ಕಡಿಮೆ ಮಕ್ಕಳ ಶಾಲೆಗಳು: ಕೇವಲ ಭಾವನಾತ್ಮಕವಾಗಿ ನೋಡೋದು ಬೇಡ

– ಪ್ರಸಾದ್ ರಕ್ಷಿದಿ

ಈಗ ಶಾಲೆಗಳು ಪ್ರಾರಂಭವಾಗುವ ಸಮಯ. ಎಂದಿನಂತೆ ಸರಕಾರಿ ಶಾಲೆಗಳ ದುಸ್ಥಿತಿ, ಖಾಸಗಿ ಶಾಲೆಗಳ ಸುಲಿಗೆ, ತಾರತschool-3ಮ್ಯ ನೀತಿ, ಆರ್.ಟಿ.ಇ. ಗೆ ಸ್ಪಂದಿಸದಿರುವುದು. ಹಳ್ಳಿ ಮಕ್ಕಳ ಸಮಸ್ಯೆಗಳು ಎಲ್ಲವೂ ಚರ್ಚೆಗೆ ಬರುತ್ತವೆ. ಒಂದಿಷ್ಟು ಪ್ರತಿಭಟನೆ, ಭಾಷಣಗಳು, ಅಧಿಕಾರಸ್ಥರ ಹೇಳಿಕೆ ವಾದ-ವಿವಾದ, ವ್ಯಂಗ್ಯ ,ತಮಾಷೆಗಳೆಲ್ಲ ಮುಗಿದು ಯಥಾಸ್ಥಿತಿ ಮುಂದುವರಿಯುತ್ತದೆ. ಸರ್ಕಾರಿ ಶಾಲೆಗಳಲ್ಲಿ ಓದುವವರ ಸಂಖ್ಯೆ ಮತ್ತು ಹೊಸದಾಗಿ ದಾಖಲಾಗುವವರ ಸಂಖ್ಯೆ ಎರಡೂ ಇಳಿಯುತ್ತಿದೆ.

 

ಈಗಲೂ ಎಲ್ಲ ಕೊರತೆಗಳ ನಡುವೆಯೂ ಹಲವು ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿ ಕೆಲಸ ಮಾಡುತ್ತಿವೆ. ಕೆಳಮಧ್ಯಮ ಮತ್ತು ಬಡಜನರ ಮಕ್ಕಳೇ ಹೆಚ್ಚಾಗಿರುವ ಶಾಲೆಗಳ ಫಲಿತಾಂಶ ಮತ್ತು ಇತರ ಚಟುವಟಿಕೆಗಳೂ ಉತ್ತಮವಾಗಿವೆ. ಇದಕ್ಕೆ ಅಲ್ಲಿರುವ ಶಿಕ್ಷಕರು ಮತ್ತು ಪ್ರದೇಶದ- ಊರಿನ ಆಸಕ್ತ ಜನರೂ ಕಾರಣರಿರುತ್ತಾರೆ. ಆದರೆ ಈ ರೀತಿಯ ಶಾಲೆಗಳ ಸಂಖ್ಯೆಯೂ ಇಳಿಮುಖವಾಗುತ್ತಿದೆ.

 

ಇದಕ್ಕೆ ಹಲವಾರು ಕಾರಣಗಳನ್ನು ಹೇಳುತ್ತ ಹೋಗಬಹುದು. ಇಂದು ಇಡೀ ಭಾರತದ ಸಾಮಾಜಿಕ –ಸಾಂಸ್ಕೃತಿಕ, ಕೃಷಿ , ಉದ್ಯಮ ಎಲ್ಲವೂ ಖಾಸಗೀಕರಣಕ್ಕೊಳಗಾಗಬೇಕಾದ ಒತ್ತಡದಲ್ಲಿರುವಾಗ, ಶಿಕ್ಷಣ ಕ್ಷೇತ್ರ ಮಾತ್ರ ಇದಕ್ಕೆ ಹೊರತಾಗುವುದು ಹೇಗೆ. ಇಡೀ ಭಾರತವೇ ಕೆಲವೇ ಜನರ ಖಾಸಗಿ ಆಸ್ತಿಯಾಗುವತ್ತ ಸಾಗುತ್ತಿರುವಾಗ. ಶಿಕ್ಷಣ ಕ್ಷೇತ್ರವನ್ನು ಅದಕ್ಕೆ ಹೊರತಾಗಿ ಉಳಿಸಿಕೊಳ್ಳುವದಕ್ಕೆ ಬೇಕಾದ ಇಚ್ಛಾಶಕ್ತಿನ್ನಾಗಲೀ, ಜನಬಲವನ್ನಾಗಲೀ ನಾವು ಹೊಂದಿದ್ದೇವೆಯೆ?

