ನೆಡುತೋಪು ಕಾಡಾದ ಕತೆ…

 – ಪ್ರಸಾದ್ ರಕ್ಷಿದಿ

35 ವರ್ಷಗಳ ಹಿಂದಿನ ಮಾತು ಕರ್ನಾಟಕದಲ್ಲಿ ರೈತಸಂಘ ಪ್ರಬಲವಾಗಿದ್ದ ಕಾಲ. ಆಗ ಅರಣ್ಯ ಇಲಾಖೆಯ ಸಿಬ್ಬಂದಿಗೂ ರೈತರಿಗೂ ನಿತ್ಯ ಜಟಾಪಟಿ ಇದ್ದೇ ಇರುತ್ತಿತ್ತು. ಮಲೆನಾಡಿನಲ್ಲಂತೂ ಅರಣ್ಯ ಇಲಾಖೆಯೇ ರೈತನ ಪ್ರಥಮ ಶತ್ರುವೆಂದು ಜನ ಭಾವಿಸತೊಡಗಿದ್ದರು. ಅಂತಹ ಸಮಯದಲ್ಲಿ ನಮ್ಮ ಸಕಲೇಶಪುರ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ ಎಲ್ಲೆಲ್ಲಿ ಸಿ ಮತ್ತುಡಿ ವರ್ಗದ ಜಮೀನು ಇದೆಯೋ ಅಲ್ಲೆಲ್ಲ ಸಾಮಾಜಿಕ ಅರಣ್ಯ ಅಂದರೆ ನೆಡುತೋಪುಗಳನ್ನು ಬೆಳೆಸುವ ಕಾರ್ಯಕ್ರಮ ಪ್ರಾರಂಭಿಸಿತು. ಆದರೆ ಆ ಮೊದಲೇ ಕಂದಾಯ ಇಲಾಖೆ ನೌಕರ- ಅಧಿಕಾರಿಗಳು, ಅಲಕ್ಷ್ಯ ಮತ್ತು ಬೇಜವಾಬ್ದಾರಿ ವರ್ತನೆಯಿಂದ ಸಾವಿರಾರು ಎಕರೆ ಗೋಮಾಳ, ಮತ್ತು ಕೃಷಿಯೋಗ್ಯ ಜಮೀನನ್ನು ಕೂಡಾ ಸಿ ಮತ್ತು ಡಿ (ಅಂದರೆ ಬಂಜರು ಮತ್ತು ಕಲ್ಲು ಭೂಮಿ, ಏನೂ ಬೆಳೆಯಲಾಗದ್ದು) ಎಂದು ಗುರ್ತಿಸಿ ಅರಣ್ಯ ಇಲಾಖೆಗೆ ಕೊಟ್ಟಿದ್ದರು. ಹೆಚ್ಚಿನ ಕಡೆಗಳಲ್ಲಿಸ್ಥಳ ಪರೀಕ್ಷೆ ನಡೆಸದೆ ಕಛೇರಿಯಲ್ಲೇ ಕುಳಿತು ಸರ್ಕಾರಿಯೆಂದು ಕಂಡ ಸರ್ವೆ ನಂಬರುಗಳನ್ನೆಲ್ಲಾ ಬಂಜರೆಂದು ಗುರುತಿಸಿದ್ದರು.
ಸಾಮಾಜಿಕ ಅರಣ್ಯ ಮಾಡುತ್ತೇನೆಂದು ಇಲಾಖೆ ಗಿಡ ನೆಡಲು ಪ್ರಾರಂಭ ಮಾಡಿದಾಗ ಅದಕ್ಕೆ ವ್ಯಾಪಕವಾದ ವಿರೋಧ ವ್ಯಕ್ತವಾಯ್ತು. ಎಲ್ಲೆಲ್ಲಿ ರೈತ ಸಂಘ ಪ್ರಬಲವಾಗಿದೆಯೋ ಅಲ್ಲೆಲ್ಲೂ ಅರಣ್ಯ ಇಲಾಖೆಗೆ ಗಿಡ ನೆಡಲು ಸಾಧ್ಯವಾಗಲೇ ಇಲ್ಲ. ಯಾಕೆಂದರೆ ಇವರು ಗಿಡ ನೆಡಬೇಕೆಂದುಕೊಂಡ ಜಮೀನು ಕೃಷಿಯೋಗ್ಯ ಜಮೀನಾಗಿದ್ದು ದಾಖಲೆಯಲ್ಲಿ ಮಾತ್ರ ಬಂಜರಾಗಿತ್ತು. ಹಾಗಾಗಿ ದಾಖಲೆಯಲ್ಲಿರುವ ಸಿ ಮತ್ತು ಡಿ ವರ್ಗದ ಎಷ್ಟೋ ಜಮೀನು ಆಗಲೇ ಭೂಮಾಲಿಕರಿಂದ ಮತ್ತು ಸ್ವಲ್ಪಮಟ್ಟಿಗೆ ಭೂರಹಿತರಿಂದಲೂ ಒತ್ತುವರಿಯಾಗಿದ್ದವು. ಅಲ್ಲೆಲ್ಲೂ ರೈತ ಸಂಘದ ಕಾರ್ಯಕರ್ತರು ಗಿಡ ನೆಡಲು ಬಿಡಲೇ ಇಲ್ಲ. ಕೆಲವು ಕಡೆ ನೆಟ್ಟ ಗಿಡಗಳನ್ನು ಕಿತ್ತೆಸೆಯುವ ಕಾರ್ಯಕ್ರಮವೂ ನಡೆಯಿತು.

