಬಂಡವಾಳಷಾಹಿ, ಕೋಮುವಾದಿ ಮತ್ತು ಮನುವಾದಿ ವ್ಯವಸ್ಥೆಯನ್ನು ಕಾಪಾಡಲು ಪೋಲಿಸ್ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಪೋಲಿಸ್ ವ್ಯವಸ್ಥೆ ಕೇವಲ ಒಂದು ನಿರ್ಜೀವ ಯಂತ್ರವಲ್ಲ. ಈ ಬಂಡವಾಳಷಾಹಿ, ಕೋಮುವಾದಿ ಮತ್ತು ಮನುವಾದಿ ವ್ಯವಸ್ಥೆಯನ್ನು ಅಂತರಿಕವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ಪೋಲಿಸ್ ವ್ಯವಸ್ಥೆ ಪ್ರಯತ್ನಪೂರ್ವಕವಾಗಿ ಗಟ್ಟಿಗೊಳಿಸುತ್ತಿದೆ. ಇಂತಹ ಪ್ರಭುತ್ವವಾದಿ ಶಕ್ತಿಗಳನ್ನು ಪ್ರತಿನಿಧಿಸುವ ಮತ್ತು ಪೋಷಿಸುವ ಪೋಲೀಸರನ್ನು ಬೆಂಬಲಿಸಲು ಹೊರಟರೆ ಪ್ರಭುತ್ವವಾದಿ ಶಕ್ತಿಗಳಿಗೆ ಬಲಬರುವುದು.

ಪೋಲಿಸ್ ವ್ಯವಸ್ಥೆಯನ್ನು ‘ಮಾನವೀಯಗೊಳಿಸಲು’ ಒಂದು ಪಕ್ಷ ಮತ್ತು ರಾಜಕೀಯ ಪ್ರೇರಿತ ಸಂಘಟನೆಗಳ ರಾಜಕೀಯ ಪ್ರತಿಭಟನೆಗಳು ಹೇಗೆ ಸಹಕಾರಿಯಾದಾವು ಎಂಬ ಬಗೆಗೆ ಗಂಭೀರ ಭಿನ್ನಾಭಿಪ್ರಾಯಗಳಿವೆ. ಪೋಲಿಸ್ ವ್ಯವಸ್ಥೆಯ ನಡುವೆಯೇ ಮನುವಾದಿ ಮತ್ತು ಪ್ರಭುತ್ವದ ಪರ ರಾಜಕೀಯ ಮತ್ತಷ್ಟು ಬೇರೂರಲು ಇದು ಕಾರಣವಾಗುತ್ತದೆ.

ಇಂದು ಕರ್ನಾಟಕದಲ್ಲಿ ಪೋಲಿಸ್ ಮುಷ್ಕರಕ್ಕೆ ನೇತೃತ್ವ ಕೊಡಲು ಹೊರಟಿರುವ ಹಿಂದಿನ ಶಕ್ತಿಗಳ ಬಗೆಗೆ ಅನೇಕ ಅನುಮಾನಗಳಿವೆ. indian-policeಇವರೊಂದಿಗೆ ಎಡ ಮತ್ತು ಪ್ರಜಾಸತ್ತಾತ್ಮಕ ಸಂಘಟನೆಗಳು ಕೈಜೋಡಿಸುವ ಔಚಿತ್ಯವನ್ನು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಇಂದು ಈ ಪ್ರತಿಭಟನೆಯ ನೇತೃತ್ವವನ್ನು ವಹಿಸುತ್ತಿರುವ ಶಕ್ತಿಗಳ ಜೊತೆಗೆ ಎಡ ಮತ್ತು ಅವರ ಸಾಮೂಹಿಕ ಸಂಘಟನೆಗಳ ರಾಜಕೀಯ ಅಥವಾ ತಾತ್ವಿಕ ಸಹಮತಿಯಿದೆಯೇ? ಇದು ಬಹು ಮುಖ್ಯ ಪ್ರಶ್ನೆ.

ಪೊಲೀಸರು ಮುಷ್ಕರಕ್ಕೆ ಇಳಿದರೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ದುರ್ಬಲವರ್ಗಗಳ ಮೇಲಿನ ದೌರ್ಜನ್ಯ ಹೆಚ್ಚಾಗುವುದರಲ್ಲಿ ಸಂಶಯವೇ ಇಲ್ಲ. ದುಡುಕಿ ನಿರ್ಧರಿಸುವ ಮುನ್ನ ಇದಕ್ಕೆ ಪರ್ಯಾಯಗಳನ್ನು ಹುಡುಕದೇ ಇರಕೂಡದು.

ನವೀನ ಸೂರಿಂಜೆ ಅವರು ಅಭಿಪ್ರಾಯ ಪಡುವಂತೆ  “ಸರ್ವೋಚ್ಚ ನ್ಯಾಯಾಲಯದ ಮಾರ್ಗದರ್ಶಿ ಸೂತ್ರಗಳನ್ನು ಅನುಷ್ಠಾನ ಮಾಡುವಂತೆ ಪೋಲಿಸ್ ಇಲಾಖೆ ಹಾಗೂ ಸರಕಾರಗಳನ್ನು ಒತ್ತಾಯಿಸುವ ಕಾರ್ಯವನ್ನು ನಾವು ಮೊದಲು ಮಾಡಬೇಕಾಗಿದೆ. ಮಾನವ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಮತ್ತು ರಾಷ್ಟೀಯ ಮಾನವ ಹಕ್ಕು ಆಯೋಗಗಳು ಸಲ್ಲಿಸಿದ ಶಿಫಾರಸ್ಸುಗಳ ಜಾರಿಗೆ ಒತ್ತಡ ಸೃಷ್ಟಿಸುವುದು ಎಡಪಂಥೀಯ ಹೋರಾಟಗಾರರ ಮೊದಲ ಕಾರ್ಯವಾಗಬೇಕೇ ಹೊರತು ಪೋಲಿಸರ ಆಂತರಿಕ ಪ್ರತಿಭಟನೆಗಳಲ್ಲಿ ಭಾಗಿಯಾಗುವುದಲ್ಲ.”