 

ಅಧಿಕಾರವನ್ನು ಗಳಿಸಿದ ಹೊಸರಲ್ಲಿ ನಮ್ಮೂರಿಗೆ ಬಂದಿದ್ದ ರಾಜ್ಯ ಶಿಕ್ಷಣ ಸಚಿವರು, ನಮ್ಮೂರ ಶಾಲೆಯನ್ನು ನೋಡಿ ಸಂತೋಷ ಪಟ್ಟರು. ಹಾಗೇ ಖಾಸಗಿಯಾಗಿ ಮಾತನಾಡುತ್ತ. “ಎಲ್ಲ ಶಾಲೆಗಳನ್ನು ಉತ್ತಮ ಪಡಿಸಲು ಆರುಸಾವಿರ ಕೋಟಿ ರೂಗಳ ಅವಶ್ಯಕತೆಯಿದೆ, ನಮ್ಮಲ್ಲಿ ಅಷ್ಟು ಹಣವಿಲ್ಲ. ಅದಕ್ಕಾಗಿ, ಕಾರ್ಪೋರೇಟ್ ವಲಯದ ಸಹಾಯ ಕೇಳಲಿದ್ದೇನೆ” ಎಂದರು. ಅವರ ಉದ್ದೇಶವೇನೋ ಒಳ್ಳೆಯದೇ, ಆದರೆ ಇದೊಂದು ರೀತಿ ದೇಶವನ್ನೇ ಇನ್ನೊಬ್ಬನಿಗೆ ನೀಡಿ ಹತ್ತುಎಕರೆ ನೆಲವನ್ನು ಬೇಡಿದಂತಲ್ಲವೇ?

 

ಆಗಲೇ ಅವರು ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ಮುಚ್ಚಿ ಆ ಮಕ್ಕಳಿಗೆ ವಾಹನದ ವ್ಯವಸ್ಥೆ ಮಾಡಿ ಒಂದು ಕೇಂದ್ರದಲ್ಲಿ ಶಾಲೆ ನಡೆಸುವ ಯೋಜನೆಯನ್ನು ಹೇಳಿದರು. ವಾಸ್ತವದಲ್ಲಿ ಇದು ಅವರ ಯೋಜನೆಯೇನಲ್ಲ. ಹಿಂದಿನ ಸರಕಾರವೂ ಈ ಮಾತನ್ನು ಹೇಳಿತ್ತು. ಮತ್ತು ಬುದ್ದಿಜೀವಿಗಳ ವಲಯದಿಂದ ವಿರೋಧವೂ ವ್ಯಕ್ತವಾಗಿತ್ತು.

 

ಆದರೆ ನಮ್ಮಲ್ಲಿ ಅನೇಕರು, ಗ್ರಾಮೀಣ ಪ್ರದೇಶಗಳ ವಾಸ್ತವವನ್ನು ಅರಿಯದೆ ಬೇರೆ ಬೇರೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಖಾಸಗಿ ಶಾಲೆಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಈ ರೀತಿಮಾಡಲಾಗುತ್ತಿದೆ. ಇದು ಕನ್ನschool-1ಡ ವಿರೋಧಿ ಮತ್ತು ಜನವಿರೋಧಿ ನೀತಿ ಎನ್ನುತ್ತಿದ್ದಾರೆ. ಇಂದು ಬರಗೂರು ರಾಮಚಂದ್ರಪ್ಪ ಮೊದಲಾದವರೂ ಸರ್ಕಾರಿ ಶಾಲೆ ಮುಚ್ಚಲು ತಮ್ಮ ವಿರೋಧವಿದೆ ಎನ್ನುತ್ತಿದ್ದಾರೆ. ಇದೆಲ್ಲದರ ನಡುವೆ ಹಲವು ಶಾಲೆಗಳು ಮಕ್ಕಳಿಲ್ಲದೆ ಖಾಲಿ ಬಿದ್ದಿವೆ.