ನೆಲ 35 ವರ್ಷದ ಹಿಂದೆ ಹೀಗೆ ಬೋಳಾಗಿತ್ತು
ನೆಲ 35 ವರ್ಷದ ಹಿಂದೆ ಹೀಗೆ ಬೋಳಾಗಿತ್ತು

ಆದರೆ ಕೆಲವು ಕಡೆಗಳಲ್ಲಿ ನಿಜವಾದ ಬಂಜರು ಭೂಮಿ ಇತ್ತು ಇಂತಹ ನಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 700 ಎಕರೆಗಳಷ್ಟು ಬೋಳುಗುಡ್ಡವಿತ್ತು ಅಲ್ಲಿ ಹಲವಾರು ದಶಕಗಳಿಂದ ದನ ಮೇಯ್ದು ಬೋಳಾಗಿ ಸರಿಯಾಗಿ ಹುಲ್ಲು ಕೂಡಾ ಹುಟ್ಟುತ್ತಿರಲಿಲ್ಲ. ನಾವೊಂದಷ್ಟು ಜನ ಗೆಳೆಯರು ಇಂತಹ ಭೂಮಿಯಲ್ಲಿ ಗಿಡ ಬೆಳೆಯಲಿ ಮುಂದೆ ಇದು ನಮ್ಮದೇ ಊರಿನ ಆಸ್ತಿಯಾಗುತ್ತದೆ ಎಂದುಕೊಂಡು. ಅಲ್ಲಿ ಗಿಡನೆಡುವಂತೆ ಅರಣ್ಯ ಇಲಾಖೆಯವರನ್ನು ಕೇಳಿಕೊಂಡು ಬೆಂಬಲವಾಗಿ ನಿಂತೆವು. ಅದಕ್ಕೆ ಎರಡು ಕಾರಣಗಳಿದ್ದವು.

 

 

ಮೊದಲನೆಯದಾಗಿ ಆ ಬೋಳುಗುಡ್ಡಗಳಲ್ಲಿ ಹಸಿರೇ ಇರಲಿಲ್ಲ. ಬೇಸಗೆಯಲ್ಲಂತೂ ಪೂರ್ತಿ ನೆಲ ಕಾದು ಬಿಸಿಯಾಗಿ ಒಣಗಿರುತ್ತಿತ್ತು. ಅದರಲ್ಲಿ ಮಳೆನೀರೂ ಇಂಗುತ್ತಿರಲಿಲ್ಲ. ಎರಡನೆಯದಾಗಿ ನಮ್ಮ ಹಾಗೂ ಪಕ್ಕದ ಪಂಚಾಯತಿಗಳಲ್ಲಿ ಆ ಕಾಲಕ್ಕೇ ಜಮೀನಿಲ್ಲದ ಕೂಲಿಕಾರ್ಮಿಕರಿಗೆ ಜನತಾ ಮನೆಗಳನ್ನು ಕಟ್ಟಿಕೊಡುವ ಕಾರ್ಯಕ್ರಮ ಒಂದು ಚಳುವಳಿಯಂತೆ ನಡೆದು ನೂರಾರು ಮನೆಗಳಾಗಿ ಅವರೆಲ್ಲರಿಗೂ ಸೌದೆ ದೊರೆಯುವುದು ಸಮಸ್ಯೆಯಾಗಿತ್ತು. ಹತ್ತಿರದಲ್ಲೇ ಕೆಲಸಕ್ಕೇ ಹೋಗುವವರು, ಅವರು ಕೆಲಸಕ್ಕೆ ಹೋಗುತ್ತಿದ್ದ ಸ್ಥಳದಿಂದ (ಕಾಫೀ ತೋಟಗಳು) ಸೌದೆಯನ್ನು ತರುತ್ತಿದ್ದರು. ಆದರೆ ದೂರ ದೂರ ಕೆಲಸಕ್ಕೆ ಹೋಗುವವರು ಅಥವಾ ಬೇರೇನಾದರೂ ಸಣ್ಣಪುಟ್ಟ ಕೆಲಸ ಮಾಡುವ ಇತರರಿಗೆ ಸೌದೆಯಿಲ್ಲದೆ ಹತ್ತಿರ ತೋಟಗಳಲ್ಲಿ ಸೌದೆ ಕದಿಯುವುದು ಅನಿವಾರ್ಯವಾಗುತ್ತಿತ್ತು. ಊರಿನ ಪಕ್ಕದಲ್ಲೇ ಸಾಮಾಜಿಕ ಅರಣ್ಯವಾದರೆ ಸೌದೆ