 

ಅನೇಕ ಬಾರಿ ಒಳ್ಳೆಯ ಉದ್ದೇಶದಿಂದ ಮಾಡಿದ ಕೆಲಸಗಳಿಂದ ಒಳ್ಳೆಯದೇ ಆಗುತ್ತದೆಯೆಂಬ ಖಾತರಿಯೇನೂ ಇಲ್ಲ. ಇದಕ್ಕೆ ಆರ್. ಟಿ.ಇ.ಕಾನೂನು ಒಂದು ಉದಾಹರಣೆ. ಅದನ್ನು ಬಳಸಿಕೊಂಡೇ ಹಲವಾರು ಗ್ರಾಮೀಣ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳ ಮಕ್ಕಳನ್ನು ತಮ್ಮತ್ತ ಸೆಳೆದುಕೊಂಡರು. ಅಲ್ಲಿ ಸೇರಿದ ನಂತರವಷ್ಟೇ ಪೋಷಕರಿಗೆ ಅಲ್ಲಿನ ಬೇನಾಮಿ ಸುಲಿಗೆ ತಿಳಿಯಿತು. ಅದಲ್ಲದೆ, ಅಲ್ಲಿ ಈ ಬಡ ಮಕ್ಕಳು ತಾರತಮ್ಯ ಮತ್ತು ಅವಮಾನಕ್ಕೊಳಗಾಗುತ್ತಿದ್ದರೂ ಸಹ ತಮ್ಮ ಮಕ್ಕಳು ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದಾರೆಂಬ ಹುಸಿ ಹೆಮ್ಮೆಯಲ್ಲಿ ಕುಳಿತರು. ಅತಿ ಪ್ರತಿಷ್ಟಿತ ಶಾಲೆಗಳು ಆರ್.ಟಿ.ಇ.ಕಾನೂನಿಗೆ ಯಾವ ಕಿಮ್ಮತ್ತನ್ನೂ ಕೊಡದೆ ಕುಳಿತಿವೆ. ಅವರನ್ನು ಮಾತನಾಡಿಸುವ, ಕೇಳುವ ಧೈರ್ಯ ಯಾವ ಸರ್ಕಾರಕ್ಕೂ ಇಲ್ಲ. ಯಾಕೆಂದರೆ ಈ ಶಾಲೆಗಳ ಮಾಲೀಕರು, ಸರ್ಕಾರದಲ್ಲೂ ಪಾಲುದಾರರು.(ಆರ್.ಟಿ.ಇ.ಕಾನೂನಿನಿಂದಲೇ ನಗರಗಳಲ್ಲೂ ಅನೇಕ ಸರ್ಕಾರಿ ಶಾಲೆಗಳು ಕಲಿಯುವವರಿಲ್ಲದೆ ಹೇಗೆ ಬರಿದಾಗಿವೆಯೆಂಬುದನ್ನು ಗೆಳೆಯರೊಬ್ಬರು ಇತ್ತೀಚೆಗೆ ಫೇಸ್ ಬುಕ್ ನಲ್ಲಿ ವಿವರಿಸಿದ್ದರು)

 