 ನೆಡುತೋಪು ಇಂದು
ನೆಡುತೋಪು ಇಂದು

ಮತ್ತಿತರ ಅಗತ್ಯ ವಸ್ತುಗಳಾದ ಸೊಪ್ಪು, ಗಳ, ಕಂಬ ಇತ್ಯಾದಿಗಳ ಪೂರೈಕೆಗೂ ಅನುಕೂಲವಾಗುತ್ತಿತ್ತು.

 

 

ನಾವು ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿ ನಮ್ಮೂರಿನ ಬೋಳುಗುಡ್ಡಗಳಲ್ಲಿ ಗಿಡನೆಡುವಂತೆ ಕೇಳಿಕೊಂಡೆವು. ಅರಣ್ಯಾಧಿಕಾರಿಗಳು ಕೂಡಲೇ ಕೆಲಸ ಪ್ರಾರಂಭಿಸಿದರು. ನಾವು ರೈತ ಸಂಘದ ಸದಸ್ಯರೇ ಆಗಿದ್ದರೂ ಈ ವಿಚಾರದಲ್ಲಿ ಭಿನ್ನಾಭಿಪ್ರಾಯದಿಂದ ರೈತಸಂಘದೊಳಗೇ ಜಗಳ ಪ್ರಾರಂಭವಾಯಿತು. ನಾವು ಬೋಳುಗುಡ್ಡಗಳಲ್ಲಿ ಗಿಡನೆಡುವುದೇ ಸೂಕ್ತ ಎಂಬ ನಮ್ಮ ನಿಲುವಿನಿಂದ ಹಿಂದೆ ಸರಿಯದೆ ಬಲವಾಗಿ ನಿಂತೆವು.
ಆದರೆ ಆಗಲೂ ಅರಣ್ಯ ಇಲಾಖೆ ನೆಟ್ಟದ್ದು ಅಕೇಷಿಯಾವನ್ನೇ. ಅದರೊಂದಿಗೆ ಅರಣ್ಯ ಇಲಾಖೆಯಲ್ಲಿ ಗಿಡನೆಡುವ ಸಲುವಾಗಿ ತೆಗೆಯುವ ಅಡ್ಡ ಚರಂಡಿಯ ಮತ್ತು ಇತರ ಕೆಲಸಗಳ ಕೂಲಿ ವಿಚಾರದಲ್ಲಿ ಸುಳ್ಳು ಲೆಕ್ಕ ತೋರಿಸಿದ್ದಾರೆದು ತಕರಾರಾಗಿ ಮತ್ತೊಂದು ಹೋರಾಟಕ್ಕೆ ನಾವು ತಯಾರಾಗಬೇಕಾಯಿತು. ಅಂತೂ ಹೇಗೋ ನಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 400 ಎಕರೆಗಳಷ್ಟು ಅಕೇಷಿಯಾ ನೆಡುತೋಪು ನಿರ್ಮಾಣವಾಯಿತು. ಆವೇಳೆಗಾಗಲೇ ರೈತ ಸಂಘವೂ ದುರ್ಬಲವಾಗುತ್ತ ಬಂದಿತ್ತು.
ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಗೆ, ನಿಜವಾದ ಪರಿಸರ ಕಾಳಜಿಯುಳ್ಳವರೊಬ್ಬರು ವಲಯ ಅರಣ್ಯಾಧಿಕಾರಿಯಾಗಿ ಬಂದರು. ಆನಂತರದ ದಿನಗಳಲ್ಲಿ ಅವರು ಅಕೇಷಿಯಾದೊಂದಿಗೆ ಅನೇಕ ಬೇರೆ ಬೇರೆ ಸ್ಥಳೀಯ ಕಾಡು ಜಾತಿಯ ಗಿಡಗಳನ್ನೂ ನೆಡಿಸಿದರು. ಅವರಿದ್ದಾಗ ಕಳ್ಳನಾಟಾ ದಂದೆ ಮಾಡಿದವರನ್ನು ಎಳೆದು ತಂದು ಅವರ ಕೈಯಲ್ಲೇ “ಪ್ರಾಯಶ್ಚಿತ್ತ ಮಾಡಿಕೊಳ್ಳಿ” ಎಂದು ನೂರಾರು ಗಿಡಗಳನ್ನು ನೆಡಿಸುತ್ತಿದ್ದರು!.

 

ಆ ಅಧಿಕಾರಿ ವರ್ಗವಾದ ನಂತರ ಇಲಾಖೆ ಹಳೇ ಚಾಳಿಗೆ ಬಿತ್ತು. ಅಲ್ಲದೆ ಈಗ ಯಾರ ವಿರೋಧವೂ ಇಲ್ಲದ್ದರಿಂದ, ಖಾಲಿಯೆಂದು ಕಂಡ ಈಚಲು ದೀಣೆಗಳಲ್ಲೂ ಗಿಡನೆಟ್ಟು, ಈಚಲು ದೀಣೆಗಳು ನಾಶವಾಗಿ ಅದರೊಂದಿಗೆ ಅನೇಕ ಜಾತಿಯ ಕಾಡು ಹಣ್ಣುಗಳು, ಸಣ್ಣ ಪ್ರಾಣಿಗಳು ನಾಮಾವಶೇಷವಾದವು, ಎಷ್ಟೋ ಕಡೆಗಳಲ್ಲಿ ಖಾಲಿ ಬಿದ್ದಿದ್ದ ಹಿಡುವಳಿ ಜಾಗಗಳಲ್ಲೂ ಅಕೇಷಿಯಾ ನೆಟ್ಟರು. (ಈಗ ಅವೆಲ್ಲ ತಕರಾರಿನಲ್ಲಿದೆ) ಯಾಕೆಂದರೆ ಅಕೇಷಿಯಾ ಬೆಳೆದು ಖರ್ಚು ತೋರಿಸುವುದು ಸುಲಭದ ಕೆಲಸವಾಗಿತ್ತು.
ನಮ್ಮೂರ ಪಂಚಾಯತಿ ಕೇಂದ್ರದ ಪಕ್ಕದಲ್ಲೇ ಇರುವ ಅಗಲಟ್ಟಿ ಗ್ರಾಮದಲ್ಲಿ 250 ಎಕರೆಗಳಷ್ಟು ದೊಡ್ಡದಾದ ಅಕೇಷಿಯಾ ನೆಡುತೋಪು ಇದೆ. ಇದಕ್ಕೊಂದು ಗ್ರಾಮಾರಣ್ಯ ಸಮಿತಿಯೂ ಇದೆ. ಈ ನೆಲ 35 ವರ್ಷದ ಹಿಂದೆ ಒಂದು ಮರವೂ ಇಲ್ಲದ ಬೋಳುಗುಡ್ಡ ವಾಗಿತ್ತು. ನಮ್ಮಲ್ಲಿ ಕಾಡಿನಂತೆ ಬೆಳೆಯುವ ಲಂಟಾನ ಕೂಡಾ ಇಲ್ಲಿ ಬೆಳೆಯುತ್ತಿರಲಿಲ್ಲ.
ಲಂಟಾನದ ಬಗ್ಗೆ ಬೇರೆ ಬೇರೆ ಪ್ರದೇಶದ ರೈತರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಆದರೆ ಯಾಲಕ್ಕಿ ಮತ್ತು ಕಾಫಿ ಬೆಳೆಯುವ ನಮ್ಮ ತಾಲ್ಲೂಕುಗಳಲ್ಲಿ ಇದು ತುಂಬಾ ಉಪಕಾರಿ ಸಸ್ಯ. ಇದು ಬೆಳೆದಲ್ಲಿ ನೆಲ ಮೃದುವಾಗಿರುತ್ತದೆ. ಸಸಿ ಮಡಿಗಳಲ್ಲಿ ಕುಕ್ಕೆ ತುಂಬಲು ಲಂಟಾನ ಪೊದೆಗಳಿರುವ ಪ್ರದೇಶದ ಮಣ್ಣು ತುಂಬಾ ಒಳ್ಳೆಯದು. ಯಾಲಕ್ಕಿ-ಕಾಫೀ ಬೀಜ ಒಗ್ಗು ಹಾಕಿದಾಗ ಮಡಿಗಳಿಗೆ ಮುಚ್ಚಲು ಲಂಟಾನ ಕಡ್ಡಿಗಳನ್ನೇ ಬಳಸುತ್ತಾರೆ. ಇದರ ಪೊದೆಗಳ ಮಧ್ಯೆ ಹಕ್ಕಿಗಳಿಂದ ಬೀಜ ಪ್ರಸಾರವಾಗಿ ಇತರ ಗಿಡಗಳು ಹುಟ್ಟಿಬೆಳೆದು ಆ ನೆಲ ನಿಧಾನವಾಗಿ ಕಾಡಾಗುತ್ತದೆ. ಲಂಟಾನ ಈ ಪ್ರದೇಶದಲ್ಲಿ ಉಪಕಾರಿಯಾಗಿರಲು ಇಲ್ಲಿ ಬೀಳುವ ಹೆಚ್ಚು ಮಳೆಯೂ ಕಾರಣವಿರಬಹುದು. ಕಡಿಮೆ ಮಳೆಬೀಳುವ ಮತ್ತು ಒಣ ನೆಲದ ರೈತರು ಲಂಟಾನವನ್ನು ದೂರುವುದನ್ನು ಕೇಳಿದ್ದೇನೆ.
ನಮ್ಮ ಅಗಲಟ್ಟಿ ಗ್ರಾಮದ ನೆಡುತೋಪಿನಲ್ಲಿ ಹೆಚ್ಚಿನಂಶ ಅಕೇಷಿಯಾ ಮಾತ್ರವೇ ಇದ್ದರೂ ಅಲ್ಲಿ ಲಂಟಾನವೂ ಬೆಳೆಯತೊಡಗಿತು. ಅದರೊಂದಿಗೆ ಇತರ ಸಣ್ಣ ಪುಟ್ಟ ಗಿಡಗಳೂ ಮೊಳೆತವು. ಅಕೇಷಿಯಾ ಮೊದಲನೆಯ ಖಟಾವಿಗೆ ಬರುವ ವೇಳೆಗೆ ಅದರಡಿಯಲ್ಲಿ ಲಂಟಾನವೂ ಇತರ ಗಿಡಗಳೂ ವ್ಯಾಪಕವಾಗಿ ಬೆಳೆದಿದ್ದವು.
ಅಕೇಷಿಯಾ ಮೊದಲ ಖಟಾವಿನ ನಂತರ. ಈಗ ಮತ್ತೊಮ್ಮೆ ಬೆಳೆಯುತ್ತಿದೆ. ಆದರೆ ಇತರ ನೂರಾರು ಕಾಡು ಜಾತಿಯ ಗಿಡಮರಗಳು ಬೆಳೆದು ನಿಜವಾದ ಕಾಡಿನಂತೆ ಕಾಣತೊಡಗಿದೆ.
ಖ್ಯಾತ ಪರಿಸರವಾದಿ ಸುಂದರಲಾಲ ಬಹುಗುಣ ಅವರು ಗುಂಡ್ಯ ಜಲವಿದ್ಯುತ್ ಯೋಜನೆ ವಿರೋಧದ ಹೋರಾಟಕ್ಕೆ ಬಂದಾಗ ಒಂದು ರಾತ್ರಿ ನಮ್ಮೂರಿನಲ್ಲೂ ಉಳಿದಿದ್ದರು. ಈ ನೆಡುತೋಪಿನ ಪಕ್ಕದಲ್ಲೇ ಇರುವ ನಮ್ಮ ರಂಗಮಂದಿರದಲ್ಲಿ ಕುಳಿತು ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಗ್ರಾಮಸ್ಥರೊಬ್ಬರು, ಸುಂದರಲಾಲ ಬಹುಗುಣ ಬಂದದ್ದರಿಂದ ನೆಡುತೋಪಿಗೆ ಅವರ ಹೆಸರನ್ನಿಡಲು ಸೂಚಿಸಿದರು. ಅದಕ್ಕೆ ಉತ್ತರವಾಗಿ ಬಹುಗುಣ ಅವರು, ‘ನನ್ನ ಹೆಸರಿಡಬೇಡಿ ಇದು ನೆಡುತೋಪು, ಅಂದರೆ “ಟಿಂಬರ್ ಮೈನ್” ಇದನ್ನು ನಿಜವಾದ ಕಾಡಾಗಿ ಪರಿವರ್ತಿಸಿ.’ ಎಂದರು.