ಇನ್ನೀಗ ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ಮುಚ್ಚಿ ಒಂದೇ ಕೇಂದ್ರದಲ್ಲಿ ಶಾಲೆ ನಡೆಸುವ ಬಗ್ಗೆ. ಇದನ್ನು ನಾವು ಯಾವುದೇ ಪೂರ್ವಗ್ರಹವಿಲ್ಲದೆ ಯೋಚಿಸಿದರೆ ಒಳಿತು. ಹಿಂದೆಯೂ ಇದನ್ನು ಬುದ್ದಿಜೀವಿಗಳು ವಿರೋಧಿಸಿದ್ದರು ಇಂದೂ ವಿರೋಧಿಸುತ್ತಿದ್ದಾರೆ. ಆದರೆ ನಮ್ಮ ದೇಶದಂತಹ ಭೌಗೋಳಿಕವಾಗಿ ಸಾಮಾಜಿಕವಾ ಅಪಾರ ಭಿನ್ನತೆ, ವಿವಿಧತೆಗಳನ್ನು ಹೊಂದಿರು ನಾಡಿನಲ್ಲಿ ಅದು ಉದ್ಯೋಗ ಖಾತ್ರಿಯಿರಲಿ, ಅನ್ನಭ್ಯಾಗ್ಯವಾಗಿರಲಿ. ಅಥವಾ ಯಾವುದೇ ಸರ್ಕಾರದ ನೀತಿ ನಿಯಮಗಳಿರಲಿ ಪ್ರತಿಯೊಂದು ಪ್ರದೇಶಕ್ಕೂ ಅಲ್ಲಿನ ಅವಶ್ಯಕ್ಕೆ ತಕ್ಕಂತೆ ರೂಪಿಸುವುದು ಅಗತ್ಯ, ಹಾಗೆಯೇ ಅದನ್ನು ವಿರೋಧಿಸುವಾಗಲು ಸಾರಾಸಗಟಾಗಿ ವಿರೋಧಿಸದೆ. ತೊಂದರೆಯಾಗುವಲ್ಲಿ ಮಾತ್ರ ವಿರೋಧಿಸಬೇಕು. ಇಲ್ಲವಾದಲ್ಲಿ ನಮ್ಮ ಉದ್ದೇಶಕ್ಕೆ ವಿರುದ್ಧವಾದ ಫಲ ದೊರೆಯುತ್ತದೆ.

 

ಇದಕ್ಕೊಂದು ಉದಾಹರಣೆಯೆಂದರೆ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಇದು ಸುಮಾರು ಮೂವತ್ತು ವರ್ಷಗಳ ಹಿಂದೆ ಏಕೋಪಾದ್ಯಾಯ ಶಾಲೆಯಾಗಿ ಪ್ರಾರಂಭವಾಗಿ, ಇದೀಗ ಕೆಲವು ವರ್ಷಗಳಿಂದ, ನಮ್ಮತಾಲ್ಲೂಕಿನಲ್ಲಿ ಎರಡನೇ ಅತಿಹೆಚ್ಚು ಮಕ್ಕಳು ಕಲಿಯುತ್ತಿರುವ ಶಾಲೆಯಾಗಿದೆ. (ಕಳೆದ ಐದು ವರ್ಷಗಳಲ್ಲಿ ಇಲ್ಲಿಯೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸುತ್ತಲಿನ ಹಳ್ಳಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿದೆ). ಇದು ಪಂಚಾಯತ್ ಕೇಂದ್ರದಲ್ಲಿದ್ದು ಸುತ್ತ ಏಳುಗ್ರಾಮಗಳಲ್ಲಿ ಶಾಲೆಗಳಿವೆ, ಅವುಗಳಲ್ಲಿ ಮೂರು ಹಿರಿಯ ಪ್ರಾಥಮಿಕ ಶಾಲೆಗಳಾಗಿವೆ. ಅಲ್ಲಿ ಕಲಿಯುತ್ತಿರುವವರ ಸಂಖ್ಯೆ ಕ್ರಮವಾಗಿ ಏಳು, ಹನ್ನೊಂದು, ಇಪ್ಪತ್ಮೂರು, ಒಂಭತ್ತು, ಹದಿನೈದು, ನಲುವತ್ತೆರಡು, ಮತ್ತೊಂದರಲ್ಲಿ ಕೇವಲ ಮೂರು ಮಕ್ಕಳಿದ್ದಾರೆ. ಸರ್ಕಾರಿ ಕಾನೂನಿನಂತೆ ಈಗ ಏಕೋಪಾಧ್ಯಾಯ ಶಾಲೆ ಇರುವಂತಿಲ್ಲ. ಹಾಗಾಗಿ ಈ ಎಲ್ಲ ಶಾಲೆಗಳಲ್ಲೂ ಇಬ್ಬರು ಶಿಕ್ಷಕರು ಇರಲೇಬೇಕು (ಅದರೆ ಎಲ್ಲೂ ಇಲ್ಲ). ಕೇಂದ್ರ ಶಾಲೆಯಾದ ನಮ್ಮೂರ ಶಾಲೆಯಲ್ಲಿ ಸುಮಾರು ಇನ್ನೂರು ಮಕ್ಕಳಿದ್ದು ಆರು ಜನ ಶಿಕ್ಷಕರಿದ್ದಾರೆ. ಇವರಲ್ಲಿ ಒಬ್ಬರನ್ನೋ ಇಬ್ಬರನ್ನೋ ಪ್ರತಿದಿನ ಹತ್ತಿರದ ಶಾಲೆಗಳಿಗೆ ಡೆಪ್ಟೇಷನ್ ಮೇಲೆ ಕಳುಹಿಸುತ್ತಲೋ ಇನ್ನೊಬ್ಬರು ಶಾಲಾ ಸಂಬಂಧಿತ ಕೆಲಸ, ಮೀಟಿಂಗುಗಳಿಗೋ ಹೋಗುತ್ತಿರುತ್ತಾರೆ. (ಇದಲ್ಲದೆ ಅನೇಕ ಸರ್ಕಾರಿ ಕೆಲಸಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳುವುದು ನಡೆದೇ ಇದೆ) ಹೀಗಾಗಿ ಇತ್ತ ಆ ಶಾಲೆಗಳಲ್ಲೂ ಪಾಠವಿಲ್ಲ. ಕೇಂದ್ರ ಶಾಲೆಯಲ್ಲೂ ಪಾಠವಿಲ್ಲದ ಸ್ಥಿತಿಯಿದೆ.

 

ಹತ್ತಿರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದೆರಡು ತರಗತಿಗಳಿಗೆ ಮಕ್ಕಳೇ ಇಲ್ಲ. ಹೊಸ ಯೋಜನೆಯಂತೆ ಇವುಗಳಲ್ಲಿ ಐದು ಶಾಲೆಗಳು ಮುಚ್ಚಿಹೋಗುತ್ತವೆ. ಆದರೆ ಅಲ್ಲಿಂದ ಹೆಚ್ಚುವರಿಯಾಗಿ ಆರುಜನ ಶಿಕ್ಷಕರು ದೊರೆಯುತ್ತಾರೆ. ಆ ಹಳ್ಳಿಗಳಲ್ಲಿ ಈಗ ಹಲವು ಶಾಲಾಕೊಠಡಿಗಳು ಖಾಲಿಬಿದ್ದಿವೆ. ಮತ್ತು ಇನ್ನೂಹೆಚ್ಚುವರಿ ಕೊಠಡಿಗಳನ್ನು ಕಟ್ಟಿ ‘ಬಿಲ್’ ವಿದ್ಯೆಯನ್ನು ಪ್ರದರ್ಶಿಸುತ್ತಿದ್ದಾರೆ. (ಈ ಎಲ್ಲ ಹಳ್ಳಿಗಳಿಗೂ ಈಗ ಖಾಸಗಿ ಶಾಲೆಯ ವಾಹನಗಳು ಬರುತ್ತಿವೆ. ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತಿದ್ದಾರೆ) ಅಲ್ಲಿಯೇಶಾಲೆಯನ್ನು ಉಳಿಸಿಕೊಳ್ಳುವುದರಿಂದ ಯಾವುದೇ ಅನುಕೂಲವಿಲ್ಲ. ಇದನ್ನು ಭಾವನಾತ್ಮಕವಾಗಿ ನೋಡುವುದರಿಂದ ಖಂಡಿತ ಕನ್ನಡ ಶಾಲೆಗಾಗಲೀ. ಭಾಷೆಗಾಗಲೀ ಯಾವುದೇ ಪ್ರಯೋಜನವಿಲ್ಲ. ಒಂದುವೇಳೆ ಹತ್ತಿschool-4ದರಲ್ಲೆಲ್ಲೂ ಶಾಲೆಯೇ ಇಲ್ಲದಿದ್ದರೆ. ಮಕ್ಕಳ ಸಂಖ್ಯೆ ಕಡಿಮೆ ಇದ್ದರೂ ಆ ಶಾಲೆಯನ್ನು ಉಳಿಸಿಕೊಳ್ಳಬೇಕು.

 

ನಮ್ಮೂರು ಮಲೆನಾಡಿನ ಹಳ್ಳಿ . ಇಲ್ಲಿಗೆ ಅನ್ವಯಿಸಿದ್ದೇ ಇನ್ನೊಂದೆಡೆಗೆ ಅನ್ವಯಿಸಬೇಕಾಗಿಲ್ಲ. ಆದ್ದರಿಂದ ಇದನ್ನು ಭಾವನಾತ್ಮಕವಾಗಿ ಭಾಷಾ ಸಮಸ್ಯೆಯಾಗಿ ನೋಡದೆ. ಆಡಳಿತಾತ್ಮಕವಾಗಿ ಹೆಚ್ಚು ಪರಿಣಾಮಕಾರಿಯಾಗಿ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿ ನೋಡಬೇಕು. ಇಲ್ಲವಾದಲ್ಲಿ ನಾವು ಬಯಸಲಿ ಬಿಡಲಿ ಸರಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂಲೇ ಮುಚ್ಚುವ ಪ್ರಸಂಗ ಬರುತ್ತದೆ.

2 thoughts on “ಕಡಿಮೆ ಮಕ್ಕಳ ಶಾಲೆಗಳು: ಕೇವಲ ಭಾವನಾತ್ಮಕವಾಗಿ ನೋಡೋದು ಬೇಡ

  1. Ananda Prasad

    ತಮ್ಮೂರಿನ ಸರ್ಕಾರಿ ಶಾಲೆಗಳು ಉತ್ತಮವಾಗಿದ್ದರೂ ಹಣವಂತರು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುವುದನ್ನು ಪ್ರತಿಷ್ಠೆಯ ವಿಷಯವಾಗಿ ತಿಳಿದುಕೊಂಡಿದ್ದಾರೆ. ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಿದರೆ ಸಮಾಜದಲ್ಲಿ ತಮ್ಮ ಪ್ರತಿಷ್ಠೆ ಕಡಿಮೆ ಆಗುತ್ತದೆ ಎಂಬುದು ಇಂಥವರ ತಪ್ಪು ತಿಳುವಳಿಕೆಯಾಗಿದೆ. ಹಲವಾರು ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂಥ ಉತ್ತಮ ಫಲಿತಾಂಶವನ್ನು ದಾಖಲಿಸಿವೆ. ದೂರದ ಖಾಸಗಿ ಶಾಲೆಗಳಿಗೆ ಕಳುಹಿಸಿಯೂ ಹಣವಂತರ ಮಕ್ಕಳು ಸನಿಹದ ಸರ್ಕಾರಿ ಶಾಲೆಗಳ ಮಕ್ಕಳಿಗಿಂಥ ಕಡಿಮೆ ಅಂಕಗಳನ್ನು ಪಡೆದುಕೊಳ್ಳುತ್ತಿರುವುದು ಕಂಡುಬರುತ್ತಿದೆ. ಕಲಿಯುವ ಮಕ್ಕಳಿಗೆ ಯಾವ ಶಾಲೆಯಾದರೇನು ಪ್ರತಿಭೆ ಇರುವ ಮಕ್ಕಳು ಎಲ್ಲೇ ಕಲಿತರೂ, ಯಾವ ಶಾಲೆಗೆ ಹೋದರೂ ಉತ್ತಮ ಅಂಕಗಳನ್ನು ಗಳಿಸಿಯೇ ಗಳಿಸುತ್ತಾರೆ. ಸಮಾಜದ ಹಣವಂತರಿಗೆ ಆಡರಿದ ಪ್ರತಿಷ್ಠೆಯ ಹುಚ್ಚನ್ನು ಬಿಡಿಸುವ ಕೆಲಸ ಇಂದು ಆಗಬೇಕಾಗಿದೆ.

    ಎಲ್ಲಾ ಮಕ್ಕಳಲ್ಲೂ ಒಂದೇ ರೀತಿಯ ಕಲಿಕೆಯ ಪ್ರತಿಭೆ ಇರುವುದಿಲ್ಲ. ಎಲ್ಲರೂ ಸಮಾಜದಲ್ಲಿ ಇಂಜಿನಿಯರ್, ಡಾಕ್ಟರ್, ಚಾರ್ಟರ್ಡ್ ಅಕೌಂಟೆ೦ಟ್, ಐ.ಎ. ಎಸ್. ಆಗಬೇಕೆಂದು ಬಯಸುವುದು ಅಥವಾ ಹಾಗೆ ಆದವರು ಮಾತ್ರವೇ ಶ್ರೇಷ್ಟರು ಎಂದು ತಿಳಿದುಕೊಳ್ಳುವ ಸಮಾಜ ರೋಗಗ್ರಸ್ಥವಾಗಿರುವುದರ ಲಕ್ಷಣ. ಇಂಥ ಸಮಾಜಕ್ಕೆ ಚಿಕಿತ್ಸೆಯ ಅಗತ್ಯ ಇದೆ. ಖಾಸಗಿ ಶಾಲೆಗಳ ಮಕ್ಕಳು ದೇಶದ ಬಗ್ಗೆ ಹಾಗೂ ತಮ್ಮ ಸುತ್ತಲಿನ ಸಮಾಜದ ಉನ್ನತಿಯ ಬಗ್ಗೆ ಚಿಂತಿಸುವ ಮನೋಭಾವವನ್ನೇ ಕಳೆದುಕೊಂಡು ಹಣ ಮಾಡುವ ಯಂತ್ರಗಳಾಗಿ ರೂಪುಗೊಳ್ಳುತ್ತಿರುವುದು ಇಂದು ಕಂಡುಬರುತ್ತಿರುವ ವಿದ್ಯಮಾನವಾಗಿದೆ. ಇಂಥ ಸಮಾಜವನ್ನು ಹೊಂದಿರುವ ದೇಶ ಸಮತೋಲಿತ ಅಭಿವೃದ್ಧಿ ಹೊಂದಲು ಸಾಧ್ಯವೇ ಇಲ್ಲ.

    ಖಾಸಗಿ ಶಾಲೆಗಳು ಹಣ ಸುಲಿಗೆಯ ಕೇಂದ್ರಗಳಾಗುತ್ತಿರುವುದು ನಮ್ಮ ಸಮಾಜದ ಹಣವಂತರು ಹುಸಿ ಪ್ರತಿಷ್ಠೆಯ ಬೆನ್ನು ಹತ್ತಿರುವುದರಿಂದಲೇ ಆಗಿದೆ. ಶ್ರೀಮಂತರ ತಮ್ಮ ಮಕ್ಕಳನ್ನು ಹುಸಿ ಪ್ರತಿಷ್ಠೆಗೆ ಬಲಿಯಾಗದೆ ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಿದ್ದರೆ ಸರ್ಕಾರಿ ಇನ್ನಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆ ರೂಪುಗೊಳ್ಳುತ್ತಿತ್ತು. ಶ್ರೀಮಂತರ ಹುಸಿ ಪ್ರತಿಷ್ಠೆಯ ಕಾರಣದಿಂದಾಗಿ ಇಂದು ಎಲ್ಲರೂ ಖಾಸಗಿ ಶಾಲೆಗಳ ಸುಲಿಗೆಗೆ ಬಲಿಪಶುಗಳಾಗುತ್ತಿದ್ದಾರೆ. ಖಾಸಗಿ ಶಾಲೆಗಳ ಶುಲ್ಕಕ್ಕೆ ಕಡಿವಾಣ ಹಾಕುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಖಾಸಗಿ ಶಾಲೆಗಳು ಶಿಕ್ಷಣವನ್ನು ವ್ಯಾಪಾರೀಕರಣ ಮಾಡಿ ಇಡೀ ದೇಶದ ಶಿಕ್ಷಣ ವ್ಯವಸ್ಥೆ ಹಣವುಳ್ಳವರಿಗೆ ಮಾತ್ರ ಲಭ್ಯವಾಗುವಂಥ ಅಸಮಾನ ವ್ಯವಸ್ಥೆಗೆ ದಾರಿ ಮಾಡಿಕೊಟ್ಟಿವೆ. ಹೆಚ್ಚಿನ ಖಾಸಗಿ ಶಾಲೆಗಳು, ಕಾಲೇಜುಗಳು ೯೫% ಕ್ಕಿಂಥ ಹೆಚ್ಚಿನ ಅಂಕ ತೆಗೆದ ವಿದ್ಯಾರ್ಥಿಗಳಿಗೆ ಮಾತ್ರ ಸ್ವಲ್ಪ ಶುಲ್ಕ ವಿನಾಯತಿ ನೀಡುತ್ತಿವೆ. ೯೫% ಕಡಿಮೆ ಅಂಕ ತೆಗೆದ ೮೫% ಮೇಲೆ ಅಂಕ ತೆಗೆದ (ಡಿಸ್ಟಿ೦ಕ್ಷನ್) ಎಷ್ಟೋ ಬಡ ವಿದ್ಯಾರ್ಥಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ವಿಪರೀತ ಶುಲ್ಕವನ್ನು ಭರಿಸಲಾರದೆ ಸಮರ್ಪಕವಾಗಿ ಶಿಕ್ಷಣವನ್ನು ಮುಂದುವರಿಸಲಾರದ ಪರಿಸ್ಥಿತಿ ಇಂದು ದೇಶದಲ್ಲಿದೆ. ತಾವು ಶಿಕ್ಷಣ ಕ್ಷೇತ್ರದಲ್ಲಿ ಭಾರೀ ಸೇವೆ ಮಾಡುತ್ತಿದ್ದೇವೆ ಎಂದು ಪತ್ರಿಕೆಗಳಲ್ಲಿ ಜಾಹೀರಾತು ಹಾಕಿ ಬೀಗುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ತಮ್ಮ ಸುಲಿಗೆಯನ್ನು ಯಥಾಪ್ರಕಾರ ಮುಂದುವರಿಸುತ್ತಿದ್ದರೂ ನಾವು ಆರಿಸಿ ಕಳುಹಿಸಿದ ಶಾಸಕರು, ಸಂಸದರು ಈ ಬಗ್ಗೆ ಶಾಸನಸಭೆಯಲ್ಲಾಗಲಿ, ಸಂಸತ್ತಿನಲ್ಲಾಗಲೀ ಈ ಬಗ್ಗೆ ಚಕಾರ ಎತ್ತುತ್ತಿಲ್ಲ.

    Reply
    1. prasadraxidi

      ನೀವೆನ್ನುವುದು ನಿಜ, ನಮ್ಮ ತಾಲ್ಲೂಕಿನ ಒಂದು ಪ್ರತಿಷ್ಟಿತ ಶಾಲೆ, ಅಲ್ಲಿ ಕಳೆದ ವರ್ಷ ಫೀಸ್ ಹೆಚ್ಚು ಮಾಡಬೇಕೆಂದು ಪೋಷಕರಿಂದ ಒತ್ತಾಯ ಬಂತು. ಅದಕ್ಕೆ ಒಬ್ಬ ಪ್ಲಾಂಟರು ಕೊಟ್ಟ ಕಾರಣ, “ ನನ್ನ ತೋಟದ ರೈಟರ್ ಮಗನೂ ಇದೇ ಶಾಲೆಗೆ ಬರುತ್ತಾನೆ ನನ್ನ ಮಗ ಅವನೊಂದಿಗೆ ಕುಳಿತುಕೊಳ್ಳುವುದು ನಮಗೆ ಅವಮಾನ…!” ಶಾಲೆಯ ಫೀಸ್ ಜಾಸ್ತಿಯಾಯಿತು.

      Reply

Leave a Reply to Ananda Prasad Cancel reply

Your email address will not be published. Required fields are marked *