 

ನಮ್ಮೂರಿನಲ್ಲಿ ಸುಂದರಲಾಲ ಬಹುಗುಣ
ನಮ್ಮೂರಿನಲ್ಲಿ ಸುಂದರಲಾಲ ಬಹುಗುಣ

ನಮ್ಮೂರ ನೆಡುತೋಪು ನಿಧಾನವಾಗಿ ಕಾಡಾಗುತ್ತಿದೆ. ಈಗ ನಮ್ಮ ಮುಂದಿರುವ ಸವಾಲೆಂದರೆ ಎಲ್ಲೆಲ್ಲಿ ಅರಣ್ಯ ಲಾಖೆ ನೆಡುತೋಪುಗಳು ಇವೆಯೋ ಅಲ್ಲಿ ಅಕೇಷಿಯಾವನ್ನು ಖಟಾವು ಮಾಡಿ ಬೇರೆ ಜಾತಿ, ಅಂದರೆ ಆಯಾಪ್ರದೇಶದ ಸಸ್ಯಗಳನ್ನೇ ನೆಡಬೇಕು ಎಂದು ಒತ್ತಾಯಿಸುವುದು. ನಡು ನಡುವೆ ಒಂದೊಂದು ಅಕೇಷಿಯಾವೂ ಇದ್ದರೆ ತೊಂದರೆ ಏನಿಲ್ಲ. ಒಂದೇ ರೀತಿಯ (ಮೋನೋಕಲ್ಚರ್)ಸಸ್ಯಗಳನ್ನು ಬೆಳೆಸಲು ಅವಕಾಶ ಕೊಡಬಾರದು.

 

ಒಟ್ಟಾಗಿ ಹೋರಾಡಿ ಒತ್ತಾಯ ತಂದರೆ ಯಾವುದೂ ಅಸಾಧ್ಯವಲ್ಲ.

2 comments

  1. ನಮ್ಮ ಅರಣ್ಯ ಇಲಾಖೆಗೆ ಮರಗಳೆಂದರೆ ಅಕೇಶಿಯಾ, ನೀಲಗಿರಿ, ಅಥವಾ ಶೀಘ್ರವಾಗಿ ಬೆಳೆಯುವ ,ಪಕ್ಷಿಗಳಿಗಾಗಲಿ ಮನಷ್ಯರಿಗಾಗಿ ಉಪಯೋಗವಿಲ್ಲದ ಮೃದು ಮೈಯ ಮರಗಳು! ಇವರು ರಸ್ತೆ ಬದಿಗಳಲ್ಲಿ ನೆಡುವ ಮರಗಳನ್ನೊಮ್ಮೆ ನೋಡಿ! ಇಲ್ಲಿ ಕಾಡು ಮಾವೋ, ನೇರಳೆ ಮರಗಳೇನಾದರೂ ಕಾಣಿಸುತ್ತಿವೆಯೇ? ಹಾಸನದ ಡೈರಿ ಸರ್ಕಲಿನಿಂದ ಬೇಲೂರು ರಸ್ತೆಗೆ ಸಂಪರ್ಕ ಕಲ್ಪಿಸುವ ವರ್ತುಲ ರಸ್ತೆಯಲ್ಲಿ ಸಾಲಗಾಮೆ ರಸ್ತೆಯಿಂದ ಹಾದು ಹೋಗುವ ರಸ್ತೆಯ ಎಡಭಾಗದಲ್ಲಿ ಅರಣ್ಯ ಇಲಾಖೆ ಸಾಲು ಮರಗಳ ಗಿಡಗಳನ್ನು ನೆಟ್ಟಿದೆ. ಅವು ಯಾವುದೆಮದು ಬಲ್ಲಿರಾ? ಕೇವಲ ಎರಡು ಕಿ.ಮಿ., ಉದ್ದಕ್ಕೆ ಬರೇ ಸಂಪಿಗೆ ಮರಗಳು. ಒಂದೇ ಒಂದು ಬೇರೆ ಜಾತಿಯ ಮರಗಳಿಲ್ಲ!

Leave a Reply

Your email address will not be